ರಾಮಕೃಷ್ಣ ಮಿಷನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀ ರಾಮಕೃಷ್ಣ ಮಠ ಮತ್ತು ಮಿಶನ್ ರಾಮಕೃಷ್ಣ ಪರಮಹಂಸ ರ ಶಿಷ್ಯ ಮತ್ತು ಧಾರ್ಮಿಕ ಗುರು ಸ್ವಾಮಿ ವಿವೇಕಾನಂದರು ಮೇ ೧, ೧೮೯೭ರಲ್ಲಿ 'ರಾಮಕೃಷ್ಣ ಮಿಶನ್ ಅಸೋಷಿಯೇಶನ್' ಎಂಬ ಹೆಸರಿನಲ್ಲಿ ಸ್ಥಾಪಿಸಿದ ಹಿಂದೂ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆ. [೧]'ಆತ್ಮನೋ ಮೋಕ್ಷಾರ್ಥಮ್ ಜಗದ್ ಹಿತಾಯ ಚ' ಎಂಬ ಧ್ಯೇಯವಾಕ್ಯವನ್ನು ಹೊಂದಿರುವ ಈ ಸಂಸ್ಥೆಯು ಶ್ರೀರಾಮಕೃಷ್ಣ ಪರಮಹಂಸರು ತಮ್ಮ ಆಧ್ಯಾತ್ಮಿಕ ಅನುಭವಗಳಿಂದ ಬೋಧಿಸಿದ ವೇದಾಂತದ ತಳಹದಿಯ ಮೇಲೆ ಸ್ಥಾಪಿತವಾಯಿತು. ರಾಮಕೃಷ್ಣ ಮಠ (ಬಂಗಾಳಿ: রামকৃষ্ণ মঠ) ಮತ್ತು ರಾಮಕೃಷ್ಣ ಮಿಷನ್ (ಬಂಗಾಳಿ: রামকৃষ্ণ মিশন) ಅವಳಿ ಸಂಘಟನೆಗಳು ವಿಶ್ವದಾದ್ಯಂತ ಆಧ್ಯಾತ್ಮಿಕ ನಡೆಯುತ್ತಿರುವ ರಾಮಕೃಷ್ಣ ಚಳವಳಿ ಅಥವಾ ವೇದಾಂತ ಚಳವಳಿಯ ತಿರುಳುಭಾಗವಾಗಿದೆ.

ರಾಮಕೃಷ್ಣ ಮಿಷನ್ ಮೇ 1, 1897 ರಂದು ಶ್ರೀ ರಾಮಕೃಷ್ಣರ ಮುಖ್ಯ ಅನುಯಾಯಿ ಸ್ವಾಮಿ ವಿವೇಕಾನಂದರು ಸ್ಥಾಪಿಸಿದ ಲೋಕೋಪಯೋಗಿ, ಸ್ವಯಂಸೇವಕ ಸಂಸ್ಥೆ.

ಬರ ಪರಿಹಾರ, ನೆರೆಸಂತ್ರಸ್ತರ ಸಹಾಯ, ಗ್ರಾಮೀಣ ಜನರಿಗೆ ಶಿಕ್ಷಣ, ಆರೋಗ್ಯ ಸೇವೆಯೆ, ಗ್ರಾಮೀಣ ನಿರ್ವಹಣೆ, ಬುಡಕಟ್ಟು ಕಲ್ಯಾಣ, ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮೊದಲಾದ ಜನಸೇವಾ ಕಾರ್ಯಕ್ರಮಗಳನ್ನು ಈ ಸಂಸ್ಥೆಯ ವಿವಿಧ ಶಾಖೆಗಳು ನಿರ್ವಹಿಸುತ್ತವೆ. ಧಾರ್ಮಿಕ ಸಾಹಿತ್ಯ ಪ್ರಕಟಣೆ, ಶೀಲ ಸಂವರ್ಧನ ಶಿಬಿರಗಳು, ಪ್ರವಚನ ಮುಂತಾದವುಗಳ ಮೂಲಕ ಜನರ ಆಧ್ಯಾತ್ಮಿಕ ಅವಶ್ಯಕತೆಗಳನ್ನು ಇದು ಪೂರೈಸುತ್ತಿದೆ. ಇದರ ಪ್ರಧಾನ ಕಛೇರಿಯ ಅಸ್ತಿತ್ವ ಹೌರಾ ದ ಬೇಲೂರು ಮಠ, ಕೋಲ್ಕತಾ, ಭಾರತದಲ್ಲಿದೆ. ಭಾರತದ ಸನಾತನ ಹಿಂದೂ ಧರ್ಮ ಮತ್ತು ವೇದಾಂತ ಆಧಾರ ಸ್ತಂಭಗಳು.

ಮುನ್ನುಡಿ[ಬದಲಾಯಿಸಿ]

ರಾಮಕೃಷ್ಣ ಮಹಾಸಂಘದ ಕಾರ್ಯಕ್ರಮಗಳನ್ನು ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ತನ್ನ ಕಾರ್ಯಭಾರದಲ್ಲಿ ನಿರ್ವಹಿಸುತ್ತದೆ, 19 ನೇ ಶತಮಾನದ ಸಂತರಾದ ಶ್ರೀರಾಮಕೃಷ್ಣ ಪರಮಹಂಸ ರ ಪ್ರಭಾವ ಮತ್ತು ಅವರ ಮುಖ್ಯ ಅನುಯಾಯಿ ಸ್ವಾಮಿ ವಿವೇಕಾನಂದರು ರೂಪಿಸಿದ ಒಂದು ಸಾಮಾಜಿಕ -ಧಾರ್ಮಿಕ ಕ್ಷೇತ್ರದ ಎರಡು ಪ್ರಮುಖ ಸಂಸ್ಥೆಗಳು. [3]

ಕರ್ನಾಟಕದಲ್ಲಿ ರಾಮಕೃಷ್ಣ ಮಠ[ಬದಲಾಯಿಸಿ]

ಕರ್ನಾಟಕದಲ್ಲಿ ರಾಮಕೃಷ್ಣ ಮಠದ ಶಾಖೆಗಳು ಕೆಳಕಂಡಲ್ಲಿವೆ:

ಆಶ್ರಮವು ಮುಖ್ಯವಾಗಿ ಪುಸ್ತಕ ಪ್ರಕಟಣೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಸುಮಾರು ೭೫ ವರ್ಷಗಳಿಗೂ ದೀರ್ಘವಾದ ಇತಿಹಾಸವಿರುವ ಈ ಸಂಸ್ಥೆಯು ಕನ್ನಡ ಆಧ್ಯಾತ್ಮಿಕ ಸಾಹಿತ್ಯಕ್ಕೆ ಸಲ್ಲಿಸಿರುವ ಸೇವೆ ಅಪಾರ. ಮಠವು ಬಾಲಕರಿಗಾಗಿ 'ಶ್ರೀರಾಮಕೃಷ್ಣ ವಿದ್ಯಾಶಾಲೆ' ಎಂಬ ಆವಾಸಿಕ ಪದವೀಪೂರ್ವ ಮಧ್ಯಮಿಕ ಶಾಲೆಯನ್ನು ನಡೆಸುತ್ತಿದೆ. 'ವೇದಾಂತ ಕಾಲೇಜು' ಎಂಬ ಪುರುಷರ ಬಿ.ಎಡ್. ಕಾಲೇಜನ್ನೂ ಇದು ನಡೆಸುತ್ತದೆ. ಸುತ್ತಮುತ್ತಲ ಹಳ್ಳಿಗಳಲ್ಲಿ, ಮುಖ್ಯವಾಗಿ ಬಿಳಿಗಿರಿರಂಗನ ಬೆಟ್ಟ, ಹೆಗ್ಗಡದೇವನ ಕೋಟೆ ಮೊದಲಾದ ಸ್ಥಳಗಳಲ್ಲಿ ಗಿರಿಜನ ಕಲ್ಯಾಣಕೇಂದ್ರಗಳನ್ನು ನಡೆಸುತ್ತಿದೆ. 'ವಿವೇಕ ಪ್ರಭ' ಆಶ್ರಮದಿಂದ ಪ್ರಕಟಗೊಳ್ಳುವ ಸಾಂಸ್ಕೃತಿಕ ಮಾಸಪತ್ರಿಕೆ. ಸ್ವಾಮಿ ನಿತ್ಯಸ್ಥಾನಂದರು ಆಶ್ರಮದ ಈಗಿನ ಅಧ್ಯಕ್ಷರು.

ಶತಮಾನ ಕಂಡ ಬೆಂಗಳೂರು ಆಶ್ರಮ ಬಸವನಗುಡಿಯಲ್ಲಿದೆ. ಕನ್ನಡ ಮತ್ತು ಇಂಗ್ಲೀಶ್ ಭಾಷೆಗಳೆರಡರಲ್ಲೂ ಪುಸ್ತಕ ಪ್ರಕಟಿಸುವ ಈ ಸಂಸ್ಥೆ ಪ್ರಸಿದ್ಧವಾಗಿದೆ.ಬಾಲಕರಿಗಾಗಿ 'ವಿದ್ಯಾರ್ಥಿ ಮಂದಿರ' ಎಂಬ ಹಾಸ್ಟೆಲ್ ನ್ನು ಇದು ನಡೆಸುತ್ತಿದೆ. ಬೆಂಗಳೂರಿನ ಹತ್ತಿರವಿರುವ ಶಿವನಹಳ್ಳಿ ಮೊದಲಾದ ಹಳ್ಳಿಗಳಲ್ಲಿ ಹಲವಾರು ಸಮಾಜಕಲ್ಯಾಣ ಕಾರ್ಯಗಳನ್ನು ಕೈಗೊಂಡಿದೆ. ಸಂಸ್ಕೃತದಲ್ಲಿ ಪಾಂಡಿತ್ಯವನ್ನು ಹೊಂದಿರುವ, ಸ್ವಾಮಿ ಹರ್ಷಾನಂದರು ಆಶ್ರಮದ ಈಗಿನ ಅಧ್ಯಕ್ಷರು. ಕನ್ನಡ ಮತ್ತು ಇಂಗ್ಲೀಷಿನಲ್ಲಿ ಹಲವಾರು ಪುಸ್ತಕಗಳನ್ನು ಇವರು ಬರೆದಿದ್ದಾರೆ.

ಇದು ಬೆಂಗಳೂರಿನಲ್ಲಿರುವ ಇನ್ನೊಂದು ಆಶ್ರಮ. ಹಲವಾರು ಕಾರ್ಯಾಗಾರಗಳನ್ನು, ಶೀಲಸಂವರ್ಧನಾ ಶಿಬಿರಗಳನ್ನು ಇದು ನಡೆಸುತ್ತಿದೆ. ಬಡಜನರಿಗಾಗಿ ಸಂಚಾರಿ ಅಸ್ಪತ್ರೆಯ ಮೂಲಕ ಆರೋಗ್ಯ ಸೇವೆಯನ್ನು ಒದಗಿಸುತ್ತಿದೆ. ಸ್ವಾಮಿ ವೀತಭಯಾನಂದರು ಆಶ್ರಮದ ಈಗಿನ ಅಧ್ಯಕ್ಷರು.

  • ಪೊನ್ನಂಪೇಟೆ

ಕೊಡಗಿನ ಪ್ರಶಾಂತ ವಾತಾವರಣದಲ್ಲಿರುವ ಈ ಸುಂದರವಾದ ಆಶ್ರಮ, 'ರಾಮಕೃಷ್ಣ ಸೇವಾಶ್ರಮ' ಎಂಬ ಸುಸಜ್ಜಿತ ಆಧುನಿಕ ಆಸ್ಪತ್ರೆಯ ಮೂಲಕ ಆರೋಗ್ಯಸೇವೆಯನ್ನು ಒದಗಿಸುತ್ತಿದೆ. 'ಬದುಕಲು ಕಲೆಯಿರಿ' ಖ್ಯಾತಿಯ ಸ್ವಾಮಿ ಜಗದಾತ್ಮಾನಂದರು ಆಶ್ರಮದ ಅಧ್ಯಕ್ಷರು.

ಅನಾಥಾಶ್ರಮ ಮತ್ತು ಬಡ ವಿದ್ಯಾರ್ಥಿಗಳಿಗೆ ತನ್ನ ಹಾಸ್ಟೆಲ್ ಮೂಲಕ ಸೇವೆಯನ್ನು ಒದಗಿಸುತ್ತಿದೆ. ಸ್ವಾಮಿ ಪೂರ್ಣಕಾಮಾನಂದರು ಆಶ್ರಮದ ಈಗಿನ ಅಧ್ಯಕ್ಷರು.

ಇತ್ತೀಚಿಗೆ ಆರಂಭಗೊಂಡ ಈ ಆಶ್ರಮವು ಉತ್ತರ ಕರ್ನಾಟಕದ ಬಹುದಿನಗಳ ಬೇಡಿಕೆಯನ್ನು ಪೂರ್ಣಗೊಳಿಸಿದೆ. ಹಲವಾರು ಯೋಜನೆಗಳನ್ನು ಶೀಘ್ರದಲ್ಲೆ ಜಾರಿಗೊಳಿಸಲು ನಿರ್ಧರಿಸಿರುವ ಈ ಅಶ್ರಮವು, ಈಗ ಪುಸ್ತಕ ಪ್ರಕಟಣೆ, ಪ್ರವಚನ, ಶಿಬಿರಗಳ ಮುಖಾಂತರ ಜನರ ಸೇವೆಯನ್ನು ಮಾಡುತ್ತಿದೆ.

ರಾಮಕೃಷ್ಣ ಮಿಷನ್[ಬದಲಾಯಿಸಿ]

ರಾಮಕೃಷ್ಣ ಮಠವು ಪಕ್ಕಾ ಸಂನ್ಯಾಸ ಸಂಸ್ಥೆಯಾದರೆ, ರಾಮಕೃಷ್ಣ ಮಿಷನ್ ಸನ್ಯಾಸಿಗಳಿಗೂ, ಗೃಹಸ್ಥರಿಗೂ ಮುಕ್ತವಾಗಿ ತೆರೆದುಕೊಂಡ ಸಾರ್ವಜನಿಕ ಸಂಸ್ಥೆಯಾಗಿದೆ . ಶ್ರೀರಾಮಕೃಷ್ಣರಲ್ಲಿ ಮತ್ತು ಸಂದೇಶದಲ್ಲಿ ಶ್ರದ್ಧೆಯುಳ್ಳ ಮತ್ತು ರಾಮಕೃಷ್ಣ ಮಿಷನ್ನಿನ ಅದರ್ಶ ಹಾಗೂ ಚಟುವಟಿಕೆಗಳಲ್ಲಿ ಒಲವು ಉಳ್ಳ ಯಾರು ಬೇಕಾದರೂ ಇದಕ್ಕೆ ಸದಸ್ಯರಾಗಬಹುದು. ಶೈಕ್ಷಣಿಕ, ವೈದ್ಯಕೀಯ ಹಾಗೂ ಇತರ ರೀತಿಯ ಸಂಸ್ಥೆಗಳನ್ನು

ನಡೆಸುವುದರಲ್ಲಿ ಸಂನ್ಯಾಸೇತರ ಜನರು ಸಂನ್ಯಾಸಿಗಳಿಗೆ ನೆರವಾಗುತ್ತಾರೆ. ರಾಮಕೃಷ್ಣ ಮಿಷನ್ 1901ರ ಮೇ 4ರಂದು ಒಂದು ಸಂಘವಾಗಿ ನೊಂದಾವಣೆಗೊಂಡಿದ್ದು , ಭಾರತದಾದ್ಯಂತ ಮತ್ತು ಇತರೆ ಕೆಲವು ದೇಶಗಳಲ್ಲಿ ಶಾಖೆಗಳನ್ನು ಹೊಂದಿದೆ.


ಆಡಳಿತ

ರಾಮಕೃಷ್ಣ ಮಠವು ಆಡಳಿತವನ್ನು ಒಂದು ವಿಶ್ವಸ್ತ ಮಂಡಳಿಯು ನೋಡಿಕೊಳ್ಳುತ್ತದ್ದೆ. ಈ ಮಂಡಳಿಗೆ ಚುನಾಯಿತರಾದ ಅಧ್ಯಕ್ಷರು, ಒಬ್ಬರು ಅಥವಾ ಹೆಚ್ಚು ಮಂದಿ ಉಪಾಧ್ಯಕ್ಷರು, ಒಬ್ಬರು ಮಹಾಕಾರ್ಯದರ್ಶಿಗಳು, ಒಬ್ಬರು ಅಥವಾ ಹೆಚ್ಚು ಮಂದಿ ಸಹಾಯಕ ಕಾರ್ಯದರ್ಶಿಗಳು ಮತ್ತು ಒಬ್ಬರು ಖಜಾಂಚಿ ಇರುತ್ತಾರೆ. ರಾಮಕೃಷ್ಣ ಮಿಷನ್ನಿನ ಆಡಳಿತವನ್ನು ಒಂದು ಆಡಳಿತ ಮಂಡಳಿಯು ನೋಡಿಕೊಳ್ಳುತ್ತದೆ. ಅದರಲ್ಲಿ ರಾಮಕೃಷ್ಣ ಮಠದ ಧರ್ಮದರ್ಶಿಗಳೂ ಇರುತ್ತಾರೆ. ಬೇಲೂರಿನಲ್ಲಿ-ಜನಪ್ರಿಯವಾದ ಹೆಸರು ಬೇಲೂರು ಮಠ-ಇರುವ ರಾಮಕೃಷ್ಣ ಮಠದ ಮುಖ್ಯಸ್ತಾನವೇ ರಾಮಕೃಷ್ಣ ಮಿಷನ್ನಿನ ಮುಖ್ಯಸ್ತಾನವೂ ಹೌದು. ಮಠದ ಅಥವಾ ಮಿಷನ್ನಿನ ಆಡಳಿತಕ್ಕೆ ಸಂಬಂಧಿಸಿದ ಎಲ್ಲ ಪತ್ರಗಳನ್ನೂ ಅವುಗಳ ಮುಖ್ಯ ಕಾರ್ಯನಿರ್ವಾಹಕರಾಗಿ ಕೆಲಸ ಮಾಡುವ ಮಹಾಕಾರ್ಯದರ್ಶಿಗಳಿಗೆ ಸಂಭೋಧಿಸಿ ಬರೆಯಬೇಕು. ರಾಮಕೃಷ್ಣ ಮಠದ ಶಾಖಾಕೇಂದ್ರದ ಮುಖ್ಯಸ್ಥರನ್ನು ಅಧ್ಯಕ್ಷರೆಂದು ಕರೆಯುತ್ತಾರೆ; ವಿಶ್ವಸ್ತ ಮಂಡಳಿಯು ಅವರನ್ನು ನೇಮಕ ಮಾಡುತ್ತದೆ. ರಾಮಕೃಷ್ಣ ಮಿಷನ್ನಿನ ಆಡಳಿತ ಸಂಸ್ಥೆಯು ನೇಮಿಸುವ ನಿರ್ವಹಣಾ ಸಮಿತಿಯೊಂದು ರಾಮಕೃಷ್ಣ ಮಿಷನ್ನಿನ ಶಾಖಾ ಕೇಂದ್ರವನ್ನು ನೋಡಿಕೊಳ್ಳುತ್ತದೆ. ಈ ಸಮಿತಿಯು ಕಾರ್ಯದರ್ಶಿಗಳು ಆ ಶಾಖೆಯ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುತ್ತಾರೆ.


ವಿಚಾರಪ್ರಣಾಳಿ[ಬದಲಾಯಿಸಿ]

ರಾಮಕೃಷ್ನ್ಣ ಮಠದ ಮತ್ತು ಮಿಷನ್ನಿನ ವಿಚಾರಪ್ರಣಾಳಿಯು, ಶ್ರೀರಾಮಕೃಷ್ಣರು ಬದುಕಿ ಬಾಳಿದ ಮತ್ತು ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ ವೇದಾಂತದ ಶಾಶ್ವತ ತತ್ತ್ವಗಳನ್ನೊಳಗೊಂಡಿದೆ. ಈ ವಿಚಾರಪ್ರಣಾಳಿಗೆ ಮೂರು ಲಕ್ಷಣಗಳಿವೆ: ವೇದಾಂತದ ಪ್ರಾಚೀನ ತತ್ವಗಳು ಆಧುನಿಕ ಪರಿಭಾಷೆಯಲ್ಲಿ ಅಭಿವ್ಯಕ್ತವಾಗಿವೆ ಎ೦ಬ ಅರ್ಥದಲ್ಲಿ ಅದು ಆಧುನಿಕ; ಅದು ವಿಶ್ವಸಾರ್ವತ್ರಿಕ-ಎಂದರೆ, ಇಡೀ ಮನುಕುಲಕ್ಕೇ ಅದು

ಉದ್ದಿಷ್ಟವಾದುದು; ಅದು ವ್ಯಾವಹರಿಕ-ಬದುಕಿನ ಸಮಸ್ಯೆಗಳನ್ನು ಪರಿಹರಿಸಲು ಅದರ ತತ್ತ್ವಗಳನ್ನು ದೈನಂದಿನ ಜೀವನಕ್ಕೆ ಅನ್ವಯಿಸುವುದು ಸಾಧ್ಯ ಎಂಬ ಅರ್ಥದಲ್ಲಿ . ಈ ವಿಚಾರಪ್ರಣಾಳಿಯ ಮೂಲಭೂತ ತತ್ವಗಳನ್ನು ಕೆಳಗೆ ಕೊಟ್ಟಿದೆ:

1 . ಬದುಕಿನ ಅಂತಿಮ ಧ್ಯೇಯ ಭಗವತ್ ಸಾಕ್ಷಾತ್ಕಾರ : ಪ್ರಾಚೀನ ಭಾರತವು ಕಂಡುಕೊಂಡ ಪ್ರಮೂಖ ಆವಿಷ್ಕಾರವೆಂದರೆ-ಬ್ರಹ್ಮ ಎಂಬ ಅನಂತ ಪ್ರಜ್ಞೆಯಿಂದ ಜಗತ್ತು ಹುಟ್ಟುತ್ತದೆ ಮತ್ತು ಪೋಷಿತವಾಗುತ್ತದೆ. ಅದಕ್ಕೆ ನಿರ್ಗುಣ ಹಾಗೂ ಸಗುಣ ಮುಖಗಳೆರಡೂ ಉಂಟು. ಸಗುಣ ಮುಖಕ್ಕೆ ಈಶ್ವರ, ದೇವರು, ಜೆಹೋವ ಮುಂತಾದ ಬೇರೆ ಬೇರೆ ಹೆಸರುಗಳಿವೆ. ಈ ಅಂತಿಮ ಸತ್ಯದ ಸಾಕ್ಷಾತ್ಕಾರವೇ ಬದುಕಿನ ನಿಜವಾದ ಗುರಿ; ಏಕೆಂದರೆ, ಅದೊಂದೇ ನಮಗೆ ಶಾಶ್ವತ ಸಿದ್ಧಿ ಹಾಗು ಶಾಂತಿಯನ್ನು ನೀಡಬಲ್ಲುದು.


2 . ಆತ್ಮನಲ್ಲಿ ಅಂತಸ್ಥವಾಗಿರುವ ದಿವ್ಯತೆ: ಬ್ರಹ್ಮವು ಎಲ್ಲ ಜೀವಿಗಳಲ್ಲೂ ಆತ್ಮವಾಗಿ ನೆಲೆಗೊಂಡಿದೆ; ಅದು ಮನುಷ್ಯನ ನೈಜ ಸ್ವರೂಪ ಹಾಗೂ ಎಲ್ಲ ಸುಖದ ಆಕರ. ಆದರೆ, ಅಜ್ಞಾನದ ಕಾರಣದಿಂದ ಜೀವಿಯು ತನ್ನನ್ನು ಮನಸ್ಸುಗಳೊಡನೆ ಸಮೀಕರಿಸಿಕೊಂಡು, ವಿಷಯಸುಖಗಳ ಬೆನ್ನು ಹತ್ತುತ್ತಾನೆ. ಇದು ಎಲ್ಲ ಕೆಡುಕಿನ ಮತ್ತು ದುಃಖದ ಮೂಲ ಕಾರಣ. ಅಜ್ಞಾನ ನಿವಾರಣೆಯಾದಂತೆಲ್ಲ ಆತ್ಮಸ್ವರೂಪವು ಹೆಚ್ಚುಹೆಚ್ಚಾಗಿ ಪ್ರಕಟಗೊಳ್ಳುತ್ತ ಹೋಗುತ್ತದೆ. ಈ ಅಂತಸ್ಥ ದಿವ್ಯತೆಯ ಅಭಿವ್ಯಕ್ತಿಯೇ ನಿಜವಾದ ಧರ್ಮದ ಸಾರ.


3. ಯೋಗ ಸಮನ್ವಯ : ಅಜ್ಞಾನ ನಿವಾರಣೆ ಹಾಗೂ ದೈವಸಾಕ್ಷಾತ್ಕಾರಕ್ಕೊಯ್ಯುವ ಆಂತರಿಕ ದೈವಿಕತೆಯ ಅಭಿವ್ಯಕ್ತಿಯು ಯೋಗದ ಮೂಲಕ ಸಾಧಿತವಾಗುತ್ತದೆ. ಪ್ರಮುಖವಾದ ಯೋಗಗಳು ನಾಲ್ಕು: ಜ್ಗಾನಯೋಗ, ಭಕ್ತಿಯೋಗ, ರಾಜಯೋಗ ಮತ್ತು ಕರ್ಮಯೋಗ. ಪ್ರತಿಯೊಂದು ಯೋಗವೂ ದೈವ ಸಾಕ್ಷಾತ್ಕಾರದ ಸ್ವತಂತ್ರ ಮಾರ್ಗ. ಆದರೆ ವಿಚಾರ, ಭಾವ ಅಥವಾ ಸಂಕಲ್ಪದಂತಹ ಶಕ್ತಿಗಳ ಬೆಳವಣಿಗೆಯಲ್ಲಿ ಒಂದೊಂದು ಯೋಗವೂ ಯಾವುದೋ ಒಂದು ಶಕ್ತಿಗೆ ಹೆಚ್ಚು ಒತ್ತು ನೀಡುವುದರಿಂದ, ಒಂದು ಸಂತುಲಿತ, ”ಸಂಪೂರ್ಣ ಕ್ರಿಯಾಶೀಲ" ವ್ಯಕ್ತಿತ್ವದ ವಿಕಾಸಕ್ಕೆ ಈ ಎಲ್ಲ ನಾಲ್ಕು ಯೋಗಗಳ ಸಮನ್ವಯ ಅಗತ್ಯ ಸ್ವಾಮಿ ವಿವೇಕಾನಂದರು ಶ್ರೀರಾಮಕೃಷ್ಣ ಮಠ ಮತ್ತು ಮಿಷನ್ನಿನ ಆದರ್ಶವೆಂದು ಪರಿಗಣಿಸಿದ್ದು ಈ ಯೋಗಸಮನ್ವಯವನ್ನೆ. ಇಲ್ಲಿ ಕೊಟ್ಟಿರುವ ಅವಳಿ ಸಂಸ್ಥೆಗಳ ಲಾಂಛನದಲ್ಲಿ ಈ ಆದರ್ಶವು ಅಭಿವ್ಯಕ್ತವಾಗಿದೆ; ಅದು ಸ್ವಾಮಿಜಿಯೇ ರೂಪಿಸಿದ್ದು. ಈ ಲಾಂಛನದಲ್ಲಿನ ನೀರಿನ ಅಲೆ ಕರ್ಮಯೋಗವನ್ನು ಕಮಲವು ಭಕ್ತಿಯೋಗವನ್ನು, ಉದಯಾಸುರ್ಯನು ಜ್ಞಾನಯೋಗವನ್ನು, ಸುರುಳಿಗೊಂಡಿರುವ ಸರ್ಪವು ರಾಜಯೋಗವನ್ನು, ಹಂಸವು ಪರಮಾತ್ಮನನ್ನು ಸೂಚಿಸುತ್ತದೆ. ಒಟ್ಟಿನ ಅರ್ಥವೆಂದರೆ: ನಾಲ್ಕೂ ಯೋಗಗಳ ಸಮಗ್ರ ಅನುಷ್ಠಾನದಿಂದ ಪರಮಾತ್ಮನ ಸಾಕ್ಷಾತ್ಕಾರ ಉಂಟಾಗುತ್ತದೆ.


4 . ಶಕ್ತಿಯನ್ನು ಆಧರಿಸಿದ ನೈತಿಕತೆ: ಸ್ವಾಮಿ ವಿವೇಕಾನಂದರ ಪ್ರಕಾರ, ಬದಕಿನ ಎಲ್ಲ ಅನೈತಿಕತೆ, ಕೆಡುಕು, ದುಃಖಗಳಿಗೆ ವ್ಯಕ್ತಿಯ ದೌರ್ಬಲ್ಯವೇ ಮುಖ್ಯ ಕಾರಣ; ಆತ್ಮನೆಂಬ ತನ್ನ ನೈಜ ಸ್ವರೂಪವನ್ನು ಕುರಿತ ಅಜ್ಞಾನವೇ ಈ ದೌರ್ಬಲ್ಯದ ಕಾರಣ. ನಮ್ಮ ದೌರ್ಬಲ್ಯವನ್ನು ಗೆಲ್ಲಲು ಮತ್ತು ಶೀಲಸಂಪನ್ನವಾದ ಬದುಕನ್ನು ನಡೆಸಲು ಅತ್ಮಜ್ಞಾನ ಅಗಾಧ ಶಕ್ತಿಯನ್ನೀಯುತ್ತದೆ. ಪ್ರತಿಯೊಬರಲ್ಲೂ ಹಲವಾರು ಸುಪ್ತ ಶಕ್ತಿಗಳಿರುತ್ತವೆ; ಆದರೆ ಅವುಗಳಲ್ಲಿ ಬಹುಪಾಲು, ನಮ್ಮ ಭಯ ದೌರ್ಬಲ್ಯಗಳಿಂದಾಗಿ ವಾಸ್ತವ ರೂಪ ತಳೆಯುವುದಿಲ್ಲ. ಆತ್ಮಜ್ಞಾನದ ಮೂಲಕ ಭಯ, ದೌರ್ಬಲ್ಯಗಳನ್ನು ಗೆದ್ದಾಗ, ಈ ಸುಪ್ತ ಶಕ್ತಿಗಳು ಹೊರಹೊಮ್ಮುತ್ತವೆ. ಈ ಪ್ರಕ್ರಿಯೆಯನ್ನು ಸ್ವಾಮೀಜಿ "ಪುರುಷ ನಿರ್ಮಾಪಕ" ಶಿಕ್ಷಣವೆಂದು ಕರೆದರು .


5. ಧರ್ಮಸಾಮರಸ್ಯ : “ಒಂದೇ ಸತ್ಯಕ್ಕೆ ಹಲವು ಹೆಸರುಗಳು" ( ವೇದ ) ಮತ್ತು "ವಿಭಿನ್ನ ಆಧ್ಯಾತ್ಮಿಕ ಪಥಗಳು ಒಂದೇ ಗುರಿಗೊಯ್ಯುತ್ತವೆ" (ಗೀತೆ) ಎಂಬ ವಿಚಾರಗಳು ಹಿಂದೂ ಶಾಸ್ತ್ರಗ್ರಂಥಗಳಲ್ಲಿ ಮತ್ತು ಅನೇಕ ಸಂತರ ಬೋಧನೆಗಳಲ್ಲಿ ಕಂಡುಬರುತ್ತವೆಯಾದರೂ, ಎಲ್ಲ ಧರ್ಮಗಳ ಆತ್ಯಂತಿಕ ಐಕಮತ್ಯವನ್ನು ಅಪರೋಕ್ಷಾನುಭವದ ಮೂಲಕ ತೋರಿಸಿಕೊಟ್ಟವರಲ್ಲಿ ಶ್ರೀರಾಮಕೃಷ್ಣರು ಚಾರಿತ್ರಿಕವಾಗಿ ಮೊದಲಿಗರು. ಅವರ ಸಂದೇಶ ಎರಡು ರೀತಿಯ ಧಾರ್ಮಿಕ ಸಮನ್ವಯವನ್ನು ಸೂಚಿಸುತ್ತದೆ: ಒಂದು, ಹಿಂದೂಧರ್ಮದೊಳಗಿನ ಸಮನ್ವಯ; ಇನ್ನೊoದು, ಜಾಗತಿಕ ಧರ್ಮಗಳ ನಡುವಣ ಸಮನ್ವಯ.

ಅ . ಹಿಂದೂಧರ್ಮದೊಳಗಿನ ಸಾಮರಸ್ಯ : ಶ್ರೀರಾಮಕೃಷ್ಣರು ಹಿಂದೂಧರ್ಮದ ಯಾವುದೇ ನಿರ್ದಿಷ್ಟ ಪಂಥದೊಡನೆ ತಮ್ಮನ್ನು ಗುರುತಿಸಿಕೊಳ್ಳಲಿಲ್ಲ; ಆದರೆ ಹಿಂದೂಧರ್ಮವನ್ನು ಇಡಿಯಾಗಿ ಒಪ್ಪಿಕೊಂಡರು. ಹಿಂದು ತತ್ವಶಾಸ್ತ್ರದ ದ್ವೈತ, ಅದ್ವೈತ ಮತ್ತಿತರ ತತ್ವಗಳು ಒಂದೇ ಸತ್ಯದ ಸಮಗ್ರ ಅನುಭವದ ವಿಭಿನ್ನ ಘಟ್ಟಗಳನ್ನು ಪ್ರತಿನಿಧಿಸುತ್ತವೆಯೆಂದೂ, ಎಲ್ಲ ದೇವತೆಗಳೂ ಒಂದೇ ಪರಬ್ರಹ್ಮದ ವಿವಿಧ ಮುಖಗಳೆಂದು ಅವರು ತೋರಿಸಿಕೊಟ್ಟರು. ಅವರ ಸಂದೇಶ ಹಿಂದೂ ಪಂಥಗಳ ನಡುವೆ ಸಾಕಷ್ಟು ಸಾಮರಸ್ಯವನ್ನು ಉಂಟುಮಾಡಿದೆ; ಸ್ವತಃ ಶ್ರೀರಾಮಕೃಷ್ಣರು ಹಿಂದೂಧರ್ಮದ ಐಕ್ಯದ ಸಂಕೇತವಾಗಿದ್ದಾರೆ.

ಆ. ಜಾಗತಿಕ ಧರ್ಮಗಳ ನಡುವಣ ಸಾಮರಸ್ಯ: ಶ್ರೀರಾಮಕೃಷ್ಣರು ಧರ್ಮಗಳ ನಡುವಣ ಭಿನ್ನತೆಗಳನ್ನು ಗುರುತಿಸಿದರು, ಆದರೆ ಈ ಭಿನ್ನತೆಗಳಿದ್ದೂ ಕೂಡ ಅವು ಒಂದೇ ಅಂತಿಮ ಗುರಿಗೆ ನಮ್ಮನ್ನು ಕರೆದೊಯ್ಯುತ್ತವೆಯೆಂದು ಹೇಳಿದ್ದು ಅತ್ಯಂತ ಗಮನಾರ್ಹ. ಯತೋ ಮತ್, ತತೋ ಪಥ್ (ಎಷ್ಟು ಮತಗಳೋ ಅಷ್ಟು ಪಥಗಳು) ಎಂಬ ಪ್ರಸಿದ್ಧ ಸೂತ್ರದ ಅರ್ಥ ಇದೇ. ಇದಲ್ಲದೆ, ಸ್ವಾಮಿ ವಿವೇಕಾನಂದರು ಜಗತ್ತಿನ ಎಲ್ಲ ಧರ್ಮಗಳೂ ಏಕೈಕ ಶಾಶ್ವತ ವಿಶ್ವಧರ್ಮದ ಅಭಿವ್ಯಕ್ತಿಗಳೆಂದು ಪ್ರತಿಪಾದಿಸಿದರು, ಆಧ್ಯಾತ್ಮಿಕ ಜಗತ್ತಿನ ಎಲ್ಲ ಮೂಲಭೂತ ತತ್ವಗಳೂ, ನಿಯಮಗಳೂ ವೇದಾಂತದಲ್ಲಿ ಕಂಡುಬರುವುದರಿಂದ ವೇದಾಂತವನ್ನು ಶಾಶ್ವತ ವಿಶ್ವಸಾರ್ವತ್ರಿಕ ಧರ್ಮವೆಂದು ಸ್ವಾಮೀಜಿ ಪರಿಗಣಿಸಿದರು. ಬೇರೆ ಮಾತುಗಳಲ್ಲಿ ಹೇಳುವುದಾದರೆ, ವೇದಾಂತವು ಎಲ್ಲ ಧರ್ಮಗಳಿಗೂ ಸಮಾನವಾದ ತಳಹದಿಯಾಗಬಲ್ಲುದು.

6. ಶ್ರೀರಾಮಕೃಷ್ಣರ ಅವತಾರತ್ವ: ಹಿಂಧೂ ಧಾರ್ಮಿಕ ಸಂಪ್ರದಾಯದ ಪ್ರಕಾರ, ಆಯಾ ಯುಗದ ಅಗತ್ಯಕ್ಕೆ ಅನುಗುಣವಾಗಿ ಮನುಕುಲಕ್ಕೆ ನೂತನ ಸಂದೇಶ ನೀಡುವ ಸಲುವಾಗಿ ದೇವರು ಪ್ರತಿಯೊಂದು ಯುಗದಲ್ಲೂ ಅವತರಿಸುತ್ತಾನೆ. ರಾಮಕೃಷ್ಣ ಪಂಥದ ಆಂದೋಲನದಲ್ಲಿ ಶ್ರೀರಾಮಕೃಷ್ಣರನ್ನು 'ಆಧುನಿಕ ಯುಗದ ಅವತಾರ'ವೆಂದು ಪೂಜಿಸಲಾಗುತ್ತದೆ. ಇದರ ಅರ್ಥವೇನೆಂದರೆ, ಅವರ ಬದುಕು, ಬೋಧನೆಗಳು ಮನುಕುಲಕ್ಕೆ ಮುಕ್ತಿಯ ಹೊಸ ದಾರಿಯೊಂದನ್ನು ತೆರೆದಿಟ್ಟಿವೆ. ಶ್ರೀರಾಮಕೃಷ್ಣರ ಅವತಾರತ್ವದ ವೈಶಿಷ್ಟ್ಯವೆಂದರೆ, ಅದು ಹಿಂದೂತೆಕ್ಕೆಯಿಂದಾಚೆಯವರೂ ಸೇರಿದಂತೆ ಎಲ್ಲ ಹಿಂದಿನ ಅವತಾರಗಳು ಮತ್ತು ಪ್ರವಾದಿಗಳ ಅಧ್ಯಾತ್ಮಿಕ ಪ್ರಜ್ಞೆಯನ್ನೊಳಗೊಂಡಿದೆ ಮತ್ತು ಎಲ್ಲ ಧಾರ್ಮಿಕ ಪರಂಪರೆಗಳೊಡನೆ ಸಮರಸಗೊಂಡಿದೆ ಎನ್ನುವುದು. ರಾಮಕೃಷ್ಣ ಸಂಘದ ಸಂಸ್ಥೆಗಳಲ್ಲಿ ಎಲ್ಲ ಧರ್ಮಗಳ ಸ್ಥಾಪಕರಿಗೆ ಪೂಜಾರ್ಹವಾದ ಗೌರವವನ್ನು ನೀಡಲಾಗುತ್ತಿದೆ.

7. ಒಂದು ಹೊಸ ಕಾರ್ಯತತ್ವ: ಸ್ವಾಮಿ ವಿವೇಕಾನಂದರು ಆಧುನಿಕ ಜಗತ್ತಿನ ಹೊಸ ಕಾರ್ಯತತ್ವವೊಂದನ್ನು ಕೊಟ್ಟಿದ್ದಾರೆ. ರಾಮಕೃಷ್ಣ ಮಠ ಮತ್ತು ಮಿಷನ್ನಿನ ಎಲ್ಲ ಕೆಲಸಗಳೂ ಈ ತತ್ವದ ಚೌಕಟ್ಟಿನ ಅನುಗುಣವಾಗಿ ನಡೆಯುತ್ತವೆ; ಅದು ಮುಂದಿನ ಅಂಶಗಳನ್ನು ಆಧರಿಸಿದೆ:

ಅ . ಎಲ್ಲ ಕೆಲಸವೂ ಪವಿತ್ರ : ವೇದಾಂತದ ಪ್ರಕಾರ ಭೌತಿಕ ವಿಶ್ವ ಎಂಬುದು ಎನಿಸಿದ ಭಗವಂತನ ವಿರಾಟ್ ರೂಪದ ಅಭಿವ್ಯಕ್ತಿ. ಆದ್ದರಿಂದ, ಸೋದರಿ ನಿವೇದಿತಾ ಹೇಳಿದ್ದಂತೆ, “ಅಧ್ಯಾತ್ಮಿಕತೆಗೂ ಲೌಕಿಕತೆಗೂ ಏನೂ ಭೇದವಿಲ್ಲ” ಈ ಹೇಳಿಕೆಯ ಅರ್ಥವೇನೆಂದರೆ, ಎಲ್ಲ ದುಡಿಮೆಯೂ ಪವಿತ್ರವೇ ಆಗಿದೆ. ನೆಲ ಗುಡಿಸುವ ಅಥವಾ ಚಪ್ಪಲಿ ಹೊಲಿಯುವ ಸೇವಾ ಕಾರ್ಯವನ್ನು ಕೂಡ ದೇವರ ಕೆಲಸಗಳಂತೆಯೇ ಶ್ರದ್ಧಾಭಕ್ತಿಗಳಿಂದ ಮಾಡಬೇಕು.

ಆ. ಕೈಂಕರ್ಯ ಭಾವದಿಂದ ದುಡಿಮೆ : ಭಗವದ್ಗೀತೆಯು ಸರ್ವವ್ಯಾಪಿಯಾದ ಭಗವಂತನೇ ಎಲ್ಲ ದುಡಿಮೆಯ ಅಂತಿಮ ಆಕರ ಮತ್ತು ಎಲ್ಲ ಯಜ್ಞಗಳ ಫಲಾನುಭವಿ ಎನ್ನುತ್ತದೆ . (9.24, 18.46). ಆದ್ದರಿಂದ, ಎಲ್ಲ ದುಡಿಮೆಯನ್ನು ಕೈಂಕರ್ಯವನ್ನಾಗಿ ಕೈಗೊಳ್ಳಬೇಕು ಮತ್ತು ಕರ್ಮಫಲಗಳನ್ನು ಭಗವಂತನಿಗೆ ಸಮರ್ಪಿಸಬೇಕು.

ಇ . ಮಾನವ ಸೇವೆಯೇ ದೇವರ ಸೇವೆ : ಸ್ವಾಮಿ ವಿವೇಕಾನಂದರು ತಮ್ಮ ಗುರುವಿನಿಂದ ಕಲಿತ ಮುಖ್ಯ ತತ್ವಗಳಲ್ಲೊಂದೆಂದರೆ: ಶಿವಜ್ಞಾನೇ ಜಿವಸೇವಾ (ಶಿವನೆಂದು ಭಾವಿಸಿ ಜೀವನಿಗೆ ಸೇವೆ ಸಲ್ಲಿಸುವುದು). ಮನುಷ್ಯನಲ್ಲಿ ದೈವಿಕತೆ ಅಂತರ್ನಿಹಿತವಾಗಿ ಇರುವುದರಿಂದ, ನಾವು ಮಾಡುವ ಮಾನವಸೇವೆ ವಾಸ್ತವವಾಗಿ ದೇವರ ಸೇವೆಯೇ ಆಗುತ್ತದೆ. ಸೇವೆಯ ಅಗತ್ಯವಿರುವ ವ್ಯಕ್ತಿಯನ್ನು ಕನಿಕರದ ವಸ್ತುವನ್ನಾಗಿ ಕಾಣುವುದರ ಬದಲು ಪೂಜೆಯ ವಸ್ತುವನ್ನಾಗಿ ಕಾಣಬೇಕು. ಇಂತಹ ದೃಷ್ಟಿಯು ಕೊಡುವವನು, ಪಡೆಯುವವನು ಇಬ್ಬರನ್ನೂ ದೊಡ್ಡವರನ್ನಾಗಿ ಮಾಡುತ್ತದೆ.

ಈ. ದೀನದಲಿತರ ಸೇವೆಯ ಮೇಲೆ ಒತ್ತು: ಭಾರತದಲ್ಲಿ ಬಡವರ ಮತ್ತು ದಲಿತರ ಪರವಾಗಿ ದನಿಯೆತ್ತಿ ಹೀಗೆ ಧೈರ್ಯವಾಗಿ ಮತನಾಡಿದ ಮೊತ್ತಮೊದಲನೆಯ ಧಾರ್ಮಿಕ ನಾಯಕರು ಸ್ವಾಮಿ ವಿವೇಕಾನಂದರು: “ಬಡವರಲ್ಲಿ, ದುರ್ಬಲರಲ್ಲಿ ಮತ್ತು ರೋಗಿಗಳಲ್ಲಿ ಶಿವನನ್ನು ಕಾಣುವವನು ನಿಜವಾದ ಅರ್ಥದಲ್ಲಿ ಶಿವನನ್ನು ಪೂಜಿಸುತ್ತಾನೆ ... ದೇಗುಲಗಳಲ್ಲಿ ಮಾತ್ರ ಶಿವನನ್ನು ಕಾಣುವವನಿಗಿಂತ ಇಂಥ ಮನೋಭಾವದ ವ್ಯಕ್ತಿಯನ್ನು ಶಿವ ಮೆಚ್ಚಿಕೊಳ್ಳುತ್ತಾನೆ". ಬಡವರಿಗೆ ಅನ್ವಯಿಸುವಂತೆ ದರಿದ್ರನಾರಾಯಣ ಎಂಬ ಶಬ್ಧವನ್ನು ಟಂಕಿಸಿದವರು ಸ್ವಾಮೀಜಿ. ಬಡವರ ಬಗೆಗಿನ ಸ್ವಾಮಿಜಿಯ ಪ್ರೀತಿ ಮತ್ತು ಕಳಕಳಿ ರಾಮಕೃಷ್ಣ ಮಿಷನ್ನಿನ ಸೇವಾಕಾರ್ಯಾಕ್ರಮಗಳಲ್ಲಿ ಒಂದು ನಿರ್ದೇಶಕ ತತ್ತ್ವವಾಗಿ ಮುಂದುವರಿದುಕೊಂಡು ಬಂದಿದೆ.

ಉ . ದುಡಿಮೆಯೊಂದು ಅಧ್ಯಾತ್ಮಿಕ ಸಾಧನೆ : ಮೇಲಿನ ನಿಬಂದನೆಗಳನ್ನು ಪೂರೈಸುತ್ತ ಮಾಡುವ ಯಾವುದೇ ಕೆಲಸ ಆಧ್ಯಾತ್ಮಿಕ ಸಾಧನೆಯಾಗಿ ಪರಿಣಮಿಸುತ್ತದೆ, ಅದರಿಂದ ಮನಸ್ಸು ಶುದ್ಧಿಗೊಳ್ಳುತ್ತದೆ ಮತ್ತು ಜೀವನದಲ್ಲಿ ಸುಪ್ತವಾಗಿರುವ ದೈವಿಕತೆ ಹೆಚ್ಚು ಹೆಚ್ಚಾಗಿ ಪ್ರಕಟವಾಗುತ್ತದೆ. ಹೀಗಾಗಿ, ಪೂಜಾತ್ಮಕ ಸೇವೆಯೆಂದು ಭಾವಿಸಿ ಮಾಡಿದ ಇಂಥ ಕೆಲಸದಿಂದ ಮಾಡಿದವನಿಗೇ ಅಧ್ಯಾತ್ಮಿಕವಾಗಿ ಲಾಭ ದೊರೆಯುತ್ತದೆ; ಅದೊಂದು ಆಧ್ಯಾತ್ಮಿಕ ಶಿಸ್ತು ಅಥವಾ ಯೋಗವಾಗುತ್ತದೆ. ಬಡವರಿಗೆ ಅನ್ನ, ಬಟ್ಟೆಗಳನ್ನು ಕೊಡುವುದು, ರೋಗಿಗಳ ಆರೈಕೆ ಮಾಡುವುದು ಮುಂತಾದ ರಾಮಕೃಷ್ಣ ಮಿಷನ್ನಿನ ಸೇವಾ ಚಟುವಟಿಕೆಗಳೆಲ್ಲ ನಡೆಯುವುದು ಕಾಯಕವನ್ನು ಅಧ್ಯಾತ್ಮಿಕ ಶಿಸ್ತಾಗಿ ಕಾಣುವ (ಕರ್ಮಯೋಗದ) ಈ ಗ್ರಹಿಕೆಯಿಂದಲೇ . ಹೀಗಾಗಿ, ಮನುಷ್ಯನಲ್ಲಿರುವ ಭಗವಂತನ ಪೂಜೆಯಾಗಿ ಕೈ ಕೊಳ್ಳುವ ಸೇವೆ ಇಬ್ಬಗೆಯಲ್ಲಿ ಫಲ ನೀಡುತ್ತದೆ : ಸೇವೆ ಪಡೆಯುವ ವ್ಯಕ್ತಿಗೆ ಅದು ದೈಹಿಕವಾಗಿ ಅಥವಾ ಮಾನಸಿಕವಾಗಿ ಅನುಕೂಲವಾಗುತ್ತದೆ ಮತ್ತು ಸೇವೆ ಮಾಡುವ ವ್ಯಕ್ತಿಗೆ ಅಧ್ಯಾತ್ಮಿಕವಾಗಿ ಅನುಕೂಲವಾಗುತ್ತದೆ.


ಧ್ಯೇಯವಾಕ್ಯ : ಸೇವಾಚಟುವಟಿಕೆಗಳ ಈ ದ್ವಿಮುಖ ಉದ್ದೇಶವನ್ನು, ವಾಸ್ತವವಾಗಿ ಶ್ರೀರಾಮಕೃಷ್ಣ ಮಠ ಮತ್ತು ಮಿಷನ್ನಿನ ಇಡೀ ವಿಚಾರಪ್ರಣಾಳಿಯನ್ನು ಸ್ವಾಮಿ ವಿವೇಕಾನಂದರು ರೂಪಿಸಿದ ಅತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ-ಸ್ವಂತ ಮುಕ್ತಿಗಾಗಿ ಮತ್ತು ಲೋಕಹಿತಕ್ಕಾಗಿ-ಎಂಬ ಧ್ಯೇಯವಾಕ್ಯದಲ್ಲಿ ಅಡಕಗೊಳಿಸಲಾಗಿದೆ.


ಬದುಕಿನ ಒಂದು ವಿಧಾನವಾಗಿ ಸೇವೆ

ಹಿಂದೆ ವಿವರಿಸಿರುವ ರಾಮಕೃಷ್ಣ ಮಠ ಮತ್ತು ಮಿಷನ್ನಿನ ವಿಚಾರ ಪ್ರಣಾಳಿಗಳು ಅವುಗಳ ಬಹುಮಖ ಚಟುವಟಿಕೆಗಳಲ್ಲಿ ಅಭಿವ್ಯಕ್ತಿಗೊಳ್ಳುತ್ತವೆ. ಈ ಚಟುವಟಿಕೆಗಳು ಶಿಕ್ಷಣ, ಆರೋಗ್ಯ, ಗ್ರಾಮೀಣ ಅಭಿವೃದ್ಧಿ, ಸ್ವ-ಉದ್ಯೋಗ, ಮಹಿಳಾ ಯೋಗಕ್ಷೇಮ, ಅಂತರ್-ಧರ್ಮೀಯ ಅರಿವು, ನೈತಿಕ ಜೀವನ, ಅಧ್ಯಾತ್ಮಿಕ ಮಾರ್ಗದರ್ಶನ ಮತ್ತು ನೈಸರ್ಗಿಕ ಪ್ರಕೋಪಗಳಿಗೆ ಬಲಿಯಾದವರಿಗೆ ಪರಿಹಾರ ನೀಡುವ ಮಾನವೀಯ ಅಗತ್ಯ ಹಾಗೂ ಸಾಮಾಜಿಕ ಹಿತದಂತಹ ವಿಭಿನ್ನ ಕ್ಷೇತ್ರಗಳಲ್ಲಿ ಹರಡಿರುತ್ತವೆ. ಈ ಎಲ್ಲ ಚಟುವಟಿಕೆಗಳೂ ಸೇವೆಯಾಗಿ, ಮನುಷ್ಯನಲ್ಲಿ ಅಂತರ್ಗತನಾಗಿರುವ ದೇವರ ಸೇವೆಯಾಗಿ ನಡೆಯುತ್ತವೆ.

ಸೇವೆ ಎಂಬುದು ರಾಮಕೃಷ್ಣ ಮಠ ಮತ್ತು ಮಿಷನ್ನಿನ ಯಾವುದೋ ಒಂದು ನಿರ್ದಿಷ್ಟ ಕಾಲದಲ್ಲಿ ನಡೆಯುವ ನಿರ್ದಿಷ್ಟ ಚಟುವಟಿಕೆಯ ಪ್ರಕಾರಕ್ಕೆ ಸೀಮಿತವಾದುದಲ್ಲ; ಅದು ಒಂದು ಜೀವನವಿಧಾನ. ಸಂನ್ಯಾಸಿಗಳು ಹೊರಗಿನ ಸಮಾಜದಲ್ಲಿ ಯಾವುದೇ ಸೇವೆ ಸಲ್ಲಿಸದಿರುವ ಸಂದರ್ಭಗಳಲ್ಲಿ ಸಂನ್ಯಾಸಿವರ್ಗದೊಳಗೇ ಸೇವೆ ಸಲ್ಲಿಸುತ್ತಿರುತ್ತಾರೆ. ಇದಕ್ಕೆ ಯಾವುದೇ ಕಾಲದ, ವಯಸ್ಸಿನ ಮಿತಿ ಇರುವುದಿಲ್ಲ. ಅತೀವ ಅನಾರೋಗ್ಯ ಇಲ್ಲವೆ ವೃದ್ಧಾಪ್ಯದಿಂದ ಅಸಮರ್ಥರಾಗುವವರೆಗೂ ಸಂನ್ಯಾಸಿಗಳು ವಿವಿಧ ಸೇವಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ರಾಮಕೃಷ್ಣ ಮಠ ಮತ್ತು ಮಿಷನ್ನಿನ ಹಿಂದಿನ ಮಹಾಧ್ಯಕ್ಷರಾದ ಸ್ವಾಮಿ ರಂಗನಾಥಾನಂದಜಿಯವರು 98ರ ಇಳಿವಯಸ್ಸಿನಲ್ಲೂ ವಿವಿಧ ಬಗೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು.

ರಾಮಕೃಷ್ನ್ಣ ಮಠದಲ್ಲಿ ಪಾಲಿಸುವ "ಜೀವನವಿಧಾನವಾಗಿ ಸೇವೆ"ಯಲ್ಲಿ ಕೆಲವು ವಿಶಿಷ್ಟ ಲಕ್ಷಣಗಳಿವೆ; ಅವುಗಳಲ್ಲಿ ಕೆಲವನ್ನು ಮುಂದೆ ಉಲ್ಲೇಖಿಸಲಾಗಿದೆ :

1. ನಿಸ್ವಾರ್ಥ, ತ್ಯಾಗ, ಪ್ರೇಮ: ನಿಸ್ವಾರ್ಥತೆಯ ತತ್ವ 'ದಿವ್ಯತ್ರಯ'ರ ಒಂದು ಪ್ರಮುಖ ಬೋಧನೆಯಾಗಿದ್ದು, ಕರ್ಮ, ಭಕ್ತಿ, ಜ್ಞಾನಗಳ ಮೂರು ಪ್ರಮುಖ ಆಧ್ಯಾತ್ಮಿಕ ಪಥಗಳಲ್ಲಿ ಅದೇ ಮೊದಲ ಹೆಜ್ಜೆಯಾಗಿದೆ. ರಾಮಕೃಷ್ಣ ಪಂಥದ ಸಂನ್ಯಾಸಿಗಳು ತಮ್ಮ ಸಂಘವನ್ನು ಶ್ರೀರಾಮಕೃಷ್ಣರ 'ಆನುಭಾವಿಕ ಶರೀರ'ವೆಂದು ಭಾವಿಸುತ್ತಾರೆ ಮತ್ತು ತಮ್ಮ ವೈಯಕ್ತಿಕ ಅಹಂಗಳನ್ನು ಸಂಘದ ಸಾಮೂಹಿಕ ಸಂಕಲ್ಪದಲ್ಲಿ ವಿಲೀನಗೊಳಿಸಲು ಕಲಿಯುತ್ತಾರೆ. ಅಲ್ಲದೆ, ಅವರು ಮಾಡುವ ಎಲ್ಲ ಕಾರ್ಯಗಳು ಮತ್ತು ಅವುಗಳ ಫಲ ಭಗವಂತನಿಗೆ ಪೂಜೆಯಾಗಿ ಸಮರ್ಪಿತವಾಗುತ್ತವೆ. ರಾಮಕೃಷ್ಣ ಮಠದ ಮತ್ತು ಮಿಷನ್ನಿನ ಸದಸ್ಯರು ತಮ್ಮ ಕಾರ್ಯಗಳಿಗೆ ವೈಯಕ್ತಿಕವಾಗಿ ಯಾವುದೇ ಗೌರವವನ್ನು ಬಯಸುವುದಿಲ್ಲ : ಎಲ್ಲ ಗೌರವವೂ ಸಂಘಕ್ಕೆ ಸಲ್ಲುತ್ತದೆ. ಅವರು ಸೇವಾ ಚಟುವಟಿಕೆಗಳಲ್ಲಿ ತೊಡಗುವುದು 'ಸ್ವಯಂಕೀರ್ತಿ'ಗಾಗಿ ಅಲ್ಲ, ಭಗವಂತನಿಗೆ ಮುಡಿಪಾಗಿರುವ 'ಉನ್ನತತರ' ಕೀರ್ತಿಗಾಗಿ. ರಾಮಕೃಷ್ಣ ಸಂನ್ಯಾಸಿಗಳು ಜ್ಞಾನಮಾರ್ಗವನ್ನೂ ಅನುಸರಿಸುತ್ತಾರೆ ಮತ್ತು ಅತ್ಮವಿಶ್ಲೇಷಣೆಯ ಅನುಷ್ಠಾನದಿಂದ ಎಲ್ಲ ಆಲೋಚನೆ, ಕ್ರಿಯೆಗಳ ಶಾಶ್ವತ ಅಂತರಿಕ ಸಾಕ್ಷಿಯಾದ 'ಪ್ರತ್ಯಗಾತ್ಮ'ನೊಡನೆ ತಮ್ಮನ್ನು ಗುರುತಿಸಿಕೊಳ್ಳಲು ಕಲಿಯುತ್ತಾರೆ. ಈ ಎಲ್ಲ ವಿಧಾನಗಳ ಮೂಲಕ ಇಲ್ಲಿನ ಸಂನ್ಯಾಸಿಗಳು ನಿಸ್ವಾರ್ಥ, ನಿರಹಂಕಾರಗಳನ್ನು ಕಲಿಯುತ್ತಾರೆ.

ಮೊದಲೇ ಹೇಳಿದಂತೆ, ಶ್ರೀರಾಮಕೃಷ್ಣ ಆಂದೋಲನದಲ್ಲಿ ಅನುಸರಿಸುತ್ತಿರುವ ಸೇವಾದರ್ಶ, “ಶಿವಜ್ಞಾನೇ ಜೀವಸೇವಾ", ಎಂದರೆ, ಮನುಷ್ಯನೇ ಭಗವದ್ರೂಪವೆಂದು ತಿಳಿದು ಅವನಿಗೆ ಸೇವೆ ಸಲ್ಲಿಸುವುದು. ಆದರೂ ಎಲ್ಲರಿಗೂ-ಅದರಲ್ಲೂ ದರಿದ್ರರು ಮತ್ತು ರೋಗಿಗಳಗೆ-ಪೂಜಾ ಮನೋಭಾವದಿಂದ ಸೇವೆ ಸಲ್ಲಿಸುವುದು ಹೇಳಿದಷ್ಟು ಸುಲಭವಲ್ಲ. ಕಾಲ, ಶಕ್ತಿ, ಸುಖ ಇತ್ಯಾದಿ ಬಹಳಷ್ಟು ವಿಷಯಗಳ ತ್ಯಾಗವನ್ನು ಅಪೇಕ್ಷಿಸುತ್ತದೆ, ಈ ಸೇವಾದರ್ಶ, ಪ್ರತಿಫಲ, ಮನ್ನಣೆ ಅಥವಾ ಕೀರ್ತಿಯಾ ಯಾವುದೇ ನಿರೀಕ್ಷೆಯಿಲ್ಲದೆ ರಾಮಕೃಷ್ಣ ಆಂದೋಲನದ ಸದಸ್ಯರು ಕೈಗೊಳ್ಳುವ ಈ ತ್ಯಾಗಗಳೆ ಅವರ ಸೇವಾದರ್ಶನವನ್ನು ಯಥಾರ್ಥಗೊಳಿಸುವಂಥವು.

ಸೇವೆ ಮತ್ತು ತ್ಯಾಗಗಳ ಹಿಂದಿನ ಪ್ರೇರಕಶಕ್ತಿಯೇ, ‘ಪ್ರೇಮ’.ರಾಮಕೃಷ್ಣ ಮಠ ಮತ್ತು ಮಿಷನ್ನಿನ ಮೂಲಕ ಪ್ರವಹಿಸುವ ಪ್ರೇಮ ದೈವಿಕ ಪ್ರೇಮ-ಮನುಕುಲಕ್ಕೆ ಶ್ರೀರಾಮಕೃಷ್ಣ, ಶ್ರೀಮಾತೆ ಹಾಗೂ ಸ್ವಾಮಿ ವಿವೇಕಾನಂದರು ತೋರಿದ ಪರಿಶುದ್ಧವೂ, ಅವಿನಾಶಿಯೂ ಆದ ಪ್ರೇಮ. ಈ ದೈವಿಕ ಪ್ರೇಮವೇ ಸನ್ಯಾಸಿ ಸೋದರರನ್ನೂ, ಸಾಮಾನ್ಯ ಭಕ್ತರನ್ನೂ ಒಗ್ಗೂಡಿಸಿ, ಸಂಘವನ್ನು ಒಟ್ಟಾಗಿ ಹಿಡಿದಿಟ್ಟಿದೆ.

2. ಸ್ವಾತಂತ್ರ್ಯ, ಸಮಾನತೆ, ಸೋದರತೆ : ಪ್ರಜಾಪ್ರಭುತ್ವದ ಈ ಮೂರು ಮಹಾನ್ ಆದರ್ಶಗಳು - ಅವುಗಳ ಬಗೆಗೆ ಮನುಕುಲ ಶತಶತಮಾನಗಳ ಕಾಲ ಕನಸು ಕಾಣುತ್ತ ಮತ್ತು ಮಾತನಾಡುತ್ತ ಬಂದಿದೆ – ರಾಮಕೃಷ್ಣ ಮಠ ಮತ್ತು ಮಿಷನ್ನಿನ ವಲಯಗಳಲ್ಲಿ ನಿಶ್ಯಬ್ಧವಾದ. ಸಹಜವಾದ ಒಂದು ಸಮಾಜಿಕ ವಾಸ್ತವತೆಯಾಗಿ ಸಂಭವಿಸುತ್ತಿವೆ. ಸ್ವಾಮಿ ವಿವೇಕಾನಂದರು ಮತ್ತೆ ಮತ್ತೆ ಹೇಳಿದ್ದಾರೆ.

“ಬಿಡುಗಡೆಯೇ ಬೆಳವಣಿಗೆಯ ಮೊದಲ ಷರತ್ತು” ಮತಾಂಧತೆ, ಅಸಹನೆ, ದ್ವೇಷ, ಮೂಢ ನಂಬಿಕೆಗಳಿಂದ ಬಿಡುಗಡೆ, ಧಾರ್ಮಿಕ, ಸಾಮಾಜಿಕ ಮತ್ತು ಜನಾಂಗಿಕ ಪೂರ್ವಗ್ರಹಗಳಿಂದ ಬಿಡುಗಡೆ - ಒಂದೇ ಮಾತಿನಲ್ಲಿ ಹೇಳುವುದಾದರೆ ವಿಚಾರ, ನಂಬಿಕೆಗಳ ಸ್ವಾತಂತ್ರ್ಯ ಎಂಬುದು ರಾಮಕೃಷ್ಣ ಆಂದೋಲನದಲ್ಲಿ ಕಂಡುಬರುವ ಕೇಂದ್ರ ಸಂಗತಿ. ರಾಮಕೃಷ್ಣ ಮಠ ಮತ್ತು ಮಿಷನ್ನಿನ ಚಟುವಟಿಕೆಗಳು, ಜತಿ, ಪಂಥ, ಜನಾಂಗಗಳ

ಯಾವುದೇ ಭೇದಗಳಿಲ್ಲದೆ ಸೃಷ್ಟಿಯ ಯೋಗಕ್ಷೇಮವನ್ನು ಗುರಿಯಾಗಿಟ್ಟುಕೊಂಡಿವೆ. ಬಡವ – ಬಲ್ಲಿದ, ಬ್ರಾಹ್ಮಣ – ಹರಿಜನ, ಹಿಂದುಗಳು, ಮುಸ್ಲಿಮರ, ಕ್ರೈಸ್ತರು - ಎಲ್ಲರೂ ಇಲ್ಲಿ ಒಬ್ಬರೆ ದೈವೀ ತಂದೆತಾಯಿಯರ ಮಕ್ಕಳಾಗಿ ಪರಿಗಣಿಸಲ್ಪಡುತ್ತಾರೆ. ಸಾಮಾಜಿಕ ಸಮಾನತೆಯನ್ನು ಉಂಟುಮಾಡುವುದು "ಕೆಳಮಟ್ಟಕ್ಕೆ ಇಳಿಸುವ" ಪ್ರಕ್ರಿಯೆಯಿಂದಲ್ಲ, “ಮೇಲ್ಮಟ್ಟಕ್ಕೆ ಏರಿಸುವ" ಪ್ರಕ್ರಿಯೆಯಿಂದ, ಎಂದರೆ ಈಗಾಗಲೇ ಮೇಲಿರುವವರನ್ನು ಕೆಳಕ್ಕೆಳೆಯುವುದರಿಂದಲ್ಲ, ಕೆಳಗಿರುವವರನ್ನು ಮೇಲಕ್ಕೆತ್ತುವುದರಿಂದ ಎಂಬ ವಿವೇಕಾನಂದರ ನಿಲುವನ್ನು ಈ ಸಂಸ್ಥೆಗಳು ಅನುಸರಿಸುತ್ತವೆ.

3. ಪರಿಣತಿ, ದಕ್ಷತೆ, ಸಮೂಹಕಾರ್ಯ: ಸಾಮಾನ್ಯವಾಗಿ ವಾಣಿಜ್ಯೋದ್ಯಮ ಕ್ಷೇತ್ರದ ಬಗೆಗೆ ಮಾತನಾಡುವಾಗ ಈ ಮೂರೂ ಗುಣಗಳ ಪ್ರಸ್ತಾಪ ಆಗುತ್ತಿರುತ್ತದೆ; ಆದರೆ, ವಾಸ್ತವವಾಗಿ ಅವು ರಾಮಕೃಷ್ಣ ಮಠ ಮತ್ತು ಮಿಷನ್ನಿನ ಎಲ್ಲ ಚಟುವಟಿಕೆಗಳ ನಿಯಂತ್ರಕ ತತ್ವಗಳಾಗಿವೆ. ಎಲ್ಲ ಕಾರ್ಯವೂ ಇಲ್ಲಿ ಪೂಜೆಯಾಗಿ ನಡೆಯುವುದರಿಂದ ಮತ್ತು ಅತ್ಯುತ್ತಮ ವಸ್ತುಗಳನ್ನು ಮಾತ್ರವೇ ಭಗವಂತನಿಗೆ ಸಮರ್ಪಿಸುವುದರಿಂದ, ರಾಮಕೃಷ್ಣ ಮಠ ಮತ್ತು ಮಿಷನ್ನಿನ ಸದಸ್ಯರು ತಮಗೆ ವಹಿಸಿದ ಕಾರ್ಯವನ್ನು ಅತ್ಯುತ್ತಮ ರೀತಿಯಲ್ಲಿ ಮಾಡಲು ಪ್ರಯತ್ನಿಸುತ್ತಾರೆ. ಯಾವುದೇ ಬಗೆಯ ಪೋಲು ಅಥವಾ ನಷ್ಟವನ್ನು ತಡೆಗಟ್ಟಲು ಎಲ್ಲ ರೀತಿಯ ಎಚ್ಚರ ವಹಿಸಲಾಗುತದೆ. ಸಂಸ್ಥೆಗಳು ಮತ್ತು ಅಲ್ಲಿ ಇರುವವರ ಕನಿಷ್ಠ ಅಗತ್ಯಗಳನ್ನು ಹೊರತುಪಡಿಸಿ ಎಲ್ಲ ಸಂಪನ್ಮೂಲಗಳೂ ಸಮಾಜದ ಯೋಗಕ್ಷೇಮಕ್ಕಾಗಿ ಬಳಕೆಯಾಗುತ್ತವೆ ಮತ್ತು ಎಲ್ಲ ಸಂನ್ಯಾಸಿಗಳೂ ಸಂನ್ಯಾಸಭ್ರಾತೃತ್ವದ ಪ್ರಬಲವಾದ ಬಾಂಧವ್ಯದಿಂದ ಒಟ್ಟಾಗಿರುವುದರಿಂದ, ಅವರು ಒಂದು ತಂಡವಾಗಿ ಕೆಲಸ ಮಾಡುವುದು ಸುಲಭ ಹಾಗೂ ಸಹಜವಾಗಿ ಕಾಣುತ್ತದೆ; ರಾಮಕೃಷ್ಣ ಮಿಷನ್ನಿನ ಯಶಸ್ವಿಗೆ ಬಹಳಮಟ್ಟಿಗೆ ಈ ಗುಣವು ಕಾರಣವಾಗಿದೆ.

4. ಸತ್ಯಸಂಧತೆ, ಪ್ರಾಮಾಣಿಕತೆ, ಪಾರದರ್ಶಕತೆ : ಸಾರ್ವಜನಿಕ ದೇಣಿಗೆಗಳು ಮತ್ತು ಸರ್ಕಾರದ ಅನುದಾನಗಳ ಮೂಲಕ ಬರುವ ಬಹುಪಾಲು ನಿಧಿಗಳನ್ನು ಸ್ವೀಕರಿಸುವಲ್ಲಿ ಮತ್ತು ಖರ್ಚುಮಾಡುವಲ್ಲಿ ರಾಮಕೃಷ್ಣ ಮಿಷನ್ ಎಲ್ಲ ಶಾಸನಬದ್ಧ ಹಾಗೂ ಸಂಬಂಧಿತ ನಿಯಮ, ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತದೆ. ಅದರ ಆಯವ್ಯಯಗಳು ಕಾಲಕಾಲಕ್ಕೆ ಲೆಕ್ಕಪರಿಶೋಧನೆಗೆ ಒಳಪಡುತ್ತವೆ ಮತ್ತು ಸಾರ್ವಜನಿಕರಿಗೆ ಲಭ್ಯವಾಗುತ್ತವೆ. ಆರ್ಥಿಕ ವಿಷಯಗಳಲ್ಲಿ ಪಾರದರ್ಶಕತೆ ಎಂಬುದು ರಾಮಕೃಷ್ಣ ಮಿಷನ್ನಿನ ಒಂದು ವಿಶಿಷ್ಟವಾದ ಲಕ್ಷಣವೇ ಆಗಿದೆ.

5. ರಾಜಕೀಯರಹಿತ ಸಾಮಾಜಿಕ ಬದ್ಧತೆ : “ಸುಖೀ ರಾಜ್ಯ"ದ ತತ್ವವನ್ನನುಸರಿಸುವ ಪ್ರಜಾಪ್ರಭುತ್ವದ ರಾಷ್ತ್ರವೊಂದರಲ್ಲಿ ಯಾವುದೇ ಬಗೆಯ ಸಾಮಾಜಿಕ ಸೇವೆಯೂ ಅನಿವಾರ್ಯವಾಗಿ ಸರ್ಕಾರದ ಜೊತೆ ಸಂಬಂಧವನ್ನು ಒಳಗೊಳ್ಳುತ್ತದೆ ಆದರೂ, ರಾಮಕೃಷ್ಣ ಮಿಷನ್ ಮನುಕುಲದ ಆಧ್ಯಾತ್ಮಿಕ ಪುನರುಜ್ಜೀವನವನ್ನು ಗುರಿಯಾಗಿಸಿಕೊಂಡಿರುವ ಒಂದು ಆಧ್ಯಾತ್ಮಿಕ ಸಂಸ್ಥೆಯಾಗಿರುವುದರಿಂದ ತನ್ನ ಸ್ಥಾನವನ್ನು ಸಕ್ರಿಯ ರಾಜಕಾರಣ ಹಾಗೂ ರಾಜಕೀಯ ಸಂಬಂಧಗಳಿಗೆ ಅತೀತವಾಗಿ ಉಳಿಸಿಕೊಂಡಿದೆ.

ಕನ್ನಡನಾಡಿನಲ್ಲಿ ಸೇವೆಸಲ್ಲಿಸಿದ ರಾಮಕೃಷ್ಣ ಮಠದ ಪ್ರಮುಖ ಸನ್ಯಾಸಿಗಳು[ಬದಲಾಯಿಸಿ]

  1. ಸ್ವಾಮಿ ಶಾಂಭವಾನಂದ
  2. ಸ್ವಾಮಿ ಸೋಮನಾಥಾನಂದ
  3. ಸ್ವಾಮಿ ಯತೀಶ್ವರಾನಂದ
  4. ಸ್ವಾಮಿ ಶಾಸ್ತ್ರಾನಂದ
  5. ಸ್ವಾಮಿ ಆದಿದೇವಾನಂದ
  6. ಸ್ವಾಮಿ ತ್ಯಾಗೀಶಾನಂದ
  7. ಸ್ವಾಮಿ ಸುಂದಾನಂದ
  8. ಸ್ವಾಮಿ ಸಿದ್ದೇಶ್ವರಾನಂದ
  9. ಸ್ವಾಮಿ ಜಗದಾತ್ಮಾನಂದ

ಉಲ್ಲೇಖಗಳು[ಬದಲಾಯಿಸಿ]

  1. "ಶ್ರೀ ರಾಮಕೃಷ್ಣ ವಿವೇಕಾನಂದ ಮಿಶನ್". Archived from the original on 2014-05-21. Retrieved 2014-06-02.
  • swami purushottamanandaji