ಶಾಂಭವಾನಂದ
ಸ್ವಾಮಿ ಶಾಂಭವಾನಂದರು(೧೮೯೪-೧೯೭೨) ರಾಮಕೃಷ್ಣ ಮಹಾಸಂಘದ ಸಂನ್ಯಾಸಿಯಾಗಿದ್ದರು. ಇವರು ಕೊಡಗಿನಲ್ಲಿ ಜೇನು ಸಾಕುವಿಕೆಯ ಆದ್ಯ ಪ್ರವರ್ತಕರು. ಇವರು ಮೈಸೂರಿನಲ್ಲಿ ಆವಾಸಿಕ ಮಾಧ್ಯಮಿಕ ಶಿಕ್ಷಣದ ಆದ್ಯ ಪ್ರವರ್ತಕರೂ ಹೌದು.
ಜೀವನ ಮತ್ತು ಸಾಧನೆ
[ಬದಲಾಯಿಸಿ]ಕೊಡಗಿನ ಹಾಲುಗುಂದ ಎಂಬ ಹಳ್ಳಿಯಲ್ಲಿ ಇವರು ಜನಿಸಿದರು. ಇವರ ಮೊದಲ ಹೆಸರು ಚೆಂಗಪ್ಪ. ಇವರು ತಮ್ಮ ಆಧ್ಯಾತ್ಮಿಕ ಜೀವನವನ್ನು ೧೯೧೭ರಲ್ಲಿ ಬೆಂಗಳೂರಿನ ರಾಮಕೃಷ್ಣ ಸಂಘದ ಮಠವನ್ನು ಸೇರುವ ಮೂಲಕ ಪ್ರಾರಂಭಿಸಿದರು. ಸ್ವಾಮಿ ಬ್ರಹ್ಮಾನಂದರಿಂದ ಮಂತ್ರದೀಕ್ಷೆಯನ್ನೂ, ೧೯೨೪ರಲ್ಲಿ ಸಂನ್ಯಾಸ ದೀಕ್ಷೆಯನ್ನೂ ಪಡೆದರು.
ಕೊಡಗಿನ ಪೊನ್ನಂಪೇಟೆಯ ರಾಮಕೃಷ್ಣ ಶಾರದಾಶ್ರಮದ ಪ್ರಥಮ ಅಧ್ಯಕ್ಷರಾಗಿ ಇವರು ಸೇವೆ ಸಲ್ಲಿಸಿದರು. ಕೊಡಗಿನಲ್ಲಿ ಮಲೇರಿಯಾ ನಿರ್ಮೂಲನೆಯಲ್ಲಿ ಇವರ ಕೊಡುಗೆ ಅಪಾರ. ೧೯೩೦ ರಿಂದ ೧೯೪೦ರ ವರೆಗೆ ಇವರು ಇದಕ್ಕಾಗಿ ಶ್ರಮಿಸಿದರು. ಕೊಡವ ತಕ್ಕ್ ನಲ್ಲಿ (ಕೊಡವ ಭಾಷೆಯಲ್ಲಿ) ತಾವೇ ರಚಿಸಿದ "ಸೊಳ್ಳೆ ಪಾಟ್ಟ್" (ಸೊಳ್ಳೆಯ ಹಾಡು) ಎಂಬ ಹಾಡನ್ನು ಹಾಡುತ್ತ, ಅಲ್ಲಿಯ ಅನಕ್ಷರಸ್ಥ ಜನರಲ್ಲಿ ಮಲೇರಿಯಾದ ಕಾರಣಗಳು, ಅದು ಹರಡುವ ವಿಧಾನ ಮತ್ತು ಅದರ ನಿರ್ಮೂಲನೆಯ ಕುರಿತು ಅರಿವನ್ನು ಮೂಡಿಸುತ್ತ ಹಳ್ಳಿಗಳನ್ನು ಸುತ್ತಿದರು.
ಶಾಂಭವಾನಂದರು ಕೊಡಗಿನಲ್ಲಿ ಆಧುನಿಕ ಜೇನು ಸಾಕುವಿಕೆಯ ಪದ್ಧತಿಯನ್ನು ಪ್ರಾರಂಭಿಸಿದರು. ಈ ಉದ್ಯಮವು ಕೊಡಗಿನ ಹವಾಮಾನಕ್ಕೆ ತಕ್ಕುದಾಗಿತ್ತು ಮತ್ತು ಇದರಿಂದ ಇಲ್ಲಿಯ ಜನರ ಆರ್ಥಿಕ ಜೀವನವನ್ನು ಸುಧಾರಿಸಲು ಸಾಧ್ಯವಿತ್ತು. ೧೯೩೧ ರಿಂದ ೧೯೪೧ರ ವರೆಗೆ ಆಗಿನ ಮೈಸೂರು ಸರಕಾರದ ಸಹಾಯದೊಂದಿಗೆ ಸ್ವಾಮಿಗಳು ಈ ಕುರಿತು ಅನೇಕ ಪ್ರಯತ್ನಗಳನ್ನು ಕೈಗೊಂಡರು. ಈ ಕುರಿತು ಅಮೇರಿಕೆಯ ಸ್ವಾಮಿ ವಿವೇಕಾನಂದರ ಶಿಷ್ಯರ ಮುಖಾಂತರ ಅನೇಕ ಪುಸ್ತಕಗಳನ್ನು ಮತ್ತು ಪ್ರಾತ್ಯಕ್ಷಿಕೆಗಳನ್ನು ತರಿಸಿ ಸ್ವತಃ ಅಭ್ಯಸಿಸಿದರು. ಜನರಲ್ಲಿ ಈ ಕುರಿತು ಅರಿವನ್ನು ಮೂಡಿಸಿ ಅವರನ್ನು ಪ್ರೋತ್ಸಾಹಿಸಿದರು. ೧೯೩೬ರಲ್ಲಿ ವಿರಾಜಪೇಟೆಯಲ್ಲಿ ಇವರು ಭಾರತದ ಪ್ರಥಮ ಜೇನು ಸಾಕುವವರ ಸಹಕಾರಿ ಸಂಘವನ್ನು ಸ್ಥಾಪಿಸಿದರು.
೧೯೪೧ರಲ್ಲಿ ಇವರು ಮೈಸೂರಿನ ಆಶ್ರಮದ ಅಧ್ಯಕ್ಷರಾಗಿ ನಿಯುಕ್ತರಾದರು. ಇಲ್ಲಿ ಅವರು ಬಾಲಕರಿಗಾಗಿ ಶ್ರೀರಾಮಕೃಷ್ಣ ವಿದ್ಯಾಶಾಲೆ ಎಂಬ ಆವಾಸಿಕ ಶಾಲೆಯನ್ನು ಪ್ರಾರಂಭಿಸಿದರು. ಮಾನವನ ಸರ್ವತೋಮುಖ ಬೆಳವಣಿಗೆಯ ಕುರಿತು ವಿವೇಕಾನಂದರ ವಿಚಾರಗಳ ಆಧಾರದ ಮೇಲೆ ಸ್ಥಾಪಿತವಾಗಿರುವ ಈ ಶಾಲೆಯು ಇಂದು ಕರ್ನಾಟಕದ ಆದ್ಯಂತ ಪ್ರಸಿದ್ಧವಾಗಿದೆ.
ಇವರು ಮೈಸೂರಿನಲ್ಲಿಯೇ ವೇದಾಂತ ಕಾಲೇಜು ಎಂಬ ಸಂಸ್ಥೆಯನ್ನೂ ಪ್ರಾರಂಭಿಸಿದರು. ಇಂದು ಇದು ಬಿ.ಎಡ್. ಶಿಕ್ಷಣವನ್ನು ನೀಡುತ್ತಿದೆ.
ಇವರು ರಾಮಕೃಷ್ಣ ಮಠದ ಧರ್ಮದರ್ಶಿಯಾಗಿ ಮತ್ತು ರಾಮಕೃಷ್ಣ ಮಿಷನ್ನಿನ ಕಾರ್ಯಕಾರಿ ಮಂಡಳಿಯ ಸದಸ್ಯರೂ ಆಗಿದ್ದರು. ೧೯೭೨ರಲ್ಲಿ ಇವರು ಬ್ರಹ್ಮಲೀನರಾದರು. ಒಬ್ಬ ದಕ್ಷ ಆಡಳಿತಗಾರನಾಗಿ, ಶಿಸ್ತಿನ ನಿಯಮಪಾಲಕರಾಗಿ, ಉತ್ಸಾಹಭರಿತ ಸಹೋದ್ಯೋಗಿಯಾಗಿ ಮತ್ತು ದಾರ್ಶನಿಕ ಶಿಕ್ಷಣತಜ್ಞರಾಗಿ ಅವರು ಸೇವೆ ಸಲ್ಲಿಸಿದುದನ್ನು ಜನ ನೆನೆಯುತ್ತಾರೆ.
ಬಾಹ್ಯ ಕೊಂಡಿಗಳು
[ಬದಲಾಯಿಸಿ]http://en.wikipedia.org/w/index.php?title=Swami_Shambhavananda&oldid=452232124
http://www.Sri Ramakrishna Vidyashala
www.Indian Honey Industry
www.Reminiscences of Swami Shivananda by Swami Shambhavananda