ಕ್ರಾಂತಿಕಾರಿ ಚಂದ್ರಶೇಖರ ಆಜಾದ್
ಚಂದ್ರಶೇಖರ ಆಜಾದ್ | |
---|---|
Born | ಜುಲೈ ೨೩, ೧೯೦೬ |
Died | ಫೆಬ್ರವರಿ ೨೭,೧೯೩೧ (ಪ್ರಾಯ ೨೫) |
Organization(s) | Naujawan Bharat Sabha, Kirti Kissan Party and Hindustan Socialist Republican Association |
Movement | ಭಾರತದ ಸ್ವಾತಂತ್ರ್ಯ ಚಳುವಳಿ |
ಚಂದ್ರಶೇಖರ "ಆಜಾದ್" ಎಂದೇ ಹೆಚ್ಚು ಗುರುತಿಸಲ್ಪಡುವ ಚಂದ್ರಶೇಖರ ಸೀತಾರಾಮ್ ತಿವಾರಿಯವರು (ಜನನ : ಜುಲೈ 23, 1906 , ಮರಣ: ಫೆಬ್ರವರಿ 27, 1931,) ಅಲಹಾಬಾದ್) ಭಾರತದ ಬಹು ಪ್ರಮುಖ ಕ್ರಾಂತಿಕಾರಿಗಳಲ್ಲಿ ಒಬ್ಬರಾಗಿದ್ದು, ಅವರನ್ನು ಭಗತ್ ಸಿಂಗ್‌ರ ಮಾರ್ಗದರ್ಶಕರೆಂದು/ಗುರುಗಳೆಂದು ಪರಿಗಣಿಸಲಾಗುತ್ತದೆ.
ಇತಿಹಾಸ
[ಬದಲಾಯಿಸಿ]೧೮೫೭ರ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ನಂತರ ಬ್ರಿಟಿಷ್ ಆಡಳಿತದ ವಿರುದ್ಧದ ತಮ್ಮ ಸ್ವಾತಂತ್ರ್ಯಕ್ಕಾಗಿನ ಹೋರಾಟದಲ್ಲಿ ಸಶಸ್ತ್ರ ಭಾರತೀಯ ಕ್ರಾಂತಿಕಾರಿಗಳಲ್ಲಿ ಅವರು ಒಬ್ಬರಾಗಿದ್ದರು. ಓರ್ವ ಶ್ರದ್ಧಾವಂತ ಬ್ರಾಹ್ಮಣರಾಗಿದ್ದ ಅವರು, ಇತರರ ಒಳಿತಿಗಾಗಿ ಹೋರಾಡುವುದು ತಮ್ಮ ಧರ್ಮ ಎಂದು ನಂಬಿದ್ದರು. ಓರ್ವ ಯೋಧ ಎಂದಿಗೂ ಶಸ್ತ್ರವನ್ನು ತ್ಯಜಿಸಲಾರನೆಂಬುದು ಕೂಡಾ ಅವರ ಅಭಿಪ್ರಾಯವಾಗಿತ್ತು.
ಚಂದ್ರಶೇಖರ ಆಜಾದ್‌ರವರು ೨೩ ಜುಲೈ ೧೯೦೬ರಂದು (ಮಿಥ್ಯಾಕಲ್ಪನೆ :ಉನ್ನಾವೋ ಜಿಲ್ಲೆ - ಬಾದರ್ಕಾ ಉತ್ತರಪ್ರದೇಶ) ಮಧ್ಯಪ್ರದೇಶದ ಝಬುವಾ ಜಿಲ್ಲೆಯಲ್ಲಿರುವ ಭಾವ್ರಾ ಎಂಬ ಹಳ್ಳಿಯಲ್ಲಿ ಜನಿಸಿದರು.ಅವರ ತಂದೆ ಪಂಡಿತ ಸೀತಾರಾಮ್ ತಿವಾರಿ ಮತ್ತ್ತು ಜಾಗ್ರಣೀ ದೇವಿ ತಾಯಿ. ೧೯೧೯ರಲ್ಲಿ ಅಮೃತಸರದಲ್ಲಿ ನಡೆದ ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡದ ಘಟನೆಯಿಂದ ಚಂದ್ರಶೇಖರ ಆಜಾದ್‌ರವರು ಮಾನಸಿಕವಾಗಿ ತೀವ್ರವಾಗಿ ಜರ್ಜರಿತರಾಗಿದ್ದರು. ಮಹಾತ್ಮಾ ಗಾಂಧಿಯವರು ೧೯೨೧ರಲ್ಲಿ ಅಸಹಕಾರ ಚಳುವಳಿಯನ್ನು ಹಮ್ಮಿಕೊಂಡಾಗ, ನಡೆದ ಪ್ರತಿಭಟನೆಗಳಲ್ಲಿ ಅವರು ಸಕ್ರಿಯವಾಗಿ ತೊಡಗಿಕೊಂಡಿದ್ದರು. ಈ ನಾಗರಿಕ ಶಾಸನಭಂಗಕ್ಕಾಗಿ ಅವರು ಬಂಧಿತರಾದುದಲ್ಲದೇ, ತಮ್ಮ ಹದಿನೈದನೇ ವಯಸ್ಸಿನಲ್ಲಿಯೇ ಪ್ರಥಮವಾಗಿ ಶಿಕ್ಷೆಗೆ ಗುರಿಯಾದರು. ಮ್ಯಾಜಿಸ್ಟ್ರೇಟರು ಅವರ ಹೆಸರೇನೆಂದು ಕೇಳಿದಾಗ, ಅವರು "ಆಜಾದ್ " ಎಂದು ಹೇಳಿದರು (ಸ್ವತಂತ್ರ ವ್ಯಕ್ತಿ ಎಂದು ಅರ್ಥ). ಈ ಉದ್ಧಟತನಕ್ಕಾಗಿ ಅವರಿಗೆ ಹದಿನೈದು ಛಡಿಏಟುಗಳ ಶಿಕ್ಷೆಯನ್ನು ನೀಡಲಾಯಿತು. ಛಾಟಿಯಿಂದ ಹೊಡೆದ ಪ್ರತಿ ಏಟಿಗೂ ಯುವ ಚಂದ್ರಶೇಖರ "ಭಾರತ್ ಮಾತಾ ಕಿ ಜೈ "(ಮಾತೃಭೂಮಿಗೆ ಜಯವಾಗಲಿ) ಎಂದು ಘೋಷಣೆ ಮಾಡುತ್ತಿದ್ದರು. ಈ ಘಟನೆಯ ನಂತರ, ಚಂದ್ರಶೇಖರರಿಗೆ ಆಜಾದ್ ಎಂಬ ಬಿರುದು ಪ್ರಾಪ್ತವಾಯಿತಲ್ಲದೇ ಅವರು ಚಂದ್ರಶೇಖರ ಆಜಾದ್ ಎಂದೇ ಗುರುತಿಸಲ್ಪಡುತ್ತಿದ್ದರು.
ಅಸಹಕಾರ ಚಳುವಳಿಯು ಸ್ಥಗಿತಗೊಂಡ ನಂತರ, ಆಜಾದರು ಇನ್ನೂ ಹೆಚ್ಚಿನ ಆಕ್ರಮಣಶಾಲಿ ಹಾಗೂ ಉಗ್ರ ಕ್ರಾಂತಿಕಾರಿ ಆದರ್ಶಗಳಿಂದ ಆಕರ್ಷಿತರಾದರು. ಯಾವುದೇ ಮಾರ್ಗದಿಂದಾದರೂ ಸಂಪೂರ್ಣ ಸ್ವಾತಂತ್ರ್ಯ ಪಡೆಯುವ ಧ್ಯೇಯಕ್ಕೆ ತಮ್ಮ ಮುಡಿಪಾಗಿಡಲು ನಿರ್ಧರಿಸಿದರು. ಈ ನಿಟ್ಟಿನೆಡೆಗೆ ಮುಂದುವರೆಯುವ ಪ್ರಥಮ ಹೆಜ್ಜೆಯಾಗಿ ಅವರು ಹಿಂದೂಸ್ತಾನ್ ಸಮಾಜವಾದಿ ಪ್ರಜಾಪ್ರಭುತ್ವವಾದಿ ಸಂಘಟನೆ (ಹಿಂದೂಸ್ತಾನ್ ಸೋಷಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್-HSRA) ಎಂಬ ಸಂಘವನ್ನು ಆರಂಭಿಸಿದರಲ್ಲದೇ ಭಗತ್ ಸಿಂಗ್, ಸುಖದೇವ್, ಬಟುಕೇಶ್ವರ ದತ್ತ ಮತ್ತು ರಾಜಗುರುರಂತಹಾ ಕ್ರಾಂತಿಕಾರಿಗಳಿಗೆ ಮಾರ್ಗದರ್ಶಕರಾದರು. ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯ ದೊರಕಿಸಿಕೊಳ್ಳುವುದೇ HSRA ಸಂಘಟನೆಯ ಗುರಿಯಾಗಿತ್ತು. ಅಲ್ಲದೇ ಸಮಾಜವಾದಿ ಮೂಲತತ್ವದ ಮೇಲೆ ಆಧಾರಿತವಾದ ನವೀನ ಭಾರತವನ್ನು ಕಟ್ಟುವ ಮಹೋದ್ದೇಶವನ್ನು ಹೊಂದಿತ್ತು. ಆಜಾದರು ಮತ್ತು ಅವರ ದೇಶಬಾಂಧವರು ಬ್ರಿಟಿಷರ ವಿರುದ್ಧ ಅನೇಕ ಹಿಂಸಾತ್ಮಕ ಪ್ರತಿಭಟನೆಗಳನ್ನು ಯೋಜಿಸಿ ಕಾರ್ಯಗತಗೊಳಿಸಿದ್ದರು. ಕಾಕೊರಿ ರೈಲು ದರೋಡೆ (೧೯೨೫), ವೈಸರಾಯ್‌ರ ರೈಲನ್ನು ಸ್ಫೋಟಿಸಲು ನಡೆಸಿದ ವಿಫಲ ಯತ್ನ (೧೯೨೬), ಮತ್ತು ಲಾಲಾ ಲಜಪತ ರಾಯ್‌ರನ್ನು ಕೊಂದುದರ ಪ್ರತೀಕಾರವಾಗಿ ಲಾಹೋರ್‌ನಲ್ಲಿ (೧೯೨೮) ಜಾನ್ ಪಾಯಂಟ್ಜ್ ಸಾಂಡರ್ಸ್‌ನನ್ನು ಗುಂಡು ಹಾರಿಸಿ ಕೊಂದಂತಹಾ ಅನೇಕ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಅವರು ಭಾಗವಹಿಸಿದ್ದರು.
೧೯೩೧ರ ಫೆಬ್ರವರಿ ೨೭ರಂದು, ಚಂದ್ರಶೇಖರ ಆಜಾದ್ ಅಲಹಾಬಾದ್‌ನ ಆಲ್‌ಫ್ರೆಡ್ ಉದ್ಯಾನದಲ್ಲಿ ತಮ್ಮ ಇಬ್ಬರು ಸಂಗಡಿಗರನ್ನು ಭೇಟಿ ಮಾಡಲು ಬಂದಾಗ ಅವರನ್ನು ಪೊಲೀಸರು/ಆರಕ್ಷಕರು ಗುರುತು ಹಿಡಿದರು, ಇಡೀ ಉದ್ಯಾನವನ್ನು ಸುತ್ತುವರಿದ ಪೊಲೀಸರು ಚಂದ್ರಶೇಖರ ಆಜಾದ್‌ರಿಗೆ ತಮಗೆ ಶರಣಾಗಲು ಆದೇಶಿಸಿದರು. ಆಜಾದರು ಏಕಾಕಿಯಾಗಿ ಹೋರಾಡಿದರಲ್ಲದೇ ಮೂವರು ಪೊಲೀಸರನ್ನು ಕೊಂದರಾದರೂ ಅವರ ತೊಡೆಗೆ ಗುಂಡೇಟು ಬಿದ್ದಿತ್ತು. ತಮ್ಮಲ್ಲಿದ್ದ ಬಹುತೇಕ ಮದ್ದುಗುಂಡುಗಳೆಲ್ಲಾ ಖಾಲಿಯಾದ ನಂತರ, ತಪ್ಪಿಸಿಕೊಳ್ಳಲು ಬೇರೆ ದಾರಿಯಿಲ್ಲವೆಂದು ಮನಗಂಡ ಅವರು ತಮ್ಮಲ್ಲಿ ಉಳಿದಿದ್ದ ಕೊನೆಯ ಗುಂಡಿನಿಂದ ತಲೆಗೆ ಗುಂಡು ಹೊಡೆದುಕೊಂಡರು.ಅವರ ಕ್ರಾಂತಿಕಾರ ಚಟುವಟಿಕೆಗಳಲ್ಲಿ ಬಹುತೇಕವನ್ನು ಷಾಜಹಾನ್‌ಪುರದಲ್ಲಿದ್ದುಕೊಂಡು ಯೋಜಿಸುತ್ತಿದ್ದರು ಹಾಗೂ ಅಲ್ಲಿಂದಲೇ ಕಾರ್ಯಗತಗೊಳಿಸುತ್ತಿದ್ದರು.
ಕ್ರಾಂತಿಕಾರಿ ವ್ಯಕ್ತಿ
[ಬದಲಾಯಿಸಿ]ಅಮಾನುಷ ಹಿಂಸೆಯಿಂದ ದಿಗಿಲುಗೊಂಡರೂ, ಆಜಾದ್‌ರಿಗೆ ಅಂತಹಾ ಒಂದು ಹೋರಾಟದಲ್ಲಿ ಹಿಂಸಾತ್ಮಕ ನಡೆಗಳು ಅಸ್ವೀಕಾರಾರ್ಹವೆಂದು ಅನಿಸಿರಲಿಲ್ಲ, ವಿಶೇಷವಾಗಿ ಅಮೃತಸರದಲ್ಲಿ ಬ್ರಿಟಿಷ್ ಸೇನೆಯ ಘಟಕವು ನೂರಾರು ಶಸ್ತ್ರರಹಿತ ನಾಗರಿಕರನ್ನು ಕೊಂದು ಸಾವಿರಾರು ಜನರನ್ನು ಗಾಯಗೊಳಿಸಿದ ೧೯೧೯ರ ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡದ ಹಿನ್ನೆಲೆಯಲ್ಲಿ ಈ ಭಾವನೆ ಉಂಟಾಗಿತ್ತು. ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡವು ಯುವ ಆಜಾದರು ಹಾಗೂ ಅವರ ಸಮಕಾಲೀನರನ್ನು ತೀವ್ರವಾಗಿ ಪ್ರಭಾವಿಸಿತ್ತು.
ತನ್ನ ಹೆಸರು "ಆಜಾದ್" ಆಗಿರುವುದರಿಂದ ತಮ್ಮನ್ನು ಪೊಲೀಸರು ಎಂದಿಗೂ ಜೀವಂತವಾಗಿ ಹಿಡಿಯಲಾರರೆಂದು ಅವರು ಒಮ್ಮೆ ಘೋಷಿಸಿಕೊಂಡಿದ್ದರು.(ಪೊಲೀಸರಿಂದ ಅವರು ಸಾಯಲಿಲ್ಲ ಬಹುತೇಕ ಅಲಹಾಬಾದ್ ನಗರದ ಜನರು ಹೇಳುವಂತೆ ಓರ್ವ ಹಿಂದಿ ಲೇಖಕ ಆಜಾದರ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದ) ಹೀಗಾಗಿಯೇ ಅವರು ಪೊಲೀಸರೊಂದಿಗಿನ ಮದ್ದುಗುಂಡುಗಳ ಹೋರಾಟದ ಕೊನೆಗೆ ಅವರು ತಮ್ಮನ್ನು ತಾವು ಕೊಂದುಕೊಂಡಿದ್ದು. ಆಜಾದರು ಭಾರತದ ಭವಿಷ್ಯವು ಸಮಾಜವಾದದಲ್ಲಿಯೇ ಇದೆ ಎಂದು ಕೂಡಾ ನಂಬಿದ್ದರು. ಹೇಳಿಕೆಗಳ ಪ್ರಕಾರ, ಪೊಲೀಸರಿಗೆ ಹಿಡಿದುಕೊಡುವ ವಿಶ್ವಾಸಘಾತಕ ಕೆಲಸ ಮಾಡಿದ ಮಾಹಿತಿದಾರನ ಬಗ್ಗೆ ಅವರಿಗೆ ಅರಿವಿತ್ತು.
ಆಜಾದರು ಪಂಡಿತ ರಾಮ ಪ್ರಸಾದ ಬಿಸ್ಮಿಲ್; ಜ್ಯೋತಿ ಶ್ರೀವಾಸ್ತವರವರುಗಳ ಉತ್ತಮ ಸ್ನೇಹಿತರಾಗಿದ್ದರೂ ಕೂಡಾ. ಆಜಾದರು ಮತ್ತು ವಿಶ್ವನಾಥ್ ಗಂಗಾಧರ್ ವೈಶಂಪಾಯನ್‌ರವರು HRA ಸಂಘಟನೆಯ ಸ್ಥಾಪಕ ಸದಸ್ಯರು ಹಾಗೂ ಆಧಾರಸ್ತಂಭವಾಗಿದ್ದರು. ವಿಶ್ವನಾಥ್‌ರನ್ನು ಆಜಾದರ ಬಲಗೈ ಭಂಟ ಎಂದೂ ಕರೆಯಲಾಗುತ್ತಿತ್ತು ಹಾಗೂ ಅವರು ಕ್ರಾಂತಿಕಾರಿ ಚಳುವಳಿಗಳ ಬಗ್ಗೆ ಮೌಲ್ಯಯುತವಾದ ಅನೇಕ ವಾಸ್ತವಾಂಶಗಳನ್ನು ಹಾಗೂ ರಹಸ್ಯಗಳನ್ನು ಹೊಂದಿರುವ ಆಜಾದರ ಜೀವನಚರಿತ್ರೆಯನ್ನು ಕೂಡಾ ಬರೆದಿದ್ದಾರೆ.
ಝಾನ್ಸಿಯಲ್ಲಿ
[ಬದಲಾಯಿಸಿ]ಅವರು ತಮ್ಮ ೨೪ ವರ್ಷಗಳ ಅಲ್ಪಾವಧಿಯ ಜೀವಿತದಲ್ಲಿ, ಚಂದ್ರಶೇಖರ ಆಜಾದ್‌ರವರು ಗಮನಾರ್ಹ ಅವಧಿಯವರೆಗೆ ಝಾನ್ಸಿಯನ್ನು ತಮ್ಮ ಸಂಘಟನೆಯ ಕೇಂದ್ರಸ್ಥಳವನ್ನಾಗಿ ಮಾಡಿಕೊಂಡಿದ್ದರು. ಅವರು (ಝಾನ್ಸಿಯಿಂದ 15 ಕಿಲೋಮೀಟರ್‌ಗಳಷ್ಟು ದೂರದ) ಆರ್ಚ್ಛಾ ಎಂಬ ಅರಣ್ಯವನ್ನು ಗುಂಡು ಹಾರಿಸುವುದನ್ನು ಅಭ್ಯಾಸ ಮಾಡಲು ಆಯ್ಕೆ ಮಾಡಿಕೊಂಡಿದ್ದರು. ಅವರು ಗುಂಡು ಹಾರಿಸುವುದರಲ್ಲಿ ಅದ್ಭುತ ಗುರಿಕಾರರಾಗಿದ್ದರು ಹಾಗೂ ತಮ್ಮ ತಂಡದ ಇತರೆ ಸದಸ್ಯರಿಗೆ ಈ ಸ್ಥಳದಲ್ಲಿಯೇ ಅವರು ತರಬೇತಿ ನೀಡುತ್ತಿದ್ದರು. ಅರಣ್ಯದ ಸಮೀಪ ಸಾತಾರ್ ಎಂದು ಕರೆಯಲ್ಪಡುತ್ತಿದ್ದ ಸಣ್ಣ ನದಿಯ ತೀರದಲ್ಲಿರುವ ಹನುಮಾನ್ ದೇವರ ದೇವಸ್ಥಾನದ ಬಳಿ, ಆಜಾದರು ಒಂದು ಸಣ್ಣ ಗುಡಿಸಲನ್ನು ಕಟ್ಟಿಕೊಂಡಿದ್ದರು. ಅವರು ಅಲ್ಲಿ ಪಂಡಿತ್ ಹರಿಶಂಕರ್ ಬ್ರಹ್ಮಚಾರಿ ಎಂಬ ಹೆಸರಿನಿಂದ ಮಾರುವೇಷದಲ್ಲಿ ವಾಸಿಸಲು ಆರಂಭಿಸಿದರು. ಅವರು ಸಮೀಪದ ಧಿಮಾರ್‌ಪುರ ಎಂಬ ಹಳ್ಳಿಯ ಮಕ್ಕಳಿಗೆ ಪಾಠ ಮಾಡಲು ಆರಂಭಿಸಿದರಲ್ಲದೇ, ಸ್ಥಳೀಯ ನಿವಾಸಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಸ್ಥಾಪಿಸಿದ್ದರು. ಧಿಮಾರ್‌ಪುರ ಎಂಬ ಆ ಹಳ್ಳಿಗೆ ಈಗ ಅವರದೇ ಹೆಸರಿಡಲಾಗಿದ್ದು, ಅದೀಗ ಆಜಾದ್‌ಪುರ ಎಂಬ ಹೆಸರನ್ನು ಹೊಂದಿದೆ.
ಝಾನ್ಸಿಯಲ್ಲಿ ದಂಡುಪ್ರದೇಶದಲ್ಲಿರುವ ಸಾದರ್ ಬಜಾರ್ ಎಂಬಲ್ಲಿದ್ದ ಬುಂದೇಲ್‌ಖಂಡ್ ಮೋಟಾರ್ ಗ್ಯಾರೇಜಿನಲ್ಲಿ ಅವರು ಕಾರನ್ನು ಚಲಾಯಿಸಲು ಕಲಿತರು. ಸದಾಶಿವರಾವ್ ಮಲ್ಕಾಪುರ್ಕರ್, ವಿಶ್ವನಾಥ್ ವೈಶಂಪಾಯನ್, ಭಗವಾನ್ ದಾಸ್ ಮಾಹೌರ್‌ರವರುಗಳನ್ನು ಝಾನ್ಸಿಯಲ್ಲಿಯೇ ಅವರು ಭೇಟಿಯಾಗಿದ್ದು, ತದನಂತರ ಇವರುಗಳೆಲ್ಲಾ ಅವರ ಕ್ರಾಂತಿಕಾರಿ ತಂಡದ ಅವಿಭಾಜ್ಯ ಅಂಗವಾದರು. ಝಾನ್ಸಿ ಮೂಲದ ಆಗಿನ ಕಾಂಗ್ರೆಸ್ ಪಕ್ಷದ ನಾಯಕರುಗಳಾದ ಪಂಡಿತ್ ರಘುನಾಥ್ ವಿನಾಯಕ್ ಧುಲೇಕರ್ ಮತ್ತು ಪಂಡಿತ್ ಸೀತಾರಾಮ್ ಭಾಸ್ಕರ್ ಭಾಗವತ್‌ರವರುಗಳು ಕೂಡಾ ಚಂದ್ರಶೇಖರ ಆಜಾದ್‌ರ ನಿಕಟ ಸಹಾಯಕರಾಗಿದ್ದರು.ಚಂದ್ರಶೇಖರ ಆಜಾದ್‌ರು ನಯಿ ಬಸ್ತಿ ಎಂಬಲ್ಲಿಯ ಶಿಕ್ಷಕ/ಮಾಸ್ತರ್ ರುದ್ರನಾರಾಯಣ್ ಸಿಂಗ್‌ರ ಮನೆಯಲ್ಲಿ ಹಾಗೂ ನಾಗ್ರಾದಲ್ಲಿನ ಪಂಡಿತ್ ಸೀತಾರಾಮ್ ಭಾಸ್ಕರ್ ಭಾಗವತ್‌ರವರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರು.ಚಂದ್ರಶೇಖರ ಆಜಾದ್‌ರದೇ ಮಾತುಗಳ ಪ್ರಕಾರ ಝಾನ್ಸಿಯು ಸುರಕ್ಷಿತ ಸ್ಥಳವಾಗಿತ್ತು ಹಾಗೂ ಅದು ನಿಜವೂ ಆಗಿತ್ತು, ಅವರು ಝಾನ್ಸಿಯನ್ನು ತೊರೆದು ಹೋದ ಕೆಲ ಸಮಯದಲ್ಲೇ ಅವರ ತಂಡದ ಮಾಜಿ ಸದಸ್ಯನ ನಂಬಿಕೆದ್ರೋಹಕ್ಕೆ ಅವರು ಬಲಿಯಾಗಬೇಕಾಯಿತು.
ಭಗತ್ ಸಿಂಗ್‌ರೊಂದಿಗೆ
[ಬದಲಾಯಿಸಿ]ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್/ಹಿಂದೂಸ್ತಾನ್ ಪ್ರಜಾಪ್ರಭುತ್ವವಾದಿ ಸಂಘಟನೆಯನ್ನು (HRA) ಸಚಿಂದ್ರನಾಥ್ ಸಾನ್ಯಾಲ್‌ರು 1923ರಲ್ಲಿ ಅಸಹಕಾರ ಚಳುವಳಿಯ ಕೇವಲ ಒಂದು ವರ್ಷದ ನಂತರ ಹುಟ್ಟುಹಾಕಿದರು. 1925ರಲ್ಲಿ ಕಾಕೊರಿ ರೈಲು ದರೋಡೆಯ ನಂತರದ ಪ್ರತಿಕಾರದ ರೀತಿಯಲ್ಲಿ ಬ್ರಿಟಿಷರು ಕ್ರಾಂತಿಕಾರಿ ಚಟುವಟಿಕೆಗಳ ಮೇಲೆ ತೀವ್ರ ಕ್ರಮಗಳನ್ನು ಕೈಗೊಂಡರು. ಈ ಚಟುವಟಿಕೆಗಳಲ್ಲಿ ಭಾಗವಹಿಸಿದ್ದುದಕ್ಕೆ ಮರಣದಂಡನೆಗೆ ಒಳಗಾದವರೆಂದರೆ ಪಂಡಿತ್ ರಾಮ್ ಪ್ರಸಾದ್ ಬಿಸ್ಮಿಲ್, ಅಷ್‌ಫಕುಲ್ಲಾ ಖಾನ್, ಠಾಕೂರ್ ರೋಷನ್ ಸಿಂಗ್ ಮತ್ತು ರಾಜೇಂದ್ರ ಲಾಹಿರಿಯವರು. ಇಬ್ಬರು ಆಗ ಸೆರೆಯಿಂದ ತಪ್ಪಿಸಿಕೊಂಡಿದ್ದರು; ಅವರಲ್ಲಿ ಒಬ್ಬರು ಸುಂದರ್‌ಲಾಲ್ ಗುಪ್ತರಾದರೆ ಮತ್ತೊಬ್ಬರು ಆಜಾದ್‌ರವರಾಗಿದ್ದರು. ಆಜಾದ್‌ರು HRA ಸಂಘಟನೆಯನ್ನು ಮಾಧ್ಯಮಿಕ/ದ್ವಿತೀಯ ಮಟ್ಟದ ಕ್ರಾಂತಿಕಾರಿಗಳಾದ ಶಿವ ವರ್ಮಾ ಮತ್ತು ಮಹಾವೀರ್ ಸಿಂಗ್‌ರವರುಗಳ ಸಹಾಯದಿಂದ ಮರು ಸಂಘಟಿಸಿದರು. ಅವರು ರಸ್‌ಬಿಹಾರಿ ಬೋಸ್‌ರ ಸಹಯೋಗಿ ಕೂಡಾ ಆಗಿದ್ದರು. ಭಗತ್ ಸಿಂಗ್, ಸುಖ್‌ದೇವ್ ಮತ್ತು ರಾಜ್‌ಗುರುರವರುಗಳೊಂದಿಗೆ ಆಜಾದರು ಸಮಾಜವಾದಿ ಮೂಲತತ್ವಗಳ ಮೇಲೆ ಆಧರಿಸಿ ಸಂಪೂರ್ಣ ಸ್ವತಂತ್ರ ಭಾರತವನ್ನು ಪಡೆಯುವ ಗುರಿಯನ್ನು ಇಟ್ಟುಕೊಂಡು HRA ಸಂಘಟನೆಯನ್ನು HSRA (ಹಿಂದೂಸ್ತಾನ್ ಸಮಾಜವಾದಿ ಪ್ರಜಾಪ್ರಭುತ್ವವಾದಿ ಸಂಘಟನೆ/ಹಿಂದೂಸ್ತಾನ್ ಸೋಷಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್) ಸಂಘಟನೆಯನ್ನಾಗಿ 1927ರಲ್ಲಿ ಪರಿವರ್ತಿಸಿದರು.
ಮರಣ
[ಬದಲಾಯಿಸಿ]೧೯೩೧ರ ವೇಳೆಗೆ ಆಜಾದರು ಅಲಹಾಬಾದ್‌ನಲ್ಲಿ ವಾಸಿಸುತ್ತಿದ್ದರು. ೨೭ ಫೆಬ್ರವರಿ ೧೯೩೧ರಂದು, ಆರಕ್ಷಕ/ಪೊಲೀಸ್ ಮಾಹಿತಿದಾರರು ಆಜಾದ್ ಮತ್ತು ಸುಖ್‌ದೇವ್ ರಾಜ್‌ರನ್ನು ಆಲ್‌ಫ್ರೆಡ್ ಉದ್ಯಾನದಲ್ಲಿ ಕೆಲ ಯೋಜನೆಗಳ ಬಗ್ಗೆ ಚರ್ಚೆ ನಡೆಸುತ್ತಿದ್ದುದನ್ನು ಕಂಡುಕೊಂಡರು ಹಾಗೂ ತಕ್ಷಣವೇ ಅವರುಗಳ ಇರುವಿಕೆಯ ಬಗೆಗಿನ ಮಾಹಿತಿಯನ್ನು ಪೊಲೀಸರಿಗೆ/ಆರಕ್ಷಕರಿಗೆ ತಿಳಿಸಿದರು. ಕೆಲವೇ ನಿಮಿಷಗಳಲ್ಲಿ ಪೊಲೀಸರು/ ಆರಕ್ಷಕರು ಇಡೀ ಉದ್ಯಾನವನ್ನು ಸುತ್ತುವರೆದರು. ಹೋರಾಟದ ಆರಂಭದಲ್ಲಿಯೇ, ಆಜಾದರ ತೊಡೆಗೆ ಗುಂಡು ತಗುಲಿ ಗಾಯವಾಯಿತಾದ್ದರಿಂದ ಅವರಿಗೆ ತಪ್ಪಿಸಿಕೊಳ್ಳಲು ಕಷ್ಟಸಾಧ್ಯವಾಗಿತ್ತು. ಆದರೆ ಅವರು ಸುಖ್‌ದೇವ್‌ರು ತಪ್ಪಿಸಿಕೊಳ್ಳಲು ಅವಕಾಶವಾಗುವಂತೆ ಅವರಿಗೆ ರಕ್ಷಣೆಯನ್ನು ಒದಗುವಂತೆ ಗುಂಡುಹಾರಿಸತೊಡಗಿದರು. ಸುಖ್‌ದೇವ್‌ರವರು ತಪ್ಪಿಸಿಕೊಂಡ ನಂತರ, ಆಜಾದರು ಸಾಕಷ್ಟು ಹೊತ್ತಿನವರೆಗೆ ಪೊಲೀಸರ/ಆರಕ್ಷಕರು ಮೇಲೆರಗದ ಸ್ಥಿತಿಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಅಂತಿಮವಾಗಿ, ಸಂಪೂರ್ಣವಾಗಿ ಸುತ್ತುವರೆಯಲ್ಪಟ್ಟು ಪೋಲೀಸರ ಸಂಖ್ಯಾಬಲವು ಹೆಚ್ಚಿ ಅವರ ಬಂದೂಕಿ/ಪಿಸ್ತೂಲಿನಲ್ಲಿ ಒಂದೇ ಒಂದು ಗುಂಡು ಉಳಿದಾಗ, ಚಂದ್ರಶೇಖರ ಆಜಾದ್‌ರು ತಮ್ಮ ಮೇಲೆಯೇ ಗುಂಡು ಹಾರಿಸಿಕೊಂಡು ತಮ್ಮನ್ನು ಜೀವಂತವಾಗಿ ಯಾರೂ ಸೆರೆಹಿಡಿಯಲಾರರೆಂಬ ತಮ್ಮ ಪ್ರತಿಜ್ಞೆಯನ್ನು ಕಾಪಾಡಿಕೊಂಡರು[ಸೂಕ್ತ ಉಲ್ಲೇಖನ ಬೇಕು]. ಅವರು ಸಾಯುತ್ತಿರುವುದನ್ನು ನೋಡಿದರೂ ಅವರ ಮೃತದೇಹದ ಬಳಿಗೆ ಸುಮಾರು ಎರಡು ಗಂಟೆಗಳ ಕಾಲ ಯಾವುದೇ ಭಾರತೀಯ ಸೈನಿಕನೂ ಹೋಗಲಿಲ್ಲವೆಂದು ಹೇಳಲಾಗುತ್ತದೆ. ಅವರು ಯಾವಾಗಲೂ ಹೋದೆಡೆಯಲ್ಲೆಲ್ಲಾ ಬ್ರಿಟಿಷ್ ಸರಕಾರದ ಪರವಾಗಿ ಕೆಲಸ ಮಾಡುತ್ತಿದ್ದ ಭಾರತೀಯ ಸೈನಿಕರು ಮತ್ತು ಪೊಲೀಸರಿಗೆ/ಆರಕ್ಷಕರ ಬಗ್ಗೆ 'ಅವರು ನಿಜವಾದ ಭಾರತೀಯ ರಕ್ತವನ್ನು ಹೊಂದಿದವರಲ್ಲವೆಂದು' ಹೇಳುತ್ತಾ ಅವರುಗಳಲ್ಲಿ ಅಪರಾಧ ಪ್ರಜ್ಞೆಯನ್ನು ಹುಟ್ಟಿಸಿದ್ದರು. ಆಜಾದರ ಬಗೆಗಿನ ರಹಸ್ಯ ಕಡತವೊಂದನ್ನು ಲಕ್ನೌನ ಗೋಖಲೆ ಮಾರ್ಗ್ ರಸ್ತೆಯಲ್ಲಿರುವ C.I.D. ಪ್ರಧಾನ ಕಚೇರಿಯಲ್ಲಿ ರಕ್ಷಿಸಿಡಲಾಗಿದೆ. ಅವರ COLT ಕಂಪೆನಿಯ ಪಿಸ್ತೂಲನ್ನು/ಕೈಬಂದೂಕನ್ನು ಅಲಹಾಬಾದ್ ವಸ್ತು ಸಂಗ್ರಹಾಲಯದಲ್ಲಿ ಅವರ ಅತಿ ಅಪರೂಪದ ಕೆಲ ಛಾಯಾಚಿತ್ರಗಳೊಂದಿಗೆ ಪ್ರದರ್ಶನಕ್ಕಿಡಲಾಗಿದೆ.
ಆಜಾದ್ ಎಂಬ ದಂತಕಥೆ
[ಬದಲಾಯಿಸಿ]ಆಜಾದರು ಇಂದು ಪ್ರತಿ ಭಾರತೀಯನ ಪಾಲಿನ ಮಹಾವೀರರಾಗಿದ್ದಾರೆ. ಅವರು ಕೊನೆಯುಸಿರೆಳೆದ ಆಲ್‌ಫ್ರೆಡ್ ಉದ್ಯಾನಕ್ಕೆ ಚಂದ್ರಶೇಖರ ಆಜಾದ್ ಉದ್ಯಾನ ಎಂದು ಕರೆಯಲಾಗುತ್ತಿದೆ. ಭಾರತದಾದ್ಯಂತ ಅನೇಕ ಶಾಲೆಗಳು, ಕಾಲೇಜುಗಳು, ರಸ್ತೆಗಳು ಮತ್ತು ಇತರೆ ಸಾರ್ವಜನಿಕ ಸಂಸ್ಥೆಗಳಿಗೆ ಅವರ ಹೆಸರನ್ನಿಡಲಾಗಿದೆ. ೧೯೬೪ರಲ್ಲಿ ಮನೋಜ್ ಕುಮಾರರ ಚಲನಚಿತ್ರ, ಷಹೀದ್ ಭಗತ್ ಸಿಂಗ್ ತೆರೆಕಂಡ ನಂತರ ಭಗತ್ ಸಿಂಗ್‌ರ ಜೀವನದ ಬಗೆಗಿನ ಯಾವುದೇ ಚಲನಚಿತ್ರ ಅಥವಾ ಸ್ಮಾರಕ ಕೃತಿಗಳಲ್ಲಿ ಆಜಾದರ ವ್ಯಕ್ತಿತ್ವವನ್ನು ಪ್ರಧಾನವಾಗಿ ಬಿಂಬಿಸಲಾಗುತ್ತಿದೆ. 2002ರಲ್ಲಿ,23rd March 1931: Shaheed ಎಂಬ ಚಲನಚಿತ್ರದಲ್ಲಿ ಅವರ ಪಾತ್ರವನ್ನು ಸನ್ನಿ ದೇವಲ್‌ರವರು ವಹಿಸಿದ್ದರು. ದ ಲೆಜೆಂಡ್ ಆಫ್ ಭಗತ್ ಸಿಂಗ್" ಎಂಬ ಅಜಯ್ ದೇವಗನ್ ನಾಯಕರಾಗಿದ್ದ ಚಿತ್ರದಲ್ಲಿ, ಆಜಾದ್‌ರ (ಅಖಿಲೇಂದ್ರ ಮಿಶ್ರಾ ಆ ಪಾತ್ರ ವಹಿಸಿದ್ದರು) ಪಾತ್ರಕ್ಕೆ ಕೂಡಾ ಪ್ರಮುಖ ಮಹತ್ವವನ್ನು ನೀಡಲಾಗಿತ್ತು.
ಆಜಾದ್, ಭಗತ್ ಸಿಂಗ್, ರಾಜ್‌ಗುರು, ಪಂಡಿತ್ ರಾಮಪ್ರಸಾದ್ ಬಿಸ್ಮಿಲ್ ಮತ್ತು ಅಷ್‌ಫಕುಲ್ಲಾ ಖಾನ್‌ರವರುಗಳ ದೇಶಭಕ್ತಿಯನ್ನು ೨೬ ಜನವರಿ ೨೦೦೬ರಂದು ತೆರೆ ಕಂಡ ರಂಗ್ ದೇ ಬಸಂತಿ ಎಂಬ ಆಮೀರ್ ಖಾನ್ ನಾಯಕರಾಗಿದ್ದ ಸಮಕಾಲೀನ ಬಾಲಿವುಡ್ ಚಲನಚಿತ್ರದಲ್ಲಿ ಕೂಡಾ ಚಿತ್ರಿಸಲಾಗಿದೆ. ಈ ಚಲನಚಿತ್ರವು, ಆಜಾದ್ ಮತ್ತು ಭಗತ್ ಸಿಂಗ್‌ರಂತಹಾ ಯುವ ಕ್ರಾಂತಿಕಾರಿಗಳ ಹಾಗೂ ಇಂದಿನ ಯುವಜನತೆಯ ಜೀವನಗಳ ನಡುವಿನ ಸಾದೃಶ್ಯವನ್ನು ಚಿತ್ರಿಸುವುದಲ್ಲದೇ, ಇಂದಿನ ಭಾರತೀಯ ಯುವಜನತೆಯಲ್ಲಿ ಈ ವ್ಯಕ್ತಿಗಳು ಮಾಡಿದ ಅಪಾರ ತ್ಯಾಗದ ಕುರಿತಾಗಿ ಯಾವ ಕೃತಜ್ಞತೆಯೂ ಇರದಿರುವದರೆಡೆ ಗಮನವನ್ನು ಕೂಡಾ ಸೆಳೆಯುತ್ತದೆ. ಆಮೀರ್ ಖಾನ್ ಆಜಾದ್‌ದರ ಪಾತ್ರವನ್ನು ಇದರಲ್ಲಿ ಪುನರಾವರ್ತಿಸಿದ್ದಾರೆ. ಈ ಚಿತ್ರದಲ್ಲಿ ಪ್ರಸಿದ್ಧ ಕಾಕೋರಿ ರೈಲು ದರೋಡೆಯನ್ನು ಕೂಡಾ ಚಿತ್ರಿಸಲಾಗಿದೆ. ವೀರಭದ್ರ ತಿವಾರಿ ಮತ್ತು ಯಶಪಾಲ್ [ಸೂಕ್ತ ಉಲ್ಲೇಖನ ಬೇಕು](ಓರ್ವ ಜನಪ್ರಿಯ ಹಿಂದಿ ಕಥೆಗಾರ)ರವರುಗಳು ಮಾಡಿದ ವಿಶ್ವಾಸದ್ರೋಹವು ಆಜಾದರ ಸಾವಿಗೆ ಕಾರಣವಾಗಿತ್ತು.Mr.ಆಜಾದ್‌ರನ್ನು ಆಲ್‌ಫ್ರೆಡ್ ಉದ್ಯಾನದಲ್ಲಿ ಮೊತ್ತಮೊದಲಿಗೆ ನೋಡಿ ಆಜಾದ್‌ರನ್ನು ಬಂಧಿಸಲೆಂದು ವಿಶೇಷವಾಗಿ ನಿಯುಕ್ತರಾಗಿದ್ದ ಪಂಡಿತ.ಶಂಭುನಾಥ್ ಎಂಬ ಓರ್ವ C.I.D. ಅಧಿಕಾರಿಗೆ ಮಾಹಿತಿ ನೀಡಿದ್ದ ವ್ಯಕ್ತಿ ವೀರಭದ್ರ ತಿವಾರಿಯಾಗಿದ್ದ.
ಇವನ್ನೂ ಗಮನಿಸಿ
[ಬದಲಾಯಿಸಿ]- ಭಾರತೀಯ ಸ್ವಾತಂತ್ರ್ಯ ಚಳುವಳಿ
- ಜಲಿಯನ್‌ವಾಲಾ ಬಾಗ್/ಘ್ ಹತ್ಯಾಕಾಂಡ
- ಭಗತ್ ಸಿಂಗ್
- ಹಿಂದೂಸ್ತಾನ್ ಸಮಾಜವಾದಿ ಪ್ರಜಾಪ್ರಭುತ್ವವಾದಿ ಸಂಘಟನೆ/ ಹಿಂದೂಸ್ತಾನ್ ಸೋಷಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್
- ಸುಖ್‌ದೇವ್ ಥಾಪರ್
- ರಾಜ್‌ಗುರು
- ಠಾಕೂರ್ ರೋಷನ್ ಸಿಂಗ್
- ಅಷ್‌ಫಕುಲ್ಲಾ ಖಾನ್
- ಕಾಕೋರಿ ರೈಲು ದರೋಡೆ
- ಲಾಲಾ ಲಜಪತ್ ರಾಯ್
- ಯಶ್‌ಪಾಲ್
ಉಲ್ಲೇಖಗಳು
[ಬದಲಾಯಿಸಿ]- ಜೀವನಚರಿತ್ರೆ 'ಅಜೇಯ' : ಲೇಖಕ : ಬಾಬು ಕೃಷ್ಣಮೂರ್ತಿ
- Pages using infobox person with multiple organizations
- Pages using infobox person with unknown parameters
- Articles with hCards
- Articles with unsourced statements from September 2010
- Articles with unsourced statements from April 2010
- Persondata templates without short description parameter
- 1906ರಲ್ಲಿ ಜನಿಸಿದವರು
- 1931ರಲ್ಲಿ ನಿಧನ ಹೊಂದಿದವರು
- ಭಾರತ ಸ್ವಾತಂತ್ರ್ಯಕ್ಕಾಗಿ ನಡೆದ ಕ್ರಾಂತಿಕಾರಿ ಚಳುವಳಿ
- ಭಾರತೀಯ ಕ್ರಾಂತಿಕಾರಿಗಳು
- ಭಾರತೀಯ ಸಮಾಜವಾದಿಗಳು
- ಝ/ಜಬುವಾ ಮೂಲದ ಜನರು
- ಉನ್ನಾವೋ ಮೂಲದ ಜನರು
- ಝಾನ್ಸಿ ಮೂಲದ ಜನರು
- ಅಲಹಾಬಾದ್ ಮೂಲದ ಜನರು
- ಭಾರತದಲ್ಲಿ ಮದ್ದುಗುಂಡುಗಳಿಂದ ನಡೆದ ಆತ್ಮಹತ್ಯೆಗಳು
- ವಾರಣಾಸಿ ಮೂಲದ ಕಾರ್ಯಕರ್ತರು
- ಭಾರತೀಯ ಸ್ವಾತಂತ್ರ್ಯ ಚಳುವಳಿ