ವಿಷಯಕ್ಕೆ ಹೋಗು

ವಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ವಾರವು ಕ್ರಮಾಗತ ಏಳುದಿನಗಳ ಕಾಲಾವಧಿ (ವೀಕ್/ week) . ಈ ದಿವಸನಾಮಗಳು ಅನುಕ್ರಮವಾಗಿ [[ಭಾನುವಾರ]/ರವಿವಾರ/ಆದಿತ್ಯವಾರ] , [[ಸೋಮವಾರ]/ಚಂದ್ರವಾರ] , ಮಂಗಳವಾರ , ಬುಧವಾರ , ಗುರುವಾರ , ಶುಕ್ರವಾರ , ಶನಿವಾರ. ವಾರವು ಸತತ ಏಕದಿಶೆಯಲ್ಲಿ ಪ್ರವಹಿಸುತ್ತಿರುವ ಕಾಲವನ್ನು ಅಳೆಯಲು ಮಾನವ ನಿರ್ಮಿಸಿರುವ ಒಂದು ಮಾನಕ . ಏಳು ದಿನಗಳ ವಾರವನ್ನು ಸಪ್ತಾಹ ಎಂದೂ ಕರೆಯುತ್ತಾರೆ.

ಕೆಲವೊಮ್ಮೆ ಏಳಕ್ಕಿಂತ ಹೆಚ್ಛು ಅಥವಾ ಕಡಿಮೆ ದಿನಗಳ ಅವಧಿಯನ್ನೂ ವಾರ ಎಂದು ಕರೆದಿರುವುದು ಉಂಟು.

ಸಾಮಾನ್ಯವಾಗಿ ನಾಲ್ಕರಿಂದ ಹತ್ತುದಿನಗಳ ಅವಧಿಯನ್ನು ವಾರ ಎಂದು ಬಳಸುವುದುಂಟು. ಹತ್ತಕ್ಕಿಂತ ಹೆಚ್ಚು ದಿನಗಳ ಅವಧಿಯು ಪಕ್ಷ ಅಥವಾ ತಿಂಗಳ ಅವಧಿಗೆ ಸಮೀಪವಾಗಿರುವುದು ಇದಕ್ಕೆ ಕಾರಣ . ಜಗತ್ತಿನ ಕೆಲ ಭಾಗಗಳಲ್ಲಿ ಚಾಲ್ತಿಯಾಗಿದ್ದ ಕೆಲವು ಪಂಚಾಂಗಗಳಲ್ಲಿ ಏಳಕ್ಕಿಂತ ಹೆಚ್ಚು ಅಥವಾ ಕಡಿಮೆ ದಿನಗಳ ವಾರ ಬಳಕೆಯಲ್ಲಿತ್ತು.

ವಾರದಲ್ಲಿ ಏಳು ದಿನಗಳು ಏಕೆ?

[ಬದಲಾಯಿಸಿ]

ಪ್ರಾಚೀನ ನಾಗರಿಕತೆಯಲ್ಲಿ ಗಗನದೃಶ್ಯಗಳನ್ನು ಅವಲೋಕಿಸಿದ ಅಂದಿನ ಮಾನವ ಮೊದಲು ಭಯವಿಸ್ಮಿತನಾದ. ಮುಂದೆ ಕುತೂಹಲ ತಳೆದ. ಅನ್ವೇಷಕ ಪ್ರವೃತ್ತಿಯಿಂದ ಅವನ್ನು ವೀಕ್ಷಿಸಿದ. ಅವನಿಗೆ ಕಂಡ ನೋಟವಿದು: ಚಂದ್ರ ಅವನ ಗಡಿಯಾರ; 12 ಅಮಾವಾಸ್ಯೆ ಅಥವಾ ಹುಣ್ಣಿಮೆ ಸಂದಾಗ ಭೂಮಿಯಲ್ಲಿ ಋತುಗಳ ಒಂದು ಚಕ್ರ ಪೂರ್ತಿಗೊಂಡು ಮುಂದಿನದು ಆರಂಭವಾಗುತ್ತಿತ್ತು; ಅದೇ ವೇಳೆ ಆಕಾಶದಲ್ಲಿಯ ಸ್ಥಿರ ನಕ್ಷತ್ರ ಚಿತ್ರಗಳು ಹಿಂದಿನ ವಿನ್ಯಾಸವನ್ನೇ ತಳೆಯುತ್ತಿದ್ದುವು. ಹೀಗೆ ಸಂಖ್ಯೆ 12ಕ್ಕೆ ಪ್ರಾಮುಖ್ಯ ಬಂತು.

ಎರಡು ಕ್ರಮಾಗತ ಅಮಾವಾಸ್ಯೆಗಳ ನಡುವಿನ ಅವಧಿ ಸು. 30 ದಿವಸಗಳ ಒಂದು ತಿಂಗಳು. ತಿಂಗಳಿಗೆ ಎರಡು ಪಕ್ಷಗಳು : ಅಮಾವಾಸ್ಯೆಯಿಂದ ಹುಣ್ಣಿಮೆ ತನಕ ಶುಕ್ಲಪಕ್ಷ, ಹುಣ್ಣಿಮೆಯಿಂದ ಅಮಾವಾಸ್ಯೆ ತನಕ ಕೃಷ್ಣಪಕ್ಷ. ಪಕ್ಷದ ಅವಧಿ ಸು. 15 ದಿವಸಗಳು. ಒಂದು ವರ್ಷದಲ್ಲಿ 24 ಪಕ್ಷಗಳಿದ್ದುದರಿಂದ ಈ ಸಂಖ್ಯೆಗೂ ಮಹತ್ತ್ವ ಒದಗಿತು.

ವರ್ಷ, ತಿಂಗಳು ಮತ್ತು ಪಕ್ಷ ಎಂಬ ನೈಸರ್ಗಿಕ ಕಾಲಮಾನಕಗಳು ಈ ತೆರನಾಗಿ ರೂಢಿಗೆ ಬಂದುವು. ಆದರೆ ಇವು ವರ್ಷವನ್ನು ನಿಖರವಾಗಿ ಅಳೆಯುವುದಿಲ್ಲ ಎಂಬ ಸಂಗತಿ ಬೇಗನೆ ಪ್ರಕಟವಾಯಿತು. ಏಕೆಂದರೆ ಚಾಂದ್ರವರ್ಷದ ಅವಧಿ 354 ದಿವಸಗಳು, ಋತುಚಕ್ರದ್ದಾದರೋ 365 ದಿವಸಗಳು. ಚಂದ್ರನನ್ನು ಅವಲಂಬಿಸಿ ವರ್ಷವನ್ನು ಗಣಿಸಿದಾಗ ಕೆಲವೇ ವರ್ಷಗಳಲ್ಲಿ ಋತುಗಳಿಗೂ ಮಾಸಗಳಿಗೂ ನಡುವೆ ತಾಳ ತಪ್ಪಿ ಜನಜೀವನದಲ್ಲಿ ಗೊಂದಲ ಹಣುಕಿತು. ಈ ಕೊರೆಯನ್ನು ಅಧಿಕಮಾಸ, ಕ್ಷಯಮಾಸ ಮುಂತಾಗಿ ತೇಪೆಹಾಕಿ ಸರಿಪಡಿಸಲಾಯಿತಾದರೂ ತಿಂಗಳು ಮತ್ತು ಪಕ್ಷ ಪದಗಳು ಮೂಲ ಅರ್ಥದಲ್ಲಿಯೇ ಉಳಿದುಕೊಂಡುವು.

ಸೂರ್ಯೋದಯದಿಂದ ಮುಂದಿನ ಸೂರ್ಯೋದಯದ ತನಕ ಸಲ್ಲುವ ಅವಧಿಯೇ ದಿವಸ. ನಾಗರಿಕತೆ ಅಭಿವರ್ಧಿಸಿದಂತೆ ಧಾರ್ಮಿಕಾಚರಣೆ, ಕೃಷಿಕಾರ್ಯ, ವಾಣಿಜ್ಯ, ವ್ಯವಹಾರ ಮುಂತಾದ ಹಲವು ಹನ್ನೊಂದು ಚಟುವಟಿಕೆಗಳಿಗೆ ಅನುಕೂಲವಾಗುವಂತೆ ದಿವಸಗಳ ನಿರ್ದಿಷ್ಟ ಗುಂಪನ್ನು ಪರಿಗಣಿಸುವುದು ಅಗತ್ಯವಾಯಿತು. ಉದಾಹರಣೆಗೆ ಪ್ರಾಚೀನ ಈಜಿಪ್ಟಿನಲ್ಲಿ 10 ದಿವಸಗಳ ದಾಶಮಿಕವಾರ (ದಶಾಹ) ಬಳಕೆಯಲ್ಲಿತ್ತು. ವೈದಿಕರು ಅಮಾವಾಸ್ಯೆ, ಪೌರ್ಣಮೀ ಮತ್ತು ಇತರ ಕೆಲವು ತಿಥಿಗಳನ್ನು ಅನಧ್ಯಯನ ದಿನಗಳೆಂದು ಅಂಗೀಕರಿಸಿ ವಿಶ್ರಾಂತಿ ಪಡೆಯುತ್ತಿದ್ದರು. ಇವರದು ಪಾಕ್ಷಿಕವಾರ. ಹೀಗೆ ಕೆಲಸದ ದಿನಗಳು, ರಜಾದಿನಗಳು ಮತ್ತೆ ಕೆಲಸದ ದಿನಗಳು ಎಂಬ ಸ್ಥೂಲ ಚಕ್ರ ರೂಢಿಗೆ ಬಂತು. ಅಂದರೆ ಮಾನವ ತನ್ನ ಕೆಲಸದ ಅವಧಿಯನ್ನು ನಿಗದಿಗೊಳಿಸುವುದು ಅಗತ್ಯವಾಯಿತು. ವೈದಿಕರ ಪಾಕ್ಷಿಕವಾರವಾಗಲೀ ಈಜಿಪ್ಟಿನವರ ದಶಾಹವಾಗಲೀ ಆತನಿಗೆ ತುಸು ದೀರ್ಘವೆನ್ನಿಸಿರಬೇಕು. ಅದೇ ರೀತಿ ಚೀನೀಯರ ಪಾಂಚಮಿಕವಾರ ವ್ಯಾವಹಾರ್ಯವೆನಿಸಲಿಲ್ಲ. ಹೀಗೆ ನೂತನ ವಾರವೊಂದರ ಪ್ರವರ್ತನೆಗೆ ಕಾಲ ಪಕ್ವವಾಯಿತು. ಕ್ರಿಸ್ತಪೂರ್ವ 8ನೆಯ ಶತಮಾನದಲ್ಲಿ ಬ್ಯಾಬಿಲೋನಿಯದಲ್ಲಿದ್ದ ಕಾಲ್ಡೀಯನ್ ಜ್ಯೋತಿಶ್ಶಾಸ್ತ್ರಜ್ಞರು 7 ದಿವಸಗಳ ವಾರವನ್ನೂ 24 ಗಂಟೆಗಳ ದಿವಸವನ್ನೂ ಬಳಕೆಗೆ ತಂದ ಮೊದಲಿಗರು.

ಏಳು ದಿನಗಳಿಗೂ ಆಕಾಶಕಾಯಗಳಿಗೂ ನಡುವಿನ ಸಂಬಂಧ

[ಬದಲಾಯಿಸಿ]

ಪಕ್ಷಾರ್ಧದ ಅವಧಿ ಸು. 7 ದಿವಸಗಳಾಗಿದ್ದುದೂ ಆಕಾಶದಲ್ಲಿ 7 ಚರಕಾಯಗಳು ಗೋಚರವಾದುದೂ ಯೋಗಾಯೋಗ. ಸ್ಥಿರನಕ್ಷತ್ರ ಚಿತ್ರಗಳ ಮುನ್ನೆಲೆಯಲ್ಲಿ ಬುಧ, ಶುಕ್ರ, ಕುಜ, ಗುರು, ಶನಿ ಎಂಬ 5 ಗ್ರಹಗಳನ್ನೂ ಸೂರ್ಯ, ಚಂದ್ರ ಎಂಬ 2 ಗಗನ ದೀಪಗಳನ್ನೂ ಅವರು ಗುರುತಿಸಿದರು. ಈ 7 ಕಾಯಗಳ ಅಧಿಪತಿಗಳು ದೇವರುಗಳೆಂದೂ ಇವರು ಮಾನವನ ಭೂತವರ್ತಮಾನಭವಿಷ್ಯತ್ತುಗಳನ್ನು ನಿರ್ಣಯಿಸಬಲ್ಲ ಸರ್ವಶಕ್ತರೆಂದೂ ನಂಬಿದರು. ಅಂದಮೇಲೆ ಈ ದೇವರುಗಳನ್ನು ಪೂಜಿಸುವುದು ಮಾನವನ ಕರ್ತವ್ಯ. ಹೀಗೆ ಅವರು 7 ದಿವಸಗಳ ವಾರಚಕ್ರ (ಸಪ್ತಾಹ) ತೊಡಗಿ ಒಂದೊಂದು ದಿವಸಕ್ಕೆ ಒಂದೊಂದು ಕಾಯದ ಹೆಸರಿಟ್ಟರು. ಆದಿತ್ಯವಾರದ ಅಧಿಪತಿ ಸೂರ್ಯ, ಸೋಮವಾರದ ಅಧಿಪತಿ ಚಂದ್ರ ಇತ್ಯಾದಿ.

ಯಾವುದೇ ದಿವಸಕ್ಕೂ ಅದರ ಹೆಸರಿಗೆ ಕಾರಣವಾಗಿರುವ ಆಕಾಶಕಾಯಕ್ಕೂ ನಡುವೆ ಸ್ಪಷ್ಟವಾಗಿ ಗುರುತಿಸಬಹುದಾದ ಅಥವಾ ಅಳತೆ ಮಾಡಬಹುದಾದ ಯಾವ ಸಂಬಂಧವೂ ಇಲ್ಲ. ಇದೊಂದು ಪೂರ್ತಿ ಮಾನವಕಲ್ಪಿತ ಭಾವನಾತ್ಮಕ ಸಂಬಂಧ. ಇಂದು ಗುರುವಾರ ಎಂದಾಗ ಆಕಾಶದಲ್ಲಿ ಅದನ್ನು ಸಮರ್ಥಿಸುವ ಯಾವ ಘಟನೆಯೂ ಕಾಣಸಿಗದು. ಬಾನಿನಲ್ಲಿ ದಿವಸದ ಹೆಸರು ಪ್ರಕಟವಾಗುವುದಿಲ್ಲ.

ದಿವಸಗಳ ಅನುಕ್ರಮ

[ಬದಲಾಯಿಸಿ]

ಹೆಸರುಗಳ ಸರಣಿಯಲ್ಲಿ ನಿರ್ದಿಷ್ಟ ಕ್ರಮ ಉಂಟೆಂಬುದು ನಮಗೆ ತಿಳಿದಿದೆ. ಬುಧವಾರದ ಹಿಂದಿನ ದಿವಸವೆಂದೂ ಸೋಮವಾರವಾಗದು, ಅದು ಮಂಗಳವಾರವೇ; ಮರುದಿವಸವೆಂದೂ ಶುಕ್ರವಾರವಾಗದು, ಅದು ಗುರುವಾರವೇ. ಇದೇ ಕ್ರಮ ಏಕೆ? ಇದು ಏಕೈಕವೇ? ಗಣಿತ ಹೇಳುತ್ತದೆ ಅಲ್ಲ ಎಂದು. ವಾಸ್ತವವಾಗಿ ಆದಿತ್ಯವಾರದಿಂದ ಶನಿವಾರದ ವರೆಗಿನ 7 ದಿವಸಗಳನ್ನು 720 ವಿವಿಧ ಸರಣಿಗಳಲ್ಲಿ ಅಳವಡಿಸಬಹುದು. ಆ ಪೈಕಿ ಈಗ ಚಾಲ್ತಿಯಲ್ಲಿರುವ ಅಳವಡಿಕೆ ಅಥವಾ ಕ್ರಮ ಒಂದು ಮಾತ್ರ, ಇದನ್ನೇ ಕಾಲ್ಡೀಯನರು ಆಯ್ದುದೇಕೆ?

ಈ ಪ್ರಶ್ನೆಗೆ ಉತ್ತರ ಪಡೆಯಲು ಖುದ್ದು ಆಕಾಶವನ್ನೇ ಹಲವು ದಶಕಪರ್ಯಂತ ವೀಕ್ಷಿಸುವುದು ಅಪೇಕ್ಷಣೀಯ. ಅಂದಿನ ಕಾಲ್ಡೀಯನರಿಗೆ ಯಾವ ದೃಶ್ಯ ಕಂಡಿತೋ ಇಂದಿನ ನಮಗೂ ಅದೇ ಕಾಣುತ್ತದೆ. ಸ್ಥಿರ ನಕ್ಷತ್ರಚಿತ್ರಗಳ ಯವನಿಕೆಯಲ್ಲಿ (ಆಕಾಶ) 7 ಕಾಯಗಳು ಭೂಮಿಯನ್ನು ಪಶ್ಚಿಮ-ಪೂರ್ವದಿಶೆಯಲ್ಲಿ ಪರಿಭ್ರಮಿಸುತ್ತಿರುವಂತೆ ಭಾಸವಾಗುತ್ತದೆ. ಪರಿಭ್ರಮಣಾವಧಿಗಳನ್ನು ಎಣಿಸಿ ಅವರೋಹೀ ಕ್ರಮದಲ್ಲಿ ಅಳವಡಿಸಿದರೆ ಈ ಮುಂದಿನ ಯಾದಿ ದೊರೆಯುವುದು:

  • ಶನಿಯ ಅವಧಿ 29.5 ವರ್ಷ
  • ಗುರುವಿನ ಅವಧಿü 11.86 ವರ್ಷ
  • ಕುಜನ ಅವಧಿ 1.88 ವರ್ಷ
  • ಸೂರ್ಯನ ಅವಧಿ 1 ವರ್ಷ
  • ಶುಕ್ರನ ಅವಧಿ 0.62 ವರ್ಷ
  • ಬುಧನ ಅವಧಿ 0.24 ವರ್ಷ
  • ಚಂದ್ರನ ಅವಧಿ 0.07 ವರ್ಷ

ಈ ಅವಧಿಗಳಿಗೂ ಭೂಮಿಯಿಂದ ಕಾಯಗಳಿಗಿರುವ ದೂರಗಳಿಗೂ ನಡುವೆ ಏನಾದರೂ ಸಂಬಂಧವಿರಬಹುದೇ? ಇದೆ. ನಾವು ನೇರ ಹಾದಿಯಲ್ಲಿ ಅತಿವೇಗವಾಗಿ ಪಯಣಿಸುತ್ತಿರುವಾಗ ದೂರದ ವಸ್ತುಗಳು ಕಡಿಮೆ ವೇಗದಿಂದಲೂ ಹತ್ತಿರದ ವಸ್ತುಗಳು ಜಾಸ್ತಿ ವೇಗದಿಂದಲೂ ಎದುರು ದಿಶೆಯಲ್ಲಿ ಸರಿದಂತೆ ಭಾಸವಾಗುವುದು ಸರಿಯಷ್ಟೆ. ಆದ್ದರಿಂದ ಕಡಿಮೆ ವೇಗದವು ದೂರ ಇವೆಯೆಂದೂ ಜಾಸ್ತಿ ವೇಗದವು ಹತ್ತಿರ ಇವೆಯೆಂದೂ ತರ್ಕಿಸುವುದು ಸಾಧುವಾಗಿದೆ. ಈ ತರ್ಕವನ್ನು ಭೂಮಿ ಎಂಬ ವಾಹನಾರೂಢರಾದ ನಾವು ನಮಗೆ ಕಾಣುವ ಆಕಾಶಕ್ಕೆ ಅನ್ವಯಿಸಿದರೆ ದೊರೆಯುವ ಫಲಿತಾಂಶ ಏನು? ನಮ್ಮಿಂದ ಶನಿ ಅತಿ ದೂರದಲ್ಲಿದೆ; ಅಲ್ಲಿಂದ ಅವರೋಹೀ ಅಂತರಗಳಲ್ಲಿ ಅನುಕ್ರಮವಾಗಿ ಗುರು, ಕುಜ, ಶುಕ್ರ, ಬುಧ ಮತ್ತು ಚಂದ್ರ ಇವೆ. ಕಾಲ್ಡೀಯನರು ಈ ಸೂಕ್ಷ್ಮವನ್ನು ಗ್ರಹಿಸಿದ್ದ ಗಣಿತನಿಶಿತಮತಿಗಳಾಗಿದ್ದರು.

ಒಂದು ವರ್ಷದಲ್ಲಿ ಸುಮಾರಾಗಿ 24 ಪಕ್ಷಗಳಿವೆಯೆಂದು ಹಿಂದೆ ಹೇಳಿದೆ. ಈ 24 ಎಂಬ ಸಂಖ್ಯೆಯಿಂದ ಸ್ಫೂರ್ತಿ ಪಡೆದ ಅವರು ಎರಡು ಅನುಕ್ರಮ ಸೂರ್ಯೋದಯಗಳ ನಡುವಿನ ಅವಧಿಯಾದ ದಿವಸವನ್ನು ಗಣನೆಯ ಸೌಕರ್ಯಕ್ಕಾಗಿ 24 ಸಮಭಾಗಗಳಾಗಿ ವಿಂಗಡಿಸಿದರು. ಇವೇ 24 ಗಂಟೆಗಳು. ಈ ವಿಭಾಗೀಕರಣವೂ ಪೂರ್ತಿ ಮಾನವಕಲ್ಪಿತ. ಬಾನಿನಲ್ಲಿ ಗಂಟೆಯನ್ನು ನೇರವಾಗಿ ಪ್ರಕಟಿಸುವ ಗಡಿಯಾರ ಇಲ್ಲ. ದಿವಸದ ಒಂದೊಂದು ಗಂಟೆಗೆ ಅತಿ ದೂರದ ಶನಿಯಿಂದ ಅತಿ ಸಮೀಪದ ಚಂದ್ರನವರೆಗಿನ 7 ದೇವರುಗಳನ್ನು ಅದೇ ಕ್ರಮದಲ್ಲಿ ಅಧಿಪತಿಗಳೆಂದು ನೇಮಿಸಲಾಯಿತು. ಸೂರ್ಯೋದಯವಾಗುವಾಗಿನ ಗಂಟೆಯ ಅಧಿಪತಿಯ ಹೆಸರನ್ನೇ ಆ ದಿವಸಕ್ಕೂ ಇಡಲಾಯಿತು. ಉದಾಹರಣೆಗೆ ಇಂದು ಸೂರ್ಯೋದಯವಾಗುವಾಗಿನ ಗಂಟೆಯ ಅಧಿಪತಿ ಸೂರ್ಯನೇ ಆಗಿರಲಿ. ಆದ್ದರಿಂದ ಇಂದು ಸೂರ್ಯವಾರ ಅಥವಾ ಭಾನುವಾರ ಅಥವಾ ಆದಿತ್ಯವಾರ. ಇಂದಿನ ಗಂಟೆಗಳ ಅಧಿಪತಿಗಳು ಈ ಮುಂದಿನಂತಿರುವರು: ಒಂದನೆಯದು ಸೂರ್ಯ, ಎರಡನೆಯದು ಶುಕ್ರ, ಮೂರನೆಯದು ಬುಧ, ನಾಲ್ಕನೆಯದು ಚಂದ್ರ, ಐದನೆಯದು ಶನಿ, ಆರನೆಯದು ಗುರು, ಏಳನೆಯದು ಕುಜ, ಎಂಟನೆಯದು ಅಂತೆಯೇ ಹದಿನೈದನೆಯದು ಸೂರ್ಯ ಮತ್ತು ಇಪ್ಪತ್ತೆರಡನೆಯದು ಪುನಃ ಸೂರ್ಯ. ಇಪ್ಪತ್ತಮೂರನೆಯದು ಶುಕ್ರ ಮತ್ತು ಇಪ್ಪತ್ತನಾಲ್ಕನೆಯದು ಬುಧ. ಆದ್ದರಿಂದ ಇಪ್ಪತ್ತೈದನೆಯದು ಚಂದ್ರ. ಇಂದಿನ ಇಪ್ಪತ್ತೈದನೆಯ ಗಂಟೆ ಎಂಬುದು ನಾಳಿನ ಒಂದನೆಯ ಗಂಟೆ. ಹೀಗೆ ನಾಳಿನ ಒಂದನೆಯ ಗಂಟೆಯ ಅಧಿಪತಿ ಚಂದ್ರ ಆಗುತ್ತದೆ. ಆದ್ದರಿಂದ ನಾಳೆ ಚಂದ್ರವಾರ ಅಥವಾ ಸೋಮವಾರ. ಭಾನುವಾರದ ಮರುದಿನ ಸೋಮವಾರ ಬರುವುದರ ಕಾರಣವಿದು. ಇದೇ ರೀತಿ ಮುಂದುವರಿದರೆ ಏಳು ದಿವಸಗಳ ಒಂದು ಚಕ್ರವನ್ನು ಈಗ ಚಾಲ್ತಿಯಲ್ಲಿರುವ ಕ್ರಮದಲ್ಲಿ ಪೂರ್ತಿಗೊಳಿಸಿ ಪುನಃ ಆದಿತ್ಯವಾರಕ್ಕೆ ಮರಳಿರುತ್ತೇವೆ.

ಹೀಗೆ ದಿವಸಗಳ ಅನುಕ್ರಮ ಈಗ ಪ್ರಚಲಿತವಿರುವಂತೆ ಆದಿತ್ಯವಾರದಿಂದ ಶನಿವಾರದ ತನಕ ಅದೇ ಧಾಟಿಯಲ್ಲಿ ಮೆರವಣಿಗೆ ಸಾಗುವುದರ ಹಿಂದೆ ಖಚಿತ ವೈಜ್ಞಾನಿಕ ಚಿಂತನೆ ಉಂಟು. ಈ ಚಿಂತನೆ ಆಕಾಶಕಾಯಗಳ ದೂರ ಅಥವಾ ಅವಧಿಗಳಿಂದ ಪ್ರಭಾವಿತವಾಗಿದೆ. ಕಾಯಗಳ ದೂರ ಅಥವಾ ಅವಧಿಗಳು ನಿರ್ದಿಷ್ಟಕ್ರಮದಲ್ಲಿಯೇ ಇರುವುದರಿಂದ ದಿವಸಗಳ ಅನುಕ್ರಮ ಈಗಿರುವಂತೆ ರೂಢಿಗೆ ಬಂದಿದೆ. ಆದರೆ ಆಯಾ ಕಾಯಕ್ಕೆ ಅದರ ಹೆಸರು ಹೊತ್ತಿರುವ ದಿವಸದ ಮೇಲೆ ಯಾವ ಪ್ರಭಾವವೂ ಇರುವುದಿಲ್ಲ.

ದಿವಸದ ಹೆಸರಿಗೂ ವ್ಯಕ್ತಿಗೆ ಸಂಭವಿಸಬಹುದಾದ ಶುಭಾಶುಭಗಳಿಗೂ ನಡುವೆ ಸಂಬಂಧ

[ಬದಲಾಯಿಸಿ]

ವಾಸ್ತವವಾಗಿ ದಿವಸದ ಹೆಸರಿಗೂ ವ್ಯಕ್ತಿಗೆ ಸಂಭವಿಸಬಹುದಾದ ಶುಭಾಶುಭಗಳಿಗೂ ನಡುವೆ ಯಾವ ಸಂಬಂಧವೂ ಇಲ್ಲ. ದಿವಸದ ಗಳಿಗೆಗೂ ಉದ್ದಿಷ್ಟಕಾರ್ಯಕ್ಕೆ ಒದಗಬಹುದಾದ ಜಯಾಪಜಯಗಳಿಗೂ ನಡುವೆ ಯಾವ ಸಂಬಂಧವೂ ಇಲ್ಲ. ಇಸವಿ ಸಂಖ್ಯೆ ಅಥವಾ ಸಂವತ್ಸರ ನಾಮಕ್ಕೂ ಸಂವತ್ಸರ ಫಲಕ್ಕೂ ಯಾವ ಸಂಬಂಧವೂ ಇಲ್ಲ. ರಾಹುಕಾಲ, ಭರಣಿ, ಕೃತ್ತಿಕೆ, ಶೂನ್ಯ ಮಾಸ, ಗ್ರಹಣ, ಮುಹೂರ್ತ ಮುಂತಾದವುಗಳ ಸುತ್ತ ಹೆಣೆದುಕೊಂಡಿರುವ ಅಳುಕು ಅಂಜಿಕೆಗಳಿಗೆ ಯಾವ ಭೌತ ಅಥವಾ ಖಗೋಳವೈಜ್ಞಾನಿಕ ಆಧಾರವೂ ಇಲ್ಲ. ವ್ಯಕ್ತಿಯ ಹಿತಾಹಿತಗಳನ್ನಾಗಲೀ ಭವಿಷ್ಯ ಜೀವನವನ್ನಾಗಲೀ ಪ್ರಭಾವಿಸುವ ಅಥವಾ ನಿಯಂತ್ರಿಸುವ ಯಾವ ಅತಿಮಾನವ ಶಕ್ತಿಯೂ ಇಲ್ಲ. ನಾವು ನಮ್ಮ ಸೌಕರ್ಯಕ್ಕೋಸ್ಕರ ನಿರ್ಮಿಸಿರುವ ಕಾಲಗಣನೆಗೆ ಖುದ್ದು ನಾವೇ ಹೆದರುವ ಅಗತ್ಯ ಖಂಡಿತ ಇಲ್ಲ. ದೇವರು ಕೂಡ ಅಷ್ಟೆ: ಕೇವಲ ಮಾನವ ಕಲ್ಪನೆ. ಈಗ್ಗೆ ಸು. 2800 ವರ್ಷಗಳ ಹಿಂದೆ ಕಾಲ್ಡೀಯನ್ನರು ಪ್ರವರ್ತಿಸಿದ ನಿಷ್ಕೃಷ್ಟ ವೀಕ್ಷಣೆ, ವೈಜ್ಞಾನಿಕ ವಿಶ್ಲೇಷಣೆ, ನಿಗಮಿಸಿದ ತತ್ತ್ವ ಮತ್ತು ವಿಧಿಸಿದ ಸೂತ್ರ ನಮ್ಮನ್ನು ಬೆರಗುಗೊಳಿಸುವಂತಿವೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ವಾರ&oldid=838869" ಇಂದ ಪಡೆಯಲ್ಪಟ್ಟಿದೆ