ಆರತಿ (ಪೂಜೆ)
ಆರತಿ ಹಿಂದೂ ಸಂಪ್ರದಾಯದಲ್ಲಿ ದೇವ ದೇವಿಯರಿಗೆ ಜ್ಯೋತಿ ಬೆಳಗಿ ಸಲ್ಲಿಸುವ ಒಂದು ಉಪಚಾರ. ಆರತಿ ಬೆಳಗಲು ಸಾಮಾನ್ಯವಾಗಿ ಕರ್ಪೂರವನ್ನು ಅಥವಾ ತುಪ್ಪದಲ್ಲಿ ಅದ್ದಿದ ಬತ್ತಿಗಳನ್ನು ಬಳಸಲಾಗುತ್ತದೆ. ಆರತಿ ಬೆಳಗುವ ಸಮಯದಲ್ಲಿ ಉತ್ತರ ಭಾರತದಲ್ಲಿ ಗಾಯನ ಕೀರ್ತನೆಗಳನ್ನು ಸಲ್ಲಿಸಿದರೆ ದಕ್ಷಿಣ ಭಾರತದಲ್ಲಿ ಮಂತ್ರಗಳನ್ನು ಹೇಳಲಾಗುತ್ತದೆ. ಆರತಿಯ ಸಂಪ್ರದಾಯ ವೇದಕಾಲದಿಂದ ನಡೆದುಬಂದದ್ದೆಂದು ಹೇಳಲಾಗುತ್ತದೆ. ಉತ್ತರ ಭಾರತದಲ್ಲಿ ಹೂವು ಅಥವಾ ಗಾಯನದ ಮೂಲಕ ದೇವರಿಗೆ ಸಲ್ಲಿಸುವ ಉಪಚಾರಗಳಿಗೆ ಸಹ ಕೆಲವೊಮ್ಮೆ ಆರತಿ ಎಂಬ ಪದವನ್ನೇ ಬಳಸಲಾಗುತ್ತದೆ. ಸಾಮಾನ್ಯವಾಗಿ ಪೂಜೆಯ ಕೊನೆಯಲ್ಲಿ ಅಥವಾ ಗಾಯನ ಕೀರ್ತನ ಸಭೆಯ ಕೊನೆಯಲ್ಲಿ ದೇವರಿಗೆ ಆರತಿ ಬೆಳಗುವ ವಾಡಿಕೆ ಇದ್ದೇ ಇರುತ್ತದೆ. ಆರತಿ ಬೆಳಗುವಾಗ ಗಂಟೆ ಯಾ ಶಂಖನಾದವನ್ನು ಸಹ ಹೊಂದಿಸಲಾಗುವುದು.
ದೇವಪೂಜೆಯ ಹೊರತಾಗಿ ಇತರ ಸಂದರ್ಭಗಳಲ್ಲಿ ಸಹ ಆರತಿ ಎತ್ತುವ ವಾಡಿಕೆ ಹಿಂದೂ ಧರ್ಮೀಯರಲ್ಲಿ ಇದೆ. ಉಪನಯನ, ವಿವಾಹ ಮುಂತಾದ ಯಾವುದೇ ಶುಭಸಮಾರಂಭದಲ್ಲಿ ಸಮಾರಂಭದ ಕೇಂದ್ರ ವ್ಯಕ್ತಿಗಳಿಗೆ ಆರತಿ ಎತ್ತುವ ಸಂಪ್ರದಾಯವಿದೆ. ಉತ್ತರ ಭಾರತದಲ್ಲಿ ಮನುಷ್ಯರಿಗೆ ಆರತಿ ಎತ್ತುವಾಗ ದೀಪಗಳನ್ನು ಬಳಸುವರು. ಆದರೆ ದಕ್ಷಿಣದಲ್ಲಿ ದೀಪಕ್ಕೆ ಬದಲಾಗಿ ಅರಿಶಿನ ಕದಡಿದ ನೀರಿನಿಂದ ಮನುಷ್ಯರಿಗೆ ಆರತಿ ಎತ್ತಲಾಗುತ್ತದೆ. ಆರತಿ ಎತ್ತಲು ಬೆಳ್ಳಿ, ತಾಮ್ರ, ಕಂಚು ಅಥವಾ ಹಿತ್ತಾಳೆಯ ಪರಿಕರಗಳನ್ನು ಬಳಸಲಾಗುವುದು.