ಗುರುದತ್ ಪಡುಕೋಣೆ
ಗುರುದತ್ | |
---|---|
Born | ವಸಂತ ಕುಮಾರ್ ಶಿವಶಂಕರ್ ಪಡುಕೋಣೆ 9 ಜುಲೈ 1925 ಬೆಂಗಳೂರು, ಬ್ರಿಟಿಷ್ ಭಾರತ |
Died | 10 October 1964 ಮುಂಬೈ, ಮಹಾರಾಷ್ಟ್ರ, ಭಾರತ | (aged 39)
Occupation(s) | ನಟ, ನಿರ್ಮಾಪಕ, ನಿರ್ದೇಶಕ, ನೃತ್ಯ ನಿರ್ದೇಶಕ |
Years active | 1944–1964 |
Spouse | ಗೀತಾ ದತ್ (1953–1964) (ದತ್ತರ ನಿಧನ) |
ಗುರುದತ್ ಶಿವಶಂಕರ್ ಪಡುಕೋಣೆ (ಜುಲೈ ೯,೧೯೨೫ - ಅಕ್ಟೋಬರ್ ೧೦ ೧೯೬೪) ಇವರು ಭಾರತ ಚಲನಚಿತ್ರ ರಂಗ ಕಂಡ ಓರ್ವ ಅಮೋಘ ನಟ,ನಿರ್ದೇಶಕ ಹಾಗೂ ನಿರ್ಮಾಪಕ. ಕಲಾತ್ಮಕ, ಸಾಹಿತ್ಯಪೂರ್ಣ ಚಲನಚಿತ್ರ ಮಾಡುವುದರಲ್ಲಿ ಇವರದ್ದು ಎತ್ತಿದ ಕೈ. ಇವರ ಅನೇಕ ಉತ್ತಮ ಚಿತ್ರಗಳಲ್ಲಿ "ಪ್ಯಾಸಾ" ಒಂದು.
ಬಾಲ್ಯ ಜೀವನ
[ಬದಲಾಯಿಸಿ]ಶಿವಶಂಕರ ರಾವ್ ಪಡುಕೋಣೆ ಹಾಗೂ ವಸಂತಿ ಪಡುಕೋಣೆ ದಂಪತಿಯ ಮಗನಾಗಿ ಗುರುದತ್ ಜುಲೈ ೯, ೧೯೨೫ ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆ ಮೊದಲು ದಕ್ಷಿಣ ಕನ್ನಡ ಜಿಲ್ಲೆಯ ಪಣಂಬೂರಿನಲ್ಲಿ ನೆಲೆಸಿದ್ದರು. ಇವರ ತಂದೆ ಮೊದಲು ಮುಖ್ಯೋಪಾಧ್ಯಾಯ, ನಂತರ ಬ್ಯಾಂಕ್ ಉದ್ಯೋಗಿಯಾಗಿದ್ದರು. ಇವರ ತಾಯಿ ವಸಂತಿ ಗೃಹಿಣಿಯಾಗಿದ್ದರು, ನಂತರ ಶಾಲೆಯೊಂದರಲ್ಲಿ ಉಪಾಧ್ಯಾಯಿನಿಯಾಗಿ, ಖಾಸಗಿ ಶಿಕ್ಷಕಿಯಾಗಿ ಕೆಲಸ ಮಾಡಿದರು. ಅವರು ಸಣ್ಣ ಕಥೆಗಳನ್ನು ಬರೆಯುತ್ತಿದ್ದರು ಹಾಗೂ ಹಲವಾರು ಬಂಗಾಳಿ ಲೇಖನಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು. ಗುರು ದತ್ ಜನಿಸಿದಾಗ ವಸಂತಿಯವರಿಗೆ ಕೇವರ ೧೬ ವರ್ಷ ಪ್ರಾಯ.
ಮನೆಯ ಆರ್ಥಿಕ ಮುಗ್ಗಟ್ಟು ಹಾಗೂ ಪೋಷಕರ ಕ್ಷೀಣಿಸುತ್ತಿದ್ದ ಸಂಬಂಧದಿಂದಾಗಿ ಗುರು ದತ್ ಬಾಲ್ಯವು ಬಹಳ ಕಷ್ಟಕರವಾಗಿತ್ತು. ಬಾಲ್ಯದಲ್ಲಿ ಗುರು ದತ್ ಹಲವಾರು ಕೆಟ್ಟ ಅನುಭವಕ್ಕೊಳಗಾಗಿದ್ದರು; ಮಾವನ ಶತ್ರುತ್ವ, ಮಾನಸಿಕವಾಗಿ ಅಸ್ವಸ್ಥರಾಗಿದ್ದ ಚಿಕ್ಕಪ್ಪನೊಂದಿನ ಭಯಾನಕ ಘಟನೆ ಹಾಗೂ ೭ ತಿಂಗಳ ತಮ್ಮನ ಅಕಾಲ ಮೃತ್ಯು.
ಮೊದಲು ಇವರ ಮಾವನ ಸಲಹೆಯಂತೆ ಗುರುದತ್ ಗೆ ವಸಂತ ಕುಮಾರ ಎಂದು ನಾಮಕರಣ ಮಾಡಲಾಗಿತ್ತು. ಆದರೆ ಬಾಲ್ಯದ ಒಂದು ಘಟನೆಯ ನಂತರ ಶುಭ ಶಕುನವೆಂದು ಭಾವಿಸಿ, ಗುರುದತ್ ಎಂದು ನಾಮಕರಣ ಮಾಡಲಾಯಿತು. ಇವರ ನಂತರ ಆತ್ಮಾರಮ್, ದೇವೀದಾಸ್ ಎಂಬ ತಮ್ಮಂದಿರೂ, ಲಲಿತಾ ಎಂಬ ತಂಗಿಯ ಜನನವಾಯಿತು. ಚಲನಚಿತ್ರ ನಿರ್ದೇಶಕಿಯಾದ ಕಲ್ಪನಾ ಲಾಜ್ಮಿ ಇವರ ತಂಗಿಯ ಮಗಳು.
ಬಾಲ್ಯದ ಬಹುಪಾಲು ಸಮಯವನ್ನು ಇವರು ಚಲನಚಿತ್ರಗಳ ಪೋಶ್ಟರ್ ಗಳನ್ನು ಬಿಡಿಸುತ್ತಿದ್ದ, ತಾಯಿಯ ತಮ್ಮನಾದ (ದೂರ ಸಂಬಂಧಿ) ಬಾಲಕೃಷ್ಣ.ಬಿ.ಬೆನೆಗಲ್ ರವರೊಂದಿಗೆ ಕಳೆದರು. ಖ್ಯಾತ ಚಲನಚಿತ್ರ ನಿರ್ದೇಶಕರಾದ ಶ್ಯಾಮ್ ಬೆನೆಗಲ್, ಬಾಲಕೃಷ್ಣರವರ ತಮ್ಮನಾದ ಶ್ರೀಧರ.ಬಿ.ಬೆನೆಗಲ್ ರವರ ಮಗ.
ಬಂಗಾಳದ ಸಂಬಂಧ
[ಬದಲಾಯಿಸಿ]ಗುರುದತ್ ರವರ ತಂದೆಯವರು ಪಣಂಬೂರಿನ ಶಾಲೆಯೊಂದರಲ್ಲಿ ಮುಖ್ಯೋಪಾಧ್ಯಾಯರಾಗಿದ್ದರು. ನಂತರ ಬೆಂಗಳೂರಿನಲ್ಲಿ ಬ್ಯಾಂಕ್ ಒಂದರ ಉದ್ಯೋಗಿಯಾಗಿದ್ದರು. ಆಮೇಲೆ ಕೋಲ್ಕತ್ತಾದ ಭವಾನಿಪೋರ್ ಎಂಬಲ್ಲಿಗೆ ಇವರ ವರ್ಗವಾಯಿತು. ಇಲ್ಲಿಯೇ ಗುರುದತ್ ತಮ್ಮ ವಿಧ್ಯಾಭ್ಯಾಸವನ್ನು ಮುಗಿಸಿದರು. ಆದುದರಿಂದ ಗುರುದತ್ ನಿರರ್ಗಳವಾಗಿ ಬಂಗಾಳಿಯಲ್ಲಿ ಮಾತನಾಡುತ್ತಿದ್ದರು ಹಾಗೂ ಅವರ ಎಲ್ಲಾ ಕೆಲಸಗಳಲ್ಲಿ ಬಂಗಾಳದ ಸಂಸ್ಕೃತಿಯ ಛಾಪು ಎದ್ದು ಕಾಣಿತ್ತಿತ್ತು. ನಂತರ ಮುಂಬೈಯ ಬಾಲಿವುಡ್ಡಿಗೆ ೧೯೪೦ನೇ ಇಸವಿಯಲ್ಲಿ ಬಂದ ಮೇಲೆ ತನ್ನ ಹೆಸರಿನಲ್ಲಿದ್ದ ಶಿವಶಂಕರ್ ಪಡುಕೋಣೆಯನ್ನು ತೆಗೆದು ಹಾಕಿ ನಂತರ ಗುರುದತ್ ಎಂದೇ ಹೆಸರಾದರು. ಇವರ ಹೆಸರಿನಲ್ಲಿರುವ ದತ್ ಎಂದು ಕೊನೆಗೊಳ್ಳುವದರಿಂದ ಬಹುತೇಕ ಜನರು ಇವರು ಬಂಗಾಳಿಯೆಂದು ಭಾವಿಸಿದರು.
ಆರಂಭದ ಪ್ರೇರಣೆಗಳು
[ಬದಲಾಯಿಸಿ]ಇವರ ತಂಗಿಯು ಹೇಳುವಂತೆ, ೧೪ ವರ್ಷದ ಗುರುದತ್ ತಮ್ಮ ಅಜ್ಜಿಯು ಸಾಯಂಕಾಲ ಉರಿಸುತ್ತಿದ್ದ ದೀಪದ ಮುಂದೆ ಕೈಯ್ಯೊಡ್ಡಿ ಅದರ ನೆರಳಿನಿಂದ ಗೋಡೆಗಳ ಮೇಲೆ ಚಿತ್ರವನ್ನು ಬಿಡಿಸುತ್ತಿದ್ದರು. ಯಾವುದೇ ತರಬೇತಿಯಿಲ್ಲದ್ದರೂ, ಇವರು ಚೆನ್ನಾಗಿ ನರ್ತನವನ್ನೂ ಕೂಡಾ ಮಾಡುತ್ತಿದ್ದರು. ಇವರ ಮಾವನು ಬಿಡಿಸಿದ ಚಿತ್ರವೊಂದರಲ್ಲಿದ್ದ ಭಂಗಿಯಲ್ಲಿ ನಿಂತು, ತನ್ನ ಚಿತ್ರವನ್ನು ಬಿಡಿಸಿ ಎಂದು ಮಾವನನ್ನು ಒತ್ತಾಯ ಮಾಡುತ್ತಿದ್ದರು. ಸಾರಸ್ವತ ಬ್ರಾಹ್ಮಣರ ಒಂದು ಸಭೆಯಲ್ಲಿ ಇವರು ಮಾಡಿದ ನೃತ್ಯವೊಂದಕ್ಕೆ ೫ ರೂಪಾಯಿಯ ಬಹುಮಾನವನ್ನೂ ಪಡೆದರು.
ಮನೆಯ ಆರ್ಥಿಕ ಪರಿಸ್ಥಿತಿಯಿಂದಾಗಿ ಕಾಲೇಜಿಗೆ ಹೋಗಲಾಗದಿದ್ದರೂ ಕೂಡಾ, ಇವರು ಓರ್ವ ಉತ್ತಮ ವಿದ್ಯಾರ್ಥಿಯಾಗಿದ್ದರು. ಬದಲಾಗಿ ರವಿಶಂಕರ್ ಅವರ ಅಣ್ಣನಾದ ಉದಯ ಶಂಕರ್ ಅವರ ನಾಟಕ ಶಾಲೆಯನ್ನು ಸೇರಿದರು. ಅಲ್ಮೋರಾದಲ್ಲಿರುವ ಉದಯ ಶಂಕರ್ ಇಂಡಿಯಾ ಕಲ್ಚರ್ ಸೆಂಟರ್ ನಾಟ್ಯ, ನಾಟಕ ಹಾಗೂ ಸಂಗೀತವನ್ನು ಕಲಿಸುವ ಕೇಂದ್ರವಾಗಿತ್ತು. ಗುರುಕುಲ ಪದ್ಧತಿ ಹಾಗೂ ಆಧುನಿಕ ಕಲಾ ವಿಶ್ವವಿದ್ಯಾನಿಲಯ ಇವೆರಡರ ಉತ್ತಮ ಅಂಶಗಳನ್ನು ಅಳವಡಿಸಿ ಕಲೆಯನ್ನು ಹೇಳಿಕೊಡುವುದು ಈ ಕೇಂದ್ರದ ಧ್ಯೇಯೋದ್ದೇಶವಾಗಿತ್ತು. ಬೇರೆ ಬೇರೆ ಕ್ಷೇತ್ರಗಳಲ್ಲಿ ಉತ್ತಮ ರೀತಿಯಲ್ಲಿ ಪಳಗಿದ ಕಲಾವಿದರನ್ನು ರೂಪಿಸುವ ಪ್ರಯತ್ನವನ್ನು ಮಾಡಿದ ಸಂಸ್ಥೆಯಿದು. ೧೬ ವರ್ಷದ ಗುರುದತ್ ೧೯೪೧ ನೇ ಇಸವಿಯಲ್ಲಿ ಈ ಕೇಂದ್ರವನ್ನು ಸೇರಿದರು. ಆ ಸಮಯದಲ್ಲಿ ಇವರು ೭೫ ರೂಪಾಯಿಗಳ (ಆಗಿನ ಕಾಲದಲ್ಲಿ ದೊಡ್ಡ ಮೊತ್ತವದು) ೫ ವರ್ಷದ ವಿದ್ಯಾರ್ಥಿ ವೇತನವನ್ನು ಸಂಪಾದಿಸಿದರು. ಇಲ್ಲಿ ೧೯೪೪ ನೇ ಇಸವಿಯವರೆಗೆ ಕಲಾಭ್ಯಾಸವನ್ನು ಮಾಡಿರು. ನಂತರ ಎರಡನೇ ಮಹಾಯದ್ಧದ ಬಿಸಿಯೇರಿದುದರಿಂದ ಈ ಕೇಂದ್ರವನ್ನು ಒತ್ತಾಯಪೂರ್ವಕವಾಗಿ ಮುಚ್ಚಲಾಯಿತು.
ಮೊದಲ ಕೆಲಸ
[ಬದಲಾಯಿಸಿ]ತಂದೆ ತಾಯಿಗೆ ತಂತಿ ಸಂದೇಶದ ಮೂಲಕ ತನಗೆ ಕೋಲ್ಕತ್ತಾದಲ್ಲಿದ್ದ ಲಿವರ್ ಬ್ರದರ್ಸ್ ಕಾರ್ಖಾನೆಯಲ್ಲಿ ದೂರವಾಣಿ ನಿರ್ವಾಹಕನ ಕೆಲಸ ಸಿಕ್ಕಿದೆಯೆಂದು ಗುರುದತ್ ತಿಳಿಸಿದರು. ಕೂಡಲೇ ಆ ಕೆಲಸವನ್ನು ಬಿಟ್ಟು ಮುಂಬೈಯಲ್ಲಿ ವಾಸವಾಗಿದ್ದ ತಂದೆ ತಾಯಿಯ ಬಳಿ ಹಿಂದಿರುಗಿದನು. ಅನಂತರ ಇವರ ಮಾವನು ಪುಣೆಯಲ್ಲಿನ ಪ್ರಭಾತ್ ಫಿಲ್ಮ್ ಕಂಪೆನಿಯಲ್ಲಿ ಮೂರು ವರ್ಷದ ಗುತ್ತಿಗೆಯ ಕೆಲಸವನ್ನು ಕೊಡಿಸಿದರು. ಒಂದು ಕಾಲದಲ್ಲಿ ಶ್ರೇಷ್ಟ ಚಲನಚಿತ್ರ ನಿರ್ಮಾಣ ಸಂಸ್ಥೆಯಾಗಿದ್ದ ಈ ಸಂಸ್ಥೆ, ವಿ.ಶಾಂತಾರಾಂ ರವರಂತಹ ಉತ್ತಮ ಮೇಧಾವಿಯ ನಿರ್ಗಮನವನ್ನು ಕಂಡಿತ್ತು. ಶಾಂತಾರಾಂ ನಂತರ ತಮ್ಮದೇ ಆದ ಕಲಾ ಮಂದಿರವನ್ನು ಆರಂಭಿಸಿದರು. ಕೊನೆಯವರೆಗೂ ಉತ್ತಮ ಸ್ನೇಹಿತರಾಗಿದ್ದ ರೆಹಮಾನ್ ಹಾಗೂ ದೇವಾನಂದ್ ರವರನ್ನು ಗುರುದತ್ ಇಲ್ಲಿಯೇ ಮೊದಲ ಬಾರಿಗೆ ಭೇಟಿಯಾದರು. ಗುರುದತ್ ೧೯೪೪ರಲ್ಲಿ ತೆರೆಕಂಡ ಚಾಂದ್ ಚಲನಚಿತ್ರದಲ್ಲಿ ಶ್ರೀಕೃಷ್ಣನ ಒಂದು ಸಣ್ಣ ಪಾತ್ರದಲ್ಲಿ ಅಭಿನಯಿಸಿದರು. ೧೯೪೫ನೇ ಇಸವಿಯಲ್ಲಿ ವಿಶ್ರಮ್ ಬೇಡೇಕರ್ ನಿರ್ದೇಶನದ ಲಖ್ರಾನಿ ಚಿತ್ರದಲ್ಲಿ ನಟನಾಗಿಯೂ, ಸಹ ನಿರ್ದೇಶಕನಾಗಿಯೂ ಕಾರ್ಯ ನಿರ್ವಹಿಸಿದರು. ೧೯೪೬ರಲ್ಲಿ ಪಿ.ಎಲ್.ಸಂತೋಷಿಯವರ ನಿರ್ದೇಶನದ ಹಮ್ ಏಕ್ ಹೈ ಸಹಾಯಕ ನಿರ್ದೇಶಕನಾಗಿ ಹಾಗೂ ನೃತ್ಯ ನಿರ್ದೇಶಕನಾಗಿ ಕೆಲಸ ಮಾಡಿದರು. ಈ ಗುತ್ತಿಗೆಯು ೧೯೪೭ರಲ್ಲಿ ಮುಗಿಯಿತು. ಆದರೆ ಇವರ ತಾಯಿಯು ಬಾಬು ರಾವ್ ಪೈ ಅವರ ಸಹಾಯಕನಾಗಿ ಕೆಲಸ ದೊರೆಕಿಸಿ ಕೊಟ್ಟರು. ಇದಾದ ೧೦ ವರ್ಷಗಳವರೆಗೆ ನಿರುದ್ಯೋಗಿಯಾಗಿದ್ದ ಗುರುದತ್ ಮುಂಬೈಯಲ್ಲಿನ ಮಾತುಂಗದಲ್ಲಿ ತಮ್ಮ ಮನೆಯವರ ಜೊತೆ ವಾಸವಾಗಿದ್ದರು. ಈ ಸಮಯದಲ್ಲಿ ಗುರುದತ್ ಆಂಗ್ಲ ಭಾಷೆಯಲ್ಲಿ ಬರೆಯುವ ಹವ್ಯಾಸವನ್ನು ಬೆಳೆಸಿಕೊಂಡರು. ಅಲ್ಲಿನ ಸ್ಥಳೀಯ ವಾರಪತ್ರಿಕೆಯಾಗಿದ್ದ ದಿ ಇಲ್ಲಸ್ಟ್ರೇಟೆಡ್ ವೀಕ್ಲಿಯಲ್ಲಿ ಸಣ್ಣ ಕಥೆಗಳನ್ನು ಬರೆಯತೊಡಗಿರು. ಇದೇ ಕಾಲದಲ್ಲಿ ಗುರುದತ್ ತಮ್ಮ ಆತ್ಮಚರಿತ್ರೆಯಂತೆ ಕಾಣುವ ಪ್ಯಾಸಾ ಹಿಂದಿ ಚಲನಚಿತ್ರದ ಕಥೆಯನ್ನು ಬರೆದರೆಂದು ಹೇಳುತ್ತಾರೆ. ಈ ಕಥೆಯ ಹೆಸರು ಮೊದಲು ಕಶ್ಮಕಶ್ ಎಂದಾಗಿದ್ದು, ನಂತರ ಪ್ಯಾಸಾ ಎಂದು ಬದಲಾಯಿಸಲಾಯಿತು. ಈ ಸಂದರ್ಭದಲ್ಲಿ ಗುರುದತ್ ತಮ್ಮ ಎರಡನೇ ಮದುವೆಯನ್ನೂ ಆಗುವವರಿದ್ದರು. ಮೊದಲು ವಿಜಯ ಎಂಬ ಪುಣೆಯ ಹುಡುಗಿಯೊಡನೆ ಪಲಾಯನವಾಗಿದ್ದ ಗುರು ದತ್ ಗೆ, ಇವರ ಮನೆಯವರು ದೂರ ಸಂಬಂಧದಲ್ಲಿ ಸೊಸೆಯಾಗುವ ಸುವರ್ಣ ಎಂಬ ಹೈದರಾಬಾದಿನ ಹುಡುಗಿಯೊಂದಿಗೆ ಮದುವೆ ಮಾಡುವವರಿದ್ದರು.
ನಟ, ಸಹಾಯಕ ನಿರ್ದೇಶಕನಾಗಿ
[ಬದಲಾಯಿಸಿ]ಪ್ರಭಾತ್ ಕಂಪೆನಿಯಲ್ಲಿ ಗುರುದತ್ ನೃತ್ಯ ನಿರ್ದೇಶಕನಾಗಿ ಸೇರಿದ್ದರೂ, ಕೂಡಲೇ ನಟನಾಗಿ, ಸಹಾಯಕ ನಿರ್ದೇಶಕನಾಗಿಯೂ ಕೂಡಾ ಕೆಲವ ಮಾಡುವ ಅವಕಾಶಗಳು ಲಭ್ಯವಾದವು. ಇಲ್ಲಿ ದೇವಾನಂದ್, ರೆಹಮಾನ್ ರವರ ಸ್ನೇಹವಾಯಿತು. ಇವರು ನಂತರ ಸುಪ್ರಸಿದ್ಧ ತಾರೆಗಳಾದರು. ಇವರ ಸ್ನೇಹದಿಂದಲೇ ಗುರುದತ್ ಚಲನಚಿತ್ರರಂಗದಲ್ಲಿ ಭದ್ರ ಬುನಾದಿ ಹಾಕುವಂತಾಯಿತು. ಪ್ರಭಾತ್ ಕಂಪೆನಿಯು ೧೯೪೭ರಲ್ಲಿ ಕಾರಣಾಂತರಗಳಿಂದ ಮುಚ್ಚಲ್ಪಟ್ಟಾಗ, ಗುರುದತ್ ಮುಂಬೈಗೆ ವಲಸೆ ಬಂದರು. ಇಲ್ಲಿ ಆಗಿನ ಕಾಲದ ಯಶಸ್ವೀ ನಿರ್ದೇಶಕರುಗಳಾದ ಅಮಿಯ ಚಕ್ರವರ್ತಿಯವರೊಂದಿಗೆ ಗರ್ಲ್ಸ್ ಸ್ಕೂಲ್ಚಿತ್ರದಲ್ಲಿ ಹಾಗೂ ಗ್ಯಾನ್ ಮುಖರ್ಜಿಯವರ ಬೋಂಬೇ ಟಾಕೀಸ್ ರವರ ಸಂಗ್ರಾಮ್ ಚಿತ್ರದಲ್ಲಿ ಗುರುದತ್ ಕೆಲಸ ಮಾಡಿದರು. ತಮ್ಮ ನವಕೇತನ್ ಕಂಪೆನಿಯ ಮೊದಲ ಚಿತ್ರ ವಿಫಲವಾದಾಗ, ದೇವಾನಂದ್ ಗುರುದತ್ ಗೆ ತಮ್ಮ ಕಂಪೆನಿಯಲ್ಲಿ ನಿರ್ದೇಶಕನಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟರು. ಅಂತೆಯೇ ನವಕೇತನ್ ಕಂಪೆನಿಯ ಗುರುದತ್ ನಿರ್ದೇಶನದ ಬಾಝಿ ಚಲನಚಿತ್ರವು ೧೯೫೧ನೇ ಇಸವಿಯಲ್ಲಿ ತೆರೆ ಕಂಡಿತು.
ದೇವ್ ಹಾಗೂ ಗುರುವಿನ ವಾಗ್ದಾನ
[ಬದಲಾಯಿಸಿ]ಈ ಹೊಸ ಕೆಲಸದ ಹಿಂದೆ ಒಂದು ಕುತೂಹಲಕಾರಿಯಾದ ಕಥೆಯಿದೆ. ಪುಣೆಯ ಪ್ರಭಾತ್ ಕಂಪೆನಿಯಲ್ಲಿರುವಾಗ ಗುರುದತ್ ಹಾಗೂ ದೇವಾನಂದ್ ಇಬ್ಬರ ಬಟ್ಟೆಯನ್ನೂ ಕೂಡ ಒಬ್ಬನೇ ಅಗಸನು ಒಗೆಯುತ್ತಿದ್ದನು. ಒಂದು ದಿನ ದೇವಾನಂದ್ ತಮ್ಮ ಅಂಗಿಯು ಅದಲು ಬದಲಾಗಿರುವುದನ್ನು ಗಮನಿಸಿದರು. ಹಮ್ ಏಕ್ ಹೈ ಚಿತ್ರದ ನಾಯಕ ನಟನಾಗಿ ಚಿತ್ರೀಕರಣಕ್ಕೆ ಸ್ಟುಡಿಯೋಗೆ ಬಂದಾಗ ಓರ್ವ ಯುವ ನೃತ್ಯ ನಿರ್ದೇಶಕನು ತಮ್ಮ ಅಂಗಿಯನ್ನು ಧರಿಸಿರುವುದನ್ನು ಗಮನಿಸಿದರು. ಪ್ರಶ್ನಿಸಿದಾಗ, ಗುರು ದತ್ ಅದು ತನ್ನ ಅಂಗಿಯಲ್ಲವೆಂದೂ, ಧರಿಸಲು ಬೇರೆ ಅಂಗಿ ತನ್ನಲ್ಲಿ ಇಲ್ಲವಾದುದರಿಂದ ಇದನ್ನು ಧರಿಸಿದೆನೆಂದೂ ಒಪ್ಪಿಕೊಂಡರು. ಅವರಿಬ್ಬರೂ ಸಮ ವಯಸ್ಕಾರಾಗಿದ್ದುದರಿಂದ, ಈ ಘಟನೆಯೌ ಒಂದು ಅಮೋಘ ಸ್ನೇಹದಲ್ಲಿ ಕೊನೊಗೊಂಡಿತು. ಒಂದು ವೇಳೆ ಗುರು ದತ್ ಚಿತ್ರ ನಿರ್ಮಾಪಕನಾದರೆ, ದೇವಾನಂದ್ ಆ ಚಿತ್ರದ ನಾಯಕ ನಟನಾಗುವನೆಂದೂ ಹಾಗೂ ದೇವಾನಂದ್ ಚಿತ್ರವೊಂದನ್ನು ನಿರ್ಮಿಸುವುದಾದರೆ ಅದರ ನಿರ್ದೇಶಕ ಗುರು ದತ್ ಆಗಿರುತ್ತಾರೆಂದು ಅವರು ಪರಸ್ಪರ ವಾಗ್ದಾನ ನೀಡಿದರು.
ದೇವಾನಂದ್ ತಮ್ಮ ಮಾತನ್ನು ಬಾಝಿ ಚಲನಚಿತ್ರದ ಮೂಲಕ ಉಳಿಸಿಕೊಂಡರು ಆದರೆ ಗುರುದತ್ ತನ್ನ ಮಾತನ್ನು ಉಳಿಸಿಕೊಳ್ಳಲಿಲ್ಲವೆಂದು ದೇವಾನಂದ್ ಇಂದಿಗೂ ವಿಷಾದಿಸುತ್ತಾರೆ. ಆದರೆ ಗುರು ದತ್ ಪರೋಕ್ಷವಾಗಿ ತಮ್ಮ ವಚನವನ್ನು ನಡೆಸಿಕೊಟ್ಟಿದ್ದರು. ತನ್ನದೇ ಆದ ಗುರುದತ್ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ಮಾಣವಾದ ಸಿ.ಐ.ಡಿ.ಚಲನಚಿತ್ರದ ನಾಯಕ ನಟ ದೇವಾನಂದ್. ಈ ಚಿತ್ರದ ನಿರ್ದೇಶಕ ಗುರುದತ್ ರವರ ಸಹಾಯಕ ನಿರ್ದೇಶಕನಾಗಿದ್ದ ರಾಜ್ ಖೋಸ್ಲಾ ಎಂಬವರು. ಹಾಗಾಗಿ ನೇರವಾಗಿ ದೇವಾನಂದ್ ಅಭಿನಯದ ಯಾವುದೇ ಚಲನಚಿತ್ರವನ್ನು ಗುರುದತ್ ನಿರ್ದೇಶಿಸಿರಲಿಲ್ಲ.
ಗುರುದತ್ ಹಾಗೂ ದೇವಾನಂದ್ ಜೊತೆಯಾಗಿ ಎರಡು ಅತೀ ಯಶಸ್ವೀ ಚವಲಚಿತ್ರಗಳಾದ ಬಾಝೀ ಹಾಗೂ ಜಾಲ್ ಚಿತ್ರಗಳನ್ನು ನಿರ್ಮಿಸಿದರು. ಕಲಾತ್ಮಕತೆಯಲ್ಲಿ ಗುರುದತ್ ಹಾಗೂ ಚೇತನ್ ಆನಂದ್ (ದೇವಾನಂದ್ ರವರ ಅಣ್ಣ)ಇವರ ನಡುವಿನ ಭಿನ್ನಾಭಿಪ್ರಾಯಗಳಿಂದ ಮುಂದಿನ ದಿನಗಳಲ್ಲಿ ಜೊತೆಯಾಗಿ ಚಿತ್ರ ನಿರ್ಮಿಸುವುದು ತ್ರಾಸದಾಯಕವಾಯಿತು.
ಬಾಝಿಯ ಇತರ ಕಾಣಿಕೆಗಳು
[ಬದಲಾಯಿಸಿ]ಬಾಝಿ ಚಿತ್ರದಲ್ಲಿ ಭಾರತೀಯ ಚಲನಚಿತ್ರ ರಂಗಲ್ಲಿನ ಎರಡು ಪ್ರಮುಖ ತಾಂತ್ರಿಕ ಬೆಳವಣಿಗೆಗಳಿಗೆ ನಾಂದಿ ಹಾಡಿತು. ಚಿತ್ರದಲ್ಲಿನ ೧೪ ೧೦೦ ಎಮ್.ಎಮ್. ಮಸೂರಗಳ ಸಹಾಯದಿಂದ ಬಹ ಸಮೀಪದಿಂದ ತೆಗೆದ ದೃಶ್ಯಗಳ ತಂತ್ರಜ್ಞಾನ ಮುಂದೆ "ಗುರುದತ್ ಶಾಟ್" ಎಂದೇ ಹೆಸರಾಯಿತು ಹಾಗೂ ಈ ಚಿತ್ರದಲ್ಲಿ ಹಾಡುಗಳ ಮುಖಾಂತರ ಕಥೆಯನ್ನು ಮುಂದುವರಿಸುವ ರೀತಿಯೂ ಕೂಡಾ ಆಗ ಹೊಸದು. ಗುರು ದತ್ ಈ ಚಿತ್ರದಲ್ಲಿ ಝೋರಾ ಸೆಹಗಲ್ (ಅಲ್ಮೋರಾದಲ್ಲಿ ಭೇಟಿಯಾದಾಕೆ) ಎಂಬುವವರನ್ನು ನೃತ್ಯ ನಿರ್ದೇಶಕಿಯಾಗಿ ಪರಿಚಯಿಸಿದರು ಹಾಗೂ ತನ್ನ ಮಡದಿಯಾದ ಗೀತಾ ದತ್ ರವರನ್ನು ಈ ಚಿತ್ರದ ಚಿತ್ರೀಕರಣದ ವೇಳೆಯಲ್ಲಿ ಭೇಟಿಯಾದರು.
ನಿರ್ದೇಶಕನಾಗಿ ಗುರುದತ್
[ಬದಲಾಯಿಸಿ]ಬಾಝೀ ಚಲವಚಿತ್ರವು ತೆರೆ ಕಂಡ ಕೂಡಲೇ ಯಶಸ್ವಿಯಾಯಿತು. ಇದರ ನಂತರ ಗುರುದತ್ ಜಾಲ್ ಹಾಗೂ ಬಾಝ್ ಚಲನಚಿತ್ರಗಳನ್ನು ನಿರ್ಮಿಸಿದರು. ಈ ಎರಡೂ ಚಲನಿತ್ರಗಳು ಯಶಸ್ಸನ್ನು ಕಾಣಲಿಲ್ಲವಾದರೂ, ಈ ಮುಂದಿನ ದಿನಗಳಲ್ಲಿ ಬಂದ ಚಿತ್ರಗಳಲ್ಲಿ ಅತ್ಯದ್ಭುತವಾಗಿ ಶ್ರಮಿಸಿದ ತಂಡವೊಂದನ್ನು ರಚಿಸುವದಕ್ಕೆ ಸಾಧ್ಯವಾಯಿತು. ಜಾನಿ ವಾಕರ್ (ಹಾಸ್ಯನಟ), ವಿ.ಕೆ.ಮೂರ್ತಿ, ಅಬ್ರಾರ್ ಅಲ್ವಿ (ಲೇಖಕ ಹಾಗೂ ನಿರ್ದೇಶಕ)ಇವರೇ ಮೊದಲಾದಂತಹ ಅನೇಕ ಕಲಾವಿದರನ್ನು ಅನ್ವೇಷಿಸಿ, ಗುರುದತ್ ಪ್ರೋತ್ಸಾಹಿಸಿದರು. ಸರಿಯಾದ ನಾಯಕ ನಟ ಸಿಗದೇ ಗುರುದತ್ ಬಾಝ್ ಚಿತ್ರದಲ್ಲಿ ನಾಯಕ ಪಾತ್ರವನ್ನು ನಿರ್ವಹಿಸಿದ್ದಲ್ಲದೇ, ಸ್ವತಃ ನಿರ್ದೇಶಿಸಿದರು.
ಅದೃಷ್ಟ ಲಕ್ಷ್ಮಿಯು ಗುರುದತ್ ಮುಂದಿನ ಚಿತ್ರವಾದ ಆರ್ ಪಾರ್ನಲ್ಲಿ ಒಲಿದಳು. ಇದಾದ ನಂತರ ೧೯೫೫ರಲ್ಲಿ ತೆರೆಕಂಡ ಮಿಸ್ಟರ್ ಆಂಡ್ ಮಿಸ್ಸೆಸ್ ೫೫, ಸಿ.ಐ.ಡಿ., ಸೈಲಾಬ್ ಹಾಗೂ ೧೯೫೭ರಲ್ಲಿ ತೆರೆಕಂಡ ನಿರಾಸಕ್ತ ಪ್ರಪಂಚದಿಂದ ತಿರಸ್ಕೃತನಾಗಿ ತನ್ನ ಮರಣಾನಂತರವೇ ಯಶಸ್ಸನ್ನು ಕಾಣುವ ಕವಿಯೊಬ್ಬನ ಕಥೆಯ ಪ್ಯಾಸಾ ಇವೇ ಮೊದಲಾದ ಚಲನಚಿತ್ರಗಳು ಭಾರೀ ಯಶಸ್ಸನ್ನು ಕಂಡವು. ಈ ಮೇಲಿನ ೫ ಚಿತ್ರಗಳ ಪೈಕಿ ೩ ಚಿತ್ರಗಳಲ್ಲಿ ಗುರುದತ್ ಪ್ರಧಾನ ಭೂಮಿಕೆಯನ್ನು ವಹಿಸಿದ್ದರು.
೧೯೫೯ನೇ ಇಸವಿಯಲ್ಲಿ ಬಿಡುಗಡೆಯಾದ ಕಾಗಝ್ ಕೇ ಪೂಲ್ಚಿತ್ರವು ಗುರುದತ್ ಪಾಲಿಗೆ ತೀವ್ರ ನಿರಾಶಾದಾಯಕವಾಗಿತ್ತು. ಪ್ರಸಿದ್ಧ ನಿರ್ದೇಶಕನೊಬ್ಬ (ಗುರುದತ್ ಅಭಿನಯ)ಕಲಾವಿದೆಯೊಬ್ಬಳನ್ನು (ವಹೀದಾ ರೆಹಮಾನ್ ಅಭಿನಯ - ನಿಜ ಜೀವನದಲ್ಲೂ ಗುರುದತ್ ಈಕೆಯನ್ನು ಪ್ರೀತಿಸುತ್ತಿದ್ದರು)ಪ್ರೀತಿಸುವ ಕಥಾವಸ್ತುವುಳ್ಳ ಈ ಚಿತ್ರವನ್ನು ತಮ್ಮ ತನು ಮನ ಧನದಿಂದ ನಿರ್ಮಿಸಿದ್ದರು. ಈ ಚಿತ್ರವು ಗಲ್ಲ್ಲಾ ಪೆಟ್ಟಿಗೆಯಲ್ಲಿ ಅಪಾರ ಸೋಲನ್ನು ಕಂಡಿತು ಹಾಗೂ ಇದರಿಂದ ಗುರುದತ್ ಅಪಾರ ನಷ್ಟವನ್ನು ಅನುಭವಿಸಿದರು. ತನ್ನ ಹೆಸರು ಶಾಪಗ್ರಸ್ತವೆಂದು ಭಾವಿಸಿದ ಗುರುದತ್ ತಮ್ಮ ಕಂಪೆನಿಯಿಂದ ಹೊರ ಬಂದ ಎಲ್ಲಾ ಚಿತ್ರಗಳ ನಿರ್ದೇಶನವನ್ನು ಇತರ ನಿರ್ದೇಶಕರಿಂದ ಮಾಡಿಸಿದರು.
ಕೊನೆಯ ಚಿತ್ರಗಳು
[ಬದಲಾಯಿಸಿ]ಚೌದ್ವೀಕಾ ಚಾಂದ್ ಚಿತ್ರದಲ್ಲಿ ಗುರುದತ್ ಒತ್ತಾಯಪೂರ್ವಕವಾಗಿ ನಟಿಸಿದರು. ಈ ಚಿತ್ರವು ಬಹಳ ಯಶಸ್ಸನ್ನು ಕಂಡಿತು ಹಾಗೂ ಇವರ ಸ್ಟುಡಿಯೋವು ಪತನವಾಗುವಿದನ್ನು ತಡೆಗಟ್ಟಿತು. ಇವರ ಸಹಾಯಕನಾದ ಅಬ್ರಾರ್ ಅಲ್ವಿಯವರ ನಿರ್ದೇಶನದ ೧೯೬೨ನೇ ಇಸವಿಯಲ್ಲಿ ತೆರೆ ಕಂಡ್ ಸಾಹೇಬ್ ಬೀವಿ ಔರ್ ಗುಲಾಮ್ ಚಲನಚಿತ್ರದಲ್ಲಿಯೂ ಕೂಡಾ ಇವರು ನಟಿಸಿದರು. ಆ ಚಿತ್ರದಲ್ಲಿ ಗುರುದತ್ ಹೆಸರು ನಿರ್ದೇಶಕನಾಗಿ ಕಾಣಿಸಲಿಲ್ಲವಾದರೂ ಈ ಚಿತ್ರವನ್ನು ಪರೋಕ್ಷವಾಗಿ ಇವರೇ ನಿರ್ದೇಶಿಸಿದ್ದಾರೆಂದು ಅನೇಕ ಕಲಾವಿಮರ್ಶಕರು ಅಭಿಪ್ರಾಯ ಪಟ್ಟರು. ಈ ಚಿತ್ರವು ಗುರುದತ್ ಅಭಿನಯದ ಅತ್ಯಂತ ಕಲಾತ್ಮಕ ಹಾಗೂ ದುರಂತ ಕಥೆಯುಳ್ಳ ಚಿತ್ರವೆಂದು ಇಂದಿಗೂ ಪರಿಗಣಿಸಲ್ಪಡುತ್ತದೆ. ಆ ಚಿತ್ರದ ನಂತರ ಅಷ್ಟೇನೂ ಪ್ರಚಾರ ಪಡೆಯದ ಅನೇಕ ಚಿತ್ರಗಳಲ್ಲಿ ಗುರುದತ್ ಅಭಿನಯಿಸಿದರು.
ನಿಧನ
[ಬದಲಾಯಿಸಿ]ಅಕ್ಟೊಬರ್ ೧೦, ೧೯೬೪ರಂದು ಹಾಸಿಗೆಯ ಮೇಲೆ ಗುರುದತ್ ಮೃತದೇಹವು ಪತ್ತೆಯಾಯಿತು. ಅವರು ಮದ್ಯದಲ್ಲಿ ನಿದ್ರೆ ಗುಳಿಗೆಗಳನ್ನು ಬೆರೆಸಿ ಸೇವಿಸುತ್ತಿದ್ದರೆಂದು ಹೇಳುತ್ತಾರೆ. ಇವರ ಮರಣವು ಆತ್ಮಹತ್ಯೆಯೂ ಆಗಿರಬಹುದು ಅಥವಾ ಅತಿಯಾದ ಮದ್ಯಸೇವನೆಯ ಪರಿಣಾಮವೂ ಆಗಿರಬಹುದು.
ಅಕ್ಟೋಬರ್ ೨೦೦೪ರಲ್ಲಿ ನಡೆದ ಗುರುದತ್ ರವರ ಮರಣದ ೪೦ನೇ ವಾರ್ಷಿಕೋತ್ಸವದಂದು ಇಂಡಿಯ ಅಬ್ರೋಡ್ ಮಾಡಿದ ಸಂದರ್ಶನದಲ್ಲಿ ಗುರುದತ್ ರವರ ಪುತ್ರ ಅರುಣ್ ದತ್ ರವರು ಇದೊಂದು ಆಕಸ್ಮಿಕವೆಂದು ಅಭಿಪ್ರಾಯ ಸೂಚಿಸಿದರು. ಮರುದಿನ ನಟಿ ಮಾಲಾ ಸಿನ್ಹಾರವರನ್ನು ಬಹಾರೇ ಫಿರ್ ಆಯೇಂಗೀ ಚಿತ್ರದ ಸಲುವಾಗಿಯೂ ಹಾಗೂ ರಾಜ್ ಕಪೂರ್ ರವರನ್ನು ವರ್ಣ ಚಲನಚಿತ್ರಗಳನ್ನು ರಚಿಸುವ ಬಗ್ಗೆ ಭೇಟಯಾಗುವವರಿದ್ದರು. ಅರುಣ್ ರವರು ಹೇಳುವಂತೆ " ನನ್ನ ತಂದೆಯು ನಿದ್ರಾಹೀನತೆಯಿಂದ ಬಳಲುತ್ತಿದ್ದರು ಹಾಗೂ ಇತರರಂತೆ ನಿದ್ರೆ ಗುಳಿಗೆಗಳನ್ನು ಸೇವಿಸುತ್ತಿದ್ದರು. ಆ ದಿನ ಪಾನಮತ್ತರಾಗಿದ್ದ ಅವರು ಅತಿಯಾಗಿ ನಿದ್ರೆ ಗುಳಿಗೆಗಳನ್ನು ಸೇವಿಸಿದರು. ಇದೇ ಅವರ ಪ್ರಾಣಕ್ಕೆ ಕುತ್ತಾಯಿತು. ಅದೊಂದು ಮದ್ಯದ ಹಾಗೂ ನಿದ್ರೆಗುಳಿಗೆಗಳ ಮಾರಕ ಮಿಶ್ರಣವಾಗಿತ್ತು."
ಸಾಂಸಾರಿಕ ಬದುಕು
[ಬದಲಾಯಿಸಿ]೧೯೫೩ರಲ್ಲಿ ಗುರುದತ್ ಪ್ರಸಿದ್ಧ ಹಿನ್ನೆಲೆ ಗಾಯಕಿಯಾಗಿದ್ದ ಗೀತಾ ರೋಯ್ ಅವರನ್ನು ಲಗ್ನವಾದರು. ಇವರ ನಿಶ್ಚಿತಾರ್ಥವು ೩ ವರ್ಷಗಳ ಹಿಂದೆಯೇ ನಡೆದಿತ್ತು, ಹಾಗೂ ವಿವಾಹವಾಗಲು ಮನೆಯವರ ಬಹಳವಾದ ವಿರೋಧವನ್ನು ಎದುರಿಸಬೇಕಾಯಿತು. ಅವರಿಗೆ ತರುಣ್, ಅರುಣ್ ಹಾಗೂ ನೀನಾ ಎಂಬ ಮಕ್ಕಳಿದ್ದರು.
ದುರಾದೃಶ್ಟವಶಾತ್ ಇವರ ವೈವಾಹಿಕ ಜೀವನವು ದುರಂತವಾಗಿತ್ತು. ಇವರ ತಮ್ಮ ಆತ್ಮಾರಾಮ್ ಅವರು ಹೇಳುವಂತೆ "ಗುರುದತ್ ಕೆಲಸದ ವಿಷಯದಲ್ಲಿ ಎಷ್ಟು ಶಿಸ್ತಿನ ವ್ಯಕ್ತಿಯಾಗಿದ್ದರೋ, ವೈಯಕ್ತಿಕ ಜೀವನದಲ್ಲಿ ಅಷ್ಟೇ ಅಶಿಸ್ತಿನವರಾಗಿದ್ದರು." ಅವರು ಅತಿಯಾದ ಮದ್ಯಸೇವನೆ, ಧೂಮಪಾನ ಮಾಡುತ್ತಿದ್ದರು ಹಾಗೂ ವಿಷಮ ಗಳಿಗೆಗಳಲ್ಲಿ ಎಚ್ಚರವಾಗಿರುತ್ತಿದ್ದರು. ಅವರ ಮರಣ ಕಾಲದಲ್ಲಿ ಗೀತಾರವರಿಂದ ಬೇರ್ಪಟ್ಟು ಏಕಾಂಗಿಯಾಗಿ ಬದುಕುತ್ತಿದ್ದರು.
ಗುರುದತ್ ಕಾಣಿಕೆಗಳು
[ಬದಲಾಯಿಸಿ]ಗುರುದತ್ ರವರನ್ನು ಮೊದ ಮೊದಲು ಮೇರು ನಟನೆಂದು ನೆನೆದರೂ ಕಾಲಾನಂತರ ಅವರು ಓರ್ವ ಅತ್ಯುತ್ತಮ ನಿರ್ದೇಶಕರೆಂದೇ ಕರೆಯಲ್ಪಡುತ್ತಾರೆಂದು ಸ್ಪಷ್ಟವಾಯಿತು. ೧೯೭೩ರಲ್ಲಿ ಆರಂಭಿಸಿ, ಇವರ ಚಲನಚಿತ್ರಗಳನ್ನು ಭಾರತ ಹಾಗೂ ಪ್ರಪಂಚದಾದ್ಯಂತ ನಡೆದ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶಿಸಲಾಯಿತು. ಇವರ ಚಿತ್ರಗಳು ಸತ್ಯಜಿತ್ ರೇ ಅವರ ಚಿತ್ರಗಳನ್ನು ಮೆಚ್ಚಿದಂತಹ ಪ್ರೇಕ್ಷಕರ ಮೆಚ್ಚಿಗೆಗೆ ಪಾತ್ರವಾದವು. ಇವರ ಚಿತ್ರಗಳಲ್ಲಿನ ಹಾಡುಗಳ ಚಿತ್ರೀಕರಣ ಹಾಗೂ ಇವರ ಚಿತ್ರಗಳಲ್ಲಿ ಇವರು ಹೆಣೆದಿರುವ ವಿಭಿನ್ನ ಪಾತ್ರಗಳ ಮೂಲಕ ಇವರು ಭಾರತದ ಅನೇಕ ಸಾಮಾನ್ಯ ಪ್ರಜೆಯ ಹೃದಯದಲ್ಲಿ ನೆಲಿಸಿದ್ದಾರೆ.
ಆಯ್ದ ಚಲನಚಿತ್ರಗಳು
[ಬದಲಾಯಿಸಿ]ನಟನಾಗಿ
[ಬದಲಾಯಿಸಿ]- ಪಿಕ್ನಿಕ್ (೧೯೬೪)
- ಸಾಂಝ್ ಔರ್ ಸವೇರಾ (೧೯೬೪)
- ಸುಹಾಗನ್ (೧೯೬೪)
- ಬಹುರಾಣಿ (೧೯೬೩)
- ಭರೋಸಾ (೧೯೬೩)
- ಸಾಹಿಬ್ ಬೀವಿ ಔರ್ ಗುಲಾಮ್ (೧೯೬೨)
- ಸೌತೇಲಾ ಭಾಯೀ (೧೯೬೨)
- ಚೌದ್ವೀ ಕಾ ಚಾಂದ್ (೧೯೬೦)
- ಕಾಗಝ್ ಕೇ ಫೂಲ್ (೧೯೫೯)
- ೧೨ ಓ'ಕ್ಲಾಕ್ (೧೯೫೮)
- ಪ್ಯಾಸಾ (೧೯೫೭)
- ಮಿಸ್ಟರ್ ಆಂಡ್ ಮಿಸ್ಸೆಸ್ '೫೫ (೧೯೫೫)
- ಆರ್ ಪಾರ್ (೧೯೫೪)
- ಸುಹಾಗನ್ (೧೯೫೪)
- ಬಾಝ್ (೧೯೫೩)
- ಹಮ್ ಏಕ್ ಹೈ (೧೯೪೬)
ನಿರ್ದೇಶಕನಾಗಿ
[ಬದಲಾಯಿಸಿ]- ಕಾಗಝ್ ಕೇ ಫೂಲ್ (೧೯೫೯)
- ಪ್ಯಾಸಾ (೧೯೫೭)
- ಸೈಲಾಬ್ (೧೯೫೬)
- ಮಿಸ್ಟರ್ ಆಂಡ್ ಮಿಸ್ಸೆಸ್ '೫೫ (೧೯೫೫)
- ಬಾಝ್ (೧೯೫೩)
- ಜಾಲ್ (೧೯೫೨)
- ಬಾಝಿ (೧೯೫೧)
ಉಲ್ಲೇಖಗಳು
[ಬದಲಾಯಿಸಿ]- ಕಬೀರ್, ನಸ್ರೀನ್ ಮುನ್ನಿ, ಗುರುದತ್ : ಎ ಲೈಫ್ ಇನ್ ಸಿನೇಮಾ, ಆಕ್ಸ್ ಫರ್ಡ್ ಯೂನಿವರ್ಸಿಟಿ ಪ್ರೆಸ್ಸ್, ೧೯೯೭, ISBN 0-19-564274-0
- ಮಸ್ಸಿಲ್ಲೋ, ಹೆನ್ರಿ, Guru Dutt, un grand cinéaste encore pratiquement inconnu hors de l’Inde, Films sans Frontières, 1984