ಶಿವಕುಮಾರ್ ಬೇಗಾರ್
ಶಿವಕುಮಾರ್ ಬೇಗಾರ್ ಅವರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ|| ಕೋಟ ಶಿವರಾಮ ಕಾರಂತರಿಂದ ಯಕ್ಷಗಾನಕ್ಕೆ ಆಯ್ಕೆಗೊಂಡು, ರಾಜಧಾನಿ ಬೆಂಗಳೂರಿನಲ್ಲಿ 'ಗಾನ ಸೌರಭ ಯಕ್ಷಗಾನ ಶಾಲೆ'ಯನ್ನು ಆರಂಭಿಸಿ 'ಯಕ್ಷಗಾನಂ ವಿಶ್ವಗಾನಂ' ಎಂಬ ಧ್ಯೇಯ ವಾಕ್ಯದೊಂದಿಗೆ ಕಲಾಸಕ್ತರಿಗೆ ಯಕ್ಷಗಾನದ ಉಭಯ ಶೈಲಿಗಳಾದ ತೆಂಕು ಮತ್ತು ಬಡಗುತಿಟ್ಟುಗಳನ್ನು ಯಾವುದೇ ವಯೋಮಿತಿಯಿಲ್ಲದೆ, ಫಲಾಪೇಕ್ಷೆಯಿಲ್ಲದೆ ಕಲಿಸುತ್ತಿದ್ದಾರೆ.
ವೈಯಕ್ತಿಕ ಜೀವನ
[ಬದಲಾಯಿಸಿ]ಶಿವಕುಮಾರ್ ಬೇಗಾರ್ ಅವರು ೧೯೬೯ನೆಯ ಇಸವಿ ಜೂನ್ ೧ರಂದು ದನಗೊಡ್ತಿ, ಬೇಗಾರು, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆಯಲ್ಲಿ ಜನಿಸಿದರು. ಇವರ ತಂದೆ ಶ್ರೀ ಹಿರಿಯಣ್ಣ ಮತ್ತು ತಾಯಿ ಶ್ರೀಮತಿ ತುಂಗಮ್ಮ. ತಂದೆ ತಾಯಿಯರು ರೈತಾಪಿ ಜೀವನದಲ್ಲಿ ತೊಡಗಿಕೊಂಡಿದ್ದರು. ಬೇಗಾರ್ ಅವರು ೧ನೇ ತರಗತಿಯಿಂದ ೫ನೇ ತರಗತಿಯವರೆಗೆ ಬಿದರಗೋಡು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿದರು. ನಂತರ ೬ ಮತ್ತು ೭ನೇ ತರಗತಿಗಳನ್ನು ಬೇಗಾರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಧ್ಯಯನ ಮಾಡಿದರು. ಶಿವಕುಮಾರ್ ಬೇಗಾರ್ ಅವರು ೧೯ ನವೆಂಬರ್ ೧೯೯೫ ರಂದು ಶೋಭಾ. ಎಸ್ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇವರ ಮಕ್ಕಳು ಸೌರಭ ಕುಮಾರ್ ಬಿ.ಎಸ್ ಮತ್ತು ಗಾನ ಬಿ.ಎಸ್.
ರಂಗ ಜೀವನ
[ಬದಲಾಯಿಸಿ]೫ನೆಯ ತರಗತಿಯಲ್ಲಿ ಓದುತ್ತಿದ್ದಾಗ ಬಿದರಗೋಡು ಶ್ರೀ ರಾಮಾಂಜನೇಯ ಯಕ್ಷಗಾನ ಸಂಘದಲ್ಲಿ ಯಕ್ಷಗಾನದ ಬಗ್ಗೆ ಏನೂ ಅರಿವಿಲ್ಲದ ಬಾಲಕ, ಹೆಜ್ಜೆ ಗೊತ್ತಿಲ್ಲದೆ ಬಾಲಗೋಪಾಲ ಎಂಬ ಪೂರ್ವರಂಗ ನೃತ್ಯವನ್ನು ಮಾಡಿದ್ದರು. ಹೀಗೆ ಬೇಗಾರ್ ಅವರು ಯಕ್ಷಗಾನ ಕ್ಷೇತ್ರಕ್ಕೆ ಪ್ರವೇಶಿಸಿದರು. ೧೯೮೨ರಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಹಾಗೂ ಯಕ್ಷಗಾನ ಸಾಹಿತಿಗಳಾದ ಡಾ|| ಕೋಟ ಶಿವರಾಮ ಕಾರಂತರಿಂದ ಆಯ್ಕೆಯಾಗಿ ಒಂದು ವರ್ಷದ ಅವಧಿಗೆ 'ಯಕ್ಷಗಾನ ಕೇಂದ್ರ', ಎಂ.ಜಿ.ಎಂ ಕಾಲೇಜು ಹತ್ತಿರ, ಉಡುಪಿಯಲ್ಲಿ ಬಡಗುತಿಟ್ಟು ಯಕ್ಷಗಾನವನ್ನು ಹೆರಂಜಾಲು ವೆಂಕಟರಮಣರವರು, ನೀಲಾವರ ರಾಮಕೃಷ್ಣರಾಯರು, ಕೋಟ ಮಹಾಬಲ ಕಾರಂತರು - ಯಕ್ಷಗುರುಗಳ ಮಾರ್ಗದರ್ಶನದಲ್ಲಿ ಯಕ್ಷಗಾನವನ್ನು ಕಲಿತು ಮುಲ್ಕಿ ಶ್ರೀ ವೆಂಕಟರಮಣ ಕೃಪಾಪೋಷಿತ ಯಕ್ಷಗಾನ ಮೇಳದಲ್ಲಿ ಬಾಲ ಗೋಪಾಲರಾಗಿ ಸೇರಿದರು. ಅಲ್ಲಿಂದ ಶ್ರೀ ಕ್ಷೇತ್ರ ಕಮಲಶಿಲೆ ಎಂಬ ಪ್ರಸಿದ್ಧ ಯಕ್ಷಗಾನ ಮೇಳದಲ್ಲಿ ೪ ವರ್ಷಗಳ ಕಲಾ ಸೇವೆ ಸಲ್ಲಿಸಿದರು. ಬಳಿಕ 'ಶ್ರೀ ಅಮೃತೇಶ್ವರಿ ಮೇಳ'ದಲ್ಲಿ ೨ ವರ್ಷಗಳ ಕಾಲ ಕಾರ್ಯ ನಿರ್ವಹಿಸಿದರು. ನಂತರ ೧ ವರ್ಷ ಶ್ರೀ ಸೌಕೂರು ಮೇಳ ದಲ್ಲಿ ಪ್ರದರ್ಶನಗಳನ್ನು ನೀಡಿದರು.[೧][೨]
ಹೆಗ್ಗಡೆಯವರ ಸಾನಿಧ್ಯ
[ಬದಲಾಯಿಸಿ]ಈ ಎಲ್ಲ ಅನುಭವ ಮತ್ತು ಖ್ಯಾತಿಯ ಅನುಸಾರವಾಗಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರ ಅನುಗ್ರಹದಿಂದ ಶ್ರೀ ಡಿ. ಹರ್ಷೇಂದ್ರ ಕುಮಾರ್ ಅವರ ನೇತೃತ್ವದ 'ಶ್ರೀ ಧರ್ಮಸ್ಥಳ ಯಕ್ಷಗಾನ ಮೇಳ'ದಲ್ಲಿ ೧೨ ವರ್ಷಗಳ ಕಾಲ ಸೇವೆ ಸಲ್ಲಿಸಿದರು.[೩] ಈ ಸಮಯದಲ್ಲಿ ಶಿವಕುಮಾರ್ ಬೇಗಾರ್ ಅವರು 'ಪ್ರಮುಖ ಸ್ತ್ರೀ ವೇಷ ಪಾತ್ರಧಾರಿ' ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಧರ್ಮಸ್ಥಳ ಮೇಳದಿಂದ ನಿರ್ಗಮಿಸುವಾಗ 'ಅತ್ಯುತ್ತಮ ಕಲಾವಿದ' ಎಂದು ಇವರನ್ನು ಗೌರವಿಸಿದರು.
ಅಮೃತೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿ
[ಬದಲಾಯಿಸಿ]ಸಾಮಾನ್ಯವಾಗಿ ಮಳೆಗಾಲದಲ್ಲಿ ಹೆಚ್ಚು ಯಕ್ಷಗಾನ ಪ್ರದರ್ಶನಗಳು ನಡೆಯದ ಕಾರಣ, ಅಸಮಯ (off-season) ಎನ್ನಲಾಗುತ್ತದೆ.೧೯೮೫ರ ಮಳೆಗಾಲದಲ್ಲಿ ಶಿವಕುಮಾರ್ ಅವರು 'ಶ್ರೀ ಅಮೃತೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿ', ಕೋಟವನ್ನು ಕೆ.ಎಸ್. ಅಮೀನ್, ಎಂ. ಜಿ. ಕಾಂಚನ್ ಇವರ ಜೊತೆ ಸೇರಿ ಸ್ಥಾಪಿಸಿದರು. ಈ ಮೇಳದಿಂದ ಬೆಂಗಳೂರು, ಮೈಸೂರು, ಮಂಗಳೂರು, ಧಾರವಾಡ, ಉಡುಪಿ, ಸಿರ್ಸಿ, ಶಿವಮೊಗ್ಗ, ಬೀದರ್, ರಾಯಚೂರು, ಬೆಳಗಾವಿ, ಹುಬ್ಬಳ್ಳಿ, ಬಾಗಲಕೋಟೆ- ಹೀಗೆ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಹಾಗೂ ಹೈದರಾಬಾದ್, ಚೆನ್ನೈ, ಮುಂಬೈ, ಹೀಗೆ ದೇಶಾದ್ಯಂತ ಯಕ್ಷಗಾನ ಕಲಾವಿದರು, ಕಾರ್ಯಕ್ರಮ ಸಂಯೋಜಕರು ಮತ್ತು ನಿರ್ದೇಶಕರಾಗಿ ೧೦ ವರ್ಷಗಳ ಅವಧಿ ಪಾತ್ರ ನಿರ್ವಹಿಸಿದರು. ಶಿವಕುಮಾರ್ ಬೇಗಾರ್ ಅವರು ೧೯೯೨ರಲ್ಲಿ ದೆಹಲಿಯಲ್ಲಿ ನಡೆದ 'ಮೆರೋಲಿ ಸಾಂಸ್ಕೃತಿಕ ಉತ್ಸವ'ದಲ್ಲಿ , ಅಂದಿನ ವಾರ್ತಾ ಮತ್ತು ಪ್ರಚಾರ ಇಲಾಖೆಯ ಆಯುಕ್ತರಾದ ಶ್ರೀ ಎ.ಆರ್.ಚಂದ್ರಹಾಸ ಗುಪ್ತರ ಮಾರ್ಗದರ್ಶನದಲ್ಲಿ ಇವರ ನೇತೃತ್ವದ ಅಮೃತೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿಯು ಕರ್ನಾಟಕವನ್ನು ಪ್ರತಿನಿಧಿಸಿ, ಈ ಉತ್ಸವದಲ್ಲಿ ಪ್ರಥಮ ಬಹುಮಾನ ಗಳಿಸಿ, 'ಉತ್ತಮ ಕಲಾವಿದರು', ನಿರ್ದೇಶಕರು ಎಂಬ ಪ್ರಶಂಸೆಗೆ ಭಾಜನರಾದರು. ಈ ಸಂದರ್ಭದಲ್ಲಿ 'ದೆಹಲಿ ಕರ್ನಾಟಕ ಸಂಘ'ದಲ್ಲಿ ನಿರ್ದೇಶನದ ಜೊತೆಗೆ ಬಣ್ಣವನ್ನು ಸಹ ಹಚ್ಚಿದರು. +ಬೇಗಾರ್ ಅವರು ೨೦೦೩ರಲ್ಲಿ ರಾಜ್ಯದ ರಾಜಧಾನಿಯಾದ ಬೆಂಗಳೂರಿನಲ್ಲಿ ನೆಲೆಸಿದರು.
'ಗಾನ ಸೌರಭ'ದ ಉದಯ
[ಬದಲಾಯಿಸಿ]ಯಕ್ಷಗಾನ ಕಲೆಯನ್ನು ವಿಶ್ವಾದ್ಯಂತ ವಿಸ್ತಾರಗೊಳಿಸುವ ಮುಖ್ಯೋದ್ದೇಶದಿಂದ ಬೆಂಗಳೂರಿನಲ್ಲಿ 'ಗಾನ ಸೌರಭ ಯಕ್ಷ ಮೇಳ'ವನ್ನು ೨೦೦೩ರಲ್ಲಿ ಸ್ಥಾಪಿಸಿದರು. ಬೆಂಗಳೂರು ಸೇರಿ ಇತರೆ ಜಿಲ್ಲೆಗಳ ಹಲವಾರು ಸ್ಥಳಗಳಲ್ಲಿ ಈ ಮೇಳದ ವತಿಯಿಂದ ಯಕ್ಷಗಾನ ಪ್ರದರ್ಶನಗಳನ್ನು ನೀಡಿದರು. 'ಯಕ್ಷಗಾನಂ ವಿಶ್ವಗಾನಂ' ಎನ್ನುವ ಧ್ಯೇಯವನ್ನು ಮನಸ್ಸಿನಲ್ಲಿಟ್ಟುಕೊಂಡು ೨೦೦೪ರಲ್ಲಿ 'ಗಾನ ಸೌರಭ ಯಕ್ಷಗಾನ ಶಾಲೆ' ಎಂಬ ಯಕ್ಷ ಶಾಲೆಯನ್ನು ಆರಂಭಿಸಿದರು.[೪] ಶಾಲೆಯನ್ನು ಆರಂಭಿಸಿ ನೂರಾರು ವಿದ್ಯಾರ್ಥಿಗಳಿಗೆ ಯಕ್ಷಗಾನ ಕುರಿತು ವಿದ್ಯೆಯನ್ನು ನೀಡಿದ್ದು ಪ್ರಸ್ತುತ ಮುನ್ನೂರು ವಿದ್ಯಾರ್ಥಿಗಳಿಗೆ ತರಗತಿ ನೀಡುತ್ತಿದ್ದಾರೆ. ಹಿಮ್ಮೇಳದ ತರಗತಿಯನ್ನು ಕೂಡ ಈ ಶಾಲೆಯಿಂದ ನಡೆಸುತ್ತಿದ್ದಾರೆ.
ಯಕ್ಷಗಾನ ಶಾಲೆಯ ಆರಂಭ
[ಬದಲಾಯಿಸಿ]ಶಾಲೆಯನ್ನು ಆರಂಭಿಸಿ ನಿರಂತರ ೧೫ ವರ್ಷಗಳಿಂದ ಯಕ್ಷಗಾನದಲ್ಲಿ ದುಡಿದ ಕಲಾವಿದರಿಗೆ 'ಗಾನ ಸೌರಭ ಯಕ್ಷಗಾನ ಪುರಸ್ಕಾರ'ವನ್ನು , ಹವ್ಯಾಸಿ ಕಲಾವಿದರಿಗೆ 'ಯಕ್ಷಾಭಿವಂದನಂ ಪುರಸ್ಕಾರ'ವನ್ನು ಹಾಗೂ ಸಮಾಜದ ಗಣ್ಯರಿಗೆ 'ಕಲಾಪೋಷಕ ಪುರಸ್ಕಾರ'ವನ್ನು, ನೂರಾರು ಅಶಕ್ತ ಕಲಾವಿದರಿಗೆ ಸಹಾಯ ಧನವನ್ನು ನೀಡುವ ಸಂಸ್ಥೆ 'ಗಾನ ಸೌರಭ ಯಕ್ಷಗಾನ ಶಾಲೆ'ಯಾಗಿದೆ. ಈ ಶಾಲೆಯ ದಶಮಾನೋತ್ಸವ ೨೦೧೪ರಲ್ಲಿ 'ಯಕ್ಷಗಾನಂ ವಿಶ್ವಗಾನಂ' ಎಂಬ ಗ್ರಂಥದಲ್ಲಿ ದೇಶದಲ್ಲಿರುವ ಯಕ್ಷಗಾನ ಶಾಲೆ, ಸಂಘ, ಸಂಸ್ಥೆಗಳ ದಾಖಲೀಕರಣ ಮಾಡಿದ್ದಾರೆ.[೫] ಬೇಗಾರ್ ಅವರು ಮೈಸೂರಿನ 'ಕರಾವಳಿ ಯಕ್ಷಗಾನ ಕೇಂದ್ರ'ದಲ್ಲಿ ಆರಂಭದ ಗುರುಗಳಾಗಿ ತೆಂಕು ಮತ್ತು ಬಡಗುತಿಟ್ಟು ಯಕ್ಷಗಾನವನ್ನು ೨ ವರ್ಷ ಕಲಿಸಿದರು. 'ಸತ್ಯ ಸಾಯಿ ಲೋಕ ಸೇವಾ ಸಂಸ್ಥೆ', ಮುದ್ದೇನಹಳ್ಳಿ ಚಿಕ್ಕಬಳ್ಳಾಪುರದಲ್ಲಿ ೧೦ ವರ್ಷಗಳಿಂದ ಯಕ್ಷಗಾನ ತರಗತಿಗಳನ್ನು ನಡೆಸುತ್ತಿದ್ದಾರೆ.[೬] ಬೆಂಗಳೂರಿನ ಬಂಟರ ಸಂಘದಲ್ಲಿ ೧೨ ವರ್ಷಗಳಿಂದ ಯಕ್ಷಗಾನ ಕಲಿಸುತ್ತಿದ್ದಾರೆ. ಹಿಂದೂ ಸೇವಾ ಪ್ರತಿಷ್ಠಾನ, ಉಲ್ಲಾಳದ ನಿವೇದಿತ ನೆಲೆಯಲ್ಲಿ ಯಕ್ಷಗಾನ ಗುರುಗಳಾಗಿದ್ದಾರೆ. ಆಕಾಶವಾಣಿಯಲ್ಲಿ ತಾಳ ಮದ್ದಳೆಯ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ.
ಬಣ್ಣದ ಸಾಧನೆ
[ಬದಲಾಯಿಸಿ]ಶಿವಕುಮಾರ್ ಬೇಗಾರ್ ಅವರು ಮುಖ್ಯ ಸ್ತ್ರೀ ವೇಷ ಪಾತ್ರಧಾರಿಯಾಗಿದ್ದು , ಅವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟ ಪಾತ್ರಗಳು 'ಶ್ರೀ ದೇವಿ ಮಹಾತ್ಮೆ' ಪ್ರಸಂಗದ ದೇವಿ, 'ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ'ಯ ಅಮ್ಮು ಬಲ್ಲಾಳ್ತಿ, 'ಕೀಚಕ ವಧೆ'ಯ ದ್ರೌಪದಿ, 'ಸತ್ಯವಾನ ಸಾವಿತ್ರಿ'ಯ ಸಾವಿತ್ರಿ, 'ನಳ ದಮಯಂತಿ'ಯ ದಮಯಂತಿ, 'ಸತ್ಯ ಹರಿಶ್ಚಂದ್ರ'ದ ಚಂದ್ರಮತಿ, 'ಶಶಿಪ್ರಭಾ ಪರಿಣಯ'ದ ಶಶಿಪ್ರಭೆ, 'ಭಸ್ಮಾಸುರ ಮೋಹಿನಿ'ಯ ಮೋಹಿನಿ ಮತ್ತು ವಿವಿಧ ಪ್ರಸಂಗಗಳಲ್ಲಿ ಮೇನಕೆ, ಮಾಯಾ ಶೂರ್ಪನಖಿ, ಸತ್ಯಭಾಮೆ, ರುಕ್ಮಿಣಿ, ತಾರವಳಿ, ರತ್ನಾವಳಿ, ಭ್ರಮರಕುಂತಳೆ, ಶ್ರೀ ಬನಶಂಕರಿ , ಚಿತ್ರಾವತಿ, ಭೂದೇವಿ, ಇತ್ಯಾದಿ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಪುರುಷ ಪಾತ್ರಗಳಾದ ಶ್ರೀ ಕೃಷ್ಣ,ಈಶ್ವರ,ಶ್ರೀ ರಾಮ, ನಾರದ, ಭೀಷ್ಮ, ಅಕ್ರೂರ, ಸಂಜಯ, ವಿದುರ ಇತ್ಯಾದಿಗಳಲ್ಲಿ ಅಭಿನಯಿಸಿದ್ದಾರೆ. 'ಶಿರಡಿ ಸಾಯಿಬಾಬ' ಪ್ರಸಂಗದ ಸಾಯಿ ಬಾಬ ಪಾತ್ರವನ್ನು ಅಭಿನಯಿಸಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಶಿವಕುಮಾರ್ ಬೇಗಾರ್ ಅವರು ದೂರದರ್ಶನದಲ್ಲಿ ೬ ಯಕ್ಷಗಾನ ಧಾರಾವಾಹಿಗಳಲ್ಲಿ ಪ್ರದರ್ಶಿಸಿದ್ದಾರೆ.
ಸುತ್ತ ಮುತ್ತಲಿನ ಆಗು ಹೋಗುಗಳನ್ನು ಯಕ್ಷಗಾನ ಪ್ರಸಂಗಗಳಲ್ಲಿ ಬಳಸಿಕೊಳ್ಳುತ್ತಾರೆ. ಉದಾಹರಣೆಗೆ, ೨೦೧೩ರಲ್ಲಿ ಮಂಗಳ ಯಾನದ ಕುರಿತು ಪ್ರಸಂಗವನ್ನು ರಚಿಸಿ, ಇಸ್ರೋ ಸಂಸ್ಥೆಯ ವಿಜ್ಞಾನಿಗಳಿಗೆ ಕಲಿಸಿ, ಅವರಿಂದ ಪ್ರದರ್ಶನವನ್ನು ನೀಡಿ, ಅಂದಿನ ಇಸ್ರೋ ಅಧ್ಯಕ್ಷರಾದ ಡಾ|| ರಾಧಾಕೃಷ್ಣನ್ ಅವರ ಮೆಚ್ಚುಗೆಗೆ ಪಾತ್ರರಾದರು. ಪರಿಸರದ ಬಗ್ಗೆ ಕಾಳಜಿ ಹೊಂದಿರುವ ಇವರು, 'ಪರಿಸರ' ಎಂಬ ಪ್ರಸಂಗವನ್ನು ರಚಿಸಿ ಹಲವಾರು ಪ್ರದರ್ಶನಗಳನ್ನು ನೀಡಿ ಸಾರ್ವಜನಿಕರಿಗೆ ಪರಿಸರದ ಬಗ್ಗೆ ಅರಿವನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ
ಫೆಬ್ರವರಿ ೧೧, ೨೦೨೦ರಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ೨೦೨೦-೨೧ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ, ಸರ್ವ ಅಕಾಡೆಮಿ ಅಧ್ಯಕ್ಷರು ಹಾಗೂ ಶ್ರೇಷ್ಠ ಸಾಹಿತಿಗಳ ಸಭೆಯಲ್ಲಿ ಯಕ್ಷಗಾನ ಕಲಾವಿದರ ಪರವಾಗಿ ಅಕಾಡೆಮಿಯ ಅಧ್ಯಕ್ಷರಾದ ಎಂ.ಎ. ಹೆಗಡೆಯವರ ಸೂಚನೆಯ ಮೇರೆಗೆ ಡಾ. ಶಿವಕುಮಾರ್ ಬೇಗಾರ್ ಅವರು ಭಾಗವಹಿಸಿದರು. ಈ ಸಭೆಯಲ್ಲಿ ಬೇಗಾರ್ ಅವರು ಹಲವಾರು ಮನವಿಗಳನ್ನು ಮಂಡಿಸಿದರು. ಅವುಗಳಲ್ಲಿ ಪ್ರಮುಖವಾದವು - ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ ವಿವಿಧ ಪ್ರಶಸ್ತಿಗಳಲ್ಲಿ ಯಕ್ಷಗಾನ ಕಲಾವಿದರನ್ನು ಪರಿಗಣಿಸಬೇಕು ; ಕನ್ನಡವನ್ನು ಉಳಿಸಿ ಬೆಳೆಸುವ ಕಲೆ ರಾಜ್ಯದ ಕಲೆಯಾಗಬೇಕು ಮತ್ತು ಬೆಂಗಳೂರಿನಲ್ಲಿ ಯಕ್ಷಗಾನಕ್ಕಾಗಿ ರಂಗಮಂದಿರ ಬೇಕು; ಹೆಚ್ಚಿನ ಕಲಾವಿದರಿಗೆ ಮಾಶಾಸನ ನೀಡಬೇಕು; ಬೆಂಗಳೂರಿನಲ್ಲಿರುವ ಉದ್ಯಾನವನ ಮತ್ತು ಹಲವೆಡೆ ಇರುವ ಸಣ್ಣ ರಂಗಮಂದಿರಗಳಲ್ಲಿ ಯಕ್ಷಗಾನ ತಂಡಕ್ಕೆ ಅವಕಾಶ ಮಾಡಿಕೊಡಬೇಕು; ಶಾಲೆಗಳಲ್ಲಿ ಯಕ್ಷಗಾನ ಪಠ್ಯವಾಗಬೇಕು - ಹೀಗೆ ರಾಜ ಕಲೆಯ ಅಭಿವೃದ್ಧಿಯನ್ನು ಉದ್ದೇಶಿಸಿ ಹಲವು ಕ್ರಮಗಳನ್ನು ಸೂಚಿಸಿದರು.
ಪ್ರಶಸ್ತಿ ಮತ್ತು ಪುರಸ್ಕಾರಗಳು
[ಬದಲಾಯಿಸಿ]ಬೇಗಾರ್ ಅವರಿಗೆ ಬಿ.ಬಿ.ಎಂ.ಪಿ ನೀಡುವ 'ನಾಡ ಪ್ರಭು ಕೆಂಪೇಗೌಡ ಪ್ರಶಸ್ತಿ'ಗೆ ಏಪ್ರಿಲ್ ೪, ೨೦೧೫ರಂದು ಭಾಜನರಾಗಿದ್ದಾರೆ. ಆಗಸ್ಟ್ ೮,೨೦೧೬ರಂದು ಇಂಡಿಯನ್ ವರ್ಚುವಲ್ ಯೂನಿವರ್ಸಿಟಿ ಫಾರ್ ಪೀಸ್ ಅಂಡ್ ಎಜುಕೇಷನ್ ಅವರಿಂದ ಗೌರವಾನ್ವಿತ ಡಾಕ್ಟ ರೇಟ್ ಪುರಸ್ಕಾರವನ್ನು ಪಡೆದಿದ್ದಾರೆ. ಇವರಿಗೆ ದೊರಕಿರುವ ಮುಂತಾದ ಪ್ರಶಸ್ತಿಗಳ ಪಟ್ಟಿ ಹೀಗಿದೆ :
- ೧೧.೦೮.೧೯೯೨ - ದಕ್ಷಿಣ ಕನ್ನಡದಲ್ಲಿ 'ಕರಾವಳಿ ಉತ್ಸವ ಪ್ರಶಸ್ತಿ'
- ೧೧.೧೦.೧೯೯೨ ಹೊಸ ದಿಲ್ಲಿಯಲ್ಲಿ 'ಫೂಲ್ ವಾಲೋಂಕಿ ಚ್ವೇರ್' ರಾಷ್ಟ್ರೀಯ ಪ್ರಶಸ್ತಿ
- ೭.೦೭.೧೯೯೩ - 'ಕೋಟ ವಾಹಿನಿ ಯುವಕ ಮಂಡಳಿಯ ಪುರಸ್ಕಾರ' ಕೋಟ ವಾಹಿನಿ ಯುವಕ ಮಂಡಳಿ
- ೧೦.೦೮.೧೯೯೫ - 'ಚತುರ ಸಂಘಟಕ' , ಬೆಂಗಳೂರು
- ೦೯.೦೭.೨೦೦೪ -'ಕಲಾ ಭೂಷಣ', ಬಾಲ ಕಲಾ ಕೇಂದ್ರ , ಬೆಂಗಳೂರು
- ೦೩.೦೬.೨೦೦೪ - ' ಅಭಿನಂದನೆ ' ಮೊಗವೀರ್ ಸಮಾಜ, ಉಡುಪಿ.
- ೧೮.೦೯.೨೦೦೫ - ' ಕಲಾ ಮಂಟಪ ಕೌಮುದಿ ' , ಶೇಷಾದ್ರಿಪುರಂ , ಬೆಂಗಳೂರು.
- ೩೦.೧೦.೨೦೦೬ - ' ಪುಷ್ಪಾಂಜಲಿ ಪ್ರಶಸ್ತಿ ' , ಪುಷ್ಪಾಂಜಲಿ ನಗೆ ಕೂಟ.
- ೦೫-೦೩-೨೦೦೮ - 'ಸಂಕ್ರಾಂತಿ ಕಲಾ ಸೌರಭ' , ಕೊಡಗು ಗಣೇಶ ಸಂಸ್ಥೆ , ಬೆಂಗಳೂರು
- ೩೧.೧೦.೨೦೧೦ - 'ಕಾವ್ಯ ಗಾನ ಗಂಧರ್ವ' , ಕಾವ್ಯ ಸಿಂಚನ, ಬೆಂಗಳೂರು.
- ೨೦.೧೧.೨೦೧೦ - 'ಅಭಿನಂದನೆ' ಕ್ಯಾಥೆಡ್ರಲ್ ಕನ್ನಡ ಸಂಘ, ಬೆಂಗಳೂರು
- ೧೦.೦೮.೨೦೧೧ - 'ಸನ್ಮಾನ'- ಬಾಲ ಕಲಾ ವೃಂದ, ಬೆಂಗಳೂರು
- ೨೭.೧೧.೨೦೧೧ -'ಯಕ್ಷಗಾನ ಸಂಭ್ರಮ ಪುರಸ್ಕಾರ', ಶ್ರೀ ರಾಮ ಕಲಾ ಸಂಘ, ಬೆಂಗಳೂರು
- ೧೫.೦೧.೨೦೧೨ - 'ಯಕ್ಷ ಅವಧಾನಿ', ಹೆಗ್ಗಡೆ ಸೇವಾ ಸಂಘ, ಬೆಂಗಳೂರು
- ೩೦.೦೧.೨೦೧೨ - 'ಯಕ್ಷ ಕುಟೀರ ಮುಮ್ಮೇಳ ಸಾಧಕ ಪ್ರಶಸ್ತಿ', ಬೆಂಗಳೂರು
- ೨೪.೦೪.೨೦೧೩ - 'ಅಭಿನಂದನೆ', ಅಮೃತ ಸದನ ವಾಮಂಜೂರು, ಮಂಗಳೂರು
- ೧೨.೦೧.೨೦೧೪ - 'ಕಾಳಿಂಗ ನಾವುಡ ಸ್ಮಾರಕ ಯುವ ರಂಗ ಸನ್ಮಾನ', ಶೃಂಗೇರಿ
- ೧೫.೦೫.೨೦೧೪ - 'ಯಕ್ಷಕನ್ನಿಕೆ ಪುರಸ್ಕಾರ', ಮಹಾಗಣಪತಿ ದೇವಾಲಯ, ಬೇಗಾರು
- ೦೮.೦೨.೨೦೧೫ - 'ಕರ್ನಾಟಕ ಕಲಾ ಸಂಪದ ದಂಪತಿ ಪುರಸ್ಕಾರ', ಬೆಂಗಳೂರು.
- ೧೩.೧೨.೨೦೧೫- 'ತುಳುನಾಡ ಬೊಳ್ಳಿ' , ಸೃಷ್ಟಿ ಕಲಾಭೂಮಿ, ಬೆಂಗಳೂರು
- ೦೬.೦೧.೨೦೧೬ - 'ಬಸವರತ್ನ ರಾಷ್ಟ್ರೀಯ ಪ್ರಶಸ್ತಿ' , ಬಸವೇಶ್ವರ ಕರ್ಮವೀರ ವೇದಿಕೆ, ವಿಜಯಪುರ
- ೦೬.೧೧.೨೦೧೬ - 'ಅಭಿನಂದನೆ', ರಜತ ಮಹೋತ್ಸವ, ಬಂಟರ ಸಂಘ ಆರ್ ಎನ್ ಎಸ್ ವಿದ್ಯಾನಿಕೇತನ್, ಬೆಂಗಳೂರು..
- ೦೭.೦೧.೨೦೧೭ - 'ಯಕ್ಷ ಗೌರವ' ಕೊಕ್ಕರ್ಣೆ ಯಕ್ಷ ಸಂಭ್ರಮ, ಶ್ರೀ ಕಪ್ಪಣ್ಣ ಯಕ್ಷ ಬಳಗ, ಮೊಗವೀರಪೇಟೆ
- ೨೧.೦೧.೨೦೧೭ - 'ಹಾದಿಗಲ್ಲು ಮೇಳ ದಶಮಾನೋತ್ಸವ ಪ್ರಶಸ್ತಿ', ನಡುವಿನ ಮನೆ ಸಂಸ್ಥಾನ, ತೀರ್ಥಹಳ್ಳಿ.
- ೧೮.೦೩.೨೦೧೭ -'ಅಭಿನಂದನೆ', ಪೂರ್ಣಪ್ರಜ್ಞ ಯಕ್ಷ ಕಲಾ ಕೇಂದ್ರ ರಿ. ಅಂಬಲಪಾಡಿ
- ೦೫.೦೯.೨೦೧೭ - 'ಸನ್ಮಾನ', ಎ.ವಿ.ಎಸ್.ಎನ್ ಗ್ರೂಪ್, ಗಾಂಧಿ ಬಜಾರ್, ಬೆಂಗಳೂರು
- ೨೪.೧೦.೨೦೧೭- 'ಅಭಿನಂದನೆ', ಸಾಯಿಗಂಗೋತ್ರಿ, ಉಲ್ಲಾಳ ಬೆಂಗಳೂರು
- ೧೭.೧೨.೨೦೧೭ - 'ಇಶುಧಿ ವಿಂಶತಿ ಪುರಸ್ಕಾರ', ಇಶುಧಿ ಮಾಸ ಪತ್ರಿಕೆ, ಬೆಂಗಳೂರು
- ೨೫.೧೨.೨೦೧೭ - 'ಅಭಿನಂದನೆ', ಯಕ್ಷ ವೈಭವ, ದಶಮಾನೋತ್ಸವ, ಬಂಟರಸಂಘ ಯಕ್ಷಗಾನ ಸಮಿತಿ, ಬೆಂಗಳೂರು
- ೨೬.೦೩.೨೦೧೯- 'ಯಕ್ಷರಂಗೋತ್ಸವ ಪುರಸ್ಕಾರ ೨೦೧೯', ಯಕ್ಷರಂಗದ ಮಾಸ ಪತ್ರಿಕೆ ಕಡತೋಕ , ಉತ್ತರ ಕನ್ನಡ
- ೧೪.೦೫.೨೦೧೯- 'ಶ್ರೀ ರಾಮ ವಿಠಲ ಪ್ರಶಸ್ತಿ', ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿಯ ಅನುಗ್ರಹದಿಂದ, ಶ್ರೀ ಪೇಜಾವರ ಅಧೋಕ್ಷಜ ಮಠ, ಉಡುಪಿ
- ೧೯.೦೧.೨೦೨೦- 'ಸುವರ್ಣ ಮಹೋತ್ಸವ ಸನ್ಮಾನ', ಬಿ.ಐ.ಎಲ್ ದಕ್ಷಿಣ ಕನ್ನಡಿಗರ ಸಂಘ
ರಾಮಾಯಣ ಧಾರಾವಾಹಿಯನ್ನು ನಿರ್ದೇಶಿಸಿದ ಶ್ರೀ ರಮಾನಂದ ಸಾಗರ್ ಅವರಿಂದ, ಗೌ||ಡಾ||ಡಿ. ವೀರೇಂದ್ರ ಹೆಗ್ಗಡೆರವರಿಂದ, ಪೇಜಾವರ ಮಠದ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿಗಳಿಂದ, ಶ್ರೀ ಕೇಶವಾನಂದ ಭಾರತೀ ಸ್ವಾಮಿಗಳಿಂದ, ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳಿಂದ, ಡಾ|| ಪದ್ಮಾ ಸುಬ್ರಹ್ಮಣ್ಯಂ ಅವರಿಂದ, ಶತಾವಧಾನಿ ಆರ್ ಗಣೇಶ್ ಅವರಿಂದ ಹಾಗೂ ಹಲವಾರು ಕಲಾಭಿಮಾನಿಗಳ ಮತ್ತು ಕಲಾಪೋಷಕರ ಪ್ರಶಂಸೆಗೆ ಶಿವಕುಮಾರ್ ಬೇಗಾರ್ ಅವರು ಪಾತ್ರರಾಗಿದ್ದಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ https://www.google.com/search?q=dharmasthala+kshetra+mahatme+yakshagana+&sca_esv=4997d9601951f80e&biw=1920&bih=922&tbm=nws&sxsrf=ADLYWILvEOTX1b42Pz-7r4DEECBsfycfwQ%3A1727846286573&ei=jtf8ZuDiIru8seMPl7ahCQ&ved=0ahUKEwjg4YyB-e6IAxU7XmwGHRdbKAEQ4dUDCA0&uact=5&oq=dharmasthala+kshetra+mahatme+yakshagana+&gs_lp=Egxnd3Mtd2l6LW5ld3MiKGRoYXJtYXN0aGFsYSBrc2hldHJhIG1haGF0bWUgeWFrc2hhZ2FuYSAyBRAAGIAEMgYQABgWGB4yCxAAGIAEGIYDGIoFMgsQABiABBiGAxiKBTILEAAYgAQYhgMYigUyCxAAGIAEGIYDGIoFMgsQABiABBiGAxiKBUiTDlDeAljeAnAAeACQAQCYAYUCoAHuA6oBAzItMrgBA8gBAPgBAZgCAaAC-gGYAwCIBgGSBwMyLTGgB6IH&sclient=gws-wiz-news
- ↑ https://www.thehindu.com/entertainment/dance/will-the-city-be-a-home/article23601167.ece
- ↑ https://www.mangaloretoday.com/main/Dharmastala-Yakshagana-Shows-to-be-shorter-to-kindle-new-audience.html
- ↑ https://www.thehindu.com/entertainment/dance/will-the-city-be-a-home/article23601167.ece
- ↑ https://www.thehindu.com/entertainment/dance/will-the-city-be-a-home/article23601167.ece
- ↑ https://www.thehindu.com/entertainment/dance/will-the-city-be-a-home/article23601167.ece