ವಿಷಯಕ್ಕೆ ಹೋಗು

ಗಣಿ ಅಪಘಾತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಣಿ ಅಪಘಾತ ಎನ್ನುವುದು ಕೈಗಾರಿಕಾ ಅಪಘಾತಗಳಲ್ಲೆಲ್ಲ ಅತ್ಯಂತ ಅಪಾಯಕಾರಿಯೂ ತೀವ್ರ ಸ್ವರೂಪದ್ದೂ ಆದ ಗಣಿಗಳಲ್ಲಿಯ ಅಪಘಾತ. ಇದಕ್ಕೆ ಈ ಕೈಗಾರಿಕೆಯ ಸ್ವರೂಪವೇ ಮುಖ್ಯವಾದ ಕಾರಣ. ಗಣಿಗಾರಿಕೆಯಲ್ಲಿ ಅಪಘಾತದಿಂದ ಮೃತರಾಗುವವರ ಸಂಖ್ಯೆ ಕೂಡ ಇತರ ಕೈಗಾರಿಕೆಗಳಿಗೆ ಹೋಲಿಸಿದರೆ ಹೆಚ್ಚು. ನೆಲದಡಿಯಲ್ಲಿರುವ ಅದುರು ತೆಗೆಯುವ ಕೆಲಸದಲ್ಲಿ ತೊಡಗಿದಾಗ ಅನಿರೀಕ್ಷಿತವಾದ ಅಪಾಯಗಳು ಬಂದೊದಗುವುದು ಸಹಜ. ಅಪಘಾತದ ಸ್ವರೂಪ ಗಣಿಯಿಂದ ಗಣಿಗೆ ಭಿನ್ನವಾಗಿರುತ್ತದೆ. ಸ್ಫೋಟ, ಮಣ್ಣಿನ ಕುಸಿತ, ಮೇಲಿನಿಂದ ಭಾರವಾದ ವಸ್ತುವಿನ ಪತನ-ಇಂಥ ಅಪಘಾತಗಳಿಗೆ ಕಾರ್ಮಿಕರು ಈಡಾಗಬೇಕಾಗುತ್ತದೆ. ಗಣಿ ಅನಾಹುತ ಎಂದರೆ ಐದು ಅಥವಾ ಹೆಚ್ಚು ಸಾವುಗಳು ಆಗಿರುವ ಘಟನೆ.[] ಎಪ್ರಿಲ್ ೨೬, ೧೯೪೨ರಂದು ಚೀನಾದ ಬೆನ್‍ಕ್ಸಿಹು ಕಲ್ಲಿದ್ದಲು ಗಣಿಯಲ್ಲಿ ಕಲ್ಲಿದ್ದಲು ಧೂಳಿನ ಸ್ಫೋಟದಿಂದ ೧,೫೦೦ ಕ್ಕಿಂತ ಹೆಚ್ಚು ಜನರು ಮರಣಿಸಿದರು. ಇದು ಇತಿಹಾಸದಲ್ಲಿನ ಅತ್ಯಂತ ಕೆಟ್ಟ ಗಣಿ ಅನಾಹುತ ಎಂದು ನಂಬಲಾಗಿದೆ.[]

ಗಣಿ ಅಪಘಾತಗಳಿಗೆ ಕೆಲವು ಕಾರಣಗಳೆಂದರೆ ಹೈಡ್ರೋಜನ್ ಸಲ್ಫೈಡ್‍ನಂತಹ[] ವಿಷಕಾರಿ ಅನಿಲಗಳ ಅಥವಾ ಫ಼ಾಯರ್‌ಡ್ಯಾಂಪ್ ಅಥವಾ ಮೀಥೇನ್‍ನಂತಹ[] ಸ್ಫೋಟಕ ನಿಸರ್ಗಾನಿಲಗಳ ಸೋರಿಕೆ, ಧೂಳು ಸ್ಫೋಟಗಳು, ಪ್ರವಾಹ ಇತ್ಯಾದಿ.

ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳು

[ಬದಲಾಯಿಸಿ]

ಗಣಿಗಾರಿಕೆಯಲ್ಲಿ ಅಪಘಾತಗಳ ಸಾಧ್ಯತೆ ಹೆಚ್ಚಾಗಿರುವುದರಿಂದ ಇತರ ಕೈಗಾರಿಕೆಗಳಿಗಿಂತ ಇದರಲ್ಲಿ ಇವುಗಳ ವಿರುದ್ಧ ಹೆಚ್ಚಿನ ರಕ್ಷಣೆಯನ್ನೊದಗಿಸುವುದು ಅತ್ಯಂತ ಅವಶ್ಯಕ. ಎಲ್ಲ ರಾಷ್ಟ್ರಗಳೂ ಗಣಿ ಕಾನೂನುಗಳ ಮೂಲಕ ಅಪಘಾತಗಳ ವಿರುದ್ಧ ಕಾರ್ಮಿಕನಿಗೆ ರಕ್ಷಣೆಯನ್ನೊದಗಿಸುತ್ತಿವೆ. ಗಣಿಗಳಲ್ಲಿ ಅಪಘಾತ ನಡೆಯದಂತೆ ವಿಶೇಷವಾದ ಎಚ್ಚರಿಕೆ ವಹಿಸುವುದು ಅಗತ್ಯ. ಗಣಿಯೊಳಗೆ ಉತ್ತಮವಾದ ಬೆಳಕಿರುವಂತೆ ನೋಡಿಕೊಳ್ಳುವುದು, ಆಸ್ಫೋಟಕಗಳನ್ನು ಎಚ್ಚರಿಕೆಯಿಂದ ಉಪಯೋಗಿಸುವುದು, ಗಣಿ ಉತ್ಪಾದಿತ ವಸ್ತುಗಳನ್ನು ಜಾಗರೂಕತೆಯಿಂದ ಮೇಲಕ್ಕೆ ಸಾಗಿಸುವುದು, ಶೋಧಪ್ರದೇಶಗಳನ್ನು ಉತ್ತಮವಾಗಿಟ್ಟಿರುವುದು- ಈ ಕ್ರಮಗಳನ್ನು ಪ್ರತಿಯೊಂದು ಗಣಿಯಲ್ಲೂ ಅನುಸರಿಸಬೇಕಾಗುತ್ತದೆ. ಎಷ್ಟೇ ಎಚ್ಚರಿಕೆಯಿಂದಿದ್ದರೂ ಅಪಘಾತಗಳು ಸಂಭವಿಸುವುದರಿಂದ ಅವಕ್ಕೆ ಈಡಾದವರಿಗೆ ಕಾನೂನಿನ ಮೂಲಕ ಪರಿಹಾರ ದೊರಕಿಸಿಕೊಡಲಾಗುತ್ತದೆ. ಗಣಿ ಅಪಘಾತಗಳು ಮತ್ತು ಅವುಗಳ ಪರಿಣಾಮವಾಗಿ ಉಂಟಾಗುವ ಸಾವು, ಹಾನಿ ಇವುಗಳ ಬಗ್ಗೆ ಪ್ರತಿಯೊಂದು ರಾಷ್ಟ್ರದಲ್ಲೂ ಕರಾರುವಾಕ್ಕಾದ ಅಂಕೆ ಅಂಶಗಳನ್ನು, ಅಪಘಾತದ ವಿರುದ್ಧ ರಕ್ಷಣೆ ದೊರಕಿಸಿಕೊಡುವ ಉದ್ದೇಶದಿಂದ, ಸಂಗ್ರಹಿಸಲಾಗುತ್ತಿದೆ.

ಅಂಕಿ ಅಂಶಗಳು

[ಬದಲಾಯಿಸಿ]

1956-1968ರಲ್ಲಿ ಭಾರತದಲ್ಲಿ ಸಂಭವಿಸಿದ ಗಣಿ ಅಪಘಾತಗಳನ್ನು ಕುರಿತ ವಿವರ ಈ ರೀತಿ ಇದೆ:

ವರ್ಷ ಅಪಘಾತಗಳ ಸಂಖ್ಯೆ ಕಾರ್ಮಿಕರ ಸಂಖ್ಯೆ ಪ್ರತಿ 1000

ಉದ್ಯೋಗಸ್ಧರಿಗೆ ಮರಣ ದರ

ಪ್ರಾಣಾಪಾಯ ತೀವ್ರ ಅಪಾಯ ಮೃತರಾದವರು ತೀವ್ರವಾಗಿ ಗಾಯಗೊಂಡವರು
1956 262 4138 335 4281 0.53
1961 289 5038 344 5173 0.51
1962 317 4828 368 4945 0.54
1963 286 3982 344 4110 0.49
1964 251 3266 287 3371 0.42
1965 246 3192 547 3298 0.79
1966 269 3096 319 3210 0.45
1967 259 2741 293 2837 0.43
1968 283 2611 337 2708 0.52

ಮೇಲಿನ ಅಂಕೆ ಅಂಶಗಳಿಂದ ವ್ಯಕ್ತವಾಗುವಂತೆ ಅನೇಕ ಸುರಕ್ಷಣೆಯ ಕ್ರಮಗಳಿಂದಾಗಿ ಗಣಿ ಅಪಘಾತದಿಂದ ತೀವ್ರವಾಗಿ ಅಪಾಯಕ್ಕೀಡಾಗುವವರ ಸಂಖ್ಯೆ ಕಡಿಮೆಯಾಗುತ್ತ ಬಂದಿದೆ. ಭಾರತದಲ್ಲಿ ಕಲ್ಲಿದ್ದಲು ಗಣಿಗಳಲ್ಲಿ ಅತ್ಯಂತ ಹೆಚ್ಚಿನ ಅಪಘಾತಗಳು ನಡೆಯುತ್ತವೆ. ಚಾವಣಿ ಕುಸಿತ ಹೆಚ್ಚಿನ ಅಪಘಾತಗಳಿಗೆ ಕಾರಣವಾಗಿದೆ. ಅನಂತರದ ಕಾರಣಗಳೆಂದರೆ ಆಸ್ಫೋಟನೆಗಳು, ಗಣಿಯ ಒಳಗಣ ಸಾರಿಗೆ ಅಪಘಾತಗಳು, ವಿದ್ಯುತ್ ಅಪಾಯಗಳು ಇತ್ಯಾದಿ.

ಗಣಿ ಕಾರ್ಮಿಕರಿಗೆ ರಕ್ಷಣೆ ಮತ್ತು ಪರಿಹಾರ

[ಬದಲಾಯಿಸಿ]

1952ರ ಗಣಿ ಕಾಯಿದೆ (The Mines Act, 1952) ಭಾರತದಲ್ಲಿ ಗಣಿ ಕಾರ್ಮಿಕರಿಗೆ ಅಪಘಾತಗಳ ವಿರುದ್ಧ ಅನೇಕ ರಕ್ಷಣೆಗಳನ್ನೊದಗಿಸಿಕೊಟ್ಟಿತು. ಈ ಕಾಯಿದೆ ಗಣಿಗಳಲ್ಲಿ ಕಾರ್ಮಿಕರನ್ನು ಅಪಘಾತದಿಂದ ರಕ್ಷಿಸಲು ಯಾವ ಯಾವ ಸೌಲಭ್ಯಗಳನ್ನು ಅವರಿಗೆ ದೊರಕಿಸಿಕೊಡಬೇಕು ಎಂಬುದನ್ನು ವಿವರವಾಗಿ ಗೊತ್ತುಪಡಿಸಿದೆ. ಇದಲ್ಲದೆ 1963ರ ಜುಲೈಯಲ್ಲಿ ಗಣಿಗಳಲ್ಲಿ ಕಾರ್ಮಿಕ ಸಂರಕ್ಷಣೆಗಾಗಿ ಒಂದು ರಾಷ್ಟ್ರೀಯ ಸಮಿತಿಯನ್ನು ರಚಿಸಲಾಯಿತು. ಈ ಸಮಿತಿಯಲ್ಲಿ ಗಣಿ ಮಾಲೀಕರು, ಗಣಿ ಕಾರ್ಮಿಕರು ಮತ್ತು ವ್ಯವಸ್ಥಾಪಕರು ಪ್ರಾತಿನಿಧ್ಯ ಪಡೆದಿದ್ದರು. ಅಪಘಾತಗಳ ವಿರುದ್ಧ ಸಂರಕ್ಷಣೆಯ ಕ್ರಮಗಳ ಬಗ್ಗೆ ಕಾರ್ಮಿಕರಿಗೆ ತಿಳಿವಳಿಕೆ ನೀಡುವುದು ಈ ಸಮಿತಿಯ ಮುಖ್ಯ ಕಾರ್ಯ. ಗಣಿ ಅಪಘಾತಗಳ ಬಗ್ಗೆ ಪ್ರಸಾರ ಕಾರ್ಯ ಕೈಗೊಳ್ಳುವುದಲ್ಲದೆ, ಗಣಿ ಉದ್ಯಮಿಗಳಿಗೆ ಸರಿಯಾದ ತಿಳಿವಳಿಕೆ ಉಂಟಾಗುವಂತೆ ತರಬೇತಿ ಕೂಡ ನೀಡುತ್ತದೆ. ಈ ಬಗ್ಗೆ ಒಂದು ಮಾಸಿಕೆಯನ್ನೂ ಇದು ಪ್ರಕಟಿಸುತ್ತಿದೆ.

ಕಲ್ಲಿದ್ದಲು ಗಣಿಗಳ ನಿಯಮಗಳ ಪ್ರಕಾರ ಕಲ್ಲಿದ್ದಲು ಗಣಿಗಳಲ್ಲಿ ಅಪಾಯದ ವಿರುದ್ಧ ರಕ್ಷಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇವು ಕಲ್ಲಿದ್ದಲು ಗಣಿಯಲ್ಲಿಯ ಸ್ಫೋಟ, ಬೆಂಕಿ ಮುಂತಾದ ಅಪಾಯಗಳ ವಿರುದ್ಧ ತತ್‌ಕ್ಷಣ ರಕ್ಷಣೆಯನ್ನೊದಗಿಸುತ್ತವೆ. 1923ರ ಕಾರ್ಮಿಕ ಪರಿಹಾರ ಕಾಯಿದೆ, 1948ರ ಉದ್ಯೋಗಿಗಳ ರಾಜ್ಯ ವಿಮಾ ಕಾಯಿದೆ ಇವು ತಮ್ಮ ವ್ಯಾಪ್ತಿಯೊಳಗೆ ಬರುವ ಗಣಿ ಕಾರ್ಮಿಕರಿಗೆ ಕೈಗಾರಿಕಾ ಅಪಘಾತದ ವಿರುದ್ಧ ಧನ ಪರಿಹಾರವನ್ನು ಒದಗಿಸುತ್ತವೆ. ಗಣಿ ಕಾರ್ಮಿಕ ರಕ್ಷಣೆಯ ಕ್ರಮಗಳನ್ನು ಜಾಗರೂಕತೆಯಿಂದ ಅನುಸರಿಸಿದಲ್ಲಿ ಗಣಿ ಅಪಘಾತಗಳ ಸಂಖ್ಯೆಯನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು ಎನ್ನುವ ಅಂಶ ಅನೇಕ ಅಧ್ಯಯನಗಳಿಂದಲೂ, ಅನುಭವದಿಂದಲೂ ಬೆಳಕಿಗೆ ಬಂದಿದೆ.

ಉಲ್ಲೇಖಗಳು

[ಬದಲಾಯಿಸಿ]
  1. "Mining Disasters | NIOSH | CDC". wwwn.cdc.gov. Retrieved 2022-10-04.
  2. Retzer, John. "Ten Worst Mining Disasters". Michigan, USA: Bogey Media. Archived from the original on 18 April 2010. Retrieved 17 May 2014.
  3. Kucuker H. "Occupational fatalities among coal mine workers in Zonguldak, Turkey, 1994–2003". Occup Med (Lond) 2006 Mar;56(2):144–146. PubMed
  4. Terazawa K, Takatori T, Tomii S, Nakano K. Methane asphyxia. Coal mine accident investigation of distribution of gas. Am J Forensic Med Pathol. 1985 Sep;6(3):211–214. PubMed

ಹೊರಗಿನ ಕೊಂಡಿಗಳು

[ಬದಲಾಯಿಸಿ]



ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: