ನಾಗಾನಂದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾಗಾನಂದ ( ಎಂದರೆ ಸರ್ಪಗಳ ಸಂತೋಷ ) ಒಂದು ಸಂಸ್ಕೃತ ನಾಟಕವಾಗಿದ್ದು ಚಕ್ರವರ್ತಿ ಹರ್ಷ (ಆಡಳಿತ ಕ್ರಿ.ಶ. 606 - ಕ್ರಿ,ಶ. 648 )ನು ಬರೆದನೆಂದು ನಂಬಲಾಗಿದೆ.

ನಾಗಾನಂದವು ಅತ್ಯಂತ ಮೆಚ್ಚುಗೆ ಪಡೆದ ಸಂಸ್ಕೃತ ನಾಟಕಗಳಲ್ಲಿ ಒಂದಾಗಿದೆ. ಐದು ಅಂಕಗಳ ಇದು ನಾಗಗಳನ್ನು ಉಳಿಸಲು ವಿದ್ಯಾಧರ ದೊರೆ ಜೀಮೂತವಾಹನನು ತನ್ನ ಜೀವವನ್ನೇ ಬಲಿಕೊಡುವ ಜನಪ್ರಿಯ ಕಥೆಯನ್ನು ಹೇಳುತ್ತದೆ . ಈ ನಾಟಕದ ವಿಶಿಷ್ಟ ಲಕ್ಷಣವೆಂದರೆ ನಾಂದಿ ಪದ್ಯದಲ್ಲಿ ಬುದ್ಧನ ಸ್ತುತಿಯಿದ್ದು, ಇದು ನಾಟಕಕೃತಿಗಳ ಅತ್ಯುತ್ತಮ ಉದಾಹರಣೆಗಳಲ್ಲಿ ಒಂದಾಗಿದೆ.

ನಾಗಾನಂದವು ರಾಜಕುಮಾರನಾದ ಜೀಮೂತವಾಹನನು ತನ್ನ ದೇಹವನ್ನೇ ಹೇಗೆ ಬಲಿಕೊಟ್ಟು ನಾಗ ರಾಜಕುಮಾರನೊಬ್ಬನು ಗರುಡನಿಗೆ ಬಲಿಯಾಗುವುದನ್ನು ತಪ್ಪಿಸುತ್ತಾನೆ ಎಂಬ ಕಥೆಯಾಗಿದೆ.

ಮೂಲ[ಬದಲಾಯಿಸಿ]

ಕ್ರಿಸ್ತಶಕ 11 ನೇ ಶತಮಾನದಲ್ಲಿ ಬರೆದಿರುವ ಸೋಮದೇವನ ಕಥಾಸರಿತ್ಸಾಗರ ಮತ್ತು ಕ್ಷೇಮೇಂದ್ರನ ಬೃಹತ್ಕಥಾಮಂಜರಿಯಲ್ಲಿ ಜಿಮೂತವಾಹನನ ಕಥೆಯು ಕಂಡುಬರುತ್ತದೆ. ಈ ಎರಡೂ ಪುಸ್ತಕಗಳು ಕ್ರಿಸ್ತಶಕ 1 ನೇ ಶತಮಾನದಲ್ಲಿ ರಚಿಸಲಾದ ಪೈಶಾಚಿ ಭಾಷೆಯಲ್ಲಿರುವ ಗುಣಾಢ್ಯಬೃಹತ್ಕಥೆಯ ಸಂಸ್ಕೃತ ಆವೃತ್ತಿಗಳಾಗಿವೆ. . ೧೧ ನೇ ಶತಮಾನದಲ್ಲಿ ರಚಿಸಲಾದ ಕಥಾಸರಿತ್ಸಾಗರ ಅಥವಾ ಬೃಹತ್ಕಥಮಂಜರಿ ಎರಡನ್ನೂ ಕ್ರಿಸ್ತಶಕ 7 ನೇ ಶತಮಾನದ ನಾಗಾನಂದದ ಮೂಲ ಆಕರವಾಗಿ ಸ್ವೀಕರಿಸಲಾಗುವುದಿಲ್ಲ. ಶ್ರೀ ಹರ್ಷನು ತನ್ನದೇ ಆದ ವಿಚಾರಗಳನ್ನು ಸೇರಿಸಿಕೊಂಡಿದ್ದಾನೆ ಮತ್ತು ಬೃಹತ್ಕಥೆಯ ಮುಖ್ಯ ಕಥೆಯಿಂದ ಅನೇಕ ಕಡೆಗಳಲ್ಲಿ ದೂರ ಸರಿದಿದ್ದಾನೆ. ಹರ್ಷನ ಕೈಯಲ್ಲಿ ಅದರ ನಿರ್ವಹಣೆಯು ಸಾಕಷ್ಟು ಹೊಸತನದಿಂದ ಕೂಡಿದೆ ಮತ್ತು ಒಟ್ಟಾರೆಯಾಗಿ ನಾಟಕವು ಅತ್ಯಂತ ಆಕರ್ಷಕ ಮತ್ತು ಆಕರ್ಷಕವಾಗಿದೆ ಎಂದು ಒಪ್ಪಿಕೊಳ್ಳಬೇಕು.

ವಿದ್ಯಾಧರ ಜಾತಕ ಸಂಬಂಧವೆಂದು ನಾಟಕದ ಪ್ರಸ್ತಾವನೆಯಲ್ಲಿದ್ದರೂ ಜಾತಕ ಕಥೆಯಲ್ಲಿ ದೊರಕಿಲ್ಲ. ಮೂಲದಲ್ಲೆ ಜೀಮೂತವಾಹನನ ಪೂರ್ವ ಜನ್ಮದ ವೃತ್ತಾಂತವಿದೆ.

ಸಾರಾಂಶ[ಬದಲಾಯಿಸಿ]

ಜೀಮೂತವಾಹನ ಶ್ರೀಹರ್ಷನ ಸಂಸ್ಕøತ ನಾಗಾನಂದ ನಾಟಕದ ನಾಯಕ. ವಿದ್ಯಾಧರ ರಾಜ ಜೀಮೂತಕೇತುವಿನ ಮಗ. ತಂದೆ ತಾಯಿಯರು ವಾನಪ್ರಸ್ಥವನ್ನು ಸ್ವೀಕರಿಸಿ ರಾಜ್ಯವನ್ನು ಯೋಗ್ಯ ಅಮಾತ್ಯರ ಕೈಗಿತ್ತು ನಡೆದಾಗ ತಾನೂ ತಂದೆ ತಾಯಿಯರನ್ನು ಹಿಂಬಾಲಿಸಿ ಅವರ ಸೇವೆಯಲ್ಲಿ ತಲ್ಲೀನನಾಗಿರುತ್ತಾನೆ.

ನಾಟಕದ ಮೊದಲ ಅಂಕವು ಗೌರಿಯ ದೇವಸ್ಥಾನದ ಬಳಿಯಿರುವ ತಪೋವನದಲ್ಲಿ ಆರಂಭವಾಗುತ್ತದೆ. ಜಿಮೂತವಾಹನ ತನ್ನ ಸ್ನೇಹಿತ ವಿದೂಷಕ ಆತ್ರೇಯನೊಂದಿಗೆ, ಪಶ್ಚಿಮ ಘಟ್ಟದ ದಕ್ಷಿಣ ಭಾಗದ ಮಲಯ ಪರ್ವತಗಳಲ್ಲಿ ಸೂಕ್ತ ವಾಸಸ್ಥಳದ ಹುಡುಕಾಟದಲ್ಲಿದ್ದಾನೆ, ಏಕೆಂದರೆ ಅವನ ಮುದಿ ತಾಯ್ತಂದೆ ಅಲ್ಲಿ ಉಳಿಯುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಅವನು ತನ್ನ ಯೌವನವನ್ನು ಹೆತ್ತವರ ಸೇವೆಗಾಗಿ ಕಳೆಯಲು ಸಿದ್ಧ, ಏಕೆಂದರೆ ಆತನು ಇಂತಹ ಸೇವೆಯನ್ನು ಸಾಮ್ರಾಜ್ಯದ ಸುಖಗಳ ಆನಂದಕ್ಕಿಂತಲೂ ಹೆಚ್ಚಾಗಿ ಪರಿಗಣಿಸುತ್ತಾನೆ. ಅವನು ತನ್ನ ಪ್ರಜೆಗಳನ್ನು ಸಂತೋಷಪಡಿಸಲು ತನ್ನ ಶಕ್ತಿಯಿದ್ದಷ್ಟು ಎಲ್ಲವನ್ನೂ ಮಾಡಿದನು ಮತ್ತು ರಾಜ್ಯವನ್ನು ಸುರಕ್ಷಿತಗೊಳಿಸಿದನು. ಇಬ್ಬರೂ ಸುತ್ತಾಡುತ್ತಾ, ಪರ್ವತದ ಭವ್ಯತೆಗೆ ಮಾರು ಹೋಗಿ ಅಲ್ಲಿಯೇ ಉಳಿಯಲು ನಿರ್ಧರಿಸಿದರು. ಇಲ್ಲಿ ಅವರು ಮಧುರ ಸಂಗೀತದ ಹಾಡೊಂದನ್ನು ಕೇಳುತ್ತಾರೆ. ಅವರು ಗೌರಿಯ ದೇವಸ್ಥಾನವನ್ನು ಪ್ರವೇಶಿಸುತ್ತಾರೆ. ಆದರೆ ಅಲ್ಲಿ ಯಾರು ಹಾಡುತ್ತಿದ್ದಾರೆ ಎಂದು ಕಂಡುಹಿಡಿಯಲು ತಮ್ಮನ್ನು ತಾವು ಮರೆಮಾಡಿಕೊಳ್ಳುತ್ತಾರೆ. ಅಲ್ಲಿ ಹಾಡುತ್ತಿರುವಾಕೆಯ ಸೇವಕಿಯೊಂದಿಗಿನ ಸಂಭಾಷಣೆಯ ಮೂಲಕ ಅವಳು ಮಲಯವತಿ, ಕನ್ಯೆಯೆಂದು ತಿಳಿದುಕೊಂಡರು ಮತ್ತು ಗೌರಿ ಅವಳ ಕನಸಿನಲ್ಲಿ ಪ್ರತ್ಯಕ್ಷವಾಗಿ ವಿದ್ಯಾಧರ ಚಕ್ರವರ್ತಿ ಜೀಮೂತವಾಹನನು ಅವಳನ್ನು ಮದುವೆಯಾಗುವ ವರವನ್ನು ಕೊಟ್ಟಿದ್ದನ್ನು ಕೇಳಿಸಿಕೊಂಡರು.. ಅವರು ಮಲಯವತಿಗೆ ಕಾಣಿಸಿಕೊಳ್ಳುತ್ತಾರೆ. ಮಲಯವತಿಗೆ ಜಿಮೂತವಾಹನನ ನಿಜವಾದ ಗುರುತು ತಿಳಿಯದೆ ಸನ್ಯಾಸಿಯೊಂದಿಗೆ ದೇವಸ್ಥಾನವನ್ನು ತೊರೆಯುತ್ತಾಳೆ. ನಾಯಕ ಮತ್ತು ನಾಯಕಿಯರಲ್ಲಿ ಪರಸ್ಪರ ಪ್ರೀತಿ ಉಂಟಾಗುತ್ತದೆ, ಆದರೂ ಅವರು ಪರಸ್ಪರ ತಿಳಿಯರು. .

ಇಬ್ಬರೂ ಪರಸ್ಪರ ಪ್ರೇಮಿಸಿ ಮುಂದೆ ಹಿರಿಯರ ಅಪ್ಪಣೆಯಂತೆ ಮದುವೆಯಾಗುತ್ತಾರೆ. ಕೆಲವು ದಿನಗಳ ಅನಂತರ ಮಲಯ ಪರ್ವತದ ಸಾನುಪ್ರದೇಶದ ವೃತ್ತಾಂತವನ್ನು ಮೈದುನ ಮಿತ್ರಾವಸು ತಿಳಿಸುತ್ತಾನೆ. ಅಸಂಖ್ಯಾತ ಸರ್ಪಗಳ ವಿನಾಶವನ್ನು ತಪ್ಪಿಸಲು ವಾಸುಕಿ ಗರುಡನೊಡನೆ ಮಾಡಿಕೊಂಡ ಒಪ್ಪಂದದಂತೆ ದಿನಕ್ಕೊಂದು ಸರ್ಪ ಆಹುತಿಯಾಗುವುದನ್ನು ಕೇಳಿ ಜೀಮೂತವಾಹನ ದುಃಖಿಸುತ್ತಾನೆ. ಆ ದಿನದ ಸರದಿ ಶಂಖಚೂಡನೆಂಬ ಸರ್ಪನದು. ಇದ್ದೊಬ್ಬ ಮಗನಿಗಾಗಿ ಆತನ ತಾಯಿ ಶೋಕಿಸುತ್ತಿರುತ್ತಾಳೆ. ಜೀಮೂತವಾಹನ ಅವರಲ್ಲಿಗೆ ಹೋಗಿ ತಾನು ಶಂಖಚೂಡನ ಸ್ಥಾನಕ್ಕೆ ಹೋಗುತ್ತೇನೆಂದರೂ ಅವರು ಒಪ್ಪುವುದಿಲ್ಲ. ಕೊನೆಯ ಕ್ಷಣದಲ್ಲಿ ಅವರು ಗೋಕರ್ಣೇಶ್ವರನ ದರ್ಶನಕ್ಕೆ ಹೋದಾಗ ಉಡುಗೊರೆಯಾಗಿ ಬಂದಿದ್ದ ಕೆಂಪು ವಸ್ತ್ರವನ್ನೇ ವಧ್ಯ ಚಿಹ್ನೆಯಾಗಿ ಹೊದ್ದು ವಧ್ಯಸ್ಥಾನದಲ್ಲಿ ಹೋಗಿ ನಿಲ್ಲುತ್ತಾನೆ. ಗರುಡ ನಿತ್ಯದಂತೆ ವಧ್ಯಸ್ಥಾನದಲ್ಲಿರುವವ ನಾಗನೆಂದೇ ತಿಳಿದು ಭಕ್ಷಿಸುವಾಗ ಆತನ ಸಹನೆ ತಾಳ್ಮೆಯನ್ನು ನೋಡಿ ಅಚ್ಚರಿಗೊಳ್ಳುತ್ತಾನೆ. ಆಗ ಅಲ್ಲಿಗೆ ಶಂಖಚೂಡ, ಜೀಮೂತವಾಹನನ ತಂದೆ, ತಾಯಿ, ಪತ್ನಿ ಎಲ್ಲರೂ ಬರುತ್ತಾರೆ. ವಸ್ತುಸ್ಥಿತಿಯನ್ನು ತಿಳಿದ ಗರುಡ ಪಶ್ಚಾತ್ತಾಪದಿಂದ ಅಹಿಂಸೆಯನ್ನು ಸ್ವೀಕರಿಸಿ ಅಮೃತವನ್ನು ತಂದು ದತ್ತ ನಾಗಗಳನ್ನು ಬದುಕಿಸುತ್ತಾನೆ. ಗೌರಿಯ ಆಶೀರ್ವಾದದಿಂದ ಜೀಮೂತವಾಹನ ಬದುಕಿ ವಿದ್ಯಾಧರ ಚಕ್ರವರ್ತಿಯಾಗುತ್ತಾನೆ.

ಜೀಮೂತವಾಹನ ಧೀರೋದಾತ್ತ ನಾಯಕ. ರಾಜ್ಯಮೋಹದಿಂದ ಮುಕ್ತನಾದವ. ತಂದೆತಾಯಿಯರಲ್ಲಿ ಅನನ್ಯಭಕ್ತಿ ತೋರಿದವ. ಉತ್ತಮ ಪ್ರೇಮಿ ಮತ್ತು ಪತಿ, ಕಲ್ಪವೃಕ್ಷ, ರಾಜ್ಯ, ಕೊನೆಗೆ ತನ್ನ ಶರೀರವನ್ನೇ ದಾನವಾಗಿತ್ತ ತ್ಯಾಗಿ. ಕರುಣೆ, ಸಹನೆ, ತತ್ತ್ವನಿಷ್ಠೆ, ಅಹಿಂಸೆ, ಪರೋಪಕಾರ-ಆತನ ಜೀವನದಲ್ಲಿ ಕಾಣುವ ಗುಣಗಳು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

ಬಾಹ್ಯ ಕೊಂಡಿಗಳು[ಬದಲಾಯಿಸಿ]

"https://kn.wikipedia.org/w/index.php?title=ನಾಗಾನಂದ&oldid=1053185" ಇಂದ ಪಡೆಯಲ್ಪಟ್ಟಿದೆ