ಹಾಲಕ್ಕಿ ಸಮುದಾಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಾಲಕ್ಕಿ ಸುಗ್ಗಿ ಕುಣಿತ

ಹಾಲಕ್ಕಿ ಸಮುದಾಯವು ಕರ್ನಾಟಕ ರಾಜ್ಯದ ಪ್ರಮುಖ ಬುಡಕಟ್ಟು ಜನಾಂಗಗಳಲ್ಲಿ ಒಂದು. ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲ, ಕುಮಟ, ಹೊನ್ನಾವರ ತಾಲ್ಲೂಕುಗಳಲ್ಲಿ ಇವರ ಹೆಚ್ಚಾಗಿ ಕಂಡುಬರುತ್ತಾರೆ. ಹಾಲಕ್ಕಿಗಳು ಕೃಷಿಯನ್ನು ಜೀವನಾಧಾರವಾಗಿರಿಸಿಕೊಂಡಿರುತ್ತಾರೆ. ಇವರು ಆದಿವಾಸಿ ಜೀವನ ಪದ್ಧತಿಯನ್ನು ಅನುಸರಿಸುತ್ತಾರೆ.[೧]

ಹಾಲಕ್ಕಿ ದಂತಕಥೆ[ಬದಲಾಯಿಸಿ]

ಹಾಲಕ್ಕಿ ಹುಟ್ಟಿನ ಬಗ್ಗೆ ದಂತಕಥೆ ಯೊಂದು ಪ್ರಚಲಿತವಿದೆ. ಗದ್ದೆ ಉಳುತ್ತಿದ್ದ ಶಿವನಿಗೆ ಅನ್ನ ಹಾಲು ಒಯ್ಯುತ್ತಿದ್ದ ಪಾರ್ವತಿ ಎಡವಿ ಬಿದ್ದಾಗ, ಆ ಹಾಲು ಮತ್ತು ಅನ್ನ ಮಣ್ಣಿನಲ್ಲಿ ಕೂಡಿದವು. ಪಾರ್ವತಿ ಆ ಮಣ್ಣಿನಿಂದ ಎರಡು ಗೊಂಬೆ ತಯಾರಿಸಿದಳು. ಪಾರ್ವತಿಯನ್ನು ಹುಡುಕುತ್ತ ಬಂದ ಶಿವ ಆ ಗೊಂಬೆಗಳಿಗೆ ಜೀವ ಬರಿಸಿದ. ಹೀಗೆ ಇವರು ಹಾಲು ಅಕ್ಕಿ ಮಿಶ್ರಣದಿಂದ ಹುಟ್ಟಿದವರಾದ್ದರಿಂದ ಹಾಲಕ್ಕಿ ಎಂಬ ಹೆಸರು ಬಂದಿತು. ಇನ್ನೊಂದು ಕತೆಯ ಪ್ರಕಾರ ಕಡು ಬಡವರಾದ ಇವರಿಗೆ ಬತ್ತ ಪೂರ್ತಿ ಬೆಳೆಯುವ ವರೆಗೆ ಕಾಯುವ ಆರ್ಥಿಕ ಸಾಮಥ್ರ್ಯವಿಲ್ಲದೆ ಬತ್ತದ ತೆನೆ ಇನ್ನೂ ಹಾಲು ತುಂಬಿರುವಾಗಲೇ ಕೊಯ್ದು ಅರೆದು ಪಾಯಸ (ಹಾಲಕ್ಕಿ ಪಾಯಸ) ಮಾಡಿ ಉಣ್ಣುತ್ತಿದ್ದುದರಿಂದ ಇವರಿಗೆ ಹಾಲಕ್ಕಿಗಳು ಎಂಬ ಹೆಸರು ಬಂತೆಂದು ಹೇಳಲಾಗಿದೆ. ಇವರ ಮೈ ಹಾಲು ಅಕ್ಕಿಯ ಬಣ್ಣದ್ದಾಗಿರುವುದರಿಂದ ಇತರ ಒಕ್ಕಲು ಪಂಗಡದವರಿಂದ ಭಿನ್ನ ಎಂದು ಗುರುತಿಸಲು ಇವರಿಗೆ ಹಾಲಕ್ಕಿ ಒಕ್ಕಲು ಎಂಬ ಹೆಸರು ರೂಢಿಯಲ್ಲಿದೆ.

ಪಂಗಡಗಳು[ಬದಲಾಯಿಸಿ]

ಇವರಲ್ಲಿ ಎಂಟು ಮೂಲ ಪಂಗಡಗಳನ್ನು ಗುರುತಿಸಲಾಗಿದೆ. ಪಂಗಡಗಳನ್ನು ಬಳಿ ಎಂದು ಕರೆಯುತ್ತಾರೆ. ಬಳಿಗಳಿಗೆ ಗಿಡ, ಬಳ್ಳಿಗಳ ಮತ್ತು ಪ್ರಾಣಿಗಳ ಹೆಸರು ಸಂಕೇತವಿದೆ. ಗುರಾಣಿ ಬಳಿ, ಖಡಿನ ಬಳಿ, ಕೇದಿಗೆ ಬಳಿ, ಮಂಜಲಿ ಬಳಿ, ಸುಸ್ಕಿನ ಬಳಿ, ದ್ಯಾವನ ಬಳಿ, ಕುಂತಿ ಬಳಿ ಹೀಗೆ ಎಂಟು ಪ್ರಕಾರಗಳು ಇವೆ. ಮಾಂಸಾಹಾರಿಗಳಾದರೂ ಇವರು ತಮ್ಮ ಬಳಿಯ ಹೆಸರಿನ ಪ್ರಾಣಿಗಳನ್ನು ತಿನ್ನುವುದಿಲ್ಲ, ಕೊಲ್ಲುವುದೂ ನಿಷಿದ್ಧ.

ಜೀವನ ಕ್ರಮ[ಬದಲಾಯಿಸಿ]

ಬತ್ತದ ಗದ್ದೆಗಳ ಹತ್ತಿರದಲ್ಲಿ ಗುಂಪು ಗುಂಪಾಗಿ ಇವರ ಗುಡಿಸಲುಗಳು. ಮಣ್ಣಿನ ಗೋಡೆಗೆ ಹುಲ್ಲು ಚಾವಣಿಯ ಎರಡು ಅಂಕಣಗಳ ಸಣ್ಣ ಮನೆ ಮತ್ತು ಸ್ನಾನದ ಮನೆ ಇರುತ್ತದೆ. ಮನೆಯ ಮುಂದೆ ತುಳಸಿ ಹಾಗೂ ತೆಣಿಯ ಮೇಲೆ ಅಥವಾ ಅಂಗಳದಲ್ಲಿ ಬತ್ತ ಕುಟ್ಟುವುದಕ್ಕೆ ಒರಳು ಇರುವುದು. ಭಿನ್ನಗೋತ್ರ ವಿವಾಹ ಪದ್ಧತಿ ಇವರಲ್ಲಿದೆ. ಹಾಲಕ್ಕಿ ಒಕ್ಕಲಿಗರು ಯಾವುದೇ ಸಂದರ್ಭದಲ್ಲಿ ಬ್ರಾಹ್ಮಣ ಪುರೋಹಿತರನ್ನು ಕರೆಯುವುದಿಲ್ಲ. ಊರ ಗೌಡನ ನೇತೃತ್ವದಲ್ಲಿ ಎಲ್ಲ ಮಂಗಲ ಕಾರ್ಯಗಳು ನಡೆಯುತ್ತವೆ. ಇವರು ಧರಿಸುವಉಡುಪು ಸರಳವಾಗಿರುತ್ತದೆ. ಮಾನಮುಚ್ಚಲು ಉಡಿದಾರಕ್ಕೊಂದು ಕಚ್ಚೆ,ಪಂಚೆ, ಹೆಗಲಿಗೊಂದು ಕಂಬಳಿ, ತಲೆಗೊಂದು ರುಮಾಲು. ಕವಳಿಗೆ ಸಂಚಿ(ತಂಬಾಕು ಸಂಚಿ) ಕೆಲಸದ ಕತ್ತಿ ಸದಾ ಇವರ ಜೊತೆಗಿರುತ್ತವೆ. ಹೆಂಗಸರು ಮಗ್ಗದ ಚೌಕುಳಿ ಸೀರೆಯನ್ನು ಮೊಣಕಾಲಿನವರೆಗೆ ನೆರಿಗೆಮಾಡಿ ಇಳಿಬಿಟ್ಟು ಎಡ ಬಾಜುವಿಗೆ ಸೆರಗನ್ನು ತಂದು ಗಂಟು ಕಟ್ಟಿ ಉಡುವರು. ಕುಪ್ಪಸವಿಲ್ಲದ ಭುಜಗಳ ತುಂಬ ಕರಿಮಣಿ ಸರಗಳನ್ನು ಧರಿಸಿರುತ್ತಾರೆ. ಅಕ್ಕಿ, ರಾಗಿ, ಮೀನು ಮುಖ್ಯ ಆಹಾರ. ರಾಗಿ ಅಂಬಲಿ ಕೂಡ ಹಾಲಕ್ಕಿಗಳ ಆಹಾರ ಪದ್ಧತಿಯಲ್ಲಿ ಬಳಸುತ್ತಾರೆ.[೨][೩]

ವೃತ್ತಿ ಬದುಕು[ಬದಲಾಯಿಸಿ]

ಹಾಲಕ್ಕಿಗಳು ಕೃಷಿಗೆ ಅವಲಂಬಿತರಾಗಿರುತ್ತಾರೆ. ಹಾಲಕ್ಕಿ ಒಕ್ಕಲಿಗರು ಗಿಡಮೂಲಿಕೆಗಳಿಂದ ಔಷಧ ತಯಾರಿಸುವುದರಲ್ಲಿ ಪ್ರಸಿದ್ಧರು. ದನಕರುಗಳ ಹಾಗೂ ಮನುಷ್ಯರ ರೋಗಗಳಿಗೆ ಔಷಧ ಕೊಡುವ ಪ್ರಸಿದ್ಧ ವೈದ್ಯ ಮನೆತನಗಳಿವೆ. ಇದು ವಂಶಪಾರಂಪರ್ಯವಾಗಿ ನಡೆದು ಬಂದ ವೃತ್ತಿ. ಇವರು ಆರ್ಥಿಕವಾಗಿ ಹಿಂದುಳಿದವರು. ಹೆಂಗಸರು ಒಕ್ಕಲುತನದಲ್ಲಿ ನೆರವಾಗುವುದಲ್ಲದೇ ದೂರದ ಬೆಟ್ಟ ಕಾಡಿನಿಂದ ಕಟ್ಟಿಗೆ ಹೊತ್ತು ತಂದು ಮಾರುವರು

ಪದ್ಧತಿ[ಬದಲಾಯಿಸಿ]

ಪ್ರತಿ ಕೊಪ್ಪ ಒಂದು ಹಳ್ಳಿ. ಅಲ್ಲಿ ಊರ ಗೌಡ, ಬುದವಂತ, ಕೋಲಕಾರ ಎಂಬ ಅಧಿಕಾರಿಗಳು ಇರುತ್ತಾರೆ. ಕೊಪ್ಪಕ್ಕೆ ಸಂಬಂಧಪಟ್ಟ ವಿಷಯಗಳನ್ನು ಕೂಟದಲ್ಲಿ ಚರ್ಚಿಸುತ್ತಾರೆ. ಕೂಟ ಅಂದರೆ ಸಭೆ. ಕೊಪ್ಪದ ಎಲ್ಲ ವಯಸ್ಕ ಗಂಡಸರೂ ಕೂಟದ ಸದಸ್ಯರು. ಊರ ಅಧಿಕಾರಿಗಳ ಪಟ್ಟ ವಂಶಪಾರಂಪರ್ಯವಾದದ್ದು. ಅನೇಕ ಕೊಪ್ಪಗಳು ಸೇರಿ ಒಂದು ಸೀಮೆಯಾಗುತ್ತದೆ. ಹಾಲಕ್ಕಿ ಒಕ್ಕಲಿಗರ ಇಂಥ ಏಳು ಸೀಮೆಗಳಿವೆ. ಸೀಮೆಯ ಸಭೆಗೆ ಸೀಮಾಕೂಟ ಎಂದು ಹೆಸರು. ಸಮಾಜದ ನಿಯಮಗಳನ್ನು ಉಲ್ಲಂಘಿಸಿದವರಿಗೆ ಸೀಮೆಯ ಕೂಟ ಬಹಿಷ್ಕಾರ ಹಾಕುವುದು. ಬಹಿಷ್ಕಾರಕ್ಕೆ ಜಾತಿ ಕಟ್ಟು ಎಂಬ ಹೆಸರಿದೆ. ಹಾಲಕ್ಕಿ ಮಹಿಳೆಯ ಚೊಚ್ಚಲ ಹೆರಿಗೆ ಗಂಡನ ಮನೆಯಲ್ಲಿಯೇ ಆಗಬೇಕು. ನಾಮಕರಣದ ದಿನ ತವರಿನ ಕೊಪ್ಪದವರೆಲ್ಲ ಬಂದು ತಿಂಡಿಗಳನ್ನು ಹಂಚುತ್ತಾರೆ. ಇದಕ್ಕೆ ನೆಂಟರಆಮೆ ಎಂದು ಹೆಸರು. ಇವರಿಗೆ ಮದುವೆ ಪವಿತ್ರವಾದ ಸಂಸ್ಥೆ. ಮೊದಲು ಬಾಲ್ಯವಿವಾಹ ರೂಢಿಯಲ್ಲಿತ್ತು. ಅಕಸ್ಮಾತ್ ಮದುವೆಯ ಮೊದಲೇ ಹುಡುಗಿ ಮೈನೆರದರೆ ಅವಳನ್ನು ಮನೆಯವರೇ ಕಾಡಿಗೆ ಒಯ್ದು ಕಣ್ಣು ಕಟ್ಟಿ ಬಿಟ್ಟುಬರುತ್ತಿದ್ದರಂತೆ. ಈಗ ಈ ಶಿಕ್ಷೆಯಿಲ್ಲ. ಹೆಣ್ಣಿಗೆ ಹೆಣ್ಣು ಇವರಲ್ಲಿ ಈಗಲೂ ಪ್ರಚಲಿತವಿರುವ ಪದ್ಧತಿ. ಹೆಣ್ಣಿಗೆ ಮದುವೆಯಲ್ಲಿ ಸ್ವಾತಂತ್ರ್ಯವಿಲ್ಲ. ಹಿರಿಯರೇ ಮದುವೆ ನಿಶ್ಚಯಿಸುತ್ತಾರೆ. ಸಾಮಾನ್ಯವಾಗಿ ಆದ್ರ್ರಾ ನಕ್ಷತ್ರದಲ್ಲಿ ಮದುವೆ ನಡೆಯುತ್ತದೆ. ಊರಿನಲ್ಲಿ ಒಂದೇ ದಿನ ಹತ್ತು ಹನ್ನೆರಡು ಮದುವೆಗಳು ನಡೆಯುವುದುಂಟು. ಹೆಸ್ರೂಟ, ಮತ್ತು ಮದುಮಗಳನ್ನು ಅಡಗಿಸಿಡುವ ಪದ್ಧತಿಗಳು ಇವರಲ್ಲಿರುವ ಕ್ರಮ. ಊರಿನವರೆಲ್ಲಾ ಹೋಗಿ ಬೇಟೆಯಾಡುವುದು ಇವರದೊಂದು ಹವ್ಯಾಸ. ಇವರ ಬೇಟೆಯಲ್ಲಿ ಬಂದೂಕನ್ನು ಬಳಸುವುದಿಲ್ಲ ಬದಲಾಗಿ ಈಟಿಯನ್ನು ಬಳಸುತ್ತಾರೆ. ಬಲೆಕಟ್ಟಿ ಬೇಟೆಯಾಡುತ್ತಾರೆ. ಈ ಬೇಟೆಗೆ ಹೊಲ ಎಬ್ಬಿಸುವುದು ಎನ್ನುತ್ತಾರೆ.

ಆಚರಣೆಗಳು[ಬದಲಾಯಿಸಿ]

ಕರಿ ಹಬ್ಬ(ಸುಗ್ಗಿ ಹಬ್ಬ), ತುಳಸಿ ಹಬ್ಬ, ಗೋವಿನ ಹಬ್ಬ, ಹಾವಿನ ಹಬ್ಬ, ಗಡಿ ಹಬ್ಬಗಳನ್ನು ಆಚರಿಸುವರು. ದನಗಳ ಹಬ್ಬದಲ್ಲಿ ದನಗಳನ್ನು ಬಣ್ಣಬಣ್ಣದ ಕಾಗದದ ಹಾಗೂ ನಾರಿನ ಚವಲಗಳಿಂದ ಶೃಂಗರಿಸಿ ಪೂಜಿಸುವರು. ದೇವರು ದೆವ್ವಗಳಲ್ಲಿ ಇವರಿಗೆ ನಂಬಿಕೆ. ಇವರು ತಿರುಪತಿ ತಿಮ್ಮಪ್ಪನ ಭಕ್ತರು. ಆಲ, ಅಶ್ವತ್ಥ ವೃಕ್ಷಗಳನ್ನು ಪೂಜಿಸುವರು. ಮೃತರ ಆತ್ಮ ದೈವಗಳಾಗುತ್ತವೆಂಬುದು ಇವರ ನಂಬಿಕೆ. ಕನ್ನೆದೈವ, ಹೆಣ್ಣುಗೊರೆ, ಗಂಡುಗೊರೆ ಇವು ಸಹಾಯ ದೈವಗಳು. ನೂಡಿದೈವ ವಮ್ಮಲ್ತಿ ಹೆಣ್ಣುದೆವ್ವಗಳಲ್ಲಿ ನಂಬಿಕೆ ಇಟ್ಟುಕೊಂಡಿರುತ್ತಾರೆ. ಇವರು ಹೆಣವನ್ನು ಸುಡುತ್ತಾರೆ. ಮಕ್ಕಳ ಸೊಡ್ಲೆ(ಮಕ್ಕಳ ಶ್ಮಶಾನ) ಪ್ರತ್ಯೇಕ. ಸತ್ತ ಮೈಲಿಗೆಯನ್ನು ಊರ ಗೌಡನೇ ನೀರು ಚಿಮುಕಿಸಿ ಶುದ್ಧಿ ಮಾಡುವನು. ತಿರುಪತಿ ಯಾತ್ರೆ ಮಾಡಿ ಬಂದವರಿಗೆ ದಾಸರು ಎಂದು ಕರೆಯುತ್ತಾರೆ. ಅವರು ಸತ್ತಾಗ ಕೊರಳಿಗೆ ತುಳಸಿ ಹಾಕಿ ಆಗೇರ ವಾದ್ಯದೊಡನೆ ಸ್ಮಶಾನಕ್ಕೆ ಒಯ್ಯುತ್ತಾರೆ.[೪]

ಹಾಲಕ್ಕಿ ಕುಣಿತ[ಬದಲಾಯಿಸಿ]

ಹಗರಣ, ಗುಮಟೆಪಾಂಗು, ಕೋಲಾಟ, ಸುಗ್ಗಿಕುಣಿತ ಇವು ಹಾಲಕ್ಕಿ ಒಕ್ಕಲಿಗರ ಮನೋರಂಜನೆಗಳು. ಕರ್ನಾಟಕದಲ್ಲಿ ಹಾಲಕ್ಕಿ ಒಕ್ಕಲಿಗರ ಸುಗ್ಗಿ ವಿಶಿಷ್ಟವಾದ್ದು. ಬಣ್ಣದ ಉಡುಪು ತೊಟ್ಟು, ಬಣ್ಣದ ಕಾಗದ ಬೆಂಡು ಬೇಗಡೆಗಳಿಂದ ಶೃಂಗರಿಸಿ ತಯಾರಿಸಿದ ತುರಾಯಿಯನ್ನು ತಲೆಯಲ್ಲಿ ಧರಸಿ ಕುಣಿಯುವ ಸೊಗಸು ಆಕರ್ಷಕವಾದುದು. ಸುಗ್ಗಿಯಲ್ಲಿ ಕಿರೇಸುಗ್ಗಿ ಮತ್ತು ಹಿರೇಸುಗ್ಗಿ ಎಂದು ಎರಡು ವಿಧಗಳು. ವೇಷಭೂಷಣ, ಹೆಜ್ಜೆಗಾರಿಕೆಗಳಲ್ಲಿ ಇವು ವ್ಯತ್ಯಾಸ ಪಡೆದಿವೆ. ಇವು ಪ್ರತಿ ವರ್ಷ ಪರ್ಯಾಯವಾಗುವುದು ಒಂದು ಪದ್ದತಿ. ಸುಗ್ಗಿ ಕುಣಿತಕ್ಕೆ ಗುಮಟೆವಾದ್ಯವನ್ನು ಬಳಸುತ್ತಾರೆ. ಅಡ್ಡ ಕುಣಿತ, ಕೋಲು ಕುಣಿತ, ಕುಂಚ ಕುಣಿತ, ಅಲಾವಿ ಕುಣಿತ - ಹೀಗೆ ವಿವಿಧ ಬಗೆಯ ಕುಣಿತಗಳಿವೆ. ಸುಗ್ಗಿಕುಣಿತ ಕರ್ನಾಟಕ ಜನಪದ ನೃತ್ಯಕಲೆಗಳಲ್ಲಿ ಒಂದು. [೫]

ಉಲ್ಲೇಖ[ಬದಲಾಯಿಸಿ]

  1. https://shodhganga.inflibnet.ac.in/bitstream/10603/99977/11/11_chapter%206.pdf
  2. https://shodhganga.inflibnet.ac.in/bitstream/10603/100119/16/16_conclusion.pdf
  3. https://www.prajavani.net/article/%E0%B2%B9%E0%B3%86%E0%B2%A3%E0%B3%8D%E0%B2%A3%E0%B2%BF%E0%B2%A8-%E0%B2%AD%E0%B2%BE%E0%B2%B5%E0%B2%95%E0%B3%8D%E0%B2%95%E0%B3%86-%E0%B2%AC%E0%B2%A3%E0%B3%8D%E0%B2%A3
  4. https://shodhganga.inflibnet.ac.in/bitstream/10603/99977/11/11_chapter%206.pdf
  5. http://jeevanayana.blogspot.com/2014/03/blog-post_19.html