ಕಂಬಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಂಬಳಿ : ಹೊದೆಯಲು ಹಾಸಲು ಉಪಯೋಗಿಸುವ ಉಣ್ಣೆಯ ನೇಯ್ಗೆ. ಇದು ಉಷ್ಣ ಅವಾಹಕವಾದ್ದರಿಂದ ದೇಹೋಷ್ಣತೆಯನ್ನು ಒಳಗೇ ಕಾಪಿಡುವುದಲ್ಲದೇ ಪರಿಸರದ ಶೈತ್ಯ ಒಳಗೆ ಬರದಂತೆಯೂ ನಿವಾರಿಸುವುದು.

ಪ್ರಾರಂಭ: ಋಗ್ವೇದದ ಕಾಲದಿಂದಲೂ ಉಣ್ಣೆಯ ವಸ್ತ್ರ ಬಳಕೆಯಲ್ಲಿ ಇತ್ತೆಂಬುದಕ್ಕೆ ಆಧಾರವಿದೆ. ಊರ್ಣವತೀ ಯುವತಿಃ ಶೀಲ ಮಾವತಿ, ಊರ್ಣವಂತಂ ಊರ್ಣವಸತ ಶೃಂದ್ರುವ ಮುಂತಾದ ಋಗ್ವೇದೋಕ್ತಿಗಳನ್ನು ಗಮನಿಸಬಹುದು. ಉಣ್ಣೆ, ನಾರು, ರೇಷ್ಮೆ ಮುಂತಾದವುಗಳಿಂದ ನೇದ ಬಟ್ಟೆಗಳು ದೇವತಾಕಾರ್ಯಗಳಲ್ಲಿ ತೊಟ್ಟುಕೊಳ್ಳಲು ಉಪಯೋಗಿಸಬಹುದಾದ ಮಡಿವಸ್ತ್ರಗಳೆಂದೂ ವೈದಿಕ ಕಾಲದಿಂದಲೂ ಬೆಳೆದು ಬಂದಿರುವ ಸಂಪ್ರದಾಯವೂ ಉಣ್ಣೆ ವಸ್ತ್ರದ ಪ್ರಾಚೀನತೆಗೆ ಸಾಕ್ಷಿ.

ಮಧ್ಯ ಏಷ್ಯದ ಅಲೆಮಾರಿ ಜನ ಮೊದಲು ಕುರಿಗಳನ್ನು ಸಾಕಿ ಉಣ್ಣೆಯಿಂದ ನೂಲನ್ನು ತೆಗೆದು ನೇಯುವುದನ್ನು ಕಲಿತಿದ್ದರೆಂದು ಅನೇಕ ಐತಿಹಾಸಿಕ ವಿವರಗಳು ತಿಳಿಸುತ್ತವೆ. ಇವರೇ ಅನಂತರ ಯುರೋಪಿನ ಇತರ ಭಾಗಗಳಿಗೂ ಭಾರತಕ್ಕೂ ವಲಸೆ ಹೋಗಿ ಉಣ್ಣೆಯ ಕುಶಲ ಕೈಗಾರಿಕೆಯನ್ನು ಎಲ್ಲ ಕಡೆಗಳಲ್ಲಿಯೂ ಪ್ರಚಾರಮಾಡಿ ಬೆಳೆಸಿದರು ಎಂದು ಹೇಳಬಹುದು. ಹೀಗೆ ಉಣ್ಣೆಯ ವಸ್ತ್ರ ತಯಾರಿಕೆ-ಅದರಲ್ಲಿಯೂ ಪ್ರಮುಖವಾಗಿ ಕಂಬಳಿ ರತ್ನಗಂಬಳಿ-ಅತಿ ಪ್ರಾಚೀನವಾದುದು. ಇದು ಜನಜೀವನದೊಂದಿಗೆ ಹಾಸುಹೊಕ್ಕಾಗಿ ಬೆಳೆದು ಕಾಲಾನುಸಾರ ವಿವಿಧ ಮಾರ್ಪಾಡುಗಳನ್ನೂ ದರ್ಜೆಗಳನ್ನೂ ಪಡೆದಿದೆ.

ಪ್ರ.ಶ.ಪು. 3000 ವರ್ಷಗಳಷ್ಟು ಪ್ರಾಚೀನವಾದ ಒಂದು ಮಗ್ಗ ಮತ್ತು ಅದರಲ್ಲಿ ಕೆಲಸ ಮಾಡುತ್ತಿರುವ ಕೆಲಸಗಾರರನ್ನು ಈಜಿಪ್ಟಿನ ಭಿತ್ತಿಚಿತ್ರವೊಂದರಲ್ಲಿ ಚಿತ್ರಿಸಲಾಗಿದೆ. ಒರಟು ಸಾಧನಗಳಿಂದ ನೇಯುವ ಕಲೆ ಈಜಿಪ್ಟಿನ ಜನಾಂಗಕ್ಕೆ ಇನ್ನೂ ಹಿಂದಿನಿಂದಲೇ ತಿಳಿದಿತ್ತೆಂದು ಇದರಿಂದ ಸ್ಪಷ್ಟವಾಗುವುದು. ಬಹುಶಃ ಅದು ಇರಾನ್, ಮೆಸೊಪೊಟೇಮಿಯಗಳಲ್ಲಿ ಆರಂಭವಾಗಿರಬೇಕು. ಮೊದಲನೆಯ ಉಣ್ಣೆಯ ಜಮಖಾನೆ ಬ್ಯಾಬಿಲೋನ್ ಅಥವಾ ನಿನೆವೆಯಲ್ಲಿ ಪ್ರ.ಶ.ಪು. 5000 ವರ್ಷಗಳಿಗಿಂತ ಮೊದಲೇ ತಯಾರಾಗಿರಬೇಕು ಎಂಬುದು ಪಾಶ್ಚಾತ್ಯ ವಿದ್ವಾಂಸರ ಮತ. ಬ್ಯಾಬಿಲೋನಿಯನ್ನರು ಚತುರ ನೇಯ್ಗೆಯ ಕಲೆಗೆ ಹೆಸರಾದವರೆಂದು ರೋಮಿನ ಚರಿತ್ರಕಾರ ಪ್ಲಿನಿ ಹೇಳಿದ್ದಾನೆ. ಜಮಖಾನೆಯ ಉಪಯೋಗವನ್ನು ತಿಳಿಸುವ ಅತ್ಯಂತ ಪುರಾತನ ಪುರಾವೆಗಳಲ್ಲಿ ಬೈಬಲ್ಲೂ ಸೇರಿದೆ. ನೆಲಕ್ಕೆ ಹಾಸುವ ನೇಯ್ಗೆಯ ಕಂಬಳಿಗಳು ಬಹಳ ಹಿಂದಿನ ಕಾಲದಲ್ಲಿಯೇ ಭಾರತ, ಚೀನ, ಅರೆಬಿಯ, ಪರ್ಷಿಯ ಮತ್ತು ಅಸ್ಸೀರಿಯ ದೇಶಗಳ ಜನರಲ್ಲಿ ಬಳಕೆಯಲ್ಲಿದ್ದುವು. ಪ್ರ.ಶ.ಪು. ಸು. 1500 ವರ್ಷಗಳಿಗಿಂತ ಮುಂಚೆಯೇ ರತ್ನಗಂಬಳಿಗಳನ್ನು ದೇವಾಲಯಗಳಲ್ಲಿ ಉಪಯೋಗಿಸಲು ನೇಯುವ ಕಲೆ ಈಜಿಪ್ಟಿನವರಿಗೆ ತಿಳಿದಿತ್ತು. ಅವು ಈಗಿನ ಕಂಬಳಿ ಜಮಖಾನೆಗಳಂತಿರದಿದ್ದರೂ ಮೃದುವಾದ ಉಣ್ಣೆಯಿಂದ ಜುಂಗು ಜುಂಗಿನ ಮೇಲ್ಮೈವುಳ್ಳ ನೆಲಗಂಬಳಿಗಳಾಗಿದ್ದುವೆಂದು ಹೇಳಬಹುದು. ಈಗ ಉಳಿದಿರುವ ಅತ್ಯಂತ ಪ್ರಾಚೀನವಾದ ಹಾಸು ಸಾಧನ ಪ್ರ.ಶ. 2ನೆಯ ಶತಮಾನದ್ದು, ಇದಕ್ಕೆ ಜುಂಗಿನ ಮೇಲ್ಮೈ ಇದೆ. ಇದನ್ನು ಆಧುನಿಕ ಜಮಖಾನೆಯ ಅತ್ಯಂತ ಪ್ರಾಚೀನ ರೂಪ ಎಂದು ಹೇಳಬಹುದು.

ಕಂಬಳಿ ಮತ್ತು ಜಮಖಾನೆಯ ನೇಯ್ಗೆಯಲ್ಲಿ ಪರ್ಷಿಯ ಅತ್ಯಂತ ಪ್ರಾಚೀನ ದೇಶವೆಂದು ಇತಿಹಾಸಕಾರರ ಅಭಿಮತ. ಇಲ್ಲಿನ ರತ್ನಗಂಬಳಿಗಳಿಗೆ ವಿಶ್ವದಾದ್ಯಂತ ಅರಮನೆ ಮತ್ತು ಶ್ರೀಮಂತ ಗೃಹಗಳ ಬೇಡಿಕೆಯಿತ್ತೆಂದು ತಿಳಿದಿದೆ. ಪ್ರ.ಶ.ಪು.538ರಲ್ಲಿ ಪರ್ಷಿಯನ್ನರು ಬ್ಯಾಬಿಲೋನನ್ನು ಗೆದ್ದಮೇಲೆ ಪರ್ಷಿಯದ ಕಂಬಳಿ ತಯಾರಿಕೆ ಏಳಿಗೆಗೊಂಡಿತು. ಪರ್ಷಿಯದ ಕಂಬಳಿ ನೇಯ್ಗೆಯ ಕಲೆಗಾರಿಕೆ ಉಪಮಾತೀತವಾದ ಕಲೆಗಾರಿಕೆ. ಈ ಕಂಬಳಿಗಳನ್ನು ಆ ಕಾಲದ ಅತ್ಯಂತ ಐಶ್ವರ್ಯಯುತ ಸಾಧನಗಳೆಂದು ಪರಿಗಣಿಸಲಾಗಿತ್ತು. ಗ್ರೀಕ್ ಮತ್ತು ರೋಮ್ ದೇಶಗಳೆರಡೂ ಅಂಥ ರತ್ನಗಂಬಳಿ ಮತ್ತು ಜಮಖಾನೆಗಳನ್ನು ಬಹಳವಾಗಿ ಹೊಗಳಿವೆ. ಅಲೆಕ್ಸಾಂಡರನ ಸೈನಿಕರು ತಮ್ಮ ಪುರ್ವದೇಶದ ಯುದ್ಧಗಳಿಂದ ಹಿಂತಿರುಗುವಾಗ ಜೊತೆಯಲ್ಲಿ ಉತ್ತಮ ಜಮಖಾನೆಗಳನ್ನು ತಂದರೆಂದೂ ರೋಮನರು ಆ ಪ್ರದೇಶವನ್ನು ಆಕ್ರಮಿಸಿಕೊಂಡಾಗ ಅಲ್ಲಿದ್ದ ಪುರಾತನ ಮಗ್ಗಗಳು ಮತ್ತೂ ಪಶ್ಚಿಮಕ್ಕೆ ಎಂದರೆ ಇಟಲಿಯವರೆಗೆ ತಮ್ಮ ದಾರಿಯನ್ನು ಕಂಡುಕೊಂಡುವೆಂದೂ ತಿಳಿದುಬರುತ್ತದೆ. ಶತಮಾನಗಳ ಅನಂತರ ತುರ್ಕರು ಕಾನ್ಸ್‌ಸ್ಟಾಂಟಿನೋಪಲನ್ನು ಆಕ್ರಮಿಸಿಕೊಂಡಾಗ ಅದು ಅನೇಕ ನುರಿತ ಕಲಾವಿದರನ್ನು ಇಟಲಿಯತ್ತ ರವಾನಿಸಿತು. ಆದ್ದರಿಂದಲೇ ಫ್ರಾನ್ಸ್‌ನಲ್ಲಿ ಯುರೋಪಿನ ಇತರ ಭಾಗಗಳಲ್ಲಿಲ್ಲದ ಜಮಖಾನೆಗಳ ಅತ್ಯಂತ ಪ್ರಾಚೀನ ಅವಶೇಷಗಳು ಉಳಿದಿವೆ. 13ನೆಯ ಶತಮಾನದಲ್ಲಿ ವೆನಿಸ್ಸಿನಿಂದ ಏಷ್ಯ ಮೂಲಕ ತಾನು ಕೈಗೊಂಡ ಸುಪ್ರಸಿದ್ಧ ಯಾತ್ರೆಯ ಕಾಲದಲ್ಲಿ ನೋಡಿದ ಕಂಬಳಿಗಳ ಕಲಾಪುರ್ಣತೆ ಮತ್ತು ಸೌಂದರ್ಯಗಳಿಗೆ ಆಶ್ಚರ್ಯಚಕಿತನಾದುದಾಗಿ ಮಾರ್ಕೊಪೋಲೊ ಹೇಳಿಕೊಂಡಿದ್ದಾನೆ. ಈ ಕಂಬಳಿಗಳು ಬೆಲೆಕಟ್ಟಲಾಗದಂಥ ಕಲಾಕೆಲಸಗಳೆಂದೂ ಅವು ಅನನುಕರಣೀಯ ಬಣ್ಣಗಳಿಂದ ಕೂಡಿದವೆಂದೂ ಆತ ಬರೆದಿದ್ದಾನೆ. ರಿಚರ್ಡ್‌ ಹ್ಯಾಕ್ಲೂಟನ ಪ್ರಿನ್ಸಿಪಾಲ್ ನ್ಯಾವಿಗೇಷನ್ಸ್‌ ಎಂಡ್ ಡಿಸ್ಕವರಿ ಆಫ್ ಇಂಗ್ಲಿಷ್ ನೇಷನ್ ಎಂಬ ಕೃತಿಯಲ್ಲಿ (1589) ಪರ್ಷಿಯಕ್ಕೆ ಪ್ರಯಾಣ ಮಾಡಲಿದ್ದ ವ್ಯಾಪಾರಿಯೊಬ್ಬ ಆಡುವ ಮಾತು ಪ್ರಪಂಚದಲ್ಲಿ ಅತ್ಯುತ್ತಮವಾದ ಉಣ್ಣೆಯ ಜುಂಗು. ಜುಂಗಿನ ಬಣ್ಣದ ಜಮಖಾನೆಗಳು ಅಲ್ಲಿ ದೊರೆಯುತ್ತವೆ. ಆ ಜುಂಗು ಕಂಬಳಿಗಳಿಗೆ ಬಣ್ಣಹಾಕುವ ಕಲೆಯನ್ನು ನೀವು ಕಲಿಯಬೇಕಾದರೆ ನಿಮ್ಮ ಎಲ್ಲ ಶಕ್ತಿಸಾಮಥರ್ಯ್‌ಗಳನ್ನೂ ಉಪಯೋಗಿಸಬೇಕಾಗುತ್ತದೆ. ಅವುಗಳಿಗೆ ಹೇಗೆ ಬಣ್ಣ ಹಾಕಲಾಗಿದೆಯೆಂದರೆ ಮಳೆ, ಮದ್ಯ ಅಥವಾ ಅನಿಲ ಅದನ್ನು ಅಳಿಸಲಾರವು.

ಮಧ್ಯಯುಗದ ಪುರ್ವಭಾಗದಲ್ಲಿ ಧರ್ಮಯುದ್ಧಗಳಲ್ಲಿ (ಕ್ರೂಸೇಡ್ಸ್‌) ವಿಜಯಿಗಳಾದವರು ಪರಾಜಿತ ರಾಷ್ಟ್ರಗಳಿಂದ ಕಂಬಳಿ ಜಮಖಾನೆ ಮುಂತಾದ ಅಮೂಲ್ಯ ಕಲಾವಸ್ತುಗಳನ್ನು ಕೊಳ್ಳೆಹೊಡೆದುಕೊಂಡು ಹೋದುದಕ್ಕೆ ದಾಖಲೆಗಳಿವೆ. ಇಟಲಿ ಮತ್ತು ಸ್ಪೇನ್ ದೇಶಗಳಲ್ಲಿ ಕಂಬಳಿ ಮತ್ತು ಜಮಖಾನೆ ನೇಯ್ಗೆಯನ್ನು ಆರಂಭಿಸಿದ (14ನೆಯ ಶತಮಾನ) ಕೀರ್ತಿ ಸೊರ್ಯಾಸಿಯನ್ನರದು. ಸೊರ್ಯಾಸಿಯನ್ನರು ಅಥವಾ ಮೂರರು ಸ್ಪೇನ್ ದೇಶವನ್ನು ಆಕ್ರಮಿಸಿದಾಗ ವಾಸ್ತವವಾಗಿ ಪ್ರಥಮ ಜಮಖಾನೆಯ ಮಗ್ಗಗಳು ಸ್ಥಾಪನೆಯಾದ ಬಗ್ಗೆ ಮೊದಲ ಸ್ಪಷ್ಟ ಪುರಾವೆಗಳು ಇಂದಿಗೂ ಉಳಿದಿವೆ. ಫ್ರಾನ್ಸಿನ ನಾಲ್ಕನೆ ಹೆನ್ರಿ 1604ರಲ್ಲಿ ಲುವಿಯರ್ನಲ್ಲಿ ಜಮಖಾನೆ ನೇಯ್ಗೆಯ ಕೋಣೆಯೊಂದನ್ನು ನಿರ್ಮಿಸಿದ ಬಗ್ಗೆ ಆಧಾರಗಳು ಉಂಟು, ಅಬುಸನ್ ಮತ್ತು ಪ್ಯಾರಿಸ್ಗಳಲ್ಲಿ ಬೆಳೆದ ಕಂಬಳಿ ತಯಾರಿಕೆಯ ಉದ್ಯಮ ನಾರಿನ ಕಂಬಳಿ ನೇಯ್ಗೆಯಿಂದ ಆರಂಭವಾಗಿದೆ. ಅಬುಸನ್ ಕಂಬಳಿಗೆ ಅದೇ ಹೆಸರನ್ನು ಕೊಡಲಾಗಿದೆ. ತುಪ್ಪಟದಿಂದ ನೇಯ್ದವುಗಳಾದರೂ ನೆಲಕ್ಕೆ ಹಾಸಲು ಉಪಯೋಗವಾಗುವಂತೆ ದಪ್ಪನಾಗಿ ಮಾಡಲು ಒಂದರ ಮೇಲೊಂದು ದಾರದಿಂದ ನೇಯ್ದು ಅವನ್ನು ಸಿದ್ಧಪಡಿಸುತ್ತಾರೆ. ಪ್ಯಾರಿಸ್ಸಿನಲ್ಲಿ ಕೈಗಳಿಂದಲೇ ನೇಯ್ದ ಉದ್ದನೆಯ ಜುಂಗಿನ ಒಳ್ಳೆ ಕಂಬಳಿಗಳು ಅಬುಸನ್ನಿನವಕ್ಕಿಂತ ಉತ್ತಮವಾದುವು.

ಬೆಳೆವಣಿಗೆ[ಬದಲಾಯಿಸಿ]

ಹಾಳುಬಿದ್ದ ಸಾಬೂನಿನ ಕಾರ್ಖಾನೆಯಲ್ಲಿ ಕಂಬಳಿಗಳು ಮೊದಲು ತಯಾರಾದುದರಿಂದ ಅವು ಸ್ಯಾವಾನ್ರೀ ಎಂದೇ ಪ್ರಸಿದ್ಧವಾದುವು. ಸವೊನ್ ಎಂಬುದು ಸಾಬೂನು ಎಂಬ ಪದದ ಫ್ರೆಂಚ್ ಮೂಲ. ಸವೊನ್ನರಿ ನೇಯ್ಗೆಯ ತಂತ್ರವೂ ಪ್ರಾಚೀನ ಕಾಲದ ಕೈಮಗ್ಗದ ನೇಯ್ಗೆಯ ತಂತ್ರವೂ ಒಂದೇ ರೀತಿಯಾಗಿತ್ತು. ಫ್ರಾನ್ಸಿನ ಅಬುಸನ್ ಮತ್ತು ಸ್ಯಾವಾನ್ರೀಗಳು ಜಮಖಾನೆಯ ಇತಿಹಾಸದಲ್ಲಿ ಅತ್ಯಂತ ಪ್ರಮುಖವಾದುವೆಂದು ಪ್ರಸಿದ್ಧವಾಗಿವೆ. ಆ ಕಾಲದ ಅತ್ಯಂತ ಚತುರ ಕಲಾವಿದರಿಂದ ವಿನ್ಯಾಸಗೊಂಡು ಬಹು ಎಚ್ಚರಿಕೆಯಿಂದ ನೇಯ್ದ ಜಮಖಾನೆಗಳು ಅರಮನೆ ಮತ್ತು ಶ್ರೀಮಂತರ ಗೃಹಗಳಲ್ಲಿ ಉಪಯೋಗಿಸಲಾಗುತ್ತಿದ್ದ ಕಲಾ ಕೃತಿಗಳಾಗಿದ್ದುವು. 14ನೆಯ ಲೂಯಿಯ ಕಾಲದಲ್ಲಿ ಕಂಬಳಿ ಮತ್ತು ಜಮಖಾನೆಯ ನೇಯ್ಗೆಯವರು ತಮ್ಮ ಸುವರ್ಣಯುಗವನ್ನು ಕಂಡರು. 1685ರಲ್ಲಿ ಈ ನಿರಂಕುಶ ಸರ್ವಾಧಿಕಾರಿ ಸಾನ್ಟ್ಸಿ ನಗರದ ಮೇಲಿನ ತನ್ನ ವಾಗ್ದಾನವನ್ನು ರದ್ದುಪಡಿಸಿ ಶಾಸನ ಹೊರಡಿಸಿದಾಗ, ನೇಕಾರರ ಸಂಘದ ಸದಸ್ಯರಲ್ಲಿ ಬಹುಮಂದಿ ಪ್ರಾಟಸ್ಟೆಂಟರಾದುದರಿಂದ ಅವರಿಗೆ ಧಾರ್ಮಿಕ ರಕ್ಷಣೆ ದೊರೆಯದೆ ಈ ಫ್ರೆಂಚ್ ಕುಶಲಿ ಕೆಲಸಗಾರರು ಜರ್ಮನಿ, ಬೆಲ್ಜಿಯಂ ಮತ್ತು ಇಂಗ್ಲೆಂಡ್ಗಳಿಗೆ ವಲಸೆ ಹೋದರು. ಈ ನಿರಾಶ್ರಿತರು ಬ್ರಸಲ್ಸ್‌ನಲ್ಲಿ ಕುಣಿಕೆಯ ಮಖಮಲ್ಲು ಜಮಖಾನೆ ತಯಾರಿಸಿ ಆ ನಗರದ ಹೆಸರಿನಿಂದಲೆ ಕರೆದರು. ಇಂಗ್ಲೆಂಡಿನಲ್ಲಿ ವಿಲ್ಸನ್ ಮತ್ತು ಆಕ್ಸ್‌ಮಿನ್ಸ್‌ಟರ್ ನಗರಗಳಲ್ಲಿ ಜಮಖಾನೆ ನೇಯ್ಗೆಯ ಉದ್ಯಮ ಅದೇ ನಗರದ ಹೆಸರಿನಿಂದ ಕಾರ್ಯಾರಂಭ ಮಾಡುವಂತೆ ಮೂರನೆಯ ವಿಲಿಯಮ್ ಒಂದು ಶಾಸನ ಹೊರಡಿಸಿದ. ಇಂಗ್ಲೆಂಡಿನ ಜಮಖಾನೆ ಉದ್ಯಮದಲ್ಲಿ ಒಂದು ಪ್ರಮುಖವಾದ ಹೆಸರಾದ ಕಿಡ್ಡರ್ಮಿನ್ಸ್‌ಟರ್ನಲ್ಲಿ ಸ್ಕಾಟ್ ನೆಯ್ಗೆಯವರು ಮಗ್ಗಗಳನ್ನು ಸ್ಥಾಪಿಸಿದರು. 1740ರಲ್ಲಿ ಫ್ರಾನ್ಸ್‌ ಮತ್ತು ಹಾಲೆಂಡುಗಳಿಂದ ಬಂದ ನೇಯ್ಗೆಯವರೊಂದಿಗೆ ಇಂಗ್ಲೆಂಡಿನ ಬ್ರುಸೆಲ್ಸಿನಲ್ಲಿ ನೇಯ್ಗೆಯನ್ನು ಆರಂಭಿಸಲಾಯಿತು.

ಭಾರತದಲ್ಲಿ[ಬದಲಾಯಿಸಿ]

ಕಂಬಳಿ ಮತ್ತು ಜಮಖಾನೆಯ ಉದ್ಯಮದ ಬಗ್ಗೆ ಭಾರತದಲ್ಲಿ ಆಧಾರಗಳು ಬಹಳ ಕಡಿಮೆಯೆಂದು ಐರೋಪ್ಯರ ಅಭಿಮತ. ಭಾರತ ಉಷ್ಣದೇಶ ವಾದುದರಿಂದ ಸ್ವಾಭಾವಿಕವಾಗಿಯೇ ಇಲ್ಲಿ ಉಣ್ಣೆಯ ವಸ್ತ್ರಗಳಿಗೆ ಬೇಡಿಕೆ ಕಡಿಮೆ ಎಂಬುದು ಅವರ ವಾದಕ್ಕೆ ಇಂಬುಕೊಟ್ಟಿರುವ ಸಂಗತಿ. ಆದರೆ ಈ ವಾದವನ್ನು ಒಪ್ಪಲು ಸಾಧ್ಯವಾಗುವುದಿಲ್ಲ. ಭಾರತ ರತ್ನಗಂಬಳಿಯ ನೇಯ್ಗೆಯಲ್ಲಿ ತನ್ನದೇ ಆದ ಹೆಸರುಗಳಿಸಿದ ನಾಡು. ಕಂಬಳಿ ಉದ್ಯಮ ಈ ರಾಷ್ಟ್ರದಲ್ಲಿ ಎಷ್ಟು ಪ್ರಾಚೀನವಾದದ್ದೆನ್ನುವುದಕ್ಕೆ ಈ ಮೊದಲೇ ಆಧಾರವನ್ನು ತೋರಿಸಿದೆ. 16, 17ನೆಯ ಶತಮಾನದಲ್ಲಿ ಮೊಗಲರು ಈ ಉದ್ಯಮವನ್ನು ಪರ್ಷಿಯದಿಂದ ತಂದರೆಂದು ಐರೋಪ್ಯ ವಿದ್ವಾಂಸರ ಅಭಿಪ್ರಾಯ. ಅರಮನೆಯ ಆವಶ್ಯಕತೆಗಳಿಗಾಗಿಯೇ ಅಕ್ಬರ್ ಒಂದು ಮಗ್ಗವನ್ನು ಸ್ಥಾಪಿಸಿದ್ದನೆಂದು ಹೇಳುತ್ತಾರೆ. ಆದರೆ ಕಂಬಳಿಗಳು ಆಗಲೂ ಪರ್ಷಿಯ ದೇಶದಿಂದ ಬರುತ್ತಿದ್ದುವೆಂದು ಅವನ ಜೀವನಚರಿತ್ರೆ ಬರೆದ ಅಬ್ದುಲ್ ಫಜಲ್ ಹೇಳಿದ್ದಾನೆ. ಮೊಗಲರ ಆಸ್ಥಾನದ ರತ್ನಗಂಬಳಿಗಳು ಅತಿ ಆಡಂಬರದಿಂದ ಕೂಡಿದ್ದುವು. ಮೂಲತಃ ಪರ್ಷಿಯನ್ನರಾದ ಮೊಗಲರು ಅಲ್ಲಿಂದ ಕಂಬಳಿಗಳನ್ನು ತರಿಸಿರಬಹುದಾದರೂ ಭಾರತದಲ್ಲಿ ಈ ಉದ್ಯಮವಿರಲಿಲ್ಲ ಎಂದು ಹೇಳುವಂತಿಲ್ಲ. ಉದಾಹರಣೆಗೆ ಷಾ ಜಹಾನ್ ತನ್ನ ಅರಮನೆಗಾಗಿ ದೂರದ ಹಿಮಾಲಯದ ಕಣಿವೆ ಮತ್ತು ಕಾಶ್ಮೀರದಿಂದ ಮೃದುವಾದ ಉಣ್ಣೆ ತರಿಸಿ ಕಂಬಳಿ ಮಾಡಿಸುತ್ತಿದ್ದನೆಂದು ತಿಳಿದುಬರುತ್ತದೆ. ಒಂದು ಜಮಖಾನೆಗೆ ಅದರ ಬೆಲೆಯನ್ನು ಲೆಕ್ಕಿಸದೆ ಒಂದು ಅಂಗುಲಕ್ಕೆ 800-1200 ಹೆಣಿಗೆಗಳಿರುವಂತೆ ಅತ್ಯಂತ ಅಂದವಾಗಿ ತಯಾರಿಸುತ್ತಿದ್ದ ಕೀರ್ತಿ ಭಾರತದ್ದು. ವಿಶೇಷ ಜಮಖಾನೆಗಳು ಮತ್ತು ಪ್ರಾರ್ಥನಾ ರತ್ನಗಂಬಳಿಗಳು ಅಸಾಧಾರಣವಾಗಿರುತಿದ್ದುವು. ಕಂಬಳಿ ಉದ್ಯಮ ಭಾರತದ ಕಾಶ್ಮೀರ, ತಂಜಾವೂರು, ದಾವಣಗೆರೆ ಮುಂತಾದೆಡೆಗಳಲ್ಲಿ ಬಹಳ ಪ್ರಸಿದ್ಧ ಪಡೆದಿತ್ತು. ಭಾರತ ವ್ಯವಸಾಯಪ್ರಧಾನ ರಾಷ್ಟ್ರ. ಇಲ್ಲಿ ಕುರಿ ಸಾಕಣೆ ಮತ್ತು ಉಣ್ಣೆ ನೇಯ್ಗೆ ಅತ್ಯಂತ ಪ್ರಾಚೀನವಾದ ಉದ್ಯಮಗಳಲ್ಲೊಂದಾಗಿರುವುದರಲ್ಲಿ ಯಾವ ಭಿನ್ನಾಭಿಪ್ರಾಯವೂ ಸಲ್ಲದು.

ಕಂಬಳಿ ಉದ್ಯಮ 16, 17ನೆಯ ಶತಮಾನದಲ್ಲಿ ಭಾರತಕ್ಕೆ ಪರ್ಷಿಯನ್ನರಿಂದ ಬಂದಿತು ಎಂದು ಹೇಳುವ ಆ ವಿದ್ವಾಂಸರು ಭಾರತೀಯ ಸಾಹಿತ್ಯದಲ್ಲಿನ ಹೇಳಿಕೆಗಳನ್ನು ಗಮನಿಸಲಿಲ್ಲ ಎಂದು ಕಾಣುತ್ತದೆ. ಜಂಗಮ ದಾಸೋಹದಲ್ಲಿ ಸಣ್ಣ ಕಂಬಳಿ ಮತ್ತು ಶಾಲುಗಳ ಅರ್ಪಣೆಯೂ ಒಂದು ಪ್ರಮುಖ ವಿಧಿಯಾಗಿ ಬರುತ್ತದೆ. 12ನೆಯ ಶತಮಾನದ ವಚನಗಳಲ್ಲಿ ಕಂಬಳಿ ನಾಗಿದೇವ ಎಂಬ ವಚನಕಾರನೊಬ್ಬ ಪ್ರಾಯಶಃ ಕಂಬಳಿ ಮಾಡುವ ವೃತ್ತಿಯವನಿರಬೇಕು. ಕಂಬಳಿ ಮತ್ತು ಕರಿಯ ಕಂಬಳಿಗಳಂತೂ ಜನಪದ ಸಾಹಿತ್ಯ ಮತ್ತು ಗಾದೆಗಳಲ್ಲಿ ವಿಲೀನವಾಗುವಷ್ಟು ಪ್ರಸಿದ್ಧಿ ಪಡೆದಿದ್ದುವು.

ಕನ್ನಡನಾಡು ಕಂಬಳಿ ತಯಾರಿಕೆಯಲ್ಲಿ ಬಹಳ ಪುರಾತನವಾದ ದೇಶ. 12ನೆಯ ಶತಮಾನದ ವಚನ ಸಾಹಿತ್ಯದಲ್ಲಿ ಕಂಬಳಿ ದಾನದ ಬಗ್ಗೆ ವಿಪುಲವಾದ ಹೇಳಿಕೆಗಳಿವೆ. ಕಂಬಳಿಯ ಗದ್ದುಗೆಯಂತೂ ಬಹಳ ಪ್ರಸಿದ್ಧವಾದುದು. ವಿಜಯನಗರದ ಅಕ್ಕಪಕ್ಕದ ಮೈದಾನಗಳಲ್ಲಿ ಹುಡುಗರು ಕುರಿಗಳ ಮೇಲೆ ಸವಾರಿ ಮಾಡುತ್ತಿದ್ದುದನ್ನು ಕಂಡುದಾಗಿ ಪೋರ್ಚುಗೀಸ್ ಯಾತ್ರಿಕ ಪೆಯಿಜ್ ಹೇಳಿದ್ದಾನೆ. ಈ ಹೇಳಿಕೆ ಆ ಕಾಲದ ಕುರಿಗಳ ಸುದೃಢತೆಗೆ ಸಾಕ್ಷಿ. ತರುವಾಯ ಮೈಸೂರು ಅರಸರು ಕುರಿಸಾಕಣೆ ಮತ್ತು ಉಣ್ಣೆಯ ಉದ್ಯಮಕ್ಕೆ ಉದಾರ ನೆರವು ನೀಡಿದರು. ಕಂಬಳಿ ತಯಾರಿಕೆ : ಕಂಬಳಿ ತಯಾರಿಕೆಯ ಮೊದಲನೆಯ ಹಂತ ತುಪ್ಪಟ ಸಂಗ್ರಹ. ಇದನ್ನು ಬಂಡ ಎಂದು ಕರೆಯುತ್ತಾರೆ. ಗ್ರಾಮಾಂತರ ಪ್ರದೇಶದಲ್ಲಿ ಕುರುಬ, ಹಳ್ಳಿಕಾರ, ಹಟ್ಟಿಕಾರ, ಒಕ್ಕಲಿಗರು, ಗೊಲ್ಲರು, ಲಿಂಗಾಯಿತರು ಗೊಬ್ಬರ ಮತ್ತು ಮಾಂಸಕ್ಕಾಗಿ ಕುರಿ ಸಾಕುತ್ತಾರೆ. ಹೀಗೆ ಸಾಕಿದ ಕುರಿಗಳ ತುಪ್ಪಟದಿಂದ ಹೊದೆಯುವ ಕಂಬಳಿಗಳು ಅವರಿಗೆ ದೊರೆಯುವ ಉಪಆದಾಯ. ಮೇಲೆ ಹೇಳಿದ ಜನಾಂಗಗಳಲ್ಲಿ ಕುರಿಯ ತುಪ್ಪಟ ಕತ್ತರಿಸಿ ಕಂಬಳಿ ಮಾಡುವ ಕಲೆ ಕುರುಬ ಜನಾಂಗದವರಿಗೆ ಮಾತ್ರ ಸಿದ್ಧಿಸಿದೆ. ಯಂತ್ರಯುಗದ ಆರಂಭದವರೆಗೆ ಇದು ಬರಿಯ ಕುರುಬರ ಕಸುಬು. ಒಂದು ಕತ್ತರಿ, ಕೆಲವು ಕಂಬಳಿಗಳನ್ನು ಹೆಗಲ ಮೇಲೆ ಹಾಕಿಕೊಂಡು ಈ ಕಂಬಳಿ ನೇಯ್ಗೆಕಾರ ವರ್ಷಕ್ಕೆ ಎರಡುಬಾರಿ ಬಂಡ ಸಂಗ್ರಹಣೆಗೆ ಹಳ್ಳಿಗಳ ಮೇಲೆ ಹೋಗುತ್ತಾನೆ. ಕುರಿ ಸಾಕಿದ ರೈತರು ತುಪ್ಪಟ ಬೆಳೆದ ತಮ್ಮ ಕುರಿಗಳನ್ನು ಕತ್ತರಿಸಲು ಅವನಿಗೊಪ್ಪಿಸಿ ಅದಕ್ಕೆ ಬದಲಾಗಿ ಕಂಬಳಿಗಳನ್ನು ಪಡೆಯುತ್ತಾರೆ. ಐವತ್ತು ಕುರಿಗಳ ಒಂದು ಸೊಲಿಗೆ ತುಪ್ಪಟಕ್ಕೆ ಒಂದು ದಡೂತಿ ಕಂಬಳಿ ವಿನಿಮಯವಾಗುತ್ತದೆ. ಹೀಗೆ ಪಡೆದ ಒಂದು ಸೊಲಿಗೆ ತುಪ್ಪಟ ಹಳೇ ತೂಕದ ಒಂದು ಮಣವಿರುತ್ತದೆ. ಅದರಲ್ಲಿ ಮೂರು ದಡೂತಿಯ ಕಂಬಳಿಗಳಾಗುತ್ತವೆ. ಅದರಿಂದ ಕಸುಬುದಾರನಿಗೆ ಎರಡು ಕಂಬಳಿಗಳ ಲಾಭ ದೊರೆಯುತ್ತದೆ.

ಬಂಡದಲ್ಲಿ ಎರಡು ವಿಧ, ಮೊದಲೇ ಕುರಿಗಳನ್ನು ಚೆನ್ನಾಗಿ ತೊಳೆದು ಕತ್ತರಿಸುವುದು ಮೊದಲನೆಯ ರೀತಿ. ಇದು ಒಳ್ಳೆಯ ಬಂಡ, ಏಕೆಂದರೆ ಕುರಿಗಳ ಮೈಗೆ ಅಂಟಿದ್ದ ಕಸಕಡ್ಡಿ, ಮುಳ್ಳು, ಕೊಳೆಯೆಲ್ಲ ಹೋಗಿ ತುಪ್ಪಟ ಸ್ವಚ್ಛವಾಗಿರುತ್ತದೆ. ಕುರಿಗಳನ್ನು ತೊಳೆಯದೆ ಕತ್ತರಿಸುವುದು ಎರಡನೆಯ ವಿಧ. ಅದನ್ನು ಬೆವರು ತುಪ್ಪಟ ಎಂದು ಕರೆಯುತ್ತಾರೆ. ಈ ಬೆವರು ತುಪ್ಪಟವನ್ನು ಗೆರಸಿಗಳಲ್ಲಿ ಹಾಕಿಕೊಂಡು ಕೆರೆಗಳಲ್ಲಿ ಅಥವಾ ಹೊಳೆಯ ತಿಳಿನೀರಿನಲ್ಲಿ ಕೀರೇಸೊಪ್ಪು ಜಾಲಿಸುವಂತೆ ಜಾಲಿಸಿ ತೊಳೆದು ಒಣಗಿಸುತ್ತಾರೆ ಇದನ್ನು ಹಿಂಜಿ ಹಂಜಿ ಮಾಡುವುದು ಎರಡನೆಯ ಕೆಲಸ. ಈಗ ತುಪ್ಪಟ ಹಿಂಜುವುದಕ್ಕೆ ಯಂತ್ರಗಳಿವೆ. ಆದರೆ ಮೊದಲಿಗೆ ಪಿಂಜಾರರು ಕೈಬೆಸಗಳಿಂದ ತುಪ್ಪಟ ಹೊಡಚುತ್ತಿದ್ದರು. ಕಂಬಳಿ ತಯಾರಿಕೆ ಗೃಹಕೈಗಾರಿಕೆಯಾಗಿರುವ ಕಡೆಗಳಲ್ಲೆಲ್ಲ ಇಂದಿಗೂ ಈ ಪದ್ಧತಿ ಜಾರಿಯಲ್ಲಿದೆ. ಚೆನ್ನಾಗಿ ಹೊಡಚಿದ ತುಪ್ಪಟ ಬಹಳ ಮೃದುವಾಗುತ್ತದೆ. ಇದರಿಂದ ಹಂಜಿಗಳನ್ನು ತಯಾರುಮಾಡುತ್ತಾರೆ.

ಕಂಬಳಿ ನೇಯ್ಗೆಯಲ್ಲಿ ನೂಲುವುದು ಒಂದು ಪ್ರಮುಖವಾದ ಕಾರ್ಯ, ಆದ್ದರಿಂದಲೇ ಬಹುಶಃ ನೂಲಿನಂತೆ ಸೀರೆ ಎಂಬ ಗಾದೆಯ ಮಾತು ಹುಟ್ಟಿಕೊಂಡಿರಬೇಕು. ನೂಲು ಯಾವ ಮಟ್ಟವಿರುತ್ತದೆಯೋ ಕಂಬಳಿ ಆ ಮಟ್ಟದ್ದಾಗುತ್ತದೆ. ಹೊಡಚಿ ಹಿಂಜಿ ಹಂಜಿಮಾಡಿದ ತುಪ್ಪಟವನ್ನು ಕಂಬಳಿಗಳ ವಿನ್ಯಾಸದ ಯೋಜನೆಗನುಗುಣವಾಗಿ ನೂಲುತ್ತಾರೆ.

ಬಹಳ ಹಿಂದೆ ಇಂಥ ಹಂಜಿಗಳನ್ನೂ ತೊಡೆಗದಿರಿನಿಂದ ನೂಲುತ್ತಿದ್ದರು. ಇದು ಬಹಳ ನಿಧಾನ ಮತ್ತು ಕಷ್ಟದ ಕೆಲಸವಾಗಿತ್ತು. ರಾಟೆಯ ಪ್ರವೇಶ ಬಹುಶಃ ನೂಲುವುದರ ಇತಿಹಾಸದಲ್ಲಿ ಒಂದು ಕ್ರಾಂತಿಯನ್ನು ಎಬ್ಬಿಸಿತು. ಈ ಕುಶಲ ಕಲೆ ಬೆಳೆದುಬಂದ ರೀತಿಯೇ ಒಂದು ಕೌತುಕದ ಕಥೆ. ಸು. 600 ವರ್ಷಗಳಷ್ಟು ಹಳೆಯದಾದ ಚರಕವನ್ನು ಭಾರತೀಯರೇ ಮೊದಲು ಕಂಡುಹಿಡಿದದ್ದು ಎಂದು ಅನೇಕರ ಅಭಿಪ್ರಾಯ. ಆದರೆ ಇದನ್ನು ಕಂಡುಹಿಡಿದವರ ಹೆಸರು ಅಜ್ಞಾತವಾಗಿಯೇ ಉಳಿದಿದೆ. ತಿರುಗಿಸಲು ದೊಡ್ಡ ಚಕ್ರದ ಬಳಕೆ ಮತ್ತು ಅದಕ್ಕೆ ತಕ್ಕ ಕದರನ್ನು ಉಪಯೋಗಿಸಿದುದರಿಂದ ಚರಕವನ್ನು ವೇಗವಾಗಿ ತಿರುಗಿಸಲು ಸಾಧ್ಯವಾಗಿ ಹೆಚ್ಚು ನೂಲು ತೆಗೆಯಲು ಅನುಕೂಲವಾಯಿತು. ಆದುದರಿಂದಲೇ ಕಂಬಳಿ ಮತ್ತು ಜಮಖಾನೆಯ ಉದ್ಯಮದಲ್ಲಿ ಚರಕ ಬಹಳ ಪ್ರಮುಖವಾದ ಮಾಧ್ಯಮವಾಗಿದೆ.

ಚರಕದಿಂದ ನೂತ ನೂಲನ್ನು ಕಂಡಿಕೆಗಳಾಗಿ ಮಾಡಿಕೊಳ್ಳುತ್ತಾರೆ. ಕಂಬಳಿ ನೇಕಾರರೇ ನೂಲನ್ನು ನೂಲುವುದಿಲ್ಲ. ಬೇರೆಯವರಿಗೆ ಕೂಲಿ ಕೊಟ್ಟು ನೂಲಿಸುವುದೂ ಉಂಟು. ಇಪ್ಪತ್ತೆಂಟು ತೊಲ ಹಿಂಜಿದ ತುಪ್ಪಟ್ಟಕ್ಕೆ ಒಂದು ಹಂಜಿ ಎಂದು ಹೆಸರು. ನೂಲಿನಲ್ಲಿ ಅನೇಕ ವಿಧಗಳುಂಟು: 1 ಹುರಿಗಂಬಳಿ ನೂಲು, 2 ಉಜ್ಜುಗಂಬಳಿ ನೂಲು, 3 ಸಣ್ಣಕಂಬಳಿ ನೂಲು, ಇತ್ಯಾದಿ ಒಟ್ಟಿನಲ್ಲಿ ನೂಲಿನ ಗುಣಮಟ್ಟದಂತೆ ಕಂಬಳಿ ತಯಾರಾಗುತ್ತದೆ.

ಆಧಾರವೆಂತೆಂಬ ಅಂಬಲಿಯನೆ ತೊಡೆದು-ಎಂಬ ಜನಪದ ನುಡಿಯೊಂದರಂತೆ ಅಂಬಲಿಯ ತಯಾರಿಕೆ ಮತ್ತು ಅದನ್ನು ನೂತ ದಾರಕ್ಕೆ ಸವರುವುದು ಒಂದು ವಿಶಿಷ್ಟ ಕಲೆ. ಕಂಬಳಿಯ ತಯಾರಿಕೆಯಲ್ಲಿ ಅಂಬಲಿಯ ಪಾತ್ರ ಹಿರಿದಾದುದು. ಇದರ ತಯಾರಿಕೆಯೇ ಒಂದು ವಿಶಿಷ್ಟ ರೀತಿಯದು. ಮೊದಲು ಒಳ್ಳೆಯ ಹುಣಿಸೆ ಬೀಜವನ್ನು ಹದವರಿತು ಹುರಿಯಬೇಕು. ಆಮೇಲೆ ಅವನ್ನು ನೆಗ್ಗಿ ಮೇಲಿನ ಕರಿಯ ಸಿಪ್ಪೆ ತೆಗೆದರೆ ದೊರೆಯುವ ಬಿಳಿ ಪೊಪ್ಪುಗಳನ್ನು ಸು. ಹನ್ನೆರಡು ಗಂಟೆಗಳ ಕಾಲ ಅಥವಾ ಒಂದು ರಾತ್ರಿ ನೀರಿನಲ್ಲಿ ನೆನೆಹಾಕಬೇಕು. ಚೆನ್ನಾಗಿ ನೆನೆದ ಬೀಜವನ್ನು ಒರಳಲ್ಲಿ ಹಾಕಿ ಚೆನ್ನಾಗಿ ನುಣ್ಣಗೆ ತಿರುವಿ ಆ ಹಿಟ್ಟನ್ನು ನೀರಿನಲ್ಲಿ ಕದರಿ ಒಲೆಯ ಮೇಲಿಟ್ಟು ಹದವಾದ ಉರಿಯಲ್ಲಿ ಚೆನ್ನಾಗಿ ಬೇಯಿಸಬೇಕು. ಉದ್ದನೆಯ ಕೋಲಿನ ತುದಿಗೆ ಈಚಲುಗರಿಯನ್ನು ಸಿಕ್ಕಿಸಿದ ಉಜ್ಜುಗುಲ್ಲದಿಂದ ಅದನ್ನು ಗಂಟಾಗದಂತೆ ತಿರುವುತ್ತಿರಬೇಕು. ಸು. 2-3 ಗಂಟೆಗಳ ಕಾಲ ಹೀಗೆ ಬೇಯಿಸಿದ ಅನಂತರ ಅದು ಚೆನ್ನಾಗಿ ಬೆಂದು ಒಂದು ರೀತಿಯ ಮುದ್ದೆಯಂತಾಗುತ್ತದೆ. ಈ ಮುದ್ದೆಯನ್ನು ಮತ್ತೆ ನೀರಿನಲ್ಲಿ ಕದರಿದರೆ ಅದು ಅಂಟು ಅಂಟಾದ ಗಂಜಿಯಂಥ ಸರಿಯಾಗುತ್ತದೆ. ಇದನ್ನು ಹುಣಿಸೆ ಅಂಬಲಿ, ಗಂಜಿ ಸರಿ ಎಂದೆಲ್ಲ ಕರೆಯುತ್ತಾರೆ. ಮುಂದಿನ ಕ್ರಮ ದಾರವನ್ನು ಹಾಸುಮಾಡುವುದು, ಸು. ಒಂಬತ್ತು ಮೊಳ ಉದ್ದದ 220-240 ಜೊತೆ ದಾರಗಳುಳ್ಳ ಹಾಸುಗಳನ್ನಾಗಿ ಮಾಡುತ್ತಾರೆ. ಹಾಸು ಎಂದರೆ ಎಳೆಗಳು ಬಿಡಿ ಬಿಡಿಯಾಗಿ ಒಂದರ ಪಕ್ಕದಲ್ಲೊಂದು ಬರುವಂತೆ ಜೋಡಿಸುವ ರೀತಿ. ಏಳು, ಗೂಟಗಳ ಅರುಗಣಿ ಎಂಬ ಹಲಗೆಯಂಥ ಸಾಧನದಲ್ಲಿ ನೂಲನ್ನು ಹಾಸಿಕ್ಕುತ್ತಾರೆ. ಹೀಗೆ ಹಾಸಿದ ನೂಲನ್ನು ಒಂದು ಕ್ರಮದಲ್ಲಿ ಕಟ್ಟಿ ತಿಳಿಯಾದ ಹುಣಿಸೆ ಸರಿಯಲ್ಲಿ ಅದ್ದಿ ಬಿಸಿಲಿನಲ್ಲಿಟ್ಟುಕೊಂಡು ಕುಂಚಿಗೆ ಎಂಬ ಉಪಕರಣದ ಸಹಾಯದಿಂದ ಊಕೆ ಮಾಡುತ್ತಾರೆ-ಎಂದರೆ ನೂಲನ್ನು ನಯಗೊಳಿಸುವುದು ಎಂದರ್ಥ. ಆಗ ನೂಲಿನ ಕೂದಲು ಅಂಬಲಿಯೊಡನೆ ಸೇರಿ ಒಂದು ಹದಕ್ಕೆ ಬರುತ್ತದೆ. ಎಳೆಗಳು ಒಂದಕ್ಕೊಂದು ಅಂಟದೆ ಬಿಡಿಬಿಡಿಯಾಗಿರುತ್ತವೆ.

ಇಷ್ಟೆಲ್ಲ ಆದ ಮೇಲೆ ದಾರ ಅಥವಾ ಹುರಿಯನ್ನು ಮಗ್ಗಕ್ಕೆ ಏರಿಸುತ್ತಾರೆ. ಹೋಳು ಎನ್ನುವ ಸಾಧನದಲ್ಲಿ ನೂಲನ್ನು ಜೋಡಿಸಿ ಮಗ್ಗದಲ್ಲಿಟ್ಟು ನೇಯುತ್ತಾರೆ. ಈ ಹೋಳುಗಳು 9 ಮೊಳ ಉದ್ದ 3 ಮೊಳ ಅಗಲವಿರುತ್ತವೆ. (ನೇಯ್ದ ಮೇಲೆ ಅನುಕೂಲಕ್ಕೆ ತಕ್ಕಹಾಗೆ ಈ ಹೋಳುಗಳನ್ನು ಎರಡರಿಂದ ನಾಲ್ಕನ್ನು ಸೇರಿಸಿ ಒಂದು ಕಂಬಳಿ ಮಾಡುತ್ತಾರೆ). ಅಣಿಗಳನ್ನು ಬಿಡಿಸಿ ಗಂಜಿಯಲ್ಲಿ ಅದ್ದಿ ಸಿದ್ಧವಾದ ಹುರಿಯನ್ನು ಲಾಳಿಯ ಮೂಲಕ ಸೇರಿಸಿ ಮತ್ತೆ ಅಣಿಯನ್ನು ಕೂಡಿಸಿ ಬೇವು ಎಂಬ ಸಾಧನದಿಂದ ಒತ್ತಿ ಹುರಿಗಳನ್ನು ಹತ್ತಿರ ಸೇರಿಸುತ್ತ ಹೋಗುತ್ತಾರೆ. ಹೀಗೆ ನೇಯ್ದು ಸಿದ್ಧವಾದ ಕಂಬಳಿಯ ಹೋಳುಗಳಿಗೆ ಮತ್ತೆ ಹುಣಿಸೆ ಸರಿಯನ್ನು ಸವರಿ ಬಿಸಿಲಿನಲ್ಲಿ ನೇತುಹಾಕಿ ಒಣಗಿಸುತ್ತಾರೆ. ಹೀಗೆ ಕ್ರಮಬದ್ಧವಾಗಿ ಒಣಗಿಸಿದ ನೇಯ್ದ ಹೋಳುಗಳನ್ನು ಅನುಕೂಲಕ್ಕೆ ಅನುಗುಣವಾಗಿ ಎರಡರಿಂದ ನಾಲ್ಕು ಹೋಳುಗಳನ್ನು ಉಣ್ಣೆಯ ದಾರದಿಂದ ಹೊಲೆದರೆ ಒಂದು ಪುರ್ಣ ಕಂಬಳಿ ಸಿದ್ಧವಾದಂತಾಯಿತು.

ಕಂಬಳಿಗಳ ವಿಧಗಳು[ಬದಲಾಯಿಸಿ]

ಕಂಬಳಿಗಳಲ್ಲಿ ಹಲವು ವಿಧಗಳುಂಟು. ತುಪ್ಪಟದ ಉತ್ಕೃಷ್ಟತೆ ಮತ್ತು ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ 1 ಹುರಿಗಂಬಳಿ, 2 ಉಜ್ಜುಗಂಬಳಿ, 3 ಸಣ್ಣ ಕಂಬಳಿ 4 ಶಾಲು 5 ಗದ್ದುಗೆ ದಾವಳಿ 6 ಕರಿಯ ಕಂತೆ, ಇತ್ಯಾದಿ.

ಹುರಿಗಂಬಳಿ[ಬದಲಾಯಿಸಿ]

ಇದು ಸಾಮಾನ್ಯ ಬಳಕೆಗೆ ತಯಾರುಮಾಡುವ ಒರಟು ಕಂಬಳಿ. ಅಂಥ ಮೃದುವಲ್ಲದ ತುಪ್ಪಟದಿಂದ ನೂತ ಕೊಂಚ ದಪ್ಪನೆಯ ನೂಲುಗಳಿಂದ ಇದನ್ನು ನೇಯುತ್ತಾರೆ. ನೂಲು ಹುರಿ ಗಾತ್ರವಿರುವುದರಿಂದ ಹುರಿಗಂಬಳಿ ಎಂದು ಕರೆಯುತ್ತಾರೆ. ಹುರಿಗಂಬಳಿ ನಾಲ್ಕು ಹೋಳುಗಳಿಂದ ತಯಾರಾಗಿರುತ್ತದೆ. ಒಂದೇ ಕಂಬಳಿಯ ಅರ್ಧವನ್ನು ಹಾಸಿ ಮತ್ತರ್ಧವನ್ನು ಹೊದೆಯುತ್ತಾರೆ. ಇದನ್ನು ಹೆಗ್ಗಂಬಳಿ ಎಂದೂ ಕರೆಯುತ್ತಾರೆ, ಹಳ್ಳಿಗಾಡುಗಳಲ್ಲಿ ವಾಸಿಸುವ ರೈತರು ಇದನ್ನು ಕೊಳ್ಳುತ್ತಾರೆ; ಕುರಿ ಸಾಕುವವರು ಬಂಡದ ವಿನಿಮಯಕ್ಕೆ ಪಡೆಯುತ್ತಾರೆ.

ಉಜ್ಜುಗಂಬಳಿ[ಬದಲಾಯಿಸಿ]

ಕಂಬಳಿ ತಯಾರಿಕೆಯಲ್ಲಿ ಉಜ್ಜುಗಂಬಳಿ ಮಾಡುವುದು ಒಂದು ವಿಶೇಷ ಕಲೆ. ಕಂಬಳಿ ಮಾಡುವ ಎಲ್ಲ ಕಸುಬುದಾರರಿಗೂ ಇದು ಬರುವುದಿಲ್ಲ. ಆ ಕೆಲಸದಲ್ಲಿ ನಿಷ್ಣಾತರಾದ ಕೆಲವು ಜನ ಮಾತ್ರ ಇದನ್ನು ಮಾಡಬಲ್ಲರು. ಉಜ್ಜು ಕಂಬಳಿಯನ್ನು ಸಾಮಾನ್ಯ ಬಂಡದಿಂದ ಮಾಡಲು ಬರುವುದಿಲ್ಲ. ನೇಕಾರರು ತರುವ ರಾಶಿಬಂಡದಲ್ಲಿ ಮೃದುವಾದುದನ್ನು ಆರಿಸಬೇಕು. ಒಂದು ಮಣದಷ್ಟಿರುವ ಬಂಡದ ರಾಶಿಯಲ್ಲಿ ಇಂಥ ಮೃದುವಾದ ತುಪ್ಪಟ ಮೂರು ಅಥವಾ ನಾಲ್ಕು ಪೌಂಡು ದೊರೆಯುತ್ತದೆ. ಸಾಮಾನ್ಯವಾಗಿ ಈ ತುಪ್ಪಟ ಕುರಿಯ ಮೊದಲನೆಯ ಕತ್ತರಿಯದಾಗಿರಬೇಕು. ಕುರಿಯ ಕತ್ತಿನ ಭಾಗ ಮತ್ತು ಬೆನ್ನಿನ ಮೇಲಿನ ತುಪ್ಪಟ ಇದಕ್ಕೆ ಉತ್ತಮವಾದುದು. ಹೀಗೆ ಆರಿಸಿ ತೆಗೆದ ಅಪ್ಪಟವಾದ ಮೃದು ತುಪ್ಪಟವನ್ನು ಹಿಂಜಿ ಹಂಜಿ ಮಾಡಬೇಕು. ಈಗಿನಂತೆ ಹಿಂಜು ಯಂತ್ರಗಳು ಇಲ್ಲದಿದ್ದ ಹಿಂದಿನ ಕಾಲದಲ್ಲಿ ತುಪ್ಪಟವನ್ನು ಕೈಬೆಸಗಳಿಂದ ಹಿಂಜುತ್ತಿದ್ದರು. ಹಿಂಜಿದ ಹಂಜಿಯಿಂದ ಮೃದುವಾದ, ಹೆಚ್ಚು ಸಡಿಲವಲ್ಲದ, ಹೆಚ್ಚು ಹುರಿಯ ಅಲ್ಲದ ಹೆಚ್ಚು ದಪ್ಪನಲ್ಲದ, ಹೆಚ್ಚು ಸಣ್ಣವೂ ಅಲ್ಲದ ಮಧ್ಯಮ ರೀತಿಯ ದಾರ ತೆಗೆಯಬೇಕು. ಉಜ್ಜುಗಂಬಳಿಯ ನೂಲು ತೆಗೆಯುವುದೇ ಇಲ್ಲಿ ಬಹು ಮುಖ್ಯ ಕೆಲಸ. ಎಷ್ಟರ ಮಟ್ಟಿಗೆ ಒಳ್ಳೆಯ ನೂಲು ಬರುತ್ತದೆಯೋ ಅಷ್ಟರ ಮಟ್ಟಿಗೆ ಕಂಬಳಿ ಉತ್ತಮವಾಗುತ್ತದೆ. ಉಜ್ಜುಗಂಬಳಿ ನೇಯ್ಗೆಯೂ ಒಂದು ವಿಶೇಷ ಕ್ರಮ. ಹುರಿಗಂಬಳಿ ನೇಯ್ಯುವಾಗ ಹೊಕ್ಕನ್ನು ಹುಣಿಸೆ ಸರಿಯಲ್ಲಿ ನೆನೆಸಿ ಉಪಯೋಗಿಸುತ್ತಾರೆ. ಉಜ್ಜುಗಂಬಳಿಗೆ ಉಪಯೋಗಿಸುವ ಹೊಕ್ಕನ್ನು ಹುಣಿಸೆ ಸರಿಯಲ್ಲಿ ಅದ್ದುವುದಿಲ್ಲ. ನೇಯ್ಗೆಗೆ ತಯಾರಾದ ಹಾಸನ್ನು ತಕ್ಕ ಉಪಕರಣಗಳಿಂದ ಮಗ್ಗದಲ್ಲಿ ಜೋಡಿಸಿ ಹೊಕ್ಕಿನ ಎಳೆಗಳನ್ನು ಒಂದು ಕ್ರಮದಲ್ಲಿ ನೇಯುತ್ತಾರೆ. ಉಜ್ಜುಗಂಬಳಿಯ ತಯಾರಿಕೆಯಲ್ಲಿ ನೇಯ್ಗೆ ಬಹಳ ಜಾಗರೂಕತೆಯಿಂದ ಮಾಡಬೇಕಾದ ಕೆಲಸ. ಹೀಗೆ ನೇಯ್ದ ಹೋಳುಗಳು 9 ಮೊಳ ಉದ್ದ 2 ಮೊಳ ಅಗಲವಿರುತ್ತವೆ. ಇಂಥ ಎರಡು ಹೋಳುಗಳನ್ನು ಸೇರಿಸಿ ಉಣ್ಣೆಯ ದಾರದಿಂದ ಹೊಲೆಯುತ್ತಾರೆ. ಆಗ ಅದು ಒಂದು ಕಂಬಳಿಯಾಗುತ್ತದೆ ಈ 9 ಮೊಳ ಉದ್ದ 5 ಮೊಳ ಅಗಲದ ಕಂಬಳಿಯನ್ನು 6 ಮೊಳ ಉದ್ದ 4 ಮೊಳ ಅಗಲಕ್ಕೆ ಇಳಿಸುವ ಕಾರ್ಯ ಉಜ್ಜುವುದರಿಂದ ಆಗುತ್ತದೆ. ಈಚಲು ಗರಿಗಳ ಸುತ್ತ ಇರುವ ಸೀಬು ಎಂಬ ನಾರನ್ನು ತಂದು ಅದನ್ನು ಹಿಂಜಿ ಹದಮಾಡಿ ಹಗ್ಗದಂಥ ದಾರ ತೆಗೆಯುತ್ತಾರೆ. ಈ ಹಗ್ಗವನ್ನು ಸು. ನಾಲ್ಕು ಅಡಿ ಉದ್ದದ ನಾಲ್ಕು ಮರದ ತುಂಡುಗಳನ್ನು ಚಚ್ಚೌಕವಾಗಿ ಜೋಡಿಸಿ ಮಧ್ಯೆ ಚಪ್ಪಟೆಯಂತೆ ಒತ್ತಾಗಿ ಹೆಣೆಯುತ್ತಾರೆ. ಇದು ಒಂದು ರೀತಿಯ ಚೌಕಟ್ಟಿನಂತೆ ಕಾಣುತ್ತದೆ. ಇದನ್ನು ಚೌಕಾಕಾರವಾಗಿ ಒಂದೇ ಎತ್ತರದಲ್ಲಿ ನೆಟ್ಟಿರುವ 3 ಅಡಿ ಎತ್ತರದ ನಾಲ್ಕು ಕಲ್ಲುಕಂಬಗಳ ಮೇಲಿಡುತ್ತಾರೆ.

ನೇಯ್ದ ಕಂಬಳಿಯನ್ನು ಕುದಿಯುವ ನೀರಿನಲ್ಲಿ ಚೆನ್ನಾಗಿ ನೆನೆಯುವಂತೆ ಅದ್ದಿ ವರ್ಚಿನ ಮೇಲೆ ಹಾಕಿ ನಾಲ್ಕು ಮಂದಿ ಬಲವಾದ ಆಳುಗಳು-ಆ ಕಡೆ ಇಬ್ಬರು ಈ ಕಡೆ ಇಬ್ಬರು-ಎದುರುಬದುರಾಗಿ ನಿಂತುಕೊಂಡು ಉಜ್ಜುತ್ತಾರೆ, ಮಧ್ಯೆ ಮಧ್ಯೆ ಕುದಿಯುವ ನೀರಿನಲ್ಲಿ ಅದ್ದಿಕೊಳ್ಳುತ್ತಿರುತ್ತಾರೆ. ಕಂಬಳಿಯ ಉದ್ದ 6 ಮೊಳ ಅಗಲ 4 ಮೊಳಕ್ಕೆ ಇಳಿಯುವವರೆಗೆ ಈ ಉಜ್ಜುವಿಕೆ ನಿರಂತರವಾಗಿ ನಡೆಯುತ್ತದೆ. ವಿರಳವಾಗಿ ಹೆಣೆಯಲಾಗಿದ್ದ ಕಂಬಳಿ ಒತ್ತಾಗಿ, ಮಂದವಾಗುತ್ತದೆ. ಎಳೆಗಳು ಒಡೆದು ಒಂದರೊಡನೊಂದು ಬಲವಾಗಿ ಹೊಂದಿಕೊಳ್ಳುತ್ತವೆ. ನೇಯ್ದ ಯಾವ ಗುರುತೂ ಈಗ ಉಳಿಯುವುದಿಲ್ಲ. ಹೀಗೆ ಉಜ್ಜಿದ ಕಂಬಳಿಯನ್ನು ಕೆರೆಗೋ, ಹೊಳೆಗೋ, ತೆಗೆದುಕೊಂಡು ಹೋಗಿ ಗಂಜಿಯೆಲ್ಲ ಹೋಗುವ ಹಾಗೆ ತಿಳಿನೀರಿನಲ್ಲಿ ಜಾಲಾಡಿ ತೊಳೆಯುತ್ತಾರೆ. ಅನಂತರ ಕಂಬಳಿಯನ್ನು ಬಿಸಿಲಿನಲ್ಲಿ ಒಣಗುಹಾಕಿ, ಸು. ನಾಲ್ಕೈದು ಗಂಟೆ ಆದ ಮೇಲೆ, ಇನ್ನೂ ಹಸಿಯಿದ್ದ ಹಾಗೆಯೆ, ಕ್ರಮವಾಗಿ ಮಡಿಸಿ ಅಕ್ಕೆಗೆ ಹಾಕುತ್ತಾರೆ. ಇನ್ನೂ ಹಸಿಯಾಗಿರುವ ಕಂಬಳಿ ಹೇಗೆ ಎಳೆದರೆ ಹಾಗೆ ಬರುತ್ತದೆ. ಉದ್ದ ಅಗಲಗಳನ್ನು ಕ್ರಮವಾಗಿ ಎಳೆದು ಸರಿಪಡಿಸುತ್ತಾರೆ. ತರುವಾಯ ನೆಲದ ಮೇಲೆ ಹಾಕಿ ಅದರ ಮೇಲೆ ಒಣಗಿದ ಕಂಬಳಿಯನ್ನೋ ಚಾಪೆಯನ್ನೋ ಹಾಸಿ ಒಂದು ದಿನ ಬಿಡುತ್ತಾರೆ. ಮೂರನೆಯ ದಿನ ಮತ್ತೆ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಮಡಿಸಿಡುತ್ತಾರೆ. ಇಲ್ಲಿಗೆ ತಯಾರಿಕೆ ಪುರ್ಣವಾದಂತವಾಗಿ ಅದು ಹೊದೆಯಲು ಸಿದ್ಧವಾಗುತ್ತದೆ.

ಉಜ್ಜುಗಂಬಳಿಗೆ ಕೃತಕವಾದ ಬಣ್ಣಹಾಕುವುದು ಅಸಾಧ್ಯವಾದ ಮಾತೆಂದೇ ಹೇಳಬೇಕು. ಏಕೆಂದರೆ ಕಂಬಳಿಯನ್ನು ನೇಯ್ದ ಮೇಲೆ ಕುದಿಯುವ ನೀರಿನಲ್ಲಿ ಅದ್ದಿ ಅದ್ದಿ ಉಜ್ಜಿ ಅನಂತರ ತೊಳೆಯುವುದರಿಂದ ಕಟ್ಟಿದ ಬಣ್ಣ ಉಳಿಯುವುದು ಕಷ್ಟ. ಸಾಮಾನ್ಯವಾಗಿ ಉಣ್ಣೆಯ ಬಣ್ಣವೇ ಉಜ್ಜುಗಂಬಳಿಯ ಬಣ್ಣವೂ ಆಗಿದೆ. ಉಣ್ಣೆಯ ಪ್ರಕೃತಿದತ್ತವಾದ ಕಪ್ಪು. ಬಿಳಿ, ಮಾಸಲು ಕಂದುಬಣ್ಣಗಳಲ್ಲಿ ಇವು ದೊರೆಯುತ್ತವೆ. ಈ ಬಣ್ಣಗಳು ಯಾವ ಪರಿವರ್ತನೆಯನ್ನೂ ಹೊಂದದೆ ಕಡೆಯತನಕ ಉಳಿಯುತ್ತವೆ. ಮೊನ್ನೆಮೊನ್ನೆಯವರೆಗೆ ಉಜ್ಜುಗಂಬಳಿಗಳು ಯಾವ ನಮೂನೆಯೂ ಇಲ್ಲದೆ ಪ್ರಕೃತಿದತ್ತ ಬಣ್ಣಗಳಲ್ಲಿ ದೊರೆಯುತ್ತಿದ್ದವು. ಈಗ ಕೊಳ್ಳುವವರ ಅಭಿರುಚಿಗೆ ತಕ್ಕಹಾಗೆ ಮೇಲೆ ಹೇಳಿದ ವಿವಿಧ ಬಣ್ಣದ ಉಣ್ಣೆಯನ್ನೂ ಉಪಯೋಗಿಸಿ, ಬಹು ಆಕರ್ಷಕವಾದ ಹೊಸ ಹೊಸ ನಮೂನೆಯ ಉಜ್ಜುಗಂಬಳಿಗಳನ್ನು ಮಾಡುತ್ತಾರೆ.

ಶಾಲು, ಸಕಲಾತಿ ಮತ್ತು ಸಣ್ಣ ಕಂಬಳಿ[ಬದಲಾಯಿಸಿ]

ಉತ್ತಮವಾದ ಉಣ್ಣೆಯಿಂದ ಸಣ್ಣದಾಗಿ ನೂಲು ತೆಗೆದು ಈ ವಸ್ತ್ರಗಳನ್ನು ನೇಯುತ್ತಾರೆ. ಶಾಲು ಮತ್ತು ಸಕಲಾತಿಗಳು ಅತ್ಯುತ್ತಮವಾದ ಹೊದೆಯುವ ವಸ್ತ್ರಗಳು. ಇವು ಮೇಲುದರ್ಜೆಯ ಜನರಿಗಾಗಿ ತಯಾರಾಗುತ್ತಿದ್ದುವು. ಈ ಯಂತ್ರಯುಗದಲ್ಲಂತೂ ಶಾಲು ಅತ್ಯಂತ ವ್ಯಾಪಕವಾದ ಜನಪ್ರಿಯತೆಯನ್ನು ಪಡೆದಿದೆ. ಸಕಲಾತಿ ಈಗ ಶಾಲಿನಲ್ಲಿ ಐಕ್ಯವಾಗಿದೆ. ಸಣ್ಣಕಂಬಳಿ ಶಾಲಿನ ರೀತಿಯ ಒರಟು ಹೊದೆಯುವ ವಸ್ತ್ರ. ಇದನ್ನು ತೊಳೆಗಂಬಳಿ ಎಂದೂ ಕರೆಯುತ್ತಾರೆ. ಏಕೆಂದರೆ ಕೊಳೆಯಾದಾಗಲೆಲ್ಲ ಇದನ್ನು ತೊಳೆದು ಶುಭ್ರಗೊಳಿಸಬಹುದು. ಕೋಲಾರ, ರಾಣಿಬೆನ್ನೂರು, ದಾವಣಗೆರೆ, ಚಿಕ್ಕನಾಯಕನಹಳ್ಳಿಗಳಲ್ಲಿ ವಿಶೇಷವಾಗಿ ಇದನ್ನು ತಯಾರಿಸುತ್ತಾರೆ. ಶಾಲಿನ ತಯಾರಿಕೆ ಇಂದು ಬಹುಮಟ್ಟಿಗೆ ಯಂತ್ರಗಳಿಂದ ಆಗುತ್ತಿದೆ. ಕಾಶ್ಮೀರ ಇವುಗಳಿಗೆ ಜಗದ್ವಿಖ್ಯಾತವಾದ ಸ್ಥಳವಾಗಿದೆ.

ಗದ್ದುಗೆಧಾವಳಿ[ಬದಲಾಯಿಸಿ]

ಧಾವಳಿ ಎಂದರೆ ಧವಳ, ಬಿಳಿ ಎಂದು ಅರ್ಥ. ಗದ್ದುಗೆ ಕೂರುವ ಸ್ಥಳ. ಆದುದರಿಂದ ಗದ್ದುಗೆಧಾವಳಿ ಕೂರಲು ಉಪಯೋಗಿಸುವ ಅಚ್ಚ ಬಿಳಿಯ ಕಂಬಳಿ, ಧಾರ್ಮಿಕ ಗುರುಗಳ ಗದ್ದುಗೆಗೂ ಮಿಕ್ಕಂತೆ ಪವಿತ್ರ ಕಾರ್ಯಗಳಲ್ಲಿಯೂ ಅದನ್ನು ಉಪಯೋಗಿಸುತ್ತಿದ್ದರು. ಈ ಕಂಬಳಿ ವಿಶೇಷವಾಗಿ ವೈದಿಕರ ಉಪಯೋಗಕ್ಕಾಗಿ ತಯಾರಾಗುತ್ತಿತ್ತು. ಗದ್ದುಗೆಗಾಗಿಯೇ ಇದನ್ನು ಹೆಚ್ಚಾಗಿ ಬಳಸುತ್ತಾರಾದರೂ ಇದನ್ನು ಶಾಲಿನಂತೆ ಹೊದೆಯಲು ಉಪಯೋಗಿಸುವುದೂ ಉಂಟು, ಪುಜಾವಸ್ತುಗಳನ್ನಿಡುವ ಚೀಲಗಳನ್ನು ಇದರಿಂದ ತಯಾರಿಸುತ್ತಾರೆ.

ಕರಿಯ ಕಂತೆ : ಕುರುಬರ ಗುರು ರೇವಣ ಸಿದ್ಧೇಶ್ವರ ತನ್ನ ಅವತಾರ ಕಾಲದಲ್ಲಿ ಕುರಿ ಕಾಯುತ್ತಿದ್ದನೆಂದೂ ಅದರಿಂದಲೇ ಕುರುಬರಿಗೆ ಕುರಿಸಾಕಣೆಯ ಪರಂಪರೆ ಉಂಟಾಯಿತೆಂದೂ ನಂಬಿಕೆ. ರೇವಣ ಸಿದ್ಧೇಶ್ವರನಿಗೆ ಉಣ್ಣೆಯ ವಸ್ತ್ರ ಬಹುಪ್ರಿಯ. ಕುರುಬ ಜನಾಂಗ ಎಲ್ಲೆಲ್ಲುಂಟೊ ಅಲ್ಲೆಲ್ಲ ರೇವಣಸಿದ್ಧೇಶ್ವರನ ಮಠಗಳಿದ್ದು ಅಲ್ಲೆಲ್ಲ ಉಣ್ಣೆಯ ಕರಿಯ ವಸ್ತ್ರವನ್ನು ಗುರುವಿಗೆ ಅರ್ಪಿಸುತ್ತಾರೆ. ಇದನ್ನು ಕರಿಯ ಕಂತೆ ಎಂದು ಕರೆಯುತ್ತಾರೆ. ಕಂತೆ ಎಂದರೆ ಪುಜೆಯ ಸಮಯದಲ್ಲಿ ಉಡುವ ವಸ್ತ್ರ-ಎಂದು ಅರ್ಥ. ಈ ಕರಿಯ ಕಂತೆಯ ಪ್ರಸ್ತಾಪ ಕುರುಬರ ಜನಾಂಗದ ನಂಬಿಕೆ ಮತ್ತು ಸಂಪ್ರದಾಯಗಳನ್ನು ವಿವರಿಸುವ ತಗರ ಪವಾಡ ಎಂಬ ಪ್ರಾಚೀನ ಗ್ರಂಥದಲ್ಲಿ ಬರುತ್ತದೆ.

ಕರಿಯ ಕಂತೆಯನ್ನು ಮಾಡುವವರು ಗುರುಪರಂಪರೆಯಲ್ಲಿ ಬಂದ ಒಡೆಯರ ಮನೆತನದವರು, ನಾಲ್ಕೈದು ಜನ ಸ್ನಾನಮಡಿಗಳಿಂದ ಉಪವಾಸವಿದ್ದು ಅಚ್ಚಕರಿಯ ತುಪ್ಪಟವನ್ನು ಕೈಯಲ್ಲಿಯೇ ಹಿಂಜಿ ಕೈಯಲ್ಲಿಯೇ ಎಳೆ ಹೊಸೆದು ಅಣಿಮಾಡಿ ವಸ್ತ್ರವನ್ನು ನೇಯುತ್ತಾರೆ. ಇದು ರೇವಣ ಸಿದ್ಧೇಶ್ವರನ ಗರ್ಭಗುಡಿಯಲ್ಲಿ ನಡೆಯುವ ಕೆಲಸ. ಇದೊಂದು ಮೂರು ಮೂಲೆಯ ಉಣ್ಣೆಯ ವಸ್ತ್ರ, ಕಂತೆ ಸಿದ್ಧವಾದ ಮೇಲೆ ಅದನ್ನು ರೇವಣ ಸಿದ್ಧೇಶ್ವರನಿಗೆ ಓದಿಸುವ ಪವಿತ್ರ ಸಮಾರಂಭ ವೈಭವಯುತವಾಗಿ ನಡೆಯುತ್ತದೆ. ಇದಲ್ಲದೆ ಅಚ್ಚಕರಿಯ ತುಪ್ಪಟದಿಂದ ಮಾಡಿದ ಕಂಬಳಿಯನ್ನು ಮದುವೆ ಸಂದರ್ಭಗಳಲ್ಲಿ ಗುರುಗಳಿಗೆ ಪೀಠವಾಗಿಯೂ ಧಾರೆ ಹರವಿಯ ಕೆಳಗೆ ಹಾಸಲೂ ಕುರುಬ ಜನಾಂಗದವರು ಇಂದಿಗೂ ಉಪಯೋಗಿಸುತ್ತಾರೆ.

ಯಂತ್ರಮಗ್ಗಗಳ ಆಗಮನ[ಬದಲಾಯಿಸಿ]

19ನೆಯ ಶತಮಾನದ ಆದಿಭಾಗದಲ್ಲಿ ಫ್ರಾನ್ಸಿನ ಜೋಸೆಫ್ ಮೆರಿ ಜಾಕ್ವೆರ್ಡ್ ಎಂಬಾತ ಮೊದಲು ಯಂತ್ರಮಗ್ಗವನ್ನು ಕಂಡಿಹಿಡಿದ. ಅವನ ಈ ಸಂಶೋಧನೆ ತಮ್ಮ ಕೆಲಸಗಳಿಗೆ ಸಂಚಕಾರ ತಂದೀತೆಂಬ ಭಯದಿಂದ ಅವನ ಅಕ್ಕಪಕ್ಕದ ನೇಯ್ಗೆಯವರು ಫ್ರೆಂಚ್ನಗರ ಲೆಯೊನ್ಸಿನಿಂದ ಅವನನ್ನು ಕಲ್ಲುಗಳಿಂದ ಹೊಡೆದು ಹೊರಗಟ್ಟಿದರು. ಜಾಕ್ವೆರ್ಡನ ಯಂತ್ರಮಗ್ಗ ವಿಲ್ಟನ್ ಮತ್ತು ಬ್ರುಸೆಲ್ಸಿನ ನೇಯ್ಗೆಯಲ್ಲಿ ಕ್ರಾಂತಿಯುಂಟುಮಾಡಿ ನೇಯ್ಗೆಯ ವೆಚ್ಚವನ್ನು ಕುಗ್ಗಿಸಿ ಕಂಬಳಿಯ ಬೆಲೆ ಸಾಮಾನ್ಯರಿಗೂ ಎಟಕುವಂತೆ ಮಾಡಿತು. ಇದರ ಪರಿಣಾಮವಾಗಿ ನೇಯ್ಗೆ ಕಂಪನಿಗಳಲ್ಲಿ ಹೆಚ್ಚು ಕೆಲಸಗಳು ಹುಟ್ಟಿಕೊಂಡುವು. ಜಾಕ್ವೆರ್ಡ್ ಸತ್ತ 6 ವರ್ಷಗಳ ಮೇಲೆ ಲೆಯಾನ್ಸಿನ ಜನರು ಅವನ ಹೆಸರಿನಲ್ಲಿ ಒಂದು ಭವ್ಯ ಸ್ಮಾರಕವನ್ನು ನಿರ್ಮಿಸಿದರು. ಈಗಿನ ವಿಲ್ಟನ್ನಿನ ಎಲ್ಲ ಕಂಬಳಿಗಳೂ ಜಾಕ್ವೆರ್ಡ್ ಯಂತ್ರಮಗ್ಗದಿಂದ ತಯಾರಾಗುತ್ತವೆ.

ಮತ್ತೆರಡು ಪ್ರಮುಖವಾದ ಐರೋಪ್ಯ ಸಂಶೋಧನೆಗಳು ಕಂಬಳಿ ಮತ್ತು ಜಮಖಾನೆಯ ಉದ್ಯಮದ ಭವಿಷ್ಯವನ್ನು ಉಜ್ವಲಗೊಳಿಸಿ ಕಾರ್ಖಾನೆಗಳ ಸ್ಥಾಪನೆಗೆ ಪ್ರಚೋದನೆಯನ್ನು ನೀಡಿದವು. 1831ರಲ್ಲಿ ಸ್ಕಾಟ್ಲೆಂಡಿನ ಬರ್ಲಿನ್ ರಿಚರ್ಡ್ ವೈಟೋಕ್ ಎಂಬುವನು ಬಣ್ಣದ ದಾರದ ನೇಯ್ಗೆಯಿಂದ ತಯಾರಿಕಾ ವೆಚ್ಚವನ್ನು ಇಳಿಸುವ ವಿಧಾನವನ್ನು ಜಾರಿಗೆ ತಂದ, ಈ ಬೆಳೆವಣಿಗೆಯನ್ನು ಹಿಂಬಾಲಿಸಿ 1839ರಲ್ಲಿ ಜೇಮ್ಸ ಟೆಂಪಲ್ಸನ್ ಎಂಬುವನು ಪೇಟೆಂಟ್ ಅಕ್ಸಮಿನಿಸಲರ್ ಅಥವಾ ಡಬಲ್ ವೀವಿಂಗ್ ಬೌನಲ್ ಪ್ರೋಸೆಸ್ ಎಂಬ ಹೆಚ್ಚು ತುಪ್ಪಟ ಉಳಿಸುವ ವಿಧಾನವನ್ನು ಕಂಡುಹಿಡಿದ. ಈ ಹೆಜ್ಜೆ ತಯಾರಿಕೆಯ ವೆಚ್ಚವನ್ನು ಮತ್ತೂ ಕಡಿಮೆ ಮಾಡಿದ್ದೇ ಅಲ್ಲದೆ, ಕಂಬಳಿ ತಯಾರಿಸುವ ಯಂತ್ರಮಗ್ಗಗಳಿಗೆ ಉತ್ತಮ ಮಾರುಕಟ್ಟೆಯನ್ನೂ ಒದಗಿಸಿತು.

ವಿದ್ಯುತ್ ಮಗ್ಗಗಳು[ಬದಲಾಯಿಸಿ]

ಮೊದಲನೆಯ ವಿದ್ಯುತ್ ಮಗ್ಗ : ಕಂಬಳಿ ಜಮಖಾನೆಯ ಆಧುನಿಕ ದೊಡ್ಡ ಪ್ರಮಾಣದ ಉತ್ಪಾದನೆಯಲ್ಲಿ 1839 ಯುಗ ಪ್ರವರ್ತಕ ವರ್ಷ-ಎರಾಸ್ಟಸ ಬ್ರಿಗ್ಹ್ಯಾಮ್ಬಿಗೆಲೋನ ವಿದ್ಯುತ್ ಮಗ್ಗಗಳ ಸಂಶೋಧನೆ ಆದದ್ದು ಅಂದು. ಮೊದಲನೆಯ ಹಬೆಯ ಯಂತ್ರದಿಂದ ನಡೆಸಲಾಗುತ್ತಿದ್ದ ಮಗ್ಗ ಲೋವೆಲ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಯಲ್ಲಿ ಮೊದಲು ಸ್ಥಾಪಿತವಾಯಿತು. ಇಲ್ಲಿಯವರೆಗೆ ದಿನಕ್ಕೆ 10-12 ಗಂಟೆಗಳ ಕಾಲ ಒಬ್ಬ ದೊಡ್ಡಾಳು ಮತ್ತು ಒಬ್ಬ ಹುಡುಗ ಕಷ್ಟಪಟ್ಟು ದುಡಿದರೆ 7 ಗಜ ಬ್ರುಸೆಲ್ಸ್‌ ಮಾದರಿಯ ಜಮಖಾನೆಯನ್ನು ನೇಯಲು ಸಾಧ್ಯವಾಗುತ್ತಿತ್ತು.

ಬಿಗೆಲೋ ಮಗ್ಗ[ಬದಲಾಯಿಸಿ]

ಬಿಗೆಲೋ ಮಗ್ಗ ಆ ಕಾಲದ ಅತ್ಯುತ್ತಮ ರೀತಿಯ ಜಮಖಾನೆಯ 25 ಗಜ ನೇಯಲು ಸಮರ್ಥವಾಯಿತು. ಈ ಸಂಶೋಧನೆ ಕೈಗಾರಿಕಾ ಪ್ರಪಂಚದಲ್ಲಿ ಕ್ರಾಂತಿಯನ್ನೆಬ್ಬಿಸಿತು ಮತ್ತು ಉಣ್ಣೆಯ ಜಮಖಾನೆ ಮತ್ತು ರತ್ನಗಂಬಳಿಗಳು ಜನಸಾಮಾನ್ಯರಿಗೆ ಎಟಕುವಂತಾಯಿತು. ಸಾವಿರಾರು ವರ್ಷಗಳಿಂದ ನೇಯ್ಗೆಯ ಕಲೆ ನೆಲಕ್ಕೆ ಹಾಸುವ ಸೌಂದರ್ಯಸಾಧನವಾಗಿ ಬರಿಯ ರಾಜರು ಮತ್ತು ಶ್ರೀಮಂತರ ಸ್ವತ್ತಾಗಿತ್ತು. 1800ರಲ್ಲಿ ಸಹ ಅಮೆರಿಕಯ ಕೆಲವೇ ಮುಂದುವರಿದ ಶ್ರೀಮಂತ ಗೃಹಗಳು ಮಾತ್ರ ರತ್ನಗಂಬಳಿ ಮತ್ತು ಜಮಖಾನೆಯನ್ನು ಹೊಂದಿದ್ದುವು. ಬಿಗೆಲೋ ಸಂಶೋಧನೆಯಿಂದಾಗಿ ಎರಡು ದಶಕಗಳಲ್ಲಿ ಹಿಂದಿನ ಕಾಲದವುಗಳಿಗಿಂತ ಉತ್ತಮವಾದ ನೆಲಗಂಬಳಿಗಳನ್ನು ಸಾಮಾನ್ಯ ಜನರಿಗೂ ನಿಲುಕುವ ಹಾಗೆ ಒದಗಿಸಲು ಅಮೆರಿಕೆಯ ಕಂಬಳಿ ಉದ್ಯಮಕ್ಕೆ ಸಾಧ್ಯವಾಯಿತು.

ಆಕ್ಸಮಿನ್ಸ್ಟರ್ ಮಗ್ಗ[ಬದಲಾಯಿಸಿ]

1876ರಲ್ಲಿ ಹಾಲ್ಸಿಯಾನ್ ಕಿನ್ನರನ ಆಕ್ಸಮಿನ್ಸ್ಟರ್ ಸುಧಾರಿತವಾದ ಯಂತ್ರ ಮಗ್ಗ ಈ ಉದ್ಯಮದ ಸುಧಾರಣೆಯಲ್ಲಿ ವಿದ್ಯುತ್ ಮಗ್ಗದಷ್ಟೇ ಪ್ರಮುಖವಾದುದು. ಕಿನ್ನರ್ ಮೂಲತಃ ಮೆಕ್ವೆಟ್ಟೀ ಮಗ್ಗವನ್ನು ಅಲೆಕ್ಸಾಂಡರ್ ಸ್ಮಿತ್ ಅಂಡ್ ಸನ್ಸ್‌ ಸಂಸ್ಥೆಯ ಧನಸಹಾಯದಿಂದ ಅವನ ಸಂಶೋಧನೆಯಲ್ಲಿ ಉತ್ತಮಗೊಳಿಸಿದ. ಆ ಶತಮಾನದ ಕಡೆಯ ಹೊತ್ತಿಗೆ ಇಂಥ ಆಕ್ಸಮಿನ್ಸ್ಟರ್ ಮಗ್ಗಗಳು ದಿನಕ್ಕೆ 40-60 ಗಜ ನೇಯುತ್ತಿದ್ದುವು. ಅದಕ್ಕಿಂತ ಹಿಂದೆ ಇವುಗಳಲ್ಲಿ ಇಬ್ಬರು ದೊಡ್ಡಾಳುಗಳು ಮತ್ತು ಒಬ್ಬ ಹುಡುಗ ದಿನದಲ್ಲಿ ನೇಯುತ್ತಿದ್ದ 1 ಗಜಕ್ಕೆ ಹೋಲಿಸಿದರೆ ನಿಜಕ್ಕೂ ಅದೊಂದು ಕ್ರಾಂತಿಕಾರಕವಾದ ಬದಲಾವಣೆ.

ವಿಶಾಲ ಮಗ್ಗ[ಬದಲಾಯಿಸಿ]

ಮೊದಲಿನ ವಿದ್ಯುತ್ ಮಗ್ಗಗಳು ಸಾಮಾನ್ಯವಾಗಿ 27 ಅಂಗುಲದ ಜಮಖಾನೆಗಳನ್ನು ತಯಾರಿಸುತ್ತಿದ್ದುವು. ನೆಲದ ತುಂಬ ಹಾಸಬೇಕಾದರೆ, ನೆಲದ ಉದ್ದ ಮತ್ತು ಅಗಲಕ್ಕೆ ಅನುಗುಣವಾಗಿ ಅವನ್ನು ಸೇರಿಸಿ ಹೊಲೆಯಬೇಕಾಗುತ್ತಿತ್ತು. ಅನಂತರ ವಿಶಾಲ ಜಮಖಾನೆಯ ಮಗ್ಗಗಳು ಜಾರಿಗೆ ಬಂದು ಎಲ್ಲ ರೀತಿಯ ಉಪಯೋಗಕ್ಕೂ ಬರುವ 9-18 ಅಡಿ ಅಗಲದ ಜಮಖಾನೆಗಳನ್ನು ತಯಾರಿಸಿ ಉತ್ಪಾದನೆಯ ವಿನ್ಯಾಸದಲ್ಲಿ ಕ್ರಾಂತಿಯನ್ನುಂಟುಮಾಡಿದುವು. ಈ ಮಗ್ಗಗಳು ಬಣ್ಣ, ನಮೂನೆ ಮತ್ತು ರೀತಿಗಳಲ್ಲಿ ಯಾವ ಬದಲಾವಣೆಗಳನ್ನೂ ಮಾಡದೆ ಸಾಮಾನ್ಯ ಮತ್ತು ಚಿತ್ರಗಳಿರುವ 4 ಅಡಿ ಅಥವಾ ಅದಕ್ಕಿಂತ ಅಗಲವಾದ ಜಮಖಾನೆಗಳನ್ನು ನೇಯ್ದು ವಿಶಾಲ ಮಗ್ಗ ಎಂಬ ಹೆಸರನ್ನು ಪಡೆದುಕೊಂಡವು. ವಿಶಾಲ ಮಗ್ಗಗಳ ಆಗಮನ ಜಮಖಾನೆ ಮತ್ತು ಕಂಬಳಿಗಳ ಅಲಂಕರಣವನ್ನು ಗಮನಾರ್ಹವಾಗಿ ಹೆಚ್ಚಿಸಿದುವು. ಮನೆಗಳ ನೆಲವನ್ನು ಮುಚ್ಚುವ ಉಪಯೋಗ ಸಾಧನ ಮಾತ್ರವಾಗಿ, ಮನೆಯ ಕಸ ತೆಗೆಯುವಾಗ ಮಾತ್ರ ಒದರಲು ಹೊರಗೆ ಬರುತ್ತಿದ್ದ ಜಮಖಾನೆಗಳು ಕ್ರಮೇಣವಾಗಿ ವಿವಿಧ ನಮೂನೆಯ ಮನೆ ಅಲಂಕರಣ ವಸ್ತುಗಳಾಗಿ ಪರಿವರ್ತನೆಗೊಂಡವು. ಅಮೆರಿಕೆಯ ಆಧುನಿಕ ಕಂಬಳಿ ಜಮಖಾನೆ ಉದ್ಯಮಗಳೆಲ್ಲ ಕಲೆಗಾರರು, ವಿನ್ಯಾಸಗಾರರು ಮತ್ತು ಬಣ್ಣಗಾರರಾದ ಕುಶಲ ಕರ್ಮಿಗಳನ್ನು ಹೊಂದಿದ್ದಾರೆ. 1930 ರಿಂದೀಚೆಗೆ ಗೋಡೆಯಿಂದ ಗೋಡೆಯವರೆಗೆ ಹಾಸುವ ದೊಡ್ಡ ಜಮಖಾನೆಗಳ ಬೇಡಿಕೆ ಬೆಳೆಯಿತು. ಸಣ್ಣ ಮನೆಗಳಲ್ಲಿ ಆಸನಗಳನ್ನೂ ಕಡಿಮೆ ಮಾಡಿ, ಜಮಖಾನೆಗಳನ್ನು ಹಾಸಿ ಕೊಠಡಿಗಳು ವಿಶಾಲವಾಗಿ ಕಾಣುವಂತೆ ಏರ್ಪಾಡು ಮಾಡುತ್ತಾರೆ.

ಕಂಬಳಿ ಮತ್ತು ಜಮಖಾನೆಯ ಉದ್ಯಮಕ್ಕೆ ಉಣ್ಣೆ, ಹತ್ತಿ, ಸೆಣಬು ಮುಖ್ಯವಾದ ಕಚ್ಚಾವಸ್ತುಗಳು. ಇವು ಪ್ರಪಂಚದ ಎಲ್ಲ ದೇಶಗಳಲ್ಲಿಯೂ ಇಂದು ಉತ್ಪನ್ನವಾಗುತ್ತಿವೆ. ಅಮೆರಿಕ, ಆಸ್ಟ್ರೇಲಿಯ, ಇಂಗ್ಲೆಂಡ್, ರಷ್ಯ ಉಣ್ಣೆಗೆ ಪ್ರಸಿದ್ಧವಾದರೆ, ಈಜಿಪ್ಟ್‌ ಹತ್ತಿಗೆ ಪ್ರಸಿದ್ಧವಾದರೆ, ಭಾರತ ಮತ್ತು ಪಾಕಿಸ್ತಾನ ಸೆಣಬಿಗೆ ಪ್ರಸಿದ್ಧವಾಗಿವೆ. ಇಂದು ವಿಶ್ವದ ಬಹುತೇಕ ದೇಶಗಳಲ್ಲಿ ಕಂಬಳಿ ಮತ್ತು ಜಮಖಾನೆಗಳ ಯಾಂತ್ರಿಕ ತಯಾರಿಕೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಪಶ್ಚಿಮ ರಾಷ್ಟ್ರಗಳಲ್ಲಿಯಂತೂ ಈ ಉದ್ಯಮ ಸಂಪುರ್ಣವಾಗಿ ಯಂತ್ರೀಕೃತವಾಗಿದೆ. ಭಾರತದಲ್ಲಿಯೂ ಅನೇಕ ಕಂಬಳಿ ಮಿಲ್ಲುಗಳು ವಿಪುಲವಾಗಿ ಕಂಬಳಿ ತಯಾರಿಕೆಯಲ್ಲಿ ತೊಡಗಿದ್ದರೂ ಕೈಮಗ್ಗಗಳಲ್ಲಿ ನೇಯುವ ಕಲೆ ಗ್ರಾಮಾಂತರ ಪ್ರದೇಶಗಳಲ್ಲಿ ಇಂದಿಗೂ ಉಳಿದುಕೊಂಡು ಬಂದಿರುವುದೊಂದು ಆಶ್ಚರ್ಯದ ಸಂಗತಿಯೇ ಸರಿ. ಆದರೆ ದಿನದಿನಕ್ಕೂ ವೈಜ್ಞಾನಿಕ ಪ್ರಗತಿ ಮನುಷ್ಯನನ್ನು ಯಂತ್ರ ನಾಗರಿಕತೆಯತ್ತ ರಭಸದಿಂದ ಎಳೆದೊಯ್ಯುತ್ತಿರುವಾಗ ಈ ಕುಶಲ ಕೈಗಾರಿಕೆಯ ಭವಿಷ್ಯವೇನಾಗುತ್ತದೆಂದು ಕಾದುನೋಡಬೇಕಾಗಿದೆ.

ಕಂಬಳಿಯು ಜನಪದರು ಹೊದೆಯಲು ಹಾಸಲು ಉಪಯೋಗಿಸುವ ಉಣ್ಣೆಯ ನೇಯ್ಗೆ. ಇದು ಉಷ್ಣ ಅವಾಹಕವಾದ್ದರಿಂದ ದೇಹೋಷ್ಣತೆಯನ್ನು ಒಳಗೇ ಕಾಪಿಡುವುದಲ್ಲದೇ ಪರಿಸರದ ಶೈತ್ಯ ಒಳಗೆ ಬರದಂತೆಯೂ ನಿವಾರಿಸುವುದು.

ಭಾರತದಲ್ಲಿ ಋಗ್ವೇದದ ಕಾಲದಿಂದಲೂ ಉಣ್ಣೆಯ ವಸ್ತ್ರ ಬಳಕೆಯಲ್ಲಿ ಇತ್ತೆಂಬುದಕ್ಕೆ ಆಧಾರವಿದೆ. ಊರ್ಣವತೀ ಯುವತಿಃ ಶೀಲ ಮಾವತಿ, ಊರ್ಣವಂತಂ ಊರ್ಣವಸತ ಶೃಂದ್ರುವ ಮುಂತಾದ ಋಗ್ವೇದೋಕ್ತಿಗಳನ್ನು ಗಮನಿಸಬಹುದು. ಉಣ್ಣೆ, ನಾರು, ರೇಷ್ಮೆ ಮುಂತಾದವುಗಳಿಂದ ನೇದ ಬಟ್ಟೆಗಳು ದೇವತಾಕಾರ್ಯಗಳಲ್ಲಿ ತೊಟ್ಟುಕೊಳ್ಳಲು ಉಪಯೋಗಿಸಬಹುದಾದ ಮಡಿವಸ್ತ್ರಗಳೆಂದೂ ವೈದಿಕ ಕಾಲದಿಂದಲೂ ಬೆಳೆದು ಬಂದಿರುವ ಸಂಪ್ರದಾಯವೂ ಉಣ್ಣೆ ವಸ್ತ್ರದ ಪ್ರಾಚೀನತೆಗೆ ಸಾಕ್ಷಿ.

ಜಂಗಮ ದಾಸೋಹದಲ್ಲಿ ಸಣ್ಣ ಕಂಬಳಿ ಮತ್ತು ಶಾಲುಗಳ ಅರ್ಪಣೆಯೂ ಒಂದು ಪ್ರಮುಖ ವಿಧಿಯಾಗಿ ಬರುತ್ತದೆ. ಕಂಬಳಿ ಮತ್ತು ಕರಿಯ ಕಂಬಳಿಗಳಂತೂ ಜನಪದ ಸಾಹಿತ್ಯ ಮತ್ತು ಗಾದೆಗಳಲ್ಲಿ ಪ್ರಸಿದ್ಧಿ ಪಡೆದಿದ್ದುವು. ಅಂಬಲಿಯಂತ ಊಟವಿಲ್ಲ ಕಂಬಳಿಯಂತ ಹೊದಿಕೆಯಿಲ್ಲ ಎಂಬ ಗಾದೆಯೇ ಜನಪದರಲ್ಲಿ ಅಂಬಲಿ, ಕಂಬಳಿಗಳ ಬಗೆಗಿನ ಪ್ರೀತಿ ಭಾವವನ್ನು ಪ್ರಕಟಿಸುತ್ತದೆ. *

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಕಂಬಳಿ&oldid=1102536" ಇಂದ ಪಡೆಯಲ್ಪಟ್ಟಿದೆ