ವಿಷಯಕ್ಕೆ ಹೋಗು

ರುಮಾಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಿಖ್ ರುಮಾಲು ಧರಿಸಿರುವ ಒಬ್ಬ ವ್ಯಕ್ತಿ

ರುಮಾಲು ಬಟ್ಟೆಯ ಸುತ್ತುವಿಕೆಯನ್ನು ಆಧರಿಸಿದ ಒಂದು ಬಗೆಯ ತಲೆಯುಡುಗೆ. ಅನೇಕ ಸ್ವರೂಪಗಳನ್ನು ಹೊಂದಿರುವ ಇದನ್ನು ವಿವಿಧ ದೇಶಗಳ ಪುರುಷರು ಸಾಂಪ್ರದಾಯಿಕ ತಲೆಯುಡುಗೆಯಾಗಿ ಧರಿಸುತ್ತಾರೆ.[೧] ರುಮಾಲು ಧರಿಸುವ ಮಹತ್ವದ ಸಂಪ್ರದಾಯಗಳನ್ನು ಹೊಂದಿರುವ ಸಮುದಾಯಗಳನ್ನು ಭಾರತೀಯ ಉಪಖಂಡ, ಅಫ಼್ಘಾನಿಸ್ತಾನ, ಆಗ್ನೇಯ ಏಷ್ಯಾ, ಅರಬ್ಬೀ ಪರ್ಯಾಯದ್ವೀಪ, ಮಧ್ಯಪ್ರಾಚ್ಯ, ನಿಕಟಪ್ರಾಚ್ಯ, ಮಧ್ಯ ಏಷ್ಯಾ, ಉತ್ತರ ಆಫ಼್ರಿಕಾ, ಆಫ಼್ರಿಕಾದ ಕೊಂಬು, ಉತ್ತರ ಅಮೇರಿಕಾ, ಮತ್ತು ಸ್ವಾಹಿಲಿ ಕರಾವಳಿಯ ಭಾಗಗಳಲ್ಲಿ ಕಾಣಬಹುದು.

ರುಮಾಲುಗಳನ್ನು ಧರಿಸುವುದು, ಮಹಿಳೆಯರು ಸೇರಿದಂತೆ, ಸಿಖ್ಖರಲ್ಲಿ ಸಾಮಾನ್ಯವಾಗಿದೆ. ಈ ತಲೆಯುಡುಗೆಯು ಧಾರ್ಮಿಕ ಕಟ್ಟಳೆಯಾಗಿಯೂ ಕಾರ್ಯನಿರ್ವಹಿಸುತ್ತದೆ. ಶಿಯಾ ಮುಸ್ಲಿಮರು ರುಮಾಲನ್ನು ಧರಿಸುವುದನ್ನು ಸುನ್ನಾ ಮುಅಕ್ಕದಾ (ದೃಢಪಟ್ಟ ಸಂಪ್ರದಾಯ) ಎಂದು ಪರಿಗಣಿಸುತ್ತಾರೆ. ರುಮಾಲು ಸೂಫ಼ಿ ವಿದ್ವಾಂಸರ ಸಾಂಪ್ರದಾಯಿಕ ತಲೆಯುಡುಗೆ ಕೂಡ ಆಗಿದೆ. ಜೊತೆಗೆ, ಕುಲೀನ ಜನರು ಧಾರ್ಮಿಕ ಹಿನ್ನೆಲೆಯನ್ನು ಲೆಕ್ಕಿಸದೆ ರುಮಾಲುಗಳನ್ನು ಹಲವುವೇಳೆ ಧರಿಸಿದ್ದಾರೆ. ಕೆಲವೊಮ್ಮೆ ಇವನ್ನು ಕೂದಲನ್ನು ರಕ್ಷಿಸಲು ಅಥವಾ ಕ್ಯಾನ್ಸರ್ ಚಿಕಿತ್ಸೆಗಳ ನಂತರ ಮಹಿಳೆಯರಿಗೆ ತಲೆಹೊದಿಕೆಯಾಗಿ ಕೂಡ ಧರಿಸಲಾಗುತ್ತದೆ.

ಭಾರತದಲ್ಲಿ, ರುಮಾಲನ್ನು ಪಗಡಿ ಎಂದು ಕೂಡ ಕರೆಯಲಾಗುತ್ತದೆ. ಇದರರ್ಥ ಪುರುಷರು ಧರಿಸುವ ಮತ್ತು ಕೈಯಿಂದ ಕಟ್ಟಲ್ಪಡುವ ತಲೆಯುಡುಗೆ. ಇದರ ಹಲವಾರು ಶೈಲಿಗಳಿವೆ. ಪ್ರತಿಯೊಂದು ಶೈಲಿಯು ಧರಿಸುವವನ ಪ್ರದೇಶ ಅಥವಾ ಧರ್ಮಕ್ಕೆ ನಿರ್ದಿಷ್ಟವಾಗಿದೆ. ಇವು ಆಕಾರ, ಗಾತ್ರ ಮತ್ತು ಬಣ್ಣದಲ್ಲಿ ಬದಲಾಗುತ್ತವೆ. ಉದಾಹರಣೆಗೆ ಮೈಸೂರು ಪೇಟಾ, ಮರಾಠಿ ಫೇಟಾ, ಪುಣೇರಿ ಪಗಡಿ ಮತ್ತು ಸಿಖ್ ದಸ್ತಾರ್. ಎಲ್ಲೇ ಧರಿಸಲ್ಪಟ್ಟರೂ ಪಗಡಿಯು ಗೌರವ ಮತ್ತು ಮರ್ಯಾದೆಯ ಸಂಕೇತವಾಗಿದೆ. ಅವರಿಗೆ ಧರಿಸಲು ಪಗಡಿಗಳನ್ನು ಕೊಡುವ ಮೂಲಕ ಪ್ರಮುಖ ಅತಿಥಿಗಳನ್ನು ಗೌರವಿಸುವುದು ಸಾಮಾನ್ಯ ಪದ್ಧತಿಯಾಗಿದೆ.

ಹಲವುವೇಳೆ ಸಂದರ್ಭ ಅಥವಾ ಸನ್ನಿವೇಶಕ್ಕೆ ಸರಿಹೊಂದುವಂತೆ ಬಣ್ಣಗಳನ್ನು ಆಯ್ಕೆಮಾಡಲಾಗುತ್ತದೆ: ಉದಾಹರಣೆಗೆ ಕೇಸರಿಯು ಶೌರ್ಯ ಅಥವಾ ತ್ಯಾಗದೊಂದಿಗೆ (ಹುತಾತ್ಮತೆ) ಸಂಬಂಧಿತವಾಗಿದೆ ಮತ್ತು ಇದನ್ನು ರ‍್ಯಾಲಿಗಳ ಅವಧಿಯಲ್ಲಿ ಧರಿಸಲಾಗುತ್ತದೆ; ಬಿಳಿ ಬಣ್ಣವು ಶಾಂತಿಗೆ ಸಂಬಂಧಿಸಿದೆ ಮತ್ತು ಇದನ್ನು ಹಿರಿಯರು ಧರಿಸುತ್ತಾರೆ; ಮತ್ತು ಗುಲಾಬಿ ಬಣ್ಣವು ವಸಂತ ಋತುವಿಗೆ ಸಂಬಂಧಿಸಿದೆ, ಮತ್ತು ಇದನ್ನು ಆ ಋತುವಿನಲ್ಲಿ ಅಥವಾ ಮದುವೆ ಸಮಾರಂಭಗಳಲ್ಲಿ ಧರಿಸಲಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. "Turbans Facts, information, pictures | Encyclopedia.com articles about Turbans". www.encyclopedia.com. Retrieved 2016-04-19.
"https://kn.wikipedia.org/w/index.php?title=ರುಮಾಲು&oldid=853523" ಇಂದ ಪಡೆಯಲ್ಪಟ್ಟಿದೆ