ವಿಷಯಕ್ಕೆ ಹೋಗು

ನೊಳಂಬ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನೊಳಂಬ - ಕರ್ನಾಟಕದ ಈಗಿನ ಚಿತ್ರದುರ್ಗ ಜಿಲ್ಲೆ ಮತ್ತು ಅದರ ಸುತ್ತ ಮುತ್ತಣ ಪ್ರದೇಶವನ್ನೊಳಗೊಂಡಿದ್ದ ನೊಳಂಬರಿಗೆ ಸಾಸಿರ ಎಂಬ ಪ್ರಾಂತ್ಯದ ಅಧಿಪತಿಗಳಾಗಿ 8ನೆಯ ಶತಮಾನದಲ್ಲಿ ಆಳ್ವಿಕೆಯನ್ನಾರಂಭಿಸಿ, ಮುಂದಿನ ಎರಡು ಶತಮಾನಗಳಲ್ಲಿ ಪ್ರಾಬಲ್ಯಗಳಿಸಿ, ಈಗಿನ ಚಿತ್ರದುರ್ಗ, ತುಮಕೂರು, ಕೋಲಾರ, ಬೆಂಗಳೂರು, ಜಿಲ್ಲೆಗಳನ್ನೂ ನೆರೆಯ ಅನಂತಪುರ, ಚಿತ್ತೂರು, ಧರ್ಮಪುರಿ ಜಿಲ್ಲೆಗಳನ್ನೂ ಒಳಗೊಂಡಿದ್ದ ನೊಳಂಬವಾಡಿ 32000 ಪ್ರಾಂತ್ಯದ ಪ್ರಭುಗಳಾಗಿ 11ನೆಯ ಶತಮಾನದ ಮಧ್ಯದವರೆಗೆ ಆಳ್ವಿಕೆ ನಡೆಸಿದ ಸಾಮಂತ ರಾಜರ ಮನೆತನ.[]

ತಲಕಾಡಿನ ಗಂಗರೂ ರಾಷ್ಟ್ರಕೂಟರೂ ಕಲ್ಯಾಣ ಚಾಳುಕ್ಯರೂ ನೊಳಂಬರಿಗೆ ಸ್ವಲ್ಪಕಾಲ ಅಧೀನರಾಗಿದ್ದರು. ಕದಂಬ, ಗಂಗ ಮತ್ತು ಕಲ್ಯಾಣ ಚಾಳುಕ್ಯರೊಂದಿಗೆ ಇವರು ವಿವಾಹ ಸಂಬಂಧ ಬೆಳೆಸಿದ್ದರು. ಬಾಣರು, ವೈದುಂಬರು, ಚೋಳರು ಮುಂತಾದವರಿಗೂ ಇವರಿಗೂ ರಾಜಕೀಯ ಸಂಬಂಧವಿತ್ತು. ನಂದಿಯ ಲಾಂಛನ ಹೊಂದಿದ್ದ ಇವರ ರಾಜಧಾನಿ ಪೆಂಜೀರು ಅಥವಾ ಹೆಂಜೇರು.ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಹೇಮಾವತಿಯೇ ಇತ್ತೆಂದು ಗುರುತಿಸಲಾಗಿದೆ.

ಇತಿಹಾಸ

[ಬದಲಾಯಿಸಿ]

ನೊಳಂಬರು ತಮ್ಮನ್ನು ಪಲ್ಲವ ಮೂಲದವರು ಎಂದು ಗುರುತಿಸಿಕೊಂಡ ಶಾಸನಗಳಿವೆ.ಪಲ್ಲವರು ಮೂಲತಃ ಕರ್ಣಾಟಾಂದ್ರ ಸೀಮೆಯವರು , ಶಾತವಾಹನರ ಸಾಮಂತರಾಗಿ ವೆಂಗಿಮಂಡಳದ ಬಾಗಗಳಲ್ಲಿ ಅಧಿಪತ್ಯ ಹೊಂದಿದ್ದದವರು. ಯಾವಾಗ ಪಲ್ಲವರು ಚಾಳುಕ್ಯರಿಂದ ಸೋಲುಂಡು ತಮಿಳುನಾಡಿನ ದಕ್ಷಿಣಕ್ಕೆ ತಳ್ಳಲ್ಪಟ್ಟರೋ ಆಗ ವೆಂಗಿಮಂಡಳ ಹಾಗು ಇಂದಿನ ಹೈದ್ರಾಬಾದ್ ಕರ್ಣಾಟಕದ ಭೂಬಾಗಗಳಲ್ಲಿ ಉಳಿದುಕೊಂಡ ಕೆಲ ಸಾಮಂತರು ಕಾಳಾಮುಖ ಯತಿಗಳ ಆಶೀರ್ವಾದದಿಂದ ಪುನಃ ರಾಜ್ಯಕಟ್ಟುವ ಕಾರ್ಯವನ್ನು ಮುಂದುವರಿಸಿದರು ಆ ಪಲ್ಲವ ಮೂಲದವರೇ ನೊಳಂಬರು. ನೊಳಂಬ ಪದಕ್ಕೆ ಶ್ರೇಷ್ಠ ,ಅಗ್ರಮಾನ್ಯ , ಮುನ್ನುಗ್ಗುವ ವೀರ ಎಂದೆಲ್ಲಾ ಅರ್ಥೈಸಬಹುದು. ನೊಳಂಬರು ಮೂಲತಃ ಶಿವಭಕ್ತರು ವೀರಶೈವ ಧರ್ಮ ಪರಿಪಾಲಕರು. ಪಶುಪಾಲನೆ ಮಾಡಿಕೊಂಡು ವ್ಯವಸಾಯ‌ವನ್ನು ಆರಂಬಿಸಿದರು ಹಾಗೆ ರಾಜ್ಯವನ್ನು ಕಟ್ಟುವ ಕೆಲಸವನ್ನು ಮಾಡಿ ಕ್ಷತ್ರಿಯರಾಗುತ್ತಾರೆ .ನೊಳಂಬರ ಶಿವಯೋಗಿ ಸಿದ್ಧರಾಮೇಶ್ವರರು ಸಹ ಕೃಷಿಕರ ಮನೆತನದವರು. ಹೀಗೆ ಕೃಷಿಕರಾದ ನೊಳಂಬ ರೈತರೇ ನೊೞಂಬರು(ನೊಳಂಬರು).ಪಲ್ಲವ ಸಾಮ್ರಾಜ್ಯವನ್ನು ಕಟ್ಟಿದವರು ಕೃಷಿಕರು ಎಂದು ಹಲವೆಡೆ ಉಲ್ಲೇಖಗಳಿವೆ. ಈಶ್ವರ ವಂಶಜನಾದ ಕಂಚೀಪತಿ ಎಂದು ಶಾಸನವೊಂದರಲ್ಲಿ ವರ್ಣಿತನಾಗಿರುವ ತ್ರಿಣಯನ ಪಲ್ಲವ ಎಂಬುವನು ನೊಳಂಬರ ಮೂಲಪುರುಷ. ಇವನ ವಂಶದಲಿ ಹುಟ್ಟಿದವನು ಮಂಗಳ ನೊಳಂಬಾಧಿ ರಾಜ (ಸು. 730-ಸು. 775). ಹೇಮಾವತಿ ಶಾಸನದ ಪ್ರಕಾರ ಇವನು ಕಿರಾತ ನೃಪತಿಯನ್ನು ಜಯಿಸಿದ; ಕರ್ಣಾಟರಿಂದ ಸ್ತುತ್ಯನಾದವನೀತ. ಇವನ ಅನಂತರ ಪಟ್ಟಕ್ಕೆ ಬಂದವನು ಇವನ ಮಗ ಸಿಂಹಪೋತ (ಸು. 775-ಸು. 805). ಕಲಿ ನೊಳಂಬಾಧಿ ರಾಜನೆನಿಸಿಕೊಂಡಿದ್ದ ಈತ ಶ್ರೀಪುರುಷನ ಮಗನೂ ಶಿವಮಾರನ ಸಹೋದರನೂ ಆದ ದುಗ್ಗಮಾರನ ಮೇಲೆ ದಂಡೆತ್ತಿಹೋದ. ಶ್ರೀಪುರಷನ ಅನಂತರ ಗಂಗ ಸಿಂಹಾಸನಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಇವನು ಶಿವಮಾರನ ಪರವಾಗಿ ದುಗ್ಗಮಾರನ ಮೇಲೆ ದಂಡೆತ್ತಿಹೋಗಿರಬಹುದೆಂದು ಊಹಿಸಬಹುದು. ಎರಡನೆಯ ಶಿವಮಾರನನ್ನು ರಾಷ್ಟ್ರಕೂಟ ಧ್ರುವ ಸೋಲಿಸಿದಾಗ ನೊಳಂಬರು ಗಂಗರ ಆಶ್ರಯವನ್ನು ಬಿಟ್ಟು ರಾಷ್ಟ್ರಕೂಟರ ಸಾಮಂತರಾದರು. ಸಿಂಹಪೋತನ ಮಗ ಚಾರುಪೊನ್ನೇರ ಪರಮೇಶ್ವರ ಪಲ್ಲವಾಧಿರಾಜ (ಸು. 805-ಸು. 830). ಇವನು ರಾಷ್ಟ್ರಕೂಟ 3ನೆಯ ಗೋವಿಂದನ ಸಾಮಂತನಾಗಿದ್ದ. ನೊಳಂಬಳಿಗೆ ಸಾಸಿರ ಮುಂತಾದ ಪ್ರಾಂತ್ಯಗಳು ಇವನ ಅಧೀನದಲ್ಲಿದ್ದುವು.[]

ಸುಮಾರು 820ರಲ್ಲಿ ನೊಳಂಬರು ಪಶ್ಚಿಮದ ಗಂಗರ ಸಾಮಂತರಾದರೆಂದು ಕಾಣುತ್ತದೆ. ಚಾರುಪೊನ್ನೇರನ ಮಗ ಪೊಳಲ್ಚೋರನಿಗೆ ಗಂಗರಾಜ 1ನೆಯ ರಾಚಮಲ್ಲನ ಮಗಳು, ನೀತಿಮಾರ್ಗನ ತಂಗಿ, ಚಾಯಬ್ಬೆಯನ್ನು ಕೊಟ್ಟು ವಿವಾಹವಾಯಿತು. 1ನೆಯ ಪೊಳಲ್ಚೋರ ಕೋಲಾರ, ಬೆಂಗಳೂರು ಮತ್ತು ಚಿತ್ತೂರು ಜಿಲ್ಲೆಯ ಭಾಗಗಳನ್ನೊಳಗೊಂಡ ಗಂಗರು ಸಾಸಿರ ಪ್ರಾಂತ್ಯವನ್ನು ಸು. 830-ಸು. 875ರಲ್ಲಿ ಗಂಗನೀತಿಮಾರ್ಗನ ಅಧೀನದಲ್ಲಿ ಆಳುತ್ತಿದ್ದನೆಂಬುದಾಗಿ ಶಾಸನವೊಂದರಿಂದ ತಿಳಿಯುತ್ತದೆ. 810ರಲ್ಲಿ ಮಹಾಬಲಿ ಬಾಣರ ವಶದಲ್ಲಿದ್ದ ಈ ಪ್ರಾಂತ್ಯ 1ನೆಯ ರಾಚಮಲ್ಲನ ಕಾಲದಲ್ಲಿನೊಳಂಬರಿಗೆ ಸೇರಿತು. ಪೊಳೆಲ್ಚೋರನ ಕಾಲದಲ್ಲಿ ನೊಳಂಬರ ರಾಜ್ಯ ನೊಳಂಬಳಿಗೆ ಸಾಸಿರ, ಗಂಗರು ಸಾಸಿರ ಇವುಗಳೇ ಅಲ್ಲದೆ ಇನ್ನೂ ಹಲವು ಪ್ರದೇಶಗಳಿಗೆ ವಿಸ್ತರಿಸಿತು. 1ನೆಯ ನೀತಿಮಾರ್ಗನ ಹಿಂದೂಪುರ ಶಾಸನದಲ್ಲಿ (853) ಉಲ್ಲೇಖಿತನಾಗಿರುವ ನೊಳಂಬ ರಾಜ ಪೊಳೆಲ್ಚೋರನೇ ಇರಬಹುದೆಂದು ಊಹಿಸಲಾಗಿದೆ. ಈ ನೊಳಂಬ ರಾಜನ ರಾಜ್ಯ ಕಂಚಿಯವರೆಗೂ ವಿಸ್ತರಿಸಿತ್ತೆಂದು ಆ ಶಾಸನದಲ್ಲಿ ಹೇಳಿದೆ. ನಂದಿಯ ಭೋಗನಂದೀಶ್ವರ ದೇವಾಲಯದ ಗೋಪುರದ ಜೀರ್ಣೋದ್ಧಾರವಾದ್ದೂ ಅನಂತಪುರ ಜಿಲ್ಲೆಯ ಕಂಬದೂರಿನ ಬೆಳ್ದುಗೊಂಡೆಯ ಕೆರೆಯ ನಿರ್ಮಾಣವಾದ್ದೂ ಈತನ ಕಾಲದಲ್ಲಿ.

ಪೊಳಲ್ಚೋರನ ಮಗ ಮಹೇಂದ್ರ (ಸು. 875-ಸು, 897). ನೊಳಂಬಾಧಿರಾಜ ತ್ರಿಭುವನವೀರ ಎನಿಸಿಕೊಂಡ ಈತ ಗಂಗವಂಶದ ಜಾಯಬ್ಬೆಯಲ್ಲಿ ಜನಿಸಿದವ. ಇವನು 2ನೆಯ ರಾಜಮಲ್ಲನ ಅಧೀನನಾಗಿ ಗಂಗರು ಸಾಸಿರದ ಆಳ್ವಿಕೆಯನ್ನಾರಂಭಿಸಿದ. ಇವನ ಹೆಂಡತಿ ಗಾಮಬ್ಬೆ ಗಂಗವಂಶದವಳು. ಗಂಗರುಸಾಸಿರ ಪ್ರಾಂತ್ಯಕ್ಕಾಗಿ ಬಾಣರು ಇವನ ಕಾಲದಲ್ಲೂ ಹೋರಾಟ ಮುಂದುವರಿಸಿದರು. ಗಂಗ ರಾಚಮಲ್ಲ ಮತ್ತು ತೆಲುಗು ಚೋಳದೊರೆ ಮಹೇಂದ್ರ ವಿಕ್ರಮರು ಇವನಿಗೆ ನೇರವಾಗಿ ನಿಂತರು. ಇದರಿಂದ ಇವನು ಬಾಣ ದೊರೆ ವಿದ್ಯಾಧರನನ್ನು ಹಲವು ಕಡೆ ಸೋಲಿಸಿದ;

ಮಹಾಬಲಿಕುಲವಿಧ್ವಂಸಕನೆಂಬ ಬಿರುದು ತಳೆದ. ಇವನ ಆಳ್ವಿಕೆ ಪುಲಿನಾಡಿಗೆ ವಿಸ್ತರಿಸಿತು. ಕೊನೆಗೆ ಇವನು ತನ್ನ ಮೇಲೆ ಇದ್ದ ಗಂಗರೊಂದಿಗೂ ಯುದ್ಧಕ್ಕೆ ಎಳಸಿದ. ರಾಜ್ಯಾಕಾಂಕ್ಷೆ ಇವನಿಗೆ ಪ್ರಬಲವಾಗಿತ್ತು. ಗಂಗರ ರಾಜ್ಯದ ಹಲವು ಭಾಗಗಳನ್ನು ಇವನು ವಶಪಡಿಸಿಕೊಂಡಿರಬೇಕೆಂದು ಕಾಣುತ್ತದೆ. ತಲಕಾಡಿಗೆ ಸುಮಾರು 40 ಕಿಮೀ. ದೂರದ ತಾಯಲೂರಿನಲ್ಲಿರುವ ಶಾಸನದಿಂದ ಹೀಗೆಂದು ಊಹಿಸಬಹುದು. ಇನ್ನೊಂದು ಶಾಸನದಲ್ಲಿ ಇವನನ್ನು ಗಂಗಮಂಡಲ 96000ದ ಅಧಿಪತಿಯೆಂದು ಹೇಳಲಾಗಿದೆ. ಆದರೆ ಗಂಗ ರಾಜಮಲ್ಲನ ಮಗ ಎರೆಯಪ್ಪ ಇವನನ್ನು ಸೋಲಿಸಿದೆ. ಎರೆಯಪ್ಪ ಇವನನ್ನು ಕೊಂದು ಮಹೇಂದ್ರಾಂತಕನೆಂಬ ಬಿರುದು ತಳೆದೆನೆಂದು ಶಿವಮೊಗ್ಗೆ ಬಳಿಯ ಹುಂಚದ ಶಾಸನ ತಿಳಿಸುತ್ತದೆ.

ಮಹೇಂದ್ರನ ಕಾಲದಲ್ಲಿ ನೊಳಂಬರ ರಾಜ್ಯ ಗರಿಷ್ಠ ಸ್ಥಿತಿ ಮುಟ್ಟಿತ್ತು. ಅನಂತರ ಇವನ ಮಗ ಅಯ್ಯಪದೇವ (ಸು. 897-ಸು. 934)ರಾಜ್ಯವಾಳಿದ. ಇವನು ಗಾಮಬ್ಬೆಯಲ್ಲಿ ಜನಿಸಿದವನು. ನೊಳಿಪಯ್ಯ ಎಂಬ ಹೆಸರೂ ಇವನದೇ ಎಂದು ಹೇಳಲಾಗಿದೆ. ಇವನು 2ನೆಯ ರಾಜಮಲ್ಲನೊಂದಿಗೆ ಯುದ್ಧಮಾಡಿದ. ಕಲಿಕಟ್ಟೆಯಲ್ಲಿ ನಡೆದ ಕದನದ ಅನಂತರ ಇವನು ಬಹುಶಃ ಗಂಗರ ಸಾಮಂತನಾಗಿ ನೊಳಂಬವಾಡಿ 3200ದ ಆಳ್ವಿಕೆ ನಡೆಸಿದ. ಇವನು ಪೂರ್ವ ಚಾಳುಕ್ಯ 1ನೆಯ ಅಮ್ಮಣರಾಯನನ್ನು ಸೋಲಿಸಿದನೆಂದೂ 931ರಲ್ಲಿ ರಾಷ್ಟ್ರಕೂಟ 4ನೆಯ ಗೋವಿಂದ ಅಧೀನದಲ್ಲಿ ಮಾಸವಾಡಿ ಮತ್ತು ಕೋಗಳಿಗಳನ್ನಾಳುತ್ತಿದ್ದನೆಂದೂ ಶಾಸನಗಳು ತಿಳಿಸುತ್ತವೆ. ಎರೆಯಪ್ಪನ ಪರವಾಗಿ ಪೂರ್ವ ಚಾಳುಕ್ಯ ಬೀರ ಮಹೇಂದ್ರನೊಂದಿಗೆ (2ನೆಯ ಭೀಮ) ಹೋರಾಟದಲ್ಲಿ ಅಯ್ಯಪದೇವ ಮಡಿದ.

ಇವನ ಅನಂತರ ಮಗ ಅಣ್ಣಿಗ (ಸು. 932-940)ಪಟ್ಟಕ್ಕೆ ಬಂದ. ಅಣ್ಣಿಗನನ್ನು ಬೀರನೊಳಂಬ, ಅಣ್ಣಯ್ಯ ಎಂದೂ ಕರೆಯಲಾಗಿದೆ. ಗಂಗವಂಶದ ಪೊಲ್ಲಬ್ಬರಸಿ ಇವನ ತಾಯಿ. ಚಾಲುಕ್ಯ ಅತ್ತಿಯಬ್ಬರಸಿಯೊಂದಿಗೆ ಇವನ ವಿವಾಹವಾಗಿತ್ತು. ಇವನ ಕಾಲದಲ್ಲಿ ನೊಳಂಬರಿಗೂ ಪಶ್ಚಿಮಗಂಗರಿಗೂ ನಡುವೆ ವಿರಸ ಉಂಟಾಯಿತು. 3ನೆಯ ರಾಜಮಲ್ಲನ ವಿರುದ್ಧ ಕೊತ್ತಮಂಗಲ ಕದನದಲ್ಲಿ ಇವನು ಪರಾಜಯ ಹೊಂದಿದ. ಅನಂತರ ರಾಷ್ಟ್ರಕೂಟ 3ನೆಯ ಕೃಷ್ಣ ಗಂಗವಾಡಿಯ ಮೇಲೆ ನಡೆಸಿದ ದಂಡಯಾತ್ರೆಯಲ್ಲಿ ಅಣ್ಣಿಗನೂ ಸೋತ.

ಅನಂತರ ಆಳ್ವಿಕೆ ನಡಸಿದವನು ಅಣ್ಣಿಗನ ತಮ್ಮ ಇರಿವನೊಳಂಬ ದಿಲೀಪ (ಸು. 940-ಸು. 968). ಇವನು ರಾಷ್ಟ್ರಕೂಟರ ಸಾಮಂತನಾಗಿದ್ದ. ನೊಳಿಪಯ್ಯ ಎಂಬುದು ಇವನ ಇನ್ನೊಂದು ಹೆಸರು. ಇವನಿಗೆ ಹಲವು ಬಿರುದುಗಳಿದ್ದವು. ಇವನ ಅನಂತರ ಇವನ ಹಿರಿಯ ಮಗ ಛಲದಂಕಕಾರ ನನ್ನಿನೊಳಂಬ ಆಳಿದ (ಸು. 968-ಸು. 970). ಇವನ ಮಗ ನನ್ನಿ 2ನೆಯ ಪೊಳಲ್ಚೋರ. ಇವನು ಸ್ವತಂತ್ರವಾಗಿ ರಾಜ್ಯವಾಳಿರಲಾರನೆಂದು ಕಾಣುತ್ತದೆ. ಇವನು ಅಕಾಲಮೃತ್ಯುವಿಗೆ ತುತ್ತಾಗಿದ್ದಿರಬಹುದು. 2ನೆಯ ಮಾರಸಿಂಹನೊಂದಿಗೆ ಯುದ್ದದಲ್ಲಿ ಪೊಳಲ್ಚೋರ ಮಡಿದಿರಬೇಕು. ಈತನ ಪತ್ನಿ ಕದಂಬ ವಂಶದ ದೀವಾಂಬಿಕೆ ತನ್ನ ಗಂಡನ ಹೆಸರಿನಲ್ಲಿ ಪೊಳಲ್ಚೋರಮಂಗಲ ಎಂಬ ಆಗ್ರಹಾರ ಕಟ್ಟಿಸಿದಳೆಂದು ಕಂಬದೂರಿನ ಶಾಸನ ತಿಳಿಸುತ್ತದೆ. ಇವನ ತರುವಾಯ 2ನೆಯ ಮಹೇಂದ್ರ (ಸು. 977-ಸು. 981) ಆಳಿದ. ಗಂಗರಿಂದ ಸೋತ ನೊಳಂಬರು ಬಹುಶಃ ಕಲ್ಯಾಣದ ಚಾಳುಕ್ಯ 2ನೆಯ ತೈಲವನ ಸ್ನೇಹ ಬೆಳೆಸಿದ್ದಿರಬಹುದು. ಚಾಳುಕ್ಯರ ಬೆಂಬಲದಿಂದ ನೊಳಂಬರು ನೊಳಂಬವಾಡಿಯನ್ನೂ ಇತರ ಕೆಲವು ಪ್ರದೇಶಗಳನ್ನೂ ಪುನಃ ಪಡೆದುಕೊಂಡಿರಬೇಕು. ಮಹೇಂದ್ರನ ಅನಂತರ ಅವನ ತಮ್ಮ ಇರಿವನೊಳಂಬ ಘಟೆಯಂಕಕಾರ (ಸು. 1010-ಸು. 1024) ಆಳಿದ. ಇವನು 3ನೆಯ ತೈಲಪನ ಮೊಮ್ಮಗಳೂ ವಿಕ್ರಮಾದಿತ್ಯನ ತಂಗಿಯೂ ಆದ ಮಹಾದೇವಿಯನ್ನು ಮದುವೆಯಾಗಿದ್ದ. ಚಾಳುಕ್ಯರೊಂದಿಗಿನ ರಾಜಕೀಯ ಹಾಗೂ ವಿವಾಹ ಸಂಬಂಧಗಳ ಮೂಲಕ ನೊಳಂಬರು ಮಾಂಡಲಿಕರಾಗಿ ರಾಜ್ಯವಾಳಿದರು. ಈಗಿನ ಬಳ್ಳಾರಿ ಜಿಲ್ಲೆಯ ತುಂಗಭದ್ರಾ ತೀರದ ಕಂಪಿಲಿ ಇವರ ರಾಜಧಾನಿಯಾಯಿತು. ಇವರು ತಮ್ಮ ಹೆಸರಿನ ಜೊತೆಗೆ ಆಯಾ ಕಾಲದ ಚಾಳುಕ್ಯ ದೊರೆಗಳ ಬಿರುದುಗಳನ್ನು ಸೇರಿಸಿಕೊಳ್ಳತೊಡಗಿದರು. ಇರಿವನೊಳಂಬನ ಅನಂತರ ಇವನ ಮಗ ಜಗದೇಕಮಲ್ಲ ನೊಳಂಬ ಪಲ್ಲವ ಪೆಮ್ಮಾನಡಿ ಉದಯಾದಿತ್ಯ ದೇವ (ಸು. 1024-ಸು. 1037) ಆಳಿದ. ಜಗದೇಕಮಲ್ಲನೊಳಂಬ ಉದಯಾದಿತ್ಯನ ಅನಂತರ ಅವನ ಮಗ ಜಗದೇಕಮಲ್ಲ ಇಮ್ಮಡಿನೊಳಂಬ ಆಳಿದ (ಸು. 1037-1044). ಇವನ ತರುವಾಯ ಇವನ ತಮ್ಮ ತ್ರೈಲೋಕ್ಯಮಲ್ಲ ನನ್ನಿನೊಳಂಬ ಆಳಿದ (1044-1054). ಈತ ತ್ರೈಲೋಕ್ಯಮಲ್ಲ ಚಾಳುಕ್ಯ ಸೋಮೇಶ್ವರನ ಸಾಮಂತನಾಗಿದ್ದ. ಇವನು ತನ್ನ ಸ್ವಾಮಿಯ ಪರವಾಗಿ ಚೋಳರ ವಿರುದ್ಧ ಹೋರಾಡಿ 1054ರಲ್ಲಿ ಮಡಿದ. ಮೂಲ ನೊಳಂಬ ರಾಜವಂಶ ತ್ರೈಲೋಕ್ಯಮಲ್ಲ ನನ್ನಿನೊಳಂಬನೊಂದಿಗೆ ಮುಕ್ತಾಯಗೊಂಡಿತು.

ನೊಳಂಬರ ಮಹಾನಾಡ ಪ್ರಭುಗಳ ಎರಡನೇ ಹಂತವು ಚಾಳುಕ್ಯ ರಾಣಿ ಚಾಮಲಾದೇವಿಯ ಔದಾರ್ಯದಿಂದ ಬೆಳೆಯಿತು. ಚಾಳುಕ್ಯರಾಣಿ ಚಾಮಲಾದೇವಿ ತನ್ನ ಅಣ್ಣ ರಾಜ ಹಿರೇಗೌಡರು ತೀರಿಕೊಂಡ ಬಳಿಕ ತನ್ನ ಅಣ್ಣನ ಏಳು ಜನ ಮಕ್ಕಳು ರಾಜ್ಯವನ್ನು ಕಳೆದುಕೊಂಡು ದುಸ್ಥಿತಿಯಲ್ಲಿದ್ದಾಗ ಶಿವಯೋಗಿ ಸಿದ್ಧರಾಮೇಶ್ವರರಲ್ಲಿ ಬಿನ್ನಹಿಸಿಕೊಂಡರು. ಶಿವಯೋಗಿ ಸಿದ್ಧರಾಮೇಶ್ವರರ ಆಶೀರ್ವಾದದಿಂದ ಕೈತಪ್ಪಿದ್ದ ರಾಜ್ಯ ಮರಳಿ ದೊರಕಿತು ಏಳು ರಾಜಕುವರರು ಏಳು ನಾಡುಗಳನ್ನು ಆಳತೊಡಗಿದರು ಏಳುನಾಡಿನ ಪ್ರದೇಶವೇ ನಂತರ ಯಳನಾಡು ಎಂದು ಅಪ್ರಭಂಶವಾಗಿದೆ.ನೊಳಂಬ ಮಹಾನಾಡಪ್ರಭುಗಳು ವಿಜಯ ನಗರದ ಸಾಮಂತರಾಗಿದ್ದುಕೊಂಡು ತೋಂಟದ ಸಿದ್ಧಲಿಂಗೇಶ್ವರರನ್ನು ಗುರುಗಳನ್ನಾಗಿಸಿಕೊಂಡು ವೀರಶೈವ ಧರ್ಮದ ಹೆಸರಿನಲ್ಲಿ ಆಳ್ವಿಕೆ ಮಾಡಿದ್ದರು.

ವಾಸ್ತುಶಿಲ್ಪ

[ಬದಲಾಯಿಸಿ]

ಕರ್ನಾಟಕದ ವಾಸ್ತುಶಿಲ್ಪ ಪರಂಪರೆಯಲ್ಲಿ ನೊಳಂಬರ ಕಾಲ ಒಂದು ಮುಖ್ಯವಾದ ಘಟ್ಟ. 8ನೆಯ ಶತಮಾನದಿಂದ 11ನೆಯ ಶತಮಾನದವರೆಗೆ ಕರ್ನಾಟಕದ ಆಗ್ನೇಯ ಭಾಗದಲ್ಲಿ ಆಳಿದ ನೊಳಂಬರು ವಾಸ್ತುಶಿಲ್ಪದ ಬೆಳವಣಿಗೆಗೆ ಬಹಳ ಮಟ್ಟಿಗೆ ನೆರವಾದರು. ಬಾದಾಮಿ ಚಾಳುಕ್ಯರು ಅನಂತರ ಈ ಭಾಗದಲ್ಲಿ ಕಲೆಯನ್ನು ಊರ್ಜಿತಗೊಳಿಸಿದ ಕೀರ್ತಿ ಇವರಿಗೆ ಸಲ್ಲಬೇಕು. ಇವರ ಕಲೆಯ ವಿಶೇಷ ಗುಣವೆಂದರೆ ಚಾಲುಕ್ಯ ಮತ್ತು ಪಲ್ಲವ ಶೈಲಿಗಳ ಉತ್ತಮ ಸಂಯೋಜನೆ. ಮೂಲತಃ ಪಲ್ಲವರಾದ ನೊಳಂಬರು ಈ ಎರಡೂ ಶೈಲಿಗಳ ಉತ್ತಮ ಅಂಶಗಳನ್ನು ತಮ್ಮದೇ ಆದ ರೀತಿಯಲ್ಲಿ ಸಂಯೋಜಿಸಿ ಹೊಸ ಹೊಸ ರೂಪಗಳನ್ನು ನಿರೂಪಿಸಿ ತಮ್ಮ ಶೈಲಿಗೆ ವಿಶಿಷ್ಟ ಸ್ಥಾನವನ್ನು ಗಳಿಸಿಕೊಂಡುರು.

ಚಾಳುಕ್ಯರ ಅನಂತರ ಆಳಿದ ನೊಳಂಬರು ತಮ್ಮ ಶಿಲ್ಪಗಳಿಗೆ ಹಿಂದಿನ ಶಿಲ್ಪಗಳಿಗಿಂತ ಹೆಚ್ಚಿನ ಅಲಂಕರಣ ನೀಡಿದರು. ಆದರೆ ಇವರ ಶಿಲ್ಪಗಳು ಇವರ ಅನಂತರ ಆಳಿದ ಹೊಯ್ಸಳ ಅಥವಾ ಕಲ್ಯಾಣಿ ಚಾಳುಕ್ಯರ ಶಿಲ್ಪಗಳಷ್ಟು ಅಲಂಕೃತವಲ್ಲ. ಆದರೂ ಇವು ನೋಡಲು ಬಹಳ ರಮಣೀಯ. ಇವುಗಳ ರೂಪಣೆಯಲ್ಲಿ ಲಾಲಿತ್ಯವೂ ರಮ್ಯತೆಯೂ ಎದ್ದು ಕಾಣುತ್ತವೆ. ಇವರ ಶಿಲ್ಪಗಳ ಮತ್ತೊಂದು ವೈಶಿಷ್ಟ್ಯವೆಂದರೆ ಮನಮೋಹಕ ನಿಲುವು. ಮುಗ್ಧಸೌಂದರ್ಯ ಹಾಗೂ ಆಕರ್ಷಣೆ ಅಂಗಸೌಷ್ಠವ. ಇವರ ಶಿಲ್ಪಶೈಲಿಯ ಮೇರುಕೃತಿಯೆಂದರೆ, ಈಗ ಮದ್ರಾಸ್ ವಸ್ತುಸಂಗ್ರಹಾಲಯದಲ್ಲಿರುವ ಉಮಾಮಹೇಶ್ವರ ವಿಗ್ರಹ. ಸುಖಾಸೀನನಾಗಿ ಕುಳಿತಿರುವ ನಾಲ್ಕು ಕೈಗಳುಳ್ಳ ಶಿವ, ಆತನ ಪಕ್ಕದಲ್ಲಿ ಆಸೀನಳಾದ ಉಮಾ ಇವರ ಮೂರ್ತಿಗಳು ಮೇಲೆ ಹೇಳಿರುವ ಗುಣಗಳ ಪ್ರತೀಕವಾಗಿವೆ. ಇದನ್ನು ಸರಿಗಟ್ಟುವಂಥ ಶಿಲ್ಪಗಳು ಕರ್ನಾಟಕದಲ್ಲಿ ಬಹು ವಿರಳ, ಇದೇ ವಸ್ತುಸಂಗ್ರಹಾಲಯದಲ್ಲಿರುವ ದಕ್ಷಿಣಾಮೂರ್ತಿ, ಸೂರ್ಯ, ಪೃಷ್ಟಸ್ವಸ್ತಿಕ ಭಂಗಿಯಲ್ಲಿ ನರ್ತಿಸುತ್ತಿರುವ ನಟರಾಜ, ಕಾಳಿ ಮುಂತಾದ ಅನೇಕ ಶಿಲ್ಪಗಳು ಇವರ ಕಲಾಪ್ರೌಢಿಮೆಯ ಉದಾಹರಣೆಗಳು.

ಮೇಲೆ ಹೇಳಿದ ಶಿಲ್ಪಗಳಲ್ಲದೆ ಇವರ ರಾಜಧಾನಿಯಾಗಿದ್ದ ಹೇಮಾವತಿಯಲ್ಲಿರುವ ಮಾತೃಕೆಯರ ಬಿಡಿ ಹಾಗೂ ಸಾಲುಶಿಲ್ಪಗಳು, ಸೂರ್ಯ, ವಿಷ್ಣು, ಶಿವ, ಕಾಳಿ, ಆಲಿಂಗನ ಚಂದ್ರಶೇಖರಮೂರ್ತಿ ಇತ್ಯಾದಿ ವಿಗ್ರಹಗಳು ನೊಳಂಬರು ಕಾಲದ ಕಲಾಕೌಶಲವನ್ನು ಪ್ರದರ್ಶಿಸುತ್ತವೆ.

ನೊಳಂಬರು ಜಾಲಂಧ್ರಗಳ ನಿರೂಪಣೆಯಲ್ಲಿ ಅದ್ವಿತೀರೆನಿಸಿದರು. ಸುಂದರವಾಗಿ ಬಳುಕುವ ಬಳ್ಳಿಗಳ ಚಿತ್ರಣವುಳ್ಳ ಜಾಲಂಧ್ರಗಳು ಮತ್ತು ದೇವತಾಶಿಲ್ಪಗಳುಳ್ಳ ಜಾಲಂಧ್ರಗಳು ಇವರ ಕಲೆಯ ವೈಶಿಷ್ಟ್ಯ. ಹೇಮಾವತಿಯ ದೊಡ್ಡೇಶ್ವರ ದೇವಾಲಯದಲ್ಲಿರುವ ಗಂಗಾ, ಮಿಥುನ, ಕಾರ್ತಿಕೇಯ, ಬ್ರಹ್ಮ, ವಿಷ್ಣು ಇತ್ಯಾದಿ ಶಿಲ್ಪಗಳನ್ನು ಹೊಂದಿರುವ ಜಾಲಂಧ್ರಗಳು ಇವರ ಕಲಾನೈಪುಣ್ಯಕ್ಕೆ ಸಾಕ್ಷಿ. ಈ ಜಾಲಂಧ್ರಗಳ ಆಕರ್ಷಣೆಗೆ ಉತ್ತಮ ನಿದರ್ಶನವೆಂದರೆ ತಂಜಾವೂರಿನ ಬೃಹದೀಶ್ವರ ದೇವಾಲಯದ ನವರಂಗದಲ್ಲಿರುವ ಹಸಿರುಕಲ್ಲಿನ ಜಾಲಂಧ್ರ. ನೊಳಂಬರ ಜಾಲಂಧ್ರಗಳ ಸೌಂದರ್ಯಕ್ಕೆ ಮಾರುಹೋದ ರಾಜೇಂದ್ರಚೋಳ ತನ್ನ ನೊಳಂಬವಾಡಿ ವಿಜಯದ ಸಂಕೇತವಾಗಿ ಇದನ್ನು ತಂಜಾವೂರಿಗೆ ಕೊಂಡೊಯ್ದು ಬೃಹದೀಶ್ವರ ದೇವಾಲಯದಲ್ಲಿ ಸ್ಥಾಪಿಸಿದೆ.

ಇವರ ಶಿಲ್ಪಗಳಲ್ಲಿ ನಂದಿಯ ಶಿಲ್ಪಗಳೂ ಮುಖ್ಯವಾದವು. ನಂದಿಯ ವಿಗ್ರಹಗಳು ಹೆಚ್ಚಿನ ಮಟ್ಟಿಗೆ ಚಾಳುಕ್ಯರ ನಂದಿಗಳನ್ನು ಹೋಲುತ್ತವೆ. ನೊಳಂಬರು ಮೂಲತಃ ಶೈವರಾದುದರಿಂದ ಇವರ ಎಲ್ಲ ದೇವಾಲಯಗಳಲ್ಲೂ ನಂದಿಯ ಶಿಲ್ಪಗಳನ್ನು ಕಾಣಬಹುದು. ಸುಂದರವಾದ ಮೈಮಾಟ, ದೇಹಶಕ್ತಿ ಹಾಗು ಓಜಸ್ಸಿನಿಂದ ಕೂಡಿರುವ ಈ ಶಿಲ್ಪಗಳು ಘಂಟಾಹಾರ, ಗೆಜ್ಜೆಹಾರ, ಹಣೆಪಟ್ಟಿ, ಕುಚ್ಚು ಇತ್ಯಾದಿ ಅಲಂಕರಣಗಳಿಂದ ಕೂಡಿವೆ.

ವಾಸ್ತುವಿನ ಭಾಗವಾದರೂ ಶಿಲ್ಪದ ಸಾಲಿಗೇ ಸೇರಿಸಬಹುದಾದ ನೊಳಂಬರ ಕಲೆಯ ಇನ್ನೊಂದು ಅಂಶವೆಂದರೆ ಇವರ ದೇವಾಲಯದ ಕಂಬಗಳು. ಮೂಲತಃ ಚಾಳುಕ್ಯರ ಸ್ತಂಭಗಳಿಂದ ಬಂದಿವೆಯೆಂದು ಹೇಳಬಹುದಾದರೂ ಈ ಕಂಬಗಳ ಮಧ್ಯ ಭಾಗ ಚಾಳುಕ್ಯರವುಗಳಿಗಿಂತ ಭಿನ್ನ. ನೊಳಂಬರ ಕಂಬಗಳಲ್ಲಿ ಈ ಭಾಗದಲ್ಲಿ ಹೆಚ್ಚಿನ ಅಲಂಕರಣವನ್ನು ಕಾಣಬಹುದು. ಸುಂದರವಾದ ಮುತ್ತಿನ ಮಾಲೆಗಳೂ ಅವುಗಳ ಮಧ್ಯಭಾಗದಲ್ಲಿ ಸಣ್ಣ ಸಣ್ಣ ಶಿಲ್ಪಗಳೂ ಮೇಲ್ಬಾಗದಲ್ಲಿ ಕೀರ್ತಿಮುಖಗಳೂ ಇವುಗಳ ಮೇಲೆ ಲತಾಪಟ್ಟಿಕೆ ಇತ್ಯಾದಿ ಅಲಂಕರಣಗಳೂ ಇವೆಲ್ಲದರ ಮೇಲ್ಬಾಗದಲ್ಲಿ ನಾಲ್ಕು ಮೂಲೆಗಳಲ್ಲಿ ಕುಳಿತಿರುವ ಸಣ್ಣ ಸಣ್ಣ ಸಿಂಹಗಳ ವಿಗ್ರಹಗಳೂ ನೊಳಂಬರ ಶೈಲಿಯ ಕಂಬಗಳ ವಿಶಿಷ್ಟ ಲಕ್ಷಣಗಳು. ಪ್ರಾಯಶಃ ಈ ಸಿಂಹಗಳು ಪಲ್ಲವರ ಕಂಬಗಳಲ್ಲಿ ವಿಶೇಷವಾಗಿ ಹಾಗೂ ಬೃಹತ್ತಾಗಿ ಕಾಣಬರುವ ಸಿಂಹಗಳ ಸೂಕ್ಷ್ಮ ಪ್ರತಿ ರೂಪಗಳಾಗಿದ್ದು ನೊಳಂಬರು ಕಲೆಯ ಮೇಲೆ ಪಲ್ಲವರ ಶೈಲಿಯ ಪ್ರಭಾವವಿರಬಹುದೆಂದು ಹೇಳಬಹುದು.

ನೊಳಂಬರು ಶೈಲಿಯ ಕಂಬಗಳೂ ಜಾಲಂಧ್ರಗಳಂತೆ ಚೋಳನ ಗಮನವನ್ನು ಆಕರ್ಷಿಸಿದುವು. ತಂಜಾವೂರಿಗೆ ಏಳು ಮೈಲಿ ದೂರದಲ್ಲಿರುವ ತಿರುವೈಯಾರ್‍ನ ಅಪ್ಪಾರ್ ಸ್ವಾಮಿ ದೇವಾಲಯದ ವರಾಂಡದ ನೊಳಂಬ ಶೈಲಿಯ ಕಂಬಗಳು ಕಲಾಪ್ರೇಮಿ ರಾಜೇಂದ್ರ ಚೋಳ ನೊಳಂಬವಾಡಿಯ ದಿಗ್ವಿಜಯದ ಸಂಕೇತವಾಗಿ ಕೊಂಡೊಯ್ದ ಸ್ಮಾರಕಗಳು. ಸಂಪೂರ್ಣವಾಗಿ ವಿಭಿನ್ನವಾದ ಪರಿಸರದಲ್ಲಿ ನಿಂತಿರುವ ಈ ಕಂಬಗಳು ನೊಳಂಬ ಶೈಲಿಯ ಕಂಬಗಳ ಶ್ರೇಷ್ಠ ಕೌಶಲಕ್ಕೆ ಮತ್ತು ಸೌಂದರ್ಯಕ್ಕೆ ಮೂಕಸಾಕ್ಷಿಗಳಾಗಿವೆ.

ನೊಳಂಬರ ವಾಸ್ತುಶಿಲ್ಪದಲ್ಲಿ ಅಂಥ ಗಮನಾರ್ಹವಾದ ಬದಲಾವಣೆಯಾಗಲಿ ಹೊಸತನವಾಗಲಿ ಕಾಣಬರುವುದಿಲ್ಲ. ಸಮಕಾಲೀನ ದೇವಾಲಯಗಳಂತೆಯೇ ಇವನ್ನೂ ನಿರ್ಮಿಸಲಾಗುತ್ತಿತ್ತು. ಇವರ ದೇವಾಲಯಗಳು ಈಗ ಆಂಧ್ರ ಪ್ರದೇಶದ ಹೇಮಾವತಿ, ಕರ್ನಾಟಕದ ಆವನಿ, ನಂದಿ ಮತು ತಮಿಳುನಾಡಿನ ಧರ್ಮಪುರಿಯಲ್ಲಿ ಕಾಣಬಹುದು. ಇವರ ಮುಖ್ಯ ದೇವಾಲಯಗಳು ಹೇಮಾವತಿಯ ದೊಡ್ಡೇಶ್ವರ, ಅಕ್ಕ-ತಂಗಿ, ವಿರೂಪಾಕ್ಷ, ಮಲ್ಲೇಶ್ವರ, ಅವನಿಯ ಲಕ್ಪ್ಷ್ಮಣೇಶ್ವರ, ಭರತೇಶ್ವರ, ನಂದಿಯ ಭೋಗನಂದಿ, ಅರುಣಾಚಲೇಶ್ವರ ಮತ್ತು ಧರ್ಮಪುರಿಯ ಕಾಮಾಕ್ಷಿಯಮ್ಮ ಮತ್ತು ಮಲ್ಲಿಕಾರ್ಜುನ.

ಇವರ ಎಲ್ಲ ದೇವಾಲಯಗಳ ತಳವಿನ್ಯಾಸ ಒಂದೇ ರೀತಿಯದು. ಇದರಲ್ಲಿ ಒಂದು ಚತುರಸ್ರ ಗರ್ಭಗೃಹ, ಅರ್ಧಮಂಟಪ ಮತ್ತು ನವರಂಗವೂ ದೇವಾಲಯದ ಮುಂಭಾಗದಲ್ಲಿ ಪ್ರತ್ಯೇಕವಾಗಿ ಒಂದು ನಂದಿಮಂಟಪವೂ ಇರುತ್ತವೆ.

ದೇವಾಲಯವನ್ನು ಸಾಕಷ್ಟು ಎತ್ತರವಾದ ಮತ್ತು ವಿವಿಧ ರೀತಿಯ ಅಚ್ಚು ಪಟ್ಟಿಗಳಿಂದ ಕೂಡಿದ ತಳಪಾದಿಯ ಮೇಲೆ ಕಟ್ಟಿರುತ್ತಾರೆ. ಗೋಡೆ ಸಾಧಾರಣವಾಗಿ ಸರಳವಾಗಿದ್ದು ಮಧ್ಯೆ ಅರೆಗಂಬಗಳಿಂದ ಕೂಡಿರುತ್ತದೆ. ಅಲ್ಲಲ್ಲಿ ಜಾಲಂಧ್ರಗಳು ಇರುತ್ತವೆ. ಗರ್ಭಗೃಹದ ಮೇಲೆ ದ್ರಾವಿಡ ಶೈಲಿಯ ವಿಮಾನವನ್ನು ಇವರು ಕಟ್ಟುತ್ತಿದ್ದರು. ಆದರೆ ನಂದಿಯ ದೇವಾಲಯಗಳನ್ನು ಬಿಟ್ಟರೆ ಉಳಿದ ಯಾವ ಕಡೆಯಲ್ಲೂ ಮೂಲವಿಮಾನ ಉಳಿದಿಲ್ಲ.

ದೇವಾಲಯದ ಒಳಭಾಗದಲ್ಲಿ ಮೇಲೆ ಹೇಳಿದ ರೀತಿಯ ಕಂಬಗಳನ್ನು ಕಾಣಬಹುದು. ಹೇಮಾವತಿಯ ದೊಡ್ಡೇಶ್ವರ ದೇವಾಲಯವೊಂದನ್ನು ಬಿಟ್ಟರೆ ಉಳಿದೆಲ್ಲ ದೇವಾಲಯಗಳಲ್ಲೂ ನವರಂಗದಲ್ಲಿ ನಾಲ್ಕು ಕಂಬಗಳಿವೆ. ಅರ್ಧಮಂಟಪದಲ್ಲೂ ಎರಡು ಅಥವಾ ನಾಲ್ಕು ಕಂಬಗಳನ್ನು ಕಾಣಬಹುದು. ಇವರ ಎಲ್ಲ ದೇವಾಲಯಗಳೂ ಶಿವನವಾದ್ದರಿಂದ ಗರ್ಭಗುಡಿಯಲ್ಲಿ ಲಿಂಗ ಮತ್ತು ದೇವಾಲಯದ ಮುಂದುಗಡೆ ನಂದಿಮಂಟಪವನ್ನು ಕಾಣಬಹುದು.

ನವರಂಗದ ದ್ವಾರ ಮತ್ತು ಗರ್ಭಗುಡಿಯ ದ್ವಾರಗಳಲ್ಲಿ ಹೆಚ್ಚಿಗೆ ಅಲಂಕರಣವಿದ್ದು, ಇವು ಬಾದಾಮಿ ಚಾಳುಕ್ಯರ ದ್ವಾರಗಳಿಗಿಂತ ಹೆಚ್ಚು ಆಕರ್ಷಕವಾಗಿರುತ್ತವೆ. ಸಾಮಾನ್ಯವಾಗಿ ಬಾಗಿಲು ಕಂಬಗಳ ಮೇಲೆ ಸುಂದರವಾದ ಬಳ್ಳಿಗಳ, ಹಾರಗಳ, ಅರೆಗಂಬಗಳ ಕೆತ್ತನೆಯಿರುತ್ತದೆ. ಕೆಳಭಾಗದಲ್ಲಿ ದ್ವಾರಪಾಲಕರು, ನಿಧಿಗಳು ಮತ್ತು ಗಂಗಾ ಯಮುನಾ ಶಿಲ್ಪಗಳು ಇರುತ್ತವೆ. ಮೇಲಿನ ತೊಲೆಯ ಮಧ್ಯಭಾಗದಲ್ಲಿ ಗಜಲಕ್ಷ್ಮಿ ಮತ್ತು ಮಂಗಳ ಚಿಹ್ನೆಗಳ ಚಿತ್ರಣವಿದ್ದು ಇದರ ಮೇಲ್ಬಾಗದಲ್ಲಿ ಸುಂದರವಾದ ಕಪೋತವಿರುತ್ತದೆ. ದ್ವಾರದ ಭಾಗವನ್ನು ಸಾಮಾನ್ಯವಾಗಿ ಕಪ್ಪು ಅಥವಾ ಹಸಿರು ಕಲ್ಲಿನಿಂದ ಮಾಡಿರುವುದರಿಂದ ಸುಂದರವಾದ ಮತ್ತು ನವಿರಾದ ಕೆತ್ತನೆಗಳನ್ನು ಇಲ್ಲಿ ಕಾಣಬಹುದು.

ನೊಳಂಬರ ದೇವಾಲಯದಲ್ಲಿ ಶಿಲ್ಪಾಲಂಕರಣ ಕಡಿಮೆಯಲ್ಲದಿದ್ದರೂ ಹೆಚ್ಚೆಂದು ಮಾತ್ರ ಹೇಳಲಾಗದು. ಹೊರಭಾಗದಲ್ಲಿ ಅಧಿಷ್ಠಾನದ ಅಚ್ಚುಪಟ್ಟಿಯ ಮೇಲೆ ಮತ್ತು ಗೋಡೆಯ ಮೇಲ್ಬಾಗದಲ್ಲಿರುವ ತೊಲೆಯ ಹೊರಭಾಗದಲ್ಲಿ ಅಷ್ಟೇನೂ ಆಕರ್ಷಕವಲ್ಲದ ಚಿತ್ರಪಟ್ಟಿಕೆಯಿರುತ್ತದೆ. ದೇವಾಲಯದ ಗೋಡೆ ಸರಳವಾಗಿದ್ದರೂ ಕಂಬಗಳು ಅತ್ಯಂತ ಸೂಕ್ಷ್ಮ ಹಾಗೂ ನವಿರಾದ ಕೆತ್ತನೆಯಿಂದ ಕೂಡಿರುತ್ತವೆ. ಸಾಮಾನ್ಯವಾಗಿ ಇವರ ಎಲ್ಲ ದೇವಾಲಯಗಳಲ್ಲೂ ನವರಂಗದ ಚಾವಣಿಯ ಮಧ್ಯಅಂಕಣದಲ್ಲಿ ಅಷ್ಟದಿಕ್ಪಾಲಕರು ಸುತ್ತು ವರೆದ ಶಿವಪಾರ್ವತಿ ಅಥವಾ ನಟರಾಜ ಶಿಲರುತ್ತದೆ. ನೊಳಂಬರ ದೇವಾಲಯಗಳಲ್ಲೆಲ್ಲ ಅತ್ಯಂತ ಸುಸ್ಥಿತಿಯಲ್ಲಿರುವುದೂ ದೊಡ್ಡದೂ ಆದ ದೇವಾಲಯವೆಂದರೆ ಹೇಮಾವತಿಯ ದೊಡ್ಡೇಶ್ವರ ದೇವಾಲಯ. ಸುಮಾರು 24ಮೀ. ಉದ್ದ, ಸುಮಾರು 13 ಮೀ. ಅಗಲವಾದ, ಗ್ರಾನೈಟ್ ಕಲ್ಲಿನ ಈ ದೇವಾಲಯದ ವಿಮಾನ ಬಿದ್ದುಹೋಗಿದೆ. ಈ ದೇವಾಲಯನೊಳಂಬರ ವಾಸ್ತುಶಿಲ್ಪ ಶೈಲಿಗೆ ಒಂದು ಉತ್ತಮ ಉದಾಹರಣೆ. ಗರ್ಭಗೃಹ, 4 ಕಂಬಗಳಿರುವ ಅರ್ಧಮಂಟಪ, ಮತ್ತು 16 ಕಂಬಗಳಿರುವ ನವರಂಗ, ಸೂಕ್ಷ್ಮವಾದ ಕೆತ್ತನೆಗಳುಳ್ಳ ದೇವಾಲಯದ ಕಂಬಗಳು ಮತ್ತು ಗಂಗಾ, ಮಿಥುನ, ಕಾರ್ತಿಕೇಯ, ಬ್ರಹ್ಮ, ವಿಷ್ಣು ಲತಾಪಟ್ಟಿಕೆಗಳಿರುವ ಜಾಲಂಧ್ರಗಳು-ಇವು ಈ ದೇವಾಲಯದ ವೈಶಿಷ್ಟ್ಯ. ಗರ್ಭಗೃಹದ ಮತ್ತು ನವರಂಗದ ದ್ವಾರಗಳು ಸೂಕ್ಷ್ಮ ಕೆತ್ತನೆಗಳಿಂದ ಕೂಡಿವೆ. ದೇವಾಲಯದ ಮುಂಭಾಗದಲ್ಲಿ ದುರುಸ್ತು ಮಾಡಲು ಒಂದು ನಂದಿಮಂಟಪವಿದ್ದು ಅದರೊಳಗೆ ನೊಳಂಬರ ಕಾಲದ ದೊಡ್ಡ ನಂದಿಯ ವಿಗ್ರಹವಿದೆ.

ಹೇಮಾವತಿಯ ಇತರ ದೇವಾಲಯಗಳೆಂದರೆ ವಿರೂಪಾಕ್ಷ ಮತ್ತು ಮಲ್ಲೇಶ್ವರ. ಇವುಗಳ ಗೋಡೆಗಳ ಹೊರಭಾಗ ಪೂರ್ಣವಾಗಿ ದುರಸ್ತಾಗಿದೆ. ಒಳಭಾಗದಷ್ಟೇ ಮುಖ್ಯವಾದ್ದು. ಈ ಎರಡೂ ದೇವಾಲಯಗಳು ಸುಂದರವಾದ ಕಂಬಗಳಿಗೆ ಮತ್ತು ಬಾಗಿಲುವಾಡಗಳಿಗೆ ಪ್ರಸಿದ್ಧವಾಗಿವೆ.

ಆವನಿಯ ಲಕ್ಷ್ಮಣೇಶ್ವರ ಮತ್ತು ಭರತೇಶ್ವರ ದೇವಾಲಯಗಳು ಪ್ರಾಯಶಃ 10ನೆಯ ಶತಮಾನದ ಅಂತ್ಯಭಾಗದಲ್ಲಿ ಎರಡನೆಯ ಪೊಳಲ್ಚೋರನ ಪತ್ನಿಯಾದ ದೀವಾಂಬಿಕೆಯಿಂದ ನಿರ್ಮಿತವಾದವು. ಇವುಗಳಲ್ಲಿ ಲಕ್ಷ್ಮಣೇಶ್ವರ ದೇವಾಲಯದಲ್ಲಿ ವಿವಿಧ ಅಚ್ಚುಪಟ್ಟಿಗಳಿಂದ ಕೂಡಿದ ತಳಪಾದಿಗೆ ಮತ್ತು ಅನೇಕ ವಾಸ್ತು ಮತ್ತು ಶಿಲ್ಪಗಳ ಅಲಂಕರಣಗಳಿಂದ ಕೂಡಿದ ಭಿತ್ತಿ ಗಮನಾರ್ಹವಾದವು. ಇಲ್ಲಿಯ ಗೋಡೆಯ ಗೂಡುಗಳಲ್ಲಿ ಸುಂದರವಾದ ಹಾಗೂ ಸಣ್ಣವಾದ ಮನುಷ್ಯರ ಮತ್ತು ದೇವತೆಗಳ ವಿಗ್ರಹಗಳನ್ನು ವಿವಿಧ ಭಂಗಿಗಳಲ್ಲಿ ಕೆತ್ತಲಾಗಿದೆ. ಜಾಲಂಧ್ರಗಳಲ್ಲಿ ನಟರಾಜ, ಮಹಿಷಾಸುರಮರ್ದಿನಿ, ವಿಷ್ಣು ಇತ್ಯಾದಿ ದೇವತೆಗಳ ವಿಗ್ರಹಗಳಿವೆ. ಭರತೇಶ್ವರ ದೇವಾಲಯ ಬಹಳಮಟ್ಟಿಗೆ ಪುನರ್‍ನಿರ್ಮಾಣವಾಗಿದೆ. ಆದರೂ ಸುಂದರವಾದ ಅಧಿಷ್ಠಾನ, ಅಚ್ಚುಪಟ್ಟಿಗಳು ಮತ್ತು ಇದರ ಮೇಲಿರುವ ದೀವಾಂಬಿಕೆಯ ಶಾಸನಗಳಿಂದಾಗಿ ಇದು ಮುಖ್ಯವಾದ್ದು.

ನಂದಿಯಲ್ಲಿರುವ ಭೋಗನಂದೀಶ್ವರ ಮತ್ತು ಅರುಣಾಚಲೇಶ್ವರ ದೇವಾಲಯಗಳು ಶೈಲಿಯ ದೃಷ್ಟಿಯಿಂದ ನೊಳಂಬರ ಶೈಲಿಯ ಎಲ್ಲ ಗುಣಗಳನ್ನೂ ಮೈಗೂಡಿಸಿಕೊಂಡಿವೆಯೆಂದು ಹೇಳಬಹುದು. ಆದರೂ ಇವುಗಳ ಕರ್ತೃ ಯಾರು ಎಂಬ ವಿಷಯದಲ್ಲಿ ಏಕಾಭಿಪ್ರಾಯವಿಲ್ಲ. ನೊಳಂಬಾಧಿರಾಜನ ಕಾಲದಲ್ಲಿ ಇಲ್ಲಿಯ ಒಂದು ದೇವಾಲಯಕ್ಕೆ ಗೋಪುರವನ್ನು ಕಟ್ಟಲಾಯಿತೆಂದು ಶಾಸನವಿದೆ. ಇಲ್ಲಿಯ ದೇವಾಲಯಗಳು ನೊಳಂಬರು ದೇವಾಲಯದ ಗುಣಗಳನ್ನು ಹೊಂದಿದ್ದರೂ ಇವುಗಳ ವಿಶೇಷವೆಂದರೆ ಮೇಲೆ ಹೇಳಿದಂತೆ ಇಲ್ಲಿ ಮಾತ್ರ ನೊಳಂಬರ ಕಾಲದ ಮೂಲ ವಿಮಾನವನ್ನು ಕಾಣಬಹುದು.

ನೊಳಂಬ ವಾಸ್ತುಶಿಲ್ಪದ ಮತ್ತೊಂದು ಕೇಂದ್ರವೆಂದರೆ ತಮಿಳುನಾಡಿನ ಧರ್ಮಪುರಿ. ಇಲ್ಲಿಯ ಕಾಮಾಕ್ಷಿಯಮ್ಮ ಮತ್ತು ಮಲ್ಲಿಕಾರ್ಜುನ ದೇವಾಲಯಗಳು 10ನೆಯ ಶತಮಾನದವೆಂದು ಹೇಳಬಹುದು. ಒಂದೇ ವಿಧವಾದ ತಳವಿನ್ಯಾಸ ಹೊಂದಿರುವ ಈ ದೇವಾಲಯಗಳನ್ನು ಒಂದರ ಪಕ್ಕದಲ್ಲೊಂದು ಕಟ್ಟಲಾಗಿದೆ. ಇಲ್ಲಿಯ ಸುಂದರವಾದ ವಿವಿಧರೀತಿಯ ಲತಾಪಟ್ಟಿಕೆ ಮತ್ತು ಶಿಲ್ಪಾಲಂಕರಣವುಳ್ಳ ಕಂಬಗಳು, ನವರಂಗದ ಚಾವಣಿಯ ಅಷ್ಟದಿಕ್ಪಾಲಕರೊಡಗೂಡಿದ ನಟರಾಜ ಮತ್ತು ಶಿವಪಾರ್ವತಿಯರ ಶಿಲ್ಪಗಳು, ಮತ್ತು ಕಾಮಾಕ್ಷಿಯನ್ನು ಗುಡಿಯ ಅಧಿಷ್ಠಾನದ ಅಚ್ಚುಪಟ್ಟಿಗಳು ಗಮನಾರ್ಹವಾದವು. ಕಾಮಾಕ್ಷಿಯಮ್ಮ ದೇವಾಲಯದಷ್ಟು ಸುಂದರವಾದ ಅಧಿಷ್ಠಾನವಿರುವ ದೇವಾಲಯ ನೊಳಂಬ ವಾಸ್ತುಶಿಲ್ಪದಲ್ಲೇ ದುರ್ಲಭ. ವಿವಿಧ ರೀತಿಯ ಅಲಂಕರಣಗಳುಳ್ಳ ಅಚ್ಚುಪಟ್ಟಿಗಳಿಂದ ಕೂಡಿದ ಅಧಿಷ್ಠಾನದ ತಳಭಾಗದಲ್ಲಿ ಸ್ವಲ್ಪ ಹಿಂದೆ ಸರಿದಂತೆ ರಾಮಾಯಣದ ಉಬ್ಬುಸಾಲು ಶಿಲ್ಪವಿದೆ. ಇದರ ಮೇಲಣ ಚಪ್ಪಡಿಯನ್ನು ಸುತ್ತಲೂ ಅಲ್ಲಲ್ಲಿ ಆನೆಗಳು ಹೊತ್ತು ನಿಂತಿವೆ. ಇದರ ಮೇಲೆ ಅನುಕ್ರಮವಾಗಿ ಕಮಲದ ದಳ ಬಿಡಿಸಿದ ಅಚ್ಚುಪಟ್ಟಿ, ಅರೆಗೊಳವಿ ಅಥವಾ ಬಳ್ಳಿಯ ಸುರುಳಿಯ ಚಿತ್ರವಿರುವ ಕುಮುದದ ಅಚ್ಚುಪಟ್ಟಿ, ಇನ್ನೂ ಮೇಲೆ ವ್ಯಾಳ ಅಥವಾ ಇತರ ಕಾಲ್ಪನಿಕ ಜೀವಿಗಳ ಸಾಲುಶಿಲ್ಪ ಅದರ ಮೇಲೆ ಸ್ವಲ್ಪ ಭಾಗ ಕಪೋತ ಮತ್ತು ಸ್ವಲ್ಪಭಾಗ ಚೌಕಟ್ಟಾದ ಅಚ್ಚುಪಟ್ಟಿ ಇವೆ. ಇವುಗಳಿಂದ ಕೂಡಿದ ಈ ಅಧಿಷ್ಠಾನ ಚಾಳುಕ್ಯ-ಪಲ್ಲವ ಶೈಲಿಯ ಉಚಿತ ಸಮನ್ವಯದ ಪ್ರತೀಕವಾಗಿದೆ. ದೇವಾಲಯದ ಹೊರಗೋಡೆ ಸಂಪೂರ್ಣವಾಗಿ ಗಾರೆಯಿಂದ ಮುಚ್ಚಿಹೋಗಿರುವುದರಿಂದ ಇದರ ಮೂಲ ಸ್ವರೂಪವನ್ನು ಅರಿಯುವುದು ಅಸಾಧ್ಯ,

ಶಾಸನಗಳು: ನೊಳಂಬರ ಶಾಸನಗಳು ಕರ್ನಾಟಕದ ಬಳ್ಳಾರಿ, ಚಿತ್ರದುರ್ಗ, ಕೋಲಾರ, ತುಮಕೂರು, ಬೆಂಗಳೂರು ಜಿಲ್ಲೆಗಳಲ್ಲೂ ಆಂಧ್ರಪ್ರದೇಶದ ಅನಂತಪುರ, ಚಿತ್ತೂರು ಜಿಲ್ಲೆಗಳಲ್ಲೂ ತಮಿಳು ನಾಡಿನ ಧರ್ಮಪುರಿ ಜಿಲ್ಲೆಯಲ್ಲೂ ದೊರೆತಿವೆ. ಇವರ ಶಾಸನಗಳು ಸು. 800-1100ದ ಕಾಲಕ್ಕೆ ಸೇರಿದವು. ಇವರ ಶಾಸನಗಳ ಭಾಷೆ ಮುಖ್ಯವಾಗಿ ಸಮಕಾಲೀನ ಕನ್ನಡ. ಸಂಸ್ಕøತ ಕನ್ನಡ ಬೆರೆಕೆ ಇರುವ ಶಾಸನಗಳೂ ವಿರಳವಲ್ಲ. ಇವುಗಳಲ್ಲಿ ಗದ್ಯ, ಪದ್ಯ, ಮತ್ತು ಇವೆರಡರ ಮಿಶ್ರಣ ಇರುತ್ತವೆ. ಎಲ್ಲ ಶಾಸನಗಳೂ ಸಮಕಾಲೀನ ಕನ್ನಡ-ತೆಲುಗು ಲಿಪಿಯಲ್ಲಿ ಬರೆಯಲ್ಪಟ್ಟಿವೆ. ತಾವು ಪಲ್ಲವ ವಂಶಜರೆಂದು ನೊಳಂಬರು ಹೇಳಿಕೊಂಡರೂ ಇವರ ಶಾಸನವಾವುದೂ ತಮಿಳಿನಲ್ಲಿರದಿರುವುದು ಗಮನಿಸಬೇಕಾದ ಸಂಗತಿ. ಇವರ ಶಾಸನಗಳನ್ನು ಕಲ್ಲಿನ ಚಪ್ಪಡಿಗಳ ಮೇಲೆ, ಕಂಬಗಳ ಮೇಲೆ ಮತ್ತು ದೇವಾಲಯದ ತಳಪಾದಿಯೇ ಮುಂತಾದ ಸ್ಥಳಗಳಲ್ಲಿ ಕೊರೆಯಲಾಗಿದೆ. ಕೂಟಶಾಸನವೆಂದು ಪರಿಗಣಿಸಲಾದ ತಾಮ್ರದ ಶಾಸನವೊಂದನ್ನು ಬಿಟ್ಟರೆ ಇವರ ಯಾವ ತಾಮ್ರ ಶಾಸನವೂ ಇದುವರೆಗೆ ದೊರೆತಿಲ್ಲ.

ನೊಳಂಬರ ಎಲ್ಲ ಶಾಸನಗಳನ್ನೂ ಕಲೆಹಾಕಿದರೆ ಸುಮಾರು 200 ಆಗಬಹುದು, ಇವುಗಳಲ್ಲಿ ಬಹುಸಂಖ್ಯೆಯವು ವೀರಗಲ್ಲುಗಳು, ಉಳಿದವು ಸಣ್ಣ ಸಣ್ಣ ದಾನದತ್ತಿಗಳನ್ನೋ ಕೆರೆ ದೇವಾಲಯ ಇತ್ಯಾದಿಗಳನ್ನು ಕಟ್ಟಿಸಿದ ವಿವರಗಳನ್ನೋ ನೀಡುತ್ತವೆ. ಚಾರಿತ್ರಿಕ ವಿವರಗಳನ್ನು ಹೆಚ್ಚಾಗಿ ಕೊಡುವ ಶಾಸನಗಳು ಬೆರಳೆವಣಿಕೆಗೆ ಸಿಗುವಷ್ಟು ಮಾತ್ರ. ಇವರ ಶಾಸನಗಳಲ್ಲಿ ಕಾಲವನ್ನು ತಿಳಿಸಲು ಶಕವರ್ಷ ಮತ್ತು ಆಳ್ವಿಕೆಯ ವರ್ಷ ಎರಡನ್ನೂ ಉಪಯೋಗಿಸಲಾಗಿದೆ.

ನೊಳಂಬರ ಶಾಸನಗಳಲ್ಲೆಲ್ಲ ಅತ್ಯಂತ ಮುಖ್ಯವಾದ್ದೆಂದರೆ ಹೇಮಾವತಿಯ ಸ್ತಂಭಶಾಸನ. ಇದು ನೊಳಂಬರ ಹುಟ್ಟು ಮತ್ತು ಅವರ ವಂಶವೃಕ್ಷದ ಮೊದಲರ್ಧ ಭಾಗವನ್ನು ನಿರೂಪಿಸುತ್ತದೆ. ಇವರ ವಂಶವೃಕ್ಷವನ್ನು ತಿಳಿಯಲು ಅನುಕೂಲವಾದ ಇತರ ಮುಖ್ಯ ಶಾಸನಗಳೆಂದರೆ ಕಂಬದೂರು, ಕರ್ಷನಪಲ್ಲಿ, ನೆಲಪಲ್ಲಿ, ಆವನಿ, ಬರಗೂರು ಮತ್ತು ಧರ್ಮಪುರಿಗಳಲ್ಲಿರುವ ಶಾಸನಗಳು. ನೊಳಂಬರ ಶಾಸನಗಳು ಅವರ ಕಾಲದ ರಾಜಕೀಯ, ಚಾರಿತ್ರಿಕ ಸಾಮಾಜಿಕ ಅರಿವು ಮೂಡಿಸುವುದಕ್ಕೆ ಸಹಕಾರಿಯಾಗಿರುವುವಲ್ಲದೆ ಇವರ ವೀರಗಲ್ಲುಗಳು ನೊಳಂಬರ ಶಿಲ್ಪಕಲಾಚಾತುರ್ಯಕ್ಕೆ ಉತ್ತಮ ನಿದರ್ಶನಗಳಾಗಿಯೂ ಇವೆ. ಇದಕ್ಕೆ ಉದಾಹರಣೆಗಳು ಬೆಂಗಳೂರು ವಸ್ತುಸಂಗ್ರಹಾಲಯದಲ್ಲಿರುವ ಬೇಗೂರಿನ ವೀರಗಲ್ಲು ಮತ್ತು ಹೇಮಾವತಿಯ ವೀರಗಲ್ಲು. ಮೊದಲನೆಯ ತುಂಬೇಪಾಡಿಯಲ್ಲಿ ಅಯ್ಯಪ ದೇವನಿಗೂ ಪೂರ್ವಚಾಳುಕ್ಯವೀರ ಮಹೇಂದ್ರನಿಗೂ ನಡೆದ ಘೋರ ಕದನದ ಇಡೀ ದೃಶ್ಯವನ್ನೇ ಚಿತ್ರಿಸುತ್ತದೆ. ಗಜ, ಅಶ್ವ, ಪದಾತಿ ದಳಗಳ ಹಣಾಹಣಿ ಯುದ್ದದ ದೃಶ್ಯ, ಪೆಟ್ಟುತಿಂದು ಬಿದ್ದಿರುವ ಸೈನಿಕರು, ವಿವಿಧ ಆಯುಧಗಳು, ಇತ್ಯಾದಿ ಸಕಲ ಸಮರ ವಿವರಗಳನ್ನು ಕೊಡುವ ಈ ವೀರಗಲ್ಲು ಇಡೀ ಯುದ್ಧವೇ ಮತ್ತೊಮ್ಮೆ ಕಣ್ಣುಂದೆ ನಡೆಯುತ್ತಿದೆಯೆಂಬ ಭಾವನೆಯನ್ನು ತರುತ್ತದೆ. ಈಗ ಮದ್ರಾಸ್ ವಸ್ತು ಸಂಗ್ರಹಾಲಯದಲ್ಲಿರುವ ಹೇಮಾವತಿಯ ವೀರಗಲ್ಲು ಗಜಯುದ್ಧಕ್ಕೆ ಸಾಕ್ಷಿ. ಎದುರು ಬದುರಾಗಿ ನುಗ್ಗುತ್ತಿರುವ ಆನೆಗಳು. ಅವುಗಳ ಮೇಲೆ ಅಂಬಾರಿಗಳಲ್ಲಿ ಕುಳಿತಿರುವ ವೀರರು, ಆನೆಗಳ ಬಗೆಬಗೆಯ ವಸ್ತ್ರಾಲಂಕರಣಗಳು ಎಲ್ಲವನ್ನೂ ಬಹಳ ನವಿರಾಗಿ ಬಿಡಿಸಲಾಗಿದೆ. ಕೆಳಭಾಗದಲ್ಲಿ ಬಾಣಗಳು ನಾಟಿಕೊಂಡು ಕೆಳಗೆ ಬಿದ್ದಿರುವ ವೀರರ ದೇಹಗಳು ಚಿತ್ರಿತವಾಗಿವೆ. ಕೇವಲ ಒಂದು ಸಣ್ಣ ಚೌಕಟ್ಟಿನಲ್ಲಿ ಇಡೀ ಘೋರ ಯುದ್ಧದ ಚಿತ್ರವನ್ನು ಶಿಲ್ಪ ಬಿಜ್ಜಯ್ಯ ನೀಡಿದ್ದಾನೆ.

ಉಲ್ಲೇಖ

[ಬದಲಾಯಿಸಿ]
  1. R, Narasimhacharya (1942). History of Kannada Language. Asian Educational Services. p. 49. ISBN 9788120605596.
  2. M. S., Nagaraja Rao (1983). The Chālukyas of Kalyāṇ̄a: seminar papers. Mythic Society. pp. 39–41.



ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ನೊಳಂಬ&oldid=1262017" ಇಂದ ಪಡೆಯಲ್ಪಟ್ಟಿದೆ