ಚಿತ್ತೂರು
ಚಿತ್ತೂರು ಆಂಧ್ರ ಪ್ರದೇಶದ ಒಂದು ಜಿಲ್ಲೆ ಮತ್ತು ಆ ಜಿಲ್ಲೆಯ ಮುಖ್ಯ ಪಟ್ಟಣ. ಚಿತ್ತೂರು ಜಿಲ್ಲೆಯನ್ನು ಉತ್ತರ ಪೂರ್ವಗಳಲ್ಲಿ ಅನಂತಪುರ, ಕಡಪಾ ಮತ್ತು ನೆಲ್ಲೂರು ಜಿಲ್ಲೆಗಳೂ ದಕ್ಷಿಣ ನೈಋತ್ಯಗಳಲ್ಲಿ ತಮಿಳುನಾಡಿನ ಉತ್ತರ ಆರ್ಕಾಟ್ ಮತ್ತು ಸೇಲಂ ಜಿಲ್ಲೆಗಳೂ ಪಶ್ಚಿಮದಲ್ಲಿ ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯೂ ಬಳಸಿವೆ. ಜಿಲ್ಲೆಯ ವಿಸ್ತೀರ್ಣ 5,855 ಚ.ಮೈ. ಜನಸಂಖ್ಯೆ 22.85.536 (1971). ಜಿಲ್ಲೆಯ ಬಹುಭಾಗ ಬೆಟ್ಟಮಯ. ಪೂರ್ವ ಘಟ್ಟದ ಕವಲುಗಳಿಂದ, ಕಿರಿದಾದ ಕಣಿವೆಗಳಿಂದ ಅಲ್ಲಲ್ಲಿ ಅರಣ್ಯಗಳಿಂದ ಕೂಡಿದೆ. ಕಣಿವೆಗಳು ಫಲವತ್ತಾಗಿದೆ. ಘಟ್ಟಪ್ರದೇಶದಲ್ಲಿ ಕಬ್ಬಿಣ ಮತ್ತು ತಾಮ್ರ ನಿಕ್ಷೇಪಗಳಿವೆ. ಜಿಲ್ಲೆಯ ಮುಖ್ಯ ಬೆಳೆಗಳು ಬತ್ತ. ರಾಗಿ ಮತ್ತು ಎಣ್ಣೆಕಾಳುಗಳು, ಈ ಜಿಲ್ಲೆಯ ಚಂದ್ರಗಿರಿ ತಾಲ್ಲೂಕಿನ ತಿರುಮಲೈ ಬೆಟ್ಟದ ಮೇಲೆ ಶ್ರೀ ವೆಂಕಟೇಶ್ವರ ದೇವಾಲಯಕ್ಕೆ ದೇಶದ ಎಲ್ಲೆಡೆಗಳಿಂದ ಲಕ್ಷಾಂತರ ಯಾತ್ರಿಕರು ಬರುತ್ತಾರೆ. ಕಾಳಹಸ್ತಿಯಲ್ಲಿರುವ ಶಿವದೇವಾಲಯ ಪ್ರಸಿದ್ಧವಾದ್ದು.
ಜಿಲ್ಲೆಯ ಮುಖ್ಯಕೇಂದ್ರ ಚಿತ್ತೂರು. ಪ್ರಮುಖ ವಾಣಿಜ್ಯಕೇಂದ್ರ. ಮದ್ರಾಸಿಗೆ 128 ಕಿ.ಮೀ. ಪಶ್ಚಿಮದಲ್ಲಿದೆ. ಜನಸಂಖ್ಯೆ 63,035 (1971). ಇಲ್ಲಿ ಪೌರಸಭೆಯಿದೆ; ತಿರುಪತಿ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯಕ್ಕೆ ಸೇರಿದ ಕಾಲೇಜು. ಶಿಕ್ಷಕರ ಕಾಲೇಜು ಮತ್ತು ಶಾಲೆಗಳಿವೆ. ಕಾಕಂಬಿ, ಮಾವಿನಹಣ್ಣು, ನೆಲಗಡಲೆಗಳಿಗೆ ಚಿತ್ತೂರು ಪ್ರಮುಖ ಮಾರುಕಟ್ಟೆ. ಬಿಸ್ಕತ್, ಮುರಬ್ಬ, ಮಿಠಾಯಿ, ಉಪ್ಪಿನ ಕಾಯಿಗಳ ತಯಾರಿಕೆಗೆ ಪ್ರಸಿದ್ಧಿ ಪಡೆದಿದೆ. ಭಾರತದ ಪ್ರಮುಖ ದೈನಿಕಗಳಲ್ಲೊಂದಾದ ಇಂಡಿಯನ್ ಎಕ್ಸ್‍ಪ್ರೆಸ್ ಚಿತ್ತೂರಿನಿಂದಲೂ ಪ್ರಕಟವಾಗುತ್ತದೆ.
ಚಿತ್ತೂರಿನ ಬಳಿ ಬಿಳಿ ಮತ್ತು ಕೆಂಪು ಚಂದನದ ಮರಗಳುಂಟು. ಅವುಗಳಿಂದ ಸುಂದರವಾದ ಗೊಂಬೆಗಳು ಮುಂತಾದ ಸರಕುಗಳನ್ನು ತಯಾರಿಸಲಾಗುತ್ತದೆ. ಇಲ್ಲಿ ಷರಾಬು ತಯಾರಿಸುವ ಹಾಗೂ ಚರ್ಮ ಹದ ಮಾಡುವ ಕಾರ್ಖಾನೆಗಳುಂಟು. ಗ್ರಾನೈಟ್ ಶಿಲೆಯ ವ್ಯಾಪಾರವೂ ನಡೆಯುತ್ತದೆ.
ಚಿತ್ತೂರಿಗೆ ಮದ್ರಾಸು ಹಾಗೂ ಬೆಂಗಳೂರಿನಿಂದ ನೇರ ಬಸ್ ಹಾಗೂ ರೈಲ್ವೆ ಸಂಪರ್ಕವುಂಟು. 1782ರಲ್ಲಿ ಹೈದರ್ ಅಲಿ ಮೃತನಾದ್ದು ಚಿತ್ತೂರಿನಲ್ಲಿ.
ಹೊರಗಿನ ಕೊಂಡಿಗಳು
[ಬದಲಾಯಿಸಿ]- Chittoor official website
- Chennai to Kalahastri Tour Package Archived 6 June 2019 ವೇಬ್ಯಾಕ್ ಮೆಷಿನ್ ನಲ್ಲಿ.