ವಿಷಯಕ್ಕೆ ಹೋಗು

ಯಶವಂತ ಚಿತ್ತಾಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಯಶವಂತ ಚಿತ್ತಾಲ
ಯಶವಂತ ಚಿತ್ತಾಲ
ಜನನಆಗಸ್ಟ್ ೩, ೧೯೨೮
ಹನೇಹಳ್ಳಿ, ಉತ್ತರ ಕನ್ನಡ ಜಿಲ್ಲೆ, ಕರ್ನಾಟಕ
ಮರಣಮಾರ್ಚ್ ೨೨, ೨೦೧೪
ಮುಂಬಯಿ, ಮಹಾರಾಷ್ಟ್ರ
ವೃತ್ತಿರಸಾಯನ ತಂತ್ರಜ್ಞ, ಲೇಖಕ
ರಾಷ್ಟ್ರೀಯತೆಭಾರತೀಯ
ಕಾಲ(ಮೊದಲ ಪ್ರಕಟಣೆಯಿಂದ ಕೊನೆಯ ಪ್ರಕಟನೆಯ ಕಾಲ)
ಪ್ರಕಾರ/ಶೈಲಿಕಥೆ, ಕಾದಂಬರಿ

ಪ್ರಭಾವಗಳು
  • ಶಾಂತಿನಾಥ ದೇಸಾಯಿ, ಗೌರೀಶ ಕಾಯ್ಕಿಣಿ ಬಹಳ ದಟ್ಟವಾದ ಪ್ರಭಾವ ಬೀರಿದ್ದರು.

ಯಶವಂತ ಚಿತ್ತಾಲ - []ಕನ್ನಡದ ಖ್ಯಾತ ಕತೆಗಾರ ಮತ್ತು ಕಾದಂಬರಿಕಾರ. ಅರವತ್ತಾರು ಕಥೆಗಳನ್ನು ಬರೆದಿರುವ ಚಿತ್ತಾಲರು ಉತ್ತರ ಕನ್ನಡ ಜಿಲ್ಲೆಯ ಚಿಕ್ಕ ಗ್ರಾಮವಾದ ಹನೇಹಳ್ಳಿಯವರು. ಪಾಲಿಮರ್ ಟೆಕ್ನೊಲಜಿ ಓದಿ ಮುಂಬಯಿಯಲ್ಲೇ ನೆಲೆಸಿದರು.

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ 'ಹನೇಹಳ್ಳಿ'ಯಲ್ಲಿ ಜನನ. ಈ ಪುಟ್ಟ ಹಳ್ಳಿ ಚಿತ್ತಾಲರ ಅಂತರಂಗದ ಒಂದು ಅವಿಭಾಜ್ಯ ಅಂಗವಾಗಿ ಇದೆ. ಅದು ಅವರ ಜೀವನ ಮೌಲ್ಯಗಳನ್ನು ಸಾಣೆಹಿಡಿಯುತ್ತಾ ಹೋಗುತ್ತದೆ. ಚಿತ್ತಾಲರ ತಂದೆ ವಿಠೋಬ.[] ತಾಯಿ, ರುಕ್ಮಿಣಿ, ದಂಪತಿಗಳ ೭ ಮಕ್ಕಳಲ್ಲಿ ಐದನೆಯವರು ಯಶವಂತರು. ಮನೆ ಭಾಷೆ ಕೊಂಕಣೀ-ಮರಾಠಿ. ಪ್ರಾರಂಭಿಕ ಶಿಕ್ಷಣ, ಹನೇಹಳ್ಳಿ, ಕುಮಟ, ಧಾರವಾಡ, ಮುಂಬಯಿ ಮುಂತಾದ ಕಡೆಗಳಲ್ಲಿ. ಉಚ್ಚ ಶಿಕ್ಷಣ ಅಮೆರಿಕದ ನ್ಯೂಜರ್ಸಿಯಲ್ಲಿ ಪಡೆದಿದ್ದರು. ಕವಿ ಗಂಗಾಧರ ಚಿತ್ತಾಲರು ಇವರ ಅಣ್ಣ. ಶಾಂತಿನಾಥ ದೇಸಾಯಿಯವರು ಮತ್ತು ಗೌರೀಶ ಕಾಯ್ಕಿಣಿಯವರು ಚಿತ್ತಾಲರ ಮೇಲೆ ದಟ್ಟವಾದ ಪ್ರಭಾವ ಬೀರಿದ್ದರು. ಚಿತ್ರಕಲೆಯನ್ನು ಕಲಿಯುವ ಗೀಳು, ಬಾಲ್ಯದಲ್ಲೇ ಅಂತರಾಳದಲ್ಲಿ ಹುದುಗಿತ್ತು.

ಆಸಕ್ತಿಗಳು

[ಬದಲಾಯಿಸಿ]

ಅವರು ಮುಂಬಯಿಗೆ ಬಂದು, "ಕಲಾನಿಕೇತನ" ಎಂಬ ಶಾಲೆಗೆ ಸಂಜೆ-ತರಗತಿಗೆ ಸೇರಿದರು. ಎಮ್. ಎನ್. ರಾಯ್ ಅವರ ವಿಚಾರಧಾರೆಗಳಿಗೆ ಸ್ಪಂದಿಸಿ, ರ‍್ಯಾಡಿಕಲ್ ಡೆಮೊಕ್ರಾಟಿಕ್ ಪಕ್ಷದ ಸದಸ್ಯರಾದರು. ನವಮಾನವತಾವಾದಿ ಮಾರ್ಕ್ಸ್, ಎರಿಕ್ ಪ್ರಾಂ, ಎಡಿಂಗ್ ಟನ್, ಹಕ್ಸ್ಲಿ, ಫ್ರಾಯ್ಡ್, ಎಡ್ಲರ್, ಮುಂತಾದ ಹಲವು ಧೀಮಂತರ ವಿಚಾರಧಾರೆಗಳಿಗೆ ತಮ್ಮ ಮನಸ್ಸನ್ನು ತೆರೆದಿಟ್ಟರು. ಪ್ಲಾಸ್ಟಿಕ್-ತಂತ್ರಜ್ಞಾನದಲ್ಲಿ, ಶಿಕ್ಷಣ- ಪ್ರಶಿಕ್ಷಣಗಳನ್ನು ಪಡೆದು, "ಬೇಕ್ಲೈಟ್ ಹೈಲಂ" ಎಂಬ ಸಂಸ್ಥೆಯಲ್ಲಿ ನೌಕರಿಗೆ ಸೇರಿಕೊಂಡರು. ೩೦ ವರ್ಷಕ್ಕೂ ಮೀರಿ ಸಲ್ಲಿಸಿದ ಸೇವೆಯಿಂದ, ಆಧುನಿಕ ಜಗತ್ತಿನ ಸ್ವರೂಪವನ್ನೆ ನಿಯಂತ್ರಿಸುವ, ಬಂಡವಾಳಶಾಹೀ, ಕೈಗಾರಿಕಾ ಜಗತ್ತಿನ ನಿಕಟ-ಪರಿಚಯವನ್ನು ಮಾಡಿಕೊಂಡರು. ಉದ್ಯೋಗದ ಪರಿಸರದಲ್ಲೂ, ವೈಯಕ್ತಿಕ ಜೀವನದಲ್ಲೂ, ಆದ ದುರಂತಗಳೂ, ಬಿಕ್ಕಟ್ಟುಗಳೂ, ಅವರ ಬರವಣಿಗೆಯ ಗ್ರಾಸಗಳಾದವು. ಅವೆಲ್ಲವನ್ನೂ ಮೆಟ್ಟಿ, ತಮ್ಮ ಜೀವನಶ್ರದ್ಧೆಯ ಸೋಪಾನದ ಮೇಲೆ ನಿಂತು, ಆತ್ಮವಿಶ್ವಾಸದಿಂದ ಮುನ್ನುಗ್ಗಿದರು. ತಮ್ಮ ಸೃಜನಶೀಲ ವ್ಯಕ್ತಿತ್ವದಿಂದ, ತಮ್ಮ ಕಥೆ-ಕಾದಂಬರಿಗಳಲ್ಲಿ ಅದರ ವಿಶಿಷ್ಟರೂಪಗಳ ಅನನ್ಯ ಬರವಣಿಗೆಯನ್ನು ನೀಡಿದ್ದಾರೆ.[]

ಸಾಹಿತ್ಯ ಕೃಷಿ

[ಬದಲಾಯಿಸಿ]

'ಬೊಮ್ಮಿಯ ಹುಲ್ಲು ಹೊರೆ' ೧೯೪೯ರಲ್ಲಿ ಬರೆದ ಅವರ ಮೊತ್ತ ಮೊದಲ ಕಥೆ. ೧೯೫೭ರಲ್ಲಿ ಮೈತಳೆದ, "ಸಂದರ್ಶನ" ಕಥಾಸಂಕಲನದಿಂದ ಹಿಡಿದು, ೧೯೯೦ರಲ್ಲಿ ಹೊರಬಂದ "ಪುರುಷೋತ್ತಮ"ದವರೆಗೆ, ಚಿತ್ತಾಲರು ಬರೆದ, ವಿವಿಧ ಕೃತಿಗಳನ್ನು ಪರಿಶೀಲಿಸಿದರೆ, ಆ ಬರವಣಿಗೆಯ ಹಿಂದಿರುವ ತುಡಿತಗಳನ್ನು ನಾವು ಗುರುತಿಸಬಹುದು. ಅವರ ಜನ್ಮಭೂಮಿ, 'ಹನೇಹಳ್ಳಿ,' ಅವರ ಹಲವಾರು ಬರಹಗಳ ಕೇಂದ್ರಬಿಂದು. ಬಾಲ್ಯದ ಭೂತಕಾಲವನ್ನು, ವರ್ತಮಾನದ ಸಂಕೀರ್ಣ ಬದುಕಿನೊಂದಿಗೆ ಹೋಲಿಸಿ, ಅದನ್ನು ಇಡೀ ಮನುಕುಲದಲ್ಲಿ ಸಂಭವಿಸಿರುವ ಅಸ್ತಿತ್ವದ ಬಿಕ್ಕಟ್ಟಿಗೆ ಪ್ರತಿಮೆಯಾಗಿ, ಪರಿವರ್ತಿಸುತ್ತಾರೆ ; ಅವರ ಪ್ರಶಸ್ತಿ ವಿಜೇತ ಕಾದಂಬರಿ, "ಪುರುಷೋತ್ತಮ" ದಲ್ಲಿ, ನಾಯಕನ ಸಿದ್ಧಿಯ ಚರಮ-ಕ್ಷಣಗಳೆಂದರೆ, ಅವನ ಹನೇಹಳ್ಳಿಗೆ ಮತ್ತೆ ಜೀವತುಂಬಿ-ತುಳುಕಾಡುವುದೇ ಆಗಿದೆ.

ಅವರು ಏಕೆ ಬರೆಯುತ್ತಾರೆ ಎನ್ನುವ ಬಗ್ಗೆ ಕೊಟ್ಟಿರುವ ನಿರೂಪಣೆ ಅನನ್ಯವಾಗಿದೆ. " ಒಟ್ಟಿನಲ್ಲಿ ನಾನು ಬರೆಯುತ್ತಿದ್ದದ್ದು, ನಾನು ನಾನೇ ಆಗಲು. ನಾನು ನಾನಾಗಿಯೇ ಉಳಿದು, ಉಳಿದವರಿಂದ ಬರೆಯಲು ಪ್ರೀತಿಸುವುದನ್ನು ಕಲಿಯಲು, ಪ್ರೀತಿಸುವುದರ ಮೂಲಕ, ಜೀವಂತ ಸಂಬಂಧಗಳನ್ನು ಹುಟ್ಟಿಸಲು. ಉಳಿದವರನ್ನು ತಿದ್ದುವುದಕ್ಕಲ್ಲ- ಆ ಯೋಗ್ಯತೆಯಾಗಲೀ ಅಧಿಕಾರವಾಗಲೀ ನನಗಿಲ್ಲ."[]

ಕೃತಿಗಳು

[ಬದಲಾಯಿಸಿ]

ಕಥಾಸಂಕಲನಗಳು

[ಬದಲಾಯಿಸಿ]
  • ಸಂದರ್ಶನ (೧೯೫೬)
  • ಆಬೋಲಿನ (೧೯೬೦)
  • ಆಟ (೧೯೬೯)
  • ಬೇನ್ಯಾ (೧೯೮೩)
  • ಆಯ್ದ ಕತೆಗಳು (೧೯೭೬)
  • ಕಥೆಯಾದಳು ಹುಡುಗಿ (೧೯೮೦)
  • ಚಿತ್ತಾಲರ ಕತೆಗಳು (೧೯೮೩)
  • ಕುಮಟೆಗೆ ಬಂದಾ ಕಿಂದರಿಜೋಗಿ (೧೯೯೭)
  • ಓಡಿ ಹೇೂದಾ ಮುಟ್ಟಿ ಬಂದಾ (೨೦೦೧)
  • ಸಿದ್ಧಾರ್ಥ (೧೯೮೮)
  • ಐವತ್ತೊಂದು ಕತೆಗಳು (೨೦೦೦)
  • ಪುಟ್ಟನ ಹೆಜ್ಜೆ ಕಾಣೋದಿಲ್ಲಾ (೨೦೦೬)
  • ಕೇೂಳಿ ಕೂಗುವ ಮುನ್ನ (೨೦೧೨)
  • ಸಮಗ್ರ ಕತೆಗಳು ( ಸಂಪುಟ ೧ ಮತ್ತು ೨ ) (೨೦೦೯)

ಕಾದಂಬರಿಗಳು

[ಬದಲಾಯಿಸಿ]
  • ಮೂರು ದಾರಿಗಳು (೧೯೬೪)
  • ಶಿಕಾರಿ (೧೯೭೯)
  • ಛೇದ (೧೯೮೫)
  • ಪುರುಷೋತ್ತಮ (೧೯೯೦)
  • ಕೇಂದ್ರ ವೃತ್ತಾಂತ (೧೯೯೭)
  • ದಿಗಂಬರ (೨೦೨೨)

ಕವನ ಸಂಕಲನ

[ಬದಲಾಯಿಸಿ]
  • ದಣಪೆಯಾಚೆಯ ಓಣಿ

ಪ್ರಬಂಧ ಸಂಗ್ರಹಗಳು

[ಬದಲಾಯಿಸಿ]
  • ಸಾಹಿತ್ಯ, ಸೃಜನಶೀಲತೆ ಮತ್ತು ನಾನು (೧೯೮೧)
  • ಸಾಹಿತ್ಯದ ಸಪ್ತಧಾತುಗಳು (೨೦೦೧)
  • ಅಂತಃಕರಣ (೨೦೦೮)

ಪ್ರಶಸ್ತಿಗಳು

[ಬದಲಾಯಿಸಿ]

ಶ್ರೀ ಯಶವಂತ ಚಿತ್ತಾಲರು ೨೦೧೪ ರ ಮಾರ್ಚ್ ೨೨, ಶನಿವಾರ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು[]. ಅವರ ಅಂತ್ಯ ಸಂಸ್ಕಾರವು ೨೩, ಭಾನುವಾರದಂದು, ಮುಂಬೈನ ಶಿವಾಜಿ ಪಾರ್ಕ್ ನ, ವಿದ್ಯುತ್ ಚಿತಾಗಾರದಲ್ಲಿ ಅವರ ಹಿರಿಯ ಮಗ 'ರವೀಂದ್ರ'ನಿಂದ ನೆರೆವೇರಿಸಲ್ಪಟ್ಟಿತು.[]

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2012-11-04. Retrieved 2014-03-23.
  2. http://www.thehindu.com/todays-paper/tp-national/tp-karnataka/yashwant-chittal-dead/article5821000.ece
  3. http://www.loc.gov/acq/ovop/delhi/salrp/chittal.html
  4. http://timesofindia.indiatimes.com/topic/Yashwant-Vithoba-Chittal/photos/
  5. "ಆರ್ಕೈವ್ ನಕಲು". Archived from the original on 2014-03-25. Retrieved 2014-03-24.
  6. http://www.outlookindia.com/article.aspx?281375