ವಿಷಯಕ್ಕೆ ಹೋಗು

ಸದಸ್ಯ:Abhishek hegde/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಂಜಲಿ ಹಳಿಯಾಳ್

[ಬದಲಾಯಿಸಿ]

ಸೆಪ್ಟೆಂಬರ್ 5 ನಮ್ಮ ಆತ್ಮೀಯರಾದ ಇನಿಧ್ವನಿಯ ಅಂಜಲಿ ಹಳಿಯಾಳ್ ಅವರ ಹುಟ್ಟುಹಬ್ಬ. ಅಂಜಲಿ ಅವರು ಸುಶ್ರಾವ್ಯವಾಗಿ ಹಾಡುವುದನ್ನು ಕೇಳುತ್ತಿದ್ದಂತೆ, ಆ ಗಾನಮಾಧುರ್ಯದ ಹಿಂದೆ ಅವರಲ್ಲಿ ನೆಲೆಯೂರಿರುವ ಸಂಗೀತ ಪ್ರೀತಿ, ಶ್ರದ್ಧೆಗಳ ಹೊಳಹುಗಳು ಕೂಡಾ ನಮ್ಮ ಮನಗಳನ್ನು ತಟ್ಟಿದಂತೆ ಭಾಸವಾಗುತ್ತದೆ. ಹಲವು ನಿಟ್ಟಿನಲ್ಲಿ ನಮ್ಮ ಈ ಅಂಜಲಿ ಗಾನಲೋಕದಲ್ಲಿನ ಅಚ್ಚರಿಯೂ ಹೌದು!

ಸಾಮಾನ್ಯವಾಗಿ ಹಾಡುಗಾರರ ಬೆಳವಣಿಗೆಯಲ್ಲಿ ಅವರು ಬಾಲ್ಯದಲ್ಲೇ ಕಂಡುಕೊಂಡ ಕಲಿಕೆಯ ಛಾಯೆಗಳು ಪ್ರಮುಖವಾಗಿರುತ್ತವೆ. ಆದರೆ, ಅಂಜಲಿ ಅವರು ಬಾಲ್ಯದಿಂದ ತಮ್ಮ ಪದವಿ ವ್ಯಾಸಂಗದವರೆಗಾಗಲಿ, ಹುದ್ದೆಯಲ್ಲಿ ತೊಡಗಿಕೊಂಡ ದಿನಗಳಲ್ಲಾಗಲಿ, ವೈವಾಹಿಕ ಜೀವನಕ್ಕೆ ಅಡಿಯಿಟ್ಟಾಗಲಾಗಲಿ, ತಾಯ್ತನಕ್ಕೆ ಬಂದಾಗಲಾಗಲಿ ತಾವೊಬ್ಬ ಹಾಡುಗಾರ್ತಿ ಆಗಬಹುದು ಎಂಬ ಕಲ್ಪನೆಯನ್ನು ಸಹಾ ಪೋಷಿಸಿಕೊಂಡು ಬಂದವರಲ್ಲ! ಅವರು ಗಾನಲೋಕದಲ್ಲಿ ಬೆಳೆದದ್ದು ಪ್ರೀತಿ ತುಂಬಿದ ತಮ್ಮ ಕಿವಿ, ಕಣ್ಮನ, ಹೃದಯಗಳನ್ನು ಕಲೆಯೆಡೆಗೆ ತೆರೆದಿಟ್ಟುಕೊಂಡ ರೀತಿಯಿಂದ!

ಅಂಜಲಿ ಅವರ ತಂದೆ ಮಧುಕರ್ ಸರ್ನೋಬತ್ ಅವರಿಗೆ ಕಛೇರಿಗಳಿಗೆ ಹೋಗಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತವನ್ನು ಕೇಳುವ ಅಪಾರ ಆಸ್ಥೆಯಿದ್ದುದರಿಂದ, ಮಗಳು ಅಂಜಲಿಗೂ ಅಂತಹ ಕಛೇರಿಗಳಲ್ಲಿನ ನಾದಸುಧೆಯನ್ನು ಸವಿಯುವ ಅವಕಾಶ ಆಗ್ಗಿಂದಾಗ್ಗೆ ಲಭಿಸುತ್ತಿತ್ತು. ಹಾಸ್ಯ ಬರಹಗಾರ್ತಿಯಾದ ತಾಯಿ ಸುಧಾಸರ್ನೋಬತ್ ಅವರಿಗೂ ಸಂಗೀತದಲ್ಲಿ ಒಲವಿತ್ತು. ಹೀಗಿದ್ದಾಗ್ಯೂ ಅಂಜಲಿ ಅವರಿಗೆ ತಮ್ಮ ಬೆಳವಣಿಗೆಯ ದಿನಗಳಲ್ಲಿ ಶಾಸ್ತ್ರೀಯ ಸಂಗೀತವನ್ನು ಅಭ್ಯಸಿಸುವ ಅವಕಾಶಗಳು ಒದಗಿ ಬಂದಿರಲಿಲ್ಲ.

ಅಂಜಲಿ ಅವರ ಸಂಗೀತ, ನಾಟಕಗಳ ಆಸಕ್ತಿಯ ಪ್ರಧಾನ ಮೂಲ ರೇಡಿಯೋ. ಅಂದು ಆಕಾಶವಾಣಿ ಮತ್ತು ವಿವಿಧ ಭಾರತಿ ಕಾರ್ಯಕ್ರಮಗಳಿಗೆ ಅಂಜಲಿ ಆಪ್ತವಾಗಿ ಅಂಟಿಕೊಂಡಿದ್ದವರು, ರೇಡಿಯೋದಲ್ಲಿ ಭಿತ್ತರಗೊಳ್ಳುತ್ತಿದ್ದ ಸುಗಮ ಸಂಗೀತ, ಶಾಸ್ತ್ರೀಯ ಸಂಗೀತದ ಹಿನ್ನೆಲೆಯ ಭಕ್ತಿಗೀತೆಗಳು, ಚಿತ್ರಗೀತೆಗಳೆಂದರೆ ಅವರಿಗೆ ಅಪಾರ ಪ್ರೀತಿ. ಅಂತೆಯೇ ರೇಡಿಯೋದಲ್ಲಿ ಮೂಡಿಬರುತ್ತಿದ್ದ ನಾಟಕಗಳಲ್ಲೂ ಅವರಿಗೆ ಅಪಾರ ಆಸ್ಥೆಯಿತ್ತು. ರಾಷ್ಟ್ರೀಯ ನಾಟಕ ಕಾರ್ಯಕ್ರಮಗಳನ್ನು ಅವರು ಆಪ್ತರೀತಿಯಿಂದ ಆಲಿಸುತ್ತಿದ್ದ ಸಂದರ್ಭಗಳಲ್ಲಿ, ಆ ನಾಟಕಗಳು ತೆರೆದಿಡುತ್ತಿದ್ದ ಭಾವನೆಗಳ ಕಲ್ಪನಾ ತಾವೇ ವಿಹರಿಸಿದ ಭಾವ ಅಂಜಲಿಯವರಲ್ಲಿ ಮೂಡುತ್ತಿತ್ತು. ಹಾಗಾಗಿ ತಾವೂ ಅಭಿನಯಿಸಬೇಕು ಎಂಬ ಆಶಯ ಕೂಡಾ ಅಂಜಲಿ ಅವರಲ್ಲಿ ಮೂಡುತ್ತಿತ್ತು. ಹತ್ತನೇ ತರಗತಿ ಓದುತ್ತಿರುವ ಸಂದರ್ಭದ ವೇಳೆಗೆ ಅಂಜಲಿ ಆಕಾಶವಾಣಿಯ ನಾಟಕಗಳಿಗೆ ನಡೆದ ಧ್ವನಿಪರೀಕ್ಷೆಗಳಲ್ಲಿ ಅರ್ಹತೆ ಗಳಿಸಿದರು. ಇದರಿಂದಾಗಿ ಅಂಜಲಿ ಅವರಿಗೆ ಆಕಾಶವಾಣಿಯ ನಾಟಕಗಳಲ್ಲಿ ಪ್ರಸಿದ್ಧರಾದ ಡಾ. ವಸಂತ ಕವಲಿ, ಯಮುನಾ ಮೂರ್ತಿ, ಗೋಪಾಲ ನಾಯಕ್ ಮುಂತಾದ ಗಣ್ಯರ ನಿರ್ದೇಶನದಲ್ಲಿ ಅಭಿನಯಿಸುವ ಅವಕಾಶ ಲಭ್ಯವಾಯಿತು. ಅದೇ ಸಂದರ್ಭದಲ್ಲಿ ಅಂಜಲಿ ಅವರಿಗೆ ರವೀಂದ್ರನಾಥ್, ನಳಿನಾಮೂರ್ತಿ, ಗಾಯತ್ರಿ ಪ್ರಭಾಕರ್ ಮುಂತಾದ ಅನೇಕ ಉತ್ತಮ ಕಲಾವಿದರ ಸಹಚರ್ಯೆ ಸಹಾ ದೊರಕಿತು.

ಆಕಾಶವಾಣಿಯಲ್ಲಿ ಧ್ವನಿಪರೀಕ್ಷೆ ನಡೆದ ಸರಿ ಸುಮಾರಿನಲ್ಲೇ ಅಂಜಲಿ ಅವರು ಬೆಂಗಳೂರು ದೂರದರ್ಶನ ಕೇಂದ್ರದ ನಾಟಕಗಳಿಗೆ ಸಹಾ ಪರಿಗಣಿತರಾದರು. ಅಂದಿನ ದಿನಗಳಲ್ಲಿ ದೂರದರ್ಶನ ಕೇಂದ್ರದಲ್ಲೇ ನಾಟಕಗಳು ನಿರ್ಮಾಣಗೊಳ್ಳುತ್ತಿದ್ದವು. ಹೀಗೆ ನಿರ್ಮಾಣಗೊಂಡ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದ ಅಂಜಲಿ, ಡಾ. ಶ್ರೀನಿವಾಸ ಕುಲಕರ್ಣಿ ಅವರು ನಿರ್ದೇಶಿಸಿದ ‘ಪೇಚು’ ಎಂಬ ನಾಟಕದಲ್ಲಿ ಶ್ರೀನಿವಾಸ ಪ್ರಭು ಅವರೊಂದಿಗೆ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಪರ್ವತವಾಣಿ ಅವರಿಂದ ರಚಿತವಾದ ಎನ್.ಎ.ಸೂರಿ ನಿರ್ದೇಶನದ ‘ಪ್ರತ್ಯಕ್ಷ ಪ್ರಮಾಣ’ ಅಂಜಲಿ ಅಭಿನಯದ ಮತ್ತೊಂದು ಪ್ರಮುಖ ನಾಟಕ. ಈ ನಾಟಕಗಳು ಹಲವಾರು ಬಾರಿ ಮರುಪ್ರಸರಣಗೊಂಡು ಅಪಾರ ಜನಪ್ರಿಯತೆ ಗಳಿಸಿದ್ದವು.

ಮುಂದೆ ಅಂಜಲಿ ಅವರು ದೂರದರ್ಶನದಲ್ಲಿ ಕ್ಯಾಶುಯಲ್ ಅನೌನ್ಸರ್ ಆಗಿ ಸಹಾ ಆಯ್ಕೆಗೊಂಡು ಕಾರ್ಯಕ್ರಮಗಳನ್ನು ನಿರ್ವಹಿಸುತ್ತಾ ಬಂದರು. ಈ ಸಂದರ್ಭದಲ್ಲಿ ಅವರು ಅರಳುಮಲ್ಲಿಗೆ, ಸುತ್ತ ಮುತ್ತ, ಮುನ್ನೋಟ ಮುಂತಾದ ಹಲವಾರು ಕಾರ್ಯಕ್ರಮಗಳನ್ನು ನಿರೂಪಿಸಿದ್ದರು ಇದೇ ಸಮಯದಲ್ಲಿ ಅಂಜಲಿ ಅವರಿಗ ಬಿ.ಎಸ್.ಎನ್.ಎಲ್ ಸಂಸ್ಥೆಯಲ್ಲಿ ಉದ್ಯೋಗ ದೊರಕಿತು.

ಮುಂದೆ ಉದ್ಯೋಗ,ಮದುವೆ,ತಾಯ್ತನ ಮುಂತಾದ ಪ್ರಕ್ರಿಯೆಗಳಲ್ಲಿ ಬದುಕು ಹರಿದದ್ದರಿಂದ ಅಂಜಲಿ ಅವರಿಗೆ ಉಳಿದ ಚಟುವಟಿಕೆಗಳ ಕುರಿತಾಗಿ ಅಷ್ಟಾಗಿ ಗಮನ ಹರಿಸುವುದು ಸಾಧ್ಯವಾಗಿರಲಿಲ್ಲ. ತಮ್ಮ ಮಗನಿಗೆ 8 ವರ್ಷ ತುಂಬಿದ ಸುಮಾರಿನಲ್ಲಿ, ಅವನಿಗೆ ಕೀಬೋರ್ಡ್ ಸಂಗೀತದಲ್ಲಿ ತರಬೇತಿ ಸಿಗಲಿ ಎಂದು ಮನೆಯ ಬಳಿ ಇದ್ದ ಸಾಧನಾ ಶಾಲೆಗೆ ಹೋದಾಗ, ಅದು ಅಂಜಲಿ ಅವರನ್ನೇ ಸಂಗೀತ ಕ್ಷೇತ್ರಕ್ಕೆ ಕರೆತಂದ ಘಟನೆಯಾಗಿ ಪರಿಣಮಿಸಿತು.

ಸಾಧನಾ ಸಂಗೀತ ಶಾಲೆಯಲ್ಲಿ ಸುಗಮ ಸಂಗೀತವನ್ನು ಕಲಿಯುವ ಸಾಧ್ಯತೆ ಇದೆ ಎಂದು ತಿಳಿದಾಗ, ಅದನ್ನು ಸಂಭ್ರಮಿಸಿ, ಅಲ್ಲಿನ ಪ್ರತಿಯೊಂದೂ ತರಗತಿಯನ್ನೂ ಅತ್ಯಂತ ಆಪ್ತವಾಗಿ ಕಾದುಕೂತು, ಬಳಸಿ, ಅಂಜಲಿ ಸಾಕ್ಷಾತ್ಕರಿಸಿಕೊಂಡರು. ಸಾಧನಾ ಸಂಗೀತ ಶಾಲೆಯಲ್ಲಿ ಮಂಜುಳಾ ಗುರುರಾಜ್ ಅವರ ನೇತೃತ್ವದಲ್ಲಿ ತಮಗೆ ದೊರೆತ ತರಬೇತಿಯ ಬಗ್ಗೆ ಅಂಜಲಿ ಅವರಲ್ಲಿ ಆಳವಾದ ಕೃತಜ್ಞತೆ ಇದೆ. “ಸಾಧನಾ ಸಂಗೀತ ಶಾಲೆಯಲ್ಲಿ ಕೇವಲ ಸಂಗೀತ ಮಾತ್ರವೇ ಅಲ್ಲದೆ, ಸರ್ವಾಂಗೀಣ ವ್ಯಕ್ತಿತ್ವದ ನಿರ್ಮಾಣದ ಪಾಠವೇ ದೊರಕುತಿತ್ತು. ಗಾಯನ, ಬರವಣಿಗೆ, ವೇದಿಕೆಯ ಮೇಲಿನ ಅಭಿವ್ಯಕ್ತಿ, ಕಾರ್ಯಕ್ರಮ ನಿರೂಪಣೆ, ನಿರ್ವಹಣೆ ಮುಂತಾದ ಪ್ರತಿಯೊಂದೂ ವಿಚಾರಗಳಲ್ಲೂ ನಮಗೆ ಮಾರ್ಗದರ್ಶನ ದೊರಕುತ್ತಿತ್ತು. ವಿದ್ಯಾರ್ಥಿಗಳಲ್ಲಿದ್ದ ಕೊರತೆಗಳನ್ನು ಪ್ರತ್ಯೇಕವಾಗಿ ಗಮನಿಸಿ ಅದಕ್ಕೆ ಸೂಕ್ತವಾದ ಮಾರ್ಗದರ್ಶನ ನೀಡುವಂತಹ ವ್ಯವಸ್ಥೆ ಮತ್ತು ಆತ್ಮವಿಶ್ವಾಸ ತುಂಬುವ ಪ್ರಕ್ರಿಯೆಯೇ ಅಲ್ಲಿತ್ತು. ಸಾಧನಾ ಸಂಗೀತ ಶಾಲೆಯಲ್ಲಿ, ಸುಗಮ ಸಂಗೀತ ಮತ್ತು ಧ್ವನಿ ಸಂಸ್ಕರಣೆಗೆ ಪೋಷಣೆ ನೀಡುವಂತಹ ಶಾಸ್ತ್ರೀಯ ಸಂಗೀತ ಆಧಾರಿತ ವಿಭಿನ್ನ ಗೀತೆಗಳ ಕಲಿಕೆ ಸಾಧ್ಯವಾಗುತ್ತಿತ್ತು. ಪ್ರತಿಭಾವಂತ ತರಬೇತುದಾರರ ಮಾರ್ಗದರ್ಶನವಷ್ಟೇ ಅಲ್ಲದೆ, ಆಗಾಗ್ಗೆ ಪ್ರಸಿದ್ಧ ಗಾಯಕರುಗಳಾದ ಪಿ. ಬಿ. ಶ್ರೀನಿವಾಸ್, ಎಸ್. ಜಾನಕಿ, ಎಸ್.ಪಿ. ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ, ಪಿ. ಸುಶೀಲಾ ಮುಂತಾದ ಪ್ರಸಿದ್ಧರೊಂದಿಗೆ ಕುಳಿತು ಅವರ ಸಂಗೀತ ಕೇಳಿ ಅವರೊಡನೆ ಸಂವಾದಿಸುವ ಅವಕಾಶಗಳು ಸಹಾ ದೊರೆತು ಗಾಯನಕ್ಕೆ ಅಗತ್ಯವಾದ ಉತ್ತಮ ಅಂಶಗಳು ಮನನವಾಗುವುದಕ್ಕೆ ವಿಫುಲ ಅವಕಾಶಗಳು ದೊರಕಿದವು” ಎಂದು ಅಂಜಲಿ ತಮಗೆ ದೊರಕಿದ ಆಪ್ತ ಅನುಭವವನ್ನು ಬಣ್ಣಿಸುತ್ತಾರೆ.

ಸಾಧನಾ ಶಾಲೆಯಲ್ಲಿ ಕಲಿಯುತ್ತಿರುವ ಸಂದರ್ಭದಲ್ಲಿ ಈಟಿವಿ ವಾಹಿನಿಯ ಪ್ರಸಿದ್ಧ ಕಾರ್ಯಕ್ರಮ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದಲ್ಲಿ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರೊಂದಿಗೆ ಹಾಡುವ ಅವಕಾಶಕ್ಕೆ ಅಂಜಲಿ ಆಯ್ಕೆ ಆಗಿದ್ದು ಒಂದು ಮಹತ್ವದ ಬೆಳವಣಿಗೆಯಾಯ್ತು. ಹೀಗೆ ರೂಪುಗೊಂಡ ಅವರ ಗಾಯನ ಪ್ರತಿಭೆ ಹಲವಾರು ಪ್ರತಿಷ್ಟಿತ ವೇದಿಕೆಗಳಲ್ಲಿ ತನ್ನ ಪ್ರತಿಭಾ ವೈವಿಧ್ಯವನ್ನು ಕಾಣಸಿಗುವಂತೆ ಮಾಡಿತು. ದೂರದರ್ಶನದಲ್ಲಿ ಪ್ರಸಾರವಾದ ‘ಮಧುರ ಮಧುರವೀ ಮಂಜುಳಗಾನ’ದಲ್ಲಿ ಹಲವಾರು ಪ್ರಸಿದ್ಧ ಗೀತೆಗಳಿಗೆ ಧ್ವನಿಯಾದ ಅಂಜಲಿ, ಅದರ ಸಲುವಾಗಿ ನಡೆದ ಹಲವಾರು ಕಾರ್ಯಕ್ರಮಗಳು, ಧ್ವನಿಸುರುಳಿಗಳಲ್ಲಿ ತಮ್ಮ ಧ್ವನಿಯನ್ನು ಮೂಡಿಸಿ ತಮ್ಮ ಗಾಯನಕ್ಕೆ ಮತ್ತಷ್ಟು ವ್ಯಾಪ್ತಿ ಕಂಡುಕೊಂಡರು. ಈ ಗೀತೆಗಳು ಬಹಳಷ್ಟು ಬಾರಿ ಮರು ಪ್ರಸರಣಗೊಳ್ಳುವ ಜನಪ್ರಿಯತೆಯನ್ನು ಸಾಧಿಸಿದವು. ಇದಲ್ಲದೆ ತಾವು ಕಾರ್ಯನಿರ್ವಹಿಸುತ್ತಿದ್ದ ಬಿ.ಎಸ್.ಎನ್.ಎಲ್ ಸಂಸ್ಥೆಯು ಅಖಿಲ ಭಾರತ ಮಟ್ಟದಲ್ಲಿ ಏರ್ಪಡಿಸುತ್ತಿದ್ದ ಗಾಯನ ಸ್ಪರ್ಧೆಗಳಲ್ಲಿ ಅಹಮದಾಬಾದ್, ಭುವನೇಶ್ವರ್, ಪುಣೆ, ಕಣ್ಣೂರ್ ಮುಂತಾದೆಡೆಗಳಲ್ಲಿ ಭಾಗವಹಿಸಿದ ಅಂಜಲಿ ಹಲವಾರು ಬಹುಮಾನಗಳನ್ನೂ ತಮ್ಮದಾಗಿಸಿಕೊಂಡರು.

‘ಎದೆ ತುಂಬಿ ಹಾಡುವೆನು’ ಅಂತಹ ಪ್ರತಿಷ್ಟಿತ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಅಂಜಲಿ ಅವರಿಗೆ ಶಾಸ್ತ್ರೀಯ ಸಂಗೀತವನ್ನು ಗಂಭೀರವಾಗಿ ಅಭ್ಯಾಸ ಮಾಡಬೇಕೆಂಬ ದೃಢನಿರ್ಧಾರ ಮೊಳೆತು ಮಂಗಳಾ ಹೆಗಡೆ ಅವರಲ್ಲಿ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಅಭ್ಯಾಸವನ್ನು ಪ್ರಾರಂಭಿಸಿದರು. ಮುಂದೆ ಅವರು ಕಾಶೀನಾಥ ಪತ್ತಾರ್ ಮತ್ತು ವಿನಾಯಕ್ ಹೆಗಡೆ ಅವರಲ್ಲಿ ಸಹಾ ಅವರು ತಮ್ಮ ಕಲಿಕೆಯನ್ನು ಮಾಡಿದ್ದಾರೆ. ಜೂನಿಯರ್ ಪರೀಕ್ಷೆಗಳಲ್ಲಿ ಉನ್ನತ ದರ್ಜೆಯ ಸಾಧನೆ ಮಾಡಿ ತಮ್ಮ ಹೆಚ್ಚು ಹೆಚ್ಚಿನ ಸಂಗೀತಾನುಭಾವದ ಕಡೆಗೂ ಅವರು ಮುನ್ನಡೆದಿದ್ದಾರೆ. ತಮ್ಮ ಸಂಗೀತದ ಈ ಸಾಧನೆಗಾಗಿ ಅವರು ತಮ್ಮ ಬಿ.ಎಸ್.ಎಲ್.ಎನ್ ಹುದ್ದೆಯಿಂದಲೂ ಸ್ವಯಂನಿವೃತ್ತಿ ಪಡೆದುಕೊಂಡಿದ್ದಾರೆ. ಶಾಸ್ತ್ರೀಯ ಸಂಗೀತವು ಗಾಯನಕ್ಕೆ ಅಪಾರವಾದ ಆತ್ಮವಿಶ್ವಾಸವನ್ನು ತುಂಬುತ್ತದೆ, ಧ್ವನಿಶುದ್ಧತೆಯ ಮಟ್ಟವನ್ನು ಕಾಯ್ದುಕೊಳ್ಳಲು ಬಹಳ ಸಹಾಯ ಮಾಡುತ್ತದೆ ಎಂಬ ಅಚಲವಾದ ನಂಬಿಕೆ ಅಂಜಲಿ ಅವರದ್ದಾಗಿದೆ.

ತಮ್ಮ ಕಾರ್ಯಕ್ರಮಗಳ ಸಂಖ್ಯೆಯನ್ನು ವಿಪರೀತವಾಗಿ ಏರಿಸಿಕೊಳ್ಳದೆ, ತಮ್ಮ ಕಲಿಕೆ ಮತ್ತು ಗಾಯನ ವೈವಿಧ್ಯದ ಸಂತೃಪ್ತಿಗಳ ಕಡೆಗೆ ಅಂಜಲಿ ಹಳಿಯಾಳ್ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಿದ್ದಾರೆ. ಆಕಾಶವಾಣಿಯಲ್ಲಿ ಹಲವಾರು ರೂಪಕಗಳನ್ನು ರಚಿಸಿ, ನಿರ್ದೇಶಿಸಿ ಪ್ರಸ್ತುತ ಪಡಿಸಿದ್ದಾರೆ. ಅಪಾರ ವೈವಿಧ್ಯಮಯ ಕವಿತೆಗಳ ಕವಿ ಕೆ.ಎಸ್. ನರಸಿಂಹಸ್ವಾಮಿಗಳ ಬೆಳಕು ಕಾಣದಿದ್ದ ಭವ್ಯಕವಿತೆಗಳ ‘ಅಂಕುರ’ ಎಂಬ ಸೋಲೋ ಆಲ್ಬಮ್ ಅನ್ನು ಭವಾನಿ ಶಂಕರ ಭಟ್ ಅವರ ರಾಗಸಂಯೋಜನೆಯಲ್ಲಿ ಹೊರತಂದು ಪ್ರಸಿದ್ಧ ಕವಿಗಳು ಮತ್ತು ಅಪಾರ ಕನ್ನಡ ಸುಗಮ ಸಂಗೀತ ಪ್ರೇಮಿಗಳಿಂದ ಅಪಾರ ಮೆಚ್ಚುಗೆ ಗಳಿಸಿದ್ದಾರೆ.

ಅಂಜಲಿ ಅವರು ನೀಡಿರುವ ನೂರಾರು ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ ಪ್ರೇಮಕವಿ ಕೆ.ಎಸ್. ನರಸಿಂಹಸ್ವಾಮಿಗಳ 101ನೇ ಜನ್ಮದಿನದ ಸಂದರ್ಭದಲ್ಲಿ ಏರ್ಪಾಡಾಗಿದ್ದ ‘ಗೀತ ಕಾರ್ಯಕ್ರಮ’, ‘ಮಹಾನ್ ಗಾಯಕಿ ಗೀತಾದತ್ ಅವರಿಗೊಂದು ಗೌರವ’, ಶಾಸ್ತ್ರೀಯ ಸಂಗೀತದ ಆಧಾರದ ಗೀತೆಗಳ ‘ಒನ್ ನೋಟ್ ಮೆನಿ ಮೆಲೋಡೀಸ್’, ‘ಜೂಮೆ ನಾಚೇ ಗಾಯೇ’ ಎಂಬ ಹಳೆಯ ಗೀತೆಗಳ ಗಾನಯಾನ, ಭಕ್ತಿಗೀತೆಗಳ ‘ಭಜನ್ ಸಂಧ್ಯಾ’, ಭಾರತೀಯ ವಿದ್ಯಾಭವನದಲ್ಲಿ ನಡೆದ ‘ಗೀತ್ ಸಂಗೀತ್’, ಪುಣೆ ಕರ್ನಾಟಕ ಸಂಘದ ಆಶ್ರಯದಲ್ಲಿ ನಡೆದ ‘ಪುರಂದರದಾಸರ ಪುಣ್ಯತಿಥಿ’ ಹಾಗೂ ಇತ್ತೀಚೆಗೆ ಯುನೈಟೆಡ್ ಕಿಂಗ್ಡಂನಲ್ಲಿ ಜರುಗಿದ ಮ್ಯಾಂಚೆಸ್ಟರಿನ ಕನ್ನಡ ಬಳಗದ ‘ಯುಗಾದಿ ಸಂಭ್ರಮ’, ಮ್ಯಾಂಚೆಸ್ಟರಿನ ದೀನಬಂಧು ಸಂಸ್ಥೆಯ ಸಹಾಯಾರ್ಥ ‘ಗಝಲ್ಸ್, ಭಜನ್ಸ್ ಹಾಗೂ ಹಳೆಯ ಚಿತ್ರಗೀತೆಗಳ ಗೀತಯಾನ’, ಕಾರ್ಡಿಫ್ (ವೇಲ್ಸ್) ನಲ್ಲಿ ನಡೆಸಿಕೊಟ್ಟ ‘ಹಿಂದೀ ಹಳೆಯ ಚಿತ್ರಗೀತೆಗಳ ಗಾನಲಹರಿ’ ಮುಂತಾದ ಕಾರ್ಯಕ್ರಮಗಳು ಸೇರಿವೆ.<<ref>>http://www.bfirst.in/category/critcolumns/anjali-haliyal-music-resign-job-211894

ಇಷ್ಟೆಲ್ಲಾ ಕ್ರಮಿಸಿದ್ದರೂ ತನ್ನದು ಸಾಧನೆಯಲ್ಲ, ತಾನಿನ್ನೂ ಸಂಗೀತದ ವಿದ್ಯಾರ್ಥಿ, ಪಯಣಿಸುವ ಹಾದಿ ಇನ್ನೂ ಬಹಳಷ್ಟಿದೆ ಎಂಬ ವಿನಯಶೀಲತೆಯನ್ನು ಮೆರೆಯುವ ಅಂಜಲಿ ಹಳಿಯಾಳರು ಎಲ್ಲರೊಂದಿಗೆ ಸ್ನೇಹದಿಂದ ಬೆರೆಯುವ ಸರಳ ಸಜ್ಜನಶೀಲ ವ್ಯಕ್ತಿತ್ವದವರು. ಅವರ ಸಾಧನೆಗಳು ನಿರಂತರವಾಗಿ ಬೆಳಗುತ್ತಿರಲಿ ಎಂದು ಆಶಿಸೋಣ. ಇಲ್ಲಿ ಮತ್ತೊಂದು ವಿಷಯವನ್ನು ಅವಶ್ಯವಾಗಿ ಹೇಳಬೇಕು. ಅಂಜಲಿ ಅವರ ಪ್ರತಿಭೆ ಬೆಳಕು ಕಂಡಿದ್ದು ಅವರು ವೈವಾಹಿಕ ಜೀವನದಲ್ಲಿ ತಾಯ್ತನಕ್ಕೆ ಕಾಲಿಟ್ಟ ಹಲವಾರು ವರ್ಷಗಳ ನಂತರದಲ್ಲಿ. ಇಂತಹ ಸಾಧನೆ ಸಾಧ್ಯವಾಗುವುದು ಕುಟುಂಬದಲ್ಲಿ ಮೂಡುವ ಶ್ರೇಷ್ಠ ಸಾಮರಸ್ಯದಿಂದ. ಹೀಗಾಗಿ ಅಂಜಲಿ ಅವರ ಪ್ರತಿಭಾ ಯಾನದಲ್ಲಿ ಅವರ ಸಮಸ್ತ ಕುಟುಂಬದ ಪಾಲಿದೆ ಮತ್ತು ಕುಟುಂಬದ ಅನನ್ಯ ಬೆಂಬಲವಿದೆ. ಹೀಗಾಗಿ ಅಂಜಲಿ ಹಳಿಯಾಳ್ ಅವರ ಪತಿ ರೇಷ್ಮೆ ಇಲಾಖೆಯಲ್ಲಿ ಹಿರಿಯ ವಿಜ್ಞಾನಿಗಳಾಗಿರುವ ಡಾ. ವಾಸುದೇವ್ ಹಳಿಯಾಳ್ ಮತ್ತು ಈ ದಂಪತಿಗಳ ಪುತ್ರ ಯುವ ಇಂಜಿನಿಯರ್ ನೀತೇಶ್ ಹಳಿಯಾಳ್ ಅವರನ್ನು ಸಹಾ ನಾವು ಹೃತ್ಪೂರ್ವಕವಾಗಿ ವಂದಿಸಬೇಕು. ಅಂಜಲಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭ ಹಾರೈಕೆಗಳನ್ನು ಹೇಳುತ್ತಾ ಅವರ ಮತ್ತು ಅವರ ಸಮಸ್ತ ಕುಟುಂಬದವರ ಬದುಕು ನಿತ್ಯ ಸುಂದರವಾಗಿರಲಿ ಎಂದು ಹಾರೈಸೋಣ.