ಆತ್ಮವಿಶ್ವಾಸ
ಆತ್ಮವಿಶ್ವಾಸದ ಪರಿಕಲ್ಪನೆಯನ್ನು ಸಾಮಾನ್ಯವಾಗಿ ಒಬ್ಬರ ವೈಯಕ್ತಿಕ ವಿವೇಚನೆ, ಸಾಮರ್ಥ್ಯ, ಅಧಿಕಾರ, ಇತ್ಯಾದಿಗಳಲ್ಲಿನ ಸ್ವನಂಬಿಕೆಯಾಗಿ ಬಳಸಲಾಗುತ್ತದೆ. ನಿರ್ದಿಷ್ಟ ಚಟುವಟಿಕೆಗಳಲ್ಲಿ ಪ್ರವೀಣನಾದ ಅನುಭವಗಳಿಂದ ಒಬ್ಬರು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುತ್ತಾರೆ.[೧] ಇದು ಭವಿಷ್ಯದಲ್ಲಿ ಒಬ್ಬರು ಸಾಮಾನ್ಯವಾಗಿ ತಾವು ಮಾಡಲು ಬಯಸಿದ್ದನ್ನು ಸಾಧಿಸಬಲ್ಲರು ಎಂಬುವ ಒಂದು ಸಕಾರಾತ್ಮಕ ನಂಬಿಕೆಯಾಗಿದೆ. ಆತ್ಮವಿಶ್ವಾಸ ಆತ್ಮಗೌರವಕ್ಕೆ ಸಮಾನವಲ್ಲ. ಆತ್ಮಗೌರವವು ಒಬ್ಬರ ಸ್ವಂತದ ಯೋಗ್ಯತೆಯ ಮೌಲ್ಯಮಾಪನವಾದರೆ, ಆತ್ಮವಿಶ್ವಾಸವು ಹೆಚ್ಚು ನಿರ್ದಿಷ್ಟವಾಗಿ ಯಾವುದಾದರೂ ಗುರಿಯನ್ನು ಸಾಧಿಸಲು ಒಬ್ಬರ ಸಾಮರ್ಥ್ಯದಲ್ಲಿನ ನಂಬಿಕೆ. ಆತ್ಮವಿಶ್ವಾಸವು ಸ್ವಯಂ ಪರಿಣಾಮಕಾರಿತ್ವದ ಸಾಮಾನ್ಯೀಕರಣವನ್ನು ಹೋಲುತ್ತದೆ ಎಂದು ಒಂದು ಉನ್ನತ ವಿಶ್ಲೇಷಣೆಯು ಸೂಚಿಸಿತು. ಮನೋವಿಜ್ಞಾನಿ ಮ್ಯಾಸ್ಲೊ ಮತ್ತು ಅವನ ನಂತರ ಅನೇಕ ಇತರರು ಸಾಮಾನ್ಯೀಕರಿಸಿದ ವ್ಯಕ್ತಿತ್ವ ಲಕ್ಷಣವಾಗಿ ಆತ್ಮವಿಶ್ವಾಸ, ಮತ್ತು ಒಂದು ನಿರ್ದಿಷ್ಟ ಕಾರ್ಯ, ಸಾಮರ್ಥ್ಯ ಅಥವಾ ಸವಾಲಿಗೆ ಸಂಬಂಧಿಸಿದಂತೆ ಆತ್ಮವಿಶ್ವಾಸದ (ಸ್ವಯಂ ಪರಿಣಾಮಕಾರಿತ್ವ) ನಡುವೆ ವ್ಯತ್ಯಾಸ ಮಾಡುವ ಅಗತ್ಯವನ್ನು ಒತ್ತಿಹೇಳಿದ್ದಾರೆ. ವಿಶಿಷ್ಟವಾಗಿ ಆತ್ಮವಿಶ್ವಾಸವು ಸಾಮಾನ್ಯ ಆತ್ಮವಿಶ್ವಾಸವನ್ನು ಸೂಚಿಸುತ್ತದೆ. ಇದು ಸ್ವ-ಪರಿಣಾಮಕಾರಿತ್ವದಿಂದ ಭಿನ್ನವಾಗಿದೆ. ಸ್ವ-ಪರಿಣಾಮಕಾರಿತ್ವವು ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ಯಶಸ್ವಿಯಾಗಲು ಅಥವಾ ಒಂದು ಕಾರ್ಯವನ್ನು ಸಾಧಿಸಲು ಒಬ್ಬರ ಸಾಮರ್ಥ್ಯದಲ್ಲಿನ ನಂಬಿಕೆ ಮತ್ತು ಹಾಗಾಗಿ ಹೆಚ್ಚು ನಿಖರವಾಗಿ ವಿಶಿಷ್ಟ ಆತ್ಮವಿಶ್ವಾಸವನ್ನು ಸೂಚಿಸುವ ಪದವಾಗಿದೆ ಎಂದು ಮನೋವಿಜ್ಞಾನಿ ಬ್ಯಾಂಡ್ಯೂರಾ ವ್ಯಾಖ್ಯಾನಿಸಿದ್ದಾರೆ. ಒಬ್ಬ ವ್ಯಕ್ತಿಯು ತಾನು ಒಂದು ನಿರ್ದಿಷ್ಟ ಕಾರ್ಯವನ್ನು ಮುಗಿಸಬಲ್ಲೆ (ಒಳ್ಳೆ ಅಡಿಗೆ ಮಾಡಬಹುದು ಅಥವಾ ಒಳ್ಳೆ ಕಾದಂಬರಿ ಬರೆಯಬಹುದು) ಎಂಬ ಆತ್ಮವಿಶ್ವಾಸವನ್ನು ಹೊಂದಿರಬಹುದು ಆದರೆ ಅವರು ಸಾಮಾನ್ಯ ಆತ್ಮವಿಶ್ವಾಸವನ್ನು ಹೊಂದಿರದಿರಬಹುದು, ಅಥವಾ ಇದಕ್ಕೆ ವಿಲೋಮವಾಗಿ ಆತ್ಮವಿಶ್ವಾಸಿಯಾಗಿರಬಹುದು ಆದರೆ ಒಂದು ನಿರ್ದಿಷ್ಟ ಕಾರ್ಯವನ್ನು ಸಾಧಿಸಲು ಬೇಕಾದ ಸ್ವ-ಪರಿಣಾಮಕಾರಿತ್ವವನ್ನು ಹೊಂದದಿರಬಹುದು ಎಂದು ಮನೋವಿಜ್ಞಾನಿಗಳು ಬಹುಕಾಲದಿಂದ ಗಮನಿಸಿದ್ದಾರೆ. ಆದರೆ, ಈ ಎರಡು ಪ್ರಕಾರಗಳ ಆತ್ಮವಿಶ್ವಾಸಗಳು ಒಂದಕ್ಕೊಂದು ಸಂಬಂಧಿಸಿವೆ, ಮತ್ತು ಈ ಕಾರಣಕ್ಕಾಗಿ ಇವನ್ನು ಸುಲಭವಾಗಿ ಒಗ್ಗೂಡಿಸಬಹುದು.
ಆತ್ಮವಿಶ್ವಾಸವು ವ್ಯಕ್ತಿಗಳಲ್ಲಿನ ಇತರ ಮನೋವೈಜ್ಞಾನಿಕ ಚರಾಂಶಗಳಿಗೆ (ಉದಾಹರಣೆಗೆ ಹಣ ಉಳಿಸುವುದು, ವ್ಯಕ್ತಿಗಳು ಇತರರ ಮೇಲೆ ಹೇಗೆ ಪ್ರಭಾವ ಬೀರುತ್ತಾರೆ, ಒಬ್ಬ ಜವಾಬ್ದಾರಿಯ ವಿದ್ಯಾರ್ಥಿಯಾಗಿರುವುದು) ಸಂಬಂಧಿಸಿವೆ ಎಂದು ಸಾಮಾಜಿಕ ಮನೋವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಒಬ್ಬ ವ್ಯಕ್ತಿಯ ಸಾಮಾನ್ಯ ಆತ್ಮವಿಶ್ವಾಸವು ಅವನ ಆತಂಕದ ಮಟ್ಟಕ್ಕೆ ಋಣಾತ್ಮಕವಾಗಿ ಸಂಬಂಧಿಸಿದೆ ಎಂದು ಮಾರಾಟಗಾರಿಕಾ ಸಂಶೋಧಕರು ಕಂಡುಕೊಂಡಿದ್ದಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ Snyder, C. R.; Lopez, Shane J. (2009-01-01). Oxford Handbook of Positive Psychology (in ಇಂಗ್ಲಿಷ್). Oxford University Press. ISBN 9780195187243.