ಬರ್ಮೀ ಭಾಷೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬರ್ಮೀ ಭಾಷೆ - ಬರ್ಮ ಒಕ್ಕೂಟದ ಅಧಿಕೃತ ಭಾಷೆ. ಆ ನಾಡಿನ 23 ದಶಲಕ್ಷ ಪ್ರಜೆಗಳ ಪೈಕಿ 2/3 ರಷ್ಟು ಜನರ ಮಾತೃಭಾಷೆ. ಲಿಖಿತ ಸಾಹಿತ್ಯ ಹದಿನೈದನೆಯ ಶತಮಾನದಿಂದ ದೊರೆಯುತ್ತದೆಯಾದರೂ ಹನ್ನೊಂದನೆಯ ಶತಮಾನದಷ್ಟು ಹಿಂದಕ್ಕೆ ಹೋಗುವ ಶಿಲಾಶಾಸನಗಳೂ ದೊರೆತಿವೆ. ಈ ಭಾಷೆಯಲ್ಲಿ ಮೂರು ಬಗೆಯ ಶೈಲಿಗಳನ್ನು ಸ್ಪಷ್ಟವಾಗಿ ಗುರುತಿಸಬಹುದು; ಅಭಿಜಾತ ಶೈಲಿ, ಬರವಣಿಗೆಯಲ್ಲಿರುವ ಗದ್ಯ (ಪಾಲಿ ವ್ಯಾಕರಣ ಮತ್ತು ವಾಕ್ಯರಚನೆಯಿಂದ ಬಹಳವಾಗಿ ಪ್ರಭಾವಗೊಂಡಿದೆ) ಮತ್ತು ಆಡುಭಾಷೆ. ಇವುಗಳಲ್ಲಿ ಪದಕೋಶದ ದೃಷ್ಟಿಗಿಂತಲೂ ವಾಕ್ಯರಚನೆ ಮತ್ತು ವ್ಯಾಕರಣಾಂಶಗಳ ದೃಷ್ಟಿಯಿಂದ ಭಿನ್ನತೆ ಕಂಡುಬರುತ್ತದೆ.[೧]

ಬರ್ಮೀ ಲಿಪಿ ಉಗಮ[ಬದಲಾಯಿಸಿ]

ಬರ್ಮೀ ಲಿಪಿ ಉಗಮಿಸಿದ್ದು ದಕ್ಷಿಣ ಭಾರತೀಯ ಮೂಲದಿಂದ. ಬಹಳವಾಗಿ ವೃತ್ತಗಳು ಮತ್ತು ವೃತ್ತಭಾಗಗಳು ಕಂಡುಬರುವ ಈ ಲಿಪಿಯನ್ನು ಎಡದಿಂದ ಬಲಕ್ಕೆ ಬರೆಯುತ್ತಾರೆ. ಇದರ ಸಾಂಪ್ರದಾಯಿಕ ಕಾಗುಣಿತ ಪದ್ಧತಿ ತೌಲನಿಕ ಭಾಷಾಶಾಸ್ತ್ರೀಯ ಅಧ್ಯಯನಕ್ಕೆ ದಾರಿಮಾಡಿಕೊಡುತ್ತದೆ. ಬರ್ಮೀ ಭಾಷೆ ಸೈನೋಟೆಬೆಟನ್ ಭಾಷಾವರ್ಗಕ್ಕೆ ಸೇರಿದ ಟೆಬೆಟೊ-ಬರ್ಮೀ ಉಪವರ್ಗದ ಒಂದು ಭಾಷೆ. ಮೂಲಭೂತವಾಗಿ ಇದು ಏಕಾಕ್ಷರ ಭಾಷೆ. ಅಂದರೆ ನಿರ್ದಿಷ್ಟವಾಗಿ ಒಂದು ಅಕ್ಷರದ ಆಕೃತಿಮಾನಗಳು ಇದರಲ್ಲುಂಟು. ಇದು ಒಂದು ತಾನಭಾಷೆ (ಟೋನ್ ಲ್ಯಾಂಗ್ವೇಜ್) ಸಹ ಹೌದು. ಒಂದು ನಿಮ್ನ-ಸ್ವರಾಘಾತ ಮತ್ತು ಮೂರು ಉಚ್ಚ-ಸ್ವರಾಘಾತ ಮಾದರಿಯ ಅಕ್ಷರಗಳು ಇದರಲ್ಲಿ ಕಂಡುಬರುತ್ತವೆ.

ಬರ್ಮೀ ಭಾಷೆ ಕ್ರಿಯಾಪದ[ಬದಲಾಯಿಸಿ]

ಅಂತಿಮ ಕ್ರಿಯಾಪದಕ್ಕೆ ಮೊದಲು ಬರುವ ಪದಗಳ ಕ್ರಮ ಈ ಭಾಷೆಯಲ್ಲಿ ಸಾಪೇಕ್ಷವಾಗಿ ನಿರ್ಬಂಧಕ್ಕೆ ಒಳಗಾಗಿರುವುದಿಲ್ಲ. ಅದರಲ್ಲೂ ಅನೇಕ ವೇಳೆ ವಾಕ್ಯ ರಚನೆಯ ಸಂಬಂಧಗಳನ್ನು ತೋರಿಸಬೇಕಾದರೆ ಅಂತ್ಯಪ್ರತ್ಯಯಗಳನ್ನು ಬಳಸಲಾಗುತ್ತದೆ. ಆದರೆ ಪ್ರಧಾನ ಕ್ರಿಯಾಪದದೊಡನೆಯೆ ವಾಕ್ಯ ಕೊನೆಗೊಳ್ಳುತ್ತದೆ. ಬರ್ಮೀ ಆಡು ಭಾಷೆಯ ಸಮೀಕರಣಾತ್ಮಕ ವಾಕ್ಯಗಳಲ್ಲಿ ಸಂಯೋಜಕ ಕ್ರಿಯಾ ಪದಗಳನ್ನು ಬಳಸುವುದಿಲ್ಲ. ಎಣಿಕೆ ಮಾಡಬೇಕಾದರೆ ಸಂಖ್ಯಾವಾಚಕಗಳ ಪ್ರಯೋಗ ಉಂಟು.

ಬರ್ಮೀ ಭಾಷೆ ಪದಸಂಪತ್ತು[ಬದಲಾಯಿಸಿ]

ಬರ್ಮೀ ಭಾಷೆ ಅನೇಕ ಧಾರ್ಮಿಕ ಮತ್ತು ದಾರ್ಶನಿಕ ಪದಗಳನ್ನು ಪಾಳಿ ಮತ್ತು ಸಂಸ್ಕೃತ ಭಾಷೆಗಳಿಂದ ಎರವಲಾಗಿ ಪಡೆದುಕೊಂಡು ತನ್ನದಾಗಿಸಿಕೊಂಡಿದೆ. ಅನೇಕ ಬಗೆಯ ಮೀನುಗಳ ಮತ್ತು ಮರಗಿಡಗಳ ಹೆಸರುಗಳನ್ನು ಮಾನ್ ಭಾಷೆಯಿಂದ ಪಡೆದುಕೊಂಡಿದೆ. ಹಾಗೆಯೇ ವೈಜ್ಞಾನಿಕ ಮತ್ತು ರಾಜಕೀಯ ಪದಗಳನ್ನು ಇಂಗ್ಲಿಷಿನಿಂದ ತೆಗೆದುಕೊಂಡಿದೆ. ಅರಬ್ಬಿ, ಬಂಗಾಳಿ, ಮಲಯ ಮತ್ತು ಪೋರ್ಚುಗೀಸ್ ಭಾಷೆಗಳಿಂದಲೂ ಹಲವಾರು ಪದಗಳು ಬರ್ಮೀ ಭಾಷೆಯಲ್ಲಿ ಸೇರಿಹೋಗಿವೆ.

ಬರ್ಮಾದಲ್ಲಿ ಮಾತನಾಡುವ ಇತರ ಭಾಷೆ[ಬದಲಾಯಿಸಿ]

ಬರ್ಮ ಒಕ್ಕೊಟದಲ್ಲಿ ಮಾತನಾಡುವ ಇತರ ಭಾಷೆಗಳೆಂದರೆ ಶಾನ್ ಭಾಷೆ(7%), ಕಾರೆನ್ ಭಾಷೆ(8%) ಮಾನ್ ಭಾಷೆ(2%) ಚಿನ್ ಭಾಷೆ ಮತ್ತು ಜಿಂಗ್‍ಪಾ ಭಾಷೆ.

ಉಲ್ಲೇಖ[ಬದಲಾಯಿಸಿ]

  1. http://www.thefreedictionary.com/Barmi
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: