ವಿಷಯಕ್ಕೆ ಹೋಗು

ಕಳಸಾ-ಬಂಡೂರಿ ನಾಲಾ ಯೋಜನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೆಳಗಾವಿ ಜಿಲ್ಲೆ (ಕರ್ನಾಟಕ

ಕುಡಿಯುವ ನೀರು ನೀರಿನ ಯೋಜನೆ

[ಬದಲಾಯಿಸಿ]
ಧಾರವಾಡ ಜಿಲ್ಲೆ
  • ಕಳಸಾ-ಬಂಡೂರಿ ನಾಲಾ ಯೋಜನೆಯು ಬೆಳಗಾವಿ, ಧಾರವಾಡ ಮತ್ತು ಗದಗ ಜಿಲ್ಲೆಗಳಿಗೆ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಲು ಕರ್ನಾಟಕ ಸರ್ಕಾರವು ಕೈಗೊಂಡ ಒಂದು ಯೋಜನೆಯಾಗಿದೆ. ಇದು 3 ಜಿಲ್ಲೆಗಳಲ್ಲಿ, ಅಂದರೆ [ಧಾರವಾಡ]], ಬೆಳಗಾವಿ ಮತ್ತು ಗದಗ ಕುಡಿಯುವ ನೀರಿನ ಅಗತ್ಯಗಳನ್ನು ಒದಗಿಸಲು, ಮಹಾದಾಯಿಯ ನದಿಯ ಉಪನದಿಗಳಾದ ಕಳಸ ಮತ್ತು ಬಂಡೂರಿಯ 7.56ಟಿಎಂಸಿ ಯಷ್ಟನ್ನು ತಿರುಗಿಸಿ ,ಮಲಪ್ರಭಾ ನದಿಗೆ ಸೆರಿಸಲು ಕಳಸ ಮತ್ತು ಬಂಡೂರಿಗೆ ಅಡ್ಡಲಾಗಿ ಕಟ್ಟೆ ಕಟ್ಟುವ ಯೋಜನ ಒಳಗೊಂಡಿರುತ್ತದೆ. ಈ ಯೋಜನೆಯು ದಶಕಗಳಿಂದ ಕಾಗದದ ಮೇಲೆ ಇತ್ತು ಮತ್ತು ಕರ್ನಾಟಕ ಸರಕಾರವು, ಎಸ್.ಎಂ.ಕೃಷ್ಣರವರ ಆಡಳಿತ ಸಮಯದಲ್ಲಿ ಅದನ್ನು ಅಳವಡಿಸಲು ನಿರ್ಧರಿಸಿತು. ಯೋಜನೆಗೆ ಕೇಂದ್ರ ಒಪ್ಪಿಗೆ (ಕ್ಲಿಯರೆನ್ಸ)ಯನ್ನು 2002 ರಲ್ಲಿ ಪಡೆಯಿತು. ಆದಾಗ್ಯೂ ಗೋವಾ ನಂತರ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರದ ಮನೋಹರ್ ಪರಿಕ್ಕರ್‍ ನೇತೃತ್ವದಲ್ಲಿ ಯೋಜನೆಯಿಂದ ಗೋವಾದ ಸಸ್ಯಗಳಿಗೆ ಹಾನಿಯಾಗುವುದೆಂದು ಮತ್ತು ಪ್ರಾಣಿಗಳು ತೊಂದರೆಗೊಳಗಾಗಬಹುದು ಎಂದು ಆರೋಪಿಸಿ ಕೇಂದ್ರಕ್ಕೆ ಯೋಜನೆ ಬಗೆಗೆ ಆಕ್ಷೇಪಣೆ ಸಲ್ಲಿಸಿತು. ಇದರ ನಂತರ, ಕೇಂದ್ರದಲ್ಲಿ ಆಡಳಿತದಲ್ಲಿದ್ದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ)ಸರ್ಕಾರವು ತನ್ನ ಅನುಮೋದನೆಯನ್ನು ತಡೆಹಿಡಿಯಿತು; ಮತ್ತು ಯೋಜನೆಗೆ ಹಣ ಬಿಡುಗಡೆಯನ್ನು ತಡೆಹಿಡಿಯಿತು.[]
  • ನಕ್ಷೆ :[[೬]]
ಗದಗ ಜಿಲ್ಲೆ
  • ನೀರನ್ನು ಕಳಸಾ-ಬಂಡೂರಿ ಎಂಬ ಎರಡು ನಾಲೆಗಳ ಮೂಲಕ ಜಲಾಶಯಕ್ಕೆ ಹರಿಸಲು ಯೋಜನೆ ರೂಪಿಸಲಾಗಿದೆ. ಆದ್ದರಿಂದ, ಕಳಸಾ-ಬಂಡೂರಿ ಎಂಬ ಹೆಸರೂ ಇದೆ. ಬೆಳಗಾವಿ ಜಿಲ್ಲೆಯ ಪಶ್ಚಿಮ ಘಟ್ಟದ ಸಾಲಿನಲ್ಲಿ ಹುಟ್ಟುವ ಮಹದಾಯಿ ನದಿಯು ಕರ್ನಾಟಕದಲ್ಲಿ 35 ಕಿ.ಮೀ ಹರಿಯುತ್ತದೆ. ಮುಂದೆ ಗೋವಾ ಪುಟ್ಟ ರಾಜ್ಯದಲ್ಲಿ 45 ಕಿ.ಮೀ ಹರಿಯುವ ಮಹದಾಯಿ (ಮಾಂಡೋವಿ) ನದಿ, ಕೊನೆಗೆ ಅರಬ್ಬಿ ಸಮುದ್ರವನ್ನು ಸೇರುತ್ತದೆ. 52.60 ಟಿಎಂಸಿ ಅಡಿ ನೀರು ಮಹಾದಾಯಿಯಿಂದ ಕರ್ನಾಟಕಕ್ಕೆ ಸಿಗುತ್ತಿದೆ. ಗೋವಾ ರಾಜ್ಯದ ಮೂಲಕ 159.07 ಟಿಎಂಸಿ ಅಡಿ ನೀರು ಅರೇಬಿಯನ್ ಸಮುದ್ರಕ್ಕೆ ಸೇರಿಕೊಳ್ಳುತ್ತದೆ. ಹೀಗೆ ರಾಜ್ಯದ ಮೂಲಕ ಅರೇಬಿಯನ್ ಸಮುದ್ರಕ್ಕೆ ಸೇರಿ ಪೋಲಾಗುವ ನೀರನ್ನು ಉತ್ತರ ಕರ್ನಾಟಕದ ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳಿಗೆ ಉಪಯೋಗವಾಗಲೆಂದು ಅಂದಿನ ಮುಖ್ಯಮಂತ್ರಿ ಆರ್. ಗುಂಡೂರಾವ್, ಎಸ್ ಆರ್ ಬೊಮ್ಮಾಯಿ ನೇತೃತ್ವದಲ್ಲಿ ಈ ಕಾರ್ಯವನ್ನು ಕೈಗೆತ್ತಿಕೊಂಡರು.[]

ಮಲಪ್ರಭಾ ನೀರಾವರಿ ಯೋಜನೆ

[ಬದಲಾಯಿಸಿ]
  • ಹಿನ್ನೋಟ:
  • ಮೇಲಿಂದ ಮೇಲೆ ಬರಗಾಲಕ್ಕೆ ತುತ್ತಾಗುತ್ತಿದ್ದ ಗದಗ ಜಿಲ್ಲೆಯ ನರಗುಂದ, ರೋಣ, ಧಾರವಾಡ ಜಿಲ್ಲೆಯ ನವಲಗುಂದ ಹಾಗೂ ಬೆಳಗಾವಿ ಜಿಲ್ಲೆಯ ಸವದತ್ತಿ ಬೈಲಹೊಂಗಲ ತಾಲೂಕುಗಳಿಗೆ ನೀರಾವರಿಯ ಅಗತ್ಯತೆ ಇತ್ತು. ಈ ಭಾಗದ ಕುಡಿಯುವ ನೀರಿನ ಅಭಾವ ಹೇಳತೀರದಾಗಿತ್ತು. ಅದಕ್ಕಾಗಿ ರೂಪಗೊಂಡದ್ದು ಮಲಪ್ರಭಾ ನೀರಾವರಿ ಯೋಜನೆ. ಸವದತ್ತಿ ಹತ್ತಿರ `ನವಿಲು ತೀರ್ಥ ಬಳಿ ಮಲಪ್ರಭಾ ನದಿಗೆ ಅಣೆಕಟ್ಟೆ ನಿರ್ಮಿಸಿ 5.27 ಲಕ್ಷ ಎಕರೆ ಭೂಮಿಗೆ ನೀರು ಒದಗಿಸುವ ಯೋಜನೆ ಇದಾಗಿತ್ತು. ಯೋಜನೆಯ ಕಾರ್ಯ 1961 ರಲ್ಲಿ ಪ್ರಾರಂಭಗೊಂಡು 1972-73ರ ಸುಮಾರಿಗೆ ಪೂರ್ಣಗೊಂಡಿತು. ಈ ಜಲಾಶಯ 37 ಟಿಎಂಸಿ ನೀರಿನ ಸಂಗ್ರಹ ಸಾಮಥ್ರ್ಯ ಹೊಂದಿದೆ. ಆದರೆ ಇಲ್ಲಿಯವರೆಗೆ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು 3-4 ಬಾರಿ ಮಾತ್ರ. ಮಲಪ್ರಭಾ ಜಲಾಶಯ (ರೇಣುಕಾಸಾಗರ) ದಲ್ಲಿ ಮಳೆಯ ಕೊರತೆ ಕಾರಣ ನೀರಿನ ಸಂಗ್ರಹ ಕಡಿಮೆಯಾಗಿದೆ.
  • ರೇಣುಕಾಸಾಗರದ ನೀರಿನ ಕೊರತೆಯನ್ನು ನೀಗಲು ಸಿದ್ಧವಾದ ಯೋಜನೆಯೇ ಮಹದಾಯಿ ತಿರುವು ಯೋಜನೆ. ಮಲಪ್ರಭಾ ನದಿಯಂತೆ ಮಹದಾಯಿ ನದಿ ಕೂಡಾ ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನಲ್ಲಿ ಉಗಮವಾಗಿದೆ. ಸಹ್ಯಾದ್ರಿ ಬೆಟ್ಟದಲ್ಲಿ ಸಮುದ್ರ ಮಟ್ಟದಿಂದ 914 ಮೀ. ಎತ್ತರದಲ್ಲಿ ಹುಟ್ಟಿದ ಈ ನದಿ ಕರ್ನಾಟಕದಲ್ಲಿ ೩೫ ಕಿ.ಮೀ. ಕ್ರಮಿಸಿ ಗೋವಾ ರಾಜ್ಯದಲ್ಲಿ ಹರಿದು ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಗೋವಾದಲ್ಲಿ `ಮಾಂಡೋವಿ’ ಎಂದು ಹೆಸರು. ಮಹದಾಯಿ ನದಿಗೆ ಹಲತಾರಾ, ಕಳಸಾ, ಬಂಡೂರಿ, ಕಾರಂಜೋಳ, ಬೊಮ್ಮನರಿ ದೂದ ಸಾಗರ ಹೀಗೆ ಅನೇಕ ಉಪನದಿಗಳಿಂದ ಕೂಡಿದ ನದಿ ಕಣಿವೆ ಆಗಿದೆ. ಇದು ಹೆಚ್ಚು ಮಳೆಬೀಳುವ ಪ್ರದೇಶವಾಗಿದ್ದು ಸರಾಸರಿ 3,134 ಮಿಲಿಮೀಟರ್ ಮಳೆ ಬೀಳುತ್ತದೆ. ಮಹಾದಾಯಿ ನದಿ ಕಣಿವೆಯಿಂದ ಕಾಲುವೆ ಮೂಲಕ ಮಲಪ್ರಭಾ ನದಿಗೆ ನೀರು ವರ್ಗಾಯಿಸುವುದೇ ಈ ಯೋಜನೆಯ ಉದ್ದೇಶ.

ಗೋವಾದ ವಿರೋಧ

[ಬದಲಾಯಿಸಿ]
ಗೋವಾದ ರಾಜಕೀಯ ವಿಭಾಗಗಳು
  • 1978ರಲ್ಲಿಯೇ ಈ ಯೋಜನೆ ಸಿದ್ಧವಾದರೂ ಕಾರ್ಯರೂಪಕ್ಕೆ ಬರಲಿಲ್ಲ. ಇದನ್ನೊಂದು ಜಲವಿದ್ಯುತ್ ಯೋಜನೆಯಾಗಿ ಮಾರ್ಪಡಿಸಿ ಮಹಾದಾಯಿ ಜಲಾಯನ ಪ್ರದೇಶದಿಂದ 9 ಟಿಎಂಸಿ ನೀರನ್ನು ಮಲಪ್ರಭಾಗೆ ವರ್ಗಾಯಿಸಿ ವಿದ್ಯುತ್ ಉತ್ಪಾದನೆಗೂ ಯೋಜಿಸಲಾಗಿತ್ತು. (5-11-1988)1988 ರಲ್ಲಿ ಇದಕ್ಕೆ ಕರ್ನಾಟಕ ಸರಕಾರ ಅನುಮೋದನೆ ನೀಡಿತು. ಆದರೆ ಗೋವಾ ಸರಕಾರದ ತೀವ್ರ ವಿರೋಧದಿಂದ ಯೋಜನೆಗೆ ತಡೆಯಾಯಿತು. ಮಹಾದಾಯಿ 2,032 ಚ.ಕಿ.ಮೀ. ಜಲಾನಯನ ಪ್ರದೇಶ ಹೊಂದಿದ್ದು ಅದರಲ್ಲಿ ಕರ್ನಾಟಕದ ಪಾಲು 412 ಚ.ಕಿ.ಮೀ. ಕೇಂದ್ರದ ಜಲ ಆಯೋಗದ ಸಮೀಕ್ಷೆಯಂತೆ ನದಿಯಲ್ಲಿ ಒಟ್ಟು 210 ಟಿಎಂಸಿ ನೀರು ಲಭ್ಯವಿದ್ದು ಕರ್ನಾಟಕ 45 ಟಿಎಂಸಿ ನೀರಿನ ಪಾಲನ್ನು ಹೊಂದಿದೆ. ಗೋವಾ ಸರಕಾರ ಮಹದಾಯಿ ನದಿಗೆ ಜಲವಿದ್ಯುತ್ ಆಗಲಿ, ಇತರ ಇನ್ನಾವುದೆ ಯೋಜನೆಯನ್ನೂ ರೂಪಿಸಿಲ್ಲ. ಕರ್ನಾಟಕ ತನ್ನ ಪಾಲಿನ ನೀರು ಪಡೆಯಲು ಯೋಜನೆ ರೂಪಿಸಿದರೂ ಅದಕ್ಕೆ ಗೋವಾ ಆತಂಕ ಒಡ್ಡುತ್ತಿದೆ.

ಕಳಸಾ–ಬಂಡೂರಿ ಯೋಜನೆ

[ಬದಲಾಯಿಸಿ]
  • ಕಳಸಾ ನಾಲಾ ತಿರುವು:
  • ಕಳಸಾ ಹಳ್ಳವು ಕರ್ನಾಟಕದಲ್ಲಿ ಹುಟ್ಟಿ ದಕ್ಷಿಣಾಭಿಮುಖವಾಗಿ ಹರಿದು ಗೋವಾದಲ್ಲಿ ಮಹದಾಯಿ ನದಿಯನ್ನು ಸೇರುತ್ತದೆ. ಕರ್ನಾಟಕದಲ್ಲಿ 24 ಚದರ ಕಿ.ಮೀ. ಜಲಾನಯನ ಪ್ರದೇಶ ಹೊಂದಿದ್ದು ಕೆಲವು ಉಪ ಹಳ್ಳಗಳು ಕರ್ನಾಟಕದಲ್ಲಿ ಹುಟ್ಟಿ ಗೋವಾದಲ್ಲಿ ಕಳಸಾ ಹಳ್ಳವನ್ನು ಸೇರುತ್ತವೆ. ಈ ಹಳ್ಳದಿಂದ 3.56 ಟಿಎಂಸಿ ನೀರನ್ನು ಪಡೆಯುವ ಉದ್ದೇಶದಿಂದ ಯೋಜನೆ ತಯಾರಿಸಲಾಗಿದೆ. ಕಳಸಾ ಯೋಜನೆಗೆ ಎರಡು ಅಣೆಕಟ್ಟೆಗಳನ್ನು ನಿರ್ಮಿಸುವುದು. ಹುಬ್ಬಳ್ಳಿ-ದಾರವಾಡ ಅವಳಿ ನಗರಗಳಿಗೆ ಕುಡಿಯುವ ನೀರು ಒದಗಿಸುವ ಸಲುವಾಗಿ ಅಂದಿನ ಜಲಸಂಪನ್ಮೂಲ ಸಚಿವರಾಗಿದ್ದ ಎಚ್.ಕೆ.ಪಾಟೀಲ್ ೨೦೦೦ ರಲ್ಲಿ ಕಳಸಾ ಬಂಡೂರಿ ನಾಲಾ ಯೋಜನೆಯನ್ನು ರೂಪಿಸಿದ್ದರು.
  • (1) ಕಳಸಾ ಹಳ್ಳಕ್ಕೆ ಅಣೆಕಟ್ಟು ಹಾಗೂ 4.8 ಕಿ.ಮಿ. ಉದ್ದದ ಕಾಲುವೆ ನಿರ್ಮಾಣ.
  • (2) ಹಳತಾರ ಹಳ್ಳಕ್ಕೆ ಅಣೆಕಟ್ಟು ನಿರ್ಮಿಸಿ ಅಲ್ಲಿ ಸಂಗ್ರಹವಾದ ನೀರನ್ನು 5.5 ಕಿ.ಮೀ. ಉದ್ದದ ಕಾಲುವೆಯ ಮೂಲಕ ಕಳಸಾ ಅಣೆಕಟ್ಟೆಗೆ ಸಾಗಿಸುವುದು.
  • ಇದರ ಒಟ್ಟು ವೆಚ್ಚ ಯೋಜನೆ ರೂಪಿಸಿದಾಗ 44 ಕೋಟಿ ರೂ.ಗಳು. ಆದರೆ ಈಗ ಅದರ ವೆಚ್ಚ 428 ಕೋಟಿ ರೂ.ಗಳು. ಈ ಪೈಕಿ ಅಂದಿನ ಕುಮಾರಸ್ವಾಮಿಯವರ ಸರಕಾರ ಯೋಜನೆ ಅನುಷ್ಠಾನಗೊಳಿಸುವ ಉದ್ದೇಶದಿಂದ 125 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಯೋಜನೆಗೆ ಚಾಲನೆ ನೀಡಿದ್ದರು.

ಬಂಡೂರಿ ನಾಲಾ ತಿರುವು

[ಬದಲಾಯಿಸಿ]
  • ನಕ್ಷೆಎ:[[೭]]
  • ಬಂಡೂರಿಯು ಮಹದಾಯಿ ನದಿಯ ಇನ್ನೊಂದು ಉಪನದಿ. ಸಿಂಗಾರ ನಾಲಾ ಹಾಗೂ ವಾಟಿ ನಾಲಾಗಳಿಗೆ ಅಣೆಕಟ್ಟು ಕಟ್ಟಿ ಸಂಗ್ರಹವಾದ ನೀರನ್ನು ಬಂಡೂರಿ ಜಲಾಶಯಕ್ಕೆ ವರ್ಗಾಯಿಸುವುದು. ಇಲ್ಲಿ ಸಂಗ್ರಹವಾದ 4 ಟಿಎಂಸಿ ನೀರನ್ನು ೫.೧೫ ಕಿ.ಮೀ ಕಾಲುವೆ ಮೂಲಕ ಮಲಪ್ರಭಾ ನದಿಗೆ ವರ್ಗಾಯಿಸುವುದು. ಬಂಡೂರ ನಾಲಾ ಯೋಜನೆಗೊಳಪಡುವ ಜಲಾನಯನ ಪ್ರದೇಶ 32.25 ಚ.ಕಿ.ಮೀ. ಇದರಿಂದ ಒಟ್ಟು 380 ಹೆಕ್ಟೇರ್ ಭೂಮಿ ಮುಳುಗಡೆ ಆಗಲಿದೆ. ಇದರ ವೆಚ್ಚ ಯೋಜನೆ ತಯಾರಿಸುವಾಗ 49 ಕೋಟಿ ರೂ.ಗಳು. ಈಗ ಅದರ ವೆಚ್ಚ 370 ಕೋಟಿ ರೂ. ಆಗಿದೆ.
  • ಈ ಎರಡೂ ಯೋಜನೆಗಳಿಂದ ಒಟ್ಟು 7.56 ಟಿಎಂಸಿ ನೀರು ಲಭ್ಯವಾಗಲಿದೆ. ಇದುವೆ ಕಳಸಾ-ಬಂಡೂರಿ ನಾಲಾ ಯೋಜನೆ.
  • ಯೋಜನೆ ಬಗ್ಗೆ ಕರ್ನಾಟಕ, ಗೋವಾ ಸರಕಾರಗಳ ಚರ್ಚೆ ಮತ್ತು ಒಪ್ಪಂದ:
  • ಒಂದು ಹಂತದಲ್ಲಿ ಗೋವಾ ಮತ್ತು ಕರ್ನಾಟಕ ಸರಕಾರಗಳ ನಡುವೆ ಜಲವಿದ್ಯುತ್ ಯೋಜನೆಗೆ ಒಪ್ಪಂದವಾಗಿತ್ತು. ದಿ. 10-9-1996 ರಂದು ಗೋವಾ ಸರಕಾರದ ನೀರಾವರಿ ಮಂತ್ರಿ ಹಾಗೂ ಕರ್ನಾಟಕದ ಸರಕಾರದ ನೀರಾವರಿ ಸಚಿವರ ಒಂದು ಸಭೆ ನಡೆದು ಜಲವಿದ್ಯುತ್ ಯೋಜನೆ ಮತ್ತು ಕಳಸಾ-ಹರತಾರ ನದಿಗಳಿಂದ ನೀರು ವರ್ಗಾವಣೆ ಕುರಿತು ಚರ್ಚೆಯಾಗಿ ಕಳಸಾ ಯೋಜನೆಯಿಂದ 1.5 ಟಿಎಂಸಿ ನೀರನ್ನು ಮಾಂಡೋವಿ ಯೋಜನೆಗೆ ಹರಿಸುವ ಕರಾರಿನೊಂದಿಗೆ ಈ ಯೋಜನೆಗೆ ಒಪ್ಪಂದವಾಯಿತು. ಆದರೆ 5-3-1997 ರಂದು ಗೋವಾ ಸರಕಾರ ನೀರು ವರ್ಗಾಯಿಸುವುದಕ್ಕೆ ಒಪ್ಪಿಗೆ ಆಗಿಲ್ಲ ಎಂದು ತಿಳಿಸಿತು.
  • ಗೋವಾದ ವಾದ:
  • (1) ಮಹದಾಯಿ ನೀರಿನ ಕೊರತೆಯನ್ನು ಅನುಭವಿಸುತ್ತಿರುವ ಒಂದು ಕಣಿವೆ ಪ್ರದೇಶವಾಗಿದೆ. ಆದ್ದರಿಂದ ನೀರಿನ ಕೊರತೆ ಇರುವ ಕಣಿವೆಯಿಂದ ನೀರನ್ನು ಬೇರೆಡೆಗೆ ವರ್ಗಾಯಿಸುವುದು ಸೂಕ್ತವಲ್ಲ.
  • (2) ಮಹದಾಯಿ ನದಿ ನೀರನ್ನು ಬೇರೆಡೆಗೆ ವರ್ಗಾಯಿಸಿದರೆ ಪಶ್ಚಿಮ ಘಟ್ಟದ ಪರಿಸರದ ಮೇಲೆ ತೀವ್ರ ಪರಿಣಾಮ

[]

ಒಂದು ವರ್ಷದಿಂದ ಸತತ ಚಳುವಳಿ

[ಬದಲಾಯಿಸಿ]
  • ಗೋವಾದ ಜೀವನದಿಯಾಗಿರುವ ಮಾಂಡೋವಿ-ಮಹದಾಯಿ ನೀರು ಹಂಚಿಕೆ ವಿವಾದಕ್ಕೆ ಮೂರು ದಶಕಗಳಿಗೂ ಹೆಚ್ಚಿನ ನೋವಿನ ಇತಿಹಾಸವಿದೆ. ಒಂದು ವರ್ಷದಿಂದ ಸತತ ಚಳುವಳಿ ನಡೆಯುತ್ತಿತ್ತು.
  • ಬೆಳಗಾವಿ ಜಿಲ್ಲೆ ಭೀಮ್ ಘಡ ದ ಪಶ್ಚಿಮ ಘಟ್ಟದಲ್ಲಿ ಹುಟ್ಟುವ ಮಾಂಡೋವಿ (ಮಹದಾಯಿ) ನದಿ 77 ಕಿ.ಮೀ ಹರಿಯಲಿದ್ದು ಈ ಪೈಕಿ ಕರ್ನಾಟಕದಲ್ಲಿ 29 ಕಿ.ಮೀ ಹಾಗೂ 52 ಕಿ.ಮೀ ಗೋವಾದಲ್ಲಿ ಹರಿಯುತ್ತದೆ. ಆದರೆ, 200 ಟಿಎಂಸಿ ನೀರು ವ್ಯರ್ಥವಾಗಿ ಅರಬ್ಬಿ ಸಮುದ್ರ ಸೇರುತ್ತಿದೆ.
  • ಸಮುದ್ರಕ್ಕೆ ವ್ಯರ್ಥವಾಗಿ ಸೇರುತ್ತಿರುವ 100 ಟಿಎಂಸಿಗೂ ಅಧಿಕ ನದಿ ನೀರಲ್ಲಿ 7.56 ಟಿಎಂಸಿ ಪಾಲು ಕೇಳಿದ ಕರ್ನಾಟಕಕ್ಕೆ ಮತ್ತೆ ಮತ್ತೆ ನಿರಾಶೆಯಾಗುತ್ತಿದೆ. 2016 ಜುಲೈ 27ರಂದು ಮಹಾದಾಯಿ ನ್ಯಾಯಾಧೀಕರಣ ಮಧ್ಯಂತರ ತೀರ್ಪು ಕೂಡಾ ಆಘಾತ ತಂದಿದೆ. ಕಾನೂನು ಹೋರಾಟ, ರೈತರ ಪ್ರತಿಭಟನೆ, ಸಾರ್ವಜನಿಕರ ಅಸಹನೆ ಮುಂದುವರೆದಿದೆ.

ಯೋಜನೆ ಮತ್ತು ಚಳುವಳಿ ಬೆಳೆದುಬಂದ ಬಗೆ

[ಬದಲಾಯಿಸಿ]
  • ಮಹದಾಯಿ ಯೋಜನೆಯನ್ನು 1978ರಲ್ಲಿ ಸಿದ್ಧ ಪಡಿಸಲಾಯಿತು. ಎಸ್.ಆರ್.ಬೊಮ್ಮಾಯಿ ಆಯೋಗದಿಂದ 1980ರಲ್ಲಿ ಯೋಜನೆ ಜಾರಿಗೆ ಸಲಹೆ ನೀಡಲಾಗಯಿತು. ಕರ್ನಾಟಕ ಸರ್ಕಾರ 1988ರಲ್ಲಿ ಅನುಮೋದನೆ ನೀಡಿತು. ಆದರೆ ಗೋವಾ ಸರ್ಕಾರ ಈ ಯೋಜನೆಯನ್ನು ವಿರೋಧಿಸಿದ್ದರಿಂದ ಯೋಜನೆಗೆ ತಡೆ ಬಿತ್ತು. ಸಿಎಂ ಆಗಿದ್ದ ಎಸ್.ಆರ್.ಬೊಮ್ಮಾಯಿ 1989ರಲ್ಲಿ ಗೋವಾ ಸಿಎಂ ಪ್ರತಾಪ್​ಸಿಂಗ್ ರಾಣೆ ಜತೆ ಮಾತುಕತೆ ನಡೆಸಿದ ವೇಳೆ 45 ಟಿಎಂಸಿ ನೀರು ಬಳಸಲು ರಾಣೆ ಅನುಮತಿ ನೀಡಿದರು. ಕಳಸಾ-ಬಂಡೂರಿ ನಾಲೆಗಳ ಯೋಜನೆಗೆ ರಾಜ್ಯ ಅರಣ್ಯ ಇಲಾಖೆಯಿಂದ 2000ರ ಜು.10ರಲ್ಲಿ ಪರಿಸರ ಕುರಿತು ಅನುಮತಿ ಪಡೆಯಲಾಯಿತು. ಕರ್ನಾಟಕ ಸರ್ಕಾರ 2000ರ ಆಗಸ್ಟ್ 22ರಲ್ಲಿ ಬಂಡೂರಿ ನಾಲಾ ಯೋಜನೆ ಅಂದಾಜು ವೆಚ್ಚವನ್ನು 49.20 ಕೋಟಿ ರೂ.ಗೆ ಸಿದ್ಧಪಡಿಸಿತು. ಕಳಸಾ ನಾಲಾ ಯೋಜನೆ ಅಂದಾಜು ವೆಚ್ಚ 44.78 ಕೋಟಿ ರೂ.ಗೆ ಆಡಳಿತಾತ್ಮಕ ಒಪ್ಪಿಗೆಯನ್ನೂ ನೀಡಲಾಯಿತು. ಕೇಂದ್ರದ ಮಂಜೂರಾತಿಯನ್ನು 2002ರಲ್ಲಿ ಪಡೆದ ಕರ್ನಾಟಕ ಸರ್ಕಾರ ನಾಲಾಯೋಜನೆಗೆ ಕಾರ್ಯಪ್ರವೃತ್ತವಅಯಿತು. 2002ರ ಏಪ್ರಿಲ್ 30ರಲ್ಲಿ ಕಳಸಾ ಬಂಡೂರಿ ಕಣಿವೆಯಿಂದ 7.56 ಟಿಎಂಸಿ ನೀರನ್ನು ಮಲಪ್ರಭಾ ನದಿಗೆ ಹರಿಸುವ ಕರ್ನಾಟಕದ ಯೋಜನೆಗೆ ಭಾರತ ಸರ್ಕಾರದ ಜಲಸಂಪನ್ಮೂಲ ಸಚಿವಾಲಯವು ತಾತ್ವಿಕ ಒಪ್ಪಿಗೆ ಕೊಟ್ಟಿತು.
  • ಆದರೆ ಗೋವಾ ಸರ್ಕಾರ 2002ರ ಮೇ 5ರಂದು ಈ ಯೋಜನೆಗೆ ತಕರಾರು ಅರ್ಜಿಯನ್ನು ಕೇಂದ್ರಕ್ಕೆ ಸಲ್ಲಿಸಿತು. ಮತ್ತು ನ್ಯಾಯಾಧಿಕರಣ ರಚಿಸಲು ಕೇಂದ್ರ ಜಲಸಂಪನ್ಮೂಲ ಸಚಿವರಿಗೆ 2002ರ ಜುಲೈ9ರಲ್ಲಿ ಗೋವಾ ಸರ್ಕಾರ ಪತ್ರಬರಯಿತು. 2002ರ ಸೆಪ್ಟೆಂಬರ್ 19ರಂದು ಯೋಜನೆ ಅನುಷ್ಠಾನಕ್ಕೆ ಕೇಂದ್ರ ಜಲ ಆಯೋಗ ನೀಡಿದ್ದ ತಾತ್ವಿಕ ಒಪ್ಪಿಗೆಗೆ, ಜಲ ಆಯೋಗದಿಂದಲೇ ತಡೆಯಾಜ್ಜ್ಞೆನೀಡಿತು. ಮಹದಾಯಿ ನೀರಿನ ವಿವಾದ ಕುರಿತು ರ್ಚಚಿಸಲು ದೆಹಲಿಯಲ್ಲಿ ಕೇಂದ್ರ ಜಲಸಂಪನ್ಮೂಲ ಸಚಿವರ ನೇತೃತ್ವದಲ್ಲಿ 2002ರ ಡಿಸೆಂಬರ್ 20ರಂದು ಗೋವಾ ಹಾಗೂ ಕರ್ನಾಟಕ ಸರ್ಕಾರಗಳ ಮಂತ್ರಿಗಳ ಸಭೆ ಕರೆಯಲಾಯಿತು. ಆದರೆ ಅದು ಒಪ್ಪಂದಕ್ಕೆ ಬರಲು ವಿಫಲವಾಯಿತು.
  • ಉಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜಲಸಂಪನ್ಮೂಲ ಸಚಿವ ಕೆ.ಎಸ್. ಈಶ್ವರಪ್ಪ ಅವರಿಂದ 2006ರ ಸೆಪ್ಟೆಂಬರ್ 22ರಂದು ಬೆಳಗಾವಿ ಜಿಲ್ಲೆ ಕಣಕುಂಬಿಯಲ್ಲಿ ಈ ಯೋಜನೆ ಆರಂಭಿಸಲು ಭೂಮಿಪೂಜೆಯನ್ನು ಮಾಡಿದರು. ಕರ್ನಾಟಕ ಸರ್ಕಾರದ ಯೋಜನೆಗೆ ತಡೆ ನೀಡುವಂತೆ 2006ರ ನವೆಂಬರ್ 15ರಲ್ಲಿ ಗೋವಾ ಸರ್ಕಾರವು ಸವೋಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತು. ಸವೋಚ್ಚ ನ್ಯಾಯಾಲಯವು 2006ರ ನವೆಂಬರ್ 27ರಲ್ಲಿ ಕಾಮಗಾರಿಗೆ ತಡೆ ನೀಡಲು ನಿರಾಕರಿಸಿತು. ಕೇಂದ್ರ ಇದರ ತೀರ್ಮಾನಕ್ಕೆ ಮಹದಾಯಿ ಜಲ ವಿವಾದ ನ್ಯಾಯಾಧಿಕರಣವನ್ನು 2010ರಲ್ಲಿ ನೇಮಕಮಾಡಿತು. ಮಹದಾಯಿ ಜಲ ವಿವಾದ ನ್ಯಾಯಾಧಿಕರಣ ತಂಡವು 2014ರಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಭೇಟಿ ನೀಡಿತು. 2015 ಜೂನ್​ನಿಂದ ಮತ್ತೆ ಜನರು ಉಗ್ರ ಹೋರಾಟ ಆರಂಭಿಸಿದರು. 2015 ಜೂನ್​ನಿಂದ 2016 ಈ ಜುಲೈವರೆಗೆ ಗದಗ ನರಗುಂದ [[ಧಾರವಾಡ]ದ ನವಲಗುಂದ ಸೇರಿದಂತೆ ರೈತರ ಪ್ರತಿಭಟನೆ ಸತತವಾಗಿ ಉಪವಾಸ, ಧರಣಿ, ಮರವಣಿಗೆ ಹೀಗೆ ಸಂಕಷ್ಟ ಪ್ರದರ್ಶನ ವರ್ಷವಾಯಿತು. ಮಟ್ಟಣ್ಣನವರ್ ಅವರು ನಾಲೆ ಒಡೆಯುವ ಬೆದರಿಕೆಯನ್ನೂ ಹಾಕಿದರು. ಅಂತಿಮವಾಗಿ 2016 ಜುಲೈ 27 ರಂದು ನ್ಯಾಯಾಧೀಕರಣವು ಕರ್ನಾಟಕದ ಮಧ್ಯಂತರ ಅರ್ಜಿಯನ್ನು ತಿರಸ್ಕಾರಿಸಿ ತೀರ್ಪು ನೀಡಿತು. ಅದರ ಫಲವಾಗಿ ಕರ್ನಾಟಕಾದ್ಯಂತ ಉಗ್ರ ಪ್ರತಿಭಟನೆ, ಕೆಲವೆಡೆ ಹಿಂಸಾತ್ಮಕ,ವಿಧ್ವಂಸಕ ಪ್ರತಭಟನೆಗಳೂನೆಡೆದವು. ಜುಲೈ 28ರಂದು ಕರ್ನಾಟಕ ಬಂದ್ ಮಾಡುವ ಘೋಷನೆಯನ್ನು ಚಳುವಳಿಕಾರರು ಮಾಡಿದರು.[][][]

ನ್ಯಾಯಾಧಿಕರಣ:ಕರ್ನಾಟಕ ಸರ್ಕಾರದ ಬೇಡಿಕೆ ತಿರಸ್ಕರಿಸಿ ತೀರ್ಪು

[ಬದಲಾಯಿಸಿ]
  • ೨೭-೭-೨೦೧೬
  • ಮಲಪ್ರಭಾ ಕಣಿವೆಯಲ್ಲಿ ಉಂಟಾಗಿರುವ ನೀರಿನ ಕೊರತೆಯನ್ನು ಮಹದಾಯಿ ಮೂಲಕ ನೀಗಿಸಲು ಕರ್ನಾಟಕ ನಡೆಸಿದ ಕಾನೂನು ಹೋರಾಟದಲ್ಲಿ, ಕರ್ನಾಟಕದ ಅರ್ಜಿಯನ್ನು ನ್ಯಾಯಾಧಿಕರಣ ತಿರಸ್ಕರಿಸಿದೆ. ಮಹದಾಯಿ ನದಿಯಿಂದ 7 ಟಿಎಂಸಿ ನೀರನ್ನು ಏತ ನೀರಾವರಿ ಮೂಲಕ ಮಲಪ್ರಭಾಕ್ಕೆ ಹರಿಸಬೇಕೆಂಬ ಕರ್ನಾಟಕದ ಮಧ್ಯಂತರ ಅರ್ಜಿಯನ್ನು ನ್ಯಾ.ಜೆ.ಎಂ. ಪಾಂಚಾಲ್ ನೇತೃತ್ವದ ತ್ರಿಸದಸ್ಯ ನ್ಯಾಯಾಧಿಕರಣ, ಈಗ ಆ ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ ಎಂಬ ಕಾರಣ ನೀಡಿ ಮತ್ತು ಬೇಡಿಕೆಯಲ್ಲಿ ಇತರ ದೋಷಗಳಿವೆ ಎಂದು ಅರ್ಜಿಯನ್ನು ವಜಾಗೊಳಿಸಿದೆ.
  • ಮಹಾದಾಯಿ ನದಿಯಿಂದ 7 ಟಿಎಂಸಿ ಅಡಿ ನೀರನ್ನು ಕಳಸಾ– ಬಂಡೂರಿ ನಾಲೆಗಳ ಮೂಲಕ ಮಲಪ್ರಭಾ ನದಿಗೆ ಹರಿಸಲು ಅನುಮತಿ ನೀಡುವಂತೆ ಕಳೆದ ಡಿಸೆಂಬರ್‌ 1ರಂದು ರಾಜ್ಯ ಸರ್ಕಾರ ಮಧ್ಯಂತರ ಅರ್ಜಿ ಸಲ್ಲಿಸಿತ್ತು. ನ್ಯಾಯಮೂರ್ತಿ ವಿನಯ್‌ ಮಿತ್ತಲ್‌ ಹಾಗೂ ಪಿ.ಎಸ್‌. ನಾರಾಯಣ ಅವರನ್ನು ಒಳಗೊಂಡ ಪೀಠದೆದುರು ಹಿರಿಯ ವಕೀಲ ಫಾಲಿ ನಾರಿಮನ್‌ ಕರ್ನಾಟಕದ ಪರ ವಾದ ಮಂಡಿಸಿದ್ದರು.
  • ಮಹಾದಾಯಿಯಲ್ಲಿ ನೈಸರ್ಗಿಕವಾಗಿ ಹರಿಯುವ ನೀರನ್ನು ಪಡೆಯಲು ಕರ್ನಾಟಕಕ್ಕೆ ಅವಕಾಶ ನೀಡಬಾರದು ಎಂದು ಗೋವಾ ಪರ ವಕೀಲ ಆತ್ಮಾರಾಮ ನಾಡಕರ್ಣಿ ವಾದಿಸಿದ್ದರು.
  • ತಿರಸ್ಕಾರಕ್ಕೆ ಕಾರಣ: ಮಹಾದಾಯಿ ಕಣಿವೆ ಪ್ರದೇಶದ ಮೂರು ಪ್ರತ್ಯೇಕ ಸ್ಥಳಗಳಿಂದ 7 ಟಿಎಂಸಿ ಅಡಿ ನೀರನ್ನು ಎತ್ತುವುದಾಗಿ ಕರ್ನಾಟಕ ತಿಳಿಸಿದೆ. ಆದರೆ, ಇದರಿಂದ ಪರಿಸರಕ್ಕೆ ಪ್ರತಿಕೂಲ ಪರಿಣಾಮ ಉಂಟಾಗಲಿದ್ದು, ಜೀವವೈವಿಧ್ಯದ ಸಮತೋಲನದ ಮೇಲೂ ದುಷ್ಪರಿಣಾಮ ಬೀರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ತಿರಸ್ಕರಿಸಲು ಪ್ರಮುಖ ಕಾರಣಗಳು

[ಬದಲಾಯಿಸಿ]
  • ತೀರ್ಪಿನಲ್ಲಿರುವ ಕಾರಣಗಳು:
  • 1. ಬೃಹತ್ ಪ್ರಮಾಣದ ಶಾಶ್ವತ ಕಾಮಗಾರಿಗಳು ಮತ್ತು ನದಿಗೆ ಅಡ್ಡವಾಗಿ ಅಣೆಕಟ್ಟನ್ನು ನಿರ್ಮಾಣ ಮಾಡದೆ ನದಿಯಿಂದ 7 ಟಿಎಂಸಿ ನೀರನ್ನು ತೆಗೆಯಲು ಸಾಧ್ಯವಿಲ್ಲ. ಅಣೆಕಟ್ಟುಗಳನ್ನು ತಾತ್ಕಾಲಿಕ ಕಾಮಗಾರಿ ಎಂದು ಪರಿಗಣಿಸಲು ಸಾಧ್ಯವಿಲ್ಲ. ಅಲ್ಲದೆ, ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಾಣ ಮಾಡಿದರೆ ಅಲ್ಲಿ ಸಹಜವಾಗಿಯೇ ನೀರು ಸಂಗ್ರಹಗೊಳ್ಳುತ್ತದೆ. ಶಾಶ್ವತ ಕಾಮಗಾರಿ ಬೇಕಾಗಿಲ್ಲ ಎಂಬ ಕರ್ನಾಟಕದ ವಾದ ಒಪ್ಪುವುದು ಕಷ್ಟ.
  • 2. 1974ರ ಪರಿಸರ ಮಾಲಿನ್ಯ ತಡೆ ಮತ್ತು ನಿಯಂತ್ರಣ (ದ ವಾಟರ್ ಆಕ್ಟ್ 1974), 1986ರ ಪರಿಸರ ರಕ್ಷಣಾ ಕಾಯ್ದೆ, ವನ್ಯಜೀವಿ ಸಂರಕ್ಷಣೆ ಮತ್ತು ಜೀವ ವೈವಿಧ್ಯಗಳ ರಕ್ಷಣಾ ಕಾಯ್ದೆಗಳ ಪ್ರಕಾರ ಇಂಥಹ ಯೋಜನೆಗಳಿಗೆ ಕೇಂದ್ರ ಸರ್ಕಾರ ಅಥವಾ ಯೋಜನಾ ಆಯೋಗ ಸೇರಿದಂತೆ ಹಸಿರು ನ್ಯಾಯಾಧಿಕರಣದ ಅನುಮತಿ ಬೇಕು. ಆದರೆ ಕರ್ನಾಟಕ ಇಂಥ ಯಾವುದೇ ಅನುಮತಿಗಳನ್ನು ಪಡೆದುಕೊಂಡಿಲ್ಲ.
  • 3. ಹೆಚ್ಚುವರಿ ನೀರು ನಿರರ್ಥಕವಾಗಿ ಸಮುದ್ರ ಸೇರುತ್ತಿದೆ ಎಂಬ ಕರ್ನಾಟದ ವಾದವನ್ನು ಪರಿಗಣಿಸಲು ಸಾಧ್ಯವಿಲ್ಲ. ಏಕೆಂದರೆ ವೈಜ್ಞಾನಿಕವಾಗಿ ಸಮುದ್ರದ ನೀರು ಕ್ರಮೇಣವಾಗಿ ಆವಿಯಾಗುತ್ತಲೇ ಇರುತ್ತದೆ. ಅದರಿಂದ ಮಳೆ ಬರುತ್ತದೆ.ದೊಡ್ಡಮಟ್ಟದ ಏತ ನೀರಾವರಿಗೆ ಸಮ್ಮತಿ ನೀಡಿದಲ್ಲಿ ಮಹದಾಯಿ ಕಣಿವೆ ವ್ಯಾಪ್ತಿಯ ಪರಿಸರದ ಮೇಲೆ ಅಗಾಧ ಪರಿಣಾಮ ಬೀರಲಿದೆ ಮತ್ತು ನೈಸರ್ಗಿಕ ಅಸಮತೋಲನಕ್ಕೆ ನಾವೇ ಅವಕಾಶ ನೀಡಿದಂತಾಗುತ್ತದೆ.
  • 4. ಇನ್ನು ಕರ್ನಾಟಕ ನೀರನ್ನು ತೆಗೆಯಲು ಗುರುತಿಸಿರುವ ಮಹದಾಯಿಯ ಉದ್ದೇಶಿತ 3 ಕಣಿವೆ ಪ್ರದೇಶಗಳಲ್ಲಿ ಹೆಚ್ಚುವರಿ ನೀರಿನ ಲಭ್ಯತೆ ಇದೆ ಎಂಬುದು ಸಾಬೀತಾಗಿಲ್ಲ. ಮಹದಾಯಿ ಕಣಿವೆಯ 3 ಪ್ರದೇಶಗಳ ಕೆಳ ಭಾಗದ ಮೇಲೆ ಅದು ಯಾವ ರೀತಿಯ ಪರಿಣಾಮಗಳನ್ನು ಬೀರಲಿದೆ ಎಂಬುದನ್ನು ಕರ್ನಾಟಕ ಈ ನ್ಯಾಯಾಧಿಕರಣಕ್ಕೆ ವಿವರಿಸಿಲ್ಲ.
  • 5. 2015ರಲ್ಲಿ ಸಲ್ಲಿಸಲಾಗಿದ್ದ ಮಧ್ಯಂತರ ಅರ್ಜಿಯಲ್ಲಿ ಮಲಪ್ರಭಾ ಕಣಿವೆ ಜನರ ಕುಡಿಯುವ ಮತ್ತು ನೀರಾವರಿ ಉದ್ದೇಶಗಳಿಗೆ 7 ಟಿಎಂಸಿ ನೀರನ್ನು ಬಳಸಿಕೊಳ್ಳಲಾಗುವುದು ಎಂದು ದಾಖಲಿಸಲಾಗಿತ್ತು. ಆದರೆ, ನಂತರ ಸಲ್ಲಿಸಲಾದ ಪರಿಷ್ಕೃತ ಅರ್ಜಿಯಲ್ಲಿ ಈ ಪ್ರಮುಖ ಅಂಶಗಳನ್ನು ದಾಖಲಿಸಿಲ್ಲ.7 ಟಿಎಂಸಿ ನೀರನ್ನು ಎತ್ತಲು ಬೃಹತ್ ಗಾತ್ರದ ಕಾಮಗಾರಿ, ಅತಿ ಭಾರದ ಪಂಪ್​ಸೆಟ್​ಗಳು, ಭಾರಿ ಸುತ್ತಳತೆಯ ಮತ್ತು ಉದ್ದದ ಪೈಪ್​ಲೈನ್​ಗಳು ಬೇಕು. ಆದರೆ ಏತ ನೀರಾವರಿ ಯೋಜನೆ ಕಾಮಗಾರಿಗಳ ಬಗ್ಗೆ ಯಾವುದೇ ನಿಖರ ಮಾಹಿತಿ ನೀಡಿಲ್ಲ.
  • 6. ಕೃಷ್ಣಾ ಜಲವಿವಾದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಮತ್ತು ಕಣಿವೆ ರಾಜ್ಯಗಳ ಒಪ್ಪಿಗೆ ಇಲ್ಲದೆ ರಾಜ್ಯಗಳು ಯೋಜನೆಗಳನ್ನು ಕೈಗೆತ್ತಿಕೊಳ್ಳುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಹೀಗಾಗಿ, ಅಗತ್ಯ ಪರಿಸರ ಸಮ್ಮತಿ, ಯೋಜನಾ ಆಯೋಗದ ಅನುಮತಿ ಸೇರಿದಂತೆ ವಿವಿಧ ಕಾಯ್ದೆಗಳಲ್ಲಿ ಹೇಳಲಾಗಿರುವ ಅಂಶಗಳನ್ನು ಪಾಲಿಸುವ ಮುನ್ನವೇ ನ್ಯಾಯಾಧಿಕರಣ 7 ಟಿಎಂಸಿ ನೀರನ್ನು ಎತ್ತಲು ಕರ್ನಾಟಕಕ್ಕೆ ಅವಕಾಶ ನೀಡುವುದು ಅಸಾಧ್ಯ.
  • 7. ನಿರ್ದಿಷ್ಟ ತಿಂಗಳಲ್ಲಿ ನೀರಿನ ಕೊರತೆ ಉಂಟಾದರಷ್ಟೇ ಮಹದಾಯಿಯಿಂದ ನೀರನ್ನು ಎತ್ತಲಾಗುವುದು ಎಂದು ಕರ್ನಾಟಕ ಹೇಳಿದೆ. ಆದರೆ ನೀರಿನ ಕೊರತೆ, ಒಳ ಹರಿವಿನ ಪ್ರಮಾಣದ ಕುರಿತ ಮಾಹಿತಿ ತಿಂಗಳ ಕೊನೆಯಲ್ಲಿ ಗೊತ್ತಾಗುವುದೇ ವಿನಃ ಆರಂಭದಲ್ಲಲ್ಲ. ಹೀಗಾಗಿ ಕರ್ನಾಟಕದ ಪ್ರಸ್ತಾವಿತ ಯೋಜನೆ ಅನುಷ್ಠಾನ ಯೋಗ್ಯವಾಗಿದೆ ಎಂದು ನಮಗನಿಸುತ್ತಿಲ್ಲ. ಕರ್ನಾಟಕದ ಬೇಡಿಕೆಗಳನ್ನು ಪುರಸ್ಕರಿಸುವುದು ನಮಗೆ ಸರಿ ಕಾಣುವುದಿಲ್ಲ, ಎಂದು ನ್ಯಾಯಾಧಿಕರಣ ಅಭಿಪ್ರಾಯಪಟ್ಟಿದೆ.

[]*ತೀರ್ಪಿನ ಮುಖ್ಯಾಂಶಗಳು:[[೮]]

ಕರ್ನಾಟಕದ ವಕೀಲರ ಅಭಿಪ್ರಾಯ

[ಬದಲಾಯಿಸಿ]
  • ಮಹಾದಾಯಿ ನೀರಿಗಾಗಿ ರಾಜ್ಯದ ಪರ ವಾದ ಮಾಡುತ್ತಿರುವ ಕಾನೂನು ತಜ್ಞರ ತಂಡದಲ್ಲಿ ಕನ್ನಡಿಗ ಮೋಹನ್‌ ಕಾತರಕಿ ಸಹ ಇದ್ದಾರೆ. ಕಳೆದ 30 ವರ್ಷಗಳಿಂದ ಸುಪ್ರೀಂ ಕೋರ್ಟ್‌ನಲ್ಲಿ ವಕೀಲ ವೃತ್ತಿಯನ್ನು ನಡೆಸುತ್ತಿರುವ ಅವರು ಈ ಹಿಂದೆ ಕಾವೇರಿ ಮತ್ತು ಕೃಷ್ಣಾ ಜಲ ವಿವಾದಗಳ ವಿಚಾರಣೆಯಲ್ಲೂ ಕರ್ನಾಟಕದ ಪರ ವಾದ ಮಂಡಿಸಿದ್ದಾರೆ.
  • ಮಹಾದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ನ್ಯಾಯಮಂಡಳಿ ಅವಲೋಕಿಸಿರುವ ರೀತಿ ಅತ್ಯಂತ ಆಶ್ಚರ್ಯಕರವಾಗಿದೆ ಎಂದು ಕರ್ನಾಟಕದ ಪರ ವಕೀಲ ಮೋಹನ್‌ ಕಾತರಕಿ ತಿಳಿಸಿದ್ದಾರೆ.
  • 2003ರಲ್ಲಿ ಕೇಂದ್ರ ಜಲ ಆಯೋಗ ಸಮೀಕ್ಷೆ ನಡೆಸಿ ಸಲ್ಲಿಸಿರುವ ವರದಿಯ ಪ್ರಕಾರ ಮಹಾದಾಯಿ ನದಿಯ 199.6 ಟಿಎಂಸಿ ಅಡಿ ನೀರು ವಾರ್ಷಿಕವಾಗಿ ವ್ಯರ್ಥವಾಗಿ ಸಮುದ್ರ ಸೇರುತ್ತಿದೆ. ಆದರೆ, ಇದನ್ನು ಗಮನಿಸದ ನ್ಯಾಯಮಂಡಳಿಯು ಅನುಮತಿ, ಯೋಜನಾ ವರದಿ ಎಂಬ ಸಣ್ಣಪುಟ್ಟ ವಿಷಯಗಳನ್ನು ಮುಂದಿರಿಸಿ ತಗಾದೆ ತೆಗೆದಿರುವುದು ಸೂಕ್ತವಲ್ಲ ಎಂದು ಅವರು ಹೇಳಿದ್ದಾರೆ.
  • 1956ರ ಅಂತರರಾಜ್ಯ ಜಲ ವಿವಾದ ಕಾಯ್ದೆ ಪ್ರಕಾರ ರಚಿಸಲಾಗಿರುವ ನ್ಯಾಯಮಂಡಳಿಯು ನೀರಿನ ಬೇಡಿಕೆ ಕುರಿತು ಗಮನಹರಿಸಬೇಕಿತ್ತು. ನೀರು ಹಂಚಿಕೆಗೆ ಅನುಮೋದನೆ ದೊರೆಯದೆಯೇ ಯೋಜನೆಗೆ ಅನುಮತಿಯನ್ನು ಪಡೆಯುವುದು ಹೇಗೆ ಎಂಬುದನ್ನು ಪರಿಗಣಿಸಬೇಕಿತ್ತು ಎಂದಿರುವ ಅವರು, ನ್ಯಾಯಮಮಡಳಿಯ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.[]
  • ಮಹಾದಾಯಿ ವಿವಾದಕ್ಕೆ ಸಂಬಂಧಿಸಿದಂತೆ 1970ರಿಂದ 2010ರವರೆಗೆ ಮಾತುಕತೆಗಳು ನಡೆದಿವೆ. ಕೇಂದ್ರ ಸರ್ಕಾರ, ಸಿಡಬ್ಲ್ಯುಸಿ, ರಾಷ್ಟ್ರೀಯ ಜಲ ಅಭಿವೃದ್ಧಿ ಏಜೆನ್ಸಿಗಳು (ಎನ್‌ಡಬ್ಲ್ಯುಡಿಎ) ನಡೆಸಿದ ಯತ್ನ ವಿಫಲವಾದ ನಂತರವೇ ನ್ಯಾಯಮಂಡಳಿ ರಚಿಸಲಾಗಿದೆ.
  • ವ್ಯಾಜ್ಯ ಬಗೆಹರಿಸಬೇಕಾದರೆ ಅದಕ್ಕೆ ಕಾನೂನು ಸೂತ್ರ ಅಗತ್ಯ. ಈ ಕಾನೂನು ಸೂತ್ರಕ್ಕೆ ‘ಇಕ್ವಿಟೆಬಲ್‌ ಅಪೋರ್ಷನ್‌ಮೆಂಟ್‌’ ಎಂದು ಕರೆಯುತ್ತಾರೆ.ಈ ಸೂತ್ರವು ಅಂತರರಾಷ್ಟ್ರೀಯ ಮಟ್ಟದ ವಿವಾದದ ಸಂದರ್ಭವೂ ಬಳಕೆಯಾಗಿತ್ತು. ಅಮೆರಿಕದ ಸುಪ್ರೀಂ ಕೋರ್ಟ್‌ ಸಹ ಈ ಸೂತ್ರವನ್ನು ಅನುಸರಿಸಿ ವಿವಾದ ಬಗೆಹರಿಸಿದೆ. ಮಾತುಕತೆ ಮೂಲಕವೇ ವ್ಯಾಜ್ಯ ಬಗೆಹರಿಸಿಕೊಳ್ಳಬೇಕಾದರೆ ರಾಜಕೀಯ ಸೂತ್ರ ಇರಬೇಕು. ಒಕ್ಕೂಟ ವ್ಯವಸ್ಥೆಯಲ್ಲಿ ಜಲ ವಿವಾದಗಳನ್ನು ಸೌಹಾರ್ದಯುತವಾಗಿ ಬಗೆಹರಿಸಲು ಕೇಂದ್ರ ಸರ್ಕಾರ ಇಡೀ ಕುಟುಂಬದ ಮುಖ್ಯಸ್ಥನಾಗಿ ಮಧ್ಯಸ್ಥಿಕೆ ವಹಿಸುವ ಅಧಿಕಾರ ಹೊಂದಿದೆ. ಕೇಂದ್ರದ ಮಧ್ಯಸ್ಥಿಕೆಗೆ ಆಯಾ ರಾಜ್ಯಗಳ ಒಪ್ಪಿಗೆ ಅಗತ್ಯ. ಅದನ್ನು ಹೇರುವುದು ಅಸಾಧ್ಯ.
  • ಕಾನೂನು ತಂಡ ವಿಫಲವಾಗಿದೆ ಎಂಬ ಮಾತಿಗೆ ನನ್ನ ಸಮ್ಮತಿ ಇಲ್ಲ. ಇದು ತಪ್ಪು ತಿಳಿವಳಿಕೆ. 1924ರ ಸಂಧಾನದ ಪ್ರಕಾರ ಮೈಸೂರು ಸಂಸ್ಥಾನ 380 ಟಿಎಂಸಿ ಅಡಿ ನೀರನ್ನು ಮದ್ರಾಸ್‌ಗೆ ಕೊಡುವ ಜವಾಬ್ದಾರಿ ಹೊತ್ತಿತ್ತು. ಆದರೆ, ಕಾವೇರಿ ನ್ಯಾಯಮಂಡಳಿಯು ಈ ಜವಾಬ್ದಾರಿಯನ್ನು 192 ಟಿಎಂಸಿ ಅಡಿಗೆ ಇಳಿಸಿತು. ಇನ್ನೂ ಹೆಚ್ಚಿನ ಪ್ರಮಾಣದ ಇಳಿಕೆ ಆಗಬೇಕು ಎಂಬುದು ನಮ್ಮ ಆಶಯ. ಈ ವಿಷಯ ಸುಪ್ರೀಂ ಕೋರ್ಟ್‌ನೆದುರು ಇದೆ. ಕೃಷ್ಣಾ ನದಿಗೆ ಸಂಬಂಧಿಸಿದಂತೆ ಅಣೆಕಟ್ಟೆಯ ಎತ್ತರ ಹೆಚ್ಚಿಸಲು ಅವಕಾಶ ದೊರೆತಿರುವುದು ಸಣ್ಣ ಸಾಧನೆಯೇನಲ್ಲ.ಮಹಾದಾಯಿ ವಿಷಯದಲ್ಲಿ ನಾರಿಮನ್‌ ನೇತೃತ್ವದ ಕಾನೂನು ತಜ್ಞರ ತಂಡ ಕರ್ನಾಟಕದ ಪರ ವಾದ ಮಂಡಿಸುತ್ತಿದೆ. ಹಾಗಾಗಿ ವಾದ ಅಸಮರ್ಪಕ ಎಂಬ ಆರೋಪಕ್ಕೆ ಅರ್ಥವಿಲ್ಲ.
  • ಇನ್ನೆರಡು ವರ್ಷಗಳಲ್ಲೇ ನ್ಯಾಯ ಮಂಡಳಿಯ ಅಂತಿಮ ತೀರ್ಪು ಬರಲಿದೆ. ಮಧ್ಯಂತರ ಅರ್ಜಿ ಸಲ್ಲಿಸಲು ಸಾಕಷ್ಟು ಅವಕಾಶಗಳಿದ್ದರೂ ಮಧ್ಯಂತರ ಅರ್ಜಿ ಬೇಡ’ ಎಂದು ನಾರಿಮನ್‌ ಹೇಳಿದ್ದರು. ರಾಜ್ಯ ಸರ್ಕಾರವು ಸರ್ವ ಪಕ್ಷಗಳ ಸಭೆ ನಡೆಸಿ ಕೈಗೊಂಡ ನಿರ್ಧಾರದ ಪ್ರಕಾರ ನಾವು ಮಧ್ಯಂತರ ಅರ್ಜಿ ಸಲ್ಲಿಸಿದೆವು. ಜಗತ್ತಿನ ಎಲ್ಲ ನದಿ ನೀರು ಹಂಚಿಕೆ ವಿವಾದ, ಹಂಚಿಕೆ ಕುರಿತು (ಇಂಡಸ್‌, ನೈಲ್‌, ಕೊಲರಾಡೊ ಮತ್ತಿತರ ನದಿ ನೀರು ಹಂಚಿಕೆ) ಅಧ್ಯಯನ ನಡೆಸಿ ಸಮರ್ಥ ವಾದ ಮಂಡಿಸಿದ್ದರೂ ದುರದೃಷ್ಟವಶಾತ್‌ ನಮ್ಮ ವಿರುದ್ಧ ತೀರ್ಪು ಹೊರಬಿದ್ದಿದೆ.
  • ನಾವು ನಮ್ಮ ಹಕ್ಕನ್ನು ಪ್ರತಿಪಾದಿಸುತ್ತಿದ್ದೇವೆ. ಆದರೆ, ಕಾನೂನಿನ ಪ್ರಕಾರ ಪ್ರತ್ಯೇಕ ಕಣಿವೆಯಿಂದ ನೀರನ್ನು ಪಡೆಯಬೇಕಾದರೆ ಕೆಲವು ಅಡೆತಡೆಗಳಿವೆ. ಮೊದಲಿಗೆ ಮಹಾದಾಯಿ ಕಣಿವೆಯಲ್ಲಿ ಹೆಚ್ಚುವರಿ ನೀರು ಇರಬೇಕು. ಮಲಪ್ರಭಾದಲ್ಲಿ ಕೊರತೆ ಇರಬೇಕು.ನೀರೆತ್ತಲು ಶಾಶ್ವತ ನಿರ್ಮಾಣ ಕಾರ್ಯ ಕೈಗೊಂಡರೂ, ಕೊನೆಗೆ ನೀರೇ ಇಲ್ಲದಿದ್ದರೆ ನಷ್ಟ ಕರ್ನಾಟಕಕ್ಕೇ ಆಗುತ್ತದೆ. ನ್ಯಾಯಮಂಡಳಿಯು ಇಬ್ಬರ ನಡುವಿನ ಜಗಳ ಬಗೆಹರಿಸುವ ಕೆಲಸ ಮಾಡಬೇಕು. ಆದರೆ, ಅವರು ಮಾಹಿತಿ ಪರಿಪೂರ್ಣವಲ್ಲ ಎಂಬ ಪ್ರಶ್ನೆ ಎತ್ತುವುದು ಸೂಕ್ತವಲ್ಲ. ಈ ಹಿಂದೆ ಯಾವುದೇ ನ್ಯಾಯಮಂಡಳಿ ಇಂತಹ ಪ್ರಶ್ನೆಗಳನ್ನು ಎತ್ತಿಲ್ಲ.
  • ನ್ಯಾಯಮಂಡಳಿಗಳ ಅಧಿಕಾರವನ್ನು ಪ್ರಶ್ನಿಸುವ ಅಧಿಕಾರ ಸುಪ್ರೀಂ ಕೋರ್ಟ್‌ಗೆ ಇದೆ. ಅವರ ತೀರ್ಪನ್ನು ಪರಾಮರ್ಶಿಸುವ ಸಂವಿಧಾನಾತ್ಮಕವಾದ ಹಕ್ಕು ಹೊಂದಿರುವ ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆಯನ್ನೂ ವಹಿಸಬಹುದಾಗಿದೆ. ಕಾಯ್ದೆಯ ಪ್ರಶ್ನೆ ಬಂದರೆ ಅದು ನ್ಯಾಯಮಂಡಳಿಗೆ ಸಂಬಂಧಿಸಿದ್ದು. ಕಾನೂನಿನ ಪ್ರಶ್ನೆ ಎದುರಾದಾಗ ಸುಪ್ರೀಂ ಕೋರ್ಟ್‌ ಮಧ್ಯಸ್ಥಿಕೆ ವಹಿಸಬಹುದು. ಅಂತೆಯೇ ಕಾನೂನಾತ್ಮಕವಾದ ಎಲ್ಲ ದೋಷಗಳನ್ನೂ ಸುಪ್ರೀಂ ಕೋರ್ಟ್ ಅವಲೋಕಿಸಬಹುದಾಗಿದೆ.[]

ಕರ್ನಾಟಕದ ಪಾಲು

[ಬದಲಾಯಿಸಿ]
  • ೨೯-೭-೨೦೧೬:
  • ಮಹಾದಾಯಿ ನದಿಯಲ್ಲಿ ಕರ್ನಾಟಕದ ಪಾಲು 24.19 ಟಿಎಂಸಿ ಅಡಿ. ನ್ಯಾಯಸಮ್ಮತ ಪಾಲನ್ನು ನ್ಯಾಯಮಂಡಳಿ ಹಂಚಿಕೆ ಮಾಡಲೇಬೇಕು.ನ್ಯಾಯಮಂಡಳಿ ರಚನೆಯಾಗಿ ಆರು ವರ್ಷ ಕಳೆದಿದೆ. ಈ ವರ್ಷದ ಆಗಸ್ಟ್‌ 20ಕ್ಕೆ ನ್ಯಾಯಮಂಡಳಿ ಅವಧಿ ಮುಗಿಯಲಿದೆ. ಅಗತ್ಯವಾದರೆ ಕಾಲಾವಧಿ ವಿಸ್ತರಣೆ ಮಾಡಬಹುದು. ಅಲ್ಲಿಯವರೆಗೂ ರೈತರು ಕಾಯಬೇಕು.
  • ನ್ಯಾಯಮಂಡಳಿ ರಚನೆಯಾಗಿ ಆರು ವರ್ಷ ಕಳೆದಿದೆ. ಈ ವರ್ಷದ ಆಗಸ್ಟ್‌ 20ಕ್ಕೆ ನ್ಯಾಯಮಂಡಳಿ ಅವಧಿ ಮುಗಿಯಲಿದೆ. ಅಗತ್ಯವಾದರೆ ಕಾಲಾವಧಿ ವಿಸ್ತರಣೆ ಮಾಡಬಹುದು.
  • ರಾಜ್ಯದ ಮಧ್ಯಂತರ ಅರ್ಜಿಯನ್ನು ನ್ಯಾಯಮಂಡಳಿ ವಜಾ ಮಾಡಿರುವುದರಿಂದ ಮುಂದೇನು ಎಂಬ ಜಿಜ್ಞಾಸೆ ಹುಟ್ಟಿಕೊಂಡಿದೆ. ಮಧ್ಯಂತರ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಬೇಕೇ ಅಥವಾ ಬಿಡಬೇಕೇ ಎಂಬ ಗೊಂದಲ ರಾಜ್ಯದ ವಕೀಲರ ತಂಡಕ್ಕಿದೆ. ಈ ಆದೇಶವನ್ನು ಪ್ರಶ್ನಿಸಿದರೂ ಕಷ್ಟ. ಬಿಟ್ಟರೂ ಕಷ್ಟ. ಅಲ್ಲೂ ರಾಜ್ಯದ ಮೇಲ್ಮನವಿ ಬಿದ್ದುಹೋದರೆ ಇನ್ನಷ್ಟು ಮುಜುಗರ ಅನುಭವಿಸಬೇಕಾಗಬಹುದು. ಹಿರಿಯ ವಕೀಲ ಎಫ್‌.ಎಸ್‌. ನಾರಿಮನ್‌ ಅವರಿಗೆ ಮಧ್ಯಂತರ ಅರ್ಜಿ ಸಲ್ಲಿಸಲು ಸುತಾರಾಂ ಇಷ್ಟವಿರಲಿಲ್ಲ. ಮಧ್ಯಂತರ ಅರ್ಜಿ ತಿರಸ್ಕೃತವಾದರೆ ಅಂತಿಮವಾಗಿ ಬರುವ ಐತೀರ್ಪಿನ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದರು.[೧೦]

ಕರ್ನಾಟಕದಲ್ಲಿ ತೀರ್ಪಿಗೆ ವಿರೋಧಿಸಿ ಭಾರಿ ಪ್ರತಿಭಟನೆ

[ಬದಲಾಯಿಸಿ]
  • ಮಹದಾಯಿ ನದಿಯಿಂದ [[ಮಲಪ್ರಭಾ]ಕ್ಕೆ(ಕಳಸಾ ಬಂಡೂರಿ ಯೋಜನೆ) ನೀರು ಹರಿಸುವಂತೆ ಕೋರಿದ್ದ ರಾಜ್ಯದ ಮಧ್ಯಂತರ ಅರ್ಜಿಯನ್ನು ನ್ಯಾಯಾಧಿಕರಣ ತಿರಸ್ಕರಿಸಿದ್ದನ್ನು ವಿರೋಧಿಸಿ ಉತ್ತರ ಕರ್ನಾಟಕದಾದ್ಯಂತ ೨೮-೭-೨೦೧೬ ಗುರುವಾರ ಉಗ್ರ ಪ್ರತಿಭಟನೆಯ ನಡೆದಿದೆ. ಸರ್ಕಾರಿ ಕಚೇರಿ, ವಾಹನ, ಕಡತಕ್ಕೆ ಬೆಂಕಿ ಹಚ್ಚುವ ಮೂಲಕ ಹಿಂಸಾರೂಪಕ್ಕೆ ತಿರುಗಿದೆ. ಧಾರವಾಡದ ನವಲಗುಂದದಲ್ಲಿ ಪ್ರತಿಭಟನಾಕಾರರು ತಾಲೂಕು ಕಚೇರಿ, ಪುರಭವನದ ಮೇಲೆ ದಾಳಿ ನಡೆಸಿ ಪೀಠೋಪಕರಣ ಧ್ವಂಸಗೊಳಿಸಿದ್ದಾರೆ. ಸರ್ಕಾರಿ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಪ್ರತಿಭಟನೆ ವೇಳೆ ಮೂವರು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನರಗುಂದದಲ್ಲಿ ನಡೆದಿದೆ. ನವಲಗುಂದ ಕೋರ್ಟ್ ಹಾಲ್ ಗೆ ನುಗ್ಗಿದ ಪ್ರತಿಭಟನಾಕಾರರು ಪೀಠೋಪಕರಣ ಧ್ವಂಸಗೊಳಿಸಿದ್ದಾರೆ. ಮಹಾತ್ಮ ಗಾಂಧಿ ಪೋಟೋವನ್ನು ಕೆಲವರು ಒಡೆದು ಹಾಕಿದ್ದಾರೆ. [೧೧]

ಸಾರ್ವಜನಿಕ ಅಭಿಪ್ರಾಯ

[ಬದಲಾಯಿಸಿ]
  • ಅನ್ಯಾಯವನ್ನು ಸಹಿಸಿಕೊಳ್ಳಬಾರದು ಮತ್ತು ಅದನ್ನು ಪ್ರತಿಭಟಿಸಬೇಕು ಎಂಬುದರಲ್ಲಿ ಎರಡು ಅಭಿಪ್ರಾಯ ಇರಲಾರದು. ಆದರೆ, ನಾವು ಈಗ ಪ್ರತಿಭಟಿಸುತ್ತಿರುವ ರೀತಿ ಸರಿಯೇ ಎಂದು ಒಂದು ಸಾರಿ ಪ್ರಶ್ನಿಸಿಕೊಳ್ಳಬೇಕು ಮತ್ತು ನಾವು ಈಗ ಮಾಡುತ್ತಿರುವ ಪ್ರತಿಭಟನೆಯಿಂದ ನಮಗೆ ಖಂಡಿತವಾಗಿಯೂ ನ್ಯಾಯ ಸಿಗುತ್ತದೆಯೇ ಎಂದೂ ಕೇಳಿಕೊಳ್ಳಬೇಕು. ನಮಗೆ ತಿಳಿಯದೇ ಇದ್ದರೆ ಯಾರಾದರೂ ತಿಳಿವಳಿಕಸ್ಥರ ಬಳಿಯಾದರೂ ಕೇಳಿ ತಿಳಿದುಕೊಳ್ಳಬೇಕು.(ಪದ್ಮರಾಜ ದಂಡಾವತಿ-ಪ್ರಜಾವಾಣಿ)ಚರ್ಚೆಪುಟ:ಕಳಸಾ-ಬಂಡೂರಿ ನಾಲಾ ಯೋಜನೆ

ಗೋವಾ ವಾದ

[ಬದಲಾಯಿಸಿ]
  • ಮಲಪ್ರಭೆ ಅಣೆಕಟ್ಟೆಯಲ್ಲಿ ನೀರಿಲ್ಲ ಎನ್ನುವ ಕರ್ನಾಟಕ ರಾಜ್ಯ ಅಲ್ಲಿ ಲಭ್ಯ ಇರುವ ನೀರನ್ನು ಹೇಗೆಲ್ಲ ಬೇಕಾಬಿಟ್ಟಿ ಬಳಸಿದೆ’ ಎಂದು ಗೋವಾ ತನ್ನ ವಾದದಲ್ಲಿ ಆಕ್ಷೇಪಿಸಿದೆ. ಮಲಪ್ರಭಾ ಅಚ್ಚಕಟ್ಟು ಪ್ರದೇಶದಲ್ಲಿ ಅದರಲ್ಲೂ ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಕಳೆದ ಅನೇಕ ವರ್ಷಗಳಲ್ಲಿ ಕಬ್ಬು ಬೆಳೆಯುವ ಪ್ರದೇಶ 1,81,740 ಹೆಕ್ಟೇರ್‌ಗೆ ಏರಿರುವುದನ್ನೂ ಮತ್ತು ಅದಕ್ಕಾಗಿಯೇ 160 ಟಿಎಂಸಿ ಅಡಿಯಷ್ಟು ನೀರನ್ನು ಕರ್ನಾಟಕ ಆಪೋಶನ ಮಾಡುತ್ತಿರುವುದನ್ನೂ ಮತ್ತು ಈಚಿನ ಕೆಲವು ವರ್ಷಗಳಲ್ಲಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಐದು ಸಕ್ಕರೆ ಕಾರ್ಖಾನೆಗಳು ಶುರುವಾಗಿರುವುದನ್ನೂ’ ಗೋವಾ ರಾಜ್ಯ ಎತ್ತಿ ತೋರಿಸಿದೆ. ‘ಕುಡಿಯಲು ನೀರಿಲ್ಲ ಎನ್ನುವ ಕರ್ನಾಟಕ ರಾಜ್ಯ, ಧಾರವಾಡದ ಬಳಿಯ ಪೆಪ್ಸಿಕೋ ಕಂಪೆನಿಗೆ ನಿತ್ಯ ನಾಲ್ಕು ಲಕ್ಷ ಲೀಟರ್‌ ನೀರನ್ನು ಅದೇ ನದಿಯಿಂದ ಪೂರೈಸುತ್ತಿದೆ.
  • ನದಿ ನೀರು ಸಮುದ್ರಕ್ಕೆ ಹರಿದು ಹೋಗುವುದು ಜಲಚಕ್ರ ಮುಂದುವರಿಯುವ ದೃಷ್ಟಿಯಿಂದ ಎಷ್ಟು ಅಗತ್ಯ ಎಂದು ನ್ಯಾಯಮಂಡಳಿ ಸದಸ್ಯರು ನಮ್ಮ ವಕೀಲರಿಗೆ ಪಾಠ ಹೇಳಿದ್ದಾರೆ! ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸುವ ವಿಶೇಷ ಮೇಲ್ಮನವಿಯಿಂದಲೂ ಪರಿಹಾರ ಸಿಗುತ್ತದೆ ಎಂದು ನಂಬಲು ಸಾಧ್ಯವಿಲ್ಲ. ಅವರೂ, ‘ಹೇಗೂ ನ್ಯಾಯಮಂಡಳಿ ಮುಂದೆ ನಿಮ್ಮ ಕೋರಿಕೆ ಇದೆಯಲ್ಲ’ ಎಂದು ಹೇಳಬಹುದು.[೧೨]

ಮಹದಾಯಿ ನ್ಯಾಯಮಂಡಳಿ ತೀರ್ಪು

[ಬದಲಾಯಿಸಿ]
  • ಮಹದಾಯಿ ನ್ಯಾಯಮಂಡಳಿಯು ದಿ.೧೪-೮-೨೦೧೮ ರಂದು ಮಹದಾಯಿ ನೀರು ಹಂಚಿಕೆ ತೀರ್ಪು ನೀಡಿತು. ನ್ಯಾಯಮೂರ್ತಿ ಜೆ.ಎಂ. ಪಾಂಚಾಲ್ ಈ ಕೆಳಗಿನಂತೆ ನೀರು ಹಂಚಿಕೆ ಮಾಡಿ ಆದೇಶಿಸಿದರು.
  • ವಿವರ:[೧೩]
  • ಕರ್ನಾಟಕ ರಾಜ್ಯಕ್ಕೆ 5.5 ಟಿಎಂಸಿ ಅಡಿ ನೀರನ್ನು ಹಂಚಿಕೆ ಮಾಡಿದೆ.
  • ಕಳಸಾ ‌ನಾಲೆಯಿಂದ 1.72 ಟಿಎಂಸಿ ಅಡಿ ನೀರು ಮತ್ತು ಬಂಡೂರಿ ನಾಲೆಯಿಂದ 2.18 ಟಿಎಂಸಿ ಅಡಿ ಹಂಚಿಕೆ ಮಾಡಿತು.
  • ಕರ್ನಾಟಕದ ಒಟ್ಟು ಬೇಡಿಕೆಯ 7.56 ಟಿಎಂಸಿ ಅಡಿ ಅದರಲ್ಲಿ ಪೈಕಿ 4 ಟಿಎಂಸಿ ಅಡಿ ಮಾತ್ರಾ ಕಣಿವೆಯೇತರ ಬಳಕೆಗೆ ಕರ್ನಾಟಕಕ್ಕೆ ಹಂಚಿಕೆ ಮಾಡಿದೆ.
  • ವಿದ್ಯುಚ್ಛಕ್ತಿ ಉತ್ಪಾದನೆಗಗಿ 8.02 ಟಿಎಂಸಿ ಅಡಿ ಹಂಚಿಕೆ ಮಾಡಿದೆ. ಒಟ್ಟು 13.07 ಟಿಎಂಸಿ ಅಡಿ ನೀರನ್ನು ಕರ್ನಾಟಕ ಬಳಸಬಹುದು. ಆದರೆ ಆ ನೀರು ಪುನಃ ಗೋವಾಕ್ಕೇ ಹೋಗುವುದು.
  • ಇದೂ ಅಲ್ಲದೆ 1.50 ಟಿಎಂಸಿ ಅಡಿ ನೀರನ್ನು ಮಹದಾಯಿ ಜಲಾನಯನ ಪ್ರದೇಶದಲ್ಲಿ ಬಳಕೆ ಮಾಡಲು ಹಂಚಿಕೆ ಮಾಡಿದೆ.
  • ಮಲಪ್ರಭಾ ನದಿಗೆ ಕಳಸಾ ಬಂಡೂರಿಯಿಂದ 4 ಟಿಎಂಸಿ ಅಡಿ ನೀರು ಬಿಡಲು ಅವಕಾಶ.
ಹೆಚ್ಚಿನ ನೀರಿಗೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿಗೆ ಅವಕಾಶ:
  • ಉಳಿದ ಹೆಚ್ಚನ ಪಾಲನ್ನು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ ಪಡೆಯುವುದಕ್ಕೆ ತೀರ್ಪು ಅವಕಾಶವನ್ನೂ ಕಲ್ಪಿಸಿದೆ.

ನಕ್ಷೆಗೆ ನೋಡಿ:[೯]

ನೀರು ಉಪಯೋಗಿಸಲು ಸಮಸ್ಯೆಗಳು

[ಬದಲಾಯಿಸಿ]
  • ಮಹದಾಯಿ ನ್ಯಾಯಮಂಡಳಿ ತೀರ್ಪಿನಲ್ಲಿ ರಾಜ್ಯದ ಕಳಸಾ ನಾಲೆಗೆ ನದಿಯ ಸಂಪರ್ಕ ಕಲ್ಪಿಸುವ ತಾಣದಲ್ಲಿ ನಿರ್ಮಿಸಿರುವ ತಡೆಗೋಡೆಯನ್ನು ತೆಗೆಯಲು ‘ನೀರು ನಿರ್ವಹಣಾ ಪ್ರಾಧಿಕಾರದ ಅನುಮತಿ ಅಗತ್ಯ’ ಎಂಬ ಷರತ್ತು ಇರುವುದರಿಂದ ಕುಡಿಯುವ ನೀರು ತಕ್ಷಣ ಲಭ್ಯತೆ ಇಲ್ಲ.
  • ಬಂಡೂರಿ ನಾಲೆಯಿಂದ 2.18 ಟಿಎಂಸಿ ಅಡಿಯಷ್ಟು ನೀರನ್ನು ರಾಜ್ಯದ ಬಳಕೆಗೆ ಕೊಟ್ಟರೂ, ಬಳಸುವ ನಾಲೆಗೆ ಅರಣ್ಯದ ಒಳಗಿಂದಲೇ ನೀರನ್ನು ತರಬೇಕಾಗುವುದು; ಮತ್ತೆ ಹಲ್ಸರಾ ಮತ್ತು ಬಂಡೂರಿ ಬಳಿ ಹೊಸದಾಗಿ ಅಣೆಕಟ್ಟುಗಳನ್ನೂ ಕಟ್ಟಬೇಕು. ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಗೆ ಹೊಸದಾಗಿ ಪ್ರಸ್ತಾವ ಸಲ್ಲಿಸಿ ಅನುಮತಿ ಪಡೆಯಬೇಕಾಗುವುದು. ಆದ್ದರಿಂದ ಬಂಡೂರಿ ನಾಲೆಯಿಂದ ಕುಡಿಯುವ ನೀರನ್ನು ಅಗತ್ಯ ಪ್ರದೇಶಗಳಿಗೆ ಒದಗಿಸಲು ಕೆಲವು ವರ್ಷಗಳೇ ತಡವಾಗಹುದು, ಎಂಬುದು ಜಲಸಂಪನ್ಮೂಲ ಇಲಾಖೆಯ ಅಭಿಪ್ರಾಯ.[೧೪]
  • ಕರ್ನಾಟಕ ರಾಜ್ಯಕ್ಕೆ ಸಂಪೂರ್ಣ ನ್ಯಾಯ ಸಿಕ್ಕಿಲ್ಲ : ಕೇಂದ್ರ ಜಲ ಆಯೋಗದ ಪ್ರಕಾರವೇ 42 ಟಿಎಂಸಿ ಅಡಿ ನೀರು ನೀಡಬೇಕಿತ್ತು. ಈಗ ಕೇವಲ 13.42 ಟಿಎಂಸಿ ಅಡಿ ನೀರನ್ನು ತೀರ್ಪಿನಲ್ಲಿ ನೀಡಿದೆ. ಈ ತೀರ್ಪಿನಿಂದ ರಾಜ್ಯಕ್ಕೆ ಸಂಪೂರ್ಣ ನ್ಯಾಯ ಸಿಕ್ಕಿಲ್ಲ ಎಂದು ಎನ್‌.ಎಚ್‌. ಕೋನರಡ್ಡಿ, ಹಿರಿಯ ಉಪಾಧ್ಯಕ್ಷ, ಜೆಡಿಎಸ್‌ ಅಭಿಪ್ರಾಯ ಪಟ್ಟಿದ್ದಾರೆ.[೧೫]
  • ಗೋವಾಕ್ಕೆ ತೀರ್ಪು ತೃಪ್ತಿ ನೀಡಿದೆ. ಮಹದಾಯಿ ನ್ಯಾಯಮಂಡಳಿಯು ತನ್ನ ಅಂತಿಮ ತೀರ್ಪಿನಲ್ಲಿ ಗೋವಾ ರಾಜ್ಯಕ್ಕೆ ನ್ಯಾಯ ಒದಗಿಸಿದೆ ಎಂದು ಗೋವಾ ಮುಖ್ಯಮಂತ್ರಿ ಮನೋಹರ್‌ ಪರ್ರೀಕರ್‌ ಅವರು ಹೇಳಿದ್ದಾರೆ. [೧೬]

ಮಹದಾಯಿ ನೀರಿನ ತೀರ್ಪು - ಕೇಂದ್ರ ಅಧಿಸೂಚನೆ

[ಬದಲಾಯಿಸಿ]
  • ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರಗಳಿಗೆ ಮಹದಾಯಿ ನದಿ ನೀರನ್ನು ಹಂಚಿಕೆ ಮಾಡಿ ಜಲವಿವಾದ ನ್ಯಾಯಮಂಡಳಿಯು 2018ರ ಆಗಸ್ಟ್‌ 14ರಂದು ನೀಡಿದ್ದ ಐತೀರ್ಪನ್ನು ಆಧರಿಸಿ ಕೇಂದ್ರ ಸರ್ಕಾರ ಗುರುವಾರ ಅಧಿಸೂಚನೆ ಹೊರಡಿಸಿದೆ. ಕೇಂದ್ರದ ಗೆಜೆಟ ಅಧಿಸೂಚನೆಯಿಂದ ಮಹದಾಯಿ ನೀರಿಗಾಗಿ ಉತ್ತರ ಕರ್ನಾಟಕದ ಜನರು ದಶಕಗಳ ಕಾಲ ನಡೆಸಿರುವ ಹೋರಾಟಕ್ಕೆ ಫಲ ದೊರೆತಂತಾಗಿದೆ.
  • ಕುಡಿಯುವ ಉದ್ದೇಶದಿಂದ 5.40 ಟಿಎಂಸಿ ಅಡಿ ಹಾಗೂ ಜಲ ವಿದ್ಯುತ್‌ ಉತ್ಪಾದನೆಗೆ 8.02 ಟಿಎಂಸಿ ಅಡಿ ಸೇರಿ ನ್ಯಾಯಮಂಡಳಿಯು ರಾಜ್ಯಕ್ಕೆ 13.42 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿತ್ತು.
  • ಮಹದಾಯಿಯ ಒಟ್ಟು 36.55 ಟಿಎಂಸಿ ಅಡಿ ನೀರಿಗೆ ರಾಜ್ಯ ಸರ್ಕಾರ ಬೇಡಿಕೆ ಸಲ್ಲಿಸಿತ್ತು. ಅದರಲ್ಲಿ ಬಳಕೆ ಉದ್ದೇಶದಿಂದ ತಿರುವು ಯೋಜನೆ ಮೂಲಕ ಮಲಪ್ರಭಾ ನದಿಗೆ 7.56 ಟಿಎಂಸಿ ಅಡಿ ಹಾಗೂ ಕಣಿವೆ ವ್ಯಾಪ್ತಿಯಲ್ಲಿ 1.50 ಟಿಎಂಸಿ ಅಡಿ ಸೇರಿದಂತೆ ಒಟ್ಟು 9.06 ಟಿಎಂಸಿ ಅಡಿ ನೀರಿಗೆ ಬೇಡಿಕೆ ಸಲ್ಲಿಸಲಾಗಿತ್ತು. ಆದರೆ, ದೊರೆತಿದ್ದು 13.42 ಟಿಎಂಸಿ ಅಡಿ. ಅದೇ ರೀತಿ, ಗೋವಾಗೆ 24 ಟಿಎಂಸಿ ಅಡಿ. ಮಹಾರಾಷ್ಟ್ರಕ್ಕೆ 1.33 ಟಿಎಂಸಿ ಅಡಿ ನೀರು ಹಂಚಿಕೆಯಾಗಿದೆ. [೧೭]

ಸಂಕ್ಷಿಪ್ತ ಇತಿಹಾಸ

[ಬದಲಾಯಿಸಿ]

ಹೆಚ್ಚಿನ ಮಾಹಿತಿ

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]
  1. ವರದಿ;ಹಿಂದು ಪತ್ರಿಕೆ:http://www.thehindu.com/todays-paper/tp-national/tp-karnataka/article3079203.ece
  2. http://kannada.oneindia.com/news/karnataka/kalasa-banduri-project-farmers-agitation-oneindia-explainer-096554.html
  3. https://munnota.wordpress.com/2015/08/31/kalasa-banduri/
  4. ಮಹದಾಯಿ ನೀರು ಹಂಚಿಕೆ:ಅಂದಿನಿಂದ ಇಂದಿನವರೆಗೆ July 28, 2016,: http://kannada.oneindia.com/news/karnataka/mahadayi-water-dispute-timeline-goa-karnataka-maharashtra-105508.html
  5. http://kannada.oneindia.com/news/karnataka/mahadayi-water-dispute-timeline-goa-karnataka-maharashtra-105508.html
  6. ಮಹಾದಾಯಿ ತೀರ್ಪು:ಅವರಿವರು ಕಂಡಂತೆ July 28, 2016[[೧]]
  7. ಮಹದಾಯಿ ವಿವಾದ: ನ್ಯಾಯಾಧಿಕರಣದ ಅಂತಿಮ ತೀರ್ಪಿನ ಪ್ರಮುಖಾಂಶಗಳು:[[೨]]
  8. ಮುಗಿಲು ಮುಟ್ಟಿದ ಆಕ್ರೋಶ:[[೩]]
  9. "ಕೇಂದ್ರ ಮಧ್ಯಸ್ಥಿಕೆಗೆ ರಾಜ್ಯಗಳ ಒಪ್ಪಿಗೆ ಬೇಕು". Archived from the original on 2018-02-28. Retrieved 2021-08-09.
  10. ಮಹಾದಾಯಿ: ಆತುರ ತಂದ ಅನಾಹುತ:29th Jul,2016[[೪]]
  11. ಪ್ರತಿಭಟನೆ ಹಿಂಸಾರೂಪ ಪಡೆಯಿತು.ಉತ್ತರ ಕರ್ನಾಟಕದಲ್ಲಿ ಬಂದ್:[[೫]]
  12. ಹೀಗೆಲ್ಲ ಮಾಡಿ ಮಹಾದಾಯಿ ನೀರು ಪಡೆಯಲು ಸಾಧ್ಯವಿಲ್ಲ..31/07/2016
  13. ರಾಜ್ಯಕ್ಕೆ 5.5 ಟಿಎಂಸಿ ನೀರು ಹಂಚಿಕೆ ಮಾಡಿ ನ್ಯಾಯಮಂಡಳಿ ತೀರ್ಪು
  14. ತಡೆಗೋಡೆಗೆ ಒಂದು ತದಗೋಡೆ
  15. ಈ ತೀರ್ಪಿನಿಂದ ರಾಜ್ಯಕ್ಕೆ ಸಂಪೂರ್ಣ ನ್ಯಾಯ ಸಿಕ್ಕಿಲ್ಲ
  16. ಅಂತಿಮ ತೀರ್ಪಿನಲ್ಲಿ ಗೋವಾ ರಾಜ್ಯಕ್ಕೆ ನ್ಯಾಯ ಒದಗಿಸಿದೆ
  17. ಮಹದಾಯಿ: ಅಧಿಸೂಚನೆ ಹೊರಡಿಸಿದ ಕೇಂದ್ರ;;ಪ್ರಜಾವಾಣಿ ;d: 28 ಫೆಬ್ರವರಿ 2020,