ನರಗುಂದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನರಗುಂದ
ನರಗುಂದ
Naragunda
ಪಟ್ಟಣ
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆಗದಗ
Elevation
೬೦೫ m (೧,೯೮೫ ft)
Population
 (2001)
 • Total೩೨,೫೪೮
ಭಾಷೆಗಳು
 • ಅಧಿಕೃತಕನ್ನಡ
ಸಮಯ ವಲಯಯುಟಿಸಿ+5:30 (IST)
ಜಾಲತಾಣwww.naragundatown.gov.in

ನರಗುಂದವು ಕರ್ನಾಟಕ ರಾಜ್ಯದ ಗದಗ್ ಜಿಲ್ಲೆಯ ಒಂದು ತಾಲ್ಲೂಕು; ಈ ತಾಲ್ಲೂಕಿನ ಮುಖ್ಯಸ್ಥಳ. ಭಾರತದ ಸ್ವಾತಂತ್ರ್ಯ ಹೋರಾಟಗಾರ ನರಗುಂದ ಬಾಬಾಸಾಹೇಬರು ಈ ಊರಿನವರು.

೧೮೫೭ರ ನರಗುಂದ ಬಂಡಾಯದಷ್ಟೇ ೧೯೮೦ ರ ರೈತ ಬಂಡಾಯವೂ ಇಲ್ಲಿನ ಪ್ರಮುಖ ಘಟನೆಯಾಗಿದೆ. ನರಗುಂದ ನಗರವು ಹುಬ್ಬಳ್ಳಿ-ಸೊಲ್ಲಾಪೂರ ರಸ್ತೆಯಲ್ಲಿ ಬರುತ್ತದೆ. 2011 ರ ಜನಗಣತಿಯ ಪ್ರಕಾರ 36318 ಜನಸಂಖ್ಯೆಯನ್ನು ಹೊಂದಿದೆ. ಪ್ರಾಚೀನ ಶಾಸನಗಳಲ್ಲಿ ಪಿರಿಯಾ ನರಗುಂದ ಎಂದು ಉಲ್ಲೇಖಿತ ಗೊಂಡಿರುತ್ತದೆ. ಈಗಿನ ಪುರಸಭೆಯ ಕಟ್ಟಡವು ಹಿಂದೆ ರಾಜನ ಅರಮನೆಯಾಗಿತ್ತು. ಇದರ ಒಂದು ಕೊಠಡಿಯಲ್ಲಿ ರಾಜನ ಖಡ್ಗವು ಇದೆ.

ನರಗುಂದ ಗುಡ್ಡವು ನೋಡಲು ಮಲಗಿದ ಸಿಂಹದಂತೆ ಇದೆ. ಗುಡ್ಡದ ಮೇಲೆ ಸಿದ್ದೇಶ್ವರ ದೇವಸ್ಥಾನ ಹಾಗೂ ಇಳಿಜಾರಿನಲ್ಲಿ ಬೃಹತ್ತಾದ ವೆಂಕಟೇಶ್ವರ ದೇವಾಲಯವಿದ್ದು ದ್ರಾವಿಡ ಅವು ಶೈಲಿಯಲ್ಲಿವೆ. ಪುರಸಭೆಯ ಎದುರಿಗೆ 1857 ರ ದಂಗೆಯ ಬಾಬಾಸಾಹೇಬನ ಎದೆಮಟ್ಟದ ಆಧುನಿಕ ಪ್ರತಿಮೆ ಇದೆ.

ಮಲಪ್ರಭಾ ನದಿಯ ನೀರಾವರಿಯಿಂದಾಗಿ ಇಲ್ಲಿನ ರೈತರು ವಾಣಿಜ್ಯ ಬೆಳೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತಾರೆ. ನರಗುಂದ ತನ್ನ ಹತ್ತಿ ಬೆಳೆಗೆ ಪ್ರಸಿದ್ಧವಾಗಿದೆ.

ತಾಲ್ಲೂಕಿನ ಉತ್ತರ ಪಶ್ಚಿಮಗಳಲ್ಲಿ ಅನುಕ್ರಮವಾಗಿ ಬಿಜಾಪುರ ಮತ್ತು ಬೆಳಗಾಂವಿ ಜಿಲ್ಲೆಗಳೂ ಪೂರ್ವದಲ್ಲಿ ರೋಣ ತಾಲ್ಲೂಕೂ ದಕ್ಷಿಣದಲ್ಲಿ ನವಲಗುಂದ ತಾಲ್ಲೂಕೂ ಇದೆ. ಈ ತಾಲ್ಲೂಕಿನ ಹೋಬಳಿಗಳು ಕೊಣ್ಣೂರು ಮತ್ತು ನರಗುಂದ. ಇಲ್ಲಿ 35 ಗ್ರಾಮಗಳೂ ನರಗುಂದ ಪಟ್ಟಣವೂ ಇದೆ. ವಿಸ್ತೀರ್ಣ 436 ಚ.ಕಿಮೀ. ಜನಸಂಖ್ಯೆ 92,644 (2001). ನರಗುಂದ ಮತ್ತು ಚಿಕ್ಕ ನರಗುಂದ ಬೆಟ್ಟಗಳನ್ನು ಬಿಟ್ಟರೆ ತಾಲ್ಲೂಕಿನ ಉಳಿದ ಭಾಗ ಸಾಮಾನ್ಯವಾಗಿ ಮೈದಾನ. ತಾಲ್ಲೂಕಿನ ಈಶಾನ್ಯದಲ್ಲಿ ಬಿಜಾಪುರ ಧಾರವಾಡ ಜಿಲ್ಲೆಗಳ ಗಡಿಯಾಗಿ ಮಲಪ್ರಭಾ ನದಿ ಹರಿಯುತ್ತದೆ. ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ 560 ಮಿಮೀ. ಜೋಳ, ಹತ್ತಿ, ಗೋದಿ, ಎಣ್ಣೆಬೀಜಗಳು ಮತ್ತು ಬೇಳೆಕಾಳುಗಳು ಬೆಳೆಯುತ್ತವೆ. ತರಕಾರಿ ಮತ್ತು ತೋಟದ ಬೆಳೆಗಳೂ ಉಂಟು.

ನರಗುಂದ ಪಟ್ಟಣದ ಜನಸಂಖ್ಯೆ 32,548 (2001). ಇದು ತಾಲ್ಲೂಕಿನ ಆಡಳಿತ ಕೇಂದ್ರ, ಧಾರವಾಡ ನಗರಕ್ಕೆ ಈಶಾನ್ಯದಲ್ಲಿ ಸುಮಾರು 50 ಕಿಮೀ. ಮತ್ತು ನವಲಗುಂದದಿಂದ ಉತ್ತರಕ್ಕೆ ಸುಮಾರು 19 ಕಿಮೀ. ದೂರದಲ್ಲಿ ಇದೆ. ಇದು ಹತ್ತಿ, ಸೇಂಗಾ, ಧಾನ್ಯ, ಕಾಳು ಮುಂತಾದವುಗಳ ವ್ಯಾಪಾರಕೇಂದ್ರ. ಸಿರ್ಸಿ, ಹುಬ್ಬಳ್ಳಿ ಮುಂತಾದ ಸ್ಥಳಗಳಿಗೆ ಇಲ್ಲಿಂದ ರಸ್ತೆಗಳಿವೆ.

.

ಇತಿಹಾಸ[ಬದಲಾಯಿಸಿ]

ನರಗುಂದದಲ್ಲಿ ಚಾಳುಕ್ಯ 3ನೆಯ ಸೋಮೇಶ್ವರ, 2ನೆಯ ಜಗದೇಕಮಲ್ಲ ಮತ್ತು 3ನೆಯ ತೈಲರ ಶಾಸನಗಳಿವೆ. ಆಗ ನರಗುಂದ ಒಂದು ಅಗ್ರಹಾರವಾಗಿತ್ತು. ಇದು 220 ಮಹಾಜನರ ಆಡಳಿತಕ್ಕೆ ಒಳಪಟ್ಟಿತ್ತು. ಇಲ್ಲಿಯ ಕೋಟೆಯನ್ನು ಮರಾಠ ಛತ್ರಪತಿ ಶಿವಾಜಿ ಮಹಾರಾಜ1674ರಲ್ಲಿ ಕಟ್ಟಿಸಿದ. 1778ರಲ್ಲಿ ಹೈದರನಿಗೆ ನರಗುಂದ ಕಪ್ಪ ನೀಡುತ್ತಿತ್ತು. 1785ರಲ್ಲಿ ನರಗುಂದದ ಕೋಟೆ ಟಿಪ್ಪುವಿಗೆ ವಶವಾಯಿತು. ಮರಾಠಾ ಪೇಶ್ವೆ 1818ರಲ್ಲಿ ದಾದಾಜಿರಾವ್ ಅಪ್ಪನಿಗೆ ನರಗುಂದವನ್ನು ಕೊಟ್ಟ.

ನರಗುಂದವನ್ನು 18 ನೇ ಶತಮಾನದಲ್ಲಿ ಪುಣೆಯ ಮರಾಠ ಪೇಶ್ವೆಗಳ ಪರವಾಗಿ 18 ನೇ ಶತಮಾನದಲ್ಲಿ ಭಾವೆ ರಾಜವಂಶದ ವೆಂಕಟರಾವ್ ಆಳುತ್ತಿದ್ದನು. ಮೈಸೂರಿನ ಹೈದರ್ ಆಲಿಯು, ೧೭೭೮ ರಲ್ಲಿ ಅದನ್ನು ತನ್ನ ನಿಯಂತ್ರಣಕ್ಕೆ ಒಳಪಡಿಸಿದನು. ೧೭೮೪ ರಲ್ಲಿ ಟಿಪ್ಪು ಸುಲ್ತಾನ್ ನರಗುಂದದ ಮೇಲೆ ದಾಳಿ ಮಾಡಿದನು. ಮರಾಠರು ಮತ್ತು ಭಾವೆ ಪರಿವಾರ ಮತ್ತು ಅವರ ಲೆಕ್ಕಿಗರಾಗಿದ್ದ ಪೇಠೆ ಪರಿವಾರಗಳು ಟಿಪ್ಪು ಮತ್ತು ಅವರ ಸಹಚರರ ಕೈಯಲ್ಲಿ ಕ್ರೂರ ಚಿತ್ರಹಿಂಸೆ ಮತ್ತು ಅತ್ಯಾಚಾರಗಳ ಮೂಲಕ ತೇಜೋವಧೆ ಹೊಂದಿದರು. ಅವರನ್ನು ೧೭೯೯ ರಲ್ಲಿ ಬಿಡುಗಡೆ ಮಾಡುವವರೆಗೆ ಅವರು ಮೈಸೂರಿನ ಜೈಲಿನಲ್ಲಿ ಇರಬೇಕಾಯಿತು. ನಂತರ ಅವರು ನರಗುಂದಕ್ಕೆ ಮರಳಿದರು.

ಬ್ರಿಟಿಷ್ ಅಧಿಪತ್ಯದ ವಿರುದ್ಧ ದೇಶದಲ್ಲಿ 1857 ಮೇ 10ರಂದು ನಡೆದ ಮೊದಲ ಹೋರಾಟದ ಸಮಯದಲ್ಲೇ ಬಾಬಾಸಾಹೇಬನ ಮುಂದಾಳುತನದಲ್ಲಿ ಬ್ರಿಟಿಷ್ ಆಳಿಕೆಯ ವಿರುದ್ಧ ಹೋರಾಟದ ಧ್ವನಿ ಮೊಳಗಿತು.

ದಾದಾಜಿರಾಯನ ವಂಶದ ಬಾಬಾಸಾಹೇಬನಿಗೆ ಮಕ್ಕಳಿರಲಿಲ್ಲವಾದ್ದರಿಂದ ದತ್ತು ಸ್ವೀಕರಿಸಲು ಇಚ್ಛಿಸಿದಾಗ ಬ್ರಿಟಿಷರು ಅದಕ್ಕೆ ಅವಕಾಶ ನೀಡಲಿಲ್ಲ. ಬಾಬಾಸಾಹೇಬ ಇದನ್ನು ಪ್ರತಿಭಟಿಸಿ ಬಂಡೆದ್ದ. ಭಾರತದ 1857ರ ಬಂಡಾಯದಲ್ಲಿ ನರಗುಂದ ಪ್ರಧಾನಪಾತ್ರ ವಹಿಸಿತ್ತು. ಆಗ ಬ್ರಿಟಿಷರು ನಡೆಸಿದ ಆಕ್ರಮಣವನ್ನು ಇಲ್ಲಿಯವರು ಕೆಚ್ಚಿನಿಂದ ಎದುರಿಸಿದರು. 1858ರಲ್ಲಿ ಬ್ರಿಟಿಷರು ಬಾಬಾಸಾಹೇಬನನ್ನು ಮಣಿಸಿ ಕೋಟೆಯನ್ನು ಕೆಡವಿದರು.

ಕೊಣ್ಣೂರ

ಕೊಣ್ಣೂರ[ಬದಲಾಯಿಸಿ]

ಇದು ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿದೇ ನರಗುಂದದಿಂದ 20 km ದೂರದಲ್ಲಿದೆ ಹುಬ್ಬಳ್ಳಿಯಿಂದ ಬಾಗಲಕೋಟಗೆ ಹೋಗುವ ಊರುಗಳಲ್ಲಿ ಇದು ಒಂದಾಗಿದೆ ಕಲೆ ಮತ್ತು ಸಂಸ್ಕೃತಿಗೆ ಹೆಸರುವಾಸಿಯಾಗಿದೆ,[ಬದಲಾಯಿಸಿ]

ಇದು ಮಲಪ್ರಭಾ ನದಿಯ ದಡದಲ್ಲಿದೆ ಮಲಪ್ರಭಾ ನದಿ ಇಲ್ಲಿನ ಜನರ ಜೀವ ನದಿಯಾಗಿದೆ ಇಲ್ಲಿನ ಭೌಗೋಳಿಕತೆ ನೋಡಿದಾಗ ಇದು ಉತ್ತರ ಕರ್ನಾಟಕ ಭಾಗವಾಗಿದೆ ಇದು ಬಯಲು ಸೀಮೆ ಪ್ರದೇಶವಾಗಿದೆ ಇಲ್ಲಿ ಫಲವತ್ತಾದ ಕಪ್ಪು ಮಣ್ಣು ಭೂಮಿಯನ್ನು ಕಾಣಬಹುದು ಆದ್ದರಿಂದ ಇಲ್ಲಿನ ಜನರ ಪ್ರಮುಖ ಉದ್ಯೋಗ ಕೃಷಿಯಾಗಿದೆ ಇಲ್ಲಿನ ಪ್ರಮುಖ ಬೆಳೆ ಎಂದರೆ ಹತ್ತಿ ಗೋಧಿ ಸೂರ್ಯಕಾಂತಿ ಜೋಳ ಪ್ರಮುಖವಾಗಿವೆ,[ಬದಲಾಯಿಸಿ]

ಕೊಣ್ಣೂರಿನಲ್ಲಿ ರಾಷ್ಟ್ರಕೂಟರ ಕಾಲದಲ್ಲಿನ ಪರಮೇಶ್ವರ್ ದೇವಾಲಯ ಪ್ರಸಿದ್ಧವಾಗಿದೆ ಮತ್ತು ಪೆರು ಹಣ್ಣು ಹೆಚ್ಚಾಗಿ ಬೆಳೆಯುತ್ತಾರೆ ಎಲ್ಲಿಂದ ವಿವಿಧ ಜಿಲ್ಲೆ ರಾಜ್ಯಗಳಿಗೆ ರವಾನೆಯಾಗುತ್ತವೆ ಶೈಕ್ಷಣಿಕವಾಗಿ ಮುಂದುವರೆದ ಊರಾಗಿದೆ ಇಲ್ಲಿ 4 ಪ್ರಾಥಮಿಕ 2 ಹೈಸ್ಕೂಲ್ ಮತ್ತು 1 PU ಕಾಲೇಜು 1 ITI ಕಾಲೇಜ್ ಇದೆ,[ಬದಲಾಯಿಸಿ]

ಸುತ್ತಮುತ್ತಲಿನ ಊರುಗಳೆಂದರೆ ರಾಮದುರ್ಗ ನರಗುಂದ ಶಿರೋಳ ಕುಳಗೇರಿ ಊರುಗಳನ್ನು ಕಾಣಬಹುದು, ಈ ರೀತಿಯಾಗಿ ನರಗುಂದ ತಾಲ್ಲೂಕುನಲ್ಲಿ ತನ್ನದೆಯಾದ ವೈವಿಧ್ಯತೆಯಿಂದ ಹೆಸರುವಾಸಿಯಾಗಿದೆ[ಬದಲಾಯಿಸಿ]

ದೇವಸ್ಥಾನಗಳು[ಬದಲಾಯಿಸಿ]

ನರಗುಂದದಲ್ಲಿ ಶಂಕರಲಿಂಗ, ಮಹಾಬಲೇಶ್ವರ ಮತ್ತು ಹನುಮಂತ ದೇವಾಲಯಗಳಿವೆ.

ನರಗುಂದ ಬೆಟ್ಟ ಸುಮಾರು 215 ಮೀ. ಎತ್ತರವಾಗಿದೆ. ಸುಮಾರು 5 ಕಿಮೀ. ಉತ್ತರಕ್ಕಿರುವ ಚಿಕ್ಕನರಗುಂದ ಬೆಟ್ಟ ಸುಮಾರು 61 ಮೀ. ಎತ್ತರವಾಗಿದೆ. ನರಗುಂದ ಬೆಟ್ಟದ ಮೇಲೆ ಜೀರ್ಣವಾದ ಕೋಟೆಯೊಂದಿದೆ.

ನರಗುಂದದಲ್ಲಿ ಮೊದಲಿದ್ದ ಮಣ್ಣಿನ ಕೋಟೆಯನ್ನು ಛತ್ರಪತಿ ಶಿವಾಜಿ ಮಹಾರಾಜ 1674 ವಶಪಡಿಸಿಕೊಂಡು `ಮಹಿಫತ್ ಗಡ' ಎಂಬ ಕಲ್ಲಿನ ಕೋಟೆ ಕಟ್ಟಿಸಿದ. ಅಲ್ಲಿ ಅಂಬಾಭವಾನಿಯ ದೇವಾಲಯ ನಿರ್ಮಿಸಿದ. ಶಿವಾಜಿಯ ಗುರು ಸಮರ್ಥ ರಾಮದಾಸರು ಇಲ್ಲಿ ರಾಮಮಂದಿರ, ಹನುಮ ಮಂದಿರ ಸ್ಥಾಪಿಸಿದರು. 1720ರಲ್ಲಿ ತಿರುಪತಿ ಮಾದರಿಯ ವೆಂಕಟೇಶ್ವರನ ದೇವಾಲಯ ನಿರ್ಮಿಸಿ ಜಾತ್ರೆ, ಉತ್ಸವ ಪ್ರಾರಂಭಿಸಿದರು. ಈಗಲೂ ಜಾತಿ, ಧರ್ಮ, ಪಂಥಗಳ ಭೇದವನ್ನು ಮೀರಿ ಇಲ್ಲಿ ಉತ್ಸವ ಜರಗುತ್ತದೆ

೧೯೮೦ ರ ರೈತ ಬಂಡಾಯ[ಬದಲಾಯಿಸಿ]

೧೯೮೦ ರ ಜುಲೈ ೨೧ ರಂದು ನರಗುಂದದ ತಹಸಿಲ್ದಾರರ ಕಚೇರಿಯನ್ನು ಪ್ರವೇಶಿಸಲು ಎಂಟರಿಂದ ಹತ್ತು ಸಾವಿರ ಸಂಖ್ಯೆಯಲ್ಲಿದ್ದ ರೈತರು ಪ್ರಯತ್ನಿಸಿದರು. ಆಗ ಆದ ಲಾಠೀಚಾರ್ಜ್ ಮತ್ತು ಗೋಲಿಬಾರ್ ನಲ್ಲಿ ಮೂವರು ರೈತರು ಬಲಿಯಾದರು. ರೊಚ್ಚಿಗೆದ್ದ ರೈತ ಸಮೂಹವು ಮೂರು ಜನ ಪೋಲೀಸರನ್ನು ಸಾಯಿಸಿತು . ನಂತರದ ಒಂದು ತಿಂಗಳಲ್ಲಿ ನೂರಕ್ಕೂ ಹೆಚ್ಚು ಜನ ರೈತರು ಪ್ರಾಣ ಕಳೆದುಕೊಂಡರು. ಸಾವಿರಾರು ಜನ ಗಾಯಗೊಂಡರು. ಪರಿಣಾಮವಾಗಿ ರಾಜ್ಯದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರಕಾರ ಆಡಳಿತಕ್ಕೆ ಬಂದಿತು.

ಹೊರಗಿನ ಕೊಂಡಿಗಳು[ಬದಲಾಯಿಸಿ]

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ನರಗುಂದ&oldid=1189433" ಇಂದ ಪಡೆಯಲ್ಪಟ್ಟಿದೆ