ಸದಸ್ಯ:Sujanac1/sandbox
ಪನ್ನೇರಳೆ
ಬಿಸಿಲಿನ ರಾಣಿ ಎಂದೇ ಹೆಸರುವಾಸಿಯಾಗಿರುವ ಪನ್ನೇರಳೆ ಹಣ್ಣಿನ ಸಸ್ಯನಾಮ ಸೈಝೀಜಿಯಂ ಜಂಬೋಸ್. ಈ ಹಣ್ಣು ಮಿರ್ಟೇಸಿ ಕುಟುಂಬಕ್ಕೆ ಸೇರಿದೆ. ಇದನ್ನು ಹಣ್ಣಿನ ತೋಟಗಳಲ್ಲಿ, ಸಸ್ಯ ಕ್ಷೇತ್ರಗಳಲ್ಲಿ, ಸಸ್ಯೋಧ್ಯಾನಗಳಲ್ಲಿ ನೆರಳು ಮರವಾಗಿ, ಅಲಂಕಾರಿಕ ಮರವಾಗಿ, ಹಣ್ಣಿನ ಮರವಾಗಿ ಬೆಳೆಸಲಾಗುತ್ತದೆ. ಪನ್ನೇರಳೆ ಹಣ್ಣು ಭಾರತದಲ್ಲಿ ಅಭಿವೃದ್ಧಿ ಹೊಂದಲು ಸ್ವಲ್ಪ ಹೆಚ್ಚು ಕಾಲವೇ ಬೇಕಾಯಿತು. ವಿಶೇಷವಾಗಿ ಕೇರಳದಲ್ಲಿ ಹೆಚ್ಚಾಗಿ ಬೆಳೆಯುವಂತಹ ಹಣ್ಣು. ದಕ್ಷಿಣ ಏಷ್ಯಾದಲ್ಲಿ ಸ್ಥಳೀಯವಾಗಿ ಈ ಹಣ್ಣು ಅಭಿವೃದ್ಧಿ ಹೊಂದಿದೆ. ಅಂಟಾರ್ಟಿಕಾ ಹೊರತುಪಡಿಸಿ ಉಳಿದ ಖಂಡಗಳಲ್ಲಿ ಪನ್ನೇರಳೆಯನ್ನು ಪರಿಚಯಿಸಲಾಗಿದೆ.ಉದಾಹರಣೆಗೆ , ೧೭೬೨ ರಲ್ಲಿ ಜಮೈಕಾದಲ್ಲಿ ಈ ಹಣ್ಣನ್ನು ಪರಿಚಯಿಸಲಾಗಿದೆ. ೧೮೨೫ ರಲ್ಲಿ ಎಂಟು ಪನ್ನೇರಳೆ ಮರಗಳನ್ನು ರಿಯೋ ಡಿ ಜನೈರೋನಿಂದ ಹವಾಯಿಗೆ ಹಡಗಿನಲ್ಲಿ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ. ೧೮೯೩ ರಲ್ಲಿ ಗಾನಾ ದೇಶದಲ್ಲಿ ಪನ್ನೇರಳೆಯ ಕೃಷಿ ಮಾಡಲಾಗಿದೆ ಎಂಬ ವರದಿ ಇದೆ. ಭಾರತ ದೇಶದಲ್ಲಿ ಪನ್ನೇರಳೆಯನ್ನು ನದಿಯ ದಡದಲ್ಲಿ ಚೆನ್ನಾಗಿ ಬೆಳೆಯುತ್ತಾರೆ. ಕಡುಮಣ್ಣಿನ ಪ್ರದೇಶದಲ್ಲಿ ಪನ್ನೇರಳೆ ಸಮೃದ್ಧವಾಗಿ ಬೆಳೆಯುತ್ತದೆ.
ಸಸ್ಯಶಾಸ್ತ್ರೀಯ ಹೆಸರುಗಳು
[ಬದಲಾಯಿಸಿ]ಸೈಝೀಜಿಯಂ ಜಂಬೋಸ್
- ಕುಟುಂಬ:ಮಿರ್ಟೇಸಿಯೇ
- ಕುಲ:ಸೈಝೀಜಿಯಂ
- ಪ್ರಭೇದ:ಜಂಬೋಸ್'.
- ಸಮಾನಾರ್ಥಕ:ಮಿರ್ಟಸ್ ಜಂಬೋಸ್
ಅನ್ಯಭಾಷೆಯ ಹೆಸರುಗಳು
[ಬದಲಾಯಿಸಿ]ಪನ್ನೇರಳೆ ಹಣ್ಣಿಗೆ ಕನ್ನಡದಲ್ಲಿ ಹಲವಾರು ಹೆಸರುಗಳಿವೆ. ಜಂಬೂ ನೇರಳೆ, ಪನ್ನೀರ್ ಹಣ್ಣು ,ಪನ್ನೇರಳೆ ಎಂದು ಕರೆಯುತ್ತಾರೆ. ಆಂಗ್ಲಭಾಷೆಯಲ್ಲಿ ರೋಸ್ ಮಲಬಾರ್ ಪಾಮ್, ಮಲೈ ಆ್ಯಪಲ್, ಜಾಮ್-ಪೂ, ಮೌಂಟೇನ್ ಆ್ಯಪಲ್, ರೋಸ್ ಆ್ಯಪಲ್, ವಾಟರ್ ಆ್ಯಪಲ್ ಮುಂತಾದ ಹೆಸರುಗಳಲ್ಲಿ ಕರೆಯಲ್ಪಡುತ್ತದೆ.
ವಿವರಣೆ
[ಬದಲಾಯಿಸಿ]ಪನ್ನೇರಳೆ ಹಣ್ಣಿನ ಬೀಜದಿಂದ ಸುಲಭವಾಗಿ ಸಸ್ಯಾಭಿವೃದ್ಧಿ ಮಾಡಬಹುದು. ಗಿಡ ನೆಟ್ಟ ನಂತರ ಆರೇಳು ವರ್ಷಗಳಲ್ಲಿ ಫಸಲನ್ನು ಕೊಡಲಾರಂಭಿಸುತ್ತದೆ. ನಾಟಿ ಮಾಡಿದ ನಂತರ ಆರೇಳು ವರ್ಷಗಳ ನಂತರ ಫಸಲು ಬರಲು ಆರಂಭಿಸಿ, ಐದಾರು ದಶಕಗಳವರೆಗೆ ಫಲ ಕೊಡುತ್ತದೆ.ಈ ಹಣ್ಣು ಸಮಶೀತೋಷ್ಣ ವಲಯದಲ್ಲಿ ಚೆನ್ನಾಗಿ ಬೆಳೆದು ಬೇಸಿಗೆ ಕಾಲದಲ್ಲಿ ಹೂಬಿಡುತ್ತದೆ. ಕಸಿ ಕಟ್ಟಿದ ಗಿಡಗಳನ್ನು ನೆಟ್ಟರೆ , ಐದು ವರ್ಷಗಳಲ್ಲಿ ಹಣ್ಣನ್ನು ಪಡೆಯಬಹುದು ಹಾಗು ವರ್ಷಕ್ಕೆ ಎರಡು ಬಾರಿ ಫಲವನ್ನು ಕೊಡುತ್ತಾ ಸುಮಾರು ಮೂರು ತಿಂಗಳವರೆಗೆ ನಿರಂತರವಾಗಿ ಹಣ್ಣು ಸಿಗುತ್ತದೆ. ಈ ಹಣ್ಣಿನ ಮರ ದೊಡ್ಡದಾಗಿ ಬೆಳೆದು ೪೦–೫೦ ವರ್ಷಗಳವರೆಗೆ ಫಲ ನೀಡುತ್ತದೆ. ಮರ ಎತ್ತರಕ್ಕೆ ಬೆಳೆದಂತೆ ಕೊಂಬೆಗಳನ್ನು ಕತ್ತರಿಸಿ, ಚಿಗುರಿದ ನಂತರ ಕೊಂಬೆಗಳಿಗೆ ಹಗ್ಗ ಕಟ್ಟಿ ನೆಲದೆಡೆಗೆ ಬಾಗಿಸಬಹುದು. ಪ್ರೌಢ ಮರವು ೩೦ ಕೆ.ಜಿ ವರೆಗೆ ಹಣ್ಣುಗಳನ್ನು ನೀಡುತ್ತದೆ. ಎಳೆಯ ಗಿಡಗಳಿಗೆ ಕೈನೀರನ್ನು ಹಾಯಿಸಬೇಕಾಗುತ್ತದೆ. ಹೂವು ಬಿಟ್ಟು ಹಣ್ಣು ಪಕ್ವಗೊಳ್ಳುವ ದಿನಗಳಲ್ಲಿ ಹೆಚ್ಚು ನೀರಿನ ಅಗತ್ಯವಿರುತ್ತದೆ. ಹಣ್ಣು ಬಲಿತಂತೆಲ್ಲಾ ವಿವಿಧ ಗಾತ್ರಗಳಲ್ಲಿ ಕಂಡು ಬರುತ್ತದೆ.ಒಂದು ಮರದಿಂದ ಪ್ರಾರಂಭದಲ್ಲಿ ಸುಮಾರು ೨೫೦ ರಿಂದ ೫೦೦ ಹಣ್ಣುಗಳನ್ನು ಪಡೆಯಬಹುದು. ಆದರೆ ದಿನ ಕಳೆದಂತೆ ಇನ್ನೂ ಹೆಚ್ಚಿನ ಇಳುವರಿಯ ಸಾಧ್ಯತೆ ಇರುತ್ತದೆ. ಹಣ್ಣುಗಳನ್ನು ಹೆಚ್ಚಿನ ಕಾಲ ಸಂಗ್ರಹಿಸಿಡಲು ಸಾಧ್ಯವಿಲ್ಲ. ಆದುದರಿಂದ ಹಣ್ಣುಗಳನ್ನು ಕಿತ್ತ ಕೂಡಲೆ, ತಾಜಾ ರೂಪದಲ್ಲಿ ಸೇವಿಸುವುದು ಉತ್ತಮ. ಮಳೆ ಬಂದರೆ ಪನ್ನೇರಳೆಯ ರುಚಿ ಸಪ್ಪೆಯಾಗುತ್ತದೆ. ಆದುದರಿಂದ ಪನ್ನೇರಳೆಯ ಮಾರಾಟಗಾರರು ಬೇಸಿಗೆಯಲ್ಲಿ ಹೆಚ್ಚು ಹಣ್ಣುಗಳನ್ನು ಮಾರಾಟ ಮಾಡುತ್ತಾರೆ. ಇದಕ್ಕೆ ವಿಶೇಷ ಆರೈಕೆ ಬೇಕಾಗಿರುವುದಿಲ್ಲ. ಅಡಿಕೆ ಮತ್ತು ತೆಂಗಿನ ತೋಟದಲ್ಲೂ ಸದರಿ ಹಣ್ಣನ್ನು ಬೆಳೆಯಬಹುದು. ಮುನ್ನೂರರಷ್ಟು ಎದ್ದುಕಾಣುವ ೪ ಸೆಂಟಿಮೀಟರ್ನಷ್ಟು ಕೇಸರಗಳನ್ನು ಈ ಹಣ್ಣಿನ ಹೂವುಗಳು ಹೊಂದಿರುತ್ತವೆ. ತಿಳಿ ಹಳದಿ ಬಣ್ಣದಿಂದ ಹಿಡಿದು ಗುಲಾಬಿ ಬಣ್ಣಗಳಲ್ಲಿ ಪನ್ನೇರಳೆ ಹಣ್ಣು ಸಿಗುತ್ತದೆ. ಕಾಯಿಯಾಗಿರುವಾಗ ಹಸಿರಾಗಿದ್ದು, ಹಣ್ಣಾದಾಗ ತಿಳಿ ಹಸಿರು, ಹಳದಿ, ಕೆಂಪು ಮತ್ತು ಬಂಗಾರದ ಬಣ್ಣಕ್ಕೆ ರೂಪಾಂತರಗೊಳ್ಳುವುದು ಪನ್ನೇರಳೆ ಹಣ್ಣಿನ ಗುಣಲಕ್ಷಣಗಳಲ್ಲಿ ಒಂದು. ಪನ್ನೇರಳೆ ಹಣ್ಣಿನ ಆಕಾರ ಗುಂಡಾಗಿ ಮತ್ತು ಅಂಡಾಕಾರವಾಗಿರುತ್ತದೆ. ಹೂವಿನ ದಳಗಳು ನಿಮ್ನವಾಗಿರುತ್ತವೆ. ಇದರ ಎಲೆಗಳು ಮತ್ತು ಕೊಂಬೆಗಳು ಕಂದು ಬಣ್ಣದಿಂದ ಕೂಡಿ ರೋಮರಹಿತವಾಗಿರುತ್ತವೆ. ಪನ್ನೇರಳೆಯ ಮರ ೧೦ ಸೆಂಟಿಮೀಟರ್ ಇಂದ ೩೦ ಸೆಂಟಿಮೀಟರ್ ಉದ್ದಳತೆಯ ಮತ್ತು ೨ ಸೆಂಟಿಮೀಟರ್ ಇಂದ ೪ ಸೆಂಟಿಮೀಟರ್ ಅಗಲದ ಎಲೆಗಳನ್ನು ಹೊಂದಿದ್ದು, ಸೀಬೆ ಮತ್ತು ಸಪೋಟದಂತೆ ಹೆಚ್ಚಿನ ಪ್ರಮಾಣದಲ್ಲಿ ಹಣ್ಣುಗಳನ್ನು ನೀಡುತ್ತದೆ. ಪನ್ನೇರಳೆ ಎಲೆಗಳ ತೊಟ್ಟುಗಳು ಚೂಪಾಗಿದ್ದು, ಬೆಳೆಯುವಾಗ ಕೆಂಪು ಬಣ್ಣದಿಂದ ಕೂಡಿ, ಬೆಳೆದನಂತರ ಹೊಳೆಯುವ ಕಡು ಹಸಿರು ಬಣ್ಣದಲ್ಲಿರುತ್ತದೆ. ಇದರ ಹೂವುಗಳು, ಮರದ ಕೊಂಬೆಗಳ ಕೊನೆಯಲ್ಲಿ ಸಣ್ಣ ಗೊಂಚಲಿನಲ್ಲಿ ಬೆಳೆಯುತ್ತವೆ. ಪನ್ನೇರಳೆಯ ಹೂವುಗಳು ಬಿಳಿ ಬಣ್ಣದಿಂದ ಹಸಿರು ಮಿಶ್ರಿತ ಬಿಳಿ ಬಣ್ಣಗಳಲ್ಲಿ ಇರುತ್ತವೆ. ಹಣ್ಣಿನೊಳಗೆ ಪೊಳ್ಳಿನಲ್ಲಿ ೧ ಸೆಂಟಿಮೀಟರ್ ವ್ಯಾಸದ ಒಂದರಿಂದ ನಾಲ್ಕು ಮಧ್ಯಮ ಗಾತ್ರದ ಬೀಜಗಳಿರುತ್ತವೆ. ಕಳಿತ ಪನ್ನೇರಳೆ ಹಣ್ಣು, ತನ್ನ ಹೂವಿನ ಪರಿಮಳವನ್ನು ಹೊಂದಿರುತ್ತದೆ.
ಉಪಯೋಗಗಳು
[ಬದಲಾಯಿಸಿ]ಪನ್ನೇರಳೆ ಮರದ ವಿವಿಧ ಭಾಗಗಳಿಂದ ಮನುಕುಲಕ್ಕೆ ಹಲವಾರು ಉಪಯೋಗಗಳಿವೆ. ಇದರಲ್ಲಿ ವಿಟಮಿನ್ ಬಿ1, ಬಿ2, ಬಿ3 ಗಳಿದ್ದು, ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಮ್, ಮೆಗ್ನೀಷಿಯಮ್, ಮ್ಯಾಂಗನೀಸ್, ಕಬ್ಬಿಣ, ರಂಜಕ, ಪೊಟ್ಯಾಷಿಯಂ ಹಾಗೂ ಸತುಗಳನ್ನೊಳಗೊಂಡಿರುವ ಈ ಹಣ್ಣು ದೇಹದ ಆರೋಗ್ಯಕ್ಕೆ ಪೂರಕವಾಗಿದೆ. ಹಣ್ಣಿನ ಮಿಶ್ರಣವನ್ನು ಮೂತ್ರವರ್ಧಕ ಔಷಧವಾಗಿ ಬಳಸುತ್ತಾರೆ. ದೇಹದ ಚರ್ಮವನ್ನು ಪುನರ್ಯ್ಯೌವ್ವನಗೊಳಿಸುತ್ತದೆ. ಹಲವಾರು ದ್ರವಗಳಿಂದ ಕೂಡಿರುವ ಪನ್ನೇರಳೆ, ದೇಹದ ನಿರ್ಜಲೀಕರಣದ ಚಿಕಿತ್ಸೆಗೆ ಸೂಕ್ತವಾಗಿದೆ. ವಿಟಮಿನ್ ಎ ಅನ್ನು ಹೊಂದಿರುವ ಪನ್ನೇರಳೆ ಹಣ್ಣು, ಕಣ್ಣಿನ ಆರೈಕೆ ಮಾಡುತ್ತದೆ.ಎಲೆಯ ಕಷಾಯವನ್ನು ಸಂಧಿವಾತದ ಚಿಕಿತ್ಸೆಗೆ ಬಳಸುತ್ತಾರೆ. ಎಲೆ, ತೊಗಟೆ, ಹಣ್ಣು ಎಲ್ಲವೂ ಔಷಧೀಯ ಗುಣ ಹೊಂದಿರುತ್ತವೆ.ಪನ್ನೇರಳೆ ಹಣ್ಣಿನಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ದೇಹದ ಕೊಬ್ಬಿನಾಂಶವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿದೆ. ಇದರ ಮುಖ್ಯವಾದ ಆರೋಗ್ಯ ಲಾಭವೆಂದರೆ, ಸ್ತ್ರೀಯರನ್ನು ಸ್ತನ ಕ್ಯಾನ್ಸರ್ ನಿಂದ ರಕ್ಷಿಸುತ್ತದೆ.ಪುರುಷರು ಸಾಪ್ತಾಹಿಕ ಆಹಾರದಲ್ಲಿ ಪನ್ನೇರಳೆಯನ್ನು ಅಳವಡಿಸಿಕೊಂಡರೆ ಪ್ರಾಸ್ಟ್ರೇಟ್ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆಯಾಗುತ್ತದೆ. ಪನ್ನೇರಳೆಯ ಕಷಾಯವನ್ನು ಸೇವಿಸುವ ಮೂಲಕ ನಮ್ಮ ಶರೀರದಲ್ಲಿರುವ ಜೀವಾಣುಗಳನ್ನು ಹೊರಹಾಕಬಹುದು. ಕಣ್ಣು ಬೇನೆಯ ಚಿಕಿತ್ಸೆಯಲ್ಲಿ ಎಲೆಯ ರಸ ಉಪಯುಕ್ತ. ಪನ್ನೇರಳೆ ಹಣ್ಣು ಮೆದುಳಿಗೆ ಶಕ್ತಿವರ್ಧಕ ಔಷಧವಾಗಿದೆ.
ಬೀಜ
[ಬದಲಾಯಿಸಿ]ನೆನೆಸಿಟ್ಟು ರುಬ್ಬಿದ ಬೀಜದ ಮಿಶ್ರಣವನ್ನು ಸೇವಿಸುವ ಮೂಲಕ ರಕ್ತಹೀನತೆಯಿಂದ ನಿವಾರಣೆ ಪಡೆಯಬಹುದು. ನಾಲ್ಕು ದಿನ ಒಣಗಿದ ಬೀಜವನ್ನು ಪುಡಿಮಾಡಿ, ಅತಿಸಾರ ಮತ್ತು ಲೈಂಗಿಕ ರೋಗಗಳ ಚಿಕಿತ್ಸೆಗೆ ಬಳಸುತ್ತಾರೆ. ಜ್ವರದ ಸಂಧರ್ಭದಲ್ಲಿ ದೇಹದ ತಾಪಮಾನವನ್ನು ಕಡಿಮೆಮಾಡುವಲ್ಲಿ ಪನ್ನೇರಳೆ ಪರಿಣಾಮಕಾರಿಯಾಗಿದೆ. ಉಬ್ಬಸವನ್ನು ನಿಯಂತ್ರಿಸುವಲ್ಲಿ ಪನ್ನೇರಳೆಯ ಬೀಜ ಸಹಕಾರಿಯಾಗಿದೆ. ಪನ್ನೇರಳೆಯ ಬೀಜ ಮಧುಮೇಹವನ್ನು ಗುಣಪಡಿಸುತ್ತದೆ.ಇಷ್ಟೆಲ್ಲಾ ಉಪಯೋಗಗಳಿದ್ದರೂ, ಪನ್ನೇರಳೆಯ ಬೀಜ ವಿಷಕಾರಿ ಎಂಬ ಮಾಹಿತಿಯುಂಟು.
ತೊಗಟೆ
[ಬದಲಾಯಿಸಿ]ಮರದ ತೊಗಟೆ ಸಿಹಿ ಗುಲಾಬಿಯ ಪರಿಮಳವನ್ನು ಹೊಂದಿರುತ್ತದೆ. ಫ್ರೀಡೆಲ್ ಲ್ಯಾಕ್ಟೋನ್ ಮತ್ತು ಬೆಟುಲಿನಿಕ್ ಆಸಿಡ್ ಅನ್ನು ಹೊಂದಿರುವ ತೊಗಟೆ ಶಿಲೀಂದ್ರ ಸೋಂಕುಗಳ ವಿರುದ್ಧ ಹೋರಾಡುತ್ತದೆ. ತೊಗಟೆಯ ಕಷಾಯ ಬ್ರಾಂಕೈಟಿಸ್ ಎಂಬ ಶ್ವಾಸಕೋಶದ ರೋಗವನ್ನು ನಿವಾರಿಸುತ್ತದೆ. ತೊಗಟೆಯಲ್ಲಿರುವ ಜಾಂಬೋಸಿನ್ ಎಂಬ ರಾಸಾಯನಿಕವು ಕ್ಷಾರೀಯ ಗುಣ ಹೊಂದಿದ್ದು, ಮಧುಮೇಹ, ಕಟ್ಟಿದ ಗಂಟಲು, ಶ್ವಾಸಕೋಶ ಸಂಬಂಧಿ ಕಾಯಿಲೆಗಳ ಚಿಕಿತ್ಸೆಯಲ್ಲಿ ಉಪಯೋಗಕ್ಕೆ ಬರುತ್ತದೆ. ಧ್ವನಿ ಒಡೆದಿದ್ದಾಗ ಮತ್ತು ಆಮಶಂಕೆ, ಜ್ವರ, ದಮ್ಮುಗಳಿಗೆ ತೊಗಟೆಯ ಕಷಾಯವನ್ನು ಸೇವಿಸುವುದು ಉಪಯುಕ್ತ.
ಹಣ್ಣಿನ ರಕ್ಷಣೆ
[ಬದಲಾಯಿಸಿ]ಹಣ್ಣುಗಳು ಬಿಸಿಲಿಗೆ ಹಾಳಾಗುತ್ತವೆ. ಹಣ್ಣುಗಳು ಹಾಳಾಗದಂತೆ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಪನ್ನೇರಳೆ ಕಾಯಿಯಾಗಿರುವಾಗಲೆ ಅದಕ್ಕೆ ಪ್ಲಾಸ್ಟಿಕ್ ಚೀಲಕಟ್ಟಿ ರಕ್ಷಣೆ ಮಾಡಬೇಕು.ಉಷ್ಣಾಂಶದ ಸಮತೋಲನ ಕಾಪಾಡಿಕೊಳ್ಳಲು ಕಾಯಿಗಳು ಗೋಲಿ ಗಾತ್ರದಲ್ಲಿರುವಾಗಲೇ, ಅವುಗಳಿಗೆ ಪ್ಲಾಸ್ಟಿಕ್ ಚೀಲ ಹಾಕಿ ಕಟ್ಟುವುದು ಮುಖ್ಯ. ಬಾಷ್ಪೀಕರಣದ ಕ್ರಿಯೆಯಿಂದ ಚೀಲದೊಳಗೆ ಇಬ್ಬನಿ ಸಂಗ್ರಹವಾಗುತ್ತದೆ. ಹೊರಗಿನ ಉಷ್ಣಾಂಶ ಹೆಚ್ಚಾದರೂ, ಚೀಲದೊಳಗೆ ೨೦ ರಿಂದ ೨೫ ಡಿಗ್ರಿ ಉಷ್ಣಾಂಶ ಸ್ಥಿರವಾಗಿರುತ್ತದೆ.
ಕೀಟ ಮತ್ತು ರೋಗಗಳು
[ಬದಲಾಯಿಸಿ]ತೇವದ ವಾತಾವರಣದಲ್ಲಿ ಪನ್ನೇರಳೆಯ ಎಲೆಗಳ ಮೇಲೆ ಗಿಡಹೇನುಗಳು ಚುಕ್ಕೆಯನ್ನು ಉಂಟುಮಾಡುತ್ತವೆ. ಪನ್ನೇರಳೆಗೆ ಎರಡು ಮೂರು ರೀತಿಯ ರೋಗಗಳು ಉಂಟಾಗುತ್ತವೆ. ಕೀಟಗಳಲ್ಲಿ ಎಲೆ ತಿನ್ನುವ ಹುಳು ಮತ್ತು ಹಣ್ಣಿನ ನೊಣ ಮುಖ್ಯವಾದವು. ಕೀಟಾಣುಗಳ ಹತೋಟಿಗೆ ೧೦ ಲೀಟರ್ ನೀರಿನಲ್ಲಿ ೨೦ ಮಿಲಿ ಲೀಟರ್ ಮಾನೋಕ್ರೋಟೋಫಾಸ್ ಬೆರೆಸಿ ಸಿಂಪಡಿಸಿದರೆ ಸಾಕು.
ಗೊಬ್ಬರ
[ಬದಲಾಯಿಸಿ]ಕಡುಮಣ್ಣಿನಲ್ಲಿ ಬೆಳೆದರೆ ಗೊಬ್ಬರದ ಅಗತ್ಯವಿರುವುದಿಲ್ಲ.ಆದರೆ ಹಲವು ಬಾರಿ ಎನ್ ಪಿ ಕೆ ೬-೬-೬ ಎಂಬ ಗೊಬ್ಬರವನ್ನು ಆರು ತಿಂಗಳಿಗೊಮ್ಮೆ ಬಳಸಬಹುದು.
ಉಲ್ಲೇಖಗಳು
[ಬದಲಾಯಿಸಿ]- ↑ https://en.wikipedia.org/wiki/Syzygium_jambos
- ↑ http://www.prajavani.net/news/article/2015/04/07/311521.html
- ↑ http://kn.vikaspedia.in/agriculture/caccc6cb3cc6-c89ca4ccdcaacbeca6ca8cc6-ca4c82ca4ccdcb0c97cb3cc1/c95cc3cb7cbfcaf-ca4ca4ccdcb5c97cb3cc1/caccbfcb8cbfcb2cbfca8-cb0cbeca3cbf-caaca8ccdca8cb0cb3cc6-cb9ca3ccdca3cc1
- ↑ http://vijaykarnataka.indiatimes.com/district/mysuru/market-pannerale-rose-pannir-fruit/articleshow/34599776.cms
- ↑ http://vijaykarnataka.indiatimes.com/district/mysuru/market-pannerale-rose-pannir-fruit/articleshow/34599776.cms
- ↑ http://www.cabi.org/isc/datasheet/52443