ವಿಷಯಕ್ಕೆ ಹೋಗು

ಅಲೆಕ್ಸಾಂಡರ್ ಕನಿಂಗ್ಹ್ಯಾಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಲೆಕ್ಸಾಂಡರ್ ಕನಿಂಗ್ಹ್ಯಾಂ
Born23 January, 1814
Died18 November, 1893
NationalityBritish

ಸರ್ ಅಲೆಕ್ಸಾಂಡರ್ ಕನಿಂಗ್ಹ್ಯಾಂ (23 ಜನವರಿ 1814 – 28 ನವೆಂಬರ್ 1893) ಭಾರತೀಯ ಪುರಾತತ್ತ್ವಶಾಸ್ತ್ರದ ಜನಕ.

ಬಾಲ್ಯ ಮತ್ತು ವಿದ್ಯಾಭ್ಯಾಸ

[ಬದಲಾಯಿಸಿ]

ಸ್ಕಾಟಿಷ್ ಕವಿ ಆಲನ್ ಕನಿಂಗ್ಹ್ಯಾಂನ ಎರಡನೆಯ ಮಗ. ಲಂಡನ್, ಅಡಿಸ್ಕೂಂಬ್ ಮತ್ತು ಛಾಥಾಮ್‍ಗಳಲ್ಲಿ ವಿದ್ಯಾಭ್ಯಾಸ ಮಾಡಿ ಆರ್.ಇ.ಪದವಿ ಗಳಿಸಿದ.

ವೃತ್ತಿ ಜೀವನ

[ಬದಲಾಯಿಸಿ]

1831ರಲ್ಲಿ ಬೆಂಗಾಲ್ ಎಂಜಿನಿಯರ್ಸ್ ವಿಭಾಗದಲ್ಲಿ ಸೆಕಂಡ್ ಲೆಫ್ಟೆನಂಟ್ ಆಗಿ ನೇಮಕಗೊಂಡು ಲೋಕೋಪಯೋಗಿ ಇಲಾಖೆಯಲ್ಲಿ ಹಲವಾರು ಹುದ್ದೆಗಳನ್ನು ನಿರ್ವಹಿಸಿ, ಭಾರತದ ಗವರ್ನರ್-ಜನರಲ್ ಲಾರ್ಡ್ ಆಕ್ಲ್ಯಾಂಡ್‍ನ ಎ.ಡಿ.ಸಿ. ಆದ. ಒಂದನೆಯ ಮತ್ತು ಎರಡನೆಯ ಸಿಖ್ ಯುದ್ಧಗಳಲ್ಲಿ ಕ್ಷೇತ್ರ ಎಂಜಿನಿಯರ್ ಆಗಿದ್ದನಲ್ಲದೆ ಅನಂತರ ಬರ್ಮ ಮತ್ತು ವಾಯವ್ಯ ಪ್ರಾಂತ್ಯಗಳಲ್ಲಿ ಮುಖ್ಯ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದ.

ಪುರಾತತ್ವ ತಜ್ಞ

[ಬದಲಾಯಿಸಿ]
Cunningham (fourth from the right) at an unknown date.
Leh Palace, Ladakh. Illustration from Ladak: Physical, Statistical, and Historical
Letter dated 31st January, 1862, appointing Cunningham as Surveyor General

ಜೇಮ್ಸ್‌ ಪ್ರಿನ್ಸೆಪ್‍ನ ಸ್ನೇಹದಿಂದಾಗಿ ಈತನಿಗೆ ಭಾರತೀಯ ಪುರಾತತ್ವದಲ್ಲಿ ಆಸಕ್ತಿ ಬೆಳೆಯಿತು. ಆತನ ಪ್ರಾಚ್ಯಸಂಶೋಧನ ಕಾರ್ಯದಲ್ಲಿ ಕನಿಂಗ್ಹ್ಯಾಂಮ್ ನೆರವು ನೀಡಿದ. ಆಗಿನಿಂದ ಈತ ತನ್ನ ವಿರಾಮ ವೇಳೆಯನ್ನು ಇದರ ಅಭ್ಯಾಸಕ್ಕಾಗಿ ವಿನಿಯೋಗ ಮಾಡಲಾರಂಭಿಸಿದ. ಈತ ಸಾರನಾಥ ಸ್ತೂಪದ ವಿಷಯವಾದ ಸಂಶೋಧನೆಗಳನ್ನು ಆರಂಭಿಸಿದ್ದು 1834-35ರಲ್ಲಿ. ಇದೇ ಸಮಯದಲ್ಲಿ ಮಾಕ್ಹಾರ್ಯ್‌ಂ ಕಿಟೋ, ಎಡ್ವರ್ಡ್ ಥಾಮಸ್, ಸರ್ ವಾಲ್ಟರ್ ಎಲಿಯಟ್, ಜೆ. ಸ್ಟೀವನ್ಸನ್ ಮತ್ತು ಭೌದಾಜಿ ಇವರು ದೇಶದ ವಿವಿಧ ಭಾಗಗಳಲ್ಲಿ ಪ್ರಾಕ್ತನ ಅವಶೇಷಗಳ ಅಭ್ಯಾಸದಲ್ಲಿ ನಿರತರಾದರು. ಪ್ರಿನ್ಸೆಪ್‍ನ ನಿಧನದ (1840) ಅನಂತರ ಕೆಲಕಾಲ ಸ್ಥಗಿತವಾಗಿದ್ದ ಈ ಕಾರ್ಯವನ್ನು ಕನಿಂಗ್ಹ್ಯಾಂ ಮುಂದುವರಿಸಬೇಕಾಯಿತು. 1847ರಲ್ಲಿ ಕನಿಂಗ್ಹ್ಯಾಂ ಅಧ್ಯಕ್ಷತೆಯಲ್ಲಿದ್ದ ಸಮಿತಿಯೊಂದು ಲಡಾಕ್-ಟಿಬೆಟ್ ಗಡಿಯ ಸಮಸ್ಯೆಗಳನ್ನು ಪರಿಶೀಲಿಸುತ್ತಿದ್ದಾಗ ಈತ ಕಾಶ್ಮೀರದ ದೇವಾಲಯಗಳ ಮೇಲೊಂದು ಮತ್ತು ಲಡಾಕ್‍ನ ಭೌಗೋಳಿಕ ಮತ್ತು ಐತಿಹಾಸಿಕ ಮಾಹಿತಿಗಳ ಮೇಲೊಂದು ಹೀಗೆ ಎರಡು ಗ್ರಂಥಗಳನ್ನು ಪ್ರಕಟಿಸಿದ. 1851ರಲ್ಲಿ ಮಧ್ಯ ಭಾರತದ ಬೌದ್ಧ ಅವಶೇಷಗಳನ್ನು ಅಭ್ಯಾಸ ಮಾಡಿದುದರ ಫಲವಾಗಿ (1854) ಭಿಲ್ಸಾ ತೊಪೆಗಳು ಎಂಬ ಗ್ರಂಥ ಪ್ರಕಟವಾಯಿತು. ಪ್ರಾಕ್ತನ ಸರ್ವೇಕ್ಷಣ ವಿಭಾಗವನ್ನು ಸ್ಧಾಪಿಸಬೇಕೆಂದು 1848ರಲ್ಲೇ ಈತ ಭಾರತ ಸರ್ಕಾರಕ್ಕೆ ಸಲಹೆ ಮಾಡಿದ್ದ. ಆದರೆ ಇದಕ್ಕೆ ಪುರಸ್ಕಾರ ದೊರಕಿರಲಿಲ್ಲ. 1861ರಲ್ಲಿ ಈ ಸಲಹೆಯನ್ನು ಪುನಃ ಮಂಡಿಸಿದ. ಆ ವರ್ಷ ಸೈನ್ಯ ಇಲಾಖೆಯಿಂದ ನಿವೃತ್ತಿ ಹೊಂದಿದ್ದ. ಆಗ ಗವರ್ನರ್-ಜನರಲ್ ಲಾರ್ಡ್ ಕ್ಯಾನಿಂಗನಿಗೆ ಈ ಸಲಹೆಯಲ್ಲಿ ಆಸಕ್ತಿ ಹುಟ್ಟಿತು. ಪ್ರಾಕ್ತನ ಅವಶೇಷಗಳಲ್ಲಿ ಸಂರಕ್ಷಣೆಗೆ ಯೋಗ್ಯವಾದವುಗಳ ನಕಾಶೆ, ಛಾಯಾಚಿತ್ರ, ಪರಿಮಾಣಗಳ ಅಳತೆ ಮತ್ತು ಶಾಸನಗಳ ಪ್ರತಿಕೃತಿಗಳನ್ನು ತಯಾರಿಸಲು 1861ರಲ್ಲಿ ಕನಿಂಗ್ಹ್ಯಾಂ ಸರ್ವೇಯರ್ ಆಗಿ 450 ರೂ.ಗಳ ಮಾಸಿಕ ವೇತನದ ಮೇಲೆ ನೇಮಕವಾದ.ಅಲೆಕ್ಸಾಂಡರನ ದಂಡಯಾತ್ರೆಯ ಮತ್ತು ಚೀನಾ ಪ್ರವಾಸಿ ಹ್ಯೂಎನ್ ತ್ಸಾಂಗನ ಪ್ರವಾಸದ ಮಾರ್ಗಗಳ ವಿಷಯವಾಗಿ ಕನಿಂಗ್ಹ್ಯಾಂ ಸಂಶೋಧನೆಗಳ ಫಲವಾದ ದಿ ಏನ್ಷಂಟ್ ಜಿಯೋಗ್ರಫಿ ಆಫ್ ಇಂಡಿಯಾ (ಭಾರತದ ಪುರಾತನ ಭೂವಿವರಣೆ) ಎಂಬ ಗ್ರಂಥ ಪ್ರಕಟವಾದದ್ದು 1871ರಲ್ಲಿ. (ಈಗಲೂ ಅದು ಒಂದು ಮುಖ್ಯ ಆಧಾರ ಗ್ರಂಥವಾಗಿದೆ.) ಭಾರತದಲ್ಲಿ ಸಂಶೋಧನಾಧಿಕಾರಿಯಾಗಿದ್ದ ಕಾಲದಲ್ಲಿ ಬಿಹಾರ ಮತ್ತು ವಾರಾಣಸಿ ಪ್ರದೇಶಗಳಲ್ಲಿ ಅಶೋಕ ನಿರ್ಮಿತವಾದ ಬರಾಬರ್ ಗುಹೆಗಳು, ಬುದ್ಧಗಯೆ ಮುಂತಾದ 24 ನಿವೇಶನಗಳ ಅವಶೇಷಗಳನ್ನೂ ಫತೇಪುರ್, ಕನೌಜ್, ರೂರ್ಕಿ, ಕಾಲ್ಸಿ, ಮಥುರಾ ಮತ್ತು ದೆಹಲಿಗಳ ಅವಶೇಷಗಳನ್ನೂ ಸಂಕಿಸ್ಸವೆಂಬ ಬೌದ್ಧನಿವೇಶನವನ್ನೂ ಪಂಜಾಬಿನಲ್ಲಿ ಅಲೆಕ್ಸಾಂಡರನ ದಾಳಿಯ ಮಾರ್ಗಗಳನ್ನೂ ಜಮಾಲ್ಘರೀ, ಯೂಸಫ್ಜಾಹಿ, ತಕ್ಷಶಿಲಾ, ಮಾಣಿಖ್ಯಾಲ, ಸರ್ಹಿಂದ್ ಮತ್ತು ಥಾನೇಶ್ವರ್ ನೆಲೆಗಳನ್ನೂ ಪರಿಶೋಧಿಸಿದ. ಪ್ರಾಕ್ತನ ಸಂಶೋಧನೆಗಳನ್ನು ಅಲಕ್ಷಿಸುವುದು ತಪ್ಪೆಂಬುದು ನಾಲ್ಕು ವರ್ಷಗಳ ಅನಂತರ ಭಾರತ ಸರಕಾರಕ್ಕೆ ಮತ್ತೆ ಮನವರಿಕೆಯಾಯಿತು. ಸರ್ವೇಕ್ಷಣ ವಿಭಾಗವನ್ನು ಪುನರುಜ್ಜೀವನಗೊಳಿಸಿ 1871ರ ಫೆಬ್ರುವರಿಯಲ್ಲಿ ಕನಿಂಗ್ಹ್ಯಾಂನನ್ನು ಆ ವಿಭಾಗದ ಮುಖ್ಯನಿರ್ದೇಶಕನನ್ನಾಗಿ (ಡೈರೆಕ್ಟರ್-ಜನರಲ್) 2,000 ರೂ. ಮಾಸಿಕ ವೇತನದ ಮೇಲೆ ನೇಮಿಸಲಾಯಿತು. ಮುಂದೆ 14 ವರ್ಷಗಳ ಕಾಲ ದೆಹಲಿ, ಆಗ್ರ, ರಾಜಪುಟಾಣ, ಬುಂದೇಲಖಂಡ, ಮಥುರಾ, ಪಂಜಾಬ್, ಮಧ್ಯಪ್ರದೇಶ, ಮಾಳವ, ಬುದ್ಧಗಯೆ ಮುಂತಾದ ಕಡೆಗಳಲ್ಲಿ ಅನೇಕ ಸಂಶೋಧನೆಗಳನ್ನು ನಡೆಸಿ ಭಾರತದಲ್ಲಿ ಪ್ರಾಕ್ತನಶಾಸ್ತ್ರದ ತಳಹದಿಯನ್ನು ಸುಭದ್ರವಾಗಿ ಈತ ಸ್ಥಾಪಿಸಿದ. ಈ ಕಾಲದಲ್ಲಿ ಈತ ಬೆಳಕಿಗೆ ತಂದ ಐತಿಹಾಸಿಕ ಅವಶೇಷಗಳಲ್ಲಿ ಪ್ರ.ಶ.ಪು 2ನೆಯ ಶತಮಾನದ ಭಾರ್ಹುತ್ಸ್ತೂಪ, ಮಧ್ಯಪ್ರದೇಶದಲ್ಲಿ ಗುಪ್ತರ ಕಾಲಕ್ಕೆ ಸೇರಿದ ಹಲವಾರು ದೇವಾಲಯಗಳು, ಅನೇಕ ಗಾಂಧಾರ ಶೈಲಿಯ ಕಲಾಕೃತಿಗಳು, ಹಲವಾರು ಅಶೋಕಸ್ತಂಭಗಳು ಮತ್ತು ಮೌರ್ಯ, ಗುಪ್ತ ಮತ್ತು ಪಾಲವಂಶದ ಅನೇಕ ಶಾಸನಗಳು ಮುಖ್ಯವಾದವು. ಪುರಾಣ ಇತಿಹಾಸಗಳಲ್ಲಿ ಪ್ರಸಿದ್ಧವಾದ ತಕ್ಷಶಿಲಾ, ಸಂಕಿಸ್ಸ, ಅಹಿಚ್ಛತ್ರ, ಶ್ರಾವಸ್ತಿ, ಕೌಶಾಂಬಿ, ವೈಶಾಲಿ ಮತ್ತು ನಲಂದ ನಗರಗಳ ಅವಶೇಷಗಳನ್ನೂ ಗುರ್ತಿಸಲಾಯಿತು. ಈ ಸಂಶೋಧನೆಗಳನ್ನು ಪ್ರಾಕ್ತನ ಸರ್ವೇಕ್ಷಣ ಇಲಾಖೆಯ ವಾರ್ಷಿಕ ವರದಿಗಳ ರೂಪದಲ್ಲಿ ಪ್ರಕಟಿಸಲಾಗಿದೆ. ಸರ್ಕಾರಕ್ಕೆ ಈತ ಕಳುಹಿಸುತ್ತಿದ್ದ ವರದಿಗಳನ್ನು ರಾಷ್ಟ್ರೀಯ ಐತಿಹಾಸಿಕ ದಾಖಲೆಗಳ ಗ್ರಂಥಾಲಯದಲ್ಲಿ ಸಂರಕ್ಷಿಸಿಡಲಾಗಿದೆ. ಕನಿಂಗ್ಹ್ಯಾಂನಿಗೆ ಶಾಸನಶಾಸ್ತ್ರ ವಿಭಾಗದಲ್ಲೂ ಹೆಚ್ಚಿನ ಆಸಕ್ತಿಯಿತ್ತು. ನೂರಾರು ಶಾಸನಗಳನ್ನು ಬೆಳಕಿಗೆ ತಂದು ಪ್ರಚುರಗೊಳಿಸಿದುದಲ್ಲದೆ ಆಯಾ ರಾಜ ಮನೆತನಗಳಿಗೆ ಸೇರಿದ ಶಾಸನಗಳನ್ನು ಒಂದೊಂದು ಪ್ರತ್ಯೇಕ ಸಂಪುಟಗಳಲ್ಲಿ ಪ್ರಕಟಿಸುವ ಯೋಜನೆ ಹಾಕಿ,ಅದರಂತೆ ಅಶೋಕ ಮೌರ್ಯ ಮತ್ತು ಅವನ ಮೊಮ್ಮಗ ದಶರಥನ ಶಾಸನಗಳನ್ನು 1877ರಲ್ಲಿ ಕಾರ್ಪಸ್ ಇನ್ಸ್ಕ್ರಿಪ್ಷನಂ ಇಂಡಿಕ್ಯಾರಂ ಎಂಬ ಗ್ರಂಥಮಾಲೆಯ ಮೊದಲ ಸಂಪುಟದಲ್ಲಿ ಪ್ರಕಟಿಸಿದ. ಶಾಸನಗಳ ಅಭ್ಯಾಸಕ್ಕೆ ಪ್ರತ್ಯೇಕ ಶಾಖೆಯೊಂದನ್ನು ಏರ್ಪಡಿಸಿ 1883ರಲ್ಲಿ ಜಿ. ಎಫ್. ಫ್ಲೀಟನನ್ನು ಅದರ ಮುಖ್ಯಾಧಿಕಾರಿಯನ್ನಾಗಿ ನೇಮಿಸಲು ಈತನೇ ಕಾರಣ. ಪುರಾತನ ಕಟ್ಟಡಗಳ ಜೀರ್ಣೋದ್ಧಾರ ಮತ್ತು ರಕ್ಷಣೆಯ ವಿಷಯದಲ್ಲೂ ಆಸಕ್ತಿವಹಿಸಿ ಅಂತಹ ರಿಪೇರಿಗಳನ್ನು ಪ್ರಾಕ್ತನ ಶಾಸ್ತ್ರಜ್ಞರ ನೇತೃತ್ವದಲ್ಲೇ ನಡೆಸಬೇಕೆಂದು ಸರ್ಕಾರದೊಡನೆ ವಾದಿಸಿದ. ಸರ್ಕಾರ ಈ ವಿಷಯವಾಗಿ ನಿರ್ಧಾರ ಕೈಗೊಳ್ಳುವಷ್ಟರಲ್ಲಿ ಸ್ವಂತ ಇಚ್ಛೆಯಿಂದ 1885ರ ಅಕ್ಟೋಬರ್ 1ರಂದು ನಿವೃತ್ತಿಹೊಂದಿ ಇಂಗ್ಲೆಂಡಿಗೆ ವಾಪಸಾದ. ಈತನ ಸೂಚನೆಯಂತೆ ಡೈರೆಕ್ಟರ್-ಜನರಲ್‍ನ ಹುದ್ದೆಯನ್ನು ರದ್ದುಗೊಳಿಸಲಾಯಿತು.ಅದರ ಬದಲು ಮೂವರು ಸರ್ವೇಯರುಗಳನ್ನು ಉತ್ತರ ಭಾರತದ ಮೂರು ಕೇಂದ್ರಗಳಲ್ಲಿ ನೇಮಿಸಲಾಯಿತು. ದಕ್ಷಿಣ ಮತ್ತು ಪಶ್ಚಿಮ ಭಾರತದಲ್ಲಿ ಮೊದಲಿನಂತೆ ಜೇಮ್ಸ್‌ ಬರ್ಜೆಸ್ ಮುಂದುವರಿದ. ನಿವೃತ್ತಿಗೊಂಡ ಅನಂತರವೂ ಕನಿಂಗ್ ಹ್ಯಾಮ್ ಈ ಕ್ಷೇತ್ರದಲ್ಲಿ ತನ್ನ ಆಸಕ್ತಿಯನ್ನು ಮುಂದುವರಿಸಿದ. ಪ್ರಾಚೀನ ಭಾರತದ ನಾಣ್ಯಗಳು, ಬುದ್ಧಗಯೆಯ ದೇವಾಲಯ, ಇಂಡೋಸ್ಕಿಥಿಯನರ ಸಕರ ಮತ್ತು ಕುಶಾನರ ನಾಣ್ಯಗಳು, ಮಧ್ಯ ಕಾಲೀನ ಭಾರತದ ನಾಣ್ಯಗಳು ಮತ್ತು ಉತ್ತರಕಾಲೀನ ಇಂಡೋಸ್ಕಿಥಿಯನ್ನರ ನಾಣ್ಯಗಳು ಎಂಬ ಐದು ಗ್ರಂಥಗಳನ್ನೂ ಹಲವಾರು ಬೃಹತ್ ಲೇಖನಗಳನ್ನೂ 1893ರಲ್ಲಿ ಪ್ರಕಟಿಸಿದ. ಅದೇ ವರ್ಷ ಈತ ನಿಧನ ಹೊಂದಿದ. ಪುರಾತತ್ತ್ವ ಕ್ಷೇತ್ರದಲ್ಲಿ ಇಷ್ಟೊಂದು ಕೆಲಸ ಮಾಡಿದ ಕನಿಂಗ್ಹ್ಯಾಂನನ್ನು ಭಾರತದ ಪ್ರಾಕ್ತನಶಾಸ್ತ್ರ ಇಲಾಖೆಯ ಜನ್ಮದಾತನೆಂದು ಪರಿಗಣಿಸಿರುವುದು ಸಾಧುವಾಗಿದೆ. ಆದರೂ ಈತನ ವಿರುದ್ಧ ಹಲವಾರು ಟೀಕೆಗಳು ಕೇಳಿಬಂದುವು. ಈತ ಚಾರಿತ್ರಿಕ ಅವಶೇಷಗಳ ಮೇಲೆ ತನ್ನ ಗಮನವಿಟ್ಟಿದ್ದು, ಇತಿಹಾಸಪುರ್ವ ಸಂಸ್ಕೃತಿಗಳತ್ತ ಗಮನ ಕೊಡಲಿಲ್ಲವೆಂಬುದೂ ಹರಪ್ಪ ಸಂಸ್ಕೃತಿಯ ಅವಶೇಷಗಳನ್ನು ಮೊತ್ತ ಮೊದಲಿಗೆ ಈತ ಬೆಳಕಿಗೆ ತಂದನಾದರೂ ಅವನ್ನು ಸರಿಯಾಗಿ ಅಭ್ಯಾಸ ಮಾಡದೆ ಅಲಕ್ಷಿಸಿದನೆಂಬುದೂ ಇತರ ದೇಶಗಳಲ್ಲಿ ಸಮಕಾಲೀನ ಪ್ರಾಕ್ತನಶಾಸ್ತ್ರಜ್ಞರು ಅನುಸರಿಸುತ್ತಿದ್ದ ಸುಧಾರಿತ ವಿಧಾನಗಳನ್ನು ಈತ ಬಳಸುತ್ತಿರಲಿಲ್ಲವೆಂಬುದೂ ಈ ಟೀಕೆಗಳಲ್ಲಿ ಪ್ರಮುಖವಾದವು.

ಗ್ರಂಥಗಳು

[ಬದಲಾಯಿಸಿ]