ಹೊಯ್ಸಳೇಶ್ವರ ದೇವಸ್ಥಾನ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಹಳೇಬೀಡು
ಹೊಯ್ಸಳ ವಂಶ ಸುಮಾರು ಕ್ರಿ.ಶ. ೧೦೦೦ ದಿಂದ ಕ್ರಿ.ಶ. ೧೩೪೬ರ ವರೆಗೆ ದಕ್ಷಿಣ ಭಾರತದ ಕೆಲ ಭಾಗಗಳನ್ನು ಆಳಿದ ರಾಜವಂಶ. ಹೊಯ್ಸಳ ಸಾಮ್ರಾಜ್ಯದ ರಾಜಧಾನಿ ದ್ವಾರಸಮುದ್ರ (ಇಂದಿನ ಹಳೇಬೀಡು), ಹಾಸನ ಜಿಲ್ಲೆಯಲ್ಲಿದೆ. ಜಾನಪದ ನಂಬಿಕೆಯಂತೆ, ಹೊಯ್ಸಳ ಎಂಬ ಹೆಸರು ಈ ವಂಶದ ಸಂಸ್ಥಾಪಕ ಸಳನಿಂದ ವ್ಯುತ್ಪತ್ತಿಯಾದದ್ದು. ಚಾರಿತ್ರಿಕವಾಗಿ ಈ ಸಂಸ್ಥಾಪಕನ ಹೆಸರು ನೃಪಕಾಮ ಎಂದು ಊಹಿಸಲಾಗಿದೆ.
ಹೊಯ್ಸಳೇಶ್ವರ ದೇವಸ್ಥಾನ
[ಬದಲಾಯಿಸಿ]ಹಳೇಬೀಡು ಶಿಲ್ಪಕಲೆಯ ನೆಲೆಬೀಡು. ಹಳೆಯಬೀಡಿನ ಮೊದಲ ಹೆಸರು ದೋರಸಮುದ್ರ. ಕ್ರಿ.ಶ. 950ಕ್ಕೆ ಮೊದಲೇ ರಾಷ್ಟ್ರಕೂಟರ ದೊರೆ ಭಾವದೋರ ಎಂಬಾತ ಇಲ್ಲಿ ಕೆರೆಯನ್ನು ನಿರ್ಮಿಸಿ ರಾಜ್ಯಭಾರ ಮಾಡಿದ್ದರಿಂದ ಇದಕ್ಕೆ ದೋರಸಮುದ್ರ ಎಂದು ಹೆಸರು ಬಂದಿತ್ತು ಎನ್ನುತ್ತಾರೆ.ಹೆಸರು ಹಳೆಯ ಬೀಡಾದರೂ, ಇಲ್ಲಿನ ಶಿಲ್ಪಕಲೆಗಳು ನವನವೀನ, ನಿತ್ಯನೂತನ. ಹಳೆಯ ಬೀಡಿನಲ್ಲಿ ಹಲವಾರು ಅತ್ಯಂತ ಸುಂದರ ದೇಗುಲಯಗಳಿವೆಯಾದರೂ, ಅಲ್ಲಾಉದ್ದೀನನ ದಂಡನಾಯಕ ಮಲ್ಲಿಕ್ ಕಾಫೂರ್ ಸೇರಿದಂತೆ ಹಲವು ಮುಸಲ್ಮಾನ ದೊರೆಗಳ ದಾಳಿಯ ಬಳಿಕ ಈ ಹೊತ್ತು, ಸುಸ್ಥಿತಿಯಲ್ಲಿ ಉಳಿದಿರುವುದು ಹೊಯ್ಸಳೇಶ್ವರ ದೇವಾಲಯ ಮಾತ್ರ.. ಬೆಟ್ಟಗುಡ್ಡಗಳಿಂದಾವರಿಸಿ, ವಿಶಾಲ ಕಣಿವೆಗಳಿದ್ದ ಈ ರಮ್ಯತಾಣ ಮುಮ್ಮಡಿ ಬಲ್ಲಾಳನ ಕಾಲದಲ್ಲಿ ವಿಸ್ತಾರಗೊಂಡಿತು.
ನಿರ್ಮಾಣ
[ಬದಲಾಯಿಸಿ]ಇದು ಶಿವನ ಆಲಯ. ಇಲ್ಲಿಗೆ ಸಮೀಪದ ಘಟ್ಟದಹಳ್ಳಿಯಲ್ಲಿ ದೊರೆತಿರುವ ಶಾಸನವನ್ನು ಆಧರಿಸಿ ಈ ದೇವಾಲಯವನ್ನು ರಾಜ ವಿಷ್ಣುವರ್ಧನನ ಅಕಾರಿ ಅಥವಾ ದಂಡನಾಯಕ ಕೇತಮಲ್ಲ 1121ರಲ್ಲಿ ಕಟ್ಟಿಸಿಲು ಆರಂಭಿಸಿದ ಎಂದು ಹೇಳಲಾಗಿದೆ. ಹೊಯ್ಸಳ ಸಾಮ್ರಾಜ್ಯದ ಅತ್ಯಂತ ಪ್ರಸಿದ್ಧ ಅರಸು ಬಿಟ್ಟಿಗ ಅಥವಾ ಬಲ್ಲಾಳ ಬಿಟ್ಟಿದೇವ. ಈತನ ನಂತರದ ಹೆಸರು ವಿಷ್ಣುವರ್ಧನ (ಆಡಳಿತ: ಸು ೧೧೧೦-೧೧೪೨). ವಿಷ್ಣುವರ್ಧನನ ಆಡಳಿತದ ಕಾಲದಲ್ಲಿ ಹೊಯ್ಸಳ ಸಾಮ್ರಾಜ್ಯ ಇಂದಿನ ಕರ್ನಾಟಕ ರಾಜ್ಯದ ಬಲಿಷ್ಠ ಸಾಮ್ರಾಜ್ಯವಾದದ್ದಲ್ಲದೆ ಪಕ್ಕದ ರಾಜ್ಯಗಳಲ್ಲಿಯೂ ವಿಸ್ತರಿಸಿತು. ವಿಷ್ಣುವರ್ಧನನ ಕಾಲದಲ್ಲಿ ಕಲೆ ಮತ್ತು ಶಿಲ್ಪಕಲೆಗೆ ಬಹಳ ಪ್ರೋತ್ಸಾಹ ನೀಡಲಾಯಿತು. ಈತನ ರಾಣಿ ಶಾಂತಲೆ ಪ್ರಸಿದ್ಧ ಭರತನಾಟ್ಯ ನರ್ತಕಿ ಮತ್ತು ಶಿಲ್ಪಕಲೆಯಲ್ಲಿ ಆಸಕ್ತಿಯಿದ್ದವಳೆಂದು ಹೆಸರಾಗಿದ್ದಾಳೆ. ಈ ಕಾಲದಲ್ಲಿಯೇ ಹೊಯ್ಸಳ ಶಿಲ್ಪಕಲೆಯ ಅತ್ಯುನ್ನತ ಉದಾಹರಣೆಗಳು ಮೂಡಿಬಂದವು.
ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯದ ನಿರ್ಮಾಣ ಕಾರ್ಯವು ಸುಲಲಿತವಾಗಿ ಸಾಗಿದ್ದು ವಿಷ್ಣುವರ್ಧನನ ಅಂತ್ಯಕಾಲದಲ್ಲಿ. ಈತನ ಮಗನಾದ ನರಸಿಂಹ ಬಲ್ಲಾಳನ ಆಸಕ್ತಿಯಿಂದಾಗಿ ಮಹೋನ್ನತ ಕಲೆಯ ನೆಲವೀಡೊಂದು ರೂಪುಗೊಂಡಿತು. ದೇವಾಲಯದ ಮೂಲ ಸ್ವರೂಪವನ್ನು ಕಟ್ಟಲು ೪೦ ವರ್ಷಗಳು ಮತ್ತು ದೇವಾಲಯದ ಶಿಲ್ಪಕಲಾ ಕೆತ್ತನೆಯ ಕುಸುರಿ ಕೆಲಸವನ್ನು ಮುಗಿಸಲು ೧೨೦ ರುಷಗಳು (ನಾಲ್ಕು ತಲೆಮಾರುಗಳು)ಬೇಕಾದವು!. ವಿಷ್ಣುವರ್ಧನನ ಅಂತ್ಯಕಾಲದಲ್ಲಿ ಆರಂಭವಾಗುವ ದೇವಾಲಯದ ನಿರ್ಮಾಣ ಕಾರ್ಯವು ಹೊಯ್ಸಳರ ಕಡೆಯ ಅರಸ ವಿಶ್ವನಾಥ ಬಲ್ಲಾಳನ ಕಾಲದವರೆವಿಗೂ ಮುಂದುವರಿದಿತ್ತೆಂದು ಶಾಸನಗಳಿಂದ ತಿಳಿದುಬರುತ್ತದೆ.
ಈ ದೇವಾಲಯದ ನಿರ್ಮಾಣಕ್ಕೆ ಬಳಪದ ಕಲ್ಲು ಬಳಕೆಯಾಗಿದೆ. ಇದನ್ನು ಸೋಪಸ್ಟೋನ್ ಅಥವಾ ಸ್ಟಿಯೋಟೈಟ್ ಎಂದು ಕರೆಯಲಾಗುತ್ತದೆ. ಈ ಕಲ್ಲು ಬಹುವಾಗಿ ದೊರೆಯುವುದು ಭೂಮಿಯ ಒಳಭಾಗದ ಮೇಲ್ಪದರದಲ್ಲಿ. ಇದು ಪುಡಿ ಮತ್ತು ಉಂಡೆಯಂತಹ ರಚನೆಯನ್ನು ಹೊಂದಿರುತ್ತದೆ. ಹೊರತೆಗೆದು ವಾತಾವರಣಕ್ಕೆ ಹೊಂದಿಕೊಳ್ಳಲು ಬಿಟ್ಟಾಗ ಕ್ರಮೇಣ ಗತ್ಟಿಯಾಗುತ್ತದೆ. ಕಲ್ಲಿನ ಈ ವಿಶೇಷ ಗುಣದಿಂದಲೇ ಹೊಯ್ಸಳರ ದೇವಾಲಯಗಳಲ್ಲಿ ಸೂಕ್ಷ್ಮ ಕುಸುರಿ ಕೆತ್ತನೆಗಳನ್ನು ಕಾಣಲು ಸಾಧ್ಯವಾಗಿದೆ.
ಹೊಯ್ಸಳ ರಾಜವಂಶದ ಬಗೆಗೆ ಜನರಲ್ಲಿದ್ದ ಗೌರವ ಭಾವನೆಗಳೇ ಈ ದೇವಾಲಯದ ನಿರ್ಮಾಣಕ್ಕೆ ಕಾರಣ ಎನ್ನಲಾಗಿದೆ. ಹೊಯ್ಸಳ ವಂಶದ ಹೆಸರು ಅಜರಾಮರವಾಗಿ ಉಳಿಯಬೇಕೆಂಬ ಕಾರಣದಿಂದ ದೊಡ್ಡ ದೇವಾಲಯವನ್ನು ನಿರ್ಮಿಸಿ ಮೂಲ ಶಿವನ ಮೂರ್ತಿಗೆ ಹೊಯ್ಸಳ ವಂಶದ ಹೆಸರನ್ನೇ ಇಡಲಾಗಿದೆ. ಹೊಯ್ಸಳರ ಪ್ರಭುವೇ ಹೊಯ್ಸಳೇಶ್ವರ.
ಶಿಲ್ಪಿಗಳು
[ಬದಲಾಯಿಸಿ]ಈ ದೇವಾಲಯದ ನಿರ್ಮಾಣಕಾರ್ಯದಲ್ಲಿ ಇಪ್ಪತ್ತು ಸಾವಿರಕ್ಕಿಂತಲೂ ಹೆಚ್ಚು ಶಿಲ್ಪಿಗಳು/ಕಾರ್ಮಿಕರು ಕೈ ಜೋಡಿಸಿದ್ದರೆಂದು ಅಧ್ಯಯನಗಳಿಂದ ತಿಳಿದುಬಂದಿದೆ. ಕಲ್ಲು ಹುಡುಕುವವರು, ತರುವವರು, ಮೊದಲ ಹಂತದ ಕೆತ್ತನೆ ಮಾಡುವವರು, ನಿರ್ಧಿಷ್ಟ ಜಾಗದಲ್ಲಿ ಜೋಡಿಸುವವರು, ಅಂತಿಮ ಹಂತದ ಕೆತ್ತನೆಗಾರರು, ಕುಸುರಿ ಕೆಲಸಗಾರರು ಒಳಗೊಂಡತೆ ಸಾವಿರಾರು ಮಂದಿ ಕೈ ಜೋಡಿಸಿದ್ದಾರೆ. ಇವೆಲ್ಲಕ್ಕೂ ಮಿಗಿಲಾಗಿ ಮುಖ್ಯ ವಾಸ್ತುತಜ್ಞನಿಂದ ದೇವಾಲಯದ ಮಾದರಿ ನಕ್ಷೆಯು ಸಿಧ್ಧವಾಗಿರುತ್ತಿತ್ತು. ಅದರ ಅನುಸಾರವೇ ವರುಷಗಳ ಕಾಲ ನುರಿತ ಶಿಲ್ಪಿಗಳು ಕಾರ್ಯದಲ್ಲಿ ತೊಡಗಿಕೊಳ್ಳುತ್ತಿದ್ದರು. ಕೆಲವು ವಿಗ್ರಹಗಳನ್ನು ಪೂರ್ಣ ಕೆತ್ತಿ ಜೋಡಿಸುತ್ತಿದ್ದರೆ , ಇನ್ನೂ ಕೆಲವನ್ನು ಜೋಡಿಸಿದ ನಂತರ ಕೆತ್ತಲಾಗುತ್ತಿತ್ತು. ಹೊಯ್ಸಳರು ಶಿಲ್ಪಕಲೆಗಿತ್ತ ಅದಮ್ಯ ಪ್ರೋತ್ಸಾಹವೆ ಹಳೇಬೀಡಿನಲ್ಲಿ ಅಧ್ಬುತ ದೇವಾಲಯಗಳು ನಿರ್ಮಾಣವಾಗಲು ಕಾರಣ ಎನ್ನಬಹುದು. ಅಧ್ಬುತ ಕೆಲಸವಿರುವ ದೇವಾಲಯವಾದರೂ ಕೆತ್ತನೆಯನ್ನು ಮಾಡಿರುವ ಶಿಲ್ಪಿಗಳ /ಕಾರ್ಮಿಕರ ಹೆಸರುಗಳು ಹೆಚ್ಚು ತಿಳಿದುಬರುವುದಿಲ್ಲ. ಒಂದೆರೆಡು ಶಾಸನಗಳಲ್ಲಿ ನಾಗೋಜಚಾರ್ಯ ನೆಂಬುವನು ಈ ದೇವಾಲಯಗಳ ಮುಖ್ಯ ವಾಸ್ತುಶಿಲ್ಪಿ ಎಂದು ತಿಳಿದುಬಂದರೂ, ನಿರ್ಮಾಣ ಕಾರ್ಯವು ಒಬ್ಬನಿಂದ ಸಾಧ್ಯವಾಗದಿರುವ ಕಾರಣ ಆತನೊಬ್ಬನನ್ನೇ 'ಶಿಲ್ಪಿ' ಎಂದು ಕರೆಯಲು ಸಾಧ್ಯವಾಗುವುದಿಲ್ಲ. ದಂತಕತೆಗಳ ಪ್ರಕಾರ ಜಕ್ಕಣಾಚಾರ್ಯ ಮತ್ತು ಡಕ್ಕಣಾಚಾರ್ಯ ಎಂಬುವವರೂ ಇದ್ದರೆಂದು ತಿಳಿದು ಬರುತ್ತದೆ. ಇದಕ್ಕೆ ಯಾವುದೇ ಪುರಾವೆಗಳು ದೊರೆತಿಲ್ಲ. ದಕ್ಷಿಣದಿಂದ ಬಂದಂತಹ ಆಚಾರ್ಯರು ದಕ್ಷಿಣಾಚಾರ್ಯರಾಗಿ ನಂತರ ಡಕ್ಕಣಾಚಾರ್ಯ ಎಂಬ ರೂಪ ತಳೆದಿರಬಹುದೆಂಬ ಊಹೆಯೂ ಇದೆ. ಕೆಲವು ಶಿಲ್ಪಗಳ ಮೇಲ್ಭಾಗದಲ್ಲಿ ಮತ್ತು ಕೆಳಗಡೆ ಶಿಲ್ಪಿಗಳ ಹೆಸರುಗಳು ಕಂಡುಬಂದಿರುತ್ತದೆ. ಮಾಬ, ಮಾರಿಬಲಕಿ, ಬೋಚಣ, ಮಲ್ಲೋಜ, ದಾಸೋಜ, ಚವಣ ಹಾಗೂ ಕಾಲಿದಾಸೀ ಎಂಬ ಹೆಸರುಗಳು ಕಂಡುಬಂದಿವೆ. ಇವರಲ್ಲ್ಲಿ 'ಕಾಲಿದಾಸೀ' ಯು ಶಿಲ್ಪಗಾರ್ತಿ ಎನ್ನುವುದು ವಿಶೇಷ ವಿಷಯ. ಹೆಂಗಸರೂ ಶಿಲ್ಪಕಲೆಯಲ್ಲಿ ಪ್ರವೀಣರಾಗಿದ್ದರು ಮತ್ತು ಅವರಿಗೆ ಉತ್ತಮ ಪ್ರೋತ್ಸಾಹವೂ ಇತ್ತೆಂಬುದಕ್ಕೆ ಇದು ಒಳ್ಳೆಯ ನಿದರ್ಶನ. ಈ ದೇವಾಲಯದ ಮುಖ್ಯದ್ವಾರವೊಂದರ ಮೇಲೆ ಇಂದಿಗೂ ಕಾಲಿದಾಸಿಯು ಗೇದ ಮುಖತೋರಣ ಎನ್ನುವ ವಾಕ್ಯವನ್ನು ಕಾಣಬಹುದು.
ಶೈಲಿ
[ಬದಲಾಯಿಸಿ]ಹೊಯ್ಸಳ ಶಿಲ್ಪಕಲೆ ದ್ರಾವಿಡ ಶೈಲಿ ಮತ್ತು ಆರ್ಯ ಶೈಲಿಗಳೆರಡರ ಗುಣಗಳನ್ನೂ ತನ್ನದಾಗಿಸಿಕೊಂಡಿದೆ. ಈ ಶೈಲಿಯನ್ನು ವೇಸರ ಅಥವಾ ಹೊಯ್ಸಳ ಶೈಲಿ ಎಂದೂ ಕರೆಯಲಾಗುತ್ತಿದೆ. ಹೊಯ್ಸಳರ ಎಲ್ಲ ದೇವಾಲಯಗಳು ನಕ್ಷತ್ರಾಕಾರದ ಜಗತಿಯನ್ನು ಒಳಗೊಂಡಿರುತ್ತದೆ. ದೇವಾಲಯದ ಪೂರ್ವಭಾಗದಲ್ಲಿ ಉತ್ತಮ ಗಾಳಿ ಬೆಳಕು ದೊರೆಯಲು ಬೆಳಕಿಂಡಿಗಳು ಮತ್ತು ಅಲ್ಲಲ್ಲಿ ಕಂಬಗಳನ್ನು ಜೋಡಿಸಿ ಕಿಟಕಿಗಳನ್ನು ಮಾಡಿರುತ್ತಾರೆ. ಪಶ್ಚಿಮ ಭಾಗವು ಪೂರ್ಣವಾಗಿ ಕಲಾಕೃತಿಗಳಿಂದ ತುಂಬಿರುತ್ತದೆ. ಪ್ರದಕ್ಷಿಣೆಯ ಪಥದದಲ್ಲಿ ದೇವಾಲಯವನ್ನು ನೋಡಿಕೊಂಡು ಹೊರಟಾಗ ಅರಿವನ ಭಂಡಾರವೆ ದೊರೆಯುವುದರಲ್ಲಿ ಸಂಶಯವಿಲ್ಲ. ಇವರ ದೇವಾಲಯಗಳು ಮುಖ್ಯವಾಗಿ ನಾಲ್ಕು ಭಾಗಗಳನ್ನು ಒಳಗೊಂಡಿರುತ್ತದೆ. ಮೂಲ ದೇವರ ಮೂರ್ತಿಯಿರುವ ಜಾಗವು ಗರ್ಭಗೃಹ, ನಂತರದ ಸ್ಥಳ ಶುಕನಾಸಿ ಅಥವಾ ಅಂತರಾಳ, ಮೂರನೆಯದು ನವರಂಗ ಅಥವಾ ಸಭಾಮಂಟಪ ಮತ್ತು ನಾಲ್ಕನೆಯದು ವಾಹನ ಮಂಟಪ.ಗರ್ಭಗುಡಿಯಲ್ಲಿ ಸಂಬಂಧಿಸಿದ ದೇವರ ಮೂಲವಿಗ್ರಹವಿರುತ್ತದೆ. ಅಂತರಾಳ ಅಥವಾ ಶುಕನಾಸಿಯು ವಿಶೇಷ ಪ್ರಾರ್ಥನೆಗೆ, ರಾಜರಿಗೆ, ದೇವಾಲಯಕ್ಕೆ ಸಂಬಂಧಪಟ್ಟ ಧಾರ್ಮಿಕ ಅಧಿಕಾರಿಗಳು ಪ್ರಾರ್ಥನೆ ಸಲ್ಲಿಸಲು ಮತ್ತು ಉತ್ಸವ ದೇವರುಗಳನ್ನು ಇಟ್ಟು ಪೂಜಿಸುವ ಸ್ಥಳವಾಗಿರುತ್ತದೆ. ಸಭಾಮಂಟಪ ಅಥವಾ ನವರಂಗವು ಸಾರ್ವಜನಿಕರ ಬಳಕೆಗೆ ಮುಕ್ತವಾಗಿರುತ್ತದೆ. ನವರಂಗ ಮಂಟಪವು ಸಾಂಸ್ಕೃತಿಕ ಚಟುವಟಿಕೆಗಳನ್ನು ನೆಡೆಸಲು, ವಿಶೇಷ ಸಭೆಗಳನ್ನು ನೆಡೆಸುವುದಕ್ಕಾಗಿ ರಚನೆಯಾಗಿರುತ್ತದೆ. ವಾಹನ ಮಂಟಪದಲ್ಲಿ ಸಂಬಧಿಸಿದ ದೇವರ ವಾಹನವನ್ನು ಕೆತ್ತಿರಿಸಲಾಗಿರುತ್ತದೆ. ಉದಾ: ಶಿವನಿಗೆ ನಂದಿಯು ವಾಹನವಾದರೆ ವಿಷ್ಣುವಿನ ಮುಂದೆ ಗರುಡನ ಮೂರ್ತಿಯಿರುತ್ತದೆ.
ಹೊರನೋಟ
[ಬದಲಾಯಿಸಿ]ಬೇಲೂರು ಒಳನೋಡು ಹಳೇಬೀಡನ್ನು ಹೊರನೋಡು ಎಂಬ ನಾಣ್ಣುಡಿಯಂತೆ ಹಳೇಬೀಡಿನ ದೇವಾಲಯವು ಹೊರನೋಟಕ್ಕೆ ಹೆಚ್ಚು ಪ್ರಸಿಧ್ಧಿಯಾಗಿದೆ. ದೇವಾಲಯದ ಪ್ರದಕ್ಷಿಣಾಪಥದಲ್ಲಿ ೧೫ ಸಾವಿರಕ್ಕೂ ಹೆಚ್ಚಿನ ಶಿಲ್ಪಗಳನ್ನು ಕಾಣಬಹುದು. ಒಂದೊಂದರಲ್ಲೂ ಸೂಕ್ಷ್ಮ ಕುಸುರಿ ಕೆಲಸದ ಜೊತೆಗೆ ಪೌರಾಣಿಕ, ಸಾಮಾಜಿಕ ಮತ್ತು ಅಂದಿನ ನಾಗರಿಕತೆಯನ್ನು ಹೇಳುವ ಅನೇಕ ಕಲಾಕೃತಿಗಳನ್ನು ನೋಡಬಹುದು. ಒಳಭಾಗದಲ್ಲಿ ಇನ್ನೂ ಹೆಚ್ಚಿನ ಕುಸುರಿ ಕೆಲಸವಿರುವ ವಿಗ್ರಹಗಳಿದ್ದು ಹೊರಭಾಗಕ್ಕೆ ಹೋಲಿಸಿದರೆ ಕಡಿಮೆಸಂಖ್ಯೆಯಲ್ಲಿದೆ. ದೇವಾಲಯಕ್ಕೆ ನಾಲ್ಕು ಮುಖ್ಯ ಹೆಬ್ಬಾಗಿಲುಗಳಿದ್ದು ಎಲ್ಲ ಬಾಗಿಲುಗಳಲ್ಲೂ ಮಕರ ತೋರಣ ವನ್ನು ಕೆತ್ತಲಾಗಿದೆ. ನಾಲ್ಕು ಬಾಗಿಲುಗಳಲ್ಲೂ ಸುಂದರ ಕೆತ್ತನೆಯುಳ್ಳ ದ್ವಾರಪಾಲಕ ರನ್ನು ನಿಲ್ಲಿಸಲಾಗಿದೆ. ಇದಲ್ಲದೆ ಗಜಾಸುರ ಮರ್ದನ, ಗೋವರ್ಧನ ಗಿರಿಧಾರಿ, ಗಜೇಂದ್ರಮೋಕ್ಷ, ರಾಮಾಯಣ, ಮಹಾಭಾರತ ಮುಂತಾದ ಅನೇಕ ಪುರಾಣ ಕಥೆಗಳು, ಇತಿಹಾಸದ ತುಣುಕುಗಳು ಕಂಡುಬರುತ್ತದೆ. ಹೊಯ್ಸಳರ ಕಾಲದಲ್ಲಿ ದೇವಾಲಯದ ದಕ್ಷಿಣದ ಬಾಗಿಲು ರಾಜದ್ವಾರವಾಗಿತ್ತು. ಅರಮನೆಯ ಅವಶೇಷಗಳೂ ದಕ್ಷಿಣ ದಿಕ್ಕಿಗೆ ಇರುವುದರಿಂದ ದಕ್ಷಿಣದ ಬಾಗಿಲನ್ನು ಪ್ರವೇಶಕ್ಕೆ ಇಟ್ಟುಕೊಂಡಿದ್ದರೆಂದು ಊಹಿಸಬಹುದು. ರಾಜದ್ವಾರದ ಮುಂಭಾಗದಲ್ಲಿ ದೊಡ್ಡ ಗಣಪತಿಯ ವಿಗ್ರಹ ಮತ್ತು ಹೊಯ್ಸಳ ಲಾಂಛನವನ್ನು ಕಡೆದಿರಿಸಲಾಗಿದೆ. ದೇವಾಲಯದ ಪ್ರಾಕಾರವು ವಿಶಾಲವಾಗಿದ್ದು ಎತ್ತರದ ಜಗತಿಯನ್ನು ಹೊಂದಿದೆ. ಹೊರಭಿತ್ತಿಯಲ್ಲಿ ಹನ್ನೊಂದು ಸಾಲುಗಳಿದ್ದು, ಕೆಳಗಿನಿಂದ ಮೊದಲ ನಾಲ್ಕೈದು ಸಾಲುಗಳು ಆನೆ, ಕುದುರೆ, ಸಿಂಹ , ಹಂಸ ಮತ್ತು ಬಳ್ಳಿಯ ಕೆತ್ತೆನೆಯನ್ನು ಹೊಂದಿದೆ. ನಂತರ ಪುರಾಣ, ಇತಿಹಾಸ ಗಳನ್ನು ಹೇಳುವ ಶಿಲ್ಪಗಳ ಸಾಲಿದ್ದು ಕೊನೆಯ ಸಾಲಿನಲ್ಲಿ ಕಾಮಸೂತ್ರದ ವಿವಿಧ ಭಂಗಿಗಳನ್ನು ತೋರಿಸುವ ಚಿತ್ರಗಳಿವೆ. ಎಲ್ಲದರಲ್ಲೂ ತುಂಬ ನಾಜೂಕಿನ ಕೆಲಸವಿದೆ. ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ ಗಳನ್ನು ಅರಿತು ಮುನ್ನಡೆಯಲು ಅಂದಿನ ಕಾಲದಲ್ಲೇ ವಿವರವಾಗಿ ಕಲಾಕೃತಿಗಳ ಮೂಲಕ ತಿಳಿಸಿದ್ದಾರೆ ಎನ್ನಬಹುದು. ಹೊರಭಾಗದಲ್ಲಿ ಎರಡು ದೊಡ್ಡ ನಂದಿಯ ವಿಗ್ರಹವನ್ನೂ ನೋಡಬಹುದು. ಎರಡರಲ್ಲೂ ನಾಜೂಕಿನ ಕುಸುರಿ ಕೆಲಸಗಳನ್ನು ಗಮನಿಸಬಹುದು. ದೇವಾಲಯಕ್ಕೆ ಅಂದವನ್ನು ಹೆಚ್ಚಿಸುವ ಶಿಖರವು ಅನೇಕ ವರುಷಗಳ ಹಿಂದೆಯೇ ಕುಸಿದು ಬಿದ್ದು ಹೋಗಿದ್ದು ಈಗ ಶಿಖರದ ಕುರುಹುಗಳಷ್ಟೇ ಉಳಿದಿದೆ. ದೇವಾಲಯದ ಶಿಲ್ಪಕಲೆಯ ಸೊಬಗನ್ನು ಕಣ್ಣಾರೆಕಂಡು ಸವಿಯುವುದೇ ಅತ್ಯುತ್ತಮವಾದುದು.
ಒಳನೋಟ
[ಬದಲಾಯಿಸಿ]ದೇವಾಲಯಕ್ಕೆ ನಾಲ್ಕು ಬಾಗಿಲುಗಳಿದ್ದು ಪೂರ್ವಕ್ಕೆ ಎರಡು ಮತ್ತು ಉತ್ತರ-ದಕ್ಷಿಣವಾಗಿ ಒಂದೊಂದು ಬಾಗಿಲಿದೆ. ಉತ್ತರದ ಬಾಗಿಲಿನಿಂದ ದಕ್ಷಿಣಕ್ಕಿರುವ ಅಂತರವು ೧೬೦ ಅಡಿ. ಪೂರ್ವ-ಪಶ್ಚಿಮವಾಗಿ (ಗರ್ಭಗುಡಿಯ ಗೋಡೆಯವರೆಗೆ) ೧೨೨ ಅಡಿ ಉದ್ದವಿದೆ. ದೇವಾಲಯದ ಒಳಭಾಗದಲ್ಲಿ ಸುಮಾರು ೧೦೮ ಕಂಬಗಳಿದ್ದು ಒಂದೊಂದು ಕಂಬದಲ್ಲೂ ಒಂದೊಂದು ಬಗೆಯ ಚಿತ್ರಗಳಿವೆ. ಪ್ರ್ತಿಯೊಂದು ಕಂಬವೂ ಐದು ಕಲ್ಲುಗಳಿಂದ ನಿರ್ಮಿಸಲ್ಪಟ್ಟಿದ್ದು 'ಪಂಚಶಿಲಾ ಸ್ಥಂಭ' ವೆಂದು ಶಾಸನಗಳಲ್ಲಿ ಹೇಳಲ್ಪಟ್ಟಿದೆ. ಒಂದೇ ಜಗತಿಯ ಮೇಲೆ ಎರಡು ಮುಖ್ಯ ಗರ್ಭಗುಡಿಗಳಿದ್ದು ಇದನ್ನು ದ್ವಿ -ಕೂಟ ಎಂದು ಕರೆಯಲಾಗಿದೆ. ರಾಜ ವಂಶದ ಹೆಸರಿನಲ್ಲಿ ಸ್ಥಾಪನೆಯಾಗಿರುವ ಹೊಯ್ಸಳೇಶ್ವರ ಗರ್ಭಗುಡಿಯ ಜೊತೆಗೆ ಶಾಂತಲೇಶ್ವರ ಅಥವಾ ಪಾಂಡುಕೇಶ್ವರ ಎಮ್ದು ಕರೆಯಲಾಗುವ ಮತ್ತೊಂದು ಗುಡಿಯೂ ಇದೆ. ಶಾಂತಲೇಶ್ವರ ಎನ್ನುವ ಹೆಸರು ಹೇಗೆ ಬಂದಿದೆ ಎಂಬುದಕ್ಕೆ ಇಲ್ಲಿಯವರೆವಿಗೂ ಯಾವುದೇ ಆಧಾರಗಳೂ ದೊರೆತಿಲ್ಲ. ಬೇಲೂರಿನ ದಿಡ್ಡಿಬಾಗಿಲಿನಲ್ಲಿ ಇರುವ ಶಿಲಾಶಾಸನದಲ್ಲಿ ಪಾಂಡುಕೇಶ್ವರ ದೇವರು ಎಂಬ ಉಲ್ಲೇಖವು ಮಾತ್ರ ಕಂಡುಬರುತ್ತದೆ. ಆದರೂ, ಜನಪದದಲ್ಲಿ ಹೊಯ್ಸಳೇಶ್ವರ ದೇವರ ಪಕ್ಕದಲ್ಲಿರುವುದು ಶಾಂತಲೇಶ್ವರ ದೇವರು ಮತ್ತು ಈ ಗುಡಿಯನ್ನು ರಾಣಿ ಶಾಂತಲಾದೇವಿಯ ನೆನಪಿಗಾಗಿ ನಿರ್ಮಿಸಿದ್ದಾರೆಂಬ ಪ್ರತೀತಿಯು ಇಂದಿಗೂ ಬಳಕೆಯಲ್ಲಿದೆ. ಎರಡು ಶಿವಲಿಂಗಗಳೂ ಗಾತ್ರ ಮತ್ತು ಎತ್ತರದಲ್ಲಿ ಒಂದೇ ಸಮನಾಗಿದ್ದು ಸುಮಾರು ೫ ಅಡಿ ಎತ್ತರವಿದೆ. ಹೊಯ್ಸಳರ ಕಾಲದಲ್ಲಿ ಓಟ್ಟು ೮೪ ಶಿಲಾಬಾಲಿಕೆ ಗಳನ್ನು ನಿರ್ಮಿಸಿದ್ದರಂತೆ. ಆದರೆ, ಈಗ ಉಳಿದಿರುವುದು ೧೪ ಮಾತ್ರ. ಕಂಬವೊಂದಕ್ಕೆ ೪ ಶಿಲಾಬಾಲಿಕೆಯರ ವಿಗ್ರಹಗಳನ್ನು ಜೋಡಿಸಿದ್ದರೆಂದು ಕಂಡುಬರುತ್ತದೆ. ಒಳಭಾಗದ ದ್ವಾರಪಾಲಕರ ಆಭರಣುಗಳು ಮತ್ತು ಇತರ ವಿಗ್ರಹಗಳ ಕುಸುರಿ ಕೆತ್ತನೆಯು ಮನಸೂರೆಗೊಳ್ಳುತ್ತದೆ. ಹೊಯ್ಸಳರ ಕಾಲದಲ್ಲಿ ಸಂಪ್ರದಾಯದಂತೆ ಪೂಜಾದಿಗಳು-ಮಹೋತ್ಸವಗಳು ನೆಡೆದಿರುವ ಬಗ್ಗೆ ಹಲವು ಶಾಸನಗಳಲ್ಲಿ ಉಲ್ಲೇಖವಿದೆ. ಅವರ ನಂತರದಲ್ಲಿ ಯಾವ ದಾಖಲೆಗಳೂ ದೊರೆಯುವುದಿಲ್ಲ. ಹದಿನೆಂಟನೆಯ ಶತಮಾನದ ಶಾಸನವೊಂದರಲ್ಲಿ ಮತ್ತೆ ಮಹೋತ್ಸವಗಳು ಆರಂಭವಾಗಿರುವ ಬಗ್ಗೆ ಉಲ್ಲೇಖವಿದ್ದು, ಅಂದಿನಿಂದಲೇ ಎರಡೂ ದೇವರಿಗೆ ಪೂಜಾದಿಗಳು ಮತ್ತೆ ಆರಂಭವಾಗಿರಬಹುದೆಂದು ಊಹಿಸಲಾಗಿದೆ. ಮುಖ್ಯ ದೇವಾಲಯವಾದ ಹೊಯ್ಸಳೇಶ್ವರ ದೇವರಿಗೆ ಇಂದಿಗೂ ವಾರ್ಷಿಕ ಉತ್ಸವಗಳೂ ವಿಶೇಷ ಪೂಜಾದಿಗಳು ನೆಡೆದುಕೊಂಡು ಬರುತ್ತಿದೆ. ಒಳಭಾಗದಲ್ಲಿ ಎರಡು ಗರ್ಭಗುಡಿಗಳು, ಎರಡು ಶುಕನಾಸಿ(ಅಂತರಾಳ), ಎರಡು ನವರಂಗ ಹಾಗೂ ಎರಡು ನಂದಿ ಮಂಟಪಗಳಿರುವುದರಿಂದ ಈ ದೇವಾಲಯವನ್ನು ಜೋಡಿ ದೇವಾಲಯವೆಂದು ಕರೆಯಲಾಗುತ್ತಿದೆ. ಹೊಯ್ಸಳ ದೇವಾಲಯಗಳಲ್ಲಿ ಸಹಸ್ರಾರು ಸುಂದರ ಕೆತ್ತನೆಗಳನ್ನು ಕಾಣಬಹುದು. ರಾಮಾಯಣ ಮಹಾಭಾರತಗಳ ದೃಶ್ಯಗಳು, ಸುಂದರ ನರ್ತಿಸುವ ಶಿಲಾಬಾಲಿಕೆಯರಿಂದ ಕೂಡಿದ ಈ ದೇವಾಲಯಗಳು ಹೊಯ್ಸಳ ಸಾಮ್ರಾಜ್ಯ ಬಿಟ್ಟು ಹೋದ ಮುಖ್ಯ ಸಂಪ್ರದಾಯ.
ನಿರ್ವಹಣೆ
[ಬದಲಾಯಿಸಿ]ದೇವಾಲಯಕ್ಕೆ ಇಂದು ಉತ್ತರದ ಬಾಗಿಲಿನಿಂದ ಪ್ರವೇಶವನ್ನು ಕಲ್ಪಿಸಲಾಗಿದೆ. ಈಗಿರುವ ಹಳೇಬೀಡು ಉತ್ತರಕ್ಕೇ ಹೆಚ್ಚು ಬೆಳೆದಿರುವುದರಿಂದ ಈ ವ್ಯವಸ್ಥೆಯಿದೆ. ಶುಧ್ಧ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಆಧುನಿಕ ಮಾದರಿಯ ಶೌಚಾಲಯವೂ ಇಲ್ಲಿದೆ. ದೇವಾಲಯದ ಒಟ್ಟು ವಿಸ್ತೀರ್ಣ ೪ ಎಕರೆಗಳಿಷ್ಟಿದೆ. ಇದಲ್ಲದೆ ದೇವಾಲಯಕ್ಕೆ ಹೊಂದಿಕೊಂಡೇ ಇರುವ ಸುಂದರ ಉದ್ಯಾನವನದ ವಿಸ್ತೀರ್ಣ ಸುಮಾರು ೧೨ ಎಕರೆಗಳಷ್ಟಿದೆ. ಉದ್ಯಾನವನದಲ್ಲಿ ಹಸಿರು ಹುಲ್ಲಿನ ಜೊತೆಗೆ ವಿವಿಧ ಜಾತಿಯ ಹೂಗಿಡಗಳನ್ನೂ ಬೆಳೆಸಲಾಗಿದೆ. ತೋಟದ ಅಂಚಿನಲ್ಲಿ ತೆಂಗಿನ ಮರಗಳು ಹಾಗೂ ಮಾವಿನ ತೋಪನ್ನೂ ನೋಡಬಹುದು. ೧೯೫೨ ನೆಯ ಇಸವಿಯಲ್ಲಿ ಕೇಂದ್ರಸರ್ಕಾರವು ಈ ದೇವಾಲಯವನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಿದೆ. ಅಲ್ಲಿಂದಲೂ ಈ ದೇವಾಲಯದ ನಿರ್ವಹಣೆಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ನೋಡಿಕೊಳ್ಳುತ್ತಿದೆ. ಸ್ಮಾರಕಗಳ ರಕ್ಷಣೆಗಾಗಿಯೇ ಮಾಡಿರುವ ಕಾನೂನಿನಂತೆ ಐದು ವರುಷಗಳಿಗೊಮ್ಮೆ ಇಡೀ ದೇವಾಲಯವನ್ನು ರಾಸಾಯನಿಕಗಳಿಂದ ಸ್ವಚ್ಛಗೊಳಿಸಲಾಗುತ್ತದೆ. ಧಾರ್ಮಿಕ ವಿಧಿಗಳು ಮತ್ತು ಪೂಜಾದಿಗಳಿಗೆ ಸಂಬಂದಿಸಿದ್ದನ್ನು ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯು ನೋಡಿಕೊಳ್ಳುತ್ತಿದೆ. ಸಹಾಯಕ ಪುರಾತತ್ವತಜ್ಞರ ಕಚೇರಿಯೂ ಇಲ್ಲಿದೆ. ಈಗ ಉದ್ಯಾನವನವಿರುವ ಪ್ರದೇಶವು ಹೊಯ್ಸಳರ ಕಾಲದಲ್ಲಿ ಪ್ರಾಕಾರ, ಪಾಕಶಾಲೆ ಮುಂತಾದವುಗಳನ್ನು ಒಳಗೊಂಡಿದ್ದಿರಬಹುದೆಂದು ಊಹಿಸಲಾಗಿದೆ. ಈಗಿನ ಕಾಲದ ದೃಷ್ಯವು ಬಹುತೇಕ ಬ್ರಿಟೀಶರ ಕಾಲದ ನಿರ್ವಹಣೆಯನ್ನೇ ಹೋಲುತ್ತದೆ. ಸ್ಮಾರಕಗಳ ರಕ್ಷಣೆಗೆಂದು ಇರುವ ಕಾನೂನನ್ನು ಸರ್ಕಾರವು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದು ಯಾವುದೇ ಸಾರ್ವಜನಿಕರು ಯಾವುದೇ ವಿಗ್ರಹವನ್ನು ಮುಟ್ಟುವುದು, ಕುಟ್ಟುವುದು, ವಿರೂಪಗೊಳಿಸುವುದು ಮುಂತಾದವುಗಳನ್ನು ನಿರ್ಭಂಧಿಸಿದೆ. ಈ ದೇವಾಲಯವು ನಿಯಂತ್ರಿತ ಪ್ರದೇಶದ ವ್ಯಾಪ್ತಿಯಲ್ಲಿ ಬರುವುದರಿಂದ ಕಾನೂನು ಬಾಹಿರ ಚಟುವಟಿಕೆಗಳಿಗೆ ದಂಡವಿಧಿಸುವುದು ಅಥವಾ ಐದು ವರುಷಗಳ ಜೈಲು ಶಿಕ್ಷೆಯನ್ನು ನೀಡುವ ನೀತಿಸಂಹಿತೆಯೂ ಜಾರಿಯಲ್ಲಿದೆ. ಇದಕ್ಕೆ ಸಂಬಧಪಟ್ಟ ವಿವರಣೆಯ ಫಲಕಗಳನ್ನೂ ಅಲ್ಲಲ್ಲಿ ಅಳವಡಿಸಲಾಗಿದೆ. ಹೆಚ್ಚಿನ ಭದ್ರತೆಗಾಗಿ ಕಾಯಂ ಕೇಂದ್ರ ಮೀಸಲು ಪಡೆಯನ್ನು ನಿಯೋಜಿಸಲಾಗಿದೆ. ಇತ್ತೀಚೆಗೆ ಉಪಗ್ರಹ ನಿಯಂತ್ರಿತ ಪರಿವೀಕ್ಷಣಾ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇಂತಹ ರಾಷ್ಟ್ರೀಯ ಸ್ಮಾರಕಗಳನ್ನು ರಕ್ಷಿಸುವುದು ಎಲ್ಲರ ಕರ್ತವ್ಯವಾಗಿದೆ.
ದೇವಾಲಯದ ಇನ್ನಿತರ ಆಕರ್ಷಣೆಗಳು ಹೀಗಿವೆ.
ವಸ್ತುಸಂಗ್ರಹಾಲಯ
[ಬದಲಾಯಿಸಿ]ದೇವಾಲಯದ ಈಶಾನ್ಯ ದಿಕ್ಕಿನಲ್ಲಿ ವಸ್ತುಸಂಗ್ರಹಾಲಯವನ್ನು ನಿರ್ಮಿಸಲಾಗಿದೆ. ಉತ್ಖನನ(ಹುಡುಕಿ ತೆಗೆಯುವುದು)ದ ಸಂದರ್ಭದಲ್ಲಿ ಸಿಕ್ಕಿರುವ ಅನೇಕ ವಿಗ್ರಹಗಳನ್ನು ಅವುಗಳ ವಿವರಣೆಯೊಂದಿಗೆ ಇಲ್ಲಿ ಸಂರಕ್ಷಿಸಿಡಲಾಗಿದೆ. ದೇವಾಲಯದ ನಿರ್ಮಾಣಕ್ಕೆ ಬಳಸಿರಬಹುದಾದ ಅನೇಕ ಆಯುಧಗಳನ್ನೂ ಸಹ ಇಲ್ಲಿ ನೋಡಬಹುದು. ಒಂದೆರೆಡು ತಾಮ್ರಶಾಸನಗಳು ಮತ್ತು ಹಲವಾರು ಶಿಲಾಶಾಸನಗಳಿವೆ. ೮ ಕ್ಕೂ ಹೆಚ್ಚು ಮಾಸ್ತಿಕಲ್ಲುಗಳಿವೆ. ೫ ವೀರಗಲ್ಲುಗಳನ್ನು ಸಂರಕ್ಷಿಸಿಡಾಲಾಗಿದೆ. ಹೊಯ್ಸಳರ ಕಾಲದ ತಾಮ್ರದ ಮತ್ತು ಚಿನ್ನದ ನಾಣ್ಯಗಳನ್ನು ಅವುಗಳು ದೊರೆತಿರುವ ಮತ್ತು ಮೂಲಕಾಲವನ್ನು ನಮೂದಿಸಿ ಇಡಲಾಗಿದೆ. ಹೊಯ್ಸಳರ ರಾಜವಂಶಾವಳಿಯ ಚಿತ್ರಣವೂ ಇಲ್ಲಿದೆ. ರಾಜಧಾನಿಯಾಗಿದ್ದ ದೋರಸಮುದ್ರದ ಸಂಪೂರ್ಣ ಮ್ಯಾಪ್ ಕೂಡಾ ಇಲ್ಲಿದೆ. ಅಂದಿನ ಕಾಲದ ದಿನ ಬಳಕೆಯ ವಸ್ತುಗಳನ್ನೂ ಇಲ್ಲಿ ನೋಡಬಹುದು.
ದೇವಾಲಯದ ಹಲವು ವಿಗ್ರಹಗಳು ಕಿಡಿಗೇಡಿಗಳ ಪುಂಡಾಟಕ್ಕೆ ಸಿಲುಕಿ ಮೂಲಸ್ವರೂಪವನ್ನು ಕಳೆದುಕೊಂಡಿದ್ದರೂ ತನ್ನ ಕಲೆಯ ಸೊಬಗಿನಿಂದ ನೋಡುಗರನ್ನು ಮರುಳುಮಾಡುತ್ತದೆ.
ಉಲ್ಲೇಖನಗಳು
[ಬದಲಾಯಿಸಿ]ಮಾಹಿತಿ ಮೂಲ: ಎಪಿಗ್ರಾಫಿಕಾ ಕರ್ನಾಟಕ.