ವಿಷಯಕ್ಕೆ ಹೋಗು

ಮಕರ ತೋರಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಮಕರ ತೋರಣ
ಮಕರ ಪ್ರಾಣಿ


ಹೊಯ್ಸಳರ ಎಲ್ಲಾ ದೇವಾಲಯಗಳ ಮಹಾದ್ವಾರಗಳ ಮೇಲ್ಭಾಗದಲ್ಲಿ ಅಲಂಕಾರಿಕ ಕಲಾಕೃತಿಯಾಗಿ ಮಕರ ತೋರಣವು ಕಂಡುಬರುತ್ತದೆ. ಮಕರ ಎಂದರೆ ಮೊಸಳೆ ಎನ್ನುವ ಅರ್ಥವಿದ್ದರೂ ಸಹ ಈ ಪ್ರಾಣಿಯನ್ನು ಕಾಲ್ಪನಿಕ ಪ್ರಾಣಿಯನ್ನಾಗಿ ಚಿತ್ರಿಸಲಾಗಿದೆ. ಮಕರ ಪ್ರಾಣಿಯು ಏಳು ಪ್ರಾಣಿಗಳ ಅಂಗಗಳಿಂದ ಕೂಡಿದೆ. ಸಿಂಹದ ಕಾಲು, ಮೊಸಳೆಯ ಬಾಯಿ, ಆನೆಯ ಸೊಂಡಿಲು, ಹಂದಿಯ ದೇಹ, ಹಸುವಿನ ಕಿವಿ, ಕೋತಿಯ ಕಣ್ಣು ಮತ್ತು ನವಿಲಿನ ಪುಕ್ಕವನ್ನು ಒಳಗೊಂಡಿದೆ. ನೀರಿನ ದೇವತೆಯಾದ ವರುಣ ಮತ್ತು ಆತನ ಹೆಂಡತಿ ವಾರುಣಿಗೆ ಮಕರವು ವಾಹನವಾಗಿದೆ. ಮಕರತೋರಣವು ಕೇವಲ ಮಕರ ಪ್ರಾಣಿಯನ್ನಷ್ಟೇ ಒಳಗೊಂಡಿರದೆ ಆಯಾ ದೇವಾಲಯದ ಮುಖ್ಯ ದೇವರ ಅವತಾರವನ್ನು ಅಥವಾ ರೂಪವನ್ನು ಎರಡು ಪ್ರಾಣಿಗಳ ಮಧ್ಯಭಾಗದಲ್ಲಿ ವಿಶೇಷ ಕೆತ್ತನೆಯೊಂದಿಗೆ ಹೊಂದಿರುತ್ತದೆ. ಉದಾಹರಣೆಗೆ, ವಿಷ್ಣುವಿನ ದೇವಾಲಯದಲ್ಲಿ ಕಂಡುಬರುವ ಮಕರತೋರಣದ ನಡುವಿನಲ್ಲಿ ದಶಾವತಾರಗಳನ್ನು ಕೆತ್ತಲಾಗಿರುತ್ತದೆ. ಶಿವನ ದೇವಾಲಯವಾದರೆ ಶಿವನ ರೂಪಗಳಾದ ತಾಂಡವ, ನಟರಾಜ ಮುಂತಾದವುಗಳು ಕಂಡುಬರುತ್ತದೆ. ಈ ಕಾಲ್ಪನಿಕ ಪ್ರಾಣಿಗೆ ವಿವಿಧ ಪ್ರಾಣಿಗಳ ಅಂಗಾಗಗಳನ್ನು ಹೊಂದಿಸಿರುವುದನ್ನು ಕೆಲವು ವಿದ್ವಾಂಸರು ಹೀಗೆ ವಿಮರ್ಷಿಸಿರುತ್ತಾರೆ. ಸಿಂಹದ ಕಾಲುಗಳು ವೇಗದ ಓಟಕ್ಕೆ, ಹಂದಿಯ ದೇಹವು ಜೀರ್ಣಶಕ್ತಿಗೆ, ಕೋತಿಯ ಕಣ್ಣು ತೀಷ್ಣ ನೋಟಕ್ಕೆ, ಹಸುವಿನ ಕಿವಿಯು ಚುರುಕಾದ ಕೇಳುವಿಕೆಗೆ, ಆನೆಯ ಸೊಂಡಿಲು ಭಾರವನ್ನು ಹೊರುವುದಕ್ಕೆ, ಮೊಸಳೆಯ ಬಾಯಿಯು ಬಿಗಿಯಾದ ಹಿಡಿತಕ್ಕೆ ಮತ್ತು ನವಿಲಿನ ಪುಕ್ಕವು ಅಂದಕ್ಕೆ ಪ್ರತಿರೂಪವಾಗಿವೆ ಎನ್ನುತ್ತಾರೆ. ಒಬ್ಬ ವೀರ ಯೋಧನು ಈ ಎಲ್ಲಾ ಗುಣಗಳನ್ನೂ ಪ್ರತಿನಿಧಿಸುತ್ತಾನೆ ಎನ್ನುವುದೂ ವಿಮರ್ಷಕರ ಅಭಿಮತವಾಗಿದೆ.

"https://kn.wikipedia.org/w/index.php?title=ಮಕರ_ತೋರಣ&oldid=332041" ಇಂದ ಪಡೆಯಲ್ಪಟ್ಟಿದೆ