ವಿಷಯಕ್ಕೆ ಹೋಗು

ಆವೇಗ (ಭೌತಶಾಸ್ತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸಂವೇಗ(ಮೊಮೆಂಟಮ್) ಇಂದ ಪುನರ್ನಿರ್ದೇಶಿತ)
ಸ್ಟ್ರೈಕ್ ಚೆಂಡು ಅಪ್ಪಳಿಸಿದ ನಂತರ ಪೂಲ್ ಆಟದ ಕ್ಯೂ ಚೆಂಡಿನ ಆವೇಗವು ರ‍್ಯಾಕ್ ಮಾಡಿದ ಚೆಂಡುಗಳಿಗೆ ವರ್ಗಾವಣೆಗೊಳ್ಳುತ್ತದೆ

ಭೌತಶಾಸ್ತ್ರದಲ್ಲಿ, ಆವೇಗ (ಸಂವೇಗ) ಎಂದರೆ ಒಂದು ವಸ್ತುವಿನ ದ್ರವ್ಯರಾಶಿ ಹಾಗೂ ವೇಗದ ಗುಣಲಬ್ಧ.[] ಇದು ಒಂದು ಮೂರು ಆಯಾಮದ ಸದಿಶ ಪರಿಮಾಣವಾಗಿದ್ದು, ಪರಿಮಾಣ ಮತ್ತು ದಿಕ್ಕು ಎರಡನ್ನೂ ಹೊಂದಿರುತ್ತದೆ. m ವಸ್ತುವಿನ ದ್ರವ್ಯರಾಶಿಯಾಗಿದ್ದರೆ ಮತ್ತು v ವೇಗವಾಗಿದ್ದರೆ, ಆವೇಗ (ಸಂವೇಗವು) p

p =m.v,

ಎಸ್‍ಐ ಏಕಮಾನದಲ್ಲಿ, ಇದನ್ನು ಸೆಕೆಂಡಿಗೆ ಕೆ.ಜಿ. ಮೀಟರ್‌ನಲ್ಲಿ ಅಳೆಯಲಾಗುತ್ತದೆ (kg⋅m/s). ಒಂದು ಕಾಯದ ಆವೇಗದ ಬದಲಾವಣೆಯ ದರವು ಅದರ ಮೇಲೆ ವರ್ತಿಸುತ್ತಿರುವ ನಿವ್ವಳ ಬಲಕ್ಕೆ ಸಮಾನವಾಗಿರುತ್ತದೆ ಎಂದು ನ್ಯೂಟನ್‍ನ ಎರಡನೇ ಚಲನಾ ನಿಯಮ ಹೇಳುತ್ತದೆ.

ಸಂವೇಗವು ಅದನ್ನು ಅಳೆಯಲು ಬಳಸಲ್ಪಡುವ ಆಯಾಮ ಚೌಕಟ್ಟನ್ನು ಅವಲಂಬಿಸಿರುತ್ತದೆ. ಸ್ಥಿರವಾಗಿರುವ ಆಯಾಮ ಚೌಕಟ್ಟಿಗೆ ಸಂಬಂಧಿಸಿದಂತೆ ಹೇಳುವುದಾದರೆ, ಸಂವೇಗವು ಸಂರಕ್ಷಿತ ಪರಿಮಾಣವಾಗಿದೆ, ಅಂದರೆ ಒಂದು ಸಂವೃತ ವ್ಯವಸ್ಥೆಯಲ್ಲಿ ಒಂದು ವಸ್ತುವು ಬಾಹ್ಯ ಬಲಗಳಿಂದ ಬಾಧಿತವಾಗದಿದ್ದರೆ, ಅದರ ಒಟ್ಟು ರೇಖೀಯ ಸಂವೇಗವು ಬದಲಾಗುವುದಿಲ್ಲ. ಆವೇಗವು ವಿಶೇಷ ಸಾಪೇಕ್ಷತೆಯಲ್ಲೂ ಸಂರಕ್ಷಿತವಾಗಿರುತ್ತದೆ, ಮತ್ತು ಬದಲಾದ ರೂಪದಲ್ಲಿ, ವಿದ್ಯುದ್ಬಲವಿಜ್ಞಾನ (electrodynamics), ಕ್ವಾಂಟಮ್ ಯಂತ್ರಶಾಸ್ತ್ರ ([[quantum mechanics]]), ಕ್ವಾಂಟಮ್ ಕ್ಷೇತ್ರ ಸಿದ್ಧಾಂತ, ಮತ್ತು ಸಾಮಾನ್ಯ ಸಾಪೇಕ್ಷತೆ (general relativity) ಯಲ್ಲೂ ಸಂರಕ್ಷಿತವಾಗಿರುತ್ತದೆ. ಇದು ದೇಶ ಮತ್ತು ಕಾಲದ ಮೂಲಭೂತ ಸಮ್ಮಿತಿಗಳಲ್ಲಿ ಒಂದಾದ ರೂಪಾಂತರ ಸಮ್ಮಿತಿಯ ಅಭಿವ್ಯಕ್ತಿಯಾಗಿದೆ.

ಕ್ರಿಕೆಟ್ ಆಟದಲ್ಲಿ ಕ್ಷಿಪ್ರವಾಗಿ ಚಲಿಸುವ ಚೆಂಡನ್ನು ತಡೆದು ನಿಲ್ಲಿಸುವುದು ಕಷ್ಷ. ಅದೇ ಚೆಂಡು ಸಾಧಾರಣ ವೇಗದಲ್ಲಿ ಚಲಿಸುವಾಗ ಹಿಡಿಯುವುದು ಸುಲಭ. ಒಂದೇ ಜವದಲ್ಲಿ ವಿರುದ್ಧ ದಿಕ್ಕುಗಳಲ್ಲಿ ಚಲಿಸುವ ಕಾರು ಮತ್ತು ಸ್ಕೂಟರ್ ದುರದೃಷ್ಟವಶಾತ್ ಪರಸ್ಪರ ಡಿಕ್ಕಿಯಾದರೆ ಸ್ಕೂಟರಿಗೆ ಹೆಚ್ಚು ಹಾನಿಯಾಗುತ್ತದೆ. ಚಲನೆಯಿಂದ ಉಂಟಾಗುವ ಪರಿಣಾಮವು ಆ ವಸ್ತುವಿನ ವೇಗ ಮತ್ತು ರಾಶಿ ಎರಡನ್ನೂ ಅವಲಂಬಿಸಿದೆ ಎಂಬುದು ಮೇಲಿನ ಉದಾಹರಣೆಗಳಿಂದ ಸ್ಪಷ್ಟವಾಗುತ್ತದೆ. ಇವೆರಡನ್ನೂ ಒಳಗೊಂಡಿರುವ ಭೌತ ಪರಿಣಾಮವೇ ರೇಖೀಯ ಸಂವೇಗ ಅಥವಾ ಸಂವೇಗ. ವೇಗದ ದಿಕ್ಕಿನಲ್ಲೇ ಸಂವೇಗದ ದಿಕ್ಕೂ ಇರುತ್ತದೆ. ವಿರಾಮದಲ್ಲಿ ಇರುವ ವಸ್ತುವಿನ ವೇಗವು ಶೂನ್ಯವಷ್ಷೆ. ಆದ್ದರಿಂದ ಅದರ ಸಂವೇಗವೂ ಶೂನ್ಯ.

ಸಂವೇಗದ ನಿತ್ಯತ್ವ ನಿಯಮ

[ಬದಲಾಯಿಸಿ]

'ಬಾಹ್ಯ ಬಲಗಳಿಗೊಳಗಾಗದ ಒಂದು ವ್ಯವಸ್ಥೆಯಲ್ಲಿ ಒಟ್ಟು ರೇಖೀಯ ಸಂವೇಗ ಯಾವಾಗಲು ಒಂದೇ ಆಗಿರುತ್ತದೆ,' ಎಂದು ನಿತ್ಯತ್ವ ನಿಯಮ ಹೇಳುತ್ತದೆ. ಇದು ನ್ಯೂಟನ್‍ನ ಚಲನೆಯ ನಿಯಮಗಳಿಂದ ಸೂಚಿತವಾಗುತ್ತದೆ.[][] ನಿತ್ಯತ್ವ ನಿಯಮದ ಪ್ರಕಾರ, ಬಾಹ್ಯ ಬಲದ ಪ್ರಬಾವವಿಲ್ಲದೆ ಚಲಿಸುತ್ತಿರುವ ಎರಡು ವಸ್ತುಗಳು ಪರಸ್ಪರ ಡಿಕ್ಕಿ ಹೊಡೆದರೆ ಅವುಗಳ ಒಟ್ಟು ರೇಖೀಯ ಸಂವೇಗ ಡಿಕ್ಕಿಗೆ ಮೊದಲು ಮತ್ತು ಅನಂತರ ಒಂದೇ ಅಗಿರುತ್ತದೆ. ಗುಂಡು ಹಾರುವ ಮೊದಲು ಬಂದೂಕು ಮತ್ತು ಅದರಲ್ಲಿರುವ ಗುಂಡು ಇವುಗಳು ಒಟ್ಟು ಸಂವೇಗ ಶೂನ್ಯ. ಗುಂಡು ಹಾರಿದಾಗ ಅದು ನಿಶ್ಚಿತ ಸಂವೇಗದೊಂದಿಗೆ ಚಲಿಸುತ್ತದೆ. ಬಂದೂಕು ಮತ್ತು ಗುಂಡಿನ ಒಟ್ಟು ಸಂವೇಗ ಶೂನ್ಯವಾಗುವಂತೆ ಬಂದೂಕು ಹಿನ್ನೆಗೆಯುತ್ತದೆ. ಇದನ್ನರಿತೇ ಗುಂಡು ಹೊಡೆಯುವಾಗ ಬಂದೂಕನ್ನು ಆಧರಿಸುವ ಕ್ರಮವನ್ನು ಅಳವಡಿಸಿಕೊಳ್ಳುತ್ತಾರೆ. ರಾಕೆಟ್ ಚಲನೆಯೂ ಸಂವೇಗದ ನಿತ್ಯತ್ವ ನಿಯಮವನ್ನು ದೃಢೀಕರಿಸುತ್ತದೆ. ಇಂಧನ ಉರಿದು ಉತ್ಪತ್ತಿಯಾಗುವ ಅನಿಲಗಳು ಕೆಳಮುಖವಾಗಿ ಅತಿವೇಗದಿಂದ ಬಹಿರ್ಗಮಿಸುತ್ತವೆ. ರಾಕೆಟ್ ಮತ್ತು ಅನಿಲಗಳ ಒಟ್ಟು ಸಂವೇಗವನ್ನು ಕಾಯ್ದುಕೊಳ್ಳಲು ರಾಕೇಟ್ ಮೇಲ್ಮುಖವಾಗಿ ಚಲಿಸುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. The Feynman Lectures on Physics Vol. I Ch. 9: Newton's Laws of Dynamics
  2. The Feynman Lectures on Physics Vol. I Ch. 10: Conservation of Momentum
  3. Ho-Kim, Quang; Kumar, Narendra; Lam, Harry C. S. (2004). Invitation to Contemporary Physics (illustrated ed.). World Scientific. p. 19. ISBN 978-981-238-303-7.