ವಿಷಯಕ್ಕೆ ಹೋಗು

ಮಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾಸವು ಸಮಯದ ಒಂದು ಅಳತೆ. ಪಂಚಾಂಗಗಳು ಮತ್ತು ಕ್ಯಾಲೆಂಡರ್‌ಗಳಲ್ಲಿ ಬಳಸಲ್ಪಡುವ ಈ ಕಾಲಮಾನವು ಚಂದ್ರನ ಸ್ವಾಭಾವಿಕ ಪರಿಭ್ರಮಣಾ ಕಾಲಕ್ಕೆ ಸಂಬಂಧಿಸಿದೆ. ಮಾಸದ ಸಾಂಪ್ರದಾಯಿಕ ಪರಿಕಲ್ಪನೆಯು ಚಂದ್ರನ ಕಲೆಗಳ ಆವರ್ತದಿಂದ ಹುಟ್ಟಿತು; ಈ ರೀತಿಯವು ಯುತಿ ಮಾಸಗಳಾಗಿ, ಸುಮಾರು ೨೯.೫೩ ದಿನಗಳ ಅವಧಿಯನ್ನು ಹೊಂದಿರುತ್ತವೆ. ಪ್ರಾಕ್ಶಿಲಾಯುಗದಷ್ಟು ಹಿಂದೆಯೂ ಮಾನವರು ಚಂದ್ರನ ಕಲೆಗಳಿಗೆ ಸಂಬಂಧಿಸಿದಂತೆ ದಿನಗಳನ್ನು ಎಣಿಸುತ್ತಿದ್ದರು ಎಂದು ಪುರಾತತ್ವಶಾಸ್ತ್ರೀಯ ಭೂಶೋಧನೆಗಳಿಂದ ತಿಳಿದುಬಂದಿದೆ. ಇಂದಿಗೂ ಸಹ ಯುತಿ ಮಾಸಗಳು ಹಲವು ಕ್ಯಾಲೆಂಡರ್‌ಗಳ ಆಧಾರವಾಗಿವೆ.

ಖಗೋಳಶಾಸ್ತ್ರೀಯ ಹಿನ್ನೆಲೆ

[ಬದಲಾಯಿಸಿ]

ತನ್ನ ಕಕ್ಷೆಯಲ್ಲಿ ಚಂದ್ರನ ಚಲನೆಯು ಬಹಳ ಜಟಿಲವಾಗಿದ್ದು, ಅದರ ಪರಿಭ್ರಮಣೆ ಅವಧಿಯು ಸ್ಥಿರವಾಗಿರುವುದಿಲ್ಲ.

ನಾಕ್ಷತ್ರಿಕ ಮಾಸ

[ಬದಲಾಯಿಸಿ]

ಒಂದು ಸ್ಥಿರ ನಿರ್ದೇಶಕ ಚೌಕಟ್ಟಿನಿಂದ ಅಳೆದಂತೆ ಚಂದ್ರನ ನೈಜ ಪರಿಭ್ರಮಣಾವಧಿಗೆ ನಾಕ್ಷತ್ರಿಕ ಮಾಸವೆಂದು ಹೆಸರು. ಚಂದ್ರನು ಖಗೋಳದಲ್ಲಿ ಸ್ಥಿರ ನಕ್ಷತ್ರಗಳಿಗೆ ಸಾಪೇಕ್ಷವಾಗಿ ಪುನಃ ಅದೇ ಸ್ಥಾನಕ್ಕೆ ಮರಳಲು ಈ ಪರಿಭ್ರಮಣಾವಧಿಯಷ್ಟು ಕಾಲವು ತಗಲುವುದರಿಂದ, ಇದಕ್ಕೆ ನಾಕ್ಷತ್ರಿಕ ಮಾಸವೆಂದು ಹೆಸರು ಬಂದಿದೆ: ೨೭.೩೨೧ ೬೬೧ ದಿನಗಳು (೨೭ ದಿ ೭ ಘಂ ೪೩ ನಿ ೧೧.೫ ಕ್ಷ) ಅಥವಾ ೨೭ / ದಿನಗಳು. ಈ ರೀತಿಯ ಮಾಸವು ಭಾರತ ಮತ್ತು ಚೀನಾ ದೇಶಗಳಂಥ ಪೂರ್ವ ಸಂಸ್ಕೃತಿಗಳಲ್ಲಿ ಈ ಕೆಳಗಿನ ರೀತಿ ವ್ಯಕ್ತವಾಗಿದೆ: ಗುಂಪಾಗಿ ಕಾಣುವ ನಕ್ಷತ್ರಗಳ ಮೇರೆಗೆ ಆಗಸವನ್ನು ೨೭ ಅಥವಾ ೨೮ ಭಾಗಗಳನ್ನಾಗಿ ವಿಂಗಡಿಸಿ (ಅಶ್ವಿನಿ, ಭರಣಿ, ಇತ್ಯಾದಿ.), ಚಂದ್ರನು ಬಾನಿನಲ್ಲಿ ಪ್ರತಿದಿನವೂ ಚಲಿಸುವ ಪಥಕ್ಕೆ ಇವುಗಳಲ್ಲಿ ಒಂದು ನಕ್ಷತ್ರವನ್ನು ಹೊಂದಿಸಲಾಗಿತ್ತು.

ಸಾಯನ ಮಾಸ

[ಬದಲಾಯಿಸಿ]

ಖಗೋಳಕಾಯಗಳ ಸ್ಥಾನಮಾನಗಳನ್ನು ವಸಂತ ವಿಷುವಕ್ಕೆ ಸಾಪೇಕ್ಷವಾಗಿ ವ್ಯಕ್ತಪಡಿಸುವುದು ವಾಡಿಕೆ. ಅಯನದ ಕಾರಣದಿಂದ, ಈ ವಿಷುವತ್‌ಬಿಂದುವು ಕ್ರಾಂತಿವೃತ್ತದ ಮೇಲೆ ನಿಧಾನವಾಗಿ ಹಿಂದೆ ಸರಿಯುತ್ತದೆ. ಆದ್ದರಿಂದ, ಚಂದ್ರನು ಸ್ಥಿರನಕ್ಷತ್ರಗಳ ನಡುವೆ ಪುನಃ ಅದೇ ಸ್ಥಾನಕ್ಕೆ ಮರಳಲು ತಗಲುವ ಕಾಲಕ್ಕಿಂತ, ಕ್ರಾಂತಿವೃತ್ತದ ಮೇಲೆ ಸೊನ್ನೆ ರೇಖಾಂಶಕ್ಕೆ ಮರಳಲು ಸ್ವಲ್ಪ ಕಡಿಮೆ ಕಾಲ ಬೇಕಾಗುತ್ತದೆ (೨೭.೩೨೧ ೫೮೨ ದಿನಗಳು ಅಥವಾ ೨೭ ದಿನ ೭ ಘಂ ೪೩ ನಿ ೪.೭ ಕ್ಷ). ಈ ಕಡಿಮೆ ಅವಧಿಗೆ ಸಾಯನ ಮಾಸ ಎಂದು ಹೆಸರು; ಇದು ಸೂರ್ಯಸಾಯನ ವರ್ಷವನ್ನು ಹೋಲುತ್ತದೆ.

ಅಸಂಗತ ಮಾಸ

[ಬದಲಾಯಿಸಿ]

ಬೇರೆಲ್ಲಾ ಕಕ್ಷೆಗಳಂತೆ ಚಂದ್ರನ ಕಕ್ಷೆಯು ಸಹ ವೃತ್ತಾಕಾರದಲ್ಲಿರದೆ, ದೀರ್ಘವೃತ್ತಾಕಾರದಲ್ಲಿದೆ. ಆದರೆ, ಕಕ್ಷೆಯ ಸ್ಥಿತಿಯು (ಹಾಗೂ ಆಕಾರ) ಸ್ಥಿರವಾಗಿಲ್ಲ. ವಿಶಿಷ್ಟವಾಗಿ, ಕಕ್ಷೆಯ ವೈಪರೀತ್ಯ ಬಿಂದುಗಳು (ಅಪಪುರಗಳ ರೇಖೆ: ಪುರಭೂಮಿ ಮತ್ತು ಅಪಭೂಮಿ) ಚಲಿಸುತ್ತಾ (ಚಂದ್ರನ ಅಯನ) ಸುಮಾರು ಒಂಭತ್ತು ವರ್ಷಗಳಿಗೊಮ್ಮೆ ಒಂದು ವೃತ್ತವನ್ನು ಪೂರ್ಣಗೊಳಿಸುತ್ತವೆ. ಹೀಗೆ ಅಪಪುರ ಬಿಂದುಗಳು ಮುಂದೆ ಮುಂದೆ ಸರಿಯುವುದರಿಂದ, ಚಂದ್ರನು ಪುನಃ ಅದೇ ಅಪಪುರ ಬಿಂದುವಿಗೆ ಮರಳಲು ಹೆಚ್ಚು ಕಾಲ ಬೇಕಾಗುತ್ತದೆ. ಅಸಂಗತ ಮಾಸವೆಂದು ಕರೆಯಲಾಗುವ ಈ ಕಾಲವು ಸರಾಸರಿ ೨೭.೫೫೪ ೫೫೧ ದಿನಗಳು (೨೭ ದಿ ೧೩ ಘಂ ೧೮ ನಿ ೩೩.೨ ಕ್ಷ), ಅಥವಾ ೨೭ / ದಿನಗಳ ಅವಧಿಯನ್ನು ಹೊಂದಿರುತ್ತದೆ. ಚಂದ್ರನ ಗೋಚರ ವ್ಯಾಸವು ಈ ಕಾಲದ ಮೇಲೆ ಅವಲಂಬಿತವಾಗಿರುತ್ತದೆ. ಗ್ರಹಣಗಳ ಅವಧಿ, ವ್ಯಾಪ್ತಿ, ಗೋಚರತೆಗಳು (ಪೂರ್ಣ ಅಥವಾ ಕಂಕಣ) ಚಂದ್ರನ ನಿಖರವಾದ ಗೋಚರ ವ್ಯಾಸದ ಮೇಲೆ ಅವಲಂಬಿತವಾಗಿರುವುದರಿಂದ, ಗ್ರಹಣಗಳು ನಡೆಯುವ ಮುನ್ನವೇ ಅವುಗಳನ್ನು ಕಂಡುಹಿಡಿಯಲು ಅಸಂಗತ ಮಾಸದ ಜ್ಞಾನವು ಬಹಳ ಮುಖ್ಯ. ಯುತಿ ಮಾಸ ಮತ್ತು ಅಸಂಗತ ಮಾಸಗಳ ವಿಸ್ಪಂದ ಅವಧಿಯ ಮೇಲೆ ಅವಲಂಬಿತವಾಗಿರುವ ಪೂರ್ಣ ಚಂದ್ರ ಆವರ್ತದೊಟ್ಟಿಗೆ ಹುಣ್ಣಿಮೆ ಚಂದ್ರನ ಗೋಚರ ವ್ಯಾಸವು ಬದಲಾಗುತ್ತದೆ.

ಪಾತ ಮಾಸ

[ಬದಲಾಯಿಸಿ]

ಚಂದ್ರನ ಕಕ್ಷೆಯ ಸಮತಳವು ಕ್ರಾಂತಿವೃತ್ತದ ಸಮತಳಕ್ಕೆ ಓರೆಯಾಗದ್ದು, ಸುಮಾರು ೫°ಗಳ ಓರೆಯನ್ನು ಹೊಂದಿದೆ. ಈ ಎರಡು ಸಮತಳಗಳನ್ನು ಛೇದಿಸುವ ರೇಖೆಯು ಖಗೋಳದಲ್ಲಿ ಎರಡು ಬಿಂದುಗಳನ್ನು ನಿರ್ಧರಿಸುತ್ತದೆ: ಇವೇ ಆರೋಹಣ ಮತ್ತು ಅವರೋಹಣ ಪಾತಗಳು. ಚಂದ್ರನ ಕಕ್ಷೆಯ ಸಮತಳವು ಸುಮಾರು ೧೮.೬ ವರ್ಷಗಳಿಗೊಮ್ಮೆ ಅಯನದಿಂದ ಒಂದು ವೃತ್ತವನ್ನು ಪೂರ್ಣಗೊಳಿಸುತ್ತದೆ. ಆದ್ದರಿಂದ, ಈ ಪಾತಗಳು ಇದೇ ಅವಧಿಯಲ್ಲಿ ಕ್ರಾಂತಿವೃತ್ತದ ಮೇಲೆ ಹಿಂದೆ ಸರಿಯುತ್ತವೆ. ಹೀಗಾಗಿ, ಚಂದ್ರನು ಪುನಃ ಅದೇ ಪಾತಕ್ಕೆ ಮರಳಲು ತಗಲುವ ಕಾಲವು ನಾಕ್ಷತ್ರಿಕ ಮಾಸಕ್ಕಿಂತ ಕಡಿಮೆಯಿರುತ್ತದೆ: ಇದಕ್ಕೆ ಪಾತ ಮಾಸ ಎಂದು ಹೆಸರು. ಇದರ ಅವಧಿಯು ೨೭.೨೧೨ ೨೨೦ ದಿನಗಳು (೨೭ ದಿ ೫ ಘಂ ೫ ನಿ ೩೫.೮ ಕ್ಷ), ಅಥವಾ ೨೭ / ದಿನಗಳು. ಗ್ರಹಣಗಳ ಮುನ್ನೋಟಕ್ಕೆ ಈ ಕಾಲವು ಮುಖ್ಯ: ಗ್ರಹಣಗಳು ಸೂರ್ಯ, ಭೂಮಿ ಮತ್ತು ಚಂದ್ರರು ಒಂದೇ ಸರಳ ರೇಖೆಯಲ್ಲಿದ್ದಾಗ ನಡೆಯುತ್ತವೆ. ಚಂದ್ರನು ಕ್ರಾಂತಿವೃತ್ತದ ಮೇಲಿದ್ದಾಗ ಮಾತ್ರ ಈ ಮೂರು ಕಾಯಗಳು ಸರಳ ರೇಖೆಯಲ್ಲಿರಲು ಸಾಧ್ಯ. ಅಂದರೆ, ಚಂದ್ರನು ಯಾವುದಾದರೂ ಪಾತ ಬಿಂದುವಿನಲ್ಲಿದ್ದಾಗ ಮಾತ್ರ. ಈ ಸನ್ನಿವೇಶಗಳಲ್ಲಿ ಸೂರ್ಯ ಅಥವ ಚಂದ್ರ ಗ್ರಹಣವು ಆಗಬಹುದು.

ಯುತಿ ಮಾಸ

[ಬದಲಾಯಿಸಿ]

ಚಂದ್ರನು ತನ್ನ ಕಕ್ಷೆಯಲ್ಲಿ ಚಲಿಸುವಾಗ ಅದರ ಬೇರೆ ಬೇರೆ ಭಾಗಗಳು ವಿವಿಧ ಕೋನಗಳಿಂದ ಬರುವ ಸೂರ್ಯನ ಬೆಳಕಿನಲ್ಲಿ ಹೊಳೆಯುತ್ತವೆ. ಭೂಮಿಯ ಮೇಲಿನಿಂದ ಈ ವಿವಿಧ ಹೊಳಪಿನ ಭಾಗಗಳು ಚಂದ್ರನ ಕಲೆಗಳಾಗಿ ವ್ಯಕ್ತಗೊಳ್ಳುತ್ತವೆ. ಆದ್ದರಿಂದ, ಚಂದ್ರನ ಆಕಾರವು (ಭೂಮಿಯಿಂದ ನೋಡಿದಂತೆ) ಸೂರ್ಯನಿಗೆ ಸಾಪೇಕ್ಷವಾಗಿ ಚಂದ್ರನ ಸ್ಥಾನದ ಮೇಲೆ ಅವಲಂಬಿತವಾಗಿರುತ್ತದೆ. ಭೂಮಿಯು ಸೂರ್ಯನ ಸುತ್ತ ಚಲಿಸುವುದರಿಂದ, ಚಂದ್ರನು (ಭೂಮಿಯಿಂದ ನೋಡಿದಂತೆ) ಸೂರ್ಯನಿಗೆ ಸಾಪೇಕ್ಷವಾಗಿ ಪುನಃ ಅದೇ ಸ್ಥಾನಕ್ಕೆ ಮರಳಲು (ನಾಕ್ಷತ್ರಿಕ ಮಾಸವನ್ನು ಪೂರ್ಣಗೊಳಿಸಿದ ಮೇಲೆ; ಅಂದರೆ, ಒಂದು ಪೂರ್ಣ ಪರಿಭ್ರಮಣೆಯ ನಂತರವೂ) ಹೆಚ್ಚು ಕಾಲವು ಬೇಕಾಗುತ್ತದೆ. ಈ ಕಾಲಕ್ಕೆ ಯುತಿ ಮಾಸ ಎಂದು ಹೆಸರು. ಭೂಮಿ ಮತ್ತು ಚಂದ್ರರ ಕಕ್ಷೆಗಳ ಕ್ಷೋಭೆಗಳಿಂದಾಗಿ ಈ ಅವಧಿಯು ಸುಮಾರು ೨೯.೨೭ ದಿನಗಳಿಂದ ೨೯.೮೩ ದಿನಗಳವರೆಗೂ ಇರಬಹುದು. ಯುತಿ ಮಾಸದ ದೀರ್ಘಾವಧಿ ಸರಾಸರಿಯು ೨೯.೫೩೦ ೫೮೮ ದಿನಗಳು (೨೯ ದಿ ೧೨ ಘಂ ೪೪ ನಿ ೨.೮ ಕ್ಷ), ಅಥವಾ ೨೯ / ದಿನಗಳಿರುತ್ತದೆ.

ಮಾಸದ ಅವಧಿಗಳು

[ಬದಲಾಯಿಸಿ]

ಕೆಳಗಿನ ಕೋಷ್ಟಕವು ವಿವಿಧ ಖಗೋಳಶಾಸ್ತ್ರೀಯ ಮಾಸಗಳ ಸರಾಸರಿ ಅವಧಿಗಳನ್ನು ತೋರಿಸುತ್ತದೆ[]. ಈ ಅವಧಿಗಳು ಅಸ್ಥಿರವಾದ್ದರಿಂದ, ಈ ಪ್ರಮಾಣಗಳ ದೀರ್ಘಕಾಲಿಕ ಬದಲಾವಣೆಗಳ ಮೊದಲ-ದರ್ಜೆ (ರೇಖೀಯ) ಅಂದಾಜುಗಳನ್ನೂ ಸೂಚಿಸಲಾಗಿದೆ:

ನಾಕ್ಷತ್ರಿಕ ಮಾಸ ೨೭.೩೨೧೬೬೧೫೪೭ + ೦.೦೦೦೦೦೦೦೦೧೮೫೭×y ದಿನಗಳು
ಸಾಯನ ಮಾಸ ೨೭.೩೨೧೫೮೨೨೪೧ + ೦.೦೦೦೦೦೦೦೦೧೫೦೬×y ದಿನಗಳು
ಅಸಂಗತ ಮಾಸ ೨೭.೫೫೪೫೪೯೮೭೮ − ೦.೦೦೦೦೦೦೦೧೦೩೯೦×y ದಿನಗಳು
ಡ್ರಾಕೋನಿಕ್ ಮಾಸ ೨೭.೨೧೨೨೨೦೮೧೭ + ೦.೦೦೦೦೦೦೦೦೩೮೩೩×y ದಿನಗಳು
ಯುತಿ ಮಾಸ ೨೯.೫೩೦೫೮೮೮೫೩ + ೦.೦೦೦೦೦೦೦೦೨೧೬೨×y ದಿನಗಳು

ಗಮನಿಸಿ: ಇಲ್ಲಿ ಸಮಯವನ್ನು ಪ್ರತಿದಿನಕ್ಕೆ ೮೬೪೦೦ ಕ್ಷಣಗಳ ಭೂಮಿ ಸಮಯವಾಗಿ ವ್ಯಕ್ತಪಡಿಸಲಾಗಿದೆ. y ಚಿಹ್ನೆಯು ೨೦೦೦ ಇಸವಿಯಿಂದೀಚೆಗೆ ೩೬೫.೨೫ ದಿನ ಅವಧಿಯುಳ್ಳ ವರ್ಷಗಳ ಸಂಖ್ಯೆಯನ್ನು ಸೂಚಿಸುತ್ತದೆ.

ವಿವಿಧ ಕ್ಯಾಲೆಂಡರ್‌ಗಳಲ್ಲಿ ಮಾಸಗಳು

[ಬದಲಾಯಿಸಿ]

ಹಿಂದೂ ಕ್ಯಾಲೆಂಡರ್

[ಬದಲಾಯಿಸಿ]

ಹಿಂದೂ ಪಂಚಾಂಗದಲ್ಲಿ ಮಾಸಗಳಿಗೆ ವಿವಿಧ ಪದ್ಧತಿಗಳಿಂದ ಹೆಸರಿಡಲಾಗಿದೆ. ಚಾಂದ್ರಮಾನ ಪದ್ಧತಿಯಲ್ಲಿ ಮಾಸಗಳ ಹೆಸರುಗಳು ಈ ರೀತಿ ಇವೆ. ಈ ಚಾಂದ್ರಮಾನ ಮಾಸಗಳ ಹೆಸರುಗಳು ಆಯಾ ತಿಂಗಳಿನ ಹುಣ್ಣಿಮೆಯ ದಿನ ಚಂದ್ರ ಯಾವ ನಕ್ಷತ್ರದ ಬಳಿ ಕಾಣಿಸುತ್ತಾನೆ ಎನ್ನುವುದನ್ನು ಸೂಚಿಸುತ್ತವೆ. ಉದಾಹರಣೆಗೆ ಚೈತ್ರ ಮಾಸದ ಹುಣ್ಣಿಮೆಯ ದಿನ ಚಂದ್ರ ಚಿತ್ತಾ ನಕ್ಷತ್ರದಲ್ಲಿದ್ದರೆ, ಕಾರ್ತಿಕ ಮಾಸದ ಹುಣ್ಣಿಮೆಯ ದಿನ ಕೃತ್ತಿಕಾ ನಕ್ಷತ್ರದ ಬಳಿ ಕಾಣುತ್ತಾನೆ:

  1. ಚೈತ್ರ
  2. ವೈಶಾಖ
  3. ಜ್ಯೇಷ್ಠ
  4. ಆಷಾಢ
  5. ಶ್ರಾವಣ
  6. ಭಾದ್ರಪದ
  7. ಆಶ್ವಯುಜ
  8. ಕಾರ್ತಿಕ
  9. ಮಾರ್ಗಶಿರ
  10. ಪುಷ್ಯ
  11. ಮಾಘ
  12. ಫಾಲ್ಗುಣ

ಭಾರತೀಯ ಪಂಚಾಂಗದಲ್ಲಿ (ಇದನ್ನು ಶಕ ಪಂಚಾಂಗ ಎಂದೂ ಕರೆಯಲಾಗುತ್ತದೆ) ಹೊಸತಾಗಿ ಮರುವ್ಯಾಖ್ಯಾನಿಸಿದ ಮಾಸಗಳಿಗೆ ಇದೇ ಹೆಸರುಗಳನ್ನು ಬಳಸಲಾಗಿದೆ.

ಸೌರ ಪದ್ಧತಿಯಲ್ಲಿ ಕಾಣಬರುವ ಮಾಸಗಳು, ಸೂರ್ಯನು ಆಯಾ ಸಮಯದಲ್ಲಿ ಯಾವ ರಾಶಿ ಚಿಹ್ನೆಯಲ್ಲಿ ಚಲಿಸುತ್ತಿರುವನೋ, ಆ ಚಿಹ್ನೆಯ ಹೆಸರನ್ನು ಹೊಂದುತ್ತವೆ. ಈ ಹೆಸರುಗಳು ಕೆಳಗಿನಂತಿವೆ:

  1. ಮೇಷ
  2. ವೃಷಭ
  3. ಮಿಥುನ
  4. ಕಟಕ
  5. ಸಿಂಹ
  6. ಕನ್ಯಾ
  7. ತುಲಾ
  8. ವೃಶ್ಚಿಕ
  9. ಧನುಸ್
  10. ಮಕರ
  11. ಕುಂಭ
  12. ಮೀನ

ಟಿಪ್ಪಣಿಗಳು

[ಬದಲಾಯಿಸಿ]
  1. Derived from ELP2000-85: M. Chapront-Touzé, J. Chapront (1991): Lunar tables and programs from 4000 B. C. to A. D. 8000. Willmann-Bell, Richmond VA; ISBN 0-943396-33-6

|

"https://kn.wikipedia.org/w/index.php?title=ಮಾಸ&oldid=978055" ಇಂದ ಪಡೆಯಲ್ಪಟ್ಟಿದೆ