ಬಾಂಗ್ಲಾದೇಶ
ಬಾಂಗ್ಲಾದೇಶದ ಜನ ಗಣತಂತ್ರ গণপ্রজাতন্ত্রী বাংলাদেশ ಗೋಣೊಪ್ರೊಜತೊಂತ್ರಿ ಬಾಂಗ್ಲಾದೇಶ್ | |
---|---|
Motto: none | |
Anthem: ಅಮರ್ ಶೊಣಾರ್ ಬಾಂಗ್ಲ ("ನನ್ನ ಚಿನ್ನದ ಬಂಗಾಳ") | |
Capital and largest city | ಢಾಕಾ |
Official languages | ಬೆಂಗಾಲಿ |
Government | ಸಂಸದೀಯ ಗಣರಾಜ್ಯ |
ಇಯಾಜುದ್ದೀನ್ ಅಹ್ಮದ್ | |
ಶೇಕ್ ಹಸೀನ | |
ಸ್ವಾತಂತ್ರ್ಯ | |
• ಘೋಷಿತ | ಮಾರ್ಚ್ ೨೬, ೧೯೭೧ |
ಡಿಸೆಂಬರ್ ೧೬, ೧೯೭೧ | |
• Water (%) | 7.0% |
Population | |
• 2006 estimate | 147,365,000 (7th) |
• ೨೦೦೧ census | 129,247,233ಉಲ್ಲೇಖ ದೋಷ: Closing </ref> missing for <ref> tag |
GDP (PPP) | 2005 estimate |
• Total | $305.6 ಬಿಲಿಯನ್ (31st) |
• Per capita | $2,011 (143rd) |
HDI (2003) | 0.520 low · 139th |
Currency | ಟಾಕಾ (BDT) |
Time zone | UTC+6 (BDT) |
• Summer (DST) | UTC+6 (not observed) |
Calling code | 880 - SubCodes |
Internet TLD | .bd |
ಸನ್ನಿವೇಶ
[ಬದಲಾಯಿಸಿ]- [ಸೂಚನೆ::ಇಂಗ್ಲಿಷ್‍ನಲ್ಲಿರುವ ಅಂಕೆಗಳನ್ನು ಕನ್ನಡ ಅಂಕೆಗಳಿಗೆ ಬದಲಿಸುವುದು ಬೇಡ- ಕಾರಣ ಅದರ '೦' ಮತ್ತು '೦' ರ ವ್ಯತ್ಯಾಸ ತಿಳಿಯುವುದಿಲ್ಲ ; ಓದುಗರಿಗೆ ಬರೆದಿದ್ದು ಸರಿಯಾಗಿ ಅರ್ಥವಾಗುವುದು ಮುಖ್ಯ.]
- ಬಾಂಗ್ಲಾದೇಶ ದಕ್ಷಿಣ ಏಷ್ಯಾದಲ್ಲಿ ೧೯೭೧ ರಲ್ಲಿ ಪಾಕಿಸ್ತಾನದಿಂದ ಬೇರ್ಪಟ್ಟು ಸ್ವತಂತ್ರವಾದ ಒಂದು ದೇಶ. ಸ್ಥೂಲವಾಗಿ ಆಗ್ನೇಯಕ್ಕೆ ಕೊಂಚ ಮಯನ್ಮಾರ್‌ನ ಗಡಿಯನ್ನು ಹಾಗು ದಕ್ಷಿಣಕ್ಕೆ ಬಂಗಾಲ ಕೊಲ್ಲಿಯನ್ನು ಬಿಟ್ಟು ಸುತ್ತಲು ಭಾರತ ದೇಶದಿಂದ ಆವೃತವಾಗಿದೆ.
ವಿವರ
[ಬದಲಾಯಿಸಿ]- ಬಾಂಗ್ಲಾದೇಶ ದಕ್ಷಿಣ ಏಷ್ಯದ ಒಂದು ಗಣರಾಜ್ಯ. ಗಂಗಾ-ಬ್ರಹ್ಮಪುತ್ರ ನದೀ ಮುಖಜ ಭೂಪ್ರದೇಶದಲ್ಲಿದೆ. ಪಶ್ಚಿಮಕ್ಕೆ ಭಾರತದ ಪಶ್ಚಿಮ ಬಂಗಾಲ ರಾಜ್ಯ, ಉತ್ತರಕ್ಕೆ ಪಶ್ಚಿಮ ಬಂಗಾಲ, ಅಸ್ಸಾಮ್ ಮತ್ತು ಮೇಘಾಲಯ, ಈಶಾನ್ಯಕ್ಕೆ ಮೇಘಾಲಯ, ಪೂರ್ವಕ್ಕೆ ತ್ರಿಪುರ ಮತ್ತು ಮಿಜ಼ೋರಾಮ್, ಆಗ್ನೇಯಕ್ಕೆ ಬರ್ಮ ಮತ್ತು ದಕ್ಷಿಣಕ್ಕೆ ಬಂಗಾಳಕೊಲ್ಲಿ ಇವೆ. ಉತ್ತರದಿಂದ ದಕ್ಷಿಣಕ್ಕೆ 747 ಕಿ.ಮೀ., ಪೂರ್ವದಿಂದ ಪಶ್ಚಿಮಕ್ಕೆ 463ಕಿ.ಮೀ. ಇರುವ ಇದರ ಒಟ್ಟು ವಿಸ್ತೀರ್ಣ 1,42,776 ಚಕಿಮೀ. ಜನಸಂಖ್ಯೆ, 793,100,00(1981) ರಾಜಧಾನಿ ಢಾಕಾ ನಗರ ಜನಸಂಖ್ಯೆ 1,310,976 (1974). ಭೌತಲಕ್ಷಣ: ಈ ದೇಶದ ಮುಖ್ಯ ಮೇಲ್ಮೈ ಲಕ್ಷಣವೆಂದರೆ ಅದರ ನದೀ ವ್ಯವಸ್ಥೆ. ಅಲ್ಲಿಯ ಭೌತಲಕ್ಷಣವನ್ನೇ ಅಲ್ಲದೆ ಜನಜೀವನದ ಮೇಲೂ ಈ ವ್ಯವಸ್ಥೆ ವಿಶೇಷ ಪ್ರಭಾವ ಬೀರಿದೆ.
1. ಗಂಗಾ ಅಥವಾ ಪದ್ಮಾ,
2. ಮೇಘ್ನಾ ಮತ್ತು ಸುರ್ಮಾ,
3. ಬ್ರಹ್ಮಪುತ್ರ ಮತ್ತು ಅದರ ಕವಲುಗಳು,
4. ಉತ್ತರದ ನದಿಗಳು ಮತ್ತು
5. ಚಿತ್ತಗಾಂಗ್ ಬೆಟ್ಟಗಾಡಿನ ಹಾಗೂ ಬಯಲು ಸೀಮೆಯ ನದಿಗಳು
ಎಂದು ಇಲ್ಲಿಯ ನದಿಗಳನ್ನು ಐದು ಭಾಗಗಳಾಗಿ ವಿಂಗಡಿಸಬಹುದು.
- ಗಂಗಾನದಿ ಬಂಗಾಲದ ನದೀಮುಖಜ ಭೂಪ್ರದೇಶದ ಶಿಖೆಯಂತಿದೆ. ಇದು ಬ್ರಹ್ಮಪುತ್ರ ನದಿಯ ಕವಲೊಂದಿಗೆ ಸೇರಿ ಪದ್ಮಾ ಎನಿಸಿದೆ. ಈ ನದಿಯೂ ಇದರ ಉಪನದಿಗಳೂ ಪಶ್ಚಿಮ ಬಂಗಾಲದ ಕುಷ್ಟಿಯಾ, ಜೆಸ್ಸೂರ್, ಖುಲ್ನಾ, ಫರೀದ್‍ಪುರ, ಪಟುವಾಖಾಲಿ ಮತ್ತು ಬೇಕರ್‍ಗಂಜ್ ಜಿಲ್ಲೆಗಳಲ್ಲಿ ಹರಿಯುತ್ತವೆ. ಈ ನದಿ ರಾಜಶಾಹಿ ಜಿಲ್ಲೆಯ ಪಶ್ಚಿಮದ ತುದಿಯಲ್ಲಿ ಬಾಂಗ್ಲಾದೇಶವನ್ನು ಪ್ರವೇಶಿಸಿ ಸುಮಾರು 150ಕಿ.ಮೀ ದೂರ ಭಾರತ-ಬಾಂಗ್ಲಾ ದೇಶಗಳ ನಡುವಣ ಗಡಿಯಾಗಿ ಹರಿಯುತ್ತದೆ. ಸಿಲ್ಹೆಟ್-ಸುರ್ಮಾ ಮತ್ತು ಕುಸಿಯಾರ ನದಿಗಳು ಕೂಡಿ ಮೇಘ್ನಾ ಆಗಿದೆ. ಇವೆರಡೂ ನದಿಗಳು ಬರಾಕ್ ನದಿಯ ಕವಲುಗಳು. ಇವು ಭಾರತದ ಮಣಿಪುರ ಪ್ರದೇಶದಲ್ಲಿ ಹುಟ್ಟುತ್ತವೆ. ಇದರ ಮುಖ್ಯ ಕವಲಾದ ಸುರ್ಮಾ ನದಿಯನ್ನು ಸಿಲ್ಹೆಟ್ ಜಿಲ್ಲೆಯಲ್ಲಿ ಕಾಳಿನಿ ನದಿ ಕೂಡುತ್ತದೆ. ಇನ್ನೂ ಕೆಳಗೆ ಕುಸಿಯಾರ ಸಂಗಮಿಸುತ್ತದೆ. ಜಮುನಾ ನದಿಯ ಒಂದು ಶಾಖೆಯಾದ ಧವಳೇಶ್ವರಿ ನದಿಯನ್ನು ಕೂಡಿಕೊಂಡ ಮೇಲೆ ಮೇಘ್ನಾ ನದಿ ಗಂಗೆಯೊಂದಿಗೆ ಸೇರಿ ಮುಂದುವರಿದು, ಬುರ್ಹಿ ಗಂಗಾ ಮುಂತಾದ ಅನೇಕ ನದಿಗಳನ್ನು ಕೂಡಿ ವಿಶಾಲವಾಗಿ ಪ್ರವಹಿಸುತ್ತದೆ.
- ಬ್ರಹ್ಮಪುತ್ರ ಮತ್ತು ಅದರ ಹಲವು ಕವಲುಗಳು ಉತ್ತರ ಬಂಗಾಲದ ಜಿಲ್ಲೆಗಳ ಪೂರ್ವಭಾಗಗಳಿಂದ ಹಿಡಿದು ಆಗ್ನೇಯದ ಮೇಘ್ನಾ ನದಿಯವರೆಗೆ ವಿಶಾಲವಾದ ಪ್ರದೇಶವನ್ನು ಆವರಿಸಿಕೊಂಡಿವೆ. ಬ್ರಹ್ಮಪುತ್ರದ ದಕ್ಷಿಣದ ಭಾಗಕ್ಕೆ ಜಮುನಾ ಎಂಬ ಹೆಸರಿದೆ. ಪೂರ್ವ ಭಾಗದಿಂದ ಹಲವಾರು ನದಿಗಳು ಇದನ್ನು ಸೇರಿಕೊಳ್ಳುತ್ತವೆ. ಪದೇ ಪದೇ ದಡಮೀರಿ ಹರಿದು ಪಾತ್ರವನ್ನು ಬದಲಿಸುವ ಬ್ರಹ್ಮಪುತ್ರದಿಂದ ಬಾಂಗ್ಲಾದೇಶದ ಉತ್ತರ-ದಕ್ಷಿಣ ಭಾಗಗಳ ನಡುವಣ ಸಂಪರ್ಕಕ್ಕೆ ತೊಡಕು ಉಂಟಾಗುತ್ತಿರುತ್ತದೆ. ಬಾಂಗ್ಲಾದೇಶದ ಉತ್ತರ ಜಿಲ್ಲೆಗಳಿಗೆ ನೀರುಣಿಸುವ ಪ್ರಮುಖ ನದಿ ತಿಸ್ತ. ಭಾರತದ ಡಾರ್ಜಿಲಿಂಗ್ ಬಳಿ ಹಿಮಾಲಯದಲ್ಲಿ ಉಗಮಿಸುವ ಈ ನದಿ ದಕ್ಷಿಣಾಭಿಮುಖವಾಗಿ ಪ್ರವಹಿಸುತ್ತದೆ. 1787ರಲ್ಲಿ ಇದು ಪಾತ್ರ ಬದಲಿಸಿದ್ದರಿಂದ ಉತ್ತರ ಬಂಗಾಲದ ಹಲವು ನದಿಗಳಿಗೆ ನೀರಿನ ಆಕರಗಳು ಕಡಿದುಹೋದವು. ಇದರ ಫಲವಾಗಿ ಆ ಪ್ರದೇಶದ ಜಲೋತ್ಸಾರಣ ವ್ಯವಸ್ಥೆ ಹದಗೆಟ್ಟಿತು. ಈ ನದಿಗಳ ಪಾತ್ರಗಳಲ್ಲಿ ಮರಳು ತುಂಬಿಕೊಳ್ಳುತ್ತಿದೆ. ನೈಋತ್ಯ ಭಾಗದ ಅನೇಕ ಸಣ್ಣ ಹಾಗೂ ಮಧ್ಯಮ ಗಾತ್ರದ ನದಿಗಳ ಪಾತ್ರಗಳೂ ಮುಚ್ಚಿಹೋಗುತ್ತಿವೆ. ಚಿತ್ತಗಾಂಗ್ ಗುಡ್ಡಗಾಡು ಮತ್ತು ನೆರೆಯ ಬಯಲುಸೀಮೆಯ ನದೀ ವ್ಯವಸ್ಥೆಯ ಪ್ರಮುಖ ನದಿಗಳು ನಾಲ್ಕು : ಫೇನಿ, ಕರ್ಣಫುಲಿ, ಸಾಂಗು ಮತ್ತು ಮಾತಾ ಮುಹರಿ. ಇವು ಪಶ್ಚಿಮ ಹಾಗೂ ನೈಋತ್ಯಾಭಿಮುಖವಾಗಿ ಹರಿದು ಬಂಗಾಳಕೊಲ್ಲಿಯನ್ನು ಸೇರುತ್ತವೆ.
ಸ್ವಾಭಾವಿಕ ವಿಭಾಗಗಳು
[ಬದಲಾಯಿಸಿ]ಬಾಂಗ್ಲಾ ದೇಶವನ್ನು 20 ಸ್ವಾಭಾವಿಕ ಪ್ರದೇಶಗಳಾಗಿ ವಿಂಗಡಿಸಲಾಗಿದೆ. ಮುಖ್ಯವೆನಿಸುವ 11 ಪ್ರದೇಶಗಳನ್ನು ಮುಂದೆ ವಿವರಿಸಲಾಗಿದೆ.
ಬಾರಿಂದ್ ಪ್ರದೇಶ
[ಬದಲಾಯಿಸಿ]ಗಂಗಾ-ಬ್ರಹ್ಮಪುತ್ರ ನದಿಗಳ ನಡುವಣ ಈಗಿನ ರಾಜಶಾಹಿ ವಿಭಾಗ. ಈ ಪ್ರದೇಶದ ನೆಲ ಸ್ವಲ್ಪ ಎತ್ತರಕ್ಕಿದೆ. ಗಟ್ಟಿಯಾದ ಕೆಂಪು ಜೇಡಿ ಮಣ್ಣಿನಿಂದ ಕೂಡಿದೆ.
ಭಾರ್‍ಕೊಳ್ಳ
[ಬದಲಾಯಿಸಿ]ಬಾರಿಂದ್ ಪ್ರದೇಶದ ಆಗ್ನೇಯಕ್ಕಿರುವ ತಗ್ಗಿನ ಭಾಗ ರಾಜಶಾಹಿ ಮತ್ತು ಪಾಬ್ನ ಜಿಲ್ಲೆಗಳ ಭಾಗಗಳನ್ನೊಳಗೊಂಡಿದೆ. ಇದರ ನಡುವೆ ಇರುವ ವಿಶಾಲವಾದ ಜವುಗು ನೆಲಕ್ಕೆ ಚಲನ್ ಬೀಲ್ ಎಂದು ಹೆಸರು. ಬ್ರಹ್ಮಪುತ್ರ ಪ್ರವಾಹದ ಬಯಲು: ಉತ್ತರದಲ್ಲಿ ರಂಗಪುರ ಜಿಲ್ಲೆಯ ಭುರುಂಗಮಾರಿಯಿಂದ ದಕ್ಷಿಣದಲ್ಲಿ ಪಾಬ್ನ ಜಿಲ್ಲೆಯ ಬೇರಾವರೆಗೂ ಪೂರ್ವಪಶ್ಚಿಮವಾಗಿ ಮೈಮೆನ್‍ಸಿಂಗ್ ಜಿಲ್ಲೆಯ ದೇವಗಂಜ್ ಜಮಾಲ್‍ಪುರ ಪ್ರದೇಶದಿಂದ ಭಾರತದ ಗಡಿಯವರೆಗೂ ಹಬ್ಬಿದೆ. ಬ್ರಹ್ಮಪುತ್ರ ನದಿ ಇಲ್ಲಿ ಆಗಾಗ್ಗೆ ದಡಮೀರಿ ಹರಿದು ಈ ಪ್ರದೇಶವನ್ನು ಆವರಿಸುತ್ತದೆ. ಮಧುಪುರ ಪ್ರದೇಶ: ಪೂರ್ವದಲ್ಲಿರುವ ಈ ಪ್ರದೇಶ ಪ್ರಸ್ಥಭೂಮಿಗಳಿಂದಲೂ ಬೆಟ್ಟಗುಡ್ಡಗಳಿಂದಲೂ ಕೂಡಿದೆ. ಇಲ್ಲಿಯ ಕಾಡಿನಲ್ಲಿ ಸಾಲು ವೃಕ್ಷಗಳಿವೆ.
ಈಶಾನ್ಯ ತಗ್ಗುನೆಲ
[ಬದಲಾಯಿಸಿ]ಸಿಲ್ಹೆಟ್ ಜಿಲ್ಲೆಯ ದಕ್ಷಿಣ ಹಾಗೂ ನೈಋತ್ಯ ಭಾಗಗಳು ಮತ್ತು ವೈಮೆನ್‍ಸಿಂಗ್ ಜಿಲ್ಲೆಯ ಉತ್ತರಭಾಗ. ಇಲ್ಲಿ ಚಿಕ್ಕ ದೊಡ್ಡ ಅನೇಕ ಸರೋವರಗಳಿವೆ. ಸಿಲ್ಹೆಟ್ ಬೆಟ್ಟ ಸೀಮೆ: ಇಲ್ಲಿ ಸುಮಾರು 31 ಮೀಟರಿನಿಂದ ಸುಮಾರು 332 ಮೀಟರ್‌ವರೆಗಿನ ಎತ್ತರಗಳ ಹಲವಾರು ಬೆಟ್ಟಗಳಿವೆ. ಕೆಲವು ಬೆಟ್ಟಗಳು ಭಾರತದ ಗಡಿಯೊಳಕ್ಕೆ ಚಾಚಿಕೊಂಡಿವೆ. ಮೇಘ್ನಾಕೊಳ್ಳ; ಬ್ರಹ್ಮಪುತ್ರ ನದಿಯ ಹಳೆಯ ಪಾತ್ರ ಮೇಘ್ನಾ ನದಿಯ ಪ್ರವಾಹದ ಕೊಳ್ಳವಾಗಿ ಪರಿಣಮಿಸಿದೆ. ಇಲ್ಲಿ ಫಲವತ್ತಾದ ಭೂಪ್ರದೇಶವಿದೆ.
ಮಧ್ಯದ ಮುಖಜಭೂಮಿ ಪ್ರದೇಶ
[ಬದಲಾಯಿಸಿ]ಹಲವು ಸರೋವರಗಳಿಂದ ಕೂಡಿದ್ದು ಫರೀದ್‍ಪುರ್ ಜಿಲ್ಲೆಯಲ್ಲಿದೆ. ಅಸ್ಥಿರ ಮುಖಜಭೂಮಿ: ದಕ್ಷಿಣ ಬಾಂಗ್ಲಾದೇಶದ ಭೂಪಟ್ಟೆ ಬಂಗಾಳ ಕೊಲ್ಲಿಯ ಅಂಚಿನಲ್ಲಿದೆ. ಸುಮಾರು 3,000 ಚ.ಕಿ.ಮೀ ವಿಸ್ತೀರ್ಣದ ಈ ತಗ್ಗು ನೆಲದಲ್ಲಿ ಸುಂದರಬನಗಳೆಂಬ ದೊಡ್ಡ ಕಾಡಿದೆ. ಇದರ ಉತ್ತರಕ್ಕಿರುವ ನೆಲ ಕೃಷಿ ಭೂಮಿ. ದಕ್ಷಿಣ ಖುಲ್ನಾ ಮತ್ತು ನೈಋತ್ಯ ಬೇಕರ್‍ಗಂಜ್ ಭಾಗದಲ್ಲಿ ಹರಿಯುವ ಅನೇಕ ತೊರೆಗಳು ಬಲೆಗಳಂತೆ ಹೆಣೆದುಕೊಂಡು ಹಲವಾರು ಪುಟ್ಟ ದ್ವೀಪಗಳನ್ನು ರಚಿಸಿವೆ.
ಕ್ರಿಯಾಶೀಲ ಮುಖಜಭೂಮಿ
[ಬದಲಾಯಿಸಿ]ಧವಳೇಶ್ವರಿ, ಪದ್ಮಾ ನದಿಗಳ ನಡುವಣ ನೆಲ ಮತ್ತು ಅಳಿವೆಯೊಳಗಿನ ದ್ವೀಪಗಳ ಪ್ರದೇಶ. ಪಶ್ಚಿಮದಲ್ಲಿ ಖುಲ್ನಾ ಜಿಲ್ಲೆಯ ಪುಸುರ್ ನದಿಯಿಂದ ಪೂರ್ವದಲ್ಲಿ ಚಿತ್ತಗಾಂಗ್ ಜಿಲ್ಲೆಯ ಸಂದ್ವೀಪ್‍ವರೆಗೆ ಹಬ್ಬಿದೆ.
ಚಿತ್ತಗಾಂಗ್ ಪ್ರದೇಶ
[ಬದಲಾಯಿಸಿ]ಫೇನಿ ನದಿಯ ದಕ್ಷಿಣದಿಂದ ಕಾಕ್ಸ್‍ಬಜಾರ್‍ವರೆಗೆ ಹರಡಿದೆ. ಈ ಪ್ರದೇಶದಲ್ಲಿ ಅನೇಕ ಬೆಟ್ಟಗುಡ್ಡಗಳೂ ಕಣಿವೆಗಳೂ ಕಾಡುಗಳೂ ಇವೆ. ಇದು ಬಾಂಗ್ಲಾದೇಶದ ಇತರ ಕಡೆಗಳಿಗಿಂತ ಭಿನ್ನ. ಕರಾವಳಿ ಬಯಲು ಮರಳು ಮತ್ತು ಚೆವುಳು ಮಣ್ಣಿನಿಂದ ಕೂಡಿದ್ದು ಇದರ ತೀರದಲ್ಲಿ ಹಲವು ದ್ವೀಪಗಳಿವೆ. ಇವುಗಳ ಪೈಕಿ ಒಂದು ಹವಳ ದ್ವೀಪ.
ವಾಯುಗುಣ
[ಬದಲಾಯಿಸಿ]ಇಲ್ಲಿಯದು ಮಾನ್‍ಸೂನ್ ವಾಯುಗುಣ ತಕ್ಕಮಟ್ಟಿಗೆ ಬೆಚ್ಚಗಿನ ಹವೆ. ಏಪ್ರಿಲ್‍ನಿಂದ ಸೆಪ್ಟಂಬರ್ ತನಕದ ಬೇಸಗೆಯ ದಿನಗಳಲ್ಲಿ ಗರಿಷ್ಠ ಉಷ್ಣತೆ 33 ಡಿಗ್ರಿ ಸೆ. ಯಿಂದ 36 ಡಿಗ್ರಿ ಸೆ. ನಡುವೆ ವ್ಯತ್ಯಾಸವಾಗುತ್ತಿರುತ್ತದೆ. ಏಪ್ರಿಲ್ ಹೆಚ್ಚು ಉಷ್ಣತೆಯ (28 ಡಿಗ್ರಿ ಸೆ.) ತಿಂಗಳು. ಜನವರಿ ಹೆಚ್ಚು ತಂಪಿನ (18 ಡಿಗ್ರಿ ಸೆ.) ಮಾಸ. ಅಕ್ಟೋಬರಿನಿಂದ ಮಾರ್ಚ್ ತನಕ ಚಳಿಗಾಲ. ಜೂನ್ - ಜುಲೈ ತಿಂಗಳುಗಳಲ್ಲಿ ಬಾಂಗ್ಲಾ ದೇಶದಲ್ಲಿ ಅತ್ಯಂತ ಕಡಿಮೆ ಒತ್ತಡವಿರುತ್ತದೆ. ಚಳಿಗಾಲದಲ್ಲಿ ಉತ್ತರ ಹಾಗೂ ಈಶಾನ್ಯ ದಿಕ್ಕುಗಳಿಂದ ಗಾಳಿ ಬೀಸುತ್ತದೆ. ಮಾರ್ಚ್ - ಮೇ ಅವಧಿಯಲ್ಲಿ ವಾಯವ್ಯದಿಂದ ಬೀಸುವ ಗಾಳಿಯ ವೇಗ ಅಧಿಕ. ಮಾರ್ಚಿಯಿಂದ ಅಕ್ಟೋಬರ್ ತನಕ ಬಾಂಗ್ಲಾ ದೇಶದಲ್ಲಿ ವಾರ್ಷಿಕ ಸರಾಸರಿ 250 ಸೆಂ.ಮೀ. ಮಳೆಯಾಗುತ್ತದೆ. ದೇಶದ ಪಶ್ಚಿಮ ಭಾಗದಲ್ಲಿ ಸರಾಸರಿ 165 ಸೆಂ.ಮೀ. ಈಶಾನ್ಯ ಭಾಗದಲ್ಲಿ 635 ಸೆ.ಮೀ.ವರೆಗೂ ಮಳೆಯಾಗುವುದುಂಟು, ಈ ಕಾಲದಲ್ಲಿ ನದಿಗಳು ದಡ ಮೀರಿ ಹರಿದು ಸುತ್ತಲ ತಗ್ಗು ಪ್ರದೇಶಗಳು ಜಲಾವೃತವಾಗುತ್ತವೆ. ಬೇಸಗೆಯ ಆರಂಭದಲ್ಲಿ ಅಥವಾ ಮಾನ್ಸೂನಿನ ಕೊನೆಗಾಲದಲ್ಲಿ ವೇಗವಾಗಿ ಗಾಳಿ ಬೀಸುವುದುಂಟು. ಕೆಲವೇಳೆ ಗಂಟೆಗೆ 161ಕಿ.ಮೀ.ಗಳಿಗಿಂತ ಹೆಚ್ಚು ವೇಗದಲ್ಲಿ ಬೀಸುವ ಗಾಳಿಯಿಂದ ಬಂಗಾಳ ಕೊಲ್ಲಿಯ ನೀರು ಸುಮಾರು 5.5 ಮೀಟರುಗಳಿಗಿಂತ ಹೆಚ್ಚಾಗಿ ಮೇಲೆದ್ದು ಕರಾವಳಿಯ ಹಾಗೂ ತೀರದ ದ್ವೀಪಗಳ ಮೇಲೆ ಅಪ್ಪಳಿಸಿ ಸಿಕ್ಕಿದ್ದನ್ನೆಲ್ಲ ಕೊಚ್ಚಿಕೊಂಡು ಹೋಗುವುದು.
ಸಸ್ಯ ಮತ್ತು ಪ್ರಾಣಿ ವರ್ಗ
[ಬದಲಾಯಿಸಿ]ಬಾಂಗ್ಲಾದೇಶ ಶೇಕಡಾ 16 ರಷ್ಟು ಅರಣ್ಯಾವೃತ, ಇದು ಹೆಚ್ಚಾಗಿ ಚಿತ್ತಗಾಂಗ್, ಚಿತ್ತಗಾಂಗ್‍ಬೆಟ್ಟಗಾಡು, ಸಿಲ್ಹೆಟ್ ಮತ್ತು ಖುಲ್ನಾ ಜಿಲ್ಲೆಗಳಲ್ಲಿದೆ. ಢಾಕಾ, ಮೈಮೆನ್‍ಸಿಂಗ್ ಜಿಲ್ಲೆಗಳಲ್ಲೂ ಕಾಡುಗಳುಂಟು. ದೇಶದಲ್ಲಿ ಗಿಡಮರಗಳು ಸಮೃದ್ಧವಾಗಿ ಬೆಳೆಯುತ್ತವೆ. ಇಲ್ಲಿಯ ಗ್ರಾಮಗಳು ಮಾವು, ಹಲಸು, ಬಿದಿರು, ಅಡಕೆ, ತಾಳೆ ಮರಗಳಿಂದ ಸುತ್ತುವರಿದಿವೆ. ಸಸ್ಯ ಪ್ರರೂಪಗಳಿಗೆ ಅನುಗುಣವಾಗಿ ಬಾಂಗ್ಲಾದೇಶವನ್ನು ನಾಲ್ಕು ವಲಯಗಳಾಗಿ ವಿಂಗಡಿಸಬಹುದು.
ಸಿಲ್ಹೆಟ್ ಮತ್ತು ಚಿತ್ತಗಾಂಗ್ ಜಿಲ್ಲೆಗಳ ಭಾಗಗಳನ್ನೊಳಗೊಂಡ ಉತ್ತರ ವಲಯ
[ಬದಲಾಯಿಸಿ]ಈ ವಲಯದ ಹಲವು ತಗ್ಗು ಬೆಟ್ಟಗಳನ್ನು ದಟ್ಟ ಹಸಿರು ಕವಿದಿದೆ. ಇಲ್ಲಿ ಬಿದಿರು ಮತ್ತು ಬೆತ್ತ ಅಧಿಕ.
ಢಾಕಾ ಮತ್ತು ಮೈಮೆನ್‍ಸಿಂಗ್ ಜಿಲ್ಲೆಗಳ ಭಾಗಗಳನ್ನೊಳಗೊಂಡ ಮಧ್ಯ ವಲಯ
[ಬದಲಾಯಿಸಿ]ಈ ವಲಯದಲ್ಲಿ ಸರೋವರಗಳು ಹೆಚ್ಚು. ಬಹಳಷ್ಟು ನೆಲಜವುಗು. ಮಧುಪುರ ಕಾಡುಗಳಿಂದ ಕೂಡಿದೆ. ಬ್ರಹ್ಮಪುತ್ರದ ವಾಯವ್ಯಕ್ಕೆ ಮತ್ತು ಪದ್ಮಾ ನದಿಯ ನೈಋತ್ಯಕ್ಕೆ ಇರುವ ಪ್ರದೇಶ ಚಪ್ಪಟೆಯಾದ ಬಯಲು. ಸಾಗುವಳಿಗೆ ಒಳಪಟ್ಟಿರುವ ಈ ಬಯಲು ಹಲವು ಪೈರುಗಳಿಂದಲೂ ತೋಡತುಡಿಕೆಗಳಿಂದಲೂ ಕೂಡಿದೆ. ಬಾಬುಲ್ ಇಲ್ಲಿನ ಪ್ರಮುಖವಾದ ಮರ. ಖುಲ್ನಾ ಮತ್ತು ಬರಿಸಾಲ್ ಜಿಲ್ಲೆಗಳ ದಕ್ಷಿಣ ವಲಯದಲ್ಲಿ ಗುಲ್ಮ ವೃಕ್ಷ ಪ್ರಧಾನ. ಇಲ್ಲಿ ಸುಂದರಬನ ಅರಣ್ಯ ಪ್ರದೇಶವಿದೆ. ವಾಣಿಜ್ಯ ದೃಷ್ಟಿಯಿಂದ ಉಪಯುಕ್ತವಾದ ಅನೇಕ ಮರಗಳು ಇಲ್ಲಿ ಬೆಳೆಯುತ್ತವೆ. ಬಾಂಗ್ಲಾ ದೇಶದಲ್ಲಿ ಸಾಮಾನ್ಯವಾಗಿ ಕಂಡುಬರುವ ಮರಗಳೆಂದರೆ ಮಾವು, ಅಡಕೆ, ತೆಂಗು, ತಾಳೆ, ಅರಳಿ, ಇಲ್ಲಿ ಚೆಂಡುಮಲ್ಲಿಗೆ, ಬಂಗಾಲ ಗುಲಾಬಿ, ನೈದಿಲೆ, ಗಂಧರಾಜ, ಬೋಕುಲ್ ಮತ್ತು ಕಾಮಿನಿ ಇವುಗಳ ಜೊತೆಗೆ ಇತರ ಹೂವುಗಳನ್ನೂ ಕಾಣಬಹುದು.
ಪ್ರಾಣಿಗಳು
[ಬದಲಾಯಿಸಿ]ಬಾಂಗ್ಲಾದೇಶದಲ್ಲಿ ಸುಮಾರು 200 ಬಗೆಯ ಸ್ತನಿಗಳೂ 750 ಬಗೆಯ ಹಕ್ಕಿಗಳೂ 150 ಬಗೆಯ ಸರೀಸೃಪಗಳೂ 200 ಬಗೆಯ ಮೀನುಗಳು ಇವೆ. ಚಿತ್ತಗಾಂಗ್ ಬೆಟ್ಟಗಾಡು ಪ್ರದೇಶದಲ್ಲಿ ಹಿಂಡು ಹಿಂಡಾಗಿ ಆನೆ, ಎಮ್ಮೆ, ಕಾಡುಕೋಣ, ಕಾಡೆಮ್ಮೆ, ಜಿಂಕೆ, ಸಾಂಗ ಸಾಂಬರ್ ಮುಂತಾದ ಸಸ್ಯಾಹಾರಿ ಪ್ರಾಣಿಗಳೂ, ಹುಲಿ, ಚಿರತೆ, ಕಿರುಬ ಮುಂತಾದ ಮಾಂಸಾಹಾರಿಗಳೂ ಇವೆ. ಕರಡಿ, ಮುಂಗುಸಿ, ರ್ಹಿಸಸ್ ಕೋತಿ ಇವು ಇತರ ಮೃಗಗಳು. ಬುಲ್ಬುಲ್, ರಾಬಿನ್, ಕೋಗಿಲೆ, ನೊಣ ಹಿಡುಕ, ಗೊರವಂಕ, ಹದ್ದು, ಗೂಬೆ, ಮಿಂಚುಳ್ಳಿ ಕೊಂಬುಕೊಕ್ಕಿನ ಹಕ್ಕಿ, ಮರಕುಟಕ, ಹೆರನ್ ಕೊಕ್ಕರೆ, ಬಾತು, ಕಾಡುವರಟೆ ಮುಂತಾದ ಪಕ್ಷಿಗಳಿವೆ.
ಜನ
[ಬದಲಾಯಿಸಿ]ನಾನಾ ಜನಾಂಗಗಳ ಮತ್ತು ಬುಡಕಟ್ಟುಗಳ ಸಂಯುಕ್ತ ಬಾಂಗ್ಲಾದೇಶ. ಈ ಪ್ರದೇಶವನ್ನು ಅತ್ಯಂತ ಹಿಂದೆ ಪ್ರವೇಶಿಸಿದ ಗುಂಪುಗಳಲ್ಲಿ ಒಂದಾದ್ದು ಪ್ರೋಟೊ ಆಸ್ಟ್ರಲಾಯ್ಡ್‍ಗಳು ಅಥವಾ ವೆಡ್ಡಾಗಳು. ಇವರದು ಉದ್ದ ತಲೆ, ಚಪ್ಪಟೆ ಮೂಗು, ಕಪ್ಪು ಕಂದು ಬಣ್ಣ, ಅನಂತರ ಮೆಡಿಟರೇನಿಯನ್ ಕಾಕಾಸಾಯ್ಡರು ಬಂದರೆಂಬುದು ಕೆಲವು ವಿದ್ವಾಂಸರ ಮತ. ಇವರು ಆರ್ಯರು. ಅನಂತರ ಇಂಡೋ-ಯೂರೊಪಿಯನ್ ಬುಡಕಟ್ಟಿನ ಅರ್ಮೆನಾಯ್ಡರು ಬಂದರೆಂದು ನಂಬಲಾಗಿದೆ. ಕ್ರಿ. ಪೂ. ಒಂದನೆಯ ಸಹಸ್ರಮಾನದಲ್ಲಿ ಈ ಪ್ರದೇಶ ಆರ್ಯಮಯವಾಗತೊಡಗಿತು. 8 ನೆಯ ಶತಮಾನದಲ್ಲಿ ಮುಸ್ಲಿಮರ ಆಗಮನದೊಂದಿಗೆ ಹೊಸ ಪ್ರಕ್ರಿಯೆಗಳು ಆರಂಭವಾದುವು. ಅರಬ್, ಪರ್ಷಿಯನ್ ಹಾಗೂ ತುರ್ಕಿ ಮೂಲಕ ಮುಸ್ಲಿಮರು ಹೆಚ್ಚು ಸಂಖ್ಯೆಯಲ್ಲಿ ಬರತೊಡಗಿದರು. ಜೊತೆಗೆ ಸ್ಥಳೀಯರನೇಕರು ಮುಸ್ಲಿಮರಾದರು.
ಪ್ರೋಟೊ-ಅಸ್ಟ್ರಲಾಯ್ಡ್ ಗುಂಪಿಗೆ ಸೇರಿದವರೆನ್ನಲಾದ ಸಂತಾಲರು ರಾಜ್‍ಶಾಹಿ ಮತ್ತು ದಿನಾಜ್‍ಪುರ್ ಜಿಲ್ಲೆಗಳ ಬಾರಿಂದ್ ಪ್ರದೇಶದಲ್ಲೂ ಅಸ್ಸಾಮ್ ಗಡಿ ಬಳಿಯ ಖಾಸಿ ಬೆಟ್ಟಗಳಲ್ಲಿ ಖಾಸಿಗಳೂ ವಾಸಿಸುತ್ತಾರೆ. ಗಾರೊ, ಹಜಾಂಗ್, ಕಚಾರಿ ಮತ್ತು ತಿಪೆರಿಗಳಲ್ಲಿ ಮಂಗೊಲಾಯ್ಡ್ ಅಂಶವಿದೆ. ಗಾರೊ ಮತ್ತು ಹಜಾಂಗ್‍ಗಳು ಸುಸಾಂಗ್ ಬೆಟ್ಟ ಸೀಮೆಯಲ್ಲೂ ಕಚಾರಿಗಳು ಸಿಲ್ಹೆಟ್‍ನಲ್ಲೂ ತಿಪೆರಿಗಳು ಚಿತ್ತಗಾಂಗ್ ಬೆಟ್ಟ ಪ್ರದೇಶದಲ್ಲೂ ಇದ್ದಾರೆ. ಈ ಬುಡಕಟ್ಟುಗಳವರಲ್ಲದೆ ಉಳಿದವರು ಬಂಗಾಲಿಗಳು. ಜನಾಂಗೀಯವಾಗಿ ಹಾಗೂ ಭಾಷಿಕವಾಗಿ ಇವರು ವಿಶಿಷ್ಟ ಜನ. ಆದರೆ ಇವರು ವಿಭಿನ್ನ ಮೂಲದವರು. ಇವರಲ್ಲಿ ಹಲವು ಜನಾಂಗಗಳು ಬೆರೆತಿವೆ. ಬಂಗಾಲಿ ಇಲ್ಲಿಯ ಜನರ ಭಾಷೆ. ಶೇಕಡಾ 98 ರಷ್ಟು ಜನ ಈ ಭಾಷೆ ಮಾತನಾಡುತ್ತಾರೆ. 1947ರ ಭಾರತ ವಿಭಜನೆಯ ಆನಂತರ ಇಲ್ಲಿಗೆ ಹೆಚ್ಚಾಗಿ ವಲಸೆ ಬಂದವರ ಭಾಷೆ ಸಾಮಾನ್ಯವಾಗಿ ಉರ್ದು. ಇಂಗ್ಲೀಷ್ ಬಲ್ಲವರೂ ಇದ್ದಾರೆ.
ಮತ
[ಬದಲಾಯಿಸಿ]ಬಾಂಗ್ಲಾದೇಶದಲ್ಲಿ ಶೇಕಡಾ ೮೦ ಕ್ಕಿಂತ ಹೆಚ್ಚು ಜನ ಮುಸ್ಲಿಮರು. 13ನೆಯ ಶತಮಾನದ ಆದಿಯಲ್ಲಿ ಇಲ್ಲಿಗೆ ಬಂದ ಕೆಲವು ಮುಸ್ಲಿಮರು ಕ್ರಮೇಣ ಇಲ್ಲಿ ಬಲಿಷ್ಠರಾಗಿ ತಮ್ಮ ಅಧಿಕಾರ ಬೆಳೆಸಿಕೊಂಡರು. ಇದರಿಂದಾಗಿ ಇಡೀ ಪ್ರದೇಶದ ಸಂಸ್ಕಂತಿಯೇ ತೀವ್ರ ಬದಲಾವಣೆಗೆ ಒಳಗಾಯಿತು. ಇವರ ಆಗಮನಕ್ಕೆ ಹಿಂದೆ ಇಲ್ಲಿ ಹಿಂದುಗಳು ಬಹಳ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಬೌದ್ಧ ಮತವೂ ಸ್ವಲ್ಪ ಮಟ್ಟಿಗೆ ಪ್ರಚಾರದಲ್ಲಿತ್ತು. ೧೮೭೨ರ ತನಕವೂ ಹಿಂದೂಗಳದೇ ಬಹುಮತವಾಗಿತ್ತು. ೧೮೯೦ರಿಂದ ಈಚೆಗೆ ಮುಸ್ಲಿಮರ ಸಂಖ್ಯೆ ತೀವ್ರವಾಗಿ ಬೆಳೆಯತೊಡಗಿತು. ಮುಸ್ಲಿಮ್ ಮತದ ಸೂಫಿಗಳೆಂಬವರು ಕೆಳವರ್ಗಗಳ ಹಿಂದೂಗಳಲ್ಲಿ ಪ್ರಭಾವಗಳಿಸಿ ಅವರನ್ನು ಮುಸ್ಲಿಮರಾಗಿ ಪರಿವರ್ತಿಸಿದರು. ಅಲ್ಲದೆ ಉತ್ತರ ಭಾರತದಿಂದಲೂ ಹೊರ ದೇಶಗಳಿಂದಲೂ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಬರತೊಡಗಿದರು. ಮುಸ್ಲಿಮರಲ್ಲಿ ಜನನ ದರ ಹಿಂದುಗಳಿಗಿಂತ ಅಧಿಕವಾಗಿದ್ದುದು ಇನ್ನೊಂದು ಕಾರಣ. ಮುಸ್ಲಿಮರಲ್ಲಿ ಬಹುಸಂಖ್ಯಾತರು ಸುನ್ನಿಗಳು, ಷಿಯಗಳು ಅಲ್ಪಸಂಖ್ಯೆಯಲ್ಲಿದ್ದಾರೆ. ಇವರು ಬಹುತೇಕ ಪರ್ಷಿಯದಿಂದ ಬಂದವರ ವಂಶಸ್ಥರು. ಅಲ್ಪಸಂಖ್ಯಾತರಾದ ಹಿಂದೂಗಳಲ್ಲದೆ ಬೌದ್ಧರೂ, ಕ್ರೈಸ್ತರೂ ಇದ್ದಾರೆ. ಚಿತ್ತಗಾಂಗ್ ಬೆಟ್ಟ ಪ್ರದೇಶದಲ್ಲಿರುವ ಚಕ್ಮಾ, ಚೌಕ್, ಮಾಘ ಮತ್ತು ಮ್ರುಗಳು ಬಹುತೇಕ ಬೌದ್ಧರು. ಕುಮಿಗಳೂ ಕೆಲವು ಮ್ರುಗಳೂ ಸರ್ವಚೇತನವಾದಿಗಳು. ಲುಷಾಯಿಗಳು, ಕ್ರೈಸ್ತರು, ತಿಪೆರಿಗಳು ಸಾಮಾನ್ಯವಾಗಿ ಮೇಲಣ ವರ್ಗಗಳ ಹಿಂದೂಗಳು, ಷಿಯಂಗರು ಸಾಮಾನ್ಯವಾಗಿ ಕೆಳವರ್ಣಗಳವರು. ಬಾಂಗ್ಲಾದಲ್ಲಿ ಹೆಚ್ಚು ಸಂಖ್ಯೆಯಲ್ಲಿ ನಗರ ಪಟ್ಟಣಗಳಿಲ್ಲ. ನಗರಗಳು ೩ ಮಾತ್ರ. ೮೦ ಚಿಕ್ಕ ದೊಡ್ಡ ಪಟ್ಟಣಗಳಿವೆ. ಬಾಂಗ್ಲಾ ದೇಶದ ಜನಸಂಖ್ಯೆಯಲ್ಲಿ ಪಟ್ಟಣವಾಸಿಗಳು ಶೇಕಡಾ ೪ ರಷ್ಟು ಮಾತ್ರ. ಢಾಕಾ ಬಾಂಗ್ಲಾದೇಶದ ರಾಜಧಾನಿ. ಅತ್ಯಂತ ದೊಡ್ಡ ನಗರ. ಢಾಕಾದಿಂದ ಸುಮಾರು ೧೯ ಕಿ.ಮೀ. ದೂರದಲ್ಲಿರುವ ನಾರಾಯಣಗಂಜ್ ಸೆಣಬು, ಮತ್ತು ಚರ್ಮೋದ್ಯೋಗ ಕೇಂದ್ರ. ಢಾಕಾ ನಾರಾಯಣಗಂಜ್‍ಗಳನ್ನು ಒಂದಾಗಿ ಸೇರಿಸಿ ಮಹಾ ಢಾಕಾ ನಗರವೆಂದು ವ್ಯವಹರಿಸುವುದೂ ಉಂಟು.
ಚಿತ್ತಗಾಂಗ್ ಎರಡನೆಯ ಮುಖ್ಯ ನಗರ. ಜನಸಂಖ್ಯೆ ೮೮೯.೭೬೦ (೧೯೭೬). ಇದೊಂದು ಪ್ರಮುಖ ಬಂದರು ಕೂಡ. ೧೯೪೭ ರಿಂದ ಈಚೆಗೆ ಇದು ಬೆಳೆಯುತ್ತಿದೆ. ಇದರ ಸುತ್ತ ಕಾಲೂರ್‍ಘಾಟ್, ಷೋಲಾಷ್‍ಪುರ್, ಫೌಜ್‍ದಾರ್ ಹಟ್ ಮುಂತಾದ ಕೈಗಾರಿಕಾ ಕ್ಷೇತ್ರಗಳು ತಲೆಯೆತ್ತಿವೆ. ಖುಲ್ನಾ ನೈಋತ್ಯದ ಪ್ರಮುಖ ವಾಣಿಜ್ಯ ಹಾಗೂ ಕೈಗಾರಿಕಾ ಕೇಂದ್ರ. ಜನಸಂಖ್ಯೆ ೪೩೭.೩೦೪ (೧೯೭೬). ಇದರ ಬಳಿ ಚಾಲ್ನ ಬಂದರು ಸ್ಥಾಪಿತವಾಗಿದೆ. ಬಳಿಯಲ್ಲೇ ದೌಲತ್‍ಪುರ್ ಕೈಗಾರಿಕಾ ಕ್ಷೇತ್ರ ಬೆಳೆದಿದೆ.
ಬಾಂಗ್ಲಾದೇಶದ ಹಳ್ಳಿಗಳು ದಟ್ಟವಾದ ಜನಸಂದಣಿಯಿಂದ ಕೂಡಿದೆ. ಆಗಾಗ್ಗೆ ನದಿಗಳ ಪ್ರವಾಹದ ನೀರು ತಗ್ಗಿನಲ್ಲೆಲ್ಲ ನಿಲ್ಲುವುದರಿಂದ ಹಳ್ಳಿಗಳನ್ನು ಎತ್ತರ ಪ್ರದೇಶಗಳಿಗೆ ಸ್ಥಳಾಂತರಿಸುತ್ತಿದ್ದಾರೆ. ರಸ್ತೆಗಳ ಬದಿಗಳಲ್ಲಿ ಉದ್ದಕ್ಕೂ ಹಳ್ಳಿಗಳು ಹಬ್ಬಿವೆ. ಕುಷ್ಟಿಯಾ, ಜೆಸ್ಸೂರ್, ಫರೀದ್‍ಪುರ್ ಜಿಲ್ಲೆಗಳಲ್ಲೂ ಖುಲ್ನಾ, ಬೇಕರ್ಗಂಜ್, ಪಟುವಾಖಾಲಿ ಮುಂತಾದ ಜಿಲ್ಲೆಗಳ ಭಾಗಗಳಲ್ಲೂ ಇದು ಸಾಮಾನ್ಯ ನೋಟ, ಬಾಂಗ್ಲಾದೇಶದಲ್ಲಿ ೪ ಆಡಳಿತ ವಿಭಾಗಗಳೂ ೧೯ ಜಿಲ್ಲೆಗಳು ಇವೆ. ಚಿತ್ತಗಾಂಗ್, ಚಿತ್ತಗಾಂಗ್ ಬೆಟ್ಟ ಸೀಮೆ, ಕೊಮಿಲ್ಲಾ, ನೌಖಾಲಿ, ಸಿಲ್ಹೆಟ್ ಜಿಲ್ಲೆಗಳು ಚಿತ್ತಗಾಂಗ್ ವಿಭಾಗದಲ್ಲೂ ಢಾಕಾ, ಫರೀದ್ ಪುರ್, ಮೈಮೆನ್‍ಸಿಂಗ್, ತಂಗೇಲ್ ಜಿಲ್ಲೆಗಳು ಢಾಕಾ ವಿಭಾಗದಲ್ಲೂ ಬೇಕರ್ಗಂಜ್ (ಬರಿಸಾಲ್), ಜೆಸ್ಸೊರ್, ಖುಲ್ನಾ ವಿಭಾಗದಲ್ಲೂ ಬೋಗ್ರಾ, ದಿನಾಜ್‍ಪುರ್, ದಾಬ್ನಾ, ರಾಜ್‍ಶಾಹಿ, ರಂಗ್‍ಪುರ್ ಜಿಲ್ಲೆಗಳು ರಾಜ್‍ಶಾಹಿ ವಿಭಾಗದಲ್ಲೂ ಇವೆ.
ಆರ್ಥಿಕತೆ
[ಬದಲಾಯಿಸಿ]- ಇಲ್ಲಿಯದು ಕೃಷಿ ಪ್ರಧಾನ ಆರ್ಥಿಕತೆ. ಶೆಕಡಾ 80ಕ್ಕಿಂತ ಹೆಚ್ಚು ಜನ ವ್ಯವಸಾಯವನ್ನೇ ಅವಲಂಬಿಸಿದ್ದಾರೆ. ಬಾಂಗ್ಲಾದೇಶದ ಒಟ್ಟು ಭೂಪ್ರದೇಶವಾದ 1,50,00,000 ಹೆಕ್ಟೇರುಗಳಲ್ಲಿ ಸುಮಾರು 10,28,100 ಹೆಕ್ಟೇರ್ ಪ್ರದೇಶ ಸಾಗುವಳಿಗೆ ಒಳಪಟ್ಟಿದೆ. ಮಣ್ಣು ಸಾರಯುಕ್ತವಾದ್ದು.
- ಬಾಂಗ್ಲಾ ಬಹಳ ಫಲವತ್ತಾದ ನಾಡೆಂದು ಪ್ರಸಿದ್ಧವಾಗಿದೆ. ಸೆಣಬು, ಭತ್ತ ಬಹು ಮುಖ್ಯವಾದ ಬೆಳೆಗಳು. ಇತರ ಕೃಷಿ ಉತ್ಪನ್ನಗಳು ಬೇಳೆಕಾಳು, ಆಲೂಗೆಡ್ಡೆ, ಎಣ್ಣೆ, ಬೀಜ, ಕಬ್ಬು, ಹೊಗೆಸೊಪ್ಪು ಮತ್ತು ಹಣ್ಣುಗಳು, ಇಲ್ಲಿಯ ಕೃಷಿ ಮಳೆಯನ್ನೇ ಆಧರಿಸಿದೆ. ಈಚೆಗೆ ಹಲವು ನೀರಾವರಿ ಯೋಜನೆಗಳು ಕಾರ್ಯಗತವಾಗಿವೆ. ಕರ್ಣಫುಲಿ ವಿವಿಧೋದ್ದೇಶ ಯೋಜನೆ, ತೀಸ್ತ ಕಟ್ಟೆ ಯೋಜನೆ, ಗಂಗಾ-ಕೋಬಡಾಕ್ ಯೋಜನೆ ಮುಖ್ಯವಾದುವು. ಕರ್ಣಪುಲಿ ಯೋಜನೆ ಚಿತ್ತಗಾಂಗ್ ಜಿಲ್ಲೆಯ ಆಗ್ನೇಯ ಭಾಗದಲ್ಲೂ, ತೀಸ್ತಾ ಯೋಜನೆ ಉತ್ತರದಲ್ಲೂ ಇವೆ. ಗಂಗಾ- ಕೋಬಡಾಕ್ ಯೋಜನೆಯಿಂದ ಕುಷ್ಟಿಯಾ ಜೆಸೂರ್ ಮತ್ತು ಖುಲ್ನಾ ಜಿಲ್ಲೆಗಳಿಗೆ ಹೆಚ್ಚು ಅನುಕೂಲವಾಗಿದೆ.
- ಬಾಂಗ್ಲಾದೇಶದ ಹೊಳೆಗಳಲ್ಲೂ ಕರಾವಳಿಯ ಅಳಿವೆಗಳಲ್ಲೂ ಮೀನುಗಳು ಯಥೇಚ್ಛವಾಗಿ ದೊರಕುತ್ತವೆ. ಆದ್ದರಿಂದ ಮೀನುಗಾರಿಕೆ ಇಲ್ಲಿಯ ಒಂದು ಮುಖ್ಯ ಕಸುಬು. ಕಡಲು ನೀರಿನ ರೂಪ ಚಂದಾ, ನದೀ ನೀರಿನ ಹಿಲ್ಸಾ ಇವು ಮುಖ್ಯವಾದ ಮೀನು ಜಾತಿಗಳು.
- ಕೃಷಿಯನ್ನೇ ಅವಲಂಬಿಸಿರುವವರು ವರ್ಷದ ಕೆಲವು ತಿಂಗಳುಗಳಲ್ಲಿ ನಿರುದ್ಯೋಗಿಗಳಾಗಿರಬೇಕಾಗುತ್ತದೆ. ಅವರ ಜೀವನ ಮಟ್ಟ ಬಹಳ ಕೆಳಗಿನದು. ನಿರುದ್ಯೋಗವನ್ನು ತಪ್ಪಿಸಿ ಜೀವನ ಮಟ್ಟವನ್ನು ಸುಧಾರಿಸಲು ಕೈಗಾರಿಕೆಗಳ ಬೆಳವಣಿಗೆ ಅಗತ್ಯವೆನಿಸಿದೆ. ಆದರೆ ಮುಖ್ಯವಾದ ಅಡಚಣೆಯೆಂದರೆ ಖನಿಜಗಳ ಅಭಾವ.
- ಬಾಂಗ್ಲಾದೇಶದಲ್ಲಿ ಹೇಳಿಕೊಳ್ಳುವಂಥ ತೈಲ ನಿಕ್ಷೇಪಗಳೇನೂ ಇಲ್ಲ. ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುತ್ತಿದೆ. ಸಿಲ್ಹೆಟ್ ಮತ್ತು ಬೋಗ್ರಾಗಳಲ್ಲಿ ಕಲ್ಲಿದ್ದಲು ನಿಕ್ಷೇಪಗಳು ಪತ್ತೆಯಾಗಿವೆ. ನೈಸರ್ಗಿಕ ಅನಿಲ ಸಿಲ್ಹೆಟ್ ಜಿಲ್ಲೆಯ ಹರೀಪುರ, ಛಾತಕ್, ಕೈಲಾಷ್-ತಿಲ, ರಷೀದ್‍ಪುರ್, ಷಾಹಿ ಬಜಾರ್‍ಗಳಲ್ಲೂ ಕೊಮಿಲ್ಲಾ ಜಿಲ್ಲೆಯ ಬ್ರಾಹ್ಮಣಬಾರಿಯಾ ಮತ್ತು ಬೇಕರಾಬಾದ್‍ಗಳಲ್ಲೂ ದೊರಕುತ್ತದೆ. ಸಿಲ್ಹೆಟ್‍ನ ನೈಸರ್ಗಿಕ ಅನಿಲ ರಸಗೊಬ್ಬರ ಕಾರ್ಖಾನೆಗೆ ತಿಲದಿಂದ ನೈಸರ್ಗಿಕ ಅನಿಲ ಪೂರೈಕೆಯಾಗುತ್ತದೆ. ಢಾಕಾ ಮತ್ತು ಅದರ ಉಪನಗರಗಳ ಕೈಗಾರಿಕೆಗಳಿಗೆ ಬ್ರಾಹಣಬಾರಿಯಾ ಗಣಿಗಳಿಂದ ಅನಿಲ ಒದಗುತ್ತದೆ. ಢಾಕಾ ಜಿಲ್ಲೆಯ ಘೋರಾ ಸಾಲ್‍ನಲ್ಲೂ ಚಿತ್ತಗಾಂಗಿನಲ್ಲೂ ಶಾಖ ವಿದ್ಯುತ್ತು ಉತ್ಪಾದನೆಯಾಗುತ್ತದೆ. ರೂಪ್‍ಪುರದಲ್ಲಿ ಪರಮಾಣು ವಿದ್ಯುತ್ ಕೇಂದ್ರವಿದೆ.
- ಕಚ್ಚಾ ಸೆಣಬಿನ ರಫ್ತು ಲಾಭದಾಯಕವಲ್ಲವಾದ್ದರಿಂದ ದೇಶದಲ್ಲೇ ಸೆಣಬಿನ ಕೈಗಾರಿಕೆಯನ್ನು ವಿಸ್ತರಿಸುವ ಪ್ರಯತ್ನ ನಡೆದಿದೆ. ಸುಮಾರು ಅರ್ಧದಷ್ಟು ಕಚ್ಚಾ ಸಾಮಗ್ರಿಯನ್ನು ಬಳಸಿಕೊಳ್ಳುವ ಮಟ್ಟಿಗೆ ಸೆಣಬು ಗಿರಣಿಗಳು ಬೆಳೆದಿವೆ. ಉಳಿದದ್ದು ರಫ್ತಾಗುತ್ತದೆ.
- ಚಿತ್ತಗಾಂಗ್ ಬೆಟ್ಟ ಸೀಮೆಯ ಬಿದಿರನ್ನೂ ಸುಂದರಬನಗಳ ಮೆದುಮರಗಳನ್ನೂ ಬಳಸಿಕೊಂಡು ಕಾಗದವನ್ನು ತಯಾರಿಸಲು ಅವಕಾಶಗಳಿವೆ. ಚೆಂದ್ರಘೋನಾ, ಪಾಕ್ಸೆಗಳಲ್ಲಿ (ಚಿತ್ತಗಾಂಗ್) ಕಾಗದದ ಕಾರ್ಖಾನೆಗಳಿವೆ. ಖುಲ್ನಾದಲ್ಲಿ ಕಾಗದ ಮತ್ತು ರಟ್ಟಿನ ಕಾರ್ಖಾನೆಯಿದೆ. ಹಲವು ರಸಗೊಬ್ಬರ ಕಾರ್ಖಾನೆಗಳು ಒಂದು ಸಿಮೆಂಟ್ ಕಾರ್ಖಾನೆಯೂ (ಛಾಕತ್) ಇವೆ. ಚಿತ್ತಗಾಂಗ್ ಖುಲ್ನಾಗಳಲ್ಲಿ ಹಡಗು ರಿಪೇರಿ ಹಾಗೂ ನಿರ್ಮಾಣಕ್ಕೆ ಅನುಕೂಲಿಸುವ ಸಲುವಾಗಿ ಬೇಕಾದಾಗ ನೀರನ್ನು ಹೊರಹಾಕುವ ಒಣಬಂದರು (ಡ್ರೈಡಾಕ್) ಕಟ್ಟೆಗಳನ್ನು ನಿರ್ಮಿಸಿದ್ದಾರೆ.
- ಇಲ್ಲಿಯ ಅತ್ಯಂತ ಮುಖ್ಯ ಗುಡಿಸಲು ಕೈಗಾರಿಕೆ ಬಟ್ಟೆ ನೇಯ್ಗೆ, ಇದನ್ನೇ ಅವಲಂಬಿಸಿರುವ ಸುಮಾರು 3 ಲಕ್ಷಕ್ಕೂ ಅಧಿಕ ಮಂದಿ ನೇಕಾರರಿದ್ದಾರೆಂದು ಅಂದಾಜು. ಬೀಡಿ ತಯಾರಿಕೆ, ಜಮಾಖಾನೆ ನೇಯ್ಗೆ, ಮಣ್ಣಿನ ಪದಾರ್ಥಗಳ ಹಾಗೂ ಬೆತ್ತದ ಕುರ್ಚಿಗಳೇ ಮುಂತಾದವುಗಳ ತಯಾರಿಕೆ ಇಲ್ಲಿಯ ಇತರ ಕಸುಬುಗಳು. ಪ್ರಾಗಿತಿಹಾಸ: (ನೋಡಿ- ಪಶ್ಚಿಮ-ಬಂಗಾಲ)
ಈಚಿನ ಇತಿಹಾಸ
[ಬದಲಾಯಿಸಿ]ಪೂರ್ಣ ಇತಿಹಾಸಕ್ಕೆ ನೋಡಿ:ಬಾಂಗ್ಲಾದೇಶದ ಇತಿಹಾಸ
- ಬಾಂಗ್ಲಾದೇಶದ ಆಡಳಿತ ವಿಭಾಗಗಳು
- ಭಾರತ ಸ್ವಾತಂತ್ರ್ಯ ಪೂರ್ವದಲ್ಲಿ ಬಾಂಗ್ಲಾದೇಶ ಬಂಗಾಲ ಪ್ರಾಂತ್ಯದ ಪೂರ್ವಭಾಗವಾಗಿದ್ದು ಭಾರತಕ್ಕೆ ಸೇರಿತ್ತು. 1947ರಲ್ಲಿ ಭಾರತದ ವಿಭಜನೆಯಾದಾಗ ಪಾಕಿಸ್ತಾನಕ್ಕೆ ಸೇರಿ ಪೂರ್ವಪಾಕಿಸ್ತಾನ ಎನಿಸಿಕೊಂಡಿತು. ಸಿರಿಲ್ ರಾಡ್ಕ್ಲಿಫ್ ಪಾಕಿಸ್ತಾನ ಮತ್ತು ಭಾರತದ ಗಡಿ ರೇಖೆಗಳನ್ನು ಎಳೆಯಲು ವಹಿಸಲಾಗಿತ್ತು, ಮತ್ತು ರಾಡ್ಕ್ಲಿಫ್ ಲೈನ್ ಇಂದಿನ ಬಾಂಗ್ಲಾದೇಶದ ಗಡಿಗಳನ್ನು ಸ್ಥಾಪಿಸಿತು. ಅದರಂತೆ ಪೂರ್ವ ಬಂಗಾಳವನ್ನು (ಈಗಿನ ಬಾಂಗ್ಲಾ) 14 ಆಗಸ್ಟ್ 1947 ರಂದು ಪಾಕಿಸ್ತಾನದ ಡೊಮಿನಿಯನ್‍ಅನ್ನು ರಚಿಸಲಾಯಿತು. ಪೂರ್ವ ಬಂಗಾಳವು ಢಾಕಾದ ರಾಜಧಾನಿಯೊಂದಿಗೆ 1947 ರ ಪಾಕಿಸ್ತಾನದ ಫೆಡರೇಶನ್ (ಹೊಸ ರಾಜ್ಯದಲ್ಲಿ ಧರ್ಮ ಮತ್ತು ಜಾತ್ಯತೀತ ಪ್ರಜಾಪ್ರಭುತ್ವದ ಸ್ವಾತಂತ್ರ್ಯವನ್ನು ಗವರ್ನರ್ ಜನರಲ್ ಮುಹಮ್ಮದ್ ಅಲಿ ಜಿನ್ನಾ ನೇತೃತ್ವದ ಸರ್ಕಾರ ಭರವಸೆ ನೀಡಿತು.) ಅದು ಅತ್ಯಂತ ಜನನಿಬಿಡ ಪ್ರಾಂತ್ಯವಾಗಿತ್ತು. ಪೂರ್ವ ಬಂಗಾಳ ಪಾಕಿಸ್ತಾನದ ಅತ್ಯಂತ ಕಾಸ್ಮೋಪಾಲಿಟನ್ ಪ್ರಾಂತ್ಯವಾಗಿದ್ದು, ವಿವಿಧ ಧರ್ಮಗಳು, ಸಂಸ್ಕೃತಿಗಳು ಮತ್ತು ಜನಾಂಗೀಯ ಗುಂಪುಗಳ ನೆಲೆಯಾಗಿದೆ.[೧][೨]
- ಬಂಗಾಳ-ಬಾಂಗ್ಲಾದ ಪ್ರಧಾನ ಮಂತ್ರಿಗಳು: ಎ. ಕೆ. ಫಜ್ಲುಲ್ ಹುಕ್, ಖವಾಜಾ ನಜಿಮುದ್ದೀನ್ ಮತ್ತು ಎಚ್. ಎಸ್. ಸುಹ್ರವರ್ದಿ;;20 ನೇ ಶತಮಾನದ ಮೊದಲಾರ್ಧದಲ್ಲಿ ಬಂಗಾಳದ ಮೂರು ಪ್ರಮುಖ ರಾಜಕಾರಣಿಗಳಾದ- ಎ. ಕೆ. ಫಾಜ್ಲುಲ್ ಹುಕ್, ಖ್ವಾಜ ನಜಿದಿದುನ್ ಮತ್ತು ಎಚ್ ಎಸ್ ಸುಹ್ರಾವಾರ್ದಿ.ಇವರೆಲ್ಲರೂ ಬ್ರಿಟಿಷ್ ಭಾರತದಲ್ಲಿ ಬಂಗಾಳದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಹುಕ್ ಕೃಷಕ್ ಪ್ರಜಾ ಪಕ್ಷದ ಸ್ಥಾಪಕರಾಗಿದ್ದರು ಮತ್ತು ಪೂರ್ವ ಪಾಕಿಸ್ತಾನದ ಮುಖ್ಯಮಂತ್ರಿಯಾಗಿ ಮತ್ತು ಗವರ್ನರ್ ಆಗಿ ಸೇವೆ ಸಲ್ಲಿಸಿದರು. ಅವಾಮಿ ಲೀಗ್ನ ಮುಖಂಡ ಸುಹ್ರವರ್ದಿ ಪಾಕಿಸ್ತಾನದ ಐದನೇ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಮುಸ್ಲಿಂ ಲೀಗಿನ ನಾಯಕನಾದ ನಜಿಮುದ್ದೀನ್, ಈಸ್ಟ್ ಬಂಗಾಳದ ಮೊದಲ ಮುಖ್ಯಮಂತ್ರಿಯಾಗಿದ್ದರು ಮತ್ತು ಎರಡನೆಯ ಗವರ್ನರ್-ಜನರಲ್ ಮತ್ತು ಪಾಕಿಸ್ತಾನದ ಎರಡನೆಯ ಪ್ರಧಾನಿ.
- ಖವಾಜಾ ನಜಿಮುದ್ದೀನ್ ಈಸ್ಟ್ ಬಂಗಾಳದ ಮೊದಲ ಮುಖ್ಯಮಂತ್ರಿಯಾಗಿದ್ದು ಫ್ರೆಡ್ರಿಕ್ ಚಾಲ್ಮರ್ಸ್ ಬೌರ್ನ್ ಅವರ ರಾಜ್ಯಪಾಲರಾಗಿದ್ದರು. ಆಲ್ ಪಾಕಿಸ್ತಾನ್ ಅವಾಮಿ ಮುಸ್ಲಿಂ ಲೀಗ್ ಅನ್ನು 1949 ರಲ್ಲಿ ಕೇಂದ್ರ-ಬಲ ಆಲ್ ಪಾಕಿಸ್ತಾನ್ ಮುಸ್ಲಿಮ್ ಲೀಗ್‍ಗೆ (ಕೇಂದ್ರ-ಎಡ) ಪರ್ಯಾಯವಾಗಿ ರಚಿಸಲಾಯಿತು. 1952 ರ ಬಂಗಾಳಿ ಭಾಷಾ ಚಳುವಳಿಯು ದೇಶದ ಭೌಗೋಳಿಕವಾಗಿ ಬೇರ್ಪಟ್ಟ ರೆಕ್ಕೆಗಳ ನಡುವಿನ ಸಂಘರ್ಷದ ಮೊದಲ ಸಂಕೇತವಾಗಿದೆ. ಅವಾಮಿ ಮುಸ್ಲಿಂ ಲೀಗ್ ಅನ್ನು 1953 ರಲ್ಲಿ ಹೆಚ್ಚು-ಜಾತ್ಯತೀತ ಅವಾಮಿ ಲೀಗ್ ಎಂದು ಮರುನಾಮಕರಣ ಮಾಡಲಾಯಿತು. 1954 ರಲ್ಲಿ ಮೊದಲ ಸಾಂವಿಧಾನಿಕ ಸಭೆ ವಿಸರ್ಜಿಸಲ್ಪಟ್ಟಿತು; ಇದನ್ನು ಪೂರ್ವ ಬಂಗಾಳಿ ಭಾಷಣಕಾರ ಮೌಲ್ವಿ ತಮಿಸುದ್ದೀನ್ ಖಾನ್ ಪ್ರಶ್ನಿಸಿದರು. 1954 ರ ಪೂರ್ವ ಬಂಗಾಳಿ ಶಾಸಕಾಂಗ ಚುನಾವಣೆಯಲ್ಲಿ ಯುನೈಟೆಡ್ ಫ್ರಂಟ್ ಸಮ್ಮಿಶ್ರವು ಮುಸ್ಲಿಮ್ ಲೀಗ್‍ನ್ನು ಪೂರ್ಣ ಮೆಟ್ಟಿ ಗೆದ್ದಿತು. ಮುಂದಿನ ವರ್ಷ, ಈಸ್ಟ್ ಬಂಗಾಳವನ್ನು ಒಂದು ಪೂರ್ವ ಘಟಕದ ಭಾಗವಾಗಿ ಪೂರ್ವ ಪಾಕಿಸ್ತಾನ ಎಂದು ಮರುನಾಮಕರಣ ಮಾಡಲಾಯಿತು.
- ಪಾಕಿಸ್ತಾನ ತನ್ನ ಮೊದಲ ಸಂವಿಧಾನವನ್ನು 1956 ರಲ್ಲಿ ಅಂಗೀಕರಿಸಿತು. 1957 ರವರೆಗೂ ಮೂರು ಬಂಗಾಳಿಗಳು ಅದರ ಪ್ರಧಾನಿಯಾಗಿದ್ದವು: ಬೊಜ್ರಾ ಮತ್ತು ಸುಹ್ರವರ್ದಿ ನಝಿಮುದ್ದೀನ್, ಮೊಹಮ್ಮದ್ ಅಲಿ. ಮೂವರು ಪೈಕಿ ಯಾವುದೂ ಅವರ ಪದವಿ ಅವಧಿಗಳನ್ನು ಪೂರ್ಣಗೊಳಿಸಲಿಲ್ಲ ಮತ್ತು ಸ್ಥಾನಗಳಿಗಗೆ ರಾಜೀನಾಮೆ ನೀಡಿದರು. 1958 ರಲ್ಲಿ ಪಾಕಿಸ್ತಾನ ಸೇನೆಯು ಸೇನಾ ಆಡಳಿತವನ್ನು ವಿಧಿಸಿತು ಮತ್ತು 11 ವರ್ಷಗಳ ಕಾಲ ಆಯುಬ್ ಖಾನ್ ದೇಶದ ಬಲಶಾಲಿ ಆಡಳಿತಗಾರರಾಗಿದ್ದರು. ಪೂರ್ವ ಪಾಕಿಸ್ತಾನದ ದಂಗೆ ನಂತರ ರಾಜಕೀಯ ದಮನವು ಹೆಚ್ಚಾಯಿತು. ಖಾನ್ 1962 ರಲ್ಲಿ ಹೊಸ ಸಂವಿಧಾನವನ್ನು ಜಾರಿಗೊಳಿಸಿದನು, ಪಾಕಿಸ್ತಾನದ ಸಂಸದೀಯ ವ್ಯವಸ್ಥೆಯನ್ನು ಅಧ್ಯಕ್ಷೀಯ ಮತ್ತು ಗವರ್ನೇಶಿಯಲ್ ಸಿಸ್ಟಮ್ (ಎಲೆಕ್ಟೋರಲ್ ಕಾಲೇಜ್ ಆಯ್ಕೆ ಆಧಾರಿತ) ಹಿಂದಿನ ಸಂಸತ್ ಬದಲಿಗೆ ಬೇಸಿಕ್ ಡೆಮಾಕ್ರಸಿ ಎಂದು ಇದನ್ನು ತರಲಾಯಿತು. 1962 ರಲ್ಲಿ ಢಾಕಾ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯ ಸ್ಥಾನವಾಯಿತು, ಇದು ಹೆಚ್ಚಿದ ಬಂಗಾಳಿ ರಾಷ್ಟ್ರೀಯತೆಗೆ ಮನವೊಲಿಸುವಂತಾಯಿತು. [೩]
- 1966 ರಲ್ಲಿ, ಅವಾಮಿ ಲೀಗ್ ನಾಯಕ ಶೇಖ್ ಮುಜಿಬುರ್ ರಹಮಾನ್ ಫೆಡರಲ್ ಪಾರ್ಲಿಮೆಂಟರಿ ಪ್ರಜಾಪ್ರಭುತ್ವಕ್ಕೆ ಆರು ಪಾಯಿಂಟ್ ಆಂದೋಲನವನ್ನು ಘೋಷಿಸಿದರು. ಅರ್ಲ್ ವಾರೆನ್ ಮತ್ತು ಮೌಲ್ವಿ ತಮಿಜುದ್ದೀನ್ ಖಾನ್ ಅವರು ಮೂರನೇ ವ್ಯಕ್ತಿಯಂತೆ ಕಾಣಿಸಿಕೊಳ್ಳುತ್ತಾರೆ. U.S. ಮುಖ್ಯ ನ್ಯಾಯಾಧೀಶ ಅರ್ಲ್ ವಾರೆನ್ ಫೆಡರೇಶನ್ ಆಫ್ ಪಾಕಿಸ್ತಾನದ ವಿ.ಮೌಲ್ವಿ ತಮಿಝುದ್ದೀನ್ ಖಾನರ ಫಿರ್ಯಾದಿಯಾದ ಮೌಲ್ವಿ ತಮಿಜುದ್ದೀನ್ ಖಾನ್ ಅವರನ್ನು ಭೇಟಿಯಾಗುತ್ತಾನೆ. ಪೂರ್ವ ಪಾಕಿಸ್ತಾನದ ವಿರುದ್ಧ ವ್ಯಾಪಕವಾದ ಆರ್ಥಿಕ ತಾರತಮ್ಯವನ್ನು ಪಾಕಿಸ್ತಾನ ನಡೆಸಿತು: ಪಶ್ಚಿಮ ಪಾಕಿಸ್ತಾನದ ಮೇಲೆ ಹೆಚ್ಚಿನ ಸರ್ಕಾರಿ ವೆಚ್ಚ, ಪೂರ್ವದಿಂದ ಪಶ್ಚಿಮ ಪಾಕಿಸ್ತಾನದ ಆರ್ಥಿಕ ವರ್ಗಾವಣೆ, ಪಶ್ಚಿಮ ಪಾಕಿಸ್ತಾನದ ಆಮದುಗಳಿಗೆ ಹಣಕಾಸು ಒದಗಿಸುವ ಪೂರ್ವ ಪಾಕಿಸ್ತಾನದ ವಿದೇಶಿ-ವಿನಿಮಯ ಮಿತಿಗಳನ್ನು ಬಳಸುವುದು, ಮತ್ತು ಪಾಕಿಸ್ತಾನ ಸರ್ಕಾರವು ಪೂರ್ವ ಪಾಕಿಸ್ತಾನಕ್ಕೆ ನಿಧಿಯನ್ನು ಬಿಡುಗಡೆ ಮಾಡಲು ಕೇಂದ್ರ ಸರಕಾರವು ಬಿಡುಗಡೆಗೆ ತಡೆ ಮಾಡಿತು; ಏಕೆಂದರೆ ಹಿಂದಿನ ಖರ್ಚು ಬಜೆಟ್‍ನಲ್ಲಿತ್ತು; ಪೂರ್ವ ಪಾಕಿಸ್ತಾನವು ಅದರ ಶೇಕಡಾವಾರು ಮತ್ತು ಚಹಾದೊಂದಿಗೆ 70% ಪಾಕಿಸ್ತಾನದ ರಫ್ತು ಆದಾಯವನ್ನು ಉತ್ಪಾದಿಸುತ್ತಿತ್ತು. ಶೇಖ್ ಮುಜಿಬುರ್ ರಹಮಾನ್ ಅವರು ಅಗರ್ತಲಾ ಪಿತೂರಿ ಕೇಸ್‍ನಲ್ಲಿ ದೇಶದ್ರೋಹಕ್ಕೆ ಬಂಧಿಸಲ್ಪಟ್ಟರು ಮತ್ತು 1969 ರ ಪೂರ್ವ ಪಾಕಿಸ್ತಾನ ದಂಗೆಯ ಕಾರಣ ಬಿಡುಗಡೆಯಾದರು, ಅದು ಆಯುಬ್ ಖಾನ್‍ರ ರಾಜೀನಾಮೆಗೆ ಕಾರಣವಾಯಿತು. ಜನರಲ್ ಯಾಹ್ಯಾ ಖಾನ್ ಅವರು ಅಧಿಕಾರವನ್ನು ಪಡೆದುಕೊಂಡರು, ಮಾರ್ಟಲ್ ಕಾನೂನು ಪುನಃ ಜಾರಿಗೊಳಿಸಿದರು. ಸಾಂಸ್ಕೃತಿಕ ತಾರತಮ್ಯವೂ ಸಹ ಹೆಚ್ಚಿತು, ಪೂರ್ವ ಪಾಕಿಸ್ತಾನವು ವಿಶಿಷ್ಟವಾದ ರಾಜಕೀಯ ವಿರೋಧವನ್ನು ರೂಪಿಸಿತು.[೧]
- ಒಂದು ಚಂಡಮಾರುತವು ಪೂರ್ವ ಪಾಕಿಸ್ತಾನದ ತೀರವನ್ನು 1970 ರಲ್ಲಿ ಧ್ವಂಸಮಾಡಿತು, ಅಂದಾಜು 500,000 ಜನರನ್ನು ಕೊಂದಿತು, ಮತ್ತು ಕೇಂದ್ರ ಸರ್ಕಾರದ ಕಳಪೆ ಪ್ರತಿಕ್ರಿಯೆಗಾಗಿ ಟೀಕಿಸಲ್ಪಟ್ಟಿತು. [೪] ಡಿಸೆಂಬರ್ 1970 ರ ಚುನಾವಣೆಗಳ ನಂತರ, ಪೂರ್ವ ಬಂಗಾಳದ ಜನರು ಸ್ವಾತಂತ್ರ್ಯಕ್ಕಾಗಿ ಜೋರಾಗಿ ಕೂಗಿದರು; ಬಂಗಾಳಿ-ರಾಷ್ಟ್ರೀಯತಾವಾದಿ ಅವಾಮಿ ಲೀಗ್ ರಾಷ್ಟ್ರೀಯ ಅಸೆಂಬ್ಲಿಯಲ್ಲಿ 169 ಪೂರ್ವ ಪಾಕಿಸ್ತಾನಿ ಸೀಟುಗಳ 167 ಅನ್ನು ಗೆದ್ದುಕೊಂಡಿತು. ಸರ್ಕಾರ ರಚಿಸುವ ಮತ್ತು ಹೊಸ ಸಂವಿಧಾನವನ್ನು ಅಭಿವೃದ್ಧಿಪಡಿಸುವ ಹಕ್ಕನ್ನು ಲೀಗ್ ಸಮರ್ಥಿಸಿತು, ಆದರೆ ಪಾಕಿಸ್ತಾನದ ಮಿಲಿಟರಿ ಮತ್ತು ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಜುಲ್ಫಿಕಾರ್ ಅಲಿ ಭುಟ್ಟೊ ನೇತೃತ್ವದಲ್ಲಿ) ಇದನ್ನು ಬಲವಾಗಿ ವಿರೋಧಿಸಿತು.
- ಪೂರ್ವ ಪಾಕಿಸ್ತಾನಕ್ಕೆ ಸ್ವಾಯತ್ತೆತೆ ಬೇಕೆಂದು ಅವಾಮಿ ಲೀಗ್ ಎಂಬ ಸಂಸ್ಥೆಯಿಂದ ಚಳುವಳಿ ಆರಂಭವಾಯಿತು. ಇದಕ್ಕೆ ಷೇಕ್ ಮುಜೀಬುರ್ ರಹಮಾನ ನಾಯಕರಾಗಿದ್ದರು. ಪೂರ್ವ ಪಾಕಿಸ್ತಾನ, ಸ್ವಾತಂತ್ರ್ಯಕ್ಕಾಗಿ ಕರೆಗಳು ಎದ್ದವು.. ಮುಜಿಬ್ 7 ಮಾರ್ಚ್ 1971 ರಂದು ಡಕಾದಲ್ಲಿ ಸುಮಾರು 2 ದಶಲಕ್ಷ ಜನ ಸ್ವಾತಂತ್ರ್ಯದ ಪರವಾಗಿ ಮಾತನಾಡುತ್ತಾ ಮಾತನಾಡುತ್ತಾ, "ಈ ಹೋರಾಟವು ನಮ್ಮ ಸ್ವಾತಂತ್ರ್ಯಕ್ಕಾಗಿ ಈ ಬಾರಿ ಹೋರಾಟವು ನಮ್ಮ ಸ್ವಾತಂತ್ರ್ಯಕ್ಕಾಗಿ." ಬಾಂಗ್ಲಾದೇಶದ ಧ್ವಜವನ್ನು ಮಾರ್ಚ್ 23 ರಂದು ಪಾಕಿಸ್ತಾನದ ರಿಪಬ್ಲಿಕ್ ಡೇ ದಿನ ಮೊದಲ ಬಾರಿಗೆ ಏರಿಸಲಾಯಿತು. ಮಾರ್ಚ್ 25 ರ ರಾತ್ರಿಯ ಸಮಯದಲ್ಲಿ, ಯಾಹ್ಯಾ ಖಾನ್ ನೇತೃತ್ವದ ಪಾಕಿಸ್ತಾನಿ ಮಿಲಿಟರಿ ಆಡಳಿತಾಧಿಪತ್ಯವು ಆಪರೇಷನ್ ಸರ್ಚ್ಲೈಟ್ (ಪೂರ್ವ ಪಾಕಿಸ್ತಾನದ ಮೇಲೆ ಸತತ ಮಿಲಿಟರಿ ಆಕ್ರಮಣ) ಪ್ರಾರಂಭಿಸಿತು. ಪಾಕಿಸ್ತಾನದ ಸೇನೆಯು ಶೇಖ್ ಮುಜಿಬುರ್ ರಹಮಾನರನ್ನು ಬಂಧಿಸಿಕೊಂಡು ಕರಾಚಿಯ ಕಡೆಗೆ ವಿಮಾನ ಹಾರಿಹೋಯಿತು. [೫]
- 1971ರಲ್ಲಿ ಈ ಚಳವಳಿ ಉಲ್ಬಣಗೊಂಡು ಬಾಂಗ್ಲಾ ಸ್ವಾತಂತ್ರ್ಯ ಸಮರವಾಗಿ ಪರಿಣಮಿಸಿ ಬಾಂಗ್ಲಾದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ನಿರಾಶ್ರಿತರು ಭಾರತಕ್ಕೆ ಬರತೊಡಗಿದರು. ಭಾರತ-ಪಾಕಿಸ್ತಾನಗಳ ನಡುವೆ ಹದಿನಾರು ದಿನಗಳ ಕಾಲ ಯುದ್ಧ ನಡೆಯಿತು. ಬಾಂಗ್ಲಾ ವಿಮೋಚನಾ ಸೇವೆಯ (ಮುಕ್ತಿ ಬಾಹಿನಿ) ನೆರವಿಗೆ ಹೋದ ಭಾರತ ಸೇನೆ ಆ ದೇಶವನ್ನು ಪಾಕಿಸ್ತಾನದಿಂದ ವಿಮೋಚನೆಗೊಳಿಸಿತು. 1971ರ ಡಿಸೆಂಬರ್ 16 ರಂದು ಸ್ವಾತಂತ್ರ ಬಾಂಗ್ಲಾದೇಶದ ಉದಯವಾಯಿತು.
ಬಾಂಗ್ಲಾದೇಶದ ಉದಯ
[ಬದಲಾಯಿಸಿ]- 1971 ರ ಡಿಸೆಂಬರ್ 3 ರಿಂದ ಪೂರ್ವ ಪಾಕಿಸ್ತಾನದ ವಿಮೋಚನಾ ಯುದ್ಧದ ಸಂದರ್ಭದಲ್ಲಿ ದಿ.3 ಡಿಸೆಂಬರ್ 1971 ರಿಂದ ಡಕಾ (ಢಾಕಾ) ಪತನದವರೆಗೆ ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿಗಳು ಮುಖಾಮುಖಿಯಾಗಿ ಭಾರತ-ಮತ್ತು ಪಾಕಿಸ್ತಾನಗಳಿಗೆ ಯುದ್ಧ ನಡೆಯಿತು.. ಯುದ್ಧವು, 11 ಭಾರತೀಯ ವಾಯುಪಡೆಗಳ ಕೇಂದ್ರಗಳ ಮೇಲೆ, ಪಾಕಿಸ್ತಾನದಿಂದ ಪೂರ್ವರಕ್ಷಕ ವೈಮಾನಿಕ ಧಾಳಿಗಳೊಂದಿಗೆ ಪಾಕಿಸ್ತಾನದೊಂದಿಗೆ ಯುದ್ಧದ ಆರಂಭವಾಯಿತು, ಇದು ಪಕ್ಕದ ಪೂರ್ವ ಪಾಕಿಸ್ತಾನದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯದ ಯುದ್ಧಕ್ಕೆ ಭಾರತೀಯ ಸೈನ್ಯದ ಪ್ರವೇಶಕ್ಕೆ ಕಾರಣವಾಯಿತು. ಈ ಯುದ್ಧವು ಕೇವಲ 13 ದಿನಗಳ ಕಾಲ ನೆಡೆದು, ಇದು ಇತಿಹಾಸದಲ್ಲಿ ಅತಿ ಕಡಿಮೆ ಅವಧಿಯಲ್ಲಿ ಜಯಗಳಿಸಿದ ಯುದ್ಧಗಳಲ್ಲಿ ಒಂದಾಗಿದೆ.[೬]
- ಯುದ್ಧದ ಸಮಯದಲ್ಲಿ, ಭಾರತೀಯ ಮತ್ತು ಪಾಕಿಸ್ತಾನದ ಮಿಲಿಟರಿಗಳು ಪೂರ್ವ ಮತ್ತು ಪಶ್ಚಿಮ ರಂಗಗಳಲ್ಲಿ ಏಕಕಾಲದಲ್ಲಿ ಘರ್ಷಣೆ ಮಾಡಿದರು; ಪಾಕಿಸ್ತಾನದ ಮಿಲಿಟರಿ ಪೂರ್ವ ಕಮಾಂಡ್ 16 ಡಿಸೆಂಬರ್ 1971 ರಂದು ಢಾಕಾದಲ್ಲಿ ಶರಣಾಗತಿಯ ಅಧಕೃತ ಪತ್ರಕ್ಕೆ ಸಹಿ ಹಾಕಿದ ನಂತರ ಈ ಯುದ್ಧ ಕೊನೆಗೊಂಡಿತು, ಇದು ಪೂರ್ವ ಪಾಕಿಸ್ತಾನವನ್ನು ಬಾಂಗ್ಲಾದೇಶದ ಹೊಸ ರಾಷ್ಟ್ರವೆಂದು ಗುರುತಿಸಿತು. ಅಧಿಕೃತವಾಗಿ, ಪೂರ್ವ ಪಾಕಿಸ್ತಾನವು 26 ಮಾರ್ಚ್ 1971 ರಂದು ಏಕತೆಯ-ಪಾಕಿಸ್ತಾನದ ದಿಂದ ಅದರ ಪ್ರತ್ಯೇಕತೆಗೆ ಕರೆ ನೀಡಿತ್ತು. ಸರಿಸುಮಾರಾಗಿ 90,000 [28] ರಿಂದ 93,000 ಪಾಕಿಸ್ತಾನಿ ಸೈನಿಕರನ್ನು ಭಾರತೀಯ ಸೈನ್ಯವು ಸೆರೆಯಾಳಾಗಿಸಿತ್ತು, ಇದರಲ್ಲಿ 79,676 ರಿಂದ 81,000 ಪಾಕಿಸ್ತಾನ್ ಸಶಸ್ತ್ರ ಪಡೆಗಳ ಸಮವಸ್ತ್ರದ ಸಿಬ್ಬಂದಿ, ಪಾಕಿಸ್ತಾನಕ್ಕೆ ನಿಷ್ಠರಾಗಿ ಉಳಿದ ಕೆಲವು ಬೆಂಗಾಳಿ ಯೋಧರು ಸೇರಿದಂತೆ. ಉಳಿದ 10,324 ರಿಂದ 12,500 ಕೈದಿಗಳು ಮಿಲಿಟರಿ ಸಿಬ್ಬಂದಿ ಮತ್ತು ಸಹಯೋಗಿ (ರಝಾಕಾರ್ಗಳು) ನಿಷ್ಠ ಸದಸ್ಯರು ಇದ್ದರು. ಸಂಘರ್ಷದ ಪರಿಣಾಮವಾಗಿ, 80 ಲಕ್ಷದಿಂದ ಒಂದು ಕೋಟಿ ಜನರು ಪಡೆಯಲು ಪೂರ್ವ ಪಾಕಿಸ್ತಾನ ದೇಶದಿಂದ ನಿರಾಶ್ರತರು ಪಲಾಯನ ಮಾಡಿ ಭಾರತದಲ್ಲಿ ಆಶ್ರಯ ಪಡೆದಿದ್ದರು. [೭][೮]
ಷೇಖ್ ಮುಜೀಬುರ್ ರಹಮಾನ್ ಪ್ರಧಾನಿ
[ಬದಲಾಯಿಸಿ]- ಪಾಕಿಸ್ತಾನದಲ್ಲಿ ಬಂಧನದಲ್ಲಿರಿಸಿದ್ದ ಷೇಖ್ ಮುಜೀಬುರ್ ರಹಮಾನ್‍ರವರ ಬಿಡುಗಡೆಯಾಗಿ 1972ರ ಜನವರಿಯಲ್ಲಿ ಅವರು ಬಾಂಗ್ಲಾದೇಶದ ಪ್ರಥಮ ಪ್ರಧಾನಿಯಾದರು. ಆ ವರ್ಷದ ನವೆಂಬರ್ 4 ರಂದು ಅಲ್ಲಿಯ ಸಂವಿಧಾನ ಸಭೆಯಲ್ಲಿ ಸಂಸದೀಯ ಪ್ರರೂಪಿ ಪ್ರಜಾಪ್ರಭುತ್ವ ಸಂವಿಧಾನದ ಸ್ವೀಕಾರವಾಯಿತು. ಡಿಸೆಂಬರ್ 16 1972 ರಂದು ಹೊಸ ಸಂವಿಧಾನ ಜಾರಿಗೆ ಬಂತು. 1975ರಲ್ಲಿ ಮಹತ್ತ್ವದ ಬದಲಾವಣೆಗಳಾದುವು. ಹಳೆಯ ಸಂವಿಧಾನವನ್ನು ರದ್ದು ಮಾಡಿ ಅಧ್ಯಕ್ಷೀಯ ಮಾದರಿಯ ಸರಕಾರದ ಸಂವಿಧಾನವನ್ನು ಜಾರಿಗೆ ತರಲಾಯಿತು. ಜನವರಿ 26ರಂದು ಷೇಖ್ ಮುಜೀಬುರ್ ರಹಮಾನರೇ ಅಧ್ಯಕ್ಷರಾದರು. ಷೇಖ್ ಅಧ್ಯಕ್ಷತೆಯ ಬಾಂಗ್ಲಾ ದೇಶ್ ಕೃಷಿಕ ಶ್ರಮಿಕ ಅವಾಮಿ ಲೀಗ್ ವಿನಾ ಉಳಿದೆಲ್ಲ ರಾಜಕೀಯ ಪಕ್ಷಗಳನ್ನೂ ನಿಷೇಧಿಸಲಾಯಿತು. ನವೆಂಬರಿನಲ್ಲಿ ಅಹಮದರನ್ನು ಜನರಲ್ ಜಿಯ-ಉರ್ ರಹಮಾನರನ್ನು ಅಧ್ಯಕ್ಷತೆಯಿಂದ ಇಳಿಸಿ ತಾವೇ ಅಧಿಕಾರ ಸೂತ್ರ ವಹಿಸಿಕೊಂಡರು.
ಅಧ್ಯಕ್ಷೀಯ ಯುಗ ಮತ್ತು ದಂಗೆಗಳು (1975-1991
[ಬದಲಾಯಿಸಿ]- ಜನವರಿ 1975 ರಲ್ಲಿ, ಶೇಖ್ ಮುಜಿಬುರ್ ರಹಮಾನ್ ಬಕ್ಸಲ್‍ನ (ಬಾಂಗ್ಲಾದೇಶ ಕೃಷಕ್ ಪರಮಿಕ್ ಅವಾಮಿ ಲೀಗ್) ಅಡಿಯಲ್ಲಿ ಒಂದು ಸಮಾಜವಾದಿ ಪಕ್ಷದ ನಿಯಮವನ್ನು ಜಾರಿಗೊಳಿಸಿದರು. ನಾಲ್ಕು ರಾಜ್ಯ ಸ್ವಾಮ್ಯದ ಪತ್ರಿಕಾ ಪ್ರಕಟಣೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ವೃತ್ತಪತ್ರಿಕೆಗಳನ್ನು ರಹ್ಮಾನ್ ನಿಷೇಧಿಸಿದರು, ಮತ್ತು ಅವರ ಅಧಿಕಾರವನ್ನು ಹೆಚ್ಚಿಸುವ ಹಾಗೆ ಸಂವಿಧಾನವನ್ನು ತಿದ್ದುಪಡಿ ಮಾಡಿದರು. 15 ಆಗಸ್ಟ್ 1975 ರಂದು ಅವರು ಸೈನಿಕ ದಂಗೆಯ ಸಮಯದಲ್ಲಿ ಹತ್ಯೆಗೀಡಾದರು. ಮಾರ್ಷಲ್ ಲಾ ಘೋಷಿಸಲ್ಪಟ್ಟಿತು, ಮತ್ತು ನಾಲ್ಕು ತಿಂಗಳ ಕಾಲ ಕರಾನ್ ಖೇಂಡೇಕರ್ ಮೊಸ್ಟಾಕ್ ಅಹ್ಮದ್‍ಗೆ ಅಧ್ಯಕ್ಷತೆ ವರ್ಗಾಯಿಸಲಾಯಿತು. ಅಹ್ಮದ್ ಅನ್ನು ಬಾಂಗ್ಲಾದೇಶದವರು ವ್ಯಾಪಕವಾಗಿ ಟೀಕಿಸಿದ್ದಾರೆ. [೯] ರಾಷ್ಟ್ರದ ಮೊದಲ ಪ್ರಧಾನಿಯಾಗಿದ್ದ ತಜುದ್ದೀನ್ ಅಹ್ಮದ್, ಮತ್ತು ನಾಲ್ಕು ಇತರ ಸ್ವಾತಂತ್ರ್ಯ ಹೋರಾಟದ ನಾಯಕರನ್ನು 4 ನವೆಂಬರ್ 1975 ರಂದು ಹತ್ಯೆ ಮಾಡಲಾಯಿತು. ಮುಖ್ಯ ನ್ಯಾಯಮೂರ್ತಿ ಅಬು ಸದಾತ್ ಮೊಹಮ್ಮದ್ ಸಯೀಮ್ 1975 ರ ನವೆಂಬರ್ 6 ರಂದು ಮಿಲಿಟರಿಯಿಂದ ಅಧ್ಯಕ್ಷರಾಗಿ ಸ್ಥಾಪಿಸಲ್ಪಟ್ಟನು. ಬಾಂಗ್ಲಾದೇಶವು ಸೇನಾ ನೇಮಿತ ಮುಖ್ಯಸ್ಥರ ನೇತೃತ್ವದಲ್ಲಿ ಮಿಲಿಟರಿ ಆಡಳಿತದಲ್ಲಿ, ಮೂರು ವರ್ಷಗಳ ಕಾಲ ಮಾರ್ಷಲ್ ಲಾ ಅಡ್ಮಿನಿಸ್ಟ್ರೇಟರ್ ಆಡಳಿತದಲ್ಲಿ ಇತ್ತು. [೧೦]
- 1977 ರಲ್ಲಿ, ಸೇನಾ ಮುಖ್ಯಸ್ಥ ಜಿಯಾರ್ ರಹಮಾನ್ ಅಧ್ಯಕ್ಷರಾದರು. ರಹಮಾನ್ ಮಲ್ಟಿಪಾರ್ಟಿ ರಾಜಕೀಯವನ್ನು ಪುನಃಸ್ಥಾಪಿಸಿದರು, ಖಾಸಗೀಕರಣಗೊಂಡ ಉದ್ಯಮಗಳು ಮತ್ತು ಪತ್ರಿಕೆಗಳು, BEPZA ಅನ್ನು ಸ್ಥಾಪಿಸಿದರು ಮತ್ತು 1979 ರಲ್ಲಿ ದೇಶದ ಎರಡನೆಯ ಸಾಮಾನ್ಯ ಚುನಾವಣೆಯನ್ನು ನಡೆಸಿದರು. 1979ರ ಫಬ್ರುವರಿಯ ಚುನಾವಣೆಯಲ್ಲಿ ಜನರಲ್ ಜಿಯಾ-ಉರ್ ರಹಮಾನರ ಬಾಂಗ್ಲಾದೇಶ್ ನ್ಯಾಷನಲಿಷ್ಟ್ ಪಾರ್ಟಿಯೇ ಆಡಳಿತ ಪಕ್ಷವಾಗಿ ಚುನಾಯಿತವಾಯಿತು. 1981 ಮೇ 30 ರಂದು ಅಧ್ಯಕ್ಷ ಜಿಯಾ-ಉರ್ ರಹಮಾನ ಕೊಲೆಯಾದರು. ಅಬ್ದುಲ್ ಸತ್ತಾರ್ ತಾತ್ಕಾಲಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದರು. 1982 ರವರೆಗೆ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (ಬಿಎನ್ಪಿ) ಆಡಳಿತ ನಡೆಸುತ್ತಿರುವ ಅರೆ-ಅಧ್ಯಕ್ಷೀಯ ವ್ಯವಸ್ಥೆಯು ವಿಕಸನಗೊಂಡಿತು. 1981 ರಲ್ಲಿ ರಹಮಾನ್ ಹತ್ಯೆಗೀಡಾದ ನಂತರ ಆ ಸ್ಥಾನದಲ್ಲಿ ಉಪಾಧ್ಯಕ್ಷ ಅಬ್ದುಸ್ ಸತ್ತಾರ್ ನೇಮಕಗೊಂಡರು. ನವೆಂಬರ್ 15ರ ಚುನಾವಣೆಯಲ್ಲಿ ಅವರೇ ಆಯ್ಕೆಯಾದರು. 1981 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸತ್ತರ್ 65.5 ಪ್ರತಿಶತದಷ್ಟು ಮತಗಳನ್ನು ಪಡೆದರು. [೧೧]
ಸೇನಾ ಆಡಳಿತ -ಎರ್ಷಾದ್ ಅಧ್ಯಕ್ಷ
[ಬದಲಾಯಿಸಿ]- 1982 ಮಾರ್ಚ್ 24ರಂದು ಇನ್ನೊಂದು ಸೇನಾಕ್ಷಿಪ್ರಾಕ್ರಮಣ ನಡೆಯಿತು. ಒಂದು ವರ್ಷದ ನಂತರ, 1982 ರ ಬಾಂಗ್ಲಾದೇಶ ದಂಗೆಯಲ್ಲಿ ಸತ್ತಾರ್ ಪದಚ್ಯುತಿಗೊಂಡರು. ಮುಖ್ಯ ನ್ಯಾಯಮೂರ್ತಿ ಎ.ಎಫ್. ಎಮ್. ಅಹ್ಸನುದ್ದೀನ್ ಚೌಧರಿ ಅವರನ್ನು ಅಧ್ಯಕ್ಷರಾಗಿ ಸ್ಥಾಪಿಸಲಾಯಿತು, ಆದರೆ ಸೈನ್ಯದ ಮುಖ್ಯಸ್ಥ ಹುಸೇನ್ ಮುಹಮ್ಮದ್ ಇರ್ಷಾದ್ ಅವರು ರಾಷ್ಟ್ರದ ಪ್ರಮುಖ ನಾಯಕರಾಗಿ ಅಧಿಕಾರ ಪಡೆದುಕೊಂಡರು ಮತ್ತು 1983 ರಲ್ಲಿ ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಲೆ.ಜ.ಎಚ್.ಎಂ. ಎರ್ಷಾದರನ್ನು ಸೇನಾ ಮುಖ್ಯಸ್ಥರನ್ನಾಗಿ ಅವರ ಅಧಿಕಾರಾವಧಿಯನ್ನು 1984 ನವೆಂಬರ್ ಕೊನೆಯತನಕ ವಿಸ್ತರಿಸಲಾಯಿತು. ಎರ್ಷಾದ್ 1986 ರಲ್ಲಿ ಸಮರ ಕಾನೂನನ್ನು (ಮಾರ್ಷಲ್ ಲಾ) ತೆಗೆದುಹಾಕಿದರು.[೧೨]
- ಅವರು ಸತತ ನಾಲ್ಕು ಪ್ರಧಾನಮಂತ್ರಿಗಳಾದ ಅಟೌರ್ ರಹಮಾನ್ ಖಾನ್, ಮಿಜಾನೂರು ರಹಮಾನ್ ಚೌಧರಿ, ಮೌಧದ್ ಅಹ್ಮದ್ ಮತ್ತು ಕಾಜಿ ಜಾಫರ್ ಅಹಮದ್ ಇವರ ಸಹಯೋಗದೊಡನೆ ಮತ್ತು ಸಂಸತ್ತಿನಲ್ಲಿ ಅವರ ಜಾತಿಯೋ ಪಾರ್ಟಿಯ ಬಹುಮತದಿಂದ ಆಳ್ವಿಕೆ ನಡೆಸಿದರು. ಇರ್ಷಾದ್ 1986 ರಲ್ಲಿ ಮಾರ್ಷಲ್ ಲಾ ಮುಖ್ಯ ಲಷ್ಕರಿ ಶಾಸನ ಆಡಳಿತಗಾರ ಲೆ.ಜ.ಎಚ್.ಎಂ. ಎರ್ಷಾದರು ರಾಜಕಾರಣವನ್ನು ಶುದ್ಧೀಕರಿಸುವ ಉದ್ದೇಶದಿಂದ ಎಲ್ಲ ರಾಜಕೀಯ ಪಕ್ಷಗಳನ್ನೂ ನಿಷೇಧಿಸಿದರಲ್ಲದೆ ರಾಜಕೀಯ ಅಪರಾಧಗಳ ವಿಚಾರಣೆಗಾಗಿ ಲಷ್ಕರಿ ನ್ಯಾಯಾಲಯಗಳನ್ನು ಸ್ಥಾಪಿಸಿದರು. ಬಾಂಗ್ಲಾ ದೇಶದ ಕೈಗಾರಿಕೆಗಳ ರಕ್ಷಣೆ ಹಾಗೂ ಬೆಳವಣಿಗೆಗಾಗಿ ಎಂಟು ಅಂಶಗಳ ಆರ್ಥಿಕ ಕಾರ್ಯಕ್ರಮವೊಂದನ್ನು ಘೋಷಿಸಲಾಯಿತು. 1986 ಮತ್ತು 1988 ರಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದವು, ಆದರೆ ನಂತರದಲ್ಲಿ ವಿರೋಧ ಪಕ್ಷವಾದ ಬಿಎನ್‍ಪಿ (BNP) ಮತ್ತು ಅವಾಮಿ ಲೀಗ್ 1988ರ ಚುನಾವಣೆಯನ್ನು ಬಹಿಷ್ಕರಿಇದವು.
- ಎರ್ಷಾದ್ ಆಡಳಿತಾತ್ಮಕ ವಿಕೇಂದ್ರೀಕರಣವನ್ನು ಅನುಸರಿಸಿದರು. ದೇಶವನ್ನು 64 ಜಿಲ್ಲೆಗಳಾಗಿ ವಿಭಜಿಸಲಾಯಿತು ಮತ್ತು 1988 ರಲ್ಲಿ ಇಸ್ಲಾಂ ಧರ್ಮವನ್ನು ರಾಜ್ಯ ಧರ್ಮವಾಗಿ ಮಾಡಲು ಸಂಸತ್ತನ ಮೇಲೆ ಒತ್ಡಡಹಾಕಲಾಯಿತು. 1990 ರ ಸಾಮೂಹಿಕ ದಂಗೆಯಲ್ಲಿ ಅವರು ರಾಜೀನಾಮೆಗೆ ಒತ್ತಾಯಿಸಿದರು, ಮತ್ತು ಮುಖ್ಯ ನ್ಯಾಯಮೂರ್ತಿ ಶಹಬುದ್ದೀನ್ ಅಹ್ಮದ್ ಅವರು ಸಂಸತ್ತಿನ ಆಡಳಿತ ತರಲು ಪರಿವರ್ತನೆಯ ಭಾಗವಾಗಿ ರಾಷ್ಟ್ರದ/ ಸರ್ಕಾರದ ಮೊದಲ ಉಸ್ತುವಾರಿ ನೇತೃತ್ವ ವಹಿಸಿದರು. [೧೩]
ಪ್ರಸ್ತುತ ಸಂಸತ್ತಿನ ಯುಗ (1991-ಇಂದಿನವರೆಗೆ)
[ಬದಲಾಯಿಸಿ]- 1991 ರ ಸಾರ್ವತ್ರಿಕ ಚುನಾವಣೆಯ ನಂತರ, ಸಂವಿಧಾನದ ಹನ್ನೆರಡನೆಯ ತಿದ್ದುಪಡಿಯು ಸಂಸತ್ತಿನ ಗಣರಾಜ್ಯವನ್ನು ಪುನಃಸ್ಥಾಪಿಸಿತು ಮತ್ತು ಬೇಗಮ್ ಖಲೀದಾ ಜಿಯಾ ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನ ಮಂತ್ರಿಯಾದರು. (ಬೇಗಂ ಖಲೀಡಾ ಜಿಯಾ ಜಿಯಾ ಉರ್ ರಹ್ಮಾನ್ ಅವರ ಪತ್ನಿ, 1977 ರಲ್ಲಿ ಬಾಂಗ್ಲಾದೇಶದ 7 ನೇ ಅಧ್ಯಕ್ಷರಾದರು.) ಮಾಜಿ ಪ್ರಥಮ ಮಹಿಳೆಯಾಗಿದ್ದ ಜಿಯಾ 1990 ರಿಂದ 1996 ರವರೆಗೆ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್‍ಪಿ) ಸರ್ಕಾರದ ನೇತೃತ್ವ ವಹಿಸಿದರು. 1991 ರಲ್ಲಿ ಬಾಂಗ್ಲಾದೇಶದ ಆರ್ಥಿಕತೆಯನ್ನು ಉದಾರೀಕರಣಗೊಳಿಸಲು ತಮ್ಮ ಹಣಕಾಸು ಸಚಿವ ಸೈಫುರ್ ರಹಮಾನ್ ಪ್ರಮುಖ ಕಾರ್ಯಕ್ರಮವನ್ನು ಪ್ರಾರಂಭಿಸಿದರು. [೧೪]
- ಅವಾಮಿ ಲೀಗ್ ಉಪಕ್ರಮದ ನಂತರ, ವಿದ್ಯುತ್ ವರ್ಗಾವಣೆಯನ್ನು ಮೇಲ್ವಿಚಾರಣೆ ಮಾಡಲು ಬಿಎನ್‍ಪಿ ಉಸ್ತುವಾರಿ ಸರ್ಕಾರಗಳ ವ್ಯವಸ್ಥೆಯನ್ನು ತಂದಿತು. ನ್ಯಾಯಮೂರ್ತಿ ಮೊಹಮ್ಮದ್ ಹಬೀಬುರ್ ರಹಮಾನ್ ಅವರು ಬಾಂಗ್ಲಾದೇಶದ ಮೊದಲ ಮುಖ್ಯ ಸಲಹೆಗಾರರಾಗಿದ್ದರು ಮತ್ತು 1996 ರ ಚುನಾವಣೆಯಲ್ಲಿ ಅದರ ಮೇಲ್ವಿಚಾರಣೆ ಮಾಡಿದರು. ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್, ಏಳನೇ ಸಾರ್ವತ್ರಿಕ ಚುನಾವಣೆಯಲ್ಲಿ ಜಯಗಳಿಸಿತು. ಹಸಿನಾರವರ ಮೊದಲ ಅವಧಿ ಚಿತ್ತಗಾಂಗ್ ಹಿಲ್ ಟ್ರಾಕ್ಟ್ಸ್ ಪೀಸ್ ಅಕಾರ್ಡ್ ಮತ್ತು ಭಾರತದೊಂದಿಗೆ ಗಂಗಾ ನೀರಿನ ಹಂಚಿಕೆ ಒಪ್ಪಂದದಿಂದ ಪ್ರಸಿದ್ಧಿ ಪಡೆಯಿತು; (ಹೈಲೈಟ್ ಮಾಡಲ್ಪಟ್ಟಿತು). ಮುಖ್ಯ ಸಲಹೆಗಾರ ನ್ಯಾಯಮೂರ್ತಿ ಲತೀಫರ್ ರಹ್ಮಾನ್ ನೇತೃತ್ವದ ಎರಡನೆಯ ಉಸ್ತುವಾರಿ ಸರ್ಕಾರವು 2001 ರಲ್ಲಿ ಎಂಟನೆಯ ಸಾರ್ವತ್ರಿಕ ಚುನಾವಣೆಯು ಅವರ ಮೇಲ್ವಿಚಾರಣೆಯಲ್ಲಿ ನಡೆಸಿತು. ಇದು ಬೇಗಮ್ ಜಿಯಾ ಮತ್ತು ಬಿಎನ್‍ಪಿ ಪಕ್ಷದ ಅಧಿಕಾರವನ್ನು ಮರಳಿ ತಂದಿತು. ಎರಡನೆಯ ಬೇಗಮ್ ಖಲೀದಾ ಝಿಯಾ ಸಚಿವಾಲಯವು ಆರ್ಥಿಕ ಸುಧಾರಣೆಯನ್ನು ಹೆಚ್ಚಿಸಿತು, ಆದರೆ ರಾಜಕೀಯ ಗಲಭೆಗಳು 2004 ಮತ್ತು 2006 ರ ನಡುವೆ ನೆಡೆದು ದೇಶವನ್ನು ಹಿಡಿದುಕೊಂಡವು. ಒಂದು ತೀವ್ರಗಾಮಿ ಇಸ್ಲಾಮಿ ಉಗ್ರಗಾಮಿ ಗುಂಪು, ಜೆ.ಎಂ.ಬಿ, ಸರಣಿ ಬಾಂಬ್ ಸ್ಪೋಟಗಳನ್ನು ನಡೆಸಿತು. ವ್ಯಾಪಕ ರಾಜಕೀಯ ಅಶಾಂತಿ ಮಧ್ಯೆ, ಬಾಂಗ್ಲಾದೇಶ ಮಿಲಿಟರಿ ತುರ್ತು ಪರಿಸ್ಥಿತಿಯನ್ನು ವಿಧಿಸಲು ಅಧ್ಯಕ್ಷ ಐಜುದ್ದೀನ್ ಅಹ್ಮದ್ನನ್ನು ಒತ್ತಾಯಿಸಿತು ಮತ್ತು ಟೆಕ್ನೊಕ್ರ್ಯಾಟ್/ ರಾಜ ತಂತ್ರಜ್ಞ ಫಕ್ರುದ್ದೀನ್ ಅಹ್ಮದ್ ನೇತೃತ್ವದಲ್ಲಿ ಉಸ್ತುವಾರಿ ಸರ್ಕಾರವನ್ನು ಸ್ಥಾಪಿಸಲಾಯಿತು.
- ತುರ್ತು ಪರಿಸ್ಥಿತಿ ಎರಡು ವರ್ಷಗಳ ವರೆಗೆ ನಡೆಯಿತು, 2008 ರ ಒಂಬತ್ತನೇ ಸಾರ್ವತ್ರಿಕ ಚುನಾವಣೆಯವರೆಗೂ ಬಾಂಗ್ಲಾದೇಶದ ಮೊದಲ ಅಧ್ಯಕ್ಷ ಶೇಖ್ ಮುಜಿಬುರ್ ರಹಮಾನ್ ಅವರ ಮಗಳು ಶೇಖ್ ಹಸೀನಾ ಮತ್ತು ಅವಾಮಿ ಲೀಗ್ ಅಧಿಕಾರಕ್ಕೆ ಮರಳಿ ಆಡಳಿತ ನೆಡೆಸಿತು.
- ಎರಡು ತಿಂಗಳ ಅಧಿಕಾರಾವಧಿಯಲ್ಲಿ, ಶೇಖ್ ಹಸೀನಾ ಅವರ ಎರಡನೇ ಸರ್ಕಾರ BDR ಬಂಡಾಯವನ್ನು (The Bangladesh Rifles revolt) ಎದುರಿಸಿತು, ಅದು ಮಿಲಿಟರಿ ವಿಭಾಗಗಳೊಂದಿಗೆ ಉದ್ವಿಗ್ನತೆಯನ್ನು ಉಂಟುಮಾಡಿತು. ಹಸೀನಾ ಮಿಲಿಟರಿಯಲ್ಲಿ ಬಂಡಾಯಗಾರನ್ನೂ ಮತ್ತು ಕೋಪಗೊಂಡ ಮಿಲಿಟರಿಗಳ ಬೆದರಿಕೆಯನ್ನು ಯಶಸ್ವಿಯಾಗಿ ನಿಭಾಯಿಸಿದರು. ಅವರು 1971 ರ ಜನಾಂಗೀಯ ಹತ್ಯಾಕಾಂಡದ ಉಳಿದಿರುವ ಬಂಗಾಳಿ ಇಸ್ಲಾಮಿ ಸಹಯೋಗಿಗಳನ್ನು ದಂಡಿಸಲು ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯನ್ನು ರಚಿಸಿದರು. ಬಾಂಗ್ಲಾದೇಶದ ಸ್ವಾತಂತ್ರ್ಯವನ್ನು ವಿರೋಧಿಸಿ ಮತ್ತು ನರಮೇಧದ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಸಹಾಯ ಮಾಡಿದ ಆರೋಪ ಹೊರಿಸಿರುವ ಒಂದು ಪಕ್ಷದ ಜಮಾತ್-ಇ-ಇಸ್ಲಾಮಿಯ ಹಿರಿಯ ನಾಯಕರು ಅದರ ಅಪರಾಧಿ ಮತ್ತು ಯುದ್ಧ ಅಪರಾಧಿಗಳು ಶಿಕ್ಷೆಗೊಳಗಾದರು. ಟ್ರಿಬ್ಯೂನಲ್ ನ್ಯಾಯ ಮತ್ತು ನಿಷ್ಪಕ್ಷಪಾತದ ಬಗ್ಗೆ ಟೀಕೆಗಳನ್ನು ಹೊಂದಿದೆ.
- ಭಯೋತ್ಪಾದನಾ ವಿರೋಧಿ ಶಿಸ್ತುಕ್ರಮವು ನೆರೆಯ ಭಾರತದೊಂದಿಗೆ ಸಂಬಂಧಗಳನ್ನು ನಾಟಕೀಯವಾಗಿ ಸುಧಾರಿಸಿತು. ಬಾಂಗ್ಲಾದೇಶ ಮತ್ತು ಭಾರತವು ಹೆಚ್ಚು ಪ್ರಾದೇಶಿಕ ಸಂಪರ್ಕ ಮತ್ತು ವ್ಯಾಪಾರದ ಮೇಲೆ ಕೇಂದ್ರೀಕರಿಸಿತು.
ಶೇಕ್ ಹಸೀನಾ ಮೂರನೇ ಅವಧಿ ಆಡಳಿತ (2009 ರಿಂದ)
[ಬದಲಾಯಿಸಿ]- 2010 ರಲ್ಲಿ, ಸುಪ್ರೀಂ ಕೋರ್ಟ್ ಮಾರ್ಷಲ್ ಲಾ ಅನ್ನು ಕಾನೂನುಬಾಹಿರ ಎಂದು ದೃಢೀಕರಿಸಿ ಜಾತ್ಯತೀತ ತತ್ವಗಳನ್ನು ಸಂವಿಧಾನದಲ್ಲಿ ವಿಧಿಸಿತು. ಮುಂದಿನ ವರ್ಷ, ಅವಾಮಿ ಲೀಗ್ ಉಸ್ತುವಾರಿ-ಸರ್ಕಾರದ ವ್ಯವಸ್ಥೆಯನ್ನು ರದ್ದುಪಡಿಸಿತು. ಯುದ್ಧ ಅಪರಾಧಗಳ ನ್ಯಾಯಮಂಡಳಿಯು ಜಾತ್ಯತೀತತೆಯ ಪರವಾಗಿ ಸಾರ್ವಜನಿಕ ಅಭಿಪ್ರಾಯವನ್ನು ಸಜ್ಜುಗೊಳಿಸಿತು, ಇದು ಮಾರ್ಚ್ 2013 ಶಹಬಾಗ್ ಪ್ರತಿಭಟನೆಯಲ್ಲಿ ಸ್ಪಷ್ಟವಾಗಿ ಗೋಚರಿಸಿತು. ಪ್ರತಿಕ್ರಿಯೆಯಾಗಿ, ಮೇ 2013 ರಲ್ಲಿ ಹೆಜ್ಜತ್-ಇ-ಇಸ್ಲಾಂ ಧರ್ಮ ಗುಂಪಿನ ನೇತೃತ್ವದಲ್ಲಿ ಒಂದು ದೊಡ್ಡ ಇಸ್ಲಾಮಿ ಸಂಘಟನೆಯ ಪ್ರದರ್ಶನ ನಡೆಯಿತು.
- ಲೀಗ್ ಪರವಾಗಿ ಚುನಾವಣಾ ಪ್ರಕ್ರಿಯೆಯನ್ನು ಭ್ರಷ್ಟಗೊಳಿಸುವ ಪ್ರಯತ್ನವಾಗಿ ಈ ಕ್ರಮವನ್ನು ಬೆನ್ ಪಿ ಪಕ್ಷ ನೋಡಿದೆ. ಲೀಗ್, ಬಿಎನ್‍ಪಿ ಮತ್ತು ಜಮಾತ್ ನಡುವಿನ ಬೀದಿ ಹಿಂಸಾಚಾರವು ಸಾರ್ವತ್ರಿಕ ಚುನಾವಣೆಗೆ ಚಾಲನೆ ನೀಡಿತು. 2014 ರ ಸಾರ್ವತ್ರಿಕ ಚುನಾವಣೆಯನ್ನು ಖಲೀದಾ ಜಿಯಾ ಅವರ ಬಿಎನ್‍ಪಿ ಪಕ್ಷ ಬಹಿಷ್ಕರಿಸಿತು; ಜಮಾತ್ ವಿರುದ್ಧವಾಗಿ ಸ್ಪರ್ಧಿಸದಂತೆ ಸ್ಪರ್ಧೆಯಿಂದ ನಿಷೇಧಿಸಲಾಯಿತು. ಇದು ಬಾಂಗ್ಲಾದೇಶ ಇತಿಹಾಸದಲ್ಲಿ ಅತ್ಯಂತ ಹಿಂಸಾತ್ಮಕ ಚುನಾವಣೆಯಾಗಿದೆ. ಚುನಾವಣೆ ಏಕಪಕ್ಷೀಯವಾಗಿ ಯುನೈಟೆಡ್ ಸ್ಟೇಟ್ಸ್ ನಿಂದ ಟೀಕಿಸಲ್ಪಟ್ಟಿತು. 2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಅವಾಮಿ ಲೀಗ್ ಜಯಗಳಿಸಿ ಶೇಖ್ ಹಸೀನಾ ಪ್ರಧಾನಿಯಾಗಿ ಮೂರನೇ ಅಧಿಕಾರಾವಧಿಗೆ ಪ್ರಮಾಣವಚನ ಸ್ವೀಕರಿಸಿದರು.[೧೫]
ಅಲ್ಪಸಂಖ್ಯಾತರು ಮತ್ತು ಜಾತ್ಯತೀತವಾದಿಗಳಮೇಲೆ ಧಾಳಿ
[ಬದಲಾಯಿಸಿ]- ಢಾಕಾದಲ್ಲಿ ದಾಳಿ:ಜುಲೈ 2016
- 2015 ಮತ್ತು 2016 ರಲ್ಲಿ, ಬಾಂಗ್ಲಾದೇಶವು ಹಿಂದುಗಳು, ಬೌದ್ಧರು, ಕ್ರೈಸ್ತರು, ಪಾಶ್ಚಾತ್ಯ ಮತ್ತು ಏಷ್ಯಾದ ವಲಸಿಗರು, ಎಲ್ಜಿಬಿಟಿ ಕಾರ್ಯಕರ್ತರು, ಸೂಫಿ ಮುಸ್ಲಿಮರು, ಬ್ಲಾಗಿಗರು, ಪ್ರಕಾಶಕರು ಮತ್ತು ನಾಸ್ತಿಕರು ಸೇರಿದಂತೆ ಅಲ್ಪಸಂಖ್ಯಾತರು ಮತ್ತು ಜಾತ್ಯತೀತವಾದಿಗಳನ್ನು ಗುರಿಯಾಗಿಸಿಕೊಂಡಿದೆ. ದೇಶದ ಅತ್ಯಂತ ಕೆಟ್ಟ ಭಯೋತ್ಪಾದಕ ದಾಳಿಯು, 206 ಜನ ಮರಣದಂಡನೆಯಾಗಿದೆ. ಜುಲೈ 2016 ರಲ್ಲಿ ಭಯೋತ್ಪಾದಕ ಬಂದೂಕುಧಾರಿಗಳು ಗುಂಡಿನ ದಾಳಿನಡೆಸಿದರು. ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಲೆವಂಟ್ ಅನೇಕ ದಾಳಿಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಆದಾಗ್ಯೂ, ಸ್ಥಳೀಯ ಭಯೋತ್ಪಾದಕ ಸಂಸ್ಥೆಗಳ ಸಹಕಾರದ ಹೆಚ್ಚಿನ ಸಹಯೋಗದ ಸಾಧ್ಯತೆ ಇದಕ್ಕೆ ಕಾರಣವಾಗಿದೆ.[೧೬]
ಚಿತ್ತಗಾಂಗ್ ಕಣಿವೆ ಜನರ ಸಮಸ್ಯೆ
[ಬದಲಾಯಿಸಿ]- ಚಿತ್ತಗಾಂಗ್ ಗುಡ್ಡಗಾಡು ಕಣಿವೆಗಳು ಬರ್ಮಾ ಮತ್ತು ಈಶಾನ್ಯ ಭಾರತಗಳೊಂದಿಗೆ ಬಾಂಗ್ಲಾದೇಶದ ಆಗ್ನೇಯ ಪರ್ವತದ ಗಡಿಯನ್ನು ಹೊಂದಿದೆ. ಬ್ರಿಟಿಷ್ ಬಂಗಾಳದ ಅಡಿಯಲ್ಲಿ ಈ ಪ್ರದೇಶವು ಸ್ವಾಯತ್ತತೆಯನ್ನು ಅನುಭವಿಸಿತ್ತು. ಪಾಕಿಸ್ತಾನವು ತನ್ನ ಸ್ವಾಯತ್ತತೆಯನ್ನು ನವೀರಿಸಿತು. ಇದು ವಿವಾದಾತ್ಮಕ ಕಾಪ್ಟಾಯ್ ಅಣೆಕಟ್ಟನ್ನು ನಿರ್ಮಿಸಿತು, ಅದು ಆ ಪ್ರದೇಶದ ಸ್ಥಳೀಯ ಜನರನ್ನು ಸ್ಥಳಾಂತರಿಸಿತು. ವರ್ಷಗಳ ಅಶಾಂತಿ ನಂತರ, "ಚಿತ್ತಗಾಂಗ್ ಹಿಲ್ ಟ್ರಾಕ್ಟ್ಸ್ ಪೀಸ್ ಅಕಾರ್ಡ್" ಶಾಂತಿ ಒಪ್ಪಂದ ಬಾಂಗ್ಲಾದೇಶದ ಸರ್ಕಾರ ಮತ್ತು ಬುಡಕಟ್ಟು ನಾಯಕರ ನಡುವೆ ರೂಪುಗೊಂಡಿತು, ಇದು ಮೂರು ಪರ್ವತ ಜಿಲ್ಲೆಗಳ ಚುನಾಯಿತ ಕೌನ್ಸಿಲ್‍ಗೆ ಸೀಮಿತ ಮಟ್ಟದ ಸ್ವಾಯತ್ತತೆಯನ್ನು ನೀಡಿತು.
೨೦೧೮ರ ಬಾಂಗ್ಲಾ ಅಧ್ಯಕ್ಷರು ಮತ್ತು ಪ್ರಧಾನಿ
[ಬದಲಾಯಿಸಿ]- ಮೊಹಮದ್ ಅಬ್ದುಲ್ ಹಮೀದ್ 14 ಮಾರ್ಚ್ 2013 ರಂದು ಬಾಂಗ್ಲಾದೇಶದ ಅಧ್ಯಕ್ಷರಾಗಿ ನೇಮಕಗೊಂಡರು. ಆಗ ಅಧ್ಯಕ್ಷ ಜಿಲ್ಲೂರ್ ರಹಮಾನ್ ಸಿಂಗಪುರದಲ್ಲಿ ಆಸ್ಪತ್ರೆಯಲ್ಲಿದ್ದರು. ಆರು ದಿನಗಳ ನಂತರ ರಹಮಾನ್ ನಿಧನರಾದರು. ನಂತರ ಹಮೀದ್ 22 ಏಪ್ರಿಲ್ 2013 ರಂದು ರಾಷ್ಟ್ರಪತಿಯಾಗಿ ಏಕಪಕ್ಷೀಯರಾಗಿ ಚುನಾಯಿತರಾದರು. ಏಪ್ರಿಲ್ 24 ರಂದು ಅವರು ಅಧಿಕಾರಕ್ಕೆ ಬಂದರು. ಫೆಬ್ರವರಿ 7, 2018 ರಂದು, ಎರಡನೆಯ ಅವಧಿಗೆ ಅವಿರೋಧವಾಗಿ ಆಯ್ಕೆಯಾದರು. [೧೭]
- ಜನವರಿ 2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಜಯಗಳಿಸಿದ ಬಳಿಕ ಮೂರನೇ ಬಾರಿಗೆ ಹಸೀನಾ ಪ್ರಧಾನ ಮಂತ್ರಿಯಾದರು. ಈ ಚುನಾವಣೆ ಮುಖ್ಯ ವಿರೋಧ ಬಿಎನ್‍ಪ ನೇತೃತ್ವದ ಮೈತ್ರಿಗಳಿಂದ ಬಹಿಷ್ಕರಿಸಲ್ಪಟ್ಟಿತು. ಈ ಚುನಾವಣೆಯನ್ನು "ಚುನಾವಣಾ ಪ್ರಹಸನ" ಎಂದು ಕರೆಯಲಾಗುತ್ತದೆ.[೧೮]
- ಮಾರ್ಚ್ 2017 ರಲ್ಲಿ, ಬಾಂಗ್ಲಾದೇಶದ ಮೊದಲ ಎರಡು ಜಲಾಂತರ್ಗಾಮಿ ನೌಕೆಗಳನ್ನು ನಿಯೋಜಿಸಲಾಯಿತು. 2017ಸೆಪ್ಟೆಂಬರ್‍ನಲ್ಲಿ, ಇವರ ಸರ್ಕಾರ ರೋಹಿಂಗ್ಯ ನಿರಾಶ್ರಿತರಿಗೆ ತಾತ್ಕಾಲಿಕ ಆಶ್ರಯವನ್ನು ನೀಡಿತು ಮತ್ತು ರೋಹಿಂಗ್ಯ ನಿರಾಶ್ರಿತರಿಗೆ ನೆರವು ನೀಡಿತು ಮತ್ತು ರೋಹಿಂಗ್ಯ ಮುಸ್ಲಿಂ ವಿರುದ್ಧ ಹಿಂಸೆಯನ್ನು ಕೊನೆಗೊಳಿಸಲು ಮ್ಯಾನ್ಮಾರ್ಗೆ ಒತ್ತಡ ಹಾಕಿತು. [೧೯]
ಮಾಜಿ ಪ್ರಧಾನಿಗೆ ಜೈಲು ಶಿಕ್ಷೆ
[ಬದಲಾಯಿಸಿ]- ವಿಶೇಷ ನ್ಯಾಯಾಲಯ -5 ರ ನ್ಯಾಯಾಧೀಶ ಎಂ.ಡಿ. ಅಖ್ತರ್ಝುಝಾಮನ್, ಎರಡು ಬಾರಿಯ ಮಾಜಿ ಪ್ರಧಾನಮಂತ್ರಿ ಖಲಿದಾ ಜಿಯಾಗೆ ಐದು ವರ್ಷಗಳ ಕಠಿಣ ಸೆರೆವಾಸಕ್ಕೆ ಶಿಕ್ಷೆ ವಿಧಿಸಿದ್ದಾರೆ. ಜಿಯಾ, ದೇಶದ ಮುಖ್ಯ ವಿರೋಧ ಪಕ್ಷದ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ (ಬಿಎನ್‍ಪಿ- Bangladesh Nationalist Party (BNP)) ಅಧ್ಯಕ್ಷರು ಮತ್ತು ಐದು ಮಂದಿ ಜಿಯಾ ಆರ್ಫನೇಜ್ ಟ್ರಸ್ಟ್‍ಗೆ ಮೀಸಲಾದ ಹಣದ ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಜಿಯಾ ಅವರ ಗಂಡ- ಮಾಜಿ ಅಧ್ಯಕ್ಷ ಜಿಯಾರ್ ರೆಹಮಾನ್ ಅವರ ಹೆಸರಿನ ದತ್ತಿ ಉದ್ದೇಶಕ್ಕಾಗಿ ವಿದೇಶಿ ದೇಣಿಗೆಗಳಿಂದ 21 ದಶಲಕ್ಷ ಡಾಲರ್ ($ 252,000) ಹಣವನ್ನು ಆರು ಮಂದಿ ದುರುಪಯೋಗಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.[೨೦]
- ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲಿದಾ ಜಿಯಾ ಅವರಿಗೆ ಅನಾಥಾಶ್ರಮದ ದೇಣಿಗೆ ಹಣ ದುರ್ಬಳಕೆ ಆರೋಪದ ಪ್ರಕರಣದಲ್ಲಿ ವಿಧಿಸಿದ್ದ 5 ವರ್ಷ ಅವಧಿಯ ಶಿಕ್ಷೆಯನ್ನು ಅಲ್ಲಿನ ಹೈಕೋರ್ಟ್ 10 ವರ್ಷಕ್ಕೆ ಹೆಚ್ಚಿಸಿ, ಅಚ್ಚರಿಯ ತೀರ್ಪು ನೀಡಿದೆ. ಭ್ರಷ್ಟಾಚಾರದ ಮತ್ತೊಂದು ಪ್ರಕರಣದಲ್ಲಿ ಜಿಯಾ ಅವರಿಗೆ ನ್ಯಾಯಾಲಯ 7 ವರ್ಷ ಶಿಕ್ಷೆ ವಿಧಿಸಿದ ಮರು ದಿನವೇ ಕೋರ್ಟ್ ದುಪ್ಪಟ್ಟು ಶಿಕ್ಷೆ ವಿಧಿಸಿದೆ. ನ್ಯಾಯಮೂರ್ತಿಗಳಾದ ಎಂ.ಎನಾಯೆತುರ್ ರಹೀಮ್ ಮತ್ತು ಮೊಸ್ತಾಫಿಜುರ್ ರೆಹಮಾನ್ ಅವರಿದ್ದ ಪೀಠವು ಈ ತೀರ್ಪು ನೀಡಿದೆ. ಶಿಕ್ಷೆ ಪ್ರಕಟವಾದಾಗಿನಿಂದಲೂ ಜಿಯಾ ಅವರು ಸೆಂಟ್ರಲ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಅಕ್ಟೋಬರ್ 6ರಿಂದ ಬಂಗಬಂಧು ಶೇಖ್ ಮುಜಿಬ್ ವೈದ್ಯಕೀಯ ವಿಶ್ವವಿದ್ಯಾಲಯದ ಆಸ್ಪತ್ರೆಗೆ ದಾಖಲಾಗಿರುವ ಖಲಿದಾ ಜಿಯಾ ಅವರು, ಚಿಕಿತ್ಸೆ ಪಡೆಯುತ್ತಿದ್ದಾರೆ.[೨೧]
ನೋಡಿ
[ಬದಲಾಯಿಸಿ]ಈ ಲೇಖನವು ಒಂದು ಪ್ರಸ್ತುತ ಘಟನೆಯ ಬಗೆಗಿನ ಮಾಹಿತಿಯಾಗಿದೆ. ಸಮಯ ಕಳೆದಂತೆ ಮಾಹಿತಿ ತ್ವರಿತವಾಗಿ ಬದಲಾಗಬಹುದು, ಮತ್ತು ಆರಂಭಿಕ ಸುದ್ದಿ ವರದಿಗೂ, ಘಟನೆಯ ಪ್ರಸ್ತುತ ಸ್ಥಿತಿ-ಗತಿಗೂ ಮತ್ತು ಈ ಲೇಖನದ ಕೊನೆಯ ನವೀಕರಣಗಳ ನಡುವೆ ಮತ್ತು ಸಾಕಷ್ಟು ವ್ಯತ್ಯಾಸಗಳು ಇರಬಹುದು. (13 Nov, 2018) |
ಉಲ್ಲೇಖ
[ಬದಲಾಯಿಸಿ]- ↑ Farahnaz Ispahani (2017). Purifying the Land of the Pure: A History of Pakistan's Religious Minorities. Oxford University Press. p. 8. ISBN 978-0-19-062165-0.
- ↑ Yasmin Saikia (10 August 2011). Women, War, and the Making of Bangladesh: Remembering 1971. Duke University Press. p. 34. ISBN 978-0-8223-5038-5.
- ↑ Bangladesh profile - Timeline 14 February 2018
- ↑ http://countrystudies.us/bangladesh/16.htm The "Revolution" of Ayub Khan, 1958-66
- ↑ Four Miles to Freedom: Escape from a Pakistani POW Camp;By Faith Johnston
- ↑ http://content.time.com/time/magazine/article/0,9171,905593,00.html The World: India: Easy Victory, Uneasy Peace Monday, Dec. 27, 1971
- ↑ Bose, Sarmila (November 2011). "The question of genocide and the quest for justice in the 1971 war"(PDF). Journal of Genocide Research. 13 (4): 398.
- ↑ Haqqani, Hussain (2005). Pakistan: Between Mosque and Military. United Book Press. ISBN 978-0-87003-214-1., Chapter 3, p. 87.
- ↑ "Mushtaq was worst traitor: attorney general". bdnews24.com. Retrieved 19 September 2017.
- ↑ B.Z. Khasru. The Bangladesh Military Coup and the CIA Link. Rupa Publications India Pvt. Ltd. ISBN 978-81-291-3416-5.
- ↑ [B.Z. Khasru. The Bangladesh Military Coup and the CIA Link. Rupa Publications India Pvt. Ltd.]
- ↑ ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬಾಂಗ್ಲಾದೇಶ
- ↑ ["Bangladesh profile". 13 August 2017. Retrieved 19 September 2017 – via www.bbc.com.]
- ↑ [David Lewis (31 October 2011). Bangladesh: Politics, Economy and Civil Society. Cambridge University Press]
- ↑ [B.Z. Khasru. The Bangladesh Military Coup and the CIA Link. Rupa Publications India Pvt. Ltd]
- ↑ [ಮೇಲಿನದೇ]
- ↑ February 07, 2018;Hamid elected president for second term
- ↑ Sheikh Hasina Wajed". Forbes. Retrieved 28 March 2016.
- ↑ Bangladesh PM Sheikh Hasina visits Rohingya refugees, assures help;The Indian Express.13 September 2017
- ↑ Khaleda Zia jailed for five years in corruption case 8 Feb 2018
- ↑ ಬಾಂಗ್ಲಾ ಮಾಜಿ ಪ್ರಧಾನಿ ಜಿಯಾಗೆ ಜೈಲು ಶಿಕ್ಷೆ ದುಪ್ಪಟ್ಟು;ಪಿಟಿಐ; 31 ಅಕ್ಟೋಬರ್ 2018
- Pages with reference errors
- Pages using ISBN magic links
- Pages using infobox country with unknown parameters
- Pages using infobox country or infobox former country with the symbol caption or type parameters
- ಪ್ರಸ್ತುತ ಘಟನೆಗಳು from 13 Nov, 2018
- Articles with invalid date parameter in template
- ಬಾಂಗ್ಲಾದೇಶ
- ಏಷ್ಯಾ ಖಂಡದ ದೇಶಗಳು
- ದಕ್ಷಿಣ ಏಷ್ಯಾ