ದಿಕ್ಸೂಚಿ
ದಿಕ್ಸೂಚಿ (compass)ದಿಕ್ಕನ್ನು ಸೂಚಿಸುವ ಉಪಕರಣ.ಪ್ರಾಚೀನ ಕಾಲದಿಂದಲೂ ನಾವಿಕರ ಸಂಗಾತಿಯಾದ ಸರಳ ಉಪಕರಣ.ಭಾರತದಲ್ಲಿ 'ಮತ್ಸ್ಯಯಂತ್ರ'ವೆಂದು ಉಪಯೋಗದಲ್ಲಿತ್ತು.ಹಿಂದಿನ ಕಾಲದಲ್ಲಿ ನೀರು ಅಥವಾ ಎಣ್ಣೆಯಲ್ಲಿ ಲೋಹದ ಮೀನನ್ನು ತೇಲಿ ಬಿಟ್ಟು ದಿಕ್ಕನ್ನು ಗುರುತಿಸುತ್ತಿದ್ದರು.ಹಲವಾರು ಬಾರಿ ರೂಪಾಂತರ ಹಾಗೂ ಅಭಿವೃದ್ಧಿಹೊಂದಿ ಈಗಿನ ರೂಪಕ್ಕೆ ಬಂದಿರುತ್ತದೆ.ಇದನ್ನು ಉತ್ತರಮುಖಿ ಎಂದೂ ಕರೆಯುತ್ತಾರೆ.
ಇತಿಹಾಸ
[ಬದಲಾಯಿಸಿ]ಉತ್ತರಮುಖಿಯನ್ನು ನಿರ್ಮಿಸಿ ಅದನ್ನು ಸಮುದ್ರಯಾನದಲ್ಲಿ ಮೊದಲು ಉಪಯೋಗಿಸಿದವರು ತಾವೆಂದು ಚೀನ, ಅರೇಬಿಯ, ಗ್ರೀಸ್, ಫಿನ್ಲೆಂಡ್ ಮತ್ತು ಇಟಲಿ ದೇಶಗಳ ಜನ ಹೇಳಿಕೊಳ್ಳುತ್ತಾರೆ. ಈ ಯಾದಿಯಲ್ಲಿ ಈಜಿಪ್ಟ್ ಮತ್ತು ಭಾರತ ದೇಶಗಳ ಜನ ಏಕೆ ಸೇರಲಿಲ್ಲವೋ ತಿಳಿಯದು. ಇದರ ಉಪಯೋಗ ತಿಳಿಯುವ ಮೊದಲೇ ಪ್ರಪಂಚದ ನಾನಾ ಭಾಗದ ಜನ ಸಮುದ್ರಯಾನ ಮಾಡುತ್ತಿದ್ದರು. ಆಗ ಅವರಿಗೆ ದಿಕ್ಕನ್ನು ತಿಳಿಯಲು ಸಹಾಯಕವಾಗುತ್ತಿದ್ದ ವಸ್ತುಗಳೆಂದರೆ ಸೂರ್ಯ, ಧ್ರುವನಕ್ಷತ್ರ ಮತ್ತು ತಾರಾಗುಚ್ಛಗಳು. ಉತ್ತರಮುಖಿಯನ್ನು ಮೊದಲು ಬಳಸಿದಾಗ ನೌಕೆ ಯಾವ ದಿಕ್ಕಿನಲ್ಲಿ ಚಲಿಸುತ್ತಿದೆ ಎಂಬುದನ್ನು ತಿಳಿಯಲು ಮಾತ್ರ ಅದು ನೆರವಾಗುತ್ತಿತ್ತು. ಅಂದು ಗಾಳಿ ಬೀಸಿದ ದಿಕ್ಕಿನಲ್ಲಿ ನಾವೆ ಚಲಿಸಬೇಕಾಗಿದ್ದುದರಿಂದ ಚಲನದಿಕ್ಕನ್ನು ಬದಲಾಯಿಸಲು ಪ್ರಾಯಶಃ ಸಾಧ್ಯವಾಗುತ್ತಿರಲಿಲ್ಲ.
ಚೀನೀಯರೇ ಉತ್ತರಮುಖಿಯನ್ನು ನಿರ್ಮಿಸಿ ಮೊದಲು ಉಪಯೋಗಿಸಿದರೆಂಬುದಕ್ಕೆ ಆಧಾರ ದಂತಕಥೆಗಳು. ಈ ಕಥೆಗಳಲ್ಲಿ ಒಂದು ಹೀಗಿದೆ: ಪ್ರ.ಶ.ಪು. 2634ರಲ್ಲಿ ಬಂಡಾಯವೆದ್ದ ಅರಸುಕುಮಾರ ಚ್ ಇ-ಯುವನ್ನು ಹತ್ತಿಕ್ಕಲು ಚಕ್ರವರ್ತಿ ಹುವಾಂಗ್ ಟಿ ದಂಡು ಕಳುಹಿಸಿದ. ಅದರ ದಿಕ್ಕುಗೆಡಿಸಲು ಅರಸುಕುಮಾರ ಮಾಯೆಯಿಂದ ಕಾವಳವನ್ನು ಏಳಿಸಿದ. ಆಗ ಚಕ್ರವರ್ತಿ ತನ್ನ ದಂಡನಾಯಕನ ನೆರವಿಗೆ ದಕ್ಷಿಣ ದಿಕ್ಕನ್ನು ಸೂಚಿಸುವ ಮಾನವಾಕೃತಿಯುಳ್ಳ ಒಂದು ರಥವನ್ನು ಕಳುಹಿಸಿದ. ಇದರಿಂದ ಕಾವಳದಲ್ಲಿ ಸೈನ್ಯವನ್ನು ನಡೆಸುವುದು ಸುಲಭವಾಯಿತು. ಯುದ್ಧದಲ್ಲಿ ಅರಸುಕುಮಾರ ಸೆರೆಸಿಕ್ಕಿ ಮರಣದಂಡನೆಗೆ ಗುರಿಯಾದ. ಈ ರಥದಲ್ಲಾಗಲಿ ಇಲ್ಲ ಇಂಥದೇ ಮಾನವಾಕೃತಿಯನ್ನು ಹೊಂದಿದ್ದ ಬೇರೆ ರಥಗಳಲ್ಲಾಗಲಿ ಕಾಂತಸ್ವಭಾವವುಳ್ಳ ದಿಕ್ಸೂಚಿಗಳು ಇದ್ದುವೆಂಬುದಕ್ಕೆ ಸ್ಪಷ್ಟ ಆಧಾರವಿಲ್ಲದಿದ್ದರೂ ಹಾಗೆ ಊಹೆಮಾಡಲು ಪ್ರಬಲ ಕಾರಣವಿದೆ. ಚೀನೀಯರ ಹಡಗುಗಳು ಪ್ರ.ಶ. [[9ನೆಯಶತಮಾನದಲ್ಲಿ ಪರ್ಷಿಯ ಆಖಾತ ಮತ್ತು ಕೆಂಪುಸಮುದ್ರಗಳ ಬಂದರುಗಳಿಗೆ ಹೋಗುತ್ತಿದ್ದುವು. ಆದರೆ ಅವುಗಳಲ್ಲಿ ಉತ್ತರಮುಖಿಗಳು ಇದ್ದುವೆಂದು ನಂಬುವಂತಿಲ್ಲ. ಇವರು ಉತ್ತರಮುಖಿಯ ಉಪಯೋಗವನ್ನು ಬಲ್ಲವರಾಗಿದ್ದರೆಂಬ ಅಂಶವನ್ನು ಖಚಿತವಾಗಿ ತಿಳಿಸುವ ಪಿಂಗ್ ಚೊ ಕೊ ಟಾನ್ ಎಂಬ ಗ್ರಂಥ ರಚಿತವಾದದ್ದು (11ನೆಯ ಶತಮಾನದಲ್ಲಿ). ಯುರೋಪಿನ ನಾವಿಕರು ಪೂರ್ವ ಸಮುದ್ರವನ್ನು ಪ್ರವೇಶಿಸಿ ಚೀನೀ ನಾವಿಕರನ್ನು ಕಂಡಾಗ ಅವರಲ್ಲಿದ್ದ ಉತ್ತರಮುಖಿಗಳು ತೀರಾ ಕೀಳುದರ್ಜೆಯವಾಗಿದ್ದುವೆಂದು ಹೇಳಿದ್ದಾರೆ.
ಅರಬರು ಸಮುದ್ರಯಾನದಲ್ಲಿ ಮುಂದಾಳುಗಳೇ. ಆದ್ದರಿಂದ ಅವರೇ ಉತ್ತರಮುಖಿಯನ್ನು ಮೊದಲು ನಿರ್ಮಿಸಿ ಉಪಯೋಗಿಸಿದವರೆಂಬ ನಂಬಿಕೆ ಬೆಳೆದಿದೆ. ಆದರೆ ಈ ಉಪಕರಣಕ್ಕೆ ಅವರು ತಮ್ಮದೇ ಆದ ಹೆಸರು ಕೊಡದೆ ಇಟಲಿ ಭಾಷೆಯ ಬೊಸ್ಸೋಲ ಎಂಬ ಪದವನ್ನು ಬಳಸುತ್ತಿದ್ದರು. ಇದರಿಂದ ಅವರು ಉತ್ತರಮುಖಿಯ ಮೊದಲ ನಿರ್ಮಾತೃಗಳೆಂಬ ನಂಬಿಕೆ ಶಿಥಿಲಗೊಂಡಿದೆ. ಅವರು ಉತ್ತರಮುಖಿಯನ್ನು ಉಪಯೋಗಿಸುತ್ತಿದ್ದರೆಂಬುದಕ್ಕೆ ಒಂದು ಪರ್ಷಿಯನ್ ಆಖ್ಯಾನಕದಲ್ಲಿ (1232ರಲ್ಲಿ ಪ್ರಕಟಿತ). ಆಧಾರ ದೊರೆತಿದೆ. 1282ರಲ್ಲಿ ಪ್ರಕಟವಾದ ಬೈಲಾಕ್ ಕಿಬ್ಡ್ ಜಾಕಿ ಬರೆದ ಮರ್ಚೆಂಟ್ಸ್ ಟ್ರೆಷರ್ ಪುಸ್ತಕದಲ್ಲಿ ಸಿರಿಯನ್ ಸಮುದ್ರದ ನಾವಿಕರು ಉಪಯೋಗಿಸುತ್ತಿದ್ದ ಉತ್ತರಮುಖಿಯ ಸ್ಥೂಲಪರಿಚಯವಿದೆ. ಮರದ ತುಂಡಿಗೋ ಅಥವಾ ದಬ್ಬೆಗೋ ಒಂದು ಕಾಂತಸೂಚಿಯನ್ನು ಸಿಕ್ಕಿಸಿ ಅದನ್ನು ನೀರಿನ ಮೇಲೆ ತೇಲಿಬಿಟ್ಟು ಆ ನಾವಿಕರು ದಿಕ್ಕನ್ನು ಗೊತ್ತುಮಾಡಿಕೊಳ್ಳುತ್ತಿದ್ದರು.
ಪಶ್ಚಿಮ ಯುರೋಪಿನ ನಾವಿಕರು ಉತ್ತರಮುಖಿಯನ್ನು ಉಪಯೋಗಿಸುತ್ತಿದ್ದರೆಂಬ ವಿಷಯ ತಿಳಿದಿರುವುದು ಅಲೆಕ್ಸಾಂಡರ್ ನೆಕಮ್ (1187) ಎಂಬ ಬರೆಹಗಾರನ ಗ್ರಂಥದ ಮೂಲಕ. ಆಕಾಶದಲ್ಲಿ ಮೋಡಗಳು ಕವಿದು ದಿಕ್ಕುತಪ್ಪಿದಾಗ ನಾವಿಕರು ಕಾಂತದಂಡದಿಂದ ಒಂದು ಸೂಜಿಯನ್ನು ಮುಟ್ಟುತ್ತಾರೆ. ಅದು ತಿರುಗಿ ಸ್ಥಿರಸ್ಥಿತಿಗೆ ಬಂದಾಗ ಉತ್ತರ-ದಕ್ಷಿಣಕ್ಕೆ ನಿಲ್ಲುತ್ತದೆ ಎಂದು ಆತ ಬಣ್ಣಿಸಿದ್ದಾನೆ. 13ನೆಯ ಶತಮಾನದ ಕೊನೆಯಲ್ಲಿ ಸ್ಕ್ಯಾಂಡಿನೇವಿಯದ ನಾವಿಕರು ಉತ್ತರಮುಖಿಯನ್ನು ಉಪಯೋಗಿಸುತ್ತಿದ್ದರು.
ಮೊದಲು ನಾವಿಕರು ಒಂದು ಸೂಜಿಗಲ್ಲನ್ನು ಮರದ ತುಂಡಿಗೆ ಸಿಕ್ಕಿಸಿ ಅದನ್ನು ನೀರು ತುಂಬಿದ ಬೋಗುಣಿಗಳಲ್ಲಿ ತೇಲಿಬಿಟ್ಟು ದಿಕ್ಸೂಚಿಯಂತೆ ಉಪಯೋಗಿಸಿರಬೇಕು. ತೇಲುವ ಮರದ ತುಂಡು ಸೂಜಿಗಲ್ಲಿನ ಗುಣದಿಂದ ಯಾವಾಗಲೂ ಉತ್ತರ-ದಕ್ಷಿಣ ದಿಕ್ಕಿಗೆ ನಿಲ್ಲುತ್ತದೆ. ಉತ್ತರ-ದಕ್ಷಿಣ ದಿಕ್ಕನ್ನು ಸೂಚಿಸಲು ಒಂದು ಬಣ್ಣದ ಪ್ರಮಾಣರೇಖೆಯನ್ನು ತಳದಲ್ಲಿ ಎಳೆದು ಬೋಗುಣಿಯನ್ನು ಬೇಕಾದ ಹಾಗೆ ತಿರುಗಿಸಿ ನಾವೆ ಚಲಿಸುವ ದಿಕ್ಕನ್ನು ತಿಳಿಯಬಹುದು. ಎರಡನೆಯ ಹಂತದಲ್ಲಿ ದಿಕ್ಕುಗಳನ್ನು ಗುರುತುಮಾಡಿದ ದುಂಡಾದ ರಟ್ಟುಬಿಲ್ಲೆಯ ಹಿಂಭಾಗಕ್ಕೆ ಕಾಂತ ಸೂಚಿಗಳನ್ನು ಅಂಟಿಸಿ ಅದನ್ನು ನೀರಿನಲ್ಲಿ ತೇಲಿಬಿಟ್ಟು ಉಪಯೋಗಿಸಿರಬೇಕು. ತಿರುಗಣೆಯ ಉಪಯೋಗ ಬಹಳ ಕಾಲ ಕಳೆದ ಮೇಲೆ ಬಂದಿರಬೇಕು.
ಅಮಾಲ್ಫಿ ಬಂದರಿನಿಂದ ನಾವಿಕರು ಮೊದಲು ಮೆಡಿಟರೇನಿಯನ್ ಸಮುದ್ರಕ್ಕೆ ಉತ್ತರಮುಖಿಯನ್ನು ತಂದರೆಂಬ ಪರಂಪರಾಗತ ಐತಿಹ್ಯವೂ ಉಂಟು. ಇದರ ಜೊತೆಗೆ ಅಮಾಲ್ಫಿಯ ಫ್ಲಾವಿವೊ ಗಿವೋಯಿಯ ಎಂಬ ನಾವಿಕನೇ ಉತ್ತರಮುಖಿಯ ನಿರ್ಮಾತೃವೆಂಬ ಕಥೆಯೂ ಬೆರೆತುಕೊಂಡಿದೆ.
ಉತ್ತರಮುಖಿಯ ಮೊದಲ ನಿರ್ಮಾಣ ಮತ್ತು ಉಪಯೋಗದ ಬಗ್ಗೆ ಇಷ್ಟು ಗೊಂದಲವಿದ್ದರೂ 11ನೆಯ ಶತಮಾನದಲ್ಲಿ ಚೀನೀಯರು, 12ನೆಯ ಶತಮಾನದಲ್ಲಿ ಅರಬರು, ಸ್ಕಾಯಂಡಿನೇವಿಯನ್ನರು ಮತ್ತು ಪೂರ್ವ ಯೂರೋಪೀಯನ್ನರು ಅದರ ಉಪಯೋಗವನ್ನು ತಿಳಿದಿದ್ದರೆಂದು ಸಾಮಾನ್ಯವಾಗಿ ಎಲ್ಲರೂ ಒಪ್ಪುತ್ತಾರೆ. ಈ ಯಾವುದೇ ದೇಶದಲ್ಲಾದರೂ ಲಿಖಿತ ಆಧಾರಗಳು ಸಿಕ್ಕುವ ಕಾಲಕ್ಕಿಂತ ಹಿಂದೆಯೇ ಉತ್ತರಮುಖಿಯ ನಿರ್ಮಾಣ ಮತ್ತು ಉಪಯೋಗವಾಗಿರಬಹುದು; ಅದರ ನಿರ್ಮಾಣ ಕಲೆ ಮತ್ತು ಉಪಯೋಗದ ವಿಚಾರ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಕಾಲಕಳೆದಂತೆ ಮುಟ್ಟಿರಲೂಬಹುದು. ಉತ್ತರಮುಖಿಯ ರಚನೆ ಮತ್ತು ಉಪಯೋಗದಲ್ಲಿ ಸುಧಾರಣೆ ಫಕ್ಕನೆ ಆಗಲಿಲ್ಲ. ಹದಿನೆಂಟನೆಯ ಶತಮಾನದ ಆದಿಭಾಗದವರೆಗೆ ಮೆಚ್ಚುವಂಥ ಯಾವ ಕೆಲಸವೂ ನಡೆದಿರಲಿಲ್ಲ. ಕಾಂತಸೂಚಿಗಳಿಗೆ ಬಳಸುತ್ತಿದ್ದ ಕಬ್ಬಿಣ ಉತ್ತಮ ಮಟ್ಟದ್ದಲ್ಲವಾದ್ದರಿಂದ ಅವು ಕಾಂತಗುಣವನ್ನು ಬೇಗ ಕಳೆದುಕೊಂಡುಬಿಡುತ್ತಿದ್ದುವು; ಅವುಗಳ ಕಾಂತ ಮಹತ್ತ್ವದಲ್ಲಿ ಸಮಾನತೆ ಇರುತ್ತಿರಲಿಲ್ಲ. ಆದ್ದರಿಂದ ಅವು ತೋರಿಸುತ್ತಿದ್ದ ದಿಕ್ಕಿನಲ್ಲಿ ಲೋಪವಿರುತ್ತಿತ್ತು. 1766ರಲ್ಲಿ ಗೋವಿನ್ ನೈಟ್ ಎಂಬ ತಂತ್ರಜ್ಞ ಉತ್ತರಮುಖಿಗಳ ತಯಾರಿಕೆಯ ಬ್ರಿಟಿಷ್ ಏಕಸ್ವಾಮ್ಯ ಪಡೆದುಕೊಂಡು ಒಳ್ಳೆಯ ಮಾದರಿಗಳನ್ನು ಮಾರುಕಟ್ಟೆಗೆ ತಂದ. ಉತ್ತಮ ಉಕ್ಕನ್ನು ಕಾಂತಸೂಚಿಗಳಿಗೋಸ್ಕರ ಆತ ಬಳಸಿದ್ದ; ಮತ್ತು ಮಧ್ಯೆ ಟೊಪ್ಪಿಗೆ ಹಾಕಿ ಅವನ್ನು ತಿರುಗಣೆಗಳ ಮೇಲೆ ಅಳವಡಿಸಿದ್ದ. ಹಿಂದಿನ ಯಾವುದೇ ಉತ್ತರಮುಖಿಯಾದರೂ ಇಷ್ಟು ಸುಧಾರಿಸಿದುದಾಗಿರಲಿಲ್ಲ. ರಾಯಲ್ ನೌಕಾಪಡೆಯವರು ಮತ್ತು ಜರ್ಮನ್ ನಾವಿಕರು ಇದರ ಉಪಯೋಗ ತೃಪ್ತಿಕರವಾಗಿದೆ ಎಂದು ಒಪ್ಪಿಕೊಂಡರು.
ಒಂದೇ ಸೂಜಿಯ ಉತ್ತರಮುಖಿಯೇ 1840ರ ವರೆಗೆ ಉಪಯೋಗದಲ್ಲಿತ್ತು. ಆದರೆ 1837ರಲ್ಲಿ ರಾಯಲ್ ನೌಕಾಪಡೆಯವರು ನಾಲ್ಕು ಸೂಜಿಗಳ ಉತ್ತರಮುಖಿಯನ್ನು ಉಪಯೋಗಕ್ಕೆ ತಂದರು. ಇವರ ಮುಖ್ಯ ಉದ್ದೇಶವಾದರೂ ನಾಲ್ಕು ದಿಕ್ಕಿನಲ್ಲಿ ಸಮವಾಗಿ ಜಡಮಾನವನ್ನು ಹಂಚುವುದೇ ಆಗಿತ್ತು. ಇಷ್ಟಾದರೂ ಯಾವ ಉತ್ತರಮುಖಿಯೂ ದೋಷಮುಕ್ತವಾಗಿರಲಿಲ್ಲ. ಹಬೆ ಹಡಗುಗಳ ತಾಕಲಾಟದಲ್ಲಿ ಅವು ಹಾಳಾಗುತ್ತಿದ್ದುವು. 1862ರಲ್ಲಿ ಇ.ಎಸ್.ರಿಚಿ ಮತ್ತು 1866ರಲ್ಲಿ ಡಬ್ಲ್ಯೂ. ಆರ್. ಹ್ಯಾಮಸಿರ್ಲ್ ಅವರು ಹಡಗುಗಳ ತಾಕಲಾಟದಿಂದ ಉಂಟಾಗುವ ಅಪಾಯವನ್ನು ತಪ್ಪಿಸಲು ಮತ್ತು ತಿರುಗಣೆಯ ಮೇಲೆ ಬೀಳುವ ತೂಕವನ್ನು ಕಡಿಮೆ ಮಾಡಲು ಕಾಂತವನ್ನು ಹೊತ್ತ ಸೂಚಿ ಬಿಲ್ಲೆ ಭಾಗಶಃ ನೀರಿನಲ್ಲಿ ತೇಲುವಂತೆ ಮಾಡಿದರು. ಈ ರೀತಿ ದ್ರವ ಉತ್ತರಮುಖಿ ಅಸ್ತಿತ್ವಕ್ಕೆ ಬಂದಿತು. ರಿಚಿ ರಚಿಸಿದ ಉತ್ತರ ಮುಖಿಯನ್ನು ಅಮೆರಿಕದ ಮತ್ತು ರಾಯಲ್ ನೌಕಾಪಡೆಗಳು ಒಪ್ಪಿಕೊಂಡುವು. ಈ ಮಧ್ಯೆ ಲಾರ್ಡ್ ಕೆಲ್ವಿನ್ ನಿರ್ಮಿಸಿದ ಹೊಸತೊಂದು ಉತ್ತರಮುಖಿ ದ್ರವ ಉತ್ತರಮುಖಿಯ ಪ್ರಾಮುಖ್ಯವನ್ನು ಸ್ಪಲ್ಪ ಕಾಲ ತಗ್ಗಿಸಿತು. ಆದರೂ 1906ರಲ್ಲಿ ದ್ರವ ಉತ್ತರಮುಖಿಯನ್ನು ಎಲ್ಲರೂ ಒಪ್ಪಿಕೊಂಡು ಉಪಯೋಗಿಸತೊಡಗಿದರು.
ಉತ್ತರಮುಖಿಗಿರುವ ದಿಕ್ಸೂಚಕಶಕ್ತಿ ಭೂಮಿಯ ಕಾಂತತ್ವದಿಂದ ಉಂಟಾದುದೆಂದು ತಿಳಿಸಿದವ ವಿಲಿಯಂ ಗಿಲ್ಬರ್ಟ್. ಭೂಮಿಯನ್ನು ಒಂದು ದೊಡ್ಡ ಅಯಸ್ಕಾಂತವೆಂದು ಭಾವಿಸಬಹುದು. ಇದರ ಅಕ್ಷ ಭೂಮಿಯ ಆವರ್ತನಾಕ್ಷಕ್ಕೆ 17ºಯಷ್ಟು ವಾಲಿಕೊಂಡಿದೆ.
ಕೇಂದ್ರದಲ್ಲಿ ಕಾಂತಾಕ್ಷ ಆವರ್ತನಾಕ್ಷದಿಂದ ಸು. 1125 ಕಿ.ಮೀ. ದೂರದಲ್ಲಿ ಹಾದುಹೋಗುತ್ತದೆ. ಉತ್ತರಮುಖಿಯ ಕಾಂತಸೂಚಕದ ಅಕ್ಷ ಭೂಕಾಂತ ಮಟ್ಟಬಲಕ್ಕೆ ಸಮಾನಾಂತರವಾಗಿ ನಿಲ್ಲುತ್ತದೆ. ಆ ಸ್ಥಳದಲ್ಲಿ ಕಾಂತಧ್ರುವಗಳ ಮತ್ತು ಭೌಗೋಳಿಕ ಧ್ರುವಗಳ ಮೂಲಕ ಹಾಯುವ ಎರಡು ಲಂಬ ಸಮತಲಗಳನ್ನು ಊಹಿಸಿಕೊಂಡಾಗ ಅವುಗಳ ಮಧ್ಯೆ ಏರ್ಪಡುವ ಕೋನದ ಹೆಸರು ದಿಕ್ಪಾತ ಅಥವಾ ವಿಚಲನೆ (ಡೆಕ್ಲಿನೇಷನ್ ಆರ್ ವೇರಿಯೇಷನ್). ಉತ್ತರಮುಖಿ ತೋರಿಸುವ ದಿಕ್ಕು ಕಾಂತೀಯ ಉತ್ತರ. ಸ್ಥಳದ ವಿಚಲನೆ ಗೊತ್ತಿದ್ದರೆ ಭೌಗೋಳಿಕ ಉತ್ತರವನ್ನು ನಿರ್ಧರಿಸುವುದು ಸುಲಭ. 1700ರ ಸುಮಾರಿಗೆ ನಾವಿಕರಿಗೆ ಸಹಾಯಕವಾಗುವಂಥ ವಿಚಲನೆ ಕೋಷ್ಟಕಗಳು ಸಿಕ್ಕುತ್ತಿದ್ದುವು.
ಉತ್ತರಮುಖಿ ತೋರಿಸುವ ದಿಕ್ಕು ಭೌಗೋಳಿಕ ಉತ್ತರವಲ್ಲವೆಂಬ ತಿಳಿವಳಿಕೆ ಚೀನೀಯರಿಗೆ 11ನೆಯ ಶತಮಾನದಲ್ಲೇ ಇದ್ದಿತೆಂಬ ಕಥೆಗಳೂ ಇವೆ. ಪ್ರಪಂಚದ ಯಾವ ಭಾಗದ ನಾವಿಕರಿಗೇ ಆಗಲಿ ಇಂಥ ತಿಳಿವಳಿಕೆ ಇದ್ದಿತೆಂಬ ವಿಷಯ ಗೊತ್ತಾಗುದು 1544ರಲ್ಲಿ ಜಾರ್ಚ್ ಹಾರ್ಟ್ಮನ್ ಎಂಬ ನಾವಿಕ ಬರೆದ ಪತ್ರದಿಂದ. ವಿಚಲನೆಯನ್ನು ಪತ್ತೆಹಚ್ಚಿದವ ಕೊಲಂಬಸ್ ಎಂದು ಹೇಳುವವರೂ ಇದ್ದಾರೆ. ಆದರೆ ಆತ ತನ್ನ ಮೊದಲ ಸಮುದ್ರಯಾನದಲ್ಲಿ ತೊಡಗುವುದಕ್ಕೆ ಮುಂಚೆಯೇ ಅವನಿಗೆ ಇದರ ವಿಚಾರ ಗೊತ್ತಿದ್ದಿತೆಂಬುದಕ್ಕೆ ಅನೇಕ ಆಧಾರಗಳಿವೆ.
ಹಡಗಿನ ಉತ್ತರಮುಖಿಯ ಲೋಪಗಳು
[ಬದಲಾಯಿಸಿ]ಹಡಗಿನ ನಿರ್ಮಾಣದಲ್ಲಿ ಉಕ್ಕು ಮತ್ತು ಮೆದುಕಬ್ಬಿಣವನ್ನು ಸಾಕಷ್ಟು ಪ್ರಮಾಣದಲ್ಲಿ ಬಳಸುತ್ತಾರೆ. ನಿರ್ಮಾಣದ ಸ್ಥಳ, ನಿರ್ಮಾಣದಲ್ಲಿ ಕಳೆದ ಕಾಲ ಮತ್ತು ಸಮುದ್ರಯಾನದ ಇತಿಹಾಸಕ್ಕನುಗುಣವಾಗಿ ಉಕ್ಕು ಸ್ಥಿರಕಾಂತತೆಯನ್ನು ಪಡೆಯುತ್ತದೆ.
ಭೂಮಿಯ ಕಾಂತಕ್ಷೇತ್ರದ ಪ್ರೇರಣೆಯಿಂದ ಮೆದು ಕಬ್ಬಿಣ ಅಸ್ಥಿರ ಕಾಂತತೆಯನ್ನು ಪಡೆಯುತ್ತದೆ. ಈ ಕಾರಣಗಳಿಂದ ಉತ್ತರ ಮುಖಿಯ ವಾಚನದಲ್ಲಿ ಲೋಪ ಉಂಟಾಗುತ್ತದೆ. ಹಡಗಿನ ಸ್ಥಿರಕಾಂತ ಮಹತ್ತ್ವ ಒ ಆಗಿರಲಿ. ಇದಕ್ಕೂ ಭೂ ಕಾಂತ ಮಟ್ಟಬಲಕ್ಕೂ ಮಧ್ಯೆ ಇರುವ ಕೋನ ಎಂದಿಟ್ಟು ಕೊಳ್ಳೋಣ. ಆಗ ಉತ್ತರ ಮುಖಿಯ ಸೂಜಿಯನ್ನು ತಿರುಗಿಸುವ ಬಲ ವನ್ನು ಅನುಸರಿಸಿ ಹೆಚ್ಚು ಕಡಿಮೆಯಾಗುತ್ತದೆ. ಇದು 0'-180' ಒಳಗೆ ಇರುವಾಗ ಒಂದು ದಿಕ್ಕಿನಲ್ಲೂ 180'-360' ಒಳಗೆ ಇರುವಾಗ ಮತ್ತೊಂದು ದಿಕ್ಕಿನಲ್ಲೂ ವರ್ತಿಸುತ್ತದೆ. ಇದರಿಂದ ಈ ದೋಷದ ಹೆಸರು ಅರ್ಧವೃತ್ತದೋಷ (ಸೆಮಿಸಕುರ್ಯ್‌ಲರ್ ಎರರ್). ಹಡಗು ಉತ್ತರ ಮತ್ತು ದಕ್ಷಿಣ ದಿಕ್ಕಿನಲ್ಲಿ ಚಲಿಸುವಾಗ ಅರ್ಧವೃತ್ತದೋಷದ ಪರಿಮಾಣ ಕಡಿಮೆ. ಪೂರ್ವ ಮತ್ತು ಪಶ್ಚಿಮ ದಿಕ್ಕಿನಲ್ಲಿ ಚಲಿಸುವಾಗ ಇದು ಅಧಿಕ.
ಭೂಕಾಂತ ಕ್ಷೇತ್ರದ ಪ್ರೇರಣೆಯಿಂದ ಮೆದುಕಬ್ಬಿಣ ಪಡೆಯುವ ಕಾಂತ ಮಹತ್ತ್ವವನ್ನು ಅನುಸರಿಸಿ ಹೆಚ್ಚು ಕಡಿಮೆಯಾಗುತ್ತದೆ. ಉತ್ತರ ಮುಖಿಯ ಸೂಜಿಯನ್ನು ತಿರುಗಿಸುವ ಬಲ ಆಗುತ್ತದೆ. ಇದನ್ನು ಎಂದು ಬರೆಯ ಬಹುದು. 180ºಯ ಮೂಲಕ ಬದಲಾಗುವಾಗ ಇದರ ಚಿಹ್ನೆ ಬದಲಾಗುತ್ತದೆ. ಅಂದರೆ 90º ಯ ಮೂಲಕ ಬದಲಾದರೆ ಉತ್ತರ ಮುಖಿಯ ವಾಚನದ ಲೋಪದ ಚಿಹ್ನೆ ಬದಲಾಗುತ್ತದೆ ಎಂದ ಹಾಗಾಯಿತು. ಇದಕ್ಕಾಗಿ ಈ ದೋಷ ದೋಷ ಪಾದಲೋಪ (ಕ್ವಾಡ್ರಂಟಲ್ ಎರರ್) ಎಂದು ಕರೆಯುತ್ತಾರೆ. ಹಡಗು ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ದಿಕ್ಕುಗಳಲ್ಲಿ ಚಲಿಸುವಾಗ ಪಾದದೋಷ ಪರಿಮಾಣ ಕಡಿಮೆ. ವಾಯವ್ಯ, ಈಶಾನ್ಯ, ಆಗ್ನೇಯ ಮತ್ತು ನೈಋತ್ಯ ದಿಕ್ಕಿನಲ್ಲಿ ಹಡಗು ಚಲಿಸುತ್ತಿದ್ದರೆ ಇದು ಅಧಿಕ. ಅರ್ಧವೃತ್ತ ಮತ್ತು ಪಾದದೋಷಗಳನ್ನು ನಿವಾರಿಸಲು ದಂಡಕಾಂತಗಳನ್ನೂ ಮೆದುಕಬ್ಬಿಣದ ಗೋಳಗಳನ್ನೂ ಉಪಯೋಗಿಸುತ್ತಾರೆ.
ನವೀನ ಉತ್ತರಮುಖಿ
[ಬದಲಾಯಿಸಿ]ಅಭ್ರಕದ ಸೂಚಿ ಬಿಲ್ಲೆಯ ಕೆಳಗೆ ಕಾಂತ ಸೂಜಿಗಳ ಕಟ್ಟುಗಳಿವೆ. ಇವನ್ನು ವಿವಿಧ ರೀತಿಯಲ್ಲಿ ಅಳವಡಿಸುವುದುಂಟು. ಯಾವುದೇ ರೀತಿಯ ರಚನೆಯಾದರೂ ಅದು ದಿಕ್ಸೂಚನ ಬಲದ ಪ್ರಭಾವಕ್ಕೆ ಅತಿನಿಕಟವಾಗಿ ಒಳಗಾಗುವಂತಿರಬೇಕು. ಬೋಗುಣಿಯ ಮಧ್ಯೆ ಲಂಬವಾಗಿ ನಿಂತಿರುವ ಜ್ಯೂಯಲ್ ಇರುವ ತಿರುಗಣೆಯ ಮೇಲೆ ಗುರುತ್ವ ಕೇಂದ್ರ ಸರಿಯಾಗಿ ಬರುವಂತೆ ಸೂಚಿಬಿಲ್ಲೆ ಇದೆ. ಬೋಗುಣಿಯಲ್ಲಿ ತುಂಬಿರುವ ನೀರು ಮತ್ತು ಆಲ್ಕೊಹಾಲ್ ಮಿಶ್ರಣದಲ್ಲಿ ಸೂಚಿಬಿಲ್ಲೆ ಭಾಗಶಃ ತೇಲುತ್ತದೆ. ಇದರಿಂದ ತಿರುಗಣೆಯ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಬೋಗುಣಿ ಜಿಂಬಾಲುಗಳ ಮೇಲೆ ನಿಂತಿದೆ. ಹಡಗು ಹೇಗೆ ಓಲಾಡಿದರೂ ಸೂಚಿಬಿಲ್ಲೆ ಮಾತ್ರ ಮಟ್ಟತಲದಲ್ಲಿರುತ್ತದೆ. ಬೋಗುಣಿಯಲ್ಲಿರುವ ದ್ರವ ಸೂಚಿಬಿಲ್ಲೆಯ ಕಂಪನಗಳನ್ನು ಶಮನಗೊಳಿಸುತ್ತದೆ.
ಆದ್ದರಿಂದ ದಿಕ್ಸೂಚನೆಯಲ್ಲಿ ವಿಳಂಬವಾಗುವುದಿಲ್ಲ. ಹಡಗಿನ ಚಲನದಿಕ್ಕನ್ನು ಬೋಗುಣಿಯ ಒಳಮೈಯಿಂದ ಹೊರಗೆ ಚಾಚಿರುವ ದಾಂಡಿಗ ವಾಚಕ (ಐ) ತಿಳಿಸುತ್ತದೆ. ಇದು ಹಡಗಿನ ಮಧ್ಯರೇಖೆಗೆ ಸಮಾನಾಂತರವಾಗಿದೆ. ಜಿಂಬಾಲುಗಳಿರುವ ಪೀಠದ ಹೆಸರು ಬಿನಕಲ್. ಹಡಗಿನ ಕಾಂತತೆಯಿಂದ ಉತ್ತರಮುಖಿಯ ವಾಚನದಲ್ಲಿ ಕಾಣುವ ಲೋಪಗಳನ್ನು ನಿವಾರಿಸಲು ಉಪಯೋಗಿಸುವ ಕಾಂತದಂಡಗಳನ್ನು ಮತ್ತು ಮೆದುಕಬ್ಬಿಣದ ಗೋಳಗಳನ್ನು ಜೋಡಿಸಲು ಅನುಕೂಲವಾಗುವಂತೆ ಇದರಲ್ಲಿ ತಕ್ಕ ಜಾಗಗಳಿವೆ. ಸೂಚಿಬಿಲ್ಲೆಯ ವೃತ್ತಪಟ್ಟಿಯಲ್ಲಿ 360 ಸಮಭಾಗಗಳಿವೆ. ಹಡಗಿನ ಚಲನ ದಿಕ್ಕಿನಲ್ಲಿ ಸೂಕ್ಷ್ಮ ಬದಲಾವಣೆ ಮಾಡುವುದು ಈಗ ಸಾಧ್ಯ. ಹಿಂದೆ ಯಾನ ಕೌಶಲ ಇಷ್ಟು ಸುಧಾರಿಸಿರಲಿಲ್ಲ. ಆದ್ದರಿಂದ ಆಗ ಸೂಚಿಬಿಲ್ಲೆಯಲ್ಲಿ ನಾಲ್ಕು ದಿಕ್ಕುಗಳನ್ನು ಮಾತ್ರ ತೋರಿಸಿರುತ್ತಿದ್ದರು. ಯಾನಕೌಶಲ ಸುಧಾರಿಸದೆ ಪಟ್ಟಿಯ ದಿಕ್ಕುಗಳ ಸಂಖ್ಯೆ ಹೆಚ್ಚಿದರೆ ಅದು ಅರ್ಥಪೂರ್ಣವಾಗಿರುವುದಿಲ್ಲ. ಎಂಟು ಮತ್ತು ಮೂವತ್ತೆರಡು ದಿಕ್ಕುಗಳನ್ನು ತೋರಿಸುವುದು ಮಧ್ಯಕಾಲದಲ್ಲಿ ವಾಡಿಕೆಗೆ ಬಂತು. ಇವುಗಳಿಗೆ ಸೂಚಿ ಬಿಂದುಗಳೆಂದು (ಕಾಂಪಸ್ ಪಾಯಿಂಟ್ಸ್) ಹೆಸರು.
ಉತ್ತರಮುಖಿಯ ಬೋಗುಣಿಯ ತಳ ತೂಕವಾಗಿದೆ. ಹೀಗಿರುವುದು ಆವಶ್ಯಕವೂ ಆಗಿದೆ. ಆದರೆ ಹಡಗು ವೇಗೋತ್ಕರ್ಷಗೊಂಡು ಚಲಿಸಲಾರಂಭಿಸಿದರೆ ಬೋಗುಣಿ ನಿಜವಾದ ಲಂಬದಲ್ಲಿ ನಿಲ್ಲುವುದಿಲ್ಲ. ಅದು ಗುರುತ್ವ ಮತ್ತು ಹಡಗಿನ ವೇಗೋತ್ಕರ್ಷಗಳ ಫಲಿತದ ಜಾಡಿನಲ್ಲಿ ನಿಲ್ಲುತ್ತದೆ. ಆಗ ಉತ್ತರಮುಖಿಯ ವಾಚನದಲ್ಲಿ ಲೋಪ ಉಂಟಾಗುತ್ತದೆ. ಸಾಧಾರಣ ವೇಗದಲ್ಲಿ ಚಲಿಸುವ ಹಡಗುಗಳಲ್ಲಿ ವೇಗೋತ್ಕರ್ಷದಿಂದ ವಾಚನದಲ್ಲಿ ಉಂಟಾಗುವ ಲೋಪ ಅಂಥ ಅಪಾಯಕ್ಕೇನೂ ದಾರಿ ಮಾಡಿಕೊಡುವುದಿಲ್ಲ. ಆದರೆ ವೇಗದಿಂದ ಚಲಿಸುವ ಹಡಗುಗಳಲ್ಲಿ ಇದನ್ನು ಕಡೆಗಣಿಸುವಂತಿಲ್ಲ. ಇದರ ನಿವಾರಣೆಗಾಗಿ ಗೈರೊಸ್ಕೋಪಿನ ನೆರವಿನಿಂದ ಯಾವಾಗಲೂ ಮಟ್ಟಸವಾಗಿಯೇ ನಿಲ್ಲುವ ಅಟ್ಟಣೆಯ ಮೇಲೆ ಜಿಂಬಾಲುಗಳನ್ನು ಜೋಡಿಸುತ್ತಾರೆ. ಇಂಥ ವ್ಯವಸ್ಥೆಯನ್ನುಳ್ಳ ಉತ್ತರ ಮುಖಿಗಳ ಹೆಸರು ಗೈರೊಕಾಂತ ದಿಕ್ಸೂಚಿಗಳು.
ವಿಮಾನಗಳ ಉತ್ತರಮುಖಿ
[ಬದಲಾಯಿಸಿ]ವಿಮಾನಗಳು ಅತಿವೇಗದಿಂದ ಚಲಿಸುತ್ತವೆ, ಮತ್ತು ಉರುಟಣೆ ಹೊಡೆಯುತ್ತವೆ. ಆದ್ದರಿಂದ ಸಾಮಾನ್ಯ ಉತ್ತರಮುಖಿಗಳನ್ನು ಇಲ್ಲಿ ಉಪಯೋಗಿಸುವುದಕ್ಕಾಗುವುದಿಲ್ಲ. ಗೈರೊಕಾಂತ ದಿಕ್ಸೂಚಿಗಳನ್ನು ಉಪಯೋಗಿಸಬಹುದು. ಆದರೆ ಅವುಗಳ ಗಾತ್ರ ಮತ್ತು ತೂಕ ಹೆಚ್ಚು. ಅವುಗಳ ಸೂಚಿಬಿಲ್ಲೆಯ ಆವರ್ತಕಾಲವೂ ತಕ್ಕುದಾಗಿರುವುದಿಲ್ಲ. ಕಾಂತಸೂಜಿಗಳ ಕಟ್ಟಿಗೆ ಬದಲಾಗಿ ಹೆಚ್ಚು ಕಾಂತಮಹತ್ತ್ವವುಳ್ಳ ಗಿಡ್ಡಕಾಂತದಂಡಗಳನ್ನು ಸೂಚಿಬಿಲ್ಲೆಯಿಂದ ದ್ರವದಲ್ಲಿ ನೇತು ಹಾಕಿದರೆ ಆವರ್ತಕಾಲ ತಗ್ಗುತ್ತದೆ. ನೇತುಹಾಕಲು ಬಳಸುವ ಕಾಂತತೆಯಿಲ್ಲದ ತಂತಿಗಳಲ್ಲಿ ಹರಿಯುವ ಸುರುಳಿ (ಎಡ್ಡಿ) ವಿದ್ಯುತ್ ಪ್ರವಾಹದಿಂದ ಕಂಪನಗಳು ಅತಿಬೇಗ ಶಮನಗೊಳ್ಳುತ್ತವೆ. ಹೀಗಿದ್ದರೆ ವಿಮಾನ ಉರುಟಣೆ ಹೊಡೆದರೂ ಸೂಚಿಬಿಲ್ಲೆ ಕ್ಷಣಾರ್ಧದಲ್ಲಿ ತಿರುಗಿ ಸಮಸ್ಥಿತಿಗೆ ಬರುತ್ತದೆ. ಇಂಥ ಉತ್ತರಮುಖಿಗಳ ಹೆಸರು ಅನಿಯತಕಾಲಿಕ (ಎಪೀರಿಯಾಡಿಕ್) ಉತ್ತರಮುಖಿಗಳು. ವಿಮಾನ ಚಲನವೇಗ ಮತ್ತು ಉರುಟಣ ಸಾಮರ್ಥ್ಯ ಹೆಚ್ಚುತ್ತಲೇ ಹೋಗಿವೆ. ಗೈರೊಕಾಂತ ದಿಕ್ಸೂಚಿಯಾಗಲೀ ಅನಿಯತಕಾಲಿಕ ಉತ್ತರಮುಖಿಯಾಗಲೀ ಚಲನವೇಗ ಮತ್ತು ಉರುಟಣೆಯಲ್ಲಿ ಹೆಚ್ಚಳಿಕೆ ಇರುವ ವಿಮಾನಗಳಲ್ಲಿ ಉಪಯೋಗಕ್ಕೆ ಬರುವುದಿಲ್ಲ. ಇಲ್ಲಿ ಉಪಯೋಗಿಸುವ ಉತ್ತರಮುಖಿಯ ಹೆಸರು ಗೈರೋಫ್ಲಕ್ಸ್ ಗೇಟ್ ದಿಕ್ಸೂಚಿ. ಇದು ಗೈರೊಕಾಂತ ದಿಕ್ಸೂಚಿಯ ಅತಿ ಸುಧಾರಿತ ಮಾದರಿ. ಇದರಲ್ಲಿ ದಿಕ್ಸೂಚಕ ರಚನೆ ಸ್ಥಾಯೀ ಗೈರೊಸ್ಕೋಪಿನ ನೆರವಿನಿಂದ ಯಾವಾಗಲೂ ಮಟ್ಟಸವಾಗಿಯೇ ನಿಲ್ಲುತ್ತದೆ. ಉರುಟಣೆಯಿಂದ ಇದರ ಮೇಲೆ ಯಾವ ಪರಿಣಾಮವೂ ಆಗುವುದಿಲ್ಲ. ಒಂದು ಎಲೆಕ್ಟ್ರಾನಿಕ್ ಉತ್ತೇಜಕ ದಿಕ್ಸೂಚಕ ರಚನೆಯ ಆವರಣದಲ್ಲಿ ಭೂಕಾಂತಮಟ್ಟ ಬಲವನ್ನು ವಿಶೇಷವಾಗಿ ಹೆಚ್ಚಿಸುತ್ತದೆ. ಆದ್ದರಿಂದ ದಿಕ್ಸೂಚಿಯ ಕೆಲಸ ಸಮರ್ಪಕವಾಗಿ ನಡೆಯುತ್ತದೆ. ಈ ಉಪಕರಣ ವನ್ನು ಭೂಕಾಂತ ಧ್ರುವಗಳಿಗೆ 320 ಕಿ.ಮೀ. ಸಮೀಪವಿರುವಾಗಲೂ ನಿಶ್ಚಿಂತೆಯಿಂದ ಉಪಯೋಗಿಸಬಹುದು. ಬೇರೆ ಉತ್ತರಮುಖಿಗಳ ವಾಚಕಗಳಾದರೋ ಧ್ರುವಗಳಿಗೆ 1,920 ಕಿಮೀ. ಒಳಗೆ ಕರಾರುವಾಕ್ಕಾಗಿರುವುದಿಲ್ಲ.
ಭೂವಿಜ್ಞಾನದಲ್ಲಿ
[ಬದಲಾಯಿಸಿ]ಉತ್ತರಮುಖಿಯಲ್ಲಿ ಎರಡು ವಿಧ: 1 ಮೋಜಣಿಗೆ (ಸರ್ವೆ) ಉಪಯೋಗಿಸುವ ಉತ್ತರಮುಖಿ. 2 ಮುಪ್ಪಟ್ಟಿಯ ಉತ್ತರಮುಖಿ (ಆಶ್ರಗ ಕಂಪಾಸ್). ಮೋಜಣಿಗಾರರ ಉತ್ತರಮುಖಿಯನ್ನು ಸಾಮಾನ್ಯವಾಗಿ ಗಣಿಮೊದಲಾದುವನ್ನು ಮೋಜಣಿ ಮಾಡುವಾಗ, ಕೆಲವುವೇಳೆ ಶೃಂಗಕೋನ ಮತ್ತು ಸಮತಲಕೋನಗಳನ್ನು ಅಳೆಯಲು ಉಪಯೋಗಿಸುತ್ತಾರೆ.
ಸೈನ್ಯಖಾತೆಯಲ್ಲಿ
[ಬದಲಾಯಿಸಿ]ನೆಲ ಪಡೆಯ ಸೈನಿಕನ ಶಿಕ್ಷಣವಿಭಾಗಗಳಲ್ಲಿ ಭೂಪಟವೀಕ್ಷಣೆ ಒಂದು ಮುಖ್ಯಾಂಶ. ಹೊಸನೆಲದಲ್ಲಿ ತನ್ನ ಇರವನ್ನು ದೃಢಪಡಿಸಿಕೊಳ್ಳಲು ತಾನು ಕಂಡ ಭಾಗದ ಸೈನಿಕಮಾಹಿತಿಗಳನ್ನು ವರಿಷ್ಠಾಧಿಕಾರಿಗಳಿಗೆ ಸ್ಪಷ್ಟವಾಗಿ ತಿಳಿಯಪಡಿಸಲು ಈ ಶಿಕ್ಷಣ ಬಲು ಅವಶ್ಯ. ಇದರಲ್ಲಿ ಭೂಪಟದೊಡನೆ ಸೈನಿಕ ಬಳಸುವ ಇನ್ನೊಂದು ಅತಿಮುಖ್ಯ ಉಪಕರಣ ಉತ್ತರಮುಖಿ (ಪ್ರಿಸ್ಮ್ಯಾಟಿಕ್ ಕಂಪಾಸ್). ಉಪಕರಣಕ್ಕೆ ಆಳವಡಿಸಿರುವ ಅಶ್ರಗ ಆಕಾರದ ಚೌಕಟ್ಟಿನೊಳಗೆ ಭೂತಕನ್ನಡಿ ಇದೆ. ನೋಡಬೇಕೆಂದಿರುವ ವಸ್ತುವನ್ನು ಈ ಭೂತಕನ್ನಡಿ ಮೂಲಕ ದೃಷ್ಟಿಸಿದಾಗ ವಸ್ತುವಿನ ಕಾಂತ ದಿಕ್ಕನ್ನು ಅದರೊಂದಿಗೇ ಕಾಣುತ್ತದೆ-ಆದ ಕಾರಣ ಉಪಕರಣದ ರಚನೆಯಲ್ಲಿನ ವೈಶಿಷ್ಟ್ಯ. ಹೀಗೆ ವಸ್ತು ಎಲ್ಲೇ ಇದ್ದರೂ ಅದರ ಕಾಂತ ದಿಕ್ಕನ್ನುವನ್ನು ಸೈನಿಕ ತನ್ನ ನೆಲೆಯಿಂದಲೇ ಅಳೆಯಬಲ್ಲ. ಇದನ್ನು ಮುಂದೆ ಕೆಲವು ಸುಲಭ ಗಣನೆಗಳಿಂದ ಬೇಕಾದಂತೆ ಪರಿವರ್ತಿಸಿಕೊಂಡು ಭೂಪಟದ ಮೇಲೆ ತನ್ನ ಇರವನ್ನು ಕಂಡುಕೊಳ್ಳಬಹುದು. ಇದರ ವಿಪರ್ಯಯಕ್ರಮವೂ ಬೇಕಾಗುತ್ತದೆ. ಎಂದರೆ, ಸೈನಿಕನ ನೆಲೆ ಮತ್ತು ಉದ್ದೇಶಿತ ಗುರಿಯ ನೆಲೆ ಭೂಪಟದ ಮೇಲೆ ಗೊತ್ತಿದೆ. ಆದರೆ ನೆಲದ ಮೇಲೆ ಗುರಿಗೆ ಸಾಗುವುದು ಹೇಗೆ? ಆಗ ಭೂಪಟದಲ್ಲಿ ಗುರಿಯ ದಿಕ್ಕನ್ನುವನ್ನು ಅಳೆದು ಅದನ್ನು ಕಾಂತ ದಿಕ್ಕನ್ನುಕ್ಕೆ ಸುಲಭ ಗಣನೆಗಳಿಂದ ಪರಿವರ್ತಿಸಿ ದೊರೆಯುವ ಬೆಲೆಗೆ ಉತ್ತರಮುಖಿಯನ್ನು ಅಳವಡಿಸಿ ಅದು ತೋರುವ ದಿಕ್ಕಿಗೆ ಗಮಿಸಬೇಕು. ಮೊದಲಿನ ಕ್ರಮದ ಹೆಸರು ನೆಲದಿಂದ ಭೂಪಟಕ್ಕೆ; ಎರಡನೆಯದರ ಹೆಸರು ಭೂಪಟದಿಂದ ನೆಲಕ್ಕೆ.
ಉಪಯೋಗಗಳು
[ಬದಲಾಯಿಸಿ]ಪ್ರಾಚೀನ ಕಾಲದಲ್ಲಿ ದಿಕ್ಸೂಚಿಯ ಹೆಚ್ಚಿನ ಉಪಯೋಗವನ್ನು ನಾವಿಕರು ಮಾಡುತ್ತಿದ್ದರು.ಈಗ ಇದು ಹಲವಾರು ಉಪಯೋಗಗಳನ್ನು ಹೊಂದಿದೆ.ದಿಕ್ಕನ್ನು ಗುರುತಿಸಲು,ಕಟ್ಟಡಗಳ ನಿರ್ಮಾಣದಲ್ಲಿ,ಖಗೋಳ ವಿಜ್ಞಾನದಲ್ಲಿ,ಗಣಿಗಾರಿಕೆ ಮುಂತಾದ ಹಲವಾರು ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಉಪಯೋಗದಲ್ಲಿದೆ.
ಛಾಯಾಂಕನ
[ಬದಲಾಯಿಸಿ]-
Compass with 400 grads division and conversion table
-
Swiss army compass with mils divisions
-
Compass with prism (inverted graduation)
-
Compass with prism (bearing 220° through eyepiece)
-
Land surveyor compass with clinometer
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- How to Make a Compass Archived 2008-12-30 ವೇಬ್ಯಾಕ್ ಮೆಷಿನ್ ನಲ್ಲಿ. Audio slideshow from the National High Magnetic Field Laboratory
- How to Make a Compass Archived 2008-12-30 ವೇಬ್ಯಾಕ್ ಮೆಷಿನ್ ನಲ್ಲಿ. Audio slideshow from the National High Magnetic Field Laboratory
- Paul J. Gans, The Medieval Technology Pages: Compass Archived 2003-12-16 ವೇಬ್ಯಾಕ್ ಮೆಷಿನ್ ನಲ್ಲಿ.
- Evening Lecture To The British Association At The Southampton Meeting on Friday, August 25, 1882 [೧]. Refers to compass correction by Fourier series.
- Arrick Robots. Robotics.com Example implementation for digital solid-state compass. ARobot Digital Compass App Note Archived 2006-07-13 ವೇಬ್ಯಾಕ್ ಮೆಷಿನ್ ನಲ್ಲಿ.
- How a tilt sensor works. David Pheifer [೨] Archived 2007-01-10 ವೇಬ್ಯಾಕ್ ಮೆಷಿನ್ ನಲ್ಲಿ.
- The Gear Junkie Archived 2009-04-29 ವೇಬ್ಯಾಕ್ ಮೆಷಿನ್ ನಲ್ಲಿ. - review of two orienteering thumb compasses
- The good compass video - A video about important abilities a compass should have (narration in German)
- COMPASSIPEDIA, the great virtual Compass Museum gives comprehensive information about all sorts of compasses and how to use them.
- Geography fieldwork