ತಾಳಗುಂದ ಶಾಸನ
ತಾಳಗುಂದ ಶಾಸನಗಳು ಕನ್ನಡದ ಹಳೆಯ ಕಲ್ಲಿನ ಶಾಸನಗಳು. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ತಾಳಗುಂದ ಗ್ರಾಮದಲ್ಲಿವೆ. ಇಲ್ಲಿನ ಒಂದು ಶಾಸನವು ಈವರೆಗೆ ಸಿಕ್ಕಿರುವ ಕನ್ನಡದ ಅತಿಹಳೆಯ ಶಾಸನವೆಂದು ಅಧಿಕೃತವಾಗಿ ಪ್ರಕಟಿಸಲಾಗಿದೆ.[೧] ಅದುವರೆಗೂ ಹಲ್ಮಿಡಿ ಶಾಸನವು ಕನ್ನಡದ ಅತಿಹಳೆಯ ಶಾಸನವೆಂದು ಪರಿಗಣಿತವಾಗಿತ್ತು. ಆದರೆ ಅದಕ್ಕಿಂತಲೂ ಇದು ಹಳೆಯದೆಂದು ಭಾರತೀಯ ಪುರಾತತ್ವ ಇಲಾಖೆ ಪ್ರಕಟಿಸಿದೆ. ಈ ಮೂಲಕ ಕನ್ನಡ ಬರವಣಿಗೆಯ ಇತಿಹಾಸವು ಸುಮಾರು ಒಂದು ನೂರು ವರ್ಷಗಳಷ್ಟು ಹಿಂದೆ ಹೋದಂತಾಗಿದೆ.[೨][೩]
ಶಾಸನದ ಇತಿಹಾಸ
[ಬದಲಾಯಿಸಿ]ತಾಳಗುಂದದ ಪ್ರಣವಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಪುರಾತತ್ವ ಇಲಾಖೆಯಿಂದ ೨೦೧೩-೧೪ರಲ್ಲಿ ನಡೆಸಿದ ಉತ್ಖನನದ ವೇಳೆ ಈ ಶಾಸನ ಪತ್ತೆಯಾಗಿತ್ತು. ಇದರ ಅಧ್ಯಯನಕ್ಕೆ ಸಾಕಷ್ಟು ಸಮಯ ತೆಗೆದುಕೊಂಡ ಪುರಾತತ್ವ ಇಲಾಖೆ ಇದರ ಪ್ರಾಚೀನತೆಯ ಅಂಶಗಳನ್ನು ಬಹಿರಂಗಪಡಿಸಿತು. ಇದರಂತೆ, ಈ ಶಾಸನವೇ ಕನ್ನಡದ ಮೊದಲ ಶಾಸನವೆಂದು ಪರಿಗಣಿಸಲ್ಪಟ್ಟಿದೆ. ಈ ಶಾಸನ ರಚನೆಯಾದ ಅವಧಿ ಕ್ರಿ.ಶ. ೩೭೦-೪೫೦ ಇರಬಹುದೆಂದು ಅಧ್ಯಯನದಿಂದ ತಿಳಿದುಬಂದಿದೆ. ಈ ಶಾಸನ ಕದಂಬ ದೊರೆ ಶಾಂತಿವರ್ಮನ ಕಾಲಕ್ಕಿಂತಲೂ ಹಳೆಯದೆಂಬ ಅಂಶ ಬೆಳಕಿಗೆ ಬಂದಿದೆ.
ಇನಾಮು ಭೂಮಿ ವಿವರ
[ಬದಲಾಯಿಸಿ]ವಜಿನಾಗ ಎಂಬ ಅಂಬಿಗನಿಗೆ ಕದಂಬ ದೊರೆಯು ಭೂಮಿಯನ್ನು ಇನಾಮು ನೀಡಿದ್ದ ಅಂಶವನ್ನು ಈ ಶಾಸನ ವಿವರಿಸುತ್ತದೆ. ಪ್ರಣವಲಿಂಗೇಶ್ವರ ದೇವಾಲಯದ ಉತ್ತರ ಭಾಗದಲ್ಲಿ ಇದು ಪತ್ತೆಯಾಗಿತ್ತು. ತುಂಡರಿಸಿರುವ ಏಳು ಸಾಲುಗಳಲ್ಲಿ ಕನ್ನಡ ಪದಗಳ ಬಳಕೆ ಮಾಡಿರುವುದರಿಂದ ಶಾಸನ ಶಾಸ್ತ್ರದ ಪ್ರಕಾರ ಇದನ್ನು ಕನ್ನಡ ಶಾಸನ ಎಂದು ಒಪ್ಪಿಕೊಳ್ಳಬೇಕಾಗುತ್ತದೆ ಎಂಬ ಅಂಶವನ್ನು ಪುರಾತತ್ವ ಇಲಾಖೆ ದೃಢಪಡಿಸಿದೆ.[೪]
ಕದಂಬ ಸಾಮ್ರಾಜ್ಯ
[ಬದಲಾಯಿಸಿ]ಕ್ರಿ.ಶ. ೩೪೫ರಲ್ಲಿ ಮಯೂರವರ್ಮ ಕದಂಬ ಸಾಮ್ರಾಜ್ಯವನ್ನು ಸ್ಥಾಪಿಸಿದ್ದ. ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ಸಮೀಪದ ಬನವಾಸಿ ಕದಂಬರ ರಾಜಧಾನಿಯಾಗಿತ್ತು. ಮಯೂರವರ್ಮ ೩೬೫ರಲ್ಲಿ ಮೃತಪಟ್ಟ ನಂತರ ಕಂಗವರ್ಮ, ಭಗೀರಥ ವರ್ಮ, ರಘುಪತಿ ವರ್ಮ ಮುಂತಾದವರು ಕ್ರಿ.ಶ. ೩೬೫-೪೨೫ರವರೆಗೂ ಆಳ್ವಿಕೆ ನಡೆಸಿದ್ದರು. ಇದೇ ಅವಧಿಯಲ್ಲಿ ಶಾಸನ ಕೆತ್ತಿಸಲಾಗಿತ್ತು ಎಂಬುದು ಶಾಸನ ಶಾಸ್ತ್ರ ತಜ್ಞರ ಅನಿಸಿಕೆ.
ಪ್ರಾಚೀನತೆ ಬಗ್ಗೆ ಅನುಮಾನಗಳು
[ಬದಲಾಯಿಸಿ]ಅತಿ ಹಳೆಯ ಶಾಸನವೆಂದು ಘೋಷಿತವಾಗಿರುವ ಶಾಸನದಲ್ಲಿ ಕೇವಲ ಎರಡೇ ಸಾಲುಗಳಿರುವುದರಿಂದ ಇದನ್ನು ಮರುಪರಿಶೀಲನೆಗೊಳಿಸಬೇಕೆಂಬ ಅಭಿಪ್ರಾಯಗಳೂ ಕೇಳಿಬಂದಿದೆ.[೫]
ಉಲ್ಲೇಖಗಳು
[ಬದಲಾಯಿಸಿ]- ↑ http://asi.nic.in/PDF_data/IAR_2013_14.pdf
- ↑ KANNADA A CENTURY OLDER THAN BELIEVED, Bangalore Mirror Bureau | Jan 13, 2017
- ↑ Rewriting Kannada History: Earliest Inscription Of The Language Found At Talagunda, Swarajya
- ↑ ಮೊದಲ ಕನ್ನಡ ಶಾಸನ ‘ತಾಳಗುಂದ ಶಾಸನ’ ಪ್ರಜಾವಾಣಿ ವಾರ್ತೆ 12 Jan, 201
- ↑ ಹಲ್ಮಿಡಿಗಿಂತಲೂ ಹಳೇ ಶಾಸನ? Archived 2017-12-23 ವೇಬ್ಯಾಕ್ ಮೆಷಿನ್ ನಲ್ಲಿ., 17.01.2017, ವಿಜಯವಾಣಿ ಸುದ್ದಿಜಾಲ
ಹೊರಸಂಪರ್ಕ ಕೊಂಡಿಗಳು
[ಬದಲಾಯಿಸಿ]- Inscribed Pillar, Talagunda Archived 2017-11-11 ವೇಬ್ಯಾಕ್ ಮೆಷಿನ್ ನಲ್ಲಿ.