ವಿಷಯಕ್ಕೆ ಹೋಗು

ಗುರು (ಗ್ರಹ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಗುರು ಗ್ರಹ ಇಂದ ಪುನರ್ನಿರ್ದೇಶಿತ)
ಗುರು ♃
Click for full caption.
Click for full caption.

Click image for description
ಕಕ್ಷೆಯ ಗುಣಗಳು
ದೀರ್ಘಾರ್ಧ ಅಕ್ಷ 778,412,027 ಕಿ.ಮೀ.
5.203 363 01 AU
ಕಕ್ಷೆಯ ಪರಿಧಿ 4.888 Tm
32.675 AU
ಕಕ್ಷೀಯ ಕೇಂದ್ರ ಚ್ಯುತಿ 0.048 392 66
Perihelion 740,742,598 ಕಿ.ಮೀ.
4.951 558 43 AU
Aphelion 816,081,455 ಕಿ.ಮೀ.
5.455 167 59 AU
ಕಕ್ಷೀಯ ಪರಿಭ್ರಮಣ ಕಾಲ 4333.2867 d
(11.86 a)
Synodic period 398.88 d
ಸರಾಸರಿ ಕಕ್ಷಾ ವೇಗ 13.056 ಕಿ.ಮೀ./ಪ್ರತಿ ಕ್ಷಣ
ಗರಿಷ್ಠ ಕಕ್ಷಾ ವೇಗ 13.712 ಕಿ.ಮೀ./ಪ್ರತಿ ಕ್ಷಣ
ಕನಿಷ್ಠ ಕಕ್ಷಾ ವೇಗ 12.446 ಕಿ.ಮೀ./ಪ್ರತಿ ಕ್ಷಣ
ಓರೆ 1.305 30°
(ಸೂರ್ಯನ ಸಮಭಾಜಕ ರೇಖೆಗೆ 6.09°)
Longitude of the
ascending node
100.556 15°
Argument of the
perihelion
274.197 70°
ನೈಸರ್ಗಿಕ ಉಪಗ್ರಹಗಳ ಸಂಖ್ಯೆ 63
ಭೌತಿಕ ಗುಣಲಕ್ಷಣಗಳು
ಸಮಭಾಜಕ ರೇಖೆಯ ವ್ಯಾಸ 142,984 ಕಿ.ಮೀ. [೧]
(11.209 Earths)
ಧ್ರುವಗಳ ಮೂಲಕ ವ್ಯಾಸ 133,709 ಕಿ.ಮೀ.
(10.517 Earths)
Oblateness 0.064 87
ಮೇಲ್ಮೈ ವಿಸ್ತೀರ್ಣ 6.14×1010 ಕಿ.ಮೀ.2
(120.5 Earths)
ಗಾತ್ರ 1.431×1015 ಕಿ.ಮೀ.3
(1321.3 Earths)
ದ್ರವ್ಯರಾಶಿ 1.899×1027 kg
(317.8 Earths)
ಸರಾಸರಿ ಸಾಂದ್ರತೆ 1.326 g/cm3
ಸಮಭಾಜಕದ ಬಳಿ ಗುರುತ್ವ 23.12 m/s2
(2.358 gee)
ಮುಕ್ತಿ ವೇಗ 59.54 ಕಿ.ಮೀ./ಪ್ರತಿ ಕ್ಷಣ
ಅಕ್ಷೀಯ ಪರಿಭ್ರಮಣ ಕಾಲ 0.413 538 021 d
(9 h 55 min 29.685 s)[೨]
ಅಕ್ಷೀಯ ಪರಿಭ್ರಮಣ ವೇಗ 12.6 ಕಿ.ಮೀ./ಪ್ರತಿ ಕ್ಷಣ = 45,300 ಕಿ.ಮೀ./ಘಂ.
(ಸಮಭಾಜಕದಲ್ಲಿ)
ಅಕ್ಷದ ಓರೆ 3.13°
Right ascension
of North pole
268.05° (17 h 52 min 12 s)
Declination 64.49°
ಪ್ರತಿಫಲನಾಂಶ 0.52
ಮೇಲ್ಮೈ ತಾಪಮಾನ
min mean max
110 K 152 K N/A
Adjective Jovian
Atmospheric characteristics
ವಾತಾವರಣದ ಒತ್ತಡ 70 kPa
ಜಲಜನಕ ~86%
Helium ~14%
Methane 0.1%
ನೀರಾವಿ 0.1%
Ammonia 0.02%
Ethane 0.0002%
Phosphine 0.0001%
Hydrogen sulfide <0.00010%

ಗುರು - ಇದು ಸೂರ್ಯನಿಂದ ೫ನೇ ಗ್ರಹ ಮತ್ತು ಸೌರ ಮಂಡಲದಲ್ಲೇ ಅತಿ ದೊಡ್ಡ ಗ್ರಹ. ಗುರು ಮತ್ತು ಉಳಿದ ಅನಿಲರೂಪಿಗಳಾದ ಶನಿ, ಯುರೇನಸ್, ಮತ್ತು ನೆಪ್ಚೂನ್ಗಳನ್ನು ಕೆಲವೊಮ್ಮೆ "ಜೋವಿಯನ್ ಗ್ರಹ"ಗಳೆಂದು ಕರೆಯಲಾಗುತ್ತದೆ.

ಮೇಲ್ನೋಟ

[ಬದಲಾಯಿಸಿ]

ಸೂರ್ಯ, ಚಂದ್ರ ಮತ್ತು ಶುಕ್ರ ಗ್ರಹಗಳ ನಂತರ, ಗುರು ಗ್ರಹವು ಸಾಮಾನ್ಯವಾಗಿ ಆಗಸದಲ್ಲಿ 4ನೇ ಅತಿ ಪ್ರಕಾಶಮಾನವಾದ ಕಾಯ;[] ಆದರೆ, ವರ್ಷದ ಕೆಲವು ದಿನಗಳಲ್ಲಿ ಮಂಗಳ ಗ್ರಹವು ಗುರುವಿಗಿಂತ ಹೆಚ್ಚು ಪ್ರಕಾಶಮಾನವಾಗಿ ಕಂಡುಬರುತ್ತದೆ.

ಭೂಮಿ ಮತ್ತು ಗುರುಗ್ರಹಗಳ ಗಾತ್ರದ ಹೋಲಿಕೆ; ಇಲ್ಲಿ ಬೃಹತ್ ಕೆಂಪು ಚುಕ್ಕೆಯನ್ನೂ ಕಾಣಬಹುದು

ಸೌರಮಂಡಲದ ಬೇರೆಲ್ಲಾ ಗ್ರಹಗಳ ಒಟ್ಟು ದ್ರವ್ಯರಾಶಿಗಿಂತಲೂ 2.5 ಪಟ್ಟು ಹೆಚ್ಚು ದ್ರವ್ಯರಾಶಿಯನ್ನು ಗುರುವು ಹೊಂದಿದೆ. ಇದು ಎಷ್ಟು ಭಾರಿಯೆಂದರೆ, ಸೂರ್ಯ-ಗುರುಗ್ರಹ ಜೋಡಿಯ ಗುರುತ್ವ ಕೇಂದ್ರವು ಸೂರ್ಯನಿಂದ ಪೂರ್ಣವಾಗಿ ಆಚೆಯಿದೆ (ಸೂರ್ಯನ ಕೇಂದ್ರದಿಂದ 1.068 ಸೌರ ತ್ರಿಜ್ಯಗಳಷ್ಟು ದೂರದಲ್ಲಿ). ಗುರುವು ಭೂಮಿಯ 318 ಪಟ್ಟು ದ್ರವ್ಯರಾಶಿಯನ್ನೂ, 11 ಪಟ್ಟು ವ್ಯಾಸವನ್ನೂ ಮತ್ತು 1300 ಪಟ್ಟು ಗಾತ್ರವನ್ನೂ ಹೊಂದಿದೆ.[]

ಆದ್ದರಿಂದ, ಗುರುಗ್ರಹದ ಗುರುತ್ವವು ಸೌರಮಂಡಲದ ವಿಕಾಸದ ಮೇಲೆ ಆಳವಾದ ಪ್ರಭಾವವನ್ನು ಬೀರಿದೆ: ಕೆಲವರು ಹಾಸ್ಯಾಸ್ಪದವಾಗಿ ಸೌರಮಂಡಲದಲ್ಲಿ ಕೇವಲ ಸೂರ್ಯ, ಗುರು, ಮತ್ತು ಇನ್ನಿತರ ಕಲ್ಲು-ಮಣ್ಣುಗಳಿವೆಯೆಂದು ಹೇಳುತ್ತಾರೆ.[] ಬಹುತೇಕ ಗ್ರಹಗಳ ಕಕ್ಷೆಗಳು ಸೂರ್ಯನ ಸಮಭಾಜಕದ ಸಮತಳಕ್ಕಿಂತ, ಗುರುವಿನ ಕಕ್ಷೆಯ ಸಮತಳಕ್ಕೆ ಹೆಚ್ಚು ಸಮೀಪದಲ್ಲಿವೆ. ಬುಧದ ಕಕ್ಷೆ ಮಾತ್ರ ಸೂರ್ಯನ ಸಮಭಾಜಕದ ಸಮತಳಕ್ಕೆ ಹೆಚ್ಚು ಸಮೀಪದಲ್ಲಿದೆ. ಬಹುತೇಕ ಅಲ್ಪಾವಧಿ ಧೂಮಕೇತುಗಳು ಗುರುಗ್ರಹದ ವರ್ಗಕ್ಕೆ ಸೇರಿದವು. ಕ್ಷುದ್ರಗ್ರಹ ಹೊನಲಿನಲ್ಲಿಯಲ್ಲಿ ಕಂಡುಬರುವ ಬಹುತೇಕ ಕರ್ಕ್‌ವುಡ್ ತೆರವುಗಳು ಉಂಟಾಗಿರುವುದು ಗುರುಗ್ರಹದ ಕಾರಣದಿಂದ. ಸೌರಮಂಡಲದ ಒಳಭಾಗದಲ್ಲಾದ ವಿಪುಲವಾದ ಹೊಡೆತಗಳಿಗೂ ಬಹುಶಃ ಗುರುಗ್ರಹವೇ ಕಾರಣ.[] ಅದರ ಅಗಾಧವಾದ ಗುರುತ್ವ ಸೆಳೆತದ ಕಾರಣದಿಂದಾಗಿ, ಗುರುವನ್ನು ಕೆಲವೊಮ್ಮೆ ಸೌರ ಮಂಡಲದ ಧೂಳು ಚೋಷಕವೆಂದು (vacuum cleaner) ಕರೆಯಲಾಗಿದೆ.

ಗುರುವಿಗಿಂತ ಬಹಳಷ್ಟು ಹೆಚ್ಚು ದ್ರವ್ಯರಾಶಿಯಿರುವ ಗ್ರಹಗಳನ್ನು ಸೌರಮಂಡಲದಾಚೆ ಪತ್ತೆಹಚ್ಚಲಾಗಿದೆ. ಕಂದು ಕುಬ್ಜ ನಕ್ಷತ್ರಗಳ ವರ್ಣಪಟಲದಲ್ಲಿ ಕೆಲವು ನಿಗದಿತ ರೇಖೆಗಳು ಕಂಡುಬಂದರೂ, ಗುರುವಿನಂಥ ದೊಡ್ಡ ಗ್ರಹವನ್ನು ಈ ರೀತಿಯ ನಕ್ಷತ್ರವೆಂದು ಪರಿಗಣಿಸದೆ ಇರುವುದಕ್ಕೆ ಸ್ಪಷ್ಟವಾದ ಯಾವ ವ್ಯಾಖ್ಯಾನವೂ ಇಲ್ಲ. ಪ್ರಸ್ತುತದಲ್ಲಿ, ಸೌರ ಲೋಹತ್ವವನ್ನು ಹೊಂದಿರುವ ಕಾಯವು ಗುರುಗ್ರಹಕ್ಕಿಂತ 13 ಅಥವಾ ಹೆಚ್ಚು ಪಟ್ಟು ದ್ರವ್ಯರಾಶಿಯನ್ನು ಹೊಂದಿದ್ದು ಡ್ಯುಟೆರಿಯಂನನ್ನು ಸುಡುವಷ್ಟು ದೊಡ್ಡದಾಗಿದ್ದರೆ, ಅದನ್ನು ಕಂದು ಕುಬ್ಜವೆಂದು ಪರಿಗಣಿಸಲಾಗುತ್ತದೆ; ಇದಕ್ಕಿಂತ ಕಡಿಮೆ ದ್ರವ್ಯರಾಶಿಯನ್ನು ಹೊಂದಿರುವ (ಮತ್ತು, ನಕ್ಷತ್ರವನ್ನು ಅಥವಾ ನಕ್ಷತ್ರಾವಷೇಶವನ್ನು ಪರಿಭ್ರಮಿಸುತ್ತಿರುವ) ಕಾಯಗಳನ್ನು ಗ್ರಹಗಳೆಂದು ಪರಿಗಣಿಸಲಾಗುತ್ತದೆ.[] ತನ್ನ ರಚನೆಯು ತನ್ನನ್ನು ಎಷ್ಟು ದೊಡ್ಡದಾಗಿರಲು ಅವಕಾಶ ಕೊಡುವುದೋ, ಗುರುವು ಅಷ್ಟೂ ದೊಡ್ಡದಾಗಿದೆಯೆಂದು ಹೇಳಲಾಗಿದೆ: ಅಂದರೆ, ಗುರುಗ್ರಹದ ಮೇಲೆ ಇನ್ನಷ್ಟು ದ್ರವ್ಯರಾಶಿಯನ್ನು ಹಾಕಿದರೆ, ಹೆಚ್ಚಿದ ಗುರುತ್ವ ಬಲದ ಕಾರಣ, ಈ ಗ್ರಹವು ತನ್ನೊಳಗೇ ಸಂಕುಚಿತವಾಗುತ್ತಾ ಹೋಗುತ್ತದೆ. ಈ ಸಂಕುಚನೆ ಮತ್ತು ದ್ರವ್ಯರಾಶಿಯ ಹೆಚ್ಚಳವು ಪರಮಾಣು ಬೆಸುಗೆ ಶುರುವಾಗುವವರೆಗೂ ನಡೆಯುತ್ತದೆ. ಇದರಿಂದ, ಕೆಲವು ಖಗೋಳಶಾಸ್ತ್ರಜ್ಞರು ಗುರುವನ್ನು "ವಿಫಲವಾದ ನಕ್ಷತ್ರ" ಎಂದು ಕರೆಯುತ್ತಾರೆ. ಗುರುವು ನಕ್ಷತ್ರವಾಗಿ ಮಾರ್ಪಾಡಾಗಲು ಪ್ರಸ್ತುತಕ್ಕಿಂತ 75 ಪಟ್ಟು ಹೆಚ್ಚು ದ್ರವ್ಯರಾಶಿಯು ಬೇಕು. ಆದರೆ, ಈಗ ತಿಳಿದಿರುವ ಅತಿ ಸಣ್ಣ ಕೆಂಪು ಕುಬ್ಜವು ವ್ಯಾಸದಲ್ಲಿ ಗುರುವಿಗಿಂತ ಕೇವಲ 30% ದೊಡ್ಡದಾಗಿದೆ.

ಇದಕ್ಕೆ ಸಂಬಂಧಿಸಿದ ಇನ್ನೊಂದು ಕುತೂಹಲಕಾರಿ ಸಂಗತಿಯೆಂದರೆ, ತಾನು ಸೂರ್ಯನಿಂದ ಪಡೆಯುವ ಶಾಖಕ್ಕಿಂತ ಹೆಚ್ಚು ಶಾಖವನ್ನು ಗುರುವು ಹೊರಸೂಸುತ್ತದೆ. ಈ ಹೆಚ್ಚುವರಿ ಶಾಖವು Kelvin-Helmholtz ಪ್ರಕ್ರಿಯೆಯಿಂದ ಉದ್ಭವವಾಗುತ್ತದೆ. ಈ ಪ್ರಕ್ರಿಯೆಯ ಮತ್ತೊಂದು ಚಿಹ್ನೆಯಾಗಿ, ಗುರುಗ್ರಹದ ಗಾತ್ರವು ವರ್ಷಕ್ಕೆ ಕೆಲವು ಮಿಲಿಮೀಟರುಗಳಷ್ಟು ಕುಗ್ಗುತ್ತದೆ. ಗುರು ಮತ್ತಿತರ ಅನಿಲರೂಪಿ ಗ್ರಹಗಳು ಬಹಳ ಮುಂಚೆ ಈಗಿಗಿಂತ ಬಹಳಷ್ಟು ಬಿಸಿಯಾಗಿದ್ದಾಗ ಗಾತ್ರದಲ್ಲಿ ಪ್ರಸ್ತುತಕ್ಕಿಂತ ಬಹಳ ದೊಡ್ಡದಾಗಿದ್ದವು. ಆದರೆ, ಗುರುವಿಗಿಂತ ಕಡಿಮೆ ದ್ರವ್ಯರಾಶಿಯನ್ನು ಮತ್ತು ಕಡಿಮೆ ಬಲವುಳ್ಳ ಗುರುತ್ವವನ್ನು ಹೊಂದಿದ್ದ ಕಾರಣ, ಶನಿಯು ಶಾಖದ ಅಸ್ತಿತ್ವದಲ್ಲಿ ಹೆಚ್ಚು ಹಿಗ್ಗಿರುತ್ತಿತ್ತು; ಹೀಗಾಗಿ, ಶನಿಯು ಒಂದು ಕಾಲದಲ್ಲಿ ಗುರುಗ್ರಹಕ್ಕಿಂತಲೂ ಗಾತ್ರದಲ್ಲಿ ದೊಡ್ಡದಾಗಿತ್ತು.

ಗುರುಗ್ರಹದ ಮೇಲೆ ಉತ್ತರ ಧ್ರುವಾರುಣ ಜ್ಯೋತಿ

ತನ್ನ ಅಕ್ಷದ ಸುತ್ತ ಹತ್ತು ಘಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಸುತ್ತುವ ಗುರುವು ಸೌರಮಂಡಲದ ಬೇರೆಲ್ಲಾ ಗ್ರಹಗಳಿಗಿಂತ ಹೆಚ್ಚು ವೇಗವಾದ ಅಕ್ಷೀಯ ಪರಿಭ್ರಮಣವನ್ನು ಹೊಂದಿದೆ. ಈ ರೀತಿಯ ಹೆಚ್ಚು ವೇಗದ ಪರಿಭ್ರಮಣವು ಅದರ ಸಮಭಾಜಕ ರೇಖೆಯ ಬಳಿ ಉಬ್ಬನ್ನು ಉಂಟುಮಾಡುತ್ತದೆ. ಭೂಮಿಯ ಮೇಲೆ ಹವ್ಯಾಸಿ ದೂರದರ್ಶಕದ ಸಹಾಯದಿಂದ ಈ ಉಬ್ಬನ್ನು ಸುಲಭವಾಗಿ ನೋಡಬಹುದು. ಅಮೋನಿಯದ ಹರಳುಗಳು ಮತ್ತು ಬಹುಶಃ ಅಮೋನಿಯಂ ಹೈಡ್ರೋಸಲ್ಫೈಡ್ ನಿಂದ ಕೂಡಿದ ಮೋಡಗಳ ಪದರವೊಂದು ಗುರುವನ್ನು ಶಾಶ್ವತವಾಗಿ ಆವರಿಸಿರುತ್ತವೆ. ಗುರುಗ್ರಹದಲ್ಲಿ ಘನವಾದ ಮೇಲ್ಮೈಯೇ ಇಲ್ಲದೆ, ಗ್ರಹದೊಳಗೆ ಹೋಗುತ್ತಾ ಸಾಂದ್ರತೆಯು ಕ್ರಮೇಣವಾಗಿ ಹೆಚ್ಚಾಗಬಹುದೆಂದು ಹೇಳಲಾಗಿದೆ. ಇದರ ಒಂದು ಪರಿಚಿತ ರೂಪವೈಶಿಷ್ಟ್ಯವೆಂದರೆ, ಭೂಮಿಗಿಂತ ದೊಡ್ಡದಾಗಿ ಬೃಹತ್ ಕೆಂಪು ಚುಕ್ಕೆಯಂತೆ ಕಾಣುವ ಚಂಡಮಾರುತ. ಇದನ್ನು ಬಹುಶಃ ಜಿಯೋವಾನಿ ಡಾಮೆನಿಕೋ ಕ್ಯಾಸಿನಿ ಮತ್ತು ರಾಬರ್ಟ್ ಹುಕ್ ಅವರುಗಳು ನಾಲ್ಕು ಶತಮಾನಗಳ ಹಿಂದೆಯೇ ಕಂಡುಹಿಡಿದಿದ್ದರು. ವೈಜ್ಞಾನಿಕ ಮಾದರಿಗಳ ಪ್ರಕಾರ, ಇದೊಂದು ಸ್ಥಿರವಾದ ಚಂಡಮಾರುತ ಮತ್ತು ಮತ್ತು ಗ್ರಹದ ಒಂದು ಶಾಶ್ವತ ವೈಶಿಷ್ಟ್ಯವೆಂದು ತಿಳಿದುಬರುತ್ತದೆ.[] 2000ದಲ್ಲಿ ಮೂರು ಸಣ್ಣ ಆಕಾರಗಳು ಒಗ್ಗೂಡಿ ಒಂದು ದೊಡ್ಡ ಆಕಾರವನ್ನು ರೂಪಿಸಿದವು. BA ಅಂಡಾಕಾರವೆಂದು ಹೆಸರಿಡಲಾದ ಈ ಆಕಾರವು ತದನಂತರ ಬೃಹತ್ ಕೆಂಪು ಚುಕ್ಕೆಯಂತೆಯೇ ತಾನೂ ಕೆಂಪು ಬಣ್ಣವನ್ನು ತಾಳಿತು.[]

ಐತಿಹಾಸಿಕ ಅವಲೋಕನೆಗಳು

[ಬದಲಾಯಿಸಿ]

ಗುರುವು ಬರಿಗಣ್ಣಿಗೆ ಗೋಚರಿಸುವುದರಿಂದ, ಪ್ರಾಚೀನ ಕಾಲದಿಂದಲೂ ಇದು ಪರಿಚಿತವಾದ ಗ್ರಹ. ಪ್ರಾಚೀನ ರೋಮನ್ನರು ಈ ಗ್ರಹಕ್ಕೆ ರೋಮನ್ ದೇವತೆಯಾದ ಜ್ಯುಪಿಟರ್ನ ಹೆಸರಿಟ್ಟರು.

ಚೀನಾ, ಕೊರಿಯಾ, ಜಪಾನ್, ಮತ್ತು ವಿಯೆತ್ನಾಮ್ ದೇಶಗಳಲ್ಲಿ, ಚೀನೀಯರ ಪಂಚಭೂತಗಳ ಆಧಾರದ ಮೇಲೆ, ಈ ಗ್ರಹವನ್ನು ಮರ ಗ್ರಹ ಎಂದು ಕರೆಯಲಾಗುತ್ತದೆ.[] ವೇದಕಾಲದ ಜ್ಯೋತಿಷ್ಯದಲ್ಲಿ, ಜ್ಯೋತಿಷ್ಯರು ಈ ಗ್ರಹವನ್ನು ಬೃಹಸ್ಪತಿ, ಅಥವಾ "ಗುರು" ಎಂದು ಕರೆದರು. ಇಂದಿಗೂ ಭಾರತದ ಹಲವು ಭಾಷೆಗಳಲ್ಲಿ ವಾರದ ಒಂದು ದಿನವನ್ನು ಗುರುವಾರ (ಗುರುಗ್ರಹದ ದಿನ)ವೆಂದು ಕರೆಯಲಾಗುತ್ತದೆ. ಆಂಗ್ಲ ಭಾಷೆಯಲ್ಲಿ ಗುರುವಾರವನ್ನು Thursday ಅಥವಾ Thor's day (ಥೋರ್‌ನ ದಿನ) ಎಂದು ಕರೆಯಲಾಗುತ್ತದೆ. ಥೋರ್‌ನನ್ನು ರೋಮನ್ ದೇವತೆಯಾದ ಜ್ಯುಪಿಟರ್‌ನೊಂದಿಗೆ ಗುರುತಿಸಲಾಗುತ್ತದೆ.

1610ರಲ್ಲಿ ಗೆಲಿಲಿಯೋ ಗೆಲಿಲೈ ತನ್ನ ದೂರದರ್ಶಕದ ಸಹಾಯದಿಂದ, ಗುರುಗ್ರಹದ ನಾಲ್ಕು ದೊಡ್ಡ ನೈಸರ್ಗಿಕ ಉಪಗ್ರಹಗಳಾದ ಐಓ, ಯೂರೋಪ, ಗ್ಯಾನಿಮಿಡ್ ಮತ್ತು ಕ್ಯಾಲಿಸ್ಟೊಗಳನ್ನು (ಈಗ ಇವುಗಳನ್ನು ಗೆಲಿಲಿಯೋನ ಉಪಗ್ರಹಗಳೆಂದು ಕರೆಯಲಾಗುತ್ತದೆ) ಕಂಡುಹಿಡಿದನು. ಇದು, ಭೂಮಿಯ ಚಂದ್ರನನ್ನು ಹೊರತುಪಡಿಸಿ, ಉಪಗ್ರಹದ ಮೊಟ್ಟಮೊದಲ ವೀಕ್ಷಣೆ. ಇದು ಭೂಕೇಂದ್ರಿತವಲ್ಲದ ಬಾಹ್ಯಾಕಾಶ ಚಲನೆಯ ಪ್ರಪ್ರಥಮ ಆವಿಶ್ಕಾರವೂ ಆಗಿದೆ. ಇದರಿಂದ, ಗ್ರಹಗಳ ಚಲನೆಯ ಬಗ್ಗೆ ಕೋಪರ್ನಿಕಸ್ ಮಂಡಿಸಿದ್ದ ಸೌರ ಕೇಂದ್ರಿತ ವಾದಕ್ಕೆ ಸಾಕಷ್ಟು ಬೆಂಬಲ ಸಿಕ್ಕಂತಾಯಿತು; ಗೆಲಿಲಿಯೋ ಮುಚ್ಚುಮರೆಯಿಲ್ಲದೆ ಕೋಪರ್ನಿಕಸ್‌ನ ವಾದಕ್ಕೆ ಬೆಂಬಲ ತೋರಿಸಿದ್ದರಿಂದ, ಅವನು ಧಾರ್ಮಿಕ ನಾಯಕರಿಂದ ತನಿಖೆಯ ಭಯದಲ್ಲಿ ಇರುವಂತಾಯಿತು.

1892ರಲ್ಲಿ ಇ. ಇ. ಬರ್ನಾರ್ಡ್ ಕ್ಯಾಲಿಫೋರ್ನಿಯಾದ ಲಿಕ್ ಖಗೋಳವೀಕ್ಷಣಾಲಯದಲ್ಲಿ 36 ಅಂಗುಲದ ವಕ್ರೀಭವಕದ ನೆರವಿನಿಂದ ಗುರುಗ್ರಹದ 5ನೇ ಉಪಗ್ರಹವನ್ನು ಕಂಡುಹಿಡಿದನು. ಅವನ ಅಸಾಮಾನ್ಯ ದೃಷ್ಟಿಸಾಮರ್ಥ್ಯಕ್ಕೆ ಸಾಕ್ಷಿಯಂತಿದ್ದ ಈ ಆವಿಷ್ಕಾರವು ಅವನಿಗೆ ಬಹಳ ಪ್ರಸಿದ್ಧಿಯನ್ನು ತಂದುಕೊಟ್ಟಿತು. ತದನಂತರ ಈ ಉಪಗ್ರಹಕ್ಕೆ ಅಮಾಲ್ಥಿಯ ಎಂಬ ಹೆಸರಿಡಲಾಯಿತು.

ಭೌತಿಕ ಗುಣಲಕ್ಷಣಗಳು

[ಬದಲಾಯಿಸಿ]

ಗ್ರಹದ ರಚನೆ

[ಬದಲಾಯಿಸಿ]

ಸಣ್ಣ ಶಿಲೆಗಳಿಂದ ರಚಿತವಾಗಿರುವ ಗುರುವಿನ ಒಳಭಾಗವು ಲೋಹರೂಪಿ ಜಲಜನಕದ ಒಂದು ಪದರದಿಂದ ಆವೃತವಾಗಿದ್ದು, ಇದರ ಹೊರಭಾಗದಲ್ಲಿ ದ್ರವರೂಪಿ ಜಲಜನಕದ ಮತ್ತು ಅನಿಲರೂಪಿ ಜಲಜನಕದ ಪದರಗಳು ಕಂಡುಬರುತ್ತವೆ. ಜಲಜನಕದ ಈ ವಿವಿಧ ರೂಪಗಳ ವಲಯಗಳನ್ನು ಸ್ಪಷ್ಟವಾದ ಯಾವುದೇ ರೇಖೆಯಾಗಲಿ, ಮೇಲ್ಮೈಯಾಗಲಿ, ಬೇರ್ಪಡಿಸುವುದಿಲ್ಲ. ಬದಲಿಗೆ, ಗ್ರಹದ ಒಳಗೆ ಹೋಗುತ್ತಾ, ಕ್ರಮೇಣವಾಗಿ ಜಲಜನಕದ ರೂಪವು ಒಂದರಿಂದ ಇನ್ನೊಂದಕ್ಕೆ ಮಾರ್ಪಡುತ್ತದೆ.

ಗುರುಗ್ರಹವು ಭೂಮಿಯಂತೆಯೇ ಮೇಲ್ಭಾಗ ಮತ್ತು ಕೆಳಭಾಗಗಳಲ್ಲಿ ಸ್ವಲ್ಪ ಚಪ್ಪಟೆಯಾದ ಗೋಳಾಕಾರದಲ್ಲಿದೆ. ಅಂದರೆ, ಸಮಭಾಜಕದ ಮೂಲಕ ವ್ಯಾಸವು ಧ್ರುವಗಳ ಮೂಲಕದ ವ್ಯಾಸಕ್ಕಿಂತ ಅಧಿಕವಾಗಿದೆ. ಗುರುಗ್ರಹದ ಈ ಎರಡು ವ್ಯಾಸಗಳ ನಡುವೆ 9275 ಕಿ.ಮೀ.ನಷ್ಟು ವ್ಯತ್ಯಾಸವಿದೆ. ಗುರುವಿನ ಕ್ಷಿಪ್ರವಾದ ಅಕ್ಷೀಯ ಪರಿಭ್ರಮಣದ ಕಾರಣದಿಂದ ಅದರ ಸಮಭಾಜಕವು ಹೊರ ಉಬ್ಬುತ್ತದೆ.

ವಾಯುಮಂಡಲ

[ಬದಲಾಯಿಸಿ]
ಬೃಹತ್ ಕೆಂಪು ಚುಕ್ಕೆ ಮತ್ತು ಹಾದುಹೋಗುತ್ತಿರುವ ಬಿಳಿಯ ಅಂಡಾಕೃತಿಯನ್ನು ತೋರಿಸುತ್ತಿರುವ ಗುರುವಿನ ವಾಯುಮಂಡಲದ ಚಿತ್ರ. ವಾಯೇಜರ್ 1 ತೆಗೆದ ಈ ಚಿತ್ರಕ್ಕೆ ಕೃತಕವಾಗಿ ಬಣ್ಣಗಳನ್ನು ಅಳವಡಿಸಲಾಗಿದೆ

ಗುರುವಿನ ವಾಯುಮಂಡಲದ ಮೇಲ್ಭಾಗವು ಕಣಗಳ ಸಂಖ್ಯೆಯ ದೃಷ್ಟಿಯಿಂದ ಸುಮಾರು ~93% ಜಲಜನಕ, ~7% ಹೀಲಿಯಂ ಮತ್ತು ದ್ರವ್ಯರಾಶಿಯ ದೃಷ್ಟಿಯಿಂದ ~75% ಜಲಜನಕ, ~24% ಹೀಲಿಯಂಗಳಿಂದ ಕೂಡಿದೆ. ಒಳಭಾಗವು ಹೆಚ್ಚು ಭಾರವಾದ ಧಾತುಗಳನ್ನು ಹೊಂದಿದೆ. ದ್ರವ್ಯರಾಶಿಯ ದೃಷ್ಟಿಯಿಂದ ಇವುಗಳ ವಿತರಣೆಯು ಸ್ಥೂಲವಾಗಿ ಈ ರೀತಿ ಇದೆ: 71% ಜಲಜನಕ, 24% ಹೀಲಿಯಂ, 5% ಇತರ ಧಾತುಗಳು. ವಾಯುಮಂಡಲವು ಸ್ವಲ್ಪ ಪ್ರಮಾಣದಲ್ಲಿ ಮೀಥೇನ್, ನೀರಾವಿ, ಅಮೋನಿಯ, ಮತ್ತು "ಶಿಲೆ"ಗಳನ್ನು ಒಳಗೊಂಡಿದೆ. ಅತ್ಯಲ್ಪ ಪ್ರಮಾಣದಲ್ಲಿ ಇಂಗಾಲ, ಈಥೇನ್, ಜಲಜನಕದ ಸಲ್ಫೈಡ್, ನಿಯಾನ್, ಆಮ್ಲಜನಕ, ಫಾಸ್ಫೀನ್, ಮತ್ತು ಗಂಧಕಗಳೂ ಇವೆ. ವಾಯುಮಂಡಲದ ಹೊರಪದರದಲ್ಲಿ ಘನೀಕೃತ ಅಮೋನಿಯಾದ ಸ್ಫಟಿಕಗಳು ಕಂಡುಬರುತ್ತವೆ.[][] ಅತಿನೇರಳೆ ಮತ್ತು ನಸುಗೆಂಪು ಮಾಪಕಗಳ ಮೂಲಕ ಬೆನ್‌ಜೀನ್ ಮತ್ತು ಇತರ ಹೈಡ್ರೋಕಾರ್ಬನ್ಗಳನ್ನೂ ಕಂಡುಹಿಡಿಯಲಾಗಿದೆ.[೧೦]

ವಾಯುಮಂಡಲದಲ್ಲಿ ಈ ಪ್ರಮಾಣದಲ್ಲಿ ಜಲಜನಕ ಮತ್ತು ಹೀಲಿಯಂ ಧಾತುಗಳು ಸೌರ ಜ್ಯೋತಿಪಟಲದಲ್ಲಿ ಇರುವಷ್ಟೇ ಇವೆ. ಆದರೆ, ಗೆಲಿಲಿಯೋ ಶೋಧಕದ ಫಲಿತಾಂಶದ ಪ್ರಕಾರ, ನಿರೀಕ್ಷೆಗೆ ವಿರುದ್ಧವಾಗಿ, ಗುರುವಿನ ವಾಯುಮಂಡಲದಲ್ಲಿ ನಿಯಾನ್ ಧಾತುವಿನ ಸಮೃದ್ಧತೆಯು ಸೂರ್ಯನ ಮೇಲಿರುವ ಸಮೃದ್ಧತೆಯ 10ನೇ 1ಭಾಗದಷ್ಟು ಮಾತ್ರ ಇರುವುದಾಗಿ ಕಂಡುಬರುತ್ತದೆ. ಶನಿ ಗ್ರಹವು ಸುಮಾರು ಇದೇ ರೀತಿಯ ರಚನೆಯನ್ನು ಹೊಂದಿದ್ದರೂ, ಯುರೇನಸ್ ಮತ್ತು ನೆಪ್ಚೂನ್ಗಳ ಮೇಲೆ ಇದಕ್ಕಿಂತ ಕಡಿಮೆ ಜಲಜನಕ ಮತ್ತು ಹೀಲಿಯಂ ಕಂಡುಬರುತ್ತದೆ.

ಜೆಯೋವಾನಿ ಕ್ಯಾಸಿನಿ 1690ರಲ್ಲಿ ಮೊದಲಬಾರಿಗೆ ಗಮನಿಸಿದಂತೆ ಗುರುಗ್ರಹದ ಹೊರ ವಾಯುಮಂಡಲದ ವಿವಿಧ ವಲಯಗಳು ಬೇರೆ ಬೇರೆ ವೇಗಗಳಲ್ಲಿ ಅಕ್ಷದ ಸುತ್ತ ಪರಿಭ್ರಮಿಸುತ್ತವೆ. ಒಂದು ಸುತ್ತು ಸುತ್ತಲು, ಗುರುವಿನ ಧ್ರುವದ ಬಳಿಯ ವಾಯುಮಂಡಲಕ್ಕೆ ಸಮಭಾಜಕದ ಬಳಿಯ ವಾಯುಮಂಡಲಕ್ಕಿಂತ ಸುಮಾರು 5 ನಿಮಿಷಗಳ ಹೆಚ್ಚು ಕಾಲ ಬೇಕಾಗುತ್ತದೆ. ಇದಲ್ಲದೆ, ಬೇರೆ ಬೇರೆ ಅಕ್ಷಾಂಶಗಳಲ್ಲಿರುವ ಮೋಡದ ವಲಯಗಳು ಒಂದಕ್ಕೊಂದು ವಿರುದ್ಧವಾದ ದಿಕ್ಕಿನಲ್ಲಿ ಚಲಿಸುತ್ತವೆ. ವಾಯುಮಂಡಲದಲ್ಲಿ ಈ ರೀತಿಯ ವಿರೋಧವಾದ ಪರಿಚಲನೆಗಳ ವಿನ್ಯಾಸದಿಂದ, ಚಂಡಮಾರುತಗಳು ಮತ್ತು ಪ್ರಕ್ಷುಬ್ಧತೆಗಳು ಉಂಟಾಗುತ್ತವೆ. ಕಾರಣವಾಗಿ, 600 ಕಿ.ಮೀ./ಪ್ರತಿ ಘಂಟೆ ವೇಗದ ಮಾರುತಗಳು ಇಲ್ಲಿ ಸರ್ವೇ ಸಾಮಾನ್ಯ.

ವೈಜ್ಞಾನಿಕ ಮಾಪನಗಳನ್ನು ಮಾಡುವ ಉದ್ದೇಶದಿಂದ ಗುರುಗ್ರಹದ ವಾಯುಮಂಡಲದೊಳಗೆ ಇಳಿದ ಏಕಮಾತ್ರ ಗಗನನೌಕೆಯೆಂದರೆ, ಗೆಲಿಲಿಯೋ ಶೋಧಕ (ಗೆಲಿಲಿಯೋ ಯಾತ್ರೆಯನ್ನು ನೋಡಿ). 1995ರಲ್ಲಿ ಗುರುವಿನತ್ತ ಒಂದು ವಾಯುಮಂಡಲದ ಶೋಧಕವನ್ನು ಕಳುಹಿಸಿದ ಈ ನೌಕೆಯು 2003 ತಾನೇ ಗುರುವಿನ ವಾಯುಮಂಡಲವನ್ನು ಹೊಕ್ಕು ಸುಟ್ಟುಹೋಯಿತು.

ಇದನ್ನೂ ನೋಡಿ: ಗುರುಗ್ರಹದ ಮೇಲೆ ಮೋಡಗಳ ವಿನ್ಯಾಸ

ಬೃಹತ್ ಕೆಂಪು ಚುಕ್ಕೆ

[ಬದಲಾಯಿಸಿ]
1979ರಲ್ಲಿ ವಾಯೇಜರ್ 1ಕ್ಕೆ ಕಂಡಂತೆ ಬೃಹತ್ ಕೆಂಪು ಚುಕ್ಕೆ.
ಗುರುಗ್ರಹದ ಮೋಡಗಳ ಚಲನೆಯ ಬಣ್ಣದ ಚಲನಚಿತ್ರ
ಬೃಹತ್ ಕೆಂಪು ಚುಕ್ಕೆಯ ಚಲನಚಿತ್ರ
1974ರಲ್ಲಿ ಪಯೋನೀರ್ 10 ತೆಗೆದ ಗುರುಗ್ರಹದ ಚಿತ್ರ. The Great Red Spot appears more prominent here than in the en:Voyager images because of its location in a lighter colored band of clouds.

ಬೃಹತ್ ಕೆಂಪು ಚುಕ್ಕೆಯು ಗುರುಗ್ರಹದ ಮೇಲೆ ಶಾಶ್ವತವಾಗಿರುವ ಒಂದು ಪ್ರತಿಗಾಮಿ ಚಂಡಮಾರುತ. ಇದು ಸಮಭಾಜಕದಿಂದ 22° ದಕ್ಷಿಣದಲ್ಲಿದ್ದು, ಕಡೇಪಕ್ಷ ಕಳೆದ 340 ವರ್ಷಗಳಿಂದ ಅಸ್ತಿತ್ವದಲ್ಲಿದೆ. ಇದು ಭೂಮಿಯಲ್ಲಿನ ದೂರದರ್ಶಕಗಳಿಂದಲೂ ಗೋಚರಿಸುವಷ್ಟು ದೊಡ್ಡದಾಗಿದೆ. 1665ರಲ್ಲಿ ಈ ಚಂಡಮಾರುತವನ್ನು ವಿವರಿಸಿದ ಜಿಯೋವಾನಿ ಡಾಮೆನಿಕೋ ಕ್ಯಾಸಿನಿ ಅವರೇ ಬಹುಶಃ ಇದನ್ನು ಮೊದಲ ಬಾರಿಗೆ ಕಂಡುಹಿಡಿದರು.

ಗುರುವಿನ ಬೃಹತ್ ಕೆಂಪು ಚುಕ್ಕೆ ಮತ್ತದರ ಸುತ್ತುಮುತ್ತಲಿನ ಅದ್ಭುತ ನೋಟವನ್ನು ಫೆಬ್ರವರಿ 25, 1979 ರಂದು ವಾಯೇಜರ್ 1 ನೌಕೆಯು ಗುರುವಿನಿಂದ 92 ಲಕ್ಷ ಕಿ.ಮೀ. (57 ಲಕ್ಷ ಮೈಲಿ) ದೂರದಲ್ಲಿದ್ದಾಗ ಪಡೆಯಿತು. ಮೋಡಗಳಲ್ಲಿ 160 ಕಿ.ಮೀ. (100 ಮೈಲಿ) ಅಗಲವಿರುವ ವಿವರಗಳನ್ನೂ ಇಲ್ಲಿ ಕಾಣಬಹುದು. ಕೆಂಪು ಚುಕ್ಕೆಯ ಎಡದಲ್ಲಿರುವ ಬಣ್ಣದ ಅಲೆಅಲೆಯಾದ ವಿನ್ಯಾಸವು ಮೋಡಗಳ ಅತಿ ಜಟಿಲ ಮತ್ತು ಚಂಚಲ ಚಲನೆಯಿಂದ ಉಂಟಾಗಿದೆ. ಕೆಂಪು ಚುಕ್ಕೆಯ ಕೆಳಗಿರುವ ಬಿಳಿಯ ಅಂಡಾಕಾರವು ಭೂಮಿಯಷ್ಟು ವ್ಯಾಸವನ್ನು ಹೊಂದಿದೆ. ಇದರಿಂದ ಗುರುಗ್ರಹವು ಎಷ್ಟು ದೊಡ್ಡದೆಂದು ಗೊತ್ತಾಗುತ್ತದೆ.

ಅಂಡಾಕಾರವು 6 ದಿನಗಳ ಪರಿಭ್ರಮಣ ಕಾಲವನ್ನು ಹೊಂದಿದ್ದು, ಅಪ್ರದಕ್ಷಿಣಾಕರದಲ್ಲಿ ಸುತ್ತುತ್ತದೆ ಹಾಗೂ 24–40,000 ಕಿ.ಮೀ. × 12–14,000 ಕಿ.ಮೀ. ಗಳ ಉದ್ದಗಲವನ್ನು ಹೊಂದಿದೆ. ಇದು ಭೂಮಿ ಗಾತ್ರದ 2-3 ಗ್ರಹಗಳನ್ನು ತನ್ನೊಳಗೆ ಇಟ್ಟುಕೊಳ್ಳುವಷ್ಟು ದೊಡ್ಡದಾಗಿದೆ. ಈ ಚಂಡಮಾರುತದ ಮೋಡಗಳು ತಮ್ಮ ಸುತ್ತಲಿನ ಮೋಡಗಳಿಗಿಂತ 8 ಕಿ.ಮೀ. ಹೆಚ್ಚು ಎತ್ತರದಲ್ಲಿವೆ.

ಅನಿಲ ರೂಪಿ ಗ್ರಹಗಳ ಪ್ರಕ್ಷುಬ್ಧ ವಾಯುಮಂಡಲಗಳಲ್ಲಿ ಈ ರೀತಿಯ ಚಂಡಮಾರುತಗಳು ವಿರಳವೇನಲ್ಲ. ಬಿಳಿ ಬಣ್ಣದ ಅಂಡಾಕೃತಿಗಳು ವಾಯುಮಂಡಲದ ಹೊರಭಾಗದಲ್ಲಿ ತಂಪಾಗಿರುವ ಮೋಡಗಳನ್ನು ಹೊಂದಿರುತ್ತವೆ. ಕಂದು ಬಣ್ಣದ ಅಂಡಾಕೃತಿಗಳು ಸ್ವಲ್ಪ ಹೆಚ್ಚು ಬೆಚ್ಚಗಿದ್ದು ಸಾಮಾನ್ಯ ಮೋಡಗಳ ಎತ್ತರದಲ್ಲೇ ಇರುತ್ತವೆ. ಈ ಚಂಡಮಾರುತಗಳು ಕೆಲವು ಘಂಟೆಗಳಿಂದ ಹಿಡಿದು ಶತಮಾನಗಳವರೆಗೂ ಜೀವಂತವಾಗಿರುತ್ತವೆ.

ವಾಯೇಜರ್ ಯಾತ್ರೆಗಳ ಮುನ್ನ, ಬೃಹತ್ ಕೆಂಪು ಚುಕ್ಕೆಯ ಬಗ್ಗೆ ಖಗೋಳಶಾಸ್ತ್ರಜ್ಞರಿಗೆ ಬಹಳಷ್ಟು ಅರಿವಿರಲಿಲ್ಲ. ಪ್ರಕ್ಷುಬ್ಧತೆ ವಿನ್ಯಾಸಗಳೊಂದಿಗೆ ಸಮಂಜಸವಾಗಿದ್ದ ಕಾರಣ, ಹಲವರು ಈ ಚುಕ್ಕೆಯನ್ನು ಗ್ರಹದ ಮೇಲಿರುವ ದ್ರವ ಅಥವಾ ಅನಿಲರೂಪಿ ವೈಶಿಷ್ಟ್ಯತೆಯೆಂದು ನಂಬಿದ್ದರು.

ಇತ್ತೀಚೆಗೆ ನಾಸಾ ಸಂಶೋಧನಾ ತಂಡವು ಹಬಲ್ ದೂರದರ್ಶಕವನ್ನು ಉಪಯೋಗಿಸಿ ಬೃಹತ್ ಕೆಂಪು ಚುಕ್ಕೆಯ ಬಳಿ ಸ್ಥಿತವಾಗಿರುವ ಹಲವು ಸಣ್ಣ ಸುಳಿಗಾಳಿಗಳ ಪರಿಶೀಲನೆಯನ್ನು ನಡೆಸಿತು. ಈ ಸುಳಿಗಳು ಕಳೆದ ಹನ್ನೆರಡು ತಿಂಗಳುಗಳಲ್ಲಿ ಒಂದು ಇನ್ನೊಂದರ ಜೊತೆ ಬೆರೆತಿವೆ, ತೀವ್ರತೆಯಲ್ಲಿ ಹೆಚ್ಚಿವೆ, ಮತ್ತು ಬಿಳಿಯಿಂದ ಕೆಂಪು ಬಣ್ಣಕ್ಕೆ ತಿರುಗಿವೆ ಎಂದು ಮೇಲಿನ ಪರಿಶೀಲನೆಯಿಂದ ತಿಳಿದುಬಂದಿದೆ. BA ಎಂಬ ಹೆಸರಿನ (ಇದಕ್ಕೆ ಕೆಂಪು ಚುಕ್ಕೆಯ ಮರಿ ಎಂಬ ಅಡ್ಡಹೆಸರಿದೆ) ಅಂಡಾಕೃತಿಯ ಬಗ್ಗೆ ದೊರೆತಿರುವ ಈ ಮಾಹಿತಿಯನ್ನು ಅಕ್ಟೋಬರ್ 2006ರಲ್ಲಿ ಖಗೋಳವಿಜ್ಞಾನಿ Amy Simon-Miller ಅವರು Icarus ಎಂಬ ಖಗೋಳ ನಿಯತಕಾಲಿಕೆಯಲ್ಲಿ ಪ್ರಕಾಶಿಸಿದರು. ಗುರುವು ಪ್ರಸ್ತುತದಲ್ಲಿ ಸೂರ್ಯನ ಹಿಂಭಾಗದಲ್ಲಿರುವುದರಿಂದ, ವರ್ಣಪಟಲದಿಂದ ಈ ಸುಳಿಗಳ ವಿವರವಾದ ತನಿಖೆಯು ಸಧ್ಯಕ್ಕೆ ನಡೆಯುತ್ತಿಲ್ಲ. ಹೆಚ್ಚಿನ ವೇಗದ ಮಾರುತಗಳು ವಾಯುಮಂಡಲದ ಒಳಭಾಗಗಳಿಂದ ಬೇರೆ ಬಣ್ಣದ ವಸ್ತುಗಳನ್ನು ಹೊರಸೆಳೆದುದರಿಂದ ಸುಳಿಗಳ ಪ್ರವಹನೆಯಲ್ಲಿ ಬದಲಾವಣೆಗಳು ಉಂಟಾಗಿರಬಹುದು. ಆದರೆ ಇನ್ನಷ್ಟು ತನಿಖೆ ನಡೆಯುವವರೆಗೂ ಈ ವಾದದ ಸತ್ಯಾಸತ್ಯತೆಗಳು ಬಯಲಾಗುವುದಿಲ್ಲ.

ಗ್ರಹದ ಉಂಗುರಗಳು

[ಬದಲಾಯಿಸಿ]
ಅದರ ದಕ್ಷಿಣ ಧ್ರುವದಿಂದ ನೋಡಿದಂತೆ ಗುರುಗ್ರಹ. ಎಡದ ಮೇಲ್ಭಾಗದಲ್ಲಿ ಬೃಹತ್ ಕೆಂಪು ಚುಕ್ಕೆಯನ್ನು ಕಾಣಬಹುದು.

ಶಕ್ತಿಯುತ ಉಲ್ಕೆಗಳ ಧಾಳಿಗಳಿಂದಾಗಿ, ಗುರುವಿನ ಉಪಗ್ರಹಗಳಿಂದ ಹೊಗೆಯಂತಹ ಧೂಳಿನ ಕಣಗಳು ಸಿಡಿಯುತ್ತವೆ. ಈ ಧೂಳಿನ ಕಣಗಳು ಗುರುವಿನ ಸುತ್ತ ಸೇರಿಕೊಂಡು ಬಹಳ ಮಂದವಾದ ಉಂಗುರ ವ್ಯವಸ್ಥೆಯನ್ನು ನಿರ್ಮಿಸಿವೆ. Halo (ಪ್ರಭಾವಳಿ) ಎಂದು ಕರೆಯಲಾಗುವ ಒಳ ಉಂಗುರವು ಸುಮಾರು 20,000 km ದಪ್ಪವಿದ್ದು 22,800ಕಿ.ಮೀ. ಅಗಲವಿದೆ. ಇದರ ನಂತರ, ಅಡ್ರಾಸ್ಟಿಯ ಮತ್ತು ಮೆಟಿಸ್ ಉಪಗ್ರಹಗಳ ಧೂಳಿನಿಂದ ಕೂಡಿರುವ ಅತಿ ತೆಳ್ಳನಾದ, ಅತಿ ಪ್ರಕಾಶಮಾನವಾದ ಮುಖ್ಯ ಉಂಗುರವು ಸಿಗುತ್ತದೆ. ಮೆಟಿಸ್ ಉಪಗ್ರಹವು ಒಂದು ನಿಗದಿತ ಮಿತಿಯೊಳಗೆ ಗುರುವಿನ ಸುತ್ತ ಪರಿಭ್ರಮಿಸುವುದರಿಂದ, ಮೆಟಿಸ್‌ಗೆ ಬಿಗಿಯಾಗಿ ಅಂಟಿರದ ವಸ್ತುಗಳು ಅದರಿಂದ ಹಾರಿಹೋಗಿ ಗುರುವಿನ ಗುರುತ್ವವಲಯದಲ್ಲಿ ಬೀಳಬಹುದು. ಥೆಬೆ ಮತ್ತು ಅಮಾಲ್ಥಿಯಗಳಿಂದ ಉದ್ಭವವಾದ ಎರಡು ತೆಳುವಾದ ಉಂಗುರಗಳು ಮುಖ್ಯ ಉಂಗುರದ ಹೊರಗೆ ಸುತ್ತುತ್ತವೆ. ಕಡೆಯದಾಗಿ, ದೂರದಲ್ಲಿರುವ ಹಾಗೂ ಬಹಳ ಮಬ್ಬಾಗಿರುವ ಹೊರ ಉಂಗುರವೊಂದು ಗುರುವನ್ನು ಪ್ರತಿಗಾಮಿ ಚಲನೆಯಲ್ಲಿ ಸುತ್ತುತ್ತದೆ. ಈ ಹೊರ ಉಂಗುರವನ್ನು ನಿರ್ಮಿಸಿದ ವಸ್ತುಗಳು ಎಲ್ಲಿಂದ ಬಂದವೆಂದು ದೃಢವಾಗಿ ತಿಳಿದುಬಂದಿಲ್ಲ. ಇದು ಸೆರೆಹಿಡಿದ ಅಂತರಗ್ರಹ ಧೂಳಿರಬಹುದು.

ಗುರುಗ್ರಹದ ಅನ್ವೇಷಣೆ

[ಬದಲಾಯಿಸಿ]

೧೯೭೩ರ ನಂತರ ಕೆಲವು ಸ್ವಯಂಚಾಲಿತ ಗಗನನೌಕೆಗಳು ಗುರುವನ್ನು ತಲುಪಿವೆ. ಸೌರಮಂಡಲದಲ್ಲಿ ಬೇರೆ ಗ್ರಹಗಳನ್ನು ತಲುಪಲು ಶಕ್ತಿಯ ವೆಚ್ಚವಾಗುತ್ತದೆ. ಈ ಶಕ್ತಿಯನ್ನು ಗಗನನೌಕೆಯ ವೇಗದಲ್ಲುಂಟಾಗುವ ನಿವ್ವಳ ವ್ಯತ್ಯಾಸದ (delta-v) ರೂಪದಲ್ಲಿ ಸೂಚಿಸಲಾಗುತ್ತದೆ. ಭೂಮಿಯಿಂದ ಗುರುವನ್ನು ತಲುಪಲು ೯.೨ಕಿ.ಮೀ./ಪ್ರತಿ ಕ್ಷಣ ವೇಗ ವ್ಯತ್ಯಾಸದ ಅವಶ್ಯಕತೆಯಿದೆ.[೧೧] ಭೂಮಿಯ ಕೆಳಕಕ್ಷೆಯನ್ನು ತಲುಪಲು ಬೇಕಾದ ೯.೭ ಕಿ.ಮೀ./ಪ್ರತಿ ಕ್ಷಣ ವೇಗ ವ್ಯತ್ಯಾಸಕ್ಕೆ ಇದನ್ನು ಹೋಲಿಸಬಹುದು.[೧೨] ಅದೃಷ್ಟವಶಾತ್, ಬೇರೆ ಗ್ರಹಗಳ ನಿಕಟದಲ್ಲಿ ಹಾರಿದಾಗ ದೊರಕುವ ಗುರುತ್ವ ಸಹಾಯದಿಂದ, ಗುರುವಿನತ್ತ ಯಾನದಲ್ಲಿ ಸ್ವಲ್ಪ ಶಕ್ತಿಯನ್ನು ಉಳಿಸಬಹುದು. ಆದರೆ, ಈ ರೀತಿಯ ಗುರುತ್ವ ನೆರವಿನ ಕಾರ್ಯಾಚರಣೆಯು ಯಾನಕ್ಕೆ ಬೇಕಾದ ಕಾಲಾವಧಿಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.[೧೧]

ಪಯೋನೀರ್ ಯಾತ್ರೆಗಳು

[ಬದಲಾಯಿಸಿ]

೧೯೭೩ರಲ್ಲಿ ಪಯೋನೇರ್ ೧೦ ಗುರುವಿನ ಬಳಿ ಹಾದುಹೋದ ಒಂದು ವರ್ಷದ ಬಳಿಕ ಪಯೋನೀರ್ ೧೧ ಹಾದುಹೋಯಿತು. ಪಯೋನೀರ್ ೧೦ ಮೊಟ್ಟಮೊದಲ ಬಾರಿಗೆ ಸಮೀಪದಿಂದ ಗುರುಗ್ರಹ ಮತ್ತದರ ಗೆಲಿಲಿಯೋ ಉಪಗ್ರಹಗಳ ಚಿತ್ರವನ್ನು ತೆಗೆದು, ಗುರುಗ್ರಹದ ವಾಯುಮಂಡಲದ ಅಧ್ಯಯನವನ್ನು ಮಾಡಿ, ಅದರ ಕಾಂತಕ್ಷೇತ್ರವನ್ನು ಪತ್ತೆಹಚ್ಚಿ, ಅದರ ವಿಕಿರಣ ಪಟ್ಟಿಗಳನ್ನು ಅವಲೊಕಿಸಿ, ಗುರುವು ಬಹುತೇಕ ದ್ರವ/ಅನಿಲರೂಪದಲ್ಲಿ ಇದೆಯೆಂದು ನಿರ್ಧರಿಸಿತು.[೧೩][]

ಯೂಲಿಸೆಸ್ ಯಾತ್ರೆಗಳು

[ಬದಲಾಯಿಸಿ]

ಫೆಬ್ರವರಿ ೧೯೯೨ರಲ್ಲಿ ಯೂಲಿಸೆಸ್ ಸೌರ ಶೋಧಕವು ಗುರುವಿಗೆ ೪೦೯,೦೦೦ ಕಿ.ಮೀ. ಅಂತರದಲ್ಲಿ ಹಾರುವ ಕಾರ್ಯಾಚರಣೆಯನ್ನು ಮಾಡಿತು. ಯೂಲಿಸೆಸ್ ಶೋಧಕವು ಸೂರ್ಯನ ಧ್ರುವಗಳ ಸುತ್ತ ಕಕ್ಷೆಯನ್ನು ತಲುಪಲು ಅತ್ಯವಶ್ಯಕವಾದ ಈ ಕಾರ್ಯಾಚರಣೆಯ ಸಮಯದಲ್ಲಿ ಶೋಧಕವು ಗುರುಗ್ರಹದ ಕಾಂತಗೋಳವನ್ನು ಅಧ್ಯಯನ ಮಾಡಿತು. ಆದರೆ ಶೋಧಕದ ಮೇಲೆ ಕ್ಯಾಮೆರಾಗಳು ಇಲ್ಲದ್ದರಿಂದ ಯಾವುದೇ ಛಾಯಾಚಿತ್ರಗಳನ್ನು ತೆಗೆದುಕೊಳ್ಳಲಾಗಲಿಲ್ಲ. ಫೆಬ್ರವರಿ ೨೦೦೪ ರಲ್ಲಿ ಶೋಧಕವು ಮತ್ತೊಮ್ಮೆ ಗುರುಗ್ರಹದ ಸಮೀಪಕ್ಕೆ ಬಂದಿತು. ಈ ಬಾರಿ ಅಂತರವು ಬಹಳಷ್ಟು ಅಧಿಕವಾಗಿತ್ತು (ಸುಮಾರು ೨೪ ಕೋಟಿ ಕಿ.ಮೀ.ಗಳು).[೧೪]

ಗೆಲಿಲಿಯೋ ಯಾತ್ರೆ

[ಬದಲಾಯಿಸಿ]

ಡಿಸೆಂಬರ್ ೭, ೧೯೯೫ರಂದು ಗುರುವಿನ ಸುತ್ತ ಪರಿಭ್ರಮಣೆಯನ್ನು ಶುರುಮಾಡಿದ ಗೆಲಿಲಿಯೋ ಗಗನನೌಕೆಯು ಗುರುವನ್ನು ಪರಿಭ್ರಮಿಸಿದ ಏಕಮಾತ್ರ ನೌಕೆ. ಗುರುವನ್ನು ಏಳು ವರ್ಷಗಳ ಕಾಲ ಪರಿಭ್ರಮಿಸಿದ ಈ ನೌಕೆಯು ಅಮಾಲ್ಥಿಯ ಮತ್ತು ಗುರುವಿನ ಇತರ ಪ್ರಮುಖ ಉಪಗ್ರಹಗಳೆಲ್ಲವನ್ನೂ ಒಂದಕ್ಕಿಂತ ಹೆಚ್ಚು ಬಾರಿ ಭೇಟಿ ಮಾಡಿತು. ಷೂಮೇಕರ್-ಲೆವಿ ೯ ಧೂಮಕೇತುವು ಗುರುಗ್ರಹವನ್ನು ಅಪ್ಪಳಿಸಿದ ಘಟನೆಯನ್ನು ಈ ಗಗನನೌಕೆಯು ತನ್ನ ಅದ್ವಿತೀಯವಾದ ವೀಕ್ಷಣಾಸ್ಥಾನದಿಂದ ದಾಖಲಿಸಿಕೊಂಡಿತು. ಗೆಲಿಲಿಯೋ ಯಾನದಿಂದ ಜೋವಿಯನ್ ವ್ಯವಸ್ಥೆಯ ಬಗ್ಗೆ ವ್ಯಾಪಕವಾಗಿ ಹೊಸ ಮಾಹಿತಿಗಳು ಹೊರಬಂದವು. ಆದರೆ, ರೇಡಿಯೋ ತರಂಗಗಳನ್ನು ಪ್ರಸಾರ ಮಾಡುವ ಅದರ ತರಂಗಾಕರ್ಷಕ ತಂತಿಯ (antenna) ನಿಯೋಜನೆಯು ವಿಫಲವಾದ ಕಾರಣ, ತನ್ನ ಪೂರ್ವೋದ್ದೇಶಿತ ಸಾಮರ್ಥ್ಯಕ್ಕೆ ಅನುಗುಣವಾಗಿ ಗೆಲಿಲಿಯೋ ಕಾರ್ಯ ನಿರ್ವಹಿಸಲಿಲ್ಲ.[೧೫]

ಕ್ಯಾಸಿನಿ ಬಾಹ್ಯಾಕಾಶ ಶೋಧಕಕ್ಕೆ ಕಾಣಿಸಿದಂತೆ ಗುರುಗ್ರಹ. ಇದುವರೆಗೆ ಕಲೆಹಾಕಿದ ಗುರುಗ್ರಹದ ಅತ್ಯಂತ ವಿವರವಾದ ವರ್ಣಚಿತ್ರ.

ಜುಲೈ ೧೯೯೫ರಲ್ಲಿ ಈ ಗಗನನೌಕೆಯಿಂದ ವಾಯುಮಂಡಲದ ಶೋಧಕವೊಂದನ್ನು ಕೆಳಗಿಳಿಸಲಾಯಿತು. ಈ ಶೋಧಕವು ಡಿಸೆಂಬರ್ ೭, ೧೯೯೫ರಂದು ಗ್ರಹದ ವಾಯುಮಂಡಲವನ್ನು ಹೊಕ್ಕಿತು. ಇಳಿಕೊಡೆಯ (parachute) ಸಹಾಯದಿಂದ ವಾಯುಮಂಡಲದೊಳಗೆ ೧೫೦ ಕಿ.ಮೀ. ಇಳಿದ ಶೋಧಕವು ೫೭.೬ ನಿಮಿಷಗಳವರೆಗೆ ಮಾಹಿತಿಯನ್ನು ಸಂಗ್ರಹಿಸಿತು. ತದನಂತರ, ತೀವ್ರವಾದ ವಾಯು ಒತ್ತಡದ ಕಾರಣ ಶೋಧಕವು ನಜ್ಜುಗುಜ್ಜಾಗಿ ಹೋಯಿತು. ಇದರ ಸ್ವಲ್ಪವೇ ಕಾಲದ ನಂತರ ಶೋಧಕವು ಬಹುಶಃ ಕರಗಿ ಸುಟ್ಟುಹೋಗಿರುತ್ತಿತ್ತು. ಗೆಲಿಲಿಯೋ ಪರಿಭ್ರಮಕವು ಇದೇ ರೀತಿಯ, ಆದರೆ ಇನ್ನೂ ತ್ವರಿತವಾದ ಮರಣಕ್ಕೀಡಾಯಿತು. ಯೂರೋಪದ ಮೇಲೆ ಅಪ್ಪಳಿಸಿ ಆ ಉಪಗ್ರಹವನ್ನು ಮಲಿನಗೊಳಿಸುವ ಸಾಧ್ಯತೆಯನ್ನು ತಪ್ಪಿಸಲೋಸುಗ, ಸೆಪ್ಟೆಂಬರ್ ೨೧, ೨೦೦೩ರಂದು ಪರಿಭ್ರಮಕವನ್ನು ಉದ್ದೇಶಪೂರ್ವಕವಾಗಿ ಗುರುವಿನತ್ತ ೫೦ ಕಿ.ಮೀ./ಪ್ರತಿ ಕ್ಷಣಕ್ಕಿಂತ ಹೆಚ್ಚು ವೇಗದಲ್ಲಿ ಹಾರಿಸಲಾಯಿತು.[೧೫]

ಕ್ಯಾಸಿನಿ ಯಾತ್ರೆ

[ಬದಲಾಯಿಸಿ]

೨೦೦೦ದಲ್ಲಿ ಶನಿ ಗ್ರಹಕ್ಕೆ ಹೋಗುವ ಮಾರ್ಗಮಧ್ಯದಲ್ಲಿದ್ದ ಕ್ಯಾಸಿನಿ ಶೋಧಕವು ಗುರುವಿನ ಬಳಿಯಲ್ಲಿ ಹಾದುಹೋಗಿ, ಗುರುಗ್ರಹದ ಅತ್ತ್ಯುತ್ತಮವಾದ ಚಿತ್ರಗಳನ್ನು ತೆಗೆಯಿತು. ಡಿಸೆಂಬರ್ ೧೯, ೨೦೦೦ರಂದು ಕ್ಯಾಸಿನಿ ಗಗನನೌಕೆಯು ಹಿಮಲಿಯ ಉಪಗ್ರಹದ ಒಂದು ಕೆಳದರ್ಜೆಯ ಚಿತ್ರವನ್ನು ತೆಗೆಯಿತು. ನೌಕೆಯು ಹಿಮಲಿಯದಿಂದ ಬಹಳ ದೂರದಲ್ಲಿದ್ದ ಕಾರಣ, ಅದರ ಮೇಲ್ಮೈ ವಿವರಗಳಾವುದೂ ತಿಳಿದುಬರಲಿಲ್ಲ.[೧೬]

ನವ ದಿಗಂತ ಯಾತ್ರೆ

[ಬದಲಾಯಿಸಿ]

ಪ್ಲುಟೊವನ್ನು ಗುರಿಯಾಗಿಟ್ಟುಕೊಂಡು ಈಗ ಮಾರ್ಗಮಧ್ಯದಲ್ಲಿರುವ ನವ ದಿಗಂತ ಶೋಧಕವು ಗುರುತ್ವ ಬೆಂಬಲಕ್ಕಾಗಿ ಗುರುವಿನ ಬಳಿ ಹಾದು ಹೋಗಲಿದೆ. ಫೆಬ್ರವರಿ ೨೮, ೨೦೦೭ರಂದು ಈ ಶೋಧಕವು ಗುರುಗ್ರಹದ ಅತಿ ಸಮೀಪಕ್ಕೆ ಬರುತ್ತದೆ.[೧೭] ಗುರುವಿನ ಬಳಿ ತಲುಪಿದಾಗ, ನವ ದಿಗಂತದ ಉಪಕರಣಗಳು ಗುರುವಿನ ಒಳ ಉಪಗ್ರಹಗಳ, ಮುಖ್ಯವಾಗಿ ಅಮಾಲ್ಥಿಯದ ಕಕ್ಷೆಗಳನ್ನು ನಿಖರವಾಗಿ ಮಾಪಿಸುವ ಉದ್ದೇಶವನ್ನು ಹೊಂದಿವೆ. ಈ ಶೋಧಕದ ಕ್ಯಾಮೆರಾಗಳು ಐಓನ ಜ್ವಾಲಾಮುಖಿಗಳನ್ನು ಮಾಪಿಸಿ ೪ ಗೆಲಿಲಿಯೋ ಉಪಗ್ರಹಗಳನ್ನು ವಿವರವಾಗಿ ಅಧ್ಯಯನ ಮಾಡಲಿವೆ.

ಭವಿಷ್ಯದ ಶೋಧಕಗಳು

[ಬದಲಾಯಿಸಿ]

ಧ್ರುವಗಳ ಸುತ್ತ ಪರಿಭಮಿಸಿ ಗುರುವನ್ನು ವಿವರವಾಗಿ ಅಧ್ಯಯನ ಮಾಡುವ ಉದ್ದೇಶದ ಯಾನವನ್ನು ನಾಸಾ ಏರ್ಪಾಡು ಮಾಡುತ್ತಿದೆ. ಜುನೋ, ಎಂದು ಕರೆಯಲಾಗಿರುವ ಈ ಗಗನನೌಕೆಯು ೨೦೧೦ರಲ್ಲಿ ಹಾರಿ ಹೋಗುವ ಸಂಭವನೆಯಿದೆ.

ಯೂರೋಪದ ಮೇಲೆ ದ್ರವಗಳಿರುವ ಸಾಧ್ಯತೆಗಳಿರುವುದರಿಂದ, ಹಿಮಾವೃತ ಉಪಗ್ರಹಗಳ ಬಗ್ಗೆ ಇತ್ತೀಚೆಗೆ ಬಹಳಷ್ಟು ಆಸಕ್ತಿ ಮೂಡಿದೆ. ನಾಸಾ ಪ್ರತಿಪಾದಿಸಿದ ಒಂದು ಯಾತ್ರೆಯು ಈ ಉಪಗ್ರಹಗಳ ಅಧ್ಯಯನಕ್ಕೆಂದೇ ಮುಡಿಪಾಗಿತ್ತು. JIMO (ಹಿಮಾವೃತ ಗುರು ಉಪಗ್ರಹಗಳ ಪರಿಭ್ರಮಕ)ವನ್ನು ೨೦೧೨ರ ನಂತರ ಉಡಾಯಿಸುವ ನಿರೀಕ್ಷೆಯಿತ್ತು. ಆದರೆ, ನಂತರದ ಸಮಯದಲ್ಲಿ ಇದು ಬಹಳ ಅತಿಯಾಸೆಯ ಯಾತ್ರೆಯೆಂದು ಪರಿಗಣಿಸಲ್ಪಟ್ಟು, ಈ ಕಾರ್ಯಕ್ರಮವನ್ನೇ ರದ್ದುಗೊಳಿಸಲಾಯಿತು.

ನೈಸರ್ಗಿಕ ಉಪಗ್ರಹಗಳು

[ಬದಲಾಯಿಸಿ]
ಗುರುವಿನ 4 ಗೆಲಿಲಿಯೋ ಉಪಗ್ರಹಗಳ ಗಾತ್ರಗಳನ್ನು ಹೋಲಿಸುವ ಒಂದು ಸಂಯುಕ್ತ ಚಿತ್ರ. (ಬೃಹತ್ ಕೆಂಪು ಚುಕ್ಕೆ ಈ ಚಿತ್ರದಲ್ಲಿ ಕಾಣುತ್ತದೆ). ಮೇಲಿನಿಂದ ಕೆಳಗೆ: ಕ್ಯಾಲಿಸ್ಟೊ, ಗ್ಯಾನಿಮಿಡ್, ಯೂರೋಪ ಮತ್ತು ಐಓ.

ಗುರುಗ್ರಹವು ಕಡೇಪಕ್ಷ 63 ಉಪಗ್ರಹಗಳನ್ನು ಹೊಂದಿದೆ. ಈ ಉಪಗ್ರಹಗಳ ಸಂಪೂರ್ಣ ಪಟ್ಟಿಗೆ, ಗುರುಗ್ರಹದ ನೈಸರ್ಗಿಕ ಉಪಗ್ರಹಗಳು ಲೇಖನವನ್ನು ನೋಡಿ. ಇವುಗಳ ಆವಿಷ್ಕಾರದ ಸಮಯಗಳ ಪಟ್ಟಿಗೆ, ಸೌರಮಂಡಲದ ಗ್ರಹ/ಉಪಗ್ರಹಗಳ ಆವಿಷ್ಕಾರದ ಸಮಯಗಳು ಲೇಖನವನ್ನು ನೋಡಿ.

"ಗೆಲಿಲಿಯನ್ ಉಪಗ್ರಹ"ಗಳೆಂದು ಕರೆಯಲಾಗುವ 4 ದೊಡ್ಡ ಉಪಗ್ರಹಗಳು: ಐಓ, ಯೂರೋಪ, ಗ್ಯಾನಿಮಿಡ್ ಮತ್ತು ಕ್ಯಾಲಿಸ್ಟೊ.

ಗೆಲಿಲಿಯೋ ಉಪಗ್ರಹಗಳು

[ಬದಲಾಯಿಸಿ]

ಐಓ, ಯೂರೋಪ, ಮತ್ತು ಸೌರಮಂಡಲದಲ್ಲಿ ಅತಿ ದೊಡ್ಡ ಉಪಗ್ರಹವಾದ ಗ್ಯಾನಿಮಿಡ್‌ಗಳ ಕಕ್ಷೆಗಳು ಲಾಪ್ಲೇಸ್ ಅನುರಣನವೆಂದು ಕರೆಯಲಾಗುವ ವಿನ್ಯಾಸವನ್ನು ರೂಪಿಸುತ್ತವೆ; ಗುರುವಿನ ಸುತ್ತ ಐಓ ನಾಲ್ಕು ಪರಿಭ್ರಮಣಗಳನ್ನು ಮಾಡುವಷ್ಟು ಕಾಲದಲ್ಲಿ ಯೂರೋಪ ಎರಡು ಪರಿಭ್ರಮಣಗಳನ್ನು ಮಾಡುತ್ತದೆ ಮತ್ತು ಗ್ಯಾನಿಮಿಡ್ ಒಂದು ಪರಿಭ್ರಮಣವನ್ನು ಮಾಡುತ್ತದೆ. ಆದ್ದರಿಂದ, ಈ ಪ್ರತಿ ಉಪಗ್ರಹದ ಮೇಲೂ ಉಳಿದೆರಡು ಉಪಗ್ರಹಗಳಿಂದ ಹೆಚ್ಚುವರಿ ಸೆಳೆತವು ಉಂಟಾಗುತ್ತದೆ. ಅಲ್ಲದೆ, ಈ ಹೆಚ್ಚುವರಿ ಸೆಳೆತವು ಪ್ರತಿಬಾರಿಯೂ ಉಪಗ್ರಹಗಳ ಕಕ್ಷೆಯ ಒಂದೇ ನಿರ್ದಿಷ್ಟ ಸ್ಥಳದಲ್ಲಿ ಉಂಟಾಗುವುದರಿಂದ, ಈ ಕಕ್ಷೆಗಳು ಅಂಡವೃತ್ತಾಕಾರವನ್ನು ಹೊಂದುತ್ತವೆ.

ಹಬಲ್ ಬಾಹ್ಯಾಕಾಶ ದೂರದರ್ಶಕವು ತೆಗೆದ ಗುರು ಮತ್ತು ಅದರ ಉಪಗ್ರಹವಾದ ಐಓನ ಚಿತ್ರ. ಈ ಚಿತ್ರದಲ್ಲಿ ಐಓನ ನೆರಳು ಕಪ್ಪು ಚುಕ್ಕೆಯಂತೆ ಕಾಣುತ್ತದೆ.

ಆದರೆ, ಗುರುವಿನ ಉಬ್ಬರ ಬಲವು ಈ ಕಕ್ಷೆಗಳನ್ನು ವೃತ್ತಾಕಾರದಲ್ಲಿಡಲು ಯತ್ನಿಸುತ್ತದೆ. ಬಲ-ಪ್ರತಿಬಲಗಳ ಈ ನಿರಂತರ ಪ್ರಯೋಗವು 3 ಉಪಗ್ರಹಗಳ ಆಕಾರಗಳನ್ನು ಸತತವಾಗಿ ಮಾರ್ಪಡಿಸುತ್ತಿರುತ್ತದೆ. ತನ್ನ ಸಮೀಪದಲ್ಲಿರುವಾಗ ಗುರುವಿನ ಗುರುತ್ವವು ಉಪಗ್ರಹಗಳನ್ನು ಪ್ರಬಲವಾಗಿ ಹಿಗ್ಗಿಸುತ್ತದೆ. ಉಪಗ್ರಹಗಳು ಗ್ರಹದಿಂದ ಹೆಚ್ಚು ದೂರದಲ್ಲಿರುವಾಗ, ತಮ್ಮ ಸ್ವಾಭಾವಿಕವಾದ ಗೋಳಾಕಾರಕ್ಕೆ ಮರಳುತ್ತವೆ. ಆಕಾರಗಳಲ್ಲಿ ಈ ರೀತಿಯ ಬದಲಾವಣೆಗಳು, ಉಪಗ್ರಹಗಳ ಒಳಭಾಗಗಳಲ್ಲಿ ಉಬ್ಬರದ ಶಾಖವನ್ನು ಉಂಟುಮಾಡುತ್ತದೆ. ಅಸಾಮಾನ್ಯವಾದ ಜ್ವಾಲಾಮುಖಿ ಚಟುವಟಿಕೆಯನ್ನು ಹೊಂದಿರುವ ಐಓದ ಮೇಲೆ ಮತ್ತು ಹೊಸ ಮೇಲ್ಮೈಯನ್ನು ಹೊಂದಿರುವ ಯೂರೋಪದ ಮೇಲೆ ಈ ಶಾಖದ ಪರಿಣಾಮವನ್ನು ಕಾಣಬಹುದು.

ಭೂಮಿಯ ಚಂದ್ರನೊಂದಿಗೆ ಹೋಲಿಸಿದಂತೆ ಗೆಲಿಲಿಯನ್ ಉಪಗ್ರಹಗಳು
ಹೆಸರು ವ್ಯಾಸ
(ಕಿ.ಮೀ.)
ದ್ರವ್ಯರಾಶಿ
(ಕಿ.ಗ್ರಾಂ.)
ಕಕ್ಷೀಯ ತ್ರಿಜ್ಯ (ಕಿ.ಮೀ.) ಕಕ್ಷೀಯ ಪರಿಭ್ರಮಣ ಕಾಲ (ದಿನಗಳು)
ಐಓ ೩೬೪೩
(ಚಂದ್ರನ ೧೦೫%)
೮.೯×೧೦೨೨
(ಚಂದ್ರನ ೧೨೦%)
೪೨೧ ೭೦೦
(ಚಂದ್ರನ ೧೧೦%)
೧.೭೭
(ಚಂದ್ರನ ೬.೫%)
ಯೂರೋಪ ೩೧೨೨
(ಚಂದ್ರನ ೯೦%)
೪.೮×೧೦೨೨
(ಚಂದ್ರನ ೬೫%)
೬೭೧ ೦೩೪
(ಚಂದ್ರನ ೧೭೫%)
೩.೫೫
(ಚಂದ್ರನ ೧೩%)
ಗ್ಯಾನಿಮಿಡ್ ೫೨೬೨
(ಚಂದ್ರನ ೧೫೦%)
೧೪.೮×೧೦೨೨
(ಚಂದ್ರನ ೨೦೦%)
೧ ೦೭೦ ೪೧೨
(ಚಂದ್ರನ ೨೮೦%)
೭.೧೫
(ಚಂದ್ರನ ೨೬%)
ಕ್ಯಾಲಿಸ್ಟೊ ೪೮೨೧
(ಚಂದ್ರನ ೧೪೦%)
೧೦.೮×೧೦೨೨
(ಚಂದ್ರನ ೧೫೦%)
೧ ೮೮೨ ೭೦೯
(ಚಂದ್ರನ ೪೯೦%)
೧೬.೬೯
(ಚಂದ್ರನ ೬೧%)

ಗುರುಗ್ರಹದ ಉಪಗ್ರಹಗಳ ವಿಂಗಡಣೆ

[ಬದಲಾಯಿಸಿ]

ವಾಯೇಜರ್ ಯಾತ್ರೆಗಳಿಂದ ಹೊರಬಂದ ಫಲಿತಾಂಶಗಳ ಮುನ್ನ, ಗುರುವಿನ ಉಪಗ್ರಹಗಳನ್ನು ಸರಳವಾಗಿ, ೪ ಉಪಗ್ರಹಗಳಿದ್ದ ೪ ಗುಂಪುಗಳನ್ನಾಗಿ ವಿಂಗಡಿಸಲಾಗಿತ್ತು. ಆಗಿನಿಂದ ಉಂಟಾದ ಹಲವಾರು ಸಣ್ಣ ಉಪಗ್ರಹಗಳ ಹೊಸ ಆವಿಷ್ಕಾರಗಳು ಈ ವಿಂಗಡಣೆಯನ್ನು ಜಟಿಲಗೊಳಿಸಿವೆ. ಈಗಿನ ವಿಂಗಡಣೆಯ ಪ್ರಕಾರ ಉಪಗ್ರಹಗಳನ್ನು ಮುಖ್ಯವಾಗಿ ೬ ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಒಂದು ಮೂಲಭೂತ ವಿಭಜನೆಯೆಂದರೆ: ಗುರುವಿನ ಸಮಭಾಜಕದ ಸಮತಳದಲ್ಲಿ ಬಹುಮಟ್ಟಿಗೆ ವೃತ್ತಾಕಾರದ ಕಕ್ಷೆಗಳನ್ನು ಹೊಂದಿದ್ದು ಗುರುಗ್ರಹದೊಂದಿಗೇ ಉದ್ಭವವಾದ ಗುರುವಿನ ೮ ಒಳ ಉಪಗ್ರಹಗಳು, ಮತ್ತು, ಅಂಡಾಕಾರದಲ್ಲಿ ಓರೆಯಾದ ಕಕ್ಷೆಗಳನ್ನು ಹೊಂದಿರುವ ಅನಿರ್ಧಾರಿತ ಸಂಖ್ಯೆಯ ಸಣ್ಣ ಉಪಗ್ರಹಗಳು. ಈ ಸಣ್ಣ ಉಪಗ್ರಹಗಳು ಸೆರೆಹಿಡಿಯಲಾದ ಆಕಾಶಕಾಯಗಳು ಅಥವಾ ಆಕಾಶಕಾಯಗಳ ತುಣುಕುಗಳೆಂದು ನಂಬಲಾಗಿದೆ.

ಗುರುಗ್ರಹದ ನೈಸರ್ಗಿಕ ಉಪಗ್ರಹಗಳಲ್ಲಿ ಒಂದಾದ ಯೂರೋಪ
  1. ನಿಯತ ಉಪಗ್ರಹಗಳು
    1. ನಾಲ್ಕು ಸಣ್ಣ ಉಪಗ್ರಹಗಳ ಒಳ ಸಮೂಹದಲ್ಲಿ ಎಲ್ಲಾ ಉಪಗ್ರಹಗಳೂ ೨೦೦ ಕಿ.ಮೀ.ಗಿಂತ ಕಡಿಮೆ ವ್ಯಾಸವನ್ನು ಹೊಂದಿದ್ದು, ೨೦೦,೦೦೦ ಕಿ.ಮೀ. ಗಿಂತ ಕಡಿಮೆ ತ್ರಿಜ್ಯದಲ್ಲಿ ಗುರುವನ್ನು ಪರಿಭ್ರಮಿಸುತ್ತವೆ ಮತ್ತು ಅರ್ಧ ಡಿಗ್ರಿಗಿಂತ ಕಡಿಮೆ ಅಕ್ಷಾವಾಲಿಕೆಯನ್ನು ಹೊಂದಿವೆ.
    2. ೪೦೦,೦೦೦ ರಿಂದ ೨,೦೦೦,೦೦೦ ಕಿ.ಮೀ. ವ್ಯಾಪ್ತಿಯಲ್ಲಿ ಪರಿಭ್ರಮಿಸುವ ನಾಲ್ಕು ಗೆಲಿಲಿಯನ್ ಉಪಗ್ರಹಗಳು ಸೌರಮಂಡಲದಲ್ಲೇ ಕೆಲವು ಅತಿ ದೊಡ್ಡ ಉಪಗ್ರಹಗಳನ್ನು ಒಳಗೊಂಡಿವೆ.
  2. ಅನಿಯತ ಉಪಗ್ರಹಗಳು
    1. ತನ್ನದೇ ಆದ ಒಂದು ಪ್ರತ್ಯೇಕ ಸಮೂಹದಲ್ಲಿರುವ ಥೆಮಿಸ್ಟೊ ಉಪಗ್ರಹವು ಗೆಲಿಲಿಯನ್ ಉಪಗ್ರಹ ಸಮೂಹ ಮತ್ತು ಮುಂದಿನ ಸಮೂಹದ ನಡುವೆ ಪರಿಭ್ರಮಿಸುತ್ತದೆ.
    2. ೧೧,೦೦೦,೦೦೦-೧೨,೦೦೦,೦೦೦ ಕಿ.ಮೀ. ವ್ಯಾಪ್ತಿಯಲ್ಲಿ ಗುರುವನ್ನು ಪರಿಭ್ರಮಿಸುವ ಹಿಮಲಿಯ ಸಮೂಹವು ಉಪಗ್ರಹಗಳ ಒಂದು ಒತ್ತಾದ ಸಮೂಹ.
    3. ತನ್ನದೇ ಆದ ಸಮೂಹದಲ್ಲಿರುವ ಇನ್ನೊಂದು ಉಪಗ್ರಹ ಕಾರ್ಪೊ. ಅನಾಂಕೆ ಸಮೂಹದ ಒಳ ತುದಿಯಲ್ಲಿದೆ.
    4. ಅನಾಂಕೆ ಸಮೂಹದ ಉಪಗ್ರಹಗಳು ಗುರುವನ್ನು ಸರಾಸರಿ ೨೧,೨೭೬,೦೦೦ ಕಿ.ಮೀ. ಗಳ ದೂರದಲ್ಲಿ ಪರಿಭ್ರಮಿಸುತ್ತವೆ ಮತ್ತು ೧೪೯ ಡಿಗ್ರಿಗಳ ಸರಾಸರಿ ಅಕ್ಷಾವಾಲಿಕೆಯನ್ನು ಹೊಂದಿವೆ.
    5. ಕಾರ್ಮೆ ಸಮೂಹದ ಉಪಗ್ರಹಗಳು ಗುರುವನ್ನು ಸರಾಸರಿ ೨೧,೨೭೬,೦೦೦ ಕಿ.ಮೀ. ಗಳ ದೂರದಲ್ಲಿ ಪರಿಭ್ರಮಿಸುತ್ತವೆ ಮತ್ತು ೧೬೫ ಡಿಗ್ರಿಗಳ ಸರಾಸರಿ ಅಕ್ಷಾವಾಲಿಕೆಯನ್ನು ಹೊಂದಿವೆ.
    6. ಪ್ಯಾಸಿಫೇ ಸಮೂಹವು ಕೆದರಿದಂತಿದ್ದು ಎಲ್ಲಾ ಹೊರ ಉಪಗ್ರಹಗಳನ್ನೂ ಒಳಗೊಂಡಿದೆ.

ಹೊರ ಉಪಗ್ರಹಗಳ ಪ್ರತಿ ಸಮೂಹವೂ ತನ್ನದೇ ಆದ ಒಂದು ಮೂಲದಿಂದ ರೂಪುಗೊಂಡಿತೆಂದು ಯೋಚಿಸಲಾಗಿದೆ. ಈ ಮೂಲವು ದೊಡ್ಡದೊಂದು ಉಪಗ್ರಹ, ಅಥವಾ ಸೆರೆಹಿಡಿಯಲ್ಪಟ್ಟು ನಂತರ ಪುಡಿಯಾದ ಆಕಾಶಕಾಯವಾಗಿದ್ದಿರಬಹುದು.

ಗುರುಗ್ರಹದ ಮೇಲೆ ಜೀವರಾಶಿ

[ಬದಲಾಯಿಸಿ]

ಗುರುವಿನ ವಾಯುಮಂಡಲದಲ್ಲಿ ನೀರಿನ ಅಂಶವು ಬಹಳ ಕಡಿಮೆ. ಇದಲ್ಲದೆ, ಗುರುಗ್ರಹದಲ್ಲಿ ಘನವಾದ ಮೇಲ್ಮೈ ಇದ್ದರೂ, ಅದು ಬಹುಶಃ ಗ್ರಹದ ಒಳಭಾಗದಲ್ಲಿದ್ದು ಅಪಾರವಾದ ಒತ್ತಡಕ್ಕೊಳಪಟ್ಟಿರುತ್ತದೆ. ಈ ಕಾರಣಗಳಿಂದಾಗಿ ಅಲ್ಲಿ ಭೂಮಿಯಂತೆ ಜೀವಿಗಳಿರುವುದು ಬಹಳ ಅಸಂಭವನೀಯ. ಆದರೆ, ವಾಯೇಜರ್ ಯಾತ್ರೆಗಳಿಗೆ ಮುನ್ನ 1976ರಲ್ಲಿ, ಕಾರ್ಲ್ ಸೇಗನ್ ಮತ್ತು ಎಡ್ವಿನ್ ಅರ್ನೆಸ್ಟ್ ಸಾಲ್‌ಪೀಟರ್ ಅವರುಗಳು ಗುರುವಿನ ಹೊರ ವಾಯುಮಂಡಲದಲ್ಲಿ ಅಮೋನಿಯಾ-ಆಧಾರಿತ ಜೀವಿಗಳು ವಿಕಸಿಸಬಹುದೆಂದು ಸೂಚಿಸಿದರು. ಭೂಮಿಯ ಸಾಗರಗಳ ಮೇಲ್ಭಾಗದಲ್ಲಿ ದ್ಯುತಿಸಂಶ್ಲೇಷಣೆ ಮಾಡುವ ಸರಳವಾದ ಸೂಕ್ಷ್ಮ ಸಸ್ಯಜೀವಿಗಳಿರುತ್ತವೆ. ಇದಕ್ಕಿಂತ ಕೆಳಭಾಗದಲ್ಲಿ ವಾಸಿಸುವ ಮೀನುಗಳು ಈ ಸೂಕ್ಷ್ಮ ಸಸ್ಯಗಳನ್ನು ತಿನ್ನುತ್ತವೆ. ಸಾಗರದ ಪರಭಕ್ಷಕಗಳು ಮೀನುಗಳನ್ನು ತಿನ್ನುತ್ತವೆ. ಗುರುಗ್ರಹದ ಮೇಲೂ ಈ ಮಾದರಿಯ ಪರಿಸರವಿರಬಹುದೆಂದು ಸೇಗನ್ ಮತ್ತು ಸಾಲ್‌ಪೀಟರ್‌ರವರು ವಾದಿಸಿದರು. ಈ ಮಾದರಿಯಲ್ಲಿ ಸಿಗಬರುವ 3 ತರಹದ ಜೀವಿಗಳನ್ನು "ಮುಳುಗುವ ಜೀವಿಗಳು", "ತೇಲುವ ಜೀವಿಗಳು" ಮತ್ತು "ಪರಭಕ್ಷಕ ಜೀವಿಗಳು" ಎಂದು ಅವರು ಕರೆದರು. ಈ ವಾದದ ಪ್ರಕಾರ, ಸೂಕ್ಷ್ಮ ಸಸ್ಯಗಳಂತಹ "ಮುಳುಗುವ ಜೀವಿಗಳು" ವಾಯುಮಂಡಲದಲ್ಲಿ ಏಳುತ್ತಾ ಬೀಳುತ್ತಾ ಇರುತ್ತವೆ. ಸಂವಹನೆಯಿಂದ, ಇವು ವಂಶಾಭಿವೃದ್ಧಿ ಮಾಡಲು ಬೇಕಾಗುವಷ್ಟು ಕಾಲ ಇವು ವಾಯುಮಂಡಲದಲ್ಲಿ ತೇಲುತ್ತಿರುತ್ತವೆ. "ತೇಲುವ ಜೀವಿಗಳು" ದೊಡ್ಡ ಚೀಲದ ಆಕಾರದಲ್ಲಿದ್ದು, ಬಿಸಿ ಗಾಳಿ ತುಂಬಿದ ಪುಗ್ಗೆಯಂತೆ (ಬೆಲೂನು) ಕಾರ್ಯ ನಿರ್ವಹಿಸುತ್ತವೆ. ಇವು ಸೂರ್ಯಶಕ್ತಿಯಿಂದ ತಮ್ಮೊಳಗಿರುವ ವಾಯುವನ್ನು ಬಿಸಿಯಾಗಿಟ್ಟುಕೊಳ್ಳುತ್ತವೆ. ಸ್ಕ್ವಿಡ್ನನ್ನು ಹೋಲುವ "ಪರಭಕ್ಷಕ ಜೀವಿಗಳು" ವಾಯುವನ್ನು ರಭಸದಿಂದ ಹಿಂದೆ ಚಿಮ್ಮಿ ಮುನ್ನಡೆಯುತ್ತವೆ. ಇವು "ತೇಲುವ ಜೀವಿ"ಗಳನ್ನು ಭಕ್ಷಿಸಿ ಜೀವಿಸುತ್ತವೆ.[೧೮]

ಟ್ರೋಜನ್ ಕ್ಷುದ್ರಗ್ರಹಗಳು

[ಬದಲಾಯಿಸಿ]
ಗುರುಗ್ರಹವನ್ನು ಪರಿಭ್ರಮಿಸುತ್ತಿರುವ ಟ್ರೋಜನ್ ಕ್ಷುದ್ರಗ್ರಹಗಳನ್ನು ಮತ್ತು ಕ್ಷುದ್ರಗ್ರಹ ಹೊನಲನ್ನು ಈ ಚಿತ್ರವು ತೋರಿಸುತ್ತದೆ.

ತನ್ನ ಉಪಗ್ರಹಗಳನ್ನಲ್ಲದೆ, ಗುರುಗ್ರಹದ ಗುರುತ್ವ ವಲಯವು ಹಲವಾರು ಕ್ಷುದ್ರಗ್ರಹಗಳನ್ನು ನಿಯಂತ್ರಿಸುತ್ತದೆ. ಈ ಕಾಯಗಳು ಗುರುಗ್ರಹದ ಕಕ್ಷೆಯ ಎರಡೂ ಬದಿಗಳಲ್ಲಿರುವ ಲಗ್ರಾಂಜ್ ಬಿಂದುಗಳಲ್ಲಿ ನೆಲೆಗೊಂಡಿವೆ. ಟ್ರೋಜನ್ ಕ್ಷುದ್ರಗ್ರಹಗಳೆಂದು ಕರೆಯಲಾಗುವ ಈ ಕಾಯಗಳನ್ನು ಇಲಿಯಡ್ನ ನೆನಪಿನಲ್ಲಿ, ಗ್ರೀಕ್ ಮತ್ತು ಟ್ರೋಜನ್ "ಶಿಬಿರ"ಗಳನ್ನಾಗಿ ವಿಂಗಡಿಸಲಾಗಿದೆ. ಇವುಗಳಲ್ಲಿ ಮೊದಲನೆಯದಾದ 588 ಅಖಿಲಿಸ್ ಕಾಯವನ್ನು 1906ರಲ್ಲಿ ಮ್ಯಾಕ್ಸ್ ವೊಲ್ಫ್ ಪತ್ತೆ ಹಚ್ಚಿದನು. ಅಂದಿನಿಂದ ಈ ರೀತಿಯ ನೂರಾರು ಕಾಯಗಳನ್ನು ಕಂಡುಹಿಡಿಯಲಾಗಿದೆ. 624 ಹೆಕ್ಟರ್ ಇವುಗಳಲ್ಲಿ ಅತಿ ದೊಡ್ಡದು.

ಧೂಮಕೇತುಗಳ ಆಘಾತ

[ಬದಲಾಯಿಸಿ]
ಧೂಮಕೇತುವಿನ ತುಣುಕು ಗುರುವಿನ ಮೇಲೆ ಅಪ್ಪಳಿಸಿದ ನಂತರದ ಪರಿಣಾಮ. ಮೋಡದ ಪದರಗಳ ಮೇಲೆ ಕಾಣುವ ಗಾಢವಾದ ಕಲೆಗಳು ಭೂಮಿಗಿಂತಲೂ ದೊಡ್ಡದಾಗಿವೆ.

1994ರಲ್ಲಿ ಜುಲೈ 16 ರಿಂದ ಜುಲೈ 22ರ ವರೆಗೆ ಷೂಮೇಕರ್-ಲೆವಿ 9 ಧೂಮಕೇತುವಿನ 20ಕ್ಕೂ ಹೆಚ್ಚು ತುಣುಕುಗಳು ಗುರುಗ್ರಹದ ದಕ್ಷಿಣಾರ್ಧ ಗೋಳವನ್ನು ಅಪ್ಪಳಿಸಿದವು. ಸೌರಮಂಡಲದ ಎರಡು ಕಾಯಗಳು ಈ ರೀತಿ ಅಪ್ಪಳಿಸುವ ದೃಶ್ಯವು ಇದೇ ಮೊದಲ ಬಾರಿಗೆ ನೇರವಾಗಿ ಗೋಚರಿಸಿದ್ದು. ಅದರ ದೊಡ್ಡ ಗಾತ್ರ ಮತ್ತು ಸೌರಮಂಡಲದ ನಡುವೆ ಸ್ಥಿತವಾಗಿರುವ ಜಾಗದ ಕಾರಣದಿಂದಾಗಿ, ಗುರುಗ್ರಹವು ಬೇರೆಲ್ಲಾ ಗ್ರಹಗಳಿಗಿಂತಲೂ ಹೆಚ್ಚು ಧೂಮಕೇತು ಅಪ್ಪಳಿಕೆಗಳನ್ನು ಅನುಭವಿಸುತ್ತದೆ ಎಂದು ನಂಬಲಾಗಿದೆ.

ಇವನ್ನೂ ನೋಡಿ

[ಬದಲಾಯಿಸಿ]

ಹೊರ ಸಂಪರ್ಕ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ "Jupiter". Archived from the original on 2013-07-16. Retrieved 2021-07-21.
  2. Clarke, Arthur C. (1989). 2061: Odyssey Three. Del Rey. ISBN 0-345-35879-1.
  3. Kerr, Richard A. (2004). "Did Jupiter and Saturn Team Up to Pummel the Inner Solar System?". Science. 306 (5702): 1676.
  4. "Working Group on Extrasolar Planets: Definition of a "Planet"". IAU position statement. February 28, 2003. Retrieved 2006-09-09.
  5. Sommeria, Jöel (1988). "Laboratory simulation of Jupiter's Great Red Spot". Nature. 331: 689–693. doi:10.1038/331689a0. Archived from the original on 2006-06-13. Retrieved 2006-12-24. {{cite journal}}: Unknown parameter |coauthors= ignored (|author= suggested) (help); Unknown parameter |month= ignored (help)
  6. "Jupiter's New Red Spot". 2006. Archived from the original on 2008-10-19. Retrieved 2006-03-09.
  7. "JUPITER". Retrieved 2006-03-09.
  8. ೮.೦ ೮.೧ Gautier, D. et al, "The helium abundance of Jupiter from Voyager" (Abstract only) Journal of Geophysical Research, vol. 86, Sept. 30, 1981, p. 8713-8720. URL accessed 15 April 2006
  9. Kunde, V. G. et al, "Jupiter's Atmospheric Composition from the Cassini Thermal Infrared Spectroscopy Experiment" - Science 10 September 2004, Vol. 305. no. 5690, pp. 1582 - 1586. URL accessed 15 April 2006.
  10. S. J. Kim, 1 J. Caldwell, A. R. Rivolo, R. Wagner (1985). "Infrared Polar Brightening on JupiterIII. Spectrometry from the Voyager 1 IRIS Experiment". ICARUS. 64: 233–248.{{cite journal}}: CS1 maint: multiple names: authors list (link) CS1 maint: numeric names: authors list (link)
  11. ೧೧.೦ ೧೧.೧ Wong, Al (May ೨೮, ೧೯೯೮). "Galileo FAQ - Navigation". NASA. Retrieved ೨೦೦೬-೧೧-೨೮. {{cite web}}: Check date values in: |accessdate= and |date= (help)
  12. Hirata, Chris. "Delta-V in the Solar System". California Institute of Technology. Archived from the original on 2007-07-01. Retrieved ೨೦೦೬-೧೧-೨೮. {{cite web}}: Check date values in: |accessdate= (help)
  13. {{cite web | last = Lasher | first = Lawrence | date = August 1, 2006 | url = http://spaceprojects.arc.nasa.gov/Space_Projects/pioneer/PNhome.html | title = Pioneer Project Home Page | publisher = NASA Space Projects Division | accessdate = 2006-11-28 | archive-date = 2006-01-01 | archive-url = https://web.archive.org/web/20060101001205/http://spaceprojects.arc.nasa.gov/Space_Projects/pioneer/PNhome.html | url-status = ಳು ಗೆಲಿಲಿಯೋ ಉಪಗ್ರಹಗಳ ಬಗ್ಗೆ ಇದ್ದ ತಿಳುವಳಿಕೆಯನ್ನು ಅಪಾರವಾಗಿ ಹೆಚ್ಚಿಸಿ, ಗುರುಗ್ರಹದ ಉಂಗುರಗಳನ್ನು ಕಂಡುಹಿಡಿದವು. ಇವಲ್ಲದೆ ಗುರುಗ್ರಹದ ವಾಯುಮಂಡಲವನ್ನು ನಿಕಟದಿಂದ ಮೊದಲಬಾರಿಗೆ ಚಿತ್ರೀಕರಿಸಿದವು.
  14. ಯೂಲಿಸೆಸ್‌ನ ಕಾರ್ಯಾಚರಣೆಗಳು: ೧೩ಕ್ಕೂ ಹೆಚ್ಚು ವರ್ಷಗಳ ಅಂತರರಾಷ್ಟ್ರೀಯ ಸಹಕಾರ
  15. ೧೫.೦ ೧೫.೧ Galileo: Journey to Jupiter
  16. C. J. Hansen, S. J. Bolton, D. L. Matson, L. J. Spilker, J.-P. Lebreton (2004). "The Cassini-Huygens flyby of Jupiter". Icarus. 172 (1): 1–8.{{cite journal}}: CS1 maint: multiple names: authors list (link)
  17. New Horizons Snaps First Picture of Jupiter
  18. "ಗುರುಗ್ರಹದ ಮೇಲೆ ಜೀವರಾಶಿ". Archived from the original on 2012-02-10. Retrieved 2006-12-24.


  • Bagenal, F. & Dowling, T. E. & McKinnon, W. B. (Eds.). (2004). Jupiter: The planet, satellites, and magnetosphere. Cambridge: Cambridge University Press.
  • Beebe, Reta (2002) [1997]. Jupiter: The Giant Planet (Second ed.). Washington, D.C.: Smithsonian Institute Press. ISBN 1560986859.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]