ಏಕತೆಗಳು
ಏಕತೆಗಳು: ನಾಟಕದಲ್ಲಿ ಕಾಲ, ಸ್ಥಳ ಮತ್ತು ಘಟನಾವಳಿಗೆ ಸಂಬಂಧಿಸಿ ಇರಬೇಕಾದುವು ಮೂರು ಏಕತೆಗಳು, ನಾಟಕದ ಏಕತೆಗಳು ಎಂದೂ ಹೆಸರುಂಟು (ದಿ ಯೂನಿಟೀಸ್). ಫ್ರೆಂಚರಲ್ಲಿ ಲೆಸ್ ಯೂನಿತೆ ಸ್ಕ್ಯಾಲಿಜೆರಿಯೆನ್ ಎಂಬ ಹೆಸರು ಸರ್ವಸಾಮಾನ್ಯವಾಗಿ ರೂಢಿಯಲ್ಲಿತ್ತು. 1561ರಲ್ಲಿ ಒಂದು ಕಾವ್ಯ ವಿಚಾರಣೆಯ ಗ್ರಂಥವನ್ನು ಪ್ರಕಟಿಸಿದ ಇಟಲಿಯ ಜೆ.ಸಿ. ಸ್ಕ್ಯಾಲಿಜರನಿಂದ ಏಕತೆಗಳ ವಿಧಿ ಏರ್ಪಟ್ಟಿತೆಂದು ಫ್ರೆಂಚರ ನಂಬಿಕೆ. ನಾಟಕದ ಕಥೆ ವಾಸ್ತವಿಕ ಸತ್ಯವೋ ಎಂಬಂತೆ ತೋರಿ ಬರಬೇಕು ಎಂದು ನುಡಿದು ಸ್ಕ್ಯಾಲಿಜರ್ ಏಕತೆಗಳ ಕಡೆಗೆ ಬೆರಳು ಕೊಂಕಿಸಿದನೇ ಹೊರತು ಸ್ಪಷ್ಟವಾಗಿ ಸೂತ್ರಗೈಯಲಿಲ್ಲ. ಹಾಗೆ 1570ರಲ್ಲಿ ಶಾಸನ ಉಚ್ಚರಿಸಿದಾತ ಇಟಲಿಯ ಕ್ಯಾಸಲ್ ವೆಟ್ರೊ. 1572ರಲ್ಲಿ ಫ್ರೆಂಚ್ ನಾಟಕಕರ್ತ ಜೀನ್ ದ ಲ ಟೇಯ್ಯ ನಾಟಕಕ್ಕೆ ಕಾಲದ ಏಕತೆ, ಸ್ಥಳದ ಏಕತೆ, ಘಟನಾವಳಿಯ ಏಕತೆ-ಮೂರೂ ಅತ್ಯಗತ್ಯವೆಂದು ನೇಮಿಸಿದ. ಅಲ್ಲಿಂದ ಸುಮಾರು ಇನ್ನೂರೈವತ್ತು ಸಂವತ್ಸರ ಪುರ್ತಿ ಅವುಗಳ ಆಧಿಪತ್ಯ ಒಂದೇ ಸಮನೆ ನಡೆಯಿತು.
ಅರ್ಥವಿವರಣೆ
[ಬದಲಾಯಿಸಿ]ಏಕತೆಗಳ ಅರ್ಥವಿವರಣೆ ಹೀಗೆ : 1. ನಾಟಕದಲ್ಲಿ ಜರುಗುವ ಕಥೆ ತೆಗೆದುಕೊಳ್ಳುವ ಸಮಯ 24 ಗಂಟೆಗಳ ಒಂದು ದಿವಸವನ್ನು ಮೀರಬಾರದು. 2. ಎಲ್ಲ ಘಟನೆಗಳೂ ಒಂದೇ ಸನ್ನಿವೇಶದಲ್ಲಿ ಅಥವಾ ಒಂದು ಸ್ಥಳದ ಹತ್ತಿರ ಹತ್ತಿರ ನಡೆಯತಕ್ಕದ್ದು; ಸ್ಥಳಾಂತರ ಆಗಕೂಡದು. 3. ನಾಟಕದಲ್ಲಿ ಹಲವು ಘಟನೆಗಳು ಬಂದರೂ ಅವೆಲ್ಲ ಒಟ್ಟುಗೂಡಿ ಒಂದೇ ಘಟನಾವಳಿಯಾಗಿರಬೇಕು; ಅಪ್ರಕೃತವಾದ ಯಾವೊಂದು ಸಂಗತಿಗೂ ಕಥಾಸಂವಿಧಾನದಲ್ಲಿ ಪ್ರವೇಶವಿರಕೂಡದು.
ಅರಿಸ್ಟಾಟಲನ ಪರಿಕಲ್ಪನೆ
[ಬದಲಾಯಿಸಿ]ಏಕತೆಗಳ ವಿಧಿ ಇಟಲಿಯ ಹೊಸ ಹುಟ್ಟಿನ ವಿಮರ್ಶಕರಿಂದ ಸ್ವಕಪೋಲ ಕಲ್ಪಿತವಾದುದಲ್ಲ; ರೂಪಕ ವಿಮರ್ಶೆಯ ಪ್ರತಿಷ್ಠಾಪಕನಾದ ಅರಿಸ್ಟಾಟಲನ ಕಾವ್ಯ ಮೀಮಾಂಸೆಯ ಮೇಲೆ ಅವರು ತಪ್ಪು ನೆಪ್ಪಾಗಿ ಮಾಡಿದ ವ್ಯಾಖ್ಯಾನದ ಫಲ. ಅರಿಸ್ಟಾಟಲನ ಬರೆವಣಿಗೆಯಲ್ಲಿ ಖಚಿತವಾಗಿ ನಿರೂಪಿತವಾಗಿರುವುದು ರೂಪಕದ ಕಥಾವಸ್ತುವಿನ ಏಕತೆ ಒಂದೆ. ಅವನ ಹೇಳಿಕೆ ಹೀಗಿದೆ: ನಾಟಕದ ಕಥೆ ಒಂದೇ ಘಟನಾವಳಿಯಾಗಿರತಕ್ಕದ್ದು. ಅದರ ಬಿಡಿ ಪ್ರಸಂಗಗಳನ್ನು ಎಷ್ಟು ಅಚ್ಚುಕಟ್ಟಾಗಿ ಹೊಸೆದಿರಬೇಕೆಂದರೆ ಅವುಗಳಲ್ಲಿ ಒಂದನ್ನು ತೆಗೆದು ಹಾಕಿದರೂ ಅಥವಾ ಅದು ಇರುವ ಸ್ಥಾನವನ್ನು ಬದಲಾಯಿಸಿದರೂ ಪೂರ್ತಿ ಕಥೆಯ ರೂಪವೇ ಕೆಟ್ಟು ಹೋಗಬೇಕು. ಕಾಲದ ಏಕತೆಯನ್ನು ಆತ ಎಲ್ಲಿಯೂ ಕಡ್ಡಾಯವಾಗಿ ವಿಧಿಸಿಲ್ಲ. ಪೊಯಟಿಕ್ಸ್ ಗ್ರಂಥದ 5ನೆಯ ಅಧ್ಯಾಯದಲ್ಲಿ ನಾಟಕದ ಘಟನಾವಳಿಗೆ ಸಾಧಾರಣವಾಗಿ ಹಿಡಿಯುವ ಕಾಲಾವಧಿಯನ್ನು ಸೂಚಿಸುವ ವಾಕ್ಯವೊಂದಿದೆ; ಸೂರ್ಯನ ಒಂದು ಪರಿವರ್ತನದೊಳಗೆ ಅಡಕವಾಗುವುದು ರುದ್ರ ನಾಟಕದ ಪ್ರಯತ್ನ; ಆ ಮಿತಿಗಿಂತ ಹೆಚ್ಚಾದರೆ ಎಲ್ಲೋ ಅತ್ಯಲ್ಪ ಹೆಚ್ಚಾಗುತ್ತದೆ. ಸ್ಥಳದ ಏಕತೆಯನ್ನು ಅರಿಸ್ಟಾಟಲ್ ಎಲ್ಲಿಯೂ ಹೆಸರಿಸಿಯೇ ಇಲ್ಲ. ಗಂಭೀರ ನಾಟಕದ ಘಟನಾವಳಿಗಳು ಭವ್ಯ ಕಾವ್ಯದ ಘಟನಾವಳಿಗಳಂತೆ ವಿಶಾಲವಾದುದಲ್ಲ; ಚಿಕ್ಕವು. ಅವಕ್ಕೆ ಸಂಕುಚಿತ ಮೇರೆಗಳುಂಟು-ಇತ್ಯಾದಿ ವಾಕ್ಯಗಳನ್ನು ಸ್ಥಳ ಸೂಚನೆಯೆಂದು ತಿಳಿಯಲಾಗುವುದಿಲ್ಲ. ತಿಳಿದರೂ ಅವಕ್ಕೆ ಸೂತ್ರದ ವೈಖರಿ ಇಲ್ಲ. ನಿಜಾಂಶ ಇಂತಿದ್ದರೂ ಇಟಲಿಯ ಪಂಡಿತರು ಮೂರು ಏಕತೆಗಳನ್ನು ಶಾಸ್ತ್ರೀಯವಾಗಿ ವಿಧಾಯಕ ಮಾಡಿದರು. ಫ್ರಾನ್ಸಿನಲ್ಲಿ ಅವಕ್ಕೆ ರಾಜಾಜ್ಞೆಗೆ ಸದೃಶವಾದ ಗೌರವ ದೊರಕಿತು. ಸೂರ್ಯನ ಒಂದು ಪರಿವರ್ತನ ಎಂದರೆ ಒಂದು ಹಗಲು ಅಥವಾ 12 ಗಂಟೆಗಳು ಎಂದೂ, ಸ್ಥಳದ ಏಕತೆಯೆಂದರೆ ಒಂದೇ ಹೊರ ಅಂಗಳ, ಒಂದೇ ಹಜಾರ ಅಥವಾ ಒಂದೇ ಕೊಠಡಿ ಎಂದು ಅರ್ಥವೆಂದೂ ಅಲ್ಲಿನ ಕೆಲವು ವಿದ್ವಜ್ಜನರ ಮೊಂಡಾಟ. ಇನ್ನೂ ಕೆಲವರು 24 ಗಂಟೆ ಅಥವಾ 36 ಗಂಟೆ ಆಗಬಹುದೆಂದೂ ಕಾರ್ಯಕ್ಷೇತ್ರ ಒಂದೇ ಊರಾದರೆ ಸಾಕೆಂದೂ ಔದಾರ್ಯ ತೋರಿದರು. ಏಕತೆಗಳ ನಿಯಮದಿಂದ ನಾಟಕಕಾರ ಕಾರ್ನೀಲ್ ಬಹು ತ್ರಾಸಗೊಂಡ. ಆದರೆ ರಾಸೀನ್ ಅವು ಮೂರನ್ನೂ ಅಚ್ಚುಕಟ್ಟಾಗಿ ಅನುಸರಿಸಿದ. ಅದರಿಂದ ಅವನ ನಾಟಕಗಳಲ್ಲಿ ಸಹಜತೆ, ಸಮಂಜಸತ್ವಗಳಿಗೆ ಏನೂ ಕುಂದುಬಂದಿಲ್ಲ.
ಯುರೋಪಿಯನ್ ಸಾಹಿತ್ಯದಲ್ಲಿ
[ಬದಲಾಯಿಸಿ]16, 17ನೆಯ ಶತಮಾನದ ಇಂಗ್ಲೆಂಡ್ ಮತ್ತು ಸ್ಪೇನ್ ದೇಶಗಳಲ್ಲಿ ಆ ನಿಯಮಕ್ಕೆ ಕವಿಗಳು ಅಷ್ಟಾಗಿ ತಲೆ ಬಾಗಲಿಲ್ಲ್ಲ. ಸಿಡ್ನಿ, ಬೆನ್ ಜಾನ್ಸನ್ ಇತ್ಯಾದಿ ವಿಮರ್ಶಕರ ಗರ್ಜನೆ ಇದ್ದರೂ ಮಾರ್ಲೋ, ಷೇಕ್ಸ್‌ಪಿಯರ್, ಲೋಪ್ ಡ ವೀಗ, ಕಾಲ್ಡೆರನ್ ಮೊದಲಾದ ಮಹಾಕವಿಗಳು ಧಾರಾಳಚಿತ್ತವೃತ್ತಿಯಿಂದಲೇ ಕೃತಿ ರಚನೆಗೈದರು. ಅವರ ರೂಪಕದ ಪ್ರಮುಖ ಲಾಂಛನ ವೈಶಾಲ್ಯ, ವೈವಿಧ್ಯ, ಆದರೂ ಕಲೆಗೆ ಎಂದೆಂದೂ ಮರ್ಯಾದೆಯೀಯುವ ಸಂವಿಧಾನದ ಏಕತೆಯನ್ನು ಅವರು ಕೈಬಿಟ್ಟಿಲ್ಲ್ಲ. ನಾಟಕ ಎಷ್ಟೇ ಆದರೂ ನಾಟಕ ಮಂದಿರದಲ್ಲಿ ಮೂರು ನಾಲ್ಕು ಗಂಟೆಗಳ ಅವಧಿಯಲ್ಲಿ ನಟರ ಅಭಿನಯದ ಮೂಲಕ ಜರುಗಿ, ಪ್ರೇಕ್ಷಕ ಸಂದೋಹಕ್ಕೆ ಹರ್ಷೋಲ್ಲಾಸವನ್ನಿತ್ತು, ಮುಗಿದು ಹೋಗುವ ಮಿಶ್ರ ಕಲೆಯ ವ್ಯಾಪಾರ. ಆದ್ದರಿಂದ ಅದು ಕಾದಂಬರಿ, ಭವ್ಯಕಾವ್ಯಗಳಂತೆ ನಿಧಾನವಾಗಿ ಹೆಚ್ಚು ಸ್ವಾತಂತ್ರ್ಯದಿಂದ ನಡೆಯುವಂತಿಲ್ಲ. ಯುಕ್ತ ನಿಯಮಗಳ ಹದ್ದಿನಲ್ಲಿ ಅದು ಇದ್ದೇ ಇರತಕ್ಕದ್ದು; ಇಲ್ಲದಿದ್ದರೆ ಅದರಿಂದ ರಸಭಂಗ ಖಂಡಿತ. ಏಕತೆಯೆಂಬ ಮಾತನ್ನು ನಟರಾಗಲಿ ನಾಟಕಕಾರನಾಗಲಿ ಅಲ್ಲಗಳೆದರೆ ಕಷ್ಟ; ಎಂದರೆ ಏಕತೆಯನ್ನು ವಿಶಾಲಾರ್ಥದಲ್ಲಿ ಗ್ರಹಿಸತಕ್ಕದ್ದು. ಒಂದೇ ಕಥೆಯಿಂದ ಕಟ್ಟಿದ ಈಸ್ಕಿಲಸ್‍ನ ಆಗಮೆಮ್ನಾನ್‍ನದಲ್ಲೂ ಏಕತೆಯಿದೆ; ನಾಲ್ಕು ಕಥೆಗಳನ್ನು ಒಟ್ಟುಗೂಡಿಸಿ ಕಟ್ಟಿದ ಷೇಕ್ಸ್‌ಪಿಯರನ ದ ಮರ್ಚೆಂಟ್ ಆಫ್ ವೆನಿಸ್‍ನಲ್ಲೂ ಏಕತೆಯಿದೆ.
ಪ್ರಸ್ತುತ ಚಿಂತನೆ
[ಬದಲಾಯಿಸಿ]ಈಚೆಗೆ ಕೆಲವು ವಿದ್ವಾಂಸರು ಆ ಮೂರು ಏಕತೆಗಳಿಗಿಂತಲೂ ತೋರಿಕೆಯ ಅಥವಾ "ಪರಿಣಾಮದ ಏಕತೆ" (ಯೂನಿಟಿ ಆಫ್ ಇಂಪ್ರೆಷನ್) ಹೆಚ್ಚಾದುದು, ಅಗತ್ಯ ವಾದುದು ಎಂದಿದ್ದಾರೆ. ನಾಟಕ ನಡೆಯುತ್ತ ನಡೆಯುತ್ತ ಕಡೆಗೆ ನೋಟಕನ ಮನಸ್ಸಿನಲ್ಲಿ ಮುದ್ರಿತವಾಗಿ ಉಳಿದು ನಿಲ್ಲುವ ಪರಿಣಾಮ ಏಕಮುಖದ್ದಾಗಿರಬೇಕು. ಅದು ಸರಿ. ಆದರೆ ಅದನ್ನು ರೂಪಕಕ್ಕೆ ಮಾತ್ರ ಏತಕ್ಕೆ ಮೀಸಲಿಡಬೇಕು ? ಎಲ್ಲ್ಲ ಸಾಹಿತ್ಯ ಪ್ರಕಾರಗಳಿಗೂ ಅದನ್ನು ಹೊಂದಿಸುವುದು ನ್ಯಾಯವೆಂದು ತೋರುತ್ತದೆ. ಷೇಕ್ಸ್‌ಪಿಯರ್ ಕಾಲೈಕ್ಯ, ಸ್ಥಳೈಕ್ಯಗಳನ್ನು ಪಾಲಿಸಲಿಲ್ಲ. ಅವನಿಗಿಂತ ಚಿಕ್ಕವನಾದ ಮಿಲ್ಟನ್ ತನ್ನ ಸ್ಯಾಮ್ಸನ್ ಅಗನಿಸ್ಟೀಸ್ ನಾಟಕದಲ್ಲಿ ಕಾಲೈಕ್ಯ ಸ್ಥಳೈಕ್ಯವನ್ನು ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸಿದ-ಎಷ್ಟರಮಟ್ಟಿಗೆ ಎಂದರೆ, ನಾಟಕದ ಕ್ರಿಯೆಯು ನಿಜಜೀವನದಲ್ಲಿ ತೆಗೆದುಕೊಳ್ಳುವಷ್ಟೇ ಕಾಲವನ್ನು ಅಭಿನಯದಲ್ಲಿ ತೆಗೆದುಕೊಳ್ಳುತ್ತದೆ.
ಭಾರತೀಯ ಚಿಂತನೆ
[ಬದಲಾಯಿಸಿ]ಸಂಸ್ಕೃತನಾಟಕದಲ್ಲಿ ಕಾಲೈಕ್ಯ, ಸ್ಥಳೈಕ್ಯಗಳ ಪರಿಕಲ್ಪನೆಯೇ ಇಲ್ಲ. ಶಾಕುಂತಲ ನಾಟಕದ ಕ್ರಿಯೆ ಹಲವು ವರ್ಷಗಳನ್ನು ಆವರಿಸಿದೆ. ಬೇರೆ ಬೇರೆ ಸ್ಥಳಗಳಲ್ಲಿ ನಡೆಯುತ್ತದೆ. ಕನ್ನಡ ನಾಟಕಗಳು ಆಧುನಿಕ ಯುಗದವು. ಶ್ರೀ ಅವರು ಅಶ್ವತ್ಥಾಮ ನಾಟಕದಲ್ಲಿ ಕಾಲೈಕ್ಯ, ಸ್ಥಳೈಕ್ಯಗಳನ್ನು ಪಾಲಿಸಿದರು; ಆದರೆ ಆ ನಾಟಕಕ್ಕೆ ಪ್ರಾಚೀನ ಗ್ರೀಸಿನ ಅಜಾಕ್ಸ್ ನಾಟಕದ ಮೂಲ. ಕುವೆಂಪು ಅವರು ಬೆರಳ್-ಗೆ-ಕೊರಳ್ ನಲ್ಲಿ ಕಾಲೈಕ್ಯ, ಸ್ಥಳೈಕ್ಯಗಳನ್ನು ಪಾಲಿಸುತ್ತಾರೆ. ಬೇಂದ್ರೆಯವರ ಜಾತ್ರೆಯಲ್ಲಿ ಕ್ರಿಯೆ ಒಂದೇ ಸ್ಥಳದಲ್ಲಿ ನಡೆಯುತ್ತದೆ. ಕೆಲವೇ ನಿಮಿಷಗಳಲ್ಲಿ ಮುಗಿದು ಹೋಗುತ್ತದೆ. ಆಧುನಿಕ ಕನ್ನಡ ರಂಗಭೂಮಿಯು ಈ ಎರಡು ಐಕ್ಯಗಳಿಗೆ ಗಂಟು ಬಿದ್ದಿಲ್ಲ. ಅವನ್ನು ತಿರಸ್ಕರಿಸಿಯೂ ಇಲ್ಲ. ಅವುಗಳನ್ನು ಪಾಲಿಸುವುದು ಕ್ರಿಯೆಯ ಸ್ವರೂಪವನ್ನು ಹೊಂದಿಕೊಂಡಿದೆ. ಇಡೀ ನಾಟಕವು ಒಂದು ಸ್ಪಷ್ಟವಾದ ಏಕರೂಪದ ಅನುಭವವನ್ನು ತಂದುಕೊಡ ಬೇಕೆಂಬ ಅರ್ಥದಲ್ಲಿ ಕ್ರಿಯೆಯ ಐಕ್ಯತೆ, ಪರಿಣಾಮದ ಐಕ್ಯತೆ ಅನಿವಾರ್ಯ, ಈ ಅನುಭವ ಸಂಕೀರ್ಣವಾಗಿರಬಹುದು, ಆದರೆ ಅದರಲ್ಲಿ ಏಕರೂಪತೆ, ಸಾಮಂಜಸ್ಯ ಅಗತ್ಯ. ಉಳಿದೆರಡು ಐಕ್ಯಗಳು ಅನಿವಾರ್ಯವೂ ಅಲ್ಲ, ತಿರಸ್ಕರಿಸಬೇಕಾದವೂ ಅಲ್ಲ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- The Poetics of Aristotle, translated by Samuel Henry Butcher at Project Gutenberg
- Preface to Shakespeare, by Samuel Johnson at Project Gutenberg