ಹಾಲ್ದೊಡ್ಡೇರಿ

ವಿಕಿಪೀಡಿಯ ಇಂದ
Jump to navigation Jump to search

ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕಿನಲ್ಲಿರುವ ಪುಟ್ಟ ಗ್ರಾಮ ಹಾಲ್ದೊಡ್ಡೇರಿ. ಬೆಂಗಳೂರು ನಗರದಿಂದ ಸುಮಾರು 100 ಕಿಲೋಮೀಟರ್ ದೂರದಲ್ಲಿದೆ. ಬೆಂಗಳೂರು-ಚಿತ್ರದುರ್ಗ ಮಾರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಲಭಾಗಕ್ಕೆ ಕಾಣುವ ಐತಿಹಾಸಿಕ ಸೀಬಿ ನರಸಿಂಹಸ್ವಾಮಿ ದೇವಸ್ಥಾನದ ಸಮೀಪ ಈ ಗ್ರಾಮವಿದೆ. ಪ್ರಸ್ತುತ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಈ ಗ್ರಾಮದಲ್ಲಿ ದೊಡ್ಡದೊಂದು ಕೆರೆಯಿದೆ. ಹಾಗೆಯೇ ಪುರಾತನವಾದ ದೊಡ್ಡ ಆಲದ ಮರವಿದೆ. ಊರ ಹನುಮಂತ ದೇವಸ್ಥಾನವು ಕೆರೆಯ ಮಗ್ಗುಲಿನಲ್ಲಿದೆ. ತೆಂಗು, ಮಾವು, ಭತ್ತ, ಅಡಿಕೆ ಇಲ್ಲಿನ ಮುಖ್ಯ ಬೆಳೆಗಳು. ಉಳಿದಂತೆ ಹಳೆಯ ಸೀಗೇಕಾಯಿ ಹಾಗೂ ಹುಣಸೇಹಣ್ಣು ರೈತರಿಗೆ ಆದಾಯ ತರುವಂಥವು. ತುಮಕೂರು ಮತ್ತು ಸಿರಾ ಎರಡರ ನಡೂಮಧ್ಯೆ ಈ ಗ್ರಾಮವಿರುವ ಕಾರಣ, ರೈತರ ಬಹುತೇಕ ವಹಿವಾಟು ಜಿಲ್ಲಾಕೇಂದ್ರವಾದ ತುಮಕೂರಿನೊಂದಿಗೆ.

20ನೆಯ ಶತಮಾನದ ಆದಿಯಲ್ಲಿ ಇಲ್ಲಿ ನೆಲೆಯೂರಿದ್ದ ಓದು-ಬರಹ ತಿಳಿಯದ ಕೃಷಿಕ ರಂಗಣ್ಣ ಹಾಗೂ ಮೈಸೂರು ನಗರದಲ್ಲಿ ಆಗಿನ ಕಾಲಕ್ಕೆ ಐದನೆಯ ತರಗತಿಯವರೆಗೆ ಓದಿದ್ದ ಕಿಟ್ಟಮ್ಮ ಅಲಿಯಾಸ್ ಕೃಷ್ಣವೇಣಿ ದಂಪತಿಗಳಿಗೆ ಆರು ಜನ ಮಕ್ಕಳು. ಲಕ್ಷ್ಮಿನರಸು, ರಾಘವೇಂದ್ರ, ಸತ್ಯವತಿ, ನಾಗೇಶ, ಜಾನಕಿ ಹಾಗೂ ಪ್ರಹ್ಲಾದ. ಕೃಷ್ಣವೇಣಿಯವರ ತಂಗಿ ಸುಬ್ಬಲಕ್ಷ್ಮಿ ಆಗಿನ ಬ್ರಿಟಿಷ್ ಸರ್ಕಾರದ ಶಾಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿ. ತುಮಕೂರು ಜಿಲ್ಲೆಯ ಸಮೀಪದ ಹಳ್ಳಿಗಳಲ್ಲಿ ಈಕೆಯ ವಾಸ್ತವ್ಯ. ಮದುವೆಯಾದ ಹೊಸತರಲ್ಲೇ ಪತಿ ವಿಯೋಗದ ಸುಬ್ಬಲಕ್ಷ್ಮಿಯ ಬಳಿ ಅಕ್ಕ ತನ್ನ ಮಕ್ಕಳನ್ನು ಓದು ಬರಹಕ್ಕೆಂದು ಕಳುಹಿಸುತ್ತಿದ್ದಳು. ಮಕ್ಕಳನ್ನು ಹೆತ್ತಾಗ ಬಾಣಂತನಕ್ಕೂ ತಂಗಿಯ ಮನೆಯೇ ಅಕ್ಕನಿಗೆ ಆಸರೆ. ನಾಲ್ಕನೆಯ ಮಗು ನಾಗೇಶ (ಹೆಚ್.ಆರ್.ನಾಗೇಶರಾವ್) ಹುಟ್ಟಿದ್ದು ಚಿಕ್ಕಮ್ಮನ ಮನೆ ಮಧುಗಿರಿಯಲ್ಲಿ - 20 ಅಕ್ಟೋಬರ್ 1927ರಂದು. ಅನಕ್ಷರತೆಯಿಂದ ತನ್ನ ಗಂಡನಿಗಾಗುತ್ತಿರುವ ತೊಂದರೆ ಮಕ್ಕಳಿಗೆ ಆಗದಿರಲಿ ಎಂಬ ಉದ್ದಿಶ್ಯದಿಂದ ಮೊದಲ ಮೂರು ಮಕ್ಕಳ ಪ್ರಾಥಮಿಕ ಓದು ಹಾಗೂ ಮದುವೆ ಮುಗಿದ ನಂತರ ಕೊನೆಯ ಮೂರು ಮಕ್ಕಳೊಂದಿಗೆ ಕಿಟ್ಟಮ್ಮ ತುಮಕೂರಿಗೆ ಹೊರಟರು. ಹಾಲ್ದೊಡ್ಡೇರಿಯಲ್ಲಿಯೇ ಉಳಿದು ರಂಗಣ್ನ, ಹೆಂಡತಿ ಮಕ್ಕಳ ಜೀವನ ನಿರ್ವಹಣೆಗೆ ಆಧಾರವಾದರು. ಓದು ಬರಹದಲ್ಲಿ ಚುರುಕಾಗಿದ್ದ ನಾಗೇಶ, ತರಗತಿಯ ಎಲ್ಲ ಚಟುವಟಿಕೆಗಳಲ್ಲಿ ಸದಾ ಮುಂದು. ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ನಡುವೆ ದೇಶದೆಲ್ಲೆಡೆ ಶಾಲಾ ಮಕ್ಕಳೂ ಭಾಗವಹಿಸುತ್ತಿದ್ದ ಸ್ವಾತಂತ್ರ್ಯ ಚಳುವಳಿಯಲ್ಲಿ ನಾಗೇಶ ಭಾಗಿಯಾಗುತ್ತಿದ್ದ. ಬ್ರಿಟಿಷರ ವಿರುದ್ಧ ಕರಪತ್ರಗಳನ್ನು ಬರೆದು ಪೇಟೆ ಬೀದಿಯ ಅಂಗಡಿಗಳ ಮೇಲೆ ಅಂಟಿಸುವುದು. ಪತ್ರಿಕೆಗಳಲ್ಲಿ ಅಚ್ಚಾಗಿದ್ದ ಸ್ವಾತ್ರಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಸುದ್ದಿ-ಲೇಖನಗಳನ್ನು ಹಲವಾರು ಪ್ರತಿಗಳಲ್ಲಿ ನಕಲು ಮಾಡಿ ಹಂಚುವ ಕಾರ್ಯವನ್ನೂ ಮಾದುತ್ತಿದ್ದ. ಕೈಬರಹದ ಪತ್ರಿಕೆಗಳನ್ನು ಹೊರತಂದು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತಿದ್ದ. ಗಾಂಧೀಜಿಯ ಕರೆಯ ಮೇರೆಗೆ 1942ಚಲೇಜಾವ್ ಚಳವಳಿಯ ಸಮಯದಲ್ಲಿ ಮೂರು ತಿಂಗಳಿಗೂ ಹೆಚ್ಚು ಕಾಲ ಗೆಳೆಯರೊಂದಿಗೆ ಶಾಲೆಗಳನ್ನು ಬಹಿಷ್ಕರಿಸಿ, ವಿದ್ಯಾರ್ಥಿ ಆಂದೋಲನದಲ್ಲಿ ಭಾಗಿಯಾಗಿದ್ದ. ಹಾಗೆಯೇ ತುಮಕೂರಿನ ಜೈಲಿನಲ್ಲಿ ಬಂಧಿಗಳಾಗಿದ್ದ ಸ್ವಾತಂತ್ರ್ಯ ಹೋರಾಟಗಾರರಿಗೆ ಅಗತ್ಯ ಸೇವೆಗಳನ್ನು ಒದಗಿಸುವ 'ಅಳಿಲು ಸೈನ್ಯ'ವನ್ನು ನಾಗೇಶ ಹಾಗೂ ಮಿತ್ರರು ಕೈಗೊಂಡಿದ್ದರು. ಸನ್ಮಿತ್ರ ಸಂಘದ ವತಿಯಿಂದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಹಿರಿಯರಿಂದ ಭಾಷಣಗಳನ್ನು ತುಮಕೂರು ಹಾಗೂ ಸುತ್ತಮುತ್ತಲ ಹಳ್ಳಿಗಳಲ್ಲಿ ಏರ್ಪಡಿಸಲಾಗಿತ್ತು.

ವಿಜ್ಞಾನ ವಿಷಯದಲ್ಲಿ ಇಂಟರ್‌ಮೀಡಿಯಟ್ ಕಲಿಕೆಯ ನಂತರ ಪದವಿ ತರಗತಿಗಳಿಗೆ ಪ್ರವೇಶ ಪಡೆಯಲು 1945ರ ಆಗಸ್ಟ್‌ನಲ್ಲಿ ಬೆಂಗಳೂರಿಗೆ ಬಂದ ನಾಗೇಶರಾವ್‌ಗೆ ಅಡ್ಮಿಶನ್ ಮುಗಿದು ಹೋಗಿರುವುದು ತಡವಾಗಿ ತಿಳಿಯುತ್ತದೆ. ಸುಮ್ಮನೆ ಕುಳಿತಿರುವುದೇಕೆಂದು ಬೆಂಗಳೂರು ಸಮೀಪದ ವೈಟ್‌ಫೀಲ್ಡ್‌ನಲ್ಲಿ ಮಿಲಿಟರಿ ವೆಹಿಕಲ್ ಡಿಪೋನಲ್ಲಿ ಗುಮಾಸ್ತ ಕೆಲಸ ಹುಡುಕಿಕೊಳ್ಳುತ್ತಾರೆ. ಆಕಸ್ಮಿಕವಾಗಿ ಬೆಂಗಳೂರಿನಲ್ಲಿ ಸಿಕ್ಕ ತುಮಕೂರಿನ ಪ್ರೌಢಶಾಲಾ ಶಿಕ್ಷಕರು ನಾಗೇಶರಾವ್ ಅವರ ಸಾಹಿತ್ಯ-ಪತ್ರಿಕೋದ್ಯಮದ ಆಸಕ್ತಿಗಳಿಗೆ ಪತ್ರಿಕೆಯ ಕೆಲಸವೇ ಸರಿ ಎಂದು ನಿರ್ಧರಿಸುತ್ತಾರೆ. ತಾಯಿನಾಡು ಪತ್ರಿಕೆಗೆ ಸೇರಲು ನೆರವಾಗುತ್ತಾರೆ. ಹೀಗೆ ಜನವರಿ 4, 1946 ಆರಂಭವಾದ ಪತ್ರಕರ್ತ ಜೀವನ ಅಕ್ಟೋಬರ್ 31, 1985ರ ತನಕ ನಿರಂತರವಾಗಿ ಸಾಗುತ್ತದೆ. ತಾಯಿನಾಡುವಿನಲ್ಲಿ ಉಪಸಂಪಾದಕರಾಗಿದ್ದ ನಾಗೇಶರಾವ್, ನಿವೃತ್ತಿಯ ಸಮಯದಲ್ಲಿ ಸಂಯುಕ್ತ ಕರ್ನಾಟಕದ ಸ್ಥಾನಿಕ ಸಂಪಾದಕರಾಗಿರುತ್ತಾರೆ.

ನಾಗೇಶರಾವ್ ಅವರ ಹಿರಿಯ ಮಗ ಪ್ರೊಫೆಸರ್ ಹಾಲ್ದೊಡ್ಡೇರಿ ಸುಧೀಂದ್ರ ಬೆಂಗಳೂರಿನಲ್ಲಿ ವೈಮಾಂತರಿಕ್ಷ ವಿಜ್ಞಾನಿ-ಪ್ರಾಧ್ಯಾಪಕ ಹಾಗೂ ಕನ್ನಡದ ಹೆಸರಾಂತ ವಿಜ್ಞಾನ ಬರಹಗಾರ.

ಹಾಲ್ದೊಡ್ಡೇರಿ ಗ್ರಾಮದ ವಂಶಸ್ಥರಾದ ಪ್ರಶಾಂತ್ ಹಾಲ್ದೊಡ್ಡೇರಿ ಅವರು ಖ್ಯಾತ ನಾಟಕಕಾರ, ಟೀವಿ ಧಾರಾವಾಹಿಗಳ ನಿರ್ದೇಶಕ ಟಿ.ಎನ್.ಸೀತಾರಾಂ ಅವರ ಭೂಮಿಕಾ ತಂಡದ ಸದಸ್ಯ. ಹಾಗೂ ಮಿಂಚು ಧಾರಾವಾಹಿಯ ನಿರ್ದೇಶಕ.