ಸ್ವಪ್ನ ಸಾರಸ್ವತ (ಪುಸ್ತಕ)

ವಿಕಿಪೀಡಿಯ ಇಂದ
Jump to navigation Jump to search
Swapna-Saraswatha.png
ಸ್ವಪ್ನ ಸಾರಸ್ವತ
ಲೇಖಕರುಪೆರ್ಲ ಗೋಪಾಲಕೃಷ್ಣ ಪೈ
ಮುಖಪುಟ ಕಲಾವಿದಚಂದ್ರನಾಥ ಆಚಾರ್ಯ
ದೇಶಭಾರತ
ಭಾಷೆಕನ್ನಡ
ಪ್ರಕಟವಾದದ್ದು೨೦೦೯
ಪ್ರಕಾಶಕರುಭಾಗ್ಯಲಕ್ಷ್ಮಿ ಪ್ರಕಾಶನ
ಪುಟಗಳು೪೯೬
ಪ್ರಶಸ್ತಿಗಳುಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ,ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಐಎಸ್‍ಬಿಎನ್978-81908179-2-9

ಹಲವು ಸಣ್ಣ ಕತೆಗಳ ಸಂಕಲನ ಹಾಗೂ ಅನುವಾದಗಳಿಂದ ಕನ್ನಡ ಸಾಹಿತ್ಯವಲಯದಲ್ಲಿ ಪರಿಚಿತರಾಗಿದ್ದ ಲೇಖಕ ಪೆರ್ಲ ಗೋಪಾಲಕೃಷ್ಣ ಪೈ  ಅವರ ಮೊದಲ ಕಾದಂಬರಿ ಸ್ವಪ್ನ ಸಾರಸ್ವತ.[೧]

ಪುಸ್ತಕದ ವಿವರಣೆ[ಬದಲಾಯಿಸಿ]

ಸ್ವಪ್ನ ಸಾರಸ್ವತ ಕಾದಂಬರಿಯ ಮೊದಲ ಮುದ್ರಣ ಭಾಗ್ಯಲಕ್ಷ್ಮಿ ಪ್ರಕಾಶನದ ಮೂಲಕ ೨೦೦೯ರಲ್ಲಿ ಪ್ರಕಟವಾಯಿತು. ೪೯೬ ಪುಟಗಳ ಈ ಕಾದಂಬರಿಯ ಮೊದಲ ಮುದ್ರಣದ ಪ್ರತಿಗಳಿಗೆ ಭಾರತದಲ್ಲಿ ₹೩೨೫/- ಹಾಗೂ ವಿದೇಶಗಳಲ್ಲಿ US$೨೫ ಬೆಲೆ ನಿಗದಿ ಪಡಿಸಲಾಗಿದೆ. ಪುಸ್ತಕದ ಮುಖಪುಟ ವಿನ್ಯಾಸ ಚಂದ್ರನಾಥ ಆಚಾರ್ಯರವರದು. ೧/೮ ಡೆಮಿ ಅಳತೆಯ ಈ ಪುಸ್ತಕಕ್ಕೆ ಎನ್.ಎಸ್.‌ ಮ್ಯಾಪ್‌ಲಿಥೋ ೭೦ ಜಿ.ಎಸ್.ಎಮ್. ಕಾಗದವನ್ನು ಬಳಸಲಾಗಿದೆ.(ISBN 978-81908179-2-9).

ಕಥಾವಸ್ತು[ಬದಲಾಯಿಸಿ]

"ಸ್ವಪ್ನ ಸಾರಸ್ವತ" ನಾಲ್ಕುನೂರು ವರುಷಗಳ ಹಿಂದೆ ಗೋವಾದಲ್ಲಿ ವಾಸವಾಗಿದ್ದ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಏಳು ಬೀಳಿನ ಕಥೆ. ಪೋರ್ಚುಗೀಸರ ದಬ್ಬಾಳಿಕೆಗೆ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯವು ಗೋವೆಯ ತಮ್ಮ ನೆಲ ತೊರೆದು ಅಪರಿಚಿತ ನೆಲಕ್ಕೆ ವಲಸೆ ಹೋಗುವ ದಾರುಣ ಕಥಾನಕ ಇದು. ಭಾರತಕ್ಕೆ ಪೋರ್ಚುಗೀಸರ ಆಗಮನ, ವ್ಯಾಪಾರಕ್ಕೆಂದು ಬಂದವರು ಗೋವೆಯನ್ನು ಗೆದ್ದು ವಸಾಹತನ್ನಾಗಿಸಿಕೊಳ್ಳುವ ಘಟನೆ ನಂತರ ನಡೆಯುವ ಬಲವಂತದಿಂದ ಹಾಗೂ ಆಮಿಷಗಳನೊಡ್ಡಿ ನಡೆಯುವ ಮತಾಂತರಗಳು, ದೇವಸ್ಥಾನಗಳ ಧ್ವಂಸ ಇತ್ಯಾದಿ ಸ್ಥಳೀಯ ಗೌಡ ಸಾರಸ್ವತ ಬ್ರಾಹ್ಮಣ ಕುಟುಂಬಗಳ ಭಾವನೆ ಹಾಗೂ ನಂಬಿಕೆಗಳಿಗೆ ತೀವ್ರವಾದ ಧಕ್ಕೆ ಉಂಟು ಮಾಡುತ್ತವೆ. ಇಂಥಹ ಪರಿಸ್ಥಿತಿಯಲ್ಲಿ ನಂಬುಗೆ, ಧರ್ಮ ಹಾಗೂ ಜೀವಗಳನ್ನು ಉಳಿಸಿಕೊಳ್ಳುವ ಸಲುವಾಗಿ ಗೋವೆಯ ವೆರಣೆ ಎಂಬ ಗ್ರಾಮದ ನಿವಾಸಿ ನರಸಪ್ಪಯ್ಯನವರ ಮೊಮ್ಮಗ ವಿಠ್ಠು ಪೈ ನಾಗ್ಡೋ ಬೇತಾಳನ ಆಜ್ಞೆಯ ಮೇರೆಗೆ 5-6 ಕುಟುಂಬಗಳೊಂದಿಗೆ ರಾತ್ರೋ ರಾತ್ರಿ ಸಂಸಾರ ಸಮೇತ  ತನ್ನೂರನ್ನು ಖಾಲಿ ಮಾಡುತ್ತಾನೆ.ಹೀಗೆ ಹೊರಡುವಾಗ ಹಣ, ಒಡವೆ, ವಸ್ತ್ರ ಎಲ್ಲವನ್ನೂ ಬಿಟ್ಟು ಹೋಗುತ್ತೇವೆಂಬ ನೋವಿಗಿಂತ ಆ ಸ್ಥಳದಲ್ಲಿ ಕಳೆದ ತಮ್ಮ ಭಾವನಾತ್ಮಕ ನೆನಪುಗಳನ್ನು ಬಿಟ್ಟು ಹೋಗುತ್ತಿದ್ದೇವೆ ಎಂಬುದು ಅವರನ್ನು ಕಾಡುತ್ತದೆ. ಅಷ್ಟೇ ಅಲ್ಲ; ಈ ಪೋರ್ಚುಗೀಸರು ತಮ್ಮ ಮೂಲ ನೆಲಕ್ಕಂಟಿರುವ ಭಾವಗಳ ಬೇರನ್ನೇ ಕೀಳುತ್ತಿದ್ದಾರೆ ಎಂಬಷ್ಟು ನೋವು ಅವರನ್ನು ಆಕ್ರೋಶಕ್ಕೆ ದೂಡುತ್ತದೆ. ಪೋರ್ಚುಗೀಸರ ರಾಜ್ಯದಿಂದ ಆದಷ್ಟು ದೂರ ಹೋಗಬೇಕೆಂದು ಕೊಚ್ಚಿಗೆ ಹೊರಟು ಮಧ್ಯೆ ನಾನಾ ಕಾರಣಗಳಿಂದ ಒಂದೊಂದು ಕುಟುಂಬ ಒಂದೊಂದು ಊರಿನಲ್ಲಿ ನಿಲ್ಲುತ್ತಾರೆ. ವಿಠ್ಠು ಪೈನ ಕುಟುಂಬವು ದಕ್ಷಿಣದ ಕುಂಬಳೆಯ ಬಳಿಯಿರುವ ಬಳ್ಳಂಬೀಡಿನಲ್ಲಿ ನೆಲೆಯೂರುತ್ತದೆ. ಹೊಸದಾಗಿ ವ್ಯಾಪಾರ ಶುರುಮಾಡಿ ತಮ್ಮ ನೆಲೆಯನ್ನು ಗಟ್ಟಿಯಾಗಿಸಿಕೊಳ್ಳುತ್ತಾ ಹೋಗುತ್ತಾರೆ. ಮುಂದೆ ಈ ಕುಟುಂಬ ಬೆಳೆಯುತ್ತಾ ಮತ್ತು ಅಳಿಯುತ್ತಾ ಸಾಗುತ್ತದೆ. ಬದಲಾಗುವ ಕಾಲದೊಂದಿಗೆ ಹೇಗೆ ಹೊಂದಿಕೊಳ್ಳಬೇಕು ಎಂಬುದನ್ನು ಇತಿಹಾಸದಲ್ಲಿ ಹಲವು ವಲಸೆ ಹಾಗೂ ಸ್ಥಳಾಂತರಗಳನ್ನು ಕಂಡಿರುವ ಸಾರಸ್ವತ ಬ್ರಾಹ್ಮಣ ಸಮುದಾಯದ ಮೂಲಕ ಬದಲಾವಣೆಯ ಬಿರುಗಾಳಿ ಎದುರಿಸುವ ಯಾರಿಗಾದರೂ ಒಂದು ರೀತಿಯ ಸಂದೇಶ ರವಾನಿಸುವ ಆಶಯ ಈ ಕಾದಂಬರಿಯದ್ದಾಗಿದೆ.

ಪ್ರಶಸ್ತಿ ಹಾಗೂ ಮಾನ್ಯತೆಗಳು[ಬದಲಾಯಿಸಿ]

ಸ್ವಪ್ನ ಸಾರಸ್ವತ ಕಾದಂಬರಿಗೆ ೨೦೧೧ರ ಸಾಲಿನ ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ, ೨೦೦೯ರ ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಶಸ್ತಿಗಳು ದೊರಕಿವೆ. ಎಚ್. ಶಾಂತರಾಂ ಪುರಸ್ಕಾರ ಕೂಡ "ಸ್ವಪ್ನ ಸಾರಸ್ವತ" ಕಾದಂಬರಿ ಗಳಿಸಿದೆ[೨].

ಅನುವಾದ ಹಾಗೂ ರೂಪಾಂತರ[ಬದಲಾಯಿಸಿ]

ಈ ಕೃತಿಯು ಇಂಗ್ಲೀಶ್, ಮರಾಠಿ, ಮಲಯಾಳಂ, ತಮಿಳು, ಹಿಂದಿ ಹಾಗೂ ಬೆಂಗಾಳಿ ಭಾಷೆಗಳಿಗೆ ಅನುವಾದಗೊಂಡಿದೆ. ಎಸ್‌. ಮಾಲತಿಯವರು ಸ್ವಪ್ನ ಸಾರಸ್ವತ ಕಾದಂಬರಿಯನ್ನು ಭಾಗಶಃ ನಾಟಕಕ್ಕೆ ರೂಪಾಂತರಿಸಿದ್ದಾರೆ.[೩] ಈ ರೂಪಾಂತರವನ್ನು ೨೦೧೪ರಲ್ಲಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಪ್ರದರ್ಶಿಸಲಾಯ್ತು[೪].

ಉಲ್ಲೇಖ[ಬದಲಾಯಿಸಿ]

  1. https://www.bookbrahma.com/author/perla-gopalakrishna-pai
  2. ದ ಹಿಂದು ವರದಿ
  3. http://www.navakarnatakaonline.com/gopala-pai-avara-swapna-saaraswatha
  4. ಪ್ರಜಾವಾಣಿ ವರದಿ