ಸೇವಾ ವಲಯ ಮತ್ತು ವ್ಯವಹಾರ(ವ್ಯಾಪಾರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೇವಾ ವಲಯ ಮತ್ತು ವ್ಯವಹಾರ(ವ್ಯಾಪಾರ)

ಅರ್ಥ[ಬದಲಾಯಿಸಿ]

ವ್ಯಾಪಾರವು ಕೇವಲ ಸರಕುಗಳನ್ನು ಮಾರಾಟ ಮತ್ತು ಖರೀದಿ ಮಾತ್ರವಲ್ಲ. ಸಂಬಂಧಗಳು, ಸ್ಥಳ, ಸಮಯ ಹಾಗೂ ಹಣಕಾಸು ಪೂರೈಕೆಗಳಿಗೆ ಸಂಬಂಧಿಸಿದ ಅಡೆ ತಡೆಗಳನ್ನು ನಿವಾರಿಸುವಲ್ಲಿ ಸಹಕಾರಿಯಾಗುವ ಎಲ್ಲಾ ಚಟುವಟಿಕೆಗಳನ್ನೊಳಗೊಂಡಿರುತ್ತದೆ ಮತ್ತು ವ್ಯಾಪಾರಕ್ಕೆ ಸೌಲಭ್ಯಗಳನ್ನು ಕಲ್ಪಿಸಿ ವ್ಯಾಪಾರವನ್ನು ಸರಳಗೊಳಿಸುತ್ತದೆ. ಈ ಚಟುವಟಿಕೆಗಳು ಅಥವಾ ಸೇವೆಗಳು ಸೇವಾ ವಲಯ(ರಂಗ) ಅಥವಾ ವಾಣಿಜ್ಯ ಚಟುವಟಿಕೆಗಳೆನಿಸುತ್ತವೆ. ಈ ಚಟುವಟಿಕೆಗಳನ್ನು ವ್ಯಾಪಾರದ ಪೂರಕಗಳು ಎಂಬುದಾಗಿಯೂ ಕರೆಯಲಾಗುತ್ತದೆ. ಕೃಷಿ ಕ್ಷೇತ್ರವು ವ್ಯಾಪಾರದ ಮೊದಲನೆ ವಲಯ[ಶಾಶ್ವತವಾಗಿ ಮಡಿದ ಕೊಂಡಿ] ಕೈಗಾರಿಕಾ ಕ್ಷೇತ್ರವು ಎರಡನೇ ವಲಯ ಹಾಗೂ ಸೇವಾವಲಯವು ವ್ಯವಹಾರದ ಮೂರನೇ ವಲಯವಾಗಿದ್ದು, ಸೇವಾವಲಯವು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದು ಕೊಂಡಿದೆ. ಸೇವಾವಲಯಕ್ಕೆ ಕೆಲವು ಉದಾಹರಣೆಗಳೆಂದರೆ; ಸರ್ಕಾರ. ಸಂಪರ್ಕ ಸಾಧನ. ಸಮೂಹ ಮಾಧ್ಯಮ. ಆಸ್ಪತ್ರೆ. ರಿಯಲ್ ಎಸ್ಟೇಟ್. ಶಿಕ್ಷಣ ಕ್ಷೇತ್ರ. ಮಾಹಿತಿ ತಂತ್ರಜ್ಞಾನ. ಆರ್ಥಿಕ ವಲಯ. ಲೆಕ್ಕಶಾಸ್ತ್ರ. ಕಾನೂನು ಸೇವೆಗಳು. ಪ್ರವಸೋದ್ಯಮ.[ಶಾಶ್ವತವಾಗಿ ಮಡಿದ ಕೊಂಡಿ]

ಸೇವಾ ವಲಯ(ರಂಗ)ದ ಅವಶ್ಯಕತೆಗಳು[ಬದಲಾಯಿಸಿ]

೧. ಸರಕುಗಳ ಉತ್ಪಾದನೆಯು ಕೇಂದ್ರೀಕರಿಸಲ್ಪಡುತ್ತದೆ. ಆದರೆ ಗ್ರಾಹಕರು ವಿಶ್ವದಾದ್ಯಂತ ಚದುರಿ ಹೋಗಿರುತ್ತಾರೆ. ೨. ಸರಕುಗಳನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತದೆ, ಆದರೆ ಗ್ರಾಹಕರು ಅವುಗಳನ್ನು ಸಣ್ಣಪ್ರಮಾಣಗಳಲ್ಲಿ ಖರೀದಿಸುತ್ತಾರೆ. ೩. ಸರಕುಗಳ ಉತ್ಪಾದಕರು ಮತ್ತು ಗ್ರಾಹಕರ ನಡುವೆ ದೂರು, ಸಮಯ, ನಷ್ಟಭಯ ಮತ್ತು ಜ್ಞಾನಗಳ ವಿಸ್ತೃತವಾದ ಅಂತರವಿದೆ.

ಸೇವಾ ವಲಯ(ರಂಗ)ದ ಪ್ರಾಮುಖ್ಯತೆ ಮತ್ತು ಪ್ರಯೋಜನಗಳು.[ಬದಲಾಯಿಸಿ]

೧. ಸೇವಾ ವಲಯ(ರಂಗ)ವು ಗ್ರಾಹಕರಿಗೆ ಶೀಘ್ರ, ಮಿತವ್ಯಯಕಾರಿ ಹಾಗೂ ದಕ್ಷ ಸೇವೆಗಳನ್ನು ಶ್ರುತಪಡಿಸುತ್ತದೆ. ಮಾರುಕಟ್ಟೆಯಲ್ಲಿರುವ ಪೈಪೋಟಿಯು ಗ್ರಾಹಕರಿಗೆ ಶೀಘ್ರ, ಮಿತವ್ಯಯಕಾರಿ ಹಾಗೂ ದಕ್ಷ ಸೇವೆಗಳನ್ನುನೀಡುವಂತೆ ಸರಕುಗಳ ಉತ್ಪಾದಕರಿಗೆ ಒತ್ತಾಯಪಡಿಸುತ್ತದೆ.

೨. ಸೇವಾರಂಗವು ಸರಕುಗಳ ವೆಚ್ಚವನ್ನು ಕನಿಷ್ಟಗೊಳಿಸುತ್ತದೆ. ಸರಕುಗಳ ವಿತರಣಾ ವೆಚ್ಚವು ಸರಕುಗಳ ಬೆಲೆಯ ಒಂದು ಭಾಗವಾಗಿರುತ್ತದೆ. ಸಾಗಾಟ, ವಿಮೆ, ಉಗ್ರಾಣ ವ್ಯವಸ್ಥೆ ಮತ್ತು ಹಣಕಾಸು ಪೂರೈಕೆಗಳು ಸರಕುಗಳ ಬೆಲೆಯನ್ನು ಹೆಚ್ಚೆಸುತ್ತದೆ. ಈ ಸೇವೆಗಳ ದಕ್ಷ ಹಾಗೂ ಮಿತವ್ಯಯಕಾರಿಯಾದ ಪೂರೈಕೆಯು ಸರಕುಗಳ ಬೆಲೆಯನ್ನು ಕನಿಷ್ಟಗೊಳಿಸುತ್ತದೆ. ಇದು ಗ್ರಾಹಕರಿಗೆ ಪ್ರಯೋಜನಕಾರಿಯಾಗಿದೆ. ೩. ಸೇವಾರಂಗವು ಸಮಯದ ಅಡೆತಡೆಯನ್ನು ನಿವಾರಿಸುವಲ್ಲಿ ಸಹಕಾರಿಯಾಗುತ್ತದೆ. ೪. ಸೇವಾ ವಲಯವು ಸರಕುಗಳ ಬೆಲೆಯನ್ನು ಸ್ಥಿರಗೊಳಿಸುವಲ್ಲಿ ಸಹಕಾರಿಯಾಗುತ್ತದೆ.

ಸೇವಾ ವಲಯದ ಸೇವೆಯ ವಿಧಗಳು.[ಬದಲಾಯಿಸಿ]

೧.ಬ್ಯಾಂಕಿಂಗ್. ೨. ವಿಮೆ. ೩. ಸಾಗಾಟ ವ್ಯವಸ್ಥೆ. ೪.ಉಗ್ರಾಣ ವ್ಯವಸ್ಥೆ.

ಬ್ಯಾಂಕಿಂಗ್'[ಬದಲಾಯಿಸಿ]

ಬ್ಯಾಂಕುಗಳ ಅರ್ಥ ಮತ್ತು ವ್ಯಾಖ್ಯೆ. ಬ್ಯಾಂಕ್ ಎಂಬ ಪದವನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸುವುದು ಕಷ್ಟ ಏಕೆಂದರೆ, ಒಂದು ಆಧುನಿಕ ಬ್ಯಾಂಕ್, ಹಲವಾರು ಚಟುವಟಿಕೆಗಳನ್ನು ನಡೆಸುತ್ತದೆ. ಆದರೂ, ಕೆಲವು ಬರಹಗಾರರು ಈ ಪದಗಳನ್ನು ವ್ಯಾಖ್ಯಾನಿಸಲು ಪ್ರಯತ್ನಪಟ್ಟಿದ್ದಾರೆ. ಈವರೆಗೆ ನೀಡಲ್ಪಟ್ಟ ಹಲವಾರು ವ್ಯಾಖ್ಯೆಗಳು ಬ್ಯಾಂಕಿನ ಮುಖ್ಯ ಲಕ್ಷಣಗಳ ಮೇಲೆ ಸ್ವಲ್ಪಮಟ್ಟಿನ ಬೆಳಕನ್ನು ಚೆಲ್ಲಿವೆ. ಡಾ| ಎಚ್. ಎಲ್. ಹಾರ್ಟ್ ಅವರ ಮಾತಿನಂತೆ 'ಯಾರು ತನ್ನ ಸಾಮಾನ್ಯ ವ್ಯವಹಾರದಲ್ಲಿ ಚಾಲ್ತಿ ಠೇವಣಿಗಳ ಮೇಲೆ ಯಾರಿಂದ ಮತ್ತು ಯಾರಿಗಾಗಿ ಹಣ ಸ್ವೀಕರಿಸುತ್ತಾನೋ, ಅವರು ಬರೆದ ಚೆಕ್ಕುಗಳನ್ನು ಗೌರವಿಸುತ್ತಾನೋ, ಅವನೇ ಒಬ್ಬ ಬ್ಯಾಂಕರ್'. ೧೯೪೯ರ ಭಾರತೀಯ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆಯು 'ಬ್ಯಾಂಕಿಂಗ್ ಕಂಪೆನಿಯನ್ನು, ಭಾರತದಲ್ಲಿ ಬ್ಯಾಂಕಿಂಗ್ ವ್ಯವಹಾರ ನಡೆಸುವ ಯಾವುದೇ ಕಂಪೆನಿ' ಮತ್ತು ಬ್ಯಾಂಕಿಂಗ್ ಎಂದರೆ, ಬೇಡಿಕೆಯ ಮೇಲೆ ಮರುಪಾವತಿಸಲ್ಪಡುವ ಚೆಕ್ಕು ಡ್ರಾಫ್ಟ್ ಆದೇಶ ಅಥವಾ ಇತರ ರೂಪಗಳಲ್ಲಿ ಹಿಂದೆ ಪಡೆಯಬಹುದಾದ ಹಣದ ಠೇವಣಿಗಳನ್ನು ಜನರಿಂದ ಸ್ವೀಕರಿಸಿ, ಸಾಲ ನೀಡಲು ಅಥವಾ ಹೂಡಿಕೆಗಾಗಿ ಉಪಯೋಗಿಸುವುದು ಎಂಬುದಾಗಿ ವ್ಯಾಖ್ಯಾನಿಸಿದೆ. ಈ ಕಾಯಿದೆಯು ಮುಖ್ಯವಾಗಿ ಬ್ಯಾಂಕಿಂಗ್ ಚಟುವಟಿಕೆಗಳನ್ನು ವಿವರಿಸುವುದಲ್ಲದೇ, ಚೆಕ್ಕು ಡ್ರಾಫ್ಟುಗಳವಸೂಲಾತಿ, ಹಣದ ರವಾನೆ, ಭದ್ರತಾಕೋಶಗಳ ಸೌಲಭ್ಯ ಇತ್ಯಾದಿ ಬ್ಯಾಂಕುಗಳು ನೀಡುವ ಅನೇಕ ಸಹಾಯಕ ಸೇವೆಗಳ ಬಗ್ಗೆಯೂ ಪ್ರಸ್ತಾಪಿಸುತ್ತದೆ. ಈ ವ್ಯಾಖ್ಯೆಯಂತೆ ಬ್ಯಾಂಕಿನ ಮುಖ್ಯ ಲಕ್ಷಣಗಳೆಂದರೆ. ೧. ಜನರಿಂದ ಚಾಲ್ತಿ, ನಿರಖು ಮತ್ತು ಉಳಿತಾಯ ಖಾತೆಗಳಲ್ಲಿ ಠೇವಣಿಗಳನ್ನು ಸ್ವೀಕರಿಸುವುದು. ೨. ಈ ಠೇವಣಿಗಳನ್ನು ಚೆಕ್ಕು, ಢ್ರಾಫ್ಟ್, ಆದೇಶ ಅಥವಾ ಇತರ ರೂಪಗಳಲ್ಲಿ ಹಿಂದೆ ಪಡೆಯಲು ಅವಕಾಶ ನೀಡುವುದು. ೩. ತನ್ನಲ್ಲಿರುವ ಠೇವಣಿಗಳನ್ನು ಸಾಲ ನೀಡಲು ಅಥವಾ ಹೂಡಿಕೆಯ ಉದ್ದೇಶಗಳಿಗೆ ಬಳಸುವುದು.

ಬ್ಯಾಂಕಿಂಗ್ ಕಾರ್ಯಗಳು[ಬದಲಾಯಿಸಿ]

೧. ಪ್ರಧಾನ ಅಥವಾ ಪ್ರಾಥಮಿಕ ಕಾರ್ಯಗಳು

  • ಠೇವಣಿಗಳನ್ನು ಸ್ವೀಕರಿಸುವುದು.

ಅ. ಚಾಲ್ತಿ ಠೇವಣಿ. ಆ. ಉಳಿತಾಯ ಠೇವಣಿ. ಇ. ನಿಶ್ಚಿತ ಅವಧಿಯ ಠೇವಣಿ. ಈ. ಆವರ್ತನ ಠೇವಣಿ.

  • ಹಣವನ್ನು ಸಾಲವಾಗಿ ನೀಡುವುದು.

ವಾಣಿಜ್ಯ ಬ್ಯಾಂಕುಗಳ ಅತೀ ಮುಖ್ಯ ವ್ಯವಹಾರವೆಂದರೆ, ಹಣವನ್ನು ಸಾಲವಾಗಿ ನೀಡುವುದು. ಬ್ಯಾಂಕುಗಳು ಸಾರ್ವಜನಿಕರಿಗೆ ಈ ಕೆಳಗಿನ ವಿಧಾನಗಳ ಮೂಲಕ ಹಣವನ್ನು ಸಾಲವಾಗಿ ನೀಡುತ್ತವೆ. ಅ. ಸಾಲಗಳು. ಆ. ಓವರ್ ಡ್ರಾಫ್ಟುಗಳು. ಇ. ನಗದು ಸಾಲಗಳು. ಈ. ಹುಂಡಿಗಳನ್ನು ಮುಂಗಡವಾಗಿ ಮುರಿಯುವಿಕೆ. ೨. ಉಪ ಅಥವಾ ಅಲ್ಪ ಪ್ರಾಧಾನ್ಯ ಕಾರ್ಯಗಳು

  • ನಿಯೋಗ ಸೇವೆಗಳು.

ಗ್ರಾಹಕರು ನಿಯೋಗಿಗಳಾಗಿ (ಏಜೆಂಟರಾಗಿ) ಬ್ಯಾಂಕುಗಳಲ್ಲಿ ಸಲ್ಲಿಸುವ ಸೇವೆಗಳ ನಿಯೋಗ ಸೇವೆಗಳೆಂದು ಹೆಸರು. ಮುಖ್ಯ ನಿಯೋಗ ಸೇವೆಗಳು ಈ ರೀತಿಯಾಗಿವೆ. ಅ. ಗ್ರಾಹಕರ ಮಾಹಿತಿಯ ಪ್ರಕಾರ[೧], ಬ್ಯಾಂಕುಗಳು ಅವರಿಂದ ಹಣವನ್ನು ಸಂಗ್ರಹಿಸುತ್ತದೆ. ಆ. ಬ್ಯಾಂಕುಗಳು ಗ್ರಾಹಕರ ಪರವಾಗಿ ಹಣವನ್ನು ಪಾವತಿ ಮಾಡುತ್ತದೆ. ಇ. ಬ್ಯಾಂಕುಗಳು ಗ್ರಾಹಕರ ಪರವಾಗಿ ಷೇರುಗಳನ್ನು ಕೊಳ್ಳುವ ಮತ್ತು ಮಾರುವ ಕಾರ್ಯವನ್ನು ಮಾಡುತ್ತದೆ. ಈ. ಗ್ರಾಹಕರಿಗೆ ಬ್ಯಾಂಕುಗಳು ಷೇರುಗಳ ಬಗ್ಗೆ ಸಲಹೆ ಸೂಚನೆ ನೀಡುತ್ತದೆ. ಉ. ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ನ್ಯಾಸಾಧಾರಿಗಳಾಗಿ, ಕಾರ್ಯ ನಿರ್ವಾಹಕರಾಗಿ ಅಥವಾ ವ್ಯವಹಾರ ಪ್ರತಿನಿಧಿಗಳಾಗಿ ವರ್ತಿಸುತ್ತದೆ. ಊ. ಬ್ಯಾಂಕುಗಳು ಗ್ರಾಹಕರ ಸಂಚಾಲಕರಾಗಿ ಮತ್ತು ಪ್ರತಿನಿಧಿಗಳಾಗಿ ಸೇವೆ ಸಲ್ಲಿಸುತ್ತವೆ.

  • ಸಾಮಾನ್ಯ ಸೇವೆ ಅಥವಾ ಇತರ ಚಿಲ್ಲರೆ ಸೇವೆ.

ಬ್ಯಾಂಕುಗಳು ಕೇವಲ ಗ್ರಾಹಕರಿಗೆ ಮಾತ್ರವಲ್ಲದೆ, ಸಾರ್ವಜನಿಕರಿಗೂ ಸೇವೆಯನ್ನು ಒದಗಿಸುತ್ತದೆ. ಅದುದರಿಂದ, ಇದನ್ನು ಸಾಮಾನ್ಯ ಉಪಯೋಗ ಸೇವೆ ಎಂದು ಕರೆಯುವರು. ಇದರ ಮುಖ್ಯ ಸೇವೆಗಳು ಈ ಕೆಳಗಿನಂತಿವೆ, ಅವೆಂದರೆ: ಅ. ಬ್ಯಾಂಕುಗಳು ಅಮೂಲ್ಯವಾದ ವಸ್ತು ಮತ್ತು ದಾಖಲೆಗಳನ್ನು ಸುರಕ್ಷಿತವಾಗಿ ಗ್ರಾಹಕರಿಂದ ಪಡೆಯುತ್ತದೆ. ಆ. ಬ್ಯಾಂಕುಗಳು ವಿದೇಶಿ ವಿನಿಮಯ ವ್ಯವಹಾರದಲ್ಲಿ ಸಹಾಯ ಮಾಡುತ್ತವೆ. ಇ. ಬ್ಯಾಂಕುಗಳು ಗ್ರಾಹಕರಿಗೆ ತೀರ್ಪುಗಾರರಾಗಿ ನಿಂತು ಪರಿಚಯ ನೀಡುತ್ತವೆ.

ವಿಮೆ

ವಿಮೆಯ ಅರ್ಥ[ಬದಲಾಯಿಸಿ]

ಮನುಷ್ಯನು ತಾನು ಒಳಗಾಗಲಿರುವ ಕೆಲವು ಅಪಾಯಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು ಇರುವ ಸಾಧನವೇ ವಿಮೆ. ಅದು ಅಪಾಯವನ್ನು ಒಬ್ಬನಿಂದ ಇನ್ನೊಬ್ಬನಿಗೆ ವರ್ಗಾಯಿಸುವ ವಿಧಾನ. ಎರಡು ವ್ಯಕ್ತಿಗಳ ನಡುವಿನ ಈ ಕರಾರಿನಲ್ಲಿ ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಗೆ ಒಂದು ನಿಶ್ಚಿತ ಘಟನೆಯಾದ ಪಕ್ಷದಲ್ಲಿ ಒಂದು ನಿರ್ದಿಷ್ಟ ಮೊತ್ತದ ಹಣದ ಪ್ರತಿಫಲ ಪಡೆದು ನಷ್ಟವನ್ನು ಭರ್ತಿ ಮಾಡಿಕೊಡಲು ಒಪ್ಪಿಗೆ ನೀಡುತ್ತಾನೆ.

ವಿಮೆಯ ಪ್ರಯೋಜನಗಳು[ಬದಲಾಯಿಸಿ]

೧. ವ್ಯಾಪಾರ ಮತ್ತು ಕೈಗಾರಿಕೆಯಲ್ಲಿರುವ ಅನಿಶ್ಚಿತತೆ ಅಥವಾ ಅಪಾಯಗಳನ್ನು ನಿವಾರಿಸಿ ವಿಮೆಯು ವಾಣಿಜ್ಯ ಮತ್ತು ಕೈಗಾರಿಕೆಗಳ ಬೃಹತ್ ಪ್ರಮಾಣದ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ. ೨. ವಿಮೆಯು ವ್ಯಾಪಾರಿಗಳಿಗೆ ಮತ್ತು ಕೈಗಾರಿಕೋದ್ಯಮಿಗಳಿಗೆ ಭದ್ರತೆಯ ಭಾವನೆಯನ್ನು ನೀಡುತ್ತದೆ. ೩. ವಿಮೆಯು ಭದ್ರತೆಯ ಭಾವನೆಯನ್ನು ಕೊಡುವುದಲ್ಲದೆ ,ಮನುಷ್ಯನಿಗೆ ತನ್ನ ಬಾಳಿನ ಸಂಧ್ಯಾ ಕಾಲಕ್ಕಾಗಿ ಪ್ರಸಕ್ತ ಆದಾಯದಿಂದ ಉಳಿತಾಯ ಮಾಡುವ ಅವಕಾಶ ಒದಗಿಸುತ್ತದೆ. ೪. ಜಲವಿಮೆಯು ದೇಶದ ಸಮುದ್ರ ವ್ಯಾಪಾರದ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ.

ವಿಮೆಯ ಮೂಲ ತತ್ವಗಳು.[ಬದಲಾಯಿಸಿ]

೧. ಅತ್ಯಂತ ಪ್ರಾಮಾಣಿಕತನ. ೨. ವಿಮಾರ್ಹ ಆಸ್ತೆ. ೩. ನಷ್ಟ ಪರಿಹಾರ ತತ್ವ. ೪. ಪ್ರತ್ಯಾಧಿಕಾರ ತತ್ವ. ೫. ಜೋಡು ವಿಮೆ ಮತ್ತು ವಂತಿಗೆ ತತ್ವ. ೬. ಮರುವಿಮೆ. ೭. ನಷ್ಟ ತಗ್ಗಿಸುವಿಕೆ. ೮. ಸಾಮಿಪ್ಯದ ಕಾರಣದ ನಿಯಮ ಅಥವಾ ಸಾಮಿಪ್ಯದ ಕಾರಣ.

ವಿಮೆಯ ವಿಧಗಳು[ಬದಲಾಯಿಸಿ]

ಅ. ಅಗ್ನಿ ವಿಮೆ ಅಗ್ನಿ ವಿಮಾ ಕರಾರು ಎಂದರೆ ವಿಮಾದಾರನು ವಿಮೆಗೊಳಗಾದ ಸರಕುಗಳು ಅಗ್ನಿಯಿಂದ ನಷ್ಟ ಹೊಂದಿದಲ್ಲಿ ಸಣ್ಣ ವಿಮಾ ಕಂತಿಗೆ ಪ್ರತಿಯಾಗಿ ಪರಿಹಾರ ನೀಡಲು ಒಪ್ಪುವ ಒಂದು ಕರಾರು. ಅಗ್ನಿ ವಿಮಾಪತ್ರ ಅಗ್ನಿ ವಿಮೆಯ ಶರ್ತಗಳನ್ನು ಮತ್ತು ನಿಬಂಧನೆಗಳನ್ನೊಗೊಂಡ ದಾಖಲೆಯನ್ನು ಅಗ್ನಿ ವಿಮಾ ಪತ್ರ ಎನ್ನುವರು. ಅಗ್ನಿ ವಿಮಾ ಪತ್ರವು ಸಾಮಾನ್ಯವಾಗಿ ಈ ಕೆಳಗಿನ ವಿವರಗಳನ್ನೊಳಗೊಂಡಿದೆ. ೧. ವಿಮೆ ಹೊಂದಿದವನ ಹೆಸರು. ೨. ವಿಮಾದಾರನ ಹೆಸರು. ೩. ವಿಮೆಗೊಳಗಾದ ಸರಕಿನ ವಿವರ. ೪. ವಿಮೆಯ ಮೊಬಲಗು. ೫. ವಿಮಾ ಕಂತಿನ ಸೊತ್ತು. ೬. ವಿಮೆಯ ಅವಧಿ. ೭. ವಿಮೆಗೊಳಗಾದ ಅಪಾಯಗಳು. ಆ. ಜಲ ವಿಮೆ ಜಲ ವಿಮೆ ಎಂದರೆ ಒಂದು ಪಕ್ಷವು ಇನ್ನೊಂದು ನಿರ್ದಿಷ್ಟ ಮೊತ್ತದ ಪ್ರತಿಫಲಕ್ಕೆ ಕೆಲವು ನಿರ್ದಿಷ್ಟ ಜಲಯಾನದ ಅಪಾಯಗಳಿಂದಾಗುವ ನಷ್ಟಕ್ಕೆ ಪರಿಹಾರ ನೀಡಲು ಒಪ್ಪುವ ಒಂದು ಕರಾರು. ಜಲ ವಿಮಾ ಪತ್ರ ಜಲ ವಿಮಾ ಕರಾರಿನ ಶರ್ತಗಳನ್ನು ಹೊಂದಿರುವ ದಾಖಲೆಗಳನ್ನು ಜಲವಿಮಾ ಪತ್ರ ಎನ್ನುವರು. ಜಲ ವಿಮಾ ಪತ್ರವು ಸಾಮಾನ್ಯವಾಗಿ ಈ ಕೆಳಗಿನ ವಿವರಗಳನ್ನೊಳಗೊಂಡಿರುತ್ತದೆ. ೧. ವಿಮೆ ಹೊಂದಿದವನ ಹೆಸರು. ೨. ವಿಮೆಯ ವಸ್ತು. ೩. ವಿಮೆ ಮಾಡಲಾದ ಅಪಾಯ. ೪. ವಿಮೆಯಾಗಿರುವ ಯಾನ ಅಥವಾ ಅವಧಿ ಅಥವಾ ಎರಡು. ೫. ವಿಮಾ ಮೊಬಲಗು. ೬. ವಿಮಾ ಕಂತಿನ ಮೊತ್ತ. ೭. ವಿಮಾದಾರರ ಹೆಸರುಗಳು ಮತ್ತು ಪ್ರತಿಯೊಬ್ಬ ವಿಮಾದಾರನು ಭರಿಸುವ ಅಪಾಯ. ೮. ಹಡಗಿನ ಹೆಸರು. ವಿಮಾ ಪತ್ರದ ವಿಧಗಳು ಜಲ ವಿಮಾ ಪತ್ರಗಳಲ್ಲಿ ಅನೇಕ ವಿಧಗಳಿವೆ. ಬಹುಮುಖ್ಯವಾದ ಜಲ ವಿಮಾ ಪಾಲಿಸಿಗಳೆಂದರೆ. ೧. ಮೌಲ್ಯ ನಿರ್ಧರಿಸಲಾದ ಪತ್ರ: ಈ ವಿಮಾ ಪತ್ರದಲ್ಲಿ ಕರಾರನ್ನು ಮಾಡಿಕೊಂಡಾಗ ಎರಡೂ ಪಕ್ಷದವರು ಒಪ್ಪಿಕೊಳ್ಳುವ ವಿಮೆಯ ವಸ್ತುವಿನ ಬೆಲೆಯನ್ನು ಅಥವಾ ಮೌಲ್ಯವನ್ನು ನಮೂದಿಸಲಾಗುತ್ತದೆ. ೨. ಗ್ನಾಪನ ನಿಬಂಧನೆ: ಈ ನಿಬಂಧನೆಯು ವಿಮಾಕರ್ತನನ್ನು, ಅನಿವಾರ್ಯವಾಗಿ ಉಂಟಾಗುವ ಕೆಲವೊಂದು ಸಣ್ಣ ನಷ್ಟಗಳು ಮತ್ತು ಹಾಳಾಗುವ ವಸ್ತುಗಳ ಮೇಲೆ ಆಗುವ ಆಂಶಿತ ನಷ್ಟಗಳ ಜವಬ್ದಾರಿಯಿಂದ ವಿನಾಯಿತಿ ನೀಡುತ್ತದೆ. ಜೀವ ವಿಮೆ ಜೀವ ವಿಮಾ ಕರಾರೆಂದರೆ ವಿಮಾದಾರನು ವಿಮಾ ಕಂತು ಎನ್ನುವ ಪ್ರತಿಫಲಕ್ಕೆ ಪ್ರತಿಯಾಗಿ ವಿಮೆ ಹೊಂದಿದವನಿಗೆ ಅಥವಾ ಆತನ ಸಂಬಂಧಿಗಳಿಗೆ ವಿಮೆ ಹೊಂದಿದವನ ಮರಣಾನಂತರ ಅಥವಾ ಒಂದು ನಿಶ್ಚಿತ ಅವಧಿಯ ನಂತರ ಯಾವುದು ಮೊದಲಾಗುವುದೋ ಆವಾಗ, ಒಂದು ನಿರ್ದಿಷ್ಟ ಮೊತ್ತದ ಹಣವನ್ನು ಕೊಡಲು ಒಪ್ಪುವ ಒಂದು ಕರಾರು. ಜೀವ ವಿಮಾ ಪತ್ರದ ವಿಧಗಳು ೧. ಆಜೀವ ವಿಮಾ ಪತ್ರ. ೨. ಎಂಡೋಮೆಂಟ್ ವಿಮಾ ಪತ್ರ. ೩. ಮಕ್ಕಳ ಶಿಕ್ಷಣ ಪಾಲಿಸಿ. ೪. ವರ್ಷಾಶನ ಪಾಲಿಸಿ. ೫. ಅವಧಿ ವಿಮಾ ಪಾಲಿಸಿ. ೬. ಜಂಟಿ ಜೀವ ವಿಮಾ ಪಾಲಿಸಿ. ೭. ಗುಂಪು ವಿಮಾ ಪಾಲಿಸಿ. ೮. ಜನತಾ ಪಾಲಿಸಿ.

ಸಾಗಾಟ ವ್ಯವಸ್ಥೆ[ಬದಲಾಯಿಸಿ]

ಒಂದು ಕಡೆಯಿಂದ ಇನ್ನೊಂದು ಕಡೆಗೆ ಸರಕುಗಳ ಮತ್ತು ಜನರ ಸಾಗಾಟವೇ ಸಾಗಾಟದ ವ್ಯವಸ್ಥೆ. ಸಾಗಾಟದ ಮಾರ್ಗಗಳು ೧. ಭೂ ಮಾರ್ಗ. ೨. ಜಲ ಮಾರ್ಗ. ೩. ವಾಯು ಮಾರ್ಗ. ಭೂ ಮಾರ್ಗ. ಭೂ ಮಾರ್ಗವನ್ನು ಮುಖ್ಯವಾಗಿ ಎರಡು ವಿಭಾಗಗಳಾಗಿ ವಿಂಗಡಿಸಬಹುದು. ಅವೆಂದರೆ. ರಸ್ತೆ ಸಾರಿಗೆ ಮತ್ತು ರೈಲ್ವೆ ಸಾರಿಗೆ. ರಸ್ತೆ ಸಾರಿಗೆ- ಸರಕುಗಳನ್ನು ಮತ್ತು ಜನರನ್ನು ಮೋಟಾರು ವಾಹನಗಳ ಮೂಲಕ ಸಾಗಿಸುವುದ ವ್ಯವಸ್ಥೆ. ರೈಲ್ವೆ ಸಾರಿಗೆ- ಸರಕುಗಳನ್ನು ಮತ್ತು ಪ್ರಯಾಣಿಕರನ್ನು ರೈಲುಗಳ ಮೂಲಕ ಸಾಗಿಸುವುದೇ ರೈಲು ಸಾರಿಗೆ. ವಾಯು ಸಾರಿಗೆ ಲಕ್ಷಣಗಳು ೧. ಇದು ಅತ್ಯಂತ ದುಬಾರಿಯಾದ ಸಾರಿಗೆ ಉದ್ಯಮ. ೨. ಇದರ ವಾಹಕ ಸಾಮರ್ಥ್ಯ ಮಿತವಾಗಿದೆ. ೩. ಹತ್ತಿರದ ಸ್ಥಳದ ಪ್ರಯಾಣಕ್ಕೆ ಇದು ಅನುಕೂಲಕರವಾಗಿಲ್ಲ. ೪. ವಾಯು ಸಾರಿಗೆ ಅತ್ಯಂತ ಅಪಾಯಕಾರಿ. ೫. ಇದು ಅತ್ಯಂತ ಶೀಘ್ರವಾದ ಸಾರಿಗೆ ಮಾದ್ಯಮ. ೬. ರಾಷ್ಟ್ರದ ರಕ್ಷಣೆಗೆ ವಾಯು ಸಾರಿಗೆಯು ತೀರಾ ಅನಿವಾರ್ಯ.

ಉಗ್ರಾಣ ವ್ಯವಸ್ಥೆ[ಬದಲಾಯಿಸಿ]

ಭವಿಷ್ಯದಲ್ಲಿ ಉಪಯೋಗಿಸುವ ಉದ್ದೇಶದಿಂದ ಸಂಗ್ರಹಿಸಿದ ಸಾಮಗ್ರಿ ಗಳನ್ನು ವ್ಯವಸ್ಥಿತವಾಗಿ ಶೇಖರಿಸಿಡುವ ಸ್ಥಳ, ಕೊಠಡಿ, ಕಟ್ಟಡ (ಸ್ಟೋರ್ಸ್, ಸ್ಟೋರ್-ರೂಂ, ಸ್ಟೋರ್-ಹೌಸ್). ವ್ಯವಸಾಯೋತ್ಪನ್ನಗಳನ್ನೂ ಮಾರಾಟದ ಉದ್ದೇಶದಿಂದ ಸಂಗ್ರಹಿಸಿದ ಸರಕುಗಳನ್ನೂ ಕೆಡದಂತೆ ಭದ್ರವಾಗಿ ದಾಸ್ತಾನು ಮಾಡುವ ಕ್ರಮ ಇಂದಿನ ವಾಣಿಜ್ಯ ವ್ಯವಸ್ಥೆಯಲ್ಲಿ ಬಲು ಅಗತ್ಯ. ದಾಸ್ತಾನಾಗುವ ಸರಕುಗಳ ಉಗಮ, ಸ್ವರೂಪ, ಉಪಯೋಗ, ದಾಸ್ತಾನಿನ ಉದ್ದೇಶ ಮುಂತಾದವುಗಳ ದೃಷ್ಟಿಯಿಂದ ದಾಸ್ತಾನು ಕೇಂದ್ರಗಳನ್ನು ವಿಂಗಡಿಸುವುದು ಸಾಧ್ಯ. ರೈತರೂ ಜಮೀನಿನ ಒಡೆಯರೂ ಇತರರೂ ಮಾರಾಟಕ್ಕೂ ಸ್ವಂತ ಉಪಯೋಗಕ್ಕೂ ದವಸಧಾನ್ಯ ಸಂಗ್ರಹಿಸಿಡಲು (ಸಾಮಾನ್ಯವಾಗಿ ಖಾಸಗಿಯಾಗಿ) ಏರ್ಪಡಿಸಿಕೊಂಡ ವಿಶಿಷ್ಟ ರಚನೆಯೇ ಕಣಜ, ಪಣತ ಅಥವಾ ಹಗೇವು (ಗ್ರ್ಯಾನರಿ). ರೈತ, ವರ್ತಕ ಮುಂತಾದವರ ಉಪಯೋಗಕ್ಕಾಗಿ ಸರ್ಕಾರವಾಗಲಿ ಖಾಸಗಿಯವರಾಗಲಿ ಸಂಘ ಸಂಸ್ಥೆಗಳಾಗಲಿ ನಿರ್ಮಿಸಿ ನಿರ್ವಹಿಸುವ ಸಾರ್ವಜನಿಕ ಕೇಂದ್ರಗಳು ದಾಸ್ತಾನುಮಳಿಗೆಗಳೆನ್ನಿಸಿಕೊಳ್ಳುತ್ತವೆ. (ವೇರ್ ಹೌಸ್).ಉಗ್ರಾಣ ವ್ಯವಸ್ಥೆಯ ಕಾರ್ಯಭಾರಗಳು ಇತರ ಇಲಾಖೆಗಳಷ್ಟೇ ಗುರುತರವಾದವು. ಇವನ್ನು ಸ್ಥೂಲವಾಗಿ ಹೀಗೆ ವಿಂಗಡಿಸಬಹುದು: ೧. ಸಾಮಗ್ರಿಗಳ ಸ್ವೀಕಾರ, ದಾಸ್ತಾನು, ರಕ್ಷಣೆ; ೨. ಉತ್ಪಾದನ ಇಲಾಖೆಯ ಬೇಡಿಕೆಗೆ ಅನುಸಾರವಾಗಿ ನಿಖರ ಪರಿಮಾಣದಲ್ಲಿ ಸಾಮಗ್ರಿ ನೀಡಿಕೆ; ೩.ಉಗ್ರಾಣದಲ್ಲಿರುವ ಸಾಮಗ್ರಿಯೆಷ್ಟು, ಉಗ್ರಾಣಕ್ಕೆ ಬರಲಿರುವುದೆಷ್ಟು, ಅಲ್ಲಿಂದ ಕೊಟ್ಟಿರುವುದೆಷ್ಟು, ಮೀಸಲಾಗಿಟ್ಟಿರುವುದೆಷ್ಟು ಎಂಬುದರ ತಪಶೀಲಾದ ದಾಖಲೆ; ೪. ಪ್ರತಿ ಸಾಮಗ್ರಿಯ ಕನಿಷ್ಠಾವಶ್ಯಕತೆಯೆಷ್ಟೆಂಬುದನ್ನು ಖಚಿತಪಡಿಸಿಕೊಂಡು, ಅದು ಖರ್ಚಾದಂತೆ ಅದರ ಸರಬರಾಜಿಗಾಗಿ ಕ್ರಯಾಧಿಕಾರಿಗಳಿಗೆ ಸಕಾಲಿಕ ಕೋರಿಕೆಯ ಸಲ್ಲಿಕೆ. ಆಧುನಿಕ ಉತ್ಪಾದನಾ ವಲಯಗಳಲ್ಲಿ ಉತ್ತಮ ಉಗ್ರಾಣ ವ್ಯವಸ್ಥೆಗೂ ದಾಖಲೆಗೂ ಹೆಚ್ಚಿನ ಗಮನ ನೀಡಲಾಗುತ್ತಿದೆ. ಉತ್ಪಾದನೆಯ ಒಟ್ಟು ವೆಚ್ಚವನ್ನು ನಿಖರವಾಗಿ ಕಂಡು ಹಿಡಿಯುವ ಯತ್ನವಾದ ಪರಿವ್ಯಯ ಲೆಕ್ಕ ವ್ಯವಸ್ಥೆಯ ಯಶಸ್ಸಿಗೆ ಉತ್ತಮ ಉಗ್ರಾಣ ವ್ಯವಸ್ಥೆಯೂ ಮುಖ್ಯ.

ಉಲ್ಲೇಖ[ಬದಲಾಯಿಸಿ]

  1. https://kn.wikipedia.org/wiki/%E0%B2%97%E0%B3%8D%E0%B2%B0%E0%B2%BE%E0%B2%B9%E0%B2%95%E0%B2%B0_%E0%B2%B8%E0%B2%82%E0%B2%B0%E0%B2%95%E0%B3%8D%E0%B2%B7%E0%B2%A3%E0%B3%86