ವಿಷಯಕ್ಕೆ ಹೋಗು

ಚೆಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಚೆಕ್ಕು ಇಂದ ಪುನರ್ನಿರ್ದೇಶಿತ)
A cheque with Thomas Jefferson as payee and payor from 1809
A cheque from 1905
A cheque from 1933


ಕೆನಡಾ ದೇಶದ ಚೆಕ್ಕಿನ ಒಂದು ಮಾದರಿ.

ಚೆಕ್ ಒಂದು ದಾಖಲೆಯಾಗಿದ್ದು, ಒಬ್ಬ ವ್ಯಕ್ತಿಯ ಖಾತೆಯಿಂದ ನಿರ್ದಿಷ್ಟ ಮೊತ್ತದ ಹಣವನ್ನು ಚೆಕ್ ವಿತರಿಸಿದ ವ್ಯಕ್ತಿಗೆ ಪಾವತಿಸಲು ಬ್ಯಾಂಕ್‌ಗೆ ಆದೇಶಿಸುತ್ತದೆ. ಇದೊಂದು ಹಣದ ಪಾವತಿಯನ್ನು ಆದೇಶಿಸುವ ಕಾಗದದ ಒಂದು ಚೂರು ಅಥವಾ ರಶೀದಿ. ಚೆಕ್ ಬರೆಯುವ ವ್ಯಕ್ತಿ, ಅಂದರೆ ಪಾವತಿಸುವವನು, ಸಾಮಾನ್ಯವಾಗಿ ತನ್ನ ಹಣವನ್ನು ಠೇವಣಿ ಇಟ್ಟ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿರುತ್ತಾನೆ. ಪಾವತಿಸುವವನು ಚೆಕ್ಕಿನ ಮೇಲೆ ಹಣದ ಮೊತ್ತ, ದಿನಾಂಕ, ಮತ್ತು ಹಣಗ್ರಾಹಿಯ ಹೆಸರನ್ನು ಒಳಗೊಂಡಂತೆ ನಾನಾ ವಿವರಗಳನ್ನು ಬರೆದು, ಅದನ್ನು ಸಹಿಮಾಡಿ, ಹಣ ಪಡೆಯಬೇಕಾದ ವ್ಯಕ್ತಿ ಅಥವಾ ಕಂಪನಿಗೆ, ನಮೂದಿಸಲಾದ ಹಣದ ಮೊತ್ತವನ್ನು ಸಂದಾಯಮಾಡುವಂತೆ ತನ್ನ ಬ್ಯಾಂಕಿಗೆ ಆದೇಶ ನೀಡುತ್ತಾನೆ.[]

ಇತಿಹಾಸ

[ಬದಲಾಯಿಸಿ]

ಲಂಡನ್ನಿನ ಅಕ್ಕಸಾಲಿಗರು ಆಧುನಿಕ ಜಗತ್ತಿನ ಮೊಟ್ಟಮೊದಲ ಬ್ಯಾಂಕರುಗಳು. ಈ ಅಕ್ಕಸಾಲಿಗರು ಹಣದ ಪಾವತಿಗೆ ಬರೆಯುತ್ತಿದ್ದ ಚಿಕ್ಕ ಚಿಕ್ಕ ಪತ್ರಗಳೇ ಮೊದಲನೇ ಚೆಕ್ಕಗಳು. ಈ ಚೆಕ್ಕುಗಳು 1844ರ ಪೀಲ್ಸ್ ಕಾಯಿದೆಯ ನಂತರ ಪ್ರಸಿದ್ಧಿಯನ್ನು ಪಡೆಯಿತು. ಈ ಚೆಕ್ಕುಗಳ ಹಿಂಬದಿಯಲ್ಲಿ ಸ್ಟಾಂಪ್‍ಗಳನ್ನು ಅಂಟಿಸಬೇಕಾಗಿತ್ತು. ನಂತರ ಈ ಪದ್ಧತಿಯನ್ನು ರದ್ದುಪಡಿಸಲಾಯಿತು. ಭಾರತೀಯ ಸಂವಿಧಾನದಲ್ಲಿ ಅಂಗೀಕೃತವಾದ ಯಾವ ಭಾಷೆಯಲ್ಲಿ ಬೇಕಾದರೂ ಚೆಕ್ಕುಗಳನ್ನು ಬರೆಯಬಹುದು. ಧನಾದೇಶ ಪತ್ರ ಎಂಬುದು ಕನ್ನಡದ ಸಮಾನಾಂತರ ಪದವಾದರೂ ಸಹ ಚೆಕ್ಕು ಎಂಬ ಪದವೇ ಕನ್ನಡದಲ್ಲಿ ಬಳಕೆಯಲ್ಲಿದೆ.

ವ್ಯಾಖ್ಯೆ

[ಬದಲಾಯಿಸಿ]

ಹಣದ ಒಂದು ನಿಶ್ಚಿತ ಮೊಬಲಗನ್ನು ಒಬ್ಬ ನಿಶ್ಚಿತ ವ್ಯಕ್ತಿಗೋ ಅಥವಾ ಅವನ ಆದೇಶ (ಆರ್ಡರ್) ಪಡೆದವನಿಗೋ, ಇಲ್ಲವೇ ವಾಹಕನಿಗೋ (ಬೇರರ್) ಪಾವತಿ ಮಾಡಬೇಕೆಂದು ಒಂದು ಬ್ಯಾಂಕಿನ ಗ್ರಾಹಕನೋ ಅಥವಾ ಅವನ ಅಧಿಕಾರ ಪಡೆದವನೋ ಆ ಬ್ಯಾಂಕಿಗೆ ಲಿಖಿತವಾಗಿ ನೀಡಿದ ಆದೇಶ (ಚೆಕ್). ಅದನ್ನು ಹಾಜರುಪಡಿಸಿ ಹಣ ಬೇಕೆಂದು ಕೇಳಿದಾಗ, ಅದರಲ್ಲಿ ಸೂಚಿಸಿರುವಷ್ಟು ಹಣವನ್ನು ಅದರ ಧಾರಕನಿಗೆ (ಹೋಲ್ಡರ್) ಬ್ಯಾಂಕು (ಸಾಮಾನ್ಯ ಸಂದರ್ಭಗಳಲ್ಲಿ) ಪಾವತಿ ಮಾಡಬೇಕಾಗುತ್ತದೆ. ಗ್ರಾಹಕನ ಲೆಕ್ಕದಲ್ಲಿ ಅವನಿಗೆ ಅನುಕೂಲವಾಗಿ ಇರುವ ಸಿಲ್ಕಿನ ಮಿತಿಯೊಳಗೆ ಅಥವಾ ಬ್ಯಾಂಕು ಗ್ರಾಹಕನಿಗೆ ಸೂಚ್ಯವಾಗಿಯೋ ವಾಚ್ಯವಾಗಿಯೋ ಕೊಡಲೊಪ್ಪಿದ ಓವರ್ ಡ್ರಾಫ್ಟಿನ (ಮೀರೆಳೆತ) ಮೊಬಲಗಿನ ಮಿತಿಯೊಳಗೆ ಬ್ಯಾಂಕಿನ ಮೇಲೆ ಗ್ರಾಹಕ ಅಥವಾ ಅವನಿಂದ ಅಧಿಕಾರ ಪಡೆದವನು ನೀಡುವ ಚೆಕ್ಕುಗಳನ್ನೆಲ್ಲ ಆದರಿಸಲು (ಆನರ್) ಬ್ಯಾಂಕು ಬದ್ಧವಾಗಿರುತ್ತದೆ. ಅದೊಂದು ಪರಕ್ರಾಮ್ಯಸಂಲೇಖ (ನೆಗೋಷಿಯಬಲ್ ಇನ್‍ಸ್ಟ್ರುಮೆಂಟ್). ಹುಂಡಿ (ಬಿಲ್ ಆಫ್ ಎಕ್ಸ್‍ಚೇಂಜ್) ಅಥವಾ ವಚನಪತ್ರದಂತೆ (ಪ್ರಾಮಿಸರಿ ನೋಟ್) ಚೆಕ್ಕೂ ಬಂದು ಪರಕ್ರಾಮ್ಯ ಸಂಲೇಖ (ನೆಗೋಷಿಯಬಲ್ ಇನ್‍ಸ್ಟ್ರುಮೆಂಟ್). ಹುಂಡಿಯಂತೆ ಇದೂ ಒಂದು ಆದೇಶ-ಬ್ಯಾಂಕಿಗೆ ನೀಡಿದ ಆದೇಶ. ಒಬ್ಬ ನಿಶ್ಚಿತ ಬ್ಯಾಂಕರನ ಮೇಲೆ ಬರೆಯಲಾದ, ಕೇಳಿದಾಗ ಅಲ್ಲದೆ ಅನ್ಯಥಾ ಪಾವತಿ ಮಾಡಬೇಕೆಂದು ಅಭಿವ್ಯಕ್ತವಾಗಿಲ್ಲದ ಹುಂಡಿಯೇ ಚೆಕ್ಕು-ಎಂಬುದು ಚೆಕ್ಕಿಗೆ ಭಾರತದ ಪರಕ್ರಾಮ್ಯ ಸುಲೇಖಗಳ ಅಧಿನಿಯಮ ನೀಡಿರುವ ವ್ಯಾಖ್ಯೆ.

ನೆಗೋಷಿಯಬಲ್ ಇನ್‍ಸ್ಟ್ರಮೆಂಟ್ಸ್ ಕಾಯಿದೆಯ ಅಧಿನಿಯಮ 5 ಮತ್ತು 6 ರಲ್ಲಿ ಚೆಕ್ಕು ಮತ್ತು ಹುಂಡಿಬಿಲ್ ಆಫ್ ಎಕ್ಸ್‍ಛೇಂಜ್)ಗಳನ್ನು ವಿವರಿಸಲಾಗಿದೆ. ಚೆಕ್ಕು ನಿರ್ದಿಷ್ಟ ಬ್ಯಾಂಕಿನ ಶಾಖೆಯ ಮೇಲೆ ಬೇಡಿಕೆಯ ಮೂಲಕ ಮಾತ್ರ ಪಾವತಿ ಮಾಡುವಂತೆ ಹುಂಡಿಯಾಗಿದೆ. ಒಂದು ಬಿಳಿಯ ಹಾಳೆಯ ಮೇಲಿನ ಅಧಿನಿಯಮದ ಪ್ರಕಾರ ಬರೆದಲ್ಲಿ ಅದನ್ನು ಮಾನ್ಯಮಾಡಬೇಕು. ಆದರೆ ವಾಸ್ತವವಾಗಿ ಎಲ್ಲ ಬ್ಯಾಂಕುಗಳು ತಮ್ಮದೇ ಆದ ರೀತಿಯಲ್ಲಿ ಚೆಕ್ಕುಗಳನ್ನು ಮುದ್ರಿಸಿ ತಮ್ಮ ಗ್ರಾಹಕರಿಗೆ ನೀಡಿ ಅದನ್ನೇ ಬಳಸುವ ಪದ್ಧತಿಯನ್ನು ತಂದಿರುವುದರಿಂದ ಅದೇ ನಿಯಮವಾಗಿದೆ.

ಶರತ್ತುಗಳು

[ಬದಲಾಯಿಸಿ]

ಒಂದು ಸಂಲೇಖವನ್ನು ಚೆಕ್ ಎಂದು ಪರಿಭಾವಿಸಬೇಕಾದರೆ ಅದು ಪೂರೈಸಬೇಕಾದ ಅಪೇಕ್ಷಿತಗಳು (ರಿಕ್ವಿಸಿಟ್ಸ್) ಇವು:

೧. ಅದು ಒಂದು ಲಿಖಿತ ಸುಲೇಖ : ಮೌಖಿಕ ಆದೇಶವಲ್ಲ. ಚೆಕ್ಕನ್ನು ನೀಡುವ ಅಧಿಕಾರ ಹೊಂದಿರತಕ್ಕವನು ಬ್ಯಾಂಕಿನಿಂದ ಪಡೆದ ಅಚ್ಚಾದ ನಮೂನೆಯಲ್ಲಿಯೇ ಅದನ್ನು ಬರೆಯಬೇಕು. ಕಾನೂನಿನ ಪ್ರಕಾರ ಚೆಕ್ಕನ್ನು ಯಾವ ಕಾಗದದ ಮೇಲಾದರೂ ಬರೆಯಬಹುದು. ಕೈಯಲ್ಲೇ ಅದನ್ನು ಪೂರ್ತಿಯಾಗಿ ಬರೆಯಬಹುದು. ಆದರೆ ವಾಡಿಕೆಯಲ್ಲಿ ಬ್ಯಾಂಕು ಕೆಲವು ನಿರ್ಬಂಧಗಳನ್ನು ವಿಧಿಸುತ್ತದೆ. ಯಾವುದಾದರೂ ಕಾಗದದ ಮೇಲೆ ಬರೆದ ಆದೇಶಕ್ಕೆ ಸಾಮಾನ್ಯವಾಗಿ ಬ್ಯಾಂಕು ಮಾನ್ಯತೆ ನೀಡುವುದಿಲ್ಲ. ತನ್ನ ಗ್ರಾಹಕರಿಗೆ ಒದಗಿಸಿದ ಅಚ್ಚಾದ ನಮೂನೆಗಳಲ್ಲೇ ಅವರು ಚೆಕ್ಕುಗಳನ್ನು ಬರೆಯಬೇಕೆಂದು ಪ್ರತಿಯೊಂದು ಬ್ಯಾಂಕೂ ನಿಬಂಧನೆಗಳನ್ನು ರಚಿಸಿಕೊಂಡಿರುತ್ತದೆ. ಚೆಕ್ಕನ್ನು ಯಾವುದರಿಂದ ಬರೆಯಬೇಕೆಂಬುದನ್ನು ಕಾನೂನಿನಲ್ಲಿ ಸೂಚಿಸಿಲ್ಲ. ಅದನ್ನು ಬೆರಳಚ್ಚು ಮಾಡಬಹುದು ಅಥವಾ ಮಸಿಯಲ್ಲಿ ಬರೆಯಬಹುದು. ಸೀಸದ ಕಡ್ಡಿಯಿಂದ ಬರೆದ ಚೆಕ್ಕುಗಳನ್ನು ಬ್ಯಾಂಕುಗಳು ಸಾಮಾನ್ಯವಾಗಿ ಆಧರಿಸುವುದಿಲ್ಲ.

೨. ಚೆಕ್ಕನ್ನು ಒಂದು ನಿಶ್ಚಿತ ಬ್ಯಾಂಕಿನ ಮೇಲೆಯೇ ಬರೆಯಬೇಕು. ಒಬ್ಬ ಇನ್ನೊಬ್ಬನ ಮೇಲೆ ಬರೆದ ಆದೇಶ ಹುಂಡಿಯಾಗಬಹುದು. ಆದರೆ ಚೆಕ್ ಆಗುವುದಿಲ್ಲ.

೩ ಚೆಕ್ಕು ಒಂದು ಬೇಷರತ್ ಆದೇಶ, ಪ್ರಾರ್ಥನೆಯಲ್ಲ, ದಯವಿಟ್ಟು ಎಂಬ ಪದವಿದ್ದರೂ ಅದು ಆದೇಶವೇ. ಚೆಕ್ಕಿನ ಪಾವತಿಗೆ ಮುನ್ನ ಅದರ ಪ್ರಾಪ್ತಿಕರ್ತ (ಪೇಯೀ) ರಸೀತಿ ಪಡೆದುಕೊಳ್ಳತಕ್ಕದೆಂದು ಬ್ಯಾಂಕಿಗೆ ಸೂಚನೆ ನೀಡಿದರೆ ಚೆಕ್ಕು ಬೇಷರತ್ ಆದೇಶವಾಗುವುದಿಲ್ಲ ಎಂದರೆ ಅದು ಚೆಕ್ಕೆನಿಸುವುದಿಲ್ಲ.

೪ ಕೇಳಿದ ಒಡನೆಯೇ ಚೆಕ್ಕಿನ ಮೊಬಲಗು ಪಾವತಿಯಾಗಬೇಕು. ಕೇಳಿದ ಒಡನೆಯೇ ಎಂಬ ಶಬ್ದಗಳನ್ನು ಚೆಕ್ಕಿನಲ್ಲಿ ಬಳಸುವ ಅವಶ್ಯವಿಲ್ಲ. ಹಣವನ್ನು ಎಂದು ಪಾವತಿ ಮಾಡಬೇಕೆಂಬುದನ್ನು ಪಾವತಿಗೆ ವಾಯಿದೆಯನ್ನು, ಸೂಚಿಸದಿದ್ದರೆ ಅದು ಕೇಳಿದ ಒಡನೆಯ ಪಾವತಿಯಾಗತಕ್ಕದ್ದೆಂಬುದು ಕಾನೂನಿನ ವಿಧಿ. ಕೇಳಿದ ಒಡನೆ ಅಲ್ಲದೆ ಬೇರೆ ಎಂದಾದರೂ ಪಾವತಿಯಾಗಬೇಕೆಂದು ಬರೆದರೆ ಅದು ಚೆಕ್ಕಾಗುವುದಿಲ್ಲ.

೫ ಚೆಕ್ಕಿನ ಮೇಲೆ ಅದರ ಕರ್ತನ ಅಥವಾ ರಚಕನ ಸಹಿ ಇರಬೇಕು. ಸಹಿ ಇಲ್ಲದ ಚೆಕ್ಕು ಆದೇಶವಲ್ಲ. ಅಂಥದನ್ನು ಬ್ಯಾಂಕು ಆಧರಿಸಬೇಕಾದ್ದಿಲ್ಲ. ಚೆಕ್ಕಿಗೆ ಸಹಿ ಮಾಡಬೇಕಾದವನ ಮಾದರಿ ಸಹಿ ಬ್ಯಾಂಕಿನ ಬಳಿ ಇರುತ್ತದೆ.

೬ ಎಷ್ಟು ಹಣ ಕೊಡಬೇಕೆಂಬುದೂ ಚೆಕ್ಕಿನಲ್ಲಿ ನಿಶ್ಚಿತವಾಗಿರಬೇಕು ಅಥವಾ ಅದನ್ನು ನಿಶ್ಚಿತವಾಗಿ ಗೊತ್ತುಪಡಿಸುವುದು ಸಾಧ್ಯವಾಗುವಂತಿರಬೇಕು. ಯಾವ ದೇಶದ ಬ್ಯಾಂಕಿನ ಮೇಲೆ ಚೆಕ್ಕನ್ನು ಬರೆಯಲಾಗಿದೆಯೋ ಆ ದೇಶದ ಹಣದಲ್ಲಿ ಈ ಚೆಕ್ಕಿನ ಪಾವತಿ ಆಗತಕ್ಕದ್ದು. ಪಾವತಿಯ ದಿನದಂದು ಚಾಲ್ತಿಯಲ್ಲಿರುವ ವಿನಿಮಯ ದರದಲ್ಲಿ ವಿದೇಶಿ ಹಣವನ್ನು ಪಾವತಿದಾರ ಬ್ಯಾಂಕಿನ ದೇಶದ ಹಣಕ್ಕೆ ಪರಿವರ್ತಿಸತಕ್ಕದ್ದು.

೭ ಚೆಕ್ಕಿನಲ್ಲಿ ಸೂಚಿಸಿರುವ ಹಣ ಅದರಲ್ಲಿ ಉಲ್ಲೇಖವಾಗಿರುವ ಒಬ್ಬ ನಿಶ್ಚಿತ ವ್ಯಕ್ತಿಗಾಗಲಿ (ಸರ್ಟನ್ ಪರ್ಸನ್) ಆ ವ್ಯಕ್ತಿಯ ಆದೇಶಕ್ಕಾಗಲಿ ಅಥವಾ ಅದರ ವಾಹಕನಿಗಾಗಲಿ (ಬೇರರ್) ಪಾವತಿಯಾಗಿತಕ್ಕದ್ದೆಂದು ಅದರಲ್ಲಿ ಬರೆದಿರಬೇಕು. ಚೆಕ್ಕುಗಳಿಗೆ ಸಂಬಂಧಿಸಿದಂತೆ ನೆಗೋಷಿಯಬಲ್ ಇನ್ಸ್ಟ್ರಮೆಂಟ್ ಕಾಯಿದೆಯ ಅಧಿನಿಯಮಗಳಾದ 85, 131, ಮತ್ತು 138 ಬಹು ಮುಖ್ಯವಾಗಿವೆ.. ಅಧಿನಿಯಮ ಸಂಖ್ಯೆ 85 ಹಣವನ್ನು ತನ್ನ ಗ್ರಾಹಕನ ಲೆಕ್ಕದಿಂದ ತೆಗೆದು ಯಾವ ಬ್ಯಾಂಕಿನಿಂದ ಚೆಕ್ಕು ತನಗೆ ಬಂದಿದೆಯೋ ಅವರಿಗೆ ವರ್ಗಾಯಿಸುವ ಹೊಣೆಗಾರಿಕೆಯನ್ನು ತಿಳಿಸುತ್ತದೆ. ಅಧಿನಿಯಮ 131 ಹಣವನ್ನು ತನ್ನ ಗ್ರಾಹಕನಿಗೆ ಬೇರೆ ಬ್ಯಾಂಕಿನಿಂದ ತರಿಸಿ ಅವನ( ತನ್ನ ಗ್ರಾಹಕನ) ಖಾತೆಗೆ ಜಮಾ ಮಾಡುವ ಜವಾಬ್ದಾರಿ ಮತ್ತು ಹೊಣಗಾರಿಕೆಗಳನ್ನು ತಿಳಿಸುತ್ತದೆ. ಅಧಿನಿಯಮ 138 ಯಾವುದೇ ಗ್ರಾಹಕನು ತನ್ನ ಖಾತೆಯಲ್ಲಿ ಸಾಕಷ್ಟು ಹಣವನ್ನು ಇಡದೆ ಚೆಕ್ಕುಗಳನ್ನು ಇತರರಿಗೆ ಕೊಟ್ಟಾಗ ಆಗುವ ನಷ್ಟವನ್ನು ನ್ಯಾಯಾಲಯದ ಮುಂದೆ ದಾವೆ ಹುಡುವ ವಿಷಯವನ್ನು ತಿಳಿಸುತ್ತದೆ.

ಕಾನೂನು

[ಬದಲಾಯಿಸಿ]

ಪ್ರತಿಯೊಂದು ಚೆಕ್ಕಿಗೂ ಮೂರು ಕಕ್ಷಿಗಳುಂಟು : # ಚೆಕ್ಕಿನ ಕರ್ತ ಅಥವಾ ರಚಕ ಇವನು ಬ್ಯಾಂಕಿನ ಗ್ರಾಹಕ ಅಥವಾ ಅವನ ಪರವಾಗಿ ಚೆಕ್ಕು ಬರೆಯಲು ಅವನಿಂದ ಅಧಿಕಾರ ಪಡೆದವನು.#. ಸ್ವೀಕರ್ತ (ಡ್ರಾಯೀ)-ಪಾವತಿದಾರ ಬ್ಯಾಂಕು (ಪೇಯಿಂಗ್ ಬ್ಯಾಂಕ್)-ಹಣ ಪಾವತಿ ಮಾಡಲು ಯಾವ ಬ್ಯಾಂಕಿಗೆ ಆದೇಶ ನೀಡಲಾಗಿದೆಯೋ ಆ ಬ್ಯಾಂಕು. #. ಪ್ರಾಪ್ತಿಕರ್ತ (ಪೇಯೀ)-ಯಾರಿಗೆ ಹಣ ಪಾವತಿ ಮಾಡಬೇಕೆಂದು ಚೆಕ್ಕಿನಲ್ಲಿ ಬರೆಯಲಾಗಿದೆಯೋ ಆತ.

ಚೆಕ್ಕುಗಳನ್ನು ಬರೆಯಲು ಬ್ಯಾಂಕು ಒದಗಿಸಿದ ಚೆಕ್ಕು ಪುಸ್ತಕದ ಹಾಳೆಗಳನ್ನೇ ಚೆಕ್ಕುರಚಕ ಉಪಯೋಗಿಸುವುದರಿಂದ ಅನೇಕ ಸೌಕರ್ಯಗಳುಂಟು. ಬ್ಯಾಂಕೇ ಅಚ್ಚು ಮಾಡಿಸಿ ಒದಗಿಸಿದ ನಮೂನೆ ಕಾನೂನಿಗೆ ಅನುಗುಣವಾಗಿರುತ್ತದೆ. ಅದನ್ನು ತುಂಬುವುದು ಸುಲಭ. ಪಾವತಿದಾರ ಬ್ಯಾಂಕಿನ ಹೆಸರು ವಿಳಾಸಗಳು ಅದರಲ್ಲಿ ಅಚ್ಚಾಗಿರುವುದರಿಂದ ಪಡೆದವನು ಅದರ ಮೇಲೆ ಹಣ ಪಡೆಯಲು ಅದನ್ನು ಎಲ್ಲಿ ಹಾಜರುಪಡಿಸಬೇಕೆಂಬ ಬಗ್ಗೆ ಸಂದೇಹ ಇರುವುದಿಲ್ಲ. ಪ್ರತಿಯೊಂದು ಚೆಕ್ಕು ಹಾಳೆಯಲ್ಲೂ ಎರಡು ಭಾಗಗಳಿರುತ್ತವೆ. ಈ ಎರಡು ಭಾಗಗಳ ನಡುವೆ ಅವನು ಪ್ರತ್ಯೇಕಗೊಳಿಸುವುದು ಸುಲಭವಾಗುವಂತೆ ಸಾಲರಂಧ್ರಗಳಿರುತ್ತವೆ. ಸಾಲುರಂದ್ರಗಳ ಬಲಕ್ಕಿರುವ ಭಾಗವೇ ಚೆಕ್ಕು ನಮೂನೆ. ಎಡಭಾಗ ಪ್ರತಿ ಹಾಳೆ (ಕೌಂಟರ್‍ಫಾಯಿಲ್). ಅದು ಚೆಕ್ಕುಪುಸ್ತಕದಲ್ಲೇ ಉಳಿಯುತ್ತದೆ. ಚೆಕ್ಕು ರಚಕ ಸ್ವಂತ ಅವಗಾಹನೆಗಾಗಿ ಚೆಕ್ಕಿನ ವಿವರಗಳನ್ನು ಪ್ರತಿಹಾಳೆಯಲ್ಲಿ ಬರೆದು ಇಟ್ಟುಕೊಳ್ಳಬಹುದು. ಚೆಕ್ಕು ನಮೂನೆಗಳನ್ನು ಅಚ್ಚು ಮಾಡಲು ಬ್ಯಾಂಕು ವಿಶೇಷವಾದ ಕಾಗದವನ್ನು ಬಳಸುವುದರಿಂದ ಅವುಗಳ ಮೇಲೆ ಬರೆದದ್ದನ್ನು ಪತ್ತೆಯಾಗದಂತೆ ವ್ಯತ್ಯಾಸ ಮಾಡುವುದು ಸುಲಭವಲ್ಲ. ಆದ್ದರಿಂದ ಮೋಸದ ಸಂಭವ ಕಡಿಮೆ. ಪ್ರತಿಯೊಂದು ಚೆಕ್ಕಿಗೂ ಒಂದು ಸಂಖ್ಯೆ ಇರುತ್ತದೆ. ಚೆಕ್ಕಿನ ವಿಚಾರವಾಗಿ ವ್ಯವಹರಿಸುವಾಗ ಈ ಸಂಖ್ಯೆಯನ್ನು ಸೂಚಿಸಬಹುದು. ಇದರಿಂದ ವ್ಯವಹಾರ ಎಷ್ಟೋ ಸುಲಭವಾಗುತ್ತದೆ. ಪ್ರತಿಯೊಬ್ಬ ಗ್ರಾಹಕನಿಗೂ ಒದಗಿಸಲಾದ ಚೆಕ್ಕು ಪುಸ್ತಕದ ಹಾಳೆಗಳ ಕ್ರಮಸಂಖ್ಯೆಗಳನ್ನು ಬ್ಯಾಂಕು ಬರೆದಿಟ್ಟುಕೊಂಡಿರುವುದರಿಂದ ಬೇರೆ ಯಾರಾದರೂ ಬೇರೊಂದು ಹಾಳೆಯ ಮೇಲೆ ಆತನ ಲೆಕ್ಕಕ್ಕೆ ಚೆಕ್ಕು ಬರೆದು ಅದರಿಂದ ಹಣ ಪಡೆಯುವುದು ಸಾಧ್ಯವಿಲ್ಲ. ಈ ಹಲವು ಕಾರಣಗಳಿಂದ ಬ್ಯಾಂಕು ಒದಗಿಸಿದ ಚೆಕ್ಕು ಪುಸ್ತಕದಲ್ಲೇ ಚೆಕ್ಕು ಬರೆಯುವುದು ಒಳ್ಳೆಯದು.

ಚೆಕ್ಕು ಬರೆಯುವವರು ತಕ್ಕಮಟ್ಟಿನ ಎಚ್ಚರಿಕೆ ವಹಿಸಬೇಕು. ಅನ್ಯರು ಅದನ್ನು ತಿದ್ದಿ ಮೋಸಪಡಿಸಲು ಅವಕಾಶ ನೀಡಬಾರದು. ತಿದ್ದಲು ಅವಕಾಶ ಹೇಗೆ ಒದಗಬಹುದೆಂಬುದನ್ನು ತೋರಿಸಲು ಒಂದು ಉದಾಹರಣೆ ಕೊಡಬಹುದು. ಎಂಟು ರೂಪಾಯಿಗಳಿಗೆ ಒಂದು ಚೆಕ್ಕನ್ನು ಬರೆಯುವಾಗ ಎಂಟು ಎಂಬ ಪದದ ಹಾಗೂ ಅಂಕಿಯ ಹಿಂದೆಯೂ ಮುಂದೆಯೂ ಸ್ಥಳ ಬಿಡಬಾರದು. ಈ ಎಚ್ಚರಿಕೆ ವಹಿಸದಿದ್ದರೆ ಎಂಟು ಎಂಬುದನ್ನು ಎಂಟುನೂರು ಅಥವಾ ನೂರ ಎಂಟು ಎಂದು ಬದಲಾಯಿಸುವ ಸಾಧ್ಯತೆಯುಂಟು. ಚೆಕ್ಕು ಬರೆಯುವಾಗ ಅದರ ಕರ್ತ ಸಾಮಾನ್ಯವಾದ ಎಲ್ಲ ಎಚ್ಚರಿಕೆಯನ್ನೂ ಲಕ್ಷ್ಯವನ್ನೂ ವಹಿಸುವನೆಂದು ಸಾಮಾನ್ಯವಾಗಿ ಭಾವಿಸಲಾಗುತ್ತದೆ.

ಚೆಕ್ಕಿನ ದಿನಾಂಕ

[ಬದಲಾಯಿಸಿ]

ಚೆಕ್ಕಿನ ಬಲ ಮೇಲ್ತುದಿಯಲ್ಲಿ ದಿನಾಂಕ ಬರೆಯಲು ಸ್ಥಳವಿದೆ. ಚೆಕ್ಕು ಬರೆಯುತ್ತಿರುವಂದಿನ ತಾರೀಕನ್ನು ಅಲ್ಲಿ ಬರೆಯಲಾಗುತ್ತದೆ. ಅದಕ್ಕೆ ಹಿಂದಿನ ದಿನಾಂಕವನ್ನು ಬರೆದರೂ ತಪ್ಪಿಲ್ಲ. ಚೆಕ್ಕಿನ ಮೇಲೆ ಬರೆಯಲಾದ ದಿನಾಂಕದಂದು ಅದನ್ನು ನೀಡಲಾಗಿದೆಯೆಂಬುದು ಕಾನೂನಿನ ಪರಿಭಾವನೆ, ಕಳೆದು ಹೋದ ದಿನಾಂಕವನ್ನು ಚೆಕ್ಕಿನ ಮೇಲೆ ಬರೆದಿದ್ದರೆ ಅದು ಗತ ದಿನಾಂಕದ (ಆಂಟಿ-ಡೇಟೆಡ್) ಚೆಕ್ಕು. ಇನ್ನೂ ಬಾರದಿರುವ ದಿನಾಂಕವನ್ನು ಚೆಕ್ಕಿನ ಮೇಲೆ ಬರೆಯಲಾದರೆ ಅದು ಅನಾಗತ ದಿನಾಂಕದ (ಪೋಸ್ಟ್-ಡೇಟೆಡ್) ಚೆಕ್ಕು. ಕಾನೂನಿನ ದೃಷ್ಟಿಯಲ್ಲಿ ಅನಾಗತ ದಿನಾಂಕದ ಚೆಕ್ಕು ಚೆಕ್ಕೇ ಅಲ್ಲ. ಏಕೆಂದರೆ ಕೇಳಿದಾಗ ಅಲ್ಲದೆ ಇನ್ನೆಂದೋ ಹಣ ಪಾವತಿ ಮಾಡಬೇಕೆಂದು ಆದೇಶ ನೀಡಬೇಕೆಂದು ಆದೇಶ ನೀಡಿದಂತಾಗುತ್ತದೆ. ಅನಾಗತ ದಿನಾಂಕದ ಚೆಕ್ಕು ವಾಯಿದೆ ಹುಂಡಿಯಂತೆ. ಭಾರತದಲ್ಲಿ ಚೆಕ್ಕುಗಳಿಗೆ ಸ್ಟಾಂಪು ಶುಲ್ಕದಿಂದ ವಿನಾಯಿತಿಯುಂಟು. ಕಾನೂನು ರೀತ್ಯ ಅನಾಗತ ದಿನಾಂಕದ ಚೆಕ್ಕಿಗೆ ವಾಯಿದೆ ಹುಂಡಿಯಂತೆ ಸ್ಟಾಂಪು ಹಚ್ಚಬೇಕಾದೀತು. ಆದರೂ ಅನಾಗತ ಚೆಕ್ಕನ್ನು ಚೆಕ್ಕೆಂದೇ ಕೊಡುವ, ಪಡೆದುಕೊಳ್ಳುವ ವಾಡಿಕೆಯಿದೆ. ಆದರೆ ಚೆಕ್ಕಿನ ದಿನಾಂಕಕ್ಕೆ ಮುನ್ನ ಅದನ್ನು ಬ್ಯಾಂಕಿಗೆ ಹಾಜರು ಪಡಿಸಿದರೆ ಪಾವತಿದಾರ ಅದನ್ನು ಆಧರಿಸುವುದಿಲ್ಲ. ಒಂದು ವೇಳೆ ಅದು ಆಧರಿಸಿದರೆ ಪಾವತಿದಾರ ಬ್ಯಾಂಕಿಗೆ ಒದಗುವ ಪರಿನಿಯತ ರಕ್ಷಣೆ (ಸ್ಟಾಚ್ಯುಟರಿ ಪ್ರೊಟೆಕ್ಷನ್) ಅದಕ್ಕೆ ಲಭಿಸುವುದಿಲ್ಲ. ಏಕೆಂದರೆ ಅದು ಚೆಕ್ಕೇ ಅಲ್ಲ. ಆದ್ದರಿಂದ ಅದು ಗ್ರಾಹಕನ ಆದೇಶವಲ್ಲ. ಗ್ರಾಹಕನ ಆದೇಶವಲ್ಲವಾದ್ದರಿಂದ ಅದರ ಮೇಲೆ ಪಾವತಿ ಮಾಡಿದ ಮೊಬಲಗನ್ನು ಗ್ರಾಹಕನ ಲೆಕ್ಕಕ್ಕೆ ಋಣಿಸುವಂತಿಲ್ಲ. ಋಣಿಸಿದ ಪಕ್ಷದಲ್ಲಿ ನಷ್ಟ ಸಂಭವವುಂಟು. ಚೆಕ್ಕಿನ ದಿನಾಂಕದವರೆಗೂ ಅದರ ಮೇಲೆ ಪಾವತಿಯಾಗುವುದಿಲ್ಲವೆಂದು ಗ್ರಾಹಕ ಭಾವಿಸಿ, ತತ್ಕಾಲದಲ್ಲಿ ಪಾವತಿಗಾಗಿ ಅವನು ಇತರರಿಗೆ ಚೆಕ್ಕು ಕೊಟ್ಟಿರಬಹುದು. ಅನಾಗತ ಚೆಕ್ಕಿನ ದಿನಾಂಕದ ವೇಳೆಗೆ ಅದರ ಪಾವತಿಗಾಗಿ ಬಂದ ಚೆಕ್ಕನ್ನು ಅನಾಗತ ದಿನಾಂಕದ ಚೆಕ್ಕಿನ ಮೇಲೆ ಪಾವತಿ ಲೆಕ್ಕದಲ್ಲಿಲ್ಲದೆ ಅದನ್ನು ಬ್ಯಾಂಕು ಅನಾದರಿಸಬೇಕಾಗಿ ಬರಬಹುದು. ಇದರಿಂದ ಗ್ರಾಹಕನಿಗೆ ಆದ ನಷ್ಟ ಮತ್ತು ಮರ್ಯಾದಾಭಂಗಕ್ಕಾಗಿ ಬ್ಯಾಂಕು ಅವನಿಗೆ ಪರಿಹಾರ ನೀಡಬೇಕಾಗಿ ಬಂದೀತು. ಅನಾಗತ ದಿನಾಂಕದ ಚೆಕ್ಕನ್ನು ಅದರ ದಿನಾಂಕದ ಆಗಮನಾನಂತರ ಪಾವತಿಗಾಗಿ ಹಾಜರುಪಡಿಸಿದರೆ ಪಾವತಿದಾರ ಬ್ಯಾಂಕು ಅದನ್ನು ಕ್ರಮಬದ್ಧವಾಗಿ ನೀಡಲಾದ ಚೆಕ್ಕೆಂದೇ ಪರಿಭಾವಿಸಿ ಪಾವತಿ ಮಾಡಲು ಅಭ್ಯಂತರವಿಲ್ಲ. ಚೆಕ್ಕು ರಚಕ ಅದನ್ನು ನೀಡುವುದಕ್ಕೆ ಮುಂಚೆ ಅದರ ಮೇಲೆ ದಿನಾಂಕವನ್ನು ಹಾಕಬೇಕು. ಒಂದು ವೇಳೆ ಅವನು ಹಾಕದಿದ್ದರೆ ಚೆಕ್ಕಿನ ಧಾರಕ (ಹೋಲ್ಡರ್) ಅದನ್ನು ತುಂಬಬಹುದು. ದಿನಾಂಕ ಇಲ್ಲದ ಚೆಕ್ಕನ್ನು ಹಾಜರುಪಡಿಸಿದರೆ ಪಾವತಿದಾರ ಬ್ಯಾಂಕು ಆದರಿಸುವುದಿಲ್ಲ. ಪ್ರತಿ ಚೆಕ್ಕೂ ಅದನ್ನು ನೀಡಿದ ದಿನಾಂಕದಿಂದ ಸಾಮಾನ್ಯವಾಗಿ ಆರು ತಿಂಗಳುಗಳ ಕಾಲ ಚಲಾವಣೆಯಲ್ಲಿರುತ್ತದೆ. ಅದುವರೆಗೂ ಅದನ್ನು ಪರಾಕ್ರಾಮಣಗೊಳಿಸಬಹುದು (ನೆಗೋಷಿಯೇಟ್) ಈ ಅವಧಿಯ ಅನಂತರ ಅದು ಕಾಲಾತೀತ (ಸ್ಟೇಲ್) ಚೆಕ್ಕು ಎನಿಸಿಕೊಳ್ಳುತ್ತದೆ. ಕಾಲಾತೀತ ಚೆಕ್ಕನ್ನು ಅದರ ರಚಕ ದೃಢೀಕರಿಸಬೇಕು (ಕನ್‍ಫರ್ಮ್). ವಾಹಕ ಚೆಕ್ಕು ಮತ್ತು ಆದಿಷ್ಟ ಚೆಕ್ಕು : ಯಾರಿಗೆ ಚೆಕ್ಕಿನ ಮೊಬಲಗು ಪಾವತಿಯಾಗಬೇಕೋ ಅವನ, ಪ್ರಾಪ್ತಿಕರ್ತನ, ಹೆಸರಿಗಾಗಿ ಚೆಕ್ಕಿನಲ್ಲಿ ಬಿಟ್ಟಿರುವ ಸ್ಥಳದ ಅನಂತರ, ಆ ಸಾಲಿನ ಕೊನೆಯಲ್ಲಿ `ರಿಗೆ ಅಥವಾ ವಾಹಕನಿಗೆ ಎಂಬ ಶಬ್ದಗಳು ಅಚ್ಚಾಗಿರುತ್ತವೆ. ಪ್ರಾಪ್ತಿಕರ್ತನ ಹೆಸರು ಬರೆದ ಮೇಲೆ `ಅಥವಾ ವಾಹಕನಿಗೆ ಎಂಬ ಶಬ್ದಗಳನ್ನು ಹಾಗೆಯೇ ಬಿಡಬಹುದು. ಆಗ ಅದು ವಾಹಕ ಚೆಕ್ಕು (ಬೇರರ್ ಚೆಕ್) ಆಗುತ್ತದೆ. ಅಂಥ ಚೆಕ್ಕಿನ ಧಾರಕ ಅದರ ಹಿಂದೆ ಸಹಿ ಹಾಕದೆಯೇ ಅದನ್ನು ಪರಾಕ್ರಮಿಸಬಹುದು. ಅದರ ಮೇಲೆ ಹಣ ಪಡೆಯುವವನು ಪಾವತಿಗಾಗಿ ಅದನ್ನು ಪರಾಕ್ರಮಿಸಬಹುದು. ಅದರ ಮೇಲೆ ಹಣ ಪಡೆಯುವವನು ಪಾವತಿಗಾಗಿ ಅದನ್ನು ಬ್ಯಾಂಕಿಗೆ ಹಾಜರು ಪಡಿಸುವಾಗ ಅದರ ಹಿಂದೆ ಸಹಿ ಹಾಕಬೇಕೆಂದು ಕಾನೂನಿನಲ್ಲಿಲ್ಲ. ಆದರೆ ಭಾರತೀಯ ಬ್ಯಾಂಕುಗಳು ಸಹಿ ಪಡೆದುಕೊಳ್ಳುತ್ತವೆ. ಇಲ್ಲದಿದ್ದರೆ ಹಣ ಸಂದಾಯವಾದ್ದಕ್ಕೆ ರಸೀತಿ ಕೊಡಬೇಕೆಂದು ಬ್ಯಾಂಕು ಕೇಳಬಹುದು. ಮೊಬಲಗು ಇಪ್ಪತ್ತು ರೂಪಾಯಿಗಳಿಗಿಂತ ಕಡಿಮೆಯಿಲ್ಲವಾದರೆ ಆ ರಸೀತಿಗೆ ಸ್ಟಾಂಪು ಶುಲ್ಕದಿಂದ ವಿನಾಯಿತಿಯುಂಟು.

`ಅಥವಾ ವಾಹಕನಿಗೆ ಎಂಬ ಶಬ್ದಗಳಲ್ಲಿ `ವಾಹಕನಿಗೆ ಎಂಬ ಶಬ್ದವನ್ನು ಹೊಡೆದು ಹಾಕಿ `ಆದೇಶಕ್ಕೆ ಎಂದು ಬರೆದರೆ ಅದರು ಆದಿಷ್ಟ ಚೆಕ್ಕು (ಆರ್ಡರ್ ಚೆಕ್) ಆಗುತ್ತದೆ. ನಿಶ್ಚಿತ ಪ್ರಾಪ್ತಿಕರ್ತನಿಗೆ ಅಥವಾ (ಅವನ) ಆದೇಶಕ್ಕೆ ಪಾವತಿ ಮಾಡಬೇಕಾದ ಚೆಕ್ಕು ಅದು. ಅದನ್ನು ಪರಾಕ್ರಮಣ ಮಾಡುವ ಮುನ್ನ ಚೆಕ್ಕಿನ ಧಾರಕ ಅದರ ಹಿಂಬದಿಯಲ್ಲಿ ತನ್ನ ಸಹಿ ಹಾಕಬೇಕು. ಪಾವತಿ ಪಡೆಯುವವನು ಕೂಡ ಬ್ಯಾಂಕಿಗೆ ಹಾಜರುಪಡಿಸುವಾಗ ತನ್ನ ಸಹಿ ಹಾಕಬೇಕು. `ಅಥವಾ ವಾಹಕನಿಗೆ ಎಂಬ ಶಬ್ದಗಳನ್ನು ಹೊಡೆದುಹಾಕಿ `ಮಾತ್ರ ಎಂದು ಬರೆದರೆ ಚೆಕ್ಕಿನಲ್ಲಿ ನಮೂದಿಸಲಾದ ಪ್ರಾಪ್ತಿಕರ್ತನಿಗೆ ಮಾತ್ರ ಅದರ ಮೊಬಲಗು ಪಾವತಿಯಾಗತಕ್ಕದ್ದು.

ಮೊಬಲಗು

[ಬದಲಾಯಿಸಿ]

ಚೆಕ್ಕಿನ ಮೊಬಲಗನ್ನು ಅಕ್ಷರಗಳಲ್ಲೂ ಅಂಕಿಯಲ್ಲೂ ಬರೆಯಬೇಕು. ಅದಕ್ಕಾಗಿ ಚೆಕ್ಕಿನಲ್ಲಿ ಸ್ಥಳ ಉಂಟು. ಚೆಕ್ಕಿನ ಮೊಬಲಗು ಅಕ್ಷರಗಳಲ್ಲೂ ಅಂಕಿಗಳಲ್ಲೂ ಒಂದೇ ಆಗಿರಬೇಕು. ಇವೆರಡರಲ್ಲಿ ವ್ಯತ್ಯಾಸವಿದ್ದರೆ ಅಕ್ಷರಗಳಲ್ಲಿರುವ ಮೊಬಲಗೇ ಚೆಕ್ಕಿನ ಮೊಬಲಗೆಂಬುದು ಕಾನೂನಿನ ನಿರ್ಣಯ. ಆದರೆ ಬ್ಯಾಂಕು ಸಾಮಾನ್ಯವಾಗಿ ಅಂಥ ಚೆಕ್ಕುಗಳನ್ನು ಆಧರಿಸುವುದಿಲ್ಲ. ರೇಖಣ : ಚೆಕ್ಕುಗಳನ್ನು ರೇಖಿಸುವ (ಕ್ರಾಸ್) ಪದ್ಧತಿ, ಎಂದರೆ ಅವುಗಳ ಮೇಲೆ ಸಮಾನಾಂತರವಾದ ಎರಡು ಅಡ್ಡಗೆರೆಗಳನ್ನು ಎಳೆಯುವ ಪದ್ಧತಿ, ಉಗಮಗೊಂಡದ್ದು ಇಂಗ್ಲೆಂಡಿನಲ್ಲಿ, ಬಹಳ ಹಿಂದೆ. ಆ ಕಾಲದಲ್ಲಿ ಸಾರಿಗೆ ಸೌಕರ್ಯ ಸಮರ್ಪಕವಾಗಿರಲಿಲ್ಲ. ಅಂಚೆ ಪತ್ರಗಳೂ ಇತರ ಪತ್ರಗಳೂ ಸಾಗಲು ಬಹಳ ಕಾಲ ಹಿಡಿಸುತ್ತಿತ್ತು. ಒಂದು ಬ್ಯಾಂಕು ತನ್ನ ಗ್ರಾಹಕರಿಗೆ ಇನ್ನೊಂದು ಬ್ಯಾಂಕಿನಿಂದ ಬರಬೇಕಾದ ಚೆಕ್ಕುಗಳ ಹಣವನ್ನು ಆ ಬ್ಯಾಂಕಿನಿಂದ ಪಡೆಯುವ ಸಲುವಾಗಿ ಆ ಚೆಕ್ಕುಗಳನ್ನು ಕಳಿಸಿದಾಗ, ಮಾರ್ಗಮಧ್ಯದಲ್ಲಿ ದರೋಡೆಕಾರರು ಅವನ್ನು ದರೋಡೆ ಮಾಡಿ, ಆ ಸುದ್ದಿ ಪಾವತಿದಾರ ಬ್ಯಾಂಕಿಗೆ ತಲುಪುವುದರೊಳಗೆ ಆ ಚೆಕ್ಕುಗಳನ್ನು ಅಲ್ಲಿ ಕೊಟ್ಟು ಪಡೆಯುವ ಅಪಾಯವಿತ್ತು. ಈ ಸಂಭವವನ್ನು ತಪ್ಪಿಸುವ ಸಲುವಾಗಿ ಇಂಥ ಚೆಕ್ಕುಗಳ ಮೇಲೆ ಹಿಂದೆ ಹೇಳಿದಂತೆ ಅಡ್ಡಗೆರೆ ಎಳೆಯುವ ಪದ್ಧತಿ ಬಂತು. ಈ ಅಡ್ಡಗೆರೆಗಳು ಪಾವತಿದಾರ ಬ್ಯಾಂಕಿಗೆ ಸೂಚನೆ. ರೇಖಿಸಲಾದ ಚೆಕ್ಕಿನ ಮೇಲೆ ಹಣ ಪಾವತಿ ಮಾಡುವ ಬ್ಯಾಂಕು ತನ್ನ ಪಾವತಿ ಮೇಜಿನ ಮೇಲೆ ಯಾವ ವ್ಯಕ್ತಿಗೂ ಪಾವತಿ ಮಾಡುವಂತಿಲ್ಲ. ಅದನ್ನು ಇನ್ನೊಂದು ಬ್ಯಾಂಕಿಗೆ ಪಾವತಿ ಮಾಡಬೇಕು. ಇದು ಚೆಕ್ಕಿನ ರೇಖಣದ (ಕ್ರಾಸಿಂಗ್) ಸಾಮಾನ್ಯ ಅರ್ಥ. ಚೆಕ್ಕಿನ ರೇಖಣ ಇಂದು ಬಹಳ ಸಾಮಾನ್ಯವಾಗಿ ಬಳಕೆಯಲ್ಲಿದೆ; ಇದು ಕಾನೂನುಬದ್ಧವಾಗಿದೆ.

ರೇಖಣದಲ್ಲಿ ಎರಡು ಪ್ರರೂಪಗಳುಂಟು : #. ಸಾಮಾನ್ಯ ರೇಖಣ (ಜನರಲ್ ಕ್ರಾಸಿಂಗ್), #. ವಿಶೇಷ ರೇಖಣ (ಸ್ಪೆಷಲ್ ಕ್ರಾಸಿಂಗ್). ಒಂದು ಚೆಕ್ಕಿನ ಮುಖದ ಮೇಲೆ ಅಡ್ಡಲಾಗಿ ಎರಡು ಸಮಾನಾಂತರ ರೇಖೆಗಳನ್ನು ಬರೆದರೆ ಅದು ಸಾಮಾನ್ಯ ರೇಖಣ. ಈ ರೇಖೆಗಳ ನಡುವೆ ಮತ್ತು ಕಂಪನಿ ಅಥವಾ ಆ ಪದಗಳ ಯಾವುದಾದರೂ ಸಂಕ್ಷಿಪ್ತ ರೂಪವನ್ನು ಬರೆಯಬಹುದು; ಅಥವಾ ಬರೆಯದಿರಬಹುದು.

ಚೆಕ್ಕಿನ ಮೇಲೆ ಸಾಮಾನ್ಯ ರೇಖಣ ಮಾಡಿದಾಗ, ಪಾವತಿದಾರ ಬ್ಯಾಂಕು ಅದರಲ್ಲಿ ಸೂಚಿಸಿರುವ ಮೊಬಲಗನ್ನು ಇನ್ನೊಂದು ಬ್ಯಾಂಕಿಗಲ್ಲದೆ ಬೇರೆ ಯಾರಿಗೂ ಕೊಡಕೂಡದು. ಅಂಥ ಚೆಕ್ಕನ್ನು ಪಡೆದಿರುವವನು ನೇರವಾಗಿ ಪಾವತಿದಾರ ಬ್ಯಾಂಕಿನಿಂದ ಹಣ ಪಡೆಯುವುದು ಸಾಧ್ಯವಿಲ್ಲ. ಅವನು ತನ್ನ ಗ್ರಾಹಕನಾಗಿದ್ದರೆ ಮಾತ್ರವೇ ಒಂದು ಬ್ಯಾಂಕು ಆತನ ಚೆಕ್ಕನ್ನು ಪಾವತಿದಾರ ಬ್ಯಾಂಕಿನಿಂದ ವಸೂಲಿ ಮಾಡುವುದಕ್ಕೆ ಒಪ್ಪುತ್ತದೆ. ಗ್ರಾಹಕನಲ್ಲದವನ ಚೆಕ್ಕನ್ನು ವಸೂಲಿ ಮಾಡಿದ ಪಕ್ಷದಲ್ಲಿ ವಸೂಲಿದಾರ ಬ್ಯಾಂಕಿಗೆ ಪರಿನಿಯತ ರಕ್ಷಣೆ (ಸ್ಟಾಚ್ಯುಟರಿ ಪ್ರೊಟೆಕ್ಷನ್) ದೊರಕುವುದಿಲ್ಲ.

ಒಂದು ಚೆಕ್ಕಿನ ಮೇಲೆ ಯಾವುದಾದರೂ ಬ್ಯಾಂಕಿನ ಹೆಸರನ್ನು ಅಡ್ಡಲಾಗಿ ಬರೆದಿದ್ದರೆ ಆಗ ಚೆಕ್ಕನ್ನು ವಿಶೇಷ ರೇಖಣ ಮಾಡಿದೆಯೆಂದು ತಿಳಿಯಬೇಕು. ಬ್ಯಾಂಕಿನ ಹೆಸರಿನ ಜೊತೆಗೆ ಎರಡು ಸಮಾನಾಂತರ ರೇಖೆಗಳನ್ನು ಎಳೆಯಬಹುದು. ಇಲ್ಲವೇ ಬಿಡಬಹುದು. `ಪರಾಕ್ರಾಮ್ಯವಲ್ಲ ಎಂದು ಬರೆಯಬಹುದು. ಬರೆಯದೆಯೂ ಇರಬಹುದು. `ಪ್ರಾಪ್ತಿಕರ್ತನ ಲೆಕ್ಕ ಎಂದು ಬರೆಯುವುದೂ ಬಿಡುವುದೂ ರೇಖಣಕಾರನ ಇಷ್ಟಕ್ಕೆ ಸೇರಿದ್ದು. ಚೆಕ್ಕನ್ನು ವಿಶೇಷ ರೇಖಣ ಮಾಡಿದ್ದರೆ ಆಗ ಪಾವತಿದಾರ ಬ್ಯಾಂಕು ಚೆಕ್ಕಿನ ಮೊಬಲಗನ್ನು ವಿಶೇಷ ರೇಖಣದಲ್ಲಿ ಸೂಚಿಸಿರುವ ಬ್ಯಾಂಕಿಗೇ, ಅಥವಾ ಅದು ಮತ್ತೆ ರೇಖಣ ಮಾಡಿ, ತನ್ನ ಪ್ರತಿನಿಧಿಯಾಗಿ ಸೂಚಿಸುವ ಬ್ಯಾಂಕಿಗೇ, ಕೊಡಬೇಕು.

ಚೆಕ್ಕಿನ ರೇಖಣದ ಅಂಗವಾಗಿ ಬರೆಯುವ `ಪರಾಕ್ರಾಮ್ಯವಲ್ಲ ಎಂಬುದಕ್ಕೆ ವಿಶೇಷವಾದ ಅರ್ಥವುಂಟು. ಹಾಗೆಂದು ಬರೆದರೆ ಚೆಕ್ಕನ್ನು ವರ್ಗಾಯಿಸುವ ಹಕ್ಕು ಕಳೆದುಹೋಗುವುದಿಲ್ಲ. ಆದರೆ ಅದರ ಪರಕ್ರಾಮ್ಯ ಗುಣವನ್ನು ತೆಗೆದು ಹಾಕಿದಂತೆ. ಅದನ್ನು ಕೊಡುವವನ ಹಕ್ಕಿನಲ್ಲಿ ಏನಾದರೂ ದೋಷವಿದ್ದರೆ, ಆ ಚೆಕ್ಕನ್ನು ಯಥಾಕ್ರಮದಲ್ಲಿ, ಸದ್ಭಾವನೆಯಿಂದ, ಪ್ರತಿಫಲಕ್ಕೆ ಪಡೆದವನಿಗೂ ಅದರ ಮೇಲೆ ಹಕ್ಕು ಪ್ರಾಪ್ತವಾಗುವುದಿಲ್ಲ. ವರ್ಗದಾರನ ಹಕ್ಕಿನ ಬಗ್ಗೆ ಖಾತರಿ ಮಾಡಿಕೊಂಡ ಮೇಲೆಯೇ ವರ್ಗಸ್ವೀಕರ್ತ ಅದನ್ನು ಪಡೆಯುವುದು ಅವನ ಹಿತದೃಷ್ಟಿಯಿಂದ ಸೂಕ್ತ. ಇಂಥ ಚೆಕ್ಕು ಒಂದು ವೇಳೆ ಕಳವಾದರೂ ಅದನ್ನು ಪಡೆದವನಿಗೆ ಅದರ ಮೇಲೆ ಹಕ್ಕು ಪ್ರಾಪ್ತವಾಗುವುದಿಲ್ಲ.

`ಪ್ರಾಪ್ತಿಕರ್ತನ ಲೆಕ್ಕ: ರೇಖಣದ ಅಂಗವಾಗಿ ಹೀಗೆಂದು ಬರೆಯುವುದು ಕೂಡ ರಕ್ಷಣೆಯ ಉದ್ದೇಶದಿಂದಲೇ. ಪ್ರಾಪ್ತಿಕರ್ತನ ಪರವಾಗಿ ಚೆಕ್ಕಿನ ಮೊಬಲಗನ್ನು ವಸೂಲು ಮಾಡುವ ಬ್ಯಾಂಕು ಅದನ್ನು ಪ್ರಾಪ್ತಿಕರ್ತನ ಲೆಕ್ಕಕ್ಕೇ ಜಮಾ ಮಾಡಬೇಕೆಂಬ ಸೂಚನೆ ಇದು.

ಚೆಕ್ಕಿನ ರೇಖಣದಿಂದ ಅದರ ಮೊಬಲಗು ಅನ್ಯರಿಗೆ ಪಾವತಿಯಾಗದಂತೆ ಎಚ್ಚರಿಕೆ ವಹಿಸಿದಂತಾಗುತ್ತದೆ. ಸಾಮಾನ್ಯ ರೇಖಣ ಮಾಡಿದ್ದರೆ ಪಾವತಿದಾರ ಬ್ಯಾಂಕು ಇನ್ನೊಂದು ಬ್ಯಾಂಕಿಗಲ್ಲದೆ ಬೇರೆ ಯಾರಿಗೂ ಹಣ ಕೊಡದು. ವಿಶೇಷ ರೇಖಣ ಮಾಡಿದ್ದರಂತೂ ಪಾವತಿ ಪಡೆಯಬೇಕಾದ ಬ್ಯಾಂಕೂ ನಿಶ್ಚಿತವಾಗಿರುತ್ತದೆ. ಪರಕ್ರಾಮ್ಯವಲ್ಲ ಎಂದು ಬರೆದಿದ್ದರೆ, ಪರಹಸ್ತಗತವಾದ ಚೆಕ್ಕು ಅನಧಿಕೃತರಿಗೆ ಪಾವತಿಯಾಗದಂತೆ ತಡೆಯಾಗುತ್ತದೆ. ಪ್ರಾಪ್ತಿಕರ್ತನ ಲೆಕ್ಕ ಎಂದು ಬರೆದಿದ್ದರೆ ಪ್ರಾಪ್ತಿಕರ್ತನ ಲೆಕ್ಕಕ್ಕೇ ಆ ಹಣ ಸೇರುವುದೆಂಬ ಭರವಸೆಯಿರುತ್ತದೆ. ಇಂಥ ಚೆಕ್ಕನ್ನು ಸಾಮಾನ್ಯ ಅಂಚೆಯ ಮೂಲಕ ಕಳಿಸಿದಾಗ ಒಂದು ವೇಳೆ ಚೆಕ್ಕು ಮಾರ್ಗಮಧ್ಯದಲ್ಲಿ ಕಳೆದುಹೋದರೂ ನಷ್ಟದ ಭಯವಿಲ್ಲ. ರೇಖಣದ ಸೂಚನೆಗೆ ಅನುಗುಣವಾಗಿಯಲ್ಲದೆ ಅನ್ಯಥಾ ಪಾವತಿದಾರ ಬ್ಯಾಂಕು ಮೊಬಲಗನ್ನು ಪಾವತಿ ಮಾಡಿದ್ದರೆ, ಹಕ್ಕಿಲ್ಲದವನು ಪಾವತಿ ಪಡೆದುಕೊಂಡಿದ್ದರೆ, ಆಗ ಪಾವತಿದಾರ ಬ್ಯಾಂಕು ಚೆಕ್ಕಿನ ಒಡೆಯನಿಗೆ ಈ ಮೊಬಲಗನ್ನು ಪಾವತಿ ಮಾಡಲು ಬಾಧ್ಯವಾಗಿರುತ್ತದೆ. ತನಗೂ ಅವನಿಗೂ ಕರಾರಿನ ಸಂಬಂಧವಿಲ್ಲವೆಂದು ಅದು ವಾದಿಸಲಾರದು. ವಸೂಲಿದಾರ ಬ್ಯಾಂಕು ಕೂಡ ತನ್ನ ಗ್ರಾಹಕನ ಪರವಾಗಿ ಅಲ್ಲದೆ ಅನ್ಯನ ಪರವಾಗಿ ಚೆಕ್ಕಿನ ವಸೂಲಿ ಮಾಡಲಾಗದು.

ಚೆಕ್ಕಿನ ರೇಖಣ ಚೆಕ್ಕಿನ ಸಾರಭೂತ (ಮೆಟೀರಿಯಲ್) ಅಂಗ. ಒಂದು ಸಾರಿ ಅದನ್ನು ಹಾಕಿದ ಮೇಲೆ ಚೆಕ್ಕಿನ ಕರ್ತನ ವಿನಾ ಯಾರೂ ಅದನ್ನು ತೆಗೆಯುವಂತಿಲ್ಲ.

ಪಾವತಿದಾರ ಬ್ಯಾಂಕಿನ ಕರ್ತವ್ಯಗಳು

[ಬದಲಾಯಿಸಿ]

ಚೆಕ್ಕು ಹಾಜರಾದಾಗ ಪಾವತಿದಾರ ಬ್ಯಾಂಕು ಪರಿಗಣಿಸಬೇಕಾದ ಅಂಶಗಳಿವು; 1. ಚೆಕ್ಕು ಆ ಕಚೇರಿಯ ಮೇಲೇ ಬರೆದದ್ದಾಗಿರಬೇಕು. ಅದೇ ಬ್ಯಾಂಕಿನ ಇನ್ನೊಂದು ಕಚೇರಿಯ ಮೇಲೆ ಬರೆಯಲಾದ ಚೆಕ್ಕನ್ನು ಸಾಮಾನ್ಯವಾಗಿ ಆಧರಿಸಬಾರದು. 2. ಚೆಕ್ಕು ಕಾಲಾತೀತವಾದ್ದಾಗಲಿ, ಅನಾಗತ ದಿನಾಂಕದ್ದಾಗಲಿ ಆಗಿರಬಾರದು. 3. ಕಾನೂನಿನಲ್ಲಿ ವಿಧಿಸಿದಂತೆ ಚೆಕ್ಕನ್ನು ಬರೆದಿರಬೇಕು. 4. ಚೆಕ್ಕನ್ನು ಬ್ಯಾಂಕಿನ ವ್ಯವಹಾರದ ವೇಳೆಯಲ್ಲೇ ಹಾಜರುಪಡಿಸಿರಬೇಕು. 5. ಚೆಕ್ಕನ್ನು ಪಾವತಿ ಮಾಡಲು ಗ್ರಾಹಕನ ಲೆಕ್ಕದಲ್ಲಿ ಸಾಕಷ್ಟು ಸಿಲ್ಕು ಇರಬೇಕು. ಓವರ್‍ಡ್ರಾಫ್ಟ್ ಒಡಂಬಡಿಕೆಯಿದ್ದರೆ ಲಭ್ಯವಿರುವ ಓವರ್‍ಡ್ರಾಫ್ಟ್ ಪರಿಮಿತಿಯೊಳಗೆ ಚೆಕ್ಕಿನ ಮೊಬಲಗು ಇರಬೇಕು. 6. ಚೆಕ್ಕು ಮಾಲಿನ್ಯಗೊಂಡೋ ವಿಕೃತಗೊಂಡೋ ಹರಿದೋ ಇರಬಾರದು. ಅದರಿಂದ ಚೆಕ್ಕಿನ ರೇಖಣ ಸಂಖ್ಯೆ, ದಿನಾಂಕ ಮುಂತಾದ ಸಾರಭೂತ ಅಂಗ ನಷ್ಟವಾಗಿದ್ದಿರಬಹುದು. 7. ಚೆಕ್ಕು ರೇಖಿತವೇ, ತೆರೆದದ್ದೇ? ರೇಖಿತವಾಗಿದ್ದರೆ ಅದು ಸಾಮಾನ್ಯ ರೇಖಣವೇ ವಿಶೇಷ ರೇಖಣವೇ? ಎಂಬುದನ್ನು ಪರಿಶೀಲಿಸಿ ಅದಕ್ಕನುಗುಣವಾಗಿ ಪಾವತಿ ಮಾಡಬೇಕಾಗುತ್ತದೆ. 8. ಚೆಕ್ಕಿನ ಹಿಂಬರಹ (ಎಂಡಾರ್ಸ್‍ಮೆಂಟ್) ಕ್ರಮಬದ್ಧವಾಗಿರುವುದು ಅವಶ್ಯ. 9. ಚೆಕ್ಕುಕರ್ತನ ಸಹಿಯನ್ನು ಬ್ಯಾಂಕು ತನ್ನೊಡನಿರುವ, ಅವನ ಮಾದರಿ ಸಹಿಯೊಂದಿಗೆ ಹೋಲಿಸಿ, ಸಹಿ ಆತನದೇ ಎಂದು ಮನವರಿಕೆ ಮಾಡಿಕೊಳ್ಳುವುದು ಅವಶ್ಯ. 10. ಚೆಕ್ಕು ಹಾಜರುಪಡಿಸಿದ ಸಂದರ್ಭದಲ್ಲಿ ಸಂದೇಹಾಸ್ಪದವಾದ್ದೇನೂ ಇರಬಾರದು. ಬ್ಯಾಂಕಿನ ಕರ್ತವ್ಯದಲ್ಲಿ ಲೋಪವೇನಾದರೂ ಆಗಿದ್ದರೆ ಅದು ಮಾಡಿದ ಪಾವತಿ ಕ್ರಮಪ್ರಾಪ್ತವೆನಿಸದು. ಅಂಥ ಪಾವತಿಗಾಗಿ ಬ್ಯಾಂಕಿಗೆ ಪರಿನಿಯತ ರಕ್ಷಣೆ ದೊರಕುವುದಿಲ್ಲ.

ಚೆಕ್ಕಿನ ಪಾವತಿ ಮಾಡಕೂಡದೆಂದು ಆದರೆ ರಚಕನಿಂದ ಬ್ಯಾಂಕಿಗೆ ತಿಳಿವಳಿಕೆ ಬಂದಾಗ, ಗ್ರಾಹಕ ತೀರಿಕೊಂಡನೆಂಬ ಅಥವಾ ಮತಿವಿಕಲನಾದನೆಂಬ ಅಥವಾ ದಿವಾಳಿಯಾದನೆಂಬ ತಿಳಿವಳಿಕೆ ಬಂದಾಗ, ಗ್ರಾಹಕನ ಲೆಕ್ಕದಲ್ಲಿರುವ ಹಣವನ್ನು ಪಾವತಿ ಮಾಡಲಾಗದೆಂದು ನ್ಯಾಯಾಲಯದಿಂದ ಬ್ಯಾಂಕಿಗೆ ಆದೇಶ ಬಂದಾಗ, ಗ್ರಾಹಕ ತನ್ನ ಲೆಕ್ಕದ ಸಿಲ್ಕನ್ನು ಇನ್ನೊಬ್ಬನಿಗೆ ವಹಿಸಿಕೊಟ್ಟಿರುವ ಸಂಗತಿ ಬ್ಯಾಂಕಿಗೆ ಗೊತ್ತಾದಾಗ, ಠೇವಣಿ ಹಣ ಯಾವುದಾದರೂ ನ್ಯಾಸಕ್ಕೆ (ಟ್ರಸ್ಟ್) ಸಂಬಂಧಿಸಿದ್ದಾಗಿದ್ದು, ಗ್ರಾಹಕ ಅದನ್ನು ನ್ಯಾಸೋದ್ದೇಶಕ್ಕೆ ವ್ಯತಿರಿಕ್ತವಾಗಿ ಬಳಸಲಿದ್ದಾನೆಂಬುದು ಬ್ಯಾಂಕಿಗೆ ಗೊತ್ತಾದಾಗ ಬ್ಯಾಂಕು ಚೆಕ್ಕನ್ನು ಆಧರಿಸತಕ್ಕದಲ್ಲ.

ಬ್ಯಾಂಕು ಚೆಕ್ಕನ್ನು ಅನಾದರಿಸಿದಾಗ ಅದಕ್ಕೆ ಕಾರಣ ತಿಳಿಸುವ ಚೀಟಿಯೊಂದಿಗೆ ಅದನ್ನು ಹಿಂದಿರುಗಿಸುವುದು ರೂಢಿ. ಅನಾದರಣೆಗೆ ಕಾರಣ ಕೊಡುವಾಗ ಎಚ್ಚರಿಕೆ ವಹಿಸಬೇಕು. ಅದು ಸತ್ಯವಾಗಿಯೂ ಗ್ರಾಹಕನ ಮರ್ಯಾದೆಗೆ ಊನವಾಗದಂತೆಯೂ ಗ್ರಾಹಕನ ಲೆಕ್ಕದ ಸ್ಥಿತಿಯ ರಹಸ್ಯ ಭಂಗವಾಗದಂತೆಯೂ ಇರುವುದು ಅವಶ್ಯ. ಅನಾದರಣೆಗೆ ಸಾಮಾನ್ಯವಾದ ಕಾರಣಗಳನ್ನೆಲ್ಲ ಪಟ್ಟಿ ಮಾಡಿ ಅಚ್ಚಿಸಿದ ನಮೂನೆಯಲ್ಲಿ ಪ್ರಸಕ್ತ ಚೆಕ್ಕಿನ ಅನಾದರಣೆಗೆ ಸಂಬಂಧಿಸಿದ ಕಾರಣದ ಹಿಂದೆ ಗುರುತು ಮಾಡಿ ಚೆಕ್ಕಿಗೆ ಲಗತ್ತಿಸುವುದು ಪದ್ಧತಿ.

ವಸೂಲಿದಾರ ಬ್ಯಾಂಕು

[ಬದಲಾಯಿಸಿ]

ತನ್ನ ಗ್ರಾಹಕನಿಗೆ ಬಂದ ಚೆಕ್ಕನ್ನು ಅವನ ಪರವಾಗಿ ವಸೂಲಿ ಮಾಡುವ ಹೊಣೆಯನ್ನು ಬ್ಯಾಂಕು ಹೊರುವುದುಂಟು. ಅಂಥ ಚೆಕ್ಕಿನ ಮೊಬಲಗನ್ನು ವಸೂಲಿದಾರ ಬ್ಯಾಂಕು ಮುಂದಾಗಿಯೇ ಧಾರಕನಿಗೆ (ಹೋಲ್ಡರ್) ಪಾವತಿ ಮಾಡಿದ್ದರೆ ಆಗ ಅದು ಅವನಿಂದ ಚೆಕ್ಕನ್ನು ತನ್ನ ಹೆಸರಿನಲ್ಲಿ ಪಡೆದುಕೊಂಡಂತೆ. ಆಗ ಅದೇ ಚೆಕ್ಕಿನ ಧಾರಕ. ಚೆಕ್ಕಿನ ವಸೂಲಿಯಾದ ಮೇಲೆಯೇ ಗ್ರಾಹಕನ ಲೆಕ್ಕಕ್ಕೆ ಧನಿಸುವ ಷರತ್ತಿನ ಮೇಲೆ ಚೆಕ್ಕನ್ನು ಅದು ಪಡೆದುಕೊಂಡಿದ್ದರೆ ಅದು ಗ್ರಾಹಕನ ಅಭಿಕರ್ತೃವಾಗಿ (ಏಜೆಂಟ್) ವಸೂಲಿ ಮಾಡುತ್ತದೆ. ಅಭಿಕರ್ತೃವಾಗಿ ಅದು ತನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದರೆ ಅದಕ್ಕೆ ಪರಿನಿಯತ ರಕ್ಷಣೆಯುಂಟು. ವಸೂಲಿಗೆ ಮುಂಚೆಯೇ ಚೆಕ್ಕಿನ ಮೊಬಲಗನ್ನು ಧಾರಕನ ಲೆಕ್ಕಕ್ಕೆ ಧನಿಸಿದ್ದರೂ ಬ್ಯಾಂಕು ಅವನ ಅಭಿಕರ್ತೃವೆಂದೇ ಪರಿಗಣಿತವಾಗಿ ಪರಿನಿಯತ ರಕ್ಷಣೆ ಅದಕ್ಕೆ ದೊರಕುತ್ತದೆ.

ಪ್ರಯಾಣಿಕರ ಚೆಕ್ಕುಗಳು

[ಬದಲಾಯಿಸಿ]

ಊರಿಂದೂರಿಗೆ ಪ್ರಯಾಣ ಮಾಡುವವರ ಸೌಲಭ್ಯಕ್ಕಾಗಿ ಬ್ಯಾಂಕು ನೀಡುವ ಚೆಕ್ಕುಗಳು (ಟ್ರಾವೆಲರ್ಸ್ ಚೆಕ್ಸ್). ಭಿನ್ನರಾಶಿಗಳಲ್ಲಿ ನೀಡಲಾಗುವ ಈ ಚೆಕ್ಕುಗಳನ್ನು ಪಡೆಯುವ ಪ್ರಯಾಣಿಕರು ಪರಸ್ಥಳಗಳಲ್ಲಿ ಬ್ಯಾಂಕಿನ ಕಚೇರಿಗಳಲ್ಲಿ ಹಾಜರುಪಡಿಸಿ ಇವುಗಳಲ್ಲಿ ನಮೂದಿಸಲಾಗಿರುವ ಮೊಬಲಗುಗಳನ್ನು ಪಡೆಯಬಹುದು. ಅವರು ಇವುಗಳ ಮೇಲೆ ಎರಡು ಸಹಿ ಹಾಕಬೇಕು-ಇವನ್ನು ನೀಡುವ ಬ್ಯಾಂಕಿನ ಸಮ್ಮುಖದಲ್ಲಿ ಒಂದು, ಪಾವತಿ ಮಾಡುವಾಗ ಇನ್ನೊಂದು. ಇವೆರಡು ಸಹಿಗಳೂ ಒಬ್ಬನದೇ ಎಂಬುದು ಖಚಿತವಾದಾಗ ಬ್ಯಾಂಕು ಮೊಬಲಗನ್ನು ಪಾವತಿ ಮಾಡುತ್ತದೆ. ಪ್ರಯಾಣ ಮಾಡುವಾಗ ಹೆಚ್ಚು ನಗದನ್ನು ತೆಗೆದುಕೊಂಡು ಹೋಗುವ ತೊಂದರೆ ಈ ಚೆಕ್ಕುಗಳಿಂದ ತಪ್ಪುತ್ತದೆ.

ಚೆಕ್ಕುಗಳ ಅನುಕೂಲಗಳು

[ಬದಲಾಯಿಸಿ]

ಒಳನಾಡಿನ ವ್ಯವಹಾರಗಳಲ್ಲಿ ಚೆಕ್ಕು ಅತ್ಯಂತ ಉಪಯುಕ್ತ ಪಾವತಿ ಸಾಧನವಾಗಿದೆ. ಒಬ್ಬರು ಇನ್ನೊಬ್ಬರಿಗೆ ಹಣ ಕೊಡಬೇಕಾದಾಗ ಚೆಕ್ಕಿನ ರೂಪದಲ್ಲಿ ಪಾವತಿ ಮಾಡುವುದು ಅತ್ಯಂತ ಅನುಕೂಲಕರ. ಠೇವಣಿ ವಿಧಿಮಾನ್ಯವಲ್ಲವಾದರೂ ಎಲ್ಲ ಮುಂದುವರಿದ ದೇಶಗಳಲ್ಲೂ ಚೆಕ್ಕು ವಿಶೇಷವಾಗಿ ಮಾನ್ಯವಾಗಿರುತ್ತದೆ. ಇದಕ್ಕೆ ನಂಬಿಕೆಯೇ ಆಧಾರ. ಬ್ಯಾಂಕು ಠೇವಣಿಗಳ ಸುರಕ್ಷತೆಗೆ ಸರ್ಕಾರ ಸೂಕ್ತ ಏರ್ಪಾಡು ಮಾಡಿರುತ್ತದೆ. ಚೆಕ್ಕುಗಳನ್ನು ಹಣವಾಗಿ ಬಳಸುವುದರಿಂದ ಅನೇಕ ಅನುಕೂಲಗಳುಂಟು. ಕಳವಿನ ನಷ್ಟಸಂಭವ ಕಡಿಮೆ. ಪಾವತಿ, ಸ್ವೀಕೃತಿ ಅನುಕೂಲಕರ. ನಗದನ್ನು ಹೊರುವ ಅಗತ್ಯವಿಲ್ಲ. ಚಿಲ್ಲರೆ ಕೊಡುವ, ಪಡೆಯುವ ಕಷ್ಟವಿಲ್ಲ. ಅವುಗಳ ಸಾಗಣೆ ಸುಲಭ. ಲೆಕ್ಕ ಸರಳ, ಪ್ರತ್ಯೇಕ ರಸೀತಿ ಪಡೆಯದಿದ್ದರೂ ಪಾವತಿಗೆ ದಾಖಲುಂಟು. ಒಂದು ವೇಳೆ ಪಾವತಿ ಮಾಡಿದ್ದು ತಪ್ಪಾಯಿತೆನಿಸಿದರೆ, ಚೆಕ್ಕು ಪರಕ್ರಾಮ್ಯ ಸಂಲೇಖವಾದ್ದರಿಂದ ಅದಕ್ಕೆ ಚಲಾವಣೆ ನೀಡಬಹುದು. ಅದನ್ನು ಕೈಯಿಂದ ಕೈಗೆ ವರ್ಗಾಯಿಸಬಹುದು. ಆದರೆ ವಿಧಿಮಾನ್ಯ ಹಣದಂತೆ (ಲೀಗಲ್ ಟೆಂಡರ್‍ಮನಿ) ಇದಕ್ಕೆ ಸಾರ್ವತ್ರಿಕ ಸ್ವೀಕಾರಗುಣ (ಯೂನಿವರ್ಸಲ್ ಅಕ್ಸೆಪ್ಟಬಿಲಿಟಿ) ಇಲ್ಲದಿರುವುದೊಂದೇ ಮುಖ್ಯ ಕೊರತೆ.


ಉಲ್ಲೇಖಗಳು

[ಬದಲಾಯಿಸಿ]

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಚೆಕ್&oldid=1201840" ಇಂದ ಪಡೆಯಲ್ಪಟ್ಟಿದೆ