ವಿಷಯಕ್ಕೆ ಹೋಗು

ಸೀಸಪದ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೀಸ ಪದ್ಯ ಮೂಲತಃ ಶೀರ್ಷಕ ಎಂಬ ಪದದಿಂದ ಹುಟ್ಟಿಕೊಂಡಿದೆ. ಶೀರ್ಷಕ ಹೆಸರಿನ ಪ್ರಾಕೃತ ಭಾಷೆಯ ಮಾತ್ರಾವೃತ್ತವೊಂದು ನಾಟ್ಯಶಾಸ್ತ್ರ, ಜಾನಾಶ್ರಯೀ, ವೃತ್ತಜಾತಿಸಮುಚ್ಚಯ
ಸ್ವಯಂಭುಚ್ಛಂದಸ್ಸು ,ಹೇಮಚಂದ್ರಕೃತ ಛಂದೋನುಶಾಸನ ಇವುಗಳಲ್ಲಿ ಲಕ್ಷಣಿಸಲ್ಪಟ್ಟಿದೆ.
ಜಾನಾಶ್ರಯಿಯಲ್ಲಿ ೮ ವಿಧದ ಶೀರ್ಷಕದ ಭೇಧಗಳು ಹೇಳಲ್ಪಟ್ಟಿವೆ. ಇವುಗಳಲ್ಲಿ ಅಧಿಕಾಕ್ಷರಾ ಶೀರ್ಷಕ ಮಾತ್ರ ಮುಂದಿನಕಾಲಕ್ಕೂ ಉಳಿದು ಬಂದಂತೆ ತೋರುತ್ತದೆ.
೧.
ವೃತ್ತಜಾತಿ ಸಮುಚ್ಚಯದಲ್ಲಿ ಹೇಳಿದಂತೆ-
ಪಾದವೊಂದರಲ್ಲಿ ೫ ಚತುರ್ಮಾತ್ರಾ ಗಣಗಳು+ಒಂದು ಪಂಚಮಾತ್ರಾಗಣ ಹೀಗೆ ನಾಲ್ಕು ಪಾದಗಳು ಬರುತ್ತವೆ. ಇದು ಅಧಿಕಾಕ್ಷರಾ ವೃತ್ತ ಎಂದು ಕರೆಯಲ್ಪಡುತ್ತದೆ
ಮತ್ತು ಪಾದಕ್ಕೆ ೩೨ ಮಾತ್ರೆಗಳು ಹಾಗೂ ೧೩ರಲ್ಲಿ ಯತಿ. ಹೀಗೆ ೨ ಪಾದಗಳಿಂದ ಗೀತಿಕಾ ವೃತ್ತವಾಗುತ್ತದೆ.
ಇವೆರಡೂ ಸೇರಿ ಅಧಿಕಾಕ್ಷರಾ ಶೀರ್ಷಕ ಆಗುತ್ತದೆ.
೨.
ತೆಲುಗಿನಲ್ಲಿ ಹಾಗೂ ಕನ್ನಡದಲ್ಲಿ ಪ್ರಸಿದ್ಧವಾದ ಬಗೆ- ಪ್ರಾಕೃತಮೂಲದ ಮಾತ್ರಾರಚನೆ ತೆಲುಗಿಗೆ ಬರುವಾಗ ಅಂಶರಚನೆಯಾಗಿ ಬಳಕೆಯಾಯಿತು. ಶೀರ್ಷಕ ಎಂಬ ಪದ ತದ್ಭವ ರೂಪ ಹೊಂದಿ ಸೀಸವಾಯಿತು.
ಸುಮಾರು ೧೬-೧೭ನೇ ಶತಮಾನದಲ್ಲಿ ಕನ್ನಡಕ್ಕೆ ತೆಲುಗು ಸಾಹಿತ್ಯ ಪ್ರಭಾವದಿಂದ ಸೀಸಪದ್ಯಗಳು ಬಂದವು.
ಸುಮಾರು ೯-೧೦ನೇ ಶತಮಾನದಲ್ಲಿ "ಧರ್ಮವರಂ"ನ ಶಾಸನದಲ್ಲಿ ಸೀಸಪದ್ಯಪ್ರಯೋಗ ಕಾಣುತ್ತದೆ. ಮೊದಲ ಸೀಸದ ಜೊತೆ ತೇಟಗೀತಿಯನ್ನೂ ಎರಡನೇ ಸೀಸದಜೊತೆ
ಆಟವೆಲದಿಯನ್ನೂ ಜೊತೆಗೂಡಿಸಿದೆ. ನನ್ನಯ್ಯಕೃತ ಆಂಧ್ರ ಮಹಾಭಾರತದಲ್ಲಿ ೨೫೧ಸೀಸಪದ್ಯಗಳಿವೆ ಎಂದು ವಿದ್ವಾಂಸರು ಗಣಿಸಿದ್ದಾರೆ. ಇವನು ಯತಿಪ್ರಾಸಾದಿ ನಿಯಮಗಳ
ಜೊತೆಗೆ ಆಟವೆಲದಿಗಳನ್ನೇ ಬಳಸಿದ್ದು ಕಂಡುಬರುತ್ತದೆ. ಶ್ರೀನಾಥನೆಂಬ ಕವಿ ಸೀಸಪದ್ಯದಲ್ಲಿ ತೇಟಗೀತಿಯನ್ನು ಬಳಸಿದ್ದಾನೆ.
ಇದರಲ್ಲಿ ಪ್ರತಿಪಾದಕ್ಕೆ ೬ ಇಂದ್ರ(ವಿಷ್ಣು)ಗಣಗಳು ಮತ್ತು ೨ ಸೂರ್ಯ(ಬ್ರಹ್ಮ)ಗಣಗಳು ಬರುವಂತೆ ೪ ಪಾದಗಳು ಇರುತ್ತವೆ ಇದು ಸೀಸ ಭಾಗ
ನಂತರ ಒಂದು ಗೀತಿ (ಆಟವೆಲದಿ ಅಥವಾ ತೇಟಗೀತಿ) ಬರುತ್ತದೆ
ಆಟವೆಲದಿಯ ಲಕ್ಷಣ-
೧ ಮತ್ತು ೩ನೇ ಪಾದಗಳಲ್ಲಿ ೩ ಸೂರ್ಯ(ಬ್ರಹ್ಮ)ಗಣ ಹಾಗೂ ೨ ಇಂದ್ರ(ವಿಷ್ಣು) ಗಣಗಳು ಹಾಗೂ ೨ಮತ್ತು ೪ನೇ ಸಾಲುಗಳಲ್ಲಿ ೫ ಸೂರ್ಯ(ಬ್ರಹ್ಮ)ಗಣಗಳು
ತೇಟಗೀತಿಯ ಲಕ್ಷಣ-
ತೇಟಗೀತಿಗೆ ಪ್ರತಿಪಾದದಲ್ಲಿಯೂ ೧ ಸೂರ್ಯ(ಬ್ರಹ್ಮ)+೨ ಇಂದ್ರ(ವಿಷ್ಣು)+೨ಸೂರ್ಯ(ಬ್ರಹ್ಮ)ಗಣಗಳು ಬರಬೇಕು.
ಲಕ್ಷಣಪದ್ಯಗಳು
ಸೂರ್ಯನೊರ್ವ ಮೇಲೆ ಸುರರಾಜರಿರ್ವರು | ದಿನಕರದ್ವಯಮಿರಲ್ ತೇಟಗೀತಿ |
ಇನಗಣತ್ರಯಗಳು ಇಂದ್ರದ್ವಯಂಗಳು | ಹಂಸಪಂಚಕಂಗಳಾಟವೆಲದಿ ||'

"ಛಂದೋಂಬುಧಿ"ಯಲ್ಲಿ ದೊರೆಯುವ ಸೀಸದ ಲಕ್ಷಣಪದ್ಯ ಹೀಗಿದೆ
ಪುರುಹೂತಗಣಗಳಾರುಂ | ಸರಸಿಜಸಖಗಣಗಳೆರಡು ಸಂಧಿಸಿ ಬರ್ಕುಂ |
ಚರಣಕ್ಕೆ ಸೀಸದಂತದೊ |ಳೊರೆ ಗೀತೆಯ ಸರಳಮಪ್ಪೊಲೋದುವ ತೆರದಿಂ ||

ಕವಿಜಿಹ್ವಾಬಂಧನದಲ್ಲಿನ ಉದಾಹರಣೆ-
ತಿಂಗಳ ತಲೆಗಿಟ್ಟಂ ಕಂಗಳ ಮೂರಾಂತಂ ಭೃಂಗಿನಾಟ್ಯಪ್ರಿಯ ಭೀತಿನಾಶ
ಮಂಗಳೆಯರ ಮೆಯ್ಯ ಮದನವಿಧ್ವಂಸನ ಲಿಂಗನಿರ್ಮಲರೂಪ ಲೀ(ಲಾ) ವಿಭವ|
ಸಂಗೀತರಸಲೋಲ ಸಾಹಿತ್ಯದಾನಂದ ಪೊಂಗುವರ್ಕನಂತೆ ಪುದಿದ ಕಿರಣ
ತುಂಗಲೋಲವಿಭವ ತೋರುವ ಜಗದ್ರೂಪ ಭೃಂಗವಿಭ್ರಮಕಂಠ ಭೋ(ಗಾ)ಭರಣ||

ವಿಗತದುಷ್ಕೃತಾಂಗ ವಿಮಲಸ್ಥಿರಚಿತ್ತ | ಗಗನರಮ್ಯ ಸುಕೇಶನಗಜಾಪ್ರಿಯ|
ಮೃಗಧರಕರ ಮುನಿಸುರಾಸುರವಂದ್ಯ | ಜಗನುತ ಕೈವಲ್ಯ ಸತತದಾತ ||

೩.
ಆಧುನಿಕ ಕನ್ನಡ ಕವಿಗಳ ಪ್ರಯೋಗಗಳು-
ಆಧುನಿಕ ಕನ್ನಡಕವಿಗಳಾದ ಡಿ.ವಿ.ಜಿ.ಯವರ ನಿವೇದನ ಕುಸುಮಾಂಜಲಿಗಳಲ್ಲಿ ದ.ರಾ.ಬೇಂದ್ರೆಯವರ ಉಯ್ಯಾಲೆಯಲ್ಲಿ ಕೆಲವು ಪದ್ಯಗಳಿವೆ
ಈ ಸೀಸಗಳಲ್ಲಿ ಪ್ರತಿ ಸಾಲಿಗೆ ೬ ಪಂಚಮಾತ್ರಾಗಣಗಳು + ೨ ತ್ರಿಮಾತ್ರಾಗಣಗಳು ಬರುವುದು ಸಾಮಾನ್ಯನಿಯಮ. ಪಾದಾಂತ್ಯದ ತ್ರಿಮಾತ್ರಾಗಣದ ಬದಲು
ಅಂತ್ಯಗುರುವಿರುವ ಚತುರ್ಮಾತ್ರಾಗಣವನ್ನೂ ಬಳಸಿದ್ದಾರೆ. ಅಲ್ಲದೇ ತ್ರಿಮಾತ್ರಾಘನವಿದ್ದಾಗಲೂ ಉಚ್ಛಾರಣೆ ಚತುರ್ಮಾತ್ರಾಗಣದ್ದೇ ಆಗುವ ಕಾರಣ ಅದನ್ನು
ಪಂಚಮಾತ್ರಾಗಣಗಳಸಾಲಿಗೇ ಸೇರಿಸಿ ಒಟ್ಟೂ ೭ಪಂಚಮಾತ್ರಾಗಣ+೧ ಗುರು ಎಂದು ಹೇಳಬಹುದು.
ನಾಲ್ಕುಗಣಗಳ ಬಳಿಕ ಯಿಪ್ರಯೋಗವೂ ಮಾಡಲ್ಪಟ್ಟಿದೆ. ಅಂತ್ಯಪ್ರಾಸಪ್ರಯೋಗವೂ ಮಾಡಲ್ಪಟ್ಟಿದೆ.
ಇನ್ನುಳಿದ ಗೀತಭಾಗದಲ್ಲಿ ಆಟವೆಲದಿಯಾಗಲೀ ತೇಟಗೀತಿಯಾಗಲೀ ಬರದೇ ೩ ಪಂಚಮಾತ್ರಾಗಣ+೨ ತ್ರಿಮಾತ್ರಾಗಣ ಅಥವಾ ೪ ಪಂಚಮಾತ್ರಾಗಣ+ಗುರು
ಇದು ಸಾಮಾನ್ಯ ವಿನ್ಯಾಸ
ಡಿವಿಜಿಯವರ 'ಶ್ರೀ ರಾಮಪರೀಕ್ಷಣಂ' 'ಅಂತಃಪುರಗೀತೆಗಳು' 'ಶೃಂಗಾರ ಮಂಗಳಂ' ಮೊದಲಾದ ಕೃತಿಗಳಲ್ಲಿ ವಿಫುಲವಾಗಿ ಸೀಸ ಪದ್ಯಗಳು ಸಿಗುತ್ತವೆ
ಅವುಗಳವಿನ್ಯಾಸ ಗಮನಿಸಲು ಆರಂಭದ ಪಾದಗಳು-
ಸೀ| ಶೃಂಗಾರ ವಲ್ಲರಿಯೆ ಲತೆಯೊಡನೆ ಬಳುಕಿನೀಂ ನೃತ್ಯಲಾಸ್ಯದಿನಾರನೊಲಿಸುತಿರುವೆ|..............
ಗೀ| ಶಿಲ್ಪಿವರಕುವರಿಯರೆ ಸೌಂದರ್ಯಮುದ್ರಿಕೆಯರೆ ...............
ಬೇಂದ್ರೆಯವರ ಪದ್ಯಗಳಲ್ಲಿ ಗೀತಭಾಗದಲ್ಲಿ ೩ ಪಂಚಮಾತ್ರಾಗಣ+ಒಂದು ಗುರು ಅಥವಾ ೩ಪಂಚಮಾತ್ರಾಗಣ+ಒಂದು ತ್ರಿಮಾತ್ರಾಗಣ ಹೀಗೆ ವಿನ್ಯಾಸವಿದೆ.
ಉದಾ.೧-
ಸೀ|ಅಲ್ಲೋಲಕಲ್ಲೋಲವಾದ ಸಾಗರದಲ್ಲು ನಾನು ಸಾಗರಬಿದ್ದು ಸಾಗಬಲ್ಲೆ|...................
ಗೀ|ಎಲೆಜೀವ ನರಜನ್ಮವೊಂದೆಯಲ್ಲ|...................
ಉದಾ.೨.-
ಸೀ| ಕಣ್ಣ ಕಾಣ್ಕೆಯ ಮೀರಿ ಕಣ್ಣ ಕಟ್ಟಿಹರೂಹೆ ಬಣ್ಣನೆಯ ಬಣ್ಣಕೂ ಸಿಗದೆ ನೀನು|.............................
ಗೀ|ನವಿರ ನವಿಲಿಲ್ಲಿ ನಿಮಿನಿಮಿರಿ ಕುಣಿಯುತಿದೆ|..........

ಸೀಸಪದ್ಯಗಳಲ್ಲಿ ಪುರಾತನ ಕಾವ್ಯಗಳಲ್ಲಿ ಇನ್ನೂ ಅನೇಕ ತರಹದ ರಚನೆಗಳು ಬಳಸಲ್ಪಟ್ಟಿವೆ. ಕನ್ನಡದಲ್ಲಿ ಚನ್ನಪ್ಪಕವಿಕೃತ ಶರಣಲೀಲಾಮೃತವೆಂಬ ಯಕ್ಷಗಾನ ಕೃತಿಯಲ್ಲಿ
ಮೊದಲ ಸೀಸಪದ್ಯ ಪ್ರಯೋಗವಾಗಿದೆ (ಸು ೧೭೫೦)ಎಂದು ಕಿಟ್ಟೆಲ್ ರವರು ಗುರುತಿಸಿದ್ದಾರೆ. ಅದೂ ಸಾಮಾನ್ಯಲಕ್ಷಣಕ್ಕೆ ಪೂರ್ತಿ ಹೊಂದುವುದಿಲ್ಲ ಎಂದೂ ತಿಳಿಸಿದ್ದಾರೆ.
ಕಾಲನಿರ್ಣಯ ಸಾಧ್ಯವಾಗದ ಸಂಪ್ರದಾಯದ ಹಾಡು ಜಾನಪದ ಹಾಡುಗಲಲ್ಲಿ ಸೀಸಪದ್ಯದ ಬಳಕೆಯಾಗಿರುವುದೂ ಕಾಣುತ್ತದೆ.
ತಮ್ಮಣ್ಣ ಕವಿಶ್ರೀಕೃಷ್ಣ ಪಾರಿಜಾತ ಎಂಬ ಸಣ್ಣಾಟದಲ್ಲಿಯೂ ಸಾಕಷ್ಟು ಸಂಖ್ಯೆಯ ಸೀಸ ಪದ್ಯಗಳು ಸಿಗುತ್ತವೆ.
(ಆಧಾರ-ಕನ್ನಡ ಛಂದಃ ಸ್ವರೂಪ-ಡಾ|| ಟಿ.ವಿ.ವೆಂಕಟಾಚಲಶಾಸ್ತ್ರಿ)

"https://kn.wikipedia.org/w/index.php?title=ಸೀಸಪದ್ಯ&oldid=913622" ಇಂದ ಪಡೆಯಲ್ಪಟ್ಟಿದೆ