ಗೀತಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಚ್ಚಕನ್ನಡ ಛಂದಸ್ಸಿನ ಒಂದು ಮಟ್ಟು. ನಾಗವರ್ಮನ (ಸು. 990) ಛಂದೋಂಬುಧಿಯ ಪಂಚಮಾಧಿಕಾರದಲ್ಲಿಯೂ (ಪ. 18) ಜಯಕೀರ್ತಿಯ (ಸು. 1050) ಸಂಸ್ಕೃತ ಛಂದೋನುಶಾಸನದ ಸಪ್ತಮಾಧಿಕಾರದಲ್ಲಿಯೂ (ಪ. 20) ಇದರ ಲಕ್ಷಣವನ್ನು ಕುರಿತಿದೆ. ಸಾಮಾನ್ಯವಾಗಿ ವಿದ್ವಾಂಸರಿಂದ ಅಂಗೀಕೃತವಾಗಿರುವ ಪದ್ಯಪಾಠದ ಪ್ರಕಾರ, ಛಂದೋಬುಧಿಯಲ್ಲಿ ಉಕ್ತವಾಗಿರುವ ಗೀತಿಕೆಯ ಲಕ್ಷಣ ಹೀಗಿದೆ: ನಾಲ್ಕು ಪಾದಗಳು; ಎರಡೆರಡು ಪಾದಗಳಿಗೆ ಒಂದು ಅರ್ಧ; ಪ್ರತಿಯರ್ಧದಲ್ಲಿಯೂ 2ನೆಯ ಮತ್ತು 6ನೆಯ ಗಣಗಳು ಬ್ರಹ್ಮಗಣಗಳಾಗಿಯೂ ಉಳಿದವು ಕವಿಯ ಇಷ್ಟಪ್ರಕಾರವಾಗಿಯೂ (ಎಂದರೆ ಬ್ರಹ್ಮ ಇಲ್ಲವೆ ವಿಷ್ಣು ಇಲ್ಲವೆ ರುದ್ರ ಯಾವುದಾದರೂ ಗಣಗಳಾಗಿರುವಂತೆಯೂ) ಇರುತ್ತವೆ. ಜಯಕೀರ್ತಿಯ ಛಂದೋನುಶಾಸನದಲ್ಲಿ ಈ ರೀತಿಯಾಗಿದೆ : ನಾಲ್ಕು ಪಾದಗಳು; ಎರಡೆರಡು ಪಾದಗಳಿಗೆ ಒಂದು ಅರ್ಧ ಪ್ರತಿಯರ್ಧದಲ್ಲಿಯೂ 2ನೆಯ ಮತ್ತು 6ನೆಯ ಗಣಗಳು ರತಿಗಣಗಳಾಗಿಯೂ ಉಳಿದ 5 ಗಣಗಳು ಮದನಗಣಗಳೋ ಶರಗಣಗಳೋ ಆಗಿರುತ್ತವೆ; ಸಮಪಾದಗಳಲ್ಲಿ 4 ಗಣಗಳೂ ವಿಷಮಪಾದಗಳಲ್ಲಿ 3 ಗಣಗಳೂ ಇರುತ್ತವೆ.


ಮೇಲಿನ ಎರಡು ಗ್ರಂಥಗಳಲ್ಲಿಯೂ ಗೀತಿಕೆಯ ಲಕ್ಷಣದ ಮುಖ್ಯಾಂಶ ಒಂದೇ ಆಗಿದೆ ಎನ್ನುವುದು ಲಕ್ಷಣ ಮತ್ತು ಲಕ್ಷ್ಯ ಏಕೀಭವಿಸಿರುವ ಆಯಾ ಗೀತಿಕೆಯ ಪದ್ಯವನ್ನು ಪರಸ್ಪರವಾಗಿ ಹೋಲಿಸಿದಾಗ ತಿಳಿಯುತ್ತದೆ. ಜಯಕೀರ್ತಿ ನಾಗವರ್ಮ ನಿಗಿಂತ ಸ್ಪಷ್ಟವಾಗಿ ಕೆಲವು ವಿವರಗಳನ್ನು ಕೊಟ್ಟಿದ್ದಾನೆ. ಪಾದಪಾದಕ್ಕೆ ಎಷ್ಟುಗಣಗಳಿರ ಬೇಕೆಂಬ ಸೂಚನೆ ಜಯಕೀರ್ತಿಯದು; 2ಮತ್ತು 6ನೆಯ ಸ್ಥಾನಗಳನ್ನು ಬಿಟ್ಟು ಉಳಿದವು ವಿಷ್ಣವೋ ರುದ್ರವೋ ಆಗಿರುತ್ತವೆ ಎಂಬ ಸೂಚನೆಯೂ ಆತನದೇ. ‘ಉೞುದವು ಮಚ್ಚುವ ತೆಱದಿಂ’ ಎಂಬ ನಾಗವರ್ಮನ ಮಾತಿನಲ್ಲಿ ವಿಷ್ಣು ರುದ್ರಗಳ ಜೊತೆಗೆ ಬ್ರಹ್ಮವೂ ಬರಬಹುದು- ಎಂಬ ತಿಳಿವಳಿಕೆಗೆ ಅವಕಾಶವಿದೆ. ಆದರೆ ಆತನ ಲಕ್ಷಣ-ಲಕ್ಷ್ಯ ಸಮೀಕೃತವಾದ ಗೀತಿಕೆಯ ಪದ್ಯವನ್ನು ಪ್ರಸ್ತಾರಿಸಿದರೆ ಅಲ್ಲಿ ವಿಷ್ಣು ರುದ್ರಗಳೇ ಕಂಡುಬರುವುದರಿಂದ ಜಯಕೀರ್ತಿಯ ಆಶಯವೇ ಸರಿಯಿರಬಹುದು ಎಂದೆನಿಸುತ್ತದೆ. ಈತನಿಗಾದರೂ ಲಕ್ಷಣನಿರ್ವಚನಕ್ಕೆ ನಾಗವರ್ಮನ ಪದ್ಯವೇ ಮಾದರಿಯಾಗಿದ್ದರ ಬಹುದು. ಹಾಗಾದರೆ ನಾಗವರ್ಮ ‘ಉಱುದವು ಮಚ್ಚುವ ತೆಱದಿಂ’ ಎಂದು ಹೇಳಿದ್ದೇಕೆ? ಗೀತಿಕೆಯ ಆ ಉಳಿದೈದು ಗಣಗಳಲ್ಲಿ ವಿಷ್ಣು ಅಥವಾ ರುದ್ರ ಬರುವುದೇ ಸಾಮಾನ್ಯವಾಗಿದ್ದರೂ ಆಗಾಗ ಬ್ರಹ್ಮವೂ ಬರುವ ಸಾಧ್ಯತೆಯನ್ನು ಲಕ್ಷ್ಯಪದ್ಯಗಳಿಂದ ಮನಗಂಡು ಹಾಗೆ ಹೇಳಿರಬಹುದು; ಮಾದರಿಯನ್ನು ಮಾತ್ರ ವಿಷ್ಣುರುದ್ರರು ಬರುವಂತೆಯೇ ಕಟ್ಟಿರಬಹುದು. ಈಗ ನಮಗೆ ದೊರೆಯುತ್ತಿರುವ ನಿದರ್ಶನಗಳು, ಹಾಗೆ ವಿಷ್ಣುರುದ್ರಗಳು ಬರುವ ಹಾಗೆಯೇ ಬ್ರಹ್ಮ ಬರುವುದನ್ನೂ ತೋರಿಸುತ್ತವೆ. ಇಷ್ಟು ಮಾತ್ರವಲ್ಲದೆ ಅಂಶವೃತ್ತಗಳಿಗೆ ಸಹಜವಾದ ಪ್ರವೃತ್ತಿಯಂತೆ 2 ಮತ್ತು 6ನೆಯ ಬ್ರಹ್ಮಗಣಸ್ಥಾನದಲ್ಲಿಯೂ ಅಪುರ್ವವಾಗಿ ವಿಷ್ಣವೂ ರುದ್ರವೂ ಬರುವುದಾದರೆ, ಅದರಲ್ಲಿ ಆಶ್ಚರ್ಯವೇನಿಲ್ಲ. ಗೀತಿಕೆಯ ಉಪಲಬ್ದ ನಿದರ್ಶನಗಳನ್ನು ಪ್ರಸ್ತಾರಿಸುವಾಗ, ಕೆಲವೊಮ್ಮೆ ಈ ಪ್ರವೃತ್ತಿ ಕಾಣುವ ಹಾಗೆ ತೋರುತ್ತದೆ.


ಮುಖ್ಯವಾಗಿ ಕವಿರಾಜಮಾರ್ಗದ ಗೀತಿಕೆಯ ಪದ್ಯಗಳಲ್ಲಿ ಕೆಲವು ಕಡೆ ನಿರ್ದಿಷ್ಟಗಣ ಸಂಖ್ಯೆಯ ಅಗತ್ಯಕ್ಕಿಂತ ಹೆಚ್ಚಾಗಿ ಕೆಲವು ಅಕ್ಷರಗಳು ಉಳಿದುಬಿಡುತ್ತಿರುವುದು ಗೀತಿಕೆಯನ್ನು ಒಂದು ಸಮಸ್ಯಾತ್ಮಕ ಛಂದೋಬಂಧವನ್ನಾಗಿ ಮಾಡಿದೆ. ಒಂದೆರಡೇ ಅಕ್ಷರಗಳು ಉಳಿಯುವಂತಿದ್ದರೆ ಅದೊಂದು ಬಗೆಯಾಗಿ ಸಮಾಧಾನವನ್ನು ಹೇಳಬಹುದು; ಗೀತಿಕೆಯ ವೈಲಕ್ಷಣ್ಯದಲ್ಲಿ ಅದನ್ನು ಸೇರಿಸಬಹುದು. ಆದರೆ ಒಮ್ಮೊಮ್ಮೆ ದೀರ್ಘತರ ಪಾದಗಳ ಪದ್ಯಗಳು ಕೂಡ ಎದುರಾಗಿ ಇವೇನು ದಿಟವಾಗಿ ಗೀತಿಕೆಗಳೇ ಎಂಬ ಸಂಶಯವನ್ನೂ ಉಂಟುಮಾಡುತ್ತವೆ. 2 ಮತ್ತು 6ರ ಬ್ರಹ್ಮಗಣಗಳಿಗೆ ಅಪೂರ್ವವಾಗಿ ವಿಷ್ಣು (ಇಲ್ಲವೆ ರುದ್ರ) ಬರಬಹುದು ಎಂಬ ಗ್ರಹಿಕೆಯಿಂದ ಮುನ್ನಡೆದರೆ ತೊಡಕು ಕೆಲಮಟ್ಟಿಗೆ ಬಗೆಹರಿಯುತ್ತದೆಂದು ಹೇಳಬಹುದು; ಆದರೆ ಸಮಸ್ಯೆಯ ಪರಿಹಾರ ಈಗಿನ ಮಟ್ಟಿಗೆ ಪೂರ್ತಿಯಾಗಿ ಸಾಧ್ಯವಿಲ್ಲ.


ಇದನ್ನು ಗಮನಿಸಿ ಗೀತಿಕೆಯ ಲಕ್ಷಣವನ್ನು ತಾತ್ಕಾಲಿಕವಾಗಿ ಹೀಗೆ ಹೇಳಬಹುದು: ನಾಲ್ಕು ಪಾದಗಳು; ಎರಡೆರಡು ಪಾದಗಳಿಗೆ ಒಂದು ಅರ್ಧ; ಪ್ರತಿಯರ್ಧದಲ್ಲಿಯೂ 7ರಂತೆ ಗಣಗಳಿರುತ್ತವೆ. ಅವುಗಳ ಮೊದಲನೆಯ ಪಾದದಲ್ಲಿ 3 ಗಣಗಳೂ ಎರಡನೆಯ ಪಾದದಲ್ಲಿ 4 ಗಣಗಳೂ ಇರುತ್ತವೆ. (ಅಥವಾ ಒಟ್ಟು ಪದ್ಯದಲ್ಲಿ 1 ಮತ್ತು 3ನೆಯ ಪಾದಗಳಲ್ಲಿ 3 ಗಣಗಳು 2 ಮತ್ತು 4ನೆಯ ಪಾದಗಳಲ್ಲಿ 4 ಗಣಗಳೂ ಇರುತ್ತವೆ.) ಪ್ರತಿಯರ್ಧದ 2 ಮತ್ತು 6ನೆಯ ಗಣಗಳು ಬ್ರಹ್ಮ ಗಣಗಳು; ಉಳಿದ 5 ಗಣಗಳು ಬ್ರಹ್ಮ ಅಥವಾ ವಿಷ್ಣು ಅಥವಾ ರುದ್ರ ಆಗಿರುತ್ತವೆ. (ಅಪುರ್ವವಾಗಿ 2 ಮತ್ತು 6ನೆಯ ಬ್ರಹ್ಮಗಣ ಸ್ಥಾನದಲ್ಲಿ ಲಯಕ್ಕೆ ಹೊಂದಿ ವಿಷ್ಣು ಇಲ್ಲವೆ ರುದ್ರ ಬರಬಹುದು.)


ಲಕ್ಷಣಾನ್ವಿತವಾದ ಗೀತಿಕೆಯ ಎರಡು ಪದ್ಯಗಳು :


ಕಾವ್ಯಾವಲೋಕನದಿಂದ :

ಇಂತಿರೆ, ಶಬ್ದಂ. ಸಂದೇಹ

ಧ್ವಾಂತೌಘಂ. ಪಿಂಗಿರೆ. ಜಲಕ. ನಾಗೆ ಬುಧಂ

ಸಂತತಿಗ. ಪ್ಪಂತು. ಪೇೞ್ದನಿದಂ

ಶಾಂತಮ. ನಂ ಕವಿ. ತಾಗು. ಣೋದಯಂ (ಪದ್ಯ 422)

ಕವಿರಾಜಮಾರ್ಗದಿಂದ :

ಪ್ರತಿಪದಾರ್ಥ. ತತ್ತ್ವ. ಭೇದದೊಳ್

ಪ್ರತಿಷೇಧಮಂ, ನೆಗೞ್ಗು. ಮನಿತೆ. ಮಾೞ್ಕೆಯಿಂ

ದತಿಶಯಾ. ಕ್ಷೇಪ. ಗಣನಾವ್ಯತಿ

ಗತಿ ನೃಪ.ತುಂಗ ದೇವ. ಮಾರ್ಗದೊಳ್ || (ಪ. 3-107)


2 ಮತ್ತು 6ನೆಯ ಸ್ಥಾನಗಳಲ್ಲಿ ಪರ್ಯಾಯ ಗಣ ಬರಬಹುದೆಂಬುದಕ್ಕೆ ಒಂದು ನಿದರ್ಶನ :

ಇಂತು. ಮಿಕ್ಕ. ವರ್ಣನೆಗಳ್

ಸಂತತ. ಮೊಂದಾಗಿ. ಪೇೞ್ದ ಕಾವ್ಯಂ ಧರೆಯೊಳ್

ಸಂತತಿ ಕೆಡದೆ. ನಿಲ್ಕುಮಾಕ.

ಲ್ಪಾತಂ. ಬರ. ಮಮೋಘ. ವರ್ಷಯ. ಶಂಬೋಲ್ (ಪ. 3-217)

"https://kn.wikipedia.org/w/index.php?title=ಗೀತಿಕೆ&oldid=634346" ಇಂದ ಪಡೆಯಲ್ಪಟ್ಟಿದೆ