ಸಾರ್ವತ್ರಿಕ ಪರೀಕ್ಷಾ ಯಂತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
೨ ಅಕ್ಷದ ಸಾರ್ವತ್ರಿಕ ಪರೀಕ್ಷಾ ಯಂತ್ರ
೫೦ KN ಸಾಮರ್ಥ್ಯದ ಸಾರ್ವತ್ರಿಕ ಪರೀಕ್ಷಾ ಯಂತ್ರ
ಮೂರು ಬಿಂದುಗಳ ಬಾಗು ಬಿಗಿತ ಪರೀಕ್ಷಾ ಜೋಡಿಕೆ

ಸಾರ್ವತ್ರಿಕ ಪರೀಕ್ಷಾ ಯಂತ್ರವನ್ನು(UTM)[೧] ಸಾರ್ವತ್ರಿಕ ಪರೀಕ್ಷಕ, ಭೌತಿಕ ಪರೀಕ್ಷಾ ಯಂತ್ರ ಅಥವಾ ಭೌತಿಕ ಪರೀಕ್ಷಾ ಚೌಕಟ್ಟು ಎನ್ನುತ್ತಾರೆ. ಇದನ್ನು ವಸ್ತುಗಳ ವಿಕಸನ ಶಕ್ತಿ ಹಾಗೂ ಸಂಕೋಚನ ಶಕ್ತಿಯನ್ನು ಪರೀಕ್ಷಿಸಲು ಬಳಸುತ್ತಾರೆ. ವಾಸ್ತವವಾಗಿ ಇದರಿಂದ ಯಾವುದೇ ವಸ್ತುಗಳ ಅಥವಾ ಅವುಗಳ ಭಾಗಗಳ ಅಥವಾ ರಚನೆಗಳ ಮೇಲೆ ಅನೇಕ ಪ್ರಮಾಣಿತ ವಿಕಸನ ಮತ್ತು ಸಂಕೋಚನ ಪರೀಕ್ಷೆಗಳನ್ನು ಮಾಡಬಹುದಾದುರಿಂದ ಈ ಯಂತ್ರಕ್ಕೆ ಸಾರ್ವತ್ರಿಕ ಪರೀಕ್ಷಾ ಯಂತ್ರ ಎಂದು ಹೆಸರಿಡಲಾಗಿದೆ.

ಯಂತ್ರದ ಭಾಗಗಳು[ಬದಲಾಯಿಸಿ]

 • ಆಧಾರಸ್ತಂಭ- ಸಾಮಾನ್ಯವಾಗಿ ಯಂತ್ರಕ್ಕೆ ಎರಡು ಆಧಾರಸ್ತಂಭಗಳಿರುತ್ತವೆ. ಕೆಲವು ಸಣ್ಣ ಯಂತ್ರಗಳಲ್ಲಿ ಮಾತ್ರ ಒಂದು ಆಧಾರಸ್ತಂಭವಿರುತ್ತದೆ .
 • ಲೋಡ್ ಸೆಲ್- ಇದು ಒಂದು ಬಲ ಸಂಜ್ಞಾಪರಿವರ್ತಕ ಅಥವಾ ಬಲವನ್ನು ಅಳೆಯುವ ಮಾಪನ. ಗುಣಮಟ್ಟವನ್ನು ಕಾಪಾಡಿಕೊಳ್ಳಲು ಆವರ್ತಕ ಮಾಪನಾಂಕದ(calibration) ಅಗತ್ಯವಿರುತ್ತದೆ.
 • ಅಡ್ಡ ತಲೆ(crosshead)- ಇದು ಒಂದು ಚಲಿಸಬಲ್ಲ ಅಡ್ಡ ತಲೆ, ಸಾಮಾನ್ಯವಾಗಿ ಇದು ಒಂದು ಸ್ಥಿರ ವೇಗದಲ್ಲಿ ಮೇಲೆ ಅಥವಾ ಕೆಳಗೆ ಚಲಿಸುವಂತೆ ನಿಯಂತ್ರಿಸಲ್ಪಡುತ್ತದೆ.
 • ವಿಸ್ತರಣೆ ಅಥವಾ ವಿರೂಪ ಅಳೆಯುವ ಸಾಧನ- ಹೆಚ್ಚಿನ ಪರೀಕ್ಷೆಗಳಲ್ಲಿ ಅಡ್ಡತಲೆಯ ಚಲನೆಯಿಂದ ಪರೀಕ್ಷಾ ಮಾದರಿಯಲ್ಲುಂಟಾಗುವ ಉದ್ದದ ವ್ಯತ್ಯಾಸವನ್ನು ಅಳತೆ ಮಾಡಬೇಕಾಗುತ್ತದೆ.ಇದಕ್ಕೆ ಕೆಲವೊಮ್ಮೆ ಎಳೆಮಾಪಕವನ್ನು(Extensometer) ಉಪಯೋಗಿಸುತ್ತಾರೆ.
 • ಹೊರಹರಿವಿನ ಸಾಧನ- ಇದು ಪರೀಕ್ಷೆಗಳ ಪಲಿತಾಂಶವನ್ನು ಪಡೆಯಲು ಇರುವ ಸಾಧನ.ಹಿಂದಿನ ಕೆಲವು ಯಂತ್ರಗಳಲ್ಲಿ,ಸೂಚೀಫಲಕ(Dial) ಅಥವಾ ಅಂಕೀಯ ಫಲಕ(Digital display)ಮತ್ತು ನಕ್ಷಾ ಮುದ್ರಕ(chart recorders)ಗಳಿರುತ್ತಿದ್ದವು.ಇತ್ತೀಚಿನ ಹೊಸ ಯಂತ್ರಗಳಲ್ಲಿ ವಿಶ್ಲೇಷಣೆ ಮತ್ತು ಮುದ್ರಣಕ್ಕೆ ಕಂಪ್ಯೂಟರ್ ಇಂಟರ್ಫೇಸ್ ಗಳಿರುತ್ತವೆ.
 • ನಿಯಂತ್ರಿತ ನಿಯಂತ್ರಣ ವ್ಯವಸ್ಥೆ- ಅನೇಕ ಪರೀಕ್ಷೆಗಳಿಗೆ ನಿಯಂತ್ರಿತ ನಿಯಂತ್ರಣ (ಉಷ್ಣತೆ, ಆರ್ದ್ರತೆ, ಒತ್ತಡ, ಇತ್ಯಾದಿ) ವ್ಯವಸ್ಥೆಯ ಅಗತ್ಯವಿರುತ್ತದೆ.ಅದಕ್ಕಾಗಿ ಯಂತ್ರವನ್ನೇ ಒಂದು ನಿಯಂತ್ರಣ ಕೋಣೆಯಲ್ಲಿಡಬಹುದು ಅಥವಾ ಪರೀಕ್ಷಾ ಮಾದರಿಯ ಸುತ್ತ ಒಂದು ನಿಯಂತ್ರಿತ ವ್ಯವಸ್ಥೆಯ ಛೇಂಬರ್ ಅನ್ನು ಇಟ್ಟು ಪರೀಕ್ಷೆ ನಡೆಸಬಹುದು.
 • ಪರೀಕ್ಷಾ ಸಲಕರಣೆಗಳು,ಮಾದರಿಯನ್ನು ಹಿಡಿದುಕೊಳ್ಳುವ ದವಡೆಗಳು ಮತ್ತು ಸಂಬಂಧಿತ ಮಾದರಿ ಮಾಡುವ ಉಪಕರಣಗಳು.

ಉಪಯೋಗಿಸುವಿಕೆ[ಬದಲಾಯಿಸಿ]

ಪರೀಕ್ಷಾ ತಯಾರಿ ಮತ್ತು ಬಳಕೆಯ ವಿಧಾನವನ್ನು ಗುಣಮಟ್ಟದ ಸಂಸ್ಥೆಯು(standards organization) ಆಗಾಗ ಪ್ರಕಟಿಸುತ್ತಿರುತ್ತದೆ.ಇದು ಮಾದರಿ ತಯಾರಿಕೆ, ಪರೀಕ್ಷಾ ಸಲಕರಣೆಗಳ ಜೋಡಿಕೆ(fixturing), ನಿಗದಿತ ಅಳತೆ(ಅಧ್ಯಯನ ಅಥವಾ ಅವಲೋಕನಕ್ಕಾಗಿ ಬಳಸುವ ಮಾದರಿಯ ಉದ್ದ), ವಿಶ್ಲೇಷಣೆ, ಇತ್ಯಾದಿಗಳನ್ನು ಸೂಚಿಸುತ್ತದೆ

ಮಾದರಿಯನ್ನು ಯಂತ್ರದ ದವಡೆಗಳ ನಡುವೆ ಇರಿಸಲಾಗುತ್ತದೆ.ಮತ್ತು ಅವಶ್ಯಕತೆ ಇದ್ದಲ್ಲಿ ಪರೀಕ್ಷೆಯ ಸಮಯದಲ್ಲಿ ಮಾದರಿಯ ಉದ್ದ ಬದಲಾವಣೆಯನ್ನು ಸ್ವಯಂಚಾಲಿತವಾಗಿ ದಾಖಲಿಸಲು ಅಗತ್ಯವಾಗಿರುವ ಎಳೆಮಾಪಕವನ್ನು ಯಂತ್ರಕ್ಕೆ ಜೋಡಿಸಲಾಗುವುದು.ಒಂದು ವೇಳೆ ಎಳೆಮಾಪಕವನ್ನು ಯಂತ್ರಕ್ಕೆ ಜೋಡಿಸದಿದ್ದರೆ ಯಂತ್ರವೇ ಸ್ವತಃ ಮಾದರಿಯನ್ನು ಹಿಡಿದಿರುವ ತನ್ನ ಅಡ್ಡತಲೆಗಳ ನಡುವೆ ನಡೆಯುವ ಸ್ಥಳಾಂತರವನ್ನು ದಾಖಲಿಸುವುದು. ಆದಾಗ್ಯೂ, ಈ ವಿಧಾನವು ಕೇವಲ ಮಾದರಿಯ ಉದ್ದ ಬದಲಾವಣೆ ಮಾತ್ರವಲ್ಲದೆ ದವಡೆಗಳಿಂದ ಮಾದರಿಯ ಜಾರುವಿಕೆ ಹಾಗು ಇತರ ಸ್ಥಿತಿಸ್ಥಾಪಕ ಭಾಗಗಳ ಹಿಗ್ಗುವಿಕೆಯನ್ನು ಕೂಡಿಸಿ ದಾಖಲಿಸುತ್ತದೆ.
ಯಂತ್ರವು ಕಾರ್ಯಾರಂಭ ಮಾಡಿದೊಡನೆ ಮಾದರಿಯ ಮೇಲೆ ಬೀಳುವ ಬಲವು ಹೆಚ್ಚುತ್ತಾ ಹೋಗುವುದು.ಪರೀಕ್ಷೆಯ ಪ್ರತಿ ಹಂತದಲ್ಲೂ ನಿಯಂತ್ರಣ ವ್ಯವಸ್ಥೆ ಹಾಗೂ ಅದರ ತಂತ್ರಾಂಶವು ಮಾದರಿಯ ಮೇಲೆ ಹಾಕಲ್ಪಡುವ ಬಲ ಹಾಗೂ ಮಾದರಿಯ ವಿಕಸನ ಅಥವಾ ಸಂಕೋಚನವನ್ನು ದಾಖಲಿಸುತ್ತದೆ.

ಸಾಮರ್ಥ್ಯ[ಬದಲಾಯಿಸಿ]

ಮೇಜಿನ ಮೇಲಿಢುವ ಪುಟ್ಟ ಯಂತ್ರಗಳಿಂದ ಹಿಡಿದು ೫೩ MN (೧೨ ದಶಲಕ್ಷ ಪೌಂಡ್) ಸಾಮರ್ಥ್ಯದವರೆಗು ವಿವಿಧ ಶ್ರೇಣಿಗಳ ಯಂತ್ರಗಳು ಲಭ್ಯವಿವೆ.[೨]

ಉಲ್ಲೇಖಗಳು[ಬದಲಾಯಿಸಿ]

 1. ಡೇವಿಸ್, ಜೋಸೆಫ್ ಆರ್. (2004), ವಿಕಸನ ಪರೀಕ್ಷೆ (Tensile testing) (2nd ed.), ASM International, p. 2, ISBN 978-0-87170-806-9.
 2. NIST, Large Scale Structure Testing Facility, archived from the original on 2010-06-05, retrieved 2016-01-06. {{citation}}: |archive-date= / |archive-url= timestamp mismatch (help)

ಪ್ರಮಾಣಿತ ಮಾನದಂಡಗಳು[ಬದಲಾಯಿಸಿ]

 • ASTM E4 - ಪರೀಕ್ಷಾ ಯಂತ್ರಗಳ ಬಲ ಪ್ರಮಾಣೀಕರಣದ ವಾಡಿಕೆ ಪದ್ದತಿಗಳು.
 • ASTM E74 - ಬಲ ಪರೀಕ್ಷಾ ಯಂತ್ರಗಳ ಮಾಪನಾಂಕ ಪರಿಶೀಲನೆಯ ಪದ್ದತಿಗಳು.
 • ASTM E83 - ಎಳೆಮಾಪಕಗಳ ಪರಿಶೀಲನೆ ಮತ್ತು ವರ್ಗೀಕರಣ ಪದ್ದತಿಗಳು.
 • ASTM E1012 - ವಿಕಸನ ಮತ್ತು ಸಂಕೋಚನ ಬಲವನ್ನು ಅಕ್ಷದ ಮೇಲೆ ಪ್ರಯೋಗಿಸುವಾಗ,ಪರೀಕ್ಷಾ ಚೌಕಟ್ಟು ಮತ್ತು ಮಾದರಿಯ ಸಾಲುಹೊಂದಿಕೆಯ ಪರಿಶೀಲನಾ ಪದ್ದತಿಗಳು.
 • ASTM E1856 - ಸಾರ್ವತ್ರಿಕ ಪರೀಕ್ಷಾ ಯಂತ್ರದ ಗಣಕೀಕೃತ ಮಾಹಿತಿ ಸಂಚಯನ ವ್ಯವಸ್ಥೆಯಿಂದ ಪಡೆದ ದತ್ತಾಂಶವನ್ನು ಮೌಲ್ಯಮಾಪನ ಮಾಡಲು ಉಪಯೋಗಿಸುವ ಪ್ರಮಾಣಿತ ಕೈಪಿಡಿ.
 • JIS K7171 - ಪ್ಲಾಸ್ಟಿಕ್ ವಸ್ತುಗಳ ಮತ್ತು ಉತ್ಪನ್ನಗಳ ಮುರಿತ ಸಾಮರ್ಥ್ಯವನ್ನು(flextural strength) ನಿರ್ಧರಿಸುವ ಪ್ರಮಾಣಿತ ಮಾನದಂಡ.
 • ISO 5893 ರಬ್ಬರ್ ಮತ್ತು ಪ್ಲಾಸ್ಟಿಕ್ ಪರೀಕ್ಷಾ ಸಾಧನ ಸಾಧನ-ವಿಕಸನ, ಮುರಿತ ಸಾಮರ್ಥ್ಯ ಮತ್ತು ಸಂಕೋಚನದ ವಿವರಣೆಗಳು.
 • EN ISO 6892-1: ಲೋಹದ ವಸ್ತುಗಳು-ವಿಕಸನ ಪರೀಕ್ಷೆ-ಭಾಗ 1: ಕೊಠಡಿ ತಾಪಮಾನದಲ್ಲಿ ಪರೀಕ್ಷೆಯ ವಿಧಾನ (EN 10002 ರ ಬದಲಾವಣೆ)
 • EN ISO 7500-1/-2 ಲೋಹದ ವಸ್ತುಗಳು- ಸ್ಥಿರ ಒಂದೇ ಅಕ್ಷವುಳ್ಳ ಪರೀಕ್ಷಾ ಯಂತ್ರಗಳ ಪರಿಶೀಲನೆ - ಭಾಗ 1:ವಿಕಸನ/ಸಂಕೋಚನ ಪರೀಕ್ಷಾ ಯಂತ್ರಗಳು - ಬಲ-ಮಾಪನಾ ವ್ಯವಸ್ಥೆಯ ಪರಿಶೀಲನೆ ಮತ್ತು ಮಾಪನಾಂಕ; ಭಾಗ 2: ಎಳೆತದಿಂದ ಬಿರುಕು ಮುಂದುವರಿಸುವ ಪರೀಕ್ಷಾ ಯಂತ್ರಗಳು - ಅನ್ವಯಿಕ ಶಕ್ತಿಯು ಪರಿಶೀಲನೆ.

ನಿರ್ದಿಷ್ಟ ವಸ್ತುಗಳು ಹಾಗೂ ಉತ್ಪನ್ನಗಳಿಗೆ ಇನ್ನೂ ಅನೇಕ ಪ್ರಮಾಣಿತ ಪರೀಕ್ಷೆಗಳಿವೆ.ಅವುಗಳನ್ನು ಯಂತ್ರಗಳನ್ನು ಸ್ಥಾಪಿಸುವಾಗ,ಪರೀಕ್ಷಾ ಸಲಕರಣೆಗಳನ್ನು ಜೋಡಿಸುವಾಗ ಮತ್ತು ಪರೀಕ್ಷೆ ನಡೆಸುವಾಗ ಉಪಯೋಗಿಸಲಾಗುತ್ತದೆ.