ವಿಷಯಕ್ಕೆ ಹೋಗು

ಸದಸ್ಯ:SINDHU SHEKAR/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹರ್ಷದ್ ಮೆಹ್ತಾ

[ಬದಲಾಯಿಸಿ]
ಹರ್ಷದ್ ಶಾಂತಿಲಾಲ್ ಮೆಹ್ತಾ

ಹರ್ಷದ್ ಶಾಂತಿಲಾಲ್ ಮೆಹ್ತಾ ಒಬ್ಬ ಭಾರತೀಯ ಸ್ಟಾಕ್ ಬ್ರೋಕರ್, ಹೂಡಿಕೆದಾರ ಮತ್ತು ಉದ್ಯಮಿ. ಅವರು ೧೯೯೦ ರ ದಶಕದ ಆರಂಭದಲ್ಲಿ ಸೆಕ್ಯುರಿಟೀಸ್ ಹಗರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಕುಖ್ಯಾತಿಯನ್ನು ಗಳಿಸಿದ ಮಾರ್ಕೆಟ್ ಮಾನಿಪ್ಯುಲೇಟರ್ ಆಗಿದ್ದರು.

ಮೆಹ್ತಾ ವಿರುದ್ಧ ೨೭ ಕ್ರಿಮಿನಲ್ ಆರೋಪಗಳಿದ್ದರೂ, ಕೇವಲ ನಾಲ್ಕು ಆರೋಪಗಳಲ್ಲಿ ಅವರು ಅಪರಾಧಿ ಎಂದು ಸಾಬೀತಾಯಿತು. ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ನಡೆದ ₹೧೦೦ ಶತಕೋಟಿ ಮೌಲ್ಯದ ಹಣಕಾಸಿನ ಹಗರಣದಲ್ಲಿ ಮೆಹ್ತಾ ಅವರನ್ನು ಬಾಂಬೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ತಪ್ಪಿತಸ್ಥರೆಂದು ಘೋಷಿಸಿದವು.

ಈ ಹಗರಣವು ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆ ಮತ್ತು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ನಲ್ಲಿನ ಲೋಪದೋಷಗಳನ್ನು ಬಹಿರಂಗಪಡಿಸಿತು ಮತ್ತು ಅದರ ಪರಿಣಾಮವಾಗಿ ಆ ಲೋಪದೋಷಗಳನ್ನು ಮುಚ್ಚಲು ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಹೊಸ ನಿಯಮಗಳನ್ನು ಪರಿಚಯಿಸಿತು. ಅವರು ೨೦೦೧ ರ ಕೊನೆಯಲ್ಲಿ ಹೃದಯಾಘಾತದಿಂದ ಸಾಯುವವರೆಗೂ, ಅವರು ೯ ವರ್ಷಗಳ ಕಾಲ ವಿಚಾರಣೆಯಲ್ಲಿದ್ದರು.  

ಆರಂಭಿಕ ಜೀವನ

[ಬದಲಾಯಿಸಿ]

ಹರ್ಷದ್ ಶಾಂತಿಲಾಲ್ ಮೆಹ್ತಾ ರವರು ೨೯ ಜುಲೈ ೧೯೫೪ ರಂದು ಭಾರತದ ಗುಜರಾತ್‌ನ ರಾಜ್ ಕೋಟ್ ಜಿಲ್ಲೆಯ ಪನೇಲಿ ಮೋತಿಯಲ್ಲಿ ಜನಿಸಿದರು. ಅವರು ಗುಜರಾತಿ ಕೆಳ ಮಧ್ಯಮ ವರ್ಗದ ಜೈನ ಕುಟುಂಬಕ್ಕೆ ಸೇರಿದವರು. ಇವರ ತಂದೆಯ ಹೆಸರು ಶಾಂತಿಲಾಲ್ ಮೆಹ್ತಾ ಮತ್ತು ತಾಯಿ ರಸಿಲಬೆನ್ ಮೆಹ್ತಾ .ಅವರಿಗೆ ಮೂರು ಜನ ಕಿರಿಯ ಸಹೋದರರಿದ್ದರು. ಅವರ ತಂದೆ ಬೊರಿವಲಿಯಲ್ಲಿ ಸಣ್ಣ ಜವಳಿ ಉದ್ಯಮಿಯಾಗಿದ್ದರಿಂದ, ಮೆಹ್ತಾ ತಮ್ಮ ಬಾಲ್ಯದ ದಿನಗಳನ್ನು ಬೊರಿವಲಿಯಲ್ಲಿ ಕಳೆದರು. ಆ ನಂತರ ವೈದ್ಯಕೀಯ ಕಾರಣಗಳಿಗಾಗಿ ಆ ಕುಟುಂಬ ಛತ್ತೀಸ್ಗಢದ ರಾಯ್ ಪುರಕ್ಕೆ ಹೋಯಿತು.

ಶಿಕ್ಷಣ

[ಬದಲಾಯಿಸಿ]

ಅವರು ತಮ್ಮ ಆರಂಭಿಕ ಅಧ್ಯಯನವನ್ನು , ಭಿಲಾಯಿಯಲ್ಲಿರುವ ಜನತಾ ಪಬ್ಲಿಕ್ ಸ್ಕೂಲ್ನಲ್ಲಿ ಮಾಡಿದರು. ಕ್ರಿಕೆಟ್ ಉತ್ಸಾಹಿಯಾಗಿದ್ದ ಮೆಹ್ತಾ , ಶಾಲೆಯಲ್ಲಿ ಯಾವುದೇ ವಿಶೇಷ ಭರವಸೆಯನ್ನು ತೋರಿಸಲಿಲ್ಲ ಮತ್ತು ಆತ ಅಂಥ ಬುದ್ಧಿವಂತ ವಿದ್ಯಾರ್ಥಿಯೇನೂ ಆಗಿರಲಿಲ್ಲ .ತನ್ನ ಶಾಲಾ ಶಿಕ್ಷಣದ ನಂತರ, ಮುಂದಿನ ಅಧ್ಯಯನಕ್ಕಾಗಿ ಮತ್ತು ಕೆಲಸ ಹುಡುಕಲು ಮುಂಬೈಗೆ ಬಂದರು . ಮೆಹ್ತಾ ಅವರು ೧೯೭೬ ರಲ್ಲಿ ತಮ್ಮ ಬಿ.ಕಾಂ ಪದವಿಯನ್ನು ಬಾಂಬೆಯ ಲಾಲಾ ಲಜಪತ್ರಾಯ್ ಕಾಲೇಜಿನಲ್ಲಿ ಪೂರ್ಣಗೊಳಿಸಿದರು ಮತ್ತು ಮುಂದಿನ ಎಂಟು ವರ್ಷಗಳ ಕಾಲ ಹೊಸೈರಿಯಿಂದ ವಜ್ರದ ಮಳಿಗೆ ತನಕ ನಾನಾ ಕಡೆ ಕೆಲಸ ಮಾಡಿದರು.

ಕೆಲಸ ಮತ್ತು ಜೀವನ

[ಬದಲಾಯಿಸಿ]

ಸಿಮೆಂಟ್ ಗುತ್ತಿಗೆದಾರನಾಗಿ, ಇನ್ಸೂರೆನ್ಸ್ ಕ್ಲರ್ಕ್ ಆಗಿ, ಜವಳಿ ಮಾರಾಟಗಾರನಾಗಿ ಮತ್ತು ಮಾರಾಟಕ್ಕೆ ಸಂಬಂಧಿತವಾದ ಅನೇಕ ಉದ್ಯೋಗಗಳನ್ನು ಮೆಹ್ತಾ ಮಾಡಿದರು. ಮೆಹ್ತಾ ತನ್ನ ವೃತ್ತಿಜೀವನವನ್ನು ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ನ ಮುಂಬೈ ಕಚೇರಿಯಲ್ಲಿ, ಇನ್ಸೂರೆನ್ಸ್ ಏಜೆಂಟ್ ಆಗಿ  ಪ್ರಾರಂಭಿಸಿದರು. ಈ ಸಮಯದಲ್ಲಿ ಅವರಿಗೆ ಸ್ಟಾಕ್ ಮಾರುಕಟ್ಟೆಯ ಬಗ್ಗೆ ಆಸಕ್ತಿ ಮೂಡಿತು. ಕೆಲವು ದಿನಗಳ ನಂತರ, ೧೯೮೧ ರಲ್ಲಿ ತಮ್ಮ ಕೆಲಸಕ್ಕೆ ರಾಜಿನಾಮೆ ನೀಡಿ, ಬ್ರೋಕರೇಜ್ ಸಂಸ್ಥೆಗೆ ಸೇರಿದರು.

ಹರ್ಜಿವಂದಾಸ್ ನೇಮಿದಾಸ್ ಸೆಕ್ಯುರಿಟೀಸ್‌ ಎಂಬ ಬ್ರೋಕರೇಜ್ ಸಂಸ್ಥೆಯಲ್ಲಿ , ತಮ್ಮ ಗುರು ಎಂದು ಪರಿಗಣಿಸಿದ ಪ್ರಸನ್ನ್ ಪ್ರಾಂಜಿವಂದಾಸ್ ಎಂಬ ಬ್ರೋಕರ್ ಕೆಳಗೆ ಉದ್ಯೋಗಿಯಾಗಿ ಕೆಲಸ ಮಾಡಿದರು. ೧೯೮೦ ರಿಂದ, ಹತ್ತು ವರ್ಷಗಳ ಅವಧಿಯಲ್ಲಿ, ಅವರು ಹಲವಾರು ಬ್ರೋಕರೇಜ್ ಸಂಸ್ಥೆಗಳಲ್ಲಿ ಹೆಚ್ಚಿನ ಜವಾಬ್ದಾರಿ ಇರುವ ಸ್ಥಾನಗಳಲ್ಲಿ ಸೇವೆ ಸಲ್ಲಿಸಿದರು. ೧೯೯೦ರ ಹೊತ್ತಿಗೆ, ಅವರು ಭಾರತೀಯ ಸೆಕ್ಯುರಿಟೀಸ್ ವಲಯದಲ್ಲಿ ಪ್ರಮುಖ ಸ್ಥಾನಕ್ಕೆ ಏರಿದ್ದರು ಮತ್ತು ಮೆಹ್ತಾ ಹೆಸರು ಸ್ಟಾಕ್ ಮಾರ್ಕೆಟ್ ನಲ್ಲಿ ಪ್ರಮುಖವಾಗಿ ನಿಂತಿತ್ತು.'ಬಿಸಿನೆಸ್ ಟುಡೆ'ಯಂತಹ ಜನಪ್ರಿಯ ಪತ್ರಿಕೆಗಳು ಮತ್ತು ಮಾಧ್ಯಮಗಳು ಅವರಿಗೆ  " ಸ್ಟಾಕ್ ಮಾರುಕಟ್ಟೆಯ ಅಮಿತಾಬ್ ಬಚ್ಚನ್ " ಎಂಬ ಬಿರುದನ್ನು ನೀಡಿದರು.

೧೯೮೪ ರಲ್ಲಿ ಹರ್ಷದ್ ಮೆಹ್ತಾ ಬಾಂಬೆ ಸ್ಟಾಕ್  ಎಕ್ಸ್‌ಚೇಂಜ್ನ ಸದ್ಯಸರಾದರು ಮತ್ತು " ಗ್ರೋ ಮೋರ್ ರಿಸರ್ಚ್ ಅಂಡ್ ಅಸ್ಸೆಟ್ ಮ್ಯಾನೇಜ್ಮೆಂಟ್ " ಎಂಬ ಹೆಸರಿನಲ್ಲಿ ತಮ್ಮದೇ ಆದ ಬ್ರೋಕರೇಜ್ ಸಂಸ್ಥೆಯನ್ನು ಸ್ಥಾಪಿಸಿದರು. ೧೯೮೬ ರಲ್ಲಿ ಅವರು ಸಕ್ರಿಯವಾಗಿ ಸ್ಟಾಕ್ ಟ್ರೇಡಿಂಗ್ ಪ್ರಾರಂಭಿಸಿದರು ಮತ್ತು ೧೯೯೦ರ ಆರಂಭದ ವೇಳೆಗೆ, ಹಲವಾರು ಪ್ರಸಿದ್ಧ ವ್ಯಕ್ತಿಗಳು ಅವರ ಸಂಸ್ಥೆಯಲ್ಲಿ ಹೂಡಿಕೆ ಮಾಡಲು ಮತ್ತು ಅವರ ಸೇವೆಗಳನ್ನು ಬಳಸಿಕೊಳ್ಳಲು ಪ್ರಾರಂಭಿಸಿದರು. ಅವರು ತಮ್ಮ ಆಕರ್ಷಕ ವ್ಯಕ್ತಿತ್ವ, ತ್ವರಿತ ಚಿಂತನೆ ಮತ್ತು ಲಾಭದಾಯಕ ವ್ಯವಹಾರಗಳನ್ನು ಮಾಡುವ ಕೌಶಲ್ಯಕ್ಕಾಗಿ ಹೆಸರುವಾಸಿಯಾಗಿದ್ದರು ಮತ್ತು ಶೀಘ್ರದಲ್ಲೇ ನಗರದಲ್ಲಿ ಹೆಚ್ಚು ಬೇಡಿಕೆಯಿರುವ ದಲ್ಲಾಳಿಗಳಲ್ಲಿ ಒಬ್ಬರಾದರು.

ಈ ಸಮಯದಲ್ಲಿ ಅವರು ಅಸೋಸಿಯೇಟೆಡ್ ಸಿಮೆಂಟ್ ಕಂಪನಿಯ (ಎಸಿಸಿ) ಷೇರುಗಳಲ್ಲಿ ಭಾರಿ ವ್ಯಾಪಾರವನ್ನು ಪ್ರಾರಂಭಿಸಿದರು .ಮೆಹ್ತಾ ಸೇರಿದಂತೆ ದಲ್ಲಾಳಿಗಳ ಗುಂಪಿನಿಂದ ಭಾರೀ ಪ್ರಮಾಣದ ಖರೀದಿಯಿಂದಾಗಿ ಸಿಮೆಂಟ್ ಕಂಪನಿಯ ಷೇರುಗಳ ಬೆಲೆ  ₹೨೦೦ ರಿಂದ ಸುಮಾರು ₹೯೦೦೦ ಕ್ಕೆ ಏರಿತು. ಮೆಹ್ತಾರವರು ಎಸಿಸಿ ಷೇರುಗಳಲ್ಲಿನ ಈ ಅತಿಯಾದ ಬೆಲೆ ಏರಿಕೆಯನ್ನು, ಸ್ಟಾಕ್ಅನ್ನು ಕಡಿಮೆ ಮೌಲ್ಯೀಕರಿಸಲಾಗಿದೆ ಎಂದು ಹೇಳುವ ಮೂಲಕ ಸಮರ್ಥಿಸಿಕೊಂಡರು. ಮತ್ತು ಅದೇ ರೀತಿಯ ಉದ್ಯಮವನ್ನು ನಿರ್ಮಿಸುವ ವೆಚ್ಚಕ್ಕೆ ಸಮನಾದ ಬೆಲೆಗೆ ಕಂಪನಿಯನ್ನು ಮರುಮೌಲ್ಯಮಾಪನ ಮಾಡಿದಾಗ ಮಾರುಕಟ್ಟೆಯನ್ನು ಸರಳವಾಗಿ ಸರಿಪಡಿಸಲಾಗಿದೆ ಎಂದು ಅವರು ಮುಂದಿಟ್ಟಿದ್ದ ಸಿದ್ಧಾಂತಕ್ಕೆ "ಬದಲಿ ವೆಚ್ಚದ ಸಿದ್ಧಾಂತ" ಎಂದು ಕರೆಯುತ್ತಾರೆ.

ಈ ಅವಧಿಯಲ್ಲಿ, ವಿಶೇಷವಾಗಿ ೧೯೯೦-೧೯೯೧ ರಲ್ಲಿ, ಮಾಧ್ಯಮವು ಮೆಹ್ತಾ ಅವರನ್ನು ವೈಭವೀಕರಿಸಿತು. ಅವರ ಬುಲಿಶ್ ಮಾರುಕಟ್ಟೆಯ ಮುನ್ನೋಟದಿಂದಾಗಿ ಅವರನ್ನು "ದ ಬಿಗ್ ಬುಲ್" ಎಂದು ಕರೆಯಿತು. ಹಲವಾರು ಪ್ರಸಿದ್ಧ ಪ್ರಕಾಶಕರ ಮುಖ ಪುಟಗಳಲ್ಲಿ ಇವರ ಬಗ್ಗೆ "ರೇಜಿಂಗ್ ಬುಲ್" ಎಂಬ ಶೀರ್ಷಿಕೆಯ ಲೇಖನಗಳಿದ್ದವು. ವರ್ಲಿಯಲ್ಲಿ ಸಮುದ್ರದ ಎದುರು  ಮಿನಿ ಗಾಲ್ಫ್ ಕೋರ್ಸ್ ಮತ್ತು ಈಜುಕೊಳದೊಂದಿಗೆ ಇರುವ ೧೫೦೦೦ ಚದರಡಿ ಪೆಂಟ್ ಹೌಸ್, ಟೊಯೊಟಾ ಕೊರೊಲ್ಲಾ , ಲೆಕ್ಸಸ್ ಎಲ್ ಎಸ್ ೪೦೦ ಮತ್ತು ಟೊಯೊಟಾ ಸೆರಾ ಸೇರಿದಂತೆ ಅವರ ಐಶಾರಾಮಿ ಕಾರುಗಳು ಮತ್ತು ಅವರ ವೈಭವದ ಜೀವನಶೈಲಿಯು ಈ ಪ್ರಕಟಣೆಗಳಲ್ಲಿ ಮಿಂಚಿದವು. ಇವು ಭಾರತದ ಇತರೆ ಶ್ರೀಮಂತರಿಗೆ ಸಹ ಅಪರೂಪವಾಗಿದ್ದರಿಂದ, ಅವರು ಭಾರತದಲ್ಲಿ ಶ್ರೀಮಂತ ವರ್ಗದ ಹೊಸ ಸಂಕೇತವಾದರು ಮತ್ತು ಮಾಧ್ಯಮಗಳಲ್ಲಿ ಆರ್ಥಿಕ ಮಾಂತ್ರಿಕರಾಗಿ ಉದಯಿಸಿದರು.

ಅಧಿಕಾರಿಗಳು ನಂತರ ದಾಖಲಿಸಿದ ಕ್ರಿಮಿನಲ್ ದೋಷಾರೋಪಣೆಗಳಲ್ಲಿ, ಮೆಹ್ತಾ ಮತ್ತು ಅವರ ಸಹಚರರು, ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನಲ್ಲಿನ ಮೌಲ್ಯ ಏರಿಕೆಯ ಮೇಲೆ ಅಕ್ರಮ ಪ್ರಭಾವ ಬೀರಲು ಇನ್ನೂ ಹೆಚ್ಚಿನ ಯೋಜನೆಯನ್ನು ಹಾಕಿಕೊಂಡಿದ್ದರು ಎಂದು ಆರೋಪಿಸಲಾಯಿತು. "ಸೆಕ್ಯುರಿಟೀಸ್ ಹಗರಣ" ಎಂದು ಕರೆಯಲ್ಪಡುವ ಮೆಹ್ತಾ ಅವರ ಯೋಜನೆಯು ಹಲವಾರು ವರ್ಷಗಳವರೆಗೆ ಮುಂದುವರೆಯಿತು ಮತ್ತು ಈ ಪ್ರಕ್ರಿಯೆಯಲ್ಲಿ ಅವರು ಲಕ್ಷಾಂತರ ರೂಪಾಯಿಗಳನ್ನು ಗಳಿಸಿದರು. ಅವರು ಐಷಾರಾಮಿ ಕಾರುಗಳು, ಮನೆಗಳು ಮತ್ತು ಖಾಸಗಿ ಜೆಟ್ ಖರೀದಿಸಲು ಹಣವನ್ನು ಬಳಸಿದರು.

೧೯೯೨ ಭಾರತೀಯ ಷೇರು ಮಾರುಕಟ್ಟೆ ಹಗರಣದ ಹಿನ್ನಲೆ

[ಬದಲಾಯಿಸಿ]

೧೯೯೨ರ ಭಾರತೀಯ ಷೇರು ಮಾರುಕಟ್ಟೆ ಹಗರಣವು ಹರ್ಷದ್ ಶಾಂತಿಲಾಲ್ ಮೆಹ್ತಾರವರು, ಬಾಂಬೆ ಸ್ಟಾಕ್ ಎಕ್ಸಚೇಂಜ್ನಲ್ಲಿರುವ ಇತರ ಬ್ಯಾಂಕರ್‌ಗಳು ಮತ್ತು ರಾಜಕಾರಣಿಗಳೊಂದಿಗೆ ಸೇರಿ ನಡೆಸಿದ ವ್ಯಾಪಾರ ತಂತ್ರವಾಗಿದೆ. ಈ ಹಗರಣವು ಭಾರತದಲ್ಲಿ ನಡೆದ ಅತಿದೊಡ್ಡ ಹಣದ ಮಾರುಕಟ್ಟೆ ಹಗರಣವಾಗಿದ್ದು, ಸುಮಾರು ₹ ೫೦೦೦ ಕೋಟಿಗಳಷ್ಟು ಮೊತ್ತವನ್ನು ಹೊಂದಿದೆ ಮತ್ತು ಭಾರತದ ಷೇರು ಮಾರುಕಟ್ಟೆಗೆ ಗಮನಾರ್ಹ ವಂಚನೆ ಉಂಟುಮಾಡಿದೆ.

ಭ್ರಷ್ಟ ಅಧಿಕಾರಿಗಳಿಂದ ನಕಲಿ ಚೆಕ್‌ಗಳಿಗೆ ಸಹಿ ಹಾಕಿಸುವುದು, ಮಾರುಕಟ್ಟೆ ಲೋಪದೋಷಗಳನ್ನು ದುರುಪಯೋಗಪಡಿಸಿಕೊಳ್ಳುವುದು ಮತ್ತು ಷೇರುಗಳ ಬೆಲೆಯನ್ನು ಅವುಗಳ ಮೂಲ ಬೆಲೆಗಿಂತ ೪೦ ಪಟ್ಟು ಹೆಚ್ಚಿಸುವುದು ಮೆಹ್ತಾ ಬಳಸಿದ ಕೆಲವು ತಂತ್ರಗಳು. ಹಗರಣದ ಪರಿಣಾಮವಾಗಿ ಉತ್ತಮ ಆದಾಯವನ್ನು ಪಡೆಯುತ್ತಿದ್ದರಿಂದ ಷೇರು ವ್ಯಾಪಾರಿಗಳಿಗೆ ಬ್ಯಾಂಕುಗಳಿಂದ ಅಸುರಕ್ಷಿತ ಸಾಲಗಳನ್ನು ಮೋಸದಿಂದ ಪಡೆಯಲು ಸಾಧ್ಯವಾಯಿತು. ಏಪ್ರಿಲ್ ೧೯೯೨ ರಲ್ಲಿ, ನಕಲಿ ಬ್ಯಾಂಕ್ ರಸೀದಿಗಳು ಮತ್ತು ಸ್ಟಾಂಪ್ ಪೇಪರ್ ಬಳಸಿ ನಡೆಸಿದ ಈ ವ್ಯವಸ್ಥಿತ ಸ್ಟಾಕ್ ಹಗರಣವನ್ನು ಪತ್ತೆ ಮಾಡಿದಾಗ, ಹಗರಣದ ಪರಿಣಾಮವಾಗಿ ಲಕ್ಷಗಟ್ಟಲೆ ಕುಟುಂಬಗಳಿಗೆ ನಷ್ಟ  ಉಂಟಾಗುವುದರ ಜೊತೆಗೆ ಭಾರತೀಯ ಷೇರು ಮಾರುಕಟ್ಟೆ ಕುಸಿದುಹೋಯಿತು. ಈ ಬ್ಯಾಂಕುಗಳು ಇದ್ದಕ್ಕಿದ್ದಂತೆ ಲಕ್ಷಾಂತರ ರೂಪಾಯಿಗಳನ್ನು ಈಗ ಅನುಪಯುಕ್ತ ಸಾಲದಲ್ಲಿ ಸಿಲುಕಿರುವುದನ್ನು ಕಂಡುಕೊಂಡವು. ಈ ಹಗರಣವು ಭಾರತೀಯ ಹಣಕಾಸು ವ್ಯವಸ್ಥೆಗಳ ಅಂತರ್ಗತ ಲೋಪದೋಷಗಳನ್ನು ಬಹಿರಂಗಪಡಿಸಿತು ಮತ್ತು ಆನ್‌ಲೈನ್ ಭದ್ರತಾ ವ್ಯವಸ್ಥೆಗಳ ಪರಿಚಯವನ್ನು ಒಳಗೊಂಡಂತೆ ಸ್ಟಾಕ್ ವಹಿವಾಟಿನ ಸಂಪೂರ್ಣ ಸುಧಾರಿತ ವ್ಯವಸ್ಥೆಗೆ ಕಾರಣವಾಯಿತು.

ಸ್ಟಾಂಪ್ ಪೇಪರ್ ಮತ್ತು ರೆಡಿ ಫಾರ್ವರ್ಡ್ ಹಗರಣ

[ಬದಲಾಯಿಸಿ]

೧೯೯೦ರ ದಶಕದ ಆರಂಭದಲ್ಲಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿಯಮಗಳ ಪ್ರಕಾರ, ಬ್ಯಾಂಕುಗಳು ಕನಿಷ್ಠ ೩೮.೫ ಶೇಕಡ ಸರ್ಕಾರಿ ಸ್ಥಿರ ಬಡ್ಡಿ ಬಾಂಡ್ ಗಳನ್ನು ಹೊಂದಿರಬೇಕಾಗಿತ್ತು. ಇದರ ಜೊತೆಗೆ ಬ್ಯಾಂಕ್‌ಗಳು ತಮ್ಮ ಲಾಭದಾಯಕತೆಯನ್ನು ಕಾಯ್ದುಕೊಳ್ಳಬೇಕಾಗಿತ್ತು. ಆದರೆ ಬ್ಯಾಂಕ್‌ಗಳಿಗೆ ಈಕ್ವಿಟಿ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡಲು ಅವಕಾಶವಿರಲಿಲ್ಲ. ಆದ್ದರಿಂದ ಅನೇಕ ಬ್ಯಾಂಕುಗಳು ತಮ್ಮ ಸರ್ಕಾರಿ ಬಾಂಡ್ ಹೋಲ್ಡಿಂಗ್‌ಗಳ ಮೌಲ್ಯವನ್ನು ಹೆಚ್ಚಿಸಲು, ಸರ್ಕಾರಿ ಭದ್ರತೆಗಳನ್ನು ಸಾಲ ನೀಡಲು ಮತ್ತು ಸಾಲ ಪಡೆಯಲು 'ರೆಡಿ ಫಾರ್ವರ್ಡ್ ಡೀಲ್' (ಆರ್ ಎಫ್ ಡಿ) ಅನ್ನು ಬಳಸಿದವು. ಹಣದ ಅವಶ್ಯಕತೆ ಇರುವ ಬ್ಯಾಂಕ್, ತನ್ನ ಸೆಕ್ಯೂರಿಟಿಗಳನ್ನು ಸಾಲ ನೀಡುವ ಬ್ಯಾಂಕ್‌ಗೆ ಮಾರಾಟ ಮಾಡಿ, ನಂತರ ಅಧಿಕಾರಾವಧಿಯ ಕೊನೆಯಲ್ಲಿ ಸ್ವಲ್ಪ ಹೆಚ್ಚಿನ ಬೆಲೆಗೆ ಅವುಗಳನ್ನು ಖರೀದಿಸುತ್ತಿತ್ತು. ಬ್ಯಾಂಕ್‌ಗಳು ಭದ್ರತಾ ವ್ಯವಹಾರಗಳ ಸಂದರ್ಭದಲ್ಲಿ ಇತರ ಬ್ಯಾಂಕ್‌ಗಳೊಂದಿಗೆ ನೇರವಾಗಿ ವ್ಯವಹರಿಸುವುದನ್ನು ಆರ್‌ಬಿಐ ಮಾರ್ಗಸೂಚಿಗಳು ಕಡ್ಡಾಯಗೊಳಿಸಿದ್ದರೂ, ಅದು ಸುಲಭ ಮತ್ತು ಕಡಿಮೆ ಸಮಯ ತೆಗೆದುಕೊಳ್ಳುವುದರಿಂದ ಅವರು ದಲ್ಲಾಳಿಗಳ ಮೇಲೆ ಅವಲಂಬಿತರಾಗಿದ್ದರು. ಸೆಕ್ಯೂರಿಟಿಗಳ ವಿತರಣೆಗಳನ್ನು ಮತ್ತು ಪಾವತಿಗಳನ್ನು ಹರ್ಷದ್ ಮೆಹ್ತಾ ಅವರಂತಹ ಬ್ರೋಕರ್ ಮೂಲಕ ಮಾಡಲಾಗುತ್ತಿತ್ತು. ಬ್ಯಾಂಕ್‌ಗಳ ಈ ಅಗತ್ಯವನ್ನು ಪರಿಹರಿಸುವ ನಿಟ್ಟಿನಲ್ಲಿ ಮೆಹ್ತಾ ಜಾಣತನದಿಂದ ಬ್ಯಾಂಕಿಂಗ್ ವ್ಯವಸ್ಥೆಯಿಂದ ಬಂಡವಾಳವನ್ನು ಹಿಂಡಿ, ಆ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹಾಕಿದರು. ಅವರು ಸೆಕ್ಯುರಿಟಿಗಳನ್ನು ಮಾರಾಟ ಮಾಡಲು ಅಥವಾ ಖರೀದಿಸಲು ಬಯಸುವ ಬ್ಯಾಂಕುಗಳ ನಡುವೆ ಮಧ್ಯವರ್ತಿಯಾಗಿ, ಅದನ್ನು ತಮ್ಮ ಸ್ವಂತ ಲಾಭಕ್ಕಾಗಿ ಬಳಸಿಕೊಂಡರು.ಹರ್ಷದ್ ಮೆಹ್ತಾ ಬ್ಯಾಂಕುಗಳಿಗೆ ಹೆಚ್ಚಿನ ಬಡ್ಡಿದರದ ಭರವಸೆ ನೀಡಿ, ಇತರ ಬ್ಯಾಂಕ್‌ಗಳಿಂದ ಸೆಕ್ಯೂರಿಟಿಗಳನ್ನು ಖರೀದಿಸುವ ನೆಪದಲ್ಲಿ ತಮ್ಮ ವೈಯಕ್ತಿಕ ಖಾತೆಗೆ ಹಣವನ್ನು ವರ್ಗಾಯಿಸಲು ಕೇಳಿದರು ಮತ್ತು ಸೆಕ್ಯೂರಿಟಿಗಳನ್ನು ನೀಡಲು ಸಮಯ ಕೇಳಿದರು.

ಸಾಮಾನ್ಯ ರೆಡಿ ಫಾರ್ವರ್ಡ್ ವ್ಯವಹಾರದಲ್ಲಿ, ಕೇವಲ ಎರಡು ಬ್ಯಾಂಕ್‌ಗಳು ಮಾತ್ರ ಒಳಗೊಂಡಿರುತ್ತವೆ. ಹಣಕ್ಕೆ ಬದಲಾಗಿ ಬ್ಯಾಂಕ್‌ನಿಂದ ಭದ್ರತೆಗಳನ್ನು ತೆಗೆದುಕೊಳ್ಳಲಾಗುತ್ತದೆ. ಮಾರಾಟಗಾರನು ಸೆಕ್ಯೂರಿಟಿಗಳನ್ನು ಬ್ರೋಕರ್‌ಗೆ ನೀಡುತ್ತಾನೆ, ಆಗ ಅವರು ಅವುಗಳನ್ನು ಖರೀದಿದಾರರಿಗೆ ವರ್ಗಾಯಿಸುತ್ತಾರೆ ಮತ್ತು ಖರೀದಿದಾರನು ಬ್ರೋಕರ್‌ಗೆ ಚೆಕ್ ಅನ್ನು ನೀಡಿದಾಗ, ಅವರು ಮಾರಾಟಗಾರರಿಗೆ ಪಾವತಿಯನ್ನು ಮಾಡುತ್ತಾರೆ. ಆದರೆ ಮೆಹ್ತಾ ಇಲ್ಲಿ ಏನು ಮಾಡಿದರು ಎಂದರೆ, ಬ್ಯಾಂಕ್ ತನ್ನ ಸೆಕ್ಯೂರಿಟಿಗಳು ಅಥವಾ ಹಣವನ್ನು ವಿನಂತಿಸಿದಾಗ ಅವರು ಮೂರನೇ ಬ್ಯಾಂಕನ್ನು ನಂತರ ನಾಲ್ಕನೇ ಬ್ಯಾಂಕ್ ಹೀಗೆ ಇತ್ಯಾದಿ ಬ್ಯಾಂಕುಗಳನ್ನು ತೊಡಗಿಸಿಕೊಂಡರು.

ಬ್ಯಾಂಕ್ ರಶೀದಿ ಹಗರಣ

[ಬದಲಾಯಿಸಿ]

ಈ ಹಗರಣದಲ್ಲಿ ಬ್ಯಾಂಕ್ ರಶೀದಿಯನ್ನು ದೊಡ್ಡ ಮಟ್ಟದಲ್ಲಿ ಮೆಹ್ತಾ ಬಳಸಿದರು. 'ರೆಡಿ ಫಾರ್ವರ್ಡ್' ಒಪ್ಪಂದದಲ್ಲಿ, ಸೆಕ್ಯೂರಿಟಿಗಳು ವಾಸ್ತವದಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ವರ್ಗಾವಣೆಯಾಗುತ್ತಿರಲಿಲ್ಲ. ಬದಲಾಗಿ, ಸಾಲಗಾರ ಬ್ಯಾಂಕುಗಳು(ಅಂದರೆ ಸೆಕ್ಯುರಿಟಿಗಳ ಮಾರಾಟಗಾರ), ಸಾಲದಾತ ಬ್ಯಾಂಕುಗಳಿಗೆ (ಸೆಕ್ಯುರಿಟಿಗಳ ಖರೀದಿದಾರರಿಗೆ) ಬ್ಯಾಂಕ್ ರಶೀದಿಯನ್ನು (ಬಿ ಆರ್) ನೀಡುತ್ತಿದ್ದರು. ಇದು ಸೆಕ್ಯೂರಿಟಿಗಳ ಮಾರಾಟವನ್ನು ದೃಢೀಕರಿಸುತ್ತದೆ ಮತ್ತು ಸೆಕ್ಯೂರಿಟಿಗಳನ್ನು ಖರೀದಿದಾರರಿಗೆ ತಲುಪಿಸುವುದಾಗಿ ಭರವಸೆ ನೀಡುತ್ತದೆ.

ಹರ್ಷದ್ ಮೆಹ್ತಾ ಅವರು ನಕಲಿ ಬ್ಯಾಂಕ್ ರಶೀದಿಗಳನ್ನು ಪಡೆದರು, ಅಂದರೆ ಯಾವುದೇ ಸರ್ಕಾರಿ ಭದ್ರತೆಗಳಿಂದ ಬೆಂಬಲಿತವಾಗದ ಬ್ಯಾಂಕ್ ರಶೀದಿಗಳನ್ನು, ಬ್ಯಾಂಕ್ ಆಫ್ ಕರಾಡ್ ಮತ್ತು ಮೆಟ್ರೋಪಾಲಿಟನ್ ಕೋ-ಆಪರೇಟಿವ್ ಬ್ಯಾಂಕ್ ಎಂಬ ಎರಡು ಸಣ್ಣ ಮತ್ತು ಹೆಚ್ಚು ಪ್ರಸಿದ್ಧವಲ್ಲದ ಬ್ಯಾಂಕುಗಳನ್ನು ಬಳಸಿಕೊಂಡು ಪಡೆದರು. ಈ ನಕಲಿ ಬ್ಯಾಂಕ್ ರಶೀದಿಗಳನ್ನು ಪಡೆದ ನಂತರ, ಅವುಗಳನ್ನು ಇತರ ಬ್ಯಾಂಕ್‌ಗಳಿಗೆ ರವಾನಿಸಲಾಯಿತು ಮತ್ತು ಬ್ಯಾಂಕ್‌ಗಳು ಸರ್ಕಾರಿ ಭದ್ರತೆಗಳ ವಿರುದ್ಧ ಸಾಲ ನೀಡುತ್ತಿದ್ದಾರೆ ಎಂದು ತಪ್ಪಾಗಿ ನಂಬಿ ಮೆಹ್ತಾಗೆ ಹಣವನ್ನು ನೀಡಿದವು.

ಮೆಹ್ತಾ ಷೇರು ಮಾರುಕಟ್ಟೆಯಲ್ಲಿ ಷೇರುಗಳ ಬೆಲೆಗಳನ್ನು ಹೆಚ್ಚಿಸಲು ಈ ಹಣವನ್ನು ಬಳಸಿದರು. ಹಣವನ್ನು ಹಿಂದಿರುಗಿಸುವ ಸಮಯ ಬಂದಾಗ, ಹೆಚ್ಚಿನ ದರದಲ್ಲಿ ಲಾಭಕ್ಕಾಗಿ ಷೇರುಗಳನ್ನು ಮಾರಿ, ಬ್ಯಾಂಕ್ ಗೆ ಬರಬೇಕಿದ್ದ ಹಣವನ್ನು ಹಿಂದಿರುಗಿಸಿದರು. ಇದರಿಂದ ಎಸಿಸಿ, ಸ್ಟೆರ್ಲೈಟ್ ಇಂಡಸ್ಟ್ರೀಸ್ ಮತ್ತು ವಿಡಿಯೋಕಾನ್‌ನಂತಹ  ಕೆಲವು ಉತ್ತಮ ಸ್ಥಾಪಿತ ಕಂಪನಿಗಳ ಷೇರುಗಳ ಬೇಡಿಕೆಯನ್ನು ನಾಟಕೀಯವಾಗಿ ಹೆಚ್ಚಿಸಿ, ನಂತರ ಅವುಗಳನ್ನು ಮಾರಾಟ ಮಾಡಿದರು. ಇದರಿಂದ ಬಂದ ಆದಾಯದ ಒಂದು ಭಾಗವನ್ನು ಬ್ಯಾಂಕ್‌ಗೆ ವರ್ಗಾಯಿಸಿದರು ಮತ್ತು ಉಳಿದಿದ್ದನ್ನು ತನಗಾಗಿ ಉಳಿಸಿಕೊಂಡರು.

ಅವರು ಸ್ಟಾಕ್ ಮಾರುಕಟ್ಟೆಯ ಲಿಕ್ವಿಡಿಟಿಯನ್ನು ಹೆಚ್ಚಿಸುವ ಮೂಲಕ ಸ್ಟಾಕ್‌ಗಳಲ್ಲಿ ಕೃತಕ ಕೊರತೆಯನ್ನು ಸೃಷ್ಟಿಸಿ ಬೆಲೆಗಳನ್ನು ನ್ಯಾಯಸಮ್ಮತವಲ್ಲದ ಮಟ್ಟಕ್ಕೆ ಹೆಚ್ಚಿಸಿದರು. ತನ್ನ ಸ್ವಯಂ-ಪ್ರಚಾರದ ಸಿದ್ಧಾಂತಗಳನ್ನು ನಂಬಲರ್ಹವೆಂದು ಹೂಡಿಕೆದಾರರನ್ನು ಆಕರ್ಷಿಸಿದರು. ಅಸೋಸಿಯೇಟೆಡ್ ಸಿಮೆಂಟ್ ಕಂಪನಿ (ಎಸಿಸಿ), ಅಪೊಲೊ ಟೈರ್ಸ್, ರಿಲಯನ್ಸ್, ಹೀರೋ ಹೋಂಡಾ, ಟಾಟಾ ಐರನ್ ಮತ್ತು ಸ್ಟೀಲ್ ಕೋ (ಟಿಸ್ಕೋ), ಬಿಪಿಎಲ್, ಸ್ಟೆರ್ಲೈಟ್ ಮತ್ತು ವಿಡಿಯೋಕಾನ್‌ನಂತಹ ವಿವಿಧ ಕಂಪನಿಗಳಲ್ಲಿ ಮೆಹ್ತಾ ಹೂಡಿಕೆ ಮಾಡಿದ್ದರಿಂದ ಈ ಷೇರುಗಳ ಬೆಲೆ ಗಗನಕ್ಕೆ ಏರಿದವು. ಇದು ಸೆನ್ಸೆಕ್ಸ್‌ನಲ್ಲಿ ಅಭೂತಪೂರ್ವ ಏರಿಕೆಗೆ ಕಾರಣವಾಯಿತು. ಏಪ್ರಿಲ್ ೧೯೯೧ ಮತ್ತು ಏಪ್ರಿಲ್ ೧೯೯೨ರ ನಡುವಿನ ಅವಧಿಯಲ್ಲಿ, ಸೆನ್ಸೆಕ್ಸ್ ೧,೧೯೪ ಪಾಯಿಂಟ್‌ಗಳಿಂದ ೪,೪೬೭ಕ್ಕೆ ಏರುವ ಮೂಲಕ ಶೇಕಡಾ ೨೭೪ ರಷ್ಟು ಲಾಭ ನೀಡಿತು. ಇದು ಸೂಚ್ಯಂಕಕ್ಕೆ ಅತ್ಯಧಿಕ ವಾರ್ಷಿಕ ಆದಾಯವಾಗಿತ್ತು.

ಹಗರಣದ ಅರಿವು

[ಬದಲಾಯಿಸಿ]

ಸ್ಟಾಕ್ ಬೆಲೆಗಳು ಏರುವವರೆಗೂ ಇದು ಮುಂದುವರೆಯಿತು ಮತ್ತು ಮೆಹ್ತಾ ಅವರ ಕಾರ್ಯಾಚರಣೆಗಳ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ೨೩ ಏಪ್ರಿಲ್ ೧೯೯೨ ರಂದು, ಹಿರಿಯ ಪತ್ರಕರ್ತೆ ಸುಚೇತಾ ದಲಾಲ್ ಅವರು ಟೈಮ್ಸ್ ಆಫ್ ಇಂಡಿಯಾದ ಅಂಕಣದಲ್ಲಿ ಮೆಹ್ತಾ ಅವರು ಬಳಸಿದ ಅಕ್ರಮ ವಿಧಾನಗಳನ್ನು ಬಹಿರಂಗಪಡಿಸಿದರು. ಅವರು ಹಗರಣವನ್ನು ಬಹಿರಂಗಪಡಿಸಿದಾಗ, ಹರ್ಷದ್ ಮೆಹ್ತಾ ಅವರು ಹೇಗೆ ತಮ್ಮ ಖರೀದಿಗೆ ಹಣಕಾಸು ಒದಗಿಸಲು ಬ್ಯಾಂಕಿಂಗ್ ಲೋಪದೋಷಗಳನ್ನು ಮತ್ತು ವ್ಯವಸ್ಥೆಯನ್ನು ಅಕ್ರಮವಾಗಿ ಬಳಸಿಕೊಂಡರು ಎಂಬುದು ಬಹಿರಂಗವಾಯಿತು. ಹಗರಣವನ್ನು ಬಹಿರಂಗಪಡಿಸಿದ ಕೂಡಲೇ, ಸ್ಟಾಕ್ ಮಾರ್ಕೆಟ್ ಅಲ್ಲೋಲ ಕಲ್ಲೋಲವಾಯಿತು, ಇದು ಮೆಹ್ತಾ ಅವರ ಸಂಪತ್ತಿಗೆ ಹೊಡೆತ ನೀಡಿತು.

ಸಬ್ಸಿಡಿಯರಿ ಜನರಲ್ ಲೆಡ್ಜರ್ ಖಾತೆ(ಎಸ್‌ಜಿಎಲ್) ರೂಪದಲ್ಲಿ ಇದ್ದ ೫೦೦ ಕೋಟಿ ರುಪಾಯಿಗಳು, ಎಸ್‌ಬಿಐ ಪುಸ್ತಕಗಳಿಂದ ಕಾಣೆಯಾಗಿದೆ ಎಂದು ವರದಿಯಾದಾಗ ಹರ್ಷದ್ ಮೆಹ್ತಾಗೆ ಅಂತ್ಯದ ಆರಂಭವಾಯಿತು. ಈ ಅಸಂಗತತೆಯು, ಆರ್ ಬಿ ಐ ನೇಮಿಸಿದ ಜಂಟಿ ಸಂಸದೀಯ ಸಮಿತಿಯಾದ, ಜಾನಕಿರಾಮನ್ ಸಮಿತಿಯಿಂದ ದೊಡ್ಡ ತನಿಖೆಗೆ ಕಾರಣವಾಯಿತು. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಹಲವಾರು ಲೋಪದೋಷಗಳನ್ನು ಬಳಸುತ್ತಾ ಮೆಹ್ತಾ ಹಾಗು ಅವರ ಸಹವರ್ತಿಗಳು ಇಂಟರ್-ಬ್ಯಾಂಕ್ ವಹಿವಾಟಿನಿಂದ ಹಣವನ್ನು ತೆಗೆದು, ಅದರಿಂದ ಅನೇಕ ವಿಭಾಗಗಳಲ್ಲಿ, ಪ್ರೀಮಿಯಂನಲ್ಲಿ ಷೇರುಗಳನ್ನು ಖರೀದಿಸಿದರು. ಇದು ಬಿಎಸ್ಇ ಸೆನ್ಸೆಕ್ಸ್ನಲ್ಲಿ ಏರಿಕೆಯನ್ನು ಪ್ರಚೋದಿಸಿತು. ಈ ಯೋಜನೆಯು ಬಹಿರಂಗಗೊಂಡ ನಂತರ, ಅನೇಕ ಬ್ಯಾಂಕುಗಳಿಗೆ ತಮ್ಮ ಬಳಿ ಇದ್ದ ಬ್ಯಾಂಕ್ ರಶೀದಿಗಳು ನಿಷ್ಪ್ರಯೋಜಕವಾದದ್ದು ಎಂಬ ಅರಿವಾಯಿತು ಮತ್ತು ತಮ್ಮ ಹಣವನ್ನು ಮರುಪಾವತಿಸಲು ಮೆಹ್ತಾರನ್ನು ಒತ್ತಾಯಿಸಲು ಪ್ರಾರಂಭಿಸಿದವು. ಬ್ಯಾಂಕಿಂಗ್ ವ್ಯವಸ್ಥೆಗೆ ₹ ೪೦ ಶತಕೋಟಿ ವಂಚಿಸಲಾಗಿದೆ.

ಯಾವ ವೇಗದಲ್ಲಿ ಸ್ಟಾಕ್ ಮಾರುಕಟ್ಟೆ ಏರಿಕೆ ಕಂಡಿತ್ತೋ ಅದೇ ವೇಗದಲ್ಲಿ ಕುಸಿಯಿತು. ವಿವಿಧ ಘಟಕಗಳಿಗೆ ನಷ್ಟ ಉಂಟುಮಾಡಿದ್ದರಿಂದ, ಹೂಡಿಕೆದಾರರು ಮೆಹ್ತಾನನ್ನು ಹೊಣೆಗಾರರನ್ನಾಗಿ ಮಾಡಿದರು ಮತ್ತು ಆತನನ್ನು ಷೇರು ಮಾರುಕಟ್ಟೆಯಿಂದ ಬಹಿಷ್ಕರಿಸಿದರು. ಸುಚೇತಾ ದಲಾಲ್ ಅವರ ವರದಿಯ ನಂತರ, ಮೆಹ್ತಾ ಅವರ ಹೂಡಿಕೆದಾರರು ಅವರ ಮೇಲಿನ ನಂಬಿಕೆಯನ್ನು ಕಳೆದುಕೊಂಡರು ಮತ್ತು ಸಿಬಿಐ ಸೇರಿದಂತೆ ಹಲವಾರು ತನಿಖಾ ಸಂಸ್ಥೆಗಳು ಅವರನ್ನು ತನಿಖೆ ಮಾಡಲು ಪ್ರಾರಂಭಿಸಿದವು .

ಉನ್ನತ ಮಟ್ಟದ ಹಗರಣವು, ಅನೇಕ ಬ್ಯಾಂಕ್‌ಗಳ ಉದ್ಯೋಗಿಗಳು, ಬ್ರೋಕರೇಜ್ ಸಂಸ್ಥೆಗಳು, ಅಧಿಕಾರಿಗಳು ಮತ್ತು ರಾಜಕಾರಣಿಗಳನ್ನು ಒಳಗೊಂಡಿತ್ತು. ಎಸ್‌ಬಿಐನಲ್ಲಿನ ಅಕ್ರಮಗಳಿಗೆ ಕಾರಣವಾಗಿದ್ದ ಆರ್ ಸೀತಾರಾಮನ್ ಸೇರಿದಂತೆ, ಅವರಲ್ಲಿ ಹಲವರು ವಂಚನೆಯ ಆರೋಪದಲ್ಲಿ ಶಿಕ್ಷೆಗೊಳಗಾದರು. ತರುವಾಯ, ಸಿಟಿಬ್ಯಾಂಕ್, ಪಲ್ಲವ್ ಶೇಠ್ ಮತ್ತು ಅಜಯ್ ಕಯಾನ್ ರಂತಹ ದಲ್ಲಾಳಿಗಳು, ಆದಿತ್ಯ ಬಿರ್ಲಾ , ಹೇಮೇಂದ್ರ ಕೊಠಾರಿ ಅವರಂತಹ ಕೈಗಾರಿಕೋದ್ಯಮಿಗಳು , ಹಲವಾರು ರಾಜಕಾರಣಿಗಳು ಮತ್ತು ಆರ್‌ಬಿಐ ಗವರ್ನರ್ ಎಸ್.ವೆಂಕಟರಮಣನ್ ಎಲ್ಲರೂ ಮೆಹ್ತಾ ಅವರ ಮಾರುಕಟ್ಟೆ ಕುಶಲತೆಯನ್ನು ಅನುಮತಿಸಿದ್ದಾರೆ ಅಥವಾ ಸುಗಮಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

೯ ನವೆಂಬರ್ ೧೯೯೨ ರಂದು, ಸಿಬಿಐ ಮೆಹ್ತಾ ಮತ್ತು ಆತನ ಸಹೋದರರಾದ ಅಶ್ವಿನ್ ಹಾಗು ಸುಧೀರ್ ನನ್ನು ನಕಲಿ ಷೇರು ವರ್ಗಾವಣೆ ನಮೂನೆಗಳ ಮೂಲಕ ಸುಮಾರು ೯೦ ಕಂಪನಿಗಳ, ₹೨೫೦ ಕೋಟಿ ಷೇರುಗಳನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಬಂಧಿಸಿತು. ಆದರೆ ಮೂರು ತಿಂಗಳ ನಂತರ ಮೆಹ್ತಾ ಮತ್ತು ಆತನ ಸೋದರರಿಗೆ ಜಾಮೀನು ಸಿಕ್ಕಿದ್ದರಿಂದ ಮೆಹ್ತಾ ಶೀಘ್ರವಾಗಿ ಮರಳಿ ಬಂದು, ಷೇರು ಮಾರುಕಟ್ಟೆ ಗುರುವಾಗಿ ತಮ್ಮದೇ ವೆಬ್‌ಸೈಟ್‌ನಲ್ಲಿ ಹಾಗೂ ವಾರಪತ್ರಿಕೆಯ ಅಂಕಣದಲ್ಲಿ ಸಲಹೆಗಳನ್ನು ನೀಡಿದರು. ಮೆಹ್ತಾ ಅವರು ಹಗರಣ ಪ್ರಕರಣದಿಂದ ತಪ್ಪಿಸಿಕೊಳ್ಳಲು ಕಾಂಗ್ರೆಸ್ ಅಧ್ಯಕ್ಷ ಮತ್ತು ಪ್ರಧಾನ ಮಂತ್ರಿ ಪಿ.ವಿ ನರಸಿಂಹರಾವ್ ಅವರಿಗೆ ಮತ್ತು ಪಕ್ಷಕ್ಕೆ ₹೧೦ ಮಿಲಿಯನ್ ದೇಣಿಗೆಯನ್ನು ಪಾವತಿಸಿದ್ದಾಗಿ ಘೋಷಿಸಿದರು. ಹಗರಣದ ನಂತರ, ಹರ್ಷದ್ ಮೆಹ್ತಾ ಮತ್ತು ಅವರ ಕುಟುಂಬದ ಹೆಚ್ಚಿನ ಆಸ್ತಿಗಳನ್ನು ವಿವಿಧ ಅಧಿಕಾರಿಗಳು ಜಪ್ತಿ ಮಾಡಿದರು ಮತ್ತು ಅವರಿಗೆ ಭಾರಿ ಆದಾಯ ತೆರಿಗೆ ದಂಡ ವಿಧಿಸಲಾಯಿತು. ಹರ್ಷದ್ ಮೆಹ್ತಾ ಮತ್ತು ಅವರ ಕುಟುಂಬ ಸದಸ್ಯರ ಮೇಲೆ ೭೨ ಕ್ರಿಮಿನಲ್ ಅಪರಾಧಗಳ ಆರೋಪ ಹೊರಿಸಲಾಯಿತು ಮತ್ತು ೬೦೦ಕ್ಕೂ ಹೆಚ್ಚು ಸಿವಿಲ್ ಮೊಕದ್ದಮೆಗಳನ್ನು ದಾಖಲಿಸಲಾಯಿತು. ಅದರಲ್ಲಿ ಲಂಚ ನೀಡಿರುವುದು, ವಂಚನೆ, ಫೋರ್ಜರಿ, ಕ್ರಿಮಿನಲ್ ಪಿತೂರಿ ಸೇರಿ ಹಲವಾರು ಬಗೆಯ ಆರೋಪಗಳಿದ್ದವು.

ನಂತರ ಸೆಪ್ಟೆಂಬರ್ ೧೯೯೯ ರಲ್ಲಿ, ಬಾಂಬೆ ಹೈಕೋರ್ಟ್ ಆತನನ್ನು ತಪ್ಪಿತಸ್ಥ ಎಂದು ಘೋಷಿಸಿತು ಹಾಗೇ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ₹೨೫,೦೦೦ ದಂಡವನ್ನು ವಿಧಿಸಿತು. ೧೪ ಜನವರಿ ೨೦೦೩ ರಂದು ಭಾರತದ ಸರ್ವೋಚ್ಚ ನ್ಯಾಯಾಲಯವು, ವಿಭಾಗೀಯ ಪೀಠ ೨-೧ ನಿರ್ಧಾರದಲ್ಲಿ ಹೈಕೋರ್ಟ್‌ನ ತೀರ್ಪನ್ನು ದೃಡಪಡಿಸಿತು. ನ್ಯಾಯಮೂರ್ತಿ ಬಿ.ಎನ್ ಅಗರವಾಲ್ ಮತ್ತು ನ್ಯಾಯಮೂರ್ತಿ ಅರಿಜಿತ್ ಪಸಾಯತ್ ಅವರು ಶಿಕ್ಷೆಯನ್ನು ಎತ್ತಿ ಹಿಡಿದರೆ, ನ್ಯಾಯಮೂರ್ತಿ ಎಂ.ಬಿ ಶಾ ಅವರನ್ನು ದೋಷವಿಮುಕ್ತಿಗೊಳಿಸಲು ಮತ ಚಲಾಯಿಸಿದರು. ೩೧ ಡಿಸೆಂಬರ್, ೨೦೦೧ ರಲ್ಲಿ ತಿಹಾರ್ ಜೈಲಿನಲ್ಲಿ ಮೆಹ್ತಾ ಮರಣ ಹೊಂದಿದರು. ಸ್ವಲ್ಪ ಸಮಯದ ನಂತರ, ಅವನ ವಿರುದ್ಧದ ಎಲ್ಲಾ ಕ್ರಿಮಿನಲ್ ಮೊಕದ್ದಮೆಗಳನ್ನು ಕಡಿಮೆಗೊಳಿಸಲಾಯಿತು. ಆದರೆ ಕುಟುಂಬದಿಂದ ಬಾಕಿಯನ್ನು ವಸೂಲಿ ಮಾಡಲು ಸಾಕಷ್ಟು ಸಂಖ್ಯೆಯ ಸಿವಿಲ್ ಮೊಕದ್ದಮೆಗಳು ಹಾಗೇ ಉಳಿದಿವೆ.

ಹಗರಣದ ಪರಿಣಾಮಗಳು

[ಬದಲಾಯಿಸಿ]

ತಕ್ಷಣದ ಪರಿಣಾಮವಾಗಿ ಷೇರು ಬೆಲೆಗಳು ಮತ್ತು ಮಾರುಕಟ್ಟೆ ಸೂಚ್ಯಂಕದಲ್ಲಿ ತೀವ್ರ ಕುಸಿತವಾದ್ದರಿಂದ, ಇದು ವಾಣಿಜ್ಯ ಬ್ಯಾಂಕುಗಳು ಮತ್ತು ಆರ್‌ಬಿಐನೊಂದಿಗಿರುವ ಭದ್ರತಾ ನಿಯಂತ್ರಣ ವ್ಯವಸ್ಥೆಯ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತು. ₹೨,೫೦೦ ಶತಕೋಟಿ ಷೇರು ಮಾರುಕಟ್ಟೆಯಿಂದ, ಸುಮಾರು ₹೩೫ ಶತಕೋಟಿ ಷೇರುಗಳನ್ನು ಹಿಂತೆಗೆದುಕೊಳ್ಳಲಾಯಿತು. ಇದು ಷೇರು ಮಾರುಕಟ್ಟೆ ಕುಸಿತಕ್ಕೆ ಕಾರಣವಾಯಿತು.

ಬಾಂಬೆ ಷೇರುಮಾರುಕಟ್ಟೆಯ ಷೇರುಗಳ ವ್ಯಾಪಾರ ವ್ಯವಸ್ಥೆಯಲ್ಲಿ ನಕಲಿ ದಾಖಲೆಗಳನ್ನು ಬಳಸಲಾಯಿತು. ಇದು ಸಾರ್ವಜನಿಕರಲ್ಲಿ ಭೀತಿಯನ್ನು ಉಂಟುಮಾಡಿತು ಮತ್ತು ಬ್ಯಾಂಕುಗಳಿಗೂ ತೀವ್ರವಾಗಿ ಪರಿಣಾಮ ಬೀರಿದವು. ಮೋಸದ ಆರೋಪದಲ್ಲಿ ಸಿಲುಕಿಕೊಂಡಿರುವ ವಿವಿಧ ಬ್ಯಾಂಕ್ ಅಧಿಕಾರಿಗಳನ್ನು ತನಿಖೆ ಮಾಡಲಾಯಿತು. ಬ್ಯಾಂಕ್ ರಶೀದಿ ಹಗರಣದ ಸುದ್ದಿಯ ನಂತರ ವಿಜಯಾ ಬ್ಯಾಂಕಿನ ಅಧ್ಯಕ್ಷರು ಆತ್ಮಹತ್ಯೆ ಮಾಡಿಕೊಂಡರು.

ಈ ಹಗರಣವು ಪಿ.ಚಿದಂಬರಂ ಅವರ ರಾಜೀನಾಮೆಗೆ ಕಾರಣವಾಯಿತು. ಅವರು ಮೆಹ್ತಾಗೆ ಸಂಪರ್ಕ ಹೊಂದಿದ್ದ ಶೆಲ್ ಕಂಪನಿಗಳನ್ನು ಹೊಂದಿದ್ದಾರೆ ಎಂದು ಆರೋಪಿಸಲಾಯಿತು. ಬಾಂಬೆ ಹೈಕೋರ್ಟ್ ಮತ್ತು ಭಾರತದ ಸರ್ವೋಚ್ಚ ನ್ಯಾಯಾಲಯವು ₹೪೯.೯೯ ಬಿಲಿಯನ್ ಮೌಲ್ಯದ ಹಣಕಾಸಿನ ಹಗರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಮೆಹ್ತಾ ಅವರನ್ನು ಅಪರಾಧಿಯನ್ನಾಗಿಸಿದೆ ಹಾಗೆ ವಿವಿಧ ಬ್ಯಾಂಕ್ ಅಧಿಕಾರಿಗಳನ್ನು ಬಂಧಿಸಲಾಯಿತು. ಇದು ಬ್ಯಾಂಕಿಂಗ್ ವ್ಯವಸ್ಥೆಗಳ ಸಂಪೂರ್ಣ ಸ್ಥಗಿತಕ್ಕೆ ಕಾರಣವಾಯಿತು.

ದುರಾಸೆ ಮತ್ತು ಭ್ರಷ್ಟಾಚಾರವು ಅತ್ಯಂತ ಯಶಸ್ವಿ ವ್ಯಕ್ತಿಗಳ ಅವನತಿಗೆ ಹೇಗೆ ಕಾರಣವಾಗಬಹುದು ಎಂಬುದಕ್ಕೆ ಮೆಹ್ತಾ ಅವರ ಕಥೆ ಒಂದು ಉದಾಹರಣೆಯಾಗಿದೆ. ಅವರ ಕ್ರಮಗಳು ಭಾರತೀಯ ಆರ್ಥಿಕತೆ ಮತ್ತು ಷೇರು ಮಾರುಕಟ್ಟೆಗೆ ಸರಿಪಡಿಸಲಾಗದ ಹಾನಿಯನ್ನುಂಟುಮಾಡಿದವು. ಸರ್ಕಾರ ಮಧ್ಯಪ್ರವೇಶಿಸಿ ಮಾರುಕಟ್ಟೆಯನ್ನು ಸ್ಥಿರಗೊಳಿಸಲು ಮತ್ತು ಹೂಡಿಕೆದಾರರ ವಿಶ್ವಾಸವನ್ನು ಪುನಃಸ್ಥಾಪಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿತ್ತು.

ಜನಪ್ರಿಯ ಸಂಸ್ಕೃತಿಯಲ್ಲಿ

[ಬದಲಾಯಿಸಿ]

ಪುಸ್ತಕಗಳು

[ಬದಲಾಯಿಸಿ]

ಮೆಹ್ತಾ ಅವರ ಜೀವನ ಮತ್ತು ಅವರ ೧೯೯೨ರ ಹಗರಣವನ್ನು ಸುಚೇತಾ ದಲಾಲ್ ಮತ್ತು ದೇಬಾಶಿಸ್ ಬಸು ಅವರು, ತಮ್ಮ " ದಿ ಸ್ಕ್ಯಾಮ್: ಫ್ರಂ ಹರ್ಷದ್ ಮೆಹ್ತಾ ಟು ಕೇತನ್ ಪರೇಖ್ "ಎಂಬ ಪುಸ್ತಕದಲ್ಲಿ ಬಹಳ ವಿವರವಾಗಿ ವಿವರಿಸಿದ್ದಾರೆ .

ಚಲನಚಿತ್ರಗಳು ಮತ್ತು ದೂರದರ್ಶನ

[ಬದಲಾಯಿಸಿ]

ಅವರ ಜೀವನವನ್ನು ಆಧರಿಸಿ, ಅಪ್ಲಾಸ್ ಎಂಟರ್‌ಟೈನ್‌ಮೆಂಟ್ "ಸ್ಕ್ಯಾಮ್ ೧೯೯೨" ಎಂಬ ವೆಬ್ ಸರಣಿಯನ್ನು ನಿರ್ಮಿಸಿದೆ. ಇದು ಸುಚೇತಾ ದಲಾಲ್ ಅವರ ಪುಸ್ತಕ ದಿ ಸ್ಕ್ಯಾಮ್‌ನಿಂದ ಸ್ಫೂರ್ತಿ ಪಡೆದಿದೆ ಮತ್ತು ಇದು ಸೋನಿಲೈವ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಮೆಹ್ತಾ ಪಾತ್ರದಲ್ಲಿ ನಟ ಪ್ರತೀಕ್ ಗಾಂಧಿ ನಟಿಸಿದ್ದಾರೆ. ಇದು ವಿಶ್ವದಲ್ಲೇ ಅತಿ ಹೆಚ್ಚು ರೇಟಿಂಗ್ ಪಡೆದ ದೂರದರ್ಶನ ಕಾರ್ಯಕ್ರಮವಾಗಿದೆ.

೧೯೯೩ ರಲ್ಲಿ ಬಿಡುಗಡೆಯಾದ "ಆಂಖೇನ್" ಚಿತ್ರದಲ್ಲಿನ, ನಟವರ್ ಶಾ ಪಾತ್ರವು ಹರ್ಷದ್ ಮೆಹ್ತಾರಿಂದ ಪ್ರೇರಿತವಾಗಿದೆ.

ಮೆಹ್ತಾ ಹಗರಣವನ್ನು ಹಿಂದಿ ಚಲನಚಿತ್ರ "ಗಫ್ಲಾ"ದಲ್ಲಿ ಚಿತ್ರಿಸಲಾಗಿದೆ . ಇದು ೧೮ ನೇ ಅಕ್ಟೋಬರ್ ೨೦೦೬ ರಂದು ಟೈಮ್ಸ್ ಬಿ ಎಫ್ ಐ ೫೦ನೇ ಲಂಡನ್ ಚಲನಚಿತ್ರೋತ್ಸವದಲ್ಲಿ ಪ್ರಥಮ ಪ್ರದರ್ಶನಗೊಂಡಿತು.

ಹರ್ಷದ್ ಮೆಹ್ತಾ ಅವರನ್ನು ೧೯೯೦ರ ಅಹಮದಾಬಾದ್ ಆಧಾರಿತ ೨೦೧೮ರ "ಯೇ ಉನ್ ದಿನೋನ್ ಕಿ ಬಾತ್ ಹೈ" ಎಂಬ ದೂರದರ್ಶನ ಕಾರ್ಯಕ್ರಮದಲ್ಲಿ ಉಲ್ಲೇಖಿಸಲಾಗಿದೆ .

"ದಿ ಬುಲ್ ಆಫ್ ದಲಾಲ್ ಸ್ಟ್ರೀಟ್‌" ಎಂಬ ಹಿಂದಿ ವೆಬ್‌ಸರಣಿಯಲ್ಲಿ ಮೆಹ್ತಾ ಹಗರಣವನ್ನು ಚಿತ್ರಿಸಲಾಗಿದೆ. ಇದನ್ನು ೨೧ ಫೆಬ್ರವರಿ ೨೦೨೦ ರಂದು ಉಲ್ಲು ಆ್ಯಪ್‌ನಲ್ಲಿ ಪ್ರಥಮ ಬಾರಿಗೆ ಪ್ರದರ್ಶಿಸಲಾಯಿತು .

೨೦೨೧ ರಲ್ಲಿ, ಅಭಿಷೇಕ್ ಬಚ್ಚನ್ ನಟಿಸಿರುವ "ದಿ ಬಿಗ್ ಬುಲ್" ಚಲನಚಿತ್ರವು, ಮೆಹ್ತಾ ಅವರ ಜೀವನ ಮತ್ತು ಆರ್ಥಿಕ ಅಪರಾಧಗಳನ್ನು ಸ್ವಲ್ಪ ಮಟ್ಟಿಗೆ ಆಧರಿಸಿದೆ.

ಉಲ್ಲೇಖಗಳು

[ಬದಲಾಯಿಸಿ]

[] [] [] [] [] []

  1. https://en.wikipedia.org/wiki/Harshad_Mehta
  2. https://www.cnbctv18.com/market/scam-1992-harshad-mehta-scam-explained-7417101.htm
  3. https://en.wikipedia.org/wiki/1992_Indian_stock_market_scam
  4. https://theprint.in/theprint-profile/scapegoat-or-mastermind-of-1992-scam-harshad-mehtas-fall-from-grace-still-haunts-family/1059017/
  5. https://tradebrains.in/harshad-mehta-scam/
  6. https://beyondbollywood.co.in/harshad-mehta-biography-scam-case-net-worth/