ವಿಷಯಕ್ಕೆ ಹೋಗು

ಶ್ರೀ ಸಿದ್ಧಲಿಂಗೇಶ್ವರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶ್ರೀ ತೋಂಟದ ಸಿದ್ಧಲಿಂಗೇಶ್ವರರು
ಜನನ: ಹದಿನಾರನೇ ಶತಮಾನ
ಜನನ ಸ್ಥಳ: ಚಾಮರಾಜನಗರ ಜಿಲ್ಲೆಯ ಹರದನಹಳ್ಳಿ
ಗುರು: ಗುರು ಶ್ರೀ ಚೆನ್ನಬಸವೇಶ್ವರರು
ಶಿಷ್ಯರು:
ಸಾಹಿತ್ಯ ರಚನೆಗಳು:ಷಟ್ ಸ್ಥಲಜ್ಞಾನಸಾರಾಮೃತ.

ಎಡೆಯೂರಿನ ಶ್ರೀ ತೋಂಟದ ಸಿದ್ಧಲಿಂಗೇಶ್ವರರು ಕನ್ನಡ ನಾಡು ಕಂಡ ಅನುಭಾವಿ ಸಂತ ಶರಣರಲ್ಲಿ ಪ್ರಮುಖರು. ೧೬ನೇ ಶತಮಾನದ ಆಸು ಪಾಸು ಸಿದ್ಧಲಿಂಗೇಶ್ವರರು ಜೀವಿಸಿದ್ದ ಕಾಲ ಮಾನ.


ಹೊಯ್ಸಳರು ರಾಜ್ಯವಾಳುತ್ತಿದ್ದ ಕಾಲಕ್ಕೆ ಈಗಿನ ಹರದನಹಳ್ಳಿಯನ್ನು ತಮ್ಮ ಎರಡನೇ ರಾಜಧಾನಿಯಂತೆ ನಡೆಸಿಕೊಳ್ಳುತ್ತಿದ್ದರು ಹಾಗು ಈ ಪ್ರದೇಶಕ್ಕೆ ಎಣ್ಣೆನಾಡು ಎಂದು ಕರೆಯಲಾಗುತ್ತಿತ್ತು. ವಿವಿಧ ದಾಖಲೆಗಳು ಲಭ್ಯವಾಗಿರುವ ಪ್ರಕಾರ ಇದೇ ಪ್ರದೇಶವನ್ನು 'ಮಗ್ಗೇಯ', 'ಮಾರ್ಗೆಯ್', 'ವಾಣಿಜ್ಯ ಪುರಿ' ಎಂಬ ಹೆಸರುಗಳಿಂದಲೂ ಕರೆಯಲಾಗಿದೆ. ಆದರೆ ಎಲ್ಲಕ್ಕೂ ಮುಂಚಿನ ದಾಖಲೆ ಮೂರನೇ ಬಲ್ಲಾಳನ ಕ್ರಿ.ಶ ೧೩೪೫ ರ ಶಾಸನದಲ್ಲಿ ಈ ಹಳ್ಳಿಯನ್ನು ಮಗ್ಗೇಯ ಎಂದು ಹೆಸರಿಸಲಾಗಿದೆ. ಆದರೆ ಆದೇ ಸಮಯದ ಇನ್ನೊಂದು ತಾಮ್ರದ ಶಾಸನ ಅಡೆ ಹಳ್ಳಿಯನ್ನು 'ವಾಣಿಜ್ಯ ಪುರಿ' ಎಂದೂ ಸಂಭೋದಿಸಿದೆ. 'ವಾಣಿಜ್ಯ ಪುರಿ' ಎಂಬುದು ಸಂಸ್ಕೃತ ಪದವಾಗಿದ್ದು ಅದರದ್ದೇ ಕನ್ನಡ ಪದ 'ಹರದನ ಹಳ್ಳಿ'ಯೂ ಚಾಲ್ತಿಯಲ್ಲಿತ್ತು. ಹರದ ಎಂದರೆ ವ್ಯಾಪಾರಿ ಎಂದರ್ಥ.ಶೈವ ಸಮುದಾಯದ ವ್ಯಾಪಾರಿಗಳನ್ನು ಆ ಪ್ರದೇಶದಲ್ಲಿ 'ವಾಣಿಜ' ರು ಎಂದು ಕರೆಯಲಾಗುತ್ತಿತ್ತು. ಇವರ ವ್ಯಾಪಾರ ಪ್ರಮುಖವಾಗಿ ತಮಿಳುನಾಡಿನೊಂದಿಗೆ ಇರುತ್ತಿತ್ತು, ಆದರಿಂದ ಈ ಹಳ್ಳಿಗೆ ಹರದನ ಹಳ್ಳಿ ಎಂದು ಹೆಸರು ಬಂದಿರಬಹುದು ಎಂದೂ ತರ್ಕಗಳಿವೆ.

ವೀರಶೈವ ಪಂಥದಲ್ಲಿ ಹರದನಹಳ್ಳಿ ಬಹು ಮುಖ್ಯವಾದದ್ದು. ವೀರಶೈವ ಮಠ ಗಳಲ್ಲಿ ಒಂದಾದ ಶೂನ್ಯ ಸಿಂಹಾಸನ ಪರಂಪರೆಯ ನಿರಂಜನ ಪೀಠ ಈ ಹರದನಹಳ್ಳಿಯ ಮೂಲದ್ದೇ.ಆ ಮಠ ಜನ ಸಾಮಾನ್ಯರಿಂದ ಹರದನಹಳ್ಳಿ ಮಠವೆಂದೇ ಕರೆಸಿಕೊಳ್ಳುತ್ತದೆ. ಅನಾದಿ ಜ್ಞಾನೇಶ್ವರರು ಈ ಮಠದ ಪ್ರಥಮ ಪೀಠಾಧಿಪತಿಗಳು. ಇವರು ಶೂನ್ಯ ಸಿಂಹಾಸನದ ನಾಲ್ಕನೇ ಪೀಠಾಧಿಪತಿಗಳೂ ಹೌದು. ಅಲ್ಲಮಪ್ರಭು, ಚನ್ನಬಸವಣ್ಣ ಹಾಗು ಸೊನ್ನಲಿಗೆ ಸಿದ್ಧರಾಮರು ಅಲಂಕರಿಸಿದ ಶೂನ್ಯ ಪೀಠವನ್ನು ಅಲಂಕರಿಸಿದ್ದ ನಾಲ್ಕನೇ ಶೂನ್ಯ ಸಿಂಹಾಸನಾಧ್ಯಕ್ಷರು. ಇದೇ ಮಠದ ಪರಂಪರೆಯನ್ನು ಇದೀಗ ನಾವು ಕುಂತೂರು, ಸಾಲೂರು, ಗುಬ್ಬಿ,ಸಿದ್ದಗಂಗೆ ಹಾಗು ಎಡೆಯೂರುಗಳಲ್ಲಿ ಕಾಣಬಹುದಾಗಿದೆ.

ಜನನ ಮತ್ತು ಬಾಲ್ಯ[ಬದಲಾಯಿಸಿ]

ಶ್ರೀ ಸಿದ್ಧಲಿಂಗೇಶ್ವರರು ಜನಿಸಿದ್ದು ಈಗಿನ ಚಾಮರಾಜ ನಗರ ಜಿಲ್ಲೆಯ, ಅದೇ ತಾಲೂಕಿನ ಹರದನ ಹಳ್ಳಿ ಎಂಬ ಗ್ರಾಮದಲ್ಲಿ.ಮಲ್ಲಿಕಾರ್ಜುನ ಮತ್ತು ಜ್ಞಾನಾಂಬೆ ಎಂಬ ಶಿವ ಶರಣ ದಂಪತಿಗಳಿಗೆ ವಿವಾಹವಾಗಿ ಬಹಳ ಕಾಲಗಳು ಉರುಳಿದರೂ ಸಂತಾನ ಭಾಗ್ಯವಿರಲಿಲ್ಲ. ಇದಕ್ಕಾಗಿ ನಿತ್ಯವೂ ಭಕ್ತಿ ಭಾವಗಳಿಂದ ಶಿವನನ್ನು ಪ್ರಾರ್ಥಿಸುತ್ತಾ , ಅತಿಥಿ, ಯೋಗಿಗಳ ಸೇವೆಯನ್ನು ಶ್ರದ್ಧಾ ಭಕ್ತಿಗಳಿಂದ ಮಾಡಿಕೊಂಡು ಜೀವನ ನಡೆಸಿಕೊಂಡು ಹೋಗುವಾಗಲೇ ಅವರಿಗೆ ಸಿದ್ಧಲಿಂಗೇಶ್ವರರ ಜನನವಾಗುತ್ತದೆ.


ಗುರುಕುಲದಲ್ಲಿ ಸಿದ್ಧಲಿಂಗೇಶ್ವರರು[ಬದಲಾಯಿಸಿ]

ಸಿದ್ಧಲಿಂಗೇಶ್ವರರು ಎಂಟು ವರ್ಷದವರಾಗಿದ್ದಾಗ ಅವರ ತಂದೆ ತಾಯಿಗಳು ಅವರನ್ನು ಚೆನ್ನಬಸವೇಶ್ವರರ ಗೋಸಲ ಮಠಕ್ಕೆ ವಿಧ್ಯಾಭ್ಯಾಸಕಾಗಿ ಕಳುಹಿಸುತ್ತಾರೆ.ಅಧ್ಯಾತ್ಮಿಕ, ದೈವೀಕ ಜ್ಞಾನಗಳಲ್ಲಿ ತನ್ನ ವಯಸ್ಸಿಗೆ ಮೀರಿದ ಜ್ಞಾನಿಯಾಗಿದ್ದ ಬಾಲಕ ಸಿದ್ದಲಿಂಗನನ್ನು ಕಂಡು ಗುರು ಚೆನ್ನ ಬಸವೇಶ್ವರರು ಆಶ್ಚರ್ಯ ಚಕಿತರಾಗುತ್ತಾರೆ.ಗುರುಗಳು ಕೂಡಲೇ ಬಾಲಕನಿಗೆ ಸನ್ಯಾಸತ್ವ ದೀಕ್ಷೆ ನೀಡಿ, ತಮ್ಮ ಶಿಷ್ಯನನ್ನಾಗಿ ಸ್ವೀಕರಿಸುತ್ತಾರೆ.

ಲೋಕ ಸಂಚಾರ ಮತ್ತು ಜ್ಞಾನ ಭೋದನೆಗಳು[ಬದಲಾಯಿಸಿ]

ಹಳೆಯ ಗುರುಕುಲ ಪದ್ಧತಿಯಲ್ಲಿ ತರಗತಿಗಳಿಗೆ ಹಾಜರಾಗಿ ಪಡೆಯುವ ಜ್ಞಾನಕ್ಕಿಂತ ಲೋಕ ಸಂಚಾರ ಮಾಡುತ್ತಾ ಗಳಿಸುವ ಜ್ಞಾನ ಮಹತ್ತರವಾದದ್ದು ಎಂಬ ನಂಬಿಕೆಯಿತ್ತು. ಹೀಗಾಗಿ ಲೋಕ ಸಂಚಾರ ಮಾಡುತ್ತಲು ಜ್ಞಾನ ಸಂಪಾದಿಸಿಕೊಳ್ಳುವುದು ಶಿಕ್ಷಣದ ಒಂದು ಮುಖ್ಯ ಭಾಗವಾಗಿತ್ತು. ಅದೇ ರೀತಿ ಸಿದ್ಧಲಿಂಗೇಶ್ವರರು ಚೆನ್ನ ಬಸವೇಶ್ವರರ ಮಾರ್ಗದರ್ಶನದಲ್ಲಿ ವಿಧ್ಯಾಭ್ಯಾಸ ಮುಗಿಸಿದ ಮೇಲೆ, ಗುರುಗಳ ಅಪ್ಪಣೆಯ ಮೇರೆಗೆ ಲೋಕ ಸಂಚಾರ ಹೊರಟು ನಿಲ್ಲುತ್ತಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದ ವರೆವಿಗೂ, ಪಶ್ಚಿಮಘಟ್ಟಗಳಿಂದ ಅರುಣಾಚಲ ಪ್ರದೇಶದ ವರೆವಿಗೂ ಇಡೀ ಭಾರತವನ್ನು ಸಂಚಾರ ಮಾಡಿ ಶಿವಯೋಗ, ಶಿವಭಕ್ತಿಯನ್ನು ಪ್ರಸಾರ ಮಾಡುವ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ.

ವಚನಗಳು[ಬದಲಾಯಿಸಿ]

ಹನ್ನೆರಡನೆ ಶತಮಾನದಲ್ಲಿ ಕಲ್ಯಾಣದಲ್ಲಿ ನಡೆದಿದ್ದ ವಚನ ಕ್ರಾಂತಿಯ ಕೀರ್ತಿಗೆ ಪುನಶ್ಚೇತನ ನೀಡಿದ ಸಿದ್ಧಲಿಂಗೇಶ್ವರರು 'ಷಟ್ ಸ್ಥಲ ಜ್ಞಾನ ಸಾರಾಮೃತ' ಎಂಬ ವಚನ ಸಂಚಿಕೆಯನ್ನು ರಚಿಸಿದರು. ೭೦೧ ವಚನಗಳಿಂದ ಕೂಡಿದ್ದ ಈ ಗ್ರಂಥ ಷಟ್ (ಆರು) ಸ್ಥಳಗಳನ್ನು(ಮೂಲಗಳನ್ನು) ಐಕ್ಯದೆಡೆಗೆ ಕೊಂಡೊಯ್ಯುವ ವಿಚಾರಗಳಿಂದ ಕೂಡಿದ ಗ್ರಂಥವಾಗಿದೆ. ಸಿದ್ದಲಿಂಗೇಶ್ವರರ ಅಂಕಿತ 'ಮಹಾಲಿಂಗ ಗುರು ಶ್ರೀ ಸಿದ್ದೇಶ್ವರ ಪ್ರಭು'.

ವಚನ ೧ :

ಆದಿ ಅನಾದಿಗಳಿಲ್ಲದಂದು
ನಾದ ಬಿಂದು ಕಲೆ ಮೊಳೆದೋರದಂದು
ದೇಹ ದೇಹಿಗಳು ಉತ್ಪತ್ತಿಯಾಗದಂದು
ಜೀವಾತ್ಮ ಪರಮಾತ್ಮರಿಲ್ಲದಂದು
ಸಕಲ ಚರಾಚರಗಳಿಲ್ಲದಂದು
ಇವೇನೂ ಇಲ್ಲದಂದು
ನೀನು ಶೂನ್ಯನಾಗಿದ್ದೆ ಅಯ್ಯಾ
ಮಹಾಲಿಂಗ ಗುರು ಸಿದ್ದೇಶ್ವರ ಪ್ರಭುವೇ.


ವಚನ ೨ :

ಒಳಗೆ ನೋಡಿದರೆ ಒಳಗೆ ಬಯಲು
ಹೊರಗೆ ನೋಡಿದರೆ ಹೊರಗೂ ಬಯಲು
ನೆನೆವೆನೆಂದರೆ ನೋಡಾ ಮನ ಬಯಲು
ನೆನೆಸಿಕೊಂಬೆನೆಂದರೆ ನೀನಿಲ್ಲವಾದೆ ನಾ
ಬಯಲು ನೀ ಬಯಲು ನೋಡಾ
ಭಾವಿಸಿಕೊಂಬ ವಸ್ತು ಇನ್ನಿಲ್ಲವಾಗಿ
ಭಾವ ಬಯಲೆಂಬೆನು ನೋಡಾ
ಮಹಾಲಿಂಗ ಗುರು ಸಿದ್ಧೇಶ್ವರ ಪ್ರಭುವೇ.


ವಚನ ೩ :

ಭಕ್ತಸ್ಥಲ ಮಹೇಶ್ವರಸ್ಥಲದಲ್ಲಡಗಿ
ಮಹೇಶ್ವರಸ್ಥಲ ಪ್ರಸಾದಸ್ಥಲದಲ್ಲಡಗಿ
ಪ್ರಸಾದಸ್ಥಲ ಪ್ರಾಣಲಿಂಗಸ್ಥಲದಲ್ಲಡಗಿ
ಪ್ರಾಣಲಿಂಗಸ್ಥಲ ಶರಣಲಿಂಗಸ್ಥಲದಲ್ಲಡಗಿ
ಶರಣ ಸ್ಥಲ ಐಕ್ಯದಲ್ಲಡಗಿ
ಇಂತಿ ಷಡಾಂಗ ಯೋಗ ಸಮರಸವಾಗಿ
ಷಡ್ ಸ್ಥಲವ ಮೀರಿ ನಿರವಯಸ್ಥಲವ ನೇಯ್ದು
ಆ ನಿರವಯ ಸ್ಥಲವ ನಿರಾಳದಲ್ಲಡಗಿ
ಆ ನಿರಾಳ ನಿತ್ಯ ನಿರಂಜನ ಪರವಸ್ತು ತಾನಾಯತ್ತಾಗಿ
ಕ್ರಿಯಾ ನಿಷ್ಪತ್ತಿ, ಜ್ಞಾನ ನಿಷ್ಪತ್ತಿ, ಭಾವ ನಿಷ್ಪತ್ತಿ,
ಮಾಡುವ ಕ್ರಿಯೆಗಳೆಲ್ಲ ನಿಷ್ಪತ್ತಿಯಾಗಿ ಅರಿವ
ಅರುಹೆಲ್ಲ ಅಡಗಿ ಭಾವಿಸುವ ಭಾವವೆಲ್ಲ
ನಿರ್ಭಾವವಾಗಿ ನಿರ್ಲೇಪ ನಿರಂಜನ ವಸ್ತು
ತಾನು ತಾನಾದಲ್ಲದೇ ಧ್ಯಾನಿಸಲಿಕ್ಕೇನು ಇಲ್ಲ
ಮಹಾಲಿಂಗ ಗುರು ಶಿವ ಸಿದ್ಧೇಶ್ವರ ಪ್ರಭುವೇ.


ಪವಾಡಗಳು[ಬದಲಾಯಿಸಿ]

ಎಡೆಯೂರು ಸಿದ್ಧಲಿಂಗೇಶ್ವರ ದೇವಾಲಯದ ಗೋಪುರ, ಎಡೆಯೂರು, ಕುಣಿಗಲ್ ತಾಲೂಕು, ತುಮಕೂರು ಜಿಲ್ಲೆ.

ಈಗಿನ ತುಮಕೂರು ಜಿಲ್ಲೆಯ ಕಗ್ಗೆರೆ ಗ್ರಾಮ ಹಾಗು ಸುತ್ತಮುತ್ತಲಿನ ಗ್ರಾಮಗಳಿಗೆ ಮಾಂಡಲೀಕರಾಗಿದ್ದವರು ವಕ್ಕಲಿಗರ ನಂಬಿಯನ. ಸಿದ್ಧಲಿಂಗೇಶ್ವರರು ಲೋಕ ಸಂಚಾರ ಮಾಡುತ್ತಾ ಈ ನಂಬಿಯನ ತೋಟದಲ್ಲಿ ಬೀಡು ಬಿಡುತ್ತಾರೆ. ಅದಾಗಲೇ ಸಿದ್ಧಲಿಂಗೇಶ್ವರರ ಬಗ್ಗೆ ಕೇಳಿ ತಿಳಿದಿದ್ದ ನಂಬಿಯನ ಖುದ್ದು ತಾನೇ ಬಂದು ಸ್ವಾಮಿಯವರನ್ನು ಭೇಟಿಯಾಗುತ್ತಾನೆ ಹಾಗು ತಮ್ಮ ಮನೆಗೆ ಆಗಮಿಸಿ ಆತಿಥ್ಯವನ್ನು ಸ್ವೀಕರಿಸಿ ಊರಿನ ಜನಗಳನ್ನು ಆಶಿರ್ವದಿಸಬೇಕಾಗಿ ಕೇಳಿಕೊಳ್ಳುತ್ತಾನೆ. ಇದಕ್ಕೆ ಒಪ್ಪಿದ ಸಿದ್ಧಲಿಂಗೇಶ್ವರರು ಮತ್ತೊಮ್ಮೆ ನಂಬಿಯನ ಬಂದು ಕರೆಯುವವರೆಗೂ ತಾವು ಅದೇ ತೋಟದಲ್ಲಿ ಇರುವುದಾಗಿ ತಿಳಿಸುತ್ತಾರೆ. ಸಂತೋಷದಿಂದ ನಂಬಿಯನ ತನ್ನ ಮನೆಗೆ ಹಿಂದಿರುಗಿ ಸ್ವಾಮಿಯವರ ಸೇವೆಗೆ ಅಣಿ ಮಾಡಲು ಮೊದಲಾಗುತ್ತಾನೆ. ಇದೇ ಸಮಯಕ್ಕೆ ಬಹಳ ವರ್ಷಗಳಿಂದ ಆ ಊರಿನೊಂದಿಗೆ ವೈರತ್ವ ಸಾಧಿಸುತ್ತಿದ್ದ ದಕ್ಷಿಣ ಪ್ರಾಂತ್ಯದ ಗುಡ್ಡಗಾಡು ಪ್ರದೇಶದ ಬೇಡರ ಗುಂಪು ಕಗ್ಗೆರೆ ಮತ್ತಿತರ ಪ್ರದೇಶಗಳ ಮೇಲೆ ಯುದ್ಧ ಸಾರುತ್ತದೆ. ಯುದ್ಧದಲ್ಲಿ ಪ್ರಬಲರಾಗಿದ್ದ ಬೇಡರ ಪಡೆ ಯುದ್ಧದಲ್ಲಿ ವಿಜಯಿಗಳಾಗಿ ಅಲ್ಲಿನ ಮಾಂಡಲೀಕರು ಸೇರಿದಂತೆ ಎಲ್ಲರನ್ನು ಸೆರೆಯಾಳುಗಳನ್ನಾಗಿ ಹೊತ್ತೊಯ್ಯಲಾಗುತ್ತದೆ. ಮುಂದೆ ಈ ಸಂಕಷ್ಟದಿಂದ ಪಾರಾಗಲು ಅವರಿಗೆ ಸುಮಾರು ಹನ್ನೆರಡು ವರ್ಷಗಳೇ ಬೇಕಾಗುತ್ತವೆ. ಇಷ್ಟು ಸುಧೀರ್ಘ ಅವಧಿ ಬಂಧನದಲ್ಲಿ ಕಳೆದಿದ್ದ ಅವರ್ಯಾರಿಗೂ ನಂಬಿಯನು ಸಿದ್ಧಲಿಂಗೇಶ್ವರರನ್ನು ಆಹ್ವಾನಿಸಿದ ವಿಷಯ ನೆನಪೇ ಇರಲಿಲ್ಲ.

ಬಂಧನಮುಕ್ತರಾಗಿ ಊರಿಗೆ ಹಿಂದಿರುಗಿದ ಎಲ್ಲರಿಗೂ ನಂಬಿಯನ ತೋಟದಲ್ಲಿ ಹುತ್ತ ಬೆಳೆದಿರುವುದು ಕಂಡಿತ್ತು. ಆದರೆ ಅದರ ಬಗ್ಗೆ ಯಾರು ಹೆಚ್ಚಾಗಿ ತಲೆ ಕೆಡಿಸಿಕೊಳ್ಳಲು ಹೋಗಲಿಲ್ಲ. ಆದರೆ ಅಲ್ಲೊಂದು ಆಶ್ಚರ್ಯ ನಡೆಯಲು ಶುರುವಾಗುತ್ತದೆ. ಮೇಯಲು ಬಿಟ್ಟಿದ್ದ ದನಗಳ ಗುಂಪಿನಿಂದ ತಪ್ಪಿಸಿಕೊಂಡ ಹಸುವೊಂದು ಬಿರುಸಾಗಿ ಓಡಿ ನಂಬಿಯನ ತೋಟದಲ್ಲಿರುವ ಹುತ್ತದ ಮೇಲೇರಿ ತನ್ನಷ್ಟಕ್ಕೆ ತಾನೇ ಹುತ್ತಕ್ಕೆ ಹಾಲು ಕರೆಯಲು ಆರಂಭಿಸುತ್ತದೆ. ಇದನ್ನು ಆರಂಭದಲ್ಲಿ ಕಂಡ ಅಲ್ಲಿನ ದನಗಾಹಿಗಳು ಅದನ್ನು ಹಗುರವಾಗಿ ಪರಿಗಣಿಸಿದ್ದರು, ಆದರೆ ಹಸುಗಳು ಸರತಿಯ ಪ್ರಕಾರ ದಿನವೂ ಹೋಗಿ ಸ್ವಪ್ರೇರಿತವಾಗಿ ನಂಬಿಯನ ತೋಟದಲ್ಲಿರುವ ಹುತ್ತಕ್ಕೆ ಹಾಲು ಎರೆಯುವುದನ್ನು ಕಂಡು ಅಲ್ಲೇನೂ ವಿಶೇಷವಿರಬಹುದು ಎಂದು ಭಾವಿಸಿದ ದನಗಾಹಿಗಳು ಹುತ್ತವನ್ನು ಒಡೆಯಲು ಮುಂದಾಗುತ್ತಾರೆ. ಆದರೆ ಅಲ್ಲಿ ಭಯಂಕರ ವಿಷ ಸರ್ಪಗಳು ಓಡಾಡುತ್ತಿದುದನ್ನು ಕಂಡು ಭಯದಿಂದ ದೂರ ಸರಿದು ಈ ವಿಷಯವನ್ನು ಕೂಡಲೇ ಊರಿಗೆ ತಿಳಿಸುತ್ತಾರೆ. ಊರ ಜನರ ಸಮೇತ ನಂಬಿಯನ ತೋಟಕ್ಕೆ ಬಂದು ಕೂಲಂಕುಶವಾಗಿ ಹುತ್ತದ ಹತ್ತಿರ ನಿಂತು ಪರಿಶೀಲಿಸಿದಾಗ ಹುತ್ತದ ಒಳಗಿಂದ 'ಓಂ ನಮಃ ಶಿವಾಯ' ಎಂದು ಶಿವ ಪಂಚಾಕ್ಷರಿ ಮಂತ್ರ ನಿರಂತರವಾಗಿ ಕೇಳಿಬರುತ್ತಿದ್ದುದನ್ನು ಗ್ರಹಿಸುತ್ತಾರೆ. ಊರಿನ ಜನರೆಲ್ಲಾ ಇಲ್ಲಿ ಯಾರೋ ಮಹಾತ್ಮರು ತಪಸ್ಸು ಮಾಡುತ್ತಿರಬಹುದು ಎಂದು ತಮ್ಮ ತಮ್ಮಲ್ಲೇ ಮಾತಾಡಿಕೊಂಡಾಗ ನಂಬಿಯನ ತಾನು ಸಿದ್ಧಲಿಂಗೇಶ್ವರರಿಗೆ ವರ್ಷಾನು ಗಟ್ಟಲೆಗಳ ಹಿಂದೆ ಕೊಟ್ಟಿದ್ದ ವಚನ ಜ್ಞಾಪಕವಾಗುತ್ತದೆ. ತನ್ನಿಂದ ಅತಿ ದೊಡ್ಡ ಪ್ರಮಾದವಾಗಿ ಈ ಅಚಾತುರ್ಯಕ್ಕೆ ಕಾರಣವಾಯಿತು ಎಂದು ಬಹಳ ಬೇಸರ ಪಟ್ಟುಕೊಳ್ಳುತ್ತಾನೆ. ಕೂಡಲೇ ಹುತ್ತದ ಹೊರಗೆ ನಿಂತುಕೊಂಡೆ ಸಿದ್ಧಲಿಂಗೇಶ್ವರರನ್ನು ಕರೆಯುತ್ತಾನೆ. ಅದಕ್ಕೆ ಪ್ರತಿಕ್ರಿಯಿಸುವ ಸಿದ್ಧಲಿಂಗೇಶ್ವರರು ತನ್ನ ಸುತ್ತಲು ಇರುವ ಹುತ್ತದಲ್ಲಿ ಅನೇಕ ಜೀವಿಗಳು ವಾಸಿಸುತ್ತಿರುವುದರಿಂದ ಹುತ್ತವನ್ನು ಒಡೆದರೆ ಅವುಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ಅವುಗಳು ಈ ಸ್ಥಳ ಬಿಟ್ಟು ತೆರಳಿದ ನಂತರ ನೀವು ಹುತ್ತವನ್ನು ಕೆಡವಬಹುದು ಎಂದು ಆಜ್ಞಾಪಿಸುತ್ತಾರೆ. ಅಪ್ಪಣೆ ಅನುಸರಿಸಲು ಅಲ್ಲೇ ನಿಲ್ಲುವ ನಂಬಿಯನ ಅಲ್ಲಿನ ವಿಷಪೂರಿತ ಹಾವುಗಳು, ಇಲಿ ಹೆಗ್ಗಣಗಳು, ಕಪ್ಪೆಗಳು, ಗೆದ್ದಲು ಹುಳುಗಳು, ಮುಂತಾದ ಜೀವಿಗಳು ಆ ಹುತ್ತವನ್ನು ತೊರೆಯುವ ತನಕ ಕಾದು ಅನಂತರ ಇದೇ ಹುತ್ತವನ್ನು ಹಸುವಿನ ಹಾಲಿನಿಂದ ಕರಗಿಸಿ ತನ್ನಿಂದ ಆದ ಪ್ರಮಾದವನ್ನು ಮನ್ನಿಸುವಂತೆ ಸಿದ್ಧಲಿಂಗೇಶ್ವರರನ್ನು ಭಿನ್ನವಿಸಿಕೊಳ್ಳುತ್ತಾನೆ. ಭಕ್ತನೊಬ್ಬನಿಗೆ ಕೊಟ್ಟ ಮಾತು ಉಳಿಸಿಕೊಳ್ಳುವ ಸಲುವಾಗಿ ಕುಳಿತ ಜಾಗದಿಂದ ಕದಲದೇ ಹನ್ನೆರಡು ವರ್ಷಗಳ ಕಾಲ ತೋಟವೊಂದರಲ್ಲಿ ತಪೋನಿಷ್ಠರಾಗಿದ್ದ ಸಿದ್ಧಲಿಂಗೇಶ್ವರರು ಜಗತ್ತು ಕಂಡ ಮಹಾ ಶರಣ ಹಾಗು ಪವಾಡ ಪುರುಷ, ಹಾಗಾಗಿ ಅವರಿಗೆ ‘ತೋಂಟದ ಸಿದ್ಧಲಿಂಗೇಶ್ವರ’ ಎಂಬ ಹೆಸರು ಪ್ರಾಪ್ತವಾಯಿತು.

ಮಹಾ ನಿರ್ವಾಣ[ಬದಲಾಯಿಸಿ]

ಮಹಾ ಪವಾಡ ಪುರುಷರಾದ ಯತಿಗಳು ಲಿಂಗೈಕ್ಯರಾಗಿದ್ದು ಈಗಿನ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಎಡೆಯೂರಿನಲ್ಲಿ. (ಕಲ್ಕೆರೆಯಲ್ಲಿಯೇ ಅವರು ಐಕ್ಯರಾದುದು ಅಂತಲೂ ಜನ ಹೇಳುತ್ತಾರೆ.)


ಆಕರಗಳು[ಬದಲಾಯಿಸಿ]

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: