ಎಸ್.ಎಸ್.ಬಸವನಾಳ
ಎಸ್.ಎಸ್.ಬಸವನಾಳ ಅಂದರೆ ಶಿವಲಿಂಗಪ್ಪ ಶಿವಯೋಗಪ್ಪ ಬಸವನಾಳರು ೧೮೯೩ ನವೆಂಬರ ೭ ರಂದು ಹಾವೇರಿಯಲ್ಲಿ ಜನಿಸಿದರು. ಇವರ ತಂದೆ ರೇಲ್ವೆ ಸ್ಟೇಶನ್ ಮಾಸ್ತರ ಆಗಿದ್ದು ಬಳ್ಳಾರಿಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಇವರ ಪ್ರಾಥಮಿಕ ವಿದ್ಯಾಭ್ಯಾಸ ತೆಲಗಿನಲ್ಲಿ ಆಯಿತು. ಗದಗ ಮತ್ತು ಧಾರವಾಡಗಳಲ್ಲಿ ಮಾಧ್ಯಮಿಕ ಶಿಕ್ಷಣ ಪಡೆದರು. ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಇತಿಹಾಸ ಮತ್ತು ಅರ್ಥಶಾಸ್ತ್ರ ವಿಷಯಗಳನ್ನು ಅಭ್ಯಸಿಸಿ, ಕ್ರಿ.ಶ.೧೯೧೪ರಲ್ಲಿ ಬಿ.ಏ. ಪದವಿ ಪಡೆದರು.ಇದೆ ವರ್ಷ ಇವರ ತಂದೆ ಹಾಗು ತಾಯಿ ನಿಧನರಾದರು. ಧೃತಿಗೆಡದ ಬಸವನಾಳರು ಮುಂಬಯಿಯಲ್ಲಿ 'ವೀರಶೈವ ಆಶ್ರಮ'ದಲ್ಲಿಇದ್ದುಕೊಂಡು ೧೯೧೬ರಲ್ಲಿ ಎಮ್.ಏ.ಪದವಿ ಪಡೆದರು.
ಶಿಕ್ಷಣ ಪ್ರಸಾರ ಹಾಗು ಉದ್ಯೋಗ
[ಬದಲಾಯಿಸಿ]ಶಿಕ್ಷಣಪ್ರಸಾರದಲ್ಲಿ ಆಸಕ್ತರಾದ ಬಸವನಾಳರು ಉತ್ಸಾಹಿ ಮಿತ್ರರ ಜೊತೆಗೂಡಿ ೧೯೧೬ ಅಕ್ಟೋಬರ ೧೧ ರಂದು ಬೆಳಗಾವಿಯಲ್ಲಿ ಕರ್ನಾಟಕ ಲಿಂಗಾಯತ ಎಜುಕೇಶನ್ ಸೊಸಾಯಿಟಿಯನ್ನು ಸ್ಥಾಪಿಸಿದರು. ಅದರ ಅಂಗವಾಗಿ ೧೯೧೬ ನವೆಂಬರ ೧೧ ರಂದು ಗಿಲಗಂಟಿ-ಅರಟಾಳ ಹೈಸ್ಕೂಲನ್ನು ಸ್ಥಾಪಿಸಿದರು. ಸಂಸ್ಥೆಯ ಸ್ಥಾಪನೆಗೆ ನೆರವು ನೀಡಿದ ರಾವಬಹಾದ್ದೂರ ಆರ್.ಸಿ.ಅರಟಾಳ ಮತ್ತು ರಾವಬಹಾದ್ದೂರ ಗಿಲಗಂಟಿಯವರ ಸಂಯುಕ್ತ ಹೆಸರನ್ನೆ ಈ ಹೈಸ್ಕೂಲಿಗೆ ಇಡಲಾಗಿದೆ. ಬಸವನಾಳರು ಸೊಲ್ಲಾಪುರ,ಅಕ್ಕಲಕೋಟೆ, ಮಂಗ್ರೋಳಿ ಹಾಗು ಬಾರ್ಸಿಗಳಲ್ಲಿ ಸಹ ಕನ್ನಡ ಮಾಧ್ಯಮಿಕ ಶಾಲೆಗಳನ್ನು ಪ್ರಾರಂಭಿಸಿದರು.( ಬೆಳಗಾವಿ, ಸೊಲ್ಲಾಪುರ ಮೊದಲಾದ ಈ ಎಲ್ಲ ಊರುಗಳು ಆಗ ಮುಂಬಯಿ ಪ್ರಾಂತದಲ್ಲಿದ್ದವು).ಬೆಳಗಾವಿಯ ಹೈಸ್ಕೂಲಿನಲ್ಲಿ ಹಾಗು ಲಿಂಗರಾಜ ಕಾಲೇಜಿನಲ್ಲಿ ಬಸವನಾಳರು ಶಿಕ್ಷಕರಾಗಿ, ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು.
ಬಸವನಾಳರು ಧಾರವಾಡದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಕಾರ್ಯಕಾರಿ ಮಂಡಳದ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಹಾಗು ಕಾರ್ಯಾಧ್ಯಕ್ಷರಾಗಿ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ. ೧೯೩೦ರಲ್ಲಿ ಈ ಸಂಸ್ಥೆಯ ಅಂಗವಾಗಿ 'ಸಾಹಿತ್ಯ ಸಮಿತಿ'ಯನ್ನು ಪ್ರಾರಂಭಿಸಿ, ಅದರ ಕಾರ್ಯಾಧ್ಯಕ್ಷರಾಗಿ ಅನೇಕ ಉಪಯುಕ್ತ ಗ್ರಂಥಗಳನ್ನು ಪ್ರಕಟಿಸಿದ್ದಾರೆ.
೧೯೨೩ರಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಆಜೀವ ಸದಸ್ಯರಾದರು. ಈ ಸಂಸ್ಥೆಯ ಪರವಾಗಿ ಬಸವನಾಳರು ನಾಗವರ್ಮನ ಕಾವ್ಯಾವಲೋಕನ ಹಾಗು ಭಟ್ಟಾಕಲಂಕದೇವನ ಶಬ್ದಾನುಶಾಸನ ಗ್ರಂಥಗಳನ್ನು ಸಂಪಾದಿಸಿ ಪ್ರಕಟಿಸಿದರು.
೧೯೨೯ ರಿಂದ ೧೯೩೮ ರವರೆಗೆ ಬಸವನಾಳರು ಮುಂಬಯಿ ವಿಶ್ವವಿದ್ಯಾಲಯದ ಫೆಲೊ ಆಗಿದ್ದರು. ಅಲ್ಲದೆ ಸುಮಾರು ೨೦ ವರ್ಷ ಕಾಲ ಕನ್ನಡ ಪಠ್ಯ ಪುಸ್ತಕ ಸಮಿತಿಯ ಸದಸ್ಯರಾಗಿ ದುಡಿದಿದ್ದಾರೆ.
೧೯೧೮ ರಿಂದ ೧೯೨೭ ರವರೆಗೆ ಬೆಳಗಾವಿಯಲ್ಲಿ ಪ್ರಬೋಧ ಎಂಬ ಮಾಸಿಕವನ್ನು ನಡೆಯಿಸಿದರು. ಧಾರವಾಡದ ಜಯಕರ್ನಾಟಕ ಪತ್ರಿಕೆಗೆ ಸಂಪಾದಕರಾಗಿ ಸಹ ಬಸವನಾಳರು ಸೇವೆ ಸಲ್ಲಿಸಿದ್ದಾರೆ.
ಸಹಕಾರಿ ಕ್ಷೇತ್ರದಲ್ಲಿಯೂ ಸಹ ಬಸವನಾಳರು ತಮ್ಮ ಕಾಣಿಕೆ ನೀಡಿದ್ದಾರೆ. ಧಾರವಾಡದ ಕರ್ನಾಟಕ ಸೆಂಟ್ರಲ್ ಕೊಆಪರೇಟಿವ್ ಬ್ಯಾಂಕ ಇದರ ಪ್ರಥಮ ಮ್ಯಾನೇಜಿಂಗ ಡೈರೆಕ್ಟರ್ ಆಗಿದ್ದರು.
ಸಾಹಿತ್ಯಕಾರ್ಯ
[ಬದಲಾಯಿಸಿ]ಸಂಪಾದನೆ
[ಬದಲಾಯಿಸಿ]- ವಿರೂಪಾಕ್ಷ ಪಂಡಿತನ ಚೆನ್ನಬಸವ ಪುರಾಣ
- ಚಾಮರಸನ ಪ್ರಭುಲಿಂಗ ಲೀಲೆ
- ನಾಗವರ್ಮನ ಕಾವ್ಯಾವಲೋಕನಂ
- ಷಡಕ್ಷರದೇವನ ಶಬರಶಂಕರ ವಿಳಾಸಂ
- ಬಾಲಲೀಲಾ ಮಹಾಂತ ಶಿವಯೋಗಿಗಳ ಕೈವಲ್ಯದರ್ಪಣ
- ಮೈಲಾರದ ಬಸವಲಿಂಗಶರಣರ ಕೃತಿಗಳು
- ಸರ್ಪಭೂಷಣ ಶಿವಯೋಗಿಗಳ ಕೈವಲ್ಯಕಲ್ಪವಲ್ಲರಿ
- ಹರಿಹರನ ಮೂರು ರಗಳೆಗಳು
- ಬಸವಣ್ಣನವರ ಷಟ್ಸ್ಥಲದ ವಚನಗಳು
ಸಾಹಿತ್ಯರಚನೆ
[ಬದಲಾಯಿಸಿ]- ವೀರಶೈವ ತತ್ವಪ್ರಕಾಶ
ಕೌಟಂಬಿಕ ಜೀವನ
[ಬದಲಾಯಿಸಿ]ಬಸವನಾಳರ ಮದುವೆ ೧೯೨೦ ಮೇ ೧೦ರಂದು ದಾವಣಗೆರೆಯ ವರ್ತಕರಾದ ಸಾವಳಗಿ ನಾಗಪ್ಪನವರ ಮಗಳು ಶಾಂತಾ ಇವರೊಡನೆ ರಾಣಿಬೆನ್ನೂರು ಊರಿನಲ್ಲಿ ಜರುಗಿತು. ಇವರಿಗೆ ೧೦ ಜನ ಮಕ್ಕಳು: ೪ ಹುಡುಗರು ಹಾಗು ೬ ಹುಡುಗಿಯರು.
ಗೌರವ
[ಬದಲಾಯಿಸಿ]೧೯೪೫ ರಲ್ಲಿ ರಬಕವಿಯಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಸವನಾಳರು ಅಧ್ಯಕ್ಷರಾಗಿದ್ದರು.
ಶಿವಲಿಂಗಪ್ಪ ಶಿವಯೋಗಪ್ಪ ಬಸವನಾಳರು ೧೯೫೧ ಡಿಸೆಂಬರ ೨೨ ರಂದು ನಿಧನರಾದರು.
(ಆಕರ ಗ್ರಂಥ:ಡಾ|ಬಿ.ಸಿ.ಜವಳಿಯವರ ಕೃತಿ: ಶಿ.ಶಿ.ಬಸವನಾಳ;ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆ)