ವನ್ಯಜೀವಿ ಮತ್ತು ಮಾನವ ಸಂಘರ್ಷ-ಕರ್ನಾಟಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರವಾಸೋದ್ಯಮ ಮತ್ತು ಅಭಿವೃದ್ಧಿ-ಸಂಘರ್ಷ[ಬದಲಾಯಿಸಿ]

ಇಂದು ಅರಣ್ಯದಲ್ಲಿ ರೆಸಾರ್ಟ್‌ ನಿರ್ಮಿಸಿ ಪ್ರವಾಸೋದ್ಯಮ ಬೆಳೆಸುವುದೇ ಅಭಿವೃದ್ಧಿ ಎನ್ನುವಂತಾ¬ಗಿದೆ. ಅರಣ್ಯ ಪ್ರದೇಶ ದಿನೇ ದಿನೇ ಸಂಕುಚಿತವಾಗುತ್ತಿದೆ. ಕೈಗಾರಿಕೆ, ನಗರೀಕರಣ, ಆರ್ಥಿಕ ಪ್ರಗತಿಯಿಂದ ಕಾಡಿನ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಮುಖ್ಯವಾಗಿ ಪ್ರಾಣಿಗಳಿಗೆ ಆಹಾರ, ನೀರು ಮತ್ತು ಸಂತಾನ ಅಭಿವೃದ್ಧಿಗೆ ಸ್ಥಳ ಬೇಕು. ಆದರೆ, ಅರಣ್ಯ ಪ್ರದೇಶ ಸಂಕುಚಿತವಾಗುತ್ತಿರುವುದೇ ದೊಡ್ಡ ಸಮಸ್ಯೆ. ಜತೆಗೆ ಒಂದು ಕಾಡಿಗೂ ಇನ್ನೊಂದು ಕಾಡಿಗೂ ಸಂಪರ್ಕವೇ ಇಲ್ಲದಂತಾ¬ಗುತ್ತಿದೆ.
 • ಮೊದಲು ಒಂದು ಕಾಡಿನ ತುದಿಗೆ ಇನ್ನೊಂದು ಕಾಡು ಆರಂಭವಾಗುತ್ತಿತ್ತು. ಈಗ ಅಂತಹ ಸಂಪರ್ಕವನ್ನೇ ಕಡಿದು ಹಾಕಲಾಗುತ್ತಿದೆ. ಈಗಿರುವ ಕಾಡುಗಳ ಸುತ್ತ ಒತ್ತಡ ಹೆಚ್ಚುತ್ತಿದೆ. ಕಾಡುಗಳ ನಡುವೆ ‘ಕಾರಿಡಾರ್‌’ಗಳು ಇಲ್ಲ. ಒಂದೊಂದು ಕಾಡು ಒಂದೊಂದು ದ್ವೀಪವಾಗುತ್ತಿದೆ.
 • ನಿಸರ್ಗದಲ್ಲಿ ಆಹಾರ ಸರಪಳಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಸರಪಳಿಯಲ್ಲಿ ಯಾವುದಾದರೂ ಒಂದು ಕೊಂಡಿ ಕಳಚಿದರೂ ಪರಿಸರದಲ್ಲಿ ಅಸಮತೋಲನ ಉಂಟಾಗಿ ವಿವಿಧ ರೀತಿಯಲ್ಲಿ ಪರಿಣಾಮಗಳು ಉಂಟಾಗುತ್ತವೆ. ಆಹಾರ ಸರಪಳಿಯಲ್ಲೂ ಯಾವ ಪ್ರಾಣಿ ಯಾವ ಜಾಗದಲ್ಲಿ ಇರಬೇಕೋ ಅಲ್ಲಿಯೇ ಇದ್ದರೆ ಸುರಕ್ಷಿತ.
 • ಪ್ರಾಣಿಗಳು ನಾಡಿಗೆ ಬಂದಾಗ ಜನ ಹೇಗೆ ವರ್ತಿಸುತ್ತಾರೆ ಎನ್ನುವುದು ಸಹ ಮುಖ್ಯ. ಆದರೆ, ಈಗಿನ ಪೀಳಿಗೆಗೆ ಪ್ರಾಣಿಗಳ ಬಗ್ಗೆ ಭಯ ಮಾತ್ರ ಇದೆ. ಪರಿಸರದ ಜತೆಗಿನ ಸಂಬಂಧ ಇಲ್ಲದಿರುವುದೇ ಇದಕ್ಕೆ ಕಾರಣ. ಹೀಗಾಗಿ ಅಂತರ ಸೃಷ್ಟಿಯಾಗಿದೆ. ಎಲ್ಲಿ ಮಾನವ–ಪ್ರಾಣಿಗಳ ನಡುವೆ ಸಂಘರ್ಷ ನಡೆಯುತ್ತಿ¬ದೆಯೋ ಅಲ್ಲಿನ ಜನರಿಗೆ ಪ್ರಾಣಿಗಳು ಮತ್ತು ಅರಣ್ಯ ಕುರಿತಾದ ಸಾಮಾನ್ಯ ಜ್ಞಾನ ಮತ್ತು ತಿಳಿವಳಿಕೆ ಮೂಡಿಸಬೇಕು
 • ಪರಿಹಾರ: ಅರಣ್ಯ ಇಲಾಖೆ, ಮಾನವ–ಪ್ರಾಣಿಗಳ ನಡುವಿನ ಸಂಘರ್ಷದ ಪ್ರದೇಶಗಳನ್ನು ಗುರುತಿಸಬೇಕು. ಸಂಘರ್ಷವನ್ನು ಕಡಿಮೆ ಮಾಡುವ ಅಥವಾ ತಡೆಗಟ್ಟುವ ಯೋಜನೆಗಳನ್ನು ರೂಪಿಸಬೇಕು.
 • ಪ್ರಾಣಿಗಳು ನಾಡಿಗೆ ಬಾರದಂತೆ ಕಂದಕ, ಸೌರಬೇಲಿ ನಿರ್ಮಿ¬ಸುವ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ¬ಗೊಳಿಸ¬ಬೇಕು. ಅರಣ್ಯದ ಸಮೀಪ ಇರುವ ಜಮೀನಿನಲ್ಲಿ ಕಬ್ಬು, ಬಾಳೆ¬ಯಂತಹ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಪ್ರತಿ ಜೀವಿಗೂ ಬದು¬ಕುವ ಛಲ ಇದ್ದೇ ಇರುತ್ತದೆ. ಹೀಗಾಗಿ ರುಚಿಕರವಾದ ಮತ್ತು ಸುಲಭವಾಗಿ ಆಹಾರ ಸಿಗುವುದಾದರೆ ಪ್ರಾಣಿಗಳು ಅಂತಹ ಸ್ಥಳಕ್ಕೆ ಲಗ್ಗೆ ಇಡುವುದು ಸಹಜ. ಆದ್ದರಿಂದ ಅರಣ್ಯಕ್ಕೆ ಸಮೀಪದ ಪ್ರದೇಶಗಳಲ್ಲಿ ಯಾವು¬ದನ್ನು ಕಾಡು ಪ್ರಾಣಿಗಳು ತಿನ್ನುವು¬ದಿಲ್ಲವೋ ಅಂತಹವನ್ನು ಬೆಳೆ¬ಯಲು ಉತ್ತೇಜನ ನೀಡಬೇಕು.

ಯೋಜನೆ ಬೇಡ[ಬದಲಾಯಿಸಿ]

 • ಕಾಡಿನ ಮಧ್ಯೆ ವಿದ್ಯುತ್‌ ಸೇರಿದಂತೆ ಯಾವುದೇ ಯೋಜನೆಜಾರಿಗೊಳಿಸಬಾರದು. ನಗರಗಳ ಸುತ್ತ ಉದ್ಯಮಗಳನ್ನು ಸ್ಥಾಪಿಸಬೇಕೇ ಹೊರತು ಕಾಡುಗಳಲ್ಲಿ ಅಲ್ಲ. ಅರಣ್ಯ ಪ್ರದೇಶದ ತುದಿಯಲ್ಲಿ ಗಾಳಿಯಂತ್ರಗಳನ್ನು ಅಳವಡಿಸುವ ಯೋಜನೆಗಳು ಸಹ ಸಾಧುವಲ್ಲ.

ಇಂತಹ ಪ್ರಯೋಗ ತಮಿಳುನಾಡು ಮುಂತಾದ ರಾಜ್ಯಗಳಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಆದ್ದರಿಂದ, ಈಗಿನ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾಯಿಸಬೇಕಾಗಿದೆ. ಅರಣ್ಯದಲ್ಲಿ ಚೆಕ್‌ಡ್ಯಾಂಗಳನ್ನು ನಿರ್ಮಿಸುವ ಅಗತ್ಯವೂ ಇಲ್ಲ. ಈಗ ಜೆಸಿಬಿ, ಲಾರಿಗಳು ಹೋಗುವ ಜಾಗಗಳಲ್ಲಿ ಮಾತ್ರ ಚೆಕ್‌ಡ್ಯಾಂಗಳನ್ನು ನಿರ್ಮಿಸಲಾಗುತ್ತಿದೆ. ಕಾಡಿನಲ್ಲೇ ಹಳ್ಳ, ಕೆರೆಕಟ್ಟೆಗಳಿವೆ. ಸಹಜವಾಗಿಯೇ ಹರಿಯುವ ನೀರು ಇದ್ದರೆ ಪ್ರಾಣಿಗಳಿಗೆ ಅನುಕೂಲ. ಚೆಕ್‌ಡ್ಯಾಂ ಇದ್ದಲ್ಲಿಯೇ ಎಲ್ಲ ಪ್ರಾಣಿಗಳೂ ಹೋಗುವುದಿಲ್ಲ.

 • ಒಂದು ವೇಳೆ ಚೆಕ್‌ಡ್ಯಾಂ ನಿರ್ಮಿಸಿದರೂ ಆ ಸ್ಥಳದ ಸುತ್ತಮುತ್ತ ಮಾತ್ರ ಪ್ರಾಣಿಗಳ ಸಂಖ್ಯೆ ಅಧಿಕವಾಗಿ ಒತ್ತಡ ಹೆಚ್ಚಾಗುತ್ತದೆ. ಹೀಗಾಗಿ ನಿಸರ್ಗದಲ್ಲಿ ಸಹಜವಾಗಿ ಬದುಕುವ ಪ್ರಾಣಿ, ಪಕ್ಷಿಗಳಿಗೆ ತೊಂದರೆ ನೀಡಿದಂತಾಗಿ ಅರಣ್ಯ ಪ್ರದೇಶದಲ್ಲಿ ಅಸಮತೋಲನಕ್ಕೆ ಕಾರಣವಾಗುತ್ತದೆ. ನೈಸರ್ಗಿಕವಾಗಿ ಇರುವುದನ್ನು ಅದು ಯಥಾಸ್ಥಿತಿಯಲ್ಲೇ ಇರಲು ಬಿಡಬೇಕು.

ಯಾವುದೇ ಸಂದರ್ಭದಲ್ಲಿ ನಿಸರ್ಗದ ವಿರುದ್ಧ ಹೋಗುವುದು ಸರಿ ಅಲ್ಲ. ಈಗಿರುವ ಅರಣ್ಯ ಸಂರಕ್ಷಣಾ ಕಾಯ್ದೆ ಮತ್ತು ವನ್ಯಜೀವಿ ರಕ್ಷಣಾ ಕಾಯ್ದೆಗಳು ಉತ್ತಮವಾಗಿವೆ. ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದರೆ ಸಾಕು. ಆದರೆ, ಈ ಕಾಯ್ದೆಗಳನ್ನು ಸಡಿಲಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ ಈಗಲೇ ಎಚ್ಚೆತ್ತುಕೊಂಡು ದೂರದೃಷ್ಟಿಯಿಂದ ಅರಣ್ಯ ಸಂರಕ್ಷಿಸುವ ಯೋಜನೆಗಳನ್ನು ರೂಪಿಸಿದರೆ, ಭವಿಷ್ಯದಲ್ಲಿ ಇನ್ನಷ್ಟು ಬಿಗಡಾಯಿಸಬಹುದಾದ ಮಾನವ – ಪ್ರಾಣಿ ಸಂಘರ್ಷಕ್ಕೆ ತಡೆ ಒಡ್ಡಲು ಸಾಧ್ಯ. ಅಭಿವೃದ್ಧಿ ಕಲ್ಪನೆ ಬದಲಾಗಲಿಡಿ.

ಪ್ರತಿನಿತ್ಯ ವನ್ಯಜೀವಿಗಳೊಡನೆ ಸಂಘರ್ಷ[ಬದಲಾಯಿಸಿ]

 • ಭಾರತದಲ್ಲಿ ನಮಗೆ ವಿಧವಿಧವಾದ ವನ್ಯಜೀವಿಗಳೊಡನೆ (ಹಾವು, ಕೋತಿ, ಕಾಡುಹಂದಿ, ಮರವಿ, ಕರಡಿ, ತೋಳ, ಚಿರತೆ, ಆನೆ) ಸಂಘರ್ಷ ಪ್ರತಿನಿತ್ಯದ ಮಾತು. ನಗರವಾಸಿಗಳಿಗೆ ಹೆಚ್ಚಾಗಿ ಹಾವು, ಕೋತಿಗಳೊಡನೆ ಸಂಘರ್ಷವಾದರೆ, ಗ್ರಾಮವಾಸಿಗಳಿಗೆ ಕಾಡು ಹಂದಿ, ಕೃಷ್ಣಮೃಗ, ನರಿ, ಕರಡಿ, ಚಿರತೆಗಳು ಸಮಸ್ಯೆಯ ಮೂಲ. ಅದೇ ದೊಡ್ಡ ಕಾಡುಗಳ ಬದಿಯಲ್ಲಿರುವವರಿಗೆ ಹುಲಿ, ಆನೆ, ಜಿಂಕೆ, ಕಡವೆ, ಕಾಡು ಹಂದಿಗಳ ಬಾಧೆ.
 • ವಿದ್ಯುತ್ ಬೇಲಿಗಳು ವನ್ಯಜೀವಿಗಳಿಂದ ಬೆಳೆಹಾನಿ ತಡೆಯಲು ವಿಫಲವಾಗಿರುವುದನ್ನು ಅಧ್ಯಯನಗಳು ಸಾದರಪಡಿಸಿವೆ. ಇವುಗಳು ದುಬಾರಿ ಹಾಗೂ ಈ ಬೇಲಿಗಳ ನಿರ್ವಹಣೆಯನ್ನು ಕ್ರಮಬದ್ಧವಾಗಿ ಸಂಭಾಳಿಸಬೇಕು. ಈ ಶಿಸ್ತು ನಮ್ಮ ಸರ್ಕಾರಿ ವ್ಯವಸ್ಥೆಯಲ್ಲಿ ಇಲ್ಲದಿರುವುದರಿಂದ ಅವು ಅಳವಡಿಸಿದ ಬಹುತೇಕ ಪ್ರದೇಶಗಳಲ್ಲಿ ವಿಫಲವಾಗಿವೆ. ಹೀಗಾಗಿ ಅರಣ್ಯ ಇಲಾಖೆ ವಿದ್ಯುತ್ ಬೇಲಿಗಳ ಮೇಲೆ ಇನ್ನು ಮುಂದೆ ಹೆಚ್ಚು ಹಣ ವ್ಯಯಿಸುವುದನ್ನು ನಿಲ್ಲಿಸಬೇಕು.

ಸಂಘರ್ಷಕ್ಕೆ ತಡೆ[ಬದಲಾಯಿಸಿ]

ಕಾಡಿನ ಬದಿಯಲ್ಲಿ ಆನೆಗಳಿಗೆ ರುಚಿಸದ ಬೆಳೆಗಳ ಬೇಸಾಯ ಹಾಗೂ ಕಾಪು ವಲಯಗಳನ್ನು ರಕ್ಷಿಸುವುದರಿಂದ ಬೆಳೆಹಾನಿ ತಡೆಯಬಹುದು. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಸುತ್ತಮುತ್ತಲಿನ ಕೆಲವು ರೈತರು ಟೊಮೆಟೊದ ಬದಲು ದಂಟಿನ ಸೊಪ್ಪನ್ನು ಬೆಳೆಯಲು ಪ್ರಾರಂಭಿಸಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ತರಕಾರಿ ಮಳಿಗೆಯೊಂದು ಇವರ ಬೆಳೆಯನ್ನು ಖರೀದಿಸುತ್ತಿದೆ. ಆನೆಗಳಿಂದ ಅತಿಯಾಗಿ ಬೆಳೆ ಹಾನಿಗೊಳಗಾಗುವ ಸ್ಥಳಗಳಲ್ಲಿ ವನ್ಯಜೀವಿ ಪ್ರವಾಸೋದ್ಯಮದಂತಹ ಕೃಷಿಯೇತರ ಚಟುವಟಿಕೆಗಳನ್ನು ಪ್ರಯತ್ನಿಸಬಹುದು. ವನ್ಯಜೀವಿಗಳಿಂದಾಗುವ ತೊಂದರೆ¬ ಕಡಿಮೆ ಮಾಡಲು ಕಡಿಮೆ ಬೆಲೆಯ, ಅಲ್ಪ ತಂತ್ರಜ್ಞಾನದ ಪರಿಹಾರಗಳು ಬೇಕಾಗಿವೆ. ದೇಶದೆಲ್ಲೆಡೆ ಇತ್ತೀಚೆಗೆ ಚಿರತೆಗಳು ಸಂಘರ್ಷದಲ್ಲಿ ಅತಿಯಾಗಿ ಸಾಯುತ್ತಿರುವುದು ವರದಿಯಾಗುತ್ತಿದೆ. ಚಿರತೆಗಳು ಸಣ್ಣ ಪುಟ್ಟ ಕುರುಚಲು ಪ್ರದೇಶಗಳಲ್ಲೂ ಬದುಕುಳಿಯಬಲ್ಲ ಪ್ರಾಣಿಗಳು. ಇವಕ್ಕೆ ವಿಶೇಷವಾದ ಆಹಾರದ ಅಗತ್ಯವಿಲ್ಲ. ಹಲವೆಡೆ ನಾಯಿ, ಹಂದಿ, ದನ, ಕುರಿಗಳೇ ಇವುಗಳ ದಿನನಿತ್ಯದ ಆಹಾರ. ಈ ಹೊಂದಿಕೊಳ್ಳುವಿಕೆಯೇ ಚಿರತೆಯನ್ನು ಮಾನವನೊಡನೆ ದಿನನಿತ್ಯದ ಸಂಘರ್ಷಕ್ಕೆ ಹೆಚ್ಚು ಹಾದಿ ಮಾಡಿಕೊಟ್ಟಿದೆ .

ಸಂಘರ್ಷ ವಾದದಲ್ಲಿ ಹುರುಳಿಲ್ಲ -ವಿಶೇಷ› ಉತ್ಪ್ರೇಕ್ಷೆ ಸಲ್ಲದು[ಬದಲಾಯಿಸಿ]

 • ಮಾನವ– ಪ್ರಾಣಿ ಸಂಘರ್ಷ ಇತ್ತೀಚಿನ ದಿನಗಳಲ್ಲಿ ತಾರಕಕ್ಕೇರಿದೆ ಎಂಬ ವಾದದಲ್ಲಿ ಹುರುಳಿಲ್ಲ. ಅದೇನಿದ್ದರೂ ಆಧುನಿಕ ಸಂಪರ್ಕ ಸಾಧನಗಳು ಮತ್ತು ಮಾಧ್ಯಮಗಳ ಉತ್ಪ್ರೇಕ್ಷೆಯ ಫಲ. ಮೊದಲಿನಿಂದಲೂ ಕಾಡಂಚಿನಲ್ಲಿ ವನ್ಯಜೀವಿಗಳು ಕಾಣಿಸಿಕೊಳ್ಳುವುದು, ಚಿರತೆಗಳು ಕೃಷಿ ಭೂಮಿಯಲ್ಲಿ ಸಂತಾನೋತ್ಪತ್ತಿ ಮಾಡುತ್ತಾ ಸಣ್ಣ ಪ್ರಾಣಿಗಳು, ಬೀದಿನಾಯಿಗಳನ್ನು ಹಿಡಿದು ತಿನ್ನುವುದು ಸಾಮಾನ್ಯ ಸಂಗತಿ. ಆದರೆ ಈಗ ಪ್ರತಿ ಬಾರಿ ಕಾಡು ಪ್ರಾಣಿ ಜನರ ಕಣ್ಣಿಗೆ ಬಿದ್ದಾಗಲೂ ಟಿ.ವಿ., ಮೊಬೈಲ್‌ನಂತಹ ಸಂಪರ್ಕ ಸಾಧನಗಳಿಂದ ಅದು ದೊಡ್ಡ ಸುದ್ದಿಯಾಗುತ್ತದೆ.

ಹಿಂದೆಲ್ಲ ನೈಸರ್ಗಿಕ ವಿಧಾನಗಳಿಗೆ ಮಹತ್ವ ಇದ್ದುದರಿಂದ ಮಾನವ– ಪ್ರಾಣಿ ಸಂಘರ್ಷಕ್ಕೆ ಸಹಜವಾಗಿಯೇ ಪರಿಹಾರ ದೊರಕುತ್ತಿತ್ತು. ಆದರೆ ಈಗ ಅಭಯಾರಣ್ಯಗಳಲ್ಲಿ ಅನೈಸರ್ಗಿಕವಾಗಿ ಪರಿಸರವನ್ನು ಮಾರ್ಪಡಿಸಿ ಪ್ರಾಣಿಗಳ ಸಂಖ್ಯೆಯನ್ನು ನೈಸರ್ಗಿಕ ಮಟ್ಟಕ್ಕಿಂತ ಮೇಲೆ ಏರಿಸುತ್ತಿರುವುದರಿಂದ ವನ್ಯಜೀವಿಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ವ್ಯವಸಾಯ ಮತ್ತು ಜಲಾಶಯ ನಿರ್ಮಾಣದಂತಹ ಕಾರಣಗಳಿಗೆ ಕಾಡು ನಾಶವಾಗುತ್ತಿದೆ. ಇದರಿಂದ ಇಂತಹ ಸಂಘರ್ಷಗಳಿಗೆ ಪರಿಹಾರ ಕಂಡುಕೊಳ್ಳುವುದು ಈಗ ಸಂಕೀರ್ಣವಾಗಿದೆ.

 • ಕಾಡಿನಲ್ಲಿ ಆಹಾರ ಇಲ್ಲದೇ ಪ್ರಾಣಿಗಳು ನಾಡಿಗೆ ಬರುತ್ತಿವೆ ಎಂಬ ಭಾವನೆ ಸಂಪೂರ್ಣ ತಪ್ಪು. ಕೆಲವು ಸಲ ಕಾಡಿನಲ್ಲಿ ಸಾಂದ್ರತೆ ಹೆಚ್ಚಾದಾಗಲೂ ಸಣ್ಣ ವಯಸ್ಸಿನ ಪ್ರಾಣಿಗಳು ಹೊಸ ಜಾಗ ಹುಡುಕಿಕೊಂಡು ಹೊರಗೆ ಬರುವ ಸಾಧ್ಯತೆ ಇರುತ್ತದೆ. ಮೊದಲು ಕಾಡು ಪ್ರಾಣಿಗಳ ಮುಕ್ತ ಬೇಟೆ ನಡೆಯುತ್ತಿತ್ತು. ಇದರಿಂದ ವನ್ಯಜೀವಿಗಳು ವಿನಾಶದ ಅಂಚು ತಲುಪಿದ್ದವು. 1970ರ ದಶಕದಲ್ಲಿ ಜಾರಿಗೆ ಬಂದ ಬೇಟೆ ನಿಷೇಧ, ವನ್ಯಪ್ರಾಣಿಗಳ ಮಾಂಸ ಮಾರಾಟ ನಿಷೇಧದಂತಹ ಉತ್ತಮ ಕಾನೂನುಗಳು ವನ್ಯಜೀವಿಗಳಿಗೆ ವರವಾಗಿ ಪರಿಣಮಿಸಿದವು.
 • ಇದರಿಂದ, ನಾಶವಾಗಿದ್ದ ಕಡೆಯಲ್ಲೆಲ್ಲ ಪ್ರಾಣಿಗಳ ಸಂತತಿ ಮರುಕಳಿಸಿತು. ಉದಾಹರಣೆಗೆ, ದಕ್ಷಿಣ ಕನ್ನಡದಲ್ಲಿ ಹಿಂದೆಲ್ಲ ಸಾಕಷ್ಟು ಕಾಟಿ, ಕಡವೆಗಳಿದ್ದವು. 50– 60ರ ದಶಕದಲ್ಲಿ ಅವೆಲ್ಲ ನಿರ್ನಾಮವಾಗಿ ಹೋಗಿದ್ದವು. ಆದರೆ ಈಗ ಮಂಗಳೂರು ವಿಮಾನ ನಿಲ್ದಾಣದ ರನ್‌ವೇಯಲ್ಲಿ ಸಹ ಕಾಟಿ ಕಾಣಿಸಿಕೊಳ್ಳುವಷ್ಟರ ಮಟ್ಟಿಗೆ ಅವುಗಳ ಸಂತತಿ ವೃದ್ಧಿಸಿದೆ.
 • ನಾಗರಹೊಳೆ, ಬಂಡೀಪುರ, ಬಿಳಿಗಿರಿರಂಗನ ಬೆಟ್ಟದಂತಹ ಅಭಯಾರಣ್ಯಗಳಲ್ಲಿ 20 ವರ್ಷಗಳಿಂದ ಉತ್ತಮ ಸಂರಕ್ಷಣಾ ಕಾರ್ಯ ನಡೆಯುತ್ತಿದೆ. ಇದು ಒಳ್ಳೆಯ ಬೆಳವಣಿಗೆ. ಆದರೆ ಅದರ ಜೊತೆಗೇ ಅನೈಸರ್ಗಿಕವಾಗಿ ಪ್ರಾಣಿಗಳ ಆವಾಸದ ನಿರ್ವಹಣೆ ಮಾಡಿ ಅವುಗಳ ಸಂಖ್ಯೆ ವೃದ್ಧಿಸುವುದೂ ಸರಿಯಲ್ಲ.
 • ಮೊದಲು ಬೇಸಿಗೆಯಲ್ಲಿ ಕೆಲ ಪ್ರಾಣಿಗಳು, ಅದರಲ್ಲೂ ಹೆಚ್ಚಾಗಿ ಮರಿಗಳು ನೀರಿಲ್ಲದೇ ಸಾಯುತ್ತಿದ್ದವು. ಈಗ ಕಾಡುಗಳಲ್ಲಿ ಅಧಿಕ ನೀರಿನ ತಾಣಗಳನ್ನು ಸೃಷ್ಟಿಸಿರುವುದರಿಂದ ಅವುಗಳ ಮರಣ ಪ್ರಮಾಣ ತಗ್ಗಿದೆ. ಇದರಿಂದ ಕಾಡಿನಲ್ಲಿ ಪ್ರಾಣಿಗಳ ಸಾಂದ್ರತೆ ಹೆಚ್ಚಾಗಿದೆ. ಹೀಗೆ ಪ್ರಾಣಿಗಳ ಹುಟ್ಟು– ಸಾವಿನ ನೈಸರ್ಗಿಕ ಸರಪಳಿಯಲ್ಲಿ ನಾವು ಮಧ್ಯಪ್ರವೇಶಿಸುತ್ತಿದ್ದೇವೆ.
 • ಕೆಲವು ಪ್ರಾಣಿಗಳು ಅಪರೂಪಕ್ಕೊಮ್ಮೆ ಮನುಷ್ಯರನ್ನು ತಿನ್ನುತ್ತವೆ. ಅದು ಅಭ್ಯಾಸಬಲ ಆಗದಂತೆ ತಡೆಯಲು ಅಂತಹ ಪ್ರಾಣಿಗಳನ್ನು ಕೂಡಲೇ ಕೊಲ್ಲಬೇಕಾಗುತ್ತದೆ. ಅದಕ್ಕೂ ಮೀನಮೇಷ ಎಣಿಸುತ್ತಾ ಕೂತರೆ ಜನ ಉದ್ರೇಕಗೊಳ್ಳುತ್ತಾರೆ. ವನ್ಯಸಂರಕ್ಷಣೆಯ ಮೇಲೆ ಅವರಿಗೆ ರೋಷಾವೇಷ ಬರುತ್ತದೆ.
 • ಕಾಡಂಚಿನ ಹಳ್ಳಿಗರಲ್ಲಿ ಜಾಗೃತಿ ಮೂಡಿಸಬೇಕು. ವನ್ಯಜೀವಿಗಳು ದನಕರುಗಳನ್ನು ಕೊಂದರೆ ಪರಿಹಾರ, ಬೆಳೆಹಾನಿಗೆ ವಿಮೆ ನೀಡಬೇಕು. ಕಾಡಿನಿಂದ ಸ್ವ ಇಚ್ಛೆಯಿಂದ ಹೊರಬರುವವರಿಗೆ ಸೂಕ್ತ ಪುನರ್ವಸತಿ ಕಲ್ಪಿಸಬೇಕು. ಕಾಡಂಚಿನಲ್ಲಿ ಕಂದಕಗಳನ್ನು ನಿರ್ಮಿಸಬೇಕು. ವಿದ್ಯುತ್‌ ತಂತಿ ಬೇಲಿ ಹಾಕಬೇಕು. ಹೀಗೆ ಸಮಸ್ಯೆಗಳಿಗೆ ಯುಕ್ತ ಮಾರ್ಗೋಪಾಯ ಕಂಡುಕೊಂಡರೆ ಸಂಘರ್ಷದ ಪ್ರಮಾಣ ಸಹಜವಾಗಿಯೇ ತಗ್ಗುತ್ತದೆ.

ಅರಣ್ಯ ಸಿಬ್ಬಂದಿಯಿಂದ ಜನ ಜಾಗೃತಿಗೆ ಕ್ರಮ[ಬದಲಾಯಿಸಿ]

(ಅರಣ್ಯ ಇಲಾಖೆಯ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ವನ್ಯಜೀವಿ)ಶ್ರೀ ಅಜಯ್ ಮಿಶ್ರಾ ಇವರು ಸಂದರ್ಶನದಲ್ಲಿ ಕೊಟ್ಟ ವಿವರ)

ಕಾಡು ಪ್ರಾಣಿಗಳು ನಾಡಿಗೆ ಬರಲು ಪ್ರಮುಖ ಕಾರಣ
 • ಇದಕ್ಕೆ ಅನೇಕ ಕಾರಣಗಳಿವೆ. ರಕ್ಷಿತಾರಣ್ಯದ ಸುತ್ತಮುತ್ತ ಖಾಲಿ ಜಾಗಗಳನ್ನು ಒತ್ತುವರಿ ಮಾಡಿಕೊಂಡು ಕೃಷಿ ಮಾಡುತ್ತಿರುವುದು, ಕಾಡಿನ ಹೊರವಲಯದಲ್ಲಿ ಮರಗಳ ನಾಶ, ಕಾಡಿನ ಪಕ್ಕದ ಜಮೀನಿನಲ್ಲಿ ಕಬ್ಬು, ಬಾಳೆ ಮುಂತಾದ ಬೆಳೆಗಳನ್ನು ಬೆಳೆಸುವುದು, ಆನೆ ಕಾರಿಡಾರಿನ ಪಕ್ಕದಲ್ಲಿ ಕಾಫಿ ಎಸ್ಟೇಟ್‌, ತೋಟಗಳನ್ನು ಮಾಡುವುದು, ಕಾಡಿನ ಮಧ್ಯೆ ಬೃಹತ್‌ ಅಣೆಕಟ್ಟುಗಳು, ನಾಲೆಗಳು, ವಿದ್ಯುತ್‌ ಸ್ಥಾವರಗಳ ನಿರ್ಮಾಣ, ಪರಿಸರ ಪ್ರವಾಸೋದ್ಯಮದ ಹೆಸರಿನಲ್ಲಿ ಕಾಡಿನ ನಡುವೆ ರಸ್ತೆ, ಕಟ್ಟಡಗಳ ನಿರ್ಮಾಣ. ರೆಸಾರ್ಟ್‌ಗಳನ್ನು ಸ್ಥಾಪಿಸುವುದು, ತ್ಯಾಜ್ಯಗಳನ್ನು ಕಾಡಿನ ಅಂಚಿನಲ್ಲಿ ಸುರಿಯುವುದು ಮುಂತಾದ ಚಟುವಟಿಕೆಗಳು ಪ್ರಾಣಿಗಳು ನಾಡಿಗೆ ಬರಲು ಪ್ರಮುಖ ಕಾರಣ.
ನಾಡಿಗೆ ಬರುವ ಪ್ರಾಣಿಗಳ ಸಾವಿಗೆ ಪ್ರಮುಖ ಕಾರಣ
 • ನಾಡಿಗೆ ಬಂದ ಪ್ರಾಣಿಗಳು ಇಂಥದ್ದೇ ಕಾರಣದಿಂದ ಸಾಯುತ್ತಿವೆ ಎಂದು ಹೇಳಲು ಸಾಧ್ಯವಿಲ್ಲ. ಆದರೂ ವಿದ್ಯುತ್‌ ಸ್ಪರ್ಶ, ಹಳ್ಳಗಳಿಗೆ ಬೀಳುವುದು, ವಿಷಪ್ರಾಶನ, ರೈತರು ಪ್ರಾಣಿಗಳಿಂದ ಬೆಳೆ ರಕ್ಷಣೆಗೆಂದು ಅಳವಡಿಸುವ ಸಾಧನಗಳು, ಕಾಡಿನ ನಡುವೆ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಸಿಲುಕುವುದು ಪ್ರಮುಖ ಕಾರಣಗಳು.
ಹೆಚ್ಚಾಗಿ ನಾಡಿಗೆ ಬರುವ ಪ್ರಾಣಿಗಳು
 • ಕರ್ನಾಟಕದಲ್ಲಿ ಹೆಚ್ಚಾಗಿ ಆನೆಗಳು ನಾಡಿಗೆ ಬರುತ್ತಿವೆ. ಇನ್ನು ಚಿರತೆ, ಕರಡಿ, ಹುಲಿಗಳೂ ಅಲ್ಲಲ್ಲಿ ಬರುತ್ತಿವೆ. ರಕ್ಷಿತಾರಣ್ಯಗಳ ಸುತ್ತಲಿನ ಪ್ರದೇಶದಲ್ಲಿಯೇ ಈ ಸಮಸ್ಯೆ ಹೆಚ್ಚಾಗಿ ಕಾಣುತ್ತಿದೆ.
ಪ್ರಾಣಿಗಳು ನಾಡಿಗೆ ಬಾರದಂತೆ ಅರಣ್ಯ ಇಲಾಖೆ ಕೈಗೊಂಡ ಕ್ರಮಗಳು
 • ವನ್ಯಪ್ರಾಣಿಗಳು ಅರಣ್ಯ ಪ್ರದೇಶದಿಂದ ಪಕ್ಕದ ಕೃಷಿ ಭೂಮಿಗೆ ಬರುವುದನ್ನು ತಡೆಯಲು ಸೂಕ್ಷ್ಮ ಪ್ರದೇಶಗಳ ಅರಣ್ಯದ ಅಂಚಿನಲ್ಲಿ ಕಾಡಾನೆ ನಿರೋಧಕ ಕಂದಕ ಮತ್ತು ಸೌರಶಕ್ತಿ ಬೇಲಿ ನಿರ್ಮಿಸಲಾಗುತ್ತಿದೆ. ಸೂಕ್ಷ್ಮ ಸ್ಥಳಗಳನ್ನು ಗುರುತಿಸಿ, ಹಾವಳಿ ನಡೆಸುವ ಕಾಡಾನೆಗಳನ್ನು ಪುನಃ ಕಾಡಿಗೆ ಹಿಮ್ಮೆಟ್ಟಿಸುವ ಸಲುವಾಗಿ ಕಾಡಾನೆ ತಡೆ ತಂಡಗಳನ್ನು ರಚಿಸಲಾಗಿದೆ.
 • ಪ್ರತಿ ತಂಡದಲ್ಲೂ ಸ್ಥಳೀಯರ ಜೊತೆಗೆ ನಾಲ್ವರು ಅರಣ್ಯ ಸಿಬ್ಬಂದಿಯನ್ನು ನಿಯೋಜಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಸಿಬ್ಬಂದಿಗೆ ವಾಕಿಟಾಕಿ, ಗನ್ ಹಾಗೂ ವಾಹನಗಳ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ವನ್ಯಜೀವಿ ಹಾವಳಿ ಹೆಚ್ಚಾಗಿ ಕಂಡುಬರುವ ಸೂಕ್ಷ್ಮ ಪ್ರದೇಶಗಳಲ್ಲಿ ಅವಶ್ಯಕತೆಗನುಗುಣವಾಗಿ ‘ಕ್ಷಿಪ್ರ ಪ್ರತಿಕ್ರಿಯಾ ಪಡೆ’ಗಳನ್ನು ರಚಿಸಲಾಗಿದೆ.
 • ವನ್ಯಜೀವಿಗಳ ದಾಳಿ ಸಮಯದಲ್ಲಿ ಏನು ಮಾಡಬೇಕು ಮತ್ತು ಮಾಡಬಾರದು ಎಂಬ ಬಗ್ಗೆ ಸಾರ್ವಜನಿಕರಿಗೆ ಸೂಚನಾ ಫಲಕ, ಸಭೆ ನಡೆಸುವ ಮುಖಾಂತರ ಜಾಗೃತಿ ಮೂಡಿಸಲಾಗುತ್ತಿದೆ. ಅರಣ್ಯ ಪ್ರದೇಶಗಳಲ್ಲಿ ನೀರಿನ ಸೌಕರ್ಯವನ್ನು ಸತತವಾಗಿ ಒದಗಿಸಿ, ವನ್ಯಪ್ರಾಣಿಗಳ ಆವಾಸ ಸ್ಥಾನವನ್ನು ಅಭಿವೃದ್ಧಿಗೊಳಿಸ¬ಲಾಗುತ್ತಿದೆ. ಪ್ರಾಣಿಗಳಿಗೆ ವರ್ಷವಿಡೀ ಕುಡಿಯುವ ನೀರು ದೊರಕುವಂತೆ ರಕ್ಷಿತಾರಣ್ಯಗಳಲ್ಲಿ ಕೆರೆಗಳ ಹೂಳು ತೆಗೆಯುವುದು, ಚೆಕ್‌ಡ್ಯಾಮ್, ನಾಲಾಬಂದಿ ಇತ್ಯಾದಿ ಕೆಲಸಗಳನ್ನು ನಿರ್ವಹಿಸಲಾಗುತ್ತಿದೆ.
ಕಾಡು ಪ್ರಾಣಿಗಳ ದಾಳಿಯಿಂದ ಮೃತರಾದವರ ಕುಟುಂಬದವರಿಗೆ ನೀಡುವ ಪರಿಹಾರ.

ಮೃತ ವ್ಯಕ್ತಿಯು ಅರಣ್ಯ ಪ್ರದೇಶದಲ್ಲಿ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿರಲಿಲ್ಲ ಹಾಗೂ ವನ್ಯಪ್ರಾಣಿಯಿಂದಲೇ ಸಾವು ಸಂಭವಿಸಿದೆ ಎಂಬುದು ದೃಢಪಟ್ಟರೆ ವಾರಸುದಾರರಿಗೆ ₨ ೫ ಲಕ್ಷ ಪರಿಹಾರ ನೀಡಲಾಗುತ್ತಿದೆ. ಹಿಂದೆ ಈ ಮೊತ್ತ ₨೩.೫೦ ಲಕ್ಷ ಇತ್ತು.

ಕಾಡುಪ್ರಾಣಿ ಹಾವಳಿ ಕಂಡುಬಂದಾಗ ಇಲಾಖೆಯನ್ನು ಸಂಪರ್ಕಿಸುವ ವ್ಯವಸ್ಥೆ.

ತುರ್ತು ಸಂದರ್ಭದಲ್ಲಿ ಕೂಡಲೇ ಕ್ರಮ ಕೈಗೊಳ್ಳಲು ದಿನದ ೨೪ ಗಂಟೆಗಳೂ ಸೇವೆ ಒದಗಿಸುವ ಶುಲ್ಕರಹಿತ ಸೇವಾ ಸಂಖ್ಯೆ ೧೮೦೦೪೨೫೧೩೧೪ನ್ನು ಸಂಪರ್ಕಿಸಬಹುದು.

ಸಂಘರ್ಷದಲ್ಲಿ ಪ್ರಾಣಿಗಳ ಬಲಿ[ಬದಲಾಯಿಸಿ]

2010ರಿಂದ 2014ರವರೆಗೆ ಮನುಷ್ಯರ ,ಪ್ರಾಣಿಗಳ ನಡುವಿನ ಸಂಘರ್ಷದಲ್ಲಿ ಆಸಹಜ ಸಾವಿಗೆತುತ್ತಾದ ಪ್ರಾಣಿಗಳು
ವರ್ಷ ಆನೆ ಹುಲಿ ಚಿರತೆ ಜಿಂಕೆ ಕಾಡೆಮ್ಮೆ ಕರಡಿ ಸಾರಂಗ ನವಿಲು ಕಾಡು ಹಂದಿ
2010 23 3 6 2 3 3 0 1 1
2011 19 1 5 2 2 3 5 1 0
2012 18 5 7 8 1 6 5 2 0
2013 7 1 5 5 0 4 5 1 1
2014 16 0 3 5 1 0 2 1 1
ಒಟ್ಟು 83 10 26 22 7 16 17 6 3

ಸಂಘರ್ಷದಲ್ಲಿ ಮಾನವ ಬಲಿ[ಬದಲಾಯಿಸಿ]

8

ಕಾಡು ಪ್ರಾಣಿಗಳ ಧಾಳಿಗೆ ತುತ್ತಾದ ಮನುಷ್ಯರು
2010 2011 2012 2013 2014 ಒಟ್ಟು
41 22 56 47 34 200

ವನ್ಯಜೀವಿ ಸಂರಕ್ಷಣಾ ಕಾರ್ಯಕ್ರಮಗಳು[ಬದಲಾಯಿಸಿ]

 • 1972ರಲ್ಲಿ ದೇಶದಲ್ಲಿ ತಂದ ವನ್ಯಜೀವಿ ಸಂರಕ್ಷಣಾ ಕಾಯಿದೆಯ ಪರಿಣಾಮಕಾರಿ ಅನುಷ್ಠಾನದಿಂದಾಗಿ ಹಲವು ವನ್ಯಜೀವಿ ಪ್ರಭೇದಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡಿದೆ. ಇದೇ ದಶಕದಲ್ಲಿ ಪ್ರಾರಂಭವಾದ ಹಲವು ವನ್ಯಜೀವಿ ಸಂರಕ್ಷಣಾ ಕಾರ್ಯಕ್ರಮಗಳು ಕರ್ನಾಟಕದಲ್ಲೂ ಹಲವಾರು ಸಕಾರಾತ್ಮಕ ಪರಿಣಾಮಗಳನ್ನು ತಂದವು. ಅಭಯಾರಣ್ಯಗಳು, ರಾಷ್ಟ್ರೀಯ ಉದ್ಯಾನಗಳು ಸ್ಥಾಪಿತಗೊಂಡವು.
 • ಇದರ ಪರಿಣಾಮವಾಗಿ ಮಾನವ- ವನ್ಯಜೀವಿ ಸಂಘರ್ಷ ಕೂಡ ಹೆಚ್ಚಾಗಿದೆ. ಕಳೆದ ಏಳು ವರ್ಷಗಳಲ್ಲಿ ಆನೆ, ಹುಲಿ, ಚಿರತೆಗಳ ದಾಳಿಯಿಂದ ರಾಜ್ಯದಲ್ಲಿ 286 ಜನ ಜೀವ ಕಳೆದುಕೊಂಡಿದ್ದಾರೆ. ಈಗ ಸಹಿಷ್ಣುತೆಯಿಂದಿದ್ದ ಅರಣ್ಯದಂಚಿನ ಸಹನೆ ಕಳೆದುಕೊಂಡ ಜನ ವನ್ಯಜೀವಿ ಸಂಘರ್ಷಕ್ಕೆ xxxಸಮಂಜಸವಾದ ಉತ್ತರವಿಲ್ಲದಿದ್ದರೆ ಇವುಗಳ ಸಂರಕ್ಷಣೆಗೆ ಬೆಂಬಲ ಸಿಗುವುದು ಇನ್ನೂ ಕಠಿಣವಾಗುತ್ತದೆ

ವನ್ಯಜೀವಿ ರಕ್ಷಣಾ ತಾಣಗಳು[ಬದಲಾಯಿಸಿ]

 • ವನ್ಯಜೀವಿ ಸಂರಕ್ಷಣೆಗಾಗಿ ಕೈಗೊಳ್ಳುವ ಪ್ರಮುಖವಾದ ಕಾರ್ಯನೀತಿಯೆಂದರೆ ವನ್ಯಜೀವಿಧಾಮ, ರಾಷ್ಟ್ರೀಯ ಉದ್ಯಾನಗಳ ಸ್ಥಾಪನೆ. ಮೈಸೂರು ರಾಜ್ಯ ಸ್ಥಾಪನೆಯಾಗುವ ಮುನ್ನವೇ ಘೋಷಣೆಯಾಗಿದ್ದು ರಂಗನತಿಟ್ಟು ವನ್ಯಜೀವಿಧಾಮ. ಇದನ್ನು ಬಿಟ್ಟರೆ ಇನ್ನೆಲ್ಲ ವನ್ಯಜೀವಿಧಾಮ, ರಾಷ್ಟ್ರೀಯ ಉದ್ಯಾನಗಳು ರಾಜ್ಯದಲ್ಲಿ ಸ್ಥಾಪಿತವಾಗಿರುವುದು 70ರ ದಶಕದ ನಂತರವೇ. ಭಾಷಾವಾರು ರಾಜ್ಯಗಳ ವಿಂಗಡಣೆಯಾದಾಗ ಕರ್ನಾಟಕಕ್ಕೆ ಮದ್ರಾಸ್ ಮತ್ತು ಬಾಂಬೆ ಪ್ರಾಂತ್ಯಗಳಿಂದ, ಕೊಡಗು ರಾಜ್ಯ ಹಾಗೂ ಇನ್ನಿತರ ಪ್ರದೇಶಗಳ ಅರಣ್ಯಗಳು ರಾಜ್ಯಕ್ಕೆ ಸೇರಿಕೊಂಡವು.
 • ದೇಶದಲ್ಲಿ 1970ರ ನಂತರ ಆದ ವನ್ಯಜೀವಿಧಾಮ ಮತ್ತು ರಾಷ್ಟ್ರೀಯ ಉದ್ಯಾನಗಳ ಅತೀ ದೊಡ್ಡ ವಿಸ್ತರಣಾ ಕಾರ್ಯ ನಡೆದದ್ದು ಸ್ವಾತಂತ್ಯ್ರ ಪೂರ್ವದಲ್ಲಿ ಕೇವಲ ಒಂದೇ ಒಂದು ವನ್ಯಜೀವಿಧಾಮವಿದ್ದ ರಾಜ್ಯದಲ್ಲಿ xx ಇಂದು 29 ವನ್ಯಜೀವಿಧಾಮಗಳು, 5 ರಾಷ್ಟ್ರೀಯ ಉದ್ಯಾನಗಳು, 8 ಸಂರಕ್ಷಣಾ ಮೀಸಲು ಪ್ರದೇಶಗಳು ಮತ್ತು ಒಂದು ಸಮುದಾಯ ಮೀಸಲು ಪ್ರದೇಶಗಳಿವೆ.
 • ಎಪ್ಪತ್ತರ ದಶಕದಲ್ಲಿ ದೇಶಾದಾದ್ಯಂತ ಕೇವಲ 1,200ರಷ್ಟಿದ್ದ ಹುಲಿಗಳ ಸಂಖ್ಯೆ ಚೇತರಿಸಿಕೊಂಡಿದೆ. ಇಂದು ನಮ್ಮ ರಾಜ್ಯದಲ್ಲೇ ಸುಮಾರು 400 ಹುಲಿಗಳಾಗಿವೆ. ಇದು ದೇಶದಲ್ಲಿ ಅತೀ ಹೆಚ್ಚು ಹುಲಿಗಳಿರುವ ರಾಜ್ಯವೆಂಬ ಹೆಗ್ಗಳಿಕೆಯನ್ನು ನಮಗೆ ತಂದು ಕೊಟ್ಟಿದೆ. ಇದಲ್ಲದೆ ಆನೆಗಳ ಸಂಖ್ಯೆ ಹೆಚ್ಚಿರುವುದು ಕರ್ನಾಟಕದಲ್ಲೇ.

ವಿಶಿಷ್ಟ ಯೋಜನೆ[ಬದಲಾಯಿಸಿ]

 • ಬಹುಶಃ ದೇಶದಲ್ಲೇ ಇನ್ನೊಂದು ವಿಶಿಷ್ಟ ಯೋಜನೆಯನ್ನು ಕರ್ನಾಟಕ ರಾಜ್ಯದಲ್ಲಿ ಕಾರ್ಯಗತಗೊಳಿಸಲಾಗಿದೆ. ನೀರುನಾಯಿ, ಸಿಂಗಳೀಕ, ಕರಡಿ, ಕೊಂಡುಕುರಿ, ಸಣ್ಣಹುಲ್ಲೆ, ರಣಹದ್ದು ಹೀಗೆ ಹಲವು ವನ್ಯಜೀವಿ ಪ್ರಭೇದಗಳ ಉಳಿವಿಗೆ ಪ್ರದೇಶಗಳನ್ನು ಗುರುತಿಸಿ ಸಂರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಅಂದು ಪಕ್ಷಿಗಳಿಗಾಗಿ ರಂಗನತಿಟ್ಟು ವನ್ಯಜೀವಿಧಾಮವನ್ನಾಗಿ ಘೋಷಿಸಿದರೆ ಇಂದು ಒಂಭತ್ತು ವನ್ಯಜೀವಿಧಾಮಗಳು ಮತ್ತು ಸಂರಕ್ಷಣಾ ಮೀಸಲು ಪ್ರದೇಶಗಳು ನಿರ್ದಿಷ್ಟ ಪ್ರಾಣಿ ಪ್ರಭೇದಗಳಿಗಾಗಿ ಸಂರಕ್ಷಿಸಲ್ಪಟ್ಟಿವೆ. ಇದರೊಡನೆ ನದಿಪಾತ್ರದಲ್ಲಿ ಸಿಗುವ ವಿಶೇಷ ಸಸ್ಯಪ್ರಭೇದಗಳನ್ನು ಸಂರಕ್ಷಿಸಲು ಶಾಲ್ಮಲಾ ನದಿಯ ಕೆಲ ಭಾಗವನ್ನು ಸಂರಕ್ಷಣಾ ಮೀಸಲು ಪ್ರದೇಶವನ್ನಾಗಿ ಘೋಷಿಸಲಾಗಿದೆ. ತೋಳಗಳು ಹುಲ್ಲುಗಾವಲುಗಳನ್ನು ಬಯಸುತ್ತವೆ. ಅಲ್ಲಿ ಗಿಡ ನೆಡುವ ಕಾರ್ಯಕ್ರಮಗಳು ಸೂಕ್ತವಲ್ಲ. ಹಾಗೆಯೇ ಒಣ ಪ್ರದೇಶದಲ್ಲಿ ಕಡಿಮೆ ನೀರಿದ್ದರೂ ಬದುಕಬಲ್ಲ ಪ್ರಾಣಿ ಪಕ್ಷಿಗಳಿರುತ್ತವೆ. ಅಲ್ಲಿ ಅಗತ್ಯಕ್ಕಿಂತ ಹೆಚ್ಚು ನೀರು ಒದಗಿಸಿದರೆ ಆ ಪ್ರದೇಶಕ್ಕೆ ಒಗ್ಗಿಕೊಂಡ ಪ್ರಾಣಿ, ಪಕ್ಷಿ ಪ್ರಭೇದಗಳು ಸ್ಥಳೀಯವಾಗಿ ನಶಿಸಿಹೋಗುವ ಸಾಧ್ಯತೆಗಳಿರುತ್ತವೆ.

ನಾವು ಕಳೆದುಕೊಂಡ ಪ್ರಭೇದಗಳು[ಬದಲಾಯಿಸಿ]

 • ಸಂರಕ್ಷಣೆಯ ಇಷ್ಟೆಲ್ಲಾ ಪ್ರಯತ್ನಗಳ ನಡುವೆಯೂ ನಾವು ಕೆಲ ಹಿನ್ನಡೆ ಕಂಡಿದ್ದೇವೆ. ರಾಜ್ಯದ ಬಂಡೀಪುರದ ಬಳಿಯಿರುವ ಬೀರಂಬಾಡಿ, ಚಾಮರಾಜನಗರ ತಾಲ್ಲೂಕಿನ ಅತ್ತಿಕಲ್ ಪುರ, ಕೊಳ್ಳೇಗಾಲ ತಾಲ್ಲೂಕಿನ ಬಂಡಳ್ಳಿ, ಬಳ್ಳಾರಿಯ ಕೆಲ ಭಾಗ ಮತ್ತು ಚಿಕ್ಕಬಳ್ಳಾಪುರದಲ್ಲಿ ಸಹ ಕಂಡು ಬರುತ್ತಿದ್ದ ಸಿವಂಗಿ ಅಥವಾ ಬೇಟೆ ಚಿರತೆ (ಚೀತಾ) ಕರ್ನಾಟಕ ಏಕೀಕರಣಕ್ಕೂ ಮುನ್ನವೇ ಕಣ್ಮರೆಯಾಯಿತು. ಈಗ ಉತ್ತರ ಭಾರತದಿಂದ, ಆಂಧ್ರ ಪ್ರದೇಶದ ಉತ್ತರ ಭಾಗದ ತನಕ ಕಾಣಬರುವ ಮರವಿ (ನೀಲಗಾಯ್) ಹಿಂದೆ ಕರ್ನಾಟಕದಲ್ಲಿಯೂ ಕಂಡುಬರುತ್ತಿತ್ತು. ಬಂಡೀಪುರದಲ್ಲಿ ಮರವಿಯನ್ನು 1940ರಲ್ಲಿ ಮೈಸೂರು ಮಹಾರಾಜರ ವನ್ಯಜೀವಿ ಸಂರಕ್ಷಣಾ ಅಧಿಕಾರಿ, ಡಿ.ಎನ್.ನೀಲಕಂಠ ರಾವ್ ದಾಖಲಿಸಿದ್ದರು. ಹಾಗೆಯೇ, ಪಶ್ಚಿಮ ಘಟ್ಟಗಳಲ್ಲಿ ಕಂಡು ಬರುತ್ತಿದ್ದ ಮಂಗಳ ಕುತ್ರಿ (ಮಲಬಾರ್ ಸಿವೆಟ್) ಇಂದು ನಶಿಸಿದೆ ಎನ್ನುವುದು ಹೆಚ್ಚುಕಡಿಮೆ ಖಾತ್ರಿಯಾಗಿದೆ.
 • ಈ ಶತಮಾನದ ಆದಿಭಾಗದಲ್ಲಿ ಕೊಡಗಿನ ಬ್ರಹ್ಮಗಿರಿ ಬೆಟ್ಟಗಳಲ್ಲಿ ನೀಲಗಿರಿ ಥಾರ್ ಸಹ ಇತ್ತೆಂದು ಭಾವಿಸಲಾಗಿದೆ. ಇವು ನಾವು ತಿಳಿದಿರುವ ಹಾಗೆ ಕಳೆದುಕೊಂಡಿರುವ ವನ್ಯಜೀವಿ ಪ್ರಭೇದಗಳು. ನಮಗೆ ತಿಳಿಯದೆ ಹಲವು ಪಕ್ಷಿ, ಉರಗ, ಕಪ್ಪೆ, ಮೀನು ಮತ್ತಿತರ ಪ್ರಭೇಧಗಳು ನಮ್ಮ ಗಮನಕ್ಕೆ ಬರದೇ ನಶಿಸಿ ಹೋಗಿರುವ ಸಾಧ್ಯತೆಗಳಿವೆ.
 • ಕೊಡಗಿನ ನದಿಯಲ್ಲಿ ವಿನಾಶದ ಅಂಚಿನಲ್ಲಿರುವ ಬಿಳಿ ಮೀನು, ಕೂರ್ಲ, ಊರ್ಲು, ಕೆಂಪು ಪುತ್ರಿ, ಬಾಳೆ ಮೀನು ಇಂತಹ ಅಳಿವಿನ ಅಂಚಿನಲ್ಲಿರುವ ಮತ್ಸ್ಯ ಪ್ರಭೇದಗಳು ಕಂಡುಬರುತ್ತವೆ. ಇವುಗಳಲ್ಲಿ ಕೆಲವು ಈ ನದಿಪಾತ್ರದಲ್ಲಿ ಮಾತ್ರ ಕಂಡುಬರುತ್ತವೆ. ವಿಶೇಷವಾಗಿ ಈ ನದಿಯಲ್ಲಿ ಹೇರಳವಾಗಿ ಕಂಡುಬರುತ್ತಿದ್ದ ಹಂಪ್-ಬ್ಯಾಕ್ಡ್ ಮಹಶೀರ್ ಮೀನು ಇಂದು ನಶಿಸುವ ಹಂತ ತಲುಪಿದೆ. ರಾಜ್ಯದ ಶರಾವತಿ ಕಣಿವೆ, ಶೆಟ್ಟಿಹಳ್ಳಿ ಪ್ರದೇಶಗಳಿಂದ ಆನೆಗಳು ಕಾಣೆಯಾಗಿವೆ. ಹಾಗೆಯೇ ತೋಳ, ಸಣ್ಣ ಹುಲ್ಲೆ, ದೊರವಾಯನ ಹಕ್ಕಿಗಳ ಸಂಖ್ಯೆ ರಾಜ್ಯದಲ್ಲಿ ಬಹು ಗಂಭೀರ ಪರಿಸ್ಥಿತಿ ತಲುಪಿವೆ.

ಮುಂದಿನ ದಿನಗಳು[ಬದಲಾಯಿಸಿ]

ಇಂದು ಬೆಂಗಳೂರು ನಗರವನ್ನು ದೇಶದ ವನ್ಯಜೀವಿ ವಿಜ್ಞಾನದ ರಾಜಧಾನಿಯೆಂದು ಕರೆಯಲಾಗುತ್ತಿದೆ. ದೇಶದ ಮೂಲೆ ಮೂಲೆಗಳಿಂದ ಪ್ರತಿಭಾವಂತರು ರಾಜ್ಯದಲ್ಲಿ ನೆಲೆಯೂರಿರುವುದು ಸಂತೋಷದ ವಿಷಯವೇ. ಆದರೆ ವನ್ಯಜೀವಿ ಸಂರಕ್ಷಣೆಯೆನ್ನುವುದು ಜೀವಿ ವಿಜ್ಞಾನವನ್ನಷ್ಟೇ ಅವಲಂಬಿಸಿಲ್ಲ. ಅದು ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ವಿಷಯ ಕೂಡ. ಇದಕ್ಕೆ ಸ್ಥಳೀಯ ಭಾಷೆ ಗೊತ್ತಿರಬೇಕು, ಸಂಸ್ಕೃತಿಯ ಅರಿವಿರಬೇಕು, ಸ್ಥಳೀಯ ಜನ, ರಾಜಕೀಯ ಮುಖಂಡರ ನಾಡಿ ಮಿಡಿತ ಅರ್ಥೈಸಿಕೊಳ್ಳುವ ಚಾಕಚಕ್ಯತೆ ಬೇಕಾಗುತ್ತದೆ. ನಮ್ಮ ರಾಜ್ಯದ ವನ್ಯಜೀವಿ ಪರಂಪರೆಯ ಸಂರಕ್ಷಣೆಗೆ, ನಮ್ಮ ಭಾಷೆ, ಸಂಸ್ಕೃತಿಯಷ್ಟೇ ಪ್ರಾಮುಖ್ಯತೆಯನ್ನು ನಾವು ಕೊಡಬೇಕಾಗಿದೆ. ಇದಕ್ಕಾಗಿ ಆಸಕ್ತ ಕನ್ನಡಿಗರೆಲ್ಲರೂ ಒಂದೇ ವೇದಿಕೆಯಲ್ಲಿ ಕಾರ್ಯನಿರ್ವಹಿಸಬೇಕಾಗಿದೆ.

ಹೊಸದಾಗಿ ಸೇರ್ಪಡೆಯಾದದ್ದು[ಬದಲಾಯಿಸಿ]

ಇತ್ತೀಚೆಗೆ ನಮ್ಮ ಅಧ್ಯಯನದಿಂದ ತುಮಕೂರಿನ ಬುಕ್ಕಾಪಟ್ಣ ಕಾಡಿನಲ್ಲಿ ಸಣ್ಣ ಹುಲ್ಲೆಗಳಿರುವುದನ್ನು (ಚಿಂಕಾರ) ದಾಖಲಿಸಿದ್ದು ಈ ಆಡಿನ ಜಾತಿಯ ವನ್ಯಜೀವಿಗಳಿರುವ ಹೊಸ ಪ್ರದೇಶವನ್ನು ಗುರುತಿಸಲು ಸಾಧ್ಯವಾಯಿತು. ಹಾಗೆಯೇ ಅರಣ್ಯ ಇಲಾಖೆಯ ಕ್ಯಾಮರಾ ಟ್ರಾಪಿನಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಸಹ ಎರಳೆಗಳನ್ನು ಹೊಸದಾಗಿ ದಾಖಲಿಸಿರುವುದು ಸಂತೋಷದ ವಿಚಾರ. ರಾಜ್ಯದಲ್ಲೇ ಪ್ರಥಮ ಬಾರಿಗೆ ಜೇನುಹೀರ್ಕ್ (ಹನಿ ಬ್ಯಾಡ್ಜರ್) ಪ್ರಾಣಿಯು ಕಾವೇರಿ ವನ್ಯಜೀವಿಧಾಮದ ಹಲಗೂರು ವಲಯದಲ್ಲಿ ನಾವು ಅಳವಡಿಸಿದ್ದ ಕ್ಯಾಮರಾ ಟ್ರಾಪ್‌ನಲ್ಲಿ ದಾಖಲಾಗಿದೆ. ಇವುಗಳೊಡನೆ ಹಲವು ಜಾತಿಯ ಕಪ್ಪೆ, ಮೀನು, ಸಸ್ಯಪ್ರಭೇದಗಳನ್ನು ಹಲವು ವಿಜ್ಞಾನಿಗಳು ರಾಜ್ಯದಲ್ಲಿ ಹೊಸದಾಗಿ ಗುರುತಿಸಿದ್ದಾರೆ. [೧]

ಮೂರು ವರ್ಷದಲ್ಲಿ 27 ಜನರು ಬಲಿ[ಬದಲಾಯಿಸಿ]

 • 9 Jan, 2017ಕೊಡಗು ಜಿಲ್ಲೆಯಲ್ಲಿ ಕಾಫಿ ಹಣ್ಣು ತಿನ್ನಲು ಅರಣ್ಯದಂಚಿನ ತೋಟಗಳಿಗೆ ಕಾಡಾನೆಗಳ ಲಗ್ಗೆಆದಿತ್ಯ ಕೆ.ಎ
 • ಕೊಡಗು ಜಿಲ್ಲೆಯಲ್ಲಿ ಕಾಡಾನೆ– ಮಾನವ ಸಂಘರ್ಷ ನಿರಂತರವಾಗಿದ್ದು, ಮೂರು ವರ್ಷಗಳ ಅವಧಿಯಲ್ಲಿ 27 ಜನರು ಆನೆ ದಾಳಿಗೆ ಬಲಿಯಾಗಿದ್ದಾರೆ. ಈ ಸಂಘರ್ಷ ತಪ್ಪಿಸಲು ಅರಣ್ಯ ಇಲಾಖೆ ಹಾಗೂ ತೋಟದ ಮಾಲೀಕರು ಹೊಸ ಯೋಜನೆಗಳನ್ನು ಅನುಷ್ಠಾನಕ್ಕೆ ತಂದರೂ ಅವು ಜಿಲ್ಲೆಯಲ್ಲಿ ಫಲ ನೀಡುತ್ತಿಲ್ಲ.
 • ನವೆಂಬರ್‌ನಲ್ಲಿ ಚೆಟ್ಟಳ್ಳಿ, ಸಿದ್ದಾಪುರ, ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ನಾಡಿಗೆ ಲಗ್ಗೆಯಿಡುತ್ತಿದ್ದ ಕೆಲವು ಪುಂಡಾನೆಗಳನ್ನು ಸೆರೆ ಹಿಡಿದು, ದುಬಾರೆ ಶಿಬಿರಕ್ಕೆ ಬಿಡಲಾಯಿತು. ಆದರೆ, ಮತ್ತೆ ಸಿದ್ದಾಪುರ ವ್ಯಾಪ್ತಿಯಲ್ಲಿ ಆನೆ ಹಾವಳಿ ಆರಂಭಗೊಂಡಿದೆ ಎಂದು ನೋವು ತೋಡಿಕೊಳ್ಳುತ್ತಾರೆ ಬೆಳೆಗಾರರು.
 • ಕಾಡಿನಿಂದ ನಾಡಿಗೆ ನುಗ್ಗುವ ಆನೆಗಳನ್ನು ತಡೆಯಲು ಆರಣ್ಯ ಇಲಾಖೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಕಂದಕ ನಿರ್ಮಾಣ, ಸೋಲಾರ್‌ ಬೇಲಿ ಅಳವಡಿಕೆ, ಸಿಮೆಂಟ್‌ ತಡೆಗೋಡೆ, ಕಬ್ಬಿಣದ ಗೇಟ್‌ ಅಳವಡಿಕೆ ಮಾಡಲಾಗಿದೆ. ಆದರೆ ಇದ್ಯಾವುದಕ್ಕೂ ಕಾಡಾನೆಗಳು ಕ್ಯಾರೆ ಎನ್ನುತ್ತಿಲ್ಲ. ಸಿಮೆಂಟ್‌ ಗೋಡೆಗಳನ್ನೇ ಮುರಿದು ಮುನ್ನುಗ್ಗುತ್ತಿವೆ. ಈಗ ಕಾಫಿ ಹಣ್ಣು ತಿನ್ನಲು ಅರಣ್ಯದಂಚಿನ ತೋಟಗಳಿಗೆ ಲಗ್ಗೆಯಿಡುತ್ತಿವೆ. ಅರಣ್ಯ ಪ್ರದೇಶದಲ್ಲಿ ಆನೆಗಳಿಗೆ ಅಗತ್ಯವಿರುವ ಆಹಾರ ಬೆಳೆಯಲು ಕ್ರಮ ತೆಗೆದುಕೊಳ್ಳಲಾಗಿದೆ. ಅಲ್ಲಲ್ಲಿ ಹೊಸದಾಗಿ ಕೆರೆ ನಿರ್ಮಿಸಲಾಗಿದೆ. ಉತ್ತಮ ಮಳೆ ಬೀಳದೇ ಕೆರೆಗಳೂ ಭರ್ತಿಯಾಗಿಲ್ಲ. ಆನೆಗಳಿಗೆ ಆಹಾರ ನೀಡಬೇಕಾದ ಸಸಿಗಳು ಚಿಗುರೊಡೆದಿಲ್ಲ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.
 • ಕಾಡು ಪ್ರಾಣಿಗಳ ದಾಳಿಯಿಂದ ಬೆಳೆ ನಷ್ಟ, ಮಾನವ ಹಾಗೂ ಜಾನುವಾರು ಸಾವು, ಗಾಯ, ಬೆಳೆ ನಷ್ಟಕ್ಕೆ ದೊಡ್ಡ ಮೊತ್ತದ ಪರಿಹಾರ ವಿತರಿಸಲಾಗಿದೆ. 2014ರಲ್ಲಿ ಕೊಡಗು ವೃತ್ತದ ವ್ಯಾಪ್ತಿಯಲ್ಲಿ 4,217 ಬೆಳೆ ನಷ್ಟ ಪ್ರಕರಣಗಳು ವರದಿಯಾಗಿದ್ದವು. ಇದಕ್ಕೆ ₹ 1.62 ಕೋಟಿ ಪರಿಹಾರ ನೀಡಲಾಗಿದೆ. 8 ಮಂದಿ ಆನೆ ದಾಳಿಗೆ ಬಲಿಯಾಗಿದ್ದರೆ, 5 ಮಂದಿ ಗಾಯಗೊಂಡಿದ್ದರು. 25 ಜಾನುವಾರುಗಳೂ ಕಾಡು ಪ್ರಾಣಿಗಳ ಆಕ್ರೋಶಕ್ಕೆ ಬಲಿಯಾಗಿವೆ.
 • 2015ರಲ್ಲಿ 3,010 ಬೆಳೆ ನಷ್ಟ ಪ್ರಕರಣಗಳಲ್ಲಿ ₹ 1.28 ಕೋಟಿ ಪರಿಹಾರ ವಿತರಿಸಲಾಗಿದೆ. 13 ಮಂದಿ ಸಾವನ್ನಪ್ಪಿದ್ದರೆ, 8 ಮಂದಿ ಗಾಯಗೊಂಡಿದ್ದರು. 22 ಜಾನುವಾರುಗಳನ್ನೂ ಸಾಯಿಸಿದ್ದವು. 2016ರಲ್ಲಿ 2,115 ಬೆಳೆ ನಷ್ಟ ಪ್ರಕರಣಗಳಿಗೆ ₹ 92.77 ಲಕ್ಷ ಪರಿಹಾರ ವಿತರಿಸಲಾಗಿದೆ (ನವೆಂಬರ್‌ ಅಂತ್ಯಕ್ಕೆ). ಆನೆ ದಾಳಿಗೆ ಆರು ಮಂದಿ ಬಲಿಯಾಗಿದ್ದರೆ, ನಾಲ್ಕು ಮಂದಿ ಗಾಯಗೊಂಡಿದ್ದರು. 22 ಜಾನುವಾರುಗಳು ಮೃತಪಟ್ಟಿದ್ದವು.[೨]

ಚಾಮರಾಜನಗರ ಜಿಲ್ಲೆಯಲ್ಲಿ ಕಾಡಾನೆ ದಾಳಿಯಿಂದ ಇಬ್ಬರು ಮೃತ[ಬದಲಾಯಿಸಿ]

 • ಬಂಡೀಪುರ ರಾಷ್ಟ್ರೀಯ ಉದ್ಯಾನದ ಅಂಚಿನಲ್ಲಿ ಇರುವ ಗುಂಡ್ಲುಪೇಟೆ ತಾಲ್ಲೂಕಿನ ಹೊಸಹಳ್ಳಿ ಕಾಲೊನಿಯ ರೈತ ಚನ್ನಬಸವಯ್ಯ(55) ಆನೆ ದಾಳಿಗೆ ಸಿಲುಕಿ ಸೋಮವಾರ ಮೃತಪಟ್ಟಿದ್ದಾರೆ. ಬಹಿರ್ದೆಸೆಗೆ ಹೋದ ವೇಳೆ ಆನೆ ದಾಳಿಗೆ ಸಿಲುಕಿ ಜಿಲ್ಲೆಯ ತಮಿಳುನಾಡು ಗಡಿ ಭಾಗದಲ್ಲಿರುವ ಎತ್ತುಗಟ್ಟಿ ಬೆಟ್ಟದ ಬಸವೇಶ್ವರ ದೇವಸ್ಥಾನದ ಹಿಂಭಾಗ ಚಾಮರಾಜನಗರ ತಾಲ್ಲೂಕಿನ ಯಾನಗಳ್ಳಿಯ ಮಹದೇವನಾಯ್ಕ(60) ಮೃತಪಟ್ಟವರು.ಆನೆ ದಾಳಿ: ಇಬ್ಬರು ಸಾವು;9 Jan, 2017

ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

 • ೧.*ವಿ.ಗಿರೀಶ್‌ ನಿರೂಪಣೆ: ಸಚ್ಚಿದಾನಂದ ಕುರಗುಂದ
 • ೨.* ಸಂಜಯ್ ಗುಬ್ಬಿ-ವನ್ಯಜೀವಿ ವಿಜ್ಞಾನಿ
 • ೩. ಅಂತರಾಳಕೆ.:ಉಲ್ಲಾಸ ಕಾರಂತ
 • ಲೇಖಕರು ವನ್ಯಜೀವಿ ಸಂರಕ್ಷಣಾ ಸೊಸೈಟಿಯ ವೈಜ್ಞಾನಿಕ ನಿರ್ದೇಶಕರು (13/12/2014 ಪ್ರಜಾವಾಣಿ)
 • ೪.ಸಂದರ್ಶನ: ಹೇಮಾ ವೆಂಕಟ್‌ //(13/12/2014- ಪ್ರಜಾವಾಣಿ--ಅರಣ್ಯ ಸಿಬ್ಬಂದಿ ಸನ್ನದ್ಧ ಜನ ಜಾಗೃತಿಗೆ ಕ್ರಮ)
 • ತಾಣ:[೧]
 1. "ಪರಿಸರ ಮೌಲ್ಯಮಾಪನ ಬಹು ಅಗತ್ಯಸಂಜಯ್ ಗುಬ್ಬಿ ; 25 Nov, 2016". Archived from the original on 2016-11-25. Retrieved 2016-12-10.
 2. "ಮೂರು ವರ್ಷದಲ್ಲಿ 27 ಜನರು ಬಲಿ;ಆದಿತ್ಯ ಕೆ.ಎ.;9 Jan, 2017". Archived from the original on 2017-01-09. Retrieved 2017-01-09.