ರೈತ ಹುತಾತ್ಮ ದಿನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೂನ್ ೨೧- ಈ ದಿನವನ್ನು ಕರ್ನಾಟಕದಲ್ಲಿದಲ್ಲಿ ರೈತ ಹುತಾತ್ಮ ದಿನವೆಂದು ಆಚರಿಸಲಾಗುತ್ತದೆ.

ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ೧೯೭೪ರಿಂದ ೧೯೮೦ರವರೆಗೆ ಸತತ ೬ ವರ್ಷದ ಬರಗಾಲ ಬಿದ್ದಾಗಲೂ ಸಹ ಸರಕಾರವು ರೈತರಿಂದ ನೀರಾವರಿ ಕರ, ಬೆಟರಮೆಂಟ್ ಲೆವಿ ಹಾಗು ಸುಸ್ತಿ ಬಡ್ಡಿ ವಸೂಲಿಗೆ ಕಠಿಣ ಕ್ರಮಗಳನ್ನು ತೆಗೆದುಕೊಂಡಿತು. ಅಧಿಕಾರಿಗಳು ರೈತರ ಮನೆಮನೆಗೆ ನುಗ್ಗಿ ಅಲ್ಲಿಯ ಪಾತ್ರೆ- ಪಗಡೆ,ರಂಟೆ- ಕುಂಟಿಗಳನ್ನು ಜಪ್ತ ಮಾಡತೊಡಗಿದರು. ಇದರ ವಿರುದ್ಧ ನವಲಗುಂದ, ನರಗುಂದ,ಸವದತ್ತಿ,ರಾಮದುರ್ಗ ತಾಲೂಕುಗಳ ರೈತರು ೧೯೮೦ ಮಾರ್ಚ್ ೧ ರಂದು ನವಲಗುಂದ ತಾಲೂಕಿನ ಅಳಗವಾಡಿ ಎನ್ನುವ ಹಳ್ಳಿಯಲ್ಲಿ ಬೃಹತ್ ಸಮಾವೇಶ ನಡೆಸಿದರು. ಈ ಸಭೆಯಲ್ಲಿ ಮಲಪ್ರಭಾ ಪ್ರದೇಶ ರೈತ ಸಮನ್ವಯ ಸಮಿತಿಯನ್ನು ರಚಿಸಲಾಯಿತು. ಶ್ರೀಯುತರಾದ ಬಿ.ಆರ್.ಯಾವಗಲ್, ಬಿ.ಸಿ.ಬ್ಯಾಳಿ, ರಾಜಶೇಖರಪ್ಪ ಹೊಸಕೇರಿ, ವಿ.ಎನ್.ಹಳಕಟ್ಟಿ, ಬಿ.ಜಿ.ಸಾಲೂಟಗಿ, ಎಸ್.ಎಮ್.ಬಾಳಿಕಾಯಿ ಈ ಸಮಿತಿಯ ಸಂಚಾಲಕರು. ಮನವಿ, ಧರಣಿ, ಸತ್ಯಾಗ್ರಹ ಯಾವದಕ್ಕೂ ಸರಕಾರ ಕಿವಿಗೊಡಲಿಲ್ಲ.

ಆ ಸಮಯದಲ್ಲಿ ಜಿಲ್ಲಾಧಿಕಾರಿಯಾಗಿದ್ದ ರೇಣುಕಾ ವಿಶ್ವನಾಥನ್ ಮನವಿಕಾರ ರೈತರನ್ನು ಭೇಟಿಯಾಗುವ ಸೌಜನ್ಯವನ್ನೂ ತೋರಲಿಲ್ಲ. ವಿಶೇಷ ಜಿಲ್ಲಾಧಿಕಾರಿ ಗೋವಿಂದರಾಜ ರೈತರನ್ನು ಬೈದು ಕಳುಹಿಸಿದರು. ಇದೆಲ್ಲದರ ಪರಿಣಾಮವಾಗಿ ಜುಲೈ ೨೧ರಂದು ನವಲಗುಂದ, ನರಗುಂದ, ಸವದತ್ತಿ ಹಾಗು ರಾಮದುರ್ಗ ತಾಲೂಕುಗಳಲ್ಲಿ ಬಂದ್ ಆಚರಿಸಲಾಯಿತು. ಜಿಲ್ಲಾಧಿಕಾರಿಯವರ ಆದೇಶದ ಮೇರೆಗೆ, ನರಗುಂದ ತಹಶೀಲದಾರರು ಪ್ರತಿಭಟಿಸುತ್ತಿದ್ದ ರೈತರನ್ನು ತುಳಿದುಕೊಂಡೇ ಕಚೇರಿಯ ಒಳಗೆ ನಡೆದರು. ಅದೆ ವೇಳೆಗೆ ಪಿ.ಎಸ್.ಐ. ರೈತರ ಮೇಲೆ ಗುಂಡು ಹಾರಿಸಿದರು. ರೊಚ್ಚಿಗೆದ್ದ ಜನ ಕಚೇರಿಯನ್ನು ಧ್ವಂಸ ಮಾಡಿ ಪೋಲೀಸರ ಮೇಲೆ ಪ್ರತಿ ದಾಳಿ ಮಾಡಿದರು. ಈ ಗಲಭೆಯಲ್ಲಿ ಮೂವರು ಪೊಲೀಸರು ಬಲಿಯಾದರೆ, ಪೋಲೀಸ ಗುಂಡೇಟಿಗೆ ಈರಪ್ಪ ಕಡ್ಲಿಕೊಪ್ಪ ಎನ್ನುವ ರೈತ ಬಲಿಯಾದ. ಇದೇ ವೇಳೆ ನವಲಗುಂದದಲ್ಲಿ ನೀರಾವರಿ ಕಚೇರಿಗೆ ಮುತ್ತಿಗೆ ಹಾಕಿದ ರೈತರ ಮೇಲೆ ಗೋಳೀಬಾರ್ ನಡೆಯಿತು. ರೈತ ಬಸಪ್ಪ ಲಕ್ಕುಂಡಿ ಆಹುತಿಯಾದರು. ಸಿಟ್ಟಿಗೆದ್ದ ಜನ ನೀರಾವರಿ ಕಚೇರಿಗೆ ಬೆಂಕಿ ಹಚ್ಚಿ ಕಂಡ ಕಂಡ ಅಧಿಕಾರಿಗಳನ್ನು ಬೆನ್ನಟ್ಟಿ ಥಳಿಸಿದರು.

ಮರುದಿನ ಪ್ರಾರಂಭವಾದದ್ದು ಸರಕಾರದ ಪ್ರತೀಕಾರ ಕಾಂಡ. ನವಲಗುಂದ, ನರಗುಂದದಲ್ಲಿ ಹತ್ತಿದ ಬೆಂಕಿ ಇಡೀ ರ್ನಾಟಕವನ್ನೇ ವ್ಯಾಪಿಸಿತು. ರಾಜ್ಯದಾದ್ಯಂತ ನಡೆದ ಪ್ರತಿಭಟನೆ ಹಾಗು ಪ್ರತಿಯಾಗಿ ನಡೆದ ಗೋಳೀಬಾರುಗಳಲ್ಲಿ ೧೩೯ ರೈತರು ಬಲಿಯಾದರು. ರಾಜ್ಯಾದ್ಯಂತ ರೈತ ಸಂಘಟನೆ ರೂಪುಗೊಂಡಿತು. ಇದರ ಫಲವಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಪಕ್ಷ ಪರಾಭವಗೊಂಡು, ರಾಮಕೃಷ್ಣ ಹೆಗಡೆ ಸರಕಾರ ಅಸ್ತಿತ್ವಕ್ಕೆ ಬಂದಿತು.

ಜೂನ್ ೨೧ನ್ನು ರೈತ ಹುತಾತ್ಮ ದಿನವಾಗಿ ಆಚರಿಸಲಾಗುತ್ತಿದೆ.