ವಿಷಯಕ್ಕೆ ಹೋಗು

ರಾಡ್‌ಕ್ಲಿಫ್‌ ಅವಾರ್ಡ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ರಾಡ್‌ಕ್ಲಿಫ್‌ ಅವಾರ್ಡ್‌ (Radcliffe Award) ಇಂದ ಪುನರ್ನಿರ್ದೇಶಿತ)

ಭಾರತ ಇಬ್ಭಾಗವಾದಾಗ, ೧೯೪೭ರ ಆಗಸ್ಟ್‌ ೧೭ರಂದು, ರಾಡ್‌ಕ್ಲಿಫ್‌ ರೇಖೆ ಭಾರತ ಮತ್ತು ಪಾಕಿಸ್ತಾನದ ನಡುವಣ ರೇಖೆಯಾಯಿತು. ಸರ್‌ ಸಿರಿಲ್‌ ರಾಡ್‌ಕ್ಲಿಫ್‌ ಅಧ್ಯಕ್ಷತೆಯಲ್ಲಿ ಸಭೆಸೇರಿದ ಗಡಿ ಆಯೋಗ (Border Commissions) ೮೮ ದಶಲಕ್ಷ ಜನಸಂಖ್ಯೆಯುಳ್ಳ ಪ್ರದೇಶ 175,000 square miles (450,000 km2)ವನ್ನು ಸಮಪಾಲಾಗಿ ವಿಭಾಗಿಸಲು ಈ ರೇಖೆಯನ್ನು ನಿರ್ಣಯಿಸಲಾಯಿತು.[]

ಭಾರತದ ವಿಭಜನೆ

ಹಿನ್ನೆಲೆ

[ಬದಲಾಯಿಸಿ]

ಭಾರತದಲ್ಲಿ ಬ್ರಿಟಿಷ್‌ ಆಳ್ವಿಕೆಯು ೧೯೪೭ರ ಆಗಸ್ಟ್‌ ೧೫ರಂದು ಕೊನೆಯಾಗುವುದೆಂದು ಒಂದು ತಿಂಗಳ ಮುಂಚೆಯೇ, ಅಂದರೆ ೧೯೪೭ರ ಜುಲೈ ೧೫ರಂದು ಬ್ರಿಟಿಷ್‌ ಸಂಸತ್ತಿನಲ್ಲಿ ಭಾರತೀಯ ಸ್ವಾತಂತ್ರ್ಯ ಕಾಯಿದೆ ೧೯೪೭ ಅನ್ವಯ ನಿರ್ಣಯಿಸಲಾಯಿತು. ಅಲ್ಲದೆ, ಭಾರತವನ್ನು ಇಬ್ಭಾಗಿಸಿ, ಎರಡು ಸ್ವತಂತ್ರ ರಾಷ್ಟ್ರಗಳ ರಚನೆಯನ್ನೂ ನಿರ್ಣಯಿಸಲಾಯಿತು: ಭಾರತ ಸಂಯುಕ್ತ ಒಕ್ಕೂಟ ಹಾಗೂ, ಬ್ರಿಟಿಷ್‌ ಆಳ್ವಿಕೆಯ ಭಾರತದಲ್ಲಿರುವ ಮುಸ್ಲಿಮರಿಗಾಗಿ ಪಾಕಿಸ್ತಾನ ಸ್ವತಂತ್ರ ರಾಷ್ಟ್ರ ಎಂಬ ತಾಯ್ನಾಡಿನ ಸೃಷ್ಟಿಯನ್ನೂ ನಿರ್ಣಯಿಸಲಾಯಿತು.

ಪಾಕಿಸ್ತಾನವನ್ನು ಮುಸ್ಲಿಮರ ತಾಯ್ನಾಡು ಹಾಗೂ ಹಿಂದೂಗಳು ಬಹಳಷ್ಟು ಸಂಖ್ಯೆಯಲ್ಲಿರುವ ಭಾರತವನ್ನು ಜಾತ್ಯತೀತ ರಾಷ್ಟ್ರ ಎಂದು ನಿರ್ಣಯಿಸಲಾಯಿತು. ಉತ್ತರ ಭಾಗದಲ್ಲಿ ಮುಸ್ಲಿಮರು ಬಹಳಷ್ಟು ಸಂಖ್ಯೆಯಲ್ಲಿ ವಾಸಿಸುತ್ತಿದ್ದ ಪ್ರದೇಶಗಳು ಪಾಕಿಸ್ತಾನದ ಭಾಗಗಳಾಗಿದ್ದವು. ವಿಭಜನೆಗೆ ಮುಂಚೆ ೯೧.೮%ರಷ್ಟು ಮುಸ್ಲಿಮರಿದ್ದ ಬಲೂಚಿಸ್ತಾನ್ ಹಾಗೂ ೭೨.೭%ರಷ್ಟು ಮುಸ್ಲಿಮರಿದ್ದ ಸಿಂಧ್‌ ಪ್ರಾಂತ್ಯಗಳನ್ನು ಪೂರ್ತಿಯಾಗಿ ಪಾಕಿಸ್ತಾನಕ್ಕೆ ಬಿಟ್ಟುಕೊಡಲಾಯಿತು. ಆದರೂ, ಈಶಾನ್ಯದಲ್ಲಿನ ಬಂಗಾಳ (೫೪.೪%) ಹಾಗೂ ವಾಯವ್ಯದಲ್ಲಿನ ಪಂಜಾಬ್‌ (೫೫.೭%) ಪ್ರಾಂತ್ಯಗಳಲ್ಲಿ ಮುಸ್ಲಿಮರು ಸ್ಪಷ್ಟ ಬಹುಮತದಲ್ಲಿರಲಿಲ್ಲ.[] ಪಂಜಾಬ್‌ನ ಪಶ್ಚಿಮ ಭಾಗವು ಪಶ್ಚಿಮ ಪಾಕಿಸ್ತಾನದ ಅಂಗವಾಯಿತು. ಅದರ ಪೂರ್ವ ಭಾಗವು ಭಾರತ ದೇಶದ ಪಂಜಾಬ್‌ ರಾಜ್ಯವಾಯಿತು. ಬಂಗಾಳವನ್ನು ಪಾಕಿಸ್ತಾನದಲ್ಲಿನ ಪೂರ್ವ ಬಂಗಾಳ ಹಾಗೂ ಭಾರತದಲ್ಲಿನ ಪಶ್ಚಿಮ ಬಂಗಾಳವೆಂದು ಭಾಗಿಸಲಾಯಿತು. ಸ್ವಾತಂತ್ರ್ಯದ ನಂತರ, ವಾಯವ್ಯ ಗಡಿನಾಡು ಪ್ರಾಂತ್ಯ(ಎನ್‌ಡಬ್ಲ್ಯೂಎಫ್‌ಪಿ)ವು ಜನಾಭಿಪ್ರಾಯ ಮತದ ಮೂಲಕ ಪಾಕಿಸ್ತಾನದೊಂದಿಗೆ ಸೇರಲು ನಿರ್ಣಯಿಸಿತು. ಅಫ್ಘಾನಿಸ್ತಾನದ ಗಡಿ ಪಕ್ಕದಲ್ಲಿದ್ದ ಎನ್‌ಡಬ್ಲ್ಯೂಎಫ್‌ಪಿ ಪ್ರಾಂತ್ಯವು ಮುಂಚೆ ಡ್ಯುರಾಂಡ್‌ ರೇಖೆಯ ಮೂಲಕ ಪ್ರತ್ಯೇಕಿತವಾಗಿತ್ತು.[]

ಪಂಜಾಬ್‌ನ ಜನಸಂಖ್ಯೆಯ ಹಂಚಿಕೆ ಹೇಗಿತ್ತೆಂದರೆ, ಹಿಂದೂ, ಮುಸ್ಲಿಮ್‌ ಮತ್ತು ಸಿಖ್ಖರನ್ನು ಸ್ಪಷ್ಟವಾಗಿ ವಿಭಜಿಸುವಂತಹ ಸ್ಪಷ್ಟ ರೇಖೆಯೇ ಇರಲಿಲ್ಲ. ಇದೇ ರೀತಿ, ಮಹಮ್ಮದ್‌ ಅಲಿ ಜಿನ್ನಾ ನಾಯಕತ್ವದ ಮುಸ್ಲಿಮ್‌ ಲೀಗ್‌, ಜವಾಹರ್‌ಲಾಲ್‌ ನೆಹರೂ ಹಾಗೂ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ನಾಯಕತ್ವದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಹಾಗೂ ಬ್ರಿಟಿಷರನ್ನು ಸಾಂತ್ವನಗೊಳಿಸುವಂತಹ ಯಾವ ರೇಖೆಯೂ ಇರಲಿಲ್ಲ. ಇನ್ನೂ ಹೆಚ್ಚಿಗೆ, ಇನ್ನೂ ಯಾವುದಾದರೂ ವಿಭಜನೆಯಾದಲ್ಲಿ, 'ರಸ್ತೆ-ರೈಲು ಸಂವಹನ, ನೀರಾವರಿ ಯೋಜನೆಗಳು, ವಿದ್ಯುತ್‌ ವ್ಯವಸ್ಥೆ ಹಾಗೂ ವ್ಯಕ್ತಿಗತ ಜಮೀನು-ಆಸ್ತಿಪಾಸ್ತಿಯನ್ನೂ ವಿಭಜಿಸಬೇಕಾದೀತು' ಎಂಬ ಮಾತು ಕೇಳಿಬಂದಿತು.[] ಆದರೂ, ಸರಿಯಾದ ರೀತಿಯಲ್ಲಿ ಎಳೆದ ರೇಖೆಯ ಮೂಲಕ ಕೃಷಿಕರು ತಮ್ಮ ಹೊಲಗದ್ದೆಗಳಿಂದ ಬೇರೆಯಾಗುವುದು ಹಾಗೂ ದಶಲಕ್ಷಗಟ್ಟಲೆ ಜನರು ಸ್ಥಳಾಂತರಗೊಳ್ಳುವುದನ್ನು ಕನಿಷ್ಠಗೊಳಿಸಲಿತ್ತು.

ಎಂದುಕೊಂಡಂತೆ, ಇಡೀ ಉಪಖಂಡದಲ್ಲಿ, ಸುಮಾರು ೧೪ ದಶಲಕ್ಷ ಜನರು ತಮ್ಮ ಮನೆಗಳನ್ನು ಬಿಟ್ಟು, ವಿಮಾನ, ರೈಲು, ರಸ್ತೆಗಳ ಮೂಲಕ, ಕಾರು, ಲಾರಿ, ಬಸ್, ಎತ್ತಿನಗಾಡಿಗಳಲ್ಲಿ - ಇನ್ನೂ ಬಹಳಷ್ಟು ಜನರು ಕಾಲ್ನಡಿಗೆಯಲ್ಲಿ ಸ್ಥಳಾಂತರಗೊಂಡು, ಹೊಸ ಜಾಗದಲ್ಲಿ ತಮ್ಮದೇ ವ್ಯವಸ್ಥೆ ನೋಡಿಕೊಳ್ಳಬೇಕಾಯಿತು.[] ಇವುಗಳಲ್ಲಿ ಬಹಳಷ್ಟು ಜನರು ಎದುರು ದಿಕ್ಕಿನಿಂದ ಬಂದವರೊಂದಿಗೆ ಜಗಳವಾಡಿ ಒಬ್ಬರನ್ನೊಬ್ಬರು ಕೊಚ್ಚಿ ಕೊಲ್ಲಲಾರಂಭಿಸಿದರು. ಕೆಲವರು ಆಹಾರವಿಲ್ಲದೆ ಹಾಗೂ ತೀವ್ರ ಆಯಾಸದಿಂದ ಸತ್ತರು; ಇನ್ನೂ ಕೆಲವರು, ವಿಶ್ವದೆಲ್ಲಡೆ ನಿರಾಶ್ರಿತರಿಗೆ ತಗಲುವ ಕಾಲರಾ, ಅತಿಸಾರದಂತಹ ಮಾರಕ ರೋಗಗಳಿಗೆ ತುತ್ತಾಗಿ ಸತ್ತರು.[] ಆ ಕಾಲದಲ್ಲಿ ಬ್ರಿಟಿಷ್‌ ಆಡಳಿತದ ಅಧಿಕೃತ ಅಂದಾಜಿನ ಪ್ರಕಾರ, ಸತ್ತವರ ಸಂಖ್ಯೆ ೨೦೦,೦೦೦ರಿಂದ ಎರಡು ದಶಲಕ್ಷದ ತನಕವಿತ್ತು. ಅಂತಿಮವಾಗಿ, ಸುಮಾರು ಒಂದು ದಶಲಕ್ಷ ಸಾವು-ನೋವುಗಳು ಎಂದು ಒಪ್ಪಿಕೊಳ್ಳಲಾಯಿತು.[]

ಪ್ರಕ್ರಿಯೆ ಮತ್ತು ಪ್ರಧಾನ ವ್ಯಕ್ತಿಗಳು

[ಬದಲಾಯಿಸಿ]

ಲಾರ್ಡ್‌ ಲೂಯಿ ಮೌಂಟ್ಬಾಟೆನ್‌ಗೆ ಮುಂಚೆ ಭಾರತದ ರಾಜಪ್ರಭುತ್ವದ ಪ್ರತಿನಿಧಿ(ವೈಸರಾಯ್‌)ಯಾಗಿದ್ದ ಲಾರ್ಡ್‌ ವಾವೆಲ್‌, ೧೯೪೭ರ ಫೆಬ್ರವರಿ ತಿಂಗಳಲ್ಲಿ ಸ್ಥೂಲ ಗಡಿ ರೇಖೆ ವಿನ್ಯಾಸ ಮಾಡಿಸಿದ್ದರು. ಯಾವ ಪ್ರಾಂತ್ಯವು ಯಾವ ದೇಶಕ್ಕೆ ಸೇರಿಸಬೇಕೆಂಬುದನ್ನು ನಿಖರವಾಗಿ ನಿರ್ಣಯಿಸಲು, ಬ್ರಿಟನ್‌ ಎರಡು ಗಡಿರೇಖಾ ಆಯೋಗಗಳ (ಪಂಜಾಬಿಗೊಂದು, ಬಂಗಾಳಕ್ಕೊಂದು) ಮುಖ್ಯಸ್ಥರ ಸ್ಥಾನಕ್ಕೆ ಸರ್‌ ಸಿರಿಲ್‌ ರಾಡ್‌ಕ್ಲಿಫ್‌ರನ್ನು ನೇಮಿಸಿತು.

ಮುಸ್ಲಿಮರು ಮತ್ತು ಮುಸ್ಲಿಮೇತರರು ಬಹಳಷ್ಟು ಸಂಖ್ಯೆಯಲ್ಲಿ ವಾಸಿಸುವ ಪ್ರದೇಶಗಳನ್ನು ಗುರುತಿಸಿ, ಆ ಆಧಾರದ ಮೇಲೆ ಪಂಜಾಬ್‌ ಪ್ರಾಂತ್ಯದ ಭಾಗಗಳನ್ನು ವಿಭಾಗಿಸುವುದು ಎಂದು ಈ ಆಯೋಗಕ್ಕೆ ಸೂಚನೆ ನೀಡಲಾಯಿತು. ಈ ರೀತಿ ಮಾಡುವಾಗ, ಇತರೆ ಅಂಶಗಳನ್ನೂ ಸಹ ಪರಿಗಣಿಸಬೇಕು ಎಂದೂ ತಿಳಿಸಲಾಯಿತು.[] ಇತರೆ ಅಂಶಗಳನ್ನು ಸರಿಯಾಗಿ ವ್ಯಾಖ್ಯಾನಿಸಿರಲಿಲ್ಲ, ಇದರಿಂದಾಗಿ ರಾಡ್‌ಕ್ಲಿಫ್‌ರಿಗೆ ತಮ್ಮದೇ ಆದ ವ್ಯಾಖ್ಯಾನ ಮುಂದಿಡಲು ಅವಕಾಶ ದೊರೆಯಿತು. ಆದರೂ, ಸ್ವಾಭಾವಿಕ ಗಡಿಗಳು, ಸಂವಹನಗಳು, ಹರಿಯುವ ನದಿ ನೀರಿನ ಹರಿವು ಹಾಗೂ ನೀರಾವರಿ ವ್ಯವಸ್ಥೆ, ಜೊತೆಗೆ ಸಾಮಾಜಿಕ-ರಾಜಕೀಯ ವಿಚಾರಗಳನ್ನು ಪರಿಗಣಿಸಿ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.[] ಪ್ರತಿಯೊಂದು ಆಯೋಗದಲ್ಲಿಯೂ ನಾಲ್ವರು ಸದಸ್ಯರಿದ್ದರು - ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಇಬ್ಬರು ಹಾಗೂ ಮುಸ್ಲಿಮ್‌ ಲೀಗ್‌ನಿಂದ ಇಬ್ಬರು ಪ್ರತಿನಿಧಿಗಳಿದ್ದರು. ಇವೆರಡೂ ಪಕ್ಷಗಳ ಹಿತಾಸಕ್ತಿಗಳ ನಡುವೆ ಯಾವುದೇ ಸಂಧಾನದ ಕೊರತೆ ಹಾಗೂ ಹಗೆಯ ವಾತಾವರಣವಿದ್ದ ಕಾರಣ, ಅಂತಿಮವಾಗಿ ರಾಡ್‌ಕ್ಲಿಫ್‌ ಅಗತ್ಯ ಅಂತಿಮ ನಿರ್ಧಾರ ಕೈಗೊಳ್ಳಲೇಬೇಕಾಯಿತು.

ಜುಲೈ ೮ರಂದು ಭಾರತಕ್ಕೆ ಆಗಮಿಸಿದ ರಾಡ್‌ಕ್ಲಿಫ್‌ರಿಗೆ ಗಡಿಯ ಬಗ್ಗೆ ನಿರ್ಧರಿಸಲು ಕೇವಲ ಐದು ವಾರಗಳ ಕಾಲಾವಕಾಶ ನೀಡಲಾಯಿತು. ಅವರು ತಮ್ಮ ಕಾಲೇಜ್‌ ಹಳೆಯ ವಿದ್ಯಾರ್ಥಿ ಲೂಯಿಸ್‌ ಮೌಂಟ್ಬಾಟನ್‌ರೊಂದಿಗೆ ಚರ್ಚಿಸಿ, ಆಯೋಗದ ಸದಸ್ಯರೊಂದಿಗೆ (ಮುಖ್ಯವಾಗಿ ಕಾಂಗ್ರೆಸ್‌ನ ನೆಹರೂ ಮತ್ತು ಮುಸ್ಲಿಮ್‌ ಲೀಗ್‌ನ ಜಿನ್ನಾ) ಭೇಟಿಯಾಗಿ ಚರ್ಚಿಸಲೆಂದು ಲಾಹೋರ್ ಮತ್ತು ಕೋಲ್ಕತ್ತಾ ನಗರಗಳಿಗೆ ಪಯಣಿಸಿದರು.[] ರಾಡ್‌ಕ್ಲಿಫ್ ಈ ಅಲ್ಪಾವಧಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಆದರೆ, ಬ್ರಿಟಿಷ್‌ ಆಳ್ವಿಕೆ ಅಂತ್ಯಗೊಳ್ಳುವ, ಅಂದರೆ‌‌‌‌‌‌‌‌‌‌‌‌ ಆಗಸ್ಟ್‌ ೧೫ರೊಳಗೆ ಈ ಗಡಿ ರೇಖೆಯ ನಮೂದಿಸುವ ಕಾರ್ಯ ಸಂಪೂರ್ಣಗೊಳ್ಳಬೇಕೆಂದು ಈ ಸಂಬಂಧಿತ ಎಲ್ಲ ಪಕ್ಷಗಳೂ ಒತ್ತಾಯಿಸಿದವು. ಈ ಗಡುವನ್ನು ಬೇಗನೆ ಮುಗಿಸುವುದೆಂಬ ಷರತ್ತಿನ ಮೇಲೆ ಮೌಂಟ್ಬಾಟನ್‌ ವೈಸರಾಯ್‌ ಹುದ್ದೆ ಸ್ವೀಕರಿಸಿದ್ದರು.[೧೦] ಬ್ರಿಟಿಷ್‌ ಆಡಳಿತವು ಭಾರತದಿಂದ ಹಿಂದೆ ಸರಿಯುವ ಎರಡು ದಿನಗಳ ಮುಂಚೆ ಈ ನಿರ್ಧಾರ ಕ್ರಮ ಸಂಫೂರ್ಣಗೊಳಿಸಲಾಗಿತ್ತು. ಆದರೆ, ರಾಜಕೀಯ ಪಿತೂರಿಯ ಕಾರಣ, ೧೯೪೭ರ ಆಗಸ್ಟ್‌ ೧೫ರಂದು ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳಿಗೆ ಸ್ವಾತಂತ್ರ್ಯ ಲಭಿಸಿ ಎರಡು ದಿನಗಳಾಗುವ ವರೆಗೂ, ಈ ವರದಿಯನ್ನು ಪ್ರಕಟಿಸಲಾಗಿರಲಿಲ್ಲ.

ಪ್ರಕ್ರಿಯೆಯಲ್ಲಿ ಎದುರಾದ ಸಮಸ್ಯೆಗಳು

[ಬದಲಾಯಿಸಿ]

ಗಡಿ ಗುರುತಿಸುವ ಪ್ರಕ್ರಿಯೆಗಳು

[ಬದಲಾಯಿಸಿ]

ಮೂಲತಃ ವಕೀಲರಾಗಿದ್ದ ರಾಡ್‌ಕ್ಲಿಫ್‌ ಮತ್ತು ಇತರೆ ಆಯುಕ್ತರು ಎಲ್ಲವನ್ನು ಸೂಕ್ತವಾಗಿ ಬಲ್ಲವರಾಗಿದ್ದು, ಈ ಕಾರ್ಯಕ್ಕೆ ತಜ್ಞರ ಅಗತ್ಯ ಕಂಡುಬರಲಿಲ್ಲ. ಗಡಿ ರೇಖೆ ರಚಿಸಲು ಅಗತ್ಯವಾದ ಸೂಕ್ತ ವಿಧಾನಗಳು ಮತ್ತು ಮಾಹಿತಿ ಒದಗಿಸುವ ಸಲಹೆಗಾರರಿರಲಿಲ್ಲ. ಸಮೀಕ್ಷೆ ಮತ್ತು ಪ್ರಾದೇಶಿಕ ಮಾಹಿತಿ ಸಂಗ್ರಹಿಸಲು ಸಾಕಷ್ಟು ಸಮಯವಿರಲಿಲ್ಲ. ಯಾವುದೇ ವಿಳಂಬವನ್ನು ತಪ್ಪಿಸಲು, ವಿಶ್ವಸಂಸ್ಥೆಯಂತಹ ತಜ್ಞ ಮತ್ತು ಸಲಹಾ ಆಯೋಗದವರನ್ನು ಬೇಕೆಂದಲೇ ಸಂಪರ್ಕಿಸಲಿಲ್ಲ.[೧೧] ಬ್ರಿಟನ್‌ನಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದಿದ್ದ ಲೇಬರ್‌ ಸರ್ಕಾರವು ಕತ್ತಿನ ವರೆಗೆ ಯುದ್ಧ ಸಂಬಂಧಿತ ಋಣದಲ್ಲಿತ್ತು. ಪದೇ ಪದೇ ಅಸ್ಥಿರತೆಯತ್ತ ಉರುಳುತ್ತಿದ್ದ ಸಾಮ್ರಾಜ್ಯವನ್ನು ನಿಯಂತ್ರಿಸುವುದು ದುಸ್ತರವಾಯಿತು.[೧೨] 'ವಿಶ್ವಸಂಸ್ಥೆಯಂತಹ ಅನ್ಯ, ಬಾಹ್ಯ ಪ್ರತಿನಿಧಿಗಳ ಗೈರುಹಾಜರಿಯು ಬ್ರಿಟಿಷ್‌ ಸರ್ಕಾರಕ್ಕೆ ವರದಾನವೇ ಆಯಿತು. ಒಂದು ವೇಳೆ ವಿಶ್ವಸಂಸ್ಥೆಯು ಭಾಗವಹಿಸಿದಲ್ಲಿ, ತಮ್ಮದೇ ಸಾಮ್ರಾಜ್ಯವನ್ನು ಆಳುವುದು ಅಥವಾ ತೊರೆಯಲು ಹೊರಗಿನ ಹಿತಾಸಕ್ತಿಗಳ ಸಹಾಯ ಕೇಳುತ್ತಿದೆ ಎಂಬ ಅಭಿಪ್ರಾಯ ಮೂಡಿಬರುತ್ತಿತ್ತು.' [೧೩]

ರಾಜಕೀಯ ಪ್ರಾತಿನಿಧಿತ್ವ

[ಬದಲಾಯಿಸಿ]

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಮತ್ತು ಮುಸ್ಲಿಮ್ ಲೀಗ್‌ನಿಂದ ತಲಾ ಇಬ್ಬರು ರಾಜಕಾರಣಿಗಳಿದ್ದರು. ಸಮತೋಲನ ಒದಗಿಸುವಂತಿದ್ದರೂ, ಸ್ಥಗಿತತೆಯ ಪರಿಸ್ಥಿತಿ ಎದುರಾಯಿತು. ಅಂತರಸಂಬಂಧಗಳು ಅದೆಷ್ಟು ಬಿರುಕುಗಳಿಂದ ಕೂಡಿದ್ದವು ಎಂದರೆ, ತೀರ್ಪುಗಾರರು ಒಬ್ಬರೊಂದಿಗಿನ್ನೊಬ್ಬರು ಮಾತನಾಡಲಾಗುತ್ತಿರಲಿಲ್ಲ. ಕಾರ್ಯಸೂಚಿಗಳು ಬಹಳಷ್ಟು ವಿಚಿತ್ರವಾಗಿದ್ದು, ಕೆಲವೊಮ್ಮೆ ಯಾವುದೇ ಹುರುಳೂ ಇರಲಿಲ್ಲ, ಎಲ್ಲವೂ ಬೇಕಾಬಿಟ್ಟಿಯೆಂಬಂತೆ ಗೋಚರಿಸಿತ್ತು. ಅದೂ ಸಾಲದ್ದಕ್ಕೆ, 'ಕೆಲ ವಾರಗಳ ಮುಂಚೆ, ರಾವಲಪಿಂಡಿಯಲ್ಲಿ ಲಾಹೋರ್‌ನಲ್ಲಿದ್ದ ಸಿಖ್‌ ನ್ಯಾಯಾಧೀಶರೊಬ್ಬರ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಮುಸ್ಲಿಮರು ಕೊಲೆ ಮಾಡಿದ್ದರು.' [೧೪]

ಗಡಿಯಾಚೆಗಿನ ಸಮಸ್ಯೆಯು, ಹಿಂದೂ ಮತ್ತು ಮುಸ್ಲಿಮರ ಸಂಖ್ಯೆಯನ್ನು ಕಡಿಮೆಗೊಳಿಸುವುದೊಂದೇ ಅಲ್ಲ. ಪಂಜಾಬ್‌ ಗಡಿ ಆಯೋಗವು, ಸಿಖ್‌ ಸಮುದಾಯವು ವಾಸಿಸುತ್ತಿದ್ದ ಪ್ರದೇಶದ ನಡುವೆಯೇ ಹಾದುಹೋಗುವ ಗಡಿಯನ್ನು ವ್ಯಾಖ್ಯಾನಿಸಲಿತ್ತು.[೧೫] ಮೊದಲ ವಿಶ್ವಯದ್ಧದಲ್ಲಿ ಭಾರತೀಯ ಭೂಸೇನೆಗಾಗಿ ಬಹಳಷ್ಟು ಜನರನ್ನು ಒದಗಿಸಿ, ಭಾರೀ ಸೇವೆ ಸಲ್ಲಿಸಿದ ಸಿಖ್‌ ಸಮುದಾಯಕ್ಕಾಗಿ ಏನೂ ಮಾಡಲಾಗಲಿಲ್ಲ ಎಂದು ಲಾರ್ಡ್‌ ಇಸ್ಲೇ ಬೇಸರಿಸಿಕೊಂಡಿದ್ದರು.[೧೬] ಆದರೂ, ಸಿಖ್‌ ಸಮುದಾಯದವರು ತಮ್ಮ ರಾಜ್ಯ ಮುಸ್ಲಿಮ್ ಆಳ್ವಿಕೆಯ ರಾಷ್ಟ್ರದಡಿ ಬರುವುದನ್ನು ಎಂದೆಂದಿಗೂ ಸಹಿಸಲಾರರು ಎಂದು ಗಲಾಟೆ ಮಾಡಿದರು. ಇನ್ನೂ ಹೆಚ್ಚಿಗೆ, ಹಲವು ಸಿಖ್ಖರು ತಮ್ಮದೇ ಆದ ಸ್ವತಂತ್ರ ರಾಜ್ಯ ಬೇಕು ಎನ್ನುತ್ತಿದ್ದರು. ಆಯೋಗದಲ್ಲಿದ್ದ ಯಾರೂ ಸಹ ಇದಕ್ಕೆ ಒಪ್ಪುತ್ತಿರಲಿಲ್ಲ.[೧೭]

ಅಂತಿಮವಾಗಿ, ಯಾವುದೇ ಪ್ರಾತಿನಿಧ್ಯವಿಲ್ಲದ ಸಮುದಾಯಗಳಿದ್ದವು. ಕೊಲ್ಕತ್ತಾ ಯಾವ ಭಾಗಕ್ಕೆ ಸೇರತಕ್ಕದ್ದು ಎಂಬುದು ಬಂಗಾಳ ಗಡಿ ಆಯೋಗದ ಪ್ರತಿನಿಧಿಗಳಿಗೆ ಮುಖ್ಯ ವಿಚಾರವಾಗಿತ್ತು. ಬಂಗಾಳದಲ್ಲಿರುವ ಚಿತ್ತಗಂಗ್‌ ಹಿಲ್‌ ಕಣಿವೆಗಳಲ್ಲಿರುವ ಬೌದ್ಧ ಪಂಗಡಗಳಿವೆ ಯಾವುದೇ ಅಧಿಕೃತ ಸೂಚನೆಗಳಿರಲಿಲ್ಲ. ಭಾರತ ಇಬ್ಭಾಗವಾಗಿ ಎರಡು ದಿನಗಳಾಗುವ ವರೆಗೆ ಅವರಿಗೆ ಸಿದ್ಧರಾಗಿಸುವಂತಹ ಯಾವುದೇ ಮುನ್ಸೂಚನೆಯೇ ಸಿಗಲಿಲ್ಲ.[೧೮]

ಆದಷ್ಟು ಬೇಗನೆ ನಿರ್ಧಾರ ತೆಗೆದುಕೊಳ್ಳಬೇಕಾದ ವಿಚಾರ ಎಂದು ಮನಗಂಡ ರಾಡ್‌ಕ್ಲಿಫ್‌, ಕ್ಲಿಷ್ಟಕರ ಎನ್ನಲಾದ ನಿರ್ಧಾರಗಳನ್ನು ಅವರೇ ತೆಗೆದುಕೊಂಡರು. ಇದು ಅಸಾಧ್ಯ ಕಾರ್ಯವಾಗಿತ್ತು. ಆದರೆ ರಾಡ್‌ಕ್ಲಿಫ್‌ ತಮ್ಮ ಬಗ್ಗೆ ಯಾವುದೇ ಸಂಶಯವಿಟ್ಟುಕೊಂಡಿರಲಿಲ್ಲ. ಪರಿಸ್ಥಿತಿಯನ್ನು ಬದಲಾಯಿಸುವಂತಹ ಯಾವುದೇ ಅಧಿಕೃತ ದೂರು ಅಥವಾ ಪ್ರಸ್ತಾಪವನ್ನೂ ಮುಂದಿಡಲಿಲ್ಲ.[]

ಸ್ಥಳೀಯ ಪರಿಜ್ಞಾನ

[ಬದಲಾಯಿಸಿ]

ಅವರ ನೇಮಕಾತಿಯ ಮುಂಚೆ,ರಾಡ್‌ಕ್ಲಿಫ್‌ ಭಾರತಕ್ಕೆ ಎಂದಿಗೂ ಭೇಟಿ ನೀಡಿರಲಿಲ್ಲ, ಹಾಗೂ ಇಲ್ಲಿನ ಯಾರೂ ಸಹ ಪರಿಚಯವಿರಲಿಲ್ಲ. ಬ್ರಿಟಿಷರು ಮತ್ತು ಬಲಾಢ್ಯ ರಾಜಕಾರಣಿಗಳ ದೃಷ್ಟಿಯಿಂದ, ಈ ಬಾಧ್ಯತೆಯು ಸ್ವತ್ತೆಂದು ಪರಿಗಣಿಸಲಾಯಿತು. ರಾಡ್‌ಕ್ಲಿಫ್ ಬ್ರಿಟನ್‌ ಹೊರತುಪಡಿಸಿ, ಯಾವುದೇ ಪಕ್ಷದತ್ತ ಪಕ್ಷಪಾತಿ ಧೋರಣೆ ತೋರಲಿಲ್ಲ.[] ಕೇವಲ ಅವರ ಆಪ್ತ ಕಾರ್ಯದರ್ಶಿ ಕ್ರಿಸ್ಟೊಫರ್‌ ಬ್ಯೋಮೊಂಟ್‌ರಿಗೆ ಪಂಜಾಬ್‌ನ ಆಡಳಿತ ವೈಖರಿ ಮತ್ತು ಜನಜೀವನದ ಬಗ್ಗೆ ತಿಳಿವಳಿಕೆಯಿತ್ತು. ನಿಷ್ಪಕ್ಷಪಾತ ದೃಷ್ಟಿಕೋನ ಉಳಿಸಕೊಳ್ಳಲು, ರಾಡ್‌ಕ್ಲಿಫ್‌ ವೈಸರಾಯ್‌ ಮೌಂಟ್ಬಾಟನ್‌ರೊಂದಿಗೆ ತೀವ್ರ ನಿಕಟತನ ಬೆಳೆಸಿಕೊಳ್ಳಲಿಲ್ಲ.[]

ಎಂತಹ ಅರಿವು/ತಿಳಿವಳಿಕೆ ಅಥವಾ ಜ್ಞಾನವೂ ಸಹ ಘರ್ಷಣೆಯನ್ನು ಸಂಪೂರ್ಣವಾಗಿ ತಡೆಗಟ್ಟುವಂತಹ ಗಡಿರೇಖೆಯನ್ನು ಸೃಷ್ಟಿಸಲಾಗಲಿಲ್ಲ. ಆಗಲೇ, ಪಂಜಾಬ್‌ ಮತ್ತು ಬಂಗಾಳಲ್ಲಿ ಜನಾಂಗೀಯ ಗಲಭೆಗಳು, ವೇಗ ಮತ್ತು ಘನವಾಗಿ ಭಾರತವನ್ನು ಬಿಟ್ಟುಹೋಗುವ ಬ್ರಿಟಿಷ್‌ ಲೆಕ್ಕಾಚಾರವನ್ನು ತಲೆಕಳಗು ಮಾಡಿತು.[೧೯] 'ಎರಡು ಶತಮಾನಗಳ ಕಾಲದ ನೇರ ಮತ್ತು ಪರೋಕ್ಷವಾದ ಬ್ರಿಟಿಷ್‌ ಆಳ್ವಿಕೆಯ ಮೂಲಕ, ದಕ್ಷಿಣ ಏಷ್ಯಾದಲ್ಲಿ ವಸಾಹತು-ನಂತರ ಹಂತದ ಪ್ರಕ್ಷುಬ್ಧ ಸ್ಥಿತಿಯ ಬೀಜಗಳನ್ನು ಇನ್ನಷ್ಟು ಮುಂಚಿತವಾಗಿ ಹಾಕಲಾಯಿತು.' [೨೦]

ಆತುರ ಮತ್ತು ಔದಾಸೀನ್ಯ

[ಬದಲಾಯಿಸಿ]

ಈ ಆಯೋಗವು ಬಹಳ ಜತನವಾಗಿ ಈ ಕಾರ್ಯ ನಡೆಸಿದ್ದಲ್ಲಿ, ವಿಭಜನೆಯಲ್ಲಿ ಉಂಟಾದ ಎಡವಟ್ಟುಗಳು ಖಂಡಿತವಾಗಿಯೂ ಸಂಭವಿಸುತ್ತಿರಲಿಲ್ಲ. ಉದಾಹರಣೆಗೆ, ಗಡಿರೇಖೆಯೊಂದನ್ನು ವ್ಯಾಖ್ಯಾನಿಸಿದ್ದು ಹಳ್ಳಿಯೊಂದರ ಕೆಲ ಭಾಗಗಳು ಭಾರತದಲ್ಲಿ ಹಾಗೂ ಇನ್ನೂ ಕೆಲವನ್ನು ಪಾಕಿಸ್ತಾನದಲ್ಲಿರುವಂತೆ ಮಾಡಲಾಯಿತು. ಅವರಿಗೆ ಕೇವಲ ಒಂದೇ ತಿಂಗಳ ಕಾಲಾವಕಾಶವಿದ್ದ ಕಾರಣ, ಹಳ್ಳಿಗಳನ್ನು ಸುತ್ತಿಬಳಸಿ ಗಡಿರೇಖೆ ನಮೂದಿಸಲು ರಾಡ್‌ಕ್ಲಿಫ್‌ರಿಗೆ ಹೆಚ್ಚು ಸಮಯಾವಕಾಶವೇ ಇರಲಿಲ್ಲ. ಅವರು ಗುರುತಿಸಿದ ರೇಖೆಯು ಜನನಿಬಿಡ ಪ್ರದೇಶಗಳ ನಡುವೆ ಸಾಗುವ ಬದಲಿಗೆ ಆ ಪ್ರದೇಶಗಳ ಮಧ್ಯೆ ಸಾಗಿತ್ತು. ಇನ್ನೂ ಕೆಲ ನಿದರ್ಶನಗಳಲ್ಲಿ, ಇಬ್ಭಾಗಿಸುವ ರೇಖೆಯು ಒಂದೇ ಮನೆಯ ಮೂಲಕ ಸಾಗಿದ್ದು, ಮನೆಯ ಕೆಲವು ಕೋಣೆಗಳು ಒಂದು ದೇಶದಲ್ಲಿ ಹಾಗೂ ಇನ್ನು ಕೆಲವು ಕೋಣೆಗಳು ಇನ್ನೊಂದು ದೇಶದಲ್ಲಿದ್ದವು.

ತಾವೇನೇ ಮಾಡಿದರೂ ಸಹ ಜನರಿಗೆ ತೊಂದರೆಯಾಗುವುದು ಎಂಬ ಸಾಮಾನ್ಯೋಕ್ತಿಯೊಂದಿಗೆ ರಾಡ್‌ಕ್ಲಿಫ್‌ ಇಂತಹ ಕೆಲಸವನ್ನು ಸಮರ್ಥಿಸಿಕೊಂಡರು. ತಾವು ಭಾರತದಿಂದ ಹೊರಡುವ ಮುಂಚೆ ರಾಡ್‌ಕ್ಲಿಫ್‌ ವಿಭಜನೆಗೆ ಸಂಬಂಧಿತ ಎಲ್ಲಾ ದಾಖಲೆಗಳನ್ನೂ ನಾಶಗೊಳಿಸಿದ ಕಾರಣ, ಅವರ ಈ ಸಮರ್ಥನೆಯ ಹಿಂದಿನ ಕಾರಣಗಳು ತಿಳಿಯದೇ ಹೋಗಬಹುದು.[೨೧] ಗಡಿರೇಖೆಯ ಘೋಷಣೆ ಪ್ರಕಟಿಸುವ ಮುಂಚೆಯೇ, ಅಂದರೆ ಸ್ವಾತಂತ್ರ್ಯ ದಿನದಂದೇ ಅವರು ಭಾರತ ಬಿಟ್ಟು ಹೋದರು. ಭಾರತೀಯ ಹವಾಗುಣ ಮತ್ತು ತಾವು ಆದಷ್ಟು ಬೇಗ ಭಾರತದಿಂದ ಕಾಲುಕಿತ್ತರೆ ಸಾಕು ಎಂಬ ಧೋರಣೆಯಿತ್ತು ಎಂದು ರಾಡ್‌ಕ್ಲಿಫ್‌ ಸ್ವತಃ ಒಪ್ಪಿಕೊಂಡಿದ್ದಾರೆ.[೨೨]

ಗಡಿರೇಖೆ ಗುರುತಿಸುವ ಕಾರ್ಯದಷ್ಟೇ ಅದರ ಅನುಷ್ಠಾನವು ಸಹ ತ್ವರಿತವಾಗಿತ್ತು. ಭಾರತ ಮತ್ತು ಪಾಕಿಸ್ತಾನಿ ಪ್ರತಿನಿಧಿಗಳಿಗೆ ೧೯೪೭ರ ಆಗಸ್ಟ್‌ ೧೬ರಂದು, ಸಂಜೆ ೫ ಗಂಟೆಗೆ,ಈ ಗಡಿರೇಖಾ ನಿರ್ಣಯಗಳ ಪ್ರತಿಗಳನ್ನು ನೀಡಿ, ಅವುಗಳನ್ನು ಪರಾಂಬರಿಸಲು ಎರಡು ಗಂಟೆಗಳ ಅವಧಿ ನೀಡಲಾಯಿತು. ಎರಡು ದಿನಗಳ ನಂತರ, ಅಂದರೆ ಆಗಸ್ಟ್‌ ೧೭ರಂದು ರಾಡ್‌ಕ್ಲಿಫ್‌ ಗಡಿನಿರ್ಣಯವನ್ನು ಪ್ರಕಟಿಸಲಾಯಿತು.[೨೩]

ಗೌಪ್ಯತೆ

[ಬದಲಾಯಿಸಿ]

ವ್ಯಾಜ್ಯ ಮತ್ತು ವಿಳಂಬಗಳನ್ನು ತಪ್ಪಿಸಲು, ವಿಭಜನೆಗಳನ್ನು ಗುಪ್ತವಾಗಿ ನಡೆಸಲಾಯಿತು. ಅಂತಿಮ ಗಡಿನಿರ್ಣಯಗಳು ಆಗಸ್ಟ್‌ ತಿಂಗಳ ೯ ಹಾಗೂ ೧೨ನೆಯ ದಿನಾಂಕದಂದು ಸಿದ್ಧಗೊಳಿಸಲಾಯಿತು. ಆದರೆ ವಿಭಜನೆಯಾದ ಎರಡು ದಿನಗಳ ನಂತರವೇ ಇದನ್ನು ಪ್ರಕಟಿಸಲಾಯಿತು.

ರೀಡ್‌ ಪ್ರಕಾರ,[೨೪] ಮೌಂಟ್ಬಾಟನ್‌ ಅಥವಾ ರಾಡ್‌ಕ್ಲಿಫ್‌ರ ಭಾರತೀಯ ಸಹಾಯಕ ಕಾರ್ಯದರ್ಶಿಯೊಬ್ಬರ ಮೂಲಕ, ಪಂಜಾಬ್‌ ಗಡಿನಿರ್ಣಯದ ಅಂಶಗಳನ್ನು ಅಗಸ್ಟ್‌‌ ೯ ಅಥವಾ ೧೦ರಂದು ನೆಹರು ಮತ್ತು ಪಟೇಲರಿಗೆ ಗುಪ್ತವಾಗಿ ತಿಳಿಸಲಾಯಿತು, ಎಂಬುದರ ಬಗ್ಗೆ ಸಾಂದರ್ಭಿಕ-ಸನ್ನಿವೇಶ-ಆಧಾರದ ಸಾಕ್ಷ್ಯಗಳಿವೆ. ಅದು ಯಾವ ರೀತಿ ರವಾನೆಯಾಯಿತೋ, ಏನೇ ಇರಲಿ, ಸಟ್ಲಜ್‌ ನಾಲೆಯ ಪೂರ್ವ ಭಾಗವನ್ನು ಪಾಕಿಸ್ತಾನದ ಬದಲು ಭಾರತದಲ್ಲಿರಿಸುವಂತೆ ಈ ನಿರ್ಣಯ ಬದಲಿಸಲಾಯಿತು. ಈ ಪ್ರದೇಶದಲ್ಲಿ ಅರ್ಧ ದಶಲಕ್ಷದಷ್ಟು ಒಟ್ಟು ಜನಸಂಖ್ಯೆಯುಳ್ಳ, ಮುಸ್ಲಿಮರು ಬಹುಸಂಖ್ಯೆಯಲ್ಲಿ ವಾಸಿಸುವ ಎರಡು ತಹಶೀಲುಗಳಿದ್ದವು. ಈ ಬದಲಾವಣೆಗೆ ಎರಡು ಕಾರಣಗಳು ಗೋಚರವಾಗಿದ್ದವು: (೧) ಈ ಪ್ರದೇಶದಲ್ಲಿ ಭೂಸೇನೆಯ ಶಸ್ತ್ರಗಳ ಉಗ್ರಾಣವಿತ್ತು, ಹಾಗೂ (೨) ಮುಂದೆ ಭಾರತದ ಪಾಲಾಗುವ ಬಿಕಾನೆರ್‌ ರಾಜಪ್ರಾಂತ್ಯಕ್ಕೆ ನೀರು ಒದಗಿಸುವ ನಾಲೆಯೊಂದರ ಮುನ್ನೀರು ಈ ಪ್ರದೇಶದಲ್ಲಿತ್ತು.

ಇದೇ ರೀತಿ, ಚಿತ್ತಗಾಂಗ್‌ ಹಿಲ್‌ ಕಣಿವೆಯನ್ನು ಪಾಕಿಸ್ತಾನಕ್ಕೆ ಹಂಚಿದರೆಂದು ರಾಡ್‌ಕ್ಲಿಫ್‌ರಿಗೆ ಹೇಗೆ ಒತ್ತಾಯಿಸಲಾಯಿತು ಎಂಬುದು ಇನ್ನೂ ಅಜ್ಞಾತ. ಇದು ನೆಹರು ಮತ್ತು ಪಟೇಲರಿಗೆ ಆಘಾತ ತಂದಿತು. ಏಕೆಂದರೆ, ಈ ಪ್ರದೇಶದಲ್ಲಿ ೯೮%ರಷ್ಟು ಮುಸ್ಲಿಮೇತರರಿದ್ದು, ಭಾರತಕ್ಕೆ ಸೇರಬಹುದೆಂದು ಖಚಿತವಾಗಿಯೂ ಭಾವಿಸಿದ್ದರು. ಇದೇ ರೀತಿ, ಬಂಗಾಳದಲ್ಲಿರುವ ಬಹಳಷ್ಟು ಮುಸ್ಲಿಮರುಳ್ಳ ಮುರ್ಷಿದಾಬಾದ್‌ ಮತ್ತು ಮಾಲ್ಡಾ ನಗರಗಳನ್ನು ಭಾರತಕ್ಕೆ ಹಂಚುವುದು ಸಹ ರಹಸ್ಯವಾಗಿಯೇ ಇಡಲಾಯಿತು. ಸ್ವಾತಂತ್ರ್ಯ ದಿನದಂದು ಅಲ್ಲಿಯ ನಿವಾಸಿಗಳು ಪಾಕಿಸ್ತಾನಿ ಧ್ವಜವನ್ನು ಹಾರಿಸಿಯೇಬಿಟ್ಟಿದ್ದರು. ಎರಡು ದಿನಗಳ ನಂತರ ರಾಡ್‌ಕ್ಲಿಫ್‌ ನಿರ್ಣಯವು ಬಹಿರಂಗವಾಯಿತು. [ಸೂಕ್ತ ಉಲ್ಲೇಖನ ಬೇಕು]

ರಾಡ್‌ಕ್ಲಿಫ್‌ ತಮ್ಮ ದಾಖಲೆಗಳೆಲ್ಲವನ್ನೂ ನಾಶಗೊಳಿಸಿದ ಹಾಗೂ ತಮಗೇನೂ ಗೊತ್ತಿಲ್ಲ, ತಾವು ಪಕ್ಷಪಾತಿ ಧೋರಣೆ ಹೊಂದಿಲ್ಲ ಎಂದು ಹೇಳಿಕೆ ನೀಡಿದ ಕಾರಣ, ಈ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳಲಾಯಿತು ಎಂಬುದರ ಬಗ್ಗೆ ಸತ್ಯಾಂಶ ಗೊತ್ತಾಗದಿರಬಹುದು.

ಕಾರ್ಯಗತಗೊಳಿಸುವಿಕೆ

[ಬದಲಾಯಿಸಿ]

ಭಾರತವು ವಿಭಜನೆಯಾದ ನಂತರ, ಭಾರತದಲ್ಲಿ ಆಗ ತಾನೆ ಅಧಿಕಾರ ವಹಿಸಿಕೊಂಡ, ಅನನುಭವಿ ಸರ್ಕಾರಗಳು ಗಡಿಗಳನ್ನು ಅನುಷ್ಠಾನಕ್ಕೆ ತರುವ ಎಲ್ಲಾ ಹೊಣೆಗಾರಿಕೆಯನ್ನು ಹೊರಬೇಕಾಯಿತು. ಆಗಸ್ಟ್‌ ತಿಂಗಳಲ್ಲಿ ಲಾಹೋರ್‌ಗೆ ಭೇಟಿಯಿತ್ತ ವೈಸರಾಯ್‌ ಮೌಂಟ್ಬಾಟನ್‌, ಲಾಹೋರ್‌ನಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲೆಂದು ಪಂಜಾಬ್‌ ಗಡಿ ದಳವನ್ನು ಆತುರದಲ್ಲಿ ರಚಿಸಿದರು. ಆದರೆ, ಗ್ರಾಮಾಂತರ ಪ್ರದೇಶದಲ್ಲಿ ೭೭%ರಷ್ಟು ಕೊಲೆಗಳು ಸೇರಿದಂತೆ, ಸಾವಿರಾರು ಕೊಲೆಗಳನ್ನು ತಡೆಗಟ್ಟಲು ೫೦,೦೦೦ ಜನರ ದಂಡು ಏನೇನೂ ಸಾಲದಾಗಿತ್ತು. ಪ್ರಾಂತ್ಯದ ಗಾತ್ರ ಪರಿಗಣಿಸಿ, ಪ್ರತಿ ಚದರ ಮೈಲಿಗೆ ಪಡೆಯ ಒಬ್ಬ ಸೈನಿಕನ ಹಾಜರಿ ಆಗ ಏನೇನೂ ಸಾಲದಾಗಿತ್ತು. ಕಡಿಮೆ ಪ್ರಮಾಣದಲ್ಲಿ ಸಶಸ್ತ್ರ ಪಡೆಗಳ ನಿಯೋಜನೆಯಿಂದಾಗಿ, ನಗರಗಳನ್ನು ಕೊಲೆಗಡುಕರಿಂದ ರಕ್ಷಿಸಲಾಗಲಿಲ್ಲ. ಮುಂದೆ ಪಾಕಿಸ್ತಾನವಾಗಲಿರುವ ಪ್ರದೇಶದಲ್ಲಿರುವ ತಮ್ಮ ಮನೆಗಳನ್ನು ತೊರೆದು ಹೋಗುತ್ತಿರುವ ನೂರಾರು, ಸಾವಿರಾರು ನಿರಾಶ್ರಿತರನ್ನು ರಕ್ಷಿಸುವುದು ಅಸಾಧ್ಯವಾಯಿತು.[೨೫]

ಗಡಿಯ ಇನ್ನೊಂದು ಬದಿಯಲ್ಲಿರುವ ಗ್ರಾಮಗಳ ಬಂಡಾಯಗಳಿಗೆ ಕುಮ್ಮಕ್ಕು ನೀಡಿ, ಒಪ್ಪಂದವನ್ನು ಉಲ್ಲಂಘಿಸಲು ಭಾರತ ಮತ್ತು ಪಾಕಿಸ್ತಾನ ಸರ್ಕಾರಗಳು ಸಿದ್ಧವಿರಲಿಲ್ಲ. ಹೀಗಾದಲ್ಲಿ, ವಿಶ್ವ ವೇದಿಕೆಯಲ್ಲಿ ಮುಖಭಂಗವಾಗುವುದಲ್ಲದೆ, ಬ್ರಿಟಿಷ್‌ ಅಥವಾ ವಿಶ್ವಸಂಸ್ಥೆಯ ಮಧ್ಯಪ್ರವೇಶಕ್ಕೆ ಆಸ್ಪದವುಂಟಾದೀತು. ಆದರೆ, ಅಂದಿನ ರಾಜಪ್ರಾಂತ್ಯವಾಗಿದ್ದ ಕಾಶ್ಮೀರಕ್ಕೆ ರಾಡ್‌ಕ್ಲಿಫ್‌ ಒಪ್ಪಂದವು ಅನ್ವಯಿಸದ ಕಾರಣ, ಈ ದಿನದ ತನಕ ಭಾರತ ಮತ್ತು ಪಾಕಿಸ್ತಾನ ಸರ್ಕಾರಗಳು ಜಗಳವಾಡುತ್ತಿವೆ. ಅಂತಿಮವಾಗಿ, ಈ ಗಡಿ ತಕರಾರು ಭಾರತ ಮತ್ತು ಪಾಕಿಸ್ತಾನಗಳ ನಡುವೆ ಮೂರು ಯುದ್ಧಗಳಿಗೆ (೧೯೪೭, ೧೯೬೫ ಮತ್ತು ೧೯೭೧) ಕಾರಣವಾಯಿತು. ಅಲ್ಲದೇ, ೧೯೯೮ರ ಮೇ ತಿಂಗಳಲ್ಲಿ ಎರಡೂ ದೇಶಗಳು ಎರಡು ಸುತ್ತುಗಳಲ್ಲಿ ನಡೆಸಿದ ಪರಮಾಣು ಶಸ್ತ್ರ ಪರೀಕ್ಷೆಗಳು ಹಾಗೂ ೧೯೯೯ರಲ್ಲಿ ನಡೆದ ಕಾರ್ಗಿಲ್‌ ಯುದ್ಧ ಸಂಭವಿಸಿದವು.

ರಾಡ್‌ಕ್ಲಿಫ್‌ ಗಡಿರೇಖೆಯುದ್ದಕ್ಕೂ ವ್ಯಾಜ್ಯಗಳು

[ಬದಲಾಯಿಸಿ]

ಚಿತ್ತಗಾಂಗ್‌ ಹಿಲ್‌ ಕಣಿವೆಗಳು ಹಾಗೂ ಗುರುದಾಸಪುರ ಜಿಲ್ಲೆಗಳಲ್ಲಿ ರಾಡ್‌ಕ್ಲಿಫ್‌ ಗಡಿರೇಖೆಯ ಬಗ್ಗೆ ಎರಡು ಪ್ರಮುಖ ವ್ಯಾಜ್ಯಗಳಿದ್ದವು. ಬಂಗಾಳದ ಮಾಲ್ಡಾ, ಖುಲ್ನಾ ಮತ್ತು ಮುರ್ಷಿದಾಬಾದ್‌ ಹಾಗೂ ಅಸಮ್‌ನ ಕರೀಂಗಂಜ್‌ ಉಪವಿಭಾಗಗಳಲ್ಲಿ ಸಣ್ಣ ಪ್ರಮಾಣದ ವ್ಯಾಜ್ಯಗಳುಂಟಾದವು. [ಸೂಕ್ತ ಉಲ್ಲೇಖನ ಬೇಕು]

ಚಿತ್ತಗಾಂಗ್‌ ಹಿಲ್‌ ಕಣಿವೆಗಳು

[ಬದಲಾಯಿಸಿ]

ಚಿತ್ತಗಾಂಗ್‌ ಹಿಲ್‌ ಕಣಿವೆಗಳಲ್ಲಿ ೯೭%ರಷ್ಟು ಜನರು ಮುಸ್ಲಿಮೇತರರು (ಇವರಲ್ಲಿ ಬಹಳಷ್ಟು ಜನರು ಬೌದ್ಧ ಧರ್ಮದವರು) ವಾಸಿಸುತ್ತಿದ್ದರೂ, ಈ ಪ್ರದೇಶವನ್ನು ಪಾಕಿಸ್ತಾನಕ್ಕೆ ಹಂಚಲಾಯಿತು. 'ಸಿಎಚ್‌ಟಿ ಪ್ರದೇಶದಲ್ಲಿ ಬಹಳಷ್ಟು ಜನರು ಮುಸ್ಲಿಮೇತರರಾಗಿರುವುದರಿಂದ, ಈ ಪ್ರದೇಶವು ಭಾರತಕ್ಕೆ ಸೇರಬೇಕು' ಎಂದು ಚಿತ್ತಗಾಂಗ್ ಹಿಲ್‌ ಕಣಿವೆ ನಿವಾಸಿಗಳ ಸಂಘ (ಸಿಎಚ್‌ಟಿಪಿಎ) ಬಂಗಾಳ ಗಡಿರೇಖಾ ಆಯೋಗಕ್ಕೆ ಮನವಿ ಸಲ್ಲಿಸಿತು. [ಸೂಕ್ತ ಉಲ್ಲೇಖನ ಬೇಕು] ಇದಕ್ಕೆ ಯಾವುದೇ ಅಧಿಕೃತ ಪ್ರಾತಿನಿಧಿತ್ವವಿಲ್ಲದ ಕಾರಣ, ಇದರ ಬಗ್ಗೆ ಯಾವುದೇ ಅದಿಕೃತ ಚರ್ಚೆಯಿರಲಿಲ್ಲ. ಸಿಎಚ್‌ಟಿ ಪ್ರದೇಶವನ್ನು ಭಾರತಕ್ಕೆ ಹಂಚಲಾಗುವುದು ಎಂದು ಭಾರತದಲ್ಲಿದ್ದ ಹಲವರು ಭಾವಿಸಿದ್ದರು.

ಆಗ ೧೯೪೭ರ ಆಗಸ್ಟ್‌ ೧೫ರಂದು, ತಾವು ಗಡಿಯ ಯಾವ ಬದಿಗೆ ಸೇರಿರುವರು ಎಂಬುದರ ಬಗ್ಗೆ ಹಲವು ಪಂಗಡದವರಿಗೆ ಯಾವುದೇ ಸುಳಿವಿರಲೇ ಇಲ್ಲ. ಆಗಸ್ಟ್‌ ೧೭ರಂದು ಬಹಿರಂಗಗೊಳಿಸಲಾದ ರಾಡ್‌ಕ್ಲಿಫ್‌ ಗಡಿರೇಖಾ ನಿರ್ಣಯವು ಸಿಎಚ್‌ಟಿಗಳನ್ನು ಪಾಕಿಸ್ತಾನಕ್ಕೆ ಹಂಚಿತ್ತು. ಆ ಪ್ರದೇಶ ಹಾಗೂ ಭಾರತದ ನಡುವೆ ನೇರ ಸಂಪರ್ಕವಿಲ್ಲ, ಇಂದಿನ ಬಾಂಗ್ಲಾದೇಶದಲ್ಲಿರುವ ಪ್ರಮುಖ ಬಂದರು ನಗರ ಚಿತ್ತಗಾಂಗ್‌ಗೆ ನಡುಕಾಪು ಪ್ರದೇಶ ಒದಗಿಸಬೇಕಿತ್ತು, ಹಾಗೂ ಸಿಎಚ್‌ಟಿ ಪ್ರದೇಶಕ್ಕೆ ಚಿತ್ತಗಾಂಗ್‌ ಬಂದರೂ ಒಂದೇ ಮಾರ್ಗವಿದ್ದದ್ದು, ಚಿತ್ತಗಾಂಗ್‌ ಹಿಲ್‌ ಪ್ರದೇಶವನ್ನು ಪಾಕಿಸ್ತಾನಕ್ಕೆ ಸೇರಿಸಲು ಕಾರಣಗಳಾಗಿದ್ದವು.

'ಎರಡು ದಿನಗಳ ನಂತರ, ಈ ನಿರ್ಣಯವನ್ನು ವಿರೋಧಿಸುವುದೆಂದು ಸಿಎಚ್‌ಟಿಪಿಎ ನಿರ್ಣಯಿಸಿ, ಭಾರತದ ದ್ವಜವನ್ನು ಹಾರಿಸಿತು. ಅಲ್ಲಿದ್ದ ಪಾಕಿಸ್ತಾನಿ ಭೂಸೇನೆಯು ಈ ಗಲಾಟೆಯನ್ನು ಶಮನಗೊಳಿಸಿತು ಆದರೂ ಈ ಸಮಸ್ಯೆ ಪರಿಹಾರವಾಗಿಲ್ಲ.'[೨೬]

ಗುರುದಾಸಪುರ ಜಿಲ್ಲೆ

[ಬದಲಾಯಿಸಿ]

ಶಕರ್‌ಗಢ ಉಪವಿಭಾಗ ಹೊರತುಪಡಿಸಿ, ಗುರುದಾಸಪುರ ಜಿಲ್ಲೆಯನ್ನು ಭಾರತಕ್ಕೆ ಹಂಚಲಾಯಿತು. ಗುರುದಾಸಪುರ ಜಿಲ್ಲೆಯಲ್ಲಿ ಐತಿಹಾಸಿಕ ಇಸ್ಲಾಮಿಕ್‌ ನಗರಗಳಾದ ದೇವಬಂದ್‌, ಬರೇಲ್ವಿ ಮತ್ತು ಅಹಮದಿಯಾ ಸಮುದಾಯದ ಸಾಂಸ್ಕೃತಿಕ ಕೇಂದ್ರಗಳಿದ್ದವು.[೨೭] ಗುರುದಾಸಪುರ ಜಿಲ್ಲೆಯ ಜನಸಂಖ್ಯೆಯಲ್ಲಿ ಅರ್ಧದಷ್ಟು (೫೦.೬) ಮುಸ್ಲಿಮರಿದ್ದಾರೆ. ಮುಸ್ಲಿಮ್‌ ಧರ್ಮಾಧಿಕಾರಿಗಳು ಅಹ್ಮದಿಯಾ ಸಮುದಾಯವನ್ನು ಮುಸ್ಲಿಮರಲ್ಲ ಎಂದು ನಿರ್ಣಯಿಸಿದರೂ ಸಹ ಮುಸ್ಲಿಮ್‌ ಎಂದು ವರ್ಗೀಕರಿಸಲಾಗಿದೆ. ಗುರುದಾಸಪುರ ಜಿಲ್ಲೆಯಲ್ಲಿ ಅಹ್ಮದೀಯರ ಆಧ್ಯಾತ್ಮಿಕ ಕೇಂದ್ರ ಕಾದಿಯಾನ್‌ ಇರುವುದರಿಂದ ಅಹ್ಮದಿಯರು ಅದರ ಸನಿಹದ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವರು.[೨೭] ಜಿಲ್ಲೆಯಲ್ಲಿ ಮುಸ್ಲಿಮ್‌ ಮತ್ತು ಮುಸ್ಲಿಮೇತರರ ಒಟ್ಟಾರೆ ನಿಷ್ಪತ್ತಿಯನ್ನು ಕ್ರಮವಾಗಿ ೫೦.೬ ಮತ್ತು ೪೯.೪ರಷ್ಟಿದೆ. ಷಕರ್‌ಗಢ ಮತ್ತು ಗುರುದಾಸಪುರ ತಹಶೀಲ್‌ಗಳಲ್ಲಿ ಮುಸ್ಲಿಮರು ಸ್ವಲ್ಪಮಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿದ್ದರು (ತಲಾ ೫೧%); ಬಟಾಲಾ ತಹಶೀಲ್‌ನಲ್ಲಿ ೫೩% ಹಾಗೂ ಪಠಾನ್‌ಕೋಟ್‌ ತಹಶೀಲ್‌ನಲ್ಲಿ ೬೭%ರಷ್ಟು ಮುಸ್ಲಿಮರು ವಾಸಿಸುತ್ತಿದ್ದರು. [ಸೂಕ್ತ ಉಲ್ಲೇಖನ ಬೇಕು] ಅಂತಿಮವಾಗಿ, ರಾವಿ ನದಿಯ ಮೂಲಕ ಗುರುದಾಸಪುರ ಜಿಲ್ಲೆಯ ಇತರೆ ಭಾಗಗಳಿಂದ ಪ್ರತ್ಯೇಕವಾಗಿರುವ, ಕೇವಲ ಷಕರ್‌ಗಢ್‌ ತಹಶೀಲ್‌ನ್ನು ಪಾಕಿಸ್ತಾನಕ್ಕೆ ಹಂಚಲಾಯಿತು. ಇದರಿಂದಾಗಿ, ಗುರುದಾಸಪುರದಲ್ಲಿ ಮುಸ್ಲಿಮೇತರರ ಸಂಖ್ಯೆ ಸ್ವಲ್ಪಮಟ್ಟಕ್ಕೆ ಅತಿಹೆಚ್ಚು ಎನಿಸಿತು.

ಲಾರ್ಡ್‌ ಮೌಂಟ್ಬಾಟನ್‌ರ ಒತ್ತಾಯದ ಮೇರೆಗೆ ಈ ತಹಶೀಲನ್ನು ಪಾಕಿಸ್ತಾನಕ್ಕೆ ಹಂಚಲಾಯಿತು ಎಂಬ ಮಾತುಗಳು ಕೇಳಿಬಂದವು. ಹಾಗಾಗಿ, ಕಾಶ್ಮೀರ ಸಾಮ್ರಾಜ್ಯದ ದೊರೆಯು ಭಾರತ ಸಂಯುಕ್ತ ರಾಷ್ಟ್ರದೊಂದಿಗೆ ಸೇರಲು ಬಯಸಿದಲ್ಲಿ, ಇದು ಭಾರತಕ್ಕೆ ನೇರ ಪ್ರವೇಶ ಮಾರ್ಗವಾಗುವುದು. ಅದೇನೇ ಇರಲಿ, ಪಠಾನ್‌ಕೋಟ್‌ ತಹಶೀಲ್‌ ಭಾರತದ ಪಾಲಾಗುವುದು. ಜೊತೆಗೆ, ಪಕ್ಕದಲ್ಲಿರುವ ಪೂರ್ವ ಪಂಜಾಬ್‌ನ ಹೋಷಿಯಾರ್‌ಪುರ ಮತ್ತು ಕಾಂಗಡಾ ಜಿಲ್ಲೆಗಳೊಂದಿಗೆ ನೇರ ರೈಲು ಸಂಪರ್ಕವಿತ್ತು. ಇನ್ನೊಂದು ಅಂಶವೇನೆಂದರೆ, ಬಟಾಲಾ ಮತ್ತು ಗುರುದಾಸಪುರವು ಸಿಖ್ಖರ ಪವಿತ್ರ ನಗರ ಅಮೃತಸರಕ್ಕೆ ನಡುಕಾಪು ಆಗಬಹುದು. ಇಲ್ಲದಿದ್ದಲ್ಲಿ, ಅಮೃತಸರದ ಸುತ್ತಲೂ ಪಾಕಿಸ್ತಾನದ ಮುಸ್ಲಿಮ್‌ ಪ್ರದೇಶಗಳು ಸುತ್ತುವರೆಯುತ್ತಿದ್ದವು. ಗಡಿರೇಖಾ ಆಯೋಗದ ಮುಂದೆ ಮೌಂಟ್ಬಾಟನ್‌ ಹಾಗೂ ಇತರರು ವಾದಿಸಿದ ಕೊನೆಯ ಅಂಶವೇನೆಂದರೆ, ರಾವಿ ನದಿಯ ಪೂರ್ವಭಾಗದ ಪ್ರದೇಶವನ್ನು, ಅಮೃತಸರ ಮತ್ತು (ಷಕರ್‌ಗಢ ಹೊರತುಪಡಿಸಿ) ಗುರುದಾಸಪುರ ಜಿಲ್ಲೆಯನ್ನೊಳಗೊಂಡಿರುವ ಒಂದು ಪ್ರದೇಶ ಎಂದು ಪರಿಗಣಿಸಲಾಗಿದ್ದು, ಇಲ್ಲಿ ಮುಸ್ಲಿಮೇತರರು ಸ್ವಲ್ಪ ಹೆಚ್ಚು ಸಂಖ್ಯೆಯಲ್ಲಿ ವಾಸಿಸುತ್ತಿದ್ದರು. ಹೀಗೆ ಮಾಡುವುದರ ಮೂಲಕ, ಸಿಖ್‌ ಜನಸಂಖ್ಯೆಯಲ್ಲಿ ಬಹಳಷ್ಟು (೫೮%) ಪೂರ್ವ ಪಂಜಾಬ್‌ನ ಭಾಗಕ್ಕೆ ಸೇರುವರು, ಒಂದು ವೇಳೆ ಈ ಭಾಗವನ್ನು ಪಾಕಿಸ್ತಾನಕ್ಕೆ ಹಂಚಿದಲ್ಲಿ, ಸಿಖ್‌ ನಿರಾಶ್ರಿತರ ಸಂಖ್ಯೆ ಇನ್ನಷ್ಟು ಹೆಚ್ಚಾಗುತ್ತಿತ್ತು. ಪಶ್ಚಿಮ ಪಂಜಾಬ್‌ನಲ್ಲಿ ಬಹಳಷ್ಟು ಜಮೀನುಗಳನ್ನು ಕಳೆದುಕೊಂಡ ಸಿಖ್ಖರನ್ನು ಸಮಾಧಾನಗೊಳಿಸುವ ಯತ್ನ ಇದಾಗಿತ್ತು. ಬದಲಿಗೆ,ರಾಡ್‌ಕ್ಲಿಫ್‌ ಫಿರೊಜ್‌ಪುರ ಮತ್ತು ಝಿರಾ ತಹಶೀಲ್‌ಗಳನ್ನು ಪಾಕಿಸ್ತಾನಕ್ಕೆ ಹಂಚಲು ಯತ್ನಿಸಿದ್ದರು. ಬಿಕಾನೆರ್‌ ಮಹಾರಾಜಾ ಈ ಯತ್ನವನ್ನು ವಿರೋಧಿಸಿದರು, ಏಕೆಂದರೆ, ಸಟ್ಲಜ್‌ ಮತ್ತು ಬಿಯಸ್‌ ನದಿಗಳ ಸಂಗಮದಲ್ಲಿರುವ ಹರಿಕೆ ಎಂಬ ಸ್ಥಳದಿಂದ ನಾಲೆಯೊಂದು ಸಾಗಿ, ದೊರೆಯ ಪ್ರಾಂತ್ಯ ಫಿರೊಜ್‌ಪುರಕ್ಕೆ ಏಕೈಕ ನೀರು ಸರಬರಾಜು ವ್ಯವಸ್ಥೆಯಾಗಿತ್ತು. ಒಂದು ವೇಳೆ ಫಿರೊಜ್‌ಪುರವನ್ನು ಪಶ್ಚಿಮ ಪಂಜಾಬ್‌ನ ಅಂಗ ಎಂದು ನಿರ್ಣಯಿಸಿದಲ್ಲಿ, ದೊರೆಯು ತಮ್ಮ ರಾಜ್ಯವನ್ನು ಪಾಕಿಸ್ತಾನಕ್ಕೆ ಸೇರಿಸುವರೆಂದು ಮೌಂಟ್ಬಾಟನ್‌ಗೆ ಬೆದರಿಕೆ ಹಾಕಿದಾಗಲೇ ಗಡಿರೇಖಾ ನಿರ್ಣಯದಲ್ಲಿ ಬದಲಾವಣೆ ತಂದು ಇಡೀ ಫಿರೊಜ್‌ಪುರ ಜಿಲ್ಲೆಯನ್ನು ಭಾರತಕ್ಕೆ ಸೇರಿಸಲಾಯಿತು.[ಸೂಕ್ತ ಉಲ್ಲೇಖನ ಬೇಕು]

ಮಾಲ್ಡಾ ಜಿಲ್ಲೆ

[ಬದಲಾಯಿಸಿ]

ಬಂಗಾಳದಲ್ಲಿರುವ ಮಾಲ್ಡಾ ಜಿಲ್ಲೆಯ ವಿಭಜನೆಯು, ರಾಡ್‌ಕ್ಲಿಫ್ ಅವ‌ರ ವಿವಾದಾಸ್ಪದ ನಿರ್ಣಯವಾಗಿತ್ತು. ಈ ಜಿಲ್ಲೆಯಲ್ಲಿ ಸ್ವಲ್ಪಮಟ್ಟಕ್ಕೆ ಅತಿ ಹೆಚ್ಚು ಮುಸ್ಲಿಮರಿದ್ದರು. ಆದರೆ ಇದನ್ನು ವಿಭಜಿಸಿ, ಮಾಲ್ಡಾ ಪಟ್ಟಣ ಸೇರಿದಂತೆ, ಬಹಳಷ್ಟು ಪಾಲು ಭಾರತಕ್ಕೆ ಸೇರಿಸಲಾಯಿತು. ಆ ಸಂದರ್ಭದಲ್ಲಿ ೧೯೪೭ರ ಆಗಸ್ಟ್‌ ೧೫ರ ನಂತರ, ಈ ಜಿಲ್ಲೆಯು ಪೂರ್ವ ಪಾಕಿಸ್ತಾನ ಆಡಳಿತ ಮಂಡಳಿಯಡಿಯಿತ್ತು. ಈ ನಿರ್ಣಯವನ್ನು ಬಹಿರಂಗಗೊಳಿಸಿದಾಗಲೇ ಮಾಲ್ಡಾದಲ್ಲಿ ಪಾಕಿಸ್ತಾನ ಧ್ವಜದ ಬದಲು ಭಾರತ ಧ್ವಜ ಹಾರಿಸಲಾಯಿತು.

ಖುಲ್ನ ಮತ್ತು ಮುರ್ಷಿದಾಬಾದ್‌ ಜಿಲ್ಲೆಗಳು

[ಬದಲಾಯಿಸಿ]

ಸುಮಾರು ೫೨%ರಷ್ಟು ಹಿಂದೂಗಳಿರುವ ಖುಲ್ನಾ ಜಿಲ್ಲೆಯನ್ನು ಪೂರ್ವ ಪಾಕಿಸ್ತಾನಕ್ಕೆ ಹಂಚಲಾಗಿತ್ತು. ೭೦%ರಷ್ಟು ಮುಸ್ಲಿಮರಿರುವ ಮುರ್ಷಿದಾಬಾದ್‌ ಜಿಲ್ಲೆಯನ್ನು ಭಾರತಕ್ಕೆ ಹಂಚಲಾಯಿತು.

ಕರೀಂಗಂಜ್‌

[ಬದಲಾಯಿಸಿ]

ಸಾರ್ವಜನಿಕ ಅಭಿಪ್ರಾಯದನ್ವಯ ಅಸ್ಸಾಮಿನಲ್ಲಿರುವ ಸಿಲ್ಹೆತ್‌ ಜಿಲ್ಲೆಯು ಪಾಕಿಸ್ತಾನದ ಪಾಲಾಯಿತು. ಆದರೆ ಬಹಳಷ್ಟು ಮುಸ್ಲಿಮರು ವಾಸಿಸುತ್ತಿದ್ದ ಕರೀಂಗಂಜ್‌ ಉಪವಿಭಾಗವನ್ನು ಸಿಲ್ಹೆತ್‌ನಿಂದ ಬೇರ್ಪಡಿಸಿ, ಭಾರತಕ್ಕೆ ಹಂಚಲಾಯಿತು. ಆಗ ೨೦೦೧ರಲ್ಲಿ ನಡೆದ ಭಾರತೀಯ ಜನಗಣತಿಯ ಪ್ರಕಾರ, ಕರೀಂಗಂಜ್‌ನಲ್ಲಿ ೫೨.೩%ರಷ್ಟು ಮುಸ್ಲಿಮರಿದ್ದಾರೆ.

ಇವನ್ನೂ ಗಮನಿಸಿ

[ಬದಲಾಯಿಸಿ]

ಟಿಪ್ಪಣಿಗಳು

[ಬದಲಾಯಿಸಿ]
  1. ೧.೦ ೧.೧ ೧.೨ ಪುಟ ೪೮೨ ಓದಿ.
  2. ಸ್ಮಿತಾ, ಸ್ವಾತಂತ್ರ್ಯ ವಿಭಾಗ, ಏಳನೆಯ ಪಂಕ್ತಿ ನೋಡಿ.
  3. ವಾಯವ್ಯ ಗಡಿ ಪ್ರಾಂತ್ಯ (North-West Frontier Province) ಮತ್ತು "North-West Frontier Province" ನೋಡಿ. ದಿ ಕೊಲಂಬಿಯಾ ಎಂಸೈಕ್ಲೊಪೀಡಿಯಾ, ಆರನೆಯ ಆವೃತ್ತಿ. ೨೦೦೮. Encyclopedia.com. ೧೦ ಸೆಪ್ಟೆಂಬರ್‌ ೨೦೦೯.
  4. ೪.೦ ೪.೧ ಪುಟ ೪೮೩ ಓದಿ, .
  5. ಪುಟ ೪೯೭ ಓದಿ: "ಅವರಲ್ಲಿ ಹತ್ತು ದಶಲಕ್ಷ ಜನರು ಮಧ್ಯ ಪಂಜಾಬಿನಲ್ಲಿದ್ದರು. ಹೆಚ್ಚುಕಡಿಮೆ ಸ್ಕಾಟ್ಲೆಂಡ್‌ ದೇಶದ, ಅಂದರೆ 200 miles (320 km) X 150 miles (240 km) ಅಳತೆಯ ಪ್ರದೇಶದಲ್ಲಿನ ಸುಮಾರು ೧೭,೦೦೦ ಪಟ್ಟಣ-ಗ್ರಾಮಗಳಲ್ಲಿ, ಐದು ದಶಲಕ್ಷ ಮುಸ್ಲಿಮರು ಪೂರ್ವದಿಂದ ಪಶ್ಚಿಮಕ್ಕೆ ಹಾಗೂ ಐದು ದಶಲಕ್ಷ ಹಿಂದೂಗಳು ಮತ್ತು ಸಿಖ್ಖರು ವಿರುದ್ಧ ದಿಕ್ಕಿನಲ್ಲಿ ನಡೆದುಹೋಗುತ್ತಿದ್ದರು. ಇವರಲ್ಲಿ ಹಲವರು ತಮ್ಮ ಗಮ್ಯಸ್ಥಳ ತಲುಪಲಿಲ್ಲ."
  6. ೬.೦ ೬.೧ ಪುಟ ೪೯೯ ಓದಿ.
  7. ಮ್ಯಾನ್ಸರ್ಜಿ
  8. ಪುಟ ೪೮೩ ಓದಿ.
  9. ಪುಟ ೪೮೨ ಮತ್ತು ೪೮೩ ಓದಿ.
  10. ಪುಟ ೪೧೮ ಓದಿ. "ಅವರು ಅಂದಿನ ಪ್ರಧಾನಿ ಕ್ಲಿಮೆಂಟ್‌ ಅಟ್ಲೀಯವರಿಗೆ ಪತ್ರ ಬರೆದರು." ಭಾರತದಲ್ಲಿನ ರಾಜಕೀಯ ಪಕ್ಷಗಳೆಲ್ಲವೂ ಸಂವಿಧಾನವೊಂದರ ಬಗ್ಗೆ ಒಪ್ಪಿಕೊಂಡು, ಸರ್ಕಾರ ರಚನೆಗೆ ಸಿದ್ಧರಾದಲ್ಲಿ, ತಾವು ವಿಶಿಷ್ಟ ದಿನ ಮತ್ತು ಸಮಯದಂದು ಬ್ರಿಟಿಷ್‌ ಆಡಳಿತ ಕೊನೆಗೊಳ್ಳುವುದು ಎಂದು ತಾವು ಸಂಸತ್ತಿನಲ್ಲಿ ಹೇಳಿಕೆ ನೀಡಲಿದ್ದೀರಿ ಎಂಬುದು, ನನ್ನ ಪಾಲಿಗೆ ಬಹಳಷ್ಟು ಗಮನಾರ್ಹವಾಗಿದೆ.""
  11. ಪುಟ ೪೮೨ ಓದಿ: "ಜಿನ್ನಾ ಸಮಯ ಸಾಧಿಸಿ, ವಿಶ್ವ ಸಂಸ್ಥೆಗೆ ಈ ಗಡಿ ವಿಚಾರವನ್ನು ಒಯ್ಯುವುದು ಲೇಸು ಎಂದಿದ್ದರು. ಒಂದು ವೇಳೆ ಹಾಗಾದಲ್ಲಿ, ಹಲವು ತಿಂಗಳುಗಳು ಅಥವಾ ವರ್ಷಗಳ ಕಾಲ ಗಡಿ ವಿವಾದವು ವಿಳಂಬಗೊಳ್ಳುತ್ತಿತ್ತು. ಬದಲಿಗೆ, ನಡೆಯಲೇಬೇಕಾಗಿದ್ದ ಚರ್ಚೆಗಳ ನಂತರ, ಎರಡು ಗಡಿರೇಖಾ ಆಯೋಗಗಳನ್ನು ರಚಿಸಲಾಯಿತು. ಪ್ರಯತಿಯೊಂದು ಆಯೋಗಕ್ಕೂ ಒಬ್ಬ ಸ್ವತಂತ್ರ ಅಧ್ಯಕ್ಷ ಹಾಗೂ ನಾಲ್ವರು ಉಚ್ಚನ್ಯಾಯಲಯದ ನ್ಯಾಯಮೂರ್ತಿಗಳು, ಕಾಂಗ್ರೆಸ್‌ ನಾಮನಿರ್ದೇಶಿತ ಇಬ್ಬರು ಹಾಗೂ ಮುಸ್ಲಿಮ್‌ ಲೀಗ್‌ ನಾಮನಿರ್ದೇಶಿತ ಇಬ್ಬರನ್ನು ಈ ಸಮಿತಿಯು ಒಳಗೊಂಡಿತ್ತು."
  12. ಮಿಶ್ರಾ, ಪಂಕ್ತಿ ೧೯: ೧೯: "ಎರಡನೆಯ ವಿಶ್ವಸಮರದಲ್ಲಿ ಸಾಕಷ್ಟು ವೆಚ್ಚ ಮತ್ತು ಇತರೆ ದುಸ್ತರ ಸ್ಥಿತಿ ಅನುಭವಿಸಿದ ಬ್ರಿಟನ್‌ಗೆ, ಉಪಖಂಡವನ್ನು ತೊರೆಯಬೇಕೆಂಬುದು ತಡವಾಗಿ ಅರಿವಾಯಿತು. ೧೯೪೦ರ ದಶಕದ ಕಾಲಾವಧಿಯಲ್ಲಿ, ಭಾರತದಲ್ಲಿನ ರಾಜಕೀಯ ಸ್ಥಿತಿಯು ಕೈಮೀರಿ ಹೋಗುತ್ತಿದೆ ಎಂಬುದೂ ಸಹ ಅರಿವಾಯಿತು.... ಆದರೆ ಯುದ್ಧದ ನಂತರ ನಡೆದ ಬ್ರಿಟಿಷ್‌ ಚುನಾವಣೆಗಳಲ್ಲಿ, ಪ್ರತಿಗಾಮಿತ್ವವು ಲೇಬರ್‌ ಪಾರ್ಟಿ ವಿರುದ್ಧ ಅನಿರೀಕ್ಷಿತ ರೀತಿಯಲ್ಲಿ ಸೋತಿತು. ಇದರಿಂದಾಗಿ ಬ್ರಿಟಿಷ್‌ ರಾಜಕೀಯ ರಂಗದಲ್ಲಿ ಹೊಸ ಯುಗ ಆರಂಭವಾಯಿತು. ವಾನ್‌ ಟುನ್ಜೆಲ್ಮನ್‌ ಬರೆದಂತೆ, '೧೯೪೬ರಷ್ಟರೊಳಗೆ, ಉಪಖಂಡವು ಬಹಳ ಅವ್ಯವಸ್ಥೆಯಲ್ಲಿ ಸಿಲುಕಿತ್ತು. ಬ್ರಿಟಿಷ್‌ ನಾಗರಿಕ ಮತ್ತು ಸೇನಾಧಿಕಾರಿಗಳು ವಾಪಸ್‌ ಹೋಗಲು ಕಾತುರರಾಗಿದ್ದರು, ಜೊತೆಗೆ, ಭಾರತೀಯರ ಮಧ್ಯೆ ಇವರ ಉಪಸ್ಥಿತಿಯು ಹಗೆತನಕ್ಕೆ ಕಾರಣವಾಗುತ್ತಿತ್ತು.'... ತಮ್ಮ ಸಿಂಧುತ್ವಕ್ಕೆ ಅಪಾಯವನ್ನೊಡ್ಡದೆ, ಬ್ರಿಟಿಷರು ಯಾವುದೇ ಬಲ ಪ್ರಯೋಗಿಸುವಂತಿರಲಿಲ್ಲ. ಜೊತೆಗೆ, ವಾನ್‌ ಟುನ್ಜೆಲ್ಮನ್‌ ಹೇಳಿದಂತೆ, 'ಅವರು ಅರಸೊತ್ತಿಗೆಯ ಸಾಮ್ರಾಜ್ಯಶಾಹಿಯ ವೈಫಲ್ಯದ ಒಪ್ಪಿಕೊಳ್ಳುವಿಕೆಯ ಬದಲು, ಅರಸೊತ್ತಿಗೆಯ ಪ್ರಾಬಲ್ಯದ ಭ್ರಮೆಯತ್ತ ಅದೆಷ್ಟೇ ಒಲವು ತೋರಿದರೂ, ಬಹಳಷ್ಟು ಅಸ್ಥಿರತೆಯ ಕೂಪದಲ್ಲಿ ಬೀಳುತ್ತಿದ್ದ ತನ್ನ ಸಾಮ್ರಾಜ್ಯವನ್ನು ಉಳಿಸಿಕೊಳ್ಳುವುದು ಅಸಾಧ್ಯವಾಗುತ್ತಿತ್ತು. ರಾಜಮನೆತನವು ಭಾರತ ಬಿಟ್ಟು ಹೋಗುವುದು ಅನಿವಾರ್ಯವಷ್ಟೇ ಅಲ್ಲ, ತ್ವರಿತವಾಗಿ ನಡೆಯಬೇಕಾಯಿತು."
  13. ಚೆಸ್ಟರ್‌, ಬೌಂಡರಿ ಕಮಿಷನ್‌ ಫಾರ್ಮ್ಯಾಟ್‌ ಅಂಡ್‌ ಪ್ರೊಸಿಜರ್‌, ವಿಭಾಗ, ಪಂಕ್ತಿ. ೫
  14. ಪುಟ ೪೮೩, ಪಂಕ್ತಿ ೧.
  15. ಜನಸಂಖ್ಯೆ?
  16. ಪುಟ ೪೮೫ ಓದಿ.
  17. ಪುಟ ೪೮೪-೪೮೫ ಓದಿ. ನಂತರದ "೩ ಜೂನ್‌ ೧೯೪೭ರ ಯೋಜನೆಯನ್ನು ಘೋಷಿಸಿದಾಗ, ಪ್ರಮುಖ ಸಿಖ್‌ ಸಂಘಟನೆಯಾದ ಶಿರೋಮಣಿ ಅಕಾಲಿ ದಲ್‌ ಸುತ್ತೋಲೆಯೊಂದನ್ನು ಹೊರಡಿಸಿದ್ದರು. ಇದರಂತೆ 'ಪಾಕಿಸ್ತಾನದ ಸೃಷ್ಟಿಯೆಂದರೆ, ಸಿಖ್‌ ಪಂಥಕ್ಕೆ ಜೀವಾಪಾಯ. ಸಿಖ್ಖರಿಗೆ ಚೆನಾಬ್‌ ಮತ್ತು ಯಮುನಾ ನದಿಗಳು ಗಡಿಗಳಾಗಿರುವ ಸ್ವತಂತ್ರ ರಾಜ್ಯದ ಅಗತ್ಯವಿದೆ. ದಳದ ಧ್ವಜದಡಿ ತಮ್ಮ ಧ್ಯೇಗಳಿಗಾಗಿ ಹೋರಾಡಿರೆಂದು ಸಿಖ್ಖರಿಗೆ ಕರೆ ನೀಡಿತ್ತು.'"
  18. ಪುಟ ೪೮೧ ಓದಿ.
  19. ಮಿಶ್ರಾ, ಪಂಕ್ತಿ ೪
  20. ಮಿಶ್ರಾ, ಪಂಕ್ತಿ ೫.
  21. ಹೆವಾರ್ಡ್‌, ೪೫. ಚೆಸ್ಟರ್‌, ವಿಧಾನಶಾಸ್ತ್ರ ವಿಭಾಗ, ಪಂಕ್ತಿ ೧
  22. ಪುಟ ೪೮೪ ಓದಿ. ಹಲವು ವರ್ಷಗಳ ನಂತರ, ಅವರು ಲಿಯೊನರ್ಡ್ ಮೋಸ್ಲೆಗೆ ವಿವರಿಸಿದಂತೆ, 'ಅಸಹನೀಯ ಬಿಸಿಲು, ಮಧ್ಯಾಹ್ನದ ಹೊತ್ತು ಅತಿ ಕರಾಳ ರಾತ್ರಿಯೆಂದೆನಿಸುತ್ತದೆ, ನರಕದ ಕೂಪದಲ್ಲಿರುವಂತೆ ಅನುಭವವಾಗುತ್ತದೆ. ಕೆಲವು ದಿನಗಳ ನಂತರ, ನಾನು ಜೀವಂತವಾಗಿ ಹೊರಬರುವೆನಾ ಎಂಬ ಗಂಭೀರ ಚಿಂತೆ ಕಾಡುತ್ತಿತ್ತು. ಗಡಿರೇಖಾ ಆಯೋಗದ ಮುಖ್ಯಸ್ಥನಾಗಿ ನನ್ನ ಅತಿಮಹತ್ತರ ಸಾಧನೆಯೇನೆಂದರೆ, ಅದು ಭೌತಿಕವಾದದ್ದು, ಅಂದರೆ ಬದುಕುಳಿಯುವುದು, ಎಂದು ನಾನು ಅಂದಿನಿಂದಲೂ ಭಾವಿಸಿರುವೆ.'
  23. ಪುಟ ೪೯೪ ಓದಿ..
  24. ಪುಟ ೪೯೦.
  25. ಪುಟ ೪೮೭-೪೮೮ ಓದಿ.
  26. ಕೊಲ್ಕತ್ತಾ ರಿಸರ್ಚ್‌ ಗ್ರೂಪ್‌
  27. ೨೭.೦ ೨೭.೧ "ಆರ್ಕೈವ್ ನಕಲು". Archived from the original on 2010-12-06. Retrieved 2011-02-21.


ಉಲ್ಲೇಖಗಳು

[ಬದಲಾಯಿಸಿ]

ಹೆಚ್ಚಿನ ಓದಿಗಾಗಿ

[ಬದಲಾಯಿಸಿ]
  • ಇಂಡಿಯಾ: ಸಂಪುಟ XI: ದಿ ಮೌಂಟ್ಬಾಟನ್‌ ವೈಸರಾಯಲ್ಟಿ-ಅನೌನ್ಸ್‌ಮೆಂಟ್‌ ಅಂಡ್‌ ರಿಸೆಪ್ಷನ್‌ ಆಫ್‌ ದಿ ೩ ಜೂನ್‌ ಪ್ಲ್ಯಾನ್‌, ೩೧ ಮೇ-೭ ಜುಲೈ ೧೯೪೭. ಪರಿಶೀಲಿಸಿದವರು ವುಡ್‌, ಜೆ.ಆರ್‌. "ಡಿವೈಡಿಂಗ್‌ ದಿ ಜ್ಯೂಯಲ್‌: ಮೌಂಟ್ಬಾಟನ್‌ ಅಂಡ್‌ ದಿ ಟ್ರ್ಯಾಂಸ್ಫರ್‌ ಆಫ್‌ ಪಾವರ್‌ ಟು ಇಂಡಿಯಾ ಅಂಡ್‌ ಪಾಕಿಸ್ತಾನ್‌". ಪೆಸಿಫಿಕ್‌ ಅಫೇರ್ಸ್‌ , ಸಂಪುಟ. ೫೮, ಸಂಖ್ಯೆ. ೪ (ವಿಂಟರ್‌, ೧೯೮೫–೧೯೮೬), ಪಿಪಿ. ೬೫೩–೬೬೨.

ಜೆಎಸ್‌ಟಿಒಆರ್‌

ಬಾಹ್ಯ ಕೊಂಡಿಗಳು

[ಬದಲಾಯಿಸಿ]