ವಿಷಯಕ್ಕೆ ಹೋಗು

ಮೇತೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತಿಂದ ನಂತರ ಉಬ್ಬಿರುವ ಮೇತೆಗಳನ್ನು ಎರಡು ಬಿಳಿ ಹೊಟ್ಟೆಯ ಗಿಳಿಗಳಲ್ಲಿ ಕಾಣಬಹುದು.

ಮೇತೆ ಎಂದರೆ ಪಕ್ಷಿಗಳು ತಾವು ತಿಂದ ಆಹಾರವನ್ನು ಜಠರಕ್ಕೆ ಸಾಗಿಸುವ ಮೊದಲು, ಜೀರ್ಣಕಾರ್ಯಕ್ಕೆ ಅನುಕೂಲವಾಗುವಂತೆ ಮಾರ್ಪಡಿಸಲು ಸಂಗ್ರಹಿಸಿಟ್ಟುಕೊಳ್ಳುವ ಗಂಟಲಿನ ಭಾಗದಲ್ಲಿರುವ ಅನ್ನನಾಳದ ಸಂಚಿಯಂಥ ಅಂಗ (ಕ್ರಾಪ್).[೧][೨][೩]

ಮೇತೆಯ ಕಾರ್ಯ[ಬದಲಾಯಿಸಿ]

ಅನ್ನನಾಳದ ಆರಂಭದಲ್ಲಿ ಒಂದು ಪಾರಿವಾಳದ ಮೇತೆ (ಕ್ರಮ 4) ಎದ್ದು ಕಾಣುತ್ತಿದೆ.

ಆಧುನಿಕ ಹಕ್ಕಿಗಳಲ್ಲಿ ಹಲ್ಲುಗಳಿಲ್ಲದಿರುವುದರಿಂದ ಆಹಾರವನ್ನು ಅಗಿದು ಪಚನಕ್ರಿಯೆಗೆ ಅನುಕೂಲವಾಗುವಂತೆ ಮಾಡುವುದು ಕಷ್ಟ. ಆಗ ಮೇತೆಯಲ್ಲಿ ಆಹಾರ ಸಂಗ್ರಹವಾಗಿ ತೇವಗೊಂಡು ಮೆತುವಾಗುತ್ತದೆ. ಇದರಲ್ಲಿ ನಿರ್ದಿಷ್ಟವಾದ ಜೀರ್ಣಕಾರ್ಯವೇನೂ ನಡೆಯುವುದಿಲ್ಲ. ಇದು ತಾತ್ಕಾಲಿಕ ಆಹಾರ ಸಂಗ್ರಹಣಾ ಕಾರ್ಯವನ್ನು ಮಾತ್ರ ನಿರ್ವಹಿಸುತ್ತದೆ. ನುಂಗಿದ ಆಹಾರ ಇದರಲ್ಲಿ ಉಬ್ಬಿಕೊಂಡು, ಮೃದುವಾಗಿ ಇಲ್ಲಿಂದ ಮುಂದೆ ಸಾಗಿ ಜಠರವನ್ನು ಸೇರಿದಾಗ ಸುಲಭವಾಗಿ ಜೀರ್ಣವಾಗುವ ಸ್ಥಿತಿಗೆ ಬರುತ್ತದೆ. ಕೆಲವು ಹಕ್ಕಿಗಳಲ್ಲಿ ಮೇತೆಯ ವಿಶಿಷ್ಟ ಗ್ರಂಥಿಗಳು ಒಂದು ಬಗೆಯ ದ್ರವವನ್ನು ಸ್ರವಿಸುತ್ತದೆ. ಸಂಗ್ರಹಿತ ಆಹಾರ ಈ ದ್ರವದ ರಾಸಾಯನಿಕ ಕ್ರಿಯೆಗೆ ಒಳಗಾಗುವುದುಂಟು.

ರಚನೆ[ಬದಲಾಯಿಸಿ]

ಮೇತೆ ಕೆಲವು ಹಕ್ಕಿಗಳಲ್ಲಿ ಅಂಡಾಕಾರವಾಗಿದೆ. ಬರಿಯ ಕಾಳು ತಿನ್ನುವ ಅಥವಾ ಮಾಂಸಾಹಾರಿ ಹಕ್ಕಿಗಳಲ್ಲಿ ಉದ್ದುದ್ದವಾಗಿಯೂ ತ್ರಿಕೋಣಾಕಾರವಾಗಿಯೂ ಇದೆ. ಪಾರಿವಾಳಗಳಲ್ಲಿ ಇದು ಮೂರು ಕೋಣೆಗಳನ್ನೊಳಗೊಂಡಿದೆ.

ಪಾರಿವಾಳಗಳ ಮೇತೆ ಗ್ರಂಥಿಗಳಲ್ಲಿ ಒಂದು ರೀತಿಯ ವಿಶಿಷ್ಟ ಹೊಂದಾಣಿಕೆ ಕಂಡುಬರುತ್ತದೆ. ಗಂಡು ಮತ್ತು ಹೆಣ್ಣು ಪಕ್ಷಿಗಳ ಮೇತೆಯಲ್ಲಿ ಎರಡು ಗ್ರಂಥಿಗಳು ನಿರ್ದಿಷ್ಟ ಪ್ರದೇಶದಲ್ಲಿ ರೂಪುಗೊಳ್ಳುತ್ತವೆ. ಈ ಗ್ರಂಥಿಗಳನ್ನು ದೇಹದ ಉಳಿದ ಗ್ರಂಥಿಗಳಿಗೆ ಹೋಲಿಸುವುದು ಕಷ್ಟ. ಒಂದು ರೀತಿಯಲ್ಲಿ ಜೀರ್ಣದ್ರವವನ್ನು ಸ್ರವಿಸಿದರೂ ಇತರೆ ಗ್ರಂಥಿಗಳಿಗೆ ಸಲ್ಲದ ವಿಶಿಷ್ಟ ಗುಣವಾದ ಕೋನ ಬೆಳವಣಿಗೆಯೂ ರಚನೆಗಳು ಕಂಡುಬರುವುದು ವಿಶೇಷ ಗುಣ. ಈ ಗ್ರಂಥಿಗಳು ಕ್ರಮಬದ್ಧ ಪ್ರಚೋದನೆಗಳಿಂದ ವಿಸ್ತಾರಗೊಂಡು ಕೋಶಗಳು ರೂಪುಗೊಳ್ಳಲು ಸಾಧ್ಯವಾಗುವುದು. ಇದರಿಂದಾಗಿ ಅತ್ಯಂತ ಪುಷ್ಟಿಕರವಾದ ಮೇತೆಹಾಲು (ಕ್ರಾಪ್ ಮಿಲ್ಕ್) ಅದರ ಅವಕಾಶದಲ್ಲಿ ಬಂದು ಸೇರಲು ಸಾಧ್ಯವಾಗುತ್ತದೆ. ಈ ಹಾಲನ್ನು ಮರಿಗಳ ಗಂಟಲಿಗೆ ತಾಯಿ ಹಕ್ಕಿಗಳು ಗುಟುಕುನೀಡಿ ಅವುಗಳ ಪೋಷಣೆ ಮಾಡುವುವು.[೪] ಮೇತೆಯ ಒಳಭಾಗದಲ್ಲಿ ಶ್ಲೇಷ್ಮ ಗ್ರಂಥಿಗಳಿರುವುವು. ಮೇತೆ ಗ್ರಂಥಿಗಳ ಕಾರ್ಯ ಪಿಟ್ಯುಟರಿ ಗ್ರಂಥಿಗಳ ಪ್ರೊಲ್ಯಾಕ್ಟಿನ್ ಹಾರ್ಮೊನಿನ ಆಧೀನಕ್ಕೊಳಪಟ್ಟಿರುತ್ತದೆ. ಮರಿಹಕ್ಕಿಗಳ ಪಾಲನೆಯ ಅನಂತರ ಈ ಗ್ರಂಥಿಗಳು ತಮ್ಮ ಮೊದಲಿನ ಸ್ಥಿತಿಗೆ ಬರುವುವು.

ಹೆಣ್ಣು ಮತ್ತು ಗಂಡು ಹಕ್ಕಿಗಳೆರಡೂ ಈ ಹಾಲನ್ನು ಸ್ರವಿಸುವುದುಂಟು. ಹೆಣ್ಣಿನಲ್ಲಿ ಕಲಾಸ್ಟ್ರಂ ಎಂಬ ಪದಾರ್ಥವಿದೆ. ಗಂಡಿನಲ್ಲಿರುವುದಿಲ್ಲ. ಮೇತೆಯ ಹಾಲು ಸ್ತನಿಗಳ ಹಾಲನ್ನು ಹೋಲುವುದಿಲ್ಲ. ಇದರಲ್ಲಿ ಲ್ಯಾಕ್ಟೋಸ್ ಆಗಲೀ, ಜಿಡ್ಡಾಗಲೀ ಇರುವುದಿಲ್ಲ.

ಉಲ್ಲೇಖಗಳು[ಬದಲಾಯಿಸಿ]

  1. Jalaludeen, A.; Churchil, R. Richard; Baéza, Elisabeth, eds. (2022). Duck Production and Management Strategies. doi:10.1007/978-981-16-6100-6. ISBN 978-981-16-6099-3. S2CID 246040130.
  2. "Chapter 3. DIGESTIVE PHYSIOLOGY".
  3. Grindol, Diane (12 December 2013). "Five Pet Parrot Facts". Lafeber Company. Retrieved 6 November 2021.
  4. Gordon John Larkman Ramel (2008-09-29). "The Alimentary Canal in Birds". Retrieved 2008-12-16.

ಹೊರಗಿನ ಕೊಂಡಿಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಮೇತೆ&oldid=1197589" ಇಂದ ಪಡೆಯಲ್ಪಟ್ಟಿದೆ