ವಿಷಯಕ್ಕೆ ಹೋಗು

ಮಾಸ್ಟರ್ ಹಿರಣ್ಣಯ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಾಸ್ಟರ್ ಹಿರಣ್ಣಯ್ಯ
Born
ನರಸಿಂಹಮೂರ್ತಿ

ಫೆಬ್ರುವರಿ ೧೫, ೧೯೩೪
ಮೈಸೂರು
Died2 May 2019(2019-05-02) (aged 85)[]
Occupationರಂಗಭೂಮಿ ಕಲಾವಿದರು

ಮಾಸ್ಟರ್ ಹಿರಣ್ಣಯ್ಯ (ಫೆಬ್ರುವರಿ ೧೫, ೧೯೩೪ - ೦೨ ಮೇ ೨೦೧೯) ಕನ್ನಡ ರಂಗಭೂಮಿಯ ಹಿರಿಯ, ಪ್ರಸಿದ್ಧ ಕಲಾವಿದರು. ತಮ್ಮ ವಿಡಂಭನಾತ್ಮಕ ವಾಗ್ವೈಕರಿ, ಅಭಿನಯ, ನಿರೂಪಣೆಗಳಿಂದ ಕನ್ನಡ ನಾಡಿನಲ್ಲಿ ಪ್ರಸಿದ್ಧಿ ಪಡೆದಿದ್ದಾರೆ.

ನಾಟಕ ರತ್ನಾಕರ ಮಾಸ್ಟರ್ ಹಿರಣ್ಣಯ್ಯನವರು ಫೆಬ್ರವರಿ ೧೫, ೧೯೩೪ರಂದು ಮೈಸೂರಿನಲ್ಲಿ ಜನಿಸಿದರು. ಅವರ ಮೂಲ ಹೆಸರು ನರಸಿಂಹಮೂರ್ತಿ. ಕಲ್ಚರ್ಡ್ ಕಮೆಡಿಯನ್ ಎಂದು ಪ್ರಖ್ಯಾತರಾಗಿದ್ದ ಕೆ. ಹಿರಣ್ಣಯ್ಯ ಮತ್ತು ಶಾರದಮ್ಮ ದಂಪತಿಗಳ ಒಬ್ಬನೇ ಮಗ. ಓದಿದ್ದು ಇಂಟರ್ ಮೀಡಿಯೆಟ್ ವರೆಗೆ. ೧೯೫೨ರಲ್ಲಿ ತಂದೆಯೊಂದಿಗೆ ಕೂಡಿಕೊಂಡು ಅವರಿಂದಲೇ ರಂಗಶಿಕ್ಷಣ ಪಡೆದರು.

ಮಾಸ್ಟರ್ ಹಿರಣ್ಣಯ್ಯನವರು ಬಾಲ್ಯದಲ್ಲಿರುವಾಗ ಅವರ ತಂದೆ ಮದರಾಸಿನಲ್ಲಿ ಬದುಕನ್ನರಸಿ ತಮ್ಮ ಕುಟುಂಬವನ್ನು ಅಲ್ಲಿಗೆ ಕೊಂಡೊಯ್ದರು. ಹೀಗಾಗಿ ಅಲ್ಲಿ ಅವರಿಗೆ ತಮಿಳು, ತೆಲುಗು ಮತ್ತು ಇಂಗ್ಲಿಷ್ ಭಾಷೆಗಳ ಅಭ್ಯಾಸವಾಯಿತು. ಜೊತೆ ಜೊತೆಗೆ ಮನೆಯಲ್ಲಿ ಕನ್ನಡದ ಬಾಯಿಪಾಠ ಮತ್ತು ಸಂಸ್ಕೃತದ ಸ್ತೋತ್ರ ಪಾಠ ಕೂಡಾ ನಡೆಯಿತು. ನಂತರದಲ್ಲಿ ಮೈಸೂರಿಗೆ ಬಂದು ಸೇರಿದ್ದು ಬನುಮಯ್ಯ ಮಾಧ್ಯಮಿಕ ಶಾಲೆ. ‘ಸಾಧ್ವಿ’, ‘ಮೈಸೂರು ಪತ್ರಿಕೆ’ಯನ್ನು ಮನೆ ಮನೆಗೆ ಹಂಚಿ ಆ ಸಂಪಾದನೆಯಿಂದ ಶಾಲಾ ಪರೀಕ್ಷೆಗಳ ಶುಲ್ಕಕ್ಕೆ ದಾರಿ ಮಾಡಿಕೊಂಡರು. ಮುಂದೆ ಇಂಟರ್ ಮೀಡಿಯೆಟ್ ಓದಿಗಾಗಿ ಶಾರದಾವಿಲಾಸ ಕಾಲೇಜು ಸೇರಿದರು. ಓದು ಅಲ್ಲಿಗೆ ಮುಕ್ತಾಯಗೊಂಡಿತು.

ಅಭಿನಯ ರಂಗಕ್ಕೆ ಪಾದಾರ್ಪಣೆ

[ಬದಲಾಯಿಸಿ]

ತಂದೆ ಕೆ. ಹಿರಣ್ಣಯ್ಯನವರು ೧೯೪೦ರಲ್ಲಿ ರಚಿಸಿ, ನಿರ್ದೇಶಿಸಿದ ಚಲನಚಿತ್ರ ‘ವಾಣಿ’ಯಲ್ಲಿ ಹಿರಣ್ಣಯ್ಯನವರು ಪಾದಾರ್ಪಣ ಮಾಡಿದರು. 1948ರಲ್ಲಿ ರಂಗಭೂಮಿಯಲ್ಲಿ ಚಿಕ್ಕ ಪಾತ್ರಮಾಡಲು ಹೋಗಿ ಸೋತರೂ ಛಲದಿಂದ ಕಾಲೇಜಿನಲ್ಲಿ ಸಂಘ ಕಟ್ಟಿ ‘ಆಗ್ರಹ’ ಎಂಬ ನಾಟಕವನ್ನು ಪ್ರದರ್ಶಿಸಿದರು. ಅದ್ಭುತ ಅಭಿನಯದಿಂದ ನಾಟಕವೇನೋ ಗೆದ್ದಿತು. ನಾಟಕದಲ್ಲಿ ಅಭಿನಯಿಸಿದವರೆಲ್ಲರೂ ಪರೀಕ್ಷೆಯಲ್ಲಿ ಡುಮ್ಕಿ ಆದ್ರೂ ಅಭಿನಯ ಚತುರರಾಗಿ ವಿಜೃಂಭಿಸಿದರು.

ಕೆ. ಹಿರಣ್ಣಯ್ಯ ಮಿತ್ರಮಂಡಲಿಯಲ್ಲಿ

[ಬದಲಾಯಿಸಿ]

೧೯೫೩ರಲ್ಲಿ ತಂದೆಯವರು ನಿಧನರಾದಾಗ, ‘ಕೆ. ಹಿರಣ್ಣಯ್ಯ ಮಿತ್ರ ಮಂಡಲಿ’ಯನ್ನು ತಾವೇ ವಹಿಸಿಕೊಂಡು ನಿರಂತರವಾಗಿ ಮುನ್ನಡೆಸಿದರು. ತಂದೆಯ ಮರಣದ ನಂತರ ಅ.ನ.ಕೃ. ಮತ್ತು ಮಿತ್ರರ ಸಹಾಯದಿಂದ ನಾಟಕ ಕಂಪನಿ ಕಟ್ಟಿದರು. ಆದರೆ ಅನುಭವಿಸಿದ್ದು ನಷ್ಟ ಮಾತ್ರ. ತಂದೆಯವರು ನಡೆಸುತ್ತಿದ್ದ ‘ಹಿರಣ್ಣಯ್ಯ ಮಿತ್ರ ಮಂಡಲಿ’ಯನ್ನು ಪುನಃ ಆರಂಭಿಸಿ ‘ಲಂಚಾವತಾರ’ ನಾಟಕವನ್ನು ರಚಿಸಿ ರಂಗ ಪ್ರಯೋಗ ಮಾಡಿದರು. ಜನಪ್ರಿಯತೆಯ ಜೊತೆಗೆ ಮಹಾರಾಜರಿಂದ ಸನ್ಮಾನ ಮತ್ತು ‘ನಟರತ್ನಾಕರ’ ಬಿರುದು ಬಂತು. ನಂತರ ‘ನಡುಬೀದಿ ನಾರಾಯಣ’ದಲ್ಲಿ ತೀರ್ಥರೂಪುವಾಗಿ, ‘ಭ್ರಷ್ಟಾಚಾರ’ದಲ್ಲಿ ಧಫೇದಾರ್ ಮುರಾರಿಯಾಗಿ, ‘ಸದಾರಮೆ’ಯಲ್ಲಿ ಕಳ್ಳನಾಗಿ, ಆದಿಮೂರ್ತಿಯಾಗಿ, ‘ಕಪಿಮುಷ್ಠಿ’ಯಲ್ಲಿ ಜಾರ್ಜ್ ಆಗಿ, ಕಸ್ತೂರಿಯಾಗಿ, ‘ಮಕ್ಮಲ್ ಟೋಪಿ’ಯಲ್ಲಿ ನಾಣಿಯಾಗಿ ಹಿರಣ್ಣಯ್ಯನವರು ಜನರನ್ನು ಅಪಾರವಾಗಿ ಆಕರ್ಷಿಸಿದರು. ಈ ನಾಟಕಗಳೇ ಅಲ್ಲದೆ ‘ದೇವದಾಸಿ’, ‘ಅನಾಚಾರ’, ‘ಅತ್ಯಾಚಾರ’, ‘ಕಲ್ಕ್ಯಾವತಾರ’, ‘ಅಮ್ಮಾವ್ರ ಅವಾಂತರ’, ‘ಪುರುಷಾಮೃಗ’ ಹೀಗೆ ಇಪ್ಪತ್ತೈದಕ್ಕೂ ಹೆಚ್ಚು ನಾಟಕಗಳನ್ನು ರಂಗಕ್ಕೆ ತಂದು ಅವರು ಗಳಿಸಿದ ಕೀರ್ತಿ ಅಪಾರವಾದುದು. ಅವರ ‘ಲಂಚಾವತಾರ’ ನಾಟಕವೊಂದೇ 10,000ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡ ದಾಖಲೆಯನ್ನು ನಿರ್ಮಿಸಿದೆ.

ನಾಟಕಗಳ ಮುಖೇನ ವೈಚಾರಿಕ ಕ್ರಾಂತಿ

[ಬದಲಾಯಿಸಿ]

ಮಾಸ್ಟರ್ ಹಿರಣ್ಣಯ್ಯನವರು ನಾಟಕಗಳಲ್ಲಿ ಪ್ರಖ್ಯಾತರಾಗಿ, ತಮ್ಮ ನಾಟಕಗಳ ಮೂಲಕ ಸಾರ್ವಜನಿಕ ವಲಯದಲ್ಲಿ, ಸಮಾಜದ ರಾಜಕೀಯದ ಅಂಕು ಡೊಂಕುಗಳ ಬಗ್ಗೆ ವಿಚಾರ ಕ್ರಾಂತಿ ಮೂಡಿಸಿದವರು. ಅದಕ್ಕೂ ಮಿಗಿಲಾಗಿ ಅವರ ವಿರುದ್ಧ ಕಿರುಕುಳ ನೀಡಲು ನಿಂತವರ ಮುಂದೆ ಸೊಪ್ಪು ಹಾಕದೆ ತಮ್ಮ ಕೆಲಸವನ್ನು ನಿರಂತರವಾಗಿ ಮುಂದುವರೆಸಿದವರು. ಮುಖ್ಯಮಂತ್ರಿಗಳಾದ ನಿಜಲಿಂಗಪ್ಪ, ಪ್ರಧಾನಿ ಇಂದಿರಾ ಗಾಂಧೀ ಜೊತೆಗೆ ಅನೇಕ ರಾಜಕೀಯ ನಾಯಕರು, ವಿವಿಧ ಹಂತಗಳ ಪುಡಾರಿಗಳು ಇವರ ಟೀಕಾ ಪ್ರಹಾರವನ್ನು ತಡೆದುಕೊಳ್ಳಲಾರದೆ ಅವರ ಚಟುವಟಿಕೆಗಳನ್ನು ಮಟ್ಟ ಹಾಕಲು ನಡೆಸಿದ ಪ್ರಯತ್ನಗಳನ್ನೆಲ್ಲಾ ಧೈರ್ಯವಾಗಿ ಮೆಟ್ಟು ನಿಂತ ಧೀರರಾಗಿ ಅವರು ತಮ್ಮ ಕಲೆಯನ್ನು ಬೆಳಗಿದ ರೀತಿ ಅನನ್ಯ. ಅದೆಷ್ಟು ಬಾರಿ ಕೋರ್ಟ್ ಹತ್ತಿದರೋ ಈ ಪುಣ್ಯಾತ್ಮ. ಸುಪ್ರೀಂ ಕೋರ್ಟಿಗೆ ಹೋಗಿ ನ್ಯಾಯ ಪಡೆದರು. ಆದರೆ ಅನ್ಯಾಯವಂತರೆದುರು ಎಂದೂ ತಲೆತಗ್ಗಿಸಲಿಲ್ಲ. ಅವರ ಸಾಮಾಜಿಕ ಕಾಳಜಿ, ಅನ್ಯಾಯದ ವಿರುದ್ಧ ನಿರ್ದಾಕ್ಷಿಣ್ಯ ಮಾತು, ಅಂತೆಯೇ ಕನ್ನಡದ ಬಗ್ಗೆ, ಕನ್ನಡದ ಸಾಮಾನ್ಯ ಜನತೆಗೆ ಅವರು ತೋರುತ್ತ ಬಂದಿರುವ ಪ್ರೀತಿ, ಸರಳ ಸಜ್ಜನಿಕೆ, ಇವೆಲ್ಲಾ ಅನುಪಮವಾದದ್ದು.

ವಿಡಂಭನಾತ್ಮಕ ಶ್ರೇಷ್ಠತೆ

[ಬದಲಾಯಿಸಿ]

ಅವರ ವಿಡಂಭನೆಯ ಸೊಬಗೇ ಸೊಬಗು. ಕೆಲವೇ ವರ್ಷಗಳ ಹಿಂದೆ ಅವರ ಒಂದು ನಾಟಕದ ತುಣುಕನ್ನು ವೀಕ್ಷಿಸುತ್ತಿದ್ದೆ. ಅವರ ಒಂದು ವಿಡಂಭನೆಯ ತುಣುಕು ಹೀಗಿದೆ: “ಈ ಅಮೇರಿಕಾದವರಿಗೆ ಒಂದು ಚೂರು ಕೂಡಾ ಹಣ ಉಳಿಸೋದ್ರ ಬಗ್ಗೆ ಕಾಳಜಿ ಇಲ್ಲ. ದುಡ್ಡಿದೆ ಅಂತ ಅವರು ಮಾಡೋ ಕೆಲಸ ನೋಡಿದ್ಯಾ. ಕುಡಿಯೋ ನೀರ್ಗೇ ಬೇರೆ ಪೈಪಂತೆ. ಕೊಳಚೆ ನೀರು ಹೋಗೋಕ್ಕೆ ಮತ್ತೊಂದು ಪೈಪಂತೆ. ಮಾತಿಗೆ ಹೇಳ್ತೀನಿ. ಆ ಮುಂಡೆ ಮಕ್ಳಿಗೆ ಕಿಂಚಿತ್ತೂ ಬುದ್ಧಿ ಇಲ್ಲ, ದುಡ್ಡು ಹೇಗೆ ಉಳಿಸ್ಬೇಕು ಅಂತ ಗೊತ್ತಿಲ್ಲ. ಅದೇ ನಮ್ಮ ಬೆಂಗಳೂರಲ್ಲಿ ನೋಡು, ಎರಡೂ ಒಂದೇ ಪೈಪಲ್ಲಿ ಬರುತ್ತೆ. ನಮ್ಮ ಬುದ್ಧಿವಂತಿಕೆ ಆ ಅಮೆರಿಕಾದವರಿಗೆ ಎಲ್ಲಿಂದ ಬರಬೇಕು!” ಇದನ್ನೆಲ್ಲಾ ಅವರು ನಮ್ಮ ಜನರ ಬಗ್ಗೆ ಅವಹೇಳನ ಮಾಡಿ ಮಾತನಾಡಬೇಕು ಎಂಬುದಕ್ಕಿಂತ ನಮ್ಮ ಸಮಾಜದಲ್ಲಿನ ಕಾಳಜಿಯಾಗಿ ಕಾಣುತ್ತಾರೆ. ಹೀಗೆ ಮಾತನಾಡಿ ಅದರ ರಾಜಕೀಯ ದುರ್ಲಾಭ ಪಡೆದ ಯಾವುದೇ ಘಟನೆಯೂ ಅವರ ಇಷ್ಟು ವರ್ಷದ ಕಾಯಕದಲ್ಲಿ ನಡೆಯದಿಲ್ಲ ಎಂಬುದು ಕೂಡಾ ನೆನಪಿನಲ್ಲಿಡಬೇಕಾದ ಅಂಶ. ತಾವು ಅಷ್ಟು ದೊಡ್ಡವರಾದರೂ, ದೊಡ್ಡವರು ಸಾಮಾನ್ಯರೂ ಎಂಬ ಭೇದವಿಲ್ಲದೆ ಅವರು ತೋರುವ ಆಪ್ತಗುಣ ಅನುಪಮವಾದದ್ದು. ಈ ಹಿರಿಯ ವಯಸ್ಸಿನಲ್ಲಿಯೂ ಅವರ ಧ್ವನಿ ಮಾಧುರ್ಯ, ಮೊನಚು, ಹಾಸ್ಯಪ್ರಜ್ಞೆ, ಸಾಮಾನ್ಯರಲ್ಲಿ ಪ್ರೇಮಭಾವ, ಕನ್ನಡ ನಾಡು – ನುಡಿಗಳ ಬಗೆಗೆ ಅವರಿಗಿರುವ ಗೌರವ, ತಾನು ಏನು ಮಾತನಾಡುತ್ತಿದ್ದೇನೆ ಎಂಬುದರ ಕುರಿತಾದ ಜಾಗೃತಿ ಇವೆಲ್ಲಾ ಅಚ್ಚರಿಮೂಡಿಸುವಂತದ್ದಾಗಿದೆ.

ದಿಟ್ಟತನ

[ಬದಲಾಯಿಸಿ]

ಪತ್ರಿಕೆಗಳು ಸರ್ಕಾರದ ವಿರುದ್ಧ ಧ್ವನಿ ಎತ್ತಲು ಹೆದರುತ್ತಿದ್ದ ದಿನಗಳಲ್ಲಿ; ಇನ್ನೂ ಲಂಕೇಶ್, ರವಿ ಬೆಳಗೆರೆ ಅಂಥವರು ಪತ್ರಿಕೆ ತಂದು ಜನರಲ್ಲಿ ದಿಟ್ಟತನ ಕಾಣಿಸುವುದಕ್ಕೂ ಮುಂಚಿನ ದಿನಗಳಲ್ಲಿಯೇ ಏಕ ವ್ಯಕ್ತಿಯಾಗಿ ಇಡೀ ವ್ಯವಸ್ಥೆಯ ದುರ್ನಡತೆಗಳನ್ನು ಪ್ರಬಲವಾಗಿ ತೋರಿಸುತ್ತಾ ಧೈರ್ಯವಹಿಸಿ ಮುನ್ನಡೆದ ಹಿರಣ್ಣಯ್ಯನಂತಹವರ ಕೆಲಸ ಅಸಾಮಾನ್ಯವಾದುದು. ಮಾಧ್ಯಮಗಳು ಅಂದು ಇಷ್ಟೊಂದು ವ್ಯಾಪ್ತಿಯಲ್ಲಿಲ್ಲದ ದಿನಗಳಲ್ಲಿ ತಾನೇ ಒಂದು ಮಾಧ್ಯಮವಾಗಿ ಮೂಡಿ ಹಿರಣ್ಣಯ್ಯನವರು ತೋರಿದ ಇಚ್ಚಾಶಕ್ತಿ ಮರೆಯಲಾಗದಂತದ್ದು. ಹಿರಣ್ಣಯ್ಯನವರ ಪರಂಪರೆ ಅವರಿಗೆ ಅವರ ತಂದೆಯವರಿಂದ ಬಂದು ಮುಂದುವರೆದಿತ್ತು.

ಪ್ರಮುಖ ನಾಟಕಗಳು

[ಬದಲಾಯಿಸಿ]

ಕಿರುತೆರೆ, ಬೆಳ್ಳಿತೆರೆಗಳಲ್ಲಿ ಹಿರಣ್ಣಯ್ಯ

[ಬದಲಾಯಿಸಿ]
  • ಹಿರಣ್ಣಯ್ಯ ಮಿತ್ರ ಮಂಡಲಿ ಪ್ರಮುಖ ನಾಟಕಗಳಲ್ಲೊಂದಾದ ದೇವದಾಸಿ ಚಲನಚಿತ್ರವಾಗಿದ್ದು, ಅದರಲ್ಲಿ ಹಿರಣ್ಣಯ್ಯನವರು ಪಾತ್ರ ವಹಿಸಿದ್ದರು.
  • ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಪುಣ್ಯಕೋಟಿ, ಅಮೃತ ವಾಹಿನಿ ಧಾರಾವಾಹಿಗಳಲ್ಲಿಯೂ ಮಾಸ್ಟರ್ ಹಿರಣ್ಣಯ್ಯನವರು ಅಭಿನಯಿಸಿದ್ದರು.
  • ಸಂಪ್ರದಾಯ, ಆನಂದ ಸಾಗರ, ...ರೆ (೨೦೧೬), ಕೇರ್ ಆಫ್ ಫುಟ್ ಪಾತ್ ೨, ನಂ ೭೩ ಶಾಂತಿನಿವಾಸ (೨೦೦೭), ಯಕ್ಷ, ನಿರಂತರ, ಈ ಸಂಭಾಷಣೆ, ಲಂಚ ಸಾಮ್ರಾಜ್ಯ, ಬೊಂಬುಗಳು ಸಾರ್ ಬೊಂಬುಗಳು, ಗಜ, ಹುಡ್ಗೀರು ಸಾರ್ ಹುಡ್ಗೀರು, ಆಪರೇಷನ್ ಅಂತ ಚಿತ್ರಗಳಲ್ಲಿ ನಟಿಸಿದ್ದಾರೆ.

ಪ್ರಶಸ್ತಿ ಗೌರವಗಳು

[ಬದಲಾಯಿಸಿ]

ಮಾಸ್ಟರ್ ಹಿರಣ್ಣಯ್ಯನವರಿಗೆ ಹಲವಾರು ಬಿರುದುಗಳೂ ಅತ್ಯುನ್ನತ ರಂಗ ಪ್ರಶಸ್ತಿಯಾದ ಡಾ. ಗುಬ್ಬೀ ವೀರಣ್ಣ ಪ್ರಶಸ್ತಿಯೂ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭ್ಯವಾಗಿವೆ. ದೇಶ ವಿದೇಶಗಳಲ್ಲಿರುವ ಕನ್ನಡಿಗರು ಅವರ ನಾಟಕಗಳನ್ನೂ ಅವರನ್ನೂ ನಿರಂತರವಾಗಿ ಗೌರವಿಸಿದ್ದಾರೆ. ಕಲಾಗಜ ಸಿಂಹ, ನಟ ರತ್ನಾಕರ ಎಂಬ ಬಿರುದುಗಳು ಅವರಿಗೆ ಸಂದಿವೆ.

ಪ್ರಶಸ್ತಿ ಪುರಸ್ಕಾರಗಳ ಪಟ್ಟಿ

[ಬದಲಾಯಿಸಿ]
  • ಕರ್ನಾಟಕ ರಾಜ್ಯ ಪ್ರಶಸ್ತಿ
  • ರಾಜ್ಯೋತ್ಸವ ಪ್ರಶಸ್ತಿ
  • ನಾಟಕ ಅಕಾಡೆಮಿ ಪ್ರಶಸ್ತಿ
  • ರಂಗಭೂಮಿ ಪ್ರಶಸ್ತಿ
  • ಗುಬ್ಬಿ ವೀರಣ್ಣ ಪ್ರಶಸ್ತಿ (೧೯೮೮)
  • ನವರತ್ನ ರಾಂ ಪ್ರಶಸ್ತಿ
  • ಆಳ್ವಾಸ್ ನುಡಿಸಿರು ಪ್ರಶಸ್ತಿ (೨೦೦೫)
  • ಸಂದೇಶ ಕಲಾ ಪ್ರಶಸ್ತಿ (೨೦೦೯)
  • ಮಹಾಅದ್ವೈತಿ ಪ್ರಶಸ್ತಿ (೨೦೧೭)
  • ೧೮ನೇ ಅನಕೃ ನಿರ್ಮಾಣ ಸ್ವರ್ಣ ಪ್ರಶಸ್ತಿ (೨೦೧೩)

ಹಿರಣ್ಣಯ್ಯನವರು ೦೨ಮೇ೨೦೧೯ರಂದು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ೮೫ ವರ್ಷ ವಯಸ್ಸಾಗಿತ್ತು.[]

ಹೆಚ್ಚಿನ ಓದಿಗೆ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "ಹಿರಿಯ ನಟ, ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ವಿಧಿವಶ". vijaykarnataka.indiatimes.com 2 ಮೇ 2019.
  2. ಹಿರಿಯ ರಂಗಕರ್ಮಿ 'ನಟ ರತ್ನಾಕರ' ಮಾಸ್ಟರ್ ಹಿರಣ್ಣಯ್ಯ ನಿಧನ, ಒನ್ ಇಂಡಿಯಾ ಕನ್ನಡ, ೦೨ಮೇ೨೦೧೯