ಮಟ್ಟು ಗುಳ್ಳ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಮಟ್ಟು ಗುಳ್ಳ

'ಮಟ್ಟು ಗುಳ್ಳ"ಉಡುಪಿ ತಾಲ್ಲೂಕಿನ ಮಟ್ಟು ಸುತ್ತಮುತ್ತ ಬೆಳೆಯುವ ಬದನೆಗೆ ವಿಶಿಷ್ಟ ರುಚಿ. ಮಟ್ಟು ಗುಳ್ಳ (mattu gulla ) ಎಂದೇ ಹೆಸರಾದ ಈ ಬದನೆ ಕರಾವಳಿಯ ಉದ್ದಗಲದಲ್ಲಿ ಜನಪ್ರಿಯವಾಗಿದೆ. ಉಡುಪಿ ತಾಲ್ಲೂಕಿನ ಮಟ್ಟು ಗ್ರಾಮದ ಸುತ್ತಮುತ್ತ ಬೆಳೆಯುವ ವಿಶಿಷ್ಟ ರುಚಿಯ ಬದನೆ ಮಟ್ಟು ಗುಳ್ಳ’ ಎಂದೇ ಹೆಸರುವಾಸಿ. ಕಟಪಾಡಿ ಬಳಿಯ ಮಟ್ಟು ಪ್ರದೇಶದಲ್ಲಿ ಬೆಳೆಯುವ ಗುಳ್ಳ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಬೇರೆಡೆಯೂ ಬೆಳೆದರೂ ಮಟ್ಟು ಗುಳ್ಳದ ರುಚಿ ಅವಕ್ಕಿಲ್ಲ. ಮಾರುಕಟ್ಟೆಯಲ್ಲಿ ಮಟ್ಟು ಗುಳ್ಳಕ್ಕೆ ಬೇಡಿಕೆ ಹೆಚ್ಚು. ಮಳೆಗಾಲದಲ್ಲಿ ನೆರೆಯೊಂದಿಗೆ ಕೊಚ್ಚಿಕೊಂಡು ಬರುವ ಫಲವತ್ತಾದ ಮಣ್ಣಿನ ಮಣ್ಣು ಗದ್ದೆಗಳಲ್ಲಿ ನಿಲ್ಲುವುದರಿಂದ ಇಲ್ಲಿ ಗುಳ್ಳ ಸಮೃದ್ಧವಾಗಿ ಬೆಳೆಯುತ್ತದೆ. ಉಡುಪಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ನೂರಾರು ಎಕರೆಗಳಲ್ಲಿ ಇದೇ ತಳಿಯ ಬದನೆ ಬೆಳೆದು ಅವನ್ನೇ ಮಟ್ಟು ಗುಳ್ಳ ಎಂದು ಹೇಳಿ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಮಾರಾಟ ಮಾಡುವವರೂ ಇದ್ದಾರೆ.

ಹಿನ್ನೆಲೆ[ಬದಲಾಯಿಸಿ]

ಮಟ್ಟು ಗುಳ್ಳಕ್ಕೆ ನಾಲ್ಕೈದು ಶತಮಾನಗಳ ಹಿನ್ನೆಲೆ ಇದೆ. ಉಡುಪಿಯ ವಾದಿರಾಜ ಮಠದ ಕುದುರೆಗೆ ವಿಷಪ್ರಾಶನವಾದಾಗ ಭಾಗವನ್ ಕೃಷ್ಣ ,ವಾದಿರಾಜ ಸ್ವಾಮಿಯ ಕನಸಿನಲ್ಲಿ ಬಂದು ಬಂಗಾಳ ಕೊಲ್ಲಿಯಿಂದ ಮಟ್ಟು ಗುಳ್ಳ ಬದನೆಯ ಬೀಜ ತಂದು ಅದನ್ನು ಉಡುಪಿ ತಾಲೂಕಿನ ಮಟ್ಟು ಗ್ರಾಮದ ರೈತರಿಗೆ ನೀಡಿ ಅವರ ಕೈಯಿಂದ ಬೆಳೆದ ಬದನೆಯ ನೈವೇದ್ಯ ವನ್ನು ಕುದುರೆಗೆ ತಿನ್ನಿಸಿದರೆ ಕುದುರೆ ಹಿಂದಿನ ಸ್ತಿತಿಗೆ ಮರಳುತ್ತದೆ ಎಂಬ ಆಜ್ಞೆಯಾಗಿ ಅದರಂತೆ ಮಾಡಲು ಕುದುರೆ ಯಥಾ ಸ್ತಿತಿಗೆ ಮರಳಿತು.ನಂತರದ ದಿನಗಳಿಂದ ಈ ಊರಿನಲ್ಲಿ ಈ ತಳಿಯನ್ನು ಬೆಳೆಸಲಾಯಿತು ಎಂಬ ಪ್ರತೀತಿ ಇದೆ. ಗುಳ್ಳದ ಬೀಜಗಳನ್ನು ರೈತರಿಗೆ ಪ್ರಸಾದ ರೂಪದಲ್ಲಿ ವಿತರಿಸಿದರು ಎನ್ನುವ ಪ್ರತೀತಿ ಇದೆ. ಮಟ್ಟುಗುಳ್ಳದಿಂದ ಮಾಡಿದ ವಿಶೇಷ ಖಾದ್ಯಗಳನ್ನು ಉಡುಪಿ ಪರ್ಯಾಯ ಪೀಠಾರೋಹಣ ಉತ್ಸವದ ಸಂದರ್ಭದಲ್ಲಿ ಬಳಸುವ ಸಂಪ್ರದಾಯ ಇದೆ.


ಮಟ್ಟು ಗುಳ್ಳದ ಗಿಡವೊಂದು ೧೫ರಿಂದ ೨೦ ಕಾಯಿಗಳನ್ನು ಬಿಡುತ್ತದೆ. ಒಂದು ಎಕರೆಯಲ್ಲಿ ೫ ಸಾವಿರ ಗಿಡಗಳನ್ನು ನಾಟಿ ಮಾಡಬಹುದು. ಎಕರೆಗೆ ೧೦ ರಿಂದ ೧೨ ಕ್ವಿಂಟಲ್ ಇಳುವರಿ ಬರುತ್ತದೆ. ಬೇರೆ ಪ್ರದೇಶದಲ್ಲಿ ಬೆಳೆಯುವ ಗುಳ್ಳಗಳಿಗೆ ಹೋಲಿಸಿದರೆ ಮಟ್ಟು ಪ್ರದೇಶದ ರೈತರು ಐದಾರು ಪಟ್ಟು ಹೆಚ್ಚು ಆದಾಯ ಪಡೆಯುತ್ತಾರೆ. ಇದು ಮೂರು ತಿಂಗಳ ಬೆಳೆ. ಮುಂಗಾರು ಭತ್ತ ಕಟಾವು ಮಾಡಿ ನಂತರ ಬಿತ್ತನೆ ಮಾಡಿದರೆ ಜನವರಿ ಮೊದಲ ವಾರದಲ್ಲಿ ಗುಳ್ಳ ಕೊಯ್ಲಿಗೆ ಬರುತ್ತದೆ. ಬೇಡಿಕೆಗೆ ಅನುಗುಣವಾಗಿ ವಾರಕ್ಕೆ ಮೂರು-ನಾಲ್ಕು ಸಲ ಕಾಯಿಗಳನ್ನು ಕೀಳುತ್ತಾರೆ. ನಾಲ್ಕು ತಿಂಗಳವರೆಗೆ ಕಾಯಿಗಳು ಸಿಗುತ್ತವೆ. ರಾಜ್ಯದ ಬೇರೆ ಊರುಗಳಲ್ಲಿ ನೆಲೆಸಿರುವ ಕರಾವಳಿ ಭಾಗದ ಜನರೂ ಉಡುಪಿ ಮಾರುಕಟ್ಟೆಯಿಂದ ಮಟ್ಟು ಗುಳ್ಳ ತರಿಸಿಕೊಂಡು ಬಳಸುತ್ತಾರೆ.ಮಟ್ಟು ಗ್ರಾಮದಲ್ಲಿ ಸುಮಾರು 300 ಎಕರೆ ಪ್ರದೇಶದಲ್ಲಿ ಗುಳ್ಳ ಬೆಳೆಯಲಾಗುತ್ತಿತ್ತು. ಇದೀಗ ಸಮುದ್ರ ಕೊರೆತ, ಉಕ್ಕುವ ಉಪ್ಪು ನೀರು, ಭೂ ಸವೆತ ಹಾಗೂ ಮಾಯವಾಗುತ್ತಿರುವ ಕೃಷಿ ಭೂಮಿಯಿಂದಾಗಿ ಗುಳ್ಳ ಬೆಳೆಯುವ ಪ್ರದೇಶ ಅರ್ಧದಷ್ಟು ಕಡಿಮೆಯಾಗಿದೆ.

ಮಟ್ಟು ಗುಳ್ಳ ಪೇಟೆಂಟ್[ಬದಲಾಯಿಸಿ]

ಅಮೆರಿಕ ಮೂಲದ ಮಾನ್ಸಂಟೊ ಕಂಪೆನಿ ಮಟ್ಟು ಗುಳ್ಳವನ್ನು ಬಿ.ಟಿ. ಅಥವಾ ಕುಲಾಂತರಿ ತಳಿಯಾಗಿ ಮಾಡಲು ಯತ್ನಿಸುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಒಂದು ವೇಳೆ ಈ ರೀತಿ ಮಟ್ಟಿಗುಳ್ಳವನ್ನು ಕುಲಾಂತರಿಸಿದಲ್ಲಿ ಮೂಲ ಬೆಳೆಗಾರರು ಸಂಕಷ್ಟಕ್ಕೀಡಾಗುತ್ತಾರೆ.

ಈ ನಡುವೆ ಉಡುಪಿಯ ಪ್ರಸಿದ್ಧ ವಾಣಿಜ್ಯ ಬೆಳೆ ಮಟ್ಟುಗುಳ್ಳಕ್ಕೆ ಚೆನ್ನೈನ ಜಿಯೋಗ್ರಾಫಿಕಲ್ ಇಂಡಿಕೇಶನ್ ರಿಜಿಸ್ಟ್ರೇಶನ್ ಇಲಾಖೆ ಅಧಿಕೃತವಾಗಿ ಪೇಟೆಂಟ್ (ಹಕ್ಕುಸ್ವಾಮ್ಯ) ಅಧಿಕಾರವನ್ನು ಮಟ್ಟುಗುಳ್ಳಬೆಳೆಗಾರರಿಗೆ ನೀಡಿದೆ (ಮಟ್ಟು ಗುಳ್ಳ) ಈ ಬದನೆಗೆ ಪೇಟೆಂಟ್ ದಕ್ಕಿದೆ ಏನ್ನಲಾಗುತಿದ್ದರೂ,ನಿಜವಾಗಿ ಮಟ್ಟುಗುಳ್ಳಕ್ಕೆ ಲಭಿಸುತ್ತಿರುವುದು ಜಿಐಆರ್ (ಭೌಗೋಳಿಕ ಗುರುತಿಸುವಿಕೆ ನೋಂದಣಿ) ಹೊರತು ಪೇಟೆಂಟ್ ಅಲ್ಲ ಎಂದೂ ಹೇಳುತ್ತಾರೆ."ನಮನ"