ಬೋಳಾರ ಬಾಬುರಾಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೋಳಾರ ಬಾಬುರಾಯ: - ಕನ್ನಡ ಸಾಹಿತ್ಯಲೋಕದಲ್ಲಿ ಕಾದಂಬರಿ ಎಂಬ ಪ್ರಕಾರವು ಆವಿಭ‌‍ವಿಸಿದ್ದು ಪಾಶ್ಚಾತ್ಯ ಸಾಹಿತ್ಯದ ಪ್ರೇರಣೆಗಳಿಂದ ಎಂಬ ಮಾತು ಸ್ವೀಕಾರವಾಗಿದೆ. ಇಂಗ್ಲಿಷಿನ ನೋವೆಲ್ ಎಂಬ ಪದಕ್ಕೆ ಬಾಣಭಟ್ಟನ ಅದ್ಬುತ ರಮ್ಯ ಕಥಾನಕವಾದ 'ಕಾದಂಬರಿ'ಯನ್ನು ಸಮಾನ ಪದವಾಗಿ ಬಳಸದ್ದೇ ಒಂದು ವಿಶೇಷ ಮೋಹಕ ಶಕ್ತಿಯನ್ನು ತಂದುಕೊಟ್ಟಿದೆ. ಕನ್ನಡದಲ್ಲಿ ಕಾದಂಬರಿಯುಗ ಪ್ರಾರಂಭವಾದದ್ದೇ ಬಂಗಾಳಿ, ಮರಾಠಿ ಮೊದಲಾದ ಅನುವಾದಿತ ಕಾದಂಬರಿಗಳಿಂದ. ಒಂದು ಯುಗ ಪಲ್ಲಟವಾಗುವ ಸಂಕ್ರಮಣ ಸ್ಥಿತಿಯಲ್ಲಿ ಸಾಮಾಜಿಕ ಸುಧಾರಣೆ, ನೈತಿಕ, ಧಾರ್ಮಿಕ ಜಾಗೃತಿ, ಸ್ತ್ರೀ ಶಿಕ್ಷಣ ಇತ್ಯಾದಿ ವಸ್ತು ವಿಷಯಗಳನ್ನೊಳಗೊಂಡು ಕನ್ನಡದಲ್ಲಿ ಸ್ವತಂತ್ರ ಕಾದಂಬರಿಗಳು ಪ್ರಕಟವಾದುವು. ಹೆಚ್ಚಿನವು ಸ್ತ್ರೀಯರ ಹೆಸರಿನ ಶೀರ್ಷಿಕೆಯನ್ನು ಹೊತ್ತುಕೊಂಡು ಪ್ರಕಟವಾದುದನ್ನು ಗಮನಿಸಿದರೆ ಕೃತಿಕಾರರಲ್ಲಿ ಸ್ತ್ರೀಪರ ಕಾಳಜಿಯ ಜೊತೆಗೇ ಸುಧಾರಣೆಯ ಬಗ್ಗೆ ಕೆಲವು ಅನುಮಾನಗಳೂ ಕಾಡುತ್ತಿದ್ದುವು ಎಂಬುದು ತಿಳಿಯುತ್ತದೆ.

ಕನ್ನಡದ ಮೊದಲ ಕಾದಂಬರಿಕಾರರಲ್ಲಿ ಒಬ್ಬರಾದ ಬೋಳಾರ ಬಾಬುರಾಯರು ಬರೆದ 'ವಾಗ್ದೇವಿ'(೧೯೦೫) ಆ ಕಾಲದ ಮಹತ್ವದ ಕೃತಿ.

ಜನನ ಮತ್ತು ಜೀವನ[ಬದಲಾಯಿಸಿ]

ಬಾಬುರಾಯರು ಮಂಗಳೂರಿನ ಬೋಳಾರದಲ್ಲಿ ನರಸಪ್ಪಯ್ಯನವರ ಮಗನಾಗಿ ೧೮೪೮ರಲ್ಲಿ ಹುಟ್ಟಿದರು. ಇಲ್ಲಿಯ ಮಿಷನ್ ಹೈಸ್ಕೂಲ್. ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿ ಜಿಲ್ಲಾ ಕಲೆಕ್ಟರರ ಕಛೇರಿಯಲ್ಲಿ ಗುಮಾಸ್ತರಾಗಿ ವ್ರತ್ತಿ ಜೀವನ ಪ್ರಾರಂಭಿಸಿದರು. ತಹಶೀಲ್ದಾರರಾಗಿ ‍ಟೌನ್ ಮೆಜಿಸ್ಟ್ರೇಟರಾಗಿ ಕಾರ್ಕಳ, ಹೊಸದುರ್ಗ. ಉಡುಪಿ, ಪುತ್ತೂರುಗಳಲ್ಲಿ ಸೇವೆ ಸಲ್ಲಿಸಿದರು. ನಿವೃತ್ತರಾದ ಮೇಲೂ ಮಂಗಳೂರಿನ ಎರಡನೇಯ ವರ್ಗದ ಬೆಂಚ್ ಮೆಜಿಸ್ಟ್ರೇಟ್ ಕೋರ್ಟಿನ ಅಧ್ಯಕ್ಷರಾಗಿ, ಪುರಸಭಾ ಸದಸ್ಯರಾಗಿ, ಕೆನರಾ ಪಬ್ಲಿಕ್ ಕನ್ವೆಯನ್ಸ್ ಕಂಪೆನಿಯ ಡೈರೆಕ್ಟರರಲ್ಲೊಬ್ಬರಾಗಿ ಸೇವೆ ಸಲ್ಲಿಸಿದರು. ಹೀಗೆ ಸಮಾಜದ ನಿಕಟ ಸಂಪರ್ಕವೂ, ಲೋಕಾನುಭವವೂ ಹದಗೊಂಡು 'ವಾಗ್ದೇವಿ' ಎಂಬ ಕಾದಂಬರಿ ಅಲ್ಲದೆ 'ಶಿವಲೀಲಾಮೃತ ಭಕ್ತಿಮಹಿಮೆ' ಎಂಬ ಕೃತಿಗಳನ್ನೂ ರಚಿಸಿ ಪ್ರಸಿದ್ಧರಾಗಿದ್ದಾರೆ. ಪತ್ರಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸಿದ್ದಾರೆ.

ವಾಗ್ದೇವಿ[ಬದಲಾಯಿಸಿ]

ವಾಗ್ದೇವಿಯ ಕಥಾವಸ್ತು ಆ ಕಾಲದ ಸಾಮಾಜಿಕ ಜೀವನದ ಸತ್ಯಘಟನೆಯೊಂದರ ಹಂದರಕ್ಕೆ ರಕ್ತಮಾಂಸಗಳನ್ನು ತುಂಬಿಸಿದ್ದುದಾಗಿದೆ. ಕುಮುದ ಪುರ ಮಠದ ಚಂಚಲನೇತ್ರಯತಿಗಳು ಸನ್ಯಾಸಿಧರ್ಮಕ್ಕೆ ವಿರುದ್ಧವಾಗಿ ವಾಗ್ದೇವಿಯ ರೂಪ ಲಾವಣ್ಯಕ್ಕೆ ಮರುಳಾಗಿ ಸುರತದಲ್ಲಿ ನಿರತರಾಗುತ್ತಾರೆ. ಆಕೆಯ ಪತಿ ಅಬಾಚಾರ್ಯ ಪೆದ್ದು ಸ್ವಭಾವದವನಾದುದರಿಂದ ಯಾವುದೇ ಅಡ್ಡಿ ಆಕಂತಗಳಿಲ್ಲದೆ ವಾಗ್ದೇವಿ ಸನ್ಯಾಸಿಯನ್ನು ತನ್ನ ಸ್ವಾರ್ಥಕ್ಕೆ ಉಪಯೋಗಿಸಿಕೊಳ್ಳುತ್ತಾಳೆ. ತನ್ನ ಬಂಧುಗಳಿಗೂ ಆಶ್ರಯ ದೊರಕ್ಕಿಸಿದಲ್ಲದೆ ಯತಿಗಳ ಸಂಬಂಧದಿಂದ ಹುಟ್ಟುವ ಮಗುವಿಗೆ ಮಠದ ಉತ್ತರಾದಿಕಾರದ ಪಟ್ಟವನ್ನು ಕೊಡಬೇಕೆಂದು ವಚನ ಕೇಳುತ್ತಾಳೆ. ವಾಗ್ದೇವಿಯ ಯೌವನದ ಬೆಂಕಿಯ ಮುಂದೆ ಯತಿಗಳು ಮೇಣದಂತೆ ಕರಗುತ್ತಾರೆ. ಮಠದೊಳಗೆ ನಡೆದಯುವ ಅನಾಚಾರ, ಭ್ರಷ್ಟಾಚಾರಗಳನ್ನು ಬಯಲಿಗಿಡುವ ಭರದಲ್ಲಿ ವಾಗ್ದೇವಿಯ ಪಾತ್ರ ತೀರಾ ಕಪ್ಪಾಗಿಯೇ ಚಿತ್ರಿತವಾದುದರಿಂದ ಈ ಕಾದಂಬರಿಯಲ್ಲಿ ಸ್ತ್ರೀಸ್ವಾತಂತ್ರ್ಯ, ಶಿಕ್ಷಣ, ಇತ್ಯಾದಿಗಳ ಬಗ್ಗೆ ಕಾಳಜಿ ನಗಣ್ಯ. ಆ ಕಾಲದ ಹೆಚ್ಚಿನ ಕಾದಂಬರಿಗಳಲ್ಲಿ ಸ್ತ್ರೀಯರ ಸಾಮಾಜಿಕ ಉನ್ನತಿ, ಮೂಢನಂಬಿಕೆ, ಬಾಲ್ಯ ವಿವಾಹ, ವಿಧವಾ ವಿವಾಹ ಇತ್ಯಾದಿಗಳ ಬಗ್ಗೆ ಬಹಳಷ್ಟು ಚರ್ಚೆ ಪ್ರಕಟವಾಗಿದ್ದರೂ ಬಾಬುರಾಯರಿಗೆ ಮಠಗಳ ಪರಿಶುದ್ಧಿಯೇ ಪ್ರಧಾನ ಕಾಳಜಿಯಾಗಿ ಕಂಡಿರಬೇಕು. ಬಾಲ ಸನ್ಯಾಸದಂತಹ ಸಂಪ್ರದಾಯಗಳು ತಂದೊಡ್ಡುವ ವಿಕಾರಗಳನ್ನು ಕಂಡು, ನೊಂದು, ಕಳಕಳಿಯಿಂದ ವಿಮರ್ಶೆಯನು ಚಿತ್ರಿಸಿದ್ದಾರೆ.

ವಾಗ್ದೇವಿ ತನ್ನ ಸುಖ ಸಾಧನವಾಗಿ ಚಂಚಲನೇತ್ರ ಯತಿಗಳನ್ನು ಮಾತ್ರವಲ್ಲ ಇನ್ನೂ ಅನೇಕರನ್ನು ತನ್ನ ಬಲೆಗೆ ಹಾಕಿಸಿಕೊಳ್ಳುವುದು ಜುಗುಪ್ಸೆ ಹುಟ್ಟಿಸುವಂತಹ ರೀತಿಯಲ್ಲಿ ಚಿತ್ರಿತವಾಗಿದೆ. ಸ್ತ್ರೀ ಪಾತ್ರದ ಒಂದು ಕೆಟ್ಟ ಮಾದರಿಯಷ್ಟೇ ಇಲ್ಲಿ ಚಿತ್ರಿಸಲ್ಪಟ್ಟಿದೆ. ಆ ಪಾತ್ರದ ಮೂಲಕ ಮಠದ ಅಧಃಪತನದ ಸ್ವರೂಪವನ್ನು ಮುಂದಿಟ್ಟಿದ್ದಾರೆ.ವಾಗ್ದೇವಿಯ ಮಾನಸಿಕ ತುಮುಲಗಳ ಬಗ್ಗೆ ಲೇಖಕರು ಮೌನವಾಗಿದ್ದಾರೆ.ಡಾ|ಯು.ಮಹೇಶ್ವರಿಯವರು ತಮ್ಮ'ಇದು ಮಾನಸಿಕ ಓದು'ಕೃತಿಯಲ್ಲಿ ಭ್ರಷ್ಟ ವ್ಯವಸ್ಥೆ ಹೆಣ್ಣಿನ ಪರವಾಗಿಯೂ ಇಲ್ಲ.ಗಂಡಿನ ಪರವಾಗಿಯೂ ಇಲ್ಲ,ಅದು ಮನುಷ್ಯಪರವಾಗಿಯೂ ಇಲ್ಲ.ಅದು ಕೇವಲ ಕೆಡುಕಿನ ಪರವಾಗಿದೆ ಎಂಬ ಸತ್ಯವನ್ನು ವಾಗ್ದೇವಿ ಕಾದಂಬರಿ ಸಾರುತ್ತದೆ ಎಂದಿದ್ದಾರೆ.ಈ ಮಾತು ಕಾದಂಬರಿಯ ಆಶಯವನ್ನು ಚೆನ್ನಾಗಿ ಧ್ವನಿಸುತ್ತದೆ.ಕೊನೆಗಾಲದಲ್ಲಿ ವಾಗ್ದೇವಿ ತನ್ನ ತಪ್ಪಿಗೆ ಶಿಕ್ಷೆ ಅನುಭವಿಸುತ್ತಾಳೆ.ಚಂಚಲನೇತ್ರ ಯತಿಗಳ ನಿಧನಾನಂತರ ಅವಳ ಮಗನಿಗೆ ಮಠದ ಅಧಿಕಾರವೂ ಕೈತಪ್ಪಿ ಲೇಖಕರು ಬಯಸಿದ ಸುವ್ಯವಸ್ಥೆ ಮಠದಲ್ಲಿ ಸ್ಥಾಪನೆಯಾಗುದೆಂಬ ಭರವಸೆಯೊಂದಿಗೆ ಕಾದಂಬರಿ ಕೊನೆಗೊಳ್ಳುತ್ತದೆ.ಕನ್ನಡ ಕಾದಂಬರಿಗಳು ಸ್ತ್ರೀ ಪುರಾಣಗಳಾದೆ ಸಾಮಾಜಿಕ ಕಾದಂಬರಿಗಳಾಗದ ತಿರುವಿನಲ್ಲಿ ಬಾಬುರಾಯರ 'ವಾಗ್ದೇವಿ' ಮಾನವಸಹಜ ದೌರ್ಬಲ್ಯ ಚಿತ್ರಣವನ್ನು ಸಹಜವೆಂಬಂತೆ ಚಿತ್ರಿಸಿದೆ.ಆದುದರಿಂದ ಬೋಳಾರ ಬಾಬುರಾಯರು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಸ್ಮರಣೀಯರು.

ಉಲ್ಲೇಖಗಳು[ಬದಲಾಯಿಸಿ]