ಬಾಸ್ಕ್ ಜಾನಪದ
ಬಾಸ್ಕ್ ಜಾನಪದ ಯೂರೋಪಿನ ಅತ್ಯಂತ ಪ್ರಾಚೀನ ಜನಾಂಗ ಎನಿಸಿಕೊಂಡ ಬಾಸ್ಕರು ಉಳಿಸಿಕೊಂಡು ಬಂದಿರುವ ಜಾನಪದ. ಬಾಸ್ಕ್ ಒಂದು ಜಟಿಲ ಭಾಷೆ. ಬಾಸ್ಕ್ ಜಾನಪದ ತನ್ನ ಶುದ್ಧ ರೂಪ ಕಾಯ್ದುಕೊಂಡು ಬರುವಲ್ಲಿ ಈ ಭಾಷೆಯ ಪಾತ್ರ ಮಹತ್ತ್ವದ್ದು.[೧] ಆದರೆ ಈ ಜಾನಪದ ಕ್ರೈಸ್ತ ಧರ್ಮದ ಪ್ರಾಬಲ್ಯಕ್ಕೊಳಗಾಗಿ ರೋಮನ್ನರ, ಫ್ರೆಂಚರ, ಸ್ಪೇನರ ಅಗಾಧ ಪ್ರಭಾವದಿಂದಾಗಿ ಸಾಕಷ್ಟು ಮಾರ್ಪಾಟನ್ನು ಸಾಧಿಸಿಕೊಂಡಿದ್ದು ತನ್ನ ವೈಶಿಷ್ಟ್ಯವನ್ನು ಕಳೆದುಕೊಳ್ಳುತ್ತಿದೆ. ಬಾಸ್ಕ್ ಜಾನಪದ ಹೆಚ್ಚಾಗಿ ಪ್ರಪಂಚದ ಜಾನಪದ ವಿದ್ವಾಂಸರ ಗಮನಸೆಳೆದಿಲ್ಲ; ವೈಜ್ಞಾನಿಕ ರೀತಿಯಲ್ಲಿ ಸಂಗ್ರಹಕಾರ್ಯ ನಡೆದಿರುವುದು ಕೂಡ ಕಡಿಮೆ. ಗ್ರಂಥಸರೂಪದಲ್ಲಿ ಪ್ರಕಟವಾಗಿರುವ ಜಾನಪದವೂ ಅತ್ಯಲ್ಪ.
ಪೌರಾಣಿಕ ಹಿನ್ನೆಲೆ
[ಬದಲಾಯಿಸಿ]ಬಾಸ್ಕರು ಪುರಾಣಸಾಹಿತ್ಯವನ್ನು ದೊಡ್ಡ ಪ್ರಮಾಣದಲ್ಲಿ ಉಳಿಸಿಕೊಂಡು ಬಂದಂತೆ ಕಾಣುವುದಿಲ್ಲ. ಬಹುತೇಕ ಪುರಾಣಗಳು ಕ್ರೈಸ್ತ ದೇವತೆಗಳು, ಯಹೂದಿಗಳು, ಸಂತಪಾತ್ರಗಳ ಪರಿಚಯದೊಂದಿಗೆ ಕ್ರೈಸ್ತೀಯವಾಗಿದೆ. ಸಕಲ ಮೆಡಿಟರೇನಿಯನ್ ಸಂಸ್ಕೃತಿಯ ಭೂಮಿತಾಯಿ ಅಥವಾ ಮಾತೃದೇವತೆಯ ಕಲ್ಪನೆ ಮಾತ್ರ ಇವರಲ್ಲಿದೆ. ಈ ದೇವತೆಯನ್ನು ಏರ್ಡಿಟ್ಸ್ ಎಂದು ಕರೆಯುತ್ತಾರೆ. ದೇವತೆಯ ಬಲಿಪೀಠದ ಮೇಲಿನ ಶಾಸನವೊಂದು ಬಾಸ್ಕ್ ಸಂಸ್ಕೃತಿಯ ಪರಿಚಯ ಮಾಡಿಕೊಡುತ್ತದೆ. ಬ ಾಸ್ಕರು ತಮ್ಮ ಜನಾಂಗದ ಉಗಮದ ಬಗ್ಗೆ ಹೇಳಿಕೊಳ್ಳುವ ಪುರಾಣಗಳು ಇಂದಿಗೂ ಜೀವಂತವಾಗಿವೆ. ಪಾತಾಳದಲ್ಲಿ ವಾಸವಾಗಿದ್ದ ಅಗ್ನಿಸರ್ಪದ ಬಾಯಿಂದ ಹರಿದು ಬಂದ ಅಗ್ನಿಯಿಂದ ಬಾಸ್ಕರು ಹುಟ್ಟಿದರೆಂದು ಕತೆಯಿದೆ. ಬಾಸ್ಕರು ಪ್ಯಾಗನ್ ಪುರಾಣ ಸಾಹಿತ್ಯವನ್ನು ಹೆಚ್ಚು ಉಳಿಸಿಕೊಂಡಿಲ್ಲವಾದರೂ ಅತಿಮಾನುಷ ಜೀವಿಗಳ ಬಗೆಗಿನ ನಂಬಿಕೆಗಳು ಇವರಲ್ಲಿ ಹೇರಳವಾಗಿವೆ. ಆ ಜೀವಿಗಳ ಬಗೆಗೆ ಅನೇಕ ಕತೆಗಳಿವೆ.[೨]
ಜನಪದ ಕತೆಗಳು
[ಬದಲಾಯಿಸಿ]`ತಾರ್ತಾರೊ ಗ್ರೀಕ್ ಪುರಾಣದ ಸೈಕ್ಲಾಪ್ ತೆರನ ಒಬ್ಬ ಒಕ್ಕಣ್ಣಿನ ರಾಕ್ಷಸ. ಬಹುತೇಕ ಬಾಸ್ಕ್ ರಚನೆಗಳಲ್ಲಿ ತಾರ್ತಾರೊ ಹಣೆಯ ಮೇಲೆ ಒಕ್ಕಣ್ಣನ್ನು ಪಡೆದ ರಕ್ಕಸನಾಗಿ ಚಿತ್ರಿತನಾಗಿದ್ದಾನೆ. ಕೆಲವು ರಚನೆಗಳಲ್ಲಿ ಒಬ್ಬ ದೊಡ್ಡ ಬೇಟೆಗಾರನಾಗಿ ಅಥವಾ ಬೆಟ್ಟಗುಡ್ಡಗಳಲ್ಲಿ ವಾಸಿಸುವ ಕುರುಬನಾಗಿ ಬಣ್ಣನೆಗೊಂಡಿದ್ದಾನೆ. ಒಂದೆರಡು ಕತೆಗಳಲ್ಲಿ ಅವನು ತನ್ನ ಮಾನವ ವಿರೋಧಿಗಳಿಂದ ಮೋಸಹೋಗಿದ್ದಾನೆ; ಏಟು ತಿಂದಿದ್ದಾನೆ. `ಹೆರ್ರೆನ್‍ಸರ್ಜ್ ಏಳು ಮಂಡೆಯ ಒಂದು ಹಾವು. ಕೆಲವು ಕತೆಗಳಲ್ಲಿ ಈ ಹಾವು ಮಾನವರ ಬಲಿಗಳಿಂದ ಸಂತೃಪ್ತಿ ಹೊಂದುವ ಪ್ರಾಣಿಯಾಗಿ ಚಿತ್ರಿತವಾಗಿದೆ. ಮತ್ತೆ ಕೆಲವು ಕತೆಗಳಲ್ಲಿ ಇದು ಒಂದು ಭಯಂಕರ ಡ್ರೇಗನ್ ರೂಪದಲ್ಲಿ ಕಾಣಿಸಿಕೊಂಡಿದೆ. ಬಾಸ್‍ಜಾನ್ ಮತ್ತು ಅವನ ಪತ್ನಿ ಬಾಸ ಆಂಡ್ರೆ ಇಬ್ಬರೂ ವನ್ಯಜೀವಿಗಳಾಗಿ ಚಿತ್ರಿತರಾಗಿದ್ದಾರೆ. ಕತೆಯಿಂದ ಕತೆಗೆ ಅವರ ಪಾತ್ರಗಳು ಗಮನಾರ್ಹ ಬದಲಾವಣೆ ಸಾಧಿಸಿಕೊಂಡಿವೆ. ಬಾಸ್‍ಜಾನ್ ಅನೇಕ ಕತೆಗಳಲ್ಲಿ ಗ್ರಾಮದೇವತೆ ಇಲ್ಲವೆ ವನದೇವತೆಯಾಗಿ ಚಿತ್ರಿತನಾಗಿದ್ದಾನೆ. ಆತ ಕಿರುಕುಳ ಕೊಡುವ ವ್ಯಕ್ತಿಯಾದರೂ ಹಾನಿ ಉಂಟುಮಾಡುವವನಲ್ಲ. ಅವನ ಪತ್ನಿ ಅನೇಕ ಕತೆಗಳಲ್ಲಿ ಮಾಟಗಾತಿಯಾಗಿ, ಪುರುಷರನ್ನು ಮೋಸದಿಂದ ತನ್ನ ಬಲೆಗೆ ಬೀಳಿಸಿಕೊಳ್ಳುವ ಚತುರೆಯಾಗಿ ಚಿತ್ರಿತಳಾಗಿದ್ದಾಳೆ. ಇನ್ನು ಕೆಲವು ಕತೆಗಳಲ್ಲಿ ಬಾಸ್‍ಜಾನ್ ಒಬ್ಬ ರಾಕ್ಷಸ. ಅವನ ಹೆಂಡತಿ ಒಬ್ಬ ಮಾಯಗಾತಿ, ತನ್ನ ಗಂಡನ ವಶಕ್ಕೊಳಗಾದವರು ತಪ್ಪಿಸಿಕೊಂಡು ಹೋಗಲು ಸಹಕರಿಸುತ್ತಾಳೆ. ಸೆಲ್ಟಿಕ್ ಜಾನಪದದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಲಮಿನಿಕ್ ಪಾತ್ರಗಳು ಇಲ್ಲಿ ಕಿನ್ನರಿಯರಾಗಿದ್ದಾರೆ. ಮೇಲಾಗಿ ಈ ಲಾಮಿಯ ಬಾಸ್ಕ್ ಕತೆಗಳಲ್ಲಿ ಒಂದು ಜಲದೆವ್ವ ಅಥವಾ ಮತ್ಸಕನ್ಯೆ. ಈ ಪಾತ್ರಗಳ ಸಾಲಿನಲ್ಲಿ ಮಾಟಗಾರ, ಮಾಟಗಾತಿ ಮುಂತಾದವು ಬರುತ್ತವೆ.[೩]
ಧಾರ್ಮಿಕ ಕತೆಗಳು
[ಬದಲಾಯಿಸಿ]ಧಾರ್ಮಿಕ ಜಾನಪದಕತೆಗಳಲ್ಲಿ ಕ್ರಿಸ್ತ, ಸಂತಪೀಟರ್, ಮೇರಿ-ಇವರು ಜನರ ಒಳಿತಿಗಾಗಿ ಏನೆಲ್ಲ ಮಾಡಬೇಕೊ ಆ ಕಾರ್ಯಗಳನ್ನು ನಿರ್ವಹಿಸುವ ಉಪಕಾರಿ ಅತಿಮಾನುಷ ಶಕ್ತಿಗಳಾಗಿ ಕಾಣಿಸಿಕೊಳ್ಳುತ್ತಾರೆ. ಧಾರ್ಮಿಕ ಜನಪದ ಕತೆಗಳು ಮುಖ್ಯವಾಗಿ ನೀತಿಪರತೆಗಳಾಗಿದ್ದು ನರಿ, ತೋಳ ಮತ್ತು ಕತ್ತೆಗಳು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ. ಸುಂದರ ಕಥಾನಿರೂಪಣೆ, ಚುರುಕಾದ ಸಂಭಾಷಣೆಗಳಿಂದಾಗಿ ಇವು ಆಕರ್ಷಕ ರಚನೆಗಳೆನಿಸಿವೆ.
ಜನಪದ ಗೀತೆಗಳು
[ಬದಲಾಯಿಸಿ]ಬಾಸ್ಕರಲ್ಲಿ ಜನಪದ ಗೀತ ಸಾಹಿತ್ಯವೂ ಸಮೃದ್ಧವಾಗಿದೆ. ಬಹುತೇಕ ಗೀತೆಗಳು ನಿರೂಪಣಾತ್ಮಕವಾಗಿರುವುದರಿಂದ ಹೆಚ್ಚಾಗಿ ಭಾವಗೀತಾತ್ಮಕವಾಗಿವೆ. ಬಾಸ್ಕ್ ಗೀತೆಗಳನ್ನು ಐದು ಬಗೆಯಲ್ಲಿ ಗುರುತಿಸಲಾಗಿದೆ. ಸ್ತುತಿಗೀತೆ, ಕೀರ್ತನಪದ, ಪ್ರಣಯಗೀತೆ, ವಿಡಂಬನ ಮತ್ತು ವಿನೋದಗೀತೆ, ಧಾರ್ಮಿಕ ಐತಿಹ್ಯಗಳು. ಸ್ತುತಿಗೀತೆಗಳು ರೀತಿ ನಿರ್ದೇಶಕವಾದವು. ಅವು ಚರ್ಚಿನ ವಿಧಾನ ಸೂತ್ರಗಳ ಜೊತೆಯಲ್ಲಿ ನಿಕಟ ಸಂಬಂಧ ಹೊಂದಿವೆ. ಬಾಸ್ಕರ ಬಹುಪಾಲು ಗೀತೆಗಳು ಪ್ರಣಯಗೀತೆಗಳೇ ಆಗಿವೆ. ತುಂಬ ಸುಂದರ ರಚನೆಗಳಿವು. ಸುದೀರ್ಘ ಧಾರ್ಮಿಕ ಐತಿಹ್ಯಗಳು ಫ್ರೆಂಚ್ ಮತ್ತು ಸ್ಪ್ಯಾನಿಷ್ ಹಾಡುಗಳ ಪ್ರಭಾವ ಹೊಂದಿವೆ. ಬಾಸ್ಕರಲ್ಲಿ ವಿಡಂಬನಾತ್ಮಕ ಹಾಡುಗಳಿಗೆ ಪ್ರಾಶಸ್ತ್ಯ ಹೆಚ್ಚು. ಅವು ಸಾಮಾಜಿಕ ಹಾಗೂ ರಾಜಕೀಯ ಪ್ರತಿಭಟನೆಯ ಅಂಶಗಳನ್ನು ಪಡೆದಿವೆ.
ಗಾದೆ
[ಬದಲಾಯಿಸಿ]ಬಾಸ್ಕರಲ್ಲಿ ಗಾದೆ ಒಗಟುಗಳೂ ಜನಪ್ರಿಯವಾಗಿವೆ. ಅವುಗಳಲ್ಲಿ ಹೆಚ್ಚಿನವು ಯೂರೊಪಿನಲ್ಲಿ ತುಂಬ ಪ್ರಸಿದ್ಧವಾಗಿರುವಂಥವು. ಕೆಲವು ಬಾಸ್ಕರಿಗೇ ವಿಶಿಷ್ಟವಾದವು. ಇವರಲ್ಲಿ ಪ್ರಚಲಿತವಿರುವ ಪ್ರಸಿದ್ಧ ನಾಣ್ಣುಡಿಗಳೆಂದರೆ: ಮರವಿಲ್ಲದೆ ನೆರಳಿಲ್ಲ, ಬೆಂಕಿಯಿಲ್ಲದೆ ಹೊಗೆಯಿಲ್ಲ; ಕುನ್ನಿ ಮತ್ತು ಹೆಣ್ಣುನಾಯಿ ಎರಡೂ ನಾಯಿಗಳೇ, ಮೂಲರೂಪವನ್ನು ಉಳಿಸಿಕೊಂಡು ಬಂದಿರುವ ಗಾದೆಗಳೆಂದರೆ ಬಂಗಾರದ ಕೀಲಿ ಬಾಗಿಲನ್ನು ಭದ್ರಪಡಿಸುವುದಿಲ್ಲ; ಪ್ರೇಮವಿವಾಹ ಗೋಳಿನ ಬಾಳು; ಇಬ್ಬರು ಸೋದರಿಯರು ಮನೆ ತುಂಬಿಸಬಲ್ಲರು. ಗಾದೆಗಳಲ್ಲಿ ನರಿ, ನಾಯಿ, ತೋಳ, ಕೋಳಿ ಮತ್ತು ಹೇಸರಗತ್ತೆಗಳು ಪಾತ್ರಗಳಾಗಿ ಕಾಣಿಸಿಕೊಳ್ಳುವುದುಂಟು. ತೋಳ ನಿಮ್ಮ ಸಂಗಾತಿಯಾದರೆ ಜೊತೆಯಲ್ಲಿ ನಾಯಿಯನ್ನೂ ಇಟ್ಟುಕೊಳ್ಳಿ; ಅತ್ಯಲ್ಪ ಬೆಲೆಗೆ ಕೊಂಡುಕೊಂಡ ಹೇಸರಗತ್ತೆ ಸಾಕಲು ದುಬಾರಿ ಬೆಲೆ ತೆರಬೇಕು. ಉದ್ದನೆಯ ಬಾಲದ ನರಿ ತನ್ನಂತೆ ಪರರೆಂದು ಭಾವಿಸುತ್ತದೆ. ಇತ್ಯಾದಿ.
ಒಗಟುಗಳು
[ಬದಲಾಯಿಸಿ]ಬಾಸ್ಕ್ ಒಗಟುಗಳು ತುಂಬ ಬಾಲಿಶವಾಗಿವೆ. ವಾಸ್ತವಿಕತೆಗೂ ಅವಕ್ಕೂ ಬಹಳ ಅಂತರ. ಆಡಿನಕೊಂಬನ್ನು ಕುರಿತು ಒಂದು ಒಗಟು ಹೀಗಿದೆ: ಕಾಡಿಗೆ ಹೋಗುವಾಗ ಮನೆಯ ಕಡೆ ಏನು ಕಾಣುತ್ತದೆ? ಮನೆ ಕಡೆಗೆ ಹೋಗುವಾಗ ಕಾಡಿನತ್ತ ಏನು ಕಾಣಿಸುತ್ತದೆ? ಇನ್ನೊಂದು ಒಗಟು: ಕುತ್ತಿಗೆಯುಂಟು ತಲೆಯಲ್ಲ; ತೋಳುಂಟು ಕೈಯಲ್ಲ, ಇದು ಏನು? ಇಂಥ ನೂರಾರು ಒಗಟುಗಳು ಬಾಸ್ಕರಲ್ಲಿ ಪ್ರಸಿದ್ಧವಾಗಿವೆ.
ವಾದ್ಯಗಳು
[ಬದಲಾಯಿಸಿ]ಹಾಡುಗಾರಿಕೆಯ ಕೃತಿಗೆ ಹೋಲಿಸಿದರೆ ಆ ಮಟ್ಟಕ್ಕೆ ಬಾಸ್ಕ್ ಜನಪದ ವಾದ್ಯ ಸಂಗೀತ ಬೆಳೆದಿಲ್ಲ. ಬಾಸ್ಕರಲ್ಲಿ ನೃತ್ಯ ಮತ್ತು ಪ್ರದರ್ಶನಕ್ಕೆ ಪೋಷಕವಾಗಿ ಸಂಗೀತ ಬರುತ್ತದೆ. ಮೂರು ರಂಧ್ರದ ಕೊಳಲು, ತಂಬೂರಿ ಸಾಮಾನ್ಯವಾಗಿ ಕಾಣಬರುವಂಥ ವಾದ್ಯಗಳು. ದಕ್ಷಿಣಯೂರೊಪಿನ ಇತರ ಪ್ರದೇಶಗಳಲ್ಲಿ ಬಲು ಹಿಂದಿನಿಂದಲೂ ಸರ್ವೇ ಸಾಮಾನ್ಯವಾಗಿರುವ ಅಕಾರ್ಡಿಯನ್ ಮತ್ತು ಪಿಟೀಲು ಬಾಸ್ಕ್‍ರಲ್ಲಿ ಇಂದಿಗೂ ಜನಪ್ರಿಯವಾಗಿಲ್ಲದಿರುವುದು ಕುತೂಹಲಕರ ಸಂಗತಿಯಾಗಿವೆ.
ನೃತ್ಯಗಳು
[ಬದಲಾಯಿಸಿ]ಬಾಸ್ಕರ ಸಾಂಪ್ರದಾಯಿಕ ನೃತ್ಯಗಳು, ವೃತ್ತ ಮತ್ತು ಚಚ್ಚೌಕಾಕೃತಿಯ ರಂಗದಲ್ಲಿ ಪ್ರದರ್ಶಿಸುವ ನೃತ್ಯಗಳೇ ಆಗಿವೆ. ಕತ್ತಿ ಮತ್ತು ದೊಣ್ಣೆ ನೃತ್ಯಗಳು ತುಂಬ ಮೋಹಕವಾದುವು. ಪ್ರತಿಯೊಬ್ಬ ಕಲಾವಿದನೂ ತನ್ನ ಎದುರಾಳಿಯೊಂದಿಗೆ ಬೇಲಿ ಹೆಣೆದುಕೊಂಡು ನರ್ತನ ಮಾಡುವುದು ಇಲ್ಲಿಯ ವೈಶಿಷ್ಟ್ಯ. ನೃತ್ಯದ ಗತಿ ಏರಿದಂತೆ ಎಲ್ಲವೂ ಒಂದು ಸಾಮಾನ್ಯ ತುಮುಲ ಯುದ್ಧದಲ್ಲಿ ಮುಕ್ತಾಯಗೊಳ್ಳುವುದು ಸಂಪ್ರದಾಯ. ಈ ಎರಡು ನೃತ್ಯಗಳು ತುಂಬ ಪ್ರಾಚೀನವಾದವು ಎಂದು ಹೇಳಲಾಗಿದೆ. ಅವು ಮುಸಲ್ಮಾನ ಮೂರ್ ಜನರೊಂದಿಗಿನ ಬಾಸ್ಕರ ಘರ್ಷಣೆಗಳ ಪರಿಚಯ ಮಾಡಿಕೊಡುತ್ತದೆ. ಬಾಸ್ಕ್‍ರಲ್ಲಿ ಪ್ರಚಲಿತವಿರುವ `ವೇಷಗಳು ಅರ್ಧ ನೃತ್ಯ ಅರ್ಧ ಆಟಗಳಾಗಿವೆ. ಇವುಗಳಲ್ಲಿ ಭಾಗವಹಿಸುವ ಕಲಾವಿದರು ವಿಶಿಷ್ಟ ಬಗೆಯ ವೇಷಭೂಷಣಗಳಿಂದ ಅಲಂಕೃತರಾಗಿರುತ್ತಾರೆ. ವೇಷಗಳ ಪ್ರತಿಯೊಂದು ಪಾತ್ರವೂ ಚಾರಿತ್ರಿಕ ಮಹತ್ತ್ವ ಪಡೆದಿರುತ್ತದೆ. ವೇಷಗಳ ಸಂಗೀತ ಬಲುಮಟ್ಟಿಗೆ ಹಳೆಯ ಮತ್ತು ಸಾಂಪ್ರದಾಯಿಕ ಸ್ವರೂಪದ್ದು. ಉತ್ತಮ, ಮಧ್ಯಮ, ಅಧಮ-ಹೀಗೆ ಎಲ್ಲ ಜನವರ್ಗಗಳ ಬದುಕನ್ನು ಇವು ಸಮರ್ಥವಾಗಿ ಪ್ರತಿಬಿಂಬಿಸುತ್ತವೆ.
ಪ್ರದರ್ಶನ ಕಲೆ
[ಬದಲಾಯಿಸಿ]ವೇಷ ಮತ್ತು ಜನಪದ ನಾಟಕಗಳು ಒಂದರಿಂದ ಮತ್ತೊಂದು ಪ್ರಭಾವಿತವಾಗಿವೆ.
ನಾಟಕ ಕಲೆ
[ಬದಲಾಯಿಸಿ]ವ್ಯಾಪಕ ಪ್ರಚಾರದಲ್ಲಿರುವ ಕೆಲವು ನಾಟಕಗಳ ವಿಷಯದಲ್ಲಂತೂ ಈ ಮಾತು ಹೆಚ್ಚು ಸತ್ಯ. ಹದಿನೆಂಟನೆಯ ಶತಮಾನದಿಂದಷ್ಟೆ ಇವು ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದರೂ ರೂಪ ಮತ್ತು ಪರಂಪರೆಯಲ್ಲಿ ಮಧ್ಯಯುಗದ ರಚನೆಗಳಷ್ಟೇ ಹಳೆಯವು. ಮಧ್ಯಯುಗದ ನಾಟಕ ಮತ್ತು ಪವಾಡ ನಾಟಕಗಳಲ್ಲಿ ಸಾಮಾನ್ಯವಾದ ಅಂಶಗಳು ಸಾಕಷ್ಟಿವೆ. ಕೆಲವು ವಿದ್ವಾಂಸರು ಬಾಸ್ಕ್ ನಾಟಕಗಳಲ್ಲಿ ಗ್ರೀಕ್ ನಾಟಕಗಳ ಸಂಬಂಧ ಮತ್ತು ಪ್ರಭಾವವನ್ನು ಗುರುತಿಸಿದ್ದಾರೆ. ಈ ನಾಟಕಗಳ ವಸ್ತು ಬೇರೆ ಬೇರೆಯಾಗಿದ್ದರೂ ಅವುಗಳಲ್ಲಿ ಅರ್ಧಭಾಗದ ರಚನೆಗಳು ಸಾಹಸಕಥಾ ಸಾಹಿತ್ಯದಿಂದ ಸ್ವೀಕರಿಸಿದವಾಗಿವೆ. ಕೆಲವನ್ನು ಬೈಬಲ್ಲಿನಿಂದ, ಇನ್ನೂ ಕೆಲವನ್ನು ಪ್ರಾಚೀನ ಗ್ರೀಕ್ ಅಥವಾ ಲ್ಯಾಟಿನ್ ಗ್ರಂಥಕಾರರ ರಚನೆಗಳಿಂದ, ಸಂತರ ಜೀವನ ಚರಿತ್ರೆಗಳಿಂದ ಸ್ವೀಕರಿಸಲಾಗಿದೆ. ನಾಟಕಗಳ ಲಿಖಿತರೂಪಗಳು ದೊರಕುತ್ತಿದ್ದರೂ ಬಲುಪಾಲು ನಾಟಕಗಳು ತಲೆಮಾರಿನಿಂದ ವಾಕ್ಪರಂಪರೆಯಲ್ಲಿ ಉಳಿದುಬಂದಿವೆ.
ಮೇಳ ಮತ್ತು ಪಾತ್ರ
[ಬದಲಾಯಿಸಿ]ಬದ್ಧ ಶೈಲಿಯ ಬಾಸ್ಕ್ ನಾಟಕಗಳಲ್ಲಿ ಸಾಮಾನ್ಯವಾಗಿ ಮೇಳವಿರುತ್ತದೆ. ಆದರೆ ಈ ಮೇಳ ಗ್ರೀಕ್ ನಾಟಕಗಳ ಮೇಳಕ್ಕಿಂತ ಭಿನ್ನ. ಇಲ್ಲಿಯ ಸೈತಾನರ ಮೇಳ ಪ್ರತಿನಾಯಕ ಮತ್ತು ದುಷ್ಟ ಶಕ್ತಿಯನ್ನು ಬೆಂಬಲಿಸುವ ನಾಯಕನನ್ನು ವಿರೋಧಿಸುವ ಜಾಯಮಾನದ್ದು ಈ ಮೇಳದ ವೇಷಭೂಷಣಗಳು ಆಕರ್ಷಕವಾಗಿರುತ್ತದೆ. ಮೇಳದ ಪಾತ್ರಧಾರಿಗಳು ರೇಷ್ಮೆ ಪಟ್ಟಿಯಿಂದ ಅಲಂಕೃತವಾದ ದಂಡ ಹಿಡಿದಿರುತ್ತಾರೆ. ಅವರು ದಂಡ ಮುಟ್ಟಿಸಿ ಸತ್ತವನನ್ನು ಬದುಕಿಸಬಹುದು ಅಥವಾ ಬದುಕಿದ್ದವನನ್ನು ಬೀಳಿಸಬಹುದು. ಮೇಳಗಳಲ್ಲಿ ಹಾಡು ಮತ್ತು ಕುಣಿತಕ್ಕೆ ಹೆಚ್ಚು ಪ್ರಾಶಸ್ತ್ಯ. ಈ ಅಂಶಗಳು ಮೇಳಕ್ಕೆ ವೈವಿಧ್ಯ ತಂದುಕೊಡುತ್ತವೆ; ಕಳೆಯೇರಿಸುತ್ತವೆ. ಟರ್ಕರು, ಗುರಿಗೋಲುಗಾರರು, ದೆವ್ವಗಳು ಮತ್ತು ವಿರಳವಾಗಿ ಇಂಗ್ಲಿಷರು-ಬಾಸ್ಕ್ ನಾಟಕಗಳಲ್ಲಿ ದುಷ್ಟಪಾತ್ರಗಳಾಗಿ ಕಾಣಿಸಿಕೊಳ್ಳುತ್ತಾರೆ. ಇವು ಯಾವಾಗಲೂ ಕೆಂಪು ಉಡುಗೆಗಳನ್ನು ಧರಿಸಿರುತ್ತವೆ. ಫ್ರೆಂಚರು ಮತ್ತು ಕ್ರೈಸ್ತರು ಸೌಮ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಪಾತ್ರಧಾರಿಗಳು ನೀಲ ಮತ್ತು ಕೆಟ್ಟ ಶಕ್ತಿಗಳ ನಡುವಿನ ಹೋರಾಟವನ್ನು ಚಿತ್ರಿಸುತ್ತದೆ. ನೃತ್ಯ, ಹಾಡು, ಅಭಿನಯ ಮತ್ತು ಮೂಕಾಭಿನಯಗಳಿಂದ ನಾಟಕದ ಕ್ರಿಯೆ ಜೀವಂತವಾಗಿರುತ್ತದೆ. ನಾಟಕದ ಹಾಡಿನ ಚರಣಗಳನ್ನು ಲಯಬದ್ಧವಾಗಿ, ಸಾಂಪ್ರದಾಯಿಕ ರೀತಿಯಲ್ಲಿ ಉಚ್ಚರಿಸುವುದು ಕ್ರಮ. ಶಿಷ್ಟ ಪಾತ್ರಗಳು ರಂಗದ ಬಲಭಾಗದಿಂದ ಠೀವಿಯಿಂದ ಪ್ರವೇಶಿಸಿದರೆ, ದುಷ್ಟಪಾತ್ರಗಳು ಅಡ್ಡಾದಿಡ್ಡಿ ಹೆಜ್ಜೆಹಾಕುತ್ತ ವಿಕಾರವಾಗಿ ಕಿರುಚುತ್ತ ವಿಚಿತ್ರ ಭಂಗಿಗಳಲ್ಲಿ ರಂಗದ ಎಡಭಾಗದಿಂದ ಪ್ರವೇಶಿಸುತ್ತವೆ.
ನಾಟಕ ಪ್ರದರ್ಶನ
[ಬದಲಾಯಿಸಿ]ನಾಟಕಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ, ಎತ್ತರದ ಪ್ರದೇಶದಲ್ಲಿ ಪ್ರದರ್ಶಿಸುವುದು ರೂಢಿ. ರಂಗದ ನಾಲ್ಕು ಮೂಲೆಗಳಲ್ಲಿ ಸಮವಸ್ತ್ರಧಾರಿಗಳು ಕೋವಿ ಹಿಡಿದು ನಿಂತಿರುತ್ತಾರೆ. ಸೂಕ್ತ ಸನ್ನಿವೇಶಗಳಲ್ಲಿ ಅವರು ಕೋವಿಗಳಿಂದ ಹುಸಿ ಈಡು ಹಾರಿಸಬೇಕು. ನಾಟಕದ ನಡುವೆ ವಾದ್ಯಸಂಗೀತ ಕಾರ್ಯಕ್ರಮ ಏರ್ಪಡಿಸಿರಲಾಗುತ್ತದೆ. ಇದು ಮದ್ದಲೆ, ಕೊಳಲು, ತುತ್ತೂರಿ ಮತ್ತು ಸಿತಾರುಗಳಿಂದ ಕೂಡಿರುತ್ತದೆ. ನಾಟಕದ ಪಾತ್ರ. ಕಥಾಸನ್ನಿವೇಶ, ಸಂದರ್ಭಗಳಿಗನುಗುಣವಾಗಿ ಸಂಗೀತದ ಹಿನ್ನಲೆ ಇರುತ್ತದೆ. ಸೈತಾನ ಪಾತ್ರಗಳು ರಂಗ ಪ್ರವೇಶಿಸುವಾಗ ಅಬ್ಬರದ ಸಂಗೀತವಿರುತ್ತದೆ. ಸೌಮ್ಯ ಪಾತ್ರಗಳ ಪ್ರವೇಶದ ಕಾಲದಲ್ಲಿ ಸಂಗೀತ ಮಂದಗತಿಯಲ್ಲಿರುತ್ತದೆ. ನಾಟಕದ ಪಾತ್ರಧಾರಿಗಳು ಶಿರಾಭರಣ ಮತ್ತು ರಂಗಪರಿಕರಗಳ ಅಲಂಕಾರಗಳಿಂದ ಸಜ್ಜಾಗಿರುತ್ತಾರೆ. ಎಲ್ಲ ಕಲಾವಿದರೂ ಸ್ಥಳೀಯರೇ ಆಗಿರುತ್ತಾರೆ. ಪಾತ್ರಹಂಚಿಕೆ ವಂಶಪಾರಂಪರ್ಯ ಹಕ್ಕನ್ನು ಅವಲಂಬಿಸಿರುತ್ತದೆ. ಸ್ತ್ರೀಯರೂ ಪಾತ್ರಧಾರಿಗಳಾಗುವುದುಂಟು. ಆದರೆ ರಂಗದ ಮೇಲೆ ಏಕಕಾಲದಲ್ಲಿ ಸ್ತ್ರೀ ಮತ್ತು ಪುರುಷ ಪಾತ್ರಗಳು ಕಾಣಿಸಿಕೊಳ್ಳುವುದಿಲ್ಲ. ಮಧ್ಯಯುಗದ ರಂಗಭೂಮಿ ಸಂಪ್ರದಾಯವಂತೆ, ಸಾಮಾನ್ಯವಾಗಿ ಸ್ತ್ರೀ ಪಾತ್ರಗಳನ್ನು ಹುಡುಗರೇ ನಿರ್ವಹಿಸುವುದು ಪದ್ಧತಿ. ನಾಟಕ ಪ್ರದರ್ಶನಕ್ಕೆ ಮೊದಲು ಹಳ್ಳಿಯ ಪ್ರಮುಖ ಬೀದಿಗಳಲ್ಲಿ ವೇಷಧಾರಿಗಳನ್ನು ಮೆರವಣಿಗೆ ಮಾಡಿಸುವ ಸಂಪ್ರದಾಯವಿದೆ. ಈಚೆಗೆ ಇತರ ಜಾನಪದ ಪ್ರಕಾರಗಳಂತೆ ಬಾಸ್ಕ್ ಜನಪದ ನಾಟಕ ಪರಂಪರೆ ಮೂಲೆಗುಂಪಾಗುತ್ತಿದೆ.
ಸಂಪ್ರದಾಯ
[ಬದಲಾಯಿಸಿ]ಬಾಸ್ಕರು ವಿಶಿಷ್ಟತೆಯನ್ನು ಉಳಿಸಿಕೊಂಡಿರುವುದು ಜನಪದ ಸಂಪ್ರದಾಯಗಳಲ್ಲೆ. ಸಾವು ಸಂಭವಿಸಿದಾಗ ತಮ್ಮ ಜನಕ್ಕೆ ಸುದ್ದಿ ಮುಟ್ಟಿಸುವುದು, ಮದುವೆ ಕಾಲದಲ್ಲಿ ವಧೂವರರನ್ನು ಹಳ್ಳಿಗಳ ಬೀದಿಗಳಲ್ಲಿ ಮೆರವಣಿಗೆ ಮಾಡಿಸುವುದು, ಆ ಮೆರವಣಿಗೆಯಲ್ಲಿ ಉಡುಗೊರೆಗಳೊಂದಿಗೆ ಕಳೆಗುದ್ದಲಿ, ನೂಲುವ ರಾಟಿ ಮುಂತಾದ ಸಲಕರಣೆಗಳನ್ನು ಒಯ್ಯುವುದು, ಇತ್ಯಾದಿ ಸಂಪ್ರದಾಯಗಳು ರೂಢಿಯಲ್ಲಿವೆ. ಬಾಸ್ಕರು ಐಜೊ ಸಂಸ್ಥೆಯನ್ನು ಗೌರವಿಸುತ್ತಾರೆ. ಸೂರ್ಯ ಹುಟ್ಟುವ ದಿಕ್ಕಿನಲ್ಲಿ ವಾಸಿಸುವನೊಂದಿಗೆ ನೆರೆಹೊರೆಯವರು ನಿಕಟ ಬಾಂಧವ್ಯ ಹೊಂದಿರುತ್ತಾರೆ. ಆ ವ್ಯಕ್ತಿ ನೆರೆಹೊರೆಯವರ ಮನೆಗಳಿಗೆ ಬಂದು ಧಾರ್ಮಿಕ ಕಾರ್ಯಾಚರಣೆಯನ್ನು ನಡೆಸಿಕೊಡಬೇಕೆಂಬ ಕಟ್ಟಳೆಯಿದೆ. ಜೀವನ ಚಕ್ರದ ಮುಖ್ಯ ಘಟ್ಟಗಳಲ್ಲಿ ಅನುಸರಿಸುವ ಸಂಪ್ರದಾಯಾಚರಣೆಗಳ ಅನುಷ್ಠಾನದಲ್ಲಿ ಅವನಿಗೆ ವಿಶೇಷ ಪ್ರಾಶಸ್ತ್ಯವಿದೆ. ಕುಟುಂಬದಲ್ಲಿ ಯಾರಾದರೂ ಸತ್ತಾಗ, ಸತ್ತವನ ಆತ್ಮ ಹೊರಗಡೆ ಹೋಗುವಂತೆ ಮಾಡಲು ಅವನು ಮನೆಯ ಮಾಡನ್ನು ಹತ್ತಿ ಹಂಚುಕೀಳಬೇಕು. ಶವದ ಬೆತ್ತಲೆ ದೇಹದ ಮೇಲೆ ಮೇಣದ ದೀಪದಿಂದ ಬಿಸಿ ಜೇನುಮೇಣದ ಏಳು ಹುಂಡುಗಳನ್ನು ಬಿಡುವ ಕ್ರಿಯೆಯನ್ನೂ ಅವನೇ ನಿರ್ವಹಿಸಬೇಕು. ಬಾಸ್ಕರಲ್ಲಿ ಹಿಂದೆ ಹೆಂಡತಿ ಸತ್ತಾಗ ಗಂಡಸು ಬೇನೆ ಅನುಭವಿಸಿದಂತೆ ಮಲಗಿ ಹೆರಿಗೆಯ ಉಪಚಾರ ಪಡೆಯುವ ಪದ್ಧತಿಯಿತ್ತು. ಇದು ಇಂಡೋ-ಯೂರೊಪಿಯನ್, ಸಕಲ ಮೆಡಿಟರೇನಿಯನ್ ಸಂಸ್ಕøತಿ ಪೂರ್ವದ ಲಕ್ಷಣಗಳನ್ನು ತಿಳಿಸುತ್ತದೆ.[೪]
ಉಲ್ಲೇಖ
[ಬದಲಾಯಿಸಿ]- ↑ http://www.sacred-texts.com/neu/basque/lbp/lbp03.htm
- ↑ http://www.sacred-texts.com/neu/basque/bl/index.htm
- ↑ https://basquebooks.blogs.unr.edu/tag/basque-folk-tales/
- ↑ https://www.buber.net/Basque/Folklore/