ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದೇಶದಲ್ಲಿ ಎಷ್ಟೋ ವರುಷಗಳಿಂದಲೂ ಸಹಕಾರಿ ಪತ್ತಿನ ಸಂಘಗಳು ವ್ಯವಸಾಯಕ್ಕೆ ಗ್ರಾಮೀಣ ಭಾಗದಲ್ಲಿ ಹಣಕಾಸಿನ ಸಹಾಯವನ್ನು ಮಾಡುತ್ತಲೇ ಬಂದಿದ್ದವು. ಆದರೂ ಈ ಸಹಕಾರಿ ಸಂಘಗಳು ಒಟ್ಟು ಗ್ರಾಮೀಣ ಭಾಗಗಳ ಸಾಲಗಳಲ್ಲಿ ಕೇವಲ ಶೇಕಡಾ ೩೨ರಷ್ಟನ್ನು ಮಾತ್ರ ಕೊಡುತ್ತಿದ್ದವು. ಆದರೆ ಇಡೀ ಭಾರತದಲ್ಲಿ ಈ ಸಹಕಾರಿ ಚಳುವಳಿ ಕೇವಲ ತಮಿಳುನಾಡು, ಮಹರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಮಾತ್ರ ಯಶಸ್ವಿಯಾಗಿ ಕಾರ್ಯವನ್ನು ನಿರ್ವಹಿಸುತ್ತಿತ್ತು. ಇದರಿಂದ, ಗ್ರಾಮೀಣ ಪ್ರದೇಶಗಳಿಗೆ ಬ್ಯಾಂಕುಗಳು ಹೋಗಿ, ಅಲ್ಲಿನ ಜನರಿಗೆ ಬೇಕಾಗುವ ಸಾಲವನ್ನು ಈ ಹೊಸ ಗ್ರಾಮೀಣ ಬ್ಯಾಂಕುಗಳು ಕೊಡಬೇಕೆಂದು, ಸರಕಾರವು ಮೊದಲು ಐದು ರಾಜ್ಯಗಳಲ್ಲಿ ಆರು ಶಾಖೆಗಳನ್ನು ತೆರೆದು ಈ ಯೋಜನೆಗೆ ಅಸ್ತು ಎಂದಿತು.

ಈ ಪ್ರಾದೇಶಿಕ ಬ್ಯಾಂಕುಗಳನ್ನು ರಚಿಸುವ ಹೊಣೆಯನ್ನು ರಾಷ್ಟ್ರೀಕೃತ ಬ್ಯಾಂಕುಗಳಿಗೆ ವಹಿಸಿಕೊಡಲಾಯಿತು. ಪ್ರಾಥಮಿಕ ಹಂತದಲ್ಲಿ ಇವುಗಳ ಅಧಿಕೃತ ಬಂಡವಾಳ ಒಂದು ಕೋಟಿ ರೂಪಾಯಿ ಇದ್ದು, ಸಂದಾಯವಾದ ಬಂಡವಾಳ ೨೫ ಲಕ್ಷ ರೂಪಾಯಿ ಎಂದು ನಿರ್ಧರಿಸಲಾಯಿತು. ನಂತರ ಅಧಿಕೃತ ಬಂಡವಾಳವನ್ನು ಐದು ಕೋಟಿ ರೂಪಾಯಿಗಳಿಗೇರಿಸಿ ಸಂದಾಯವಾದ ಹಣವನ್ನು ಒಂದು ಕೋಟಿ ರೂಪಾಯಿಗಳಿಗೆ ಏರಿಸಲಾಯಿತು. ಈ ಸಂದಾಯವಾದ ಬಂಡವಾಳದಲ್ಲಿ ಸರಕಾರವು ಶೇಕಡಾ ೫೦, ಸಂಬಂಧಿಸಿದ ರಾಜ್ಯಸರಕಾರಗಳು ಶೇಕಡಾ ೧೫ ಮತ್ತು ಈ ಪ್ರಾದೇಶಿಕ ಬ್ಯಾಂಕುಗಳನ್ನು ತೆರೆಯಲು ಹೊಣೆಗಾರಿಕೆ ಹೊತ್ತು ವ್ಯವಸ್ಧೆ ಮಾಡಿದ ಪ್ರಾಯೋಜಕ ಬ್ಯಾಂಕು ಉಳಿದ ಶೇಕಡಾ ೩೫ ರಷ್ಟನ್ನು ಒದಗಿಸಬೇಕೆಂದು ಕಾನೂನನ್ನೇ ರಚಿಸಲಾಯಿತು.

ಗ್ರಾಮೀಣ ಬ್ಯಾಂಕ್

ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಉದ್ದೇಶಗಳು[ಬದಲಾಯಿಸಿ]

೧. ಉತ್ವಾದನೆಯಲ್ಲಿ ತೊಡಗಿದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ, ಭೂರಹಿತ ಕಾರ್ಮಿಕರಿಗೆ, ಕುಶಲಕರ್ಮಿಗಳಿಗೆ ಹಾಗೂ ಸಣ್ಣಪುಟ್ಟ ವ್ಯಾಪಾರಮಾಡಿಕೊಂಡು ಇರುವವರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲಗಳು ದೊರೆಯಬೇಕು.

೨. ದೇಶವು ಆರ್ಥಿಕ ಅಭಿವೃಧ್ಧಿಯನ್ನು ಸಾಧಿಸಲು ಗ್ರಾಮೀಣ ಭಾಗದಲ್ಲಿಯ ವ್ಯವಸಾಯ, ವ್ಯಾಪಾರ, ಉದ್ಯೋಗಗಳಿಗೆ ಹಣಸಹಾಯವನ್ನು ನೀಡುವುದು.

೩. ಹಳ್ಳಿಗಳಲ್ಲಿ ಅಭಿವೃದ್ಧಿಗೊಳ್ಳುವ ವ್ಯವಸಾಯ ಮತ್ತು ವಾಣಿಜ್ಯಗಳಿಂದ ಬರುವ ಲಾಭವನ್ನು ಉಳಿತಾಯ ಮಾಡುವ ಅಭ್ಯಾಸವನ್ನು ಹಳ್ಳಿಗರಲ್ಲಿ ಬೆಳೆಸುವುದು.

೪. ಗ್ರಾಮೀಣ ಭಾಗದ ಸುರಕ್ಷಿತ ಯುವಕರಿಗೆ ಉದ್ಯೋಗಗಳನ್ನು ಸೃಷ್ಟಿಸಲು ಸಹಾಯವನ್ನು ನೀಡುವುದು.

೫. ಮುಖ್ಯವಾಗಿ, ನಗರಗಳಲ್ಲಿ ಕಾರ್ಯಮಾಡುತ್ತಿದ್ದ ಬ್ಯಾಂಕುಗಳಿಗಿಂತ ಕಡಿಮೆ ವೆಚ್ಚದಲ್ಲಿ ಗ್ರಾಮೀಣ ಭಾಗದಲ್ಲಿ ಬ್ಯಾಂಕುಗಳನ್ನು ತೆರೆಯುವುದು ಮತ್ತು ಕಡಿಮೆ ವೆಚ್ಚದಲ್ಲಿ ನಡೆಸುವುದು. ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ವಸ್ತುತ, ವಾಣಿಜ್ಯ ಬ್ಯಾಂಕುಗಳಂತೆಯೇ ಆಗಿದ್ದರೂ, ಅವುಗಳ ಭೌಗೋಳಿಕ ವ್ಯಾಪ್ತಿ ಪರಿಮಿತವಾಗಿರುತ್ತದೆ. ಗ್ರಾಮೀಣ ಬ್ಯಾಂಕುಗಳು ಗ್ರಾಹಕರಿಗೆ ಸಾಲಕ್ಕಾಗಿ ವಿಧಿಸುವ ಬಡ್ಡಿಯ ದರವು ಸಹಕಾರಿ ಸಂಘಗಳು ವಿಧಿಸುವ ಬಡ್ಡಿ ದರಕ್ಕಿಂತ ಹೆಚ್ಚು ಇರಕೂಡದು. ಇದರಿಂದ ರಿಸರ್ವ್ ಬ್ಯಾಂಕ್ ಈ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ಕೆಲ ಸವಲತ್ತುಗಳನ್ನು ಒದಗಿಸುತ್ತಿದೆ. ಈ ಬ್ಯಾಂಕುಗಳು ಇತರ ಬ್ಯಾಂಕುಗಳೊಂದಿಗೆ ಸ್ವರ್ಧಿಸುವುದಿಲ್ಲ, ಅವುಗಳಿಗೆ ಪೂರಕವಾದ ಕಾರ್ಯವನ್ನೇ. ಗ್ರಾಮೀಣ ಬ್ಯಾಂಕುಗಳು ಸಣ್ಣ ರೈತರಿಗೆ, ಭೂರಹಿತ ಕಾರ್ಮಿಕರಿಗೆ, ಗ್ರಾಮೀಣ ಕುಶಲಕಾರ್ಮಿಗಳಿಗಷ್ಟೇ ಸಾಲಗಳನ್ನು ನೀಡುತ್ತವೆ. ಈಚೆಗೆ ಗ್ರಾಮೀಣ ಬ್ಯಾಂಕುಗಳು ಲಾಭವನ್ನು ದೃಷ್ಟಿಯಲ್ಲಿರಿಸಿ ಅವು ಕೆಲವು ದೊಡ್ಡ ಸಾಲಗಳನ್ನೂ ನೀಡಲು ಅನುಮತಿ ಕೊಡಲಾಗಿದೆ.

೬. ಬ್ಯಾಂಕುಗಳಿಂದ ೧೯೭೫ರಲ್ಲಿ ಗ್ರಾಮೀಣ ಬ್ಯಾಂಕುಗಳು ಪ್ರಾರಂಭವಾದವು. ೧೯೯೩ರಲ್ಲಿ ೧೯೬ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿದ್ದವು. ಅವು ದೇಶದ ಎಲ್ಲಾ ಜಿಲ್ಲೆಗಳಲ್ಲೂ ಕಾರ್ಯ ನಿರ್ವಹಿಸುತ್ತಿವೆ. ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳನ್ನು ಪರಸ್ವರ ವಿಲೀನಗೊಳಿಸಿ ಅವುಗಳ ಸಂಖ್ಯೆಯನ್ನು ೪೦-೪೫ಕ್ಕೆ ಇಳಿಸುವ ಕಾರ್ಯ ನಡೆಯುತ್ತಿದೆ ಮೊದಲು ಈ ಪ್ರಾದೇಶಿಕ ಬ್ಯಾಂಕ್ ಸಿಬ್ಬಂದಿಗೆ ವಾಣಿಜ್ಯ ಬ್ಯಾಂಕಿನ ಸಿಬ್ಬಂದಿಗಿಂತ ಕಡಿಮೆ ಸಂಬಳವನ್ನು ಕೊಡುತ್ತಿದ್ದುದರಿಂದ ಸಿಬ್ಬಂದಿಯ ವೆಚ್ಚ ಕಡಿಮೆಯಾಗಿತ್ತು. ಆದರೆ ಈಗ ಸುಪ್ರೀಂ ಕೋರ್ಟಿನ ತೀರ್ಪಿನನ್ವಯ ವಾಣಿಜ್ಯ ಬ್ಯಾಂಕುಗಳ ಸಿಬ್ಬಂದಿಗೆ ನೀಡುವಷ್ಟೇ ಸಂಬಳವನ್ನು ಇವರಿಗೂ ನೀಡಲಾಗುತ್ತಿದೆ. ಸೀಮಿತ ಕಾರ್ಯವ್ಯಾಪ್ತಿ ಮತ್ತು ಕಡಿಮೆ ಬಡ್ಡಿ ದರದಿಂದ ಈ ಬ್ಯಾಂಕುಗಳು ಮೊದಮೊದಲು ನಷ್ಟದಲ್ಲಿಯೇ ನಡೆದರೂ ಈಚೆಗೆ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ದಕ್ಷತೆ ಹೆಚ್ಚೇ ಬಹುತೇಕ ಪ್ರಾದೇಶಿಕ ಬ್ಯಾಂಕುಗಳು ಲಾಭಗಳಿಸುತ್ತಿವೆ.

ರಿಜ಼ರ್ವ್ ಬ್ಯಾಂಕ್ ಆಫ್ ಇಂಡಿಯ

ಇವುಗಳನ್ನು ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]